ಲೆನಿನ್‌ ದಾಸನ್ 30 ಬಗೆಯ ಭತ್ತವನ್ನು ಬೆಳೆಯುತ್ತಾರೆ. ಜೊತೆಗೆ ತಮ್ಮ ಊರಿನ ರೈತರು ಬೆಳೆದ ಇನ್ನೂ 15 ಬಗೆಯ ಭತ್ತಗಳನ್ನು ಸಹ ಮಾರುತ್ತಾರೆ. ಮತ್ತು ಅವರು 80 ರೀತಿಯ ಭತ್ತದ ಬೀಜಗಳನ್ನು ಸಂರಕ್ಷಿಸುತ್ತಾರೆ. ಇದೆಲ್ಲವೂ ಸಾಧ್ಯವಾಗಿರುವುದು ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯಲ್ಲಿರುವ ಅವರ ಕುಟುಂಬದ ಆರು ಎಕರೆ ಜಮೀನಿನಲ್ಲಿ.

ಹಾಗೆಂದು ಇದೊಂದು ಸಂಖ್ಯಾ ಅದ್ಭುತವಷ್ಟೇ ಅಲ್ಲ. ದೀರ್ಘಕಾಲದಿಂದ ನಿರ್ಲಕ್ಷಿಸಲ್ಪಟ್ಟ ಈ ಸಾಂಪ್ರದಾಯಿಕ ಭತ್ತದ ತಳಿಗಳು ಆ ಪ್ರದೇಶದ ಸಣ್ಣ ಮತ್ತು ಅತಿಸಣ್ಣ ಕೃಷಿಭೂಮಿಗಳಿಗೆ ಹೆಚ್ಚು ಸೂಕ್ತವಾಗಿರವವು ಸಹ ಹೌದು. ಲೆನಿನ್ ಮತ್ತು ಅವರ ಸ್ನೇಹಿತರು ಆಧುನಿಕ ಭತ್ತದ ತಳಿಗಳನ್ನು ಬದಲಾಯಿಸಲು ಮತ್ತು ಏಕಬೆಳೆ ಪದ್ಧತಿಯನ್ನು ವಿರೋಧಿಸಲು ಪ್ರಯತ್ನಿಸುತ್ತಿದ್ದಾರೆ. ಕಳೆದುಹೋದ ವೈವಿಧ್ಯತೆಯನ್ನು ಪುನಃಸ್ಥಾಪಿಸುವುದು ಅವರ ಯೋಜನೆಯಾಗಿದೆ. ಅದರ ಜೊತೆಗೆ ಹೊಸದೊಂದು ಭತ್ತದ ಕ್ರಾಂತಿ ನಡೆಸುವುದು ಕೂಡಾ.

ಇದು ಈ ಕಾಲದ ಲೆನಿನ್‌ ನಡೆಸುತ್ತಿರುವ ಕ್ರಾಂತಿ, ಮತ್ತೊಂದು ಬಗೆಯ ಕ್ರಾಂತಿ.

ಪೋಲೂರು ತಾಲ್ಲೂಕಿನ ಸೆಂಗುನಮ್ ಗ್ರಾಮದಲ್ಲಿರುವ ಅವರ ಹೊಲದ ಪಕ್ಕದಲ್ಲಿರುವ ಮೇಕೆ ಶೆಡ್ಡಿನಲ್ಲಿ ಅವರು ನೂರಾರು ಮೂಟೆ ಚೀಲಗಳನ್ನು ಸಂಗ್ರಹಿಸಿಟ್ಟಿದ್ದಾರೆ.

ಹೊರಗಿನಿಂದ ನೋಡಿದಾಗ ಆ ಸಣ್ಣ ಕಟ್ಟಡವು ಅಷ್ಟೇನೂ ಗಮನಾರ್ಹ ಎನ್ನಿಸುವುದಿಲ್ಲ. ನಾವು ಹೆಜ್ಜೆ ಹಾಕಿದಂತೆ ಆ ಅನಿಸಿಕೆ ಬೇಗನೆ ಬದಲಾಗುತ್ತದೆ. "ಇದು ಕರುಪ್ಪು ಕಾವುನಿ, ಅದು ಸೀರಗ ಸಾಂಬಾ", ಎಂದು ಲೆನಿನ್ ಅಕ್ಕಿ ಮೂಟೆಗಳನ್ನು ಕೊರೆಯಿಂದ ಚುಚ್ಚುತ್ತಾ ಮತ್ತು ಧಾನ್ಯಗಳನ್ನು ಹೊರತೆಗೆಯುತ್ತಾ ಹೇಳುತ್ತಾರೆ. ಅವರು ಈ ಎರಡು ಪಿತ್ರಾರ್ಜಿತ ಪ್ರಭೇದಗಳನ್ನು ತನ್ನ ಅಂಗೈಯಲ್ಲಿ ಹಿಡಿದಿದ್ದಾರೆ. ಮೊದಲನೆಯದು ಕಪ್ಪು ಮತ್ತು ಹೊಳೆಯುತ್ತದೆ, ಎರಡನೆಯದು ತೆಳ್ಳಗಿರುತ್ತದೆ ಮತ್ತು ಸುವಾಸನೆಯಿಂದ ಕೂಡಿರುತ್ತದೆ. ಒಂದು ಮೂಲೆಯಿಂದ, ಅವರು ಹಳೆಯ ಕಬ್ಬಿಣದ ಅಳತೆ ಸಾಮಾಗ್ರಿಗಳನ್ನು ತರುತ್ತಾರೆ: ವಿವಿಧ ಪ್ರಮಾಣದ ಭತ್ತವನ್ನು ಹಿಡಿದಿಡುವ ಪಡಿ, ಮರಕ್ಕ.

ಈ ಶೆಡ್ಡಿನಿಂದಲೇ ಹೆಚ್ಚು ಸದ್ದು ಗದ್ದಲವಿಲ್ಲದೆ ಅಕ್ಕಿಯನ್ನು ತೂಕ ಮಾಡಿ ಬೆಂಗಳೂರು, ನಾಗರಕೋಯಿಲ್‌ ತನಕ ಕಳುಹಿಸುತ್ತಾರೆ. ಅವರ ಕೆಲಸವನ್ನು ನೋಡುತ್ತಿದ್ದರೆ ಅವರು ದಶಕಗಳಿಂದ ಈ ಕೆಲಸ ಮಾಡುತ್ತಿರಬಹುದು ಎನ್ನಿಸುತ್ತದೆ. ಆದರೆ ಅವರು ಈ ವ್ಯವಹಾರದಲ್ಲಿ ತೊಡಗಿ ಕೇವಲ ಆರು ವರ್ಷಗಳಷ್ಟೇ ಕಳೆದಿವೆ.

PHOTO • M. Palani Kumar
PHOTO • M. Palani Kumar

ಎಡ: ಲೆನಿನ್ ಅವರ ಭತ್ತದ ಗದ್ದೆ. ಬಲ: ಅವರು ನಮಗೆ ಕೇವಲ ಒಕ್ಕಣೆ ಮಾಡಿದ ಭತ್ತದ ಬೀಜಗಳನ್ನು ತೋರಿಸುತ್ತಾರೆ

PHOTO • M. Palani Kumar
PHOTO • M. Palani Kumar

ಎಡ: ಲೆನಿನ್ ತನ್ನ ಗೋದಾಮಿನೊಳಗೆ ಕೆಲಸ ಮಾಡುತ್ತಿದ್ದಾರೆ. ಬಲ: ಕರುಪ್ಪು ಕಾವುನಿ, ಪರಂಪರಾಗತ ಅಕ್ಕಿ

"ನಮ್ಮ ಸೀಮೆಯಲ್ಲಿ ಭತ್ತ ಇದ್ದಿರಲೇ ಇಲ್ಲ" ಎಂದು 34 ವರ್ಷದ ಲೆನಿನ್ ಮುಗುಳ್ನಕ್ಕರು. ಈ ಜಿಲ್ಲೆಯ ಮಳೆಯಾಶ್ರಿತ ಭೂಮಿ ಬಹಳ ಹಿಂದಿನಿಂದಲೂ ದ್ವಿದಳ ಧಾನ್ಯಗಳು ಮತ್ತು ಎಣ್ಣೆಕಾಳುಗಳು ಮತ್ತು ಸಿರಿಧಾನ್ಯಗಳಿಗೆ ನೆಲೆಯಾಗಿದೆ. "ನಮ್ಮ ಪರಂಪರೈ (ವಂಶದಲ್ಲಿ) ಯಲ್ಲಿ ಭತ್ತದ ಕೃಷಿ ಇಲ್ಲ." ಅವರ ತಾಯಿ 68 ವರ್ಷದ ಸಾವಿತ್ರಿ ಕಾರಾಮಣಿ (ಅಲಸಂದೆ) ಬೆಳೆದು ಮಾರಾಟ ಮಾಡುತ್ತಿದ್ದರು. ಅವರು ತಾನು ಮಾರಿದ ಪ್ರತಿ ನಾಲ್ಕು ಅಳತೆಗೆ ಒಂದು ಮುಷ್ಟಿ ಕಾಳನ್ನು ಉಚಿತವಾಗಿ ನೀಡುತ್ತಿದ್ದರು. "ಅಮ್ಮ ಕೊಟ್ಟಿದ್ದರ ಮೌಲ್ಯವನ್ನು ಕೂಡಿದರೆ, ಅದು ಈಗ ಸಾಕಷ್ಟು ದೊಡ್ಡ ಮೊತ್ತದ ಹಣವಾಗಿರುತ್ತಿತ್ತು!" ಅವರ ಕುಟುಂಬದ ಮುಖ್ಯ ಬೆಳೆ ಕಳಕ್ಕಾ (ನೆಲಗಡಲೆ), ಇದನ್ನು ಅವರ ತಂದೆ 73 ವರ್ಷದ ಏಳುಮಲೈ ಬೆಳೆದು ಮಾರಾಟ ಮಾಡುತ್ತಾರೆ. "ಕಳಕ್ಕಾ ಹಣ ಅಪ್ಪನಿಗೆ ಹೋಗುತ್ತಿತ್ತು. ಮತ್ತು ಅಡ್ಡ ಬೆಳೆ ಕಾರಾಮಣಿಯಿಂದ ಬರುವ ಆದಾಯವು ಅಮ್ಮನಿಗೆ."

ಲೆನಿನ್ ಅವರ 'ನಾನು ರೈತನಾಗುವ ಮೊದಲು' ಕಥೆ ಚೆನ್ನೈಯಿಂದ ಪ್ರಾರಂಭವಾಗುತ್ತದೆ, ಅಲ್ಲಿ ಅವರು ಸಹ ಕಾರ್ಪೊರೇಟ್ ಉದ್ಯೋಗಿಯಾಗಿದ್ದರು, ಎರಡು ಪದವಿಗಳನ್ನು ಹೊಂದಿರುವ ಅವರು (ಜೊತೆಗೆ ಅರ್ಧಕ್ಕೆ ನಿಲ್ಲಿಸಿದ ಸ್ನಾತಕೋತ್ತರ ಪದವಿ) ಉತ್ತಮ ಸಂಬಳಕ್ಕಾಗಿ ಕೆಲಸ ಮಾಡುತ್ತಿದ್ದರು. ಆದರೆ ನಂತರ ಅವರು ರೈತನ ಕುರಿತಾದ ಹೃದಯಸ್ಪರ್ಶಿ ಚಲನಚಿತ್ರವೊಂದನ್ನು ನೋಡಿದರು: ಒಂಬೋದು ರುಪೈ ನೊಟ್ಟು (ಒಂಬತ್ತು ರೂಪಾಯಿ ನೋಟು). ಅದು ಅವರಲ್ಲಿ ತನ್ನ ಹೆತ್ತವರೊಂದಿಗೆ ವಾಸಿಸುವ ಹಂಬಲವನ್ನು ಹುಟ್ಟುಹಾಕಿತು. ಲೆನಿನ್ 2015ರಲ್ಲಿ ಮನೆಗೆ ಮರಳಿದರು.

"ಆಗ ನನಗೆ 25 ವರ್ಷ. ಆಗೆಲ್ಲ ನನಗೆ ಭವಿಷ್ಯದ ಕುರಿತು ಯೋಜನೆಗಳಿರಲಿಲ್ಲ. ಊರಿಗೆ ಬಂದು ತರಕಾರಿ ಮತ್ತು ದ್ವಿದಳ ಧಾನ್ಯಗಳನ್ನು ಬೆಳೆದಿದ್ದೆ." ಮೂರು ವರ್ಷಗಳ ನಂತರ, ಅನೇಕ ಅಂಶಗಳು ಸೇರಿ ಅವರನ್ನು ಭತ್ತ ಮತ್ತು ಕಬ್ಬು ಬೆಳೆಯುವಂತೆ ಮಾಡಿದವು. ಯಂತ್ರೋಪಕರಣಗಳು, ಮಾರುಕಟ್ಟೆಗಳು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ, ಕೋತಿಗಳು ಅವರ ನಿರ್ಧಾರದ ಮೇಲೆ ಪ್ರಭಾವ ಬೀರಿದವು.

ಜೊತೆಗೆ ಮಳೆ, ಅವರು ಹೇಳುತ್ತಾರೆ. “ರೈತರು ʼಹವಾಗುಣ ಬದಲಾವಣೆʼ ಎನ್ನುವ ಪದವನ್ನು ಬಳಸದೆ ನಿಮ್ಮೊಡನೆ ಅದರ ಕುರಿತು ಮಾತನಾಡಬಲ್ಲರು” ಎನ್ನುವ ಲೆನಿನ್ ಅಕಾಲಿಕ ಮಳೆಗೆ ಕಾಯುವುದು ಎಂದಿಗೂ ಬಾರದ ಅತಿಥಿ ಊಟಕ್ಕೆ ಬರುವುದನ್ನು ಕಾಯುವಂತಾಗಿದೆ ಎನ್ನುತ್ತಾರೆ. “ನೀವು ಹಸಿವೆಯಿಂದ ಸತ್ತ ನಂತರ ಆ ಅತಿಥಿ ಹಾರದೊಂದಿಗೆ ಬಂದಿರುತ್ತಾನೆ.”

ಬೇವಿನ ಮರದ ಕೆಳಗೆ, ಗ್ರಾನೈಟ್ ಬೆಂಚಿನ ಮೇಲೆ ಕುಳಿತು, ರಸಭರಿತ ಮಾವಿನಹಣ್ಣುಗಳನ್ನು ತಿನ್ನುತ್ತಾ, ಲೆನಿನ್ ಮೂರು ಗಂಟೆಗಳ ಕಾಲ ನಮ್ಮೊಂದಿಗೆ ಮಾತನಾಡಿದರು, ತಮಿಳುನಾಡಿನ ಸಾವಯವ ಕೃಷಿಯ ಪಿತಾಮಹ, ಪ್ರಾಚೀನ ತಮಿಳು ಕವಿ ತಿರುವಳ್ಳುವರ್, ನಮ್ಮಾಳ್ವರ್ ಮತ್ತು ಪ್ರಸಿದ್ಧ ಅಕ್ಕಿ ಸಂರಕ್ಷಕ ದೇಬಲ್ ದೇಬ್ ಅವರನ್ನು ಮಾತಿನ ನಡುವೆ ಅವರು ಉಲ್ಲೇಖಿಸಿದರು. ಸಾಂಪ್ರದಾಯಿಕ ತಳಿಗಳು ಮತ್ತು ಸಾವಯವ ಕೃಷಿಯನ್ನು ಆಳವಡಿಸಿಕೊಳ್ಳುವುದು ಅತ್ಯಗತ್ಯ ಮತ್ತು ಅನಿವಾರ್ಯ ಎಂದು ಲೆನಿನ್ ಹೇಳುತ್ತಾರೆ.

ನಾಲ್ಕು ವರ್ಷಗಳಲ್ಲಿ ಮೂರು ಸಭೆಗಳಲ್ಲಿ, ಅವರು ಕೃಷಿ, ಹವಾಮಾನ ಬದಲಾವಣೆ, ಜೀವವೈವಿಧ್ಯ ಮತ್ತು ಮಾರುಕಟ್ಟೆಗಳ ಬಗ್ಗೆ ನನಗೆ ಶಿಕ್ಷಣ ನೀಡಿದ್ದಾರೆ.

ಇದು ಲೆನಿನ್ ಅವರ ಕಥೆ. ಮತ್ತು ಇಲ್ಲಿನ ಮಳೆಯಾಶ್ರಿತ ಭೂಮಿ, ಅದರಲ್ಲಿನ ಆಳಕ್ಕೆ ಕೊರೆದ ಕೊಳವೆ ಬಾವಿಗಳು, ತಮ್ಮ ಹೆಸರುಗಳಲ್ಲಿ ಅಂಕಿಗಳು ಮತ್ತು ಅಕ್ಷರಗಳನ್ನು ಹೊಂದಿರುವ ಬೀಜಗಳ ಕತೆಯೂ ಹೌದು…

PHOTO • M. Palani Kumar
PHOTO • M. Palani Kumar

ಲೆನಿನ್ ಅವರ ತಾಯಿ ಸಾವಿತ್ರಿ ಅಕ್ಕಿಯನ್ನು ಅಳೆಯಲು ಬಳಸುವ ಕಬ್ಬಿಣದ ಪಾತ್ರೆಗಳಾದ ಪಡಿ ಮತ್ತು ಮರಕ್ಕ (ಎಡ) ಪ್ರದರ್ಶಿಸುತ್ತಾರೆ. ಅವರು ಸಾಂಪ್ರದಾಯಿಕ ತಳಿಯಾದ ತೂಯಮಲ್ಲಿ ಭತ್ತವನ್ನು (ಬಲಕ್ಕೆ) ಪಡಿಗೆ ತುಂಬುತ್ತಾರೆ

*****

ಪರ್ವತದೆತ್ತರದ ಭತ್ತದ ರಾಶಿ
ಹೋರಿಗಳನ್ನು ಹೊಂದಿರುವ
ಓ ರೈತನೇ!
ಲಗುಬಗೆಯಿಂದ ಏಳುವೆ
ಮುಂಜಾನೆಯಲ್ಲೇ ಅರೆ ನಿದ್ರೆಯಲ್ಲಿ
ಉಣ್ಣುವೆ ನೀನು ಒಳ್ಳೆಯ ಅನ್ನ
ಮತ್ತು ಕಪ್ಪು ಕಣ್ಣಿನ ವರಾಲ್‌ ಮೀನನ್ನು.

ನಟ್ರಿನೈ 60, ಮರುದಮ್ ತಿನೈ.

ತಮಿಳುನಾಡು ಹಿಂದಿನಿಂದಲೂ ಭತ್ತದ ನೆಲೆ. ಈ ಸುಂದರ ಕವಿತೆ ರೈತ, ಅವನ ಕಣಜ, ಮತ್ತು ಅವನ ಆಹಾರದ ಕುರಿತು ಹೇಳುತ್ತದೆ. ಈ ಕವಿತೆ ಸುಮಾರು 2,000 ವರ್ಷಗಳ ಹಿಂದಿನ ಸಂಗಮ್ ಯುಗಕ್ಕೆ ಸೇರಿದ್ದು. ಸುಮಾರು 8 ಸಹಸ್ರಮಾನಗಳಿಂದ ಉಪಖಂಡದಲ್ಲಿ ಭತ್ತವನ್ನು ಬೆಳೆಯಲಾಗುತ್ತಿದೆ.

"ಪುರಾತತ್ವಶಾಸ್ತ್ರೀಯ ಮತ್ತು ಜಿನೆಟಿಕ್ ಪುರಾವೆಗಳು ಏಷ್ಯಾದ ಭತ್ತಗಳ ಇಂಡಿಕಾ ಉಪಜಾತಿಗಳನ್ನು (ಭಾರತ ಉಪಖಂಡದಲ್ಲಿ ಕೃಷಿ ಮಾಡಲಾಗುವ ಬಹುತೇಕ ಎಲ್ಲಾ ಅಕ್ಕಿ ಈ ಗುಂಪಿಗೆ ಸೇರಿದೆ) ಪೂರ್ವ ಹಿಮಾಲಯದ ತಪ್ಪಲಿನಲ್ಲಿ ಸುಮಾರು 7,000ರಿಂದ 9,000 ವರ್ಷಗಳ ಹಿಂದೆ ಬೆಳೆಯಲಾಗುತ್ತಿತ್ತು ಎಂದು ಸೂಚಿಸುತ್ತದೆ" ಎಂದು ಸೈಂಟಿಫಿಕ್ ಅಮೆರಿಕನ್ ಪತ್ರಿಕೆಯಲ್ಲಿ ದೇಬಲ್ ದೇಬ್ ಬರೆಯುತ್ತಾರೆ. "ಮುಂದಿನ ಸಹಸ್ರಮಾನಗಳಲ್ಲಿ ಸಾಕುಪ್ರಾಣಿಗಳು ಮತ್ತು ಕೃಷಿಯ ನಂತರ, ಸಾಂಪ್ರದಾಯಿಕ ರೈತರು ವೈವಿಧ್ಯಮಯ ಮಣ್ಣು, ಸ್ಥಳಾಕೃತಿಗಳು ಮತ್ತು ಸೂಕ್ಷ್ಮ ಹವಾಮಾನಗಳಿಗೆ ಸಂಪೂರ್ಣವಾಗಿ ಹೊಂದಿಕೊಳ್ಳುವ ಮತ್ತು ನಿರ್ದಿಷ್ಟ ಸಾಂಸ್ಕೃತಿಕ, ಪೌಷ್ಠಿಕಾಂಶ ಅಥವಾ ಔಷಧೀಯ ಅಗತ್ಯಗಳಿಗೆ ಸೂಕ್ತವಾದ ತಳಿಗಳ ನಿಧಿಯನ್ನು ರಚಿಸಿದರು."  1970ರ ದಶಕದವರೆಗೆ, ಭಾರತದ ಹೊಲಗಳಲ್ಲಿ "ಸುಮಾರು 110,000 ವಿಭಿನ್ನ ಪ್ರಭೇದಗಳನ್ನು" ಬೆಳೆಯಲಾಗುತ್ತಿತ್ತು.

ಆದರೆ ವರ್ಷಗಳು ಕಳೆದಂತೆ ಅದರಲ್ಲೂ ವಿಶೇಷವಾಗಿ ಹಸಿರು ಕ್ರಾಂತಿಯ ನಂತರ ಈ ವೈವಿಧ್ಯತೆಯ ಬಹುಪಾಲು ತಳಿಗಳು ಕಳೆದುಹೋದವು. ಸಿ ಸುಬ್ರಮಣ್ಯಂ ಅವರ ಆತ್ಮಚರಿತ್ರೆ "ದಿ ಗ್ರೀನ್ ರೆವಲ್ಯೂಷನ್" ನ ಎರಡನೇ ಸಂಪುಟದಲ್ಲಿ, 60ರ ದಶಕದ ಮಧ್ಯಭಾಗದಲ್ಲಿ ಆಹಾರ ಮತ್ತು ಕೃಷಿ ಸಚಿವರಾಗಿದ್ದ ಅವರು "1965-67ರಲ್ಲಿ ಆಹಾರ ಧಾನ್ಯಗಳ ತೀವ್ರ ಕೊರತೆಗೆ ಕಾರಣವಾದ ತೀವ್ರ ಮತ್ತು ವ್ಯಾಪಕ ಬರ ಪರಿಸ್ಥಿತಿಗಳ" ಬಗ್ಗೆ ಬರೆಯುತ್ತಾರೆ ಮತ್ತು "ಯುನೈಟೆಡ್ ಸ್ಟೇಟ್ಸ್‌ ಜೊತೆಗಿನ ಪಿಎಲ್ -480 ಒಪ್ಪಂದದ ಅಡಿಯಲ್ಲಿ ಆಹಾರ ಧಾನ್ಯಗಳ ಆಮದಿನ ನಿರಂತರ ಅವಲಂಬನೆ" ಕುರಿತು ಲೋಕಸಭೆಯಲ್ಲಿ ಮಂಡಿಸಲಾದ ನಿರ್ಣಯದ ಬಗ್ಗೆ ಬರೆಯುತ್ತಾರೆ.

PHOTO • M. Palani Kumar
PHOTO • M. Palani Kumar

ಲೆನಿನ್ ತೂಯಮಲ್ಲಿ (ಎಡ) ಮತ್ತು ಮುಲ್ಲಂಕೈಮಾ (ಬಲ) ತಳಿಯ ಭತ್ತವನ್ನು ಬೆಳೆಯುತ್ತಾರೆ ಮತ್ತು ಸಂರಕ್ಷಿಸುತ್ತಾರೆ

ಸರ್ಕಾರ ಮತ್ತು ಅದರ ನಾಯಕರಿಗೆ ಎರಡು ಆಯ್ಕೆಗಳಿದ್ದವು - ಭೂಮಿಯನ್ನು ಮರುಹಂಚಿಕೆ ಮಾಡುವುದು, ಇದು ರಾಜಕೀಯ (ಮತ್ತು ಸಂಭಾವ್ಯವಾಗಿ ಆತಂಕ ಹುಟ್ಟಿಸುವ) ಪರಿಹಾರವಾಗಿತ್ತು, ಮತ್ತು ವೈಜ್ಞಾನಿಕ ಮತ್ತು ತಾಂತ್ರಿಕ ಪರಿಹಾರ (ಇದರಿಂದ ಎಲ್ಲಾ ರೈತರಿಗೆ ಸಮಾನವಾಗಿ ಪ್ರಯೋಜನವಾಗದಿರಬಹುದು). ಅವರು ಹೆಚ್ಚಿನ ಇಳುವರಿ ನೀಡುವ ಅಕ್ಕಿ ಮತ್ತು ಗೋಧಿಯ ತಳಿಗಳನ್ನು ಪರಿಚಯಿಸಲು ನಿರ್ಧರಿಸಿದರು.

ಐದು ದಶಕಗಳ ನಂತರ, ಇಂದು ಭಾರತವು ಅಕ್ಕಿ ಮತ್ತು ಗೋಧಿಯ ಹೆಚ್ಚುವರಿ ದಾಸ್ತಾನು ಹೊಂದಿದೆ ಮತ್ತು ಅನೇಕ ಬೆಳೆಗಳ ರಫ್ತುದಾರನಾಗಿದೆ. ಆದರೂ, ಕೃಷಿ ಕ್ಷೇತ್ರವು ಸಮಸ್ಯೆಗಳಿಂದ ಸುತ್ತುವರಿದಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ ಅಂಕಿಅಂಶಗಳ ಪ್ರಕಾರ, ಕಳೆದ ಮೂರು ದಶಕಗಳಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನ್ಯಾಯಯುತ ಬೆಲೆಗಳು ಮತ್ತು ನ್ಯಾಯಯುತ ನೀತಿಗಳಿಗೆ ಒತ್ತಾಯಿಸಿ ರೈತರು ನಡೆಸಿದ ಪ್ರಮುಖ ಪ್ರತಿಭಟನೆಗಳನ್ನು ದೇಶ ಕಂಡಿದೆ. ಮತ್ತು ನೀವು ಈ ಪ್ರಬಂಧವನ್ನು ಓದುವ ಹೊತ್ತಿಗೆ, ಒಂದು ಡಜನ್ ರೈತರು ಕೃಷಿಯನ್ನು ತ್ಯಜಿಸಿರುತ್ತಾರೆ.

ಇದು ನಮ್ಮನ್ನು ಲೆನಿನ್ ಮತ್ತು ಅವರ ಕ್ರಾಂತಿಯ ಕತೆಗೆ ಮರಳಿ ತರುತ್ತದೆ. ಕೃಷಿಯಲ್ಲಿ ಮತ್ತು ಬೆಳೆಯೊಳಗೆ ವೈವಿಧ್ಯ ಏಕೆ ಮುಖ್ಯ? ಏಕೆಂದರೆ, ಜಾನುವಾರುಗಳು, ಹತ್ತಿ ಮತ್ತು ಬಾಳೆಹಣ್ಣುಗಳಂತೆ, ಜಗತ್ತು ಕಡಿಮೆ ಪ್ರಭೇದಗಳನ್ನು ಬೆಳೆಯುತ್ತಿತ್ತು ಮತ್ತು ಹೆಚ್ಚು ಹಾಲು, ನೂಲು ಮತ್ತು ಹಣ್ಣುಗಳನ್ನು ಪಡೆಯುತ್ತಿತ್ತು. ಆದರೆ "ಏಕಕೃಷಿಯ ವಿಶಾಲವಾದ ವಿಸ್ತಾರ ಕೆಲವು ಕೀಟಗಳಿಗೆ ಔತಣಕೂಟಗಳನ್ನು ಒದಗಿಸುತ್ತವೆ" ಎಂದು ದೇಬ್ ಎಚ್ಚರಿಸುತ್ತಾರೆ.

ಕೃಷಿ ವಿಜ್ಞಾನಿ ಮತ್ತು ಭಾರತದ ಹಸಿರು ಕ್ರಾಂತಿಯ ಪಿತಾಮಹ ಡಾ.ಎಂ.ಎಸ್.ಸ್ವಾಮಿನಾಥನ್ ಅವರು 1968 ರಲ್ಲಿ "ಸ್ಥಳೀಯವಾಗಿ ಹೊಂದಿಕೊಳ್ಳುವ ಎಲ್ಲಾ ಬೆಳೆ ಪ್ರಭೇದಗಳನ್ನು ಒಂದು ಅಥವಾ ಎರಡು ಹೆಚ್ಚಿನ ಇಳುವರಿ ನೀಡುವ ತಳಿಗಳೊಂದಿಗೆ ಬದಲಾಯಿಸಿದರೆ ಅದು ಇಡೀ ಬೆಳೆಗಳನ್ನು ಅಳಿಸಿಹಾಕುವ ಸಾಮರ್ಥ್ಯವಿರುವ ಗಂಭೀರ ರೋಗಗಳ ಹರಡುವಿಕೆಗೆ ಕಾರಣವಾಗಬಹುದು" ಎಂದು ಎಚ್ಚರಿಸಿದ್ದರು.

ಆದರೆ ಇಂದು ಇಡೀ ಜಗತ್ತು ಹೊಸ ಬಗೆಯ ಅಕ್ಕಿಗಳಿಂದ ಆವರಿಸಿದೆ. ನವೆಂಬರ್ 28, 1966ರಂದು, "ಸರಳವಾಗಿ IR8 ಎಂದು ಹೆಸರಿಸಲ್ಪಟ್ಟ" ಅಂತರರಾಷ್ಟ್ರೀಯ ರೈಸ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ ಸೌಜನ್ಯದಿಂದ ಮೊದಲ ಆಧುನಿಕ ಭತ್ತದ ತಳಿ ತನ್ನ ಚೊಚ್ಚಲ ಪ್ರವೇಶವನ್ನು ಮಾಡಿತು. ಈ ಅರೆ-ಕುಬ್ಜ ತಳಿಯು ಏಷ್ಯಾ ಮತ್ತು ಇತರೆಡೆಗಳಲ್ಲಿ ಕ್ರಾಂತಿಯನ್ನುಂಟುಮಾಡಿ ಶೀಘ್ರದಲ್ಲೇ "ಮಿರಾಕಲ್ ರೈಸ್" ಎಂಬ ಅಡ್ಡಹೆಸರನ್ನು ಗಳಿಸಿತು ಎಂದು ರೈಸ್ ಟುಡೇ ಪತ್ರಿಕೆಯ ಲೇಖನ ಹೇಳುತ್ತದೆ.

'ಹಂಗ್ರಿ ನೇಷನ್' ಪುಸ್ತಕದಲ್ಲಿ, ಬೆಂಜಮಿನ್ ರಾಬರ್ಟ್ ಸೀಗಲ್ ಅವರು ತನ್ನ ಅತಿಥಿಗಳಿಗೆ "IR-8 ಇಡ್ಲಿಗಳನ್ನು" ಬಡಿಸುತ್ತಿದ್ದ ಮದ್ರಾಸ್ ಹೊರವಲಯದಲ್ಲಿನ ಶ್ರೀಮಂತ ರೈತನ ಬಗ್ಗೆ ಬರೆಯುತ್ತಾರೆ. ಅತಿಥಿಗಳಲ್ಲಿ ಇತರ ರೈತರು, ಪತ್ರಕರ್ತರು ಸೇರಿದಂತೆ ಅನೇಕರು ಇದ್ದರು, "ಐಆರ್ -8 ಅಕ್ಕಿ ದೂರದ ಫಿಲಿಪೈನ್ಸ್‌ನಿಂದ ಭಾರತಕ್ಕೆ ಬಂದಿದೆ ಎಂದು ಅವರಿಗೆ ತಿಳಿಸಲಾಯಿತು, ಕುರುಕಲು ಧಾನ್ಯಗಳೊಂದಿಗೆ ಅತ್ಯಂತ ರುಚಿಕರವಾದ ಮತ್ತು ಸುಲಭವಾಗಿ ಲಭ್ಯವಿರುವ ಅಕ್ಕಿ ತಳಿಯಾಗಿತ್ತದು."

PHOTO • M. Palani Kumar
PHOTO • M. Palani Kumar

ಸೊಂಪಾದ ಹಸಿರು ಭತ್ತದ ಗದ್ದೆ (ಎಡ) ಮತ್ತು ಒಕ್ಕಣೆ ಮಾಡಿದ ಭತ್ತದ ಕಾಳುಗಳು (ಬಲ)

ಹೊಸ ಬೀಜಗಳು ಕೆಲಸ ಮಾಡಲು, ಅವುಗಳಿಗೆ "ಪ್ರಯೋಗಾಲಯ ರೀತಿಯ ಬೆಳೆಯುವ ಪರಿಸ್ಥಿತಿಗಳು ಬೇಕಾಗುತ್ತವೆ, ಇದಕ್ಕೆ ನೀರಾವರಿ, ರಸಗೊಬ್ಬರಗಳು ಮತ್ತು ಕೀಟನಾಶಕಗಳು ಬೇಕಾಗುತ್ತವೆ" ಎಂದು ಸ್ಟಫ್ಡ್ ಅಂಡ್ ಸ್ಟಾರ್ವಡ್ ಪುಸ್ತಕದಲ್ಲಿ ರಾಜ್ ಪಟೇಲ್ ಹೇಳುತ್ತಾರೆ. "ಕೆಲವು ಸ್ಥಳಗಳಲ್ಲಿ, ಹಸಿರು ಕ್ರಾಂತಿಯ ತಂತ್ರಜ್ಞಾನಗಳಿಂದಾಗಿ, ವ್ಯಾಪಕ ಹಸಿವನ್ನು ನಿಯಂತ್ರಿಸಲಾಯಿತು. ಆದರೆ ಇದರ ಸಾಮಾಜಿಕ ಮತ್ತು ಪರಿಸರ ವೆಚ್ಚಗಳು ಹೆಚ್ಚಾಗಿದ್ದವು."

ಕೇವಲ ಗೋಧಿ, ಅಕ್ಕಿ ಮತ್ತು ಕಬ್ಬಿಗೆ ಆಯ್ದು ಸಬ್ಸಿಡಿ ನೀಡುವುದರಿಂದ ರೈತರು ಈ ಬೆಳೆಗಳನ್ನು ಬೃಹತ್ ಪ್ರಮಾಣದಲ್ಲಿ ಬೆಳೆಯಲು ಕಾರಣವಾಯಿತು ಎಂದು ರಾಜ್ಯ ಗ್ರಾಮೀಣ ಮತ್ತು ಕೃಷಿ ಭಾರತ ವರದಿ2020 ಹೇಳುತ್ತದೆ, "ಇದು ಒಣಭೂಮಿ ಪ್ರದೇಶಗಳಲ್ಲಿ ನೀರಾವರಿ ಬೆಳೆಗಳನ್ನು ಉತ್ತೇಜಿಸುವ ಮೂಲಕ ಬೆಳೆ ಮಾದರಿಯನ್ನು ವಿರೂಪಗೊಳಿಸಿತು. ಮತ್ತು ಈ ಮೂಲಕ ನಮ್ಮ ತಟ್ಟೆಯಲ್ಲಿರುವ ಆಹಾರಗಳ ವೈವಿಧ್ಯತೆಯನ್ನು ಕಡಿಮೆ ಮಾಡಿ ಅವುಗಳ ಜಾಗಕ್ಕೆ ಹೆಚ್ಚು ಪಾಲಿಶ್ ಮಾಡಿದ ಅಕ್ಕಿ ಗೋಧಿ ಮತ್ತು ಸಂಸ್ಕರಿಸಿದ ಸಕ್ಕರೆಯ ಖಾಲಿ ಕ್ಯಾಲೊರಿಗಳನ್ನು ತರಲಾಯಿತು. ಇದು ಜನರ ಆರೋಗ್ಯದ ಮೇಲೆ ಪರಿಣಾಮ ಬೀರಿತು."

ತಿರುವಣ್ಣಾಮಲೈ ಜಿಲ್ಲೆ ಇದಕ್ಕೆಲ್ಲ ಸಾಕ್ಷಿಯಾಗಿದೆ, ಅದರ ನೆನಪುಗಳು ಇಂದಿಗೂ ಇಲ್ಲಿ ಜೀವಂತವಾಗಿವೆ ಎಂದು ಲೆನಿನ್‌ದಾಸನ್ ಹೇಳಿದರು. “ಅಪ್ಪನ ಕಾಲದಲ್ಲಿ ಮನಾವರಿ (ಮಳೆ ಅವಲಂಬಿತ) ಬೆಳೆಗಳು ಮತ್ತು ದ್ವಿದಳ ಧಾನ್ಯಗಳನ್ನು ಮಾತ್ರ ವ್ಯಾಪಕವಾಗಿ ಬೆಳೆಯಲಾಗುತ್ತಿತ್ತು. ವರ್ಷಕ್ಕೊಮ್ಮೆ ಕೆರೆಯ ದಡದಲ್ಲಿ ಮಾತ್ರ ಸಾಂಬಾ (ಭತ್ತ) ಬೆಳೆಯುತ್ತಿದ್ದೆವು. ಇಂದು, ನೀರಾವರಿ ಭೂಮಿಯ ಪ್ರಮಾಣವು ನಾಟಕೀಯವಾಗಿ ಹೆಚ್ಚಾಗಿದೆ. ಇಪ್ಪತ್ತು ವರ್ಷಗಳ ಹಿಂದೆ ಅಪ್ಪ ಬ್ಯಾಂಕ್‌ನಲ್ಲಿ ಸಾಲ ಮಾಡಿ, ಬೋರ್‌ವೆಲ್‌ ಸಂಪರ್ಕವನ್ನೂ ಪಡೆದಿದ್ದರು. ಅಲ್ಲಿಯವರೆಗೆ ಈ ರೀತಿ ಸುತ್ತಮುತ್ತಲಿನ ಗದ್ದೆಗಳಲ್ಲಿ ಭತ್ತದ ಕೃಷಿ ಮಾಡುತ್ತಿರಲಿಲ್ಲ’’ ಎಂದು ತಮ್ಮ ಹಿಂದೆ ಇದ್ದ ಗದ್ದೆಯನ್ನು ತೋರಿಸಿದರು. ಎಳೆಯ ಹಸಿರು ಭತ್ತದ ಸಸಿಗಳ ಕೆಸರಿನ ಗದ್ದೆಯಲ್ಲಿನ ಕಂದು ನೀರಿನ ಕನ್ನಡಿಯಲ್ಲಿ ಸೂರ್ಯ ತನ್ನ ಮುಖ ನೋಡಿಕೊಳ್ಳುತ್ತಿದ್ದ.

"ಈ ಕುರಿತು ಹಳೆಯ ರೈತರನ್ನು ಕೇಳಿ" ಎಂದು ಲೆನಿನ್ ದಾಸನ್ ನನಗೆ ಹೇಳಿದರು, "ಅವರು ಐಆರ್8 ಹೇಗೆ ಅವರ ಹೊಟ್ಟೆಯನ್ನು ತುಂಬಿಸಿತು ಎನ್ನುವುದನ್ನು ನಿಮಗೆ ತಿಳಿಸುತ್ತಾರೆ. ಕಲಸ್ಪಕ್ಕಂನಲ್ಲಿ ನಡೆದ ರೈತ ಸಮಾವೇಶದಲ್ಲಿ ರೈತರೊಬ್ಬರು “ಇವತ್ತಿಗೂ ಕೆಲವು ಕುಟುಂಬಗಳಲ್ಲಿ ಕುಳ್ಳಗಿರುವವರನ್ನು ಐಆರೆಟ್ಟು (ತಮಿಳಿನಲ್ಲಿ ಐಆರ್ 8) ಎಂದು ಕರೆಯುತ್ತಾರೆ ಎಂಬುದು ನಿಮಗೆ ತಿಳಿದಿದೆಯೇ?” ಎಂದು ಕೇಳಿದರು. ಅದನ್ನು ಕೇಳಿದ ಕೂಡಲೇ ಸುತ್ತಲೂ ನಗು ಮೂಡಿತು.

ಆದರೆ ಜೀವವೈವಿಧ್ಯತೆಯ ವಿಷಯ ಬಂದಾಗ ಆ ನಗು ಹಾಗೇ ಮಾಯವಾಯಿತು.

PHOTO • M. Palani Kumar
PHOTO • M. Palani Kumar

ಎಡ: ಲೆನಿನ್ ಗೋದಾಮಿನಿಂದ ತನ್ನ ಹೊಲಗಳಿಗೆ ನಡೆಯುತ್ತಿದ್ದಾರೆ. ಬಲ: ಅವರು ಪಾರಂಪರಿಕ ಭತ್ತದ ಪ್ರಭೇದಗಳನ್ನು ಸಂರಕ್ಷಿಸುವ ಮತ್ತು ಬೆಳೆಸುವ ಗದ್ದೆ

*****

ಲೆನಿನ್ ಅವರೊಂದಿಗಿನ ನನ್ನ ಮೊದಲ ಭೇಟಿ 2021ರಲ್ಲಿ ಆಗಿತ್ತು. ಅಂದು ಅವರು ಹವಾಗುಣ ಬದಲಾವಣೆ ಮತ್ತು ಕೃಷಿಯ ಬಗ್ಗೆ ರೈತರ ಗುಂಪಿನೊಂದಿಗೆ ಮಾತನಾಡುತ್ತಿದ್ದರು. ತಿರುವಣ್ಣಾಮಲೈ ಜಿಲ್ಲೆಯ ಕಲಸ್ಪಕ್ಕಂ ಪಟ್ಟಣದಲ್ಲಿ ಈ ಸಭೆ ನಡೆಯುತ್ತಿತ್ತು, ಈ ಸಂದರ್ಭದಲ್ಲಿ ಪರಂಪರೀಯ ವಿಧೈಗಲ್ ಮಯ್ಯಮ್ [ಸಾಂಪ್ರದಾಯಿಕ ಬೀಜ ವೇದಿಕೆ] ಮಾಸಿಕ ಸಭೆ ನಡೆಯುತ್ತಿತ್ತು. ಈ ಗುಂಪಿನ ಸದಸ್ಯರು ಪ್ರತಿ ತಿಂಗಳು 5ನೇ ತಾರೀಖಿನಂದು ಸಭೆ ಸೇರುತ್ತಾರೆ. ಆ ಬಿಸಿಲಿನ ಸೆಪ್ಟಂಬರ್ ಬೆಳಿಗ್ಗೆ ಅಲ್ಲಿ ಬಹಳ ಬಿಸಿಲಿತ್ತು, ಆದರೆ ದೇವಾಲಯದ ಹಿಂದಿನ ಬೇವಿನ ಮರಗಳ ನೆರಳಿನಲ್ಲಿ ದಷ್ಟು ತಂಪಿತ್ತು. ಹಾಗಾಗಿ ನಾನು ಲೆನಿನ್‌ದಾಸನ್ ಮಾತುಗನ್ನು ಕೇಳುತ್ತಾ, ನಗುತ್ತಾ ಮತ್ತು ಅನೇಕ ವಿಷಯಗಳನ್ನು ಕಲಿಯುತ್ತಾ ಅಲ್ಲಿ ಕುಳಿತಿದ್ದೆ.

"ನಾವು ಸಾವಯವ ಕೃಷಿಕರು ಎಂದು ಹೇಳಿಕೊಂಡಾಗ, ಜನರು ನಮ್ಮ ಕಾಲಿಗೆ ಬೀಳುತ್ತಾರೆ ಅಥವಾ ನಮ್ಮನ್ನು ಮೂರ್ಖರು ಎಂದು ಕರೆಯುತ್ತಾರೆ" ಎಂದು ಲೆನಿನ್ ಹೇಳಿದರು. "ಆದರೆ ಇಂದಿನ ಹೊಸ ಪೀಳಿಗೆಗೆ ಸಾವಯವ ಕೃಷಿಯ ಬಗ್ಗೆ ಏನಾದರೂ ತಿಳಿದಿದೆಯೇ?" ವೇದಿಕೆಯ ಸಹ ಸಂಸ್ಥಾಪಕ ಪಿ. ಟಿ. ರಾಜೇಂದ್ರನ್ (68) ಕೇಳಿದರು. “ಅವರು ಪಂಚಗವ್ಯಂ (ಗೋಮೂತ್ರ, ಸಗಣಿ ಇತ್ಯಾದಿಗಳಿಂದ ತಯಾರಿಸಿದ್ದು. ಬೆಳವಣಿಗೆ ಮತ್ತು ರೋಗನಿರೋಧಕ ಶಕ್ತಿಗೆ ಒಳ್ಳೆಯದು) ಬಗ್ಗೆ ಕೇಳಿರಬಹುದು. ಆದರೆ ಅದಕ್ಕೂ ಮೀರಿ ಸಾವಯವ ಕೃಷಿಗೆ ಸಂಬಂಧಿಸಿದ ವಿಷಯಗಳು ಬಹಳಷ್ಟಿವೆ.”

ರೈತರ ಬದುಕಿನಲ್ಲಿ  ಕೆಲವೊಮ್ಮೆ ಬದಲಾವಣೆ ಸಹಜವಾಗಿ ಬರುತ್ತದೆ. ರಾಸಾಯನಿಕ ಕ್ರಿಮಿನಾಶಕ, ರಸಗೊಬ್ಬರಗಳ ಬೆಲೆ ಜಾಸ್ತಿ ಎಂಬ ಕಾರಣಕ್ಕೆ ಅದನ್ನು ಕೈಬಿಟ್ಟವರು ಲೆನಿನ್‌ದಾಸನ್‌ ಅವರ ಅಪ್ಪ ಏಳುಮಲೈ. ಲೆನಿನ್ ಅವರ ಮಾತಿನಲ್ಲಿ ಹೇಳುವುದಾದರೆ: “ಪ್ರತಿಯೊಂದು ಸ್ಪ್ರೇಗೆ ಸಾವಿರಾರು ರೂಪಾಯಿ ವೆಚ್ಚವಾಗುತ್ತಿತ್ತು. ಅಪ್ಪ ನಂತರ ಪಸುಮಿ ಬಿಕಟನ್ (ಕೃಷಿ ಪತ್ರಿಕೆ) ಪುಟಗಳನ್ನು ತಿರುಗಿಸಿ ನೋಡಿದರು. ನಂತರ ಜಮೀನಿನಲ್ಲಿ ನೈಸರ್ಗಿಕ ಪದಾರ್ಥಗಳನ್ನು ಪ್ರಯೋಗಿಸತೊಡಗಿದರು, ಅವುಗಳನ್ನು ಸಿಂಪಡಿಸಲು ನನಗೆ ಅವಕಾಶ ನೀಡಿದರು. ಅವರು ಹೇಳಿದಂತೆ ನಾನು ಸಿಂಪಡಿಸುತ್ತಿದ್ದೆ. ಈ ಪದ್ಧತಿ ನಮಗೆ ಸಹಾಯಕ್ಕೆ ಬರತೊಡಗಿತು.”

ಪ್ರತಿ ತಿಂಗಳು, ವೇದಿಕೆ ಬೆಳೆಗಾರರು ಚರ್ಚಿಸಲು ಒಂದು ವಿಷಯವನ್ನು ಆಯ್ಕೆ ಮಾಡುತ್ತಾರೆ. ಕೆಲವರು ಗೆಡ್ಡೆಗಳು, ಬೇಳೆಕಾಳುಗಳು ಮತ್ತು ಕೋಲ್ಡ್‌ ಪ್ರೆಸ್ಡ್‌ ಗಾಣದ ಎಣ್ಣೆಯನ್ನು ಮಾರಾಟಕ್ಕೆ ತರುತ್ತಾರೆ. ಒಂದೊಂದು ತಿಂಗಳು ಒಬ್ಬೊಬ್ಬ ರೈತ ಊಟ ತಿಂಡಿಯನ್ನು ಪ್ರಾಯೋಜಿಸುತ್ತಾರೆ; ಉಳಿದವರು ಬೇಳೆಕಾಳು, ತರಕಾರಿ ತರುತ್ತಾರೆ. ಸಾಂಪ್ರದಾಯಿಕ ತಳಿಯ ಅಕ್ಕಿಯನ್ನು ತೆರೆದ ಗಾಳಿಯಲ್ಲಿ, ಸೌದೆಯ ಒಲೆಯಲ್ಲಿ ಬೇಯಿಸಿ ಅನ್ನ ಮಾಡಲಾಗುತ್ತದೆ. ನಂತರ ಬಾಳೆ ಎಲೆಯಲ್ಲಿ ಬಿಸಿ ಅನ್ನ ಮತ್ತು ಸಾಂಬಾರ್‌ ಬಡಿಸಲಾಗುತ್ತದೆ. ಇಲ್ಲಿಗೆ ಬರುವ ಸದಸ್ಯರ ಸಂಖ್ಯೆ ನೂರಕ್ಕೂ ಹೆಚ್ಚು, ಎಲ್ಲರಿಗೂ ಊಟ ತಯಾರಿಸಲು ಮೂರು ಸಾವಿರ ರೂಪಾಯಿಳಷ್ಟು ಹಣ ಬೇಕು.

ಏತನ್ಮಧ್ಯೆ, ರೈತರು ಹವಾಗುಣ ಬದಲಾವಣೆಯ ಬಗ್ಗೆ ಚರ್ಚೆಯನ್ನು ಮುಂದುವರೆಸಿದರು. ಇದನ್ನು ಎದುರಿಸಲು ಕೆಲವು ಮಾರ್ಗಗಳನ್ನು ಅವರು ವಿವರಿಸಿದರು: ಸಾವಯವ ಕೃಷಿ, ಸಾಂಪ್ರದಾಯಿಕ ಬೆಳೆಗಳು ಮತ್ತು ಬಹುಬೆಳೆ.

"ಕಪ್ಪು ಮೋಡಗಳು ಒಟ್ಟಾಗುತ್ತಿರುವ ಸಮಯದಲ್ಲಿ ಮಳೆ ಬಂದರೆ ಸಾಕು ಎಂಬ ನಿರೀಕ್ಷೆ ರೈತರಲ್ಲಿರುತ್ತದೆ. ಆದರೆ... ಅಂತದ್ದೇನೂ ಆಗುವುದಿಲ್ಲ! ನಂತರ ಜನವರಿಯಲ್ಲಿ ಭತ್ತ ಬೆಳೆದು ಕೊಯ್ಲು ಮಾಡುವ ಮುನ್ನವೇ ಧಾರಾಕಾರ ಮಳೆ ಸುರಿದು ಬೆಳೆ ಸಂಪೂರ್ಣ ಹಾಳಾಗಿತ್ತು. ನಾವು ಇನ್ನೇನು ಮಾಡಬಹುದು? ಅದಕ್ಕೆ ನಾನು ಹೇಳುವುದೆಂದರೆ, ನಿಮ್ಮಲ್ಲಿರುವ ಎಲ್ಲಾ ಹಣವನ್ನು ಒಂದೇ ಬೆಳೆಗೆ ಸುರಿಯಬೇಡಿ” ಎಂದು ರಾಜೇಂದ್ರನ್ ಸಲಹೆ ನೀಡಿದರು, “ಗದ್ದೆಗಳ ಉದ್ದಕ್ಕೂ ಅಗತಿ [ಅಗಸೆ] ಮತ್ತು ಒಣ ಭೂಮಿಯಲ್ಲಿ ತಾಳೆ ಮರಗಳನ್ನು ನೆಡಿರಿ. ನೆಲಗಡಲೆ ಮತ್ತು ಭತ್ತದ ಕೃಷಿಯನ್ನಷ್ಟೇ ಮಾಡಬೇಡಿ.

PHOTO • M. Palani Kumar
PHOTO • M. Palani Kumar

ಪಿ.ಟಿ. ರಾಜೇಂದ್ರನ್ (ಎಡ) ಮತ್ತು ಲೆನಿನ್ (ಬಲ) ಕಳಸಪಕ್ಕಂ ಸಾವಯವ ವೇದಿಕೆಯಲ್ಲಿ ರೈತರೊಂದಿಗೆ ಮಾತನಾಡುತ್ತಿದ್ದಾರೆ

PHOTO • M. Palani Kumar
PHOTO • M. Palani Kumar

ಎಡ: ಸಭೆಯಲ್ಲಿ ವಿವಿಧ ದ್ವಿದಳ ಧಾನ್ಯಗಳು, ಬೇಳೆಕಾಳುಗಳು ಮತ್ತು ಅಕ್ಕಿಯನ್ನು ಮಾರಾಟ ಮಾಡಲಾಯಿತು. ಬಲ: ಭಾಗವಹಿಸುವವರಿಗೆಂದು ಆಹಾರ ತಯಾರಿಸಿ ಬಡಿಸಲಾಗುತ್ತದೆ

ತಿರುವಣ್ಣಾಮಲೈ ಜಿಲ್ಲೆಯ ಸಾವಯವ ಕೃಷಿಕರ ಆಂದೋಲನವು ರೈತರಿಗೆ ಮನವರಿಕೆ ಮಾಡಿಸುವುದರ ಜೊತೆಗೆ ಗ್ರಾಹಕರಿಗೂ ಅದು "ಪ್ರತಿ ಬಾರಿ ಒಂದೇ ರೀತಿಯ ಅಕ್ಕಿಯನ್ನು ನಿರೀಕ್ಷಿಸುವುದನ್ನು ನಿಲ್ಲಿಸಿ." ಎಂದು ತಿಳಿಸಿ ಹೇಳುತ್ತಿದೆ. ಇದನ್ನು ಇಲ್ಲಿ ಸಾಮೂಹಿಕ ಧ್ವನಿಯಲ್ಲಿ ಕೇಳಬಹುದು. “ಗ್ರಾಹಕರು ಐದು ಕಿಲೋ ಅಕ್ಕಿಯನ್ನು ಕೇಳುತ್ತಿದ್ದಾರೆ. ದೊಡ್ಡ ಪ್ರಮಾಣದ ಅಕ್ಕಿಯನ್ನು ಸಂಗ್ರಹಿಸಲು ಸ್ಥಳವಿಲ್ಲ ಎಂದು ಅವರು ಹೇಳುತ್ತಾರೆ. ‘ಮನೆ ಕೊಳ್ಳುವಾಗ ಕಾರು, ಬೈಕ್ ಇಡಲು ಜಾಗ ಇದೆಯೋ ಇಲ್ಲವೋ ಎಂದು ನೋಡುವವರು ಒಂದು ಮೂಟೆ ಅಕ್ಕಿ ಇಡಲು ಜಾಗ ಇದೆ ಎಂದು ಏಕೆ ನೋಡಿಕೊಳ್ಳಬಾರದು” ಎಂದು ಹಿರಿಯ ರೈತರೊಬ್ಬರು ಕೇಳಿದರು.

ಸಣ್ಣ ಪ್ರಮಾಣದಲ್ಲಿ ಕಳುಹಿಸುವುದೇ ತಲೆನೋವು ಎಂಬುದು ರೈತರ ಮಾತು. ದೊಡ್ಡ ಚೀಲಗಳಲ್ಲಿ ಅಕ್ಕಿ ಕಳುಹಿಸುವುದಕ್ಕಿಂತ ಹೆಚ್ಚು ಸಮಯ, ಶ್ರಮ ಮತ್ತು ಹಣ ಇದಕ್ಕೆ ಖರ್ಚಾಗುತ್ತದೆ. “ಇಂದು, ಹೈಬ್ರಿಡ್ ಅಕ್ಕಿಯನ್ನು ಸಿಪ್ಪಂನಲ್ಲಿ (26 ಕೆಜಿ ಚೀಲಗಳು) ಮಾರಾಟ ಮಾಡಲಾಗುತ್ತಿದೆ. ಇದರ ಪ್ಯಾಕಿಂಗ್‌ ಖರ್ಚು ಹತ್ತು ರೂಪಾಯಿ ಕೂಡ ಆಗುವುದಿಲ್ಲ. ಆದರೆ ಅಷ್ಟೇ ತೂಕದ ಅಕ್ಕಿಯನ್ನು ಐದು ಕೇಜಿಯ ಚೀಲಗಳಲ್ಲಿ ತುಂಬಿ ಮಾರುವುದಾದರೆ ನಮಗೆ ಅದಕ್ಕೆ 30 ರೂಪಾಯಿ ಬೇಕಾಗುತ್ತದೆ,” ಎಂದು ಲೆನಿನ್ ವಿವರಿಸಿದರು. ನಂತರ ಅವರು ನಿಟ್ಟುಸಿರು ಬಿಡುತ್ತಾ, "ನಾಕು ತಳ್ಳುದು," ಎಂದರು. ಇದಕ್ಕೆ ತಮಿಳಿನಲ್ಲಿ ನಾಲಿಗೆ ಹೊರಬರುವುದು ಎಂದರ್ಥ. "ನಗರದ ಜನರು ಯಾವತ್ತೂ ಹಳ್ಳಿಯ ವಾಸ್ತವತೆಯನ್ನು ಅರ್ಥಮಾಡಿಕೊಳ್ಳುವುದಿಲ್ಲ."

ಲೆನಿನ್‌ ದಾಸ್‌ “ನಾನು ಗಾಡಿ ಓಡಿಸುವಾಗ ಮತ್ತು ಮಲಗಿರುವಾಗಲಷ್ಟೇ ಕೆಲಸ ಮಾಡುವುದಿಲ್ಲ. ಉಳಿದಂತೆ ಎಲ್ಲ ಸಮಯದಲ್ಲೂ ಕೆಲಸದಲ್ಲಿರುತ್ತೇನೆ” ಎನ್ನುತ್ತಾರೆ. ಹಾಗೆ ನೋಡಿದರೆ ಅವರು ಬೈಕ್‌ ಓಡಿಸುವಾಗಲೂ ಆನ್‌ ಡ್ಯೂಟಿಯೇ ಇರುತ್ತಾರೆ. ಅವರು ತನ್ನ ಬೈಕಿನಲ್ಲಿ ಚೀಲ ಕಟ್ಟಿಕೊಂಡು ತನ್ನ ಗ್ರಾಹಕರಿಗೆ ವಸ್ತುಗಳನ್ನು ತಲುಪಿಸಲು ಹೋಗುತ್ತಾರೆ. ಅವರ ಫೋನ್‌ ಕೂಡಾ ಸದಾ ಕೆಲಸ ಮಾಡುತ್ತಿರುತ್ತದೆ. ಅದು ಬೆಳಗಿನ ಐದು ಗಂಟೆಗೆ ರಿಂಗ್‌ ಆಗಲು ಆರಂಭಿಸಿದರೆ ರಾತ್ರಿ ಹತ್ತು ಗಂಟೆಯ ತನಕವೂ ಒಂದಲ್ಲ ಒಂದು ಕರೆಯನ್ನು ಸ್ವೀಕರಿಸುತ್ತಲೇ ಇರುತ್ತದೆ. ಅವರಿಗೆ ಸ್ವಲ್ಪ ಸಿಕ್ಕಾಗ ವಾಟ್ಸಾಪ್‌ ಮೆಸೇಜುಗಳಿಗೆ ಉತ್ತರಿಸುತ್ತಾರೆ.

"ತಿರುವಣ್ಣಾಮಲೈ ಜಿಲ್ಲೆಗೆ ಸಂಬಂಧಿಸಿದಂತೆ, ನಾನೊಂದು ಕಿರುಪುಸ್ತಕ ತಯಾರಿಸಿದ್ದೆ, ಅದು ಪ್ರತಿಯೊಂದು ಸಾಂಪ್ರದಾಯಿಕ ಅಕ್ಕಿ ತಳಿಯ ಹೆಸರನ್ನು ಹೊಂದಿದೆ." ಈ ಕಿರುಪುಸ್ತಕವು ಬಹಳ ಜನಪ್ರಿಯವಾಯಿತು, ದೂರದವರೆಗೆ ಹರಡಿತು. "ನನ್ನ ಮಾಮಾ ಪೊಣ್ಣು (ಮಾವನ ಮಗಳು) ಕೊನೆಗೆ ನನಗೇ ವಾಟ್ಸಾಪ್‌ ಮೂಲಕ ಕಳುಹಿಸಿದಳು," ಎಂದ ಅವರು ನಗುತ್ತಾ, "ನೋಡು, ಯಾರೋ ಈ ಪುಸ್ತಕವನ್ನು ಎಷ್ಟು ಸುಂದರವಾಗಿ ಮಾಡಿದ್ದಾರೆ" ಆಗ ನಾನು ಅವಳಿಗೆ ಕೊನೆಯ ಪುಟವನ್ನು ತಿರುಗಿಸಲು ಹೇಳಿದೆ. ಅಲ್ಲಿ ನನ್ನ ಹೆಸರನ್ನು ನೋಡಿದಳು: ಲೆನಿನ್‌ ದಾಸನ್.‌

ಆತ್ಮವಿಶ್ವಾಸ, ಮೃದುಭಾಷಿ, ತಮಿಳು ಮತ್ತು ಇಂಗ್ಲಿಷ್ ಎರಡರಲ್ಲೂ ನಿರರ್ಗಳವಾಗಿ ಮಾತನಾಡಬಲ್ಲ ಲೆನಿನ್ ಪದಗಳ ನಡುವೆ ಭಾಷೆಯಿಂದ ಭಾಷೆಗೆ ಅಲೆಯುತ್ತಿದ್ದರು. ಅವರ ತಂದೆ ಏಳುಮಲೈ ಕಮ್ಯುನಿಸ್ಟ್ ಆಗಿದ್ದರು (ಮಗನ ಹೆಸರು ಹೀಗಿರಲು ಅದೇ ಕಾರಣ ಎಂದು ಲೆನಿನ್‌ ನಕ್ಕರು). ಚಿಕ್ಕ ವಯಸ್ಸಿನಲ್ಲಿ ಲೆನಿನ್‌ ದಾಸನ್ ಹೊಲದಲ್ಲಿ ಗಂಟೆಗಟ್ಟಲೆ ಬೆವರು ಸುರಿಸಿದ್ದರು. ಆದರೆ ಪೂರ್ಣ ಪ್ರಮಾಣದ ಸಾವಯವ ಕೃಷಿಕ ಮತ್ತು ಭತ್ತದ ಸಂರಕ್ಷಕನಾಗುವ ಯೋಜನೆ ಅವರಿಗೆ ಎಂದಿಗೂ ಇರಲಿಲ್ಲ.

PHOTO • M. Palani Kumar

ಲೆನಿನ್ ಅನೇಕ ಸಾಂಪ್ರದಾಯಿಕ ಭತ್ತದ ಪ್ರಭೇದಗಳನ್ನು ಪ್ರದರ್ಶಿಸುತ್ತಿದ್ದಾರೆ

“ನನ್ನ ಡಬಲ್ ಗ್ರಾಜುಯೇಷನ್ ​​ಮುಗಿದ ನಂತರ, ನಾನು ಚೆನ್ನೈನ ಎಗ್ಮೋರ್‌ ಪ್ರದೇಶದಲ್ಲಿ ಕೆಲಸ ಹಿಡಿದು ಅಲ್ಲಿಯೇ ಉಳಿದುಕೊಂಡಿದ್ದೆ. 2015ರಲ್ಲಿ, ನಾನು ಮಾರುಕಟ್ಟೆ ಸಂಶೋಧನಾ ಕೆಲಸದಲ್ಲಿ 25,000 ಗಳಿಸುತ್ತಿದ್ದೆ. ಅದು ಒಳ್ಳೆಯ ಸಂಬಳವೇ ಆಗಿತ್ತು...”

ಸೆಂಗುನಂ ಗ್ರಾಮಕ್ಕೆ ಹಿಂದಿರುಗಿದ ನಂತರ, ಅವರು ರಾಸಾಯನಿಕಗಳ ಸಹಾಯದಿಂದ ಕೃಷಿಯನ್ನು ಪ್ರಾರಂಭಿಸಿದರು. ಪಕ್ಕದ ರಸ್ತೆಯತ್ತ ಬೆರಳು ತೋರಿಸಿ, ‘ನಾನು ಸೋರೆಕಾಯಿ, ಬದನೆ, ಟೊಮೇಟೊ ಬೆಳೆದು ಅಲ್ಲಿ ಮಾರುತ್ತಿದ್ದೆ’ ಎಂದರು. ಲೆನಿನ್ ಪ್ರತಿ ವಾರ ಉಳವರ್ ಸಂಧೈಗೆ (ರೈತರ ಗುಡಿಸಲು) ಹೋಗುತ್ತಿದ್ದರು. ಆ ವೇಳೆಗೆ ಅವರ ಮೂವರು ಸಹೋದರಿಯರಿಗೆ ವಿವಾಹವಾಗಿತ್ತು.‌

"ನನ್ನ ನಡುವಿನ ಸಹೋದರಿಯ ಮದುವೆಯ ಖರ್ಚನ್ನು ಅರಿಶಿನ ಬೆಳೆಯಿಂದ ಪೂರೈಸಲಾಯಿತು. ಆದರೆ ಏನು ಗೊತ್ತಾ? ಇದು ಬಹಳಷ್ಟು ಕೆಲಸವಿರುವ ಬೆಳೆ. ಅರಿಶಿನವನ್ನು ಕುದಿಸಲು ಇಡೀ ಕುಟುಂಬ ತೊಡಗಿಸಿಕೊಳ್ಳಬೇಕು" ಎಂದು ಅವರು ಹೇಳುತ್ತಾರೆ.

ಅವರ ಸಹೋದರಿಯರೆಲ್ಲರೂ ಮದುವೆಯಾಗಿ ಹೋದ ನಂತರ ಅವರಿಗೆ ಹೊಲ ಮತ್ತು ಮನೆ ಎರಡೂ ಕಡೆ ಕೆಲಸ ನಿಭಾಯಿಸುವುದು ಕಷ್ಟವಾಗತೊಡಗಿತು. ಮಳೆಯಾಧಾರಿತ ವೈವಿಧ್ಯಮಯ ಬೆಳೆಗಳನ್ನು ಏಕಾಂಗಿಯಾಗಿ ನೋಡಿಕೊಳ್ಳುವುದು ಸುಲಭವಿರಲಿಲ್ಲ. ತರಕಾರಿಗಳನ್ನು ಕೊಯ್ಲು ಮಾಡುವುದು, ಅವುಗಳನ್ನು ಮಾರುವುದು ಇವೆಲ್ಲ ಕಷ್ಟವಾಗತೊಡಗಿತು. ಹಂಗಾಮಿ ಬೆಳೆಗಳು ಸಹ ಸಾಕಷ್ಟು ಶ್ರಮದಾಯಕವಾಗಿದ್ದವು. ಅವುಗಳ ಕೊಯ್ಲಿನ ಸಮಯವನ್ನು ನಿರ್ಧರಿಸುವುದು, ಕೀಟಗಳು, ಹಕ್ಕಿಗಳು ಹಾಗೂ ಪರಭಕ್ಷಗಳಿಂದ ಬೆಳೆಯನ್ನು ಕಾಪಾಡಿಕೊಳ್ಳುವುದು ಇವೆಲ್ಲವೂ ಸುಲಭದ ಕೆಲಸವಾಗಿರಲಿಲ್ಲ. ಇದಕ್ಕೆ ಸಾಕಷ್ಟು ಸಂಪನ್ಮೂಲ ಬೇಕಾಗುತ್ತಿತ್ತು. ಮೆಕ್ಕೆಜೋಳ, ನೆಲಗಡಲೆ, ಗೋವಿನಜೋಳ ಬೆಳೆಗಳಿಗೆ ಕಾವಲು ಕಾಯಲು ಮತ್ತು ಸಂಗ್ರಹಿಸಲು ಅನೇಕ ಜನರು ಬೇಕಾಗುತ್ತಾರೆ. ನನ್ನ ಎರಡು ಕೈಗಳು ಮತ್ತು ಕಾಲುಗಳಿಂದ ಮತ್ತು ನನ್ನ ವಯಸ್ಸಾದ ಹೆತ್ತವರ ಕನಿಷ್ಠ ಬೆಂಬಲದೊಂದಿಗೆ ಎಲ್ಲವನ್ನೂ ಹೇಗೆ ಮಾಡಲು ಸಾಧ್ಯ?"

ಅದೇ ಸಮಯದಲ್ಲಿ, ಕೋತಿಗಳ ದಾಳಿಯಲ್ಲಿ ತೀವ್ರ ಹೆಚ್ಚಳ ಕಂಡುಬಂತು. "ಆ ತೆಂಗಿನ ಮರ ಕಾಣ್ತಿದೆಯಲ್ಲ?  ಅಲ್ಲಿಂದ, "ಕೋತಿಗಳು ಮರದ ತುದಿಯವರೆಗೂ ಹತ್ತಬಲ್ಲವು. ಅವು ಆ ಆಲದ ಮರದ ಮೇಲೆ ಮಲಗುತ್ತಿದ್ದವು. ಅವುಗಳಲ್ಲಿ ನಲವತ್ತು ಅಥವಾ ಅರವತ್ತು ಕೋತಿಗಳು ನಮ್ಮ ಹೊಲಗಳ ಮೇಲೆ ದಾಳಿ ಮಾಡುತ್ತಿದ್ದವು. ಅವು ನನಗೆ ಸ್ವಲ್ಪ ಹೆದರುತ್ತಿದ್ದವು; ನಾನು ಅವರನ್ನು ಚುರುಕಾಗಿ ಬೆನ್ನಟ್ಟಬಲ್ಲೆ. ಆದರೆ ಬುದ್ಧಿವಂತರಾಗಿದ್ದ ಅವು ನನ್ನ ಹೆತ್ತವರೊಂದಿಗೆ ಮಾನಸಿಕ ತಂತ್ರಗಳನ್ನು ಬಳಸುತ್ತಿದ್ದವು. ಒಂದು ಕೋತಿ ಇಲ್ಲಿಗೆ ಬರುತ್ತದೆ, ಅವರು ಅದನ್ನು ಬೆನ್ನಟ್ಟಲು ಹೋದಾಗ, ಇನ್ನೊಂದು ಕೋತಿ ಮರದಿಂದ ಜಿಗಿದು ಬೆಳೆಯನ್ನು ತಿನ್ನುತ್ತಿತ್ತು... ನಾವು ಕಥೆ ಪುಸ್ತಕಗಳಲ್ಲಿ ಓದಿದ್ದು ಸುಳ್ಳಲ್ಲ, ಕೋತಿಗಳು ಬಹಳ ಬುದ್ಧಿವಂತ ಪ್ರಾಣಿಗಳು!"

ಈ ಪಿಡುಗು ಸುಮಾರು ನಾಲ್ಕು ವರ್ಷಗಳವರೆಗೆ ಮುಂದುವರಿಯಿತು, ಮತ್ತು ಮೂರು ಕಿಲೋಮೀಟರ್ ವ್ಯಾಪ್ತಿಯಲ್ಲಿನ ಹೆಚ್ಚಿನ ರೈತರು ಕೋತಿಗಳು ತಿನ್ನದ ಬೆಳೆಗಳನ್ನು ಬೆಳೆಯತೊಡಗಿದರು. ಲೆನಿನ್ ಮತ್ತು ಅವರ ಕುಟುಂಬವು ಭತ್ತ ಮತ್ತು ಕಬ್ಬನ್ನು ಬೆಳೆಯಲು ಪ್ರಾರಂಭಿಸಿತು.

PHOTO • M. Palani Kumar
PHOTO • Sabari Girisan

ಲೆನಿನ್ (ಎಡ) ತನ್ನ ಸ್ನೇಹಿತ ಎಸ್. ವಿಘ್ನೇಶ್ (ಬಲ) ಅವರೊಂದಿಗೆ, ಅವರು ರೈತ ಮತ್ತು ವಿತರಕರಾಗಿ ಗುರುತಿಸಿಕೊಂಡಿರುವ ಅವರು ಬೈಕಿನ ಮೇಲೆ ಅಕ್ಕಿಯ ಮೂಟೆಗಳನ್ನು ಹೇರುತ್ತಿದ್ದಾರೆ

*****

ಲೆನಿನ್ ಹೇಳುತ್ತಾರೆ, "ಭತ್ತವು ಹೆಮ್ಮೆಯ ಬೆಳೆ, ಭತ್ತವು ಇಲ್ಲಿ ಗೌರವಾನ್ವಿತ ಬೆಳೆಯಾಗಿದೆ, ಪಶುಪಾಲಕರು ತಮ್ಮ ಹಸು ಮತ್ತು ಮೇಕೆಗಳು ಬೇರೆ ಹೊಲಗಳಲ್ಲಿ ಮೇಯುತ್ತಿದ್ದರೆ ಪರವಾಗಿಲ್ಲ ಎಂದು ಸುಮ್ಮನಿರುತ್ತಾರೆ, ಭತ್ತದ ಗದ್ದೆಯಲ್ಲಿ ಮೇಯ್ದರೆ, ಅವರು ಬಂದು ಕ್ಷಮೆಯಾಚಿಸುತ್ತಾರೆ, ಕೆಲವೊಮ್ಮೆ ನಷ್ಟ ಪರಿಹಾರ ಕೊಡುವುದಕ್ಕೂ ಮುಂದಾಗುತ್ತಾರೆ. ಅಷ್ಟರಮಟ್ಟಿಗೆ ಇದು ಇಲ್ಲಿ ಗೌರವಾನ್ವಿತ ಬೆಳೆ.”

ಈ ಬೆಳೆಯು ತಾಂತ್ರಿಕ ಪ್ರಗತಿಗಳು, ಯಂತ್ರಗಳ ಅನುಕೂಲಗಳು ಮತ್ತು ಮಾರುಕಟ್ಟೆಗಳಿಗೆ ಪ್ರವೇಶಗಳನ್ನು ಉತ್ತಮ ರೀತಿಯಲ್ಲಿ ಹೊಂದಿದೆ. ಲೆನಿನ್ ಇದನ್ನು ಸೌವ್ರಿಯಮ್ (ಆರಾಮ) ಎಂದು ಕರೆಯುತ್ತಾರೆ. ಅವರು ಹೇಳುತ್ತಾರೆ, “ನೋಡಿ, ಭತ್ತ ಬೆಳೆಗಾರರು ಸಾಮಾಜಿಕ ಪರಿಹಾರವನ್ನು ಹುಡುಕುತ್ತಿಲ್ಲ, ಅವರು ಪರಿಹಾರವನ್ನು ಹುಡುಕುತ್ತಿದ್ದಾರೆ. ಮತ್ತು ಇದು ಏಕ ಬೆಳೆಯಾಗುವತ್ತ ಸಾಗುತ್ತಿದೆ.”

ಕೃಷಿ ಭೂಮಿಯನ್ನು ಸಾಂಪ್ರದಾಯಿಕವಾಗಿ ಪುನ್ಸೈ ನಿಲಂ (ಒಣ ಅಥವಾ ಮಳೆಯಾಶ್ರಿತ ಭೂಮಿ) ಮತ್ತು ನನ್ಸೈ ನಿಲಂ (ಆರ್ದ್ರ ಅಥವಾ ನೀರಾವರಿ ಭೂಮಿ) ಎಂದು ವಿಂಗಡಿಸಲಾಗಿದೆ. ಲೆನಿನ್ ವಿವರಿಸುತ್ತಾರೆ, "ಪುನ್ಸೈ ಎಂದರೆ ವಿವಿಧ ಬೆಳೆಗಳನ್ನು ಬೆಳೆಯುವ ಭೂಮಿ. ಮೂಲತಃ, ಮನೆಗೆ ಬೇಕಾದ ಎಲ್ಲವನ್ನೂ ಇಲ್ಲಿ ಬೆಳೆಯಬಹುದು. ರೈತರು ಸಮಯ ಸಿಕ್ಕಾಗಲೆಲ್ಲಾ ಪುಳುಡಿಯನ್ನು ಉಳುಮೆ ಮಾಡುತ್ತಿದ್ದರು - ಒಣ, ಧೂಳಿನಿಂದ ಕೂಡಿದ ಭೂಮಿ. ಆ ಕಾಲದಲ್ಲಿ ಪರಿಸ್ಥಿತಿ ಹಾಗೆ ಇತ್ತು. ಈಗ ಯಾಂತ್ರೀಕರಣದ ಮೂಲಕ ಸಮಯ ಹಾಗೂ ಶ್ರಮ ಎರಡನ್ನೂ ಉಳಿಸಲಾಗುತ್ತಿದೆ. ಒಂದೇ ರಾತ್ರಿ ನೀವೀಗ 20 ಎಕರೆಯಷ್ಟು ನೆಲವನ್ನು ಉಳುಮೆ ಮಾಡಬಹುದು.”

ರೈತರು ಒಂದು ಸುಗ್ಗಿಯ ಚಕ್ರಕ್ಕೆ ಸ್ಥಳೀಯ ತಳಿಯಾದ ಪುನ್ಸೈ ಭತ್ತವನ್ನು ಬೆಳೆಯುತ್ತಾರೆ. "ಅವರು ಪೂಂಕರ್ ಅಥವಾ ಕುಲಂಗರ ತಳಿಯನ್ನು ಬೆಳೆಯುತ್ತಾರೆ, ಈ ಎರಡು ವಿಧದ ಭತ್ತವು ಬಹುತೇಕ ಒಂದೇ ರೀತಿ ಕಾಣುತ್ತದೆ. ಎರಡರ ನಡುವಿನ ವ್ಯತ್ಯಾಸವು ಬೆಳೆ ಚಕ್ರದ ಅವಧಿಯಲ್ಲಿ ಇರುತ್ತದೆ. ನೀರಿನ ಕೊರತೆ ಇರುವಲ್ಲಿ 75 ದಿನಗಳಲ್ಲಿ ಸಿದ್ಧವಾಗುವ ಪೂಂಕರ್ ಬೆಳೆಯುವುದು ಉತ್ತಮ. ಉಳಿದ ತಳಿಗಳು 90 ದಿನನಗಳ ನಂತರ ಕೊಯ್ಲಿಗೆ ಸಿದ್ಧವಾಗುತ್ತವೆ" ಎಂದು ಲೆನಿನ್‌ ಹೇಳುತ್ತಾರೆ.

ಯಾಂತ್ರೀಕರಣದಿಂದಾಗಿ ಜಮೀನಿನಲ್ಲಿ ಹೆಚ್ಚು ನೀರು ಸಂಗ್ರಹವಾಗದೆ ಸಣ್ಣ ಸಣ್ಣ ಭೂಮಿಯಲ್ಲಿಯೂ ಭತ್ತ ಬೆಳೆಯಲು ಸಾಧ್ಯವಾಗಿದೆ ಎಂದು ಲೆನಿನ್ ಹೇಳುತ್ತಾರೆ. ಈ ಭಾಗಗಳಲ್ಲಿ ಕಳೆದ 10, 15 ವರ್ಷಗಳಿಂದ ಎತ್ತುಗಳನ್ನು ಬಳಸುತ್ತಿಲ್ಲ. ಹೊಸ ಯಂತ್ರಗಳು ಬಾಡಿಗೆಗೆ ಲಭ್ಯವಿರುವುದರಿಂದ (ಅಥವಾ ಮಾರಾಟಕ್ಕಾದರೂ), ಒಂದು ಎಕರೆ ಅಥವಾ ಅರ್ಧ ಎಕರೆ ಭೂಮಿಯನ್ನು ಸಹ ಉಳುಮೆ ಮಾಡಿಸಬಹುದು ಮತ್ತು ಹೆಚ್ಚಿನ ಜನರು ಭತ್ತವನ್ನು ಬೆಳೆಯಬಹುದು” ಎನ್ನುವ ಅವರು, ನಂತರ ಭತ್ತದ ನಾಟಿಗೆ ಬಳಸಬಹುದಾದ ಇತರ ಯಂತ್ರಗಳನ್ನು ಹೆಸರಿಸುತ್ತಾರೆ. ಯಂತ್ರವನ್ನು ಬಳಸಿ ಭತ್ತವನ್ನು ನಾಟಿ ಮಾಡಬಹುದು, ಕಳೆ ತೆಗೆಯಬಹುದು ಮತ್ತು ಒಕ್ಕಲು ಮಾಡಬಹುದು. "ಭತ್ತದ ಬೆಳೆಗೆ ಸಂಬಂಧಿಸಿದಂತೆ, ಯಂತ್ರಗಳು ನಿಮಗಾಗಿ ಎಲ್ಲವನ್ನೂ ಮಾಡಿಕೊಡಬಲ್ಲವು."

ಕೆಲವೊಮ್ಮೆ ಇದು ಮನುಷ್ಯ ಮತ್ತು ಯಂತ್ರದ ನಡುವಿನ ವಿವರಣಾತ್ಮಕ ಸಮತೋಲನಕ್ಕಿಂತ ಹೆಚ್ಚಾಗಿರುತ್ತದೆ. ಎಳ್ಳು ಮುಂತಾದ ಮಳೆಯಾಶ್ರಿತ ಬೆಳೆಗಳನ್ನು ಸಂಗ್ರಹಿಸಲು ಮತ್ತು ಒಣಗಿಸಲು ಮತ್ತು ಒಕ್ಕಲು ಹೆಚ್ಚು ಸ್ಥಳಾವಕಾಶದ ಅಗತ್ಯವಿರುತ್ತದೆ. ಆದರೆ ಈ ಬೆಳೆಗಳು "ಹೆಚ್ಚು ಶ್ರಮವನ್ನು ಬೇಡುವುದಿಲ್ಲ" ಎಂದು ಲೆನಿನ್ ವಿವರಿಸುತ್ತಾರೆ, ಬೀಜಗಳನ್ನು ಪರಿಪೂರ್ಣ ಅರ್ಧವೃತ್ತದಲ್ಲಿ ಎಸೆಯುವಂತೆ ಕೈ ಬೀಸುತ್ತಾ, “ಬೀಜ ಬಿತ್ತಿ ಕುಳಿತರಾಯಿತು” ಬೆಳೆ ತಾನಾಗಿ ಬೆಳೆಯುತ್ತದೆ. ಆದರೂ ಈ ಬೆಳೆಯ ಜಾಗಕ್ಕೆ ಭತ್ತ ಬರಲು ಕಾರಣ ಅದರ ಇಳುವರಿ ಸಾಮರ್ಥ್ಯ. “ನೀವು 2.5 ಎಕರೆಯಲ್ಲಿ ಎಳ್ಳು ಬೆಳೆದರೂ ಅದರಿಂದ ಸಿಗುವ ಇಳುವರಿ ಒಂದು ಶೇರ್‌ ಆಟೋ ಕೂಡಾ ತುಂಬುವುದಿಲ್ಲ. ಆದರೆ ಅದೇ ಭತ್ತದ ಬೆಳೆಯಾದರೆ ಅಷ್ಟೇ ಜಾಗದಲ್ಲಿ ಅದರ ಇಳುವರಿ ಒಂದು ಟಿಪ್ಪರ್‌ ತುಂಬುವಷ್ಟಿರುತ್ತದೆ!”

PHOTO • M. Palani Kumar

ಪೂಂಕಾರ್ ತಳಿಯ ಭತ್ತದ ಗದ್ದೆ

PHOTO • M. Palani Kumar
PHOTO • M. Palani Kumar

ಎಡ: ಒಕ್ಕಣೆ ನೆಲ. ಬಲ: ಗೋದಾಮಿನಲ್ಲಿ ಲೆನಿನ್

ಇನ್ನೊಂದು ಅಂಶವೆಂದರೆ ಅಕ್ಕಿಗೆ ನಿಯಂತ್ರಿತ ಕೃಷಿ ಮಾರುಕಟ್ಟೆಗಳು ಲಭ್ಯವಿವೆ. ಮತ್ತು ಸಂಪೂರ್ಣ ಪೂರೈಕೆ ಸರಪಳಿಯು ಸುಧಾರಿತ ತಳಿಗಳನ್ನು ಬೆಂಬಲಿಸುತ್ತದೆ. ಹಸಿರು ಕ್ರಾಂತಿಯ ನಂತರ ಸ್ಥಾಪಿತವಾದ ಆಧುನಿಕ ಅಕ್ಕಿ ಗಿರಣಿಗಳು ಜರಡಿ ಸೇರಿದಂತೆ ಗುಣಮಟ್ಟದ ಯಂತ್ರೋಪಕರಣಗಳನ್ನು ಹೊಂದಿವೆ. ಸ್ಥಳೀಯ ಪ್ರಭೇದಗಳಿಗೆ ಇದು ಸೂಕ್ತವಲ್ಲ, ಏಕೆಂದರೆ ಸ್ಥಳೀಯ ಪ್ರಭೇದಗಳು ವಿಭಿನ್ನ ಗಾತ್ರಗಳು ಮತ್ತು ಆಕಾರಗಳನ್ನು ಹೊಂದಿವೆ. ಇದಲ್ಲದೆ, ಆಧುನಿಕ ಗಿರಣಿಗಳಲ್ಲಿ ಬಣ್ಣದ ಅಕ್ಕಿಯನ್ನು ಸಂಸ್ಕರಿಸಲಾಗುವುದಿಲ್ಲ. "ಅಕ್ಕಿ ಗಿರಣಿ ಮಾಲೀಕರು ಹಸಿರು ಕ್ರಾಂತಿಯ ದೊಡ್ಡ ಸಮರ್ಥಕರಲ್ಲ ಅಥವಾ ಅದರ ಬಗ್ಗೆ ಹೆಚ್ಚಿನ ಅಭಿಪ್ರಾಯವನ್ನು ಹೊಂದಿರುವುದಿಲ್ಲ. ಆದರೆ ಜನರು ತೆಳುವಾದ, ಹೊಳೆಯುವ, ಬಿಳಿ ಬಣ್ಣದ - ಹೆಚ್ಚಾಗಿ ಹೈಬ್ರಿಡ್ - ಅಕ್ಕಿಯನ್ನು ಬಯಸುತ್ತಾರೆನ್ನುವುದು ಅವರಿಗೆ ಅರ್ಥವಾಗಿದೆ ಮತ್ತು ಅಂತಹ ಅಕ್ಕಿಯನ್ನೇ ಸಂಸ್ಕರಿಸಲು ಬೇಕಾಗುವಂತೆ ಅವರು ತಮ್ಮ ಗಿರಣಿಗಳನ್ನು ತಯಾರಿಸಿ ಇಟ್ಟುಕೊಂಡಿರುತ್ತಾರೆ."

ಸಾಂಪ್ರದಾಯಿಕ ಭತ್ತದ ಬೆಳೆಯನ್ನು ವೈವಿಧ್ಯಗೊಳಿಸುವ ಮತ್ತು ಅಂತಹ ಭತ್ತದ ತಳಿಗಳನ್ನು ಬೆಳೆಸುವ ರೈತನಾದ ಅವವರು ತನ್ನ ಸ್ವಂತ ಜ್ಞಾನ ಮತ್ತು ಸಂಸ್ಕರಣಾ ಘಟಕಗಳು ಮತ್ತು ಅನಿರೀಕ್ಷಿತ ಸಾಮಾಜಿಕ ಬೆಂಬಲವನ್ನು ಅವಲಂಬಿಸಬೇಕಾಗುತ್ತದೆ ಎಂದು ಲೆನಿನ್ ವಿವರಿಸುತ್ತಾರೆ. "ಆದರೆ ಇವೆಲ್ಲವೂ ಹೆಚ್ಚಿನ ಇಳುವರಿ ನೀಡುವ, ಆಧುನಿಕ ಭತ್ತದ ಪ್ರಭೇದಗಳಿಗೆ ನೀಡಲಾದ ಮತ್ತು ಸುಲಭವಾಗಿ ಲಭ್ಯವಿರುವ ಒಂದು ಕೊಡುಗೆಯಾಗಿದೆ."

*****

ತಿರುವಣ್ಣಾಮಲೈ ಚೆನ್ನೈಯಿಂದ ಆಗ್ನೇಯಕ್ಕೆ ಸುಮಾರು 190 ಕಿಲೋಮೀಟರ್ ದೂರದಲ್ಲಿರುವ ಕಣಿವೆ ಜಿಲ್ಲೆಯಾಗಿದೆ. ಇಲ್ಲಿ ವಾಸಿಸುವ ಕನಿಷ್ಠ ಪ್ರತಿ ಎರಡನೇ ವ್ಯಕ್ತಿ "ಕೃಷಿ ಕೆಲಸ" ಮೇಲೆ ಅವಲಂಬಿತವಾಗಿದ್ದಾರೆ. ಸಕ್ಕರೆ ಕಾರ್ಖಾನೆಗಳಲ್ಲದೆ, ಈ ಪ್ರದೇಶದಲ್ಲಿ ಹಲವಾರು ಅಕ್ಕಿ ಗಿರಣಿಗಳೂ ಇವೆ.

2020–21ರಲ್ಲಿ ತಿರುವಣ್ಣಾಮಲೈ ತಮಿಳುನಾಡಿನಲ್ಲಿ ಭತ್ತದ ಕೃಷಿಯಲ್ಲಿ ಮೂರನೇ ಅತಿದೊಡ್ಡ ಪ್ರದೇಶವನ್ನು ಹೊಂದಿತ್ತು ಆದರೆ ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದೆ, ರಾಜ್ಯದ ಒಟ್ಟು ಅಕ್ಕಿ ಉತ್ಪಾದನೆಯ 10 ಪ್ರತಿಶತದಷ್ಟನ್ನು ಈ ಜಿಲ್ಲೆ ಉತ್ಪಾದಿಸುತ್ತಿದೆ. ಎಂ.ಎಸ್. ಸ್ವಾಮಿನಾಥನ್ ರಿಸರ್ಚ್ ಫೌಂಡೇಶನ್ ಸಂಸ್ಥೆಯ ಮುಖ್ಯ ಪರಿಸರ ತಂತ್ರಜ್ಞಾನ ವಿಜ್ಞಾನಿ ಡಾ. ಆರ್. ಗೋಪಿನಾಥ್ "ತಿರುವಣ್ಣಾಮಲೈ ಅಕ್ಕಿ ಉತ್ಪಾದನೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಗಿಂತಲೂ ಮುಂಚೂಣಿಯಲ್ಲಿದೆ, ಇತರ ಜಿಲ್ಲೆಗಳಲ್ಲಿ ಹೆಕ್ಟೇರ್‌ ಸರಾಸರಿ ಇಳುವರಿ 3500 ಕೆಜಿಯಾದರೆ ಇಲ್ಲಿ 3907 ಕೆಜಿಯಷ್ಟು ಇಳುವರಿ ಇದೆ" ಎಂದು ಹೇಳುತ್ತಾರೆ.

ಎಂಎಸ್ಎಸ್ಆರ್ಎಫ್ ನಿರ್ದೇಶಕ - ಪರಿಸರ ತಂತ್ರಜ್ಞಾನ, ಡಾ. ಆರ್.‌ ರಂಗಲಕ್ಷ್ಮಿ ತಿರುವಣ್ಣಾಮಲೈ ಜಿಲ್ಲೆಯಲ್ಲಿ ಭತ್ತದ ಕೃಷಿ ಪ್ರಮಾಣ ಸಾಕಷ್ಟು ಹೆಚ್ಚಾಗಿದೆ ಎನ್ನುತ್ತಾರೆ. "ಇದಕ್ಕೆ ಅನೇಕ ಕಾರಣಗಳು ಕಾರಣವಾಗಿವೆ. ಒಂದು ಮಳೆಯಾದಾಗ, ರೈತರು ಅಪಾಯವನ್ನು ಕಡಿಮೆ ಮಾಡಲು ಮತ್ತು ಭತ್ತವನ್ನು ಬೆಳೆಯಲು ಲಭ್ಯವಿರುವ ನೀರಿನ ಬಳಕೆಯನ್ನು ಗರಿಷ್ಠಗೊಳಿಸಲು ಬಯಸುತ್ತಾರೆ. ಇದು ಅವರಿಗೆ ಉತ್ತಮ ಇಳುವರಿ ಮತ್ತು ಪ್ರಾಯಶಃ ಲಾಭವನ್ನು ನೀಡುತ್ತದೆ. ಎರಡನೆಯದಾಗಿ, ಆಹಾರಕ್ಕಾಗಿ ಅಂದರೆ, ಕುಟುಂಬದ ಆಹಾರ ಭದ್ರತೆಗಾಗಿ ಬೆಳೆಯಲಾಗುತ್ತದೆ. ಮತ್ತು ಕೊನೆಯದಾಗಿ, ಹೆಚ್ಚಿದ ಅಂತರ್ಜಲ ನೀರಾವರಿಯಿಂದಾಗಿ ಬೆಳೆ ಚಕ್ರದಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಭತ್ತವನ್ನು ಬೆಳೆಯಲಾಗುತ್ತದೆ."

ಭತ್ತ ಸದಾ ನೀರು ಬೇಡುವ ಬೆಳೆ. ಡಾ. ಗೋಪಿನಾಥ್ ಹೇಳುತ್ತಾರೆ, 'ಪ್ರಮುಖ ಭಾರತೀಯ ಬೆಳೆಗಳ ನೀರಿನ ಉತ್ಪಾದಕತೆ ಮ್ಯಾಪಿಂಗ್' (2018) ಪ್ರಕಾರ, ಒಂದು ಕೆಜಿ ಅಕ್ಕಿಯನ್ನು ಉತ್ಪಾದಿಸಲು ಸುಮಾರು 3000 ಲೀಟರ್ ನೀರು ಬೇಕಾಗುತ್ತದೆ. ಪಂಜಾಬ್-ಹರಿಯಾಣಗಳಲ್ಲಿ ಈ ಅಗತ್ಯವು 5000 ಲೀಟರ್‌ಗೆ ಏರುತ್ತದೆ.

PHOTO • M. Palani Kumar

ಹೊಸದಾಗಿ ನಾಟಿ ಮಾಡಿದ ಭತ್ತದ ಸಸಿಗಳೊಂದಿಗೆ ಲೆನಿನ್ ಅವರ ಗದ್ದೆ

100 ಅಡಿ ಆಳಕ್ಕೆ ತೋಡಿದ ಬಾವಿಗಳ ನೀರನ್ನೇ ಲೆನಿನ್ ಅವರ ಗದ್ದೆಗಳು ಅವಲಂಬಿಸಿವೆ. “ನಮ್ಮ ಬೆಳೆಗೆ ಸಾಕು. ನಾವು ಒಂದು ಬಾರಿಗೆ ಎರಡು ಗಂಟೆಗಳ ಕಾಲ ಮತ್ತು ಮೂರು ಇಂಚಿನ ಪೈಪ್‌ನಿಂದ ಗರಿಷ್ಠ ಐದು ಗಂಟೆಗಳ ಕಾಲ ಮೋಟಾರ್ ಓಡಿಸಬಹುದು. ಆದರೆ, ಅವರು ಹೇಳುತ್ತಾರೆ, "ಮೋಟಾರ್‌ ಚಾಲನೆಯಲ್ಲಿಟ್ಟು ನಾನು ಎಲ್ಲೆಂದರಲ್ಲಿ ಓಡಾಡುವಂತಿಲ್ಲ..."

2000 ಮತ್ತು 2010 ರ ನಡುವೆ ನೀರಾವರಿ ಸಾಮರ್ಥ್ಯ ಹೆಚ್ಚಾಯಿತು ಎಂದು ಡಾ. ರಂಗಲಕ್ಷ್ಮಿ ಹೇಳುತ್ತಾರೆ. ಅವರು ಹೇಳುತ್ತಾರೆ, "ಆ ಸಮಯದಲ್ಲಿ ಹೆಚ್ಚಿನ ಅಶ್ವಶಕ್ತಿಯ ಬೋರ್‌ವೆಲ್ ಮೋಟಾರುಗಳು ಸಹ ಲಭ್ಯವಾದವು. ಜೊತೆಗೆ, ಕೊರೆಯುವ ಯಂತ್ರಗಳು ಸಾಮಾನ್ಯವಾದವು. ತಮಿಳುನಾಡಿನ ತಿರುಚೆಂಗೋಡ್ ಬೋರ್‌ವೆಲ್ ರಿಗ್‌ಗಳ ಕೇಂದ್ರವಾಗಿತ್ತು . ಕೆಲವೊಮ್ಮೆ ರೈತರು ಮೂರ್ನಾಲ್ಕು ವರ್ಷಗಳಿಗೊಮ್ಮೆ ಹೊಸ ಬೋರ್ ಕೊರೆಯುತ್ತಾರೆ. ಅವರು 1970ರವರೆಗೆ  ಅವರು ಮಳೆನೀರಿನ ಮೇಲೆ ಅವಲಂಬಿತರಾಗಿದ್ದರು, ಆಗೆಲ್ಲ ನಿರಂತರವಾಗಿ ಮೂರರಿಂದ ಐದು ತಿಂಗಳವರೆಗಷ್ಟೇ ಕೆಲಸ ಮಾಡಲು ಸಾಧ್ಯವಾಗುತ್ತಿತ್ತು. ಆಗೆಲ್ಲ ಅನ್ನವೆನ್ನುವುದು ಹಬ್ಬಗಳಲ್ಲಿ ಮಾತ್ರವೇ ತಿನ್ನುತ್ತಿದ್ದ ವಿಶೇಷ ಆಹಾರವಾಗಿತ್ತು. ಈಗ ಪ್ರತಿದಿನ ಮನೆಗಳಲ್ಲಿ ಅನ್ನ ಮಾಡುತ್ತಾರೆ. ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಇದರ ಸುಲಭ ಲಭ್ಯತೆಯೂ ಇದಕ್ಕೆ ಕಾರಣವೆನ್ನಬಹುದು."

ತಮಿಳುನಾಡಿನಲ್ಲಿ ಈಗ ಒಟ್ಟು ಬೆಳೆ ಪ್ರದೇಶದ ಶೇಕಡಾ 35ರಷ್ಟರಲ್ಲಿ ಭತ್ತವನ್ನು ಬೆಳೆಯಲಾಗುತ್ತದೆ. ಆದರೆ ಎಷ್ಟು ರೈತರು ಸಾವಯವ ಒಳಸುರಿ ಬಳಸಿ ಸ್ಥಳೀಯ ತಳಿಗಳನ್ನು ಬೆಳೆಯುತ್ತಾರೆ?

ಇದು ಒಳ್ಳೆಯ ಪ್ರಶ್ನೆ ಎನ್ನುತ್ತಾ ಲೆನಿನ್ ಮುಗುಳ್ನಕ್ಕರು. "ನೀವು ಅದನ್ನು ಎಕ್ಸೆಲ್ ಶೀಟ್‌ ಒಂದರಲ್ಲಿ ಹಾಕಿದರೆ, ನೀರಾವರಿ ಭತ್ತದ ಭೂಮಿಯಲ್ಲಿ ಕೇವಲ 1 ಅಥವಾ 2 ಪ್ರತಿಶತದಷ್ಟು ಮಾತ್ರ ಸಾಂಪ್ರದಾಯಿಕ ತಳಿಗಳನ್ನು ಕಾಣಬಹುದು. ಅಷ್ಟು ಕೂಡಾ ಸಿಗುವುದು ಕಷ್ಟ. ದೊಡ್ಡ ಅನುಕೂಲವೆಂದರೆ ಅವರು ರಾಜ್ಯದಾದ್ಯಂತ ಹರಡಿದ್ದಾರೆ.

ಆದರೆ ಲೆನಿನ್ ಕೇಳುತ್ತಾರೆ, ಆಧುನಿಕ ತಳಿಗಳನ್ನು ಬೆಳೆಯುವ ರೈತರು ಯಾವ ರೀತಿಯ ತರಬೇತಿಯನ್ನು ಪಡೆಯುತ್ತಾರೆ? "ಉತ್ಪಾದನೆ ಹೆಚ್ಚಿಸುವುದು ಮತ್ತು ಆದಾಯ ಹೆಚ್ಚಿಸುವುದು. ಎಲ್ಲಾ ಸೂಚನೆಗಳು ಚೆನ್ನೈ ಅಥವಾ ಕೊಯಮತ್ತೂರಿನಿಂದ ವಿವಿಧ ಬ್ಲಾಕ್‌ಗಳಿಗೆ ಮತ್ತು ನಂತರ ರೈತರಿಗೆ 'ಟಾಪ್ ಡೌನ್' ವಿಧಾನದಲ್ಲಿ ಹೋಗುತ್ತವೆ." ಲೆನಿನ್ ಕೇಳುತ್ತಾರೆ, "ಅವರನ್ನು [ಯೋಚಿಸದಂತೆ] ಹಿಡಿದಿಟ್ಟುಕೊಳ್ಳಲು ಇದು ಒಂದು ಮಾರ್ಗವಲ್ಲವೇ?".

ಮೌಲ್ಯವರ್ಧನೆಯ ಬಗ್ಗೆ ಮಾತನಾಡುವಾಗ ಮಾತ್ರ ಅವರ ವಿಧಾನವು 'ತಲೆ ಕೆಳಗಿರುತ್ತದೆ' ಎಂದು ಅವರು ಹೇಳುತ್ತಾರೆ. "ನಮಗೆ ಅಕ್ಕಿಯನ್ನು ಸಂಸ್ಕರಿಸುವಂತೆ, ಪ್ಯಾಕ್ ಮಾಡುವಂತೆ, ಇತ್ಯಾದಿಯಾಗಿ ಸೂಚಿಸಲಾಗಿದೆ..." ಉತ್ಪಾದನೆ ಮತ್ತು ಲಾಭದ ಮೇಲೆ ಒತ್ತು ನೀಡುವುದು ರೈತನನ್ನು ನರಳುವಂತೆ ಮಾಡುತ್ತದೆ. ಮತ್ತು ಹೆಚ್ಚಿನ ಇಳುವರಿಯೆನ್ನುವ ಮರೀಚಿಕೆಯನ್ನು ಬೆನ್ನಟ್ಟುವಂತೆ ಮಾಡುತ್ತದೆ.

PHOTO • M. Palani Kumar

ಲೆನಿನ್ ಮತ್ತು ಅವರ ಸ್ನೇಹಿತರು ವಿವಿಧ ರೀತಿಯ ಭತ್ತದ ತಳಿಗಳೊಂದಿಗೆ

ಸಾವಯವ ರೈತರು ಒಂದು ಗುಂಪಾಗಿ ವೈವಿಧ್ಯತೆ, ಸುಸ್ಥಿರತೆ ಮತ್ತು ಇತರ ವಿಷಯಗಳ ಬಗ್ಗೆ ಆಸಕ್ತಿ ವಹಿಸುತ್ತಾರೆ ಎಂದು ಲೆನಿನ್ ಹೇಳುತ್ತಾರೆ. ಅವರು ಹೇಳುತ್ತಾರೆ, "ಅಕ್ಕಿ ಅಥವಾ ಕೃಷಿಯ ಬಗೆಗಿನ ಯಾವುದೇ ಚರ್ಚೆ ಮೇಜಿನ ವೇದಿಕೆಯ ಮೇಲೆ ನಡೆಯಬಾರದು, ಅದರಲ್ಲಿ ಭಾಗವಹಿಸುವವರೆಲ್ಲರೂ ಸಮಾನವಾಗಿ ಕುಳಿತುಕೊಳ್ಳುವಂತಿರಬೇಕು. ಶ್ರೀಮಂತ ಅನುಭವ ಹೊಂದಿರುವ ರೈತರನ್ನು ಚರ್ಚೆಯಿಂದ ಏಕೆ ಹೊರಗಿಡಬೇಕು?"

ಸಾವಯವ ಕೃಷಿಯು ತಿರುವಣ್ಣಾಮಲೈ ಜಿಲ್ಲೆಯಲ್ಲಿ ಬಹಳ ಜನಪ್ರಿಯವಾಗಿದೆ. "ವಿಶೇಷವಾಗಿ ಯುವ ಪುರುಷ ರೈತರಲ್ಲಿ, 25ರಿಂದ 30 ವಯೋಮಾನದ ಅರ್ಧದಷ್ಟು ರೈತರು ರಾಸಾಯನಿಕ ಮುಕ್ತ ಕೃಷಿಯನ್ನು ಅಭ್ಯಾಸ ಮಾಡುತ್ತಾರೆ" ಎಂದು ಲೆನಿನ್ ಹೇಳುತ್ತಾರೆ. ಅದಕ್ಕಾಗಿಯೇ ಇಲ್ಲಿ ಅನೇಕ ಸ್ಥಳೀಯ ಚಟುವಟಿಕೆಗಳು ನಡೆಯುತ್ತವೆ. ಜಿಲ್ಲೆಯಲ್ಲಿ ಅನೇಕ ಮಾರ್ಗದರ್ಶಕರು ಇದ್ದಾರೆ "ಇಲ್ಲಿ ಜಮೀನುದಾರರಿಂದ ಹಿಡಿದು ಭೂಮಿ ಇಲ್ಲದವರವರೆಗೆ, ಜೊತೆಗೆ ಅನೇಕ ಶಿಕ್ಷಕರು ಸಹ ಇದ್ದಾರೆ!" ಅವರೆಂದರೆ ವೆಂಕಟಾಚಲಂ ಅಯ್ಯ, ಕಲಾಸ್ಪಕ್ಕಂ ಫೋರಂನ ಸಂಸ್ಥಾಪಕ, ತಮಿಳುನಾಡಿನ ಸಾವಯವ ಕೃಷಿಯ ಪಿತಾಮಹ ಎಂದು ಕರೆಯಲ್ಪಡುವ ನಮ್ಮಾಳ್ವಾರ್, ಪಮಯನ್ (ಚಿಂತಕ ಮತ್ತು ಸಾವಯವ ಕೃಷಿಕ), ಮೀನಾಕ್ಷಿ ಸುಂದರಂ ಮತ್ತು ಡಾ. ವಿ. ಅರಿವುಡೈ ನಂಬಿ ಸಾವಯವ ಕೃಷಿಕ ಮತ್ತು ಕೃಷಿ ವಿಜ್ಞಾನಿ, ಜಿಲ್ಲೆಯ ಯುವಕರಿಗೆ ವೈಯಕ್ತಿಕ ಸ್ಫೂರ್ತಿಯಾಗಿದ್ದಾರೆ ಎಂದು ಇವರೆಲ್ಲರ ಪಾತ್ರವನ್ನು ಅವರು ಒತ್ತಿ ಹೇಳುತ್ತಾರೆ. "ಕೆಲವು ಪ್ರಸಿದ್ಧ ವ್ಯಕ್ತಿಗಳು ನಮಗೆ ಕಲಿಸಿದ್ದಾರೆ" ಎಂದು ಅವರು ಹೇಳುತ್ತಾರೆ.

ಕೆಲವು ರೈತರು ಹೆಚ್ಚುವರಿ (ಕೃಷಿಯೇತರ) ಆದಾಯದ ಮೂಲವನ್ನು ಹೊಂದಿದ್ದಾರೆ. "ಅವರಿಗೆ ಕೃಷಿಯಿಂದ ಬರುವ ಆದಾಯ ಸಾಕಾಗುವುದಿಲ್ಲ ಎಂದು ಅರ್ಥಮಾಡಿಕೊಂಡಿದ್ದಾರೆ." ಈ ಇತರ ಉದ್ಯೋಗಗಳಿಂದ ಬರುವ ಆದಾಯದಿಂದ ಖರ್ಚುಗಳನ್ನು ಭಾಗಶಃ ನಿಭಾಯಿಸಲಾಗುತ್ತದೆ.

ಮಾರ್ಚ್ 2024ರಲ್ಲಿ ನನ್ನ ಮೂರನೇ ಭೇಟಿಯ ಸಮಯದಲ್ಲಿ, ಒಬ್ಬ ರೈತ ನಿರಂತರವಾಗಿ ಕಲಿಯುತ್ತಿರುತ್ತಾನೆ, ಅವನು ಎಂದಿಗೂ ಕಲಿಯುವುದನ್ನು ನಿಲ್ಲಿಸುವುದಿಲ್ಲ ಎಂದು ಲೆನಿನ್ ಹೇಳಿದರು. “ಅನುಭವವು ಬೆಳೆಗಳ ಬಗ್ಗೆ ನನಗೆ ಕಲಿಸುತ್ತದೆ: ಯಾವ ಭತ್ತದ ತಳಿಗಳ ಸಸ್ಯ ಎತ್ತರವಾಗಿ ಬೆಳೆಯುತ್ತವೆ ಮತ್ತು ಯಾವುದು ಚೆನ್ನಾಗಿ ಇಳುವರಿ ನೀಡುತ್ತವೆ, ಇದು ಮಳೆಯನ್ನು ತಡೆದುಕೊಳ್ಳಬಲ್ಲದು ಇತ್ಯಾದಿ. ನಾನು ನಾಲ್ಕು 'ಸಿ'ಗಳ ಚೌಕಟ್ಟಿನ ಮೇಲೆ ಅವಲಂಬಿತನಾಗಿದ್ದೇನೆ: ಕನ್ಸರ್ವೇಷನ್, ಕಲ್ಟಿವೇಷನ್, ಕನ್ಸಂಪ್ಷನ್ ಮತ್ತು ಕಾಮರ್ಸ್ (ಸಂರಕ್ಷಣೆ, ಕೃಷಿ, ಬಳಕೆ ಮತ್ತು ವಾಣಿಜ್ಯ)"‌ ಎಂದು ಅವರು ಹೇಳುತ್ತಾರೆ.

ನಾವು ಶೆಡ್ಡಿನಿಂದ ಅವರ ಹೊಲಗಳಿಗೆ ಹೋಗುತ್ತೇವೆ. ಅದು ಸ್ವಲ್ಪ ಮುಂದೆ, ಗದ್ದೆಗಳ ಆಚೆ, ಕಬ್ಬಿನ ತೋಟಗಳ ಪಕ್ಕದಲ್ಲಿ, ಗಾರೆ ಮಾಡಿದ ಚಪ್ಪರದಂತಹ ಚಾವಣಿ ಹೊಂದಿದ್ದ ಕಟ್ಟಡಗಳ ಪ್ಲಾಟ್‌ಗಳಿದ್ದವು. ಲೆನಿನ್ ನಿಟ್ಟುಸಿರು ಬಿಡುತ್ತಾರೆ, “ಇಲ್ಲಿ ಭೂಮಿ ಈಗ ಚದರ ಅಡಿ ಲೆಕ್ಕದಲ್ಲಿ ಮಾರಾಟವಾಗುತ್ತದೆ. ಸಮಾಜವಾದಿ ಮನೋಭಾವದ ಜನರೂ ಈಗ ಬಂಡವಾಳಶಾಹಿಗೆ ಮಾರು ಹೋಗಿದ್ದಾರೆ’’ ಎಂದು ಹೇಳಿದರು.

ಅವರು ಪೂಂಕಾರ್ ತಳಿಯನ್ನು 25 ಸೆಂಟ್ಸ್ (ಎಕರೆಯ ನಾಲ್ಕನೇ ಒಂದು ಭಾಗ) ಜಾಗದಲ್ಲಿ ಬೆಳೆಯುತ್ತಾರೆ. "ನಾನು ಇನ್ನೊಬ್ಬ ರೈತನಿಗೆ ಪೂಂಕಾರ್ ಬೀಜಗಳನ್ನು ನೀಡಿದ್ದೆ. ಕೊಯ್ಲಿನ ನಂತರ ನಂತರ ಅವರು ಅವುಗಳನ್ನು ನನಗೆ ಹಿಂದಿರುಗಿಸಿದರು." ಈ ಮುಕ್ತ ವಿನಿಮಯವು ಚಲಾವಣೆಯಲ್ಲಿರುವ ಬೀಜಗಳು ಹೆಚ್ಚುತ್ತಲೇ ಇರುವುದನ್ನು ಖಚಿತಪಡಿಸುತ್ತದೆ.

ಭೂಮಿಯ ಇನ್ನೊಂದು ಭಾಗದಲ್ಲಿ ಅವರು ನಮಗೆ ವಲೈಪು ಸಾಂಬಾ ಎಂಬ ಜಾತಿಯನ್ನು ತೋರಿಸುತ್ತಾರೆ. "ಮತ್ತೊಬ್ಬ ರೈತ ಕಾರ್ತಿ ಅಣ್ಣ ನನಗೆ ಈ ಬೀಜಗಳನ್ನು ನೀಡಿದರು. ನಾವು ಈಗ ಆಧುನಿಕ ತಳಿಗಳ ಬದಲಿಗೆ ಈ ತಳಿಗಳನ್ನು ಬೆಳೆಯಬೇಕು" ಎಂದು ಲೆನಿನ್ ಹೇಳುತ್ತಾರೆ. ಒಂದಷ್ಟು ಸಸಿಗಳನ್ನು ಒಟ್ಟಾಗಿ ಹಿಡಿದಾಗ ಅದರಲ್ಲಿ ಭತ್ತದ ಕಾಳುಗಳು ವಾಳೈಪೂ (ಬಾಳೆಹಣ್ಣಿನ ಹೂವು) ಆಕಾರದಲ್ಲಿ ಸುಂದರವಾಗಿ ತೂಗಾಡುತ್ತಿದ್ದವು, ಅದು ಆಭರಣ ವಿನ್ಯಾಸಕರು ಕೈಯಿಂದ ರಚಿಸಿದ ಆಭರಣದಂತೆ ಕಾಣುತ್ತಿತ್ತು!

PHOTO • M. Palani Kumar
PHOTO • M. Palani Kumar

ಲೆನಿನ್ ನಮಗೆ ವಾಳೈಪೂ ಸಾಂಬಾ, ಪಾರಂಪರಿಕ ಭತ್ತದ ತಳಿಯನ್ನು ತೋರಿಸುತ್ತಿದ್ದಾರೆ

ವೈವಿಧ್ಯಮಯ ಮೇಳಗಳು ಮತ್ತು ತರಬೇತಿ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಸಾವಯವ ಕೃಷಿ ಮತ್ತು ಸ್ಥಳೀಯ ತಳಿಗಳನ್ನು ಜನಪ್ರಿಯಗೊಳಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಲೆನಿನ್ ಒಪ್ಪಿಕೊಳ್ಳುತ್ತಾರೆ. ಅವರು ಹೇಳುತ್ತಾರೆ, “ಒಂದು ರಾತ್ರಿಯಲ್ಲಿ ಪರಿಸ್ಥಿತಿಯನ್ನು ಬದಲಾಯಿಸಲು ಸಾಧ್ಯವಿಲ್ಲ. ಅವರು ಇದ್ದಕ್ಕಿದ್ದಂತೆ ಎಲ್ಲಾ ರಸಗೊಬ್ಬರ ಕಾರ್ಖಾನೆಗಳು ಮತ್ತು ಬೀಜ ಅಂಗಡಿಗಳನ್ನು ಮುಚ್ಚಲು ಸಾಧ್ಯವಿಲ್ಲ ಅಲ್ಲವೇ? ಬದಲಾವಣೆ ನಿಧಾನವಾಗುತ್ತದೆ."

ತಮಿಳುನಾಡು ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಎಂ.ಆರ್.ಕೆ. ಪನ್ನೀರಸೆಲ್ವಂ ಅವರು ತಮ್ಮ 2024ರ ಕೃಷಿ ಬಜೆಟ್ ಭಾಷಣದಲ್ಲಿ ಸಾಂಪ್ರದಾಯಿಕ ಭತ್ತದ ತಳಿಗಳ ಸಂರಕ್ಷಣೆಗಾಗಿ ನೆಲ್ ಜಯರಾಮನ್ ಮಿಷನ್ ಅಡಿಯಲ್ಲಿ, "2023-2024ರ ಅವಧಿಯಲ್ಲಿ 12400 ಎಕರೆಗಳಲ್ಲಿ ಸಾಂಪ್ರದಾಯಿಕ ತಳಿಗಳನ್ನು ಬೆಳೆಯುವ ಮೂಲಕ 20979 ರೈತರು ಪ್ರಯೋಜನ ಪಡೆದಿದ್ದಾರೆ" ಎಂದು ಹೇಳಿದರು.

ಈ ಮಿಷನ್ 2007ರಲ್ಲಿ ತಮಿಳುನಾಡಿನ ಸಾಂಪ್ರದಾಯಿಕ ಭತ್ತದ ಬೀಜ ವಿನಿಮಯ ಹಬ್ಬವನ್ನು ಆರಂಭಿಸಿದ (ದಿವಂಗತ) ನೆಲ್ ಜಯರಾಮನ್ ಅವರಿಗೆ ಸಂದ ಸೂಕ್ತವಾದ ಗೌರವವಾಗಿದೆ - ಇದನ್ನು ನೆಲ್ ತಿರುವಿಳಾ ಎಂದು ಕರೆಯಲಾಗುತ್ತದೆ - ನಮ್ಮ ಅಕ್ಕಿ ಉಳಿಸಿ ಅಭಿಯಾನದ ಭಾಗವಾಗಿ. "12 ವರ್ಷಗಳಲ್ಲಿ ಅವರು ಮತ್ತು ಅವರ ಅನುಯಾಯಿಗಳು, ಉತ್ಸಾಹಿ ಸಾವಯವ ರೈತರು ಮತ್ತು ಬೀಜ ಸಂರಕ್ಷಕರು, ಸುಮಾರು 174 ಪ್ರಭೇದಗಳನ್ನು ಸಂಗ್ರಹಿಸಿದ್ದು, ಅವುಗಳಲ್ಲಿ ಹೆಚ್ಚಿನವು ಅಳಿವಿನ ಅಂಚಿನಲ್ಲಿದ್ದವು" ಎಂದು ಲೆನಿನ್ ಹೇಳುತ್ತಾರೆ.

ರೈತರು ಮತ್ತು ಗ್ರಾಹಕರ ನಡುವೆ ಸಾಂಪ್ರದಾಯಿಕ ಅಕ್ಕಿ ತಳಿಗಳನ್ನು ಜನಪ್ರಿಯಗೊಳಿಸಲು ಏನು ಮಾಡಬೇಕು ಎಂದು ಲೆನಿನ್ ಚೆನ್ನಾಗಿ ತಿಳಿದಿದ್ದಾರೆ. “ಕಡಿಮೆ ಪ್ರದೇಶದಲ್ಲಿ ಭತ್ತ ನಾಟಿ ಮಾಡುವಲ್ಲಿ, ಸಂರಕ್ಷಣಾ ವಲಯದಲ್ಲಿ ಮುಖ್ಯ ಕೆಲಸ ಮಾಡಬೇಕು. ಆನುವಂಶಿಕ ಶುದ್ಧತೆ ಮತ್ತು ವೈವಿಧ್ಯತೆಯ ರಕ್ಷಣೆಗೆ ಒತ್ತು ನೀಡಬೇಕಿದೆ. ಕೃಷಿಗೆ ಹರಡುವಿಕೆ ಅಗತ್ಯ, ಇದಕ್ಕೆ ಸಮಾಜದ ಬೆಂಬಲ ಬೇಕು. ಕೊನೆಯ ಎರಡು ಸಿ (C) ಗಳು – ಕನ್ಸಂಪ್ಷನ್‌ ಮತ್ತು ಕಾಮರ್ಸ್ (ಬಳಕೆ ಮತ್ತು ವಾಣಿಜ್ಯ) - ಪರಸ್ಪರ ಸಂಬಂಧ ಹೊಂದಿವೆ. ನೀವು ಮಾರುಕಟ್ಟೆಗಳನ್ನು ನಿರ್ಮಿಸಿ ಮತ್ತು ಅದನ್ನು ಗ್ರಾಹಕರ ಬಳಿಗೆ ಕೊಂಡೊಯ್ಯಿರಿ." ಅವರು ನಗುತ್ತಾ ಹೇಳುತ್ತಾರೆ, "ಉದಾಹರಣೆಗೆ, ನಾವು ಸೀರಗಾ ಸಾಂಬಾದಿಂದ ಅವಲ್ (ಅವಲಕ್ಕಿ) ಮಾಡಲು ಪ್ರಯತ್ನಿಸಿದ್ದೇವೆ. ಪ್ರಯೋಗ ಬಹಳ ಯಶಸ್ವಿಯಾಯಿತು. ಈಗ ನಾವು ಕಳೆದುಹೋದ ಪ್ರಕ್ರಿಯೆಗಳನ್ನು ಮರುಶೋಧಿಸಲು ಮತ್ತು ಅವುಗಳನ್ನು ಜನಪ್ರಿಯಗೊಳಿಸಲು ನೋಡುತ್ತಿದ್ದೇವೆ!

ಸೀರಗಾ ಸಾಂಬಾ ಅಕ್ಕಿಗೆ ತಮಿಳುನಾಡು 'ಆಕರ್ಷಕ ಮಾರುಕಟ್ಟೆ' ಹೊಂದಿದೆ ಎಂದು ಲೆನಿನ್ ಹೇಳುತ್ತಾರೆ. “ಅವರು ಬಿರಿಯಾನಿಯಲ್ಲಿ ಬಾಸ್ಮತಿಯ ಬದಲಿಗೆ ಈ ಅಕ್ಕಿಯನ್ನು ಬಳಸಲು ಬಯಸುತ್ತಾರೆ. ಅದಕ್ಕಾಗಿಯೇ ಇಲ್ಲಿ ಯಾವುದೇ ಬಾಸ್ಮತಿ ಸಂಸ್ಕರಣಾ ಘಟಕಗಳಿಲ್ಲ” ಎಂದು ಹೇಳುವಾಗ ಹಿನ್ನೆಲೆಯಲ್ಲಿ ಕೇಳುತ್ತಿದ್ದ ಕೊಂಬುಗಳ ಸದ್ದು ಸೀರಗಾ ಸಾಂಬಾ ಅಕ್ಕಿಯನ್ನು ಹೊಗಳುತ್ತಿರುವಂತೆ ಕೇಳುತ್ತಿತ್ತು. ಅದೇ ರೀತಿ ಕರಪ್ಪು ಕಾವಣಿ ತಳಿಯನ್ನು ರೈತರ ನಡುವೆ ಧೋನಿಯ ಸಿಕ್ಸರ್‌ಗಳಿಗೆ ಹೋಲಿಸಲಾಗುತ್ತದೆ. ಒಂದೇ ಒಂದು ಸಮಸ್ಯೆ ಇದೆ. "ಒಂದು ದೊಡ್ಡ ಜಮೀನು ಹೊಂದಿರುವ ರೈತ ಕರಪ್ಪು ಕಾವುಣಿ ಅಕ್ಕಿಯನ್ನು 2000 ಪಟ್ಟು ಹೆಚ್ಚು ಬೆಳೆಯುತ್ತಾನೆ ಎಂದು ಭಾವಿಸೋಣ - ಆಗ ಇಡೀ ಆಟವು ಸಂಪೂರ್ಣವಾಗಿ ಹಾಳಾಗಿ ಬೆಲೆ ಕುಸಿಯುತ್ತದೆ." ಸಣ್ಣ ಕೃಷಿಭೂಮಿಗಳ ಹೆಚ್ಚಿನ ಪ್ರಯೋಜನ - ಅವುಗಳ ವೈವಿಧ್ಯತೆ ಮತ್ತು ಸಣ್ಣ ಗಾತ್ರ - ತ್ವರಿತವಾಗಿ ಗಂಭೀರ ಅನನುಕೂಲವಾಗಿಯೂ ಪರಿಣಮಿಸಬಹುದು.

PHOTO • M. Palani Kumar
PHOTO • M. Palani Kumar

ಎಡ: ಲೆನಿನ್‌ ತಮ್ಮ ಗದ್ದೆಯಲ್ಲಿ ಬೆಳೆದ ಕರಪ್ಪು ಕಾವಣಿ ತಳಿಯ ಭತ್ತ. ಬಲ: ಇಳೈಪು ಸಾಂಬಾ, ಪಾಲಿಶ್ ಮಾಡದ ಹಸಿ ಅಕ್ಕಿ, ಇದನ್ನು ವೇದಿಕೆಯಲ್ಲಿ ಮಾರಾಟಕ್ಕಿಡಲಾಗಿದೆ

*****

ದೊಡ್ಡ ಮತ್ತು ಅರ್ಥಮಾಡಿಕೊಳ್ಳಲು ಸುಲಭವಾದ - ಪ್ರೋತ್ಸಾಹವು ಸಾಮಾನ್ಯವಾಗಿ ಆರ್ಥಿಕ ರೂಪದ್ದಾಗಿರುತ್ತದೆ. ಜೈವಿಕ ಒಳಸುರಿಯೊಂದಿಗೆ ಸಾಂಪ್ರದಾಯಿಕ ಭತ್ತದ ತಳಿಗಳನ್ನು ಬೆಳೆಸುವುದು ಲಾಭದಾಯಕವೇ? "ಹೌದು, ಲಾಭದಾಯಕ" ಎಂದು ಲೆನಿನ್ ನಿಧಾನವಾಗಿ ಮತ್ತು ದೃಢವಾಗಿ ಹೇಳುತ್ತಾರೆ.

ಲೆನಿನ್ ಪ್ರತಿ ಎಕರೆಗೆ ಸುಮಾರು 10,000 ರೂಪಾಯಿಗಳ ಲಾಭವನ್ನು ಲೆಕ್ಕ ಹಾಕುತ್ತಾರೆ. ಅವರು ಹೇಳುತ್ತಾರೆ, “ಸಾವಯವ ಪದ್ಧತಿಯಲ್ಲಿ ಬೆಳೆದ ಒಂದು ಎಕರೆ ಸಾಂಪ್ರದಾಯಿಕ ಭತ್ತಕ್ಕೆ 20,000 ರೂ. ರಾಸಾಯನಿಕ ಒಳಸುರಿಯೊಂದಿಗೆ ಇದು 30000ರಿಂದ 35000 ರೂಪಾಯಿಗಳ ನಡುವೆ ಬರುತ್ತದೆ. ಇಳುವರಿಯೂ ವೆಚ್ಚಕ್ಕೆ ಅನುಗುಣವಾಗಿರುತ್ತದೆ. ಸಾಂಪ್ರದಾಯಿಕ ಅಕ್ಕಿ ಉತ್ಪಾದನೆಯು ಸರಾಸರಿ 75 ಕೆಜಿಯ 15ರಿಂದ 22 ಚೀಲಗಳ ನಡುವೆ ಇರುತ್ತದೆ. ಆಧುನಿಕ ತಳಿಗಳಲ್ಲಿ ಇದು ಸುಮಾರು 30 ಚೀಲಗಳ ಇರುತ್ತದೆ.

ವೆಚ್ಚವನ್ನು ಕಡಿಮೆ ಮಾಡುವ ಸಲುವಾಗಿ ಲೆನಿನ್ ಹೆಚ್ಚಿನ ಕೆಲಸವನ್ನು ಸ್ವತಃ ಕೈಯಾರೆ ಮಾಡುತ್ತಾನೆರೆ. ಕೊಯ್ಲು ಮಾಡಿದ ನಂತರ ಅವರು ಕಟ್ಟುಗಳನ್ನು ಒಕ್ಕಣೆ ಮಾಡಿ ಅಕ್ಕಿಯನ್ನು ಚೀಲಗಳಲ್ಲಿ ಸಂಗ್ರಹಿಸುತ್ತಾರೆ. ಇದರಿಂದ ಎಕರೆಗೆ ಸುಮಾರು 12000 ರೂಪಾಯಿ ಉಳಿತಾಯವಾಗುತ್ತದೆ. ಆದರೆ ಅವರು ಅದರಲ್ಲಿ ಒಳಗೊಂಡಿರುವ ಶ್ರಮವನ್ನು ಅಪಮೌಲ್ಯಗೊಳಿಸದಂತೆ ಅಥವಾ ರೋಮ್ಯಾಂಟೈಸ್ ಮಾಡದಂತೆ ಎಚ್ಚರಿಕೆ ವಹಿಸುತ್ತಾರೆ. ಅವರು ಹೇಳುತ್ತಾರೆ, “ನಮಗೆ ಹೆಚ್ಚಿನ ಸ್ಥಳೀಯ ಡೇಟಾ ಬೇಕು ಎಂದು ನಾನು ಭಾವಿಸುತ್ತೇನೆ. ಉದಾಹರಣೆಗೆ ಮಾಪಿಳೈ ಸಾಂಬದಂತಹ ಸಾಂಪ್ರದಾಯಿಕ ತಳಿಯನ್ನು 30 ಸೆಂಟ್ಸ್‌ನಲ್ಲಿ ಬೆಳೆಸಿ ಕೈ ಮತ್ತು ಯಂತ್ರದ ಕೊಯ್ಲು ವೆಚ್ಚವನ್ನು ಲೆಕ್ಕಹಾಕಿ ಎಚ್ಚರಿಕೆಯಿಂದ ಅಧ್ಯಯನ ಮಾಡಿ ನೋಡಬೇಕು." ಯಾಂತ್ರೀಕರಣವು ಶ್ರಮವನ್ನು ಕಡಿಮೆ ಮಾಡುತ್ತದೆ ಆದರೆ ವೆಚ್ಚವನ್ನು ಕಡಿಮೆಗೊಳಿಸುವುದು ಪ್ರಾಯೋಗಿಕವಾದುದು ಎಂದು ಅವರು ಹೇಳುತ್ತಾರೆ. “ವೆಚ್ಚದ ವಿಷಯದಲ್ಲಿ ಯಾವುದಾದರೂ ಲಾಭವಿದ್ದರೆ ಅದು ರೈತನನ್ನು ತಲುಪುವುದಿಲ್ಲ. ಅದು ಮಧ್ಯದಲ್ಲೇ ಆವಿಯಾಗುತ್ತದೆ” ಎಂದು ಲೆನಿನ್‌ ಹೇಳುತ್ತಾರೆ.

ದೇಬಲ್ ದೇಬ್ ಅವರನ್ನು ಉಲ್ಲೇಖಿಸಿ, ಲಾಭವನ್ನು ವಿಭಿನ್ನವಾಗಿ ಅರ್ಥಮಾಡಿಕೊಳ್ಳಬೇಕು ಎಂದು ಲೆನಿನ್ ಹೇಳುತ್ತಾರೆ. "ಒಣ ಹುಲ್ಲು, ತೌಡು, ಬೀಜ, ಮತ್ತು ಅಕ್ಕಿ ಎಲ್ಲವನ್ನೂ ಸೇರಿಸಿ ಲಾಭ ಲೆಕ್ಕ ಹಾಕಬೇಕು. ಇದರಲ್ಲಿನ ಗುಪ್ತ ಉಳಿತಾಯವೆಂದರೆ ಮಣ್ಣು ಎಷ್ಟು ಪ್ರಯೋಜನ ಪಡೆಯುತ್ತದೆ ಎನ್ನುವುದು. ಮಂಡಿಯಲ್ಲಿ ಭತ್ತವನ್ನು ಮಾರಾಟ ಮಾಡುವುದರ ಹೊರತಾಗಿ ಲಾಭವನ್ನು ನೋಡುವುದು ಈ ಪದ್ಧತಿಯಲ್ಲಿ ಅತ್ಯಗತ್ಯ."

ಸಾಂಪ್ರದಾಯಿಕ ತಳಿಗಳಿಗೆ ಬಹಳ ಕಡಿಮೆ ಸಂಸ್ಕರಣೆ ಸಾಕಾಗುತ್ತದೆ. "ಗ್ರಾಹಕರು ಸಾವಯವ ಉತ್ಪನ್ನಗಳಿಂದ ಪರಿಪೂರ್ಣತೆಯನ್ನು ನಿರೀಕ್ಷಿಸುವುದಿಲ್ಲ." ಇದನ್ನು ರೈತರು ಎಲ್ಲೆಡೆ ವಿವರಿಸುತ್ತಾರೆ - ಸೇಬುಗಳು ವಿಚಿತ್ರವಾದ ಆಕಾರದಲ್ಲಿರಬಹುದು, ಕ್ಯಾರೆಟ್‌ಗಳಲ್ಲಿ ಏರು ತಗ್ಗು ಇರಬಹುದು ಮತ್ತು ಅಕ್ಕಿ ಒಂದೇ ಗಾತ್ರ ಅಥವಾ ಬಣ್ಣದಲ್ಲಿ ಇಲ್ಲದಿರಬಹುದು ಹಾಗೆಂದು ಅವುಗಳನ್ನು ನೋಟದ ಕಾರಣಕ್ಕೆ ತಿರಸ್ಕರಿಸಬಾರದು. ಅವುಗಳು ಆರೋಗ್ಯವಂತ ಬೆಳೆಗಳಾರಿಬೇಕು ಅಷ್ಟೇ.

ಆದರೆ ಹಣಕಾಸಿನ ವಿಷಯವನ್ನು ಸಮತೋಲನಗೊಳಿಸಲು ರೈತ ಗುಂಪುಗಳು ಮಾರಾಟ ಮತ್ತು ಪೂರೈಕೆ ಸರಪಳಿಗಳನ್ನು ನೋಡಿಕೊಳ್ಳುವುದು ಮುಖ್ಯ - ಮತ್ತು ಅವಶ್ಯಕವಾಗಿದೆ. ಮತ್ತು ಲೆನಿನ್ ಅದರಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಕಳೆದ ಎರಡು ವರ್ಷಗಳಿಂದ ಈ ಭಾಗದ ಹಲವು ರೈತರು ಬೆಳೆದ ನಾಟಿ ಅಕ್ಕಿಯನ್ನು ಅವರು ತಮ್ಮ ಗೋದಾಮಿನಿಂದಲೇ ವಿತರಿಸಿದ್ದಾರೆ. ಕಳೆದ 6 ತಿಂಗಳಲ್ಲಿ 10x11 ಅಡಿಯ ಶೆಡ್‌ನಿಂದ 60 ಟನ್ ಅಕ್ಕಿಯನ್ನು ಮಾರಾಟ ಮಾಡಲು ಸಹಾಯ ಮಾಡಿದ್ದಾರೆ. ಅವರ ಗ್ರಾಹಕರು ಅವರನ್ನು ನಂಬುತ್ತಾರೆ ಮತ್ತು ಅವರ ಕುರಿತು ಚೆನ್ನಾಗಿ ತಿಳಿದಿದ್ದಾರೆ. ಲೆನಿನ್ ಹೇಳುತ್ತಾರೆ, “ಸಭೆಗಳಲ್ಲಿ ನಾನು ಮಾತನಾಡುವುದನ್ನು ಅವರು ಕೇಳುತ್ತಾರೆ, ನನ್ನ ಮನೆ ಎಲ್ಲಿದೆ ಮತ್ತು ನಾನು ಏನು ಮಾಡುತ್ತೇನೆ ಎನ್ನುವುದು ಅವರಿಗೆ ತಿಳಿದಿದೆ. ಹೀಗಾಗಿ ಅವರು ತಮ್ಮ ಉತ್ಪನ್ನಗಳನ್ನು ಇಲ್ಲಿಗೆ ತರುತ್ತಾರೆ ಮತ್ತು ಬೆಳೆ ಮಾರಾಟವಾದ ನಂತರ ಹಣ ಕೊಡುವಂತೆ ಹೇಳುತ್ತಾರೆ.”

PHOTO • M. Palani Kumar

ಕೊಯ್ಲು ಮಾಡಿದ ಭತ್ತವು ಒಕ್ಕಣೆಗಾಗಿ ಕಾಯುತ್ತಿದೆ

PHOTO • M. Palani Kumar
PHOTO • Aparna Karthikeyan

ಎಡ: ಲೆನಿನ್ ಮರಕ್ಕ ಬಳಸಿ ಭತ್ತವನ್ನು ಅಳೆಯುತ್ತಾರೆ. ಬಲ: ಲೆನಿನ್ ವಿತರಣೆಗಾಗಿ ಅಕ್ಕಿಯ ಮೂಟೆಗಳನ್ನು ವಿಘ್ನೇಶ್ ಅವರ ಬೈಕ್‌ಗೆ ಹೇರುತ್ತಿದ್ದಾರೆ

ಗ್ರಾಹಕರು ದಿನವಿಡೀ ಅವರಿಗೆ ಕರೆ ಮತ್ತು ಸಂದೇಶಗಳನ್ನು ಕಳುಹಿಸುತ್ತಾರೆ. ಇದು ಕಷ್ಟಕರವಾದ ಕೆಲಸ, ಮತ್ತು ಅವರು ದಿನವಿಡೀ ತೂಕ ಮಾಡುವುದರಲ್ಲಿ, ಪ್ಯಾಕಿಂಗ್ ಮತ್ತು ಕೆಲವೊಮ್ಮೆ ಪ್ಯಾಕ್ ಮಾಡಿದ ಚೀಲಗಳನ್ನು ತಿರುವಣ್ಣಾಮಲೈ, ಆರಾಣಿ, ಕನ್ನಮಂಗಲಂ ಮುಂತಾದ ಹತ್ತಿರದ ಪಟ್ಟಣಗಳಿಗೆ ತಲುಪಿಸುವಲ್ಲಿ ನಿರತರಾಗಿರುತ್ತಾರೆ.

ಲೆನಿನ್ ಅವರ ಕೆಲವು ಗ್ರಾಹಕರು ಯಾರೆನ್ನುವುದನ್ನು ನಾವು ಯೋಚಿಸಲು ಸಹ ಸಾಧ್ಯವಿಲ್ಲ. "(ರಾಸಾಯನಿಕ) ಗೊಬ್ಬರಗಳನ್ನು ಮಾರುವವರು, ಹೈಬ್ರಿಡ್ ಬೀಜಗಳನ್ನು ಜನಪ್ರಿಯಗೊಳಿಸುವವರು, ಎಲ್ಲರೂ ನನ್ನಿಂದ ಅಕ್ಕಿ ಖರೀದಿಸುತ್ತಾರೆ" ಎಂದು ಲೆನಿನ್ ಹೇಳುತ್ತಾರೆ. ಈ ವಿಪರ್ಯಾಸಕ್ಕೆ ಅವರು ನಗುತ್ತಾರೆ. “ಅಗ್ರಿ ಇನ್‌ಪುಟ್ ಕಂಪನಿ ಮಾಲೀಕರು ತಮ್ಮ ಅಂಗಡಿಗಳಲ್ಲಿ ಹೆಸರಿಲ್ಲದ ಚೀಲಗಳಲ್ಲಿ ಅಕ್ಕಿಯನ್ನು ಹಾಕಲು ಹೇಳುತ್ತಾರೆ. ಅವರು ನನಗೆ G-Pay ಮೂಲಕ ಪಾವತಿಸುತ್ತಾರೆ. ಎಲ್ಲವೂ ಗೊತ್ತಾಗದಂತೆ ನಡೆಯಬೇಕೆಂದು ಅವರು ಬಯಸುತ್ತಾರೆ.”

ಅಕ್ಕಿ ವಿತರಣೆಯಿಂದ ತಿಂಗಳಿಗೆ ನಾಲ್ಕರಿಂದ ಎಂಟು ಲಕ್ಷ ವಹಿವಾಟು ನಡೆಯುತ್ತಿದೆ. ಸುಮಾರು 4000ದಿಂದ 8000 ರೂಪಾಯಿಗಳ ಲಾಭ ಬರುತ್ತದೆ. ಆದಾಗ್ಯೂ, ಈ ಕುರಿತು ಲೆನಿನ್ ಸಂತೋಷವಾಗಿದ್ದಾರೆ. ಅವರು ಹೇಳುತ್ತಾರೆ, “ನಾನು ನಗರದಲ್ಲಿ ಅಕ್ಕಿ ಸಂಗ್ರಹಿಸಲು ಒಂದು ಕೋಣೆಯನ್ನು ಬಾಡಿಗೆಗೆ ಪಡೆದರೆ, ಅದಕ್ಕೆ ತುಂಬಾ ಖರ್ಚಾಗುತ್ತದೆ. ಬಾಡಿಗೆ ಜೊತೆಗೆ ಹೊಲದಿಂದ ದೂರ ಬದುಕುವುದು ಕಷ್ಟ, ಸಹಾಯಕರಿಗೆ ಕೂಲಿ ಕೊಡಲು ಸಾಕಷ್ಟು ಹಣ ಖರ್ಚಾಗುತ್ತಿತ್ತು. ಆ ಸಮಯದಲ್ಲಿ ನನಗೆ ಹತ್ತಿರದ ದೊಡ್ಡ ಅಕ್ಕಿ ಗಿರಣಿ ಎಂದರೆ ತುಂಬಾ ಭಯವಾಗಿತ್ತು. ಅದು ಅನೇಕ ಶಾಖೆಗಳನ್ನು ಹೊಂದಿತ್ತು ಮತ್ತು ಹೊಚ್ಚ ಹೊಸ ಯಂತ್ರೋಪಕರಣಗಳನ್ನು ಹೊಂದಿತ್ತು. ಗಿರಣಿಯಲ್ಲಿ ಅಕ್ಕಿ ಮಾಡಿಸಲು ಕೂಡ ಹಿಂದೇಟು ಹಾಕಿದೆ. ಅವರು ಕೋಟ್ಯಂತರ ರೂಪಾಯಿ ಸಾಲದಲ್ಲಿದ್ದಾರೆಂದು ನಂತರ ನನಗೆ ಗೊತ್ತಾಯಿತು.”

ಹಿಂದಿನ ಪೀಳಿಗೆಯವರು ಸಾಂಪ್ರದಾಯಿಕ ಅಕ್ಕಿಯನ್ನು ಪ್ರಚಾರ ಮಾಡಿ ಹಣ ಸಂಪಾದನೆ ಮಾಡಿರಲಿಲ್ಲ ಎಂದು ಲೆನಿನ್ ಹೇಳುತ್ತಾರೆ. "ನಾನು ಸ್ವಲ್ಪ ಲಾಭ ಗಳಿಸುತ್ತೇನೆ, ಪ್ರಕೃತಿಯೊಂದಿಗೆ ಬದುಕುತ್ತೇನೆ, ಪರಿಸರಕ್ಕೆ ಕನಿಷ್ಠ ಹಾನಿ ಮಾಡುತ್ತೇನೆ ಮತ್ತು ಅಳಿದುಹೋದ ಭತ್ತದ ತಳಿಗಳನ್ನು ಮತ್ತೊಮ್ಮೆ ಬಳಕೆಗೆ ತರುತ್ತೇನೆ." ಇದಕ್ಕಿಂತ ಹೆಚ್ಚಿಗೆ ಇನ್ನೇನು ಬೇಕು? ಎಂದು ಅವರ ನಗು ನಮ್ಮನ್ನು ಕೇಳುತ್ತಿರುವಂತೆ ಭಾಸವಾಯಿತು.

ಲೆನಿನ್ ಅವರ ನಗು ಯಾವಾಗಲೂ ಅವರ ಕಣ್ಣುಗಳನ್ನು ತಲುಪುತ್ತಿತ್ತು. ಅವರು ತನ್ನ ಯೋಜನೆಗಳ ಬಗ್ಗೆ ಮಾತನಾಡುವಾಗ ಅವರ ಮುಖದ ಮೇಲೆ ಒಂದು ಹೊಳಪು ಇರುತ್ತದೆ. ಆ ಹೊಳಪು ಐದು ಕ್ಷೇತ್ರಗಳನ್ನು ಪರಿವರ್ತಿಸಲು ಪ್ರಯತ್ನಿಸುತ್ತದೆ: ಬೀಜಗಳು, ವಾಣಿಜ್ಯ, ಪುಸ್ತಕಗಳು, ಕರಕುಶಲ ಮತ್ತು ಸಂವಹನ.

ಹೊಲದದಲ್ಲಿ ಎರಡು ನಾಯಿಗಳು ನಮ್ಮ ಸುತ್ತಲೂ ಸುತ್ತುತ್ತಾ ನಮ್ಮ ಸಂಭಾಷಣೆಯನ್ನು ಆಲಿಸುತ್ತಿದ್ದವು. "ಬೆಕ್ಕುಗಳು ರೈತರಿಗೆ ಹೆಚ್ಚು ಸಹಾಯಕ, ಅದರಲ್ಲೂ ಇಲಿಗಳನ್ನು ಹಿಡಿಯಬಲ್ಲ ಬೆಕ್ಕುಗಳ." ನಾನು ಫೋಟೋಗಳನ್ನು ತೆಗೆದುಕೊಳ್ಳುವಾಗ ಲೆನಿನ್ ನಗುತ್ತಾರೆ. ಚಿಕ್ಕ ನಾಯಿಯೊಂದು ತನ್ನ ನಾಲಿಗೆಯನ್ನು ಬಾಯಿಯಿಂದ ಹೊರಗೆ ಹಾಕಿ ನಮ್ಮನ್ನು ನೋಡುತ್ತದೆ.

*****

ಕಳಸಪಕ್ಕಂ ಸಾವಯವ ರೈತರ ವೇದಿಕೆಯು ಮಾರ್ಚ್ 2024ರಲ್ಲಿ ತನ್ನ ಮಾಸಿಕ ಸಭೆಯಲ್ಲಿ ಮೂರು ದಿನ ಮುಂಚಿತವಾಗಿ 5ರಂದು ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಿತು. ಅಂದು ಮಹಿಳೆಯರು ಮಾತನಾಡುತ್ತಿದ್ದರು. ಸುಮತಿ ಎಂಬ ರೈತ ಮಹಿಳೆ ಪುರುಷರನ್ನು ಕೇಳುತ್ತಾರೆ: "ನಿಮ್ಮ ಕುಟುಂಬದ ಎಲ್ಲಾ ಮಹಿಳೆಯರು - ನಿಮ್ಮ ಸಹೋದರಿ, ನಿಮ್ಮ ಹೆಂಡತಿ - ತಮ್ಮ ಸ್ವಂತ ಹೆಸರಿನಲ್ಲಿ ಭೂಮಿಯನ್ನು ಹೊಂದಿದ್ದರೆ, ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದರು ಅಲ್ಲವೇ?"

PHOTO • M. Palani Kumar
PHOTO • M. Palani Kumar

2024ರ ಮಾರ್ಚ್ 5ರಂದು ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಿದ ಕಳಸಪಕ್ಕಂ ಸಾವಯವ ವೇದಿಕೆಯ ಸಭೆ

PHOTO • Sabari Girisan
PHOTO • Aparna Karthikeyan

ಜುಲೈ 2023ರಲ್ಲಿ ಕಲಸಪಕ್ಕಂನಲ್ಲಿ ಶುಕ್ರವಾರ ಮಾರುಕಟ್ಟೆ, ಇಲ್ಲಿಗೆ ರೈತರು ತಮ್ಮ ಉತ್ಪನ್ನಗಳನ್ನು ತಂದು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುತ್ತಾರೆ

"ನಾವು ಪ್ರತಿ ವರ್ಷ ಮಹಿಳಾ ದಿನವನ್ನು ಆಚರಿಸಲಿದ್ದೇವೆ" ಎಂದು ರಾಜೇಂದ್ರನ್ ಘೋಷಿಸಿದಾಗ ಎಲ್ಲರೂ ಚಪ್ಪಾಳೆ ತಟ್ಟುತ್ತಾರೆ. ಅವರು ಇತರ ಯೋಜನೆಗಳನ್ನು ಸಹ ಹೊಂದಿದ್ದರು. ಎರಡು ವರ್ಷಗಳ ಹಿಂದೆ ಆರಂಭವಾದ ಪ್ರತಿ ಶುಕ್ರವಾರ ವಾರದ ಸಂತೆ ಅತ್ಯಂತ ಯಶಸ್ವಿಯಾಗಿದೆ. ಸಮೀಪದ ಹಳ್ಳಿಗಳ ಸುಮಾರು ಹತ್ತು ರೈತರು ತಮ್ಮ ಉತ್ಪನ್ನಗಳನ್ನು ತಂದು ಕಲಸಪಕ್ಕಂನ ಶಾಲೆಯ ಮುಂಭಾಗದ ಹುಣಸೆ ಮರದ ನೆರಳಿನಲ್ಲಿ ಕುಳಿತು ಮಾರಾಟ ಮಾಡುತ್ತಾರೆ. ಬಿತ್ತನೆ ಋತುವಿಗೂ ಮೊದಲು, ತಮಿಳು ತಿಂಗಳಾದ ಆಡಿಯಲ್ಲಿ (ಜುಲೈ ಮಧ್ಯದಿಂದ ಆಗಸ್ಟ್ ಮಧ್ಯದವರೆಗೆ) ವಾರ್ಷಿಕ ಬೀಜ ಹಬ್ಬವನ್ನು ನಿಗದಿಪಡಿಸಲಾಗಿದೆ. ಮತ್ತು ಜನವರಿಯಲ್ಲಿ ಆಹಾರ ಉತ್ಸವವನ್ನು ಆಯೋಜಿಸಲಾಗಿದೆ. ರಾಜೇಂದ್ರನ್ ಹೇಳುತ್ತಾರೆ, “ಮೇ ತಿಂಗಳಲ್ಲಿ ಮಹಾಪಂಚಾಯತ್ ಮಾಡೋಣ. "ನಾವು ಹೆಚ್ಚು ಮಾತನಾಡಬೇಕು, ಹೆಚ್ಚು ಸಾಧಿಸಬೇಕು."

ಆದಾಗ್ಯೂ, ಸಾರ್ವಜನಿಕವಾಗಿ ಚರ್ಚಿಸದ ಕೆಲವು ವಿಷಯಗಳಿವೆ. ಭತ್ತವು ರೈತರಲ್ಲಿ ಪ್ರತಿಷ್ಠೆಯ ಬೆಳೆಯಾಗಿರಬಹುದು, ಆದರೆ ಸಮಾಜದಲ್ಲಿ ರೈತರನ್ನು ಗೌರವಯುತವಾಗಿ ಪರಿಗಣಿಸುತ್ತಿಲ್ಲ ಎಂದು ಲೆನಿನ್‌ ಹೇಳುತ್ತಾರೆ. ರಾಜೇಂದ್ರನ್ ಹೇಳುತ್ತಾರೆ, “ಸಿನಿಮಾಗಳನ್ನು ತೆಗೆದುಕೊಳ್ಳಿ, ಅಲ್ಲಿ ನಾಯಕರು ಯಾವಾಗಲೂ ವೈದ್ಯರು, ಎಂಜಿನಿಯರ್‌ಗಳು ಮತ್ತು ವಕೀಲರು. ರೈತರು ನಾಯಕನಾಗಿರುವ ಸಿನೆಮಾಗಳಿವೆಯೇ? ಮದುವೆ ಮಾರುಕಟ್ಟೆಯಲ್ಲಿ ರೈತರನ್ನು ಹೇಗೆ ನೋಡಲಾಗುತ್ತದೆ ಎಂಬುದರ ಮೇಲೆ ಇವೆಲ್ಲವೂ ಪರಿಣಾಮ ಬೀರುತ್ತವೆ" ಎಂದು ಲೆನಿನ್ ವಿವರಿಸುತ್ತಾರೆ.

ಲೆನಿನ್ ಹೇಳುತ್ತಾರೆ, "ನಮಗೆ ಭೂಮಿ, ಪದವಿ (ಕೆಲವೊಮ್ಮೆ ಎರಡೂ) ಮತ್ತು ಸ್ಥಿರ ಆದಾಯವಿದ್ದರೂ, ನಮ್ಮನ್ನು ರೈತರೆನ್ನುವ ಕಾರಣಕ್ಕಾಗಿ ತಿರಸ್ಕರಿಸಲಾಗುತ್ತದೆ. ವೈವಾಹಿಕ ಜಾಹೀರಾತುಗಳಲ್ಲಿ ನೀವು ಎಲ್ಲಾದರೂ ರೈತನಾಗಿರುವ ವರ ಬೇಕು ಎಂದು ಕೇಳಿರುವುದನ್ನು ನೋಡಿದ್ದೀರಾ? ಇಲ್ಲ ಅಲ್ವಾ?”

ಪ್ರಾಮಾಣಿಕ ರೈತ ಮತ್ತು ವಿತರಕರಾಗಿ, ಲೆನಿನ್ ಅನೇಕ ಸಾಮಾಜಿಕ ಸಮಸ್ಯೆಗಳಿಗೆ ವೈವಿಧ್ಯತೆಯಲ್ಲಿ ಪರಿಹಾರವನ್ನು ಕಂಡರು. "ಜೀವನದನಂತೆ, ವ್ಯವಹಾರದಲ್ಲಿಯೂ ನಿಮ್ಮ ಸಂಪನ್ಮೂಲಗಳನ್ನು ನೀವು ಹೆಚ್ಚಿಸಿಕೊಂಡಾಗ, ನಿಮ್ಮ ಯಶಸ್ಸಿನ ಸಾಧ್ಯತೆಗಳನ್ನು ಸಹ ನೀವು ಹೆಚ್ಚಿಸಿಕೊಳ್ಳುತ್ತೀರಿ" ಎಂದು ಅವರು ಹೇಳುತ್ತಾರೆ.

ನೀವು ಹೆಚ್ಚು ಪ್ರಭೇದಗಳನ್ನು ಬೆಳೆದು ಮಾರಾಟ ಮಾಡಿದಾಗ ನಷ್ಟದ ಅಪಾಯ ಕಡಿಮೆಯಿರುತ್ತದೆ. "ಮತ್ತು ಇದು ಹವಾಗುಣ ಬದಲಾವಣೆಯನ್ನು ಎದುರಿಸಲು ಇರುವ ಏಕೈಕ ಮಾರ್ಗವಾಗಿದೆ" ಎಂದು ಅವರು ಹೇಳುತ್ತಾರೆ. ಅವರು ಇದನ್ನು ನಿರ್ದಿಷ್ಟ ಉದಾಹರಣೆಗಳು ಮತ್ತು ಬೆಳವಣಿಗೆಯ ಅವಧಿಗಳೊಂದಿಗೆ ವಿವರಿಸುತ್ತಾರೆ. ಅವರು ಹೇಳುತ್ತಾರೆ, “ಆಧುನಿಕ ತಳಿಗಳು ಬೇಗನೇ ಕೊಯ್ಲಿಗೆ ಸಿದ್ಧವಾಗುತ್ತವೆ ಮತ್ತು ಸ್ಥಳೀಯ ಭತ್ತವು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂಬ ತಪ್ಪು ಕಲ್ಪನೆ ಇದೆ. ಇದು ತಪ್ಪು. ಸಾಂಪ್ರದಾಯಿಕ ಬೀಜಗಳು ಕಡಿಮೆ ಮತ್ತು ದೀರ್ಘಾವಧಿಯ ಕೊಯ್ಲು ಚಕ್ರಗಳನ್ನು ಹೊಂದಿರುತ್ತವೆ. ಹೈಬ್ರಿಡ್ ಬೀಜಗಳ ಕೊಯ್ಲಿನ ಚಕ್ರಗಳು ಹೆಚ್ಚಾಗಿ ಮಧ್ಯಮ ಅವಧಿಯದ್ದಾಗಿರುತ್ತವೆ. ಕೊಯ್ಲು ಮಾಡಲು ಅವುಗಳಿಗೆ ಕೇವಲ ಒಂದು ಅಥವಾ ಎರಡು ನಿಗದಿತ ಅವಧಿಗಳಷ್ಟೇ ಇವೆ.”

ಸಾಂಪ್ರದಾಯಿಕ ಭತ್ತದಲ್ಲಿ ಇನ್ನೂ ಹಲವು ಆಯ್ಕೆಗಳಿವೆ. “ಕೆಲವು ಆಚರಣೆಗಾಗಿ (ಹಬ್ಬಗಳಲ್ಲಿ ಬಳಕೆ) ಬೆಳೆದರೆ ಕೆಲವು ಔಷಧೀಯ ಗುಣವನ್ನು ಹೊಂದಿವೆ. ಅವು ದೃಢವಾಗಿರುತ್ತವೆ, ಕೀಟ ನಿರೋಧಕವಾಗಿರುತ್ತವೆ, ಬರ ಸಹಿಷ್ಣುತೆ ಮತ್ತು ಮಣ್ಣಿನ ಲವಣಾಂಶವನ್ನು ಸಹ ಸಹಿಸಬಲ್ಲವು.

PHOTO • M. Palani Kumar
PHOTO • M. Palani Kumar

ಲೆನಿನ್ ಬೆಳೆದ ಕುದುರೈ ವಾಲ್ ಸಾಂಬಾ (ಎಡ) ಮತ್ತು ರತ್ತಸಾಲಿ (ಬಲ) ಭತ್ತದ ತಳಿಗಳು

ತೊಂದರೆಗಳು ಹೆಚ್ಚಿರುವಲ್ಲಿ ಹೆಚ್ಚಿನ ವೈವಿಧ್ಯತೆಯೂ ಇದೆ ಎಂದು ಡಾ.ರೆಂಗಲಕ್ಷ್ಮಿ ಹೇಳುತ್ತಾರೆ. "ಕರಾವಳಿ ತಮಿಳುನಾಡಿನಿಂದ, ವಿಶೇಷವಾಗಿ ಕಡ್ಲೂರಿನಿಂದ ರಾಮನಾಥಪುರಂ ಜಿಲ್ಲೆಗಳವರೆಗಿನ ಪ್ರದೇಶವನ್ನು ತೆಗೆದುಕೊಳ್ಳಿ, ಅಲ್ಲಿ ಲವಣಾಂಶ ಮತ್ತು ಮಣ್ಣಿನ ಪ್ರಕಾರವು ವಿವಿಧ ಸಾಂಪ್ರದಾಯಿಕ ಭತ್ತದ ತಳಿಗಳಿಗೆ ಕಾರಣವಾಗುತ್ತದೆ, ಅವು ವಿವಿಧ ಅವಧಿಗಳಲ್ಲಿ ಪಕ್ವಗೊಳ್ಳುತ್ತವೆ. ಉದಾಹರಣೆಗೆ, ನಾಗಪಟ್ಟಿಣಂ ಮತ್ತು ವೇದಾರಣ್ಯಂ ನಡುವಿನ ಪ್ರದೇಶದಲ್ಲಿ, ಕುಲವೇದಿಚನ್ ಎಂದು ಕರೆಯಲ್ಪಡುವ ಭತ್ತದಲ್ಲಿ 20ಕ್ಕೂ ಹೆಚ್ಚು ಪ್ರಭೇದಗಳನ್ನು ಬೆಳೆಯಲಾಗುತ್ತಿತ್ತು.

"ನಾಗಪಟ್ಟಿಣಂ ಮತ್ತು ಪೂಂಬುಹಾರ್ ನಡುವೆ, ಕುಲುರುಂಡೈ ಎಂಬ ಮತ್ತೊಂದು ರೀತಿಯ ಭತ್ತವನ್ನು ಬೆಳೆಯಲಾಗುತ್ತದೆ, ಮತ್ತು ಈ ಹಿಂದೆ, ಸೂಕ್ಷ್ಮ ಕೃಷಿ-ಪರಿಸರ ವ್ಯವಸ್ಥೆಯನ್ನು ನಿರ್ವಹಿಸಲು ಸ್ಥಳೀಯವಾಗಿ ಹೊಂದಿಕೆಯಾಗುವ ಅನೇಕ ಪ್ರಭೇದಗಳನ್ನು ಬೆಳೆಯಲಾಗುತ್ತಿತ್ತು. ಈ ಬೀಜಗಳನ್ನು ಆನುವಂಶಿಕ ವಸ್ತುವೆಂದು ಪರಿಗಣಿಸಿ ಮುಂಬರುವ ಋತುವಿಗಾಗಿ ಸಂರಕ್ಷಿಸಲಾಗುತ್ತಿತ್ತು. ಆದರೆ ಈಗ ಬೀಜಗಳು ಹೊರಗಿನಿಂದ ಬರುತ್ತಿರುವುದರಿಂದ, ಅವುಗಳನ್ನು ಸಂರಕ್ಷಿಸುವ ಅಭ್ಯಾಸವನ್ನು ಜನರು ಮರೆತಿದ್ದಾರೆ." ಅದಕ್ಕಾಗಿಯೇ ಹವಾಗುಣ ಬದಲಾವಣೆಯಿಂದಾಗಿ ಹೆಚ್ಚಿನ ತೊಂದರೆ ಉಂಟಾದಾಗ, "ವೈವಿಧ್ಯತೆಯ ಜ್ಞಾನ ಕಣ್ಮರೆಯಾಗುತ್ತದೆ." ಎಂದು ಡಾ. ರೆಂಗಲಕ್ಷ್ಮಿ ಹೇಳುತ್ತಾರೆ.

ಬಹು ಬೆಳೆಗಳನ್ನು ಬೆಳೆಯುವ ಸಣ್ಣ ಜಮೀನುಗಳಿಂದ ವೈವಿಧ್ಯತೆ ಉಳಿಯುತ್ತದೆ ಎಂದು ಲೆನಿನ್ ಹೇಳುತ್ತಾರೆ. ಯಂತ್ರೋಪಕರಣಗಳು ಮತ್ತು ದೊಡ್ಡ ಮಾರುಕಟ್ಟೆಗಳಿಂದ ಭೂಮಿಗೆ ಹಾನಿಯಾಗಿದೆ ಎಂದು ಅವರು ಹೇಳುತ್ತಾರೆ, ಹವಾಗುಣ ಬದಲಾವಣೆಯಿಂದ ಸವಾಲುಗಳನ್ನು ಎದುರಿಸುತ್ತಿರುವ ಮಳೆಯಾಶ್ರಿತ ಪ್ರದೇಶಗಳಲ್ಲಿ ಬೆಳೆಯಬಹುದಾದ ಬೆಳೆಗಳಿವೆ. ಅವುಗಳಲ್ಲಿ ರಾಗಿ, ಎಳ್ಳು, ಹೆಸರು, ನವಣೆ ಕೆಲವು. ಈ ಬೆಳೆಗಳು ಅದ್ಭುತವಾಗಿವೆ ಆದರೆ ರೈತರು ಕೈಗಾರಿಕಾ ಕೃಷಿ ವಿಧಾನಗಳನ್ನು ಅಳವಡಿಸಿಕೊಂಡು ಕೃಷಿ ಸಾಮಾಜಿಕ ರಚನೆಯನ್ನು ಯಾಂತ್ರಿಕೃತ ಚಟುವಟಿಕೆಗಳ ಸರಣಿಗೆ ಮರುಳಾದರೆ ಕೃಷಿ ಜ್ಞಾನ ವೇಗವಾಗಿ ಮರೆವೆಗೆ ಸರಿಯುತ್ತದೆ” ಎನ್ನುತ್ತಾರೆ ಲೆನಿನ್.

ದೊಡ್ಡ ತೊಂದರೆಯೆಂದರೆ ಕೌಶಲ  ಮರೆಯುವುದು. ಈ ಮೆರೆವು ಇಂತಹ ಜ್ಞಾನವು ಅನಗತ್ಯ ಎನ್ನುವ ಕಾರಣದಿಂದ ಬರುವುದಿಲ್ಲ, ಈ ಜ್ಞಾನ ಮತ್ತು ಈ ಕೌಶಲ್ಯವನ್ನು ಹಿಂದುಳಿದಿದೆ ಎಂದು ಪರಿಗಣಿಸಲಾಗಿರುವುದರಿಂದ ಬಂದಿದೆ ಎಂದು ಲೆನಿನ್ ವಾದಿಸುತ್ತಾರೆ, “ಮತ್ತು ಯಾವುದೇ ಬುದ್ಧಿವಂತ ವ್ಯಕ್ತಿ ಹಾಗೆ ಮಾಡಲಾರ. ಈ ವಿನಾಶಕಾರಿ ನಂಬಿಕೆಯಿಂದಾಗಿ ಅನೇಕ ಜನರು ಸಾರ್ವಜನಿಕರ ಕಣ್ಣುಗಳಿಂದ ಹೊರಗುಳಿದಿದ್ದಾರೆ.”

ಇದಕ್ಕೆ ಪರಿಹಾರವಿದೆ ಎನ್ನುವುದು ಲೆನಿನ್ ನಂಬಿಕೆ. "ಪ್ರದೇಶಕ್ಕೆ ಸ್ಥಳೀಯ ತಳಿಗಳನ್ನು ಗುರುತಿಸುವ ಅವಶ್ಯಕತೆಯಿದೆ; ತದನಂತರ ಅದನ್ನು ಸಂರಕ್ಷಿಸಿ, ಬೆಳೆಸಿ ಮತ್ತೆ ನಮ್ಮ ತಟ್ಟೆಗೆ ತರುವುದು. ಆದರೆ ಅದಕ್ಕಾಗಿ ದೈತ್ಯಾಕಾರದ ಮಾರುಕಟ್ಟೆಯನ್ನು ನಿಭಾಯಿಸಲು ತಿರುವಣ್ಣಾಮಲೈ ಒಂದರಲ್ಲಿಯೇ ನಿಮಗೆ ನೂರು ಉದ್ಯಮಿಗಳು ಬೇಕು.”

“ಐದು ವರ್ಷಗಳಲ್ಲಿ ನಾನು ಸಹಕಾರಿ ಕೃಷಿಯ ಭಾಗವಾಗಲು ಮತ್ತು ಸಾಮೂಹಿಕ ಕೃಷಿಯನ್ನು ಪ್ರಾರಂಭಿಸಲು ಬಯಸುತ್ತೇನೆ. ಕಳೆದ ವರ್ಷ ಹಲವು ದಿನಗಳ ಕಾಲ ಮಳೆ ಸುರಿದಿತ್ತು, ನಲವತ್ತು ದಿನಗಳ ಕಾಲ ಬಿಸಿಲು ಇರಲಿಲ್ಲ ಎಂಬುದು ನಿಮಗೆ ಗೊತ್ತು. ಇಂತಹ ಪರಿಸ್ಥಿತಿಯಲ್ಲಿ ನಾವು ಭತ್ತವನ್ನು ಹೇಗೆ ಒಣಗಿಸುವುದು? ನಾವು ಡ್ರೈಯರ್ ಸೌಲಭ್ಯವನ್ನು ನಿರ್ಮಿಸಬೇಕಾಗಿದೆ. ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಶಕ್ತಿ ಬರುತ್ತದೆ” ಎಂದು ಅವರು ಹೇಳುತ್ತಾರೆ.

ಬದಲಾವಣೆ ಬರುವುದು ಖಚಿತ ಎನ್ನುವುದು ಅವರ ದೃಢವಾದ ನಂಬಿಕೆ. ಅವರ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ: ಅವರು ಜೂನ್‌ ತಿಂಗಳಿನಲ್ಲಿ ಮದುವೆಯಾಗಲಿದ್ದಾರೆ. ಅವರು ಹೇಳುತ್ತಾರೆ, “ರಾಜಕೀಯ ಅಥವಾ ನೀತಿ ನಿರೂಪಣೆ ಮಟ್ಟದಲ್ಲಿ ಬದಲಾವಣೆಯು ಕ್ರಮೇಣವಾಗಿ ಬರಬಹುದು. ಅವಸರದಿಂದ ದೊಡ್ಡ ಬದಲಾವಣೆಯನ್ನು ಮಾಡಲು ಹೋದರೆ, ಅದು ನಿರೀಕ್ಷೆಗೆ ವಿರುದ್ಧವಾದ ಫಲಿತಾಂಶವನ್ನು ತರಬಹುದು.”

ಅದಕ್ಕಾಗಿಯೇ ಲೆನಿನ್ ತನ್ನ ಸ್ನೇಹಿತರೊಂದಿಗೆ ನಿಧಾನವಾಗಿ, ಶಾಂತಿಯುತವಾಗಿ ಕ್ರಾಂತಿಯನ್ನು ಮಾಡುತ್ತಿದ್ದಾರೆ. ಇದು ಮುಂದೆ ಯಶಸ್ಸು ಕಾಣಬಹುದೆನ್ನು ನಂಬಿಕೆಯೊಂದಿಗೆ...

ಈ ಸಂಶೋಧನಾ ಅಧ್ಯಯನಕ್ಕೆ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯವು ತನ್ನ ಸಂಶೋಧನಾ ನಿಧಿ ಕಾರ್ಯಕ್ರಮ 2020ರ ಭಾಗವಾಗಿ ಧನಸಹಾಯ ನೀಡಿದೆ.

ಟಿಪ್ಪರ್* ಹಿಂಭಾಗದಲ್ಲಿ ಪ್ಲಾಟ್‌ಫಾರ್ಮ್ ಹೊಂದಿರುವ ಟ್ರಕ್, ಟ್ರಕ್‌ಗೆ ಲೋಡ್ ಮಾಡಿದ ಸರಕುಗಳನ್ನು ಇಳಿಸಲು ಅದರ ಹಿಂಭಾಗವನ್ನು ಮುಂಭಾಗದ ತುದಿಯಿಂದ ಮೇಲಕ್ಕೆತ್ತಬಹುದು.

ಮುಖಪುಟ ಚಿತ್ರ: ಅಕ್ಕಿಯ ವೈವಿಧ್ಯಗಳು - ಕುಲ್ಲಂಕರ್, ಕರುಡನ್ ಸಾಂಬಾ ಮತ್ತು ಕರುಂಸೀರಕಾ ಸಾಂಬಾ. ಫೋಟೋ - ಎಂ. ಪಳನಿ ಕುಮಾರ್

ಅನುವಾದ: ಶಂಕರ. ಎನ್. ಕೆಂಚನೂರು

Aparna Karthikeyan

Aparna Karthikeyan is an independent journalist, author and Senior Fellow, PARI. Her non-fiction book 'Nine Rupees an Hour' documents the disappearing livelihoods of Tamil Nadu. She has written five books for children. Aparna lives in Chennai with her family and dogs.

Other stories by Aparna Karthikeyan
Photographs : M. Palani Kumar

M. Palani Kumar is Staff Photographer at People's Archive of Rural India. He is interested in documenting the lives of working-class women and marginalised people. Palani has received the Amplify grant in 2021, and Samyak Drishti and Photo South Asia Grant in 2020. He received the first Dayanita Singh-PARI Documentary Photography Award in 2022. Palani was also the cinematographer of ‘Kakoos' (Toilet), a Tamil-language documentary exposing the practice of manual scavenging in Tamil Nadu.

Other stories by M. Palani Kumar

P. Sainath is Founder Editor, People's Archive of Rural India. He has been a rural reporter for decades and is the author of 'Everybody Loves a Good Drought' and 'The Last Heroes: Foot Soldiers of Indian Freedom'.

Other stories by P. Sainath
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru