ಅವರು ರೈತರೂ ಹೌದು. ಅವರ ಎದೆಯ ಮೇಲೆ ಹೆಮ್ಮೆಯಿಂದ ಅಲಂಕರಿಸಲ್ಪಟ್ಟ ಪದಕ ಇಲ್ಲದೆ ಹೋಗಿದ್ದರೆ, ದೆಹಲಿಯ ಗಡಿಗಳಲ್ಲಿ ಹಾಜರಿದ್ದ ರೈತರ ಗುಂಪಿನಲ್ಲಿ ಅವರೂ ಒಬ್ಬರಾಗಿರುತ್ತಿದ್ದರು. ಅವರು 1965 ಮತ್ತು 1971ರ ಪಾಕಿಸ್ತಾನದ ಯುದ್ಧಗಳಲ್ಲಿ ತೋರಿಸಿದ ಧೈರ್ಯಕ್ಕಾಗಿ ಗೌರವಿಸಲ್ಪಟ್ಟ ವೀರರಾಗಿದ್ದಾರೆ, ಅವರಲ್ಲಿ ಕೆಲವರು 1980ರ ದಶಕದಲ್ಲಿ ಶ್ರೀಲಂಕಾದಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರು ಈಗ ಆಕ್ರೋಶಗೊಂಡಿದ್ದಾರೆ ಮತ್ತು ಅದು ಸಹಜವೂ ಹೌದು, ಈ ಪ್ರತಿಭಟನಾನಿರತರನ್ನು ಸರ್ಕಾರ ಮತ್ತು ಮಾಧ್ಯಮಗಳ ಪ್ರಬಲ ವಿಭಾಗಗಳು 'ರಾಷ್ಟ್ರ ವಿರೋಧಿ', 'ಭಯೋತ್ಪಾದಕ' ಮತ್ತು 'ಖಲಿಸ್ತಾನಿ' ಎಂದು ಕರೆಯುತ್ತಿರುವುದರಿಂದಾಗಿ ಅವರು ಹೆಚ್ಚು ಆಕ್ರೋಶಿತರಾಗಿದ್ದಾರೆ.

ಪಂಜಾಬ್‌ನ ಲುಧಿಯಾನ ಜಿಲ್ಲೆಯ ಗಿಲ್ ಗ್ರಾಮದ ಬ್ರಿಗೇಡಿಯರ್ ಎಸ್.ಎಸ್. ಗಿಲ್ (ನಿವೃತ್ತ) ನನ್ನೊಡನೆ ಹೇಳುತ್ತಾರೆ, "ಶಾಂತಿಯುತವಾಗಿ ಪ್ರತಿಭಟಿಸುವ ರೈತರ ವಿರುದ್ಧ ಸರ್ಕಾರ ಬಲಪ್ರಯೋಗ ನಡೆಸಿದ್ದು ವಿಷಾದನೀಯ. ಅವರು ದೆಹಲಿಯನ್ನು ತಲುಪಲು ಬಯಸಿದ್ದರು, ಆದರೆ ಸರ್ಕಾರ ಅವರನ್ನು ತಡೆದು ನಿಲ್ಲಿಸಿತು, ಅದು ಅಸಭ್ಯ ವರ್ತನೆ ಮತ್ತು ತಪ್ಪು. ಅವರು ಬ್ಯಾರಿಕೇಡ್‌ಗಳನ್ನು ನೆಟ್ಟರು, ರಸ್ತೆಗಳನ್ನು ಅಗೆದರು, ಲಾಠಿ ಚಾರ್ಜ್ ಮಾಡಿದರು ಮತ್ತು ಈ ರೈತರ ಮೇಲೆ ನೀರಿನ ಫಿರಂಗಿಗಳನ್ನು ಬಳಸಿದರು. ಯಾವ ಕಾರಣಾಕ್ಕಾಗಿ? ಯಾಕಾಗಿ? ಇದನ್ನು ಮಾಡಲು ಕಾರಣವೇನು? ಆ ಎಲ್ಲ ಅಡೆತಡೆಗಳನ್ನು ರೈತರು ಮೀರಿ ನಿಂತಿರುವುದು ತಮ್ಮ ಬದ್ಧತೆಯ ಕಾರಣದಿಂದ.”

ತನ್ನ ಸಕ್ರಿಯ ಸೇವೆಯ ಸಮಯದಲ್ಲಿ 13 ಪದಕಗಳನ್ನು ಗೆದ್ದ ಒಬ್ಬ ಯುದ್ಧ ವೀರ, 72 ವರ್ಷದ ಗಿಲ್ ತನ್ನ ಕುಟುಂಬದಲ್ಲಿ 16 ಸದಸ್ಯರನ್ನು ಮತ್ತು ಕೆಲವು ಎಕರೆ ಭೂಮಿಯನ್ನು ಹೊಂದಿದ್ದಾರೆ. ಅವರು 1971ರ ಯುದ್ಧದಲ್ಲಿ ಭಾಗವಹಿಸಿದ್ದರು ಮತ್ತು 1990ರ ದಶಕದಲ್ಲಿ ಪಂಜಾಬ್‌ನಲ್ಲಿ ನಡೆದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ಸೇರಿದಂತೆ ಇತರ ಮಿಲಿಟರಿ ಕಾರ್ಯಾಚರಣೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

"ಈ ಕಾನೂನುಗಳ ಕುರಿತು ರೈತರ ಅಭಿಪ್ರಾಯ ಕೇಳಲಾಗಿಲ್ಲ ಅಥವಾ ಅವರೊಂದಿಗೆ ಸಮಾಲೋಚಿಸಲಾಗಿಲ್ಲ" ಎಂದು ಬ್ರಿಗೇಡಿಯರ್ ಗಿಲ್ ಹೇಳುತ್ತಾರೆ. "ಇದು ವಿಶ್ವದ ಅತಿದೊಡ್ಡ ಕ್ರಾಂತಿಗಳಲ್ಲಿ ಒಂದಾಗಿದೆ, ಇದು ಪ್ರಸ್ತುತ ದೆಹಲಿಯ ಗಡಿಗಳಲ್ಲಿ ನಡೆಯುತ್ತಿದೆ. ಸರ್ಕಾರ ಈ ಕಾನೂನುಗಳನ್ನು ಏಕೆ ರದ್ದುಗೊಳಿಸುತ್ತಿಲ್ಲ ಎಂದು ನನಗೆ ಅರ್ಥವಾಗುತ್ತಿಲ್ಲ. ಸರಕಾರ ಈ ಕೆಲಸವನ್ನು ಇಷ್ಟು ಹೊತ್ತಿಗಾಗಲೇ ಮಾಡಬೇಕಾಗಿತ್ತು."

ಕೇಂದ್ರ ಸರ್ಕಾರವು ಮೊದಲಿಗೆ ಜೂನ್ 5, 2020ರಂದು ಸುಗ್ರೀವಾಜ್ಞೆಯಾಗಿ ತಂದ ಮೂರು ಕೃಷಿ ಕಾನೂನುಗಳ ವಿರುದ್ಧ ಲಕ್ಷಾಂತರ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ, ನಂತರ ಸೆಪ್ಟೆಂಬರ್ 14ರಂದು ಅವುಗಳನ್ನು ಸಂಸತ್ತಿನಲ್ಲಿ ಕೃಷಿ ಮಸೂದೆಯಾಗಿ ಪರಿಚಯಿಸಲಾಯಿತು ಮತ್ತು ಅದೇ ತಿಂಗಳಲ್ಲಿ 20ರಂದು ಕಾಯ್ದೆಯಾಗಿಸಲಾಗಿದೆ. ಅದುವೇ ಈ ಮೂರು ಕಾನೂನುಗಳು: ರೈತ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರೋತ್ಸಾಹ ಮತ್ತು ನೆರವು) ಕಾಯ್ದೆ, 2020 ; ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ 2020ರ ಒಪ್ಪಂದ ಮಸೂದೆ ; ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ, 2020.

The decorated war veterans are participating in the farmers' protests and demanding a repeal of the new farm laws
PHOTO • Amir Malik

ಪದಕಗಳನ್ನು ನೀಡಿ ಸನ್ಮಾನಿಸಲಾಗಿರುವ ಈ ಯುದ್ಧ ವೀರರು ರೈತರ ಆಂದೋಲನದಲ್ಲಿ ಭಾಗವಹಿಸುತ್ತಿದ್ದಾರೆ ಮತ್ತು ಹೊಸ ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸುತ್ತಿದ್ದಾರೆ.

ಕಾರ್ಪೊರೇಟ್ ಲಾಭದ ಬಲಿಪೀಠದೆದುರು ತಮ್ಮ ಜೀವನೋಪಾಯವನ್ನು ಬಲಿ ನೀಡುವಂತೆ ಮಾಡುವ ಈ ಕಾನೂನುಗಳು ರೈತರಲ್ಲಿ ಆಕ್ರೋಶ ಹುಟ್ಟಿಸಿವೆ. ಭಾರತೀಯ ಸಂವಿಧಾನದ 32ನೇ ವಿಧಿಯನ್ನು ದುರ್ಬಲಗೊಳಿಸುವ ಮೂಲಕ ದೇಶದ ಎಲ್ಲಾ ನಾಗರಿಕರ ಕಾನೂನು ನೆರವು ಪಡೆಯುವ ಹಕ್ಕನ್ನು ಈ ಕಾನೂನುಗಳು ನಿಷ್ಕ್ರಿಯಗೊಳಿಸುವುದರಿಂದ ಈ ಕಾನೂನುಗಳನ್ನು ಟೀಕಿಸಲಾಗುತ್ತಿದೆ.

ಈ ಹೊಸ ಕಾನೂನುಗಳು ರೈತರಿಗೆ ಕನಿಷ್ಠ ಬೆಂಬಲ ಬೆಲೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು, ಸರಕಾರದ ಮೂಲಕ ಖರೀದಿಗಳು ಸೇರಿದಂತೆ ಬೆಂಬಲದ ಮುಖ್ಯ ರೂಪಗಳನ್ನು ನಾಶ ಮಾಡುತ್ತವೆ. ಇದರ ಜೊತೆಯಲ್ಲಿ, ಈ ಕಾನೂನು ಕೃಷಿಯಲ್ಲಿ ಕಾರ್ಪೊರೇಟ್ ಘಟಕಗಳ ವ್ಯಾಪ್ತಿಯನ್ನು ಹೆಚ್ಚಿಸುತ್ತದೆ, ರೈತರಿಗೆ ಚೌಕಾಶಿ ಮಾಡಲು ಇರುವ ಸೀಮಿತ ಶಕ್ತಿಯನ್ನೂ ಕಡಿಮೆ ಮಾಡುತ್ತದೆ.

"ಈ ತಪ್ಪು ಕ್ರಮಗಳು ಮಾತ್ರವಲ್ಲ, ಸರ್ಕಾರವು ಕಾರ್ಪೊರೇಟ್‌ಗಳ ಜೇಬಿನಲ್ಲಿ ಸಿಲುಕಿದೆ" ಎಂದು ಪಂಜಾಬ್‌ನ ಲುಧಿಯಾನಾದ ಲೆಫ್ಟಿನೆಂಟ್ ಕರ್ನಲ್ ಜಗದೀಶ್ ಸಿಂಗ್ ಬ್ರಾರ್ (ನಿವೃತ್ತ) ಹೇಳುತ್ತಾರೆ.

ಮತ್ತು ಸ್ಪಷ್ಟವಾಗಿ, ಈ ವೀರರು ಸರ್ಕಾರ ಮತ್ತು ಮಾಧ್ಯಮಗಳ ಅಪಪ್ರಚಾರದಿಂದ ಸಾಕಷ್ಟು ಘಾಸಿಗೊಂಡಿದ್ದಾರೆ.

"ನಾವು ದೇಶಕ್ಕಾಗಿ ಹೋರಾಡುತ್ತಿರುವಾಗ, ಈ ಉದ್ಯಮಿಗಳು ಎಲ್ಲಿಯೂ ಪತ್ತೆಯಿರಲಿಲ್ಲ" ಎಂದು ಸೈನ್ಯದಲ್ಲಿದ್ದ ಸಮಯದಲ್ಲಿ 10 ಪದಕಗಳನ್ನು ಗೆದ್ದಿರುವ ಲೆಫ್ಟಿನೆಂಟ್ ಕರ್ನಲ್ ಬ್ರಾರ್ ಹೇಳುತ್ತಾರೆ. "ರಾಷ್ಟ್ರೀಯ ಸ್ವಯಂ ಸೇವಕ ಸಂಘವೂ ಇರಲಿಲ್ಲ, ಅಥವಾ ಭಾರತೀಯ ಜನತಾ ಪಕ್ಷಕ್ಕೂ ಯಾವುದೇ ಅಸ್ತಿತ್ವ ಅಥವಾ ಯಾವುದೇ ಪಾತ್ರವಿರಲಿಲ್ಲ [ಆ ಯುದ್ಧಗಳಲ್ಲಿ]." ಎನ್ನುತ್ತಾರೆ 75 ವರ್ಷದ ಅನುಭವಿ ಹಿರಿಯ ಯೋಧ, ಅವರ 10 ಸದಸ್ಯರ ಕುಟುಂಬವು ಮೊಗಾ ಜಿಲ್ಲೆಯ ಖೋಟೆ ಗ್ರಾಮದಲ್ಲಿ 11 ಎಕರೆ ಭೂಮಿಯನ್ನು ಹೊಂದಿದ್ದು, 1965 ಮತ್ತು 1971ರ ಯುದ್ಧದಲ್ಲಿ ಹೋರಾಡಿದ್ದಾರೆ.

ಸಿಂಘುವಿನ ಈ ಪ್ರತಿಭಟನಾ ಸ್ಥಳದಲ್ಲಿ ಹಾಜರಿದ್ದ ಅನೇಕ ನಿವೃತ್ತ ಅಧಿಕಾರಿಗಳು ಇದುವರೆಗೆ  ಕೃಷಿಯಲ್ಲಿ ಸಕ್ರಿಯರಾಗಿಲ್ಲ, ಆದರೆ ಅವರು ರೈತರೊಂದಿಗೆ ಸಂಪೂರ್ಣವಾಗಿ ರೈತರಂತೆಯೇ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ.

Left: Lt. Col. Jagdish S. Brar fought in the 1965 and 1971 wars. Right: Col. Bhagwant S. Tatla says that India won those wars because of farmers
PHOTO • Amir Malik
Left: Lt. Col. Jagdish S. Brar fought in the 1965 and 1971 wars. Right: Col. Bhagwant S. Tatla says that India won those wars because of farmers
PHOTO • Amir Malik

ಎಡ: ಲೆಫ್ಟಿನೆಂಟ್ ಕರ್ನಲ್ ಜಗದೀಶ್ ಎಸ್. ಬ್ರಾರ್ 1965 ಮತ್ತು 1971ರ ಯುದ್ಧಗಳಲ್ಲಿ ಹೋರಾಡಿದ್ದರು. ಬಲ: ಕರ್ನಲ್ ಭಗವಂತ್ ಎಸ್.ತತ್ಲಾ ಅವರು ಭಾರತವು ಆ ಯುದ್ಧಗಳನ್ನು ಗೆದ್ದಿದ್ದು ರೈತರಿಂದಾಗಿ ಎನ್ನುತ್ತಾರೆ

ಲುಧಿಯಾನ ಜಿಲ್ಲೆಯ ಮುಲ್ಲನ್‌ಪುರ ಡಾಕಾ ಗ್ರಾಮದಲ್ಲಿ 5 ಎಕರೆ ಜಮೀನಿನ ಮಾಲೀಕರಾಗಿರುವ 78 ವರ್ಷದ ಪದಕ ವಿಜೇತ ಕರ್ನಲ್ ಭಗವಂತ್ ಎಸ್ ತತ್ಲಾ "ಈ ರೈತರಿಂದಾಗಿ ನಾವು 1965 ಮತ್ತು 1971ರಲ್ಲಿ ಪಾಕಿಸ್ತಾನದ ವಿರುದ್ಧ ಎರಡು ಪ್ರಮುಖ ಯುದ್ಧಗಳನ್ನು ಗೆದ್ದಿದ್ದೇವೆ. ನಮ್ಮ ಬದುಕು ಅವರ ಋಣದಲ್ಲಿದೆ ಹೀಗಾಗಿ ನಾವು ಅವರನ್ನು ಬೆಂಬಲಿಸುತ್ತೇವೆ" ಎಂದು ಹೇಳುತ್ತಾರೆ. ತತ್ಲಾ ಅವರ ದಾಖಲೆಯ ಪ್ರಕಾರ ಅವರು ಹವಲ್ದಾರ್‌ ಹುದ್ದೆಯಿಂದ ಕರ್ನಲ್‌ ಹುದ್ದೆಗೇರುವ ತನಕ ಸೈನ್ಯದಲ್ಲಿ ಸೇವೆ ಸಲ್ಲಿಸಿದ್ದಾರೆ ಎಂದು ತಿಳಿಸುತ್ತದೆ.

ಲೆಫ್ಟಿನೆಂಟ್ ಕರ್ನಲ್ ಬ್ರಾರ್, "ನೀವು ಯುವಕರು ನಿಮಗೆ ಹೇಗೆ ತಿಳಿದಿರಲು ಸಾಧ್ಯ! ರೈತರು ನಮಗೆ ಸಹಾಯ ಮಾಡಿದ ಕಾರಣ ಭಾರತ ಈ ಯುದ್ಧಗಳನ್ನು ಗೆದ್ದಿತು. 1965ರಲ್ಲಿ, ಪಾಕಿಸ್ತಾನವು ಪ್ಯಾಟನ್ ಟ್ಯಾಂಕ್‌ಗಳನ್ನು ಹೊಂದಿತ್ತು - ಆ ಸಮಯದಲ್ಲಿ ಅವು ವಿಶ್ವದ ಅತ್ಯಂತ ಸುಂದರವಾದ, ವೇಗವಾದ ಮತ್ತು ಹೊಸ ಟ್ಯಾಂಕ್‌ಗಳು. ನಮ್ಮಲ್ಲಿ ಏನೂ ಇರಲಿಲ್ಲ; ನಮ್ಮಲ್ಲಿ ಶೂಗಳೂ ಇರಲಿಲ್ಲ. ಅಲ್ಲದೆ, ಭಾರತೀಯ ಸೈನ್ಯವು ಮದ್ದುಗುಂಡುಗಳನ್ನು ಸಾಗಿಸಲು ಟ್ರಕ್ ಅಥವಾ ದೋಣಿಗಳನ್ನು ಹೊಂದಿರಲಿಲ್ಲ. ಸತ್ಯವನ್ನು ಹೇಳುವುದಾದರೆ, ಪಾಕಿಸ್ತಾನದ ಸಂಪೂರ್ಣ ಗಡಿ ಭಾಗವನ್ನು ಕಾಪಾಡುವಷ್ಟು ಶಕ್ತಿ ನಮ್ಮಲ್ಲಿ ಇರಲಿಲ್ಲ." ಎನ್ನುತ್ತಾರೆ.

ಅವರು ವಿವರಿಸುತ್ತಾರೆ, "ಅಂತಹ ಪರಿಸ್ಥಿತಿಯಲ್ಲಿ, ಪಂಜಾಬ್ ಜನರು ಮತ್ತು ರೈತರು ನಮಗೆ, 'ಇದರ ಬಗ್ಗೆ ಚಿಂತಿಸಬೇಡಿ. ಮುಂದುವರಿಯಿರಿ, ನಾವು ನಿಮಗೆ ಬೇಯಿಸಿದ ಆಹಾರವನ್ನು ಒದಗಿಸುತ್ತೇವೆ ಮತ್ತು ನಿಮ್ಮ ಮದ್ದುಗುಂಡು ವಾಹಕಗಳನ್ನು ನೋಡಿಕೊಳ್ಳುತ್ತೇವೆ' ಎಂದು ಭರವಸೆ ನೀಡಿದರು. ಪಂಜಾಬ್‌ನ ಎಲ್ಲಾ ಟ್ರಕ್‌ಗಳು ಈ ಕೆಲಸದಲ್ಲಿ ತೊಡಗಿಕೊಂಡು, ಮದ್ದುಗುಂಡುಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸುತ್ತಿದ್ದವು, ಹೀಗಾಗಿ ಸೈನ್ಯವು ಬದುಕುಳಿಯಲು ಸಾಧ್ಯವಾಯಿತು ಮತ್ತು ಭಾರತ ಯುದ್ಧವನ್ನು ಗೆದ್ದಿತು. 1971ರ ಪೂರ್ವ ಪಾಕಿಸ್ತಾನದಲ್ಲಿ, ಎಂದರೆ ಈಗಿನ ಬಾಂಗ್ಲಾದೇಶದ ಯುದ್ಧದಲ್ಲಿಯೂ ಹೀಗೇ ಆಯಿತು. ಸ್ಥಳೀಯ ಜನರು ನಮಗೆ ಸಹಾಯ ಮಾಡದೆ ಹೋಗಿದ್ದರೆ, ಗೆಲ್ಲುವುದು ಕಷ್ಟವಾಗುತ್ತಿತ್ತು. ಅಲ್ಲಿಯೂ ಸ್ಥಳೀಯ ಜನರು [ಗಡಿಯಲ್ಲಿ] ರೈತರು. "ವಾರೆಂಟ್ ಆಫೀಸರ್ (ನಿವೃತ್ತ) ಗುರ್ತೆಕ್ ಸಿಂಗ್ ವಿರ್ಕ್ ಅವರ ಕುಟುಂಬವು ವಿಭಜನೆಯ ಸಮಯದಲ್ಲಿ ಗುಜ್ರಾನ್‌ವಾಲಾದಿಂದ ಉತ್ತರ ಪ್ರದೇಶದ ಪಿಲಿಭಿತ್ ಜಿಲ್ಲೆಗೆ ವಲಸೆ ಬಂದಿತು - ಇದು ಕುಸ್ತಿಪಟುಗಳ ನಗರ ಎಂದು ಜನಪ್ರಿಯವಾಗಿದೆ. ಸುಮಾರು 18 ಸದಸ್ಯರನ್ನು ಹೊಂದಿರುವ ಅವರ ದೊಡ್ಡ, ಅವಿಭಕ್ತ ಕುಟುಂಬವು ಆ ಜಿಲ್ಲೆಯ ಪುರಾಣಪುರ ಗ್ರಾಮದಲ್ಲಿ ಸುಮಾರು 17 ಎಕರೆ ಭೂಮಿಯನ್ನು ಹೊಂದಿದೆ. ಅವರ ಅಜ್ಜ (ಬ್ರಿಟಿಷ್ ಆಳ್ವಿಕೆಯಲ್ಲಿ) ಮತ್ತು ಅವರ ತಂದೆ ಇಬ್ಬರೂ ಉಪ ಪೊಲೀಸ್ ವರಿಷ್ಠಾಧಿಕಾರಿಗಳು. ಅವರ ಸಹೋದರ ನಿವೃತ್ತ ಪೊಲೀಸ್ ಮಹಾನಿರ್ದೇಶಕರಾಗಿದ್ದು, ವಿರ್ಕ್ ಸ್ವತಃ ಭಾರತೀಯ ವಾಯುಸೇನೆಯಲ್ಲಿದ್ದರು.

Warrant Officer Gurtek Singh Virk (left) received the Chief of Air Staff Commendation for his service. He says his family hasn't forgotten its farming roots
Warrant Officer Gurtek Singh Virk (left) received the Chief of Air Staff Commendation for his service. He says his family hasn't forgotten its farming roots
PHOTO • Amir Malik

ವಾರಂಟ್ ಅಧಿಕಾರಿ ಗುರ್ತೆಕ್ ಸಿಂಗ್ ವಿರ್ಕ್ (ಎಡ) ಅವರ ಸೇವೆಗಾಗಿ ಚೀಫ್‌ ಆಫ್‌ ಏರ್‌ ಸ್ಟಾಫ್ ಕ‌ಮ್ಯಾಂಡೇಷನ್ ಪಡೆದಿದ್ದಾರೆ. ತಮ್ಮ ಕುಟುಂಬವು ತನ್ನ ಕೃಷಿ ಬೇರುಗಳನ್ನು ಮರೆತಿಲ್ಲ ಎಂದು ಅವರು ಹೇಳುತ್ತಾರೆ

"ಆದರೆ ನಮ್ಮ ಬೇರುಗಳು ಕೃಷಿ ಕುಟುಂಬಕ್ಕೆ ಸೇರಿದ್ದು ಎನ್ನುವುದನ್ನು ನಾವು ಎಂದಿಗೂ ಮರೆಯುವುದಿಲ್ಲ" ಎಂದು ಭಾರತದ ಮಾಜಿ ವಾಯುಪಡೆಯ ಅಧಿಕಾರಿ ಹೇಳುತ್ತಾರೆ. ಅವರು ಗಡಿಯ ಇನ್ನೊಂದು ಬದಿಯಲ್ಲಿ ಕೃಷಿಕರಾಗಿದ್ದರು ಎಂದು ಅವರು ಹೇಳುತ್ತಾರೆ. "ಮತ್ತು 70 ವರ್ಷಗಳ ನಂತರ ನಮಗೆ ಈ ಪರಿಸ್ಥಿತಿ ಬಂದಿದೆ - ಮಾನವೀಯ ಮೌಲ್ಯಗಳ ಬಗ್ಗೆ ಕಾಳಜಿಯಿಲ್ಲದ ಎಲ್ಲ ಉದ್ಯಮಿಗಳಿಗಾಗಿ ಭಾರತ ಸರ್ಕಾರವು ಈ ಕಾನೂನುಗಳನ್ನು ಜಾರಿಗೆ ತಂದಿದೆ, ಅದು ನಮ್ಮನ್ನು ಮತ್ತೊಮ್ಮೆ ಭೂಹೀನರನ್ನಾಗಿ ಮಾಡುತ್ತಿದೆ. ಈ ಉದ್ಯಮಿಗಳು ಕೇವಲ ತಮ್ಮ ಲಾಭದ ಕುರಿತಾಗಿ ಮಾತ್ರ ಯೋಚಿಸುತ್ತಾರೆ.”

“ಅಂದು ನಾವು ಯುದ್ಧ ಮಾಡುತ್ತಿದ್ದ ಸಮಯದಲ್ಲಿ, ನಮ್ಮ ಹೆತ್ತವರು ಕೃಷಿ ಮಾಡುತ್ತಿದ್ದರು. ಇಂದು ನಮ್ಮ ಮಕ್ಕಳು ಗಡಿಯಲ್ಲಿದ್ದಾರೆ, ಮತ್ತು ನಾವು ಕೃಷಿ ಮಾಡುತ್ತಿದ್ದೇವೆ” ಎಂದು ಲುಧಿಯಾನ ಜಿಲ್ಲೆಯ ಕರ್ನಲ್ ಜಸ್ವಿಂದರ್ ಸಿಂಗ್ ಗರಾಚಾ ಹೇಳುತ್ತಾರೆ. ಅವರು 1971ರ ಯುದ್ಧದಲ್ಲಿ ಭಾಗವಹಿಸಿದ್ದರು ಮತ್ತು ಅವರ ಹೆಸರಿನಲ್ಲಿ ಐದು ಪದಕಗಳನ್ನು ಹೊಂದಿದ್ದಾರೆ. ಇಂಜಿನಿಯರ್‌ ಕೂಡಾ ಆಗಿರುವ 70 ವರ್ಷದ ಗರಾಚಾ ರೈತನಾಗಿಯೆ ತನ್ನನ್ನು ಗುರುತಿಸಿಕೊಳ್ಳುತ್ತಾರೆ. ಅವರು ತನ್ನ ಮಗನ ಸಹಾಯದೊಂದಿಗೆ ಜಸ್ಸೋವಲ್ ಗ್ರಾಮದಲ್ಲಿ ಬೇಸಾಯ ಮಾಡುತ್ತಾರೆ.

“ಈಗ, ಪ್ರತಿದಿನ, ಚೀನಾ ಅಥವಾ ಪಾಕಿಸ್ತಾನ ನಮ್ಮ ಪ್ರದೇಶಗಳನ್ನು ಪ್ರವೇಶಿಸುತ್ತಿದೆ ಎಂದು ಸರ್ಕಾರ ಅಳುತ್ತಲೇ ಇದೆ. ಆ ದೇಶಗಳ ಗುಂಡುಗಳನ್ನು ಯಾರು ಎದುರಿಸುತ್ತಾರೆ? ಅಮಿತ್ ಶಾ ಅಥವಾ ಮೋದಿ? ಇಲ್ಲವೇ ಇಲ್ಲ. ನಮ್ಮ ಮಕ್ಕಳೇ ಅವರನ್ನು ಎದುರಿಸಬೇಕಿದೆ”ಎಂದು ಲೆಫ್ಟಿನೆಂಟ್ ಕರ್ನಲ್ ಬ್ರಾರ್ ಹೇಳುತ್ತಾರೆ.

"ನಾನು ನರೇಂದ್ರ ಮೋದಿಯನ್ನು ಬೆಂಬಲಿಸುತ್ತಿದ್ದೆ" ಎಂದು ವಿಷಾದದಿಂದ ಲೆಫ್ಟಿನೆಂಟ್ ಕರ್ನಲ್ ಎಸ್.ಎಸ್ ಸೋಹಿ ಹೇಳುತ್ತಾರೆ, "ಆದರೆ ಈ ಹೆಜ್ಜೆಯು ಸಂಪೂರ್ಣವಾಗಿ ತಪ್ಪಾಗಿದೆ. ಸರ್ಕಾರ ಕೃಷಿಯನ್ನು ಸಂಪೂರ್ಣವಾಗಿ ನಾಶಪಡಿಸುತ್ತಿದೆ." ಸೋಹಿ ಪಂಜಾಬ್‌ನ ಮಾಜಿ ಸೈನಿಕರ ಕುಂದುಕೊರತೆ ಕೋಶದ ಅಧ್ಯಕ್ಷರಾಗಿದ್ದು, ಈ ಸಂಘಟನೆಯು ನಿವೃತ್ತ ಯೋಧರ ಸಮಸ್ಯೆಗಳನ್ನು ಬಗೆಹರಿಸುವುದು ಮತ್ತು ಹುತಾತ್ಮರಾದ ಸೈನಿಕರ ವಿಧವೆಯರಿಗೆ ಸಹಾಯ ಮಾಡುವಂತಹ ಕೆಲಸಗಳನ್ನು ಮಾಡುತ್ತದೆ.

ಲೆಫ್ಟಿನೆಂಟ್ ಕರ್ನಲ್ ಸೋಹಿ 1965 ಮತ್ತು 1971ರ ಯುದ್ಧಗಳಲ್ಲಿ ಭಾಗವಹಿಸಿದ್ದಾರೆ. ಅವರು  ತುರ್ತು ಮತ್ತು ಶಾಂತಿ ಕಾರ್ಯಾಚರಣೆಗಳಲ್ಲಿ ಅವರ ಪಾತ್ರಕ್ಕಾಗಿ ಯುಎನ್ ಪದಕ ಸೇರಿದಂತೆ 12 ಪದಕಗಳನ್ನು ಗೆದ್ದಿದ್ದಾರೆ. ಅವರ ನಾಲ್ಕು ಸದಸ್ಯರ ಕುಟುಂಬವು ಹರಿಯಾಣದ ಕರ್ನಾಲ್ ಜಿಲ್ಲೆಯ ನಿಲೋಖೇರಿ ಗ್ರಾಮದಲ್ಲಿ 8 ಎಕರೆ ಭೂಮಿಯನ್ನು ಹೊಂದಿದ್ದು, ಕೆಲವು ವರ್ಷಗಳ ಹಿಂದೆ ಅವರು ಪಂಜಾಬ್‌ನ ಮೊಹಾಲಿಯಲ್ಲಿ ನೆಲೆಸುವ ಸಲುವಾಗಿ ಅದನ್ನು ಮಾರಾಟ ಮಾಡಿದರು.

Left: Lt. Col. S. S. Sohi says, 'The government is ruining farming altogether'. Right: The war heroes say they are angry at the demonisation of farmers
PHOTO • Amir Malik
Left: Lt. Col. S. S. Sohi says, 'The government is ruining farming altogether'. Right: The war heroes say they are angry at the demonisation of farmers
PHOTO • Amir Malik

'ಸರ್ಕಾರ ಕೃಷಿಯನ್ನು ಸಂಪೂರ್ಣವಾಗಿ ನಾಶಪಡಿಸುತ್ತಿದೆ', ಲೆಫ್ಟಿನೆಂಟ್ ಕರ್ನಲ್ ಎಸ್.ಎಸ್. ಸೋಹಿ (ಎಡ) ಹೇಳುತ್ತಾರೆ. ರೈತರು ಅಪಪ್ರಚಾರಕ್ಕೊಳಗಾಗಿದ್ದಾರೆ ಎಂದು ಯುದ್ಧ ವೀರರು ಕೋಪಗೊಂಡಿದ್ದಾರೆ

"ರಾಜಕಾರಣಿಗಳು ಕಾರ್ಪೊರೇಟ್ ಸಂಸ್ಥೆಗಳಿಂದ ಸಾಕಷ್ಟು ಹಣವನ್ನು ತೆಗೆದುಕೊಂಡು ಆ ಹಣದಿಂದ ಸ್ಪರ್ಧಿಸಿ ಈಗ ಆ ಹಣವನ್ನು ಈ ಕಾನೂನುಗಳ ರೂಪದಲ್ಲಿ ಹಿಂದಿರುಗಿಸಲು ಬಯಸುತ್ತಿದ್ದಾರೆ." ಎನ್ನುವುದು ಅವರ ನಂಬಿಕೆ. "ದುಃಖಕರ ಸಂಗತಿಯೆಂದರೆ, ಭಾರತದ ಮುಖ್ಯ ಆಡಳಿತಗಾರರು ವ್ಯಾಪಾರಿ ಸಮುದಾಯದಿಂದ ಬಂದವರು" ಎಂದು ಅವರು ಹೇಳುತ್ತಾರೆ. ಆದ್ದರಿಂದಲೇ, ಅವರು ಕೇವಲ ವ್ಯಾಪಾರಿ ಕುಟುಂಬಗಳ ಕುರಿತಾಗಿ ಮಾತ್ರ ಕಾಳಜಿ ವಹಿಸುತ್ತಾರೆ."

"ಕಾರ್ಪೊರೇಟ್‌ಗಳು ತಮ್ಮ ವಿರುದ್ಧ ಯಾರಾದರೂ ಮಾತನಾಡುವುದನ್ನು ಬಯಸುವುದಿಲ್ಲ" ಎಂದು ಲೆಫ್ಟಿನೆಂಟ್ ಕರ್ನಲ್ ಬ್ರಾರ್ ಹೇಳುತ್ತಾರೆ. "ಮತ್ತು ಕಾನೂನುಗಳು ರೈತರ ಅನುಕೂಲಕ್ಕಾಗಿ ಎಂದು ಹೇಳುವ ಮೂಲಕ ಪ್ರಧಾನಿ ನಿಮ್ಮನ್ನು ಮರುಳು ಮಾಡುತ್ತಿದ್ದಾರೆ." ನಾನು ನಿಮಗೆ ಬಿಹಾರದ ಉದಾಹರಣೆ ನೀಡುತ್ತೇನೆ. ಆ ಬಡ ರಾಜ್ಯವು 14 ವರ್ಷಗಳ ಹಿಂದೆ ಮಂಡಿ ವ್ಯವಸ್ಥೆಯನ್ನು ಕೊನೆಗೊಳಿಸಿತು [ಭಯಾನಕ ಫಲಿತಾಂಶಗಳೊಂದಿಗೆ]." ಅವರು ಹೇಳುತ್ತಾರೆ, "ನನ್ನ 11 ಎಕರೆ ಭೂಮಿಯನ್ನು ನನ್ನ ಹಳ್ಳಿಯಲ್ಲಿ ಕೃಷಿ ಮಾಡಲು ನನ್ನ ಸಹೋದರನಿಗೆ ನೀಡಿದ್ದೇನೆ. ನನ್ನ ವಯಸ್ಸಿನ ಕಾರಣ ನಾನು ಇನ್ನು ಮುಂದೆ ಕೃಷಿ ಮಾಡಲು ಸಾಧ್ಯವಿಲ್ಲ."

"ತಮ್ಮ ರಾಜ್ಯದಲ್ಲಿ 10 ಎಕರೆ ಭೂಮಿಯನ್ನು ಹೊಂದಿರುವ ಬಿಹಾರಿ ರೈತರು ಪಂಜಾಬ್‌ನ 5 ಎಕರೆ ಕೃಷಿಭೂಮಿ ಹೊಂದಿರುವ ರೈತರ ಬಳಿ ಕೃಷಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ" ಎಂದು ಲೆಫ್ಟಿನೆಂಟ್ ಕರ್ನಲ್ ಬ್ರಾರ್ ಹೇಳುತ್ತಾರೆ. "ಭೂಮಾಲೀಕ ರೈತರನ್ನು ಭಿಕ್ಷೆ ಬೇಡುವಂತಹ ಪರಿಸ್ಥಿತಿಗಿಂತ ಹೆಚ್ಚು ನಾಚಿಕೆಗೇಡು ಯಾವುದು? ಅವರನ್ನು ಭೂಹೀನರನ್ನಾಗಿ ಮಾಡುವುದು,”  ಈ ಕಾನೂನುಗಳ ಪರಿಣಾಮ ಇದೇ ಆಗಲಿದೆ ಎಂದು ಅವರು ಹೇಳುತ್ತಾರೆ.

ಇದು ನಿಜಕ್ಕೂ ಹೀಗಾಬಹುದೇ ಎಂದು ನಾನು ಅಖಿಲ ಭಾರತ ವೇದಿಕೆಯ ಶಿಕ್ಷಣ ಹಕ್ಕು ಮತ್ತು ಲುಧಿಯಾನದ ಶಾಹಿದ್ ಭಗತ್ ಸಿಂಗ್ ಕ್ರಿಯೇಟಿವಿಟಿ ಸೆಂಟರ್‌ನ ಅಧ್ಯಕ್ಷ ಪ್ರೊಫೆಸರ್ ಜಗ್ಮೋಹನ್ ಸಿಂಗ್ ಅವರನ್ನು ಕೇಳಿದೆ. "ಹೌದು, ಈ ಕಾನೂನುಗಳನ್ನು ರದ್ದುಗೊಳಿಸದಿದ್ದರೆ, ಇದೇ ನಮ್ಮ ಭವಿಷ್ಯವಾಗಿರುತ್ತದೆ. ಕಾರ್ಪೊರೇಟ್‌ಗಳ ಹಿತಾಸಕ್ತಿ ಹೆಚ್ಚಾದಲ್ಲೆಲ್ಲಾ ಅವರು ರೈತರನ್ನು ತಮ್ಮ ಭೂಮಿಯಿಂದ ಹೊರಹಾಕುತ್ತಾರೆ. ಇದಕ್ಕೆ ಒಂದು ಪ್ರಮುಖ ಉದಾಹರಣೆಯೆಂದರೆ ಬ್ರೆಜಿಲ್, ಅಲ್ಲಿ 1980ರ ದಶಕದಲ್ಲಿ ರೈತರು ಈ ರೀತಿ ಭೂ ಕಬಳಿಕೆ ವಿರುದ್ಧ ದೊಡ್ಡ ಆಂದೋಲನವನ್ನು ಪ್ರಾರಂಭಿಸಿದರು,” ಎಂದು ಅವರು ನನಗೆ ಹೇಳಿದರು.

Left: Brig. S. S. Gill calls the government's use of force on peacefully protesting farmers as 'pathetic'. Right: Col. Jaswinder Garcha now farms on his land in Ludhiana's Jassowal village
Left: Brig. S. S. Gill calls the government's use of force on peacefully protesting farmers as 'pathetic'. Right: Col. Jaswinder Garcha now farms on his land in Ludhiana's Jassowal village
PHOTO • Amir Malik

ಎಡ: ಶಾಂತಿಯುತವಾಗಿ ಪ್ರತಿಭಟಿಸುತ್ತಿರುವ ರೈತರ ಮೇಲೆ ಸರ್ಕಾರ ಬಲವನ್ನು ಬಳಸುವುದನ್ನು 'ವಿಷಾದನೀಯ' ಎಂದು ಬ್ರಿಗೇಡಿಯರ್. ಎಸ್.ಎಸ್. ಗಿಲ್‌ ಹೇಳುತ್ತಾರೆ ಬಲ: ಕರ್ನಲ್ ಜಸ್ವಿಂದರ್ ಗರ್ಚಾ ಪ್ರಸ್ತುತ ಲುಧಿಯಾನದ ಜಸ್ಸೋವಲ್ ಗ್ರಾಮದಲ್ಲಿರುವ ತನ್ನ ಜಮೀನಿನಲ್ಲಿ

"ನಾವು ಈ ಕಾನೂನುಗಳನ್ನು ಬೆಂಬಲಿಸುತ್ತೇವೆ" ಎಂದು ಹೇಳುತ್ತಿರುವ ಕಾಲ್ಪನಿಕ ರೈತರನ್ನು ಜನರೆದುರು ಮೂಲಕ ಸರ್ಕಾರ ನಮ್ಮನ್ನು ವಿಭಜಿಸಲು ಪ್ರಯತ್ನಿಸುತ್ತಿದೆ. ಯಾವುದೇ ರೈತ ನಿಜವಾಗಿಯೂ ಅವರನ್ನು ಬೆಂಬಲಿಸಲು ಸಾಧ್ಯವವೇ ಎನ್ನುವುದು ನನಗೆ ಗೊತ್ತಿಲ್ಲ,” ಎಂದು ಬ್ರಿಗೇಡಿಯರ್ ಗಿಲ್ ಹೇಳುತ್ತಾರೆ.

ಪ್ರತಿಭಟನಾಕಾರರನ್ನು ವಿಭಜಿಸಲು ಸಹ ಪ್ರಯತ್ನಿಸಬಹುದು, "ನೀವು ಸಿಖ್ ಅಥವಾ ಮುಸ್ಲಿಂ ಅಥವಾ ಹಿಂದೂ' ಹೀಗೆ ಧರ್ಮಾಧಾರಿತವಾಗಿ ಅಥವಾ ಪ್ರಾದೇಶಿಕವಾಗಿ,' ನೀವು ಪಂಜಾಬಿ, ಹರಿಯಾನ್ವಿ ಅಥವಾ ಬಿಹಾರಿ 'ಎಂದು ವಿಂಗಡಿಸಬಹುದು." ಎಂದು ಕರ್ನಲ್ ಗರಾಚಾ ಎಚ್ಚರಿಸುತ್ತಾರೆ

ಲೆಫ್ಟಿನೆಂಟ್ ಕರ್ನಲ್ ಬ್ರಾರ್ ಅವರು ಹೀಗೆ ಹೇಳುತ್ತಾರೆ, “ಹರಿಯಾಣ ಮತ್ತು ಪಂಜಾಬ್ ಜನರನ್ನು ತಮ್ಮ ನಡುವಿನ ಹಳೆಯ ನೀರಿನ ವಿವಾದವನ್ನು ಬಳಸಿಕೊಂಡು ಪರಸ್ಪರರ ವಿರುದ್ಧ ಹೊಡೆದಾಟಕ್ಕೆ ಇಳಿಸಲು ಸರ್ಕಾರ ಪ್ರಯತ್ನಿಸಬಹುದು. ಆದರೆ ಎರಡೂ ರಾಜ್ಯಗಳ ಜನರು ಜಮೀನು ಇಲ್ಲದಿದ್ದರೆ ಇಲ್ಲಿನ ನೀರಿನ ಬಳಕೆ ಯಾವುದಕ್ಕಾಗಿ ಎಂದು ಅರ್ಥಮಾಡಿಕೊಳ್ಳಬಲ್ಲಷ್ಟು ಬುದ್ಧಿವಂತರಿದ್ದಾರೆ.”

ಈ ಹಿರಿಯ ಯೋಧರು ಮತ್ತು ಯುದ್ಧ ವೀರರು ದೇಶದ ರಕ್ಷಣೆಯಲ್ಲಿ ತಮ್ಮ ಪಾತ್ರಕ್ಕಾಗಿ 50ಕ್ಕೂ ಹೆಚ್ಚು ಪದಕಗಳನ್ನು ಗೆದ್ದಿದ್ದಾರೆ. ಸರ್ಕಾರವು ಇದೇ ರೀತಿ ಅಚಲ ಮತ್ತು ಕಾಳಜಿರಹಿತವಾಗಿ ವರ್ತಿಸಿದರೆ, ಅವರು ತಮ್ಮ ಪದಕಗಳನ್ನು ಸಶಸ್ತ್ರ ಪಡೆಗಳ ಸರ್ವೋಚ್ಚ ಕಮಾಂಡರ್‌ ಆಗಿರುವ ಭಾರತದ ರಾಷ್ಟ್ರಪತಿಗೆ ಹಿಂದಿರುಗಿಸಲು ಸಿದ್ಧರಿದ್ದಾರೆ.

"ನನ್ನ ಏಕೈಕ ಆಸೆ ಮತ್ತು ಪ್ರಾರ್ಥನೆಯೆಂದರೆ ಸರ್ಕಾರದ ಒಳ್ಳೆಯತನ ಮೇಲುಗೈ ಸಾಧಿಸಬೇಕು ಮತ್ತು ಅದು ಈ ಕಾನೂನುಗಳನ್ನು ರದ್ದುಗೊಳಿಸಿ ರೈತರನ್ನು ಮನೆಗೆ ಕಳುಹಿಸಬೇಕು" ಎನ್ನುವುದಾಗಿ ಬ್ರಿಗೇಡಿಯರ್ ಗಿಲ್ ಹೇಳುತ್ತಾರೆ." "ಪ್ರತಿಭಟನೆಯ ಕೊನೆ ಅದೇ ಆಗಿರುತ್ತದೆ."

ಅನುವಾದ: ಶಂಕರ ಎನ್. ಕೆಂಚನೂರು

Amir Malik

Amir Malik is an independent journalist, and a 2022 PARI Fellow.

Other stories by Amir Malik
Translator : Shankar N Kenchanuru

Shankar N Kenchanuru is a poet and freelance translator. He can be reached at [email protected]

Other stories by Shankar N Kenchanuru