“ಹೇಯ್!‌ ಅಲ್ಲೇನು ಮಾಡುತ್ತಿದ್ದೀರಿ?” ಎಂದು ಕೇಳಿದ ಅವರ ದನಿ ಕಠೋರವಾಗಿದ್ದರೂ ಅದರಲ್ಲಿ ಕುತೂಹಲವೂ ಬೆರೆತಿತ್ತು ಎನ್ನುವುದನ್ನು ಅವರ ನೋಟ ಹೇಳುತ್ತಿತ್ತು.

ಆಗ ನನಗೆ ಅರಿವಾಯಿತು. ನಾನು ಹೋಗಿದ್ದು ಸಾಮಾನ್ಯವಾಗಿ ಜನರು ಹೋಗುವ ಸ್ಥಳವಾಗಿರಲಿಲ್ಲವೆಂದು.

ಅನಿರುದ್ಧ ಸಿಂಗ್ ಪಾಟರ್ ದಡದಿಂದ ನದಿಯ ಕಡೆಗೆ ಜಿಗಿದರು, ಅಲ್ಲಿ ಇದ್ದಕ್ಕಿದ್ದಂತೆ ನಿಂತು, ತಿರುಗಿ, ನೋಡುತ್ತಾ, ನನ್ನನ್ನು ಎಚ್ಚರಿಸಿದರು: "ಆ ಸ್ಥಳದಲ್ಲಿ ಹೆಣಗಳನ್ನು ಸುಡುತ್ತಾರೆ. ನಿನ್ನೆ ಕೂಡಾ ಒಂದು ಹೆಣವನ್ನು ಸುಟ್ಟಿದ್ದಾರೆ. ಬನ್ನಿ ಅಲ್ಲಿ ನಿಲ್ಲಬಾರದು. ನನ್ನ ಜೊತೆ ಬನ್ನಿ!"

ಅವರು ಹೇಳಿದ್ದೂ ಸರಿಯಿತ್ತು. ತಮ್ಮ ಜೀವವನ್ನೇ ತೆತ್ತು ಸತ್ತವರು ಗಳಿಸಿಕೊಂಡ ಏಕಾಂತವನ್ನು ನಾವು ಭಂಗಗೊಳಿಸಬಾರದು.

ಎರಡು ಮೀಟರ್ ಎತ್ತರದ ನದಿಯ ದಡದಿಂದ ಇಳಿದು, ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯ ಕಂಗ್ಸಾಬತಿ ನದಿಯ ಮೊಣಕಾಲು ಆಳದ ನೀರಿನಲ್ಲಿ ಅವರು ಜಾಣ್ಮೆಯಿಂದ ಸಾಗುತ್ತಿರುವುದನ್ನು ಗಮನಿಸಿದೆ. ಅವರೊಂದಿಗೆ ವೇಗವನ್ನು ಕಾಯ್ದುಕೊಳ್ಳಲು ಕೈಲಾದಷ್ಟು ಪ್ರಯತ್ನಿಸಿ, ದಡದ ಉದ್ದಕ್ಕೂ ವೇಗವಾಗಿ ನಡೆದೆ.

ಅವರ ವಯಸ್ಸನ್ನು ಸುಳ್ಳಾಗಿಸುವಂತಿದ್ದ ಅವರ್ ಚುರುಕುತನ, ಕೌಶಲ ವಿಸ್ಮಯಕಾರಿಯಾಗಿತ್ತು. 50ರ ಆಸುಪಾಸಿನ ಆ ವ್ಯಕ್ತಿಯನ್ನು, "ಕಾಕಾ [ಅಂಕಲ್], ನೀವು ನದಿಯಲ್ಲಿ ಏನು ಮಾಡುತ್ತಿದ್ದೀರಿ?" ಎಂದು ಕೇಳದೆ ಇರಲು ನನಗೆ ಸಾಧ್ಯವಾಗಲಿಲ್ಲ.

ಅನಿರುದ್ಧ ಸೊಂಟದ ಚೀಲವಾಗಿ ಬಳಸಿದ ಬಿಳಿ ಬಟ್ಟೆಯನ್ನು ಬಿಚ್ಚಿರು, ಅದರಲ್ಲಿ ತಾನು ಹಿಡಿದಿದ್ದ ಒಂದಷ್ಟು ಸೀಗಡಿಗಳಲ್ಲಿ ಒಂದನು ನಾಜೂಕಾಗಿ ಹಿಡಿದೆತ್ತಿ ತೋರಿಸುತ್ತಾ, ಮತ್ತು ಮಗುವಿನಂತಹ ಉತ್ಸಾಹದಿಂದ ಹೇಳಿದರು, "ಚಿಂಗ್ರಿ [ಸೀಗಡಿ] ಯನ್ನು ನೋಡಿ. ಇದು ಇಂದು ನಮ್ಮ [ಅವರ ಕುಟುಂಬದ] ಊಟವಾಗಲಿದೆ. ಶುಕ್ನೊ ಲೋಂಕಾ ಮತ್ತು ರೋಸನ್ ಜೊತೆ ಹುರಿದ ಈ ಸೀಗಡಿಗಳು ಗೊರೋಮ್-ಭಟ್ ಜೊತೆ ಅತ್ಯುತ್ತಮ ರುಚಿಯನ್ನು ಹೊಂದಿರುತ್ತವೆ." ಸೀಗಡಿ, ಒಣಗಿದ ಕೆಂಪು ಮೆಣಸಿನಕಾಯಿ ಮತ್ತು ಬೆಳ್ಳುಳ್ಳಿಯೊಂದಿಗೆ ಬೇಯಿಸಿ ಬಿಸಿ ಅನ್ನದೊಂದಿಗೆ ಬೆರೆಸಿ ತಿಂದರೆ ರುಚಿಕರವಾಗಿರುತ್ತದೆ.

Anirudhdha Singh Patar with his catch of prawns, which he stores in a waist pouch made of cloth
PHOTO • Smita Khator

ಅನಿರುದ್ಧ ಸಿಂಗ್ ಪಾಟರ್ ತಾನು ಹಿಡಿದ ಸೀಗಡಿಗಳನ್ನು ತನ್ನ ಸೊಂಟಕ್ಕೆ ಸುತ್ತಿಕೊಂಡ ಬಟ್ಟೆಯೊಂದರಲ್ಲಿ ಸಂಗ್ರಹಿಸುತ್ತಾರೆ

ಮೀನು ಮತ್ತು ಸೀಗಡಿ ಹಿಡಿಯುವ ಯಾರಿಗಾದರೂ ಅಲ್ಲಿ ಮೀನುಗಾರಿಕಾ ಬಲೆಯ ಅನುಪಸ್ಥಿತಿಯು ಎದ್ದುಕಾಣುತ್ತಿತ್ತು. "ನಾನು ಎಂದಿಗೂ ಬಲೆಯನ್ನು ಬಳಸಿಲ್ಲ" ಎಂದು ಅವರು ಹೇಳಿದರು. "ನಾನು ನನ್ನ ಕೈಗಳನ್ನು ಬಳಸುತ್ತೇನೆ. ಅವು [ಮೀನುಗಳು] ಎಲ್ಲಿ ಅಡಗಿರುತ್ತವೆಂದು ನನಗೆ ತಿಳಿದಿದೆ." ನದಿಯ ಕಡೆಗೆ ಕೈತೋರಿಸಿ, ಅವರು ಮಾತು ಮುಂದುವರಿಸಿದರು, "ಈ ಕಲ್ಲುಗಳ ಅಂಚುಗಳನ್ನು, ಮತ್ತು ನದಿಯ ಕೆಳಗಿರುವ ನೀರಿನ ಕಳೆಗಳು ಮತ್ತು ಪಾಚಿಗಳು ಇವೆಯಲ್ಲ? ಇವೇ ಚಿಂಗ್ರಿಗಳ ಮನೆಗಳು."

ನಾನು ನದಿಯೊಳಗೆ ಇಣುಕಿ ನೋಡಿದೆ ಮತ್ತು ಅನಿರುದ್ಧ ಹೇಳುತ್ತಿರುವಂತೆ ನದಿ ತೀರದ ಕಳೆಗಳು ಮತ್ತು ಪಾಚಿಗಳಲ್ಲಿ ಸೀಗಡಿಗಳು ಅಡಗಿರುವುದನ್ನು ನೋಡಿದೆ.

ನಾವು ಮತ್ತೆ ಮಾತನ್ನು ಅವರ ಊಡದ ಕಡೆಗೆ ಹೊರಳಿಸಿದೆವು. ಆಗ ಅವರು ತಮಗೆ ಊಟಕ್ಕೆ ಬೇಕಾಗುವ ಅಕ್ಕಿ ಎಲ್ಲಿಂದ ಬರುತ್ತದೆಯೆನ್ನುವುದನ್ನು ವಿವರಿಸಿದರು. “ನನ್ನ ಭತ್ತ ಬೆಳೆಯುವ ಸಣ್ಣ ತುಂಡು ಭೂಮಿಯಲ್ಲಿ ನಾನು ಕಷ್ಟಪಟ್ಟು ಕೆಲಸ ಮಾಡಿದರೆ, ನನ್ನ ಕುಟುಂಬದ ಒಂದು ವರ್ಷದ ಖೋರಾಕಿ [ಬಳಕೆಗೆ] ಸಾಕಾಗುವಷ್ಟು ಅಕ್ಕಿಯನ್ನು ಹೇಗೋ ಬೆಳೆಯಬಹುದು.”

ಪುರುಲಿಯಾದ ಪುಂಚಾ ಬ್ಲಾಕಿನಲ್ಲಿರುವ ಕೈರಾ ಗ್ರಾಮದಲ್ಲಿ ವಾಸಿಸುವ ಈ ಕುಟುಂಬವು ಪಶ್ಚಿಮ ಬಂಗಾಳದ ಪರಿಶಿಷ್ಟ ಪಂಗಡವಾದ ಭೂಮಿಜ್ ಸಮುದಾಯಕ್ಕೆ ಸೇರಿದೆ. ಜನಗಣತಿ ಪ್ರಕಾರ (2011ರ ಜನಗಣತಿ) 2,249 ಜನರಿದ್ದು, ಈ ಹಳ್ಳಿಯ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಆದಿವಾಸಿಗಳು, ಮತ್ತು ಅವರು ಆಹಾರಕ್ಕಾಗಿ ನದಿಯ ಮೇಲೆ ಅವಲಂಬಿತರಾಗಿದ್ದಾರೆ.

ಅನಿರುದ್ಧ ತಾನು ಹಿಡಿದ ಮೀನುಗಳನ್ನು ಮಾರಾಟ ಮಾಡುವುದಿಲ್ಲ - ಅದು ಅವರ ಕುಟುಂಬದ ಬಳಕೆಗಾಗಿ ಮೀಸಲು. ಮೀನುಗಾರಿಕೆಯು ಕೆಲಸವಲ್ಲ, ಅವರು ಹೇಳುತ್ತಾರೆ, ಇದು ಅವರು ಬಯಸಿ ಮಾಡುವ ವಿಷಯವಾಗಿದೆ. ಆದರೆ "ನಾನು ಜೀವನೋಪಾಯಕ್ಕಾಗಿ ದೂರದ ಊರುಗಳಿಗೆ ಹೋಗುತ್ತೇನೆ" ಎಂದು ಹೇಳಿದಾಗ ಅವರ ಧ್ವನಿ ಮಂಕಾಯಿತು. ಅವರ ಕೆಲಸದ ಹುಡುಕಾಟವು ಅವರನ್ನು ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶಕ್ಕೆ ಕರೆದೊಯ್ದಿದೆ, ಹೆಚ್ಚಿನ ಸಮಯಗಳಲ್ಲಿ ನಿರ್ಮಾಣ ಕಾರ್ಮಿಕರಾಗಿ ಮತ್ತು ಇತರ ಉದ್ಯೋಗಗಳಲ್ಲಿ.

2020ರ ಕೋವಿಡ್ -19 ಲಾಕ್ಡೌನ್ ಸಮಯದಲ್ಲಿ ಅವರು ನಾಗ್ಪುರದಲ್ಲಿ ಸಿಲುಕಿಕೊಂಡಿದ್ದರು. "ಕಟ್ಟಡ ನಿರ್ಮಾಣ ಯೋಜನೆಯೊಂದರಲ್ಲಿ ಕೆಲಸ ಮಾಡಲು ನಾನು ಒಬ್ಬ ಠೀಕಾದಾರ್ (ಕಾರ್ಮಿಕ ಗುತ್ತಿಗೆದಾರ) ನೊಂದಿಗೆ ಅಲ್ಲಿಗೆ ಹೋಗಿದ್ದೆ. ಆ ದಿನಗಳಲ್ಲಿ ಪರಿಸ್ಥಿತಿಯನ್ನು ನಿರ್ವಹಿಸುವುದು ತುಂಬಾ ಕಷ್ಟಕರವಾಗಿತ್ತು" ಎಂದು ಅವರು ನೆನಪಿಸಿಕೊಂಡರು. "ನಾನು ಒಂದು ವರ್ಷದ ಹಿಂದೆ ಹಿಂದಿರುಗಿದೆ ಮತ್ತು ಈಗ ನನಗೆ ವಯಸ್ಸಾಗುತ್ತಿರುವುದರಿಂದ ಮತ್ತೆ ಹೋಗದಿರಲು ನಿರ್ಧರಿಸಿದ್ದೇನೆ."

ಪುರುಲಿಯಾ ಜಿಲ್ಲೆಯ ಪುರುಷರು ಮಹಾರಾಷ್ಟ್ರ, ಉತ್ತರ ಪ್ರದೇಶ, ಕೇರಳ ಮತ್ತು ಇತರ ರಾಜ್ಯಗಳಿಗೆ ಮತ್ತು ರಾಜ್ಯದೊಳಗೆ ಕೆಲಸ ಹುಡುಕಿಕೊಂಡು ವಲಸೆ ಹೋಗುತ್ತಾರೆ ಎಂದು 40ರ ಪ್ರಾಯದ ಕೈರಾ ನಿವಾಸಿ ಅಮಲ್ ಮಹತೋ ಹೇಳಿದರು. ಕೃಷಿ ವೆಚ್ಚವನ್ನು ಭರಿಸಲು ಅವರು ತೆಗೆದುಕೊಳ್ಳುವ ಸಾಲವನ್ನು ಮರುಪಾವತಿಸಲು ಅವರು ಇದನ್ನು ಮಾಡುತ್ತಾರೆ ಎಂದು ಈ ಮೊದಲು ಸ್ಥಳೀಯ ಪತ್ರಿಕೆಯೊಂದರಲ್ಲಿ ವರದಿಗಾರರಾಗಿದ್ದ ಶಿಕ್ಷಕರೊಬ್ಬರು ಹೇಳಿದರು. ಅವರ ಅನುಪಸ್ಥಿತಿಯಲ್ಲಿ, ಮಹಿಳೆಯರು ಕುಟುಂಬಗಳಿಗೆ ಆಹಾರವನ್ನು ಖಚಿತಪಡಿಸಿಕೊಳ್ಳಲು ಹೊಲಗಳನ್ನು ನೋಡಿಕೊಳ್ಳುತ್ತಾರೆ ಎಂದು ಅವರು ಹೇಳಿದರು. "ಸಣ್ಣ ಹಿಡುವಳಿದಾರ ಆದಿವಾಸಿ ಕುಟುಂಬಗಳಿಗೆ ಇದು ವಿಷವರ್ತುಲವಾಗಿದೆ. ಅವರು ಮಹಾಜನರಿಂದ (ಲೇವಾದೇವಿಗಾರರು) ಸಾಲ ಪಡೆಯುತ್ತಾರೆ" ಎಂದು ಅಮಲ್ ವಿವರಿಸಿದರು.

Anirudhdha pointing to places where prawns take cover in the river.
PHOTO • Smita Khator
Wading the water in search of prawns, he says, ‘My father taught me the tricks of locating and catching them with my bare hands’
PHOTO • Smita Khator

ಎಡ: ಸೀಗಡಿಗಳು ಅವಿತುಕೊಳ್ಳುವ ಜಾಗವನ್ನು ತೋರಿಸುತ್ತಿರುವ ಅನಿರುದ್ಧ. ಬಲ: ನೀರಿನಲ್ಲಿ ಮೀನಿಗಾಗಿ ತಡಕುತ್ತಿರುವುದು, ಅವರು ಹೇಳುತ್ತಾರೆ ʼನನ್ನ ತಂದೆ ಈ ರೀತಿ ಅವು ಅಡಗಿರುವ ಜಾಗವನ್ನು ಹುಡುಕುವುದು ಮತ್ತು ಹಿಡಿಯುವುದನ್ನು ಕಲಿಸಿದರು

ಅನಿರುದ್ಧ ರಸಗೊಬ್ಬರಗಳು ಮತ್ತು ಬೀಜಗಳಂತಹ ಕೃಷಿ ಒಳಸುರಿಗಳಿಗಾಗಿ ತೆಗೆದುಕೊಂಡ ಸಾಲವನ್ನು ದುಡಿದು ತಂದ ಹಣದಿಂದ ಪಾವತಿಸಬೇಕಾಯಿತು. ನಾಗ್ಪುರದಲ್ಲಿ ಸಿಮೆಂಟ್ ಮತ್ತು ಗಾರೆಯನ್ನು ಬೆರೆಸುವುದು ಮತ್ತು ಭಾರವಾದ ಹೊರೆಗಳನ್ನು ಹೊರುವುದು ಅವರ ಕೆಲಸವಾಗಿತ್ತು, ಅವರು ದಿನಕ್ಕೆ ಸುಮಾರು 300 ರೂಪಾಯಿಗಳನ್ನು ಸಂಪಾದಿಸುತ್ತಿದ್ದರು. ಆದರೆ ಕೈರಾದಲ್ಲಿ ಕೂಲಿ ಕೆಲಸವು ಅಷ್ಟೊಂದು ಲಾಭದಾಯಕವಾಗಿಲ್ಲ. "ಯಾವುದೇ ಕೆಲಸವಿಲ್ಲದಿದ್ದಾಗ ನಾವು ಸುಮ್ಮನೆ ಕುಳಿತುಕೊಳ್ಳಬೇಕು" ಎಂದು ಅವರು ಹೇಳಿದರು. ಬಿತ್ತನೆ ಮತ್ತು ಕೊಯ್ಲು ಋತುಗಳಲ್ಲಿ ಹೊಲಗಳಲ್ಲಿ ಸ್ವಲ್ಪ ಕೆಲಸವನ್ನು ಪಡೆಯುಯುವಲ್ಲಿ ಯಶಸ್ವಿಯಾದಾಗ, ದಿನಗೂಲಿ 200 ರೂಪಾಯಿಗಳು ಅಥವಾ ಅದಕ್ಕಿಂತ ಕಡಿಮೆ. "ಕೆಲವು ದಿನಗಳಲ್ಲಿ, ನದಿಗಳ ರಾಯಲ್ಟಿಯನ್ನು ತೆಗೆದುಕೊಂಡ ಜನರು ಮರಳು ಅಗೆಯಲು ಲಾರಿಗಳೊಂದಿಗೆ ಇಲ್ಲಿಗೆ ಬಂದಾಗ ನನಗೆ [ಕೈರಾದಲ್ಲಿ] ಕೆಲಸ ಸಿಗುತ್ತದೆ. ನದಿಯಿಂದ ಲಾರಿಗಳಿಗೆ ಮರಳನ್ನು ಸಾಗಿಸಲು ನಾನು ದಿನಕ್ಕೆ 300 ರೂಪಾಯಿಗಳನ್ನು ಸಂಪಾದಿಸುತ್ತೇನೆ."

“ರಾಯಲ್ಟಿ” ಎಂದರೆ ಕಂಗ್ಸಾಬತಿ ನದಿಪಾತ್ರದ ಉದ್ದಕ್ಕೂ ಮರಳು ಗಣಿಗಾರಿಕೆಗೆ ನೀಡಲಾದ ಗುತ್ತಿಗೆಗಳು ಎಂದರ್ಥ. ಮರಳು ಹೊರತೆಗೆಯುವಿಕೆಯು ಇಲ್ಲಿ ವಿವೇಚನಾರಹಿತವಾಗಿದೆ, ಮತ್ತು ಆಗಾಗ್ಗೆ ಸುಸ್ಥಿರ ಮರಳು ಗಣಿಗಾರಿಕೆಯ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತದೆ. ರಾಜಕೀಯವಾಗಿ ಪ್ರಭಾವಿ ವ್ಯಕ್ತಿಗಳ ನಂಟು ಹೊಂದಿರುವ ಕಾರಣ ನದಿಪಾತ್ರದಲ್ಲಿ ಮರಳು ಕಳ್ಳಸಾಗಣೆ ಅವ್ಯಾಹತವಾಗಿ ನಡೆಯುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಆದರೆ ಈ ವ್ಯಾಪಾರವು ಅನಿರುದ್ಧ ಸಿಂಗ್ ಪಾಟರ್ ಅವರಂತಹ ಗ್ರಾಮಸ್ಥರಿಗೆ ಕೆಲವು ದಿನಗಳ ಕೂಲಿ ಕೆಲಸವನ್ನು ಖಚಿತಪಡಿಸುತ್ತದೆ - ಅವರಿಗೆ ಅದರ ಕಾನೂನುಬಾಹಿರ ಸ್ವಭಾವದ ಬಗ್ಗೆ ತಿಳಿದಿಲ್ಲವೆಂದು ತೋರುತ್ತದೆ.

ಆದಾಗ್ಯೂ, ಪರಿಸರದ ಮೇಲೆ "ರಾಯಲ್ಟಿ ವ್ಯವಹಾರ"ದ ಪ್ರತಿಕೂಲ ಪರಿಣಾಮದ ಬಗ್ಗೆ ತಿಳಿದಿತ್ತು. ಅದು "ಬಿಶಾಲ್ ಖೋಟಿ ನಾದಿರ್" ಎಂದು ಅವರು ಹೇಳಿದರು, ಇದು ನದಿಗೆ ದೊಡ್ಡ ಹೊಡೆತವಾಗಿದೆ. "ರೂಪುಗೊಳ್ಳಲು ವರ್ಷಗಳೇ ಬೇಕಾದ ಮರಳನ್ನು ಅವರು ತೆಗೆದುಕೊಂಡು ಹೋಗುತ್ತಿದ್ದಾರೆ."

ಅನಿರುದ್ಧ ಮಾತು ಮುಂದುವರಿಸುತ್ತಾ, "ನದಿಯಲ್ಲಿ ಸಾಕಷ್ಟು ಮೀನುಗಳು ಇರುತ್ತಿದ್ದವು,", ಬಾನ್ [ಹಾವುಮೀನು], ಶೋಲ್ [snakehead murrel], ಮತ್ತು ಮಾಗುರ್ [walking catfish] ಮೀನುಗಳನ್ನು ಹಿಡಿಯಲು ಜೇಲೆಗಳು [ಮೀನುಗಾರರು] ಬಲೆಗಳನ್ನು ಬಳಸುತ್ತಿದ್ದರು. ಈಗ ಆ ಮೀನುಗಳು ಇಲ್ಲಿಗೆ ಬರುವುದಿಲ್ಲ. ಅವು ಮೇಲ್ಮುಖವಾಗಿ ಮತ್ತು ಕೆಳಮುಖವಾಗಿ ಇತರ ಸ್ಥಳಗಳಿಗೆ ಸ್ಥಳಾಂತರಗೊಂಡಿವೆ." ಪ್ಲಾಸ್ಟಿಕ್, ಖಾಲಿ ಬಾಟಲಿಗಳು ಮತ್ತು ಥರ್ಮೋಕೋಲ್ ತಟ್ಟೆಗಳಿಂದ ನದಿ ದಂಡೆಗಳನ್ನು ಕಲುಷಿತಗೊಳಿಸುವ "ಪಿಕ್ನಿಕ್ ಪಾರ್ಟಿಗಳ" ಬಗ್ಗೆ ಅವರು ಕೋಪಗೊಂಡಂತೆ ತೋರುತ್ತದೆ.

ಅವರು ಸೀಗಡಿಗಳನ್ನು ಹುಡುಕುತ್ತಾ ಆರಾಮವಾಗಿ ನದಿಯಲ್ಲಿ ಅಡ್ಡಾಡುತ್ತಿದ್ದರು. "ನಾವು ಚಿಕ್ಕವರಿದ್ದಾಗ, ಚಿಂಗ್ರಿಗಳು ನದಿಯಲ್ಲಿ ತುಂಬಿ ತುಳುಕುತ್ತಿದ್ದವು" ಎಂದು ಅನಿರುದ್ಧ ಹೇಳಿದರು. "ನನ್ನ ತಂದೆ ನನ್ನ ಬರಿಗೈಗಳಿಂದ ಅವುಗಳನ್ನು ಪತ್ತೆಹಚ್ಚುವ ಮತ್ತು ಹಿಡಿಯುವ ತಂತ್ರಗಳನ್ನು ಕಲಿಸಿದರು. ಬಾಬಾ ಅಮರ್ ಬಿರತ್ ಮಚೋವಾಲ್ ಚಿಲೋ (ನನ್ನ ತಂದೆ ಒಬ್ಬ ಮಹಾನ್ ಮೀನುಗಾರರಾಗಿದ್ದರು)."

Kangsabati river, which flows through Kaira in Puruliya's Puncha block, is a major source of food for Adivasi families in the village
PHOTO • Smita Khator

ಪುರುಲಿಯಾದ ಪುಂಚಾ ಬ್ಲಾಕಿನಲ್ಲಿರುವ ಕೈರಾ ಮೂಲಕ ಹರಿಯುವ ಕಂಗ್ಸಾಬತಿ ನದಿಯು ಗ್ರಾಮದ ಆದಿವಾಸಿ ಕುಟುಂಬಗಳಿಗೆ ಆಹಾರದ ಪ್ರಮುಖ ಮೂಲವಾಗಿದೆ

ಚಿಂಗ್ರಿಯ ನಂತರ ಚಿಂಗ್ರಿಯನ್ನು ಹಿಡಿಯುತ್ತಾ, "ಸೀಗಡಿಗಳನ್ನು ಸ್ವಚ್ಛಗೊಳಿಸಲು ಸಾಕಷ್ಟು ಸಮಯ ಬೇಕಾಗುತ್ತದೆ, ಆದರೆ ಅವು ತುಂಬಾ ರುಚಿಕರವಾಗಿರುತ್ತವೆ" ಎಂದು ಅವರು ಹೇಳಿದರು. ಆದಾಗ್ಯೂ, ನದಿ ಅಥವಾ ಚಿಂಗ್ರಿಗಳು ಈಗ ಮೊದಲಿನಂತಿಲ್ಲ ಎಂದು ಅವರು ಹೇಳಿದರು. " ಸಾಸಿವೆ ಮತ್ತು ಭತ್ತವನ್ನು ಬೆಳೆಯುವ ನದಿಯ ಹತ್ತಿರದ ಹೊಲಗಳನ್ನು ನೀವು ನೋಡಿದ್ದೀರಾ? ಬೆಳೆಗಳ ಮೇಲೆ ಎಲ್ಲಾ ರೀತಿಯ ರಸಗೊಬ್ಬರಗಳು ಮತ್ತು ಕೀಟನಾಶಕಗಳನ್ನು ಸಿಂಪಡಿಸುತ್ತಾರೆ ಮತ್ತು ನಂತರ ಆ ಪರಿಕರಗಳನ್ನು ಈ ನದಿ ನೀರಿನಲ್ಲಿ ತೊಳೆಯುತ್ತಾರೆ. ಕಲುಷಿತ ನೀರು ಮೀನುಗಳನ್ನು ಕೊಲ್ಲುತ್ತದೆ. ಚಿಂಗ್ರಿಗಳು ವಿರಳವಾಗುತ್ತಿವೆ..."

ಕೈರಾದಿಂದ 5-6 ಕಿಲೋಮೀಟರ್ ದೂರದಲ್ಲಿರುವ ಪಿರ್ರಾ ಗ್ರಾಮದಿಂದ ನದಿಯಲ್ಲಿ ಸ್ನಾನ ಮಾಡಲು ಬಂದಿದ್ದ ಶುಭಂಕರ್ ಮಹತೋ ಅನಿರುದ್ಧರ ಮಾತುಗಳನ್ನು ಪ್ರತಿಧ್ವನಿಸಿದರು. "ನದಿಯ ಬಳಿ ವಾಸಿಸುವ ಭೂರಹಿತ, ಸಣ್ಣ ಮತ್ತು ಅತಿಸಣ್ಣ ಭೂ ಹಿಡುವಳಿ ಹೊಂದಿರುವ ಆದಿವಾಸಿಗಳಿಗೆ ನದಿಗಳು ಒಂದು ಕಾಲದಲ್ಲಿ ಜೀವನೋಪಾಯ ಮತ್ತು ಪ್ರೋಟೀನ್ ಮತ್ತು ಇತರ ಪ್ರಮುಖ ಪೋಷಕಾಂಶಗಳನ್ನು ಒದಗಿಸುತ್ತಿದ್ದವು - ಆಗೆಲ್ಲ ಅವರು ಆಹಾರ ಧಾನ್ಯಗಳನ್ನು ಖರೀದಿಸಲು ಸಾಧ್ಯವಿದ್ದಿರಲಿಲ್ಲ." ಪುರುಲಿಯಾ ರಾಜ್ಯದ ಅತ್ಯಂತ ಬಡ ಜಿಲ್ಲೆಗಳಲ್ಲಿ ಒಂದಾಗಿದೆ ಎಂದು ಅವರು ಗಮನಸೆಳೆದರು.

2020ರ ಅಧ್ಯಯನವು ಪುರುಲಿಯಾ ಪಶ್ಚಿಮ ಬಂಗಾಳದಲ್ಲಿ ಅತಿ ಹೆಚ್ಚು ಬಡತನವನ್ನು ಹೊಂದಿದೆ ಎಂದು ಅಂದಾಜಿಸಿದೆ - ಬಡತನ ರೇಖೆಗಿಂತ ಕೆಳಗಿರುವ ಜಿಲ್ಲೆಯ ಕುಟುಂಬಗಳ ಶೇಕಡಾವಾರು ಪ್ರಮಾಣವು ಶೇಕಡಾ 26ರಷ್ಟಿದೆ. "ಇಲ್ಲಿನ ಕುಟುಂಬಗಳು ಆಹಾರಕ್ಕಾಗಿ ಕಾಡುಗಳು ಮತ್ತು ನದಿಗಳನ್ನು ಅವಲಂಬಿಸಿವೆ. ಆದರೆ ಈಗ ನೈಸರ್ಗಿಕ ಪೂರೈಕೆಗಳು ವಿರಳವಾಗುತ್ತಿವೆ" ಎಂದು ಶಿಕ್ಷಕ ಶುಭಂಕರ್ ಹೇಳಿದರು.

ಅನಿರುದ್ಧರ ಬಳಿ ಅವನ ಕುಟುಂಬದ ಬಗ್ಗೆ ಕೇಳುವ ಸಮಯದಲ್ಲಿ ಅವರು ಇನ್ನಷ್ಟು ಸೀಗಡಿಗಾಗಿ ಹುಡುಕುತ್ತಿದ್ದರು. "ನನ್ನ ಹೆಂಡತಿ ಮನೆಕೆಲಸಗಳನ್ನು ಮಾಡುತ್ತಾಳೆ ಮತ್ತು ಹೊಲಗಳಲ್ಲಿ ಕೆಲಸ ಮಾಡುತ್ತಾಳೆ. ನನ್ನ ಮಗ ಕೂಡ ನಮ್ಮ ಭೂಮಿಯಲ್ಲಿ ಕೆಲಸ ಮಾಡುತ್ತಾನೆ" ಎಂದು ಅವರು ಹೇಳಿದರು. ತನ್ನ ಮಕ್ಕಳ ಬಗ್ಗೆ ಮಾತನಾಡುವಾಗ ಅವರ ಮುಖ ಬೆಳಗುತ್ತಿತ್ತು. "ನನ್ನ ಮೂವರು ಹೆಣ್ಣುಮಕ್ಕಳು ಮದುವೆಯಾಗಿ ದೂರದಲ್ಲಿದ್ದಾರೆ. ಈಗ ನನ್ನ ಬಳಿ ಇರುವುದು ಒಬ್ಬ ಮಗ ಮಾತ್ರ, ಮತ್ತು ನಾನು ಅವನನ್ನು ಎಲ್ಲಿಗೂ (ಕೆಲಸಕ್ಕೆ) ಕಳುಹಿಸುತ್ತಿಲ್ಲ, ಆ ದೂರದ ಸ್ಥಳಗಳಿಗೆ ಹೋಗುತ್ತಿಲ್ಲ."

ಅನಿರುದ್ಧರಿಂದ ಬೀಳ್ಗೊಳ್ಳುವಾಗ, ಅವರು ತನ್ನ ಕುಟುಂಬದೊಂದಿಗೆ ಕಷ್ಟಪಟ್ಟು ಸಂಪಾದಿಸಿದ ಊಟವನ್ನು ಮನೆಯಲ್ಲಿ ಸಂತೋಷದಿಂದ ಉಣ್ಣಲಿ ಎಂದು ಮನಸ್ಸಿನಲ್ಲೇ ಹಾರೈಸಿದೆ, ಮತ್ತು ಬೈಬಲ್ಲಿನ ಪದ್ಯವೊಂದನ್ನು ನೆನಪಿಸಿಕೊಂಡೆ, "ಮತ್ತು ನದಿ ಎಲ್ಲಿದ್ದರೂ, ಗುಂಪುಗೂಡುವ ಪ್ರತಿಯೊಂದು ಜೀವಿಯೂ ಅದರಲ್ಲಿ ವಾಸಿಸುತ್ತದೆ, ಮತ್ತು ಅಲ್ಲಿ ಅನೇಕ ಮೀನುಗಳು ಇರುತ್ತವೆ."

ಅನುವಾದ: ಶಂಕರ. ಎನ್. ಕೆಂಚನೂರು

Smita Khator

Smita Khator, originally from Murshidabad district of West Bengal, is now based in Kolkata, and is Translations Editor at the People’s Archive of Rural India, as well as a Bengali translator.

Other stories by Smita Khator
Editor : Vishaka George

Vishaka George is a Bengaluru-based Senior Reporter at the People’s Archive of Rural India and PARI’s Social Media Editor. She is also a member of the PARI Education team which works with schools and colleges to bring rural issues into the classroom and curriculum.

Other stories by Vishaka George
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected]

Other stories by Shankar N. Kenchanuru