“ಚಾದೊರ್‌ ಬಾದನಿ ಗೊಂಬೆಯಾಟ ನಮ್ಮ ಹಿರೀಕರೊಡನೆ ಬಹಳ ಆಳವಾದ ಸಂಬಂಧವನ್ನು ಹೊಂದಿದೆ… ಈ ಗೊಂಬೆಯಾಡಿಸುವಾಗ ನನಗೆ ಅವರೆಲ್ಲ ನನ್ನ ಸುತ್ತ ಇರುವಂತೆ ಭಾಸವಾಗುತ್ತದೆ” ಎನ್ನುತ್ತಾರೆ ತಪನ್‌ ಮುರ್ಮು.

2023ರ ಜನವರಿ ತಿಂಗಳ ಆರಂಭದಲ್ಲಿ ಪಶ್ಚಿಮ ಬಂಗಾಳದ ಬಿರ್ಭುಮ್ ಜಿಲ್ಲೆಯ ಖಂಜನ್ಪುರ ಗ್ರಾಮದ ಸರ್ಪುಕುರ್ದಂಗಾ ಎಂಬ ಕುಗ್ರಾಮದಲ್ಲಿ ಬಾಂದನಾ ಎನ್ನುವ ಸುಗ್ಗಿ ಹಬ್ಬ ನಡೆಯುತ್ತಿತ್ತು. ವೃತ್ತಿಯಿಂದ ಕೃಷಿಕರಾಗಿರುವ ತಪನ್‌ ತನ್ನ ಬದುಕಿನ ಎರಡನೇ ದಶಕದ ಕೊನೆಯ ಹಂತದಲ್ಲಿದ್ದಾರೆ. ಇವರಿಗೆ ತನ್ನ ಸಂತಾಲ್‌ ಸಮುದಾಯದ ಶ್ರೀಮಂತ ಪರಂಪರೆಯ ಕುರಿತು, ವಿಶೇಷವಾಗಿ ಚಾದೊರ್‌ ಬಾದನಿ ಎಂದು ಕರೆಯಲ್ಪಡುವ ಆಕರ್ಷಕ ಗೊಂಬೆಯಾಟದ ಕುರಿತು ಎಲ್ಲಿಲ್ಲದ ಹೆಮ್ಮೆ.

ಪರಿಯೊಡನೆ ಮಾತನಾಡಿದ ತಪನ್‌ ಅವರು ಕೈಯಲ್ಲಿ ಗೋಪುರದ ಆಕಾರವಿರುವ ಪಂಜರದಂತಹದ್ದೊಂದನ್ನು ಹಿಡಿದುಕೊಂಡಿದ್ದರು. ಅದಕ್ಕೆ ಎದ್ದುಕಾಣುವ ಕೆಂಪು ಬಣ್ಣದ ಬಟ್ಟೆ ಸುತ್ತಲಾಗಿತ್ತು. ಅದರೊಳಗೆ ಹಲವು ಮಾನವ ಆಕೃತಿಯ ಗೊಂಬೆಗಳಿದ್ದವು. ಇವುಗಳಿಗೆ ಕೀಲುಗಳಿದ್ದು, ಅವುಗಳನ್ನು ಬಿದಿರಿನ ಕಡ್ಡಿಗಳು ಮತ್ತು ಹಗ್ಗವನ್ನು ಬಳಸಿ ಕುಣಿಸಲಾಗುತ್ತದೆ.

“ನನ್ನ ಕಾಲುಗಳನ್ನು ನೋಡುತ್ತಿರಿ, ನಾನು ಗೊಂಬೆಗಳನ್ನು ಹೇಗೆ ಕುಣಿಸುತ್ತೇನೆ ನೋಡಿ” ಎನ್ನುತ್ತಾ ಈ ರೈತ ಅವರ ಮನೆ ಮಾತಾದ ಸಂತಾಲಿಯಲ್ಲಿ ಹಾಡತೊಡಗಿದಂತೆ ಅವರ ಧೂಳು ತುಂಬಿದ್ದ ಕಾಲುಗಳು ಕುಣಿಯತೊಡಗಿದವು.

Left: Chadar Badni is a traditional puppetry performance of the Santhal Adivasi community.
PHOTO • Smita Khator
Right: Tapan Murmu skillfully moves the puppets with his feet
PHOTO • Smita Khator

ಎಡ: ಚಾ ದೊ ರ್ ಬಾದನಿ ಎಂಬುದು ಸಂತಾಲ್ ಆದಿವಾಸಿ ಸಮುದಾಯದ ಸಾಂಪ್ರದಾಯಿಕ ಬೊಂಬೆಯಾಟ ಪ್ರದರ್ಶನವಾಗಿದೆ. ಬಲ: ತಪನ್ ಮುರ್ಮು ಗೊಂಬೆಗಳನ್ನು ಕುಣಿಯುವಂತೆ ಮಾಡಲು ತನ್ನ ಪಾದಗ ಳನ್ನು ಕೌ ಶಲದಿಂದ ಚಲಿಸುತ್ತಾ ರೆ

Tapan Murmu, a Santhal Adivasi farmer from Sarpukurdanga hamlet, stands next to the red dome-shaped cage that has numerous small wooden puppets
PHOTO • Smita Khator

ಸರ್ಪುಕುರ್ದಂಗ ಕುಗ್ರಾಮದ ಸಂತಾಲ್ ಆದಿವಾಸಿ ರೈತ ತಪನ್ ಮುರ್ಮು ಕೆಂಪು ಗುಮ್ಮ ಟಾ ಕಾರದ ಪಂಜರದ ಪಕ್ಕದಲ್ಲಿ ನಿಂತಿದ್ದಾ ರೆ , ಅದರಲ್ಲಿ ಹಲವಾರು ಸಣ್ಣ ಮರದ ಬೊಂಬೆಗಳಿವೆ

“ನೀವೀಗ ನೋಡುತ್ತಿರುವುದು ಚಾದೊರ್‌ ಬಾದನಿಯ ಸಂಭ್ರಮದ ನೃತ್ಯ. ಈ ಬೊಂಬೆಯಾಟವು ನಮ್ಮ ಹಬ್ಬಗಳ ಒಂದು ಭಾಗ. ಇದನ್ನು ಬಾಂದನಾ[ಸುಗ್ಗಿ ಹಬ್ಬ], ಮದುವೆ ಸಮಾರಂಭ, ದಸೈನ್‌ [ಸಂತಾಲ್ ಆದಿವಾಸಿಗಳು ಆಚರಿಸುವ ಹಬ್ಬ] ಸಮಯದಲ್ಲಿ ನಡೆಸಲಾಗುತ್ತದೆ" ಎಂದು ತಪನ್ ಹೇಳುತ್ತಾರೆ.

ಅವರು ಗೊಂಬೆಯ ಕಡೆಯ ಕೈ ತೋರಿಸುತ್ತಾ, “ನಡುವಿನಲ್ಲಿರುವುದು ಮೊರೊಲ್‌ [ಊರಿನ ಮುಖ್ಯಸ್ಥ] ಎಂದು ಹೇಳಿದರು. ಅವರು ಚಪ್ಪಾಳೆ ತಟ್ಟುತ್ತಾ ಬನಮ್‌ [ಮರದ ಏಕತಾರಿ] ಎನ್ನುವ ವಾದ್ಯವನ್ನು ನುಡಿಸುತ್ತಿದ್ದರು. ಜೊತೆಗೆ ಸಾಂಪ್ರದಾಯಿಕ ಕೊಳಲು ಕೂಡಾ ಇತ್ತು. ಒಂದು ಕಡೆ ಗಂಡಸರು ಧಮ್ಸಾ ಮತ್ತು ಮದೊಲ್‌ [ಆದಿವಾಸಿ ತಾಳವಾದ್ಯ ಸಾಧನಗಳು] ಎನ್ನುವ ಉಪಕರಣಗಳನ್ನು ನುಡಿಸುತ್ತಿದ್ದರೆ ಅವರೆದುರು ಮಹಿಳೆಯರು ಕುಣಿಯುತ್ತಾರೆ. “

ಬಾಂದನಾ (ಸೊಹ್ರಾಯ್‌ ಎಂದೂ ಕರೆಯಲಾಗುತ್ತದೆ) ಎನ್ನುವುದು ಬಿರ್ಭುಮ್‌ ಜಿಲ್ಲೆಯ ಸಂತಾಲ್ ಆದಿವಾಸಿಗಳ ಅತಿದೊಡ್ಡ ಸುಗ್ಗಿ ಹಬ್ಬವಾಗಿದೆ, ಈ ಹಬ್ಬದಲ್ಲಿ ವಿವಿಧ ರೀತಿಯ ಪ್ರದರ್ಶನಗಳು ಮತ್ತು ಆಚರಣೆಗಳು ನಡೆಯುತ್ತವೆ.

ಈ ಆಚರಣೆಯಲ್ಲಿ ಬಳಸಲಾಗುವ ಬೊಂಬೆಗಳನ್ನು ಸಾಮಾನ್ಯವಾಗಿ ಬಿದಿರು ಅಥವಾ ಮರದಿಂದ ತಯಾರಿಸಲಾಗುತ್ತದೆ ಮತ್ತು ಇವು ಸುಮಾರು ಒಂಬತ್ತು ಇಂಚುಗಳಷ್ಟು ಎತ್ತರವಿರುತ್ತದೆ. ಇವುಗಳನ್ನು ಛಾವಣಿ ಹೊಂದಿರುವ ಸಣ್ಣ ವೇದಿಕೆಯೊಂದರ ಮೇಲಿರಿಸಲಾಗಿರುತ್ತದೆ. ಅದಕ್ಕೆ ಹೊದೆಸಾಲಗಿರುವ ಚಾದರ್‌ ಅಥವಾ ಬಟ್ಟೆಯು ಗೊಂಬೆಯ ತಂತಿ ಮತ್ತು ಕೀಲುಗಳನ್ನು ಮರೆಮಾಡುತ್ತದೆ. ತಂತಿಯನ್ನು ಎಳೆಯುವ ಮೂಲಕ ಗೊಂಬೆಯಾಡಿಸುವವರು ಗೊಂಬೆಯ ಕೀಲು ಅಲುಗಾಡುವಂತೆ ಮಾಡುತ್ತಾರೆ. ಇದು ಬೊಂಬೆಯ ಕೈಕಾಲುಗಳು ಆಡುವಂತೆ ಮಾಡುತ್ತದೆ.

ಸಮುದಾಯದ ಹಿರಿಯರು ಹೇಳುವಂತೆ ಬೊಂಬೆಗಳನ್ನು ಇರಿಸಲಾಗಿರುವ ರಚನೆಯ ಸುತ್ತ ಕಟ್ಟಲಾಗಿರುವ (ಬಂಧನ್) ಬಟ್ಟೆಯಿಂದ (ಚಾದೊರ್/ಚಾದರ್)‌ ಈ ಹೆಸರು ಈ ಬೊಂಬೆಯಾಟಕ್ಕೆ ಬಂದಿದೆ.

ತಪನ್ ಅವರ ಬೊಂಬೆಯಾಟ ಪ್ರದರ್ಶನವು ವಿಶಿಷ್ಟ ಸಂತಾಲಿ ನೃತ್ಯವನ್ನು ತೋರಿಸುತ್ತದೆ. ದಿನದ ಕೊನೆಯಲ್ಲಿ ಈ ನೃತ್ಯಕ್ಕೆ ಸ್ಫೂರ್ತಿಯಾದ ನಿಜ ಕುಣಿತವನ್ನೂ ನೋಡಿದೆವು

ವೀಡಿಯೊ ನೋಡಿ: ಚಾದೊರ್ ಬಾದನಿ ಬೊಂಬೆಗಳೊಂದಿಗೆ ಬಾಂದ್ನಾ ಹಬ್ಬದ ಆಚರಣೆ

ಆಚರಣೆಯೊಂದಿಗೆ ಕೂಡಿಕೊಂಡಿರುವ ಹಾಡುಗಳು ಹಳ್ಳಿಯ ಕೆಲವು ಹಿರಿಯರಿಗಷ್ಟೇ ತಿಳಿದಿದೆ ಎನ್ನುತ್ತಾರೆ ತಪನ್.‌ ಮಹಿಳೆಯರು ಈ ಹಾಡುಗಳನ್ನು ಅವರ ಊರುಗಳಲ್ಲಿ ಹಾಡಿದರೆ, ಪುರುಷರು ಚಾದೊರ್‌ ಬಾದನಿ ಕೈಗೊಂಬೆಗಳೊಡನೆ ಸುತ್ತಮುತ್ತಲಿನ ಊರುಗಳಿಗೆ ಪ್ರಯಾಣಿಸುತ್ತಾರೆ. “ನಾವು ಏಳೆಂಟು ಮಂದಿ ಈ ಪ್ರದೇಶದ ಆದಿವಾಸಿ ಹಳ್ಳಿಗಳಿಗೆ ಧಂಸಾ ಮತ್ತು ಮದೊಲ್‌ ವಾದ್ಯಗಳೊಡನೆ ಪ್ರಯಾಣಿಸುತ್ತೇವೆ. ಈ ಬೊಂಬೆಯಾಟದ ಪ್ರದರ್ಶನಕ್ಕೆ ಅನೇಕ ವಾದ್ಯಗಳು ಬೇಕಾಗುತ್ತವೆ."

ಜನವರಿ ಆರಂಭದಲ್ಲಿ 10 ದಿನಗಳ ಕಾಲ ಆಚರಿಸಲಾಗುವ ಮತ್ತು ಜನವರಿ ಮಧ್ಯದಲ್ಲಿ ಪೌಸ್ ಸಂಕ್ರಾಂತಿಗೆ ಮುಂಚಿತವಾಗಿ ಕೊನೆಗೊಳ್ಳುವ ಈ ಹಬ್ಬದ ಋತುವಿನಲ್ಲಿನ ಸಮುದಾಯದ ಸಂಭ್ರಮದ ಕುರಿತೂ ತಪನ್‌ ಮಾತನಾಡುತ್ತಾರೆ.

“ಹೊಸದಾಗಿ ಕೊಯ್ಲು ಮಾಡಿದ ಭತ್ತ ಮನೆ ತುಂಬಿದಾಗ ನಮ್ಮ ಮನಸ್ಸುಗಳೂ ಉಲ್ಲಾಸದಿಂದ ತುಂಬಿರುತ್ತವೆ. ಅದೊಂದು ಸಂಭ್ರಮದ ಸಂದರ್ಭ. ಈ ಹಬ್ಬಕ್ಕೆ ಸಂಬಂಧಿಸಿದಂತೆ ಹಲವು ಆಚರಣೆಗಳಿವೆ. ಈ ಸಂದರ್ಭದಲ್ಲಿ ಎಲ್ಲರೂ ಹೊಸ ಬಟ್ಟೆ ಧರಿಸುತ್ತಾರೆ” ಎಂದು ಅವರು ಹೇಳುತ್ತಾರೆ.

ಸಂತಾಲ್ ಆದಿವಾಸಿಗಳು ಈ ಸಂದರ್ಭದಲ್ಲಿ ತಮ್ಮ ಪೂರ್ವಜರನ್ನು ಸಂಕೇತಿಸುವ ಕಲ್ಲುಗಳು ಮತ್ತು ಮರಗಳಿಗೆ ಹರಕೆಗಳನ್ನು ಸಲ್ಲಿಸುತ್ತಾರೆ.  "ವಿಶೇಷ ಆಹಾರವನ್ನು ತಯಾರಿಸಲಾಗುತ್ತದೆ; ನಾವು ನಮ್ಮ ಸಾಂಪ್ರದಾಯಿಕ ಮದ್ಯವಾದ ಹನ್ರಿಯಾವನ್ನು ತಯಾರಿಸುತ್ತೇವೆ, ಇದನ್ನು ಹೊಸದಾಗಿ ಕೊಯ್ಲು ಮಾಡಿದ ಅಕ್ಕಿಯಿಂದ ತಯಾರಿಸಲಾಗುತ್ತದೆ; ಧಾರ್ಮಿಕ ಬೇಟೆಗೆ ಹೋಗಿ ನಮ್ಮ ಮನೆಗಳನ್ನು ಸ್ವಚ್ಛಗೊಳಿಸುತ್ತೇವೆ ಮತ್ತು ಅವುಗಳನ್ನು ಅಲಂಕರಿಸುತ್ತೇವೆ. ನಮ್ಮ ಕೃಷಿ ಉಪಕರಣಗಳನ್ನು ದುರಸ್ತಿ ಮಾಡುತ್ತೇವೆ ಮತ್ತು ತೊಳೆಯುತ್ತೇವೆ. ನಮ್ಮ ಹಸುಗಳು ಮತ್ತು ಎತ್ತುಗಳನ್ನು ಪೂಜಿಸುತ್ತೇವೆ."

ಈ ಋತುವಿನಲ್ಲಿ, ಇಡೀ ಸಮುದಾಯವು ಒಂದೆಡೆ ಸೇರಿ ಊರಿಗೆ ಉತ್ತಮ ಫಸಲನ್ನು ಆಶೀರ್ವದಿಸುವಂತೆ ಪ್ರಾರ್ಥಿಸುತ್ತದೆ. "[ನಮಗೆ] ಬದುಕಲು ಸಹಾಯ ಮಾಡುವ ಎಲ್ಲವೂ ಪವಿತ್ರವಾದವು ಮತ್ತು ಅವೆಲ್ಲವೂ ಈ ಪರಬ್ [ಹಬ್ಬದ] ಸಮಯದಲ್ಲಿ ಪೂಜಿಸಲ್ಪಡುತ್ತವೆ" ಎಂದು ತಪನ್ ಹೇಳುತ್ತಾರೆ.  ಸಂಜೆ ಸಮುದಾಯವು ಹಳ್ಳಿಯ ಮಧ್ಯದಲ್ಲಿರುವ ಮಝೀರ್ ಥಾನ್ (ಅವರ ಪೂರ್ವಜರ ಪವಿತ್ರ ಸ್ಥಾನ) ದಲ್ಲಿ ಒಟ್ಟುಗೂಡುತ್ತದೆ. "ಪುರುಷರು, ಮಹಿಳೆಯರು, ಹುಡುಗರು ಮತ್ತು ಹುಡುಗಿಯರು, ಸಣ್ಣ ಮಕ್ಕಳು ಮತ್ತು ಹಿರಿಯರು ಎಲ್ಲರೂ ಭಾಗವಹಿಸುತ್ತಾರೆ" ಎಂದು ಅವರು ಹೇಳುತ್ತಾರೆ.

Residents decorate their homes (left) during the Bandna festival in Sarpukurdanga.
PHOTO • Smita Khator
Members of the community dance and sing together (right)
PHOTO • Smita Khator

ಎಡ: ಬಾಂದನಾ ಹಬ್ಬದ ಸಮಯದಲ್ಲಿ ನಿವಾಸಿಗಳು ತಮ್ಮ ಮನೆಯನ್ನು ಅಲಂಕರಿಸುತ್ತಿರುವುದು. ಬಲ: ತಪನ್ ಅವರ ಊರಾದ ಸರ್ಪುಕುರ್ದಂಗಾದಲ್ಲಿ ಹಬ್ಬದ ಆಚರಣೆಗಳು ನಡೆಯುತ್ತಿವೆ. ಸಮುದಾಯದ ಸದಸ್ಯರು ಒಟ್ಟಿಗೆ ನೃತ್ಯ ಮಾಡುವುದನ್ನು ಮತ್ತು ಹಾಡುವುದನ್ನು ಕಾಣಬಹುದು

Left: Earthen jars used to brew their traditional liquor, Hanriya.
PHOTO • Smita Khator
Right: Tapan in front of the sacred altar where all the deities are placed, found in the centre of the village
PHOTO • Smita Khator

ಎಡ: ಸಮುದಾಯದ ಸಾಂಪ್ರದಾಯಿಕ ಮದ್ಯವಾದ ಹನ್ರಿಯಾವನ್ನು ತಯಾರಿಸಲು ಮಣ್ಣಿನ ಜಾಡಿಗಳನ್ನು ಬಳಸಲಾಗುತ್ತದೆ. ಬಲ: ಹಳ್ಳಿಯ ಮಧ್ಯಭಾಗದಲ್ಲಿ ಕಂಡುಬರುವ ಪವಿತ್ರ ಬಲಿಪೀಠವಾದ ಮಜೀರ್ ಥಾನ್ ಮುಂದೆ ತಪನ್ ನಿಂತಿದ್ದಾರೆ. ಅಲ್ಲಿಯೇ ಎಲ್ಲಾ ದೇವರುಗಳನ್ನು (ಪವಿತ್ರ ಕಲ್ಲುಗಳು) ಇರಿಸಲಾಗುತ್ತದೆ

ತಪನ್ ಅವರ ಬೊಂಬೆಯಾಟ ಪ್ರದರ್ಶನವು ವಿಶಿಷ್ಟ ಸಂತಾಲಿ ನೃತ್ಯವನ್ನು ತೋರಿಸುತ್ತದೆ. ದಿನದ ಕೊನೆಯಲ್ಲಿ ಈ ನೃತ್ಯಕ್ಕೆ ಸ್ಫೂರ್ತಿಯಾದ ನಿಜ ಕುಣಿತವನ್ನು ನೋಡಲು ಅವರು ನಮ್ಮನ್ನು ಆಹ್ವಾನಿಸಿದರು.

ಈ ಮರದ ಗೊಂಬೆಗಳನ್ನು ವರ್ಣರಂಜಿತ ಉಡುಪುಗಳು, ಸಂಕೀರ್ಣವಾದ ಶಿರವಸ್ತ್ರಗಳು ಮತ್ತು ಹೂವುಗಳಿಂದ ಅಲಂಕರಿಸಲಾಗಿದ್ದು, ಇವು ಸಂತಾಲಿ ಜನರ ಪ್ರತಿಬಿಂಬದಂತೆ ಕಾಣುತ್ತವೆ. ಈ ಸಮುದಾಯದ ಪುರುಷರು ತಲೆಗೆ ಪಗಡಿ ಸುತ್ತಿದರೆ ಮಹಿಳೆಯರು ಕೂದಲನ್ನು ತುರುಬು ಕಟ್ಟಿ ಹೂ ಮುಡಿಯುತ್ತಾರೆ. ಧಮ್ಸಾ ಮತ್ತು ಮದೊಲ್‌ ಬಡಿತಕ್ಕೆ ನರ್ತಕರು ಹೆಜ್ಜೆ ಹಾಕಲು ಆರಂಭಿಸಿದಂತೆ ಅಂದಿನ ಸಂಜೆಯ ಮೈಯಲ್ಲಿ ವಿದ್ಯುತ್‌ ಸಂಚಾರ ಪ್ರಾರಂಭವಾಗುತ್ತದೆ.

ಸಮುದಾಯದ ಹಿರಿಯರು ತಲೆಮಾರುಗಳಿಂದ ಈ ಗೊಂಬೆಯಾಟದ ಕುರಿತು ಪ್ರಚಲಿತದಲ್ಲಿರುವ ಕತೆಯನ್ನು ಹಂಚಿಕೊಂಡರು. ಕಥೆ ಹೀಗಿದೆ: ನೃತ್ಯ ಗುರುವೊಬ್ಬರು ಹಳ್ಳಿಯ ಮುಖ್ಯಸ್ಥರ ಬಳಿ ಹತ್ತಿರದ ಊರುಗಳಲ್ಲಿ ತನ್ನೊಂದಿಗೆ ಪ್ರದರ್ಶನ ನೀಡಬಲ್ಲವರ ತಂಡವನ್ನು ಒಟ್ಟುಗೂಡಿಸುವಂತೆ ಕೇಳಿಕೊಂಡರು. ತಮ್ಮ ಪತ್ನಿಯರು ಮತ್ತು ಹೆಣ್ಣುಮಕ್ಕಳನ್ನು ಕಳುಹಿಸಲು ನಿರಾಕರಿಸಿದ ಸಂತಾಲ್‌ ಪುರುಷರು, ತಾವು ವಾದ್ಯಗಳನ್ನು ನುಡಿಸಲು ಬರುವುದಾಗಿ ಹೇಳಿದರು. ಬೇರೆ ದಾರಿ ಕಾಣದೆ ಗುರುಗಳು ಊರಿನ ಮಹಿಳೆಯರ ಮುಖಗಳನ್ನು ನೆನಪಿಸಿಕೊಂಡು ಅವುಗಳನ್ನು ಚಾದೊರ್‌ ಬಾದನಿ ಗೊಂಬೆಗಳ ಮೇಲೆ ಕೆತ್ತಿದ್ದರು.

“ಇತ್ತೀಚಿನ ದಿನಗಳಲ್ಲಿ ನನ್ನ ಪೀಳಿಗೆಯವರಿಗೆ ನಮ್ಮ ಜೀವನ ವಿಧಾನದ ಕುರಿತು ಪೂರ್ತಿಯಾಗಿ ತಿಳಿದಿಲ್ಲ” ಎಂದು ತಪನ್‌ ಹೇಳುತ್ತಾರೆ. “ಈ ಬೊಂಬೆಯಾಟ, ಈಗ ಇಲ್ಲವಾಗಿರುವ ಭತ್ತದ ಬೀಜಗಳು, ಅಲಂಕಾರಿಕ ಕಲೆ, ಕಥೆಗಳು ಅಥವಾ ಹಾಡುಗಳು ಮತ್ತು ಇನ್ನೂ ಇಂತಹ ಹಲವು ವಿಷಯಗಳ ಕುರಿತು ಅವರಿಗೆ ಅರಿವಿಲ್ಲ.”

ಹಬ್ಬದ ಉತ್ಸಾಹ ಕಳೆಗುಂದದಂತೆ ಎಚ್ಚರಿಕೆಯಿಂದ ಮಾತನಾಡಿದ ಅವರು ಹೇಳುತ್ತಾರೆ “ಈ [ಸಂಪ್ರದಾಯಗಳನ್ನು] ಉಳಿಸುವುದು ಬಹಳ ಮುಖ್ಯ. ನಾನು ನನ್ನಿಂದ ಸಾಧ್ಯವಿರುವುದನ್ನು ಮಾಡುತ್ತಿದ್ದೇನೆ.”

ಅನುವಾದ: ಶಂಕರ. ಎನ್. ಕೆಂಚನೂರು

Smita Khator

Smita Khator is the Translations Editor at People's Archive of Rural India (PARI). A Bangla translator herself, she has been working in the area of language and archives for a while. Originally from Murshidabad, she now lives in Kolkata and also writes on women's issues and labour.

Other stories by Smita Khator
Editor : Vishaka George

Vishaka George is Senior Editor at PARI. She reports on livelihoods and environmental issues. Vishaka heads PARI's Social Media functions and works in the Education team to take PARI's stories into the classroom and get students to document issues around them.

Other stories by Vishaka George
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru