ಒಸ್ಮಾನಾಬಾದ್ ಜಿಲ್ಲೆಯ ದಡ ಮುಟ್ಟಿದ ಕೋವಿಡ್-19ರ ಎರಡನೇ ಅಲೆಯು, ಊರಿನ ಬಾಗಿಲು ತಟ್ಟುವುದಲ್ಲದೆ,  ಬಾಗಿಲು ಮುರಿದು ಒಳ ನುಗ್ಗಿತು. ಜೊತೆಗೆ ತುಳಜಾಪುರ ತೆಹಸಿಲ್‌ನ ತುಳಜಾ ಭವಾನಿ ಮಂದಿರವೂ ವ್ಯಾಧಿಯನ್ನು ತೀವ್ರಗೊಳಿಸುವುದರಲ್ಲಿ ಪಾತ್ರಧಾರಿಯಾಯಿತು.

ಕೋವಿಡ್-19ರ ಬಾಹುಗಳಿಂದ ತಪ್ಪಿಸಿಕೊಂಡ ಜಯಸಿಂಗ್ ಪಾಟೀಲರು, ಮಂದಿರದಿಂದ ದೂರವಿರಲು ನಿಶ್ಚಯಿಸಿದ್ದಾರೆ. “ನಾನೂ ಶ್ರದ್ಧಾವಂತನೇ. ಜನರ ಶ್ರದ್ಧೆಯನ್ನು ಗೌರವಿಸುತ್ತೇನೆ, ಆದರೆ ಈ ಸರ್ವವ್ಯಾಪಿ ವ್ಯಾಧಿಯ ನಡುವೆ, ಮಂದಿರಗಳನ್ನು ತೆರೆಯುವುದು ಉಚಿತವಲ್ಲ,” ಎಂದರು.

45 ವರ್ಷದವರಾದ ಪಾಟೀಲರು ತುಳಜಾ ಭವಾನಿ ಟೆಂಪಲ್ ಟ್ರಸ್ಟಿನಲ್ಲಿ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದಾರೆ. “ಈ ವರ್ಷದ ಫೆಬ್ರವರಿಯಲ್ಲಿ, ನಾನು ನೂರಾರು ಜನರ ಸಾಲನ್ನು ನಿಭಾಯಿಸುತ್ತಿದ್ದೆ.” ಮಹಾರಾಷ್ಟ್ರದ ಪ್ರಮುಖ ತೀರ್ಥಯಾತ್ರೆ ಸ್ಥಳಗಳಲ್ಲಿ ಪ್ರಸ್ತುತವಾಗಿರುವ ಈ ಮಂದಿರಕ್ಕೆ ಭಾರತದೆಲ್ಲೆಡೆಯಿಂದ ಸಾವಿರಾರು ಜನರು ಬರುತ್ತಾರೆ. “ಭಕ್ತರು ಮಂದಿರದೊಳಗೆ ಹೋಗುವುದನ್ನು ತಡೆಯಲು ಹೋದರೆ, ಕುಪಿತರಾಗಿ, ಮೇಲೆ ಬೀಳುತ್ತಿದ್ದರು. ಜನಜಂಗುಳಿಯನ್ನು ನಿಭಾಯಿಸುತ್ತಿರುವಾಗಲೇ ನನಗೆ ಕೋವಿಡ್-19 ತಗಲಿರಬೇಕು.”

ಆಸ್ಪತ್ರೆಯ ಐ.ಸಿ.ಯೂ.ನಲ್ಲಿ ಆಮ್ಲಜನಕದ ಸಹಾಯದಿಂದ ಉಸಿರಾಡುತ್ತಿದ ಅವರ ರಕ್ತದ ಆಮ್ಲಜನಕ ಮಟ್ಟ ಹೆಚ್ಚು ಕಡಿಮೆ 75-80 ಶೇಕಡವಿತ್ತು – 92 ಶೇಕಡಕ್ಕಿಂತ ಕಡಿಮೆಯಿದ್ದರೆ ಅಪಾಯಕಾರಿ ಎಂದು ಡಾಕ್ಟರುಗಳು ಹೇಳುತ್ತಾರೆ. “ಹೇಗೋ ಬದುಕಿದೆ. ಹಲವಾರು ತಿಂಗಳುಗಳಾದರೂ, ಸುಸ್ತೆನಿಸುತ್ತದೆ,” ಎಂದರು ಜಯಸಿಂಗರು.

Jaysingh Patil nearly died of Covid-19 after he was tasked with managing the queues of devotees visiting the temple
PHOTO • Parth M.N.

ಮಂದಿರಕ್ಕೆ ಬರುತ್ತಿದ್ದ ಭಕ್ತಾದಿಗಳ ಸಾಲುಗಳನ್ನು ನಿಭಾಯಿಸುವ ಜವಾಬ್ದಾರಿ ಹೊತ್ತು ಕೋವಿಡ್-19ರ ಬಾಹುಗಳಿಂದ ತಪ್ಪಿಸಿಕೊಂಡ ಜಯಸಿಂಗ್ ಪಾಟೀಲ

ಒಂದು ತಿಂಗಳ ಹಿಂದೆಯೇ, ಅವರ 32 ವಯಸ್ಸಿನ ತಮ್ಮ ಜಗದೀಶರೂ ಕೋವಿಡ್‌ನಿಂದ ಪಾರಾಗಿದ್ದರು. ಅವರು ಮೂರು ವಾರ ಆಸ್ಪತ್ರೆಯಲ್ಲಿರಬೇಕಾಗಿತ್ತು; ರಕ್ತದಲ್ಲಿನ ಆಮ್ಲಜನಕ 80 ಶೇಕಡಕ್ಕಿಂತ ಕೆಳಗೆ ಹೋಗಿತ್ತು. “ಮಂದಿರದಲ್ಲಿ ಅವನು ಅರ್ಚಕ,” ಎಂದರು ಜಯಸಿಂಗ್. “ಕೋವಿಡ್-ಪಾಸಿಟಿವ್ ಇದ್ದ ಒಬ್ಬ ಭಕ್ತನ ಸಂಪರ್ಕದಿಂದ ಅವನಿಗೆ ವ್ಯಾಧಿ ತಗಲಿತು. ನಮ್ಮಿಬ್ಬರಿಗೂ ಭಯಾನಕ ಅನುಭವವಾಗಿತ್ತು.”

ಈ ಅನುಭವವು ದುಬಾರಿಯೂ ಹೌದು. ಅವರಿಬ್ಬರ ಚಿಕಿತ್ಸೆಗೆ 5 ಲಕ್ಷ ರೂಪಾಯಿಗಳಷ್ಟು ಖರ್ಚಾಗಿತ್ತು. “ಅದೃಷ್ಟವಶಾತ್, ನಾವು ಬದುಕಿದೆವು. ಸಾವಿರಾರು ಜನ ಸಾಯುತ್ತಿದ್ದಾರೆ, ಅವರ ಮನೆತನ ನಷ್ಟವಾಗುತ್ತಿದೆ. ಎಷ್ಟೇ ಪ್ರಯತ್ನಿಸಿದರೂ, ಮಂದಿರದಲ್ಲಿ ಒಬ್ಬರಿಂದೊಬ್ಬರನ್ನು ದೂರವಿಡಲು ಅಸಾಧ್ಯ,” ಎಂದರು ಜಯಸಿಂಗ್.

12ನೇ ಶತಮಾನದಲ್ಲಿ ಕಟ್ಟಿದ್ದೆಂದು ಪ್ರಖ್ಯಾತವಾಗಿರುವ ತುಳಜಾ ಭವಾನಿ ಮಂದಿರಕ್ಕೆ ಪ್ರತಿ ವರ್ಷ 400 ಕೋಟಿ ರೂಪಾಯಿಗಳ ವಹಿವಾಟು ಬರುತ್ತದೆಂದು ತುಳಜಾಪುರದ ತಹಸೀಲ್ದಾರರಾದ ಸೌದಾಗರ್ ತಂಡಲೇ ಹೇಳಿದರು. ತುಳಜಾಪುರ ತೆಹಸಿಲಿನ ಅರ್ಥವ್ಯವಸ್ಥೆ ಈ ಮಂದಿರವನ್ನೇ ಅವಲಂಬಿಸಿದೆ. ಮಿಠಾಯಿ ಮತ್ತು ಸೀರೆ ಅಂಗಡಿಗಳು, ಹೊಟೇಲ್ ಮತ್ತು ಲಾಡ್ಜುಗಳು,  ಅರ್ಚಕರ ಮನೆತನಗಳೂ ಸರಿ – ಎಲ್ಲರೂ ಆದಾಯಕ್ಕಾಗಿ ಬರುವ ತೀರ್ಥಯಾತ್ರಿಗಳ ಮೇಲೆ ಅವಲಂಬಿತರು.

“ಕೋವಿಡ್‌ಗೂ ಮೊದಲು, ಸಾಧಾರಣವಾಗಿ ಮಂದಿರಕ್ಕೆ ಪ್ರತಿದಿನ 50,000 ಜನ ಬರುತ್ತಿದ್ದರು. ನವರಾತ್ರಿ ಹಬ್ಬದ [ಸೆಪ್ಟೆಂಬರ್-ಅಕ್ಟೋಬರ್] ಸಮಯದಲ್ಲಿ ಲಕ್ಷಕ್ಕಿಂತ ಹೆಚ್ಚು ಭಕ್ತಾದಿಗಳು ಪ್ರತಿದಿನ ಬರುವರು,” ಎಂದರು ತಾಂಡೇಲ್. ಒಮ್ಮೆ, ಮಂದಿರಕ್ಕೆ ಒಂದೇ ದಿನದಲ್ಲಿ ಏಳು ಲಕ್ಷ ಭಕ್ತರು ಬಂದಿದ್ದರು.

The Tuljapur temple has been shut since April
PHOTO • Parth M.N.

ಏಪ್ರಿಲ್ ತಿಂಗಳಿನಿಂದ ಮುಚ್ಚಿರುವ ತುಳಜಾಪುರದ ಮಂದಿರ

ತಹಶೀಲ್ ಕಚೇರಿಯು ಯಾತ್ರಾರ್ಥಿಗಳಿಗೆ ಪೂರ್ವಾನುಮೋದಿತ ಪಾಸ್‌ಗಳನ್ನು ನೀಡಲು ನಿರ್ಧರಿಸಿತು ಮತ್ತು ತುಳಜಾಪುರ ಪಟ್ಟಣವನ್ನು ಪ್ರವೇಶಿಸಲು ದಿನಕ್ಕೆ 2,000 ಜನರಿಗೆ ಮಾತ್ರ ಅವಕಾಶ ನೀಡಿತು. ಸಂಖ್ಯೆಯನ್ನು ಕ್ರಮೇಣ ಹೆಚ್ಚಿಸಲಾಯಿತು ಮತ್ತು ಜನವರಿ 2021ರ ಹೊತ್ತಿಗೆ ಪ್ರತಿದಿನ ಸುಮಾರು 30,000 ಸಂದರ್ಶಕರು ಬರುತ್ತಿದ್ದರು

ಮಂದಿರಕ್ಕೆ ಬರುವ ಭಕ್ತರಲ್ಲಿ 90 ಶೇಕಡ ಒಸ್ಮಾನಾಬಾದ್‌ನ ಹೊರಗಿನಿಂದ ಬರುವರು. “ಮಹಾರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣ, ಕರ್ನಾಟಕ, ಮತ್ತೆಲ್ಲೆಡೆಯಿಂದ ಬರುತ್ತಾರೆ,” ಎಂದರು ತಾಂಡೇಲ್.

ಹಾಗಾಗಿ, ಮೊದಲನೆಯ ಕೋವಿಡ್ ಅಲೆಯ ನಂತರ, ಮಂದಿರವನ್ನು ನವೆಂಬರ್ 2020ರ ಮಧ್ಯದಲ್ಲಿ ತೆರೆಯುವುದು, ಅಪಾಯಕಾರಿಯಾಗಿತ್ತು. ಮಂದಿರದ ಭಕ್ತಾದಿಗಳು ಮೊದಲನೇ ಅಲೆಯಲ್ಲಿ ಕೋವಿಡ್ ಪ್ರಕರಣಗಳನ್ನು ಹೆಚ್ಚಿಸುವುದರಲ್ಲಿ ಪಾತ್ರವಹಿಸಿದ್ದರು.

ಮಾರ್ಚ್ 17, 2020ರಿಂದ ಮಂದಿರವು ಮುಚ್ಚಿದ್ಡು, ಮತ್ತು ಕೆಲವೇ ದಿನಗಳ ನಂತರ ದೇಶಾದ್ಯಂತ ಲಾಕ್ಡೌನ್ ವಿಧಿಸಿದ್ದರೂ, ಭಕ್ತರು ದೇವಿಯ ದರ್ಶನಕ್ಕಾಗಿ ಬರುತ್ತಿದ್ದರು. “ದೇವಿಗೆ ಮಂದಿರದ ಹೊರಗಿನಿಂದಲೇ ನಮಸ್ಕರಿಸಲು ಬರುತ್ತಿದ್ದರು,” ಎಂದು ಅನಾಮಿಕರಾಗಿರಲು ಇಚ್ಛಿಸಿದ ಓರ್ವ ಜಿಲ್ಲಾಧಿಕಾರಿ ಹೇಳಿದರು. “ಲಾಕ್ಡೌನ್ ವಿಧಿಸಿದ್ದರೂ ತುಳಜಾಪುರಕ್ಕೆ ಏಪ್ರಿಲ್-ಮೇನಲ್ಲಿ ಪ್ರತಿ ದಿನ 5,000 ಭಕ್ತರು ಭೇಟಿ ನೀಡಿದ್ದರು. ಹಾಗಾಗಿ, ಇಲ್ಲಿ ಲಾಕ್ಡೌನ್ ನಂತರವೂ ಕೋವಿಡ್ ಪ್ರಕರಣಗಳು ಕಡಿಮೆಯಾಗಲಿಲ್ಲ.”

ಮೇ 2020ರ ಕೊನೆಯಲ್ಲಿ, ಜಿಲ್ಲಾಧಿಕಾರಿಗಳು ತುಳಜಾಜಪುರದ ಅರ್ಚಕರನ್ನು – ಸುಮಾರು 3‌,500 ಜನರನ್ನು – ಪರೀಕ್ಷಿಸಿದಾಗ, ಅವರಲ್ಲಿ 20 ಶೇಕಡ ಕೋವಿಡ್-ಪಾಸಿಟಿವ್ ಆಗಿದ್ದರು. ಜೂನ್‌ನಿಂದ, ತೆಹಸಿಲ್ ಅಧಿಕಾರಿಗಳು, ತುಳಜಾಪುರಕ್ಕೆ ಬರುವ ಮೊದಲು ಭಕ್ತರಿಂದ ಕೋವಿಡ್-ನೆಗೆಟಿವ್ ಪರೀಕ್ಷೆ ಕೋರಿದರು. “ಅದರಿಂದಾಗಿ, ಕೋವಿಡ್ ನಿಯಂತ್ರಣಕ್ಕೆ ಬಂತು,” ಎಂದರು ತಾಂಡೇಲ್. “ಮೊದಲನೇ ಅಲೆಯಲ್ಲಿ ತುಳಜಾಪುರದಲ್ಲಿ ಕೊವಿಡ್‌ ತೀವ್ರವಾಗಿ ಹರಡಿತ್ತು.”

ಇದರಲ್ಲಿ ಆಶ್ಚರ್ಯವೇನಿರಲಿಲ್ಲ.

Mandakini (left) and Kalyani Salunkhe make puran polis for the devotees. The temple's closure gives them a break but it has ruined the family income
PHOTO • Parth M.N.
Mandakini (left) and Kalyani Salunkhe make puran polis for the devotees. The temple's closure gives them a break but it has ruined the family income
PHOTO • Parth M.N.

ಮಂದಾಕಿನಿ (ಎಡಕ್ಕೆ) ಮತ್ತು ಕಲ್ಯಾಣಿ ಸಾಳುಂಖೆ ಭಕ್ತಾದಿಗಳಿಗೆ ಪೂರಣಪೋಳಿ ಮಾಡುತ್ತಿರುವರು. ದೇವಾಲಯದ ಮುಚ್ಚಿದ್ದರಿಂದಾಗಿ ವಿಶ್ರಾಂತಿ ಸಿಕ್ಕಿತು, ವರಮಾನ ಹೋಯಿತು

ಕೊರೋನ ವೈರಾಣು ಹರಡಲು ಕೆಲವು ಆಚಾರಗಳೂ ಕಾರಣ. ಅದರಲ್ಲೊಂದು, ದೇವಿಗೆ ಪೂರಣ ಪೋಳಿ ಅರ್ಪಣೆ. ಈ ಸಿಹಿಯಾದ ರೊಟ್ಟಿಯನ್ನು ಅರ್ಚಕರ ಮನೆಯ ಹೆಂಗಸರು ತಯಾರಿಸುವರು. ಅದಕ್ಕೆ ಬೇಕಾದ ಎಲ್ಲಾ  ಸಾಮಾನುಗಳನ್ನು ಭಕ್ತರು ತಂದುಕೊಡುತ್ತಾರೆ, ಅಲ್ಲಿ ಒಂದೆರಡು ಪೋಳಿಗಳನ್ನು ತಿಂದು, ಮಿಕ್ಕಿದ್ದನ್ನು ದೇವಿಗೆ ಅರ್ಪಿಸುತ್ತಾರೆ.

ಕೋವಿಡ್-19ರ ಮುಂಚೆ, ಮಂದಾಕಿನಿ ಸಾಳುಂಖೆ (62), ಪ್ರತಿ ದಿನ ೧೦೦ ಭಕ್ತರಿಗೆ ಪೂರಣ ಪೋಳಿ ತಯಾರಿಸಿಕೊಡುತ್ತಿದ್ದರು. ಅವರ ಮಗನಾದ, ನಾಗೇಶ್, 35, ಮಂದಿರದಲ್ಲಿ ಅರ್ಚಕರಾಗಿದ್ದಾರೆ. “ಹಬ್ಬದ ಸಮಯದಲ್ಲಿ ತಯಾರಿಸುವ ಸಂಖ್ಯೆಯನ್ನು ಊಹಿಸುವುದೂ ಕಷ್ಟ. ಇದನ್ನು ಮಾಡುತ್ತಾ, ನನ್ನ ಇಡೀ ಜೀವನ ಕಳೆದಿದ್ದೇನೆ,” ಅಂದರು ಆಕೆ. “ಮೊದಲ ಬಾರಿ, ಸ್ವಲ್ಪ ವಿಶ್ರಾಂತಿ ಸಿಕ್ಕಿದೆ. ಆದರೂ, ಮೊದಲನೇ ಅಲೆಯ ಸಮಯದಲ್ಲಿ ಕೆಲವರು ಬರುತ್ತಿದ್ದರು.”

ಪೂರಣ ಪೋಳಿ ಮಾಡುವುದು ಸುಲಭವೇನಲ್ಲ. ರುಚಿ ಸರಿಯಾಗಿರಬೇಕಲ್ಲದೆ, ದುಂಡಗಿರುವ ಪೋಳಿಯನ್ನು ಬಿಸಿ ಬಾಣಲೆಯ ಮೇಲೆ ಎರಡು ಕಡೆ ಕರಿಯಬೇಕು. “ತುಳಜಾಪುರದಲ್ಲಿ ಕೈ ಸುಟ್ಟಿಕೊಳ್ಳದ ಓರ್ವ ಹೆಂಗಸೂ  ಇಲ್ಲ,” ಎನ್ನುತ್ತಾರೆ ನಾಗೇಶ್ 30‌ ವರ್ಷದ ಹೆಂಡತಿ ಕಲ್ಯಾಣಿ. “ವಿಶ್ರಾಂತಿಯೇನೋ ದೊರೆತಿದೆ, ಆದರೆ ವರಮಾನ ಹೋಯಿತು.”

ನಾಗೇಶರ ಪೂರ್ವಜರೂ ಅರ್ಚಕರಾಗಿದ್ದು, ಅವರದ್ದು ಪಾರಂಪರಿಕವಾದ ಕೆಲಸ. ಅವರಿಗಿರುವುದು ಇದೊಂದೇ ಆದಾಯ ಮೂಲ. “ಭಕ್ತರು ಬೇಳೆ, ಅಕ್ಕಿ, ಎಣ್ಣೆ, ಇತ್ಯಾದಿ ತರುತ್ತಿದ್ದರು. ನಮಗೆ ಪ್ರತಿ ತಿಂಗಳು 18,000 ರೂಪಾಯಿಗಳ ವರಮಾನ ಬರುತ್ತಿತ್ತು. ಅವೆಲ್ಲವೂ ಈಗ ಸಂಪೂರ್ಣವಾಗಿ ನಿಂತುಹೋಗಿದೆ,” ಎಂದರು.

Gulchand Vyavahare led the agitation to reopen the temple
PHOTO • Parth M.N.

ಮಂದಿರ ತೆರೆಯುವ ಹೋರಾಟದ ನಾಯಕರು, ಗುಲ್‌ಚಂದ್ ವ್ಯವಹರೆ

ಮಂದಿರ ತೆರೆಯುವುದನ್ನು ತಾನು ಬೆಂಬಲಿಸುವುದಿಲ್ಲ ಎಂದು ತ್ವರಿತವಾಗಿ ವಿಶದಪಡಿಸಿದರು. “ಅರ್ಥವ್ಯವಸ್ಥೆಯ ಚೇತರಿಕೆಗಾಗಿ, ಜೀವದ ಜೊತೆಗೆ ಜೂಜಾಡಬಾರದು. ಅಸಾಮಾನ್ಯ ಪರಿಸ್ಥಿತಿಯಿದು ಎಂದು ಅರ್ಥಮಾಡಿಕೊಂಡಿದ್ದೇವೆ. ಸ್ವಲ್ಪ ಸಹಾಯದ ಅಪೇಕ್ಷೆಯಷ್ಟೆ,” ಎಂದರು.

ತೆಹಸಿಲ್‌ನ ಕಾರ್ಯಾಲಯ ಯಾತ್ರಿಕರನ್ನು ತುಳಜಾಪುರದಿಂದ ದೂರವಿಡಲು ಅರ್ಚಕರ ಮತ್ತು ನಗರವಾಸಿಗಳ ಸಹಾಯವನ್ನು ಯಾಚಿಸಿತು. “ಪ್ರಮುಖ ಅರ್ಚಕರ ಸಹಾಯದಿಂದ ಸಂಸ್ಕಾರಗಳನ್ನು ಮುಂದುವರೆಸಿದೆವು,” ಎಂದರು ತಾಂಡೇಲ್. “ಹಿಂದಿನ ವರ್ಷ, ನವರಾತ್ರಿಯ ಸಮಯದಲ್ಲಿ, ಭಕ್ತಾದಿಗಳನ್ನು ಸ್ವಾಗತಿಸಲಿಲ್ಲ. ತುಳಜಾಪುರದ ಹೊರಗಿರುವವರನ್ನು ಮಂದಿರದೊಳಗೆ ಬಿಡಲಿಲ್ಲ. ಅಹಮದ್‌ ನಗರದಿಂದ  [ಬುರಹನ್ನಗರ ದೇವಿ ಮಂದಿರ] ಪ್ರತಿ ವರ್ಷ ವಿಜರಂಭಣೆಯಿಂದ ಬರುವ ಪಲ್ಲಕ್ಕಿಯನ್ನು, ಈ ಬಾರಿ, ಎಲ್ಲೂ ನಿಲ್ಲದೆ ಕಾರಿನಲ್ಲಿ ಕಳಿಸಲು ಹೇಳಿದೆವು.”

ಅಕ್ಟೋಬರ್ 2020 ರಲ್ಲಿ, ಮೊದಲನೇ ಅಲೆ ಹಿಮ್ಮಟ್ಟಿದಾಗ, ಜನರು ಈ ಸರ್ವವ್ಯಾಪಿ ವ್ಯಾಧಿಯು ತೆರಳಿತೆಂದು ತಿಳಿದು, ಅಲಕ್ಷ್ಯ ಮಾಡಿದರು.

ತುಳಜಾಪುರ ಮಂದಿರದ ತೆರೆಯುವಿಕೆಗೆ ಕೋರಿಕೆಗಳು ಬಂದವು ಹಾಗೂ ನವೆಂಬರ್ 2020ರ ಮೊದಲನೇ ವಾರದಲ್ಲಿ ಪ್ರತಿಭಟನೆಯನ್ನೂ ಮಾಡಿದರು. ರಾಜ್ಯದ ವಿಧಾನಸಭೆಯಲ್ಲಿ ವಿರೋಧ ಪಕ್ಷವಾದ ಭಾರತೀಯ ಜನತಾ ಪಾರ್ಟಿಯ ಪದಾಧಿಕಾರಿಗಳ ನಾಯಕತ್ವದಲ್ಲಿ ಪ್ರತಿಭಟನೆ ಮಾಡಿದರು. “ಹೊಟೇಲ್, ರೆಸ್ಟೌರೆಂಟ್, ಮತ್ತು ಬಾರುಗಳು ತೆರೆದಿವೆ.  ಮಂದಿರವನ್ನೇಕೆ ಮುಚ್ಚಬೇಕು?” ಎಂದರು ಗುಲಚಂದ ವ್ಯವಹರೆ, ಬಿ.ಜೆ.ಪಿ.ಯ ಒಸ್ಮಾನಾಬಾದ್ ಜಿಲ್ಲೆಯ ಕಾರ್ಯದರ್ಶಿ. “ಜನರ ಜೀವನೋಪಾಯ ಅದರ ಮೇಲೆ ಬೆಂಬಲಿತವಾಗಿದೆ. ಮಂದಿರಗಳಿಂದಲೇ ಕೋವಿಡ್ ಹರಡುವುದೇ?”

“ತುಳಜಾಪುರದಲ್ಲಿ ಆರ್ಥಿಕತೆ, ರಾಜಕೀಯ ಮತ್ತು ನಂಬಿಕೆ ಒಂದಕ್ಕೊಂದು ಹೆಣೆದುಕೊಂಡಿವೆ ಎಂದು ಅನಾಮಧೇಯತೆಯ ಷರತ್ತಿನ ಮೇಲೆ‌ ನಮ್ಮೊಂದಿಗೆ ಮಾತನಾಡಿದ ತಹಸಿಲ್ ಅಧಿಕಾರಿಯೊಬ್ಬರು ಹೇಳುತ್ತಾರೆ.” ಇದನ್ನು ಪ್ರತ್ಯೇಕವಾಗಿ ನೋಡಲಾಗುವುದಿಲ್ಲ. ಜನರು ಆರ್ಥಿಕತೆಗೆ ಹೆಚ್ಚು ಒತ್ತು ನೀಡುತ್ತಾರೆ ಏಕೆಂದರೆ ಆರ್ಥಿಕತೆಯ ಪ್ರಶ್ನೆಯು ನಂಬಿಕೆಗಿಂತ ಹೆಚ್ಚು ಪ್ರಾಯೋಗಿಕವಾದುದು. ವಾಸ್ತವವಾಗಿ, ಈ ಮೂರು ಅಂಶಗಳು ಒಟ್ಟಾಗಿ ದೇವಾಲಯವನ್ನು ಮುಚ್ಚುವ ನಿರ್ಧಾರವನ್ನು ವಿರೋಧಿಸುವಂತೆಮಾಡಿವೆ."

ಮಂದಿರಗಳನ್ನು ತೆರೆಯುವ ಚಳುವಳಿ, ಮಹಾರಾಷ್ಟ್ರದೆಲ್ಲೆಡೆ ಹರಡಿ, ಯಶಸ್ವಿಯಾಯಿತು. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನವೆಂಬರ್-2020ರಲ್ಲಿ ಮಂದಿರಗಳನ್ನು ತೆರೆಯಲು ಅನುಮತಿ ನೀಡಿದರು.

ತುಳಜಾಪುರದ ಸ್ಥಳೀಯ ಆಡಳಿತವು ಯಾತ್ರಾರ್ಥಿಗಳಿಗೆ ಅನುಮತಿ ಪತ್ರಗಳನ್ನು ನೀಡಲು ಪ್ರಾರಂಭಿಸಿತು ಮತ್ತು ಪ್ರತಿದಿನ 2,000 ಜನರಿಗೆ ಮಾತ್ರ ನಗರವನ್ನು ಪ್ರವೇಶಿಸಲು ಅವಕಾಶ ನೀಡಲಾಯಿತು. ಈ ಸಂಖ್ಯೆ ಕ್ರಮೇಣ ಹೆಚ್ಚಾಯಿತು ಮತ್ತು ಜನವರಿ 2021ರ ವೇಳೆಗೆ ಪ್ರತಿದಿನ ಸುಮಾರು 30,000 ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಿದ್ದರು. ಅವರನ್ನು ನಿಭಾಯಿಸುವುದು ಕಷ್ಟವಾಯಿತು ಎನ್ನುತ್ತಾರೆ ಜಯಸಿಂಗ್, 30 ಸಾವಿರ ಮಂದಿಗೆ ಅವಕಾಶ ನೀಡುವಾಗ ಇನ್ನೂ 10 ಸಾವಿರ ಮಂದಿ ಅನುಮತಿ ಇಲ್ಲದೆ ದೇವಸ್ಥಾನ ಪ್ರವೇಶಿಸಲು ಯತ್ನಿಸುತ್ತಿರುವುದು ಕಂಡುಬಂದಿತು. ದೂರದಿಂದಲೂ ದೇವಿಯ ದರ್ಶನಕ್ಕೆ ಬಂದರು, ಭಕ್ತರು ನಿಲ್ಲಲು, ಕೇಳಲು ಮುಂದಾಗುತ್ತಿಲ್ಲ. ಯಾವುದೇ ಕಾರಣಕ್ಕಾಗಿ, ಸಾಂಕ್ರಾಮಿಕ ರೋಗದ ಎರಡನೇ ಅಲೆಯ ನಂತರವೂ, ಅಲಕ್ಷ್ಯ ಮಾಡಬಾರದು. ಕೆಲವರಿಗೆ ವೈರಾಣುವನ್ನು ಅಲಕ್ಷಿಸುವುದು ಸುಲಭ. ಅನುಭವಿಸುವವರೆಗೂ, ಅದರ ತೀವ್ರತೆ ಅರ್ಥವಾಗುವುದಿಲ್ಲ.“‌

Nagesh Salunkhe has been losing out on the earnings from performing poojas in the Tuljapur temple (right)
PHOTO • Parth M.N.
Nagesh Salunkhe has been losing out on the earnings from performing poojas in the Tuljapur temple (right)
PHOTO • Parth M.N.

ತುಳಜಾಪುರ ಮಂದಿರದ (ಬಲಕ್ಕೆ) ಪೂಜೆಯಿಂದ ಬರುವ ವರಮಾನ ಕಳೆದುಕೊಳ್ಳುತ್ತಿರುವ ನಾಗೇಶ್ ಸಾಳುಂಖೆ

ತುಳಜಾಪುರದ ಮಂದಿರಕ್ಕೆ ಜನರು ಆಗಮಿಸಿದಂತೆ, ಒಸ್ಮಾನಾಬಾದ್ನಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಯಿತು. ಫೆಬ್ರುವರಿಯಲ್ಲಿ, ಜಿಲ್ಲೆಯಲ್ಲಿ 380 ಕೋವಿಡ್ ಪ್ರಕರಣಗಳು ದಾಖಲಾಗಿತ್ತು. ಮಾರ್ಚಿಯಲ್ಲಿ ಅದೇ ಸಂಖ್ಯೆ 3,050 ಆಗಿತ್ತು – 9 ಪಟ್ಟು ಹೆಚ್ಚು. ಏಪ್ರಿಲ್‌ ತಿಂಗಳಿನಲ್ಲಿ, ಈ ಸಂಖ್ಯೆ 17,800 ತಲುಪಿದಾಗ, ಒಸ್ಮಾನಾಬಾದ್‌ನ ಆರೋಗ್ಯ ಸೌಕರ್ಯಗಳ ಮೇಲೆ ಒತ್ತಡ ಬಿತ್ತು.

“ತುಳಜಾಪುರದ ಮಂದಿರವನ್ನು ಬಿಟ್ಟು, ಒಸ್ಮಾನಾಬಾದಿನಲ್ಲಿ ಬೇರೆಲ್ಲೂ ಈ ರೀತಿಯಲ್ಲಿ ಜನ ಒಗ್ಗೂಡಲಿಲ್ಲ,” ಅನಾಮಿಕ ಜಿಲ್ಲಾಧಿಕಾರಿ ಹೇಳಿದರು. “ನಿಸ್ಸಂದೇಹವಾಗಿ ಕೋವಿಡ್ನ ಎರಡನೇ ಅಲೆಯು ಇದರಿಂದ ತೀವ್ರಗೊಂಡಿತು. (ಉತ್ತರ ಪ್ರದೇಶದ) ಕುಂಭ ಮೇಳದಂತೆ, ಚಿಕ್ಕ ಪ್ರಮಾಣದಲ್ಲಿ.”

ಕೋವಿಡ್-19ರ ಎರಡನೇ ಅಲೆಯಲ್ಲಿ ಅರ್ಚಕರನ್ನು ಪರೀಕ್ಷಿಸಿದಾಗ,32 ಶೇಕಡ ಪಾಸಿಟಿವ್ ಬಂದಿತು. 50 ಮಂದಿ ವಿಧಿವಶರಾದರು, ಎಂದರು ತಾಂಡೇಲ್.

ಕೋವಿಡ್ ಪ್ರಕರಣಗಳಲ್ಲಿ ಮತ್ತು ಮಾರಣಾಂತ ಅನುಪಾತದಲ್ಲಿ‌, ಒಸ್ಮಾನಾಬಾದ್‌ನ ಎಂಟು ತೆಹಸಿಲ್‌ಗಳಲ್ಲಿ, ತುಳಜಾಪುರದ್ಡು ಎರಡನೆಯ ಸ್ಥಾನ. ಜಿಲ್ಲೆಯ ಏಕೈಕ ಜನತಾ ಆಸ್ಪತ್ರೆ – ಸಿವಿಲ್ ಆಸ್ಪತ್ರೆ – ಒಸ್ಮಾನಾಬಾದ್ ತೆಹಸಿಲ್‌ನಲ್ಲಿದ್ದು, ಜಿಲ್ಲೆಯೆಲ್ಲೆಡೆಯಿಂದ ಗಂಭೀರವಾದ ರೋಗಿಗಳು ಇಲ್ಲಿಯೇ ಚಿಕಿತ್ಸೆಗೆ ಬರುವರು. ಹಾಗಾಗಿ, ಒಸ್ಮಾನಾಬಾದ್ ತೆಹಸಿಲ್‌ನ ಕೋವಿಡ್ ಪ್ರಕರಣ ಸಂಖ್ಯೆ ಮತ್ತು ಮಾರಣಾಂತ ಅನುಪಾತವು ಅತ್ಯಧಿಕವಾಗಿ ದಾಖಲಾಗಿದೆ.

ಬರ, ಸಾಲ, ಯಾತನೆ ಮತ್ತು ಮಹಾರಾಷ್ಟ್ರದಲ್ಲಿ ಅತ್ಯಧಿಕ ಕೃಷಿಕರ ಆತ್ಮಹತ್ಯೆ ವೀಕ್ಷಿಸಿದ ಮರಾಠವಾಡ ಕೃಷಿ ಪ್ರದೇಶದಲ್ಲಿ ಒಸ್ಮಾನಾಬಾದ್ ಇದೆ. ಜಿಲ್ಲೆಯ ನೀರಿನ ಕೊರತೆ, ಹವಾಮಾನ ಬದಲಾವಣೆ, ಮತ್ತು ಕೃಷಿ ಸಂಕಟದ ಜೊತೆ ಹೋರಾಡುತ್ತಿರುವ ಜನರು ಆರೋಗ್ಯಕ್ಕಾಗಿ ವೈದ್ಯಕೀಯ ಸೌಕರ್ಯಗಳ ಮೇಲೂ ಅವಲಂಬಿರಾಗುವುದು ಅಸಾಧ್ಯ.

Sandeep Agarwal does not mind losing sales from shutting his grocery shop until it is safe for the town to receive visitors
PHOTO • Parth M.N.

ಭಕ್ತಾದಿಗಳು ಹಿಂತಿರುಗಲು ಕ್ಷೇಮದ ವಾತಾವಾರಣ ಬರುವವರೆಗೂ ಸರಕಿನಂಗಡಿ ಮುಚ್ಚಲು ಸಿದ್ಧರಿರುವ ಸಂದೀಪ್ ಅಗರವಾಲ್‌

ಈ ವರ್ಷ, ಏಪ್ರಿಲ್ ನಲ್ಲಿ, ತುಳಜಾ ಭವಾನಿ ಮಂದಿರ ಪುನಃ ಬಾಗಿಲು ಹಾಕಿದಾಗ, ತುಳಜಾಪುರದ ಬೀದಿಗಳು ಖಾಲಿಯಾಗಿದ್ದವು, ಅಂಗಡಿಗಳು ಮುಚ್ಚಿದವು, ಸಾಲಾಗಿ ಎರಡನೇ ವರ್ಷ ನಗರಕ್ಕೆ ನಿಗೂಢವಾದ ನಿಶ್ಶಬ್ಧತೆ ಮರಳಿತು.

“ಈ [ರಾಜಕೀಯದ] ಸಮಯದಲ್ಲಿ ಮಂದಿರವನ್ನು ಸುದೀರ್ಘ ಕಾಲ ಮುಚ್ಚುವುದು ಕಷ್ಟ,” ಎಂದು ಅನಾಮಿಕರಾಗಿರಲು ಇಚ್ಛಿಸಿದ ಓರ್ವ ಜಿಲ್ಲಾಧಿಕಾರಿ ಹೇಳಿದರು. “ಕಾನೂನು ಮತ್ತು ಸುವ್ಯವಸ್ಥೆಗೆ ಸಮಸ್ಯೆಯಾಗಬಹುದು.”

ಕುಗ್ಗುತ್ತಿರುವ ಅರ್ಥವ್ಯವಸ್ಥೆಯಿಂದ ತೊಂದರೆಯಾದರೂ, ತುಳಜಾಪುರವಾಸಿಗಳು ಕ್ಷೇಮವಾಗಿರಲು ತೀರ್ಮಾನಿಸಿದರು.

ನಗರದಲ್ಲಿ ಕಿರಾಣ ಅಂಗಡಿ ನಡೆಸುವ 43 ವಯಸ್ಸಿನ ಸಂದೀಪ್ ಅಗರವಾಲ್ 30‌,000 ರೂಪಾಯಿಗಳ  ಪ್ರತಿದಿನದ ವ್ಯವಹಾರ ಈಗ ಶೂನ್ಯವಾಗಿದೆ. “ದೇಶದ ಬಹುತೇಕ ಜನರಿಗೆ ಲಸಿಕೆ ದೊರಕುವವರೆಗು ಮಂದಿರ ತೆಗೆಯುವುದು ನನಗಿಷ್ಟವಿಲ್ಲ,” ಮುಚ್ಚಿದ ಅಂಗಡಿಗಳ ಬಳಿನಿಂತು ಹೇಳಿದರು. “ನಾವು ಬದುಕುವುದು ಒಂದೇ ಬಾರಿ. ಈ ವ್ಯಾಧಿಯಿಂದ ಪಾರಾದರೆ, ಅರ್ಥವ್ಯವಸ್ಥೆ ಸರಿ ಮಾಡಬಹುದು. ಮಂದಿರವನ್ನು ತೆರೆಯಲು ಯಾಚಿಸುತ್ತಿರುವವರಾರು ಒಸ್ಮಾನಾಬಾದ್‌ ನಿವಾಸಿಗಳಲ್ಲ.”

ಅಗರವಾಲರ ಮಾತುಗಳು ಸರಿಯಿವೆ.

ತುಳಜಾ ಭವಾನಿ ಮಂದಿರದ ಹಿರಿಯ ಅರ್ಚಕರಾದ, ತುಕೊಜಿಬುವಾ (ಮಹಾಂತ)  ಮಂದಿರ ಯಾವಾಗ ತೆರೆಯುವುದೆಂದು  ಪ್ರತಿದಿನ ದೇಶದೆಲ್ಲೆಡೆಯಿಂದ 20 ಕರೆಗಳಾದರೂ ಬರುವವು. “ಜನರ ಜೀವ ಆಪತ್ತಿನಲ್ಲಿದೆ, 2020 ಮತ್ತು 2021ನೇ ಇಸವಿಯನ್ನು ಆರೋಗ್ಯಕ್ಕಾಗಿ ಮೀಸಲಿಟ್ಟಿದ್ದೇವೆಂದು ಅವರಿಗೆ ಹೇಳುತ್ತೇನೆ,” ಅವರೆಂದರು. “ನೀವು ಮತ್ತು ನಿಮ್ಮ ಧರ್ಮದ ನಡುವೆ ರೋಗಾಣು ಬರಲು ಅಸಾಧ್ಯ. ಇದ್ದಲ್ಲಿ ಇದ್ದು ದೇವಿಗೆ ಪ್ರಣಾಮಗಳನ್ನು ಸಲ್ಲಿಸಿ.”

ಆದರೆ, ತುಳಜಾ ಭವಾನಿಯ ಭಕ್ತರು ಆಕೆಯ ಆಶೀರ್ವಾದವನ್ನು ಖುದ್ದಾಗಿ ಅಥವಾ ಮಂದಿರದ ಬಾಗಿಲನ್ನು ಮುಟ್ಟಿಯಾದರೂ ಸ್ವೀಕರಿಸಲು ಇಚ್ಛಿಸುವರೆಂದು ಮಹಾಂತರು ಹೇಳಿದರು.

Mahant Tukojibua has been convincing the temple's devotees to stay where they are and pray to the goddess from there
PHOTO • Parth M.N.

ಮಂದಿರದ ಭಕ್ತರಿಗೆ ಇದ್ದಲ್ಲೆ ಇದ್ದು, ಅಲ್ಲಿಂದಲೇ ದೇವಿಯಲ್ಲಿ ಪ್ರಾರ್ಥಿಸುವಂತೆ ಮನವೊಲಿಸುತ್ತಿರುವ ಮಹಾಂತ ತುಕೊಜಿಬುವಾ

ತುಕೊಜಿಬುವಾರವರ ಪೂಜೆ ಮುಗಿಯುತ್ತಿದ್ದಂತೆ, ತುಳಜಾಪುರದಿಂದ ೩೦೦ ಕಿಲೋಮೀಟರ್ ದೂರದಲ್ಲಿರುವ ಪುಣೆಯಿಂದ ಕರೆ ಬಂತು.

“ಸಾಷ್ಟಾಂಗ ಪ್ರಣಾಮಗಳು,” ಭಕ್ತರು ಮಹಾಂತರನ್ನು ನಮಸ್ಕರಿಸಿದರು.

“ಹೇಗಿದ್ದೀರಿ?” ಮಹಾಂತರು ವಿಚಾರಿಸಿದರು.

“ಮಂದಿರ ತೆರೆಯಬೇಕು ಬೇಗನೆ,” ಪುಣೆಯಿಂದ ಕರೆಮಾಡಿದವರು ಬೇಡಿದರು. “ದೇವರು ಎಂದೂ ಯಾವ ತಪ್ಪು ಮಾಡುವುದಿಲ್ಲ. ನಾವು ಒಳ್ಳೇದನ್ನೇ ಯೋಚಿಸಬೇಕು. ನಾವು ಏನೇ ಆಗಿದ್ದರು ಎಷ್ಟೇ ಮುಂದುವೆರೆದಿದ್ದರು, ಅದು ತುಳಜಾ ಭವಾನಿಯಿಂದಲೇ. ಡಾಕ್ಟರುಗಳು ಕೂಡ ದೇವರಲ್ಲಿ ನಂಬಿಕೆ ಇಡೀ ಎನ್ನುತ್ತಾರೆ,” ಎಂದು ಪ್ರಾರ್ಥಿಸಿದರು.

ಇಂಟರ್ನೆಟ್ ಮೂಲಕ ಪೂಜೆಯನ್ನು ನೋಡಬಹುದೆಂದು ತುಕೊಜಿಬುವಾ ಕರೆ ಮಾಡಿದವರಿಗೆ ತಿಳಿಸಿದರು.

ಭಕ್ತರು ಅರ್ಥ ಮಾಡಿಕೊಳ್ಳಲಿಲ್ಲ. “ಮಂದಿರದ ಜನಸಮೂಹದಿಂದ ಕೋವಿಡ್ ಹರಡಲು ಅಸಾಧ್ಯ,” ಎಂದು ಮಹಾಂತರಿಗೆ ಹೇಳಿ, ಮಂದಿರ ತೆರೆದ ಕೂಡಲೇ ಆ 300 ಕಿಲೋಮೀಟರ್ ನಡೆದು ಬರುವರೆಂದು ಪ್ರತಿಜ್ಞೆ ಮಾಡಿದರು.

ಅನುವಾದ: ಶ್ರೀನಾಥ್ ರಣ್ಯ

Parth M.N.

Parth M.N. is a 2017 PARI Fellow and an independent journalist reporting for various news websites. He loves cricket and travelling.

Other stories by Parth M.N.
Translator : Srinath Ranya

Srinath Ranya is a researcher studying nanomaterials at the University of California, Berkeley. He enjoys watching cricket, writing and translation, and discussions on society, and culture.

Other stories by Srinath Ranya