ರಸ್ತೆಬದಿಯ ಧಾಬಾದಲ್ಲಿ ಕುಳಿತಿದ್ದ ರೈತರ ಗುಂಪು ಕೊಳಲಿನ ಶಬ್ದ ಕೇಳಿ ಬಂದಿದ್ದರಿಂದ ಸದ್ದು ಬಂದತ್ತ ಗಮನಹರಿಸಿತು. ಅಂದು ಡಿಸೆಂಬರ್ 22ರ ಬೆಳಿಗ್ಗೆ ನಾಸಿಕ್ ನಗರದಿಂದ ಸುಮಾರು 65 ಕಿ.ಮೀ ದೂರದ ಚಂದ್ವಾರ್ ಪಟ್ಟಣದಲ್ಲಿ ತುಂಬಾ ಚಳಿಯಿತ್ತು - ರೈತರು ಚಹಾಕ್ಕಾಗಿ ಕಾಯುತ್ತಿದ್ದರು. ಕೆಲವರು ಅರ್ಧ ನಿದ್ರೆಯಲ್ಲಿದ್ದರು ಮತ್ತು ಕೆಲವರು ಉಪಾಹಾರಕ್ಕಾಗಿ ಮಿಸಳ್‌ ಪಾವ್ ತಿನ್ನುತ್ತಿದ್ದರು. ಆದರೆ ಕೊಲ್ಹಾಪುರ ಜಿಲ್ಲೆಯ ಜಂಬಭಾಲಿ ಗ್ರಾಮದ 73 ವರ್ಷದ ನಾರಾಯಣ್ ಗಾಯಕ್‌ವಾಡ್ ತನ್ನ ಕೊಳಲು ನುಡಿಸುತ್ತಿದ್ದರು. ಅವರು ತಮ್ಮ ಮನೆಯಿಂದ 500 ಕಿಲೋಮೀಟರ್ ದೂರದಲ್ಲಿದ್ದರೂ ತನ್ನ ದಿನ ನಿತ್ಯದ ಬೆಳಗಿನ ಆಚರಣೆಯನ್ನು ಆಚರಿಸುತ್ತಿದ್ದರು. "ದೆಹಲಿಯ ಪ್ರತಿಭಟನೆಯು ಪಂಜಾಬ್ ಮತ್ತು ಹರಿಯಾಣದ ರೈತರಿಗಷ್ಟೇ ಸೀಮಿತವಾದುದೆಂದು ಜನರು ಹೇಳುತ್ತಾರೆ ಇದು ರಾಷ್ಟ್ರೀಯ ಸಮಸ್ಯೆಯೆಂದು ನಾವು ತೋರಿಸಲು ಬಯಸುತ್ತೇವೆ." ಎಂದು ಅವರು ಹೇಳಿದರು.

ದೆಹಲಿಯ ರೈತ ಚಳವಳಿಯ ಭಾಗವಾಗಲು ಡಿಸೆಂಬರ್ 21ರಂದು ನಾಸಿಕ್‌ನಿಂದ ದೆಹಲಿಗೆ ಹೊರಟಿದ್ದ ವಾಹನ ಜಾಥಾದಲ್ಲಿ ಪಾಲ್ಗೊಂಡಿದ್ದ 2,000 ರೈತರು, ಕೃಷಿ ಕಾರ್ಮಿಕರು ಮತ್ತು ಕಾರ್ಯಕರ್ತರ ಗುಂಪಿನ ಭಾಗವಾಗಿ ಗಾಯಕ್‌ವಾಡ್‌ ಅವರು ಸಹ ಹೋಗಿದ್ದರು. ಆದರೆ ಆದರೆ ಗಾಯಕ್‌ವಾಡ್‌ ಅವರ ಪಾಳಿನ ಪ್ರಯಾಣವು ಅದಕ್ಕೂ ಒಂದು ದಿನ ಮೊದಲೇ ಪ್ರಾರಂಭವಾಯಿತು. ನಾವು ಏಳು ಮಂದಿ ಟೆಂಪೋ ಹತ್ತಿಕೊಂಡು 20ರ ರಾತ್ರಿ ನಾಸಿಕ್‌ಗೆ ಬಂದು ತಲುಪಿದೆವು. ನಾಸಿಕ್‌ ತಲುಪಲು ನಮಗೆ ಸುಮಾರು 13 ಗಂಟೆಗಳ ಸಮಯ ಹಿಡಿಯಿತು," ಎಂದು ಅವರು ಹೇಳಿದರು. "ವಯಸ್ಸಾದಂತೆ ರಸ್ತೆಯ ಪ್ರಯಾಣವು ಕಠಿಣವೆನ್ನಿಸುತ್ತದೆ. ಆದರೆ ನಾನು ಭಗತ್ ಸಿಂಗ್ ಅವರ ಕಲ್ಪನೆಯ ಭಾರತದಲ್ಲಿ ನಂಬಿಕೆಯಿರಿಸಿರುವವನಾಗಿರುವುದರಿಂದ ಈ ಜಾಥಾದಲ್ಲಿ ಭಾಗವಹಿಸಲು ತೀರ್ಮಾನಿಸಿದೆ. ಕ್ರಾಂತಿಯಿಲ್ಲದೆ ರೈತರ ಸಮಸ್ಯೆಗಳು ಕೊನೆಗೊಳ್ಳುವುದಿಲ್ಲ.”

ಮುಖ್ಯವಾಗಿ ಪಂಜಾಬ್ ಮತ್ತು ಹರಿಯಾಣದಿಂದ ಬಂದಿರುವ ಲಕ್ಷಾಂತರ ರೈತರು ಅಶ್ರುವಾಯು ಶೆಲ್‌ಗಳು, ಲಾಠಿ ಚಾರ್ಜ್‌ಗಳಂತಹ ಪೊಲೀಸ್ ದೌರ್ಜನ್ಯವನ್ನು ಮತ್ತು ದೆಹಲಿಯಲ್ಲಿ ಸುರಿಯುವ ಮಂಜು ಮತ್ತು ಮಳೆಯನ್ನು ಎದುರಿಸುತ್ತಿದ್ದಾರೆ. ಈ ರೈತರು ಕೇಂದ್ರ ಸರ್ಕಾರವು ಮೊದಲು ಜೂನ್ 5, 2020ರಂದು ಸುಗ್ರೀವಾಜ್ಞೆಗಳಾಗಿ ಹೊರಡಿಸಿ, ನಂತರ ಸೆಪ್ಟೆಂಬರ್ 14ರಂದು ಸಂಸತ್ತಿನಲ್ಲಿ ಕೃಷಿ ಮಸೂದೆಗಳಾಗಿ ಪರಿಚಯಿಸಿ ಅದೇ ತಿಂಗಳ 20ರೊಳಗೆ ಕಾಯಿದೆಗಳನ್ನಾಗಿ ಆತುರದಿಂದ ಜಾರಿಗೆ ತರಲಾದ ಮೂರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.

ಕಾನೂನುಗಳು ಹೀಗಿವೆ: ರೈತ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರೋತ್ಸಾಹ ಮತ್ತು ನೆರವು) ಕಾಯ್ದೆ, 2020 ; ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ 2020ರ ಒಪ್ಪಂದ ಮಸೂದೆ ; ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ, 2020. ಈ ಕಾನೂನುಗಳು ಪ್ರತಿ ಭಾರತೀಯರ ಮೇಲೆ ಪರಿಣಾಮ ಬೀರಲಿರುವುದರಿಂದ ಸಹ ಅವುಗಳನ್ನು ಟೀಕಿಸಲಾಗುತ್ತಿದೆ. ದೇಶದ ಎಲ್ಲಾ ನಾಗರಿಕರ ಕಾನೂನು ನೆರವು ಪಡೆಯುವ ಹಕ್ಕನ್ನು ಈ ಕಾನೂನುಗಳು ಕಸಿದುಕೊಳ್ಳುತ್ತವೆ, ಇದು ಭಾರತದ ಸಂವಿಧಾನದ 32ನೇ ವಿಧಿಯನ್ನು ದುರ್ಬಲಗೊಳಿಸುತ್ತದೆ.
Left: Narayan Gaikwad came from Kolhapur to join the march. Right: Kalebai More joined the jatha in Umarane
PHOTO • Shraddha Agarwal
Left: Narayan Gaikwad came from Kolhapur to join the march. Right: Kalebai More joined the jatha in Umarane
PHOTO • Parth M.N.

ಎಡ: ನಾರಾಯಣ್ ಗಾಯಕ್‌ವಾಡ್ ಅವರು ಜಾಥಾದಲ್ಲಿ ಭಾಗಿಯಾಗಲು ಕೊಲ್ಹಾಪುರದಿಂದ ಬಂದರು. ಬಲ: ಕಾಳೇಬಾಯಿ ಮೋರ್ ಉಮರಾಣೆಯಲ್ಲಿ ಜಾಥಾವನ್ನು ಸೇರಿಕೊಂಡರು

ತಮ್ಮ ಐಕಮತ್ಯವನ್ನು ವ್ಯಕ್ತಪಡಿಸಲು, ಅಖಿಲ ಭಾರತ ಕಿಸಾನ್ ಸಭೆ (ಎಐಕೆಎಸ್) ಸಂಘಟಿಸಿದ ಮಹಾರಾಷ್ಟ್ರದ 20 ಜಿಲ್ಲೆಗಳ ರೈತರು ತಮ್ಮ ಉತ್ತರದ ಸಹವರ್ತಿಗಳೊಂದಿಗೆ ಸೇರಿಕೊಳ್ಳಲು ನಿರ್ಧರಿಸಿದರು.

ಡಿಸೆಂಬರ್ 21ರ ಮಧ್ಯಾಹ್ನ - ಎಐಕೆಎಸ್ ನಾಯಕರು ನಾಸಿಕ್‌ನ ಗಾಲ್ಫ್ ಕ್ಲಬ್ ಮೈದಾನದಲ್ಲಿ ಸಭೆ ನಡೆಸಿ ರೈತರನ್ನು ಉದ್ದೇಶಿಸಿ ಮಾತನಾಡಿದಾಗ - ಸುಮಾರು 50 ಟ್ರಕ್‌ಗಳು, ಟೆಂಪೊಗಳು ಮತ್ತು ನಾಲ್ಕು ಚಕ್ರದ ವಾಹನಗಳು ಅಲ್ಲಿ ಜಮೆಯಾಗಿದ್ದವು. ಸ್ವಲ್ಪ ಸಮಯದ ನಂತರ, ಸುಮಾರು 1,400 ಕಿ.ಮೀ. ಪ್ರಯಾನದ ಜಾಥಾ ಹೊರಟಿತು. ಈ ಪಯಣಕ್ಕೆ ಚಂದ್ವಾರ್ ಮೊದಲ ನಿಲ್ದಾಣವಾಗಿತ್ತು; ರೈತರು ಅಲ್ಲಿನ ಮಾಧ್ಯಮಿಕ ಶಾಲೆಯಲ್ಲಿ ರಾತ್ರಿ ಕಳೆದರು. ಅವರು ಚಳಿಯಿಂದ ರಕ್ಷಿಸಿಕೊಳ್ಳಲು ಅಲ್ಲಿ ಕ್ಯಾಂಪ್‌ ಫೈರ್‌ ಹಾಕಲಾಯಿತು. ರಾತ್ರಿಯ ಊಟಕ್ಕಾಗಿ ಖಿಚಡಿ ಮಾಡಲಾಗಿತ್ತು. ಊಟದ ನಂತರ ಎಲ್ಲರೂ ಕಂಬಳಿ ಮತ್ತು ಸ್ವೆಟರ್‌ ಹಾಕಿಕೊಂಡು ಎಲ್ಲರೂ ಅಲ್ಲೇ ನಿದ್ರೆಗೆ ಜಾರಿದರು.

ಗಾಯಕ್‌ವಾಡ್‌ ತಮ್ಮೊಂದಿಗೆ ನಾಲ್ಕು ಶಾಲುಗಳನ್ನು ತಂದಿದ್ದರು. "ನಾವು ಜೀಪಿನಲ್ಲಿ ಪ್ರಯಾಣಿಸುತ್ತಿದ್ದೇವೆ ಹಾಗಾಗಿ ಬಹಳ ಗಾಳಿ ಬೀಸುತ್ತದೆ" ಎಂದು ಬೆಳಿಗ್ಗೆ ಉಪ್ಪಿಟ್ಟು ತಿನ್ನುತ್ತಾ ನನ್ನ ಬಳಿ ಹೇಳಿದರು. ನಾವು ಚಿಯೋವಾಡ್‌ನಿಂದ 20 ಕಿಲೋಮೀಟರ್ ದೂರದಲ್ಲಿರುವ ಡಿಯೋಲಾ ತಾಲ್ಲೂಕಿನ ಉಮರಾಣೆ ಗ್ರಾಮದಲ್ಲಿದ್ದೆವು. ಇಲ್ಲಿ ಬೆಳಗಿನ ಉಪಹಾರಕ್ಕಾಗಿ ಜಾಥಾವನ್ನು ನಿಲ್ಲಿಸಲಾಗಿತ್ತು.

ತನ್ನ ಊರಿನಲ್ಲಿ ಗಾಯಕ್‌ವಾಡ್‌ ಮೂರು ಎಕರೆ ಜಮೀನು ಹೊಂದಿದ್ದು, ಅದರಲ್ಲಿ ಕಬ್ಬು ಬೆಳೆಯುತ್ತಾರೆ. ಅವರ ಬಳಿ ಎರಡು ಎಮ್ಮೆ ಮತ್ತು ಮೂರು ಹಸುಗಳಿವೆ. "ಕೃಷಿ ಮಸೂದೆಗಳಲ್ಲಿ ಒಂದು ಎಪಿಎಂಸಿಗಳನ್ನು [ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳನ್ನು] ಅಪ್ರಸ್ತುತಗೊಳಿಸಿಬಿಡುತ್ತದೆ. ಮತ್ತು ಇದು ಹೆಚ್ಚು ಹೆಚ್ಚು ಖಾಸಗಿ ಕಂಪನಿಗಳನ್ನು ತರುತ್ತದೆ ಎಂದು ಸರ್ಕಾರ ಹೇಳುತ್ತದೆ. ಡೈರಿ ಕ್ಷೇತ್ರದಲ್ಲಿ ಈಗಾಗಲೇ ಸಾಕಷ್ಟು ಖಾಸಗಿ ಕಂಪನಿಗಳಿವೆ. ಆದರೂ ನಮಗೆ ಯಾವುದೇ ಆದಾಯ ದೊರಕುತ್ತಿಲ್ಲ ಖಾಸಗಿ ಕಂಪನಿಗಳು ತಮ್ಮ ಸ್ವಂತ ಲಾಭದ ಬಗ್ಗೆ ಮಾತ್ರ ಆಸಕ್ತಿ ಹೊಂದಿರುತ್ತವೆ,” ಎಂದು ಅವರು ಹೇಳಿದರು.

ಗಾಯಕ್‌ವಾಡ್‌ ಅವರು ಉಪಾಹಾರ ಸೇವಿಸುತ್ತಿದ್ದಾಗ, 65 ವರ್ಷದ ಕೃಷಿ ಕಾರ್ಮಿಕರಾದ ಕಾಳೇಬಾಯ್ ಮೋರ್ ಅವರು ಆಸನಕ್ಕಾಗಿ ತೀವ್ರವಾಗಿ ಹುಡುಕುತ್ತಿದ್ದರು. ಅವರು ಉಮಾರಾಣೆಯಲ್ಲಿ ಜಾಥಾವನ್ನು ಸೇರಿಕೊಂಡಿದ್ದರು. "ಎಲ್ಲಾ ಟೆಂಪೊಗಳು ತುಂಬಿವೆ" ಎಂದು ಅವರು ನನ್ನ ಬಳಿ ಆತಂಕದಿಂದ ಹೇಳಿದರು. "ಅವರು ನನಗಾಗಿ ಪ್ರತ್ಯೇಕ ವಾಹನವನ್ನು ಬಾಡಿಗೆಗೆ ಪಡೆಯಲು ಸಾಧ್ಯವಿಲ್ಲ. ಆದರೆ ನಾನು ನಿಜವಾಗಿಯೂ ದೆಹಲಿಗೆ ಹೋಗಲು ಬಯಸುತ್ತೇನೆ."
Top left: Left: The vehicles assembled at Golf Club Ground in Nashik. Top right: Farmers travelled in open-back tempos in the cold weather. Bottom: The group had dinner in Chandvad. They lit bonfires to keep themselves warm at night
PHOTO • Parth M.N.

ಮೇಲಿನ ಎಡ ಚಿತ್ರ: ಎಡ: ವಾಹನಗಳು ನಾಸಿಕ್‌ನ ಗಾಲ್ಫ್ ಕ್ಲಬ್ ಮೈದಾನದಲ್ಲಿ ಒಟ್ಟುಗೂಡಿರುವುದು. ಮೇಲಿನ ಬಲ: ಶೀತಲ ವಾತಾವರಣದಲ್ಲಿ ರೈತರು ತೆರೆದ ಟೆಂಪೋಗಳಲ್ಲಿ ಪ್ರಯಾಣಿಸಿದರು. ಕೆಳಗಿನ ಚಿತ್ರ: ರೈತರ ಗುಂಪು ಚಂದ್ವಾಡ್‌ನಲ್ಲಿ ಊಟ ಮಾಡಿದರು. ರಾತ್ರಿಯಲ್ಲಿ ಚಳಿ ಕಾಯಿಸಲು  ಕ್ಯಾಂಪ್‌ಫೈರ್‌ ಉರಿಸಿದರು

ಗುಲಾಬಿ ಬಣ್ಣದ ಸೀರೆಯನ್ನು ಉಟ್ಟಿದ್ದ, ನಾಸಿಕ್‌ನ ದಿಂಡೋರಿ ತಾಲ್ಲೂಕಿನ ಶಿಂಡ್ವಾರ್ ಗ್ರಾಮದ ಕಾಳೇಬಾಯಿ ವಾಹನಗಳನ್ನು ಪರೀಕ್ಷಿಸಲು ಮೇಲಕ್ಕೆ ಮತ್ತು ಕೆಳಕ್ಕೆ ಹತ್ತಿಳಿಯುತ್ತಿದ್ದರು. ಅವರು ಕೆಲವೊಮ್ಮೆ ಚಾಲಕರೊಂದಿಗೆ ವಾದಿಸುತ್ತಿದ್ದರು, ಕೆಲವೊಮ್ಮೆ ದೂರು ಹೇಳುತ್ತಾ ಮತ್ತು ಕೊನೆಗೆ ಕಿರುಚಾಡತೊಡಗಿದರು. ಕೊನೆಗೆ, ಯಾರೋ ಒಬ್ಬರು ಅವರ ಟೆಂಪೋದಲ್ಲಿ ಅವರಿಗೆ ಸ್ಥಳವನ್ನು ಕಲ್ಪಿಸಿದರು ಮತ್ತು ಅವರ ಕೋಪದಿಂದ ಕೆಂಪಾಗಿದ್ದ ಮುಖದ ಮೇಲೆ ನೆಮ್ಮದಿ ಮತ್ತೆ ಕಾಣಿಸಿಕೊಂಡಿತು. ಅವರು ತನ್ನ ಸೀರೆಯನ್ನು ನೇರಗೊಳಿಸಿ ಟೆಂಪೋ ಹತ್ತಿದರು. ಆ ಕ್ಷಣದಲ್ಲಿ ಅವರ ಮುಖದಲ್ಲಿ ಮುಗುವಿನಂತಹ ಮುಗ್ಧ ನಗುವಿತ್ತು.

"ನಾನು ಕೃಷಿ ಕೂಲಿಯಾಗಿದ್ದು 200 ರೂಪಾಯಿಯ ದೈನಂದಿನ ವೇತನ ದೊರೆಯುತ್ತದೆ" ಎಂದು ನನ್ನ ಬಳಿ ಹೇಳಿದರು. "ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ನಾನು ಅದನ್ನು ಬಿಟ್ಟು ಕೊಡಲು ಸಿದ್ಧಳಿದ್ದೇನೆ." ತನ್ನ ಉದ್ಯೋಗಕ್ಕಾಗಿ ಇತರ ರೈತರನ್ನು ಅವಲಂಬಿಸಿರುವ ಕಾಳೇಬಾಯಿ ರೈತರು ತಮ್ಮ ಫಸಲಿನಿಂದ ಆದಾಯ ಗಳಿಸದೆ ಹೋದರೆ ಪರಿಸ್ಥಿತಿ ಕಠಿಣವಾಗುತ್ತದೆ ಎಂದುಹೇಳುತ್ತಾರೆ. "ಅವರು ಹಣವನ್ನು ಗಳಿಸದೆ ಹೋದರೆ ಅವರು ನನ್ನಂತಹ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳುವುದಿಲ್ಲ." ಎಂದು ಅವರು ಹೇಳಿದರು. "ವಿದ್ಯುತ್ ಬಿಲ್‌ಗಳ ಹೆಚ್ಚಳದಿಂದಾಗಿ ಅವರ ಉತ್ಪಾದನಾ ವೆಚ್ಚಗಳು ಹೆಚ್ಚಾದರೆ, ಅದರಿಂದ ನನ್ನ ಕೆಲಸವೂ ಕಡಿಮೆಯಾಗುತ್ತದೆ."

ಕಾಳೇಬಾಯಿ ಕೋಲಿ ಮಹಾದೇವ್ ಆದಿವಾಸಿ ಬುಡಕಟ್ಟಿಗೆ ಸೇರಿದವರು. ಶಿಂಡ್ವಾಡ್ನಲ್ಲಿ, ಅವರು ಅರಣ್ಯ ಇಲಾಖೆಯ ವ್ಯಾಪ್ತಿಗೆ ಬರುವ ಎರಡು ಎಕರೆ ಭೂಮಿಯಲ್ಲಿ ಜೀವನಾಧಾರಕ್ಕಾಗಿ ಕೃಷಿ ಮಾಡುತ್ತಾರೆ. ಅವರಂತಹ ರೈತರು, ನಾಸಿಕ್‌ನ ಆದಿವಾಸಿ ವಲಯದಲ್ಲಿ, ತಮ್ಮ ಭೂ ಹಕ್ಕುಗಳಿಗಾಗಿ ಅಲ್ಪ ಯಶಸ್ಸಿನೊಂದಿಗೆ ಹೋರಾಡುತ್ತಿದ್ದಾರೆ.

ಅದೇ ಗುಂಪಿನೊಂದಿಗೆ ಪ್ರಯಾಣಿಸುತ್ತಿದ್ದ ಎಐಕೆಎಸ್ ಅಧ್ಯಕ್ಷ ಅಶೋಕ್ ಧವಾಲೆ, ದೊಡ್ಡ ಸಂಸ್ಥೆಗಳೊಂದಿಗೆ ಆದಿವಾಸಿ ಬುಡಕಟ್ಟು ಜನಾಂಗದವರ ಅನುಭವ ಕೆಟ್ಟದಾಗಿದೆ ಎಂದು ಹೇಳುತ್ತಾರೆ. "ಈ ಮೂರು ಕಾನೂನುಗಳು ಅಂತಹ ಹೆಚ್ಚಿನ ನಿಗಮಗಳಿಗೆ ದಾರಿ ಮಾಡಿಕೊಡುತ್ತವೆ, ಅದಕ್ಕಾಗಿಯೇ ಬುಡಕಟ್ಟು ಜನಾಂಗದವರು ಅವುಗಳ ವಿರುದ್ಧವಾಗಿದ್ದಾರೆ" ಎಂದು ಅವರು ಹೇಳಿದರು. "ಆದಿವಾಸಿಗಳು ಈ ಗುಂಪಿನಲ್ಲಿರುವುದಕ್ಕೆ ಇದೂ ಒಂದು ಕಾರಣವಾಗಿದೆ."

The farmers rested near the gurudwara in Kota after a meal
PHOTO • Parth M.N.

ರೈತರು ಊಟದ ಬಳಿಕ ಕೋಟಾ ಗುರುದ್ವಾರದ ಬಳಿ ವಿಶ್ರಾಂತಿ ಪಡೆದರು

ಡಿಸೆಂಬರ್ 22ರಂದು ಈ ಗುಂಪು 150 ಕಿ.ಮೀ ದೂರವನ್ನು ಕ್ರಮಿಸಿ ಮಧ್ಯಪ್ರದೇಶದ ಗಡಿಯಿಂದ 40 ಕಿ.ಮೀ ದೂರದಲ್ಲಿರುವ ಡೂಲ್ ಜಿಲ್ಲೆಯ ಶಿರ್ಪುರ್ ಪಟ್ಟಣದಲ್ಲಿ ನಿಂತಿತು. ದಿನ ಮತ್ತು ಪ್ರಯಾಣ ಮುಂದುವರೆದಂತೆ ದಪ್ಪ ಸ್ವೆಟರ್‌ಗಳು ಹೊರಬಂದವು. ಶೀತವು ಮೂಳೆಗಳನ್ನು ಕೊರೆಯಲು ಪ್ರಾರಂಭಿಸಿತು ಮತ್ತು ಗುಂಪಿನ ಕೆಲವರು ಮರಳಲು ನಿರ್ಧರಿಸಿದರು. ಗಾಯಕ್‌ವಾಡ್ ಬೆನ್ನು ನೋವಿನಿಂದ ಬಳಲುತ್ತಿದ್ದರು. "ಈ ನೋವಿನಿಂದಾಗಿ ನಾನು ದೆಹಲಿಯನ್ನು ತಲುಪಲು ಸಾಧ್ಯವಿಲ್ಲ" ಎಂದು ಅವರು ಮರುದಿನ ಬೆಳಿಗ್ಗೆ ಹೇಳಿದರು. ಇನ್ನೂ ಕೆಲವರು 2-3 ದಿನಗಳಿಗಿಂತ ಹೆಚ್ಚು ಕಾಲ ಕೆಲಸದಿಂದ ದೂರವಿರಲು ಸಾಧ್ಯವಾಗದ ಕಾರಣ ಹಿಂದಿರುಗಿದರು.

ಡಿಸೆಂಬರ್ 23 ರಂದು - ಜಾಥಾದ ಮೂರನೇ ದಿನ - ಸುಮಾರು 1,000 ಜನರು ದೆಹಲಿಯ ಕಡೆಗೆ ಹೊರಟರು.

ಗುಂಪು ತನ್ನ ಸುದೀರ್ಘ ಪ್ರಯಾಣದಲ್ಲಿ ಮುಂದುವರೆದಂತೆ, ದಾರಿಯುದ್ದಕ್ಕೂ ಪಟ್ಟಣಗಳು ​​ಮತ್ತು ನಗರಗಳಲ್ಲಿ ಅವರನ್ನು ಸ್ವಾಗತಿಸಲಾಯಿತು. ಆಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ನೊಂದಿಗೆ ಸಂಯೋಜಿತವಾಗಿರುವ ಎಐಕೆಎಸ್ ವಾಹನ ಮೆರವಣಿಗೆಯನ್ನು ಸಂಘಟಿಸಿದ್ದರೂ, ಶಿವಸೇನೆ ಮತ್ತು ಕಾಂಗ್ರೆಸ್ ಸೇರಿದಂತೆ ಇತರ ರಾಜಕೀಯ ಪಕ್ಷಗಳು ಬೆಂಬಲವನ್ನು ವಿಸ್ತರಿಸಿದವು. ಸಾಮಾಜಿಕ ಕಾರ್ಯಕರ್ತರು ಕೂಡ ಈ ಜಾಥಾವನ್ನು ಭೇಟಿಯಾದರು.

ಮಧ್ಯಪ್ರದೇಶದ ಬಾರ್ವಾನಿ ಜಿಲ್ಲೆಯ ಸೆಂಧ್ವಾ ಎಂಬಲ್ಲಿ‌ ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ರೈತರನ್ನು ಸ್ವಾಗತಿಸಿದರು. ಅವರು ಕೇಂದ್ರ ಸರ್ಕಾರದ ವಿರುದ್ಧ ವಿಮರ್ಶಾತ್ಮಕ ಘೋಷಣೆಗಳನ್ನು ಕೂಗಿದರು ಮತ್ತು ಸ್ವಲ್ಪ ದೂರ ಮೆರವಣಿಗೆಯನ್ನು ಮುನ್ನಡೆಸಿದರು.

ಆದರೆ ಮಧ್ಯಪ್ರದೇಶದಲ್ಲಿ ಸ್ವಾಗತವು ಯೋಜಿಸಿದ್ದಕ್ಕಿಂತ ಹೆಚ್ಚು ಕಾಲ ನಡೆಯಿತು. ಯೋಜನೆಯ ಪ್ರಕಾರ ರಾತ್ರಿ 10 ಗಂಟೆಯ ಹೊತ್ತಿಗೆ ರಾಜಸ್ಥಾನದ ಕೋಟಾ ತಲುಪಬೇಕಿದ್ದ ಜಾಥಾವು ಅಲ್ಲಿಗೆ ಸುಮಾರು 320 ಕಿಲೋಮೀಟರ್ ದೂರದಲ್ಲಿರುವ ಇಂದೋರ್‌ನ ಹೊರವಲಯನ್ನಷ್ಟೇ ತಲುಪಿತ್ತು.

ಬಹಳ ಚರ್ಚೆಯ ನಂತರ, ಗುಂಪು ರಾಜಸ್ಥಾನದ ಕಡೆಗೆ ಮುಂದುವರಿಯಲು ನಿರ್ಧರಿಸಿತು. ರಾತ್ರಿಯಿಡೀ ಚಳಿಯಲ್ಲೇ ವಾಹನಗಳು ಚಲಿಸುವ ಮೂಲಕ ಡಿಸೆಂಬರ್ 24ರಂದು ಬೆಳಿಗ್ಗೆ 7 ಗಂಟೆಗೆ ಕೋಟಾಗೆ ತಲುಪಿದವು.

ಆದರೆ ರಾತ್ರಿಯಿಡೀ ರೈತರು ತೆರೆದ ಟೆಂಪೋಗಳಲ್ಲಿ ಮೈಕೊರೆಯುವ ಚಳಿಯನ್ನು ಸಹಿಸಿಕೊಂಡರು. ಅಹ್ಮದ್‌ನಗರ ಜಿಲ್ಲೆಯ ಶಿಂದೋಡಿ ಗ್ರಾಮದ 57 ವರ್ಷದ ಮಥುರಾ ಬಾರ್ಡೆ ಅವರು ಮೂರು ಪದರಗಳ ಬಟ್ಟೆಗಳನ್ನು ಹೊದ್ದುಕೊಂಡಿದ್ದರೂ ಮೈ ಮರಗಟ್ಟುತ್ತಿದೆ ಎಂದು ಹೇಳಿದರು. "ಇದಕ್ಕಿಂತ ಹೆಚ್ಚು ಧರಿಸಲು ನನ್ನ ಬಳಿ ಬಟ್ಟೆಗಳಿಲ್ಲ. ನಾನು ಕಿವಿಗಳನ್ನು ಬಟ್ಟೆಯಿಂದ ಮುಚ್ಚಿಕೊಂಡೆ ಮತ್ತು ಹೇಗೋ ಕಷ್ಟಕರವಾದ ರಾತ್ರಿ ಕಳೆಯುವಲ್ಲಿ ಯಶಸ್ವಿಯಾಗಿದ್ದೇನೆ" ಎಂದು ಅವರು ಗುರುದ್ವಾರದಲ್ಲಿ ಬೆಳಿಗ್ಗೆ ಲಂಗರ್ (ಸಾಮಾನ್ಯ ಅಡುಗೆಮನೆ)ನಲ್ಲಿ ಉಪಹಾರ ತಿನ್ನುವಾಗ ಹೇಳಿದರು. ನಗರದ ಸಿಖ್ ಸಮುದಾಯವು ರೈತರಿಗೆ ಆತಿಥ್ಯ ನೀಡಿ ರೊಟ್ಟಿ, ಚನಾ ದಾಲ್ ಗ್ರೇವಿ ಮತ್ತು ಖಿಚ್ಡಿಗಳನ್ನು ಬಡಿಸಿತ್ತು. ದಣಿದ ಪ್ರಯಾಣಿಕರ ಗುಂಪು ನಂತರ ಗುರುದ್ವಾರದ ಬಳಿ ಬಿಸಿಲಿನಲ್ಲಿ ಬೆಚ್ಚಗಾಗುತ್ತಾ ವಿಶ್ರಾಂತಿ ಪಡೆಯಿತು.

Left: Farm leaders walked up to the barricades upon arriving in Shahjahanpur. Right: A policeman quickly takes a photo
PHOTO • Parth M.N.
Left: Farm leaders walked up to the barricades upon arriving in Shahjahanpur. Right: A policeman quickly takes a photo
PHOTO • Parth M.N.

ಎಡ: ಅವರು ಶಹಜಹಾನ್ಪುರ ತಲುಪಿದ ಕೂಡಲೇ ರೈತ ಮುಖಂಡರು ಬ್ಯಾರಿಕೇಡ್‌ಗಳತ್ತ ನಡೆದರು. ಬಲ: ತ್ವರಿತವಾಗಿ ಫೋಟೋ ತೆಗೆಯುತ್ತಿರುವ ಪೊಲೀಸ್

ವಾಹನ ಮೆರವಣಿಗೆ ಡಿಸೆಂಬರ್ 24ರಂದು 250 ಕಿಲೋಮೀಟರ್ ಕ್ರಮಿಸಿ ಜೈಪುರದಲ್ಲಿ ರಾತ್ರಿ ನಿಂತಿತು.

ಅಂತಿಮವಾಗಿ ಡಿಸೆಂಬರ್ 25ರಂದು ಮಧ್ಯಾಹ್ನ 12.30ಕ್ಕೆ ಅವರು ರಾಜಸ್ಥಾನ ಮತ್ತು ಹರಿಯಾಣದ ಗಡಿಯಲ್ಲಿರುವ ಶಹಜಹಾನ್ಪುರವನ್ನು ತಲುಪಿದರು. ಗುಂಪಿನ ಆಗಮನದೊಂದಿಗೆ, ಪ್ರತಿಭಟನಾ ಸ್ಥಳದ ಪರಿಸರದಲ್ಲಿ ಮಿಂಚಿನ ಸಂಚಾರವಾಯಿತು. ಕಳೆದ ಎರಡು ವಾರಗಳಿಂದ ರಾಷ್ಟ್ರೀಯ ಹೆದ್ದಾರಿ 48 (NH48)ರಲ್ಲಿ ಪ್ರತಿಭಟಿಸುತ್ತಿರುವ ರೈತರು ಮಹಾರಾಷ್ಟ್ರ ರೈತರ ತಂಡವನ್ನು ಸ್ವಾಗತಿಸಿದರು

ರೈತ ಮುಖಂಡರು ತಮ್ಮ ವಾಹನಗಳಿಂದ ಇಳಿದು ಹರಿಯಾಣ ಸರ್ಕಾರ ನಿರ್ಮಿಸಿದ ಬ್ಯಾರಿಕೇಡ್‌ಗಳತ್ತ (ಸುಮಾರು ಒಂದು ಕಿಲೋಮೀಟರ್ ದೂರಕ್ಕೆ) ನಡೆದರು. ಬ್ಯಾರಿಕೇಡ್‌ಗಳ ಇನ್ನೊಂದು ಬದಿಯಲ್ಲಿರುವ ಪೊಲೀಸರು ಕೂಡ ರೈತರ ಮಕ್ಕಳು, ಅವರಲ್ಲಿ ಕೆಲವರು ನನಗೆ ಹೇಳಿದರು. ಅವರಲ್ಲಿ ಒಬ್ಬರು ಬೇಗನೆ ತನ್ನ ಮೊಬೈಲ್ ಫೋನ್ ಹೊರತೆಗೆದು ರೈತರು ತನ್ನ ಬಳಿಗೆ ಬರುತ್ತಿದ್ದ ಫೋಟೋ ತೆಗೆದುಕೊಂಡು ಫೋನ್ ಮತ್ತೆ ಜೇಬಿಗೆ ಜಾರಿಸಿದರು.

ರೈತ ಮುಖಂಡರು ಮಧ್ಯಾಹ್ನ ಪೂರ್ತಿ ಧರಣಿ ಸ್ಥಳದಲ್ಲಿ ಭಾಷಣಗಳನ್ನು ಮುಂದುವರೆಸಿದರು. ಸಂಜೆ, ಚಳಿ ಆರಂಭವಾಗುತ್ತಿದ್ದಂತೆ, ಮಹಾರಾಷ್ಟ್ರದ ರೈತರಿಗೆ ಸ್ಥಳಾವಕಾಶ ಕಲ್ಪಿಸಲು ಎನ್ಎಚ್ 48 ರಲ್ಲಿ ಹೆಚ್ಚಿನ ಡೇರೆಗಳು ಬಂದವು. ಇದರೊಂದಿಗೆ ದೆಹಲಿಯನ್ನು ತಲುಪುವ ದೃಢ ನಿಶ್ಚಯ ಮತ್ತು ಧೈರ್ಯವು ಹೆಚ್ಚು ಬಲವನ್ನು ಪಡೆದುಕೊಂಡಿತು, ಆದರೆ ಅವರ ಹೋರಾಟವು ಇದೀಗ ಪ್ರಾರಂಭವಾಗಿತ್ತು.

ಕವರ್‌ ಫೋಟೊ: ಶೃದ್ಧಾ ಅಗರ್‌ವಾಲ್

ಅನುವಾದ: ಶಂಕರ ಎನ್. ಕೆಂಚನೂರು
Parth M.N.

Parth M.N. is a 2017 PARI Fellow and an independent journalist reporting for various news websites. He loves cricket and travelling.

Other stories by Parth M.N.
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru