“ಘರೋ ಜಾವೋ ರಜ್‌ ಕೇ, ಕಾಮ್‌ ಹೋಗಾ ಗಜ್‌ ಕೇ [ನೀವು ಮನೆಯಿಂದ ಹೊರಡುವಾಗ ಹೊಟ್ಟೆ ತುಂಬಾ ಉಂಡು ಹೊರಟರೆ ನೀವು ಹೋಗುತ್ತಿರುವ ಕೆಲಸ ಯಶಸ್ವಿಯಾಗುತ್ತದೆ].”

ಇದು ಶಹಜಹಾನ್ಪುರದಲ್ಲಿ ಪ್ರತಿಭಟನಾ ನಿರತ ರೈತರಿಗಾಗಿ ಲಂಗರ್ ನಡೆಸುತ್ತಿರುವ ಬಿಲವಾಲ್ ಸಿಂಗ್ ಅವರ ಸರಳ ತತ್ವ. "ಈ ಸರ್ಕಾರಕ್ಕೆ ಹಸಿದ ಹೊಟ್ಟೆಯ ಹೋರಾಟಗಾರರೊಂದಿಗೆ ವ್ಯವಹರಿಸುವುದು ಅಭ್ಯಾಸವಾಗಿ ಹೋಗಿದೆ." ಎಂದು ಅವರು ಪಂಜಾಬಿಯಲ್ಲಿ ಹೇಳುತ್ತಾ, ಮುಂದುವರಿದು "ಸಾಕಷ್ಟು ತಿಂದು ಸರಕಾರವನ್ನು ಎದುರಿಸುವವರನ್ನು ಹೇಗೆ ನಿಭಾಯಿಸುತ್ತಾರೆಂದು ನೋಡೋಣ." ಎನ್ನುತ್ತಾರೆ.

ರಾಜಸ್ಥಾನದ ಗಂಗಾನಗರ ಜಿಲ್ಲೆಯ 41 ಆರ್‌ಬಿ ಗ್ರಾಮದ ರೈತ ಬಿಲಾವಾಲ್ (32) ಮತ್ತು ಅವರ ಸೋದರಸಂಬಂಧಿ ರಶ್ವಿಂದರ್ ಸಿಂಗ್ (30) ರಾಜಸ್ಥಾನ-ಹರಿಯಾಣ ಗಡಿಯಲ್ಲಿರುವ ದೆಹಲಿಯ ದಕ್ಷಿಣಕ್ಕೆ 120 ಕಿಲೋಮೀಟರ್ ದೂರದ ಶಹಜಹಾನಪುರದಲ್ಲಿ ಕ್ಯಾಂಪಿಂಗ್ ಮಾಡುತ್ತಿರುವ ಸಾವಿರಾರು ಪ್ರತಿಭಟನಾಕಾರರಲ್ಲಿ ಇವರೂ ಇದ್ದಾರೆ.

ಈ ವರ್ಷದ ಸೆಪ್ಟೆಂಬರ್‌ನಲ್ಲಿ ಕೇಂದ್ರ ಸರ್ಕಾರ ಹೊರಡಿಸಿರುವ  ಮೂರು ಹೊಸ ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ಮುಖ್ಯವಾಗಿ ಹರಿಯಾಣ, ಪಂಜಾಬ್ ಮತ್ತು ರಾಜಸ್ಥಾನದಿಂದ ಬಂದಿರುವ ಲಕ್ಷಾಂತರ ರೈತರು ಮತ್ತು ಹಲವಾರು ಕೃಷಿ ಒಕ್ಕೂಟಗಳು ನವೆಂಬರ್ 26 ರಿಂದ ಧರಣಿ ಪ್ರತಿಭಟನೆಯಲ್ಲಿ ತೊಡಗಿರುವ ದೆಹಲಿ ಮತ್ತು ಸುತ್ತಮುತ್ತಲಿನ ತಾಣಗಳಲ್ಲಿ ಇದೂ ಒಂದು.

ಈ ಕಾನೂನುಗಳನ್ನು ಮೊದಲು ಜೂನ್ 5, 2020ರಂದು ಸುಗ್ರೀವಾಜ್ಞೆಗಳಾಗಿ ಅಂಗೀಕರಿಸಲಾಯಿತು, ನಂತರ ಸೆಪ್ಟೆಂಬರ್ 14ರಂದು ಸಂಸತ್ತಿನಲ್ಲಿ ಕೃಷಿ ಮಸೂದೆಗಳಾಗಿ ಪರಿಚಯಿಸಲಾಯಿತು ಮತ್ತು ಆ ತಿಂಗಳ 20ರಂದು ಪ್ರಸ್ತುತ ಸರ್ಕಾರವು ಕಾಯಿದೆಗಳನ್ನು ಕಾರ್ಯರೂಪಕ್ಕೆ ತರಲು ಆತುರಪಡಿಸಿತು. ರೈತರು ಈ ಕಾನೂನುಗಳನ್ನು ತಮ್ಮ ಜೀವನೋಪಾಯಕ್ಕೆ ವಿನಾಶಕಾರಿ ಎಂದು ನೋಡುತ್ತಾರೆ ಏಕೆಂದರೆ ದೊಡ್ಡ ಕಾರ್ಪೊರೇಟ್‌ಗಳು ರೈತರು ಮತ್ತು ಕೃಷಿಯ ಮೇಲೆ ಇನ್ನೂ ಹೆಚ್ಚಿನ ಬಲವನ್ನು ಹೊಂದುತ್ತಾರೆ. ಕನಿಷ್ಠ ಬೆಂಬಲ ಬೆಲೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು, ಸರ್ಕಾರಿ ಖರೀದಿ ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಈ ಕಾಯಿದೆಗಳು ಕೃಷಿಕರಿಗೆ ನೀಡುವ ಪ್ರಮುಖ ಬೆಂಬಲ ರೂಪಗಳನ್ನು ನಾಶಗೊಳಿಸುತ್ತವೆ.
Bilawal Singh (left) and his cousin Rashwinder run a langar at the Shajahanpur site: 'We have enough supplies coming in. We can stay here till the 2024 elections'
PHOTO • Parth M.N.
Bilawal Singh (left) and his cousin Rashwinder run a langar at the Shajahanpur site: 'We have enough supplies coming in. We can stay here till the 2024 elections'
PHOTO • Parth M.N.

ಬಿಲಾವಾಲ್ ಸಿಂಗ್ (ಎಡ) ಮತ್ತು ಅವರ ಸೋದರಸಂಬಂಧಿ ರಶ್ವಿಂದರ್ ಅವರು ಶಜಹಾನ್ಪುರ ಸ್ಥಳದಲ್ಲಿ ಲಂಗರ್ ನಡೆಸುತ್ತಿದ್ದಾರೆ: 'ನಮ್ಮಲ್ಲಿ ಸಾಕಷ್ಟು ಸರಬರಾಜು ಬರುತ್ತಿದೆ. 2024ರ ಚುನಾವಣೆಯವರೆಗೆ ನಾವು ಇಲ್ಲಿಯೇ ಇರಬಲ್ಲೆವು'

ರೈತರು ಪ್ರತಿಭಟಿಸುತ್ತಿರುವ ಕಾನೂನುಗಳು ರೈತ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ 2020 , ರೈತರ ಉತ್ಪಾದನಾ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ಕಾಯ್ದೆ, 2020 ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ , 2020. ಭಾರತದ ಸಂವಿಧಾನದ 32ನೇ ವಿಧಿಯನ್ನು ದುರ್ಬಲಗೊಳಿಸುವ ಮೂಲಕ ಎಲ್ಲಾ ನಾಗರಿಕರ ಕಾನೂನು ನೆರವು ಪಡೆಯುವ ಹಕ್ಕನ್ನು ಅವು ನಿಷ್ಕ್ರಿಯಗೊಳಿಸುವುದರಿಂದ ಪ್ರತಿಯೊಬ್ಬ ಭಾರತೀಯನ ಮೇಲೂ ಪರಿಣಾಮ ಬೀರುತ್ತದೆ ಎಂದು ಕಾನೂನುಗಳು ಟೀಕಿಸಲ್ಪಟ್ಟಿವೆ.

"ಡಿಸೆಂಬರ್ ಮೂರನೇ ವಾರದಿಂದ ನಾವು ಇಲ್ಲಿ ಲಂಗರ್ ನಡೆಸುತ್ತಿದ್ದೇವೆ" ಎಂದು ಬಿಲಾವಾಲ್ ಹೇಳುತ್ತಾರೆ, ಅವರು ಆ ದಿನಕ್ಕಾಗಿ ತಯಾರಿಸಿದ ಕಧಿ ಮತ್ತು ಪೂರಿಗಳೊಂದಿಗೆ ದೊಡ್ಡ ಪಾತ್ರಗಳ ಪಕ್ಕದಲ್ಲಿ ಕುಳಿತಿದ್ದರು. "ನಾವು ಮೊದಲು [ಪಶ್ಚಿಮ ದೆಹಲಿಯ] ಟಿಕ್ರಿ ಗಡಿಯಲ್ಲಿದ್ದೆವು."

ಬಿಲಾವಾಲ್ ಮತ್ತು ರಶ್ವಿಂದರ್ ಅವರು ಇನ್ನಷ್ಟು ದುಡಿಯುವ ಕೈಗಳು ಬೇಕು ಎಂದು ತಿಳಿದಾಗ ಶಹಜಹಾನ್ಪುರಕ್ಕೆ ತಮ್ಮ ನೆಲೆ ಬದಲಿಸಿದರು; ಟಿಕ್ರಿ ಮತ್ತು ಸಿಂಘು ತುಂಬಾ ದೊಡ್ಡ ಪ್ರತಿಭಟನಾ ತಾಣಗಳಾಗಿವೆ, ಅಲ್ಲಿ ಸೇರಿರುವ ಪ್ರತಿಭಟನಾಕಾರರಿಗೆ ಸಂಪನ್ಮೂಲಗಳು ಸಹ ಉತ್ತಮವಾಗಿವೆ.

ಶಹಜಹಾನ್ಪುರದಲ್ಲಿ ಈಗ ಐದು ಲಂಗರ್‌ಗಳು ನಡೆಸಲ್ಪಡುತ್ತಿವೆ, ಅವುಗಳಲ್ಲಿ ಹೆಚ್ಚಿನವು ಇತರ ಪ್ರತಿಭಟನಾ ಸ್ಥಳಗಳಿಂದ ಇಲ್ಲಿಗೆ ಸ್ಥಳಾಂತರಗೊಂಡಿವೆ. "ಕೃಷಿ ನಮ್ಮ ಧರ್ಮ" ಎಂದು ಬಿಲಾವಾಲ್ ಹೇಳುತ್ತಾರೆ. “ನಾವು ಜನರಿಗೆ ಆಹಾರವನ್ನು ನೀಡುವುದನ್ನು ಪ್ರೀತಿಸುತ್ತೇವೆ. ರೈತರು ಮತ್ತು ಗುರುದ್ವಾರಗಳು ಕಚ್ಚಾ ವಸ್ತುಗಳನ್ನು [ಅಡುಗೆಗೆ] ದಾನ ಮಾಡುತ್ತಿದ್ದಾರೆ. ನಮ್ಮಲ್ಲಿ ಸಾಕಷ್ಟು ಸರಬರಾಜು ಬರುತ್ತಿದೆ. 2024ರ ಚುನಾವಣೆಯವರೆಗೆ ನಾವು ಇಲ್ಲಿಯೇ ಉಳಿಯಬಹುದು.”

ತಲಾ 40 ಎಕರೆ ಭೂಮಿಯನ್ನು ಹೊಂದಿರುವ ಮತ್ತು ಮುಖ್ಯವಾಗಿ ಗೋಧಿ, ಅಕ್ಕಿ, ಸಾಸಿವೆ, ಬೆಳೆಯುವ ಮತ್ತು ಹತ್ತಿಯನ್ನು ಬೆಳೆಯುವ ಈ ಸೋದರಸಂಬಂಧಿಗಳು ಕೃಷಿ ಕಾನೂನುಗಳನ್ನು ತೀವ್ರವಾಗಿ ಟೀಕಿಸುತ್ತಾರೆ - ಅವರು ಈ ದಾಖಲೆಗಳನ್ನು ಅಧ್ಯಯನ ಮಾಡಿರುವುದು ಮಾತ್ರವಲ್ಲ, ಅವರು ಅನುಭವದಿಂದಲೂ ಮಾತನಾಡುತ್ತಿದ್ದಾರೆ. ವಿವಾದಾತ್ಮಕ ಕಾನೂನುಗಳಲ್ಲಿ ಒಂದು ಗುತ್ತಿಗೆ ಕೃಷಿಯನ್ನು ಒಳಗೊಳ್ಳುತ್ತದೆ ಮತ್ತು ಒಪ್ಪಂದ ಮಾಡಿಕೊಳ್ಳುವ ಕಾರ್ಪೋರೇಷನ್‌ಗಳ ಹಿತಾಸಕ್ತಿಗಳನ್ನು ರಕ್ಷಿಸುತ್ತದೆ, ಆದರೆ ರೈತರಿಗೆ ಪರಿಹಾರವನ್ನು ಪಡೆಯಲು ಯಾವುದೇ ಮಾರ್ಗವಿಲ್ಲ. ಬಿಲಾವಾಲ್‌ಗೆ ಈ ಬಗ್ಗೆ ಒಂದು ಅಥವಾ ಎರಡು ವಿಷಯ ತಿಳಿದಿದೆ.

One of the new laws covers contract farming and protects large corporations, leaving no redressal for farmers. Bilawal has already had this experience
PHOTO • Parth M.N.
One of the new laws covers contract farming and protects large corporations, leaving no redressal for farmers. Bilawal has already had this experience
PHOTO • Parth M.N.

ಹೊಸ ಕಾನೂನುಗಳಲ್ಲಿ ಒಂದು ಗುತ್ತಿಗೆ ಕೃಷಿಯನ್ನು ಒಳಗೊಳ್ಳುತ್ತದೆ ಮತ್ತು ದೊಡ್ಡ ಕಾರ್ಪೋರೇಷನ್‌ಗಳನ್ನು ರಕ್ಷಿಸುತ್ತದೆ, ರೈತರಿಗೆ ಯಾವುದೇ ಪರಿಹಾರವನ್ನು ನೀಡುವುದಿಲ್ಲ. ಬಿಲಾವಾಲ್ ಈಗಾಗಲೇ ಈ ಅನುಭವವನ್ನು ಹೊಂದಿದ್ದಾರೆ

ನವೆಂಬರ್ 2019ರಲ್ಲಿ ಅವರು ಬಾರ್ಲಿ ಬೆಳೆಯಲು ಪೆಪ್ಸಿಕೋ ಜೊತೆ ಒಪ್ಪಂದ ಮಾಡಿಕೊಂಡು ಮತ್ತು ಕಂಪನಿಯಿಂದ ಬೆಳೆಗೆ ಬೀಜಗಳನ್ನು ಖರೀದಿಸಿದರು. “ಅವರು ಅದನ್ನು ನನ್ನಿಂದ ಕ್ವಿಂಟಲ್‌ಗೆ ರೂ. 1,525ಗೆ ಖರೀದಿಸುವುದಾಗಿ ಭರವಸೆ ನೀಢಿದ್ದರು.” ಎಂದು ಬಿಲಾವಾಲ್ ಹೇಳುತ್ತಾರೆ. "ಆದರೆ ನಾನು ಬೆಳೆಯವನ್ನು [ಏಪ್ರಿಲ್ 2020ರ ಸುಮಾರಿಗೆ] ಕಟಾವು ಮಾಡಿದಾಗ, ಗುಣಮಟ್ಟ ಸರಿಯಿಲ್ಲ ಅಥವಾ ನಾವು ಹೆಚ್ಚಿನ ಮಾದರಿಗಳನ್ನು ನೋಡಬೇಕಾಗಿದೆ ಎಂದು ಅವರು ನನ್ನನ್ನು ಎರಡು ತಿಂಗಳ ಕಾಲ ಓಡಾಡಿಸಿದರು."

ಕಂಪನಿಯು ಲಾಕ್‌ಡೌನ್‌ ಕಾರಣದಿಂದ ಮದ್ಯ ಸೇವನೆ ಕ್ಷೀಣಿಸುತ್ತಿರುವುದರಿಂದ ತನ್ನ ಬಾರ್ಲಿ ಸಂಗ್ರವನ್ನು ಕಡಿಮೆಗೊಳಿಸಿದೆ ಎನ್ನುವುದು ಬಿಲಾವಾಲ್ ನಂಬಿಕೆ. "ಇದರಿಂದಾಗಿ ಪೆಪ್ಸಿಕೋ ತನ್ನ ಮಾತನ್ನು ತಪ್ಪಿತು" ಎಂದು ಅವರು ಹೇಳುತ್ತಾರೆ. ಜೂನ್ 2020ರಲ್ಲಿ, ಬಿಲಾವಾಲ್ ಪದಮ್‌ಪುರ್ ಮಂಡಿಯಲ್ಲಿನ ಮುಕ್ತ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‌ಗೆ 1,100 ರೂ‌ಪಾಯಿಯಂತೆ ತನ್ನ ಬೆಳೆಯನ್ನು ಮಾರಿದರು. (ಅವರ ಗ್ರಾಮವಿರುವ ತಾಲ್ಲೂಕು).

ಬಿಲಾವಾಲ್ ಅವರು 250 ಕ್ವಿಂಟಾಲ್ ಬಾರ್ಲಿಯನ್ನು ಕ್ವಿಂಟಲ್‌ಗೆ 415 ರೂಪಾಯಿಗಳಿಗೆ ಮಾರಾಟ ಮಾಡುವ ಮೂಲಕ 1 ಲಕ್ಷ ರೂ.ಗಿಂತ ಹೆಚ್ಚಿನ ನಷ್ಟವನ್ನು ಅನುಭವಿಸಬೇಕಾಯಿತು. "ಯಾವುದೇ ಸಂದರ್ಭದಲ್ಲಿ ಪರಿಹಾರದ ವ್ಯವಸ್ಥೆ ಇಲ್ಲ" ಎಂದು ಅವರು ಹೇಳುತ್ತಾರೆ. "ಈ ಮಸೂದೆ [ಹೊಸ ಕಾನೂನು] ಇದನ್ನು ಇನ್ನಷ್ಟು ಹದಗೆಡಿಸುತ್ತದೆ."

1917ರಲ್ಲಿ ಬಿಹಾರದ ಚಂಪಾರಣ್ಯದಲ್ಲಿ ಮಹಾತ್ಮ ಗಾಂಧಿ ಮತ್ತು ಸರ್ದಾರ್ ಪಟೇಲ್ ಇಂಡಿಗೊ ರೈತರ ಪರವಾಗಿ ಹೋರಾಡಿದಾಗ, ಅವರೂ ಸಹ ಒಂದು ರೀತಿಯ ಗುತ್ತಿಗೆ ಕೃಷಿಯ ವಿರುದ್ಧ ಪ್ರತಿಭಟಿಸುತ್ತಿದ್ದರು ಎಂದು ಇತಿಹಾಸದ ಪಾಠಗಳನ್ನು ಉಲ್ಲೇಖಿಸಿ ರಶ್ವಿಂದರ್ ಹೇಳುತ್ತಾರೆ. "ಮೋದಿ ತನ್ನ ಭಾಷಣಗಳಲ್ಲಿ ಇವೆರಡನ್ನೂ ಉಲ್ಲೇಖಿಸುತ್ತಲೇ ಇರುತ್ತಾರೆ" ಎಂದು ಅವರು ಹೇಳುತ್ತಾರೆ.

ರಶ್ವಿಂದರ್ ಇತರ ಪಾಠಗಳ ಬಗ್ಗೆಯೂ ಮಾತನಾಡುತ್ತಾರೆ. "ಖಾಸಗೀಕರಣದ ನಂತರ ಶಿಕ್ಷಣ ಅಥವಾ ಆರೋಗ್ಯ ಕ್ಷೇತ್ರದ ಕತೆ ಏನಾಯಿತು?" ಎಂದು ಅವರು ಕೇಳುತ್ತಾರೆ. “ಇಂದು ಸರ್ಕಾರಿ ಶಾಲೆಗಳು ಮತ್ತು ಆಸ್ಪತ್ರೆಗಳ ಸ್ಥಿತಿ ಭಯಾನಕವಾಗಿದೆ. ಗೃಹ ಸಚಿವರು ಅನಾರೋಗ್ಯಕ್ಕೆ ಒಳಗಾದಾಗ ಅವರು ಖಾಸಗಿ ಆಸ್ಪತ್ರೆಗೆ ಹೋಗುತ್ತಾರೆ. ಕೃಷಿಯನ್ನು ಖಾಸಗೀಕರಣಗೊಳಿಸುವ ಮೂಲಕ ಸರ್ಕಾರವು ತನ್ನ ಜವಾಬ್ದಾರಿಗಳಿಂದ ಓಡಿಹೋಗುತ್ತಿದೆ.”
Gurudeep Singh (in white turban), says, 'MSP [minimum support price] is very important for us. Without it, we are finished'
PHOTO • Parth M.N.
Gurudeep Singh (in white turban), says, 'MSP [minimum support price] is very important for us. Without it, we are finished'
PHOTO • Parth M.N.

ಗುರುದೀಪ್ ಸಿಂಗ್ (ಬಿಳಿ ಪೇಟದಲ್ಲಿ), 'ಎಂಎಸ್ಪಿ [ಕನಿಷ್ಠ ಬೆಂಬಲ ಬೆಲೆ] ನಮಗೆ ಬಹಳ ಮುಖ್ಯ. ಅದು ಇಲ್ಲದೆ ನಾವು  ಬದುಕಲು ಸಾಧ್ಯವಿಲ್ಲ'

ಮತ್ತಷ್ಟು ವಿಸ್ತಾರವಾಗಿ ಹೇಳುವುದಾದರೆ, ಬೊಲಿವಿಯಾದ ನೀರಿನ ಬಿಕ್ಕಟ್ಟಿನ ಕುರಿತು ರಶ್ವಿಂದರ್ ಒಂದು ಉದಾಹರಣೆಯನ್ನು ನೀಡುತ್ತಾರೆ, ಅಲ್ಲಿ ನೀರು ಸರಬರಾಜಿನ ಖಾಸಗೀಕರಣವು 1999–2000ರಲ್ಲಿ ದೇಶದಲ್ಲಿ ಗಲಭೆಗಳಿಗೆ ನಾಂದಿ ಹಾಡಿತು. "ಖಾಸಗೀಕರಣವು ಪರಿಹಾರವಲ್ಲ" ಎಂದು ಅವರು ಹೇಳುತ್ತಾರೆ. "ಈ ಸರ್ಕಾರವು ರೈತರನ್ನು ದಾರಿ ತಪ್ಪಿಸಲಾಗುತ್ತಿದೆ ಎಂದು ಸತತವಾಗಿ ಹೇಳುತ್ತಿದೆ. ಆದರೆ ನಮಗೆ ಸಂಪೂರ್ಣ ಅರಿವಿದೆ. ನಿಮಗೆ ಮಾಹಿತಿಗಳ ಅರಿವಿಲ್ಲದೆ ಹೋದರೆ, ಈ ಜಗತ್ತು ನಿಮ್ಮನ್ನು ಕಿತ್ತು ತಿನ್ನುತ್ತದೆ."

ಹೊಸ ಕಾನೂನುಗಳ ಬಗ್ಗೆ ರೈತರ ಆತಂಕ ಮತ್ತು ಕೋಪದ ಹೊರತಾಗಿಯೂ, ಶಹಜಹಾನ್ಪುರದ ರಶ್ವಿಂದರ್ ಮತ್ತು ಬಿಲಾವಾಲ್ ಅವರ ಲಂಗರ್ ಸುತ್ತಲಿನ ಪ್ರತಿಭಟನಾ ಸ್ಥಳದಲ್ಲಿ, ಬಹುತೇಕ ಹಬ್ಬದ ವಾತಾವರಣವಿದೆ, ಇದು ಅವರ ಒಗ್ಗಟ್ಟಿನ ಪ್ರಜ್ಞೆಯಿಂದ ಪ್ರೇರಿತವಾಗಿದೆ. ಕೆಲವು ರೈತರು ಪಂಜಾಬಿ ಹಾಡುಗಳನ್ನು ಜೋರಾಗಿ ನುಡಿಸುವ ಟ್ರಾಕ್ಟರುಗಳನ್ನು ಓಡಿಸುತ್ತಿದ್ದಾರೆ. ಇತರರು ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ವಿಡಂಬನಾತ್ಮಕ ಹಾಡುಗಳನ್ನು ಹಾಡುತ್ತಾ ನೃತ್ಯ ಮಾಡುತ್ತಿದ್ದಾರೆ. ಆದರೆ, ಬಿಲಾವಾಲ್, "ನಮ್ಮ ಸಮಸ್ಯೆಗಳನ್ನು ಮರೆಯಲು ನಾವು ಹಾಡುತ್ತೇವೆ ಮತ್ತು ನೃತ್ಯ ಮಾಡುತ್ತೇವೆ. ಇಲ್ಲಿನ ರೈತರು ಯುದ್ಧ ಮಾಡುತ್ತಿದ್ದಾರೆ." ಮತ್ತು ಆ ಹೋರಾಟದಲ್ಲಿ, "ಇಲ್ಲಿನ ಪ್ರತಿಭಟನಾಕಾರರು ಪ್ರತಿ ದಿನ ಕಳೆದಂತೆ ಬಲಗೊಳ್ಳುತ್ತಿದ್ದಾರೆ" ಎಂದು ರಶ್ವಿಂದರ್ ಹೇಳುತ್ತಾರೆ.

ಸೋದರಸಂಬಂಧಿಗಳ ಲಂಗರ್‌ನಿಂದ ಸುಮಾರು ಅರ್ಧ ಕಿಲೋಮೀಟರ್ ದೂರದಲ್ಲಿರುವ 54 ವರ್ಷದ ಗುರುದೀಪ್ ಸಿಂಗ್ ದೊಡ್ಡ ಕಾವಲಿಯಲ್ಲಿ ರೊಟ್ಟಿ ಬೇಯಿಸುತ್ತಿದ್ದಾರೆ. ಅವರೂ ಇಲ್ಲಿಗೆ ಸ್ಥಳಾಂತರಗೊಳ್ಳುವ ಮೊದಲು ಟಿಕ್ರಿಯಲ್ಲಿ ಲಂಗರ್‌ ನಡೆಸುತ್ತಿದ್ದರು. ಅವರು ಪಂಜಾಬ್‌ನ ಫಿರೋಜ್‌ಪುರ ಜಿಲ್ಲೆಯ ಮಾಮ್‌ದೊತ್ ತಹಸಿಲ್‌ನಲ್ಲಿರುವ ಆಲ್ಫುಕ್ ಗ್ರಾಮದಲ್ಲಿ 40 ಎಕರೆ ಭೂಮಿಯನ್ನು ಹೊಂದಿದ್ದಾರೆ ಮತ್ತು ಈ ಮೂರು ಹೊಸ ಕಾನೂನುಗಳು ರೈತರಿಗೆ "ಡೆತ್ ವಾರಂಟ್" ಎಂದು ಹೇಳುತ್ತಾರೆ. "ನಾನು ಅಕ್ಕಿ ಮತ್ತು ಗೋಧಿಯನ್ನು ಬೆಳೆಯುತ್ತೇನೆ" ಎಂದು ಅವರು ವಿವರಿಸುತ್ತಾರೆ. “ಎಂಎಸ್‌ಪಿ [ಕನಿಷ್ಟ ಬೆಂಬಲ ಬೆಲೆ] ನಮಗೆ ಬಹಳ ಮುಖ್ಯ. ಅದು ಇಲ್ಲದೆ ಹೋದಲ್ಲಿ ನಾವು ಸಾಯುತ್ತೇವೆ."

ಆಂದೋಲನ ಪ್ರಾರಂಭವಾದ ದಿನದಿಂದ ಗುರುದೀಪ್ ಮನೆಯಿಂದ ದೂರವಿದ್ದಾರೆ. "ನಾನು ನವೆಂಬರ್ 26ರಂದು ಹೊರಟೆ" ಎಂದು ಅವರು ಹೇಳುತ್ತಾರೆ. “ನಾನು ಒಂದು ತಿಂಗಳಿನಿಂದ ನನ್ನ ಹೆಂಡತಿ ಮತ್ತು ಮಕ್ಕಳನ್ನು ಭೇಟಿ ಮಾಡಿಲ್ಲ. ಅವರು ನನಗೆ ವೀಡಿಯೊ ಕರೆಗಳನ್ನು ಮಾಡುತ್ತಾರೆ ಮತ್ತು ಮನೆಗೆ ಮರಳುವಂತೆ ಹೇಳುತ್ತಿದ್ದಾರೆ.” ಆಂದೋಲನ ಪ್ರಾರಂಭವಾದ ದಿನದಿಂದ ಗುರುದೀಪ್ ಮನೆಯಿಂದ ದೂರವಿದ್ದಾರೆ. "ನಾನು ನವೆಂಬರ್ 26ರಂದು ಹೊರಟೆ" ಎಂದು ಅವರು ಹೇಳುತ್ತಾರೆ. “ನಾನು ಒಂದು ತಿಂಗಳಿನಿಂದ ನನ್ನ ಹೆಂಡತಿ ಮತ್ತು ಮಕ್ಕಳನ್ನು ಭೇಟಿ ಮಾಡಿಲ್ಲ. ಅವರು ನನಗೆ ವೀಡಿಯೊ ಕರೆಗಳನ್ನು ಮಾಡುತ್ತಾರೆ ಮತ್ತು ಮನೆಗೆ ಮರಳುವಂತೆ ಹೇಳುತ್ತಿದ್ದಾರೆ.”

ಆದರೆ, ಗುರುದೀಪ್ ಇಲ್ಲಿಯೇ ಇರಲು ನಿರ್ಧರಿಸಿದ್ದಾರೆ. ಕಾನೂನುಗಳನ್ನು ಹಿಂತೆಗೆದುಕೊಳ್ಳುವವರೆಗೂ ಅವರು ಇಲ್ಲಿಂದ ಹೊರಡುವುದಿಲ್ಲ. "ನಾನು ಅವರಿಗೆ [ಕುಟುಂಬ ಸದಸ್ಯರಿಗೆ] ಹಾರವನ್ನು ಖರೀದಿಸಲು ಹೇಳಿದ್ದೇನೆ" ಎಂದು ಅವರು ಹೇಳುತ್ತಾರೆ. "ಕಾನೂನುಗಳನ್ನು ಹಿಂತೆಗೆದುಕೊಂಡರೆ, ಹಿಂದಿರುಗಿದ ನಂತರ, ಆ ಹಾರವನ್ನು ಹಾಕಿ ಸ್ವಾಗತಿಸಿ. ನಾನು ಇಲ್ಲಿಯೇ ಸತ್ತರೆ, ಅದನ್ನು ನನ್ನ ಚಿತ್ರಕ್ಕೆ ಹಾಕಿ."

ಅನುವಾದ: ಶಂಕರ ಎನ್. ಕೆಂಚನೂರು
Parth M.N.

Parth M.N. is a 2017 PARI Fellow and an independent journalist reporting for various news websites. He loves cricket and travelling.

Other stories by Parth M.N.
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru