ಅದೊಂದು ದಿ ಬೆಸ್ಟ್‌ ಎನ್ನಬಹುದಾದ ಹೀರೋ ಎಂಟ್ರಿಯಾಗಿತ್ತು. ಅದುವರೆಗೆ ಆರು ಜನ ಗಂಡಸರು ಕುಳಿತು ಹಲಸಿನ ಕೆಲಸ ಹೆಂಗಸಿಗಲ್ಲ ಎಂದು ಠರಾವು ಹೊರಡಿಸುತ್ತಿದ್ದರು. ಅವರು ಅದರ ಸಾಗಾಟ, ಆ ಭಾರ ಎತ್ತುವಿಕೆ ಇತ್ಯಾದಿ ಕುರಿತು ಪರಿಪರಿಯಾಗಿ ಹೇಳುತ್ತಿದ್ದರು. ಆ ಹೊತ್ತಿಗೆ ಸರಿಯಾಗಿ ಹಳದಿ ಸೀರೆಯುಟ್ಟು, ಬೆಳ್ಳಿ ಕೂದಲನ್ನು ತುರುಬು ಕಟ್ಟಿ, ಮೂಗು ನತ್ತು ಮತ್ತು ಕಿವಿಯೋಲೆ ತೊಟ್ಟಿದ್ದ ಲಕ್ಷ್ಮಿ ಅಲ್ಲಿಗೆ ಬಂದರು. ಆಗ "ಅವರು ವ್ಯವಹಾರದಲ್ಲಿ ಪ್ರಮುಖ ವ್ಯಕ್ತಿ," ಎಂದು ಒಬ್ಬ ರೈತ ಗೌರವಯುತವಾಗಿ ಘೋಷಿಸಿದ.

"ನಮ್ಮಉತ್ಪನ್ನಗಳಿಗೆ ಬೆಲೆಯನ್ನು ನಿಗದಿಪಡಿಸುವವರು ಅವರೇ."

65 ವರ್ಷದ ಎ. ಲಕ್ಷ್ಮಿ, ಪನ್ರುಟ್ಟಿಯಯ ಏಕೈಕ ಮಹಿಳಾ ಹಲಸು ವ್ಯಾಪಾರಿ - ಇಂದು ಯಾವುದೇ ಕೃಷಿ ವ್ಯವಹಾರದಲ್ಲಿ ಇರಬಹುದಾದ ಕೆಲವೇ ಕೆಲವು ಹಿರಿಯ ಮಹಿಳಾ ವ್ಯಾಪಾರಿಗಳಲ್ಲಿ ಅವರೂ ಒಬ್ಬರು.

ತಮಿಳುನಾಡಿನ ಕಡಲೂರು ಜಿಲ್ಲೆಯಲ್ಲಿರುವ ಪನ್ರುಟ್ಟಿ ಪಟ್ಟಣವು ಹಲಸಿನ ಬೆಳೆಗೆ ಹೆಸರುವಾಸಿಯಾಗಿದೆ. ಇಲ್ಲಿ ಈ ಹಣ್ಣಿನ ಋತುವಿನಲ್ಲಿ ಪ್ರತಿದಿನ ಟನ್ನುಗಟ್ಟಲೆ ಹಣ್ಣುಗಳನ್ನು ಖರೀದಿಸಿ ಮಾರಾಟ ಮಾಡಲಾಗುತ್ತದೆ.  ಈವರ್ಷ, ಲಕ್ಷ್ಮಿ ಸಾವಿರಾರು ಕಿಲೋ ಹಣ್ಣುಗಳಿಗೆ ಬೆಲೆಯನ್ನು ನಿಗದಿಪಡಿಸುತ್ತಾರೆ, ಅದನ್ನು  ಪಟ್ಟಣದ ಹಲಸಿನ ಮಂಡಿಗಳಾಗಿ ಕಾರ್ಯನಿರ್ವಹಿಸುವ 22 ಅಂಗಡಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಅವರು ಒಂದು ಸಣ್ಣ ಕಮಿಷನ್ ಮೊತ್ತವನ್ನು ಇದಕ್ಕಾಗಿ ಗಳಿಸುತ್ತಾರೆ - ಪ್ರತಿ 1,000ಕ್ಕೆ 50 ರೂಪಾಯಿಗಳು - ಖರೀದಿದಾರರಿಂದ. ರೈತರು  ಬಯಸಿದರೆ ಅವರಿಗೆ ಸ್ವಲ್ಪ ಹಣ ಕೊಡಬಹುದು. ಈ ಋತುವಿನಲ್ಲಿ ಅವರ ದೈನಂದಿನ ಆದಾಯವು 1,000ರಿಂದ 2,000 ರೂಪಾಯಿಗಳ ನಡುವೆ ಇರುತ್ತದೆನ್ನುವುದು ಅವರ ಅಂದಾಜು.

ಈ ಮೊತ್ತವನ್ನು ಗಳಿಸಲು ಅವರು ದಿನವೊಂದಕ್ಕೆ 12 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ಅವರು ಬೆಳಗಿನ ಜಾವ ಒಂದು ಗಂಟೆಗೆದ್ದು ಕೆಲಸ ಆರಂಭಿಸುತ್ತಾರೆ. "ಸಾಕಷ್ಟು ಸರಕ್ಕು (ಸರಕುಗಳು) ಇದ್ದರೆ, ವ್ಯಾಪಾರಿಗಳು ನನ್ನನ್ನು ಕರೆತರಲು ಮುಂಚಿತವಾಗಿ ಮನೆಗೆ ಬರುತ್ತಾರೆ," ಎಂದು ಲಕ್ಷ್ಮಿ ವಿವರಿಸುತ್ತಾರೆ. ಇತ್ತೀಚೆಗೆ ಅವರು ಬೇಗ ಹೋಗಿದ್ದೆಂದರೆ ಬೆಳಗಿನ ಜಾವ ಮೂರಕ್ಕೆ. ಅವರ ʼದಿನʼದ ಕೆಲಸ ಮಧ್ಯಾಹ್ನ ಒಂದು ಗಂಟೆಯ ತನಕ ಸಾಗುತ್ತದೆ. ಮಧ್ಯಾಹ್ನ ಮನೆಗೆ ಬಂದವರು ಮಲಗಿದರೆ ಮತ್ತೆ ಮಾರುಕಟ್ಟೆಗೆ ಹೋಗುವ ತನಕ ವಿರಾಮ ಪಡೆಯುತ್ತಾರೆ…

"ಹಲಸನ್ನು ಬೆಳೆಯುವ ಬಗ್ಗೆ ನನಗೆ ಹೆಚ್ಚು ತಿಳಿದಿಲ್ಲ," ಎಂದು ಅವರು ಹೇಳುತ್ತಾರೆ, ಅವರ ಧ್ವನಿ ಗಂಟೆಗಟ್ಟಲೆ ಮಾತನಾಡುವುದು ಮತ್ತು ಕೂಗುವುದನ್ನು ಮಾಡಿ ಒಡಕಲಾಗಿತ್ತು. "ಆದರೆ ನನಗೆ ಮಾರಾಟದ ಬಗ್ಗೆ ಸ್ವಲ್ಪ ತಿಳಿದಿದೆ." ಲಕ್ಷ್ಮಿ ವಿನಯದಿಂದ ಹೇಳುತ್ತಾರೆ. ಅಷ್ಟಕ್ಕೂ, ಅವರು ಮೂರು ದಶಕಗಳಿಂದ ವ್ಯಾಪಾರಿಯಾಗಿ ಈ ಉದ್ಯೋಗ ಮಾಡುತ್ತಿದ್ದಾರೆ, ಮತ್ತು ಅದಕ್ಕೂ ಮೊದಲು, 20 ವರ್ಷಗಳವರೆಗೆ, ಅವರು ಚಲಿಸುವ ರೈಲುಗಳಲ್ಲಿ ಹಣ್ಣನ್ನು ಮಾರಾಟ ಮಾಡುತ್ತಿದ್ದರು.

Lakshmi engaged in business at a jackfruit mandi in Panruti. She is the only woman trading the fruit in this town in Tamil Nadu's Cuddalore district
PHOTO • M. Palani Kumar

ಲಕ್ಷ್ಮಿ ಪನ್ರುಟ್ಟಿಯ ಹಲಸಿನ ಮಂಡಿಯಲ್ಲಿ ವ್ಯಾಪಾರದಲ್ಲಿ ತೊಡಗಿರುವುದು. ತಮಿಳುನಾಡಿನ ಕಡಲೂರು ಜಿಲ್ಲೆಯ ಈ ಪಟ್ಟಣದಲ್ಲಿ ಹಲಸಿನ ವ್ಯವಹಾರ ಮಾಡುವ ಏಕೈಕ ಮಹಿಳೆ ಅವರು

ಹಲಸಿನ ಜೊತೆಗಿನ ಅವರ ಪ್ರಯಾಣವು ಅವರ 12ನೇ ವಯಸ್ಸಿನಲ್ಲಿ ಪ್ರಾರಂಭವಾಯಿತು. ತರುಣಿ ಲಕ್ಷ್ಮಿ ಹಾಫ್‌ ಸೀರೆಯುಟ್ಟು, ಹಣ್ಣನ್ನು ತಮಿಳಿನಲ್ಲಿ ಕರೆಯುವಂತೆ  ಕೆಲವು ಪಲ ಪಳಂಗಳನ್ನು ತೆಗೆದುಕೊಂಡು ಉಗಿ ಇಂಜಿನ್ನಿನಿಂದ ಎಳೆಯಲಾಗುವ ಕರಿ ವಂಡಿಯಲ್ಲಿ (ಪ್ಯಾಸೆಂಜರ್ ಟ್ರೈನ್) ಮಾರಾಟ ಮಾಡುತ್ತಿದ್ದರು. ಈಗ 65 ವರ್ಷದ ಈ ಮಹಿಳೆ ಲಕ್ಷ್ಮಿ ವಿಲಾಸ್ ಎಂಬ ಹೆಸರಿನ ಮನೆಯಲ್ಲಿ ವಾಸಿಸುತ್ತಿದ್ದಾರೆ.

ಇದು ಲಕ್ಷ್ಮಿಯವರು ಜಗತ್ತಿನ ದೊಡ್ಡ ಹಣ್ಣಾದ ಹಲಸನ್ನು ಮಾರಾಟ ಮಾಡುವ ಮೂಲಕ ಗಳಿಸಿದ ಹಣದಿಂದ ಕಟ್ಟಿದ ಮನೆ.

*****

ಹಲಸಿನ ಹಣ್ಣಿನ ಋತುವು ಜನವರಿ ಅಥವಾ ಫೆಬ್ರವರಿಯಲ್ಲಿ ಪ್ರಾರಂಭವಾಗುತ್ತದೆ ಮತ್ತು ಸಾಮಾನ್ಯವಾಗಿ ಪೂರ್ಣ ಆರು ತಿಂಗಳವರೆಗೆ ಇರುತ್ತದೆ. 2021ರ ಸಮಯದಲ್ಲಿ ಭಾರಿ ಮತ್ತು ಅಕಾಲಿಕ ಮಳೆಯಿಂದಾಗಿ, ಹೂಬಿಡುವಿಕೆ ಮತ್ತು ಹಣ್ಣಾಗುವುದು ಎಂಟು ವಾರಗಳ ಕಾಲ ತಡವಾಯಿತು. ಹಣ್ಣುಗಳು ಪನ್ರುಟ್ಟಿಯ ಮಂಡಿಗಳಿಗೆ ಬರುವ ಹೊತ್ತಿಗೆ ಏಪ್ರಿಲ್ ಆಗಿತ್ತು. ಮತ್ತು ಆಗಸ್ಟ್ ವೇಳೆಗೆ ಆ ವರ್ಷದ ಸೀಸನ್ ಮುಗಿದಿತ್ತು.

ಈ ಹಣ್ಣನ್ನು ಆಡುಮಾತಿನಲ್ಲಿ 'ಜಾಕ್' (ಇಂಗ್ಲಿಷಿನಲ್ಲಿ) ಎಂದು ಕರೆಯಲಾಗುತ್ತದೆ, ದಕ್ಷಿಣ ಭಾರತದ ಪಶ್ಚಿಮ ಘಟ್ಟಗಳು ಇದಕ್ಕೆ ಮೂಲ. ಈ ಹೆಸರು ಮಲಯಾಳಂ ಪದವಾದ ಚಕ್ಕಾದಿಂದ ಬಂದಿದೆ. ವೈಜ್ಞಾನಿಕ ಹೆಸರು ಸ್ವಲ್ಪ ನಾಲಿಗೆಗೆ ಕೆಲಸ ಕೊಡುವಂತಿದೆ: ಆರ್ಟೊಕಾರ್ಪಸ್ ಹೆಟೆರೊಫಿಲಸ್ . ‌

ಪರಿ ಮೊದಲ ಬಾರಿಗೆ ಪನ್ರುಟ್ಟಿಗೆ ಏಪ್ರಿಲ್ 2022ರಲ್ಲಿ ವ್ಯಾಪಾರಿಗಳು ಮತ್ತು ರೈತರನ್ನು ಭೇಟಿಯಾಗಲು ಭೇಟಿ ನೀಡಿತು. 40 ವರ್ಷದ ರೈತ ಮತ್ತು ಕಮಿಷನ್ ಏಜೆಂಟ್ ಆರ್. ವಿಜಯಕುಮಾರ್ ನಮ್ಮನ್ನು ತಮ್ಮ ಅಂಗಡಿಗೆ ಸ್ವಾಗತಿಸಿದರು.  ಅಂಗಡಿಯು ಗಟ್ಟಿಯಾದ ಮಣ್ಣಿನ ನೆಲಹಾಸು ಮತ್ತು ಹುಲ್ಲಿನ ಛಾವಣಿ ಮತ್ತು ಗೋಡೆಗಳನ್ನು ಹೊಂದಿರುವ ಒಂದು ಸರಳ ರಚನೆಯಾಗಿತ್ತು. ಈ ಅಂಗಡಿಗೆ ಅವರು ವರ್ಷಕ್ಕೆ 50,000 ರೂಪಾಯಿಗಳನ್ನು ಬಾಡಿಗೆಯಾಗಿ ಪಾವತಿಸುತ್ತಾರೆ. ಒಂದು ಬೆಂಚ್ ಮತ್ತು ಕೆಲವು ಕುರ್ಚಿಗಳು ಮಾತ್ರ ಇಲ್ಲಿರುವ  ಐಷಾರಾಮಿ ವಸ್ತುಗಳು.

ಗೋಡೆಯ ಹಿಂದೆ ಹಾರ ಹಾಕಿದ ಅವರ ತಂದೆಯ ಚಿತ್ರವಿದ್ದರೆ, ಎದುರಿಗೆ ಒಂದು ಡೆಸ್ಕ್‌ ಮತ್ತು ಹಲಸಿನ ರಾಶಿಯಿದ್ದವು. ಮೊದಲ ರಾಶಿಯಾಗಿ ಸುಮಾರು 100 ಹಣ್ಣು ಬಂದಿತ್ತು. ಆ ಹಣ್ಣಿನ ರಾಶಿ ಸಣ್ಣ ಹಸಿರು ಬೆಟ್ಟದಂತೆ ಕಾಣುತ್ತಿತ್ತು.

"ಅದರ ಮೌಲ್ಯ 25,000 ರೂಪಾಯಿಗಳು" ಎಂದು ವಿಜಯಕುಮಾರ್ ವಿವರಿಸಿದರು. ಅದನ್ನು ಎರಡು ಪಾರ್ಟಿಗಳಿಗೆ ಮಾರಲಾಗಿದೆ. ಮತ್ತು ಚೆನ್ನೈನ ಅಡ್ಯಾರ್ ಎನ್ನುವಲ್ಲಿಗೆ ಹೋಗಲಿರುವ ಕೊನೆಯ ರಾಶಿಯಲ್ಲಿ 60 ಹಣ್ಣುಗಳಿದ್ದವು, ಮತ್ತು ಅದರ ಬೆಲೆ ಸುಮಾರು 18,000 ರೂಪಾಯಿಗಳಷ್ಟು.

R. Vijaykumar, a farmer and commission agent, in his shop in Panruti, where heaps of jackfruit await buyers
PHOTO • M. Palani Kumar

ಓರ್ವ ರೈತ ಮತ್ತು ಕಮಿಷನ್ ಏಜೆಂಟ್ ಆರ್. ವಿಜಯಕುಮಾರ್, ಪನ್ರುಟ್ಟಿಯಲ್ಲಿರುವ ಅವರ ಅಂಗಡಿಯಲ್ಲಿ ಹಲಸಿನ ರಾಶಿಗಳು ಖರೀದಿದಾರರಿಗಾಗಿ ಕಾಯುತ್ತಿವೆ

ಹಲಸಿನ ಹಣ್ಣನ್ನು 185 ಕಿಲೋಮೀಟರ್ ದೂರದಲ್ಲಿರುವ ಚೆನ್ನೈಗೆ  ಪತ್ರಿಕೆಗಳ ವ್ಯಾನುಗಳಲ್ಲಿ ಕಳುಹಿಸಲಾಗುತ್ತದೆ. "ಇದು ಮತ್ತಷ್ಟು ಉತ್ತರದತ್ತ ಹೋಗುವುದಿದ್ದರೆ, ನಾವು ಅದನ್ನು ಟಾಟಾ ಏಸ್ ಟ್ರಕ್ಕುಗಳಲ್ಲಿ ಕಳುಹಿಸುತ್ತೇವೆ. ನಮ್ಮ ಕೆಲಸದ ದಿನಗಳು ಬಹಳ ದೀರ್ಘವಾಗಿರುತ್ತವೆ. ಬೆಳಗಿನ ಜಾವ 3 ಅಥವಾ 4ರಿಂದ ರಾತ್ರಿ 10 ಗಂಟೆಯವರೆಗೆ ನಾವು ಇಲ್ಲಿರುತ್ತೇವೆ," ಎಂದು ವಿಜಯಕುಮಾರ್ ಹೇಳುತ್ತಾರೆ. "ಹಣ್ಣಿಗೆ ಸಾಕಷ್ಟು ಬೇಡಿಕೆ ಇದೆ. ಎಲ್ಲರೂ ಅದನ್ನು ತಿನ್ನುತ್ತಾರೆ. ಮಧುಮೇಹಿಗಳು ಸಹ ನಾಲ್ಕು ಸೊ ಳೈಗಳನ್ನು (ತೊಳೆಗಳು) ತಿನ್ನುತ್ತಾರೆ. ನಮಗೆ ಮಾತ್ರ ಅದನ್ನು ನೋಡಿಯೇ ಸುಸ್ತಾಗುತ್ತೆ," ಎಂದು ಅವರು ಮುಗುಳ್ನಕ್ಕರು.

ಪನ್ರುಟ್ಟಿಯಲ್ಲಿ ಒಟ್ಟು 22 ಸಗಟು ಮಳಿಗೆಗಳಿವೆ ಎಂದು ವಿಜಯಕುಮಾರ್ ವಿವರಿಸುತ್ತಾರೆ. ಅವರ ತಂದೆ ಸುಮಾರು 25 ವರ್ಷಗಳಿಂದ ಅದೇ ಸ್ಥಳದಲ್ಲಿ ಅಂಗಡಿಯನ್ನು ಹೊಂದಿದ್ದರು. ಅವರ ಮರಣದ ನಂತರ, ವಿಜಯಕುಮಾರ್  ಕಳೆದ 15 ವರ್ಷಗಳಿಂದ ನಡೆಸುತ್ತಿದ್ದಾರೆ. ಪ್ರತಿ ಅಂಗಡಿಯು ದಿನಕ್ಕೆ ಸುಮಾರು 10 ಟನ್ ವ್ಯಾಪಾರ ಮಾಡುತ್ತದೆ. "ಇಡೀ ತಮಿಳುನಾಡಿನಲ್ಲಿ, ಪನ್ರುಟ್ಟಿ ಬ್ಲಾಕ್ ಹೆಚ್ಚು ಹಲಸಿನ ಹಣ್ಣುಗಳನ್ನು ಹೊಂದಿದೆ," ಎಂದು ಅವರು ಹೇಳುತ್ತಾರೆ.   ಗ್ರಾಹಕರಿಗಾಗಿ ಬೆಂಚಿನ ಮೇಲೆ ಕಾಯುತ್ತಿದ್ದ ರೈತರು ತಲೆಯಾಡಿಸುತ್ತಾ ಸಂಭಾಷಣೆಯಲ್ಲಿ ಸೇರಿಕೊಂಡರು.

ಇಲ್ಲಿ ಪುರುಷರು ಸಾಮಾನ್ಯವಾಗಿ ವೇಷ್ಠಿ ಅಥವಾ ಲುಂಗಿ ಮತ್ತು ಶರ್ಟ್ ಗಳನ್ನು ಧರಿಸುತ್ತಾರೆ. ಅವರೆಲ್ಲರೂ ಪರಸ್ಪರ ಪರಿಚಿತರು, ಮತ್ತು ಬಹುತೇಕ ಎಲ್ಲರೂ ಇದೇ ವ್ಯವಹಾರದಲ್ಲಿ ಇರುವವರು. ಅಲ್ಲಿ ಸಂಭಾಷಣೆ ಎತ್ತರದ ದನಿಯಲ್ಲಿರುತ್ತದೆ. ರಿಂಗಟೋನ್‌ ಕೂಡಾ ದೊಡ್ಡ ದನಿಯಲ್ಲಿರುತ್ತವೆ. ಹಾದು ಹೋಗುವ ಲಾರಿಯ ಹಾರನ್ನುಗಳು ಕಿವಿಯನ್ನು ಕೊರೆಯುವಂತಿರುತ್ತವೆ.

47 ವರ್ಷದ ಕೆ.ಪಟ್ಟುಸಾಮಿ ಹಲಸಿನ ಕೃಷಿಯಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡರು. ಅವರು ಪನ್ರುಟ್ಟಿ ತಾಲ್ಲೂಕಿನ ಕಟ್ಟಂಡಿಕುಪ್ಪಂ ಗ್ರಾಮದವರಾಗಿದ್ದು, 50 ಮರಗಳನ್ನು ಹೊಂದಿದ್ದಾರೆ. ಜೊತೆಗೆ 600 ಮರಗಳನ್ನು ಗುತ್ತಿಗೆಗೆ ಪಡೆದಿದ್ದಾರೆ. ಪ್ರತಿ 100 ಮರಗಳಿಗೆ 1.25 ಲಕ್ಷ ರೂ.ಗಳಂತೆ. "ನಾನು 25 ವರ್ಷಗಳಿಂದ ಈ ವ್ಯವಹಾರದಲ್ಲಿದ್ದೇನೆ, ಮತ್ತು ಇದರಲ್ಲಿ ಸಾಕಷ್ಟು ಅನಿಶ್ಚಿತತೆಗಳಿವೆ ಎಂದು ನಾನು ನಿಮಗೆ ಹೇಳಬಲ್ಲೆ," ಎಂದು ಅವರು ಹೇಳುತ್ತಾರೆ.

ಸಾಕಷ್ಟು ಹಣ್ಣುಗಳಿದ್ದರೂ ಕೈಗೆ ಎಲ್ಲವೂ ಸಿಗುವುದಿಲ್ಲ, “10 ಹಣ್ಣು ಕೊಳೆತರೆ, ಹತ್ತು ಒಡೆದು ಹೋಗುತ್ತದೆ, ಹತ್ತು ಕೆಳಗೆ ಬಿದ್ದರೆ ಇನ್ನೊಂದು ಹತ್ತನ್ನು ಪ್ರಾಣಿಗಳು ತಿನ್ನುತ್ತವೆ,” ಎನ್ನುತ್ತಾರೆ ಪಟ್ಟುಸ್ವಾಮಿ.

ಅತಿಯಾಗಿ ಹಣ್ಣಾದ ಹಣ್ಣುಗಳನ್ನು ಎಸೆಯಲಾಗುತ್ತದೆ ಮತ್ತು ಅವು ಪ್ರಾಣಿಗಳ ಆಹಾರವಾಗುತ್ತವೆ. ಸರಾಸರಿ 5ರಿಂದ 10 ಪ್ರತಿಶತದಷ್ಟು ಹಣ್ಣುಗಳು ವ್ಯರ್ಥವಾಗುತ್ತವೆ. ಹಂಗಾಮಿನ ಏರು ದಿನಗಳಲ್ಲಿ ಈ ಪ್ರಮಾಣ ದಿನಕ್ಕೆ ಅರ್ಧದಿಂದ ಒಂದು ಟನ್ ತನಕ ಇರುತ್ತದೆ. ರೈತರು ಹೇಳುವಂತೆ ಬೆಳೆಯ ದೊಡ್ಡ ಪ್ರಮಾಣವು ಜಾನುವಾರುಗಳು ತಿನ್ನಲು ಮಾತ್ರವೇ ಯೋಗ್ಯವಾಗಿರುತ್ತವೆ.

Buying, selling, fetching and carrying of jackfruits at a mandi in Panruti
PHOTO • M. Palani Kumar

ಪನ್ರುಟ್ಟಿಯ ಮಂಡಿಯಲ್ಲಿ ಹಲಸಿನ ಹಣ್ಣುಗಳನ್ನು ಖರೀದಿಸುವುದು, ಮಾರಾಟ ಮಾಡುವುದು, ತರುವುದು ಮತ್ತು ಸಾಗಿಸುವುದು

ಮತ್ತು ರೈತರ ಪಾಲಿಗೆ ಜಾನುವಾರುಗಳಂತೆ, ಮರಗಳು ಸಹ ಹೂಡಿಕೆಯೇ. ಗ್ರಾಮೀಣ ಜನರು ಅವುಗಳನ್ನು ಶೇರು ಮಾರುಕಟ್ಟೆಯ ಸ್ಟಾಕಿನಂತೆ ಪರಿಗಣಿಸುತ್ತಾರೆ. ಇದರ ಮೌಲ್ಯವು ಸಾಮಾನ್ಯವಾಗಿ ಉತ್ತಮವಾಗಿರುತ್ತದೆ, ಮತ್ತು ಅವುಗಳನ್ನು ಅಚ್ಚುಕಟ್ಟಾದ ಲಾಭಕ್ಕಾಗಿ ಮಾರಾಟ ಮಾಡಬಹುದು. ಒಂದು ಹಲಸಿನ ಮರದ ಕಾಂಡವು 8 ಕೈ ಅಗಲ ಮತ್ತು 7 ಅಥವಾ 9 ಅಡಿ ಎತ್ತರವಿದ್ದರೆ, "ಕೇವಲ ಮರಕ್ಕೆ ಮಾತ್ರವೇ 50,000 ರೂಪಾಯಿ ಸಿಗುತ್ತದೆ,"  ಎಂದು ವಿಜಯಕುಮಾರ್ ಮತ್ತು ಅವರ ಸ್ನೇಹಿತರು ವಿವರಿಸುತ್ತಾರೆ.

ಸಾಧ್ಯವಿರುವಷ್ಟು, ರೈತರು ಮರಗಳನ್ನು ಕಡಿಯುವುದಿಲ್ಲ ಎಂದು ಪಟ್ಟುಸಾಮಿ ಹೇಳುತ್ತಾರೆ. "ನಾವು ಮರಗಳ ಸಂಖ್ಯೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತೇವೆ. ಆದರೆ ಬಂಡವಾಳದ ಅಗತ್ಯವಿದ್ದಾಗ - ವೈದ್ಯಕೀಯ ತುರ್ತು ಪರಿಸ್ಥಿತಿಗಳಿಗಾಗಿ ಅಥವಾ ಕುಟುಂಬದಲ್ಲಿ ಮದುವೆಗಾಗಿ - ಕೆಲವು ದೊಡ್ಡ ಮರಗಳನ್ನು ಕಡಿಯಲು ಆಯ್ಕೆ ಮಾಡುತ್ತೇವೆ ಮತ್ತು ಅವುಗಳನ್ನು ಮರಮಟ್ಟುಗಳಿಗೆ ಮಾರಾಟ ಮಾಡುತ್ತೇವೆ." ಅದು ರೈತನಿಗೆ ಒಂದೆರಡು ಲಕ್ಷಗಳನ್ನು ತರುತ್ತದೆ. ಬಿಕ್ಕಟ್ಟನ್ನು ನಿಭಾಯಿಸಲು ಅಥವಾ ಕಲ್ಯಾಣಂ (ಮದುವೆ)ಯನ್ನು ನೋಡಿಕೊಳ್ಳಲು ಅಷ್ಟು ಸಾಕು...

"ಇಲ್ಲಿ ಬನ್ನಿ," ಎಂದು ಪಟ್ಟುಸಾಮಿ ನನ್ನನ್ನು ಕರೆದು ಅಂಗಡಿಯ ಹಿಂಭಾಗಕ್ಕೆ ನಡೆದುಹೋದರು. ಒಂದು ಕಾಲದಲ್ಲಿ ಅಲ್ಲಿ ಡಜನ್ನುಗಟ್ಟಲೆ ದೊಡ್ಡ ಹಲಸಿನ ಮರಗಳಿದ್ದವು ಎಂದು ಅವರು ವಿವರಿಸುತ್ತಾರೆ. ಆದಾಗ್ಯೂ, ನಾವು ಅಲ್ಲಿ ನೋಡಬಹುದಾದದ್ದು ಪಲ ಕಣ್ಣು (ಸಣ್ಣ ಹಲಸಿನ ಸಸಿಗಳು). ದೊಡ್ಡ ಮರಗಳನ್ನು ಆ ಜಮೀನಿನ ಮಾಲೀಕರು ಖರ್ಚುವೆಚ್ಚಗಳನ್ನು ಪೂರೈಸಲು ಮಾರಾಟ ಮಾಡಿದ್ದರು. ನಂತರ, ಅವರು ಮತ್ತೊಂದು ಬ್ಯಾಚ್ ಸಸಿಗಳನ್ನು  ನೆಟ್ಟರು. "ಇವು ಕೇವಲ ಎರಡು ವರ್ಷಗಳಷ್ಟು ಪ್ರಾಯದವು," ಎಂದು  ಪುಟ್ಟ, ಸಣ್ಣ ಸಸಿಗಳನ್ನು  ತೋರಿಸುತ್ತಾ ಪಟ್ಟುಸಾಮಿ ಹೇಳುತ್ತಾರೆ. "ಹಲಸಿನ ಮರವು ಕೆಲವು ವರ್ಷಗಳಷ್ಟು ಹಳೆಯದಾದಾಗ ಅದು ಫಲ ನೀಡತೊಡಗುತ್ತದೆ."

ಪ್ರತಿ ವರ್ಷ, ಹಂಗಾಮಿನ ಮೊದಲ ಫಸಲನ್ನು ಪ್ರಾಣಿಗಳು ತಿನ್ನುತ್ತವೆ. "ಕೋತಿಗಳು ಅದನ್ನು ತಮ್ಮ ಬಾಯಿಯಿಂದ ಹಣ್ಣನ್ನು ಒಡೆದು, ನಂತರ ತಮ್ಮ ಕೈಗಳನ್ನು ಬಳಸಿ ತಿನ್ನುತ್ತವೆ. ಮತ್ತು ಅಳಿಲುಗಳಿಗೂ ಈ ಹಣ್ಣೆಂದರೆ ಪ್ರೀತಿ."

ಮರಗಳನ್ನು ಗುತ್ತಿಗೆಗೆ ನೀಡುವುದರಿಂದ ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂದು ಪಟ್ಟುಸಾಮಿ ಹೇಳುತ್ತಾರೆ. "ನೋಡಿ, ಮರದ ಮಾಲೀಕರು ಪ್ರತಿ ವರ್ಷ ಒಂದು ದೊಡ್ಡ ಮೊತ್ತವನ್ನು ಪಡೆಯುತ್ತಾರೆ, ಮತ್ತು ಅವರು ಒಂದೊಂದೇ ಹಣ್ಣನ್ನು ಕಿತ್ತು ಮಾರುಕಟ್ಟೆಗೆ ತರಬೇಕಿರುವುದಿಲ್ಲ, ಅದನ್ನು ಸಮಯಕ್ಕೆ ಸರಿಯಾಗಿ ಮಾರುಕಟ್ಟೆಗೆ ತರಬೇಕಾಗಿಲ್ಲ. ಆದರೆ ನನ್ನಂತಹ ಯಾರಾದರೂ - ನಾನು ಹೆಚ್ಚಿನ ಸಂಖ್ಯೆಯ ಮರಗಳನ್ನು ನೋಡಿಕೊಳ್ಳುವುದರಿಂದ - ಒಂದೇ ಬಾರಿಗೆ 100 ಅಥವಾ 200 ಮರಗಳ ಹಣ್ಣುಗಳನ್ನು ಕಿತ್ತು ಮಂಡಿಗೆ ತರಬಹುದು." ಮರಗಳು ಮತ್ತು ಹವಮಾನ ಎರಡೂ ಎಲ್ಲಿಯ ತನಕ ನಮ್ಮ ಮೇಲೆ ಕರುಣೆ ಹೊಂದಿರುತ್ತವೆಯೋ ಅಲ್ಲಿಯವರೆಗೂ ನಮಗೆ ಗೆಲವು. ಇದೊಂದು ರೀತಿ ಎಲ್ಲರೂ ಗೆಲ್ಲಬಹುದಾದ ಆಟ…

ದುಃಖದ ಸಂಗತಿಯೆಂದರೆ, ಇದೆಲ್ಲ  ನಡೆದರೂ, ರೈತನಿಗೆ ತನ್ನ ಫಸಲಿಗೆ ದರವನ್ನು ನಿಗದಿಪಡಿಸಲು ಸಾಧ್ಯವಾಗುವುದಿಲ್ಲ. ಹಾಗೆ ಸಾಧ್ಯವಾಗುವಂತಿದ್ದಿದ್ದರೆ, ಬೆಲೆಯಲ್ಲಿ ತೀವ್ರವಾದ, ಮೂರು ಪಟ್ಟುಗಳಷ್ಟೆಲ್ಲ ವ್ಯತ್ಯಾಸವಿರುತ್ತಿರಲಿಲ್ಲ. 2022ರಲ್ಲಿ ಒಂದು ಟನ್ ಹಲಸಿನ ಹಣ್ಣಿನ ಬೆಲೆ  10,000 ದಿಂದ 30,000 ರೂ. ಇತ್ತು.

Vijaykumar (extreme left ) at his shop with farmers who have come to sell their jackfruits
PHOTO • M. Palani Kumar

ವಿಜಯಕುಮಾರ್ (ಎಡದಿಂದ ಮೊದಲಿನವರು) ತಮ್ಮ ಹಲಸಿನ ಹಣ್ಣುಗಳನ್ನು ಮಾರಾಟ ಮಾಡಲು ಬಂದ ರೈತರೊಂದಿಗೆ ತನ್ನ ಅಂಗಡಿಯಲ್ಲಿ

"ದರ ಹೆಚ್ಚಾದಾಗ, ಸಾಕಷ್ಟು ಹಣವಿರುವಂತೆ ಕಾಣುತ್ತದೆ," ಎಂದು ವಿಜಯಕುಮಾರ್ ತನ್ನ ಮರದ ಮೇಜಿನ ಡ್ರಾಯರ್ ತೆಗೆದು ತೋರಿಸುತ್ತಾರೆ. ಅವರು ಎರಡೂ ಕಡೆಯವರಿಂದ ಐದು ಪ್ರತಿಶತದಷ್ಟು ಕಮಿಷನ್ ಗಳಿಸುತ್ತಾರೆ. "ಆದರೆ ಒಬ್ಬ ಪಾರ್ಟಿ ನಿಮಗೆ ಮೋಸ ಮಾಡಿದರೆ, ಅದೆಲ್ಲವೂ ಹೊರಟುಹೋಗುತ್ತದೆ. ಆಗ ನಾವು ನಮ್ಮ ಬೊಕ್ಕಸವನ್ನೇ ಖಾಲಿ ಮಾಡಬೇಕಾಗುತ್ತದೆ," ಎಂದು ಡ್ರಾಯರ್ ತಟ್ಟುತ್ತಾ ಹೇಳುತ್ತಾರೆ, "ರೈತನಿಗೆ ಹಣ ಕೊಡಲೇಬೇಕು. ನಮಗೂ ನೈತಿಕ ಜವಾಬ್ದಾರಿ ಇರಬೇಕಲ್ಲವೇ?"

ಹಲಸಿನ ರೈತರು ಮತ್ತು ಉತ್ಪಾದಕರು ಏಪ್ರಿಲ್ 2022ರ ಆರಂಭದಲ್ಲಿ ಸಂಗಂ ಎಂಬ ಸಮಿತಿಯನ್ನು ರಚಿಸಿಕೊಂಡರು. ವಿಜಯಕುಮಾರ್ ಇದಕ್ಕೆ ಕಾರ್ಯದರ್ಶಿಯಾಗಿದ್ದಾರೆ. "ಇದು ಕೇವಲ 10 ದಿನಗಳಷ್ಟು ಹಳೆಯದು," ಎಂದು ಅವರು ಹೇಳುತ್ತಾರೆ. "ನಾವು ಇನ್ನೂ ಅದನ್ನು ನೋಂದಾಯಿಸಿಲ್ಲ." ಅವರು ತಮ್ಮ ಸಮಿತಿಯ ಬಗ್ಗೆ ಹೆಚ್ಚಿನ ಭರವಸೆಗಳನ್ನು ಹೊಂದಿದ್ದಾರೆ. "ನಾವು ಬೆಲೆಯನ್ನು ನಿಗದಿಪಡಿಸಲು ಬಯಸುತ್ತೇವೆ. ಅಲ್ಲದೆ ಕಲೆಕ್ಟರ್ ಅವರನ್ನು ಭೇಟಿ ಮಾಡಲು ಬಯಸುತ್ತೇವೆ ಮತ್ತು ರೈತರಿಗೆ ಮತ್ತು ಈ ಉದ್ಯಮಕ್ಕೆ ಸಹಾಯ ಮಾಡುವಂತೆ ಕೇಳಲು ಬಯಸುತ್ತೇವೆ. ಉತ್ಪಾದಕರಿಗೆ ಕೆಲವು ಪ್ರೋತ್ಸಾಹಕಗಳನ್ನು, ಕೆಲವು ಸೌಲಭ್ಯಗಳನ್ನು ಬಯಸುತ್ತೇವೆ - ಮುಖ್ಯವಾಗಿ ಹಣ್ಣನ್ನು ಸಂರಕ್ಷಿಸಲು ಕೋಲ್ಡ್ ಸ್ಟೋರೇಜ್ ಬೇಕು. ನಾವು ಸಂಘಟಿತರಾದಾಗ ಮಾತ್ರ ಹೋಗಿ ಇದನ್ನೆಲ್ಲ ಕೇಳಲು ಸಾಧ್ಯ, ಅಲ್ಲವೇ?"

ಪ್ರಸ್ತುತ ಅವರು ಹೆಚ್ಚೆಂದರೆ ಹಣ್ಣುಗಳನ್ನು ಐದು ದಿನಗಳ ಕಾಲವಷ್ಟೇ ಇಡಲು ಸಾಧ್ಯವಿದೆ. "ಇದನ್ನು ವಿಸ್ತರಿಸಲು ನಮಗೆ ಕೆಲವು ಮಾರ್ಗಗಳ ಅಗತ್ಯವಿದೆ," ಎಂದು ಲಕ್ಷ್ಮಿ ಭರವಸೆಯಿಂದ ಹೇಳುತ್ತಾರೆ. ಆರು ತಿಂಗಳ ಕಾಲ ಅದನ್ನು ಸಂರಕ್ಷಿಸಿಡಲು ಸಾಧ್ಯವಾದರೆ ಅದ್ಭುತವಾಗಿರುತ್ತದೆ ಎನ್ನುವುದು ಅವರ ಯೋಚನೆ. ಅದರಲ್ಲಿ ಕನಿಷ್ಠ ಅರ್ಧದಷ್ಟನ್ನಾದರೂ ವಿಜಯಕುಮಾರ್ ಬಯಸುತ್ತಾರೆ. ಪ್ರಸ್ತುತ, ಅವರು ಕೆಲವು ದಿನಗಳಲ್ಲಿ ಮಾರಾಟವಾಗದ ಹಣ್ಣನ್ನು ಎಸೆಯಬೇಕಾಗುತ್ತದೆ, ಅಥವಾ ಚಿಲ್ಲರೆ ಮಾರಾಟಗಾರರಿಗೆ ಅದನ್ನು ನೀಡುತ್ತಾರೆ - ಅವರು ಅದನ್ನು ಕತ್ತರಿಸಿ ರಸ್ತೆ ಬದಿಯಲ್ಲಿ ಮಾರಾಟ ಮಾಡುತ್ತಾರೆ.

*****

"ಹಲಸಿನ ಹಣ್ಣಿನ ಕೋಲ್ಡ್ ಸ್ಟೋರೇಜ್ ಈಗ ಕೇವಲ ಆಸೆಯ ಆಲೋಚನೆಯಾಗಿದೆ. ನೀವು ಆಲೂಗಡ್ಡೆ ಅಥವಾ ಸೇಬನ್ನು ದೀರ್ಘಕಾಲದವರೆಗೆ ಇಡಬಹುದು. ಆದರೆ ಹಲಸಿನ ಹಣ್ಣಿನ ಮೇಲೆ ಇಂತಹ ಯಾವುದೇ ಪ್ರಯೋಗಗಳು ನಡೆದಿಲ್ಲ. ಹಲಸಿನ ಹಣ್ಣಿನ ಚಿಪ್ಸ್ ಕೂಡ ಹಂಗಾಮಿನ ನಂತರ ಕೇವಲ ಎರಡು ತಿಂಗಳವರೆಗೆ ಮಾತ್ರ ಲಭ್ಯವಿರುತ್ತದೆ," ಎಂದು ಶ್ರೀ ಪಡ್ರೆ ಹೇಳುತ್ತಾರೆ, ಇವರು ವಿಶಿಷ್ಟ ಕನ್ನಡ ಕೃಷಿ ನಿಯತಕಾಲಿಕವಾದ ಅಡಿಕೆ ಪತ್ರಿಕೆ ಸಂಪಾದಕರು.

"ವರ್ಷವಿಡೀ ಕನಿಷ್ಠ ಒಂದು ಡಜನ್ ಹಲಸಿನ ಉತ್ಪನ್ನಗಳು ಲಭ್ಯವಿರುವಂತಾದರೆ, ಅದೊಂದು ಗೇಮ್ ಚೇಂಜರ್ ಆಗಿರುತ್ತದೆ," ಎಂದು ಅವರು ಹೇಳುತ್ತಾರೆ.

Lakshmi (on the chair) with a few women jackfruit sellers at a mandi ; she has been a jackfruit trader since 30 years
PHOTO • M. Palani Kumar

ಲಕ್ಷ್ಮಿ (ಕುರ್ಚಿಯ ಮೇಲೆ) ಮಂಡಿಯಲ್ಲಿ ಕೆಲವು ಮಹಿಳಾ ಹಲಸು ಮಾರಾಟಗಾರರೊಂದಿಗೆ; ಅವರು 30 ವರ್ಷಗಳಿಂದ ಈ ಕ್ಷೇತ್ರದಲ್ಲಿದ್ದಾರೆ

ಪರಿಗೆ ನೀಡಿದ ದೂರವಾಣಿ ಸಂದರ್ಶನದಲ್ಲಿ ಮಾತನಾಡುತ್ತಾ, ಪಡ್ರೆ ಹಲಸಿನ ಕೃಷಿಯ ಬಗ್ಗೆ ಹಲವಾರು ಪ್ರಮುಖ ಮತ್ತು ಗಂಭೀರವಾದ ಅಂಶಗಳನ್ನು ಚರ್ಚಿಸಿದರು. ಮೊದಲನೆಯದಾಗಿ, ಅವರು ಹೇಳುತ್ತಾರೆ, ಹಲಸಿನ ಹಣ್ಣಿನ ಬಗ್ಗೆ ನಮ್ಮಲ್ಲಿ ಯಾವುದೇ ಮಾಹಿತಿ ಇಲ್ಲ. "ಅಂಕಿ-ಸಂಖ್ಯೆಗಳನ್ನು ಒಟ್ಟು ಮಾಡುವುದು ಕಷ್ಟ, ಬಹಳಷ್ಟು ಗೊಂದಲಗಳಿವೆ. ಸುಮಾರು 10 ವರ್ಷಗಳ ಹಿಂದಿನವರೆಗೆ, ಇದು ನಿರ್ಲಕ್ಷಿತ, ಅಸಂಘಟಿತ ವಲಯದ ಬೆಳೆಯಾಗಿತ್ತು. ಇದಕ್ಕೆ ಪನ್ರುಟ್ಟಿ ಒಂದು ಅದ್ಭುತ ಅಪವಾದ."

ಹಲಸಿನ ಹಣ್ಣಿನ ಉತ್ಪಾದನೆಯಲ್ಲಿ ಭಾರತ ವಿಶ್ವದಲ್ಲಿಯೇ  ನಂ.1 ಸ್ಥಾನದಲ್ಲಿದೆ ಎಂದು ಪಡ್ರೆ ಹೇಳುತ್ತಾರೆ. "ಹಲಸಿನ ಮರ ಎಲ್ಲೆಡೆಯೂ ಇದೆ, ಆದರೆ ಇದರ ಮೌಲ್ಯವರ್ಧನೆಯ ಪ್ರಯತ್ನಗಳು ಎಲ್ಲೂ ಕಾಣುವುದಿಲ್ಲ." ದೇಶದೊಳಗೆ, ಕೇರಳ, ಕರ್ನಾಟಕ ಮತ್ತು ಮಹಾರಾಷ್ಟ್ರಗಳು ಕೆಲವು ಮೌಲ್ಯವರ್ಧನೆಯನ್ನು ಮಾಡುತ್ತವೆ, ಆದರೆ ಇದು  ತಮಿಳುನಾಡಿನಲ್ಲಿ ಆರಂಭಿಕ ಉದ್ಯಮವಾಗಿದೆ.

ಮತ್ತು ಇದು ನಾಚಿಕೆಗೇಡು ಎಂದು ಪಡ್ರೆ ಹೇಳುತ್ತಾರೆ, ಏಕೆಂದರೆ ಈ ಹಣ್ಣು ಬಹುಪಯೋಗಿ. "ಹಲಸು ತೀರಾ ಕಡಿಮೆ ಸಂಶೋಧನೆಗೆ ಒಳಪಟ್ಟಿದೆ. ಒಂದು ದೊಡ್ಡ ಮರವು ಒಂದರಿಂದ ಮೂರು ಟನ್‌ಗಳ ತನಕ ಹಣ್ಣನ್ನು ಎಲ್ಲೆಡೆಯೂ ಉತ್ಪಾದಿಸುತ್ತದೆ." ಜೊತೆಗೆ, ಪ್ರತಿ ಮರದಿಂದ ಐದು ಸಂಭಾವ್ಯ ಕಚ್ಚಾವಸ್ತುಗಳು ದೊರೆಯುತ್ತವೆ: ಮೊದಲು ಹಲಸಿನಕಾಯಿ. ನಂತರ ತರಕಾರಿಯಾಗಿ ಬಳಸಬಹುದಾದ ಸ್ವಲ್ಪ ಬೆಳೆದ ಕಾಯಿ. ನಂತರ ದೋರೆಗಾಯಿ, ಇದನ್ನು ಹಪ್ಪಳ ಮತ್ತು ಚಿಪ್ಸ್ ತಯಾರಿಕೆಗಳಲ್ಲಿ ಬಳಸಲಾಗುತ್ತದೆ. ನಾಲ್ಕನೆಯದು ಜನಪ್ರಿಯ ಮಾಗಿದ ಹಲಸಿನ ಹಣ್ಣು. ಮತ್ತು ಕೊನೆಯದಾಗಿ, ಹಲಸಿನ ಬೀಜ.

"ಇದನ್ನು 'ಸೂಪರ್ ಫುಡ್' ಎಂದು ಕರೆಯುವುದರಲ್ಲಿ ಆಶ್ಚರ್ಯವೇನಿಲ್ಲ," ಎಂದು ಅವರು ಹೇಳುತ್ತಾರೆ. "ಆದರೂ, ಈ ಹಣ್ಣಿನ ಸಲುವಾಗಿ ಯಾವುದೇ ಸಂಶೋಧನಾ ಕೇಂದ್ರವಾಗಲಿ, ತರಬೇತಿ ಕೇಂದ್ರವನ್ನಾಗಲಿ ಇದುವರೆಗೆ ಸ್ಥಾಪಿಸಲಾಗಿಲ್ಲ. ಬಾಳೆಹಣ್ಣು ಅಥವಾ ಆಲೂಗಡ್ಡೆಗಳಿಗೆ ಇರುವಂತೆ ಹಲಸಿನ ವಿಜ್ಞಾನಿಗಳು ಮತ್ತು ಸಲಹೆಗಾರರೂ ಇಲ್ಲ."

ಹಲಸು ಕಾರ್ಯಕರ್ತನಾಗಿ, ಪಡ್ರೆ ಅಂತಹ ಹಲವು ಅಂತರಗಳನ್ನು ತುಂಬಲು ಪ್ರಯತ್ನಿಸುತ್ತಿದ್ದಾರೆ. "ನಾನು ಕಳೆದ 15 ವರ್ಷಗಳಿಂದ ಹಲಸಿನ ಕುರಿತು ಬರೆಯುತ್ತಿದ್ದೇನೆ, ಮಾಹಿತಿಯನ್ನು ಹರಡುತ್ತಿದ್ದೇನೆ ಮತ್ತು ಜನರಿಗೆ ಸ್ಫೂರ್ತಿ ನೀಡುತ್ತಿದ್ದೇನೆ. ನಮ್ಮ ' ಡಿಕೆ ಪತ್ರಿಕೆ ' ಅಸ್ತಿತ್ಚದಲ್ಲಿದ್ದ ಕಾಲದ ಸುಮಾರು ಅರ್ಧದಷ್ಟು ಸಮಯ (34 ವರ್ಷಗಳು) ಈ ಕೆಲಸ ಮಾಡಿದ್ದೇನೆ. ನಾವು ಪತ್ರಿಕೆಯಲ್ಲಿ ಹಲಸಿನ ಕುರಿತು 34ಕ್ಕೂ ಹೆಚ್ಚು ಕವರ್ ಸ್ಟೋರಿಗಳನ್ನು ಮಾಡಿದ್ದೇವೆ.

With their distinctive shape, smell and structure, jackfruits are a sight to behold but not very easy to fetch, carry and transport
PHOTO • M. Palani Kumar

ಅವುಗಳ ವಿಶಿಷ್ಟ ಆಕಾರ, ವಾಸನೆ ಮತ್ತು ರಚನೆಯೊಂದಿಗೆ, ಹಲಸಿನ ಹಣ್ಣುಗಳು ನೋಡಲು ಸುಂರವಾಗಿ ಕಾಣುತ್ತವೆ ಆದರೆ ಅವುಗಳನ್ನು ಕೊಯ್ದು, ಹೊತ್ತು ಮಾರುಕಟ್ಟೆಗೆ ಸಾಗಿಸುವುದು ಅಷ್ಟು ಸುಲಭವಲ್ಲ

Jackfruit trading involves uncertainties. Even if the harvest is big, some fruits will rot, crack open, fall down and even get eaten by  animals
PHOTO • M. Palani Kumar

ಹಲಸಿನ ವ್ಯಾಪಾರವು ಅನಿಶ್ಚಿತತೆಗಳನ್ನು ಒಳಗೊಂಡಿರುತ್ತದೆ. ಫಸಲು ಅದ್ಭುತವಾಗಿದ್ದರೂ ಸಹ, ಕೆಲವು ಹಣ್ಣುಗಳು ಕೊಳೆಯುತ್ತವೆ, ಬಿರುಕು ಬಿಡುತ್ತವೆ, ಕೆಳಗೆ ಬಿದ್ದು ಒಡೆಯುತ್ತವೆ ಮತ್ತು ಪ್ರಾಣಿಗಳು ತಿನ್ನುತ್ತವೆ

ಪಡ್ರೆಯವರ ಬಳಿ ಹಲಸಿನ ಕುರಿತಾದ ಸಕಾರತ್ಮಕ ಕತೆಗಳೂ ಇವೆ. ನಮ್ಮ ಮಾತುಕತೆಯ ಸಂದರ್ಭದಲ್ಲಿ ಆ ಕುರಿತು ಉತ್ಸುಕತೆಯಿಂದ ವಿವರಿಸಿದರು. ಅವರು ಭಾರತದಲ್ಲಿನ ರುಚಿಕರವಾದ ಹಲಸಿನ ಹಣ್ಣಿನ ಐಸ್‌ಕ್ರೀಮ್‌ಗಳನ್ನು ಒಳಗೊಂಡಂತೆ ಅನೇಕವನ್ನು ಪಟ್ಟಿ ಮಾಡುತ್ತಾರೆ. ಹಾಗೆಂದು ಅವರು ಸಮಸ್ಯೆಗಳನ್ನೂ ಮರೆಮಾಚುವುದಿಲ್ಲ. "ಯಶಸ್ಸಿನ ದಾರಿಯು ಈಗ ಕೋಲ್ಡ್‌ ಸ್ಟೋರೇಜ್‌ ಕಂಡುಹಿಡಿಯುತ್ತಿದೆ. ನಮ್ಮ ಮೊದಲ ಆದ್ಯತೆ ಕಳಿತ ಹಣ್ಣು ಸಂಸ್ಕರಿತ ರೂಪದಲ್ಲಿ ವರ್ಷವಿಡೀ ಲಭ್ಯವಿರುವಂತೆ ಮಾಡುವುದು. ಇದೇನೂ ರಾಕೆಟ್‌ ಸೈನ್ಸ್‌ ಅಲ್ಲ. ಆದರೆ ನಾವಿನ್ನೂ ಆ ನಿಟ್ಟಿನಲ್ಲಿ ಅಂಬೆಗಾಲನ್ನೂ ಇಟ್ಟಿಲ್ಲ."

ಮತ್ತೆ ಈ ಹಣ್ಣಿಗೆ ವಿಶಿಷ್ಟವಾದ ಸಮಸ್ಯೆಯೊಂದಿದೆ. ನೀವು ಹೊರಗಿನಿಂದ ನೋಡಿ ಹಣ್ಣಿನ ಗುಣಮಟ್ಟವನ್ನು ಅಳೆಯಲು ಸಾಧ್ಯವಿಲ್ಲ. ಪನ್ರುಟ್ಟಿಯಲ್ಲಿ ಮಾಡುವಂತಲ್ಲದೆ, ಹಲಸನ್ನು ಜಾಗರೂಕತೆಯಿಂದ ಕೊಯ್ಲು ಮಾಡಲಾಗುತ್ತದೆ. ಹಣ್ಣಿಗೆ ಖಚಿತ ಮಾರುಕಟ್ಟೆ ಇರುವಲ್ಲಿ ಮತ್ತು ಬೇರೆಡೆಗಳಲ್ಲಿ ಹಾಗೂ ಹಲಸು ಬೆಳೆಯುವ ಪ್ರದೇಶಗಳಲ್ಲಿ ಯಾವುದೇ ಸಿದ್ಧ ಮಾರುಕಟ್ಟೆ ಇಲ್ಲ. ಜೊತೆಗೆ ರೈತ ಸ್ನೇಹಿ ಪೂರೈಕೆ ಸರಪಳಿಗಳೂ ಇಲ್ಲ. ಇದರಿಂದಾಗಿ ಬಹಳಷ್ಟು ಹಣ್ಣುಗಳು ವ್ಯರ್ಥವಾಗಿ ಹೋಗುತ್ತವೆ.

ಈ ರೀತಿ ವ್ಯರ್ಥವಾಗುವುದನ್ನು ತಡೆಯಲು ನಾವು ಏನು ಮಾಡುತ್ತಿದ್ದೇವೆ ಎಂದು ಅವರು ಕೇಳುತ್ತಾರೆ. “ಇದು ಕೂಡಾ ಆಹಾರ ಪದಾರ್ಥವಲ್ಲವೆ? ನಾವು ಅಕ್ಕಿ ಮತ್ತು ಗೋದಿಗೆ ಮಾತ್ರವೇ ಏಕೆ ಪ್ರಾಮುಖ್ಯತೆ ನೀಡುತ್ತೇವೆ?”

ಹಲಸಿನ ವ್ಯಾಪಾರವು ಸುಧಾರಿಸಲು, ಪನ್ರುಟ್ಟಿಯಿಂದ ಹಣ್ಣು ಎಲ್ಲೆಡೆಯೂ ಹೋಗಬೇಕು - ಪ್ರತಿ ರಾಜ್ಯ, ಪ್ರತಿ ದೇಶಕ್ಕೆ ಹೋಗಬೇಕು ಎಂದು ವಿಜಯಕುಮಾರ್ ಹೇಳುತ್ತಾರೆ. "ಹೆಚ್ಚು ಪ್ರಚಾರ ಇರಬೇಕು," ಎಂದು ಅವರು ಹೇಳುತ್ತಾರೆ. "ಆಗ ಮಾತ್ರ ನಮಗೆ ಉತ್ತಮ ಬೆಲೆ ಸಿಗುತ್ತದೆ."

ಚೆನ್ನೈಯ ವಿಸ್ತಾರವಾದ ಕೊಯಂಬೇಡು ಸಗಟು ಮಾರುಕಟ್ಟೆ ಸಂಕೀರ್ಣದಲ್ಲಿರುವ ಅಣ್ಣಾ ಫ್ರೂಟ್ ಮಾರ್ಕೆಟ್ಟಿನಲ್ಲಿ ಹಲಸಿನ ವ್ಯಾಪಾರಿಗಳು ಇದನ್ನೇ ಹೇಳುತ್ತಾರೆ. ಕೋಲ್ಡ್ ಸ್ಟೋರೇಜ್ ಮತ್ತು ಉತ್ತಮ ಯಾರ್ಡ್ ಸೌಲಭ್ಯಗಳು ಅವರ ಆಗ್ರಹ. ಇಲ್ಲಿನ ವ್ಯಾಪಾರಿಗಳನ್ನು ಪ್ರತಿನಿಧಿಸುವ ಸಿ.ಆರ್. ಕುಮಾರವೇಲ್, ಒಂದು ಹಣ್ಣಿಗೆ 100ರಿಂದ 400 ರೂ.ಗಳವರೆಗೆ ಬೆಲೆ ವ್ಯಾಪಕವಾಗಿ ಏರಿಳಿತಗೊಳ್ಳುತ್ತದೆ ಎಂದು ಹೇಳುತ್ತಾರೆ.

"ಕೊಯಂಬೇಡುವಿನಲ್ಲಿ, ನಾವು ಹಣ್ಣನ್ನು ಹರಾಜು ಹಾಕುತ್ತೇವೆ. ಪೂರೈಕೆ ಹೆಚ್ಚು ಇದ್ದಾಗ, ಸ್ವಾಭಾವಿಕವಾಗಿ ಬೆಲೆ ಕುಸಿಯುತ್ತದೆ. ಮತ್ತು ಸಾಕಷ್ಟು ವೇಸ್ಟೇಜ್ ಕೂಡಾ ಆಗುತ್ತದೆ - 5 ಅಥವಾ 10 ಪ್ರತಿಶತದಷ್ಟು. ನಾವು ಹಣ್ಣನ್ನು ಇಟ್ಟುಕೊಂಡು ಮಾರಾಟ ಮಾಡಲು ಸಾಧ್ಯವಾದರೆ, ರೈತರು ಉತ್ತಮ ದರದ ಪ್ರಯೋಜನ ಪಡೆಯುತ್ತಾರೆ," ಎಂದು ಅವರು ಹೇಳಿದರು. ಕುಮಾರವೇಲ್ ಅವರು 10 ಅಂಗಡಿಗಳಲ್ಲಿ  ಪ್ರತಿ ದಿನ ಕನಿಷ್ಠ 50,000 ರೂ.ಗಳ ವ್ಯಾಪಾರವನ್ನು ಅಂದಾಜಿಸುತ್ತಾರೆ. "ಆದರೆ ಇದು ಹಣ್ಣಿನ ಋತುವಿನಲ್ಲಿ ಮಾತ್ರ - ವರ್ಷಕ್ಕೆ ಸುಮಾರು ಐದು ತಿಂಗಳ ಕಾಲ."

Jackfruits from Panruti are sent all over Tamil Nadu, and some go all the way to Mumbai
PHOTO • M. Palani Kumar

ಪನ್ರುಟ್ಟಿಯಿಂದ ಹಲಸಿನ ಹಣ್ಣುಗಳನ್ನು ತಮಿಳುನಾಡಿನಾದ್ಯಂತ ಕಳುಹಿಸಲಾಗುತ್ತದೆ, ಮತ್ತು ಕೆಲವು ಮುಂಬೈಗೆ ಹೋಗುತ್ತವೆ

Absence of farmer-friendly supply chains and proper cold storage facilities lead to plenty of wastage
PHOTO • M. Palani Kumar

ರೈತ ಸ್ನೇಹಿ ಪೂರೈಕೆ ಸರಪಳಿಗಳು ಮತ್ತು ಸರಿಯಾದ ಕೋಲ್ಡ್ ಸ್ಟೋರೇಜ್ ಸೌಲಭ್ಯಗಳ ಅನುಪಸ್ಥಿತಿಯು ಸಾಕಷ್ಟು ಹಣ್ಣುಗಳ ವ್ಯರ್ಥಕ್ಕೆ ಕಾರಣವಾಗುತ್ತದೆ

ತಮಿಳುನಾಡು ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ 2022-23ರ ನೀತಿ ಟಿಪ್ಪಣಿಯು ಹಲಸಿನ ಬೆಳೆಗಾರರಿಗೆ ಮತ್ತು ವಿಸ್ತರಣೆ ಮೂಲಕ, ವ್ಯಾಪಾರಿಗಳಿಗೆ ಕೆಲವು ಭರವಸೆಗಳನ್ನು ನೀಡಿದೆ. "ಹಲಸಿನ ಕೃಷಿ ಮತ್ತು ಸಂಸ್ಕರಣೆಯಲ್ಲಿ ವಿಪುಲ ಅವಕಾಶಗಳನ್ನು ಬಳಸಿಕೊಳ್ಳಲು ಕಡಲೂರು ಜಿಲ್ಲೆಯ ಪನ್ರುಟ್ಟಿ ಬ್ಲಾಕ್ಕಿನ ಪಾಣಿಕಂಕುಪ್ಪಂ ಗ್ರಾಮದಲ್ಲಿ ಐದು ಕೋಟಿ ರೂ.ಗಳ ವೆಚ್ಚದಲ್ಲಿ ಹಲಸಿನ ವಿಶೇಷ ಕೇಂದ್ರವನ್ನು ಸಹ ಸ್ಥಾಪಿಸಲಾಗುತ್ತಿದೆ." ಎಂದು ನೀತಿ ಟಿಪ್ಪಣಿಯಲ್ಲಿ ಉಲ್ಲೇಖಿಸಲಾಗಿದೆ.

"ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚಿನ ಮೌಲ್ಯವನ್ನು ಪಡೆಯಲು," ಪನ್ರುಟ್ಟಿ ಹಲಸಿನ ಹಣ್ಣುಗಳಿಗೆ ಜಿಯೊಗ್ರಾಫಿಕಲ್ ಐಡೆಂಟಿಫಿಕೇಶನ್ (ಜಿಐ) ಟ್ಯಾಗ್ ಪಡೆಯಲು ಪ್ರಯತ್ಬಗಳು ಜಾರಿಯಲ್ಲಿವೆಯೆಂದು ಟಿಪ್ಪಣಿ ಹೇಳುತ್ತದೆ.

ಆದಾಗ್ಯೂ, "ಸಾಕಷ್ಟು ಜನರಿಗೆ ಪನ್ರುಟ್ಟಿ ಎಲ್ಲಿದೆಯೆಂದು ಸಹ ತಿಳಿದಿಲ್ಲ," ಎಂದು ಲಕ್ಷ್ಮಿ ಬೇಸರದಿಂದ ಹೇಳುತ್ತಾರೆ. 2002ರ ತಮಿಳು ಚಲನಚಿತ್ರ ಸೊಲ್ಲ ಮರಂಧ ಧೈ (ಹೇಳಲು ಮರೆತ ಕಥೆ) ತಾನಿರುವ ಪಟ್ಟಣವನ್ನು ಪ್ರಸಿದ್ಧಗೊಳಿಸಿತು ಎಂದು ಅವರು ಹೇಳುತ್ತಾರೆ. "ನಿರ್ದೇಶಕ ಥಂಕರ್ ಬಚನ್ ಈ ಪ್ರದೇಶದವರು. ನಾನು ಕೂಡ  ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ," ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ. "ಚಿತ್ರೀಕರಣದ ಸಮಯದಲ್ಲಿ ಬಹಳಷ್ಟು ಸೆಕೆಯಿತ್ತು, ಆದರೆ ಅದು ಆಸಕ್ತಿದಾಯಕವಾಗಿತ್ತು."

*****

ಹಣ್ಣಿನ ಋತುವಿನಲ್ಲಿ ಲಕ್ಷ್ಮಿಯವರಿಗೆ ಹೆಚ್ಚಿನ ಬೇಡಿಕೆಯಿರುತ್ತದೆ. ಹಲಸು ಪ್ರಿಯರು ಸ್ಪೀಡ್ ಡಯಲ್‌ನಲ್ಲಿ ಲಕ್ಷ್ಮಿಯವರ ಫೋನ್ ನಂಬರನ್ನು ಹೊಂದಿದ್ದಾರೆ. ಅವರು ತಮಗೆ ಉತ್ತಮ ಹಣ್ಣು ಇವರ ಬಳಿ ಸಿಗುತ್ತದೆನ್ನುವುದು ಗೊತ್ತು.

ಮತ್ತು ಲಕ್ಷ್ಮಿ ನಿಜವಾಗಿಯೂ ಅದನ್ನು ಮಾಡಬಲ್ಲರು. ಅವರು ಪನ್ರುಟ್ಟಿಯ 20ಕ್ಕೂ ಹೆಚ್ಚು ಮಂಡಿಗಳೊಂದಿಗೆ ಸಂಪರ್ಕ ಹೊಂದಿರುವುದು ಮಾತ್ರವಲ್ಲದೆ, ಹಣ್ಣು ಸರಬರಾಜು ಮಾಡುವ ಅನೇಕ ರೈತರೂ ಅವರಿಗೆ ಪರಿಚಿತರು. ಕೆಲವೊಮ್ಮೆ ಅವರ ಫಸಲು ಯಾವ ಸಮಯಕ್ಕೆ ಸಿದ್ಧವಿರುತ್ತದೆಯೆನ್ನುವುದು ಸಹ ಅವರಿಗೆ ತಿಳಿದಿರುತ್ತದೆ.

ಅವರು ಇದೆಲ್ಲವನ್ನೂ ಹೇಗೆ ಸಂಭಾಳಿಸುತ್ತಾರೆ? ಲಕ್ಷ್ಮಿಯವರು ಅದಕ್ಕೆ ಸ್ಪಷ್ಟವಾಗಿ ಉತ್ತರಿಸುವುದಿಲ್ಲ. ಆದರೆ ಇದಕ್ಕೆ ಉತ್ತರ ಸ್ಪಷ್ಟವಿದೆ. ಅವರು ದಶಕಗಳಿಂದ ಈ ವ್ಯವಹಾರ ಮಾಡುತ್ತಿದ್ದಾರೆ. ಇದು ಅವರ ಕೆಲಸ ಹೀಗಾಗಿ ಇದೆಲ್ಲವೂ ಅವರಿಗೆ ತಿಳಿದಿದೆ.

ಅಂತಹ ಪುರುಷ ಪ್ರಧಾನ ಕ್ಷೇತ್ರಕ್ಕೆ ಅವರು ಹೇಗೆ ಪ್ರವೇಶಿಸಿದರು? ಈ ಬಾರಿ ಅವರು ನನಗೆ ಉತ್ತರ ನೀಡಿದರು. "ನಿಮ್ಮಂತಹ ಜನರು ಹಣ್ಣುಗಳನ್ನು ಖರೀದಿಸುವಂತೆ ನನ್ನ ಬಳಿ ಹೇಳುತ್ತಾರೆ. ಮತ್ತು ನಾನು ಅವರಿಗೆ ಅದನ್ನು ಉತ್ತಮ ಬೆಲೆಗೆ ಖರೀದಿಸಿ ನೀಡುತ್ತೇನೆ." ಅವರು ವ್ಯಾಪಾರಿಯ ಕುರಿತಾಗಿಯೂ ಗಮನಹರಿಸುವುದಾಗಿ ಹೇಳುತ್ತಾರೆ. ವ್ಯಾಪಾರಿಗಳು ಮತ್ತು ರೈತರು ಅವರ ತೀರ್ಪನ್ನು ಗೌರವಿಸುತ್ತಾರೆ ಎಂಬುದು ಸ್ಪಷ್ಟ. ಅವರೆಲ್ಲರೂ ಲಕ್ಷ್ಮಿಯವರ ಕುರಿತು ಗೌರವದಿಂದ ಮಾತನಾಡುತ್ತಾರೆ.

Lakshmi sets the price for thousands of kilos of jackfruit every year. She is one of the very few senior women traders in any agribusiness
PHOTO • M. Palani Kumar

ಲಕ್ಷ್ಮಿ ಪ್ರತಿ ವರ್ಷ ಸಾವಿರಾರು ಕಿಲೋ ಹಲಸಿನ ಹಣ್ಣಿನ ಬೆಲೆಯನ್ನು ನಿಗದಿಪಡಿಸುತ್ತಾರೆ. ಯಾವುದೇ ಕೃಷಿ ವ್ಯವಹಾರದಲ್ಲಿ ಕಾಣಬಹುದಾದ ಕೆಲವೇ ಕೆಲವು ಹಿರಿಯ ಮಹಿಳಾ ವ್ಯಾಪಾರಿಗಳಲ್ಲಿ ಅವರೂ ಒಬ್ಬರು

ಅವರ ಮನೆಯಿರುವ ಪ್ರದೇಶದಲ್ಲಿ ಯಾರನ್ನು ಕೇಳಿದರೂ ಅವರ ಮನೆ ತೋರಿಸುತ್ತಾರೆ. “ಆದರೆ ನನ್ನದು ಸಿಲ್ಲರೆ ವ್ಯಾಪಾರಮ್‌ (ಸಣ್ಣ ವ್ಯಾಪಾರ),” ಎಂದು ಸಂಕೋಚದಿಂದ ಹೇಳುತ್ತಾರೆ. “ನಾನು ಎಲ್ಲರಿಗೂ ಒಪ್ಪಿತವಾಗುವ ಬೆಲೆಯನ್ನು ನಿಗದಿಪಡಿಸುತ್ತೇನೆ.”

ಪ್ರತಿ ಲೋಡ್ ಹಲಸು ಮಂಡಿಗೆ ಬರುತ್ತಿದ್ದಂತೆ, ಲಕ್ಷ್ಮಿ ಹಣ್ಣಿನ ಬೆಲೆಯನ್ನು ನಿಗದಿಪಡಿಸುವ ಮೊದಲು ಅದರ ಗುಣಮಟ್ಟವನ್ನು ಪರಿಶೀಲಿಸುತ್ತಾರೆ. ಅದಕ್ಕಾಗಿ ಅವರಿಗೆ ಅಗತ್ಯರುವುದು ಚಾಕು ಮಾತ್ರ. ಕೆಲವು ಹಣ್ಣಿನ ಮೇಲೆ ಹೊಡೆಯುವ ಮೂಲಕ, ಅದು ಹಣ್ಣಾಗಿದೆಯೇ ಅಥವಾ ಕಾಯಿಯೇ ಅಥವಾ ಮರುದಿನ ತಿನ್ನಲು ಸಿದ್ಧವಾಗಿದೆಯೇ ಎಂದು ಅವರು ಹೇಳಬಲ್ಲರು. ಅವರಿಗೆ ತನ್ನ ತೀರ್ಮಾನದ ಕುರಿತು ಅನುಮಾನ ಬಂದರೆ, ಹಣ್ಣನ್ನು ಸಣ್ಣದಾಗಿ ಕತ್ತರಿಸಿ ಒಂದು ತೊಳೆಯನ್ನುಹೊರತೆಗೆದು ನೋಡುತ್ತಾರೆ. ಇದು ಹಣ್ಣನ್ನು ಪರಿಕ್ಷೀಸುವ ಉತ್ತಮ ವಿಧಾನವಾಗಿದ್ದರೂ, ಹಣ್ಣನ್ನು ಕತ್ತರಿಸಬೇಕಾಗಿ ಬರುತ್ತದೆಯಾದ್ದರಿಂದ ಇಂತಹ ಪರೀಕ್ಷೆಯನ್ನು ಅಪರೂಪಕ್ಕೊಮ್ಮೆ ಮಾಡಲಾಗುತ್ತದೆ.

"ಕಳೆದ ವರ್ಷ, 120 ರೂಪಾಯಿಗಳಿಗೆ ಹೋದ ಅದೇ ಗಾತ್ರದ ಪಳ ಈಗ 250 ರೂ. ಬೆಲೆ ಬಾಳುತ್ತದೆ. ಈ ಮುಂಗಾರಿನ ಮಳೆ ಮತ್ತು ಬೆಳೆಗೆ ಆಗಿರುವ ಹಾನಿಯಿಂದಾಗಿ ಬೆಲೆ ಹೆಚ್ಚಾಗಿದೆ," ಎಂದು ಅವರು ಹೇಳಿದರು. ಒಂದೆರಡು ತಿಂಗಳಲ್ಲಿ (ಜೂನ್), ಪ್ರತಿ ಅಂಗಡಿಯಲ್ಲಿ 15 ಟನ್ ಹಣ್ಣುಗಳು ಇರುತ್ತವೆ ಎಂದು ಅವರು ಅಂದಾಜಿಸಿದರು. ಮತ್ತು ಆಗ ದರವು ತೀವ್ರವಾಗಿ ಕುಸಿಯುತ್ತದೆ.

ಅವರು ವ್ಯವಹಾರಕ್ಕೆ ಬಂದಾಗಿನಿಂದ ಹಲಸಿನ ವ್ಯಾಪಾರವು ಸಾಕಷ್ಟು ಬೆಳೆದಿದೆ ಎಂದು ಲಕ್ಷ್ಮಿ ಹೇಳುತ್ತಾರೆ. ಹೆಚ್ಚು ಮರಗಳು, ಹೆಚ್ಚು ಹಣ್ಣುಗಳು ಮತ್ತು ಸಾಕಷ್ಟು ವ್ಯಾಪಾರ ಆಗುತ್ತಿದೆ. ಆದಾಗ್ಯೂ, ರೈತರು ತಮ್ಮ ಉತ್ಪನ್ನಗಳನ್ನು ಒಬ್ಬ ನಿರ್ದಿಷ್ಟ ಕಮಿಷನ್ ಏಜೆಂಟ್ ಬಳಿಗೆ ತರುತ್ತಾರೆ. ಇದಕ್ಕೆ ನಿಷ್ಠೆಯು ಒಂದು ಕಾರಣವಾಗಿದ್ದರೆ, ಅವರ ನಿರ್ದಿಷ್ಟ ಏಜೆಂಟ್ ಅವರಿಗೆ ನೀಡುವ ಸಾಲಗಳು ಮತ್ತೊಂದು. ವಾರ್ಷಿಕ ಬೆಳೆಗೆ ಪ್ರತಿಯಾಗಿ ಅವರು 10,000 ರೂ.ಗಳಿಂದ ಒಂದು ಲಕ್ಷದವರೆಗೆ ಸಾಲ ಪಡೆಯುತ್ತಾರೆ ಎಂದು ಲಕ್ಷ್ಮಿ ವಿವರಿಸುತ್ತಾರೆ. ಮತ್ತು ಅದನ್ನು ಮಾರಾಟದಲ್ಲಿ ಸರಿ ಹೊಂದಿಸುತ್ತಾರೆ.

ಅವರ ಮಗ ರಘುನಾಥ ಇನ್ನೊಂದು ವಿವರಣೆಯನ್ನು ನೀಡುತ್ತಾರೆ. " ಮರ ಮ್ ಗಳ ದೊಡ್ಡ ಪ್ರದೇಶಗಳನ್ನು ಹೊಂದಿರುವ ರೈತರು  ಕೇವಲ ಹಣ್ಣುಗಳನ್ನು ಮಾರಾಟ ಮಾಡದಿರಲು ನಿರ್ಧರಿಸಿದ್ದಾರೆ - ಮೌಲ್ಯವನ್ನು ಹೆಚ್ಚಿಸಲು ಮತ್ತು ಲಾಭವನ್ನು ಹೆಚ್ಚಿಸಲು ಬಯಸುತ್ತಾರೆ." ಅವರು ಹಲಸಿನಿಂದ ಚಿಪ್ಸ್ ಮತ್ತು ಜಾಮ್‌ಗಳನ್ನು ತಯಾರಿಸುತ್ತಾರೆ ಎಂದು ಅವರು ಹೇಳುತ್ತಾರೆ. ಜೊತೆಗೆ, ಹಣ್ಣಾಗದ ಕಾಯಿಗಳನ್ನು ಬೇಯಿಸಲಾಗುತ್ತದೆ ಮತ್ತು ಮಾಂಸಕ್ಕೆ ಬದಲಿಯಾಗಿ ಬಳಸಲಾಗುತ್ತದೆ.

"ಕಾಯಿಗಳನ್ನು ಒಣಗಿಸಿ ಪುಡಿ ಮಾಡುವ ಕಾರ್ಖಾನೆಗಳಿವೆ," ಎಂದು ರಘುನಾಥ್ ಹೇಳುತ್ತಾರೆ. ಮತ್ತು ಅದನ್ನು ಗಂಜಿಯಲ್ಲಿ ಕುದಿಸಿ ತಿನ್ನಲಾಗುತ್ತದೆ. ಈ ಉತ್ಪನ್ನಗಳು ಇನ್ನೂ ಸಿಕ್ಕಿಲ್ಲ - ಹಣ್ಣಿಗೆ ಹೋಲಿಸಿದರೆ - ಆದರೆ ಕಾರ್ಖಾನೆ ಮಾಲೀಕರು ಕಾಲಾನಂತರದಲ್ಲಿ ಇದು ಆಗುತ್ತದೆ ಎಂದು ನಂಬುತ್ತಾರೆ."

Lakshmi is in great demand during the season because people know she sources the best fruit
PHOTO • M. Palani Kumar

ಹಣ್ಣಿನ ಸೀಸನ್ನಿನಲ್ಲಿ ಲಕ್ಷ್ಮಿಯವರಿಗೆ ಹೆಚ್ಚಿನ ಬೇಡಿಕೆಯಿರುತ್ತದೆ, ಏಕೆಂದರೆ ಅವರ ಬಳಿ ಅತ್ಯುತ್ತಮ ಹಣ್ಣು ದೊರೆಯುತ್ತದೆನ್ನುವುದು ಜನರಿಗೆ ತಿಳಿದಿದೆ

ಲಕ್ಷ್ಮಿಯವರು ಕಟ್ಟಿಸಿರುವ ಮನೆಗೆ ಹಾಕಿರುವ ಅಷ್ಟೂ ಹಣ ಹಲಸಿನ ವ್ಯವಹಾರದಿಂದ ಬಂದಿದ್ದು.

"ಇದು 20 ವರ್ಷಗಳಷ್ಟು ಹಳೆಯದು," ಎಂದು ಅವರು ತನ್ನ ಬೆರಳುಗಳಿಂದ ನೆಲವನ್ನು ಸ್ಪರ್ಶಿಸುತ್ತಾ ಹೇಳುತ್ತಾರೆ. ಆದರೆ  ಮನೆ ಕಟ್ಟಿ ಮುಗಿಯುವ ಮೊದಲೇ ಅವರ ಗಂಡ ತೀರಿಕೊಂಡರು. ಅವರು ತನ್ನ ಗಂಡನನ್ನು ತನ್ನ ಕೆಲಸದ ಸಮಯದಲ್ಲಿ ಭೇಟಿಯಾಗಿದ್ದರು, ಆಗ ಅವರು ರೈಲಿನಲ್ಲಿ ಹಲಸಿನ ಹಣ್ಣನ್ನು ಮಾರುತ್ತಾ ಕಡಲೂರಿನಿಂದ ಪನ್ರುಟ್ಟಿಗೆ ಪ್ರಯಾಣಿಸುತ್ತಿದ್ದರು, ಅಲ್ಲಿ ಅವರು ಚಹಾ ಅಂಗಡಿಯನ್ನು ಹೊಂದಿದ್ದರು.

ಅವರದು ಪ್ರೇಮವಿವಾಹವಾಗಿತ್ತು. ಅವರಲ್ಲಿರುವ ಸುಂದರವಾದ ಭಾವಚಿತ್ರಗಳಲ್ಲಿ ಪ್ರೀತಿ ಇನ್ನೂ ಉಳಿದಿದೆ, ಅವರು ಅದನ್ನು ಪನ್ರುಟ್ಟಿಯ ಕಲಾವಿರೊಬ್ಬರ ಬಳಿ ಬರೆಯಿಸಿದ್ದಾರೆ. ಅವರ ಗಂಡನ ಒಂದು ಚಿತ್ರಕ್ಕೆ ಅವರು 7,000 ರೂಪಾಯಿಗಳನ್ನು ಖರ್ಚು ಮಾಡಿದರು. ಮತ್ತು ಇನ್ನೊಂದಕ್ಕೆ, 6,000. ಅವರು ನನಗೆ ಅನೇಕ ಕಥೆಗಳನ್ನು ಹೇಳಿದರು, ಅವಳ ಧ್ವನಿ ಕೀರಲಾಗಿತ್ತು ಆದರೆ ಶಕ್ತಿಯಿಂದ ತುಂಬಿತ್ತು. ಅವರ ನಾಯಿಯ ಚಿತ್ರವೊಂದನ್ನು ನಾನು ಪ್ರೀತಿಯಿಂದ ನೋಡುವಾಗ “ತುಂಬಾ ನಿಯತ್ತಿನ ನಾಯಿ, ಆಗಾಗ ನೆನಪಾಗುತ್ತಿರುತ್ತದೆ,” ಎಂದರು.

ಮಧ್ಯಾಹ್ನ ಸುಮಾರು 2 ಗಂಟೆಯಾಗಿತ್ತು, ಆದರೆ ಲಕ್ಷ್ಮಿ ಇನ್ನೂ ಊಟ ಮಾಡಿರಲಿಲ್ಲ. ಸ್ವಲ್ಪ ಹೊತ್ತಿನಲ್ಲಿ ಮಾಡುತ್ತೇನೆ ಎಂದರು. ಅವರು ಮಾತನಾಡುತ್ತಲೇ ಇದ್ದರು. ಹಣ್ಣಿನ ಸೀಸನ್ನಿನಲ್ಲಿ ಅವರಿಗೆ ಮನೆ ಕೆಲಸಗಳಿಗೆ ಸಮಯ ಸಿಗುವುದಿಲ್ಲ. ಅವರ ಸೊಸೆ ಕಯಾಲ್‌ವಿಳಿ ಅದನ್ನೆಲ್ಲ ನೋಡಿಕೊಳ್ಳುತ್ತಾರೆ.

ಇಬ್ಬರೂ ಹಲಸಿನ ಹಣ್ಣಿನಿಂದ ಏನೆಲ್ಲ ಅಡುಗೆ ಮಾಡಬಹುದೆಂದು ನನಗೆ ವಿವರಿಸಿದರು. "ಬೀಜಗಳಿಂದ, ನಾವು ಉಪ್ಮಾವನ್ನು ತಯಾರಿಸುತ್ತೇವೆ. ಕಾಯಿಯ ಸಿಪ್ಪೆ ತೆಗೆದು ಅರಿಶಿನ ಪುಡಿಯೊಂದಿಗೆ ಕುದಿಸಿ, ಅದನ್ನು ಪುಡಿಮಾಡಿ, ನಂತರ ಸ್ವಲ್ಪ ಳತಮ್ ಪರುಪ್ಪು [ಉದ್ದು] ಕಾಯಿಸಿ, ಮತ್ತು ಸ್ವಲ್ಪ ತುರಿದ ತೆಂಗಿನಕಾಯಿ ಹಾಕಿ ತಿನಿಸನ್ನು ತಯಾರಿಸುತ್ತೇವೆ. ತೊಳೆಯು ಪುಡಿಯಂತೆ ಇದ್ದರೆ, ಅದನ್ನು ಸ್ವಲ್ಪ ಎಣ್ಣೆಯೊಂದಿಗೆ ಹುರಿಯಬಹುದು ಮತ್ತು ಮೆಣಸಿನ ಪುಡಿಯೊಂದಿಗೆ ತಿನ್ನಬಹುದು." ಬೀಜಗಳನ್ನು ಸಾಂಬಾ ರಿಗೆ ಹಾಕುತ್ತೇವೆ, ದೋರೆಗಾಯಿಗಳನ್ನು ಬಿರಿಯಾನಿಗೆ  ಸೇರಿಸಲಾಗುತ್ತದೆ. ಪಳದಿಂದ ಮಾಡಿದ ತಿನಿಸುಗಳನ್ನು ಲಕ್ಷ್ಮಿ " ಅರುಮೈ " (ಅದ್ಭುತ) ಮತ್ತು "ರುಚಿಕರ" ಎಂದು ಹೇಳುತ್ತಾರೆ.

ಅಷ್ಟಾಗಿ ಲಕ್ಷ್ಮಿ ಆಹಾರದ ವಿಷಯದಲ್ಲಿ ಇಂತಹದ್ದೇ ಆಗಿರಬೇಕೆಂದು ಹೇಳುವುದಿಲ್ಲ. ಅವರು ಚಹಾ ಕುಡಿಯುತ್ತಾರೆ, ಅಥವಾ ಹತ್ತಿರದ ಹೋಟೆಲ್ಲಿನಲ್ಲಿ ಊಟ ಮಾಡುತ್ತಾರೆ. ಅವರಿಗೆ “ಪ್ರೆಷರ್‌ ಮತ್ತು ಸುಗರ್‌,” ಇದೆ. ಎಂದರೆ ರಕ್ತದೊತ್ತಡ ಮತ್ತು ಮಧುಮೇಹವಿದೆ. "ನಾನು ಸಮಯಕ್ಕೆ ಸರಿಯಾಗಿ ತಿನ್ನಬೇಕು, ಇಲ್ಲದಿದ್ದರೆ ನನಗೆ ತಲೆತಿರುಗುತ್ತದೆ." ಆ ದಿನ ಅವರಿಗೆ ತಲೆ ತಿರುಗು ಕಾಣಿಸಿಕೊಂಡಿತು. ಕೂಡಲೇ ಅವರು ವಿಜಯಕುಮಾರ್ ಅವರ ಅಂಗಡಿಯಿಂದ ಆತುರಾತುರವಾಗಿ ಹೊರಟುಹೋದರು. ಅವರ ದೀರ್ಘ ಕಾಲದ ಕೆಲಸದ ಸಮಯವು ಅವರಿಗೆ ಒಂದು ಸಮಸ್ಯೆ ಅನ್ನಿಸಿಲ್ಲ. “ಏನೂ ತೊಂದರೆಯಿಲ್ಲ,” ಎನ್ನುತ್ತಾರೆ.

Lakshmi standing in Lakshmi Vilas, the house she built by selling and trading jackfruits. On the wall is the painting of her and her husband that she had commissioned
PHOTO • Aparna Karthikeyan
In a rare moment during the high season, Lakshmi sits on her sofa to rest after a long day at the mandi
PHOTO • Aparna Karthikeyan

ಎಡ: ಲಕ್ಮಿ ತನ್ನ ಮನೆಯಾದ ಲಕ್ಷ್ಮಿ ವಿಲಾಸದಲ್ಲಿ, ಹಲಸಿನ ತೊಳೆಗಳನ್ನು ಮಾರಾಟ ಮಾಡಿ, ಅದರ ಸಗಟು ವ್ಯಾಪಾರ ಮಾಡಿ ನಿರ್ಮಿಸಿದ ಮನೆ. ಗೋಡೆಯ ಮೇಲೆ ಅವರು ಮತ್ತು ಅವರ ಗಂಡನ ವರ್ಣಚಿತ್ರವಿದೆ, ಅದನ್ನು ಕಲಾವಿದರೊಬ್ಬರಿಂದ ಬರೆಯಿಸಿದ್ದು. ಬಲ: ಹಂಗಾಮು ಏರುಗತಿಯಲ್ಲಿರುವ ಅಪರೂಪದ ಕ್ಷಣದಲ್ಲಿ, ಲಕ್ಷ್ಮಿ ಮಂಡಿಯಲ್ಲಿ ದೀರ್ಘ ದಿನ ಕಳೆದ ನಂತರ ವಿಶ್ರಾಂತಿ ಪಡೆಯಲು ತನ್ನ ಸೋಫಾದ ಮೇಲೆ ಒರಗಿಕೊಂಡಿರುವುದು

ಸುಮಾರು 30 ವರ್ಷಗಳ ಹಿಂದೆ, ಅವರ ರೈಲು-ವ್ಯಾಪಾರದ ದಿನಗಳಲ್ಲಿ, ಹಲಸಿನ ಹಣ್ಣೊಂದು 10 ರೂಪಾಯಿಗಳಿಗೆ ಮಾರಾಟವಾಗುತ್ತಿತ್ತು. (ಇದು ಈಗ ಅಂದಿನ ಬೆಲೆಗಿಂತ 20ರಿಂದ 30 ಪಟ್ಟು ಹೆಚ್ಚಾಗಿದೆ.) ಕಂಪಾರ್ಟ್‌ಮೆಂಟುಗಳು ಪೆಟ್ಟಿಗಳಂತೆ ಇದ್ದವು ಎಂದು ಲಕ್ಷ್ಮಿ ನೆನಪಿಸಿಕೊಳ್ಳುತ್ತಾರೆ. ಅವರು ತಮ್ಮ ಅಲಿಖಿತ ಒಪ್ಪಂದದ ಭಾಗವಾಗಿ, ಒಬ್ಬ ಮಾರಾಟಗಾರರು ಒಂದು ಕೋಚ್‌ ಪ್ರವೇಶಿಸಿದರೆ. ಅವರು ಇಳಿದ ನಂತರವೇ, ಇನ್ನೊಬ್ಬರು ಒಳಗೆ ಬರುತ್ತಿದ್ದರು. "ಟಿಕೆಟ್ ಪರೀಕ್ಷಕರು ಆಗ ಚೀಟಿ ತೋರಿಸುವಂತೆ ಗದರಿಸುತ್ತಿರಲಿಲ್ಲ. ನಾವು ಮುಕ್ತವಾಗಿ ಪ್ರಯಾಣಿಸುತ್ತಿದ್ದೆವು. ಆದರೆ," ಅವರು ತನ್ನ ಧ್ವನಿಯನ್ನು ತಗ್ಗಿಸುತ್ತಾ ಹೇಳುತ್ತಾರೆ, "ನಾವು ಅವರಿಗೆ ಒಂದಷ್ಟು ಹಲಸಿನ ತೊಳೆಗಳನ್ನು ಕೊಡುತ್ತಿದ್ದೆವು..."

ಅವು ಪ್ಯಾಸೆಂಜರ್ ರೈಲುಗಳಾಗಿದ್ದವು; ನಿಧಾನವಾಗಿ ಚಲಿಸುತ್ತಿದ್ದವು ಮತ್ತು ಎಲ್ಲಾ ಸಣ್ಣ ನಿಲ್ದಾಣಗಳಲ್ಲಿ ನಿಲ್ಲುತ್ತಿದ್ದವು ರೈಲು ಹತ್ತಿಳಿಯುವವರು ಹಣ್ಣು ಖರೀದಿಸುತ್ತಿದ್ದರು. ಆದಾಗ್ಯೂ, ಸಂಪಾದನೆಯು ಚಿಕ್ಕದಾಗಿತ್ತು. ಒಂದು ದಿನದಲ್ಲಿ ಗಳಿಸುತ್ತಿದ್ದ ಮೊತ್ತದ ಕುರಿತು ಅವರಿಗೆ ಈಗ ಸರಿಯಾಗಿ ನೆನಪಿಲಲ್ಲ, ಆದರೆ "100 ರೂಪಾಯಿಗಳು ಆಗ ಬಹಳ ದೊಡ್ಡ ಮೊತ್ತವಾಗಿತ್ತು," ಎಂದು ಹೇಳುತ್ತಾರೆ.

"ನಾನು ಶಾಲೆಗೆ ಹೋಗಿಲ್ಲ. ನಾನು ಚಿಕ್ಕವಳಿದ್ದಾಗಲೇ ನನ್ನ ಹೆತ್ತವರು ತೀರಿಕೊಂಡರು." ಜೀವನೋಪಾಯಕ್ಕಾಗಿ, ಅವರು ಅನೇಕ ರೈಲು ಮಾರ್ಗಗಳಲ್ಲಿ ಪ್ರಯಾಣಿಸಿದರು: ಚಿದಂಬರಂ, ಕಡಲೂರು, ಚೆಂಗೆಲ್ಪುಟ್, ವಿಲ್ಲುಪುರಂಗಳಲ್ಲಿ ಹಣ್ಣನ್ನು  ಮಾರುತ್ತಿದ್ದರು. "ಊಟಕ್ಕಾಗಿ, ನಾನು ನಿಲ್ದಾಣಗಳಲ್ಲಿನ ಕ್ಯಾಂಟೀನ್ಗಳಿಂದ ಹುಣಸೆಹಣ್ಣು ಅಥವಾ ಮೊಸರನ್ನವನ್ನು ಖರೀದಿಸುತ್ತಿದ್ದೆ. ನನಗೆ ಅಗತ್ಯವಿದ್ದಾಗ, ನನ್ನ ಹಲಸಿನ ಟ್ರೇಯನ್ನು ಲಗೇಜ್ ಶೆಲ್ಫಿನಲ್ಲಿ ಇರಿಸಿ ಕಂಪಾರ್ಟ್‌ಮೆಂಟಿನಲ್ಲಿನ ಶೌಚಾಲಯ ಬಳಸುತ್ತಿದ್ದೆ. ಇದು ಬಹಳ ಶ್ರಮದ ಕೆಲಸವಾಗಿತ್ತು. ಆದರೆ ಆಗ ನನಗೆ ಆಯ್ಕೆ ಎಲ್ಲಿತ್ತು?"

ಈಗ ಅವರಿಗೆ ಆಯ್ಕೆಯಿದೆ - ಹಲಸಿನ ಹಣ್ಣಿನ ಸೀಸನ್ ಮುಗಿದ ನಂತರ ಮನೆಯಲ್ಲಿಯೇ ಇದ್ದು ವಿಶ್ರಾಂತಿ ಪಡೆಯುತ್ತಾರೆ. "ನಾನು ಚೆನ್ನೈಗೆ ಹೋಗಿ ಇಲ್ಲಿ ಅಥವಾ ಅಲ್ಲಿ ನನ್ನ ಸಂಬಂಧಿಕರೊಂದಿಗೆ ಎರಡು ವಾರಗಳನ್ನು ಕಳೆಯುತ್ತೇರೆ. ಉಳಿದ ಸಮಯದಲ್ಲಿ, ನಾನು ನನ್ನ ಮೊಮ್ಮಗ ಸರ್ವೇಶ್ ಜತೆ ಇಲ್ಲಿಯೇ ಸಮಯ ಕಳೆಯುತ್ತೇನೆ," ಎಂದು ಅವರು ಹೇಳುತ್ತಾರೆ, ಹತ್ತಿರದಲ್ಲಿ ಆಟವಾಡುತ್ತಿರುವ ಪುಟ್ಟ ಹುಡುಗನನ್ನು ನೋಡಿ ನಗುತ್ತಾ.

ಕಯಾಲ್‌ವಿಳಿ ಇನ್ನಷ್ಟು ವಿವರಗಳನ್ನು ನೀಡುತ್ತಾ, “ಅವರು ತಮ್ಮ ಸಂಬಂಧಿಕರಿಗೆಲ್ಲ ಸಹಾಯ ಮಾಡುತ್ತಾರೆ. ಅವರಿಗೆ ಆಭರಣಗಳನ್ನು ಕೊಡಿಸುತ್ತಾರೆ. ಯಾರಾದರೂ ಸಹಾಯ ಕೇಳಿದರೆ ಅವರಿಂದ ಇಲ್ಲವೆನ್ನುವ ಮಾತು ಬರುವುದಿಲ್ಲ…”

ಲಕ್ಷ್ಮಿಯವರು ಈ ಮೊದಲು ತನ್ನ ವೃತ್ತಿಜೀವನದ ಆರಂಭದಲ್ಲಿ 'ಇಲ್ಲ' ಎಂಬ ಪದವನ್ನು ಅನೇಕ ಬಾರಿ ಕೇಳಿರಬಹದು. ಅವರ ಬದುಕನ್ನು ಕಟ್ಟಿಕೊಳ್ಳಲು ಅವರ ಪಾಲಿಗೆ ಒದಗಿ ಬಂದ ಸಹಾಯವೆಂದರೆ "ಸೊಂದ ಉಳೈಪ್ಪು" (ಸ್ವಂತ ದುಡಿಮೆ). ಅವರ ಕಥೆ ಕೇಳುವುದೆಂದರೆ ಹಲಸಿನ ತೊಳೆ ತಿಂದಂತೆ. ನೀವು ನಿರೀಕ್ಷಿಸಿರದ ಮಾಧುರ್ಯವೊಂದು ಅದರಲ್ಲಿರುತ್ತದೆ. ಅದು ಸದಾ ಕಾಲ ನೆನಪಿನಲ್ಲಿರುತ್ತದೆ.

ಸಂಶೋಧನಾ ಅಧ್ಯಯನಕ್ಕೆ ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯವು ತನ್ನ ಸಂಶೋಧನಾ ಧನಸಹಾಯ ಕಾರ್ಯಕ್ರಮ 2020 ಭಾಗವಾಗಿ ಧನಸಹಾಯ ನೀಡುತ್ತದೆ .

ಮುಖ್ಯ ಚಿತ್ರ : ಎಂ . ಪಳನಿ ಕುಮಾರ್

ಅನುವಾದ : ಶಂಕರ . ಎನ್ . ಕೆಂಚನೂರು

Aparna Karthikeyan

Aparna Karthikeyan is an independent journalist, author and Senior Fellow, PARI. Her non-fiction book 'Nine Rupees an Hour' documents the disappearing livelihoods of Tamil Nadu. She has written five books for children. Aparna lives in Chennai with her family and dogs.

Other stories by Aparna Karthikeyan
Photographs : M. Palani Kumar

M. Palani Kumar is Staff Photographer at People's Archive of Rural India. He is interested in documenting the lives of working-class women and marginalised people. Palani has received the Amplify grant in 2021, and Samyak Drishti and Photo South Asia Grant in 2020. He received the first Dayanita Singh-PARI Documentary Photography Award in 2022. Palani was also the cinematographer of ‘Kakoos' (Toilet), a Tamil-language documentary exposing the practice of manual scavenging in Tamil Nadu.

Other stories by M. Palani Kumar

P. Sainath is Founder Editor, People's Archive of Rural India. He has been a rural reporter for decades and is the author of 'Everybody Loves a Good Drought' and 'The Last Heroes: Foot Soldiers of Indian Freedom'.

Other stories by P. Sainath
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru