ವಿಜಯ್‌ ಮರೋತ್ತರ್‌ ತನ್ನ ತಂದೆಯೊಡನೆ ನಡೆಸಿದ ಕಡೆಯ ಸಂಭಾಷಣೆಯ ಬಗ್ಗೆ ಬಹಳ ವಿಷಾದವನ್ನು ಹೊಂದಿದ್ದಾರೆ.

ಅದು ಬೇಸಿಗೆಯ ಸಂಜೆ, ಮತ್ತು ಯವತ್ಮಾಲ್ ಜಿಲ್ಲೆಯ ಅವರ ಊರು ನಿಧಾನವಾಗಿ ಕತ್ತಲೆಯಲ್ಲಿ ಮರೆಯಾಗುತ್ತಿತ್ತು. ಮಂದಬೆಳಕಿನ ಕೋಣೆಯಲ್ಲಿ, ವಿಜಯ್ ತನಗೆ ಮತ್ತು ಅವರ ತಂದೆಗೆ ಎರಡು ತಟ್ಟೆಗಳಲ್ಲಿ ಊಟವನ್ನು ತಂದರು - ಎರಡು ರೊಟ್ಟಿಗಳು, ಬೇಳೆಕಾಳುಗಳು ಮತ್ತು ಒಂದು ಬಟ್ಟಲು ಅನ್ನ.

ಆದರೆ ಅವರ ತಂದೆ ಘನಶ್ಯಾಮ್ ತಟ್ಟೆಯನ್ನು ಒಮ್ಮೆ ನೋಡಿ ಆಘಾತಕ್ಕೊಳಗಾದರು. ಕತ್ತರಿಸಿದ ಈರುಳ್ಳಿ ಎಲ್ಲಿದೆ ಎಂದು ಕೋಪದಿಂದ ಕೇಳಿದರು. ವಿಜಯ್ (25 ವರ್ಷ) ಪ್ರಕಾರ, ಅವರ ನಡವಳಿಕೆ ಹಾಗೆ ಇತ್ತು, ಆದರೆ ಆ ದಿನಗಳಲ್ಲಿ ಅವರು ಅದೇ ಮನಸ್ಥಿತಿಯಲ್ಲಿ ಬದುಕುತ್ತಿದ್ದರು. ಮಹಾರಾಷ್ಟ್ರದ ಅಕ್ಪುರಿ ಗ್ರಾಮದ ತನ್ನ ಒಂದು ಕೋಣೆಯ ಗುಡಿಸಲಿನ ಹೊರಗೆ ತೆರೆದ ಜಾಗದಲ್ಲಿ ಪ್ಲಾಸ್ಟಿಕ್ ಕುರ್ಚಿಯ ಮೇಲೆ ಕುಳಿತು ವಿಜಯ್ ಹೇಳುತ್ತಾರೆ, "ಕೆಲವು ಸಮಯದಿಂದ, ಅವರು ಸಣ್ಣ ವಿಷಯಗಳಿಗೆ ತಮ್ಮ ಮೇಲೆ ನಿಯಂತ್ರಣ ಕಳೆದುಕೊಳ್ಳುತ್ತಿದ್ದರು."

ವಿಜಯ್ ಮತ್ತೆ ಅಡುಗೆ ಮನೆಗೆ ಹೋಗಿ ತಂದೆಗೆ ಕತ್ತರಿಸಿದ ಈರುಳ್ಳಿ ತಂದರು. ಆದರೆ ಊಟದ ನಂತರ ಮತ್ತೆ ಇಬ್ಬರ ನಡುವೆ ಜಗಳವಾಗಿದೆ. ಅಂದು ರಾತ್ರಿ ವಿಜಯ್ ನೋವಿನೊಂದಿಗೆ ಮಲಗಿದರು. ಬೆಳಗ್ಗೆ ಅಪ್ಪನನ್ನು ಜೊತೆ ಸಮಾಧಾನದಿಂದ ಮಾತನಾಡುತ್ತೇನೆ ಎಂದುಕೊಂಡರು.

ಆದರೆ ಘನಶ್ಯಾಮ್ ಪಾಲಿಗೆ ಬೆಳಗು ಬರಲಿಲ್ಲ.

59 ವರ್ಷದ ರೈತ ಆ ರಾತ್ರಿ ಕೀಟನಾಶಕ ಸೇವಿಸಿದರು. ವಿಜಯ್ ಎಚ್ಚರಗೊಳ್ಳುವ ಮೊದಲೇ ಅವರು ನಿಧನರಾಗಿದ್ದರು. ಅದು ಏಪ್ರಿಲ್ 2022.

PHOTO • Parth M.N.

ಯವತ್ಮಾಲ್ ಜಿಲ್ಲೆಯ ಅಕ್ಪುರಿಯಲ್ಲಿರುವ ತಮ್ಮ ಮನೆಯ ಹೊರಗೆ ವಿಜಯ್ ಮರೋತ್ತರ್. ಏಪ್ರಿಲ್ 2022ರಲ್ಲಿ ಆತ್ಮಹತ್ಯೆ ಮಾಡಿಕೊಂಡ ತನ್ನ ತಂದೆಯೊಂದಿಗೆ ತಾನು ನಡೆಸಿದ ಮಾತುಕತೆಯ ಕುರಿತು ಅವರು ಇಂದಿಗೂ ವಿಷಾದ  ವ್ಯಕ್ತಪಡಿಸುತ್ತಾರೆ

ತಂದೆ ತೀರಿಕೊಂಡ ಒಂಬತ್ತು ತಿಂಗಳುಗಳ ನಂತರವೂ ವಿಜಯ್‌ ಅಂದಿನ ರಾತ್ರಿಯ ಘಟನೆಯ ಕುರಿತು ಪರಿತಪಿಸುತ್ತಾರೆ. ಅವರ ಮನಸ್ಸಿನಲ್ಲಿ ಯಾವಾಗಲೂ ಒಂದು ಆಲೋಚನೆ ಮರುಕಳಿಸುತ್ತಿರುತ್ತದೆ. ಗಡಿಯಾರವನ್ನು ಹಿಂದಕ್ಕೆ ತಿರುಗಿಸಲು ಸಾಧ್ಯವಿದ್ದಿದ್ದರೆ, ಆ ದಿನ ರಾತ್ರಿ ನಡೆದ ವಾದ ನಡೆಯದಂತೆ ಮಾಡುತ್ತಿದ್ದೆ ಎಂದುಕೊಳ್ಳುತ್ತಾರೆ. ಅವರು ಘನಶ್ಯಾಮರನ್ನು ಖಿನ್ನತೆಗೆ ಈಡಾದ ಮನುಷ್ಯನನ್ನಾಗಿ ನೆಪಿಸಿಕೊಳ್ಳಲು ಬಯಸುವುದಿಲ್ಲ. ತನ್ನ ತಂದೆಯನ್ನು ಈ ಆತಂಕ ಚಡಪಡಿಕೆ ಕಾಡುವ ಮೊದಲು ಅವರು ಇರುತ್ತಿದ್ದ ಪ್ರೀತಿಯ ತಂದೆಯ ರೂಪದಲ್ಲಿ ಕಲ್ಪಿಸಿಕೊಳ್ಳಲು ಬಯಸುತ್ತಾರೆ. ವಿಜಯ್‌ ಅವರ ತಾಯಿ ಕೂಡಾ ಎರಡು ವರ್ಷಗಳ ಹಿಂದೆ ತೀರಿಕೊಂಡಿದ್ದರು.

ಅವರ ತಂದೆಯ ಚಿಂತೆಗೆ ಪ್ರಮುಖ ಕಾರಣವೆಂದರೆ ಗ್ರಾಮದ ಐದು ಎಕರೆ ಜಮೀನು. ಆ ಜಮೀನಿನಲ್ಲಿ ಹತ್ತಿ, ತೊಗರಿ ಬೆಳೆಯುತ್ತಿದ್ದರು. ವಿಜಯ್ ಹೇಳುತ್ತಾರೆ, "ಕಳೆದ 8-10 ವರ್ಷಗಳಿಂದ ನಮ್ಮ ಪಾಲಿಗೆ ಸಮಯ ತುಂಬಾ ಕೆಟ್ಟದಾಗಿದೆ. ಹವಾಮಾನದ ಏರಿಳಿತಗಳು ಹೆಚ್ಚಾಗುತ್ತಿವೆ. ಈಗ ಮುಂಗಾರು ತಡವಾಗಿದೆ ಮತ್ತು ಬೇಸಿಗೆಯು ದೀರ್ಘವಾಗಿದೆ. ಪ್ರತಿ ಬೀಜವನ್ನು ಗದ್ದೆಗೆ ಎಸೆಯುವಾಗಲು ಪಗಡೆಯಾಟದ ಕಾಯಿ ಎಸೆಯುವಂತೆ ಭಾಸವಾಗುತ್ತಿತ್ತು."

ಸುಮಾರು 30 ವರ್ಷಗಳಿಂದ ವ್ಯವಸಾಯ ಮಾಡುತ್ತಿರುವ ಘನಶ್ಯಾಮರಿಗೆ ಗೊತ್ತಿದ್ದದ್ದು ಅದೊಂದೇ, ಪರಿಸರದಲ್ಲಾಗುತ್ತಿರುವ ನಿರಂತರ ಬದಲಾವಣೆಗಳು ಅವರ ಮನಸ್ಸಿನಲ್ಲಿ ಸ್ವಂತ ಸಾಮರ್ಥ್ಯದ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಿದ್ದವು. ವಿಜಯ್ ಹೇಳುತ್ತಾರೆ, "ಬೇಸಾಯವು ಕಾಲಕ್ಕೆ ಸಂಬಂಧಿಸಿದ್ದು. ಆದರೆ ಈಗ ನಿಮಗೆ ಸಮಯವಿಲ್ಲ, ಏಕೆಂದರೆ ಹವಾಮಾನದ ಮಾದರಿಗಳು ಬದಲಾಗುತ್ತಲೇ ಇರುತ್ತವೆ. ಪ್ರತಿ ಬಾರಿ ಬಿತ್ತನೆ ಮಾಡಿದಾಗ ಬರಗಾಲ ಬಂದಿತು, ಅದನ್ನು ವೈಯಕ್ತಿಕವಾಗಿ ತೆಗೆದುಕೊಂಡರು. ಬಿತ್ತನೆ ಮಾಡಿದ ನಂತರ ಮಳೆ ಇಲ್ಲ ಮತ್ತೆ ಬಿತ್ತಬೇಕೋ ಬೇಡವೋ ಎಂಬುದನ್ನು ನೀವು ನಿರ್ಧರಿಸಬೇಕು.”

ಎರಡನೆ ಬಾರಿ ಬಿತ್ತನೆಗೆ ದುಪ್ಪಟ್ಟು ವೆಚ್ಚವಾದರೂ ಉತ್ತಮ ಬೆಳೆ ಬಂದರೆ ಲಾಭ ಪಡೆಯಬಹುದು ಎಂಬ ನಿರೀಕ್ಷೆಯಿರುತ್ತದೆ. ಆದರೆ ಕೆಲವೊಮ್ಮೆ ಅದು ಹಾಗಾಗುವುದಿಲ್ಲ. "ಒಂದು ಕೆಟ್ಟ ಸೀಸನ್ನಿನಲ್ಲಿ ನಾವು 50,000 ರಿಂದ 75,000 ರೂಪಾಯಿಗಳನ್ನು ಕಳೆದುಕೊಳ್ಳುತ್ತೇವೆ" ಎಂದು ವಿಜಯ್ ಹೇಳುತ್ತಾರೆ. ಒಇಸಿಡಿಯ 2017-18ರ ಆರ್ಥಿಕ ಸಮೀಕ್ಷೆಯ ಪ್ರಕಾರ , ಹವಾಮಾನ ಬದಲಾವಣೆಯು ತಾಪಮಾನ ಮತ್ತು ಮಳೆಯ ಮಾದರಿಗಳಲ್ಲಿ ವ್ಯತ್ಯಾಸಗಳನ್ನು ಉಂಟುಮಾಡಿದೆ, ಇದು ನೀರಾವರಿ ಪ್ರದೇಶಗಳಲ್ಲಿ ಕೃಷಿ ಆದಾಯದಲ್ಲಿ 15-18 ಶೇಕಡಾ ಕಡಿತಕ್ಕೆ ಕಾರಣವಾಗುತ್ತದೆ. ಆದರೆ, ನೀರಾವರಿ ರಹಿತ ಪ್ರದೇಶಗಳಲ್ಲಿ ಶೇ.25ರಷ್ಟು ನಷ್ಟ ಉಂಟುಮಾಡಬಹುದು ಎಂದೂ ಸಮೀಕ್ಷೆಯಲ್ಲಿ ಹೇಳಲಾಗಿದೆ.

ಘನಶ್ಯಾಮ್, ವಿದರ್ಭದ ಹೆಚ್ಚಿನ ಸಣ್ಣ ರೈತರಂತೆ, ದುಬಾರಿ ನೀರಾವರಿ ವಿಧಾನಗಳನ್ನು ಹೊಂದುವಷ್ಟು ಅನುಕೂಲ ಹೊಂದಿರಲಿಲ್ಲ ಮತ್ತು ಸಂಪೂರ್ಣವಾಗಿ ಮಳೆಯನ್ನು ಅವಲಂಬಿಸಬೇಕಾಯಿತು, ಆದರೆ ಮಳೆ ಅನಿಯಮಿತವಾಗಿತ್ತು. ವಿಜಯ್ ಹೇಳುತ್ತಾರೆ, “ಇನ್ನು ಮುಂದೆ ಮಳೆ ಬರುವುದಿಲ್ಲ. ಒಂದೋ ಬರಗಾಲವಿರುತ್ತದೆ ಅಥವಾ ಪ್ರವಾಹವಿರುತ್ತದೆ. ಹವಾಮಾನದ ಅನಿಶ್ಚಿತತೆಯು ನಿರ್ಧಾರಗಳನ್ನು ತೆಗೆದುಕೊಳ್ಳುವ ನಿಮ್ಮ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಕೃಷಿ ಮಾಡುವುದು ತುಂಬಾ ಒತ್ತಡದ ಕೆಲಸ. ಇದು ಸಮಸ್ಯೆಗಳನ್ನು ಉಂಟುಮಾಡುತ್ತದೆ ಮತ್ತು ಈ ಕಾರಣಕ್ಕಾಗಿ ನನ್ನ ತಂದೆಯು ಪ್ರತಿ ವಿಷಯದಲ್ಲೂ ಅಸಮಾಧಾನಗೊಳ್ಳಲು ಪ್ರಾರಂಭಿಸಿದರು.”

PHOTO • Parth M.N.

ವಿಜಯ್ ಹೇಳುತ್ತಾರೆ, “ಇಂತಹ ಪರಿಸ್ಥಿತಿಯಲ್ಲಿ ಕೃಷಿ ಮಾಡುವುದು ತುಂಬಾ ಒತ್ತಡದ ಕೆಲಸ. ಇದು ಸಮಸ್ಯೆಗಳಿಗೆ ಕಾರಣವಾಗುತ್ತದೆ ಮತ್ತು ಇದರಿಂದಾಗಿ ನನ್ನ ತಂದೆ ಸಿಡುಕತೊಡಗಿದರು.' ಹವಾಮಾನದಲ್ಲಿನ ಬದಲಾವಣೆಗಳು, ಬೆಳೆ ವೈಫಲ್ಯ, ಹೆಚ್ಚುತ್ತಿರುವ ಸಾಲಗಳು ಮತ್ತು ಒತ್ತಡವು ಅವರ ತಂದೆಯ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿತು

ಈಗಾಗಲೇ ತೀವ್ರ ಕೃಷಿ ಬಿಕ್ಕಟ್ಟಿಗೆ ಹೆಸರುವಾಸಿಯಾಗಿರುವ ಮತ್ತು ಆತಂಕಕಾರಿ ಸಂಖ್ಯೆಯ ರೈತರ ಆತ್ಮಹತ್ಯೆಗಳಿಗೆ ಹೆಸರುವಾಸಿಯಾಗಿರುವ ಈ ಪ್ರದೇಶದ ರೈತರಲ್ಲಿ ನಿರಂತರ ಚಿಂತೆ ಮತ್ತು ಬೆಳೆನಷ್ಟವು ಮಾನಸಿಕ ಆರೋಗ್ಯ ಬಿಕ್ಕಟ್ಟನ್ನು ಉಂಟುಮಾಡಿದೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಪ್ರಕಾರ, ಮಹಾರಾಷ್ಟ್ರವು ಭಾರತದಲ್ಲಿ ಅತಿ ಹೆಚ್ಚು ಆತ್ಮಹತ್ಯೆ ಸಾವುಗಳನ್ನು ಹೊಂದಿದೆ. ಅಂಕಿಅಂಶಗಳ ಪ್ರಕಾರ, 2021ರಲ್ಲಿ, ಭಾರತದಲ್ಲಿ 1,64,000 ಜನರು ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ, ಅದರಲ್ಲಿ 13 ಪ್ರತಿಶತದಷ್ಟು ಸಾವುಗಳು ಮಹಾರಾಷ್ಟ್ರದಲ್ಲಿ ಸಂಭವಿಸಿವೆ. ಆತ್ಮಹತ್ಯೆಯಿಂದ ಸಾವನ್ನಪ್ಪಿದವರಲ್ಲಿ ಶೇಕಡಾ 6.6 ರೈತರು ಎಂದು ವರದಿ ತೋರಿಸುತ್ತದೆ. ಅಂದರೆ, ಒಂದು ವರ್ಷದಲ್ಲಿ ಸುಮಾರು 11,000 ರೈತರು ಪ್ರಾಣ ಕಳೆದುಕೊಂಡಿದ್ದಾರೆ.

ಆದರೂ ಬಿಕ್ಕಟ್ಟು ಅಧಿಕೃತ ಅಂಕಿಅಂಶಗಳು ತಿಳಿಸುವುದಕ್ಕಿಂತ ಬಹಳ ಆಳವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಹೇಳುವಂತೆ, "ಪ್ರತಿ ಒಂದು ಆತ್ಮಹತ್ಯೆಗೆ, ಇನ್ನೂ 20 ಜನರು ಆತ್ಮಹತ್ಯೆಗೆ ಪ್ರಯತ್ನಿಸುತ್ತಿದ್ದಾರೆ."

ಆದರೆ, 2021ರಲ್ಲಿ ಭಾರತದಲ್ಲಿ 2,20,000ಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಯತ್ನಿಸಿದ್ದರು; ಹೆಚ್ಚು ಜನರು ಆತ್ಮಹತ್ಯೆ ಕುರಿತು ಯೋಚಿಸುತ್ತಿದ್ದರು. ಈ ಸಂಖ್ಯೆಯು ಮಹಾರಾಷ್ಟ್ರದಲ್ಲಿ ಕೋವಿಡ್ -19 ರ ಸಾವಿನ ಅಧಿಕೃತ ಅಂಕಿ ಅಂಶಕ್ಕಿಂತ 1.5 ಪಟ್ಟು ಹೆಚ್ಚು.

ಹವಾಮಾನದಲ್ಲಿ ಆಗಾಗ ಸಂಭವಿಸುವ ಬದಲಾವಣೆಯಿಂದ ಘನಶ್ಯಾಮ ಕುಟುಂಬ ನಷ್ಟ ಅನುಭವಿಸುತ್ತಿದ್ದು, ಸಾಲದ ಹೊರೆ ಹೆಚ್ಚಾಯಿತು. ವಿಜಯ್ ಹೇಳುತ್ತಾರೆ, “ನನ್ನ ತಂದೆ ಕೃಷಿ ಮುಂದುವರಿಸಲು ಖಾಸಗಿ ಲೇವಾದೇವಿಗಾರರಿಂದ ಸಾಲ ಪಡೆದಿದ್ದಾರೆ ಎಂದು ನನಗೆ ತಿಳಿದಿತ್ತು. ಕಾಲಕ್ರಮೇಣ ಹೆಚ್ಚುತ್ತಿರುವ ಬಡ್ಡಿಯಿಂದಾಗಿ ಸಾಲ ಮರುಪಾವತಿ ಮಾಡುವಂತೆ ಅವರ ಮೇಲೆ ಒತ್ತಡವೂ ಹೆಚ್ಚುತ್ತಿತ್ತು."

PHOTO • Parth M.N.

ಮೇ 2020ರಲ್ಲಿ ಘನಶ್ಯಾಮ್ ಅವರ ಸಾವಿಗೆ ಎರಡು ವರ್ಷಗಳ ಮೊದಲು ಅವರ ಪತ್ನಿ ಕಲ್ಪನಾ ಹಠಾತ್ ಹೃದಯಾಘಾತದಿಂದ 45ನೇ ವಯಸ್ಸಿನಲ್ಲಿ ನಿಧನರಾದರು. ಹದಗೆಡುತ್ತಿರುವ ಆರ್ಥಿಕ ಸ್ಥಿತಿಯಿಂದ ಅವರು ಒತ್ತಡದಲ್ಲಿದ್ದರು

ಯವತ್ಮಾಲ್‌ನ ಮನೋವೈದ್ಯಕೀಯ ಸಾಮಾಜಿಕ ಕಾರ್ಯಕರ್ತರಾದ ಪ್ರಫುಲ್ಲ ಕಾಪ್ಸೆ, 37, ಆಲ್ಕೊಹಾಲ್ ಚಟವು ಖಿನ್ನತೆಯ ಲಕ್ಷಣವಾಗಿದೆ ಎಂದು ವಿವರಿಸುತ್ತಾರೆ. "ಹೆಚ್ಚಿನ ಆತ್ಮಹತ್ಯೆಗಳ ಹಿಂದೆ ಮಾನಸಿಕ ಆರೋಗ್ಯದ ಕಾರಣಗಳಿವೆ. ರೈತರಿಗೆ ಸಹಾಯವನ್ನು ಎಲ್ಲಿ ಪಡೆಯಬೇಕೆಂದು ತಿಳಿದಿಲ್ಲದ ಕಾರಣ ರೋಗನಿರ್ಣಯ ಮಾಡಲಾಗುವುದಿಲ್ಲ" ಎಂದು ಅವರು ಹೇಳುತ್ತಾರೆ.

ಘನಶ್ಯಾಮ್ ಅವರ ಕುಟುಂಬವು ಅವರು ಅಧಿಕ ಬಿಪಿ (ಅಧಿಕ ರಕ್ತದೊತ್ತಡ), ಆತಂಕ ಮತ್ತು ಒತ್ತಡ-ಸಂಬಂಧಿತ ಸಮಸ್ಯೆಗಳೊಂದಿಗೆ ಹೋರಾಡುವುದನ್ನು ನೋಡಿದ್ದರು ಮತ್ತು ಅಂತಿಮವಾಗಿ ಅವರು ಆತ್ಮಹತ್ಯೆ ಮಾಡಿಕೊಂಡರು. ಈ ಪರಿಸ್ಥಿತಿಯಲ್ಲಿ ಏನು ಮಾಡಬೇಕೆಂದು ಅವರಿಗೆ ತಿಳಿದಿರಲಿಲ್ಲ. ಮನೆಯಲ್ಲಿ ಆತಂಕ ಮತ್ತು ಒತ್ತಡದಿಂದ ಹೆಣಗಾಡುತ್ತಿದ್ದವರು ಅವರೊಬ್ಬರೇ ಅಲ್ಲ. ಎರಡು ವರ್ಷಗಳ ಹಿಂದೆ, ಮೇ 2020 ರಲ್ಲಿ, ಅವರ 45 ವರ್ಷದ ಪತ್ನಿ ಕಲ್ಪನಾ ನಿಧನರಾದರು. ಕಲ್ಪನಾ ಅವರಿಗೆ ಮೊದಲು ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ, ಆದರೆ ಒಂದು ದಿನ ಇದ್ದಕ್ಕಿದ್ದಂತೆ ಹೃದಯಾಘಾತವಾಗಿ ನಿಧನರಾದರು.

"ಅವರು ಕೃಷಿಭೂಮಿ ಮತ್ತು ಮನೆಯನ್ನು ಸಹ ನೋಡಿಕೊಳ್ಳುತ್ತಿದ್ದರು. ಮತ್ತು ನಷ್ಟದಿಂದಾಗಿ, ಕುಟುಂಬವನ್ನು ಪೋಷಿಸುವುದು ಕಷ್ಟವಾಗಿತ್ತು. ನಮ್ಮ ಹದಗೆಡುತ್ತಿರುವ ಆರ್ಥಿಕ ಪರಿಸ್ಥಿತಿಯಿಂದಾಗಿ ಅವಳು ಉದ್ವಿಗ್ನಳಾಗಿದ್ದಳು" ಎಂದು ವಿಜಯ್ ಹೇಳುತ್ತಾರೆ. "ನನ್ನಿಂದ ಬೇರೆ ಯಾವುದೇ ಕಾರಣವನ್ನು ಯೋಚಿಸಲು ಸಾಧ್ಯವಿಲ್ಲ."

ಕಲ್ಪನಾ ಅವರ ಅನುಪಸ್ಥಿತಿಯು ಘನಶ್ಯಾಮ್ ಅವರ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿತು. "ನನ್ನ ತಂದೆ ಒಂಟಿಯಾಗಿದ್ದರು ಮತ್ತು ಅಮ್ಮ ಸತ್ತ ನಂತರ ಮೌನದ ಕೋಶದೊಳಗೆ ಹೋದರು" ಎಂದು ವಿಜಯ್ ಹೇಳುತ್ತಾರೆ. "ನಾನು ಅವರೊಂದಿಗೆ ಮಾತನಾಡಲು ಪ್ರಯತ್ನಿಸಿದೆ, ಆದರೆ ಅವರು ಎಂದಿಗೂ ತನ್ನ ಭಾವನೆಗಳನ್ನು ಹಂಚಿಕೊಳ್ಳಲಿಲ್ಲ. ಅವರು ನನ್ನನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದರು ಎನ್ನಿಸುತ್ತದೆ."

ಬದಲಾಗುತ್ತಿರುವ ಮತ್ತು ಅನಿರೀಕ್ಷಿತ ಹವಾಮಾನದೊಂದಿಗೆ ಹೋರಾಡುತ್ತಿರುವ ಗ್ರಾಮೀಣ ಪ್ರದೇಶಗಳು ಪೋಸ್ಟ್ ಟ್ರಾಮಾಟಿಕ್ ಸ್ಟ್ರೆಸ್ ಡಿಸಾರ್ಡರ್ (ಪಿಟಿಎಸ್‌ಡಿ), ಭಯ ಮತ್ತು ಖಿನ್ನತೆಗೆ ಹೆಚ್ಚು ಒಳಗಾಗುತ್ತವೆ ಎಂದು ಕಾಪ್ಸೆ ಹೇಳುತ್ತಾರೆ. "ರೈತರಿಗೆ ಬೇರೆ ಯಾವುದೇ ಆದಾಯದ ಮೂಲವಿಲ್ಲ. ಒತ್ತಡಕ್ಕೆ ಚಿಕಿತ್ಸೆ ನೀಡದಿದ್ದಾಗ, ಗಂಭೀರ ಸಮಸ್ಯೆಯಾಗಿ ಬದಲಾಗುತ್ತದೆ ಮತ್ತು ಅಂತಿಮವಾಗಿ ಖಿನ್ನತೆಗೆ ಕಾರಣವಾಗುತ್ತದೆ. ಆರಂಭಿಕ ಹಂತಗಳಲ್ಲಿ, ಖಿನ್ನತೆಗೆ ಸಮಾಲೋಚನೆಯೊಂದಿಗೆ ಚಿಕಿತ್ಸೆ ನೀಡಬಹುದು. ಆದರೆ ನಂತರ, ಸಮಸ್ಯೆ ಗಾಢವಾದಾಗ, ಔಷಧಿಯ ಅಗತ್ಯವಿರುತ್ತದೆ, ಆ ಸಮಯದಲ್ಲಿ ಆತ್ಮಹತ್ಯೆಯ ಆಲೋಚನೆಗಳು ಸಹ ಬರುತ್ತವೆ.

ಆದಾಗ್ಯೂ, 2015-16ರ ರಾಷ್ಟ್ರೀಯ ಮಾನಸಿಕ ಆರೋಗ್ಯ ಸಮೀಕ್ಷೆಯ ಪ್ರಕಾರ , ಭಾರತದಲ್ಲಿ ಮಾನಸಿಕ ಅಸ್ವಸ್ಥತೆಗಳ 70ರಿಂದ 86% ಪ್ರಕರಣಗಳಲ್ಲಿ ಸಹಾಯ ಪಡೆಯುವಾಗ ವಿಳಂಬವಾಗುತ್ತದೆ. ಮೇ 2018ರಲ್ಲಿ ಜಾರಿಗೆ ಬಂದ ಮಾನಸಿಕ ಆರೋಗ್ಯ ಕಾಯ್ದೆ, 2017ರ ಅಂಗೀಕಾರದ ನಂತರವೂ, ಮಾನಸಿಕ ಅಸ್ವಸ್ಥತೆಗಳಿಂದ ಬಳಲುತ್ತಿರುವ ಜನರಿಗೆ ಅಗತ್ಯ ಸೇವೆಗಳ ಒದಗಿಸುವಿಕೆ ಮತ್ತು ಪ್ರವೇಶವು ಸಮಸ್ಯೆಯಾಗಿಯೇ ಉಳಿದಿದೆ.

PHOTO • Parth M.N.

ಯವತ್ಮಾಲ್‌ನ ವಡ್ಗಾಂವ್‌ನಲ್ಲಿರುವ ತನ್ನ ಮನೆಯಲ್ಲಿ ಸೀಮಾ. ಜುಲೈ 2015ರಲ್ಲಿ, ಅವರ 40 ವರ್ಷದ ಪತಿ ಸುಧಾಕರ್ ಕೀಟನಾಶಕವನ್ನು ಸೇವಿಸಿ ತನ್ನ ಬದುಕನ್ನು ಕೊನೆಗೊಳಿಸಿದರು. ಅಂದಿನಿಂದ ಸೀಮಾ ತನ್ನ 15 ಎಕರೆ ಜಮೀನನ್ನು ಏಕಾಂಗಿಯಾಗಿ ನಿರ್ವಹಿಸುತ್ತಿದ್ದಾರೆ

ಯವತ್ಮಾಲ್ ತಾಲ್ಲೂಕಿನ ವಡ್ಗಾಂವ್‌ನ 42 ವರ್ಷದ ಸೀಮಾ ವಾನಿ ಅವರಿಗೆ ಮಾನಸಿಕ ಆರೋಗ್ಯ ರಕ್ಷಣೆ ಕಾಯ್ದೆ ಅಥವಾ ಅದರ ಅಡಿಯಲ್ಲಿ ಲಭ್ಯವಿರುವ ಸೇವೆಗಳ ಬಗ್ಗೆ ಸಂಪೂರ್ಣವಾಗಿ ತಿಳಿದಿಲ್ಲ. 2015ರ ಜುಲೈನಲ್ಲಿ ಪತಿ ಸುಧಾಕರ್ (40) ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅಂದಿನಿಂದ, ಸೀಮಾ ತನ್ನ 15 ಎಕರೆ ಜಮೀನನ್ನು ಒಬ್ಬರೇ ನಿರ್ವಹಿಸುತ್ತಿದ್ದಾರೆ.

"ನಾನು ನೆಮ್ಮದಿಯಾಗಿ ಮಲಗಿ ಬಹಳ ಸಮಯ ಕಳೆದಿದೆ. ನಾನು ಒತ್ತಡದಲ್ಲಿದ್ದೇನೆ. ನನ್ನ ಹೃದಯ ಬಡಿತ ಹೆಚ್ಚಾಗಿ ವೇಗವಾಗಿರುತ್ತದೆ. ಪೋಟಾತ್‌ ಗೋಲಾ ಏತೊ. ಇದು ವ್ಯವಸಾಯದ ಕಾಲ. ಆದರೆ ನನ್ನ ಹೊಟ್ಟಯಲ್ಲಿ ಗಂಟು ಉಂಟಾಗಿದೆ."

ಜೂನ್ 2022ರ ಕೊನೆಯಲ್ಲಿ, ಸೀಮಾ ಖಾರಿಫ್ ಋತು ಪ್ರಾರಂಭವಾದ ಕೂಡಲೇ ಹತ್ತಿ ಬಿತ್ತನೆ ಮಾಡಿದರು. ಉತ್ತಮ ಲಾಭಕ್ಕಾಗಿ ಬೀಜಗಳು, ಕೀಟನಾಶಕಗಳು ಮತ್ತು ರಸಗೊಬ್ಬರಗಳಿಗಾಗಿ ಅವರು ಸುಮಾರು 1 ಲಕ್ಷ ರೂ.ಗಳನ್ನು ಖರ್ಚು ಮಾಡಿದರು ಮತ್ತು ಹಗಲಿರುಳು ಕೆಲಸ ಮಾಡಿದರು. ಸೆಪ್ಟೆಂಬರ್ ಮೊದಲ ವಾರದಲ್ಲಿ ಮೇಘಸ್ಫೋಟಕ್ಕೆ ಮೊದಲು, ಅವರು ತನ್ನ ಲಾಭದ ಗುರಿಗೆ ಬಹಳ ಹತ್ತಿರದಲ್ಲಿದ್ದರು. ಎಲ್ಲ ಸರಿಯಿದ್ದಿದ್ದರೆ ಅವರು 1 ಲಕ್ಷ ರೂ.ಗಿಂತ ಹೆಚ್ಚಿನ ಲಾಭವನ್ನು ಗಳಿಸುತ್ತಿದ್ದರೆಂದು ತೋರುತ್ತದೆ, ಆದರೆ ಮೇಘಸ್ಫೋಟವು ಕಳೆದ ಮೂರು ತಿಂಗಳ ಕಠಿಣ ಪರಿಶ್ರಮವನ್ನು ಹಾಳುಮಾಡಿತು.

"ನನ್ನಿಂದ ಕೇವಲ 10,000 ರೂ.ಗಳನ್ನು ಮಾತ್ರ ಉಳಿಸಲು ಸಾಧ್ಯವಾಯಿತು. ಕೃಷಿಯಿಂದ ಲಾಭ ಬರುವುದು ಇರಲಿ, ಹಾಕಿದ ಹಣವನ್ನು ತೆಗೆಯಲು ನಾನು ಒದ್ದಾಡುತ್ತಿದ್ದೇನೆ. ತಿಂಗಳುಗಟ್ಟಲೆ ನೀವು ಕಷ್ಟಪಟ್ಟು ಕೃಷಿ ಮಾಡಿರುತ್ತೀರಿ. ಇನ್ನೇನು ಬೆಳೆ ಕೈಗೆ ಬರುವಾಗ ಎರಡು ದಿನದ ಮಳೆ ಎಲ್ಲವನ್ನೂ ಕಿತ್ತುಕೊಂಡರೆ ಏನು ಮಾಡುತ್ತೀರಿ? ಈ ಕೃಷಿ ನನ್ನ ಗಂಡನನ್ನೂ ಕಿತ್ತುಕೊಂಡಿತು.” ಸುಧಾಕರ್‌ ಅವರ ಸಾವಿನ ನಂತರ ಕೃಷಿ ಭೂಮಿ ಮತ್ತು ಅದರೊಂದಿಗಿನ ಒತ್ತಡ ಎರಡೂ ಬಳುವಳಿಯಾಗಿ ಸೀಮಾರಿಗೆ ದೊರೆಯಿತು.

"ಬರದಿಂದಾಗಿ ನಾವು ಹಿಂದಿನ ಹಂಗಾಮಿನಲ್ಲಿ ಈಗಾಗಲೇ ಹಣವನ್ನು ಕಳೆದುಕೊಂಡಿದ್ದೆವು" ಎಂದು ಸುಧಾಕರ್ ಸಾಯುವ ಹಿಂದಿನ ಸಮಯದ ಬಗ್ಗೆ ಅವರು ಹೇಳುತ್ತಾರೆ. “2015ರಲ್ಲಿ ತಂದಂತಹ ಹತ್ತಿ ಬೀಜ ನಕಲಿಯೆಂದು ಗೊತ್ತಾದಾಗ ಅವರು ಆಘಾತಕ್ಕೆ ಒಳಗಾಗಿದ್ದರು. ಜೊತೆಗೆ ಅದೇ ಸಮಯಕ್ಕೆ ನಾವು ಮಗಳ ಮದುವೆ ಮಾಡುವುದಿತ್ತು. ಇದೆಲ್ಲ ಒಟ್ಟಿಗೆ ಆಗಿದ್ದನ್ನು ಅವರಿಗೆ ಭರಿಸಲು ಸಾಧ್ಯವಾಗಲಿಲ್ಲ. ಅವರು ಕುಸಿದು ಹೋದರು.”

ನಂತರದ ದಿನಗಳಲ್ಲಿ ತನ್ನ ಪತಿ ಮೌನಿಯಾಗುತ್ತಿರುವುದನ್ನು ಸೀಮಾ ಗಮನಿಸಿದ್ದರು. ಎಲ್ಲಾ ವಿಷಯಗಳನ್ನು ಅವರಲ್ಲೇ ಇಟ್ಟುಕೊಳ್ಳುತ್ತಿದ್ದರು. ಆದರೆ ಅವರು ಕಠಿಣ ನಿರ್ಧಾರವೊಂದನ್ನು ತೆಗೆದುಕೊಳ್ಳಬಹುದು ಎಂದು ಭಾವಿಸಿರಲಿಲ್ಲ ಎನ್ನುತ್ತಾರೆ ಸೀಮಾ. “ಹಳ್ಳಿ ಮಟ್ಟದಲ್ಲಿ ನಮ್ಮಂತಹ ಜನರಿಗೆ ಒಂದು ಸಹಾಯ ಸಿಗುವಂತಿದ್ದರೆ ಸರಿಯಲ್ಲವೆ?” ಎಂದು ಅವರು ಕೇಳುತ್ತಾರೆ.

PHOTO • Parth M.N.

ಹೊಲದಲ್ಲಿ ಸಿಕ್ಕ ಚೂರು ಪಾರು ಹತ್ತಿಯೊಂದಿಗೆ ಸೀಮಾ ತಮ್ಮ ಮನೆಯಲ್ಲಿ

ಮಾನಸಿಕ ಆರೋಗ್ಯ ಕಾಯಿದೆ 2017 ರ ಪ್ರಕಾರ, ಸೀಮಾ ಅವರ ಕುಟುಂಬವು ಉತ್ತಮ ಗುಣಮಟ್ಟದ, ನಿರಂತರ ಸಮಾಲೋಚನೆ ಮತ್ತು ಚಿಕಿತ್ಸಾ ಸೇವೆಗಳಿಗೆ ವಸತಿ ಚಿಕಿತ್ಸಾ ಕೇಂದ್ರಕ್ಕೆ ಸುಲಭವಾಗಿ ಮತ್ತು ಸಮೀಪದಲ್ಲಿ ಪ್ರವೇಶವನ್ನು ಹೊಂದಿರಬೇಕು.

ಸಮುದಾಯ ಮಟ್ಟದಲ್ಲಿ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮವನ್ನು (ಡಿಎಮ್‌ಎಚ್‌ಪಿ) 1996ರಲ್ಲಿ ಪ್ರಾರಂಭಿಸಲಾಯಿತು, ಇದರ ಪ್ರಕಾರ ಪ್ರತಿ ಜಿಲ್ಲೆಯೂ ಮನೋವೈದ್ಯರು, ಮನಶ್ಶಾಸ್ತ್ರಜ್ಞ, ಮನೋವೈದ್ಯಕೀಯ ನರ್ಸ್ ಮತ್ತು ಮನೋವೈದ್ಯಕೀಯ ಸಮಾಜ ಸೇವಕರನ್ನು ಹೊಂದಿರಬೇಕು. ಜತೆಗೆ ತಾಲೂಕಾ ಮಟ್ಟದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪೂರ್ಣಕಾಲಿಕ ಮನಶಾಸ್ತ್ರಜ್ಞ ಅಥವಾ ಮನೋವೈದ್ಯಕೀಯ ಸಮಾಜ ಸೇವಕರು ಲಭ್ಯವಿರಬೇಕು.

ಆದಾಗ್ಯೂ, ಯವತ್ಮಾಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ (ಪಿಎಚ್‌ಸಿ) ಎಂಬಿಬಿಎಸ್ ವೈದ್ಯರು ಮಾನಸಿಕ ಆರೋಗ್ಯದಿಂದ ಬಳಲುತ್ತಿರುವ ಜನರಿಗೆ ಚಿಕಿತ್ಸೆ ನೀಡುತ್ತಾರೆ. ಯವತ್ಮಾಲ್ ಡಿಎಂಎಚ್‌ಪಿ ಸಂಯೋಜಕ ಡಾ.ವಿನೋದ್ ಜಾಧವ್, ಪಿಎಚ್‌ಸಿಯಲ್ಲಿ ಅರ್ಹ ಸಿಬ್ಬಂದಿಯ ಕೊರತೆಯನ್ನು ಒಪ್ಪಿಕೊಳ್ಳುತ್ತಾರೆ. "ಪ್ರಕರಣವನ್ನು ಎಂಬಿಬಿಎಸ್ ವೈದ್ಯರು ನಿರ್ವಹಿಸದಿದ್ದಾಗ, ರೋಗಿಯನ್ನು ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗುತ್ತದೆ" ಎಂದು ಅವರು ಹೇಳುತ್ತಾರೆ.

ಸೀಮಾ ತನಗೆ ತನ್ನ ಹಳ್ಳಿಯಿಂದ ಸುಮಾರು 60 ಕಿಲೋಮೀಟರ್ ದೂರದಲ್ಲಿರುವ ಜಿಲ್ಲಾ ಕೇಂದ್ರದಲ್ಲಿ ಲಭ್ಯವಿರುವ ಸಮಾಲೋಚನೆ ಸೇವೆಗಳ ಕುರಿತು ತಿಳಿದಿದ್ದರೆ ಮತ್ತು ಚಿಕಿತ್ಸೆಗಾಗಿ ಅಲ್ಲಿಗೆ ಹೋಗಿದ್ದರೆ, ಎರಡೂ ಕಡೆಗಳಿಂದ ಪ್ರಯಾಣಿಸಲು ಒಂದೊಂದು ಗಂಟೆ ತೆಗೆದುಕೊಳ್ಳುತ್ತಿತ್ತು. ಖರ್ಚುಗಳು ಇದ್ದವು. ಹಾಗಾಗಿ ಅವರಿಗೆ ಅದು ಅಷ್ಟು ಸುಲಭವಲ್ಲ.

“ಸಹಾಯ ಪಡೆಯಲು ಒಂದು ಗಂಟೆ ದೂರ ಪ್ರಯಾಣಿಸಬೇಕೆಂದು ತಿಳಿದಾಗ ಜನರು ನಿರುತ್ಸಾಹಗೊಳ್ಳುತ್ತಾರೆ. ಅಲ್ಲದೆ ಚಿಕಿತ್ಸೆಗೆ ಮತ್ತೆ ಮತ್ತೆ ಪ್ರಯಾಣಿಸಬೇಕಿರುತ್ತದೆ. ಇದಕ್ಕಾಗಿ ತುಂಭಾ ಸಮಯ ವ್ಯಯ ಮಾಡಬೇಕಾಗುತ್ತದೆ.” ಎಂದು ಕಾಪ್ಸೆ ಹೇಳುತ್ತಾರೆ.

ಡಿಎಮ್‌ಎಚ್‌ಪಿ ಅಡಿಯಲ್ಲಿ ಅವರ ತಂಡವು ಮಾನಸಿಕ ಆರೋಗ್ಯ ಸಮಸ್ಯೆಗಳಿರುವ ಜನರನ್ನು ಹುಡುಕಲು ಯವತ್ಮಾಲ್‌ನ 16 ತಾಲೂಕುಗಳಲ್ಲಿ ಪ್ರತಿ ವರ್ಷ ಶಿಬಿರವನ್ನು ಆಯೋಜಿಸುತ್ತದೆ ಎಂದು ಜಾಧವ್ ಹೇಳುತ್ತಾರೆ. “ಚಿಕಿತ್ಸೆಗಾಗಿ ನಮ್ಮ ಬಳಿಗೆ ಬರುವಂತೆ ಕರೆಯುವ ಬದಲು ಅವರನ್ನು ಭೇಟಿ ಮಾಡುವುದು ಉತ್ತಮ ನಮ್ಮಲ್ಲಿ ಸಾಕಷ್ಟು ವಾಹನಗಳು ಅಥವಾ ಹಣವಿಲ್ಲ, ಆದರೆ ನಾವು ನಮ್ಮ ಕೈಲಾದಷ್ಟು ಮಾಡುತ್ತಿದ್ದೇವೆ.” ಎಂದು ಅವರು ಹೇಳುತ್ತಾರೆ.

ರಾಜ್ಯದ ಡಿಎಂಎಚ್‌ಪಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮೂರು ವರ್ಷಗಳಲ್ಲಿ ಒಟ್ಟು 158 ಕೋಟಿ ರೂ. ಅನುದಾನ ನೀಡಿವೆ. ಆದಾಗ್ಯೂ, ಮಹಾರಾಷ್ಟ್ರ ಸರ್ಕಾರವು ಇದುವರೆಗೆ ಆ ಬಜೆಟ್‌ನಲ್ಲಿ ಕೇವಲ 5.5 ಪ್ರತಿಶತವನ್ನು ಖರ್ಚು ಮಾಡಿದೆ, ಅಂದರೆ ಸುಮಾರು 8.5 ಕೋಟಿ ರೂ.

ಮಹಾರಾಷ್ಟ್ರದಲ್ಲಿ ಕ್ಷೀಣಿಸುತ್ತಿರುವ ಡಿಎಂಎಚ್‌ಪಿ ಬಜೆಟ್ ಗಮನಿಸಿದರೆ, ವಿಜಯ್ ಮತ್ತು ಸೀಮಾ ಅವರಂತಹ ಜನರು ಅಂತಹ ಶಿಬಿರಗಳಲ್ಲಿ ಭಾಗವಹಿಸುವ ಅವಕಾಶವನ್ನು ಪಡೆಯುವ ಸಾಧ್ಯತೆಯಿಲ್ಲ.

PHOTO • Parth M.N.

ಮೂಲ: ಮಾಹಿತಿ ಹಕ್ಕು ಕಾಯ್ದೆ, 2005ರ ಮೂಲಕ ಕಾರ್ಯಕರ್ತ ಜಿತೇಂದ್ರ ಘಾಡ್ಗೆ ಅವರು ಪಡೆದ ದತ್ತಾಂಶ

PHOTO • Parth M.N.

ಮೂಲ: ಆರೋಗ್ಯ ಸಚಿವಾಲಯದ ಮೂಲಕ ಸಂಗ್ರಹಿಸಿದ ದತ್ತಾಂಶದ ಆಧಾರದ ಮೇಲೆ

ಕಳೆದ ಕೆಲವು ವರ್ಷಗಳಲ್ಲಿ, ಈ ಆರೋಗ್ಯ ಶಿಬಿರಗಳ ಸಂಖ್ಯೆ ಕಡಿಮೆಯಾಗಿದೆ, ಈ ಮಧ್ಯೆ ಕರೋನಾ ಸಾಂಕ್ರಾಮಿಕದಲ್ಲಿ ಜನರ ಒಂಟಿತನವು ಹೆಚ್ಚಾಯಿತು, ಆರ್ಥಿಕ ಬಿಕ್ಕಟ್ಟು ತೀವ್ರಗೊಂಡಿತು ಮತ್ತು ಮಾನಸಿಕ ಆರೋಗ್ಯದ ಸಮಸ್ಯೆ ಮತ್ತಷ್ಟು ಹೆಚ್ಚಾಯಿತು. ಮತ್ತೊಂದೆಡೆ, ಮಾನಸಿಕ ಆರೋಗ್ಯ ಸಹಾಯಕ್ಕಾಗಿ ಬೇಡಿಕೆಯ ಹೆಚ್ಚಳವು ಕಳವಳವನ್ನು ಹೆಚ್ಚಿಸಿದೆ.

ಯವತ್ಮಾಲ್‌ನ ಮನೋವೈದ್ಯ ಡಾ.ಪ್ರಶಾಂತ್ ಚಕ್ಕರವಾರ್, “ರೋಗಿಗಳು ಆಗಾಗ್ಗೆ ಭೇಟಿ ನೀಡಬೇಕಾದ ಈ ಶಿಬಿರಗಳು ಸಮಾಜದ ಸಣ್ಣ ವರ್ಗಕ್ಕೆ ಮಾತ್ರ ಪ್ರಯೋಜನವನ್ನು ನೀಡುತ್ತವೆ ಮತ್ತು ವರ್ಷಕ್ಕೊಮ್ಮೆ ಮಾತ್ರವೇ ಶಿಬಿರಗಳು ನಡೆಯುತ್ತವೆ, ಪ್ರತಿ ಆತ್ಮಹತ್ಯೆಯೂ ಸರ್ಕಾರ ಮತ್ತು ವ್ಯವಸ್ಥೆಯ ವೈಫಲ್ಯ. ಜನರು ರಾತ್ರೋರಾತ್ರಿ ಈ ಕ್ರಮವನ್ನು ತೆಗೆದುಕೊಳ್ಳುವುದಿಲ್ಲ. ಇದು ಪ್ರತಿಕೂಲ ಪರಿಸ್ಥಿತಿಗಳ ಪರಿಣಾಮವಾಗಿದೆ."

ಮತ್ತು ರೈತರ ಜೀವನದಲ್ಲಿ ಪ್ರತಿಕೂಲ ಘಟನೆಗಳು ಹೆಚ್ಚುತ್ತಿವೆ.

ಅವರ ತಂದೆ ಘನಶ್ಯಾಮ್ ನಿಧನರಾದ ಐದು ತಿಂಗಳ ನಂತರ ವಿಜಯ್ ಮರೋತ್ತರ್ ತಮ್ಮ ಜಮೀನಿನಲ್ಲಿ ಮೊಣಕಾಲು ಆಳದ ನೀರಿನಲ್ಲಿ ನಿಂತಿದ್ದಾರೆ. ಸೆಪ್ಟೆಂಬರ್ 2022ರ ಅತಿಯಾದ ಮಳೆಯು ಅವರ ಹತ್ತಿ ಫಸಲಿನ ಹೆಚ್ಚಿನ ಭಾಗವನ್ನು ಕೊಚ್ಚಿಕೊಂಡು ಹೋಗಿದೆ. ಇದು ಅವರ ಜೀವನದ ಮೊದಲ ಬೆಳೆ ಋತುವಾಗಿದೆ, ಅಲ್ಲಿ ಅವರಿಗೆ ಮಾರ್ಗದರ್ಶನ ನೀಡಲು ಅಥವಾ ಬೆಂಬಲ ನೀಡಲು ಪೋಷಕರೂ ಇಲ್ಲ.  ಅವರು ಈಗ ಒಬ್ಬಂಟಿ.

ಮೊದಲು ಜಮೀನು ನೀರಿನಲ್ಲಿ ಮುಳುಗಿರುವುದನ್ನು ನೋಡಿದ ಅವರು ತಕ್ಷಣ ಅದನ್ನು ಉಳಿಸಲು ಪ್ರಯತ್ನಿಸಲಿಲ್ಲ. ಅಲ್ಲಿಯೇ ನಿಂತು ಶೂನ್ಯದತ್ತ ನೋಡಿದರು. ತಮ್ಮ ಹೊಳಪಿನ ಬಿಳಿ ಹತ್ತಿಯ ಬೆಳೆ ಹಾಳಾಗಿದೆ ಎಂದು ಒಪ್ಪಿಕೊಳ್ಳಲು ಅವರಿಗೆ ಸ್ವಲ್ಪ ಸಮಯ ಹಿಡಿಯಿತು.

ವಿಜಯ್ ಹೇಳುತ್ತಾರೆ, “ನಾನು ಬೆಳೆಗೆ ಸುಮಾರು 1.25 ಲಕ್ಷ ರೂ. ಖರ್ಚು ಮಾಡಿದ್ದೆ. ಬಹುತೇಕ ಎಲ್ಲಾ ಹಣವೂ ಹೋಗಿದೆ. ಆದರೆ ನಾನು ಬಿಡುವುದಿಲ್ಲ. ನಾನು ಪರಿಸ್ಥಿತಿಯ ಮುಂದೆ ಮಂಡಿಯೂರಲು ಸಾಧ್ಯವಿಲ್ಲ."

ಠಾಕೂರ್ ಫ್ಯಾಮಿಲಿ ಫೌಂಡೇಶನ್ನಿಂದ ಸ್ವತಂತ್ರ ಪತ್ರಿಕೋದ್ಯಮ ಅನುದಾನದ ಮೂಲಕ ಪಾರ್ಥ್ ಎಂ.ಎನ್ ಸಾರ್ವಜನಿಕ ಆರೋಗ್ಯ ಮತ್ತು ನಾಗರಿಕ ಸ್ವಾತಂತ್ರ್ಯಗಳ ಬಗ್ಗೆ ವರದಿ ಮಾಡುತ್ತಾರೆ. ಠಾಕೂರ್ ಫ್ಯಾಮಿಲಿ ಫೌಂಡೇಶನ್ ಈ ವರದಿಯ ವಿಷಯಗಳ ಮೇಲೆ ಯಾವುದೇ ಸಂಪಾದಕೀಯ ನಿಯಂತ್ರಣವನ್ನು ಚಲಾಯಿಸಿಲ್ಲ.

ನಿಮ್ಮಲ್ಲಿ ಆತ್ಮಹತ್ಯೆಯ ಭಾವ ಮೂಡುತ್ತಿದ್ದಲ್ಲಿ ಅಥವಾ ತೊಂದರೆಯಲ್ಲಿರುವ ಯಾರಾದರೂ ತಿಳಿದಿದ್ದರೆ ದಯವಿಟ್ಟು ರಾಷ್ಟ್ರೀಯ ಸಹಾಯವಾಣಿ ಕಿರಣ್, 1800-599-0019 (24/7 ಟೋಲ್ ಫ್ರೀ) ಗೆ ಕರೆ ಮಾಡಿ, ಅಥವಾ ನಿಮ್ಮ ಹತ್ತಿರದ ಈ ಯಾವುದೇ ಸಹಾಯವಾಣಿಗೆ ಕರೆ ಮಾಡಿ. ಮಾನಸಿಕ ಆರೋಗ್ಯ ವೃತ್ತಿಪರರು ಮತ್ತು ಸೇವೆಗಳ ಬಗ್ಗೆ ಮಾಹಿತಿಗಾಗಿ, ದಯವಿಟ್ಟು ಎಸ್‌ಪಿಐಎಫ್‌ನ ಮಾನಸಿಕ ಆರೋಗ್ಯ ಡೈರೆಕ್ಟರಿಗೆ ಭೇಟಿ ನೀಡಿ.

ಅನುವಾದ: ಶಂಕರ. ಎನ್. ಕೆಂಚನೂರು

Parth M.N.

Parth M.N. is a 2017 PARI Fellow and an independent journalist reporting for various news websites. He loves cricket and travelling.

Other stories by Parth M.N.
Editor : Pratishtha Pandya

Pratishtha Pandya is a Senior Editor at PARI where she leads PARI's creative writing section. She is also a member of the PARIBhasha team and translates and edits stories in Gujarati. Pratishtha is a published poet working in Gujarati and English.

Other stories by Pratishtha Pandya
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru