ಇದು ಗೋಧಿ ಬೆಳೆಗೆ ನೀರು ಕೊಡಬೇಕಾದ ಸಮಯ ಮತ್ತು ಸಬರನ್ ಸಿಂಗ್ ಈ ಅಗತ್ಯ ಸಮಯದಲ್ಲಿ (ಹೊಲಗಳಿಗೆ ನೀರಾವರಿ ಮಾಡದೆ) ತನ್ನ ಹೊಲದಿಂದ ದೂರವಿರಲು ಸಾಧ್ಯವಿಲ್ಲ. ಈ ಕಾರಣಕ್ಕಾಗಿ ಅವರು ಡಿಸೆಂಬರ್ ಮೊದಲ ವಾರದಲ್ಲಿ ಹರಿಯಾಣ-ದೆಹಲಿಯ ಸಿಂಘುವಿನಿಂದ ಪಂಜಾಬಿನಲ್ಲಿರುವ ತಮ್ಮ ಊರಿಗೆ ಮರಳಿದರು.

ಆದರೆ ಅವರು ಪ್ರತಿಭಟನಾ ಸ್ಥಳವನ್ನು ಬಿಟ್ಟು ಹೋಗುತ್ತಿರಲಿಲ್ಲ, ಅಲ್ಲಿ ಅವರು ನವೆಂಬರ್ 26ರಿಂದ ಸ್ಥಿರವಾಗಿ ತಂಗಿದ್ದಾರೆ. ಕೆಲವು ದಿನಗಳ ನಂತರ, ಅವರು 250 ಕಿಲೋಮೀಟರ್ ದೂರದಲ್ಲಿರುವ ಖಾಂತ್ ಗ್ರಾಮದಲ್ಲಿರುವ ತಮ್ಮ 12 ಎಕರೆ ಜಮೀನಿನಿಂದ ಸಿಂಘುವಿಗೆ ಹಿಂತಿರುಗಿದರು. "ನಾನು ಮಾತ್ರ ಈ ರೀತಿ ಮಾಡುತ್ತಿಲ್ಲ" ಎಂದು 70 ವರ್ಷದ ರೈತ ಹೇಳುತ್ತಾರೆ. "ಇಲ್ಲಿ ಅನೇಕ ಜನರು ತಮ್ಮ ಹಳ್ಳಿಗಳು ಮತ್ತು ಪ್ರತಿಭಟನಾ ಸ್ಥಳಗಳ ನಡುವೆ ಓಡಾಡುತ್ತಿರುತ್ತಾರೆ."

ರಿಲೇ ವಿಧಾನವನ್ನು ಅಳವಡಿಸಿಕೊಳ್ಳಲು ರೈತರು ತೆಗೆದುಕೊಂಡ ನಿರ್ಧಾರವು ಸಿಂಘುವಿನಲ್ಲಿನ ರೈತರ ಸಂಖ್ಯೆಯನ್ನು ಬಲವಾಗಿರಿಸಿದೆ, ಈ ರೀತಿಯಾಗಿ ಅವರು ತಮ್ಮ ಬೆಳೆಗಳನ್ನು ನಿರ್ಲಕ್ಷಿಸದಂತೆ ನೋಡಿಕೊಂಡಿದ್ದಾರೆ.

"ನಾವು ಗೋಧಿ ಕೃಷಿ ಮಾಡಲು ಪ್ರಾರಂಭಿಸುವ ಸಮಯ ಇದು" ಎಂದು ನವೆಂಬರ್-ಡಿಸೆಂಬರ್ ಅವಧಿಯನ್ನು ಉಲ್ಲೇಖಿಸಿ ಸಬರನ್ ಹೇಳುತ್ತಾರೆ. "ನಾನು ಸಿಂಘುವಿನಿಂದ ದೂರವಿದ್ದಾಗ, ಹಳ್ಳಿಯ ನನ್ನ ಕೆಲವು ಸ್ನೇಹಿತರು ನನ್ನ ಸ್ಥಾನವನ್ನು ತುಂಬಿದರು."

ಹಲವಾರು ಪ್ರತಿಭಟನಾಕಾರರು ಇದನ್ನು ಅನುಸರಿಸುತ್ತಿದ್ದಾರೆ. "ನಮ್ಮಲ್ಲಿ ಹಲವರು ನಾಲ್ಕು ಚಕ್ರಗಳ ವಾಹನವನ್ನು ಹೊಂದಿದ್ದಾರೆ" ಎಂದು ಮಾಜಿ ಸೈನಿಕರೂ ಆಗಿರುವ ಸಬರನ್ ಹೇಳುತ್ತಾರೆ. “ಇವು ಇಲ್ಲಿಂದ ನಮ್ಮ ಹಳ್ಳಿಗಳಿಗೆ ಹೋಗಿ ಬರುತ್ತಲೇ ಇರುತ್ತವೆ. ಆದರೆ ಕಾರುಗಳು ಎಂದಿಗೂ ಖಾಲಿ ಬರುವುದಿಲ್ಲ. ನಾಲ್ಕು ಜನರನ್ನು ಹಳ್ಳಿಯಲ್ಲಿ ಇಳಿಸಲಾಗಿದ್ದರೆ, ಇತರ ನಾಲ್ವರು ಅದೇ ಕಾರಿನಲ್ಲಿ ಹಿಂತಿರುಗುತ್ತಾರೆ.”
'The cars keep going back and forth from here to our villages. If four people are dropped there, four others come back in the same car', says Sabaran Singh
PHOTO • Parth M.N.
'The cars keep going back and forth from here to our villages. If four people are dropped there, four others come back in the same car', says Sabaran Singh
PHOTO • Parth M.N.

'ಕಾರುಗಳು ಇಲ್ಲಿಂದ ನಮ್ಮ ಹಳ್ಳಿಗಳಿಗೆ ಹೋಗಿ ಬರುತ್ತಲೇ ಇರುತ್ತವೆ. ನಾಲ್ಕು ಜನರನ್ನು ಅಲ್ಲಿ ಇಳಿಸಿದರೆ, ಇತರ ನಾಲ್ವರು ಅದೇ ಕಾರಿನಲ್ಲಿ ಹಿಂತಿರುಗುತ್ತಾರೆ 'ಎಂದು ಸಬರನ್ ಸಿಂಗ್ ಹೇಳುತ್ತಾರೆ

ಅವರು 2020ರ ಸೆಪ್ಟೆಂಬರ್‌ನಲ್ಲಿ ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ಮಂಡಿಸಿದ ಹೊಸ ಕೃಷಿ ಕಾನೂನುಗಳ ವಿರುದ್ಧ ನವೆಂಬರ್ 26ರಿಂದ ಸಾವಿರಾರು ರೈತರು ಪ್ರತಿಭಟನೆ ನಡೆಸುತ್ತಿರುವ ರಾಷ್ಟ್ರ ರಾಜಧಾನಿ ಮತ್ತು ಸುತ್ತಮುತ್ತಲಿನ ಹಲವಾರು ಪ್ರತಿಭಟನಾ ಸ್ಥಳಗಳಲ್ಲಿ ಒಂದಾದ ಸಿಂಘುವಿಗೆ ಹಿಂತಿರುಗುತ್ತಾರೆ.

ಹರಿಯಾಣದ ಗಡಿಯಾಗಿರುವ ಉತ್ತರ ದೆಹಲಿಯ ಹೊರವಲಯದ ಸಿಂಘುವಿನಲ್ಲಿರುವ ಪ್ರತಿಭಟನಾ ತಾಣವು ಅತಿದೊಡ್ಡ ಪ್ರತಿಭಟನಾ ತಾಣವಾಗಿ ಹೊರಹೊಮ್ಮಿದೆ, ಸುಮಾರು 30,000 ರೈತರು ಬೀದಿಗಳಲ್ಲಿ ಕುಳಿತಿದ್ದಾರೆ. ಕಾನೂನು ರದ್ದುಗೊಳ್ಳುವವರೆಗೂ ಪ್ರತಿಭಟನೆ ಮುಂದುವರಿಸಲು ಅವರು ನಿರ್ಧರಿಸಿದ್ದಾರೆ.

ಸಬರನ್ ಅವರು ಡಿಸೆಂಬರ್ ಆರಂಭದಲ್ಲಿ ಫತೇಘರ್ ಸಾಹಿಬ್ ಜಿಲ್ಲೆಯ ಖಮಾನೋನ್ ತಹಸಿಲ್‌ನಲ್ಲಿರುವ ತಮ್ಮ ಊರಿನಲ್ಲಿದ್ದಾಗ, ವಿವಾಹವೊಂದರಲ್ಲಿ ಪಾಲ್ಗೊಂಡರು, ಕೆಲವು ಬ್ಯಾಂಕ್ ಕೆಲಸಗಳನ್ನು ಪೂರ್ಣಗೊಳಿಸಿ ಹೊಸ ಬಟ್ಟೆಗಳನ್ನು ಒಟ್ಟುಗೂಡಿಸಿದರು. "ನಾವು ಇಲ್ಲಿ ಎಲ್ಲಾ ಸೌಲಭ್ಯಗಳನ್ನು ಹೊಂದಿದ್ದೇವೆ" ಎಂದು ಅವರು ಹೇಳುತ್ತಾರೆ, ಅವರು ತಮ್ಮ ಟ್ರಕ್ನಲ್ಲಿ ಹಾಸಿಗೆಯ ಕೆಳಗೆ ಹಾಸಿದ ಹುಲ್ಲನ್ನು ತೋರಿಸುತ್ತಾರೆ. “ಇದು ನಮಗೆ ಬೆಚ್ಚಗಿರಲು ಸಹಾಯ ಮಾಡುತ್ತದೆ. ಜೊತೆಗೆ ವಿದ್ಯುತ್, ನೀರು ಮತ್ತು ಕಂಬಳಿಗಳಿವೆ. ಸ್ನಾನಗೃಹಗಳದೂ ಸಮಸ್ಯೆಯಲ್ಲ. ನಮ್ಮಲ್ಲಿ ಆರು ತಿಂಗಳಿಗಿಂತ ಹೆಚ್ಚು ಕಾಲ ಉಳಿಯಲು ಬೇಕಾಗುವಷ್ಟು ಪಡಿತರವಿದೆ. ”

ಗೋಧಿ ಮತ್ತು ಭತ್ತದ ಕೃಷಿಕರಾಗಿ, ಸರಕಾರಿ-ನಿಯಂತ್ರಿತ ಮಂಡಿಗಳನ್ನು ಅತಿಕ್ರಮಿಸುವ ಕಾನೂನಿನ ಬಗ್ಗೆ ಸಬರನ್ ವಿಶೇಷವಾಗಿ ಕಳವಳಗೊಂಡಿದ್ದಾರೆ, ಅಲ್ಲಿಂದ ಸರ್ಕಾರವು ಎಂಎಸ್‌ಪಿ (ಕನಿಷ್ಠ ಬೆಂಬಲ ಬೆಲೆ)ಯಲ್ಲಿ ಬೆಳೆಗಳನ್ನು ಸಂಗ್ರಹಿಸುತ್ತದೆ. ಪಂಜಾಬ್ ಮತ್ತು ಹರಿಯಾಣದಲ್ಲಿ ಗೋಧಿ ಮತ್ತು ಅಕ್ಕಿ ಖರೀದಿ ದೇಶದ ಇತರ ಭಾಗಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿದೆ, ಮತ್ತು ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿರುವರಲ್ಲಿ ಈ ವಲಯದ ರೈತರು ಪ್ರಧಾನವಾಗಿರಲು ಇದೂ ಒಂದು ಕಾರಣವಾಗಿದೆ. "ಖಾಸಗಿ ಕಂಪನಿಗಳು ಬಂದ ತಕ್ಷಣವೇ, ಅವರ ಏಕಸ್ವಾಮ್ಯ ಉಂಟಾಗುತ್ತದೆ" ಎಂದು ಸಬರನ್ ಹೇಳುತ್ತಾರೆ. "ರೈತರಿಗೆ ಹೆಚ್ಚು ಅವಕಾಶಗಳಿರುವುದಿಲ್ಲ, ಮತ್ತು ದೊಡ್ಡ ಕಾರ್ಪೋರೇಷನ್‌ಗಳು ಈ ಕಾನೂನುಗಳ ನಿಯಮಗಳನ್ನು ಜಾರಿಗೊಳಿಸುತ್ತವೆ."

Left: Hardeep Kaur (second from left) says, 'We will go back  for a while when he [an employee looking after their farmland] needs us there. We will be replaced by someone here for that duration'. Right: Entire families at Singhu are engaged in this rotation
PHOTO • Parth M.N.
Left: Hardeep Kaur (second from left) says, 'We will go back  for a while when he [an employee looking after their farmland] needs us there. We will be replaced by someone here for that duration'. Right: Entire families at Singhu are engaged in this rotation
PHOTO • Parth M.N.

ಎಡ: ಹರ್ದೀಪ್ ಕೌರ್ (ಎಡದಿಂದ ಎರಡನೆಯವನು), 'ಅವನಿಗೆ [ತಮ್ಮ ಕೃಷಿಭೂಮಿಯನ್ನು ನೋಡಿಕೊಳ್ಳುವ ಉದ್ಯೋಗಿಗೆ] ನಮ್ಮ ಅಗತ್ಯವಿದ್ದಾಗ ಮಾತ್ರ ನಾವು ಸ್ವಲ್ಪ ಸಮಯದವರೆಗೆ ಊರಿಗೆ ಹಿಂತಿರುಗುತ್ತೇವೆ. ಆ ಅವಧಿಗೆ ನಮ್ಮ ಬದಲಿಗೆ ಇಲ್ಲಿ ಯಾರಾದರೂ ಇರುತ್ತಾರೆ '. ಬಲ: ಸಿಂಗುವಿನಲ್ಲಿರುವ ಎಲ್ಲಾ ಕುಟುಂಬಗಳು ಈ ರೊಟೇಷನ್‌ ಪದ್ಧತಿಯಲ್ಲಿ ತೊಡಗಿವೆ

ಈ ಮಸೂದೆಗಳನ್ನು ಮೊದಲು 2020ರ ಜೂನ್ 5ರಂದು ಸುಗ್ರೀವಾಜ್ಞೆಯಾಗಿ ಅಂಗೀಕರಿಸಲಾಯಿತು, ನಂತರ ಸೆಪ್ಟೆಂಬರ್ 14ರಂದು ಕೃಷಿ ಮಸೂದೆಗಳ ಹೆಸರಿನಲ್ಲಿ ಸಂಸತ್ತಿನಲ್ಲಿ ಪರಿಚಯಿಸಲಾಯಿತು ಮತ್ತು ಅದೇ ತಿಂಗಳ 20ರೊಳಗೆ ಕಾನೂನನ್ನು ಅಂಗೀಕರಿಸಲಾಯಿತು. ರೈತರು ಈ ಕಾನೂನುಗಳನ್ನು (ಕೇಂದ್ರ ಸರ್ಕಾರದಿಂದ) ದೊಡ್ಡ ಕಾರ್ಪೊರೇಟ್‌ಗಳು ತಮ್ಮ ಗರಿಷ್ಠ ಶಕ್ತಿಯನ್ನು ರೈತರು ಮತ್ತು ಕೃಷಿಯ ಕಡೆಗೆ ಬಳಸಿಕೊಳ್ಳುವ ವೇದಿಕೆಯಾಗಿ ನೋಡುತ್ತಾರೆ. ಈ ಕಾನೂನುಗಳು ಕನಿಷ್ಟ ಬೆಂಬಲ ಬೆಲೆ (ಎಂಎಸ್‌ಪಿ), ಕೃಷಿ ಉತ್ಪಾದನೆ (ಇಳುವರಿ) ಮಾರುಕಟ್ಟೆ ಸಮಿತಿಗಳು (ಎಪಿಎಂಸಿ), ಮತ್ತು ಸರ್ಕಾರಿ ಖರೀದಿ ಸೇರಿದಂತೆ ರೈತರಿಗೆ ನೀಡುವ ಪ್ರಮುಖ ಬೆಂಬಲ ರೂಪಗಳನ್ನು ಹಾಳುಮಾಡುತ್ತವೆ.

ರೈತರು ವಿರೋಧಿಸುತ್ತಿರುವ ಮೂರು ಕಾನೂನುಗಳೆಂದರೆ: ರೈತ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರೋತ್ಸಾಹ ಮತ್ತು ನೆರವು) ಕಾಯ್ದೆ, 2020 ; ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ 2020ರ ಒಪ್ಪಂದ ಮಸೂದೆ ; ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ, 2020. ಈ ಕಾನೂನುಗಳು ಪ್ರತಿ ಭಾರತೀಯರ ಮೇಲೆ ಪರಿಣಾಮ ಬೀರಲಿರುವುದರಿಂದ ಸಹ ಅವುಗಳನ್ನು ಟೀಕಿಸಲಾಗುತ್ತಿದೆ. ದೇಶದ ಎಲ್ಲಾ ನಾಗರಿಕರ ಕಾನೂನು ನೆರವು ಪಡೆಯುವ ಹಕ್ಕನ್ನು ಈ ಕಾನೂನುಗಳು ಕಸಿದುಕೊಳ್ಳುತ್ತವೆ, ಇದು ಭಾರತದ ಸಂವಿಧಾನದ 32ನೇ ವಿಧಿಯನ್ನು ದುರ್ಬಲಗೊಳಿಸುತ್ತದೆ.

"ಯೇ ಲೂಟೆರೋಂಕಿ ಸರ್ಕಾರ್ ಹೈ [ಇದು ಲೂಟಿ ಮಾಡುವವರ ಸರ್ಕಾರ]" ಎಂದು ಸಬರನ್ ಹೇಳುತ್ತಾರೆ. "ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ರೈತರು ನಮ್ಮೊಂದಿಗೆ ಸೇರಿಕೊಳ್ಳುತ್ತಾರೆ. ಪ್ರತಿಭಟನೆಗಳು ಇನ್ನಷ್ಟು ದೊಡ್ಡದಾಗುತ್ತವೆ.”

ಪ್ರತಿಭಟನೆಯಲ್ಲಿ ಇತ್ತೀಚೆಗೆ ಭಾಗವಹಿಸಿದವರಲ್ಲಿ 62 ವರ್ಷದ ಹರ್ದೀಪ್ ಕೌರ್ ಕೂಡ ಒಬ್ಬರಾಗಿದ್ದು ಅವರು ಡಿಸೆಂಬರ್ ಮೂರನೇ ವಾರದಲ್ಲಿ ಸಿಂಘುವನ್ನು ತಲುಪಿದರು. "ನನ್ನ ಮಕ್ಕಳು ಹೋರಾಟದಲ್ಲಿ ಸೇರಲು ಹೇಳಿದರು" ಎಂದು ಅವರು ಹೇಳುತ್ತಾರೆ, ತನ್ನ ಮೂವರು ಸ್ನೇಹಿತೆಯರೊಂದಿಗೆ ಅವರು ಚಾರ್ಪಾಯ್ ಮೇಲೆ ಕುಳಿತಿದ್ದರು.

ಕೌರ್ ಸಿಂಘುವಿನಿಂದ 300 ಕಿ.ಮೀ ದೂರದಲ್ಲಿರುವ ಲುಧಿಯಾನದ ಜಾಗ್ರಾವ್ ತಹಸಿಲ್ನ ಚಕ್ಕರ್ ಗ್ರಾಮದವರು. ಆಕೆಯ ಮಕ್ಕಳು ಆಸ್ಟ್ರೇಲಿಯಾದಲ್ಲಿ ವಾಸಿಸುತ್ತಿದ್ದಾರೆ, ಅಲ್ಲಿ ಮಗಳು ದಾದಿಯಾಗಿ ಕೆಲಸ ಮಾಡುತ್ತಾರೆ ಮತ್ತು ಮಗ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಾರೆ. "ಅವರು ಸುದ್ದಿಯನ್ನು ಬಹಳ ಆಸಕ್ತಿಯಿಂದ ಕೇಳುತ್ತಾರೆ" ಎಂದು ಅವರು ಹೇಳುತ್ತಾರೆ. "ಅವರು ಈ ಹೋರಾಟದ ಭಾಗವಾಗಲು ಅವರು ನಮ್ಮನ್ನು ಪ್ರೋತ್ಸಾಹಿಸಿದರು. ನಾವು ಇಲ್ಲಿಗೆ ಬರಲು ನಿರ್ಧರಿಸಿದಾಗ, ನಾವು ಕರೋನಾದ ಕುರಿತು ಚಿಂತಿಸಲಿಲ್ಲ."

ಧರಣಿ ಸ್ಥಳದಲ್ಲಿನ ಪೋಸ್ಟರ್‌ಗಳು ಪ್ರಧಾನಿ ನರೇಂದ್ರ ಮೋದಿಯವರನ್ನು ಕೋವಿಡ್ -19ಗಿಂತ ದೊಡ್ಡ ವೈರಸ್ ಎಂದು ಕರೆಯುತ್ತವೆ.

PHOTO • Parth M.N.

ಗ್ರಾಮಗಳಲ್ಲಿನ ರೈತರು ಮತ್ತು ಸಹಾಯಕರ ಬ್ಯಾಕ್-ಅಪ್ ಸೈನ್ಯಗಳು, ಸಿಂಘುವಿನಲ್ಲಿ ಗೋಚರಿಸದಿದ್ದರೂ ಸಹ ಅವರೂ ಪ್ರತಿಭಟನೆಯ ಭಾಗವೆಂದು ಶಂಶೇರ್ ಸಿಂಗ್ (ಮೇಲಿನ ಎಡ, ಮಧ್ಯ) ಹೇಳುತ್ತಾರೆ

ಕೌರ್ ಮತ್ತು ಅವರ ಪತಿ ಜೋರಾ ಸಿಂಗ್ ಪ್ರತಿಭಟನೆಗಾಗಿ ದೂರದಲ್ಲಿರುವಾಗ, ಕೆಲಸಗಾರರೊಬ್ಬರು ಅವರ 12 ಎಕರೆ ಕೃಷಿಭೂಮಿಯನ್ನು ನೋಡಿಕೊಳ್ಳುತ್ತಿದ್ದಾರೆ, ಅಲ್ಲಿ ಅವರು ಭತ್ತ ಮತ್ತು ಗೋಧಿಯನ್ನು ಬೆಳೆಸುತ್ತಾರೆ. "ಊರಿನಲ್ಲಿ ನಮ್ಮ ಅಗತ್ಯ ಬಿದ್ದಾಗ ನಾವು ಸ್ವಲ್ಪ ದಿನದ ಮಟ್ಟಿಗೆ ಊರಿಗೆ ಹೋಗುತ್ತೇವೆ" ಎಂದು ಅವರು ಹೇಳುತ್ತಾರೆ. “ಆ ಅವಧಿಗೆ [ಸಿಂಘುವಿನಲ್ಲಿ] ನಮ್ಮ ಬದಲಿಗೆ ಬೇರೆ ಯಾರನ್ನಾದರೂ ಕರೆಸಲಾಗುವುದು. ಮನೆಗೆ ಹಿಂತಿರುಗಲು ನಾವು ಕಾರನ್ನು ಬಾಡಿಗೆಗೆ ಪಡೆಯುತ್ತೇವೆ. ಅದೇ ಕಾರು ಹಳ್ಳಿಯಿಂದ ಯಾರನ್ನಾದರೂ ಹಿಂತಿರುಗಿ ಕರೆದು ತರುತ್ತದೆ. ”

ಕಾರನ್ನು ಹೊಂದಲು ಸಾಧ್ಯವಾಗದವರು ಬಸ್‌ನಲ್ಲಿ ತಿರುಗಾಡುತ್ತಿದ್ದಾರೆ. ರೈತರು ತಮ್ಮ ಟ್ರಾಕ್ಟರ್-ಟ್ರಾಲಿಗಳನ್ನು ಪ್ರತಿಭಟನಾ ಸ್ಥಳಗಳಲ್ಲಿ ತಂದಿದ್ದಾರೆ, ಆದರೆ ಇವು ಎಲ್ಲಿಯೂ ಹೋಗುವುದಿಲ್ಲ ಎಂದು ಉತ್ತರ ಪ್ರದೇಶದ ಮುಜಫರ್‌ ನಗರ ಜಿಲ್ಲೆಯ ಶಿವಪುರಿ ಗ್ರಾಮದಲ್ಲಿ ನಾಲ್ಕು ಎಕರೆ ಭೂಮಿಯನ್ನು ಹೊಂದಿರುವ ಕಬ್ಬು ಬೆಳೆಗಾರ ಶಂಶೇರ್ ಸಿಂಗ್ (36) ಹೇಳುತ್ತಾರೆ. "ನಾವು ಯುದ್ಧಭೂಮಿಯನ್ನು ತೊರೆದಿಲ್ಲ ಎಂದು ಟ್ರಾಕ್ಟರುಗಳು ಸೂಚಿಸುತ್ತವೆ" ಎಂದು ಅವರು ಹೇಳುತ್ತಾರೆ. "ಅವು ಸಿಂಘುವಿನಲ್ಲಿ ಉಳಿಯಲಿವೆ."

ಶಂಶೇರ್ ಸಿಂಘುವಿನಲ್ಲಿ ತನ್ನ ಉಪಸ್ಥಿತಿಯನ್ನು ತೋರಿಸುತ್ತಿದ್ದರೆ, ಅವರ ಹಳ್ಳಿಯಲ್ಲಿ ಕಬ್ಬಿನ ಕಟಾವು ನಡೆಯುತ್ತಿದೆ. "ನಾನು ಇನ್ನೂ ಕೆಲವು ದಿನಗಳವರೆಗೆ ಇಲ್ಲಿರಲಿದ್ದೇನೆ" ಎಂದು ಅವರು ಹೇಳುತ್ತಾರೆ. “ನಾನು ಹೋದ ನಂತರ, ನನ್ನ ಸಹೋದರ ನನ್ನ ಸ್ಥಾನಕ್ಕೆ ಬರುತ್ತಾನೆ. ಪ್ರಸ್ತುತ ಅವನು ಕಬ್ಬನ್ನು ಕೊಯ್ಲು ಮಾಡುತ್ತಿದ್ದಾನೆ. ಕೃಷಿ ಯಾರಿಗೂ ಕಾಯುವುದಿಲ್ಲ. ಕೆಲಸ ಮುಂದುವರಿಯಲೇಬೇಕು.”

ಹಳ್ಳಿಗಳಲ್ಲಿನ ರೈತರು ಮತ್ತು ಸಹಾಯಕರ ಬ್ಯಾಕ್-ಅಪ್ ಸೈನ್ಯಗಳು ಸಹ ಸಿಂಘುವಿನಲ್ಲಿ ಇರದಿದ್ದರೂ ಇಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಭಾಗವೇ ಆಗಿದ್ದಾರೆ. ಎಂದು ಸಂಶೇರ್‌ ಒತ್ತಿ ಹೇಳುತ್ತಾರೆ. "ಪ್ರತಿಭಟನೆಯಲ್ಲಿ ಭಾಗವಹಿಸುವ ಸಲುವಾಗಿ ಹೆಚ್ಚಿನ ಸಂಖ್ಯೆಯ ಜನರು ತಮ್ಮ ಮನೆಗಳನ್ನು ತೊರೆದಿದ್ದಾರೆ" ಎಂದು ಅವರು ಹೇಳುತ್ತಾರೆ. “ಆದರೆ ಪ್ರತಿಯೊಬ್ಬರಿಗೂ ಕುಟುಂಬಗಳಿಲ್ಲ ಅಥವಾ ಅವರ ಹೊಲಗಳನ್ನು ನೋಡಿಕೊಳ್ಳಲು ಸಹಾಯಕರಿರುವುದಿಲ್ಲ.ಇದರಿಂದಾಗಿ ಮನೆಗೆ ಹಿಂದಿರುಗಿದ ಗ್ರಾಮಸ್ಥರು ದುಪ್ಪಟ್ಟು ಕೆಲಸವನ್ನು ಮಾಡುತ್ತಿದ್ದಾರೆ ಮತ್ತು ಸಿಂಘು ಅಥವಾ ಇತರ ಪ್ರತಿಭಟನಾ ಸ್ಥಳಗಳಲ್ಲಿರುವವರ ಭೂಮಿಯನ್ನು [ತಮ್ಮ ಸ್ವಂತ ಜಮೀನನ್ನು ಕೂಡ] ಕೃಷಿ ಮಾಡುತ್ತಿದ್ದಾರೆ. ಅವರು ಈ ಪ್ರತಿಭಟನೆಯ ಭಾಗವೂ ಹೌದು. ವ್ಯತ್ಯಾಸವೆಂದರೆ ಪ್ರತಿಭಟನಾ ಸ್ಥಳಗಳಲ್ಲಿ ಅವರು ದೈಹಿಕವಾಗಿ ಇರುವುದಿಲ್ಲ.”

ಅನುವಾದ: ಶಂಕರ ಎನ್. ಕೆಂಚನೂರು
Parth M.N.

Parth M.N. is a 2017 PARI Fellow and an independent journalist reporting for various news websites. He loves cricket and travelling.

Other stories by Parth M.N.
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru