ಅವರ ಕೈಗಳನ್ನು ಬಂಧಿಸಲಾಗಿದೆ ಮತ್ತು ಕುತ್ತಿಗೆಗೆ ಹಾಕಿರುವ ಚೈನ್‌ ಕಾಲಿನವರೆಗೂ ಬಂದಿದೆ. ಕಪ್ಪು ಪಟ್ಟೆಯಿರುವ ಅವರ ಕುರ್ತಾ ಅವರನ್ನು ಒಬ್ಬ ಟಿಪಿಕಲ್‌ ಜೈಲು ಖೈದಿಯಂತೆಯೇ ಕಾಣುವಂತೆ ಮಾಡಿದೆ.

ಆದರೆ 42 – ವರ್ಷದ ಕಬಲ್‌ ಸಿಂಗ್‌ ತಾವುದೇ ಅಪರಾಧಕ್ಕಾಗಿ ಶಿಕ್ಷೆಗೆ ಒಳಪಟ್ಟವರಲ್ಲ. ಅವರ ಸರಪಳಿ ಸ್ವಯಂ ತೊಡಿಸಿಕೊಂಡಿದ್ದು. ಅವರು ಪಂಜಾಬಿನ ಫಝಿಲ್ಕಾ ಜಿಲ್ಲೆಯ ರುಕಾನ್‌ಪುರದ (ಖುಯ್‌ಕೇರ ಎಂದೂ ಕರೆಯಲಾಗುತ್ತದೆ) ಗ್ರಾಮದ ಒಬ್ಬ ರೈತ.

ಇತ್ತೀಚಿನ ಮೂರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿರುವ ಲಕ್ಷಾಂತರ ರೈತರಲ್ಲಿ ಇವರೂ ಸೇರಿದ್ದಾರೆ, ಈ ಕಾನೂನುಗಳನ್ನು ಮೊದಲು 2020ರ ಜೂನ್ 5ರಂದು ಸುಗ್ರೀವಾಜ್ಞೆಗಳಾಗಿ ಹೊರಡಿಸಲಾಯಿತು, ನಂತರ ಸೆಪ್ಟೆಂಬರ್ 14ರಂದು ಸಂಸತ್ತಿನಲ್ಲಿ ಮಸೂದೆಗಳಾಗಿ ಪರಿಚಯಿಸಲಾಯಿತು ಮತ್ತು ಆ ತಿಂಗಳ 20ರೊಳಗೆ ಕಾಯಿದೆಗಳನ್ನಾಗಿಸಲು ಆತುರ ತೋರಿಸಲಾಯಿತು.

ಹಾಗಾದರೆ ಸ್ವಯಂ ಪ್ರೇರಿತ ಸರಪಳಿ ಬಂಧನ ಏಕೆ?

"ರೈತರು ತಮ್ಮ ಹಕ್ಕುಗಳಿಗಾಗಿ ಇಷ್ಟು ದಿನ ಒತ್ತಾಯಿಸುತ್ತಿರುವುದನ್ನು ನೋಡಿದಾಗ, ಅವರ ನೋವನ್ನು ನನ್ನಿಂದ ಸಹಿಸಲಾಗಲಿಲ್ಲ. ನನ್ನ ದೇಹದ ಸುತ್ತಲೂ ನೀವು ನೋಡುವ ಈ ಸರಪಳಿಯು ಅವರ ಸಂಕಟದ ಪ್ರತಿಬಿಂಬವಾಗಿದೆ. ಅವರು ಎಷ್ಟು ಸಂಕಟದಲ್ಲಿದ್ದಾರೋ ಅಷ್ಟೇ ಸಂಕಟ ನನಗೂ ಇದೆ”

"ನನ್ನ ಮೈಮೇಲೆ ನೀವು ನೋಡುತ್ತಿರುವ ಸರಪಳಿ, ನಮ್ಮೆಲ್ಲರನ್ನೂ ಸುತ್ತುವರೆದಿದೆ, ನೀವು ಅದನ್ನು ಕಂಡುಕೊಳ್ಳಬೇಕಿದೆ." ಕಬಲ್ ಸಿಂಗ್ ಮೂರು ಜನಪ್ರಿಯವಲ್ಲದ ಕಾನೂನುಗಳನ್ನು ನಮ್ಮೆಲ್ಲರನ್ನು ಬಂಧಿಸಿರುವ ಆ ಸರಪಳಿಗಳಲ್ಲಿನ ಇತ್ತೀಚಿನ ಕೊಂಡಿಗಳಾಗಿ ನೋಡುತ್ತಾರೆ.

ವೀಡಿಯೊ ನೋಡಿ: ʼನಾವೆಲ್ಲ ರೈತರೂ ಬಂಧಿತರೆನ್ನುವ ಭಾವವನ್ನು ಅನುಭವಿಸುತ್ತಿದ್ದೇವೆʼ

ಪ್ರತಿಭಟನಾ ಸ್ಥಳಗಳಲ್ಲಿಯೇ ದೊಡ್ಡದಾದ ದೆಹಲಿ ಗಡಿಯಲ್ಲಿರುವ ಹರಿಯಾಣದ ಸೋನಿಪತ್ ಜಿಲ್ಲೆಯ ಸಿಂಘುವಿನಲ್ಲಿ ಅವರು ನಮ್ಮೊಂದಿಗೆ ಮಾತನಾಡುತ್ತಿದ್ದರು.

"ದೇವರು ನಮ್ಮನ್ನು ನಮ್ಮನ್ನು ಭೂಹೀನ ರೈತರನ್ನಾಗಿ ಪರಿವರ್ತಿಸುವ ಕಾರ್ಪೊರೇಟ್ ಸಂಸ್ಥೆಗಳಿಂದ ರಕ್ಷಿಸುತ್ತಾನೆ. ನಾವು ಕೃಷಿ ಮಾಡಲು ನಮ್ಮ ಸ್ವಂತ ಭೂಮಿಯನ್ನು ಹೊಂದಿರುವಾಗ ಯಾಕೆ ಕಾರ್ಮಿಕರಾಗಲು ಬಯಸುತ್ತೇವೆ? ದೊಡ್ಡ ಕಾರ್ಪೊರೇಟ್ ಸಂಸ್ಥೆಗಳಿಗೆ ನಮ್ಮ ಭೂಮಿಯನ್ನು ನಿಯಂತ್ರಿಸಲು ನಾವು ಹೇಗೆ ಅವಕಾಶ ನೀಡಬಹುದು? ” ಅವರು ಕೇಳುತ್ತಾರೆ.

“ನನ್ನ ಸರಪಳಿಗಳ ಬೀಗದ ಕೀಲಿಯು ಅಂಬಾನಿ ಮತ್ತು ಅದಾನಿಯ ಕೈಯಲ್ಲಿದೆ. ಮೋದಿ ಸರ್ಕಾರ ಅವರಿಂದ ಆ ಕೀಲಿಯನ್ನು ತೆಗೆದುಕೊಂಡು ಈ ಬೀಗ ತೆರೆಯಬೇಕು. ದಯವಿಟ್ಟು ಈ ಕಾನೂನುಗಳನ್ನು ರದ್ದುಪಡಿಸಬೇಕೆಂದು ನಾನು ಪ್ರಧಾನ ಮಂತ್ರಿಯನ್ನು ಕೈ ಮುಗಿದು ವಿನಂತಿಸುತ್ತೇನೆ. ”

ರೈತರು ವಿರೋಧಿಸುತ್ತಿರುವ ಮೂರು ಕಾನೂನುಗಳೆಂದರೆ: ರೈತ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರೋತ್ಸಾಹ ಮತ್ತು ನೆರವು) ಕಾಯ್ದೆ, 2020 ; ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ 2020ರ ಒಪ್ಪಂದ ಮಸೂದೆ ; ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ, 2020. ಈ ಕಾನೂನುಗಳು ಪ್ರತಿ ಭಾರತೀಯರ ಮೇಲೆ ಪರಿಣಾಮ ಬೀರಲಿರುವುದರಿಂದ ಸಹ ಅವುಗಳನ್ನು ಟೀಕಿಸಲಾಗುತ್ತಿದೆ. ದೇಶದ ಎಲ್ಲಾ ನಾಗರಿಕರ ಕಾನೂನು ನೆರವು ಪಡೆಯುವ ಹಕ್ಕನ್ನು ಈ ಕಾನೂನುಗಳು ಕಸಿದುಕೊಳ್ಳುತ್ತವೆ, ಇದು ಭಾರತದ ಸಂವಿಧಾನದ 32ನೇ ವಿಧಿಯನ್ನು ದುರ್ಬಲಗೊಳಿಸುತ್ತದೆ.

ಈ ಹೊಸ ಕಾಯಿದೆಗಳು ಕೃಷಿಕರನ್ನು ಕೋಪಗೊಳಿಸಿವೆ, ಅವರು ಈ ಕಾನೂನುಗಳು ತಮ್ಮ ಜೀವನೋಪಾಯಕ್ಕೆ ವಿನಾಶಕಾರಿ ಎಂದು ನೋಡುತ್ತಾರೆ ಏಕೆಂದರೆ ಅವು ದೊಡ್ಡ ಕಾರ್ಪೊರೇಟ್ ಸಂಸ್ಥೆಗಳಿಗೆ ಜಾಗವನ್ನು ಇನ್ನಷ್ಟು ವಿಸ್ತರಿಸುತ್ತವೆ ಮತ್ತು ರೈತರು ಮತ್ತು ಕೃಷಿಯ ಮೇಲೆ ಇನ್ನೂ ಹೆಚ್ಚಿನ ನಿಯಂತ್ರಣವನ್ನು ನೀಡುತ್ತವೆ. ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ), ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು (ಎಪಿಎಂಸಿ), ಸರಕಾರಿ ಖರೀದಿ ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಈ ಕಾನೂನುಗಳು ಕೃಷಿಕರಿಗೆ ನೀಡುವ ಬೆಂಬಲದ ಮುಖ್ಯ ರೂಪಗಳನ್ನು ಹಾನಿಗೊಳಿಸುತ್ತವೆ.

"ನೋವಿನ ವಿಷಯ ಬಂದಾಗ, ಈ ಐದು ಕಿಲೋಗ್ರಾಂಗಳಷ್ಟು ಸರಪಳಿಯನ್ನು ದಿನವಿಡೀ ಧರಿಸಿಕೊಳ್ಳುವುದರಿಂದ ನನಗೆ ದೇಹ ನಿಶ್ಚೇಷ್ಟಿತವಾದ ಅನುಭವವಾಗುತ್ತದೆ. ಆದರೆ ರೈತರ ನೋವಿಗೆ ಹೋಲಿಸಿದರೆ ನನ್ನ ದೈಹಿಕ ನೋವು ಏನೂ ಅಲ್ಲ.” ಎಂದು ಕಬಲ್‌ ಸಿಂಗ್‌ ಹೇಳುತ್ತಾರೆ.
Holding the five-kilo chain throughout the day makes Kabal Singh go numb. But it's nothing compared to the farmers' pain, he says
PHOTO • Amir Malik
Holding the five-kilo chain throughout the day makes Kabal Singh go numb. But it's nothing compared to the farmers' pain, he says
PHOTO • Amir Malik

ದಿನವಿಡೀ ಐದು ಕಿಲೋ ಸರಪಳಿಯನ್ನು ಹಾಕಿಕೊಳ್ಳುವುದರಿಂದ ಕಬಲ್ ಸಿಂಗ್ ನಿಶ್ಚೇಷ್ಟಿತನಾಗುತ್ತಾರೆ. ಆದರೆ ರೈತರ ನೋವಿಗೆ ಹೋಲಿಸಿದರೆ ಇದು ಏನೂ ಅಲ್ಲವೆಂದು ಅವರು ಹೇಳುತ್ತಾರೆ

ನಮ್ಮೊಂದಿಗೆ ಮಾತನಾಡುವಾಗ ತನ್ನ ಕೈಗಳನ್ನು ಮೇಲಕ್ಕೆ ಹಿಡಿದಿಟ್ಟುಕೊಂಡಿದ್ದರು. ದಿನದ ಬಹುಪಾಲು ಸಮಯ ಆಗಾಗ್ಗೆ ಹಾಗೆ ಮಾಡುವುದರಿಂದ ಆಯಾಸ ಮತ್ತು ಒತ್ತಡ ಉಂಟಾಗುತ್ತದೆ. "ನಾನು ಬೆಳಿಗ್ಗೆ 5 ಗಂಟೆಗೆ ಚೈನ್ ಹಾಕಿಕೊಳ್ಳುತ್ತೇನೆ ಮತ್ತು ಸೂರ್ಯ ಮುಳುಗುವ ತನಕ ನನ್ನನ್ನು ಈ ರೀತಿ ಬಂಧಿಸಿಕೊಂಡಿರುತ್ತೇನೆ.”

ಎರಡೂವರೆ ವರ್ಷಗಳ ಹಿಂದೆ ಐದು ಎಕರೆ ಭೂಮಿಯನ್ನು ಹೊಂದಿದ್ದ ಈ ರೈತ, “ನನ್ನ ಹಳ್ಳಿಯಲ್ಲಿ ಈ ಸರಪಳಿ ಸಿಕ್ಕಿತು” ಎಂದು ಹೇಳುತ್ತಾರೆ. ಈಗ ಅವರು ಕೇವಲ ಮೂರು ಎಕರೆಗಳನ್ನು ಹೊಂದಿದ್ದಾರೆ, ಅದರಲ್ಲಿ ಅವರು ಮುಖ್ಯವಾಗಿ ಗೋಧಿ ಮತ್ತು ಹತ್ತಿಯನ್ನು ಬೆಳೆಯುತ್ತಾರೆ. ತನ್ನ ಮಗಳು ಮತ್ತು ಅನಾರೋಗ್ಯ ಹೊಂದಿರುವ ತಂದೆಯ ವೈದ್ಯಕೀಯ ಚಿಕಿತ್ಸೆಗಾಗಿ ಹಣವನ್ನು ಒಟ್ಟು ಮಾಡಲು ಅವರು ಎರಡು ಎಕರೆ ಭೂಮಿ ಮಾರಾಟ ಮಾಡಬೇಕಾಯಿತು.

ಆರೋಗ್ಯ ಸೇವೆಯ ಖರ್ಚುಗಳಿಗಾಗಿ ಭೂಮಿಯನ್ನು ಮಾರಿ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿದರು. "ಆದರೆ" ಬಹಳ ದುಃಖದಿಂದ "ಅವರನ್ನು ಉಳಿಸಿಕೊಳ್ಳಲಾಗಲಿಲ್ಲ" ಎಂದು ಹೇಳುತ್ತಾರೆ. ಮೊದಲಿಗೆ ಅವರ 20 ವರ್ಷದ ಮಗಳು ಕಾಮಾಲೆ ರೋಗದಿಂದ ಮರಣ ಹೊಂದಿದರು. ಅದರ ನಂತರ ಅವರ ತಂದೆ ದೀರ್ಘಕಾಲದ ಅನಾರೋಗ್ಯದಿಂದಾಗಿ ಮೃತಪಟ್ಟರು. ಅವರು ಹೊಂದಿರುವ ಎರಡು ಹಸುಗಳ ಹಾಲಿನಿಂದ ಬರುವ ಆದಾಯವಿಲ್ಲದೆ ಹೋಗಿದ್ದರೆ ಸ್ವತಃ ತಾನು ಹೇಗೆ ಬದುಕುತ್ತಿದ್ದೆನೆನ್ನುವುದು ಅವರಿಗೆ ತಿಳಿದಿಲ್ಲ.

“ನನ್ನ ತಾಯಿ ಬಲ್ಬೀರ್ ಕೌರ್ ಪ್ರತಿಭಟನೆಯಲ್ಲಿ ಸೇರಲು ಬರುತ್ತಿದ್ದರು. ಆದರೆ ಇಲ್ಲಿಗೆ ತಲುಪುವಾಗ ಆಕೆ ಜಾರಿ ಬಿದ್ದರು (ಇತರರಂತೆ ಟ್ರಾಕ್ಟರ್-ಟ್ರಾಲಿಯಲ್ಲಿ ಪ್ರಯಾಣಿಸಿ) ಮತ್ತು ಅವರು ತನ್ನ ಸೊಂಟ-ಮೂಳೆಯನ್ನು ಮುರಿದುಕೊಂಡಿದ್ದಾರೆಂದು ತಿಳಿದುಬಂದಿದೆ" ಎಂದು ಅವರು ಹೇಳುತ್ತಾರೆ. "ನನ್ನ ಪೂರ್ವಜರು ರೈತರು. ಸರ್ಕಾರ ನಮಗೆ ಮಾಡಿರುವ ಅನ್ಯಾಯವನ್ನು ನಾನು ನೋಡುತ್ತಿದ್ದೇನೆ. ಅದರ ವಿರುದ್ಧವೇ ನಾವು ಹೋರಾಡುತ್ತಿದ್ದೇವೆ. ನಮ್ಮ ಮಕ್ಕಳು ಇದನ್ನು ಎದುರಿಸಬೇಕೆಂದು ನಾನು ಬಯಸುವುದಿಲ್ಲ.”

ಭಾರತದ ಗಡಿಯಲ್ಲಿರುವ ಸೈನಿಕರು ರೈತರ ಮಕ್ಕಳು ಎಂದು ಅವರು ಹೇಳುತ್ತಾರೆ. “ಅವರು ಹುತಾತ್ಮರಾದಾಗ, ನೀವು ಅವರನ್ನು ವೀರರನ್ನಾಗಿ ಮಾಡುತ್ತೀರಿ. ಮತ್ತು ಅದು ಸರಿ. ಆದರೆ ನಾವು ಇಲ್ಲಿ ನಮ್ಮ ಹಕ್ಕುಗಳಿಗಾಗಿ ಒತ್ತಾಯಿಸುತ್ತಿರುವಾಗ, ನಮ್ಮನ್ನು ಅಪರಾಧಿಗಳನ್ನಾಗಿ ನೋಡಲಾಗುತ್ತಿದೆ. ಹೀಗೇಕೆ ಮಾಡಲಾಗುತ್ತಿದೆ?"

ಈಗ ಕಬಲ್ ಸಿಂಗ್ ನಿರ್ಧಾರವೆಂದರೆ, "ಒಂದು ವಿಷಯ ಖಚಿತ: ಮೋದಿ ಸರ್ಕಾರ ಕೃಷಿ ಕಾನೂನುಗಳನ್ನು ರದ್ದುಗೊಳಿಸುವವರೆಗೂ ನಾನು ನನ್ನ ಸರಪಳಿಗಳನ್ನು ಕಳಚುವುದಿಲ್ಲ."

ಕವರ್‌ ಫೋಟೊ: ಶೃದ್ಧಾ ಅಗರ್‌ವಾಲ್

ಅನುವಾದ: ಶಂಕರ ಎನ್. ಕೆಂಚನೂರು
Amir Malik

Amir Malik is an independent journalist, and a 2022 PARI Fellow.

Other stories by Amir Malik
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru