ಮಾರುತಿ ವ್ಯಾನ್ ತುಂಬಿದ್ದು ಚಲಿಸಲು ಸಿದ್ಧವಾಗಿದೆ. ರೈತರು ಲಭ್ಯವಿರುವ ಪ್ರತಿಯೊಂದು ಮೂಲೆಯನ್ನೂ ಆಕ್ರಮಿಸಿಕೊಂಡಿದ್ದಾರೆ, ಕೆಲವರು ಪರಸ್ಪರರ ಮಡಿಲಲ್ಲಿ ಕುಳಿತಿದ್ದಾರೆ. ಅವರ ಚೀಲಗಳು ಮತ್ತು ವಾಕಿಂಗ್ ಸ್ಟಿಕ್‌ಗಳನ್ನು ಹಿಂಬದಿಯ ಆಸನದ ಬಳಿ ಉಳಿದಿರುವ ಜಾಗದಲ್ಲಿ ಇರಿಸಿದ್ದಾರೆ.

ಆದರೆ ಮಂಗಲ್ ಘಡ್ಗೆ ಪಕ್ಕದಲ್ಲಿ ಒಂದು ಆಸನವು ಖಾಲಿ ಉಳಿದಿತ್ತು. ಅವರು ಯಾರನ್ನೂ ಅಲ್ಲಿ ಕುಳಿತುಕೊಳ್ಳಲು ಬಿಡುವುದಿಲ್ಲ - ಅದನ್ನು ‘ಕಾಯ್ದಿರಿಸಲಾಗಿತ್ತು.ʼ  ನಂತರ ಮೀರಾಬಾಯಿ ಲಂಗೆ ವ್ಯಾನ್ ತನಕ ನಡೆದು ಬಂದು, ಆ ಖಾಲಿ ಜಾಗದಲ್ಲಿ ಕುಳಿತು ತನ್ನ ಸೀರೆಯನ್ನು ಸರಿಹೊಂದಿಸಿಕೊಳ್ಳುತ್ತಿದ್ದರೆ, ಮಂಗಲ್ ತನ್ನ ತೋಳನ್ನು ಅವರ ಭುಜಗಳನ್ನು ಬಳಸುತ್ತಾರೆ.  ಮಾರುತಿ ವ್ಯಾನಿನ ಬಾಗಿಲು ಮುಚ್ಚುತ್ತದೆ ಆಗ ಮಂಗಲ್ ಡ್ರೈವರ್‌ಗೆ, “ಚಲ್ ರೆ [ಹೊರಡೋಣ]” ಎಂದು ಹೇಳುತ್ತಾರೆ..

ಮಂಗಲ್, 53, ಮತ್ತು ಮೀರಾಬಾಯಿ, 65, ಇಬ್ಬರೂ ನಾಸಿಕ್‌ನ ದಿಂಡೋರಿ ತಾಲ್ಲೂಕಿನ ಶಿಂಡ್ವಾಡ್ ಗ್ರಾಮದವರು ಅವರೇನೂ ಒಂದೇ ಹಳ್ಳಿಯಲ್ಲಿ ದಶಕಗಳನ್ನು ಕಳೆದಿದ್ದರಿಂದಲ್ಲ ಆದರೆ ಕಳೆದ ಕೆಲವು ವರ್ಷಗಳು ಅವರ ನಡುವಿನ ಅನ್ಯೋನ್ಯತೆಯನ್ನು ಗಟ್ಟಿಗೊಳಿಸಿದೆ. "ನಾವು ಹಳ್ಳಿಯಲ್ಲಿ ಕೆಲಸ ಮತ್ತು ಮನೆಯ ಜವಾಬ್ದಾರಿ ನಿಭಾಯಿಸುವುದರಲ್ಲಿ ಮುಳುಗಿ ಹೋಗಿರುತ್ತೇವೆ" ಎಂದು ಮಂಗಲ್ ಹೇಳುತ್ತಾರೆ. "ಪ್ರತಿಭಟನೆಯಲ್ಲಿ, ನಮಗೆ ಮಾತನಾಡಲು ಹೆಚ್ಚು ಸಮಯ ಸಿಗುತ್ತದೆ.”

ಮಾರ್ಚ್ 2018ರಲ್ಲಿ ನಾಸಿಕ್‌ನಿಂದ ಮುಂಬೈಗೆ ಕಿಸಾನ್ ಲಾಂಗ್ ಮಾರ್ಚ್‌ನಲ್ಲಿ ಇಬ್ಬರೂ ಒಟ್ಟಿಗೆ ಇದ್ದರು. ಕಿಸಾನ್ ಮುಕ್ತಿ ಮೋರ್ಚಾಕ್ಕಾಗಿ ಅವರು 2018ರ ನವೆಂಬರ್‌ನಲ್ಲಿ ದೆಹಲಿಗೆ ಒಟ್ಟಿಗೆ ಪ್ರಯಾಣಿಸಿದ್ದರು ಮತ್ತು ಈಗ, ಅವರು ನಾಸಿಕ್‌ನಿಂದ ದೆಹಲಿಗೆ ವಾಹನ ಮೆರವಣಿಗೆಯ ಜಾಥಾದಲ್ಲಿ ಜೊತೆಯಾಗಿದ್ದಾರೆ. "ಪೊಟಾಸತಿ [ನಮ್ಮ ಹೊಟ್ಟೆಪಾಡಿಗೆ]," ಮಂಗಲ್ ಅವರು ಈ ಪ್ರತಿಭಟನೆಯಲ್ಲಿ ಏಕೆ ಭಾಗವಹಿಸುತ್ತಿದ್ದಾರೆ ಎಂದು ನಾನು ಅವರನ್ನು ಕೇಳಿದಾಗ ಹೀಗೆ ಹೇಳಿದರು.

ಈ ವರ್ಷದ ಸೆಪ್ಟೆಂಬರ್‌ನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ಮೂರು ಕೃಷಿ ಕಾನೂನುಗಳ ವಿರುದ್ಧ ರಾಷ್ಟ್ರ ರಾಜಧಾನಿಯ ಗಡಿಯುದ್ದಕ್ಕೂ ಮೂರು ವಿಭಿನ್ನ ತಾಣಗಳಲ್ಲಿ ಹತ್ತಾರು ಸಾವಿರ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ತಮ್ಮ ಬೆಂಬಲ ಮತ್ತು ಒಗ್ಗಟ್ಟನ್ನು ವ್ಯಕ್ತಪಡಿಸಲು ಡಿಸೆಂಬರ್ 21ರಂದು ಮಹಾರಾಷ್ಟ್ರದ ಸುಮಾರು 2,000 ರೈತರು ಸುಮಾರು 1,400 ಕಿಲೋಮೀಟರ್ ದೂರದಲ್ಲಿರುವ ದೆಹಲಿಗೆ ಹೋಗುವ ಜಾಥಾದಲ್ಲಿ ಭಾಗವಹಿಸಲು ನಾಸಿಕ್‌ನಲ್ಲಿ ಒಟ್ಟುಗೂಡಿದರು. ಇವರನ್ನು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ ವಾದಿ) ಜೊತೆಗೆ ಸಂಯೋಜಿತವಾಗಿರುವ ಅಖಿಲ ಭಾರತ ಕಿಸಾನ್ ಸಭೆಯಡಿ ಸಂಘಟಿಸಲಾಗಿದೆ.

ಉತ್ಸಾಹಭರಿತ ಪ್ರತಿಭಟನಾಕಾರರ ಈ ತಂಡದಲ್ಲಿ ಮಂಗಲ್ ಮತ್ತು ಮೀರಾಬಾಯಿ ಕೂಡ ಸೇರಿದ್ದಾರೆ.
Mangal in front, Mirabai behind: the last few years of participating together in protests have cemented their bond
PHOTO • Parth M.N.

ಮುಂದೆ ಮಂಗಲ್, ಮೀರಾ ಬಾಯಿ ಹಿಂದೆ: ಪ್ರತಿಭಟಗಳಲ್ಲಿ ಒಟ್ಟಾಗಿ ಭಾಗವಹಿಸಿದ ಕಳೆದ ಕೆಲವು ವರ್ಷಗಳು ಅವರ ಬಾಂಧವ್ಯವನ್ನು ಗಟ್ಟಿಗೊಳಿಸಿವೆ

ಮಂಗಲ್ ಅರೆ-ಬಿಳಿ ಸೀರೆಯನ್ನು ಉಟ್ಟು ಯಾವಾಗಲೂ ಸೆರಗನ್ನು ತನ್ನ ತಲೆಯ ಮೇಲೆ ಹೊದ್ದುಕೊಂಡಿರುತ್ತಾರೆ. ಡಿಸೆಂಬರ್ 21ರಂದು ಜಾಥಾ ಪ್ರಾರಂಭವಾಗಲಿರುವ ನಾಸಿಕ್‌ನ ಮೈದಾನಕ್ಕೆ ಇಬ್ಬರೂ ಪ್ರವೇಶಿಸಿದ ನಂತರ  ತಾವು ಕೆಲವು ದಿನ ಇಲ್ಲಿ ಉಳಿಯಲು ಬೇಕಾಗುವ ತಾತ್ಕಾಲಿಕ ಕ್ಯಾಂಪ್‌ನ ಟೆಂಪೊಗಾಗಿ ಹುಡುಕಲು ಪ್ರಾರಂಭಿಸುತ್ತಾರೆ. ಮೀರಾಬಾಯಿ ಮಂಗಲ್ ಪಾಲಿಗೆ ಈ ಎಲ್ಲಾ ವಿಚಾರಣೆಯನ್ನು ಬಿಟ್ಟುಬಿಡುತ್ತಾರೆ. "ನಾನು ನೋಡಿಕೊಳ್ಳುತ್ತೇನೆ" ಎಂದು ಮಂಗಲ್ ಹೇಳುತ್ತಾರೆ. “ಇದು ಸ್ಪಷ್ಟವಾಗಿ ರೈತ ವಿರೋಧಿ ಸರ್ಕಾರ. [ದೆಹಲಿಯ ಗಡಿಯಲ್ಲಿ] ಧರಣಿ ನಡೆಸಿದ್ದಕ್ಕಾಗಿ ನಾವು ರೈತರನ್ನು ಮೆಚ್ಚುತ್ತೇವೆ ಮತ್ತು ನಮ್ಮ ಬೆಂಬಲವನ್ನು ನೀಡಲು ನಾವು ಬಯಸುತ್ತೇವೆ” ಎನ್ನುತ್ತಾರೆ.

ಮಂಗಲ್ ಕುಟುಂಬವು 2 ಎಕರೆ ಕೃಷಿ ಭೂಮಿಯನ್ನು ಹೊಂದಿದ್ದು, ಅದರಲ್ಲಿ ಅವರು ಅಕ್ಕಿ, ಗೋಧಿ ಮತ್ತು ಈರುಳ್ಳಿ ಬೆಳೆಯುತ್ತಾರೆ. ಆದರೆ ಅವರ ಮುಖ್ಯ ಆದಾಯದ ಮೂಲ ಕೃಷಿ ಕೆಲಸದಿಂದ ಸಿಗುವ ದಿನಗೂಲಿ 250 ರೂ. ಅವರು ಒಂದು ವಾರದ ಕಾಲ ಆಂದೋಲನದಲ್ಲಿ ಭಾಗವಹಿಸಿದರೆ, ಅವರು ತಮ್ಮ ಮಾಸಿಕ ಆದಾಯದ ಕಾಲು ಭಾಗವನ್ನು ಬಿಟ್ಟುಕೊಡಬೇಕಾಗುತ್ತದೆ. "ಹೊರಗೆ ಏನು ನಡೆಯುತ್ತಿದೆ ಎನ್ನುವುದನ್ನು ಸಹ ನಾವು ನೋಡಬೇಕಾಗಿದೆ" ಎಂದು ಅವರು ಹೇಳುತ್ತಾರೆ. "ಈ ಪ್ರತಿಭಟನೆಗಳು ಇಡೀ ಕೃಷಿಕ ಸಮುದಾಯಕ್ಕಾಗಿ ನಡೆಯುತ್ತಿದೆ."

ಮೈದಾನದಲ್ಲಿ ನಾವು ಭೇಟಿಯಾಗಿ 10 ನಿಮಿಷಗಳಾಗಿದ್ದವು. ಒಂದರ ಹಿಂದೆ ಒಂದು ವಾಹನಗಳು ಸಾಲಾಗಿ ನಿಲ್ಲತೊಡಗಿದವು. ಮೀರಾಬಾಯಿ ಮಂಗಲ್ ಅವರನ್ನು ಹುಡುಕುತ್ತಾ ಬಂದರು. ನಾವು ನಮ್ಮ ಮಾತುಕತೆ ಮುಗಿಸುವಂತೆ ಅವರು ಕೈಬೀಸಿ ಸನ್ನೆ ಮಾಡಿ ತಿಳಿಸಿದರು. ಅವರು ಕಿಸಾನ್ ಸಭಾ ನಾಯಕರು ಭಾಷಣ ಮಾಡುತ್ತಿರುವ ವೇದಿಕೆಯ ಕಡೆಗೆ ಮಂಗಲ್ ತನ್ನೊಂದಿಗೆ ಬರಬೇಕೆನ್ನುವುದು ಅವರ ಬಯಕೆಯಾಗಿತ್ತು. ಆದರೆ ಮಂಗಲ್‌ ತಮ್ಮ ನಮ್ಮ ಮಾತುಕತೆಯಲ್ಲಿ ಸೇರಿಕೊಳ್ಳಲು ಮೀರಾಬಾಯಿಯನ್ನು ಕರೆದರು. ಮೀರಾಬಾಯಿ ಮೊದಲಿಗೆ ನಾಚಿಕೊಂಡರು. ಆದರೆ ಈ ಮಹಿಳಾ ರೈತರಿಬ್ಬರೂ ತಾವು ಮತ್ತು ಇತರ ರೈತರು ಏಕೆ ಪ್ರತಿಭಟಿಸುತ್ತಿದ್ದಾರೆನ್ನುವುದನ್ನು ನಿಖರವಾಗಿ ತಿಳಿದಿದ್ದಾರೆ ಮತ್ತು ಕೃಷಿ ಕಾನೂನುಗಳ ಪರಿಣಾಮಗಳು ಏನೆಂದು ತಿಳಿದಿದೆ.

"ನಾವು ಬೆಳೆಯುವ ಬೆಳೆ ನಮ್ಮ ಕುಟುಂಬದ ಬಳಕೆಗೆ ಸಾಕಾಗುತ್ತದೆ" ಎಂದು ಮಂಗಲ್ ಹೇಳುತ್ತಾರೆ. "ನಾವು ಈರುಳ್ಳಿ ಮತ್ತು ಅಕ್ಕಿಯನ್ನು ಮಾರಾಟ ಮಾಡುವುದಿದ್ದರೆ, ನಾವು ಅದನ್ನು ವಾನಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತೇವೆ." ತಮ್ಮ ಗ್ರಾಮದಿಂದ 15 ಕಿಲೋಮೀಟರ್ ದೂರದಲ್ಲಿರುವ ನಾಸಿಕ್ ಜಿಲ್ಲೆಯ ವಾನಿ ಪಟ್ಟಣವು ಮಾರುಕಟ್ಟೆ ಅಂಗಳವನ್ನು ಹೊಂದಿದ್ದು, ಅಲ್ಲಿ ಕೃಷಿ ಉತ್ಪನ್ನಗಳನ್ನು ಖಾಸಗಿ ವ್ಯಾಪಾರಿಗಳು ಹರಾಜಿನ ಮೂಲಕ ಕೊಳ್ಳುತ್ತಾರೆ. ರೈತರಿಗೆ ಕೆಲವೊಮ್ಮೆ ಎಂಎಸ್‌ಪಿ (ಕನಿಷ್ಠ ಬೆಂಬಲ ಬೆಲೆ) ಸಿಗುತ್ತದೆ, ಕೆಲವೊಮ್ಮೆ ಸಿಗುವುದಿಲ್ಲ. "ಎಂಎಸ್ಪಿ ಮತ್ತು ಸುರಕ್ಷಿತ ಮಾರುಕಟ್ಟೆಯ ಪ್ರಾಮುಖ್ಯತೆ ನಮಗೆ ತಿಳಿದಿದೆ" ಎಂದು ಮಂಗಲ್ ಹೇಳುತ್ತಾರೆ. "ಹೊಸ ಕೃಷಿ ಕಾನೂನುಗಳು ಎಂಎಸ್‌ಪಿ ಸೌಲಭ್ಯ ಹೊಂದಿರುವವರು ಅದನ್ನು ಕಳೆದುಕೊಳ್ಳುವುದನ್ನು ಖಚಿತಪಡಿಸುತ್ತದೆ. ನಮ್ಮ ಮೂಲಭೂತ ಹಕ್ಕುಗಳಿಗಾಗಿ ನಾವು ಸದಾ ಕಾಲ ಹೋರಾಡಬೇಕಾಗಿ ಬಂದಿರುವುದು ವಿಷಾದಕರ."
Mangal (right) is more outspoken, Mirabai (middle) is relatively shy, but both women farmers know exactly why they and the other farmers are protesting, and what the fallouts of the farm laws could be
PHOTO • Parth M.N.

ಮಂಗಲ್ (ಬಲ) ಹೆಚ್ಚು ಮಾತನಾಡುತ್ತಾರೆ, ಮೀರಾಬಾಯಿ (ಮಧ್ಯ) ಹೆಚ್ಚು ಸಂಕೋಚ ಪಟ್ಟುಕೊಳ್ಳುತ್ತಾರೆ. ಆದರೆ ಮಹಿಳಾ ರೈತರಿಬ್ಬರೂ ತಾವು ಮತ್ತು ಇತರ ರೈತರು ಏಕೆ ಪ್ರತಿಭಟಿಸುತ್ತಿದ್ದಾರೆ ಮತ್ತು ನಿಖರವಾಗಿ ಕೃಷಿ ಕಾನೂನುಗಳ ಪರಿಣಾಮಗಳು ಏನಿರಬಹುದು ಎನ್ನುವುದನ್ನು ತಿಳಿದಿದ್ದಾರೆ

ಮಾರ್ಚ್ 2018ರ, ಕಿಸಾನ್ ಲಾಂಗ್ ಮಾರ್ಚ್ ಸಮಯದಲ್ಲಿ, ರೈತರು - ಅವರಲ್ಲಿ ಅನೇಕರು ಆದಿವಾಸಿ ಸಮುದಾಯಗಳಿಂದ ಬಂದವರು- ಏಳು ದಿನಗಳ ಅವಧಿಯಲ್ಲಿ ನಾಸಿಕ್ ನಿಂದ ಮುಂಬೈಗೆ 180 ಕಿಲೋಮೀಟರ್ ನಡೆದು ಹೋದಾಗ, ಅವರ ಮುಖ್ಯ ಬೇಡಿಕೆಯು ಅವರ ಹೆಸರಿನಲ್ಲಿ ಭೂಮಿಯು ನೋಂದಣಿಯಾಗಬೇಕು ಎನ್ನುವುದಾಗಿತ್ತು. "ನಾಸಿಕ್-ಮುಂಬೈ ಮೋರ್ಚಾದ ನಂತರ ಈ ಪ್ರಕ್ರಿಯೆಯು ಸ್ವಲ್ಪ ವೇಗವನ್ನು ಪಡೆದಿದೆ ಎಂದು 1.5 ಎಕರೆ ಪ್ರದೇಶದಲ್ಲಿ ಮುಖ್ಯವಾಗಿ ಭತ್ತದ ಬೇಸಾಯ ನಡೆಸುವ ಮೀರಾಬಾಯಿ ಹೇಳುತ್ತಾರೆ.

“ಆದರೆ ಆ ಪ್ರಯಾಣವು ಸಾಕಷ್ಟು ಶ್ರಮದಾಯಕವಾಗಿತ್ತು. ವಾರದ ಕೊನೆಯಲ್ಲಿ ನಾನು ಬೆನ್ನು ನೋವಿನಿಂದ ಬಳಲಿದ್ದು ನನಗೆ ನೆನಪಿದೆ. ನಾನು ಮಂಗಳಳಿಗಿಂತ ದೊಡ್ಡವಳು! ಹಾಗಾಗಿ ನನಗೆ ಹೆಚ್ಚು ತೊಂದರೆಯಾಯಿತು. ಆದರೆ ಸ್ವಲ್ಪ ಕಷ್ಟವಾದರೂ, ಪ್ರಯಾಣದ ಕೊನೆಯವರೆಗೂ ನಾನು ಅಲ್ಲಿದ್ದೆ” ಎಂದು ಮೀರಾಬಾಯಿ ಹೇಳಿದರು.

2018ರಲ್ಲಿ ಆ ವಾರ ಪೂರ್ತಿ ಮೆರವಣಿಗೆಯಲ್ಲಿ ಮಂಗಲ್ ಮತ್ತು ಮೀರಾಬಾಯಿ ಒಬ್ಬರನ್ನೊಬ್ಬರು ಕಾಳಜಿ ಮಾಡುತ್ತಿದ್ದರು. ಅವಳು ದಣಿದಿದ್ದರೆ ನಾನು ಅವಳಿಗಾಗಿ ಕಾಯುತ್ತಿದ್ದೆ ಮತ್ತು ನಾನು ನಡೆಯಲು ಸಾಧ್ಯವಿಲ್ಲವೆಂದು ನಿಂತರೆ ಅವಳು ನನಗಾಗಿ ಕಾಯುತ್ತಿದ್ದಳು" ಎಂದು ಮಂಗಲ್ ಹೇಳುತ್ತಾರೆ. ನಮ್ಮಂತಹ ಜನರು ಒಂದು ವಾರ ಬರಿಗಾಲಿನಲ್ಲಿ ನಡೆದಿದ್ದು ಕೊನೆಯಲ್ಲಿ  ಸರ್ಕಾರವನ್ನು ಎಚ್ಚರಗೊಳಿಸುವುದರಲ್ಲಿ ಸಫಲವಾಯಿತು.

“ಮತ್ತು ಈಗ ಮತ್ತೊಮ್ಮೆ ಅವರು ಮೋದಿ ಸರ್ಕಾರವನ್ನು ‘ಎಚ್ಚರಗೊಳಿಸಲು’ ದೆಹಲಿಗೆ ತೆರಳುತ್ತಿದ್ದಾರೆ. "ಸರ್ಕಾರವು ಮಸೂದೆಗಳನ್ನು ಹಿಂತೆಗೆದುಕೊಳ್ಳುವವರೆಗೂ ನಾವು ದೆಹಲಿಯಲ್ಲಿ ಉಳಿಯಲು ಸಿದ್ಧರಿದ್ದೇವೆ" ಎಂದು ಮಂಗಲ್ ಹೇಳುತ್ತಾರೆ.  "ನಾವು ಸಾಕಷ್ಟು ಬೆಚ್ಚಗಿನ ಬಟ್ಟೆಗಳನ್ನು  ಜೊತೆಗೆ ತಂದಿದ್ದೇವೆ, ದೆಹಲಿಯ ಪ್ರಯಾಣ ಇದೇನೂ ಮೊದಲ ಬಾರಿಯಲ್ಲ” ಎನ್ನುತ್ತಾರೆ.

1990ರ ದಶಕದ ಆರಂಭದಲ್ಲಿ ಮಂಗಲ್ ಮೊದಲ ಬಾರಿಗೆ ರಾಜಧಾನಿಗೆ ಹೋಗಿದ್ದರು.  "ಅದು ನಾನಾಸಾಹೇಬ್ ಮಾಲುಸಾರೆ ಅವರನ್ನು ಭೇಟಿ ಮಾಡುವ ಸಲುವಾಗಿ ಆಗಿತ್ತು” ಎಂದು ಅವರು ಹೇಳುತ್ತಾರೆ. ಮಾಲುಸಾರೆ ನಾಸಿಕ್ ಮಹಾರಾಷ್ಟ್ರದ ಕಿಸಾನ್ ಸಭೆಯ ಉನ್ನತ ನಾಯಕರಾಗಿದ್ದರು. ಸುಮಾರು 30 ವರ್ಷಗಳ ನಂತರವೂ ರೈತರ ಬೇಡಿಕೆಗಳು ಹಾಗೇ ಉಳಿದಿವೆ, ಮಂಗಲ್ ಮತ್ತು ಮೀರಾಬಾಯಿ ಇಬ್ಬರೂ ಕೋಲಿ ಮಹಾದೇವ್ ಸಮುದಾಯಕ್ಕೆ ಸೇರಿದವರಾಗಿದ್ದು ಬುಡಕಟ್ಟು ಜನಾಂಗದವರು ಮತ್ತು ತಾಂತ್ರಿಕವಾಗಿ ಅರಣ್ಯ ಇಲಾಖೆಗೆ ಸೇರಿದ ಭೂಮಿಯನ್ನು ಕೃಷಿ ಮಾಡುತ್ತಿದ್ದಾರೆ. "ಕಾನೂನು ಇದ್ದರೂ ನಮಗೆ ಭೂಮಿಯನ್ನು ಹೊಂದಲು ಸಾಧ್ಯವಾಗಿಲ್ಲ" ಎಂದು ಅವರು ಹೇಳುತ್ತಾರೆ, 2006ರ ಅರಣ್ಯ ಹಕ್ಕುಗಳ ಕಾಯ್ದೆಯ ಪ್ರಕಾರ ಅವರು ಭೂಮಿಯ ಮಾಲೀಕತ್ವಕ್ಕೆ ಅರ್ಹತೆಯುಳ್ಳವರಾಗಿರುತ್ತಾರೆ.

Since Mirabai is older, Mangal seems to be more protective of her. From holding a seat for her, to going to the washroom with her, they are inseparable
PHOTO • Parth M.N.

ಮೀರಾಬಾಯಿಗೆ ವಯಸ್ಸಾದ ಕಾರಣ, ಮಂಗಲ್ ಅವರಿಗಾಗಿ ಆಸನವನ್ನು ಹಿಡಿದಿಟ್ಟುಕೊಳ್ಳುವುದರಿಂದ ಹಿಡಿದು ಅವರೊಂದಿಗೆ ಶೌಚಾಲಯಕ್ಕೆ ಹೋಗುವವರೆಗೆ ಅವರ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ., ಇವರದು ಬೇರ್ಪಡಿಸಲಾಗದ ಸ್ನೇಹ

ಇತರ ಪ್ರತಿಭಟನಾಕಾರರಂತೆ, ಅವರೂ ಗುತ್ತಿಗೆ ಕೃಷಿಯ ಕಾನೂನಿನ ಕುರಿತು ಕಳವಳ ಹೊಂದಿದ್ದಾರೆ. ಈಗಾಗಲೇ ಅನೇಕರು ಈ ಕಾನೂನನ್ನು ಟೀಕಿಸಿದ್ದಾರೆ, ರೈತರು ತಮ್ಮ ಸ್ವಂತ ಹೊಲಗಳಲ್ಲಿ ಕೆಲಸ ಮಾಡಲು ದೊಡ್ಡ ಕಾರ್ಪೊರೇಟ್ ಕಂಪನಿಗಳೊಂದಿಗೆ ಒಪ್ಪಂದಕ್ಕೆ ಸಹಿ ಹಾಕುವ ಸಮಯ ಇದಾಗಿದೆ ಎಂದು ಹೇಳಿದ್ದಾರೆ. "ನಾವು ಅನೇಕ ವರ್ಷಗಳಿಂದ ನಮ್ಮ ಜಮೀನುಗಳಿಗಾಗಿ ಹೋರಾಡುತ್ತಿದ್ದೇವೆ" ಎಂದು ಮಂಗಳ ಹೇಳುತ್ತಾರೆ. "ಸ್ವಂತ ಭೂಮಿಯ ಮೇಲೆ ನಿಯಂತ್ರಣ ಹೊಂದುವುದರ ಪ್ರಾಮುಖ್ಯತೆಯನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ನಾವು ನಮ್ಮ ಇಡೀ ಜೀವನವನ್ನು ಇದಕ್ಕಾಗಿ ಹೋರಾಡುತ್ತ ಕಳೆದಿದ್ದೇವೆ. ಇದರಿಂದ ನಾವು ಒಂದಿಷ್ಟು ಲಾಭ ಗಳಿಸಿದ್ದೇವೆ. ಅದೆಂದರೆ ಈ ಪ್ರಕ್ರಿಯೆಯಲ್ಲಿ ನಾವು ನಮ್ಮಂತೆಯೇ ಸಮಾನ ನೋವು ಹೊಂದಿರುವ ಸ್ನೇಹಿತರನ್ನು ಸಂಪಾದಿಸಿರುವುದು."

"ಮತ್ತು ಅವರ ಸ್ನೇಹವು ಆಳವಾದ ಬಾಂಧವ್ಯವನ್ನು ಸೃಷ್ಟಿ ಮಾಡಿದೆ. ಮೀರಾಬಾಯಿ ಮತ್ತು ಮಂಗಲ್ ಈಗ ಪರಸ್ಪರರ ಅಭ್ಯಾಸಗಳನ್ನು ತಿಳಿದುಕೊಂಡಿದ್ದಾರೆ. ಮೀರಾಬಾಯಿಗೆ ವಯಸ್ಸಾಗಿರುವ ಕಾರಣ, ಮಂಗಲ್ ಅವರ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಅವರಿಗಾಗಿ ಆಸನವನ್ನು ಹಿಡಿದಿಟ್ಟುಕೊಳ್ಳುವುದರಿಂದ, ಅವರೊಂದಿಗೆ ಶೌಚಾಲಯಕ್ಕೆ ಹೋಗುವವರೆಗೆ, ಇವರ ಸ್ನೇಹ ಬೇರ್ಪಡಿಸಲಾಗದ್ದು. ಜಾಥಾ ಸಂಘಟಕರು ಪ್ರತಿಭಟನಾಕಾರರಿಗೆ ಬಾಳೆಹಣ್ಣುಗಳನ್ನು ವಿತರಿಸಿದಾಗ, ಮಂಗಲ್ ಮೀರಾಬಾಯಿಗೆಂದು ಹೆಚ್ಚುವರಿಯಾಗಿ ಇನ್ನೊಂದನ್ನು ತೆಗೆದಿಟ್ಟುಕೊಳ್ಳುತ್ತಾರೆ.

ಸಂದರ್ಶನದ ಕೊನೆಯಲ್ಲಿ, ನಾನು ಮಂಗಲ್ ಅವರ ಫೋನ್ ಸಂಖ್ಯೆಯನ್ನು ಕೇಳಿದ ನಂತರ ನಾನು ಮೀರಾಬಾಯಿಯ ನಂಬರನ್ನೂ ಕೇಳಿದೆ. "ನಿಮಗೆ ಮೀರಾಬಾಯಿಯ ನಂಬರ್ ಅಗತ್ಯವಿಲ್ಲ" ಎಂದು ಮಂಗಲ್  ಹೇಳುತ್ತಾರೆ.  "ನೀವು ಅವರನ್ನು ನನ್ನ ಸಂಖ್ಯೆಯಲ್ಲೂ ಸಂಪರ್ಕಿಸಬಹುದು” ಎಂದು ಹೇಳುತ್ತಾರೆ.

ವಿ.ಸೂ: ಈ ವರದಿಗಾರ ಡಿಸೆಂಬರ್ 21 ಮತ್ತು 22ರಂದು ಮಂಗಲ್ ಮತ್ತು ಮೀರಾಬಾಯಿಯನ್ನು ಭೇಟಿಯಾದರು. ಡಿಸೆಂಬರ್ 23ರ ಬೆಳಿಗ್ಗೆ ಇಬ್ಬರೂ ಜಾಥಾದಿಂದ ಹೊರಬರಲು ನಿರ್ಧರಿಸಿದರು.  ಡಿಸೆಂಬರ್ 24ರಂದು ನಾನು ಅವರೊಂದಿಗೆ ಫೋನ್‌ನಲ್ಲಿ ಮಾತನಾಡಿದಾಗ, ಮಂಗಲ್  “ನಾವು ಛಳಿಯನ್ನು ನಿಭಾಯಿಸಲು ಸಾಧ್ಯವಾಗದ ಕಾರಣ ಮಧ್ಯಪ್ರದೇಶದ ಗಡಿಯಿಂದ ಮನೆಗೆ ಹಿಂತಿರುಗಲು ನಿರ್ಧರಿಸಿದ್ದೇವೆ” ಎಂದು ಹೇಳಿದರು. ಹಿಂಭಾಗದಲ್ಲಿ ಸಂಪೂರ್ಣವಾಗಿ ತೆರೆದಿರುವ ಟೆಂಪೊದಲ್ಲಿ ಪ್ರಯಾಣಿಸುವಾಗ ಚಳಿಯ ಗಾಳಿ ಸಹಿಸಲಾರದು. ಚಳಿಗಾಲವು ಇನ್ನಷ್ಟು ತೀವೃವಾಗಲಿದೆ ಎನ್ನುವುದನ್ನು ಅರಿತುಕೊಂಡ ಅವರು ತಮ್ಮ ಗ್ರಾಮವಾದ ಶಿಂಧವಾಡ್‌ಗೆ ಹಿಂತಿರುಗಲು ನಿರ್ಧರಿಸಿದರು ಮತ್ತು ಅವರ ಆರೋಗ್ಯಕ್ಕೆ ಅಪಾಯವಿಲ್ಲ.  "ಮೀರಾಬಾಯಿ ವಿಶೇಷವಾಗಿ ಶೀತವನ್ನು ಅನುಭವಿಸಿದರು. ನಾನು ಕೂಡ ಅನುಭವಿಸಿದ್ದೇನೆ” ಎಂದು ಮಂಗಲ್ ಹೇಳಿದರು.  ನಾಸಿಕ್‌ನಲ್ಲಿ ನೆರೆದಿದ್ದ 2 ಸಾವಿರ ರೈತರಲ್ಲಿ ಸುಮಾರು 1,000 ಮಂದಿ ಮಧ್ಯಪ್ರದೇಶದ ಗಡಿಯನ್ನು ದಾಟಿ ದೇಶದ ರಾಜಧಾನಿ ಕಡೆಗೆ ಪ್ರಯಾಣ ಮುಂದುವರೆಸಿದ್ದಾರೆ.

ಅನುವಾದ: ಶಂಕರ ಎನ್. ಕೆಂಚನೂರು
Parth M.N.

Parth M.N. is a 2017 PARI Fellow and an independent journalist reporting for various news websites. He loves cricket and travelling.

Other stories by Parth M.N.
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru