"ಅಂತಿಮವಾಗಿ ಅವಳ ಸಾವಿಗೆ ಕಾರಣವೇನೆಂದು ನನಗೆ ತಿಳಿದಿಲ್ಲ ಆದರೆ ಅವಳಿಗೆ ಸಿಗಬೇಕಿದ್ದಷ್ಟು ಆರೈಕೆ ಸಿಕ್ಕಿಲ್ಲವೆನ್ನುವುದು ನನಗೆ ತಿಳಿದಿದೆ." ಸುಬಾಶ್ ಕಬಾಡೆ ತನ್ನ ಸಹೋದರಿಯ ಸಾವಿನ ಕುರಿತು ವಿವರಿಸುತ್ತಾ ಇದನ್ನು ಹೇಳುತ್ತಾರೆ.

ಮಹಾರಾಷ್ಟ್ರದ ಬೀಡ್ ನಗರದ ಸಿವಿಲ್ ಆಸ್ಪತ್ರೆಯಲ್ಲಿ ಅವರ ಸಹೋದರಿ ಲತಾ ಸುರ್ವಾಸೆ ಸಾವನ್ನಪ್ಪಿದ ಹಿಂದಿನ ರಾತ್ರಿ, ವೈದ್ಯರು ಎರಡು ಚುಚ್ಚುಮದ್ದನ್ನು ಅವರಿಗೆ ತುರ್ತಾಗಿ ನೀಡಬೇಕಾಗಿದೆಯೆಂದು ಸೂಚಿಸಿದ್ದರು. ಆ ಕೂಡಲೇ ಸುಭಾಷ್‌ ಅಲ್ಲೇ ಹೊರಗಿದ್ದ ಮೆಡಿಕಲ್‌ ಸ್ಟೋರಿನಿಂದ ಔಷಧಿ ಖರೀದಿಸಿ ಓಡಿಬಂದಿದ್ದರು. ಆದರೆ ಆ ಹೊತ್ತಿಗಾಗಲೇ ವೈದ್ಯರು ಅಲ್ಲಿಂದ ಹೊರಟು ಹೋಗಿದ್ದರು.

“ಅವರು ಒಂದೇ ಸಮಯದಲ್ಲಿ ಅನೇಕ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ನಾನು ಬರುವಷ್ಟರಲ್ಲಿ ಬೇರೆ ವಾರ್ಡ್‌ಗೆ ಹೋಗಿದ್ದರು” ಎಂದು 25 ವರ್ಷದ ಸುಭಾಷ್ ಹೇಳುತ್ತಾರೆ. “ನಾನು ಇಂಜೆಕ್ಷನ್ ಬಗ್ಗೆ ನರ್ಸ್‌ಗೆ ಹೇಳಿದಾಗ, ಅವರು ಲತಾಳ ಫೈಲ್ ಅನ್ನು ನೋಡಿದರು. ಅದರಲ್ಲಿ ಏನೂ ಬರೆದಿರಲಿಲ್ಲ. ಕೆಲವು ನಿಮಿಷಗಳ ಹಿಂದೆಯಷ್ಟೇ, ಅವರು ಇಂಜೆಕ್ಷನ್ ತರುವಂತೆ ಹೇಳಿದರು, ಹಾಗಾಗಿ ಅದು ಫೈಲ್‌ನಲ್ಲಿಲ್ಲ ಎಂದು ನಾನು ಅವರಿಗೆ ಹೇಳಿದೆ.”

ಆದರೆ ನರ್ಸ್‌ ಅವರ ಮಾತುಗಳನ್ನು ಕೇಳಲಿಲ್ಲ. ಅವರು ಭಾವಾವೇಶದಿಂದ ಇಂಜೆಕ್ಷನ್‌ ಕೊಡುವಂತೆ ಬೇಡಿಕೊಂಡಾಗ “ಅಲ್ಲಿದ್ದ ಉಸ್ತುವಾರಿ ವ್ಯಕ್ತಿ ಸೆಕ್ಯುರಿಟಿ ಕರೆಸುವುದಾಗಿ ಹೆದರಿಸಿದ,” ಎನ್ನುತ್ತಾರೆ ಸುಭಾಷ್.‌ ವಾಗ್ವಾದದಲ್ಲೇ ಒಂದು ಗಂಟೆ ಕಳೆದ ನಂತರ ರೋಗಿಗೆ ಇಂಜೆಕ್ಷನ್‌ ನೀಡಲಾಯಿತು.

ಲತಾ ಮರುದಿನ ಬೆಳಿಗ್ಗೆ, ಮೇ 14 ರಂದು ನಿಧನರಾದರು. ಅವರು ಕೋವಿಡ್‌ ಸೋಂಕು ತಗುಲಿದ್ದು ದೃಢಗೊಂಡ ದಿನವಾದ ಏಪ್ರಿಲ್ 23ರಿಂದ ಆಸ್ಪತ್ರೆಯಲ್ಲಿದ್ದರು, ಬೀಡ್ ನಗರದ ವಕೀಲ ಸುಬಾಷ್ ಹೇಳುತ್ತಾರೆ, “ಅವಳು ಆಗೊಮ್ಮೆ ಈಗೊಮ್ಮೆ ಚೇತರಿಕೆಯ ಲಕ್ಷಣಗಳನ್ನು ತೋರಿಸಿದ್ದಳು." ಚುಚ್ಚುಮದ್ದನ್ನು ಸಮಯಕ್ಕೆ ನೀಡಿದ್ದರೆ, ಅವಳ ಜೀವವನ್ನು ಉಳಿಸಬಹುದಿತ್ತೆನ್ನುವುದರ ಕುರಿತು ಅವರಿಗೆ ಖಚಿತವಿಲ್ಲ. ಆದರೆ ಆಸ್ಪತ್ರೆಯಲ್ಲಿ ಹೆಚ್ಚಿನ ಸಿಬ್ಬಂದಿ ಇಲ್ಲದಿರುವುದು ಅವರಿಗೆ ಖಚಿತವಾಗಿ ತಿಳಿದಿದೆ. "ಇದು ರೋಗಿಗಳ ಮೇಲೆ ಪರಿಣಾಮ ಬೀರುತ್ತಿದೆ" ಎಂದು ಅವರು ಹೇಳುತ್ತಾರೆ.

ಈ ವರ್ಷದ ಮಾರ್ಚ್‌ನಿಂದ, ಕೋವಿಡ್ -19ರ ಎರಡನೇ ಅಲೆಯು ವೇಗವಾಗಿ ಹರಡತೊಡಗಿದ ನಂತರ ಅದು ಗ್ರಾಮೀಣ ಭಾರತದಲ್ಲಿನ ಈಗಾಗಲೇ ತಾಳಲಾರದ ಹೊರೆ ಹೊತ್ತಿದ್ದ ಸಾರ್ವಜನಿಕ ಆರೋಗ್ಯ ಸೇವೆಯಲ್ಲಿನ ಕುಂದು ಕೊರತೆಗಳನ್ನು ಎತ್ತಿ ತೋರಿಸಿದೆ. ಸಿಬ್ಬಂದಿ ಕೊರತೆಯಿರುವ ಆಸ್ಪತ್ರೆಗಳು, ಬಳಲಿ ಹೋಗಿರುವ ಆರೋಗ್ಯ ಕಾರ್ಯಕರ್ತರು ಮತ್ತು ಉತ್ತಮ ಚಿಕಿತ್ಸೆಯಿಂದ ವಂಚಿತರಾದ ರೋಗಿಗಳು ಗ್ರಾಮಾಂತರ ಪ್ರದೇಶದ ಹಲವಾರು ಲಕ್ಷ ಜನರಿಗೆ ಲಭ್ಯವಿರುವ ವೈದ್ಯಕೀಯ ಆರೈಕೆಯ ಸ್ಥಿತಿಯನ್ನು ಪ್ರತಿಫಲಿಸುತ್ತದೆ.

Subash Kabade, whose sister died in the Beed Civil Hospital, says that the shortage of staff has affected the patients there
PHOTO • Parth M.N.

ಸುಬಾಷ್ ಕಬಾಡೆ, ಬೀಡ್ ಸಿವಿಲ್ ಆಸ್ಪತ್ರೆಯಲ್ಲಿ ಅವರ ಸಹೋದರಿ ನಿಧನರಾದರು. ಸಿಬ್ಬಂದಿ ಕೊರತೆಯು ಅಲ್ಲಿನ ರೋಗಿಗಳ ಮೇಲೆ ಪರಿಣಾಮ ಬೀರಿದೆ ಎಂದು ಅವರು ಹೇಳುತ್ತಾರೆ

ಬೀಡ್‌ನಲ್ಲಿ ಎರಡನೇ ಅಲೆಯ ಪ್ರಭಾವ ತೀವ್ರವಾಗಿತ್ತು, ಇದು ಮರಾಠವಾಡ ವಲಯದಲ್ಲಿದೆ, ಈ ಪ್ರದೇಶವು ಹವಾಮಾನ ಬದಲಾವಣೆ, ನೀರಿನ ಕೊರತೆ ಮತ್ತು ಕೃಷಿ ಬಿಕ್ಕಟ್ಟಿನಿಂದ ಬಳಲುತ್ತಿದೆ. ಜೂನ್ 25ರ ವೇಳೆಗೆ, ಜಿಲ್ಲೆಯಲ್ಲಿ 92,400 ಪಾಸಿಟಿವ್ ಪ್ರಕರಣಗಳು ಮತ್ತು ಸುಮಾರು 2,500 ಸಾವುಗಳು ದಾಖಲಾಗಿವೆ. ಆದರೆ ಎರಡನೇ ಅಲೆ ಉತ್ತುಂಗಕ್ಕೇರಿದಾಗ ಪ್ರಕರಣಗಳ ಸಂಖ್ಯೆ ವೇಗವಾಗಿ ಏರಿತು - ಏಪ್ರಿಲ್ 1ರಂದು ದಾಖಲಾದ ಸುಮಾರು 26,400 ಪ್ರಕರಣಗಳಿಂದ ಮೇ 31ರಂದು 87,400ಕ್ಕೆ ಏರಿತು. ಬೀಡ್‌ನ ಆರೋಗ್ಯ ವ್ಯವಸ್ಥೆಯು ಅತಿಯಾದ ಪ್ರಕರಣಗಳ ಭಾರದಿಂದ ಕುಸಿಯಿತು.

ಸಾರ್ವಜನಿಕ ಆಸ್ಪತ್ರೆಗಳಲ್ಲಿ ಆರೋಗ್ಯ ಸೇವೆ ಉಚಿತವಾದ್ದರಿಂದ, ಅಲ್ಲಿನ ಬಹುತೇಕ ಜನರು ಇದನ್ನೇ ಆರಿಸಿಕೊಳ್ಳುತ್ತಾರೆ. ಇದಕ್ಕೆ ಮುಖ್ಯ ಕಾರಣ ಹಲವಾರು ವರ್ಷಗಳ ಕೃಷಿ ಬಿಕ್ಕಟ್ಟು, ಬಡತನ ಮತ್ತು ಸಾಲ ಹೆಚ್ಚುವ ಆತಂಕ. ಈ ಜಿಲ್ಲೆಯ ಒಟ್ಟು ಜನಸಂಖ್ಯೆ 26 ಲಕ್ಷಕ್ಕೂ ಹೆಚ್ಚು. ಇಲ್ಲಿ ಬಡತನ ಮತ್ತು ಸಂಕಷ್ಟಗಳು ತಾಂಡವವಾಡುತ್ತಿದೆ.

ಸರಳ ರೋಗಲಕ್ಷಣಗಳನ್ನು ಹೊಂದಿರುವ ರೋಗಿಗಳಿಗಾಗಿ ಜಿಲ್ಲೆಯಲ್ಲಿ ಒಟ್ಟು 81 ಕೋವಿಡ್ ಕೇರ್ ಕೇಂದ್ರಗಳಿವೆ ಮತ್ತು ಅವುಗಳಲ್ಲಿ ಮೂರನ್ನು ಹೊರತುಪಡಿಸಿ ಉಳಿದವುಗಳನ್ನು ಸರ್ಕಾರ ನಡೆಸುತ್ತಿದೆ. ಅಲ್ಲಿ ಸೋಂಕು ಗುಣವಾಗದಿದ್ದರೆ, ಅಂತಹ ರೋಗಿಗಳನ್ನು ಡೆಡಿಕೇಟೆಡ್ ಕೋವಿಡ್ ಹೆಲ್ತ್ ಸೆಂಟರ್ - ಡಿಸಿಎಚ್‌ಸಿಗೆ  ಶಿಫಾರಸು ಮಾಡಲಾಗುತ್ತದೆ. ಬೀಡ್‌ನಲ್ಲಿ ಅಂತಹ 48 ಡಿಸಿಎಚ್‌ಸಿಗಳಿವೆ ಆದರೆ ಅವುಗಳಲ್ಲಿ 10 ಮಾತ್ರ ಸರ್ಕಾರದಿಂದ ನಡೆಸಲ್ಪಡುತ್ತವೆ. ಡೆಡಿಕೇಟೆಡ್ ಕೋವಿಡ್ ಆಸ್ಪತ್ರೆಗಳಲ್ಲಿ ಅಂದರೆ ಡಿಸಿಎಚ್‌ಸಿಗಳಲ್ಲಿ, ಕೇವಲ 10 ಮಾತ್ರ ಜಿಲ್ಲಾಡಳಿತದ ವ್ಯಾಪ್ತಿಗೆ ಬರುತ್ತವೆ.

ಆದರೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಸಾಕಷ್ಟು ಸಿಬ್ಬಂದಿ ಇಲ್ಲ.

ಕೋವಿಡ್ ಎರಡನೇ ಅಲೆ ಉತ್ತುಂಗದಲ್ಲಿದ್ದರೂ, ಬೀಡ್‌ನಲ್ಲಿನ ಸರ್ಕಾರಿ-ಚಾಲಿತ ಕೋವಿಡ್ ಕೇಂದ್ರಗಳಲ್ಲಿ ಸಾಕಷ್ಟು ಆರೋಗ್ಯ ಕಾರ್ಯಕರ್ತರು ಲಭ್ಯವಿರಲಿಲ್ಲ. ತಾತ್ಕಾಲಿಕ ಸಿಬ್ಬಂದಿಯ ನೇಮಕಕ್ಕೆ ಜಿಲ್ಲಾಡಳಿತ ಅನುಮೋದನೆ ನೀಡಿದ್ದರೂ ಹಲವು ಹುದ್ದೆಗಳನ್ನು ಭರ್ತಿ ಮಾಡಲಾಗಿಲ್ಲ.

ಜಿಲ್ಲಾ ಆರೋಗ್ಯ ಅಧಿಕಾರಿ (ಡಿಎಚ್‌ಒ) ರಾಧಾಕೃಷ್ಣ ಪವಾರ್ ಅವರ ಪ್ರಕಾರ, ಅನುಮೋದಿತ 33 ವೈದ್ಯ ಹುದ್ದೆಗಳಲ್ಲಿ ಕೇವಲ ಒಂಬತ್ತು ಮಂದಿಯನ್ನು ಮಾತ್ರ ನೇಮಕ ಮಾಡಿಕೊಳ್ಳಲಾಗಿದೆ. ಅರಿವಳಿಕೆ ತಜ್ಞರ ಎಲ್ಲಾ 21 ಹುದ್ದೆಗಳು ಖಾಲಿ ಉಳಿದಿವೆ. 1,322 ಸ್ಟಾಫ್ ನರ್ಸ್‌ಗಳು ಮತ್ತು 1,004 ‘ವಾರ್ಡ್ ಬಾಯ್ಸ್ʼ (ವಾರ್ಡ್ ಅಸಿಸ್ಟೆಂಟ್ಸ್) ಹುದ್ದೆಗಳಲ್ಲಿ ಕ್ರಮವಾಗಿ 448 ಮತ್ತು 301 ಹುದ್ದೆಗಳನ್ನು ಭರ್ತಿ ಮಾಡಿಲ್ಲ.

ಒಟ್ಟಾರೆಯಾಗಿ, 16 ವಿಭಾಗಗಳಲ್ಲಿ 3,194 ಅನುಮೋದಿತ ಹುದ್ದೆಗಳಲ್ಲಿ, ಶೇಕಡಾ 34 - 1,085 ಹುದ್ದೆಗಳು ಖಾಲಿ ಇದ್ದು, ಇದು ಕರ್ತವ್ಯದಲ್ಲಿರುವ ಸಿಬ್ಬಂದಿಯನ್ನು ತೀವ್ರ ಒತ್ತಡಕ್ಕೆ ಒಳಗಾಗಿಸಿದೆ.

PHOTO • Parth M.N.

ಜ್ಯೋತಿ ಕದಮ್ ಅವರ ಪತಿ ಬಾಳಾಸಾಹೇಬ್ ಆಸ್ಪತ್ರೆಗೆ ದಾಖಲಾದ ಮರುದಿನವೇ ನಿಧನರಾದರು

ಎರಡನೇ ಅಲೆ ಉತ್ತುಂಗಕ್ಕೇರುತ್ತಿದ್ದ ಹಾಗೆ ರೋಗಿಗಳ ಸಂಖ್ಯೆ ವೇಗವಾಗಿ ಏರಿತು - ಏಪ್ರಿಲ್ 1ರಂದು 26,400ರಿಂದ ಮೇ 31ರಂದು 87,400ಕ್ಕೆ ಏರಿತು. ಆದಾಗ್ಯೂ, ಹೆಚ್ಚುತ್ತಿರುವ ರೋಗಿಗಳ ಕಾರಣದಿಂದಾಗಿ, ಬೀಡ್‌ನ ಆರೋಗ್ಯ ರಕ್ಷಣೆ ವ್ಯವಸ್ಥೆ ಕುಸಿದು ಹೋಯಿತು

ಹೀಗೆ, 38 ವರ್ಷದ ಬಾಳಾಸಾಹೇಬ್ ಕದಮ್ ಅವರು ಬೀಡ್ ಸಿವಿಲ್ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಹಾಸಿಗೆಯನ್ನು ಪಡೆದಾಗ, ಅವರ ಸಂಬಂಧಿಕರು ಸರ್ಕಾರಿ ಆಸ್ಪತ್ರೆಯ ಶೇಖರಣಾ ಕೊಠಡಿಯಿಂದ ವಾರ್ಡ್‌ಗೆ ಆಮ್ಲಜನಕ ಸಿಲಿಂಡರ್‌ಗಳನ್ನು ಸಾಗಿಸಬೇಕಾಯಿತು. ಅವರ ಪತ್ನಿ ಜ್ಯೋತಿ (ವಯಸ್ಸು 33), "ಆ ಸಮಯದಲ್ಲಿ ಯಾವುದೇ ಸಿಬ್ಬಂದಿ ಇರಲಿಲ್ಲ ಮತ್ತು ಅವರ (ಪತಿಯ) ಆಮ್ಲಜನಕದ ಮಟ್ಟವು ನಿರಂತರವಾಗಿ ಕುಸಿಯುತ್ತಿತ್ತು. ಅವರ ಸಹೋದರ ಭುಜದ ಮೇಲೆ ಸಿಲಿಂಡರ್ ಹೊತ್ತು ತಂದು ಅದನ್ನು ಸರಿಪಡಿಸಲು ವಾರ್ಡ್ ಸಹಾಯಕರನ್ನು ಕೇಳಿಕೊಂಡರು."

ಆದರೆ ಬಾಳಾಸಾಹೇಬ್ ಬದುಕುಳಿಯಲಿಲ್ಲ. ನಗರದಿಂದ 30 ಕಿಲೋಮೀಟರ್ ದೂರದಲ್ಲಿರುವ ಯೆಲಾಂಬ್ ಘಾಟ್ ಗ್ರಾಮದ ಉಪ ಸರ್ಪಂಚ್‌ ಆಗಿದ್ದ ಬಾಳಾಸಾಹೇಬ್ “ಎಲ್ಲ ಸಮಯದಲ್ಲೂ ಹೊರಗಡೆ ಇರುತ್ತಿದ್ದರು” ಎಂದು ಜ್ಯೋತಿ ಹೇಳುತ್ತಾರೆ. "ಜನರು ತಮ್ಮ ಸಮಸ್ಯೆಗಳೊಂದಿಗೆ ಅವರ ಬಳಿಗೆ ಬರುತ್ತಿದ್ದರು."

ಕೊರೋನಾ ಲಸಿಕೆ ಕುರಿತು ಜಾಗೃತಿ ಮೂಡಿಸಲು ಪತಿ ಯೆಲಾಂಬ್‌ಘಾಟ್‌ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ಅದೇ ಗ್ರಾಮದ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಬಾಳಾಸಾಹೇಬ್ ಅವರ ಪತ್ನಿ ಜ್ಯೋತಿ ಹೇಳುತ್ತಾರೆ. ಜ್ಯೋತಿಯವರ ಪ್ರಕಾರ, "ಜನರ ಮನಸ್ಸಿನಲ್ಲಿ ಲಸಿಕೆ ಬಗ್ಗೆ ಯಾವುದೇ ಸಂದೇಹವಿಲ್ಲದಂತೆ ಮಾಡಲು ಅವರು ಪ್ರಯತ್ನಿಸುತ್ತಿದ್ದರು. ಇದಕ್ಕಾಗಿ ಅವರು ಮನೆ ಮನೆಗೆ ತೆರಳಿ ಜನರನ್ನು ಭೇಟಿಯಾಗುತ್ತಿದ್ದರು." ಈ ಅಭಿಯಾನದಲ್ಲಿ ಅವರು ಕೊರೋನಾ ಸೋಂಕಿಗೆ ಒಳಗಾಗಿದ್ದರು ಎಂದು ಜ್ಯೋತಿ ನಂಬಿದ್ದಾರೆ. ಈಗ ಅವರಿಗೆ ಇಬ್ಬರು ಹೆಣ್ಣು ಮಕ್ಕಳ ಜವಾಬ್ದಾರಿಯಿದೆ, ಮಕ್ಕಳ ವಯಸ್ಸು 14 ಮತ್ತು 9 ವರ್ಷಗಳು.

ಕೊರೋನಾ ಸೋಂಕಿನ ಲಕ್ಷಣವಾಗಿ ಏಪ್ರಿಲ್ 25ರಂದು, ಬಾಳಾಸಾಹೇಬ್ ಅವರಿಗೆ ಉಸಿರಾಟದಲ್ಲಿ ತೊಂದರೆ ಕಾಣಿಸಿತು. “ಅದಕ್ಕೆ ಹಿಂದಿನ ದಿನ ಅವನು ನಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ. ಅವನಿಗೆ ಯಾವುದೇ ಸಹ-ಕಾಯಿಲೆಗಳು (co-morbidities) ಇರಲಿಲ್ಲ ಆದರೆ ಆಸ್ಪತ್ರೆಯಲ್ಲಿ [ಏಪ್ರಿಲ್ 26ರಂದು] ಒಂದು ದಿನದೊಳಗೆ ನಿಧನನಾದ” ಎಂದು ಅವರ ತಂದೆ ಭಗವತ್ ಕದಮ್, 65 ಹೇಳುತ್ತಾರೆ. “ಅವನು ಭಯಭೀತನಾಗಿದ್ದ. ಅಂತಹ ಸಮಯದಲ್ಲಿ, ರೋಗಿಗಳಿಗೆ ಅವರು ಗುಣಮುಖರಾಗುತ್ತಾರೆಂದು ಭರವಸೆ ನೀಡಬಲ್ಲ ವೈದ್ಯರ ಅಗತ್ಯವಿರುತ್ತದೆ. ಆದರೆ ವೈದ್ಯರಿಗೆ ಈಗ ಸಮಯವಿಲ್ಲ.”

ಸೋಂಕಿನ ಅಪಾಯದ ಹೊರತಾಗಿಯೂ, ರೋಗಿಯ ಕುಟುಂಬ ಸದಸ್ಯರು ರೋಗಿಯನ್ನು ನೋಡಿಕೊಳ್ಳಲು ವಾರ್ಡ್‌ನಲ್ಲಿ ಹಾಜರಿರಲು ಬಯಸುತ್ತಾರೆ, ವಿಶೇಷವಾಗಿ ಆಸ್ಪತ್ರೆಗಳಲ್ಲಿ ಸಿಬ್ಬಂದಿಗಳ ಕೊರತೆಯನ್ನು ನೋಡಿದ ನಂತರ. ಬೀಡ್ ಸಿವಿಲ್ ಆಸ್ಪತ್ರೆಯಲ್ಲಿ, ಆಡಳಿತವು ರೋಗಿಗಳ ಸಂಬಂಧಿಕರನ್ನು ವಾರ್ಡ್‌ನಿಂದ ದೂರವಿರಿಸಲು ನಿರಂತರವಾಗಿ ಪ್ರಯತ್ನಿಸುತ್ತಿದೆ, ಏಕೆಂದರೆ ಅವರ ಮತ್ತು ಆಸ್ಪತ್ರೆಯ ಸಿಬ್ಬಂದಿ ಮತ್ತು ಪೊಲೀಸರ ನಡುವೆ ಆಗಾಗ್ಗೆ ವಾಗ್ವಾದಗಳು ನಡೆಯುತ್ತವೆ.

Bhagwat Kadam, Balasaheb's father, says his son was scared but the doctors didn't have time to assuage his fears
PHOTO • Parth M.N.

ಬಾಳಾಸಾಹೇಬರ ತಂದೆ ಭಗವತ್ ಕದಮ್, ತನ್ನ ʼಮಗ ಭಯಭೀತನಾಗಿದ್ದ ಆದರೆ ಅವನ ಭಯವನ್ನು ಕಡಿಮೆ ಮಾಡಲು ವೈದ್ಯರಿಗೆ ಸಮಯವಿರಲಿಲ್ಲʼ ಎನ್ನುತ್ತಾರೆ.

ಆಸ್ಪತ್ರೆಯಿಂದ ಕಳಿಸಲ್ಪಟ್ಟಿದ್ದರ ಹೊರತಾಗಿಯೂ, ಕುಟುಂಬವು ಅವಕಾಶ ಸಿಕ್ಕಾಗ ತಮ್ಮ ಪ್ರೀತಿಪಾತ್ರರನ್ನು ನೋಡಲು ಪಟ್ಟುಬಿಡದೆ ಪ್ರಯತ್ನಿಸುತ್ತದೆ. ಮೋಟಾರು ಸೈಕಲ್‌ನಲ್ಲಿ ಆಸ್ಪತ್ರೆಯ ಹೊರಗೆ ಕಾಯುತ್ತಿರುವ 32 ವರ್ಷದ ನಿತಿನ್ ಸಾಥೆ, “ನಮ್ಮ ಕುಟುಂಬ ಸದಸ್ಯರನ್ನು ನೋಡಿಕೊಂಡಿರುತ್ತಿದ್ದರೆ, ನಾವು ಇದನ್ನೆಲ್ಲ ಮಾಡಬೇಕಾಗಿರಲಿಲ್ಲ. ನನ್ನ ಪೋಷಕರಿಬ್ಬರೂ 60 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ನೀರು ಬೇಕಾ ಅಥವಾ ಹಸಿವಾಗಿದೆಯೇ ಎಂದು ಕೂಡ ಯಾರೂ ಕೇಳುವುದಿಲ್ಲ."

ರೋಗಿಗಳ ಮಾನಸಿಕ ಆರೋಗ್ಯವನ್ನು ನೋಡಿಕೊಳ್ಳುವುದು ಬಹಳ ಮುಖ್ಯ ಎಂದು ನಗರದಲ್ಲಿ ಬ್ಯಾಂಕ್ ಗುಮಾಸ್ತರಾಗಿರುವ ಸಾಥೆ ಹೇಳುತ್ತಾರೆ. "ನಾನು ಹತ್ತಿರದಲ್ಲಿದ್ದರೆ, ನಾನು ಅವರನ್ನು ನೋಡಬಹುದು, ನಾನು ಅವರಿಗೆ ಸಾಂತ್ವನ ನೀಡಬಲ್ಲೆ. ಇದು ಅವರಿಗೆ ಒಂದಿಷ್ಟು ಶಕ್ತಿಯನ್ನು ನೀಡುತ್ತದೆ ಮತ್ತು ಅವರ ಭಯವನ್ನು ಕಡಿಮೆ ಮಾಡುತ್ತದೆ. ಜನರನ್ನು ಅವರ ಪಾಡಿಗೆ ಬಿಟ್ಟು ಬಿಟ್ಟಾಗ, ಅವರು ನಿರಂತರವಾಗಿ ಕೆಟ್ಟ ಕೆಟ್ಟ ಯೋಚನೆ ಮಾಡತೊಡಗುತ್ತಾರೆ ಎಂದು ನನಗನ್ನಿಸುತ್ತದೆ. ಅದು ಅವರ ಚಿಕಿತ್ಸೆಯ ಮೇಲೂ ಪರಿಣಾಮ ಬೀರುತ್ತದೆ."

ವ್ಯಂಗ್ಯವೊಂದರ ಕುರಿತು ಸಾಥೆ ಗಮನಸೆಳೆಯುತ್ತಾರೆ: “ಒಂದು ಕಡೆ, ನಾವು ಆಸ್ಪತ್ರೆಯ ಹೊರಗೆ ಇರಬೇಕೆಂದು ಒತ್ತಾಯಿಸಲಾಗುತ್ತದೆ. ಮತ್ತೊಂದೆಡೆ, ರೋಗಿಗಳನ್ನು ನೋಡಿಕೊಳ್ಳಲು ಅವರ ಬಳಿ ಸಾಕಷ್ಟು ಸಿಬ್ಬಂದಿಯಿಲ್ಲ.”

ಅಧಿಕೃತ ಅಂಕಿ-ಅಂಶಗಳು ಕೊರೋನಾದ ಸಾವುಗಳನ್ನು ಕಡಿಮೆ ಅಂದಾಜು ಮಾಡಿವೆ ಎಂದು ಸ್ಥಳೀಯ ಪತ್ರಕರ್ತರೊಬ್ಬರು ಕಂಡುಹಿಡಿದ ನಂತರ ಸಿಬ್ಬಂದಿಗಳ ಕೊರತೆಯು ಜಿಲ್ಲಾಡಳಿತವನ್ನು ಮುಜುಗರಕ್ಕೀಡುಮಾಡಿತು.

ಲೋಕಮತ್ ಪತ್ರಿಕೆಯ ವರದಿಗಾರ 29 ವರ್ಷದ ಸೋಮನಾಥ್ ಖತಾಲ್, ಶವಸಂಸ್ಕಾರ ಮೈದಾನದಲ್ಲಿ ಅಂತಿಮ ವಿಧಿಗಳನ್ನು ನೆರವೇರಿಸಿದವರ ಸಂಖ್ಯೆಯನ್ನು ಅಧಿಕೃತ ಅಂಕಿ ಅಂಶಗಳೊಂದಿಗೆ ಹೋಲಿಸಿ ನೋಡುವ ಮೂಲಕ ಎರಡರ ನಡುವೆ 105 ಸಾವುಗಳ ವ್ಯತ್ಯಾಸವಿರುವುದನ್ನು ಕಂಡುಹಿಡಿದರು. "ಈ ಸುದ್ದಿ ಬಂದ ಒಂದು ವಾರದ ನಂತರ, ಆಡಳಿತವು ಅಧಿಕೃತ ಅಂಕಿಅಂಶಗಳ ಪ್ರಕಾರ ಸುಮಾರು ಇನ್ನೂರು ಸಾವುಗಳಿಗೆ ಹೆಚ್ಚಿಸಿದೆ. ಅದರಲ್ಲಿ ಕೆಲವು ಪ್ರಕರಣಗಳು ಕಳೆದ ವರ್ಷದಿಂದ ಸೇರಿಸಲಾಗಿದೆ" ಎಂದು ಅವರು ಹೇಳುತ್ತಾರೆ.

ಡಿಎಚ್‌ಒ ಪವಾರ್ ತಪ್ಪನ್ನು ಒಪ್ಪಿಕೊಂಡಿದ್ದು, ಸಿಬ್ಬಂದಿಗಳ ಕೊರತೆಯೇ ಇದಕ್ಕೆ ಕಾರಣ ಎಂದು ಹೇಳಿದ್ದಾರೆ. ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡುವ ಪ್ರಯತ್ನದ ಕಾರಣದಿಂದಾಗಿಯಲ್ಲ ಎಂದು ಅವರು ಹೇಳುತ್ತಾರೆ. “ನಮ್ಮಲ್ಲಿ ಒಂದು ವ್ಯವಸ್ಥೆ ಇದೆ. ಒಬ್ಬ ವ್ಯಕ್ತಿಯು ಕೋವಿಡ್ -19 ಸೋಂಕಿಗೆ ಒಳಗಾದ ನಂತರ, ನಾವು ಕೋವಿಡ್ ಪೋರ್ಟಲ್‌ನ ಬ್ಯಾಕೆಂಡ್‌ನಲ್ಲಿ ನೋಟಿಫಿಕೇಷನ್ ಸ್ವೀಕರಿಸುತ್ತೇವೆ. ಇದರಲ್ಲಿಯೇ ರೋಗಿಗಳು ದಾಖಲಾತಿ ವಿವರಗಳು, ಚಿಕಿತ್ಸೆ ಮತ್ತು ಅದರ ಫಲಿತಾಂಶವನ್ನು ದಾಖಲಿಸಬೇಕು”ಎಂದು ಪವಾರ್ ವಿವರಿಸುತ್ತಾರೆ.

Nitin Sathe sitting on a motorbike outside the hospital while waiting to check on his parents in the hospital's Covid ward
PHOTO • Parth M.N.

ಆಸ್ಪತ್ರೆಯ ಕೋವಿಡ್ ವಾರ್ಡ್‌ನಲ್ಲಿರುವ ತನ್ನ ಹೆತ್ತವರ ತಪಾಸಣೆಗಾಗಿ ಕಾಯುತ್ತಾ ಆಸ್ಪತ್ರೆಯ ಹೊರಗೆ ಮೋಟಾರುಬೈಕಿನಲ್ಲಿ ಕುಳಿತಿದ್ದ ನಿತಿನ್ ಸಾಥೆ

ಆದರೆ ಏಪ್ರಿಲ್‌ನಲ್ಲಿ ಕೋವಿಡ್ ರೋಗಿಗಳ ಸಂಖ್ಯೆ ಇದ್ದಕ್ಕಿದ್ದಂತೆ ದಿನಕ್ಕೆ 25-30 ರಿಂದ ಸುಮಾರು 1,500 ಕ್ಕೆ ಏರಿದಾಗ, “ಮಿತಿಮೀರಿದ ಹೊರೆಯ ಮಧ್ಯೆ ಯಾರೂ ನಮೂದುಗಳತ್ತ ಗಮನ ಹರಿಸಲಿಲ್ಲ” ಎಂದು ಪವಾರ್ ಹೇಳುತ್ತಾರೆ. "ಅವರನ್ನು ಕೇವಲ ಕೋವಿಡ್ -19 ರೋಗಿಗಳೆಂದು ಪರಿಗಣಿಸಲಾಯಿತು, ಆದರೆ ಕೆಲವು ಸಾವುಗಳನ್ನು ಪೋರ್ಟಲ್‌ನಲ್ಲಿ ಅಪ್ಡೇಟ್‌ ಮಾಡಲಾಗಿಲ್ಲ. ಸುದ್ದಿ ವರದಿ [ಪ್ರಕಟವಾದ] ಮತ್ತು ಜಿಲ್ಲೆಯ ಸಾವಿನ ಸಂಖ್ಯೆಯನ್ನು ನವೀಕರಿಸಿದಾಗಿನಿಂದ ನಾವು ನಮ್ಮ ತಪ್ಪನ್ನು ಒಪ್ಪಿಕೊಂಡಿದ್ದೇವೆ.”

ಜಿಲ್ಲಾಡಳಿತ ತಮ್ಮ ತಪ್ಪನ್ನು ಒಪ್ಪಿಕೊಂಡರೂ, ಕೊರೋನಾ ಪ್ರೋಟೋಕಾಲ್ ಅನ್ನು ಮುರಿದು "ಲತಾ ಅವರ ದೇಹವನ್ನು ಅಗೌರವಗೊಳಿಸಿಲಾಗಿದೆ" ಎಂಬ ಆರೋಪದ ಮೇಲೆ ಜಿಲ್ಲಾಡಳಿತ ಸುಭಾಷ್ ವಿರುದ್ಧ ತೀವ್ರ ಕ್ರಮ ಕೈಗೊಂಡಿದೆ.

"ಆಸ್ಪತ್ರೆಯ ಸಿಬ್ಬಂದಿ ಶವದ ಪ್ರತಿಜನಕ (antigen) ಪರೀಕ್ಷೆಯನ್ನು ಮಾಡಿದರು, ಅದರಲ್ಲಿ ನಕಾರಾತ್ಮಕ ಫಲಿತಾಂಶ ಬಂದಿತು. ಆದ್ದರಿಂದ, ಅವರು ದೇಹವನ್ನು ನನ್ನ ಮನೆಗೆ ಕೊಂಡೊಯ್ಯಲು ಅವಕಾಶ ಮಾಡಿಕೊಟ್ಟರು" ಎಂದು ಸುಭಾಷ್ ಹೇಳುತ್ತಾರೆ.

ನಗರದಿಂದ 35 ಕಿಲೋಮೀಟರ್ ದೂರದಲ್ಲಿರುವ ಬೀಡ್‌ನ ಜಿಯೋರೈ ತಾಲ್ಲೂಕಿನಲ್ಲಿರುವ ತನ್ನ ಸಹೋದರಿಯ ಶವವನ್ನು ತನ್ನ ಗ್ರಾಮವಾದ ಕುಂಭರ್‌ವಾಡಿಗೆ ಕೊಂಡೊಯ್ಯಬಹುದೇ ಎಂದು ಸುಬಾಶ್ ಆಸ್ಪತ್ರೆಯನ್ನು ಕೇಳಿದ್ದರು. ಲತಾ ತನ್ನ ಪತಿ ರುಸ್ತಮ್ ಮತ್ತು ಅವರ ನಾಲ್ಕು ವರ್ಷದ ಮಗ ಶ್ರೇಯಸ್ ಜೊತೆ ಅಲ್ಲಿ ವಾಸಿಸುತ್ತಿದ್ದರು. “ಇದು ಕುಟುಂಬದ ಆಶಯವಾಗಿತ್ತು. ನಾವು ಅವಳಿಗೆ ಯೋಗ್ಯ ಅಂತ್ಯಕ್ರಿಯೆಯನ್ನು ನೀಡಲು ಬಯಸಿದ್ದೆವು.”

ಆದರೆ ಅವರು ಕುಂಭರ್ವಾಡಿಗೆ ಹೋಗುವ ಅರ್ಧದಾರಿಯಲ್ಲೇ ಆಸ್ಪತ್ರೆಯು ಸುಬಾಷರಿಗೆ ಫೋನ್ ಮಾಡಿ, ದೇಹದೊಂದಿಗೆ ಹಿಂತಿರುಗುವಂತೆ ಹೇಳಿದರು. "ನಾನು ನನ್ನ ಸಂಬಂಧಿಕರಿಗೆ ಹೇಳಿದ್ದೇನೆಂದರೆ ನಾವು ಆಡಳಿತದೊಂದಿಗೆ ಸಹಕರಿಸಬೇಕು ಏಕೆಂದರೆ ಇದು ಕಠಿಣ ಸಮಯಗಳು. ನಾವು ಅಲ್ಲಿಂದ ಮರಳಿ ಹೊರಟು ದೇಹದೊಂದಿಗೆ ಹಿಂತಿರುಗಿದೆವು.”

ಆದರೆ ಸಿವಿಲ್ ಆಸ್ಪತ್ರೆ 1897ರ ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಸುಬಾಷ್ ಮೇಲೆ ಆರೋಪ ಹೊರಿಸಿ ಮೊದಲ ಮಾಹಿತಿ ವರದಿಯನ್ನು ಸಲ್ಲಿಸಿತು. “ಕೋವಿಡ್ ರೋಗಿಯು ಆಸ್ಪತ್ರೆಯಲ್ಲಿ ಸತ್ತರೆ, ಅನುಸರಿಸಬೇಕಾದ ಪ್ರೋಟೋಕಾಲ್‌ಗಳಿವೆ. ಮತ್ತು ಈ ಪ್ರಕರಣದ ಸಂಬಂಧಿಕರು ಆ ಪ್ರೋಟೋಕಾಲ್‌ಗಳನ್ನು ಮುರಿದರು” ಎಂದು ಬೀಡ್‌ನ ಜಿಲ್ಲಾ ಮ್ಯಾಜಿಸ್ಟ್ರೇಟ್ ರವೀಂದ್ರ ಜಗತಾಪ್ ಹೇಳುತ್ತಾರೆ, ಪ್ರತಿಜನಕ ಪರೀಕ್ಷೆಯು ಏನೂ ಅರ್ಥವಿಲ್ಲ ಎಂದೂ ಹೇಳಿದರು.

Left: Subash Kabade shows his letter to the district collector explaining his side in the hospital's complaint against him. Right: Somnath Khatal, the journalist who discovered the discrepancy in official number of Covid deaths reported in Beed
PHOTO • Parth M.N.
Left: Subash Kabade shows his letter to the district collector explaining his side in the hospital's complaint against him. Right: Somnath Khatal, the journalist who discovered the discrepancy in official number of Covid deaths reported in Beed
PHOTO • Parth M.N.

ಎಡ: ಸುಬಾಷ್ ಕಬಾಡೆ ಅವರು ಜಿಲ್ಲೆಯ ಕಲೆಕ್ಟರ್‌ ಅವರಿಗೆ ತಮ್ಮ ಪತ್ರವನ್ನು ತೋರಿಸುತ್ತಿರುವುದು. ಬಲ: ಬೀಡ್‌ನಲ್ಲಿ ವರದಿಯಾದ ಅಧಿಕೃತ ಸಂಖ್ಯೆಯ ಕೋವಿಡ್ ಸಾವುಗಳಲ್ಲಿನ ವ್ಯತ್ಯಾಸವನ್ನು ಕಂಡುಹಿಡಿದ ಪತ್ರಕರ್ತ ಸೋಮನಾಥ್ ಖತಾಲ್

ಕೋವಿಡ್ ಪ್ರೋಟೋಕಾಲ್ ಪ್ರಕಾರ, ರೋಗಿಯ ದೇಹವನ್ನು ಸೀಲ್ ಮಾಡಿದ ಬಾಡಿ ಬ್ಯಾಗ್‌ನಲ್ಲಿ ಸುತ್ತಿ ಆಸ್ಪತ್ರೆಯಿಂದ ನೇರವಾಗಿ ಶವಾಗಾರಕ್ಕೆ ಕೊಂಡೊಯ್ದು ಅಂತ್ಯಕ್ರಿಯೆ ಮಾಡಬೇಕು.

ಆಸ್ಪತ್ರೆಯು ತನಗೆ ಅವಕಾಶ ನೀಡಿದ್ದರಿಂದಾಗಿಯೇ ಅವರು ಲತಾ ಅವರ ದೇಹವನ್ನು ಕೊಂಡು ಹೋಗಲು ನಿರ್ಧರಿಸಿದರು ಎಂದು ಸುಬಾಶ್ ಹೇಳುತ್ತಾರೆ. “ನಾನೊಬ್ಬ ವಕೀಲ. ನಾನು ಪ್ರೋಟೋಕಾಲ್‌ಗಳನ್ನು ಅರ್ಥಮಾಡಿಕೊಂಡಿದ್ದೇನೆ. ನಾನೇಕೆ ಆಸ್ಪತ್ರೆಯ ಅಭಿಪ್ರಾಯದ ವಿರುದ್ಧ ಹೋಗಿ ನನ್ನ ಕುಟುಂಬದ ಆರೋಗ್ಯಕ್ಕೆ ಅಪಾಯವನ್ನುಂಟುಮಾಡಲಿ?”

ಈ ಹಿಂದೆ ತಾನು ಎಷ್ಟು ರೋಗಿಗಳು ಮತ್ತು ಆಸ್ಪತ್ರೆಯ ಸಿಬ್ಬಂದಿಗೆ ಸಹಾಯ ಮಾಡಿದ್ದೇನೆ ಎಂಬುದನ್ನು ಆಸ್ಪತ್ರೆ ನೆನಪಿಟ್ಟುಕೊಂಡಿಲ್ಲ ಎಂದು ಅವರು ನಿರಾಶೆಯಿಂದ ಹೇಳುತ್ತಾರೆ. ಅವರು ಹೇಳುತ್ತಾರೆ, "ನಾನು ಕನಿಷ್ಠ 150 ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಲು ಸಹಾಯ ಮಾಡಿದ್ದೇನೆ. ಅನೇಕ ರೋಗಿಗಳಿಗೆ ಓದಲು ಅಥವಾ ಬರೆಯಲು ಬರುತ್ತಿರಲಿಲ್ಲ, ಜೊತೆಗೆ ಅವರು ಭಯಭೀತರಾಗಿದ್ದರು. ನಾನು ಅವರಿಗೆ ಫಾರ್ಮ್‌ಗಳನ್ನು ಭರ್ತಿ ಮಾಡಲು ಮತ್ತು ಆಸ್ಪತ್ರೆಯಲ್ಲಿ ಸ್ಥಳವನ್ನು ಹುಡುಕಲು ಸಹಾಯ ಮಾಡಿದೆ. ಆಸ್ಪತ್ರೆಯ ಸಿಬ್ಬಂದಿ ಮಾಡಬೇಕಾದದ್ದನ್ನು ನಾನು ಮಾಡಿದ್ದೇನೆ."

ಲತಾ ಅನಾರೋಗ್ಯಕ್ಕೆ ಒಳಾಗಾಗುವ ಮುಂಚೆಯೇ, ಸುಬಾಷ್ ಸಿವಿಲ್ ಆಸ್ಪತ್ರೆಯಲ್ಲಿ ಪ್ರವೇಶ ಪ್ರಕ್ರಿಯೆಯಲ್ಲಿ ರೋಗಿಗಳಿಗೆ ಸಹಾಯ ಮಾಡುತ್ತಿದ್ದರು. ತನ್ನ ಸಹೋದರಿ ಆಸ್ಪತ್ರೆಯಲ್ಲಿದ್ದ ವಾರಗಳು ಸೇರಿದಂತೆ ಒಟ್ಟು ಒಂದೂವರೆ ತಿಂಗಳು ಇಲ್ಲಿ ಇಡೀ ದಿನಗಳನ್ನು ಕಳೆದಿದ್ದೇನೆ ಎಂದು ಅವರು ಹೇಳುತ್ತಾರೆ.

ಆಸ್ಪತ್ರೆಯಲ್ಲಿ ತನ್ನ ಸಹೋದರಿಯನ್ನು ನೋಡಿಕೊಳ್ಳುವ ಸಮಯದಲ್ಲಿ, ಒಮ್ಮೆ ಕೋವಿಡ್ ರೋಗಿಯೊಬ್ಬರನ್ನು ನೆಲದಿಂದ ಎತ್ತಿ ಹಾಸಿಗೆಯ ಮೇಲೆ ಮಲಗಿಸಿದ್ದೆ ಎಂದು ಅವರು ಹೇಳುತ್ತಾರೆ. “ಅವರು ಹಿರಿಯ ನಾಗರಿಕ ಮಹಿಳೆ.  ಹಾಸಿಗೆಯಿಂದ ಬಿದ್ದು ನೆಲದ ಮೇಲೆ ಮಲಗಿದ್ದರು ಆದರೆ ಯಾರೂ ಗಮನ ಹರಿಸಿರಲಿಲ್ಲ. ಆಸ್ಪತ್ರೆಯಲ್ಲಿ ರೋಗಿಗಳ ಸ್ಥಿತಿಯಿದು.”

ತನ್ನ ಮನೆಗೆ ನನ್ನನ್ನು ಆಹ್ವಾನಿಸಲು ಸಾಧ್ಯವಾಗದ ಕಾರಣ ಸುಭಾಷ್ ನನ್ನನ್ನು ಬೀಡ್‌ನ ಹೋಟೆಲ್‌ನ ಲಾಬಿಯಲ್ಲಿ ಭೇಟಿಯಾದರು. ಅವರು ತುಂಬಾ ನಿರಾಶೆ, ಅಸಮಾಧಾನ ಮತ್ತು ಕೋಪದಲ್ಲಿರುವಂತೆ ಕಾಣುತ್ತಿದ್ದರು. "ನನ್ನ ತಂಗಿಯ ಮರಣದ ನಂತರ ನನ್ನ ಹೆತ್ತವರು ಆಘಾತಕ್ಕೊಳಗಾಗಿದ್ದಾರೆ. ಅವರು ಮಾತನಾಡುವ ಸ್ಥಿತಿಯಲ್ಲಿಲ್ಲ. ನನಗೂ ಈ ಲೋಕದ ಪ್ರಜ್ಞೆಯಿಲ್ಲ. ಲತಾಳ ನನಗೆ ಮತ್ತೆ ಮತ್ತೆ ಕರೆ ಮಾಡಿ 'ಆಯಿ ಯಾವಾಗ ಮನೆಗೆ ಬರುತ್ತಾರೆ?' ಎಂದು ಕೇಳುತ್ತಾನೆ. ಅವನಿಗೆ ಏನು ಹೇಳಬೇಕೆಂದು ನನಗೆ ತೋಚುತ್ತಿಲ್ಲ."

ಅನುವಾದ: ಶಂಕರ ಎನ್. ಕೆಂಚನೂರು

Parth M.N.

Parth M.N. is a 2017 PARI Fellow and an independent journalist reporting for various news websites. He loves cricket and travelling.

Other stories by Parth M.N.
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru