ಸಣ್ಣ ಗಡ್ಡೆ ಗಟ್ಟಿಯಾಗಿ ಬೆಳೆದಿದೆ, " ಹಡ್ಡಿ ಕೀ ತರಹ್, " ಮೂಳೆಯಂತೆ, ಎಂದು ಪ್ರೀತಿ ಯಾದವ್ ಹೇಳುತ್ತಾರೆ.

ಜುಲೈ 2020ರಲ್ಲಿ ಅವರು ತನ್ನ ಬಲ ಸ್ತನದಲ್ಲಿ ಬಟಾಣಿ ಗಾತ್ರದ ಗಡ್ಡೆಯ ಬೆಳವಣಿಗೆಯನ್ನು ಗುರುತಿಸಿ ಒಂದು ವರ್ಷವಾಗಿದೆ, ಮತ್ತು ಪಾಟ್ನಾ ನಗರದ ಕ್ಯಾನ್ಸರ್ ಸಂಸ್ಥೆಯ ಆಂಕಾಲಜಿ ವೈದ್ಯರು ಬಯಾಪ್ಸಿ ಮತ್ತು ಶಸ್ತ್ರಚಿಕಿತ್ಸೆಯ ಮೂಲಕ ಅದನ್ನು ತೆಗೆದುಹಾಕಲು ಶಿಫಾರಸು ಮಾಡಿ ಸುಮಾರು ಒಂದು ವರ್ಷವಾಗಿದೆ.

ಆದರೆ ಪ್ರೀತಿ ಆಸ್ಪತ್ರೆಗೆ ಮರಳಲಿಲ್ಲ.

"ಕರ್ವಾಲೇಂಗೆ (ಮಾಡಿಸುತ್ತೇವೆ)" ಎಂದು ಅವರ ತನ್ನ ಕುಟುಂಬದ ವಿಶಾಲವಾದ ಹೆಂಚಿನ ಮನೆಯ ಜಗಲಿಯಲ್ಲಿ ಕಂದು ಬಣ್ಣದ ಪ್ಲಾಸ್ಟಿಕ್ ಕುರ್ಚಿಯ ಮೇಲೆ ಕುಳಿತು ಹೇಳುತ್ತಾರೆ. ಅಂಗಳದಲ್ಲಿನ ಗಿಡಗಳಲ್ಲಿ ಹೂವರಳಿ ನಗುತ್ತಿದ್ದವು.

ಮೃದುವಾಗಿ ಮಾತನಾಡುತ್ತಿದ್ದ ಅವರ ದನಿಯಲ್ಲಿ ದಣಿವು ಎದ್ದು ಕಾಣುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಅವರ ಕುಟುಂಬದ ಕನಿಷ್ಠ ನಾಲ್ಕು ನಿಕಟ ಸದಸ್ಯರು ಕ್ಯಾನ್ಸರ್‌ನಿಂದ ತೀರಿಕೊಂಡಿದ್ದಾರೆ, ಮತ್ತು ಬಿಹಾರದ ಸರನ್ ಜಿಲ್ಲೆಯ ಸೋನೆಪುರ್ ಬ್ಲಾಕ್‌ನಲ್ಲಿರುವ ಅವರ ಗ್ರಾಮವು ಮಾರ್ಚ್ 2000ರಲ್ಲಿ ಕೋವಿಡ್-19 ಅಂಟು ರೋಗ ಪ್ರಾರಂಭವಾಗುವ ಕೆಲವು ವರ್ಷಗಳ ಮೊದಲು ಇತರ ಹಲವಾರು ಕ್ಯಾನ್ಸರ್ ಪ್ರಕರಣಗಳನ್ನು ದಾಖಲಿಸಿದೆ. (ಅವರ ವಿನಂತಿಯ ಮೇರೆಗೆ, ಹಳ್ಳಿಯ ಹೆಸರನ್ನು ಉಲ್ಲೇಖಿಸಲಾಗಿಲ್ಲ ಮತ್ತು ಅವರ ನಿಜವಾದ ಹೆಸರನ್ನು ಇಲ್ಲಿ ಬಳಸಲಾಗುತ್ತಿಲ್ಲ.)

ಈ ಗಡ್ಡೆಯನ್ನು ಯಾವಾಗ ತೆಗೆಸಬೇಕೆಂದು ತೀರ್ಮಾನಿಸುವುದು 24 ವರ್ಷದ ಪ್ರೀತಿ ಮಾತ್ರವಲ್ಲ. ಆಕೆಯ ಕುಟುಂಬವು ಅವರಿಗೆ ವರನನ್ನು ಆಯ್ಕೆ ಮಾಡಲು ತರಾತುರಿಯಲ್ಲಿದೆ. ಬಹುಶಃ ಸಶಸ್ತ್ರ ಪಡೆಗಳಲ್ಲಿ ಕೆಲಸ ಹೊಂದಿರುವ ನೆರೆಯ ಹಳ್ಳಿಯ ಯುವಕನೇ ಆ ವರ. "ನನ್ನ ಮದುವೆಯಾದ ನಂತರ ಕೂಡಾ ಆಪರೇಷನ್‌ ಮಾಡಿಸಿಕೊಳ್ಳಬಹುದಲ್ಲವೇ? ಮಗುವಾದ ನಂತರ ಗಡ್ಡೆ ತನ್ನಷ್ಟಕ್ಕೆ ಕರಗುವ ಸಾಧ್ಯತೆಯಿದೆ ಎಂದು ವೈದ್ಯರು ಹೇಳಿದ್ದಾರೆ." ಎಂದು ಅವರು ಹೇಳುತ್ತಾರೆ.

ಆದರೆ ಅವರು ವರನ ಕುಟುಂಬದ ಬಳಿ ಗಡ್ಡೆ ಮತ್ತು ನಡೆಸಬೇಕಿರುವ ಆಪರೇಷನ್ ಕುರಿತು ಹಾಗೂ ಅವರ ಕುಟುಂಬದ ಹಲವು ಕ್ಯಾನ್ಸರ್‌ ಪ್ರಕರಣದ ಕುರಿತು ತಿಳಿಸುತ್ತಾರೆಯೇ? “ವಹೀ ತೋ ಸಮಜ್‌ ನಹೀ ಆ ರಹಾ” ಎಂದು ಅವರು ಹೇಳುತ್ತಾರೆ. ಅವರ ಆಗಬೇಕಿರುವ ಆಪರೇಷನ್‌ ಮದುವೆಯ ವಿಷಯದಲ್ಲಿ ಕಗ್ಗಂಟಾಗಿದೆ.

Preeti Kumari: it’s been over a year since she discovered the growth in her breast, but she has not returned to the hospital
PHOTO • Kavitha Iyer

ಪ್ರೀತಿ ಕುಮಾರಿ: ಅವರ ಸ್ಥನದಲ್ಲಿ ಗಡ್ಡೆಯಿರುವುದು ತಿಳಿದುಬಂದು ವರ್ಷವಾಗಿದ್ದರೂ, ಅವರು ಚಿಕಿತ್ಸೆಗಾಗಿ ಮತ್ತೆ ಆಸ್ಪತ್ರೆಗೆ ಹೋಗಿಲ್ಲ

2019ರಲ್ಲಿ ಭೂವಿಜ್ಞಾನದಲ್ಲಿ ಬಿಎಸ್ಸಿ ಪದವಿಯನ್ನು ಪೂರ್ಣಗೊಳಿಸಿರುವ ಪ್ರೀತಿಯ ಬುದಕಿನಲ್ಲಿ ಗಂಟು ಕಾಣಿಸಿಕೊಂಡ ನಂತರದ ಈ ಒಂದು ವರ್ಷದಲ್ಲಿ ಅವರ ಒಂಟಿತನ ಇನ್ನಷ್ಟು ಗಾಢವಾಗಿದೆ. ಅವರ ತಂದೆ 2016ರಲ್ಲಿ ಕೊನೆಯ ಹಂತದ ಮೂತ್ರಪಿಂಡದ ಕ್ಯಾನ್ಸರ್ ಪತ್ತೆಯಾದ ಕೆಲವು ತಿಂಗಳ ನಂತರ ನಿಧನರಾದರು. ಹಿಂದಿನ ಜನವರಿಯಲ್ಲಿ 2013ರಿಂದ ವಿವಿಧ ಹೃದಯ ಸಂಬಂಧಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಾಯಿ ಹೃದಯಾಘಾತದಿಂದ ಮರಣ ಹೊಂದಿದರು. ಇಬ್ಬರೂ ತಮ್ಮ 50ರ ಪ್ರಾಯದಲ್ಲಿದ್ದರು. "ಇದೆಲ್ಲವನ್ನೂ ನಾನೊಬ್ಬಳೇ ಎದುರಿಸಿದ್ದೇನೆ. ನನ್ನ ತಾಯಿ ಇದ್ದಿದ್ದರೆ ಅವರು ನನ್ನ ಸಮಸ್ಯೆಯನ್ನು ಅರ್ಥಮಾಡಿಕೊಳ್ಳುತ್ತಿದ್ದರು." ಎಂದು ಪ್ರೀತಿ ಹೇಳುತ್ತಾರೆ.

ನವದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಅವರ ತಾಯಿ ಕೊನೆಯುಸಿರೆಳೆಯುವ ಸ್ವಲ್ಪ ಮೊದಲು, ಕುಟುಂಬದಲ್ಲಿನ ಕ್ಯಾನ್ಸರ್‌ಗಳಿಗೆ ಅವರ ಮನೆಯ ನೀರಿನ ಗುಣಮಟ್ಟ ಕಾರಣವಿರಬಹುದು ಎಂದು ಕುಟುಂಬವು ಕಂಡುಕೊಂಡಿತು. "ಅಲ್ಲಿನ ವೈದ್ಯರು ಮಮ್ಮಿಯ ಮಾನಸಿಕ ಉದ್ವಿಗ್ನತೆಗಳ ಬಗ್ಗೆ ಕೇಳಿದರು. ನಾವು ಕುಟುಂಬದ ಸಾವಿನ ಇತಿಹಾಸವನ್ನು ಅವರಿಗೆ ಹೇಳಿದಾಗ, ನಾವು ಯಾವ ನೀರನ್ನು ಕುಡಿಯುತ್ತೇವೆ ಎನ್ನುವುದರ ಕುರಿತು ಅವರು ಅನೇಕ ಪ್ರಶ್ನೆಗಳನ್ನು ಕೇಳಿದರು. ಕೆಲವು ವರ್ಷಗಳಿಂದ, ನಮ್ಮ ಹ್ಯಾಂಡ್ ಪಂಪ್‌ನ ನೀರು ಎತ್ತಿದ ಅರ್ಧ ಗಂಟೆಯಲ್ಲಿ ಹಳದಿ ಬಣ್ಣಕ್ಕೆ ತಿರುಗಿತ್ತಿತ್ತು" ಎಂದು ಪ್ರೀತಿ ಹೇಳುತ್ತಾರೆ.

ಅಂತರ್ಜಲದಲ್ಲಿನ ಆರ್ಸೆನಿಕ್ ಅಂಶವು ಸುರಕ್ಷಿತ ಮಟ್ಟವನ್ನು ಮೀರಿದಾಗ ಉಂಟಾಗುವ ಮಾಲಿನ್ಯದಿಂದ ಹೆಚ್ಚು ಬಾಧಿತವಾಗಿವೆಯೆಂದು ಎಂದು ವರದಿಯಾಗಿರುವ ಭಾರತದ ಏಳು ರಾಜ್ಯಗಳಲ್ಲಿ ಬಿಹಾರವೂ ಒಂದು (ಉಳಿದವು ಅಸ್ಸಾಂ, ಛತ್ತೀಸ್ ಗಢ, ಜಾರ್ಖಂಡ್, ಮಣಿಪುರ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ).  ಬಿಹಾರದ 18 ಜಿಲ್ಲೆಗಳಾದ್ಯಂತ ಹರಡಿರುವ 57 ಬ್ಲಾಕ್‌ಗಳು - ಪ್ರೀತಿಯವರ ಹಳ್ಳಿಯಿರುವ ಸರನ್ ಸೇರಿದಂತೆ - ಅಂತರ್ಜಲದಲ್ಲಿ ಅತ್ಯಧಿಕ ಆರ್ಸೆನಿಕ್ ಅಂಶ , ಪ್ರತಿ ಲೀಟರ್‌ಗೆ 0.05 ಮಿಲಿಗ್ರಾಂಗಳಿಗಿಂತ ಹೆಚ್ಚುಪತ್ತೆಯಾಗಿದೆ.ಇದರ ಅನುಮತಿಸಬಹುದಾದ ಮಿತಿ 10 ಮೈಕ್ರೋಗ್ರಾಂಗಳು. (ಸೆಂಟ್ರಲ್ ಗ್ರೌಂಡ್ ವಾಟರ್ ಬೋರ್ಡ್ 2010ರಲ್ಲಿ ಕಾರ್ಯಪಡೆಗಳು ಮತ್ತು ರಾಜ್ಯ ಸರ್ಕಾರದ ಏಜೆನ್ಸಿಗಳ ಸಂಶೋಧನೆಗಳ ಆಧಾರದ ಮೇಲೆ ಪ್ರಕಟಿಸಿದ ವರದಿಯಂತೆ )

*****

ಪ್ರೀತಿ 2 ಅಥವಾ 3 ವರ್ಷದವರಿದ್ದಾಗ ಅವರ ಹಿರಿಯ ಸಹೋದರಿ ತೀರಿಕೊಂಡರು. "ಅವಳಿಗೆ ತುಂಬಾ ಹೊಟ್ಟೆ ನೋವು ಇತ್ತು. ಅಪ್ಪ ಅವಳನ್ನು ಅನೇಕ ಆಸ್ಪತ್ರೆಗಳಿಗೆ ಕರೆದೊಯ್ದರು. ಆದರೆ ಅವಳನ್ನು ಉಳಿಸಲು ಸಾಧ್ಯವಾಗಲಿಲ್ಲ" ಎಂದು ಅವರು ಹೇಳುತ್ತಾರೆ. ಅಂದಿನಿಂದ, ಅವರ ತಾಯಿ ಯಾವಾಗಲೂ ಸಾಕಷ್ಟು ಒತ್ತಡಕ್ಕೆ ಒಳಗಾಗುತ್ತಿದ್ದರು.

ನಂತರ, 2009ರಲ್ಲಿ, ಅವರ ಚಿಕ್ಕಪ್ಪ ಮತ್ತು 2012ರಲ್ಲಿ, ಚಿಕ್ಕಮ್ಮ ನಿಧನರಾದರು. ಇವರೆಲ್ಲರೂ ಒಂದೇ ಸೂರಿನಡಿ ವಾಸಿಸುತ್ತಿದ್ದರು. ಇಬ್ಬರಿಗೂ ರಕ್ತದ ಕ್ಯಾನ್ಸರ್ ಇತ್ತು ಮತ್ತು ಇಬ್ಬರೂ ಚಿಕಿತ್ಸೆಗಾಗಿ ತಡವಾಗಿ ಆಸ್ಪತ್ರೆಗೆ ತಲುಪಿದ್ದಾರೆಂದು ವೈದ್ಯರು ಹೇಳಿದ್ದರು.

2013ರಲ್ಲಿ, ಪ್ರೀತಿಯವರ ಅಣ್ಣ, ಎಂದರೆ ಚಿಕ್ಕಪ್ಪನ ಮಗ ತನ್ನ 36ನೇ ವಯಸ್ಸಿನಲ್ಲಿ ನಿಧನರಾದರು. ಅವರು ನೆರೆಯ ವೈಶಾಲಿ ಜಿಲ್ಲೆಯ ಹಾಜಿಪುರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ ರಕ್ತದ ಕ್ಯಾನ್ಸರ್ ಕೂಡ ಇತ್ತು.

ಅನೇಕ ವರ್ಷಗಳಿಂದ, ಕುಟುಂಬವು ಇಂತಹ ನೋವು ಮತ್ತು ಸಾವಿನಿಂದ ಜರ್ಝರಿತಗೊಂಡಿತ್ತು. ಹೀಗಾಗಿ ಮನೆಯ ಎಲ್ಲಾ ಜವಾಬ್ದಾರಿಯನ್ನು ಪ್ರೀತಿಯೇ ತನ್ನ ಹೆಗಲ ಮೇಲೆ ಹೊತ್ತುಕೊಂಡರು. "ನಾನು ಹತ್ತನೇ ತರಗತಿಯಲ್ಲಿದ್ದಾಗಿನಿಂದಲೂ, ಮನೆಯಲ್ಲಿ ಎಲ್ಲವನ್ನೂ ನೋಡಿಕೊಳ್ಳುತ್ತಿದ್ದೆ ಏಕೆಂದರೆ ಮೊದಲಿಗೆ ತಾಯಿ ಮತ್ತು ನಂತರ ತಂದೆ ಅನಾರೋಗ್ಯದಿಂದ ಬಳಲುತ್ತಿದ್ದರು. ಪ್ರತಿ ವರ್ಷ ಯಾರಾದರೂ ತೀರಿ ಹೋಗುತ್ತಿದ್ದ ಸಮಯವಿತ್ತು. ಅಥವಾ ತೀವ್ರ ಅನಾರೋಗ್ಯದಿಂದ ಬಳಲುತ್ತಿರುತ್ತಿದ್ದರು."

Coping with cancer in Bihar's Saran district
PHOTO • Kavitha Iyer

ಬಿಹಾರದ ಸರನ್ ಜಿಲ್ಲೆಯಲ್ಲಿ ಕ್ಯಾನ್ಸರ್ ಎದುರಿಸುವ ಪ್ರಯತ್ನದಲ್ಲಿ

ಆದರೆ ಅವರು ಗಂಡಿನ ಕುಟುಂಬಕ್ಕೆ ಕ್ಯಾನ್ಸರ್ ಗಡ್ಡೆ, ಭವಿಷ್ಯದ ಶಸ್ತ್ರಚಿಕಿತ್ಸೆಗಳು ಮತ್ತು ಕುಟುಂಬದಲ್ಲಿನ ಅನೇಕ ಕ್ಯಾನ್ಸರ್ ಪ್ರಕರಣಗಳ ಬಗ್ಗೆ ಹೇಳುತ್ತಾರೆಯೇ? ಈ ಪ್ರಶ್ನೆಗೆ ಉತ್ತರವಾಗಿ, ಅವರು ಹೇಳುತ್ತಾರೆ, "ನನಗೆ ಅದೇ ಅರ್ಥವಾಗುತ್ತಿಲ್ಲ." ಈ ಕಾರಣಕ್ಕಾಗಿ ಅವರ ಶಸ್ತ್ರಚಿಕಿತ್ಸೆ ಇನ್ನೂ ಬಾಕಿ ಉಳಿದಿದೆ

ದೊಡ್ಡ ಮತ್ತು ಅವಿಭಕ್ತ ಭೂಮಾಲೀಕರ ಕುಟುಂಬದ ಅಡುಗೆ ಮನೆಯ ಕೆಲಸಗಳಿಂದಾಗಿ, ಅವರ ಅಧ್ಯಯನಗಳು ಹಿಂದುಳಿದವು. ಅವರ ಇಬ್ಬರು ಸಹೋದರರಲ್ಲಿ ಒಬ್ಬರು ಮದುವೆಯಾಗಿ ಅವರ ಹೆಂಡತಿ ಮನೆಗೆ ಬಂದ ನಂತರ ಪ್ರೀತಿಗೆ ಅಡುಗೆ, ಶುಚಿಗೊಳಿಸುವಿಕೆ ಮತ್ತು ರೋಗಿಗಳನ್ನು ನೋಡಿಕೊಳ್ಳುವ ಕೆಲಸದಲ್ಲಿ ಸ್ವಲ್ಪ ಬಿಡುವು ದೊರಕಿತು. ಸಹೋದರನ ಪತ್ನಿಗೆ ವಿಷಪೂರಿತ ಹಾವು ಕಚ್ಚಿದಾಗ ಆಕೆಯ ಸಾವು ಕುಟುಂಬದ ಸಾವಿನ ಸಂಖ್ಯೆಯಲ್ಲಿ ಇನ್ನೊಂದು ಅಂಕಿ ಹೆಚ್ಚಿಸಿತು. ಪ್ರೀತಿಯ ಅತ್ತಿಗೆ ತೀರಿಕೊಂಡ ನಂತರ, 2019ರಲ್ಲಿ ಹೊಲದಲ್ಲಿ ನಡೆದ ಅವಘಡವೊಂದರಲ್ಲಿ, ಪ್ರೀತಿಯವರ ಸಹೋದರರೊಬ್ಬರ ಕಣ್ಣಿಗೆ ಗಂಭೀರ ಗಾಯವಾಯಿತು ಮತ್ತು ಮುಂದಿನ ಕೆಲವು ತಿಂಗಳುಗಳ ಕಾಲ ನಿರಂತರವಾಗಿ ಆರೈಕೆ ಮಾಡಬೇಕಾಯಿತು.

ತನ್ನ ಹೆತ್ತವರ ಮರಣದ ನಂತರ ಪ್ರೀತಿ ವಿಪರೀತ ಹತಾಶೆಗೊಳಗಾದರು. ಅವರು ಹೇಳುತ್ತಾರೆ, "ಹತಾಶೆ ಇತ್ತು ... ಆಗ ತುಂಬಾ ಟೆನ್ಶನ್ ಇತ್ತು." ತಾನು ಭಾವನಾತ್ಮಕವಾಗಿ ಸ್ವಲ್ಪ ಸುಧಾರಿಸಲು ಪ್ರಾರಂಭಿಸಿದಾಗ, ಅವರಿಗೆ ತನ್ನ ಎದೆಯಲ್ಲಿ ಗಂಟು ಇರುವುದು ತಿಳಿದುಬಂತು.

ತಮ್ಮ ಹಳ್ಳಿಯ ಇತರ ಭಾಗಗಳಂತೆ, ಈ ಕುಟುಂಬವೂ ಕೈ ಪಂಪ್‌ನಿಂದ ಎತ್ತಿದ ನೀರನ್ನು ಫಿಲ್ಟರ್ ಮಾಡದೆ ಅಥವಾ ಕುದಿಸದೆ ಬಳಸಿದೆ. ಸುಮಾರು 120-150 ಅಡಿ ಆಳದಲ್ಲಿ, ಎರಡು ದಶಕಗಳಷ್ಟು ಹಳೆಯದಾದ ಈ ಬೋರ್‌ವೆಲ್ ಅವರ ಎಲ್ಲಾ ಅಗತ್ಯಗಳಾದ ಸ್ವಚ್ಛಗೊಳಿಸುವ, ಸ್ನಾನ ಮಾಡುವ, ಕುಡಿಯುವ, ಅಡುಗೆ ಮಾಡುವ ನೀರಿನ ಮೂಲವಾಗಿದೆ. ಪ್ರೀತಿ ಹೇಳುತ್ತಾರೆ, "ನಮ್ಮ ತಂದೆ ತೀರಿಕೊಂಡ ನಂತರ, ನಾವು RO ಫಿಲ್ಟರ್ ಮಾಡಿದ ನೀರನ್ನು ಕುಡಿಯಲು ಮತ್ತು ಅಡುಗೆ ಮಾಡಲು ಬಳಸುತ್ತಿದ್ದೆವು." ಆ ಹೊತ್ತಿಗೆ, ಹಲವಾರು ಅಧ್ಯಯನಗಳು ಅಂತರ್ಜಲದಲ್ಲಿ ಕಂಡುಬರುವ ಆರ್ಸೆನಿಕ್ ವಿಷವಾಗಿ ವರ್ತಿಸುತ್ತಿದೆ ಎಂದು ಬಹಿರಂಗಪಡಿಸಿದವು ಮತ್ತು ಜಿಲ್ಲೆಯ ಜನರಿಗೆ ಮಾಲಿನ್ಯ ಮತ್ತು ಅದರ ಅಪಾಯಗಳ ಬಗ್ಗೆ ಅರಿವು ಮೂಡಲಾರಂಭಿಸಿತು. RO ಶುದ್ಧೀಕರಣ ವ್ಯವಸ್ಥೆಗಳು, ನಿಯಮಿತ ನಿರ್ವಹಣೆಯೊಂದಿಗೆ, ಕುಡಿಯುವ ನೀರಿನಿಂದ ಆರ್ಸೆನಿಕ್ ಅನ್ನು ಫಿಲ್ಟರ್ ಮಾಡುವಲ್ಲಿ ಸ್ವಲ್ಪ ಮಟ್ಟಿಗೆ ಯಶಸ್ವಿಯಾಗಿವೆ.

ವಿಶ್ವ ಆರೋಗ್ಯ ಸಂಸ್ಥೆ 1958ರಿಂದಲೂ ಈ ಕುರಿತು ಗಮನಸೆಳೆಯುತ್ತಿದೆ , ಆರ್ಸೆನಿಕ್‌ನಿಂದ ಕಲುಷಿತಗೊಂಡ ನೀರಿನ ದೀರ್ಘಾವಧಿಯ ಬಳಕೆಯು ನೀರಿನ ವಿಷ ಅಥವಾ ಆರ್ಸೆನಿಕೋಸಿಸ್‌ಗೆ ಕಾರಣವಾಗುತ್ತದೆ, ಇದು ಚರ್ಮ, ಮೂತ್ರಕೋಶ, ಮೂತ್ರಪಿಂಡ ಅಥವಾ ಶ್ವಾಸಕೋಶದ ಕ್ಯಾನ್ಸರ್‌ಗೆ ಕಾರಣವಾಗಬಹುದು. ಮತ್ತು ಅದೇ ಸಮಯದಲ್ಲಿ, ಚರ್ಮದ ಮೇಲೆ ಕಲೆಗಳು, ಅಂಗೈ ಮತ್ತು ಅಡಿಭಾಗದ ಮೇಲೆ ಗಟ್ಟಿಯಾದ ತೇಪೆಗಳಂತಹ ಅನೇಕ ಚರ್ಮ ರೋಗಗಳ ಅಪಾಯವಿದೆ. ಕೊಳಕು ನೀರಿನ ಬಳಕೆಯು ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಫಲವತ್ತತೆ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಡಬ್ಲ್ಯುಎಚ್‌ಒ ಸೂಚಿಸಿದೆ.

2017 ಮತ್ತು 2019ರ ನಡುವೆ, ಮಹಾವೀರ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ಮತ್ತು ಸಂಶೋಧನಾ ಕೇಂದ್ರ, ಪಾಟ್ನಾದ ಖಾಸಗಿ ಚಾರಿಟೇಬಲ್ ಟ್ರಸ್ಟ್, ತಮ್ಮ OPDಗಳಲ್ಲಿ ಯಾದೃಚ್ಛಿಕವಾಗಿ ಆಯ್ಕೆಯಾದ 2,000 ಕ್ಯಾನ್ಸರ್ ರೋಗಿಗಳಿಂದ ರಕ್ತದ ಮಾದರಿಗಳನ್ನು ತೆಗೆದುಕೊಂಡಿತು ಮತ್ತು ಕಾರ್ಸಿನೋಮ ರೋಗಿಗಳು ರಕ್ತದ ಮಾದರಿಗಳನ್ನು ಹೊಂದಿದ್ದಾರೆ ಎಂದು ಕಂಡುಕೊಂಡರು. ಭೂವೈಜ್ಞಾನಿಕ ನಕ್ಷೆಯು ರಕ್ತದಲ್ಲಿನ ಆರ್ಸೆನಿಕ್‌ನ ನೇರ ಸಂಬಂಧವನ್ನು ಗಂಗಾ ಬಯಲು ಪ್ರದೇಶದಲ್ಲಿ ಕ್ಯಾನ್ಸರ್‌ನ ಪ್ರಕಾರ ಮತ್ತು ಜನಸಂಖ್ಯಾಶಾಸ್ತ್ರದೊಂದಿಗೆ ಬಹಿರಂಗಪಡಿಸುತ್ತದೆ.

ಡಾ. ಅರುಣ್ ಕುಮಾರ್, ಈ ಸಂಶೋಧನೆಯಲ್ಲಿ ಹಲವಾರು ಪ್ರಬಂಧಗಳನ್ನು ಬರೆದಿರುವ ಮತ್ತು ಸಂಸ್ಥೆಯ ವಿಜ್ಞಾನಿಯಾದ ಅವರು ಹೇಳುತ್ತಾರೆ, "ರಕ್ತದಲ್ಲಿ ಅಧಿಕ ಪ್ರಮಾಣದ ಆರ್ಸೆನಿಕ್ ಹೊಂದಿರುವ ಕ್ಯಾನ್ಸರ್ ರೋಗಿಗಳಲ್ಲಿ ಹೆಚ್ಚಿನವರು ಗಂಗಾನದಿಯ ಬಳಿಯ ಜಿಲ್ಲೆಗಳಿಂದ [ಸರನ್ ಸೇರಿದಂತೆ] ಬಂದವರು. ಅವರ ರಕ್ತದಲ್ಲಿ ಹೆಚ್ಚಿದ ಆರ್ಸೆನಿಕ್ ಪ್ರಮಾಣವು ಆರ್ಸೆನಿಕ್ ಕ್ಯಾನ್ಸರ್, ವಿಶೇಷವಾಗಿ ಕಾರ್ಸಿನೋಮಕ್ಕೆ ಕಾರಣವಾಗುತ್ತಿದೆ ಎಂದು ನೇರವಾಗಿ ಸೂಚಿಸುತ್ತದೆ."

'Even if I leave for a few days, people will know, it’s a small village. If I go away to Patna for surgery, even for a few days, everybody is going to find out'

ನಾನು ಕೆಲವು ದಿನಗಳ ಕಾಲ ಎಲ್ಲಾದರು ಹೋದರೂ, ಜನರಿಗೆ ವಿಷಯ ಗೊತ್ತಾಗುತ್ತದೆ, ಇದು ಒಂದು ಸಣ್ಣ ಹಳ್ಳಿ. ನಾನು ಶಸ್ತ್ರಚಿಕಿತ್ಸೆಗೆ ಕೆಲವು ದಿನಗಳಾದರೂ ಪಾಟ್ನಾಕ್ಕೆ ಹೋದರೆ, ವಿಷಯ ಎಲ್ಲರಿಗೂ ತಿಳಿಯುತ್ತದೆ

ಈ ಅಧ್ಯಯನದ ಜನವರಿ 2021ರ ವರದಿಯ ಪ್ರಕಾರ , "ನಮ್ಮ ಸಂಸ್ಥೆಯು 2019ರಲ್ಲಿ 15,000ಕ್ಕಿಂತ ಹೆಚ್ಚು ಕ್ಯಾನ್ಸರ್ ಪ್ರಕರಣಗಳನ್ನು ದಾಖಲಿಸಿದೆ. ಸಾಂಕ್ರಾಮಿಕ ರೋಗಶಾಸ್ತ್ರದ ಅಂಕಿಅಂಶಗಳು ವರದಿಯಾದ ಹೆಚ್ಚಿನ ಕ್ಯಾನ್ಸರ್ ಪ್ರಕರಣಗಳು ಈ ನಗರಗಳು ಅಥವಾ ಪಟ್ಟಣಗಳಿಂದ ಬಂದಿವೆ.  ಇವು ಗಂಗಾ ನದಿಯ ಬಳಿ ನೆಲೆಗೊಂಡಿವೆ. ಬಕ್ಸಾರ್, ಭೋಜಪುರ, ಸರನ್, ಪಾಟ್ನಾ, ವೈಶಾಲಿ, ಸಮಸ್ತಿಪುರ, ಮುಂಗರ್, ಬೇಗುಸರೈ, ಭಾಗಲ್ಪುರ ಜಿಲ್ಲೆಗಳಲ್ಲಿ ಗರಿಷ್ಠ ಸಂಖ್ಯೆಯ ಕ್ಯಾನ್ಸರ್ ಪ್ರಕರಣಗಳು ಕಂಡುಬಂದಿವೆ.”

ಒಂದೆಡೆ, ಸರನ್ ಜಿಲ್ಲೆಯ ತಮ್ಮ ಗ್ರಾಮದಲ್ಲಿ ವಾಸಿಸುತ್ತಿರುವ ಪ್ರೀತಿಯವರ ಕುಟುಂಬವು ಮನೆಯ ಹಲವು ಪುರುಷರು ಮತ್ತು ಮಹಿಳೆಯರನ್ನು ಕ್ಯಾನ್ಸರ್‌ನಿಂದ ಕಳೆದುಕೊಂಡಿದೆ, ಮತ್ತೊಂದೆಡೆ, ಪ್ರೀತಿ ಈಗ ಆಂಕೊಲಾಜಿಸ್ಟ್‌ ಅವರಲ್ಲಿಗೆ ಭೇಟಿ ನೀಡುವಲ್ಲಿ ಸವಾಲುಗಳನ್ನು ಎದುರಿಸಬೇಕಾಗಬಹುದು. ಕ್ಯಾನ್ಸರ್ ಅನ್ನು ಸಾಮಾಜಿಕ ಕಳಂಕವೆಂದು ಪರಿಗಣಿಸಲಾಗುತ್ತದೆ, ವಿಶೇಷವಾಗಿ ಚಿಕ್ಕ ಹುಡುಗಿಯರ ಸಂದರ್ಭದಲ್ಲಿ. ಪ್ರೀತಿಯ ಸಹೋದರರೊಬ್ಬರು ಹೇಳುವಂತೆ, "ಹಳ್ಳಿಯ ಜನರು ಏನಾದರೂ ಮಾತುಗಳಿಗಾಗಿ ಕಾಯುತ್ತಿರುತ್ತಾರೆ ... ಕುಟುಂಬವು ಎಚ್ಚರಿಕೆಯಿಂದ ಇರಬೇಕು."

ಪ್ರೀತಿ ಮುಂದುವರಿದು ಹೇಳುತ್ತಾರೆ, "ನಾನು ಕೆಲವು ದಿನಗಳವರೆಗೆ ಊರಿನಿಂದ ಹೊರಗೆ ಹೋದರೆ, ಜನರಿಗೆ ತಿಳಿಯುತ್ತದೆ, ಇದು ಒಂದು ಸಣ್ಣ ಹಳ್ಳಿ. ನಾನು ಕೆಲವು ದಿನಗಳವರೆಗೆ ಶಸ್ತ್ರಚಿಕಿತ್ಸೆಗಾಗಿ ಪಟ್ನಾಗೆ ಹೋದರೆ, ಆಗ ಎಲ್ಲರಿಗೂ ತಿಳಿಯುತ್ತದೆ. ನೀರಿನಲ್ಲಿ ಕ್ಯಾನ್ಸರ್ ಇದೆಯೆನ್ನುವುದು ಮೊದಲೇ ತಿಳಿದಿದ್ದರೆ ಎಷ್ಟು ಚೆನ್ನಿರುತ್ತಿತ್ತು ಎಂದು ಯಾವಾಗಲೂ ಅನ್ನಿಸುತ್ತದೆ.”

ಪ್ರೀತಿ ತನ್ನನ್ನು ಬಹಳಷ್ಟು ಪ್ರೀತಿಸುವ ಗಂಡ ಸಿಗಬಹುದೆನ್ನುವ ಭರವಸೆಯಲ್ಲಿದ್ದಾರೆ. ಅದೇ ಸಮಯದಲ್ಲಿ ಈ ಗಂಟು ತನ್ನ ಪ್ರೇಮದ ದಾರಿಗೆ ತೊಡಕಾಗಬಹುದು ಎನ್ನುವ ಆತಂಕವೂ ಇದೆ.

*****

"ಅವಳು ಮಗುವಿಗೆ ಹಾಲು ಕುಡಿಸಲು ಸಾಧ್ಯವೇ?"

ಈ ಪ್ರಶ್ನೆಯು ರಾಮುನಿ ದೇವಿ ಯಾದವ್ ಅವರ ಮನಸ್ಸಿನಲ್ಲಿ ಸುಳಿದಾಡುತ್ತಿತ್ತು, ಆಕೆ ಆರು ತಿಂಗಳ ಹಿಂದಷ್ಟೇ ಮದುವೆಯಾದ ಮತ್ತು ಪಾಟ್ನಾದ ಆಸ್ಪತ್ರೆಯ ತನ್ನ ವಾರ್ಡ್‌ನಲ್ಲಿ ಕೆಲವು ಹಾಸಿಗೆಗಳ ದೂರದಲ್ಲಿ ಮಲಗಿದ್ದ ಸುಮಾರು 20 ವರ್ಷದ ಮಹಿಳೆಯನ್ನು ನೋಡುತ್ತಿದ್ದಳು. ಅದು 2015ರ ಬೇಸಿಗೆ ಕಾಲ. 58 ವರ್ಷದ ರಾಮುನಿ ದೇವಿ ಕೇಳುತ್ತಾರೆ, "ಕನಿಷ್ಠ ನಾನು ಬಹಳ ಸಮಯದ ನಂತರ ಸ್ತನ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುತ್ತಿದ್ದೇನೆ. ನನ್ನ ನಾಲ್ವರು ಪುತ್ರರು ವಯಸ್ಕರಾದ ನಂತರ ನನಗೆ ಸ್ತನದ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಆದರೆ ಚಿಕ್ಕ ಹುಡುಗಿಯರಿಗೆ ಹೀಗಾದರೆ ಅವರ ಕತೆಯೇನು?"

ಬಕ್ಸಾರ್ ಜಿಲ್ಲೆಯ ಸಿಮ್ರಿ ಬ್ಲಾಕಿನ ಬರ್ಕಾ ರಾಜಪುರ ಗ್ರಾಮದಲ್ಲಿ, ಪ್ರೀತಿಯವರ ಗ್ರಾಮದಿಂದ ಸುಮಾರು 140 ಕಿಮೀ ದೂರದಲ್ಲಿ, ರಾಮುನಿ ಯಾದವ್ ಸುಮಾರು 50 ಬಿಘಾ ಭೂಮಿಯನ್ನು ಹೊಂದಿದ್ದಾರೆ (ಸುಮಾರು 17 ಎಕರೆ) ಮತ್ತು ಸ್ಥಳೀಯ ರಾಜಕೀಯದಲ್ಲಿ ಪ್ರಭಾವಿ ಸ್ಥಾನವನ್ನು ಹೊಂದಿದ್ದಾರೆ. ಸ್ತನ ಕ್ಯಾನ್ಸರ್ ಅನ್ನು ಸೋಲಿಸಿದ ಆರು ವರ್ಷಗಳ ನಂತರ, ಕೊರೋನಾ ವೈರಸ್‌ ಕಾರಣದಿಂದ ಮೂಂದೂಡಲ್ಪಟ್ಟಿದ್ದ ಪಂಚಾಯತ್‌ನ ಮುಖ್ಯಸ್ಥರ ಸ್ಥಾನಕ್ಕೆ ಈ ವರ್ಷಾಂತ್ಯದಲ್ಲಿ ಚುನಾವಣೆ ನಡೆದರೆ, ರಾಮುನಿ ದೇವಿ ರಾಜಪುರದ ಕಲಾನ್ ಸ್ಪರ್ಧಿಸಲು ಯೋಜಿಸಿದ್ದಾರೆ.

Ramuni Devi Yadav: 'When a mother gets cancer, every single thing [at home] is affected, nor just the mother’s health'
PHOTO • Kavitha Iyer

ರಾಮುನಿ ದೇವಿ ಯಾದವ್: "ತಾಯಿಗೆ ಕ್ಯಾನ್ಸರ್ ಬಂದಾಗ, ಅದು ಆ ತಾಯಿಯ ಆರೋಗ್ಯದ ಮೇಲೆ ಮಾತ್ರವಲ್ಲ, [ಮನೆಯಲ್ಲಿ] ಎಲ್ಲದರ ಮೇಲೂ ಪರಿಣಾಮ ಬೀರುತ್ತದೆ

ರಾಮುನಿ ಭೋಜ್‌ಪುರಿಯನ್ನು ಮಾತ್ರ ಮಾತನಾಡಬಲ್ಲರು, ಆದರೆ ಆಕೆಯ ಮಗ ಮತ್ತು ಪತಿ ಉಮಾಶಂಕರ್ ಯಾದವ್ ಅವರಿಗೆ ಭಾಷಾಂತರಕಾರರಾಗಿ ಕೆಲಸ ಮಾಡುತ್ತಾರೆ. ಬರ್ಕಾ ರಾಜಪುರ ಗ್ರಾಮದಲ್ಲಿ ಅನೇಕ ಕ್ಯಾನ್ಸರ್ ಪ್ರಕರಣಗಳಿವೆ ಎಂದು ಉಮಾಶಂಕರ್ ಹೇಳುತ್ತಾರೆ. ಕೇಂದ್ರೀಯ ಅಂತರ್ಜಲ ಮಂಡಳಿಯ ವರದಿಯ ಪ್ರಕಾರ, ಬಕ್ಸಾರ್ ಜಿಲ್ಲೆಯನ್ನು ಅಂತಹ 18 ಜಿಲ್ಲೆಗಳಲ್ಲಿ ಸೇರಿಸಲಾಗಿದೆ ಅದರಲ್ಲಿ 57 ಬ್ಲಾಕ್‌ಗಳು ಅಂತರ್ಜಲದಲ್ಲಿ ಹೆಚ್ಚಿನ ಆರ್ಸೆನಿಕ್ ಅಂಶವನ್ನು ಹೊಂದಿವೆ.

ಈ ಹೊಲದಲ್ಲಿ ಮಾಲ್ಡಾ ಮಾವಿನಹಣ್ಣು ಮತ್ತು ಹಲಸಿನ ಹಣ್ಣುಗಳನ್ನು ಕೊಯ್ದ ಚೀಲಗಳನ್ನು ಹೊಂದಿದ್ದ ತನ್ನ ಜಮೀನಿನಲ್ಲಿ ಅಲೆದಾಡುತ್ತಿದ್ದ ರಾಮುನಿ, ತನ್ನ ಕೊನೆಯ ಶಸ್ತ್ರಚಿಕಿತ್ಸೆ ಮತ್ತು ವಿಕಿರಣ ಚಿಕಿತ್ಸೆ ಆರಂಭವಾಗುವವರೆಗೂ ಆಕೆಯ ಸ್ಥಿತಿ ಎಷ್ಟು ಗಂಭೀರವಾಗಿದೆ ಎಂದು ಕುಟುಂಬವು ತನಗೆ ತಿಳಿಸಲಿಲ್ಲ ಎಂದು ಹೇಳುತ್ತಾರೆ.

"ಆರಂಭದಲ್ಲಿ, ಅದು ಏನೆಂದು ನಮಗೆ ತಿಳಿದಿರಲಿಲ್ಲ ಮತ್ತು ಅರಿವಿನ ಕೊರತೆಯು ಬಹಳಷ್ಟು ತೊಂದರೆಗಳನ್ನು ಉಂಟುಮಾಡಿತು" ಎಂದು ಹೇಳುತ್ತಾರೆ, ಅವರು ಉತ್ತರ ಪ್ರದೇಶದ ಬನಾರಸ್ ಜಿಲ್ಲೆಯಲ್ಲಿ ವಿಫಲವಾದ ಮೊದಲ ಶಸ್ತ್ರಚಿಕಿತ್ಸೆಯನ್ನು ನೆನಪಿಸಿಕೊಂಡರು. ಯಾದವ್ ಕುಟುಂಬವು ಬನಾರಸ್‌ನಲ್ಲಿ ಸಂಬಂಧಿಕರನ್ನು ಹೊಂದಿತ್ತು. ಮೊದಲ ಶಸ್ತ್ರಚಿಕಿತ್ಸೆಯಲ್ಲಿ ಗಡ್ಡೆಯನ್ನು ತೆಗೆಯಲಾಯಿತು, ಆದರೆ ಅದು ಮತ್ತೆ ಬೆಳೆಯಲು ಪ್ರಾರಂಭಿಸಿತು ಮತ್ತು ದಿನದಿಂದ ದಿನಕ್ಕೆ ಬೆಳೆಯಿತು, ಇದು ತೀವ್ರವಾದ ನೋವನ್ನು ಉಂಟುಮಾಡುತ್ತದೆ. ಅವರು ಅದೇ ವರ್ಷ, 2014ರಲ್ಲಿ ಮತ್ತೆ ಬನಾರಸ್ನಲ್ಲಿರುವ ಅದೇ ಕ್ಲಿನಿಕ್‌ಗೆ ಹೋದರು ಮತ್ತು ಅಲ್ಲಿ ಅದೇ ಶಸ್ತ್ರಚಿಕಿತ್ಸೆಯನ್ನು ಮತ್ತೊಮ್ಮೆ ಮಾಡಲಾಯಿತು.

"ಆದರೆ ನಾವು ನಮ್ಮ ಸ್ಥಳೀಯ ವೈದ್ಯರ ಕ್ಲಿನಿಕ್‌ಗೆ ಬ್ಯಾಂಡೇಜ್ ಬದಲಾಯಿಸಲು ಹೋದಾಗ, ಗಾಯವು ಅಪಾಯಕಾರಿಯಾಗಿ ಕಾಣುತ್ತಿದೆ ಎಂದು ಅವರು ಹೇಳಿದರು" ಎಂದು ಉಮಾಶಂಕರ್ ಹೇಳುತ್ತಾರೆ. ಯಾದವ್ ಕುಟುಂಬವು ಇನ್ನೂ ಎರಡು ಆಸ್ಪತ್ರೆಗಳಿಗೆ ಭೇಟಿ ನೀಡಿತು, ನಂತರ 2015ರ ಮಧ್ಯದಲ್ಲಿ ಯಾರೋ ಒಬ್ಬರು ಪಾಟ್ನಾದ ಮಹಾವೀರ್ ಕ್ಯಾನ್ಸರ್ ಸಂಸ್ಥೆಗೆ ಭೇಟಿ ನೀಡುವಂತೆ ಹೇಳಿದರು.

ತಿಂಗಳಿಗೊಮ್ಮೆ ಆಸ್ಪತ್ರೆಗೆ ಭೇಟಿ ನೀಡಲು ಆರಂಭಿಸಿದ ನಂತರ ಅವರ ಸಾಮಾನ್ಯ ಕುಟುಂಬ ಜೀವನವು ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿತ್ತೆಂದು ರಾಮುನಿ ಹೇಳುತ್ತಾರೆ. ಅವರು ಹೇಳುತ್ತಾರೆ, "ತಾಯಿಗೆ ಕ್ಯಾನ್ಸರ್ ಬಂದಾಗ, ಅದು ತಾಯಿಯ ಆರೋಗ್ಯದ ಮೇಲೆ ಮಾತ್ರವಲ್ಲ, [ಮನೆಯಲ್ಲಿ] ಎಲ್ಲದರ ಮೇಲೂ ಪರಿಣಾಮ ಬೀರುತ್ತದೆ. ಆ ಸಮಯದಲ್ಲಿ ನನಗೆ ಒಬ್ಬಳು ಸೊಸೆ ಮಾತ್ರ ಇದ್ದಳು, ಮತ್ತು ಆಕೆಗೆ ಇದೆಲ್ಲವನ್ನು ನಿರ್ವಹಿಸಲು ಸಾಧ್ಯವಾಗಲಿಲ್ಲ. ನಂತರ ಇನ್ನೂ ಮೂವರು ಮಕ್ಕಳಿಗೆ ಮದುವೆಯಾಯಿತು.

ಅವರ ಪುತ್ರರು ಸಹ ಚರ್ಮ ರೋಗಗಳನ್ನು ಹೊಂದಿದ್ದರು, ಅದಕ್ಕೆ ಅವರು ಈಗ ಕೈಪಂಪ್‌ನ ಕೊಳಕು ನೀರನ್ನು ದೂಷಿಸುತ್ತಾರೆ. ಅವರ ಮನೆಯಲ್ಲಿ 100-150 ಅಡಿ ಆಳದಲ್ಲಿ ಅಳವಡಿಸಿದ ಬೋರ್ ವೆಲ್ ಸುಮಾರು 25 ವರ್ಷಗಳಷ್ಟು ಹಳೆಯದು. ರಾಮುನಿ ಕೀಮೋಥೆರಪಿ, ಶಸ್ತ್ರಚಿಕಿತ್ಸೆ ಮತ್ತು ವಿಕಿರಣ ಚಿಕಿತ್ಸೆಗೆ ಒಳಪಡುವುದರಿಂದ, ಮನೆಯಲ್ಲಿ ಯಾವಾಗಲೂ ಗೊಂದಲದ ವಾತಾವರಣವಿತ್ತು. ಗಡಿ ಭದ್ರತಾ ಪಡೆಯ ನಿಯೋಜನೆಯಿಂದಾಗಿ ಅವರ ಪುತ್ರರೊಬ್ಬರು ಬಕ್ಸಾರ್‌ಗೆ ಬಂದು ಹೋಗುತ್ತಿದ್ದರು. ಅವರ ಇನ್ನೊಬ್ಬ ಪುತ್ರ ಹತ್ತಿರದ ಹಳ್ಳಿಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು, ಅವರ ದಿನದ ಹೆಚ್ಚಿನ ಸಮಯವನ್ನು ಅಲ್ಲಿನ ಶಾಲೆಯಲ್ಲಿ ಕಳೆಯುತ್ತಿದ್ದರು; ಕುಟುಂಬದ ಸದಸ್ಯರು ಕೃಷಿಯನ್ನು ಕೂಡಾ ನೋಡಿಕೊಳ್ಳಬೇಕಿತ್ತು.

ರಾಮುನಿ ಹೇಳುತ್ತಾರೆ, “ನನ್ನ ಕೊನೆಯ ಶಸ್ತ್ರಚಿಕಿತ್ಸೆಯ ನಂತರ, ನಾನು ಈ ಹೊಸದಾಗಿ ಮದುವೆಯಾದ ಮಹಿಳೆಯನ್ನು ನನ್ನ ಆಸ್ಪತ್ರೆಯ ವಾರ್ಡ್‌ನಲ್ಲಿ ನೋಡಿದೆ. ನಾನು ಅವಳ ಬಳಿಗೆ ಹೋದೆ, ಅವಳಿಗೆ ನನ್ನ ಗುರುತು ತೋರಿಸಿದೆ ಮತ್ತು ಚಿಂತೆ ಮಾಡುವಂತಹದ್ದು ಏನೂ ಇಲ್ಲ ಎಂದು ಹೇಳಿದೆ. ಅವಳಿಗೆ ಸ್ತನದ ಕ್ಯಾನ್ಸರ್ ಕೂಡ ಇತ್ತು, ಮತ್ತು ಅವಳ ಪತಿ ಅವಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿರುವುದನ್ನು ನೋಡಿ ನನಗೆ ಸಂತೋಷವಾಯಿತು; ಆದಾಗ್ಯೂ, ಅವರ ಮದುವೆಯಾಗಿ ಕೆಲವೇ ತಿಂಗಳುಗಳುಷ್ಟೇ ಕಳೆದಿದ್ದವು. ಆಕೆ ತನ್ನ ಸ್ವಂತ ಹಾಲನ್ನು ಮಗುವಿಗೆ ನೀಡಬಹುದು ಎಂದು ವೈದ್ಯರು ನಂತರ ನಮಗೆ ಹೇಳಿದರು. ಅದನ್ನು ಕೇಳಿ ನನಗೆ ಬಹಳ ಸಂತೋಷವಾಯಿತು.”

Ramuni Devi and Umashankar Yadav at the filtration plant on their farmland; shops selling RO-purified water have also sprung up
PHOTO • Kavitha Iyer

ರಾಮುನಿ ದೇವಿ ಮತ್ತು ಉಮಾಶಂಕರ್ ಯಾದವ್ ತಮ್ಮ ಜಮೀನಿನಲ್ಲಿರುವ ನೀರು ಶೋಧಿಸುವ ಘಟಕದಲ್ಲಿ; RO ಪ್ರಕ್ರಿಯೆಯಡಿ ಸೋಸಲಾಗಿರುವ ನೀರನ್ನು ಮಾರಾಟ ಮಾಡುವ ಅಂಗಡಿಗಳು ಸಹ ತೆರೆಯಲು ಪ್ರಾರಂಭಿಸಿವೆ

ಬರ್ಕಾ ರಾಜಪುರದಲ್ಲಿ ಅಂತರ್ಜಲ ತುಂಬಾ ಕೊಳಕಾಗಿದೆ ಎಂದು ಅವರ ಮಗ ಶಿವಜಿತ್ ಹೇಳುತ್ತಾರೆ. ಅವರು ಹೇಳುತ್ತಾರೆ, "ನಮ್ಮ ಸ್ವಂತ ತಾಯಿ ತೀವ್ರ ಅನಾರೋಗ್ಯಕ್ಕೆ ಒಳಗಾಗುವವರೆಗೂ ನಾವು ಆರೋಗ್ಯ ಮತ್ತು ನೀರಿನ ನಡುವಿನ ಸಂಬಂಧವನ್ನು ಅರಿತುಕೊಂಡಿರಲಿಲ್ಲ. ಆದರೆ ಇಲ್ಲಿನ ನೀರಿನ ಬಣ್ಣ ವಿಚಿತ್ರವಾಗಿದೆ. 2007ರ ತನಕ ಎಲ್ಲವೂ ಚೆನ್ನಾಗಿತ್ತು, ಆದರೆ ಅದರ ನಂತರ ನೀರಿನ ಬಣ್ಣ ಹಳದಿ ಬಣ್ಣಕ್ಕೆ ತಿರುಗುತ್ತಿರುವುದನ್ನು ನಾವು ನೋಡಿದೆವು. ಈಗ ನಾವು ಸ್ನಾನ ಮತ್ತು ತೊಳೆಯಲು ಮಾತ್ರ ಅಂತರ್ಜಲವನ್ನು ಬಳಸುತ್ತೇವೆ.

ಅಡುಗೆ ಮತ್ತು ಕುಡಿಯಲು, ಅವರು ಕೆಲವು ಸಂಸ್ಥೆಗಳಿಂದ ದಾನ ನೀಡಲಾದ ಸೋಸುವಿಕೆಗೆ ಒಳಪಡಿಸಿದ ನೀರನ್ನು ಬಳಸುತ್ತಾರೆ. ಇದನ್ನು ಸುಮಾರು 250 ಕುಟುಂಬಗಳು ಬಳಸುತ್ತವೆ, ಇದನ್ನು ಸೆಪ್ಟೆಂಬರ್ 2020ರಲ್ಲಿ (ಯಾದವ್ ಕುಟುಂಬದ ಭೂಮಿಯಲ್ಲಿ) ಸ್ಥಾಪಿಸಲಾಯಿತು, ಆದರೆ ಹಲವಾರು ವರದಿಗಳು ಕನಿಷ್ಠ 1999ರಿಂದ ಇಲ್ಲಿಯ ಅಂತರ್ಜಲವು ಕೊಳಕಾಗಿದೆ ಎಂದು ಹೇಳುತ್ತವೆ.

ಈ ನೀರು ಸೋಸುವ ಸ್ಥಾವರಗಳು ಅತ್ಯಂತ ಯಶಸ್ವಿಯಾಗಿವೆ ಎಂದು ಹೇಳಲು ಸಾಧ್ಯವಿಲ್ಲ. ಬೇಸಿಗೆಯಲ್ಲಿ ಇದರ ನೀರು ತುಂಬಾ ಬಿಸಿಯಾಗುತ್ತದೆ ಎಂದು ಹಳ್ಳಿಯ ಜನರು ಹೇಳುತ್ತಾರೆ. ಶಿವಜಿತ್ ಹೇಳುತ್ತಾರೆ, ಅಂಗಡಿಗಳಲ್ಲಿ RO ನೀರನ್ನು 20-ಲೀಟರ್ ಪ್ಲಾಸ್ಟಿಕ್ ಜಾಡಿಗಳಲ್ಲಿ, 20-30 ರೂ.ಗೆ ಮಾರಾಟ ಮಾಡುವ ಪರಿಪಾಠವು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಕೂಡ ಹೆಚ್ಚಾಗಿದೆ, ಆದರೆ ಈ ನೀರಿನಲ್ಲಿ ಆರ್ಸೆನಿಕ್ ಇದೆಯೋ ಇಲ್ಲವೋ ಎನ್ನುವುದು ಯಾರಿಗೂ ತಿಳಿದಿಲ್ಲ.

ಉತ್ತರ ಮತ್ತು ಪೂರ್ವ ಭಾರತದ ನದಿಗಳ ಉದ್ದಕ್ಕೂ ಆರ್ಸೆನಿಕ್ ಪೀಡಿತ ಬಯಲು ಪ್ರದೇಶಗಳ ಮೂಲಕ ಹಾದುಹೋಗುವ ಹೆಚ್ಚಿನ ನದಿಗಳು ಹಿಮಾಲಯದಲ್ಲಿ ಹುಟ್ಟುತ್ತವೆ ಎಂದು ಅಧ್ಯಯನವು ಬಹಿರಂಗಪಡಿಸಿದೆ. ಗಂಗೆಯ ಉದ್ದಕ್ಕೂ ಬಯಲು ಪ್ರದೇಶಗಳಲ್ಲಿನ ವಿಷಕಾರಿ ಮಾಲಿನ್ಯದ ಹಿಂದೆ ಭೂವೈಜ್ಞಾನಿಕ ಅಂಶಗಳಿವೆ; ಆಳವಿಲ್ಲದ ಅಂತರ್ಜಲದಲ್ಲಿ ಕಲ್ಲುಗಳ ಆಕ್ಸಿಡೀಕರಣವು ಆರ್ಸೆನೊಪಿರೈಟ್ ನಂತಹ ಖನಿಜಗಳಿಂದ ಆರ್ಸೆನಿಕ್ ಅನ್ನು ಬಿಡುಗಡೆ ಮಾಡುತ್ತದೆ. ಅಧ್ಯಯನಗಳ ಪ್ರಕಾರ, ಅಂತರ್ಜಲವನ್ನು ಕೃಷಿಗೆ ಅತಿಯಾಗಿ ಬಳಸುವುದರಿಂದ ನೀರಿನ ಮಟ್ಟದ ಕುಸಿತವು ಕೆಲವು ಹಳ್ಳಿಗಳಲ್ಲಿ ಹೆಚ್ಚುತ್ತಿರುವ ಮಾಲಿನ್ಯಕ್ಕೆ ಸಂಬಂಧಿಸಿರಬಹುದು. ಅವರು ಜೊತೆಗೆ ಹಲವಾರು ಇತರ ಕಾರಣಗಳನ್ನು ಸಹ ಸೂಚಿಸುತ್ತಾರೆ:

"ರಾಜಮಹಲ್ ಜಲಾನಯನ ಪ್ರದೇಶದಲ್ಲಿರುವ ಗೊಂಡ್ವಾನ ಕಲ್ಲಿದ್ದಲು ಸ್ತರಗಳನ್ನು ಒಳಗೊಂಡಂತೆ ಸಂಚಿತ ಆರ್ಸೆನಿಕ್ನ ಹಲವು ಮೂಲಗಳಿವೆ ಎಂದು ನಾವು ಸೂಚಿಸುತ್ತೇವೆ, ಇದರಲ್ಲಿ ಆರ್ಸೆನಿಕ್‌ನ ಪ್ರತಿ ಮಿಲಿಯನ್ (ಪಿಪಿಎಂ)ಗೆ 200 ಭಾಗಗಳಿವೆ; ಡಾರ್ಜಿಲಿಂಗ್ ಹಿಮಾಲಯದಲ್ಲಿ ಸಲ್ಫೈಡ್‌ಗಳ ಪ್ರತ್ಯೇಕವಾದ ಹೊರಹರಿವು ಇದ್ದು, ಇದು 0.8% ಆರ್ಸೆನಿಕ್ ಅನ್ನು ಹೊಂದಿರುತ್ತದೆ; ಮತ್ತು ಗಂಗಾ ನದಿ ಪರಿಸರದ ಮೇಲ್ಭಾಗದಲ್ಲಿರುವ ಇತರ ಮೂಲಗಳಲ್ಲಿ” ಎಂದು ಎಸ್‌ಕೆ ಆಚಾರ್ಯ, ಹಿಂದೆ ಭಾರತದ ಭೂವೈಜ್ಞಾನಿಕ ಸಮೀಕ್ಷೆಯಲ್ಲಿದ್ದವರು, ಮತ್ತು ಅವರೊಂದಿಗೆ ಇತರರು ಸೇರಿ 1999ರಲ್ಲಿ ನೇಚರ್ ನಿಯತಕಾಲಿಕೆಯಲ್ಲಿ ಒಂದು ಪ್ರಬಂಧವನ್ನು ಬರೆದಿದ್ದಾರೆ .

ಅಧ್ಯಯನವು ಆಳವಿಲ್ಲದ ಮತ್ತು ಅತ್ಯಂತ ಆಳವಾದ ಬಾವಿಗಳ ನೀರು ಕಡಿಮೆ ಆರ್ಸೆನಿಕ್ ಅನ್ನು ಹೊಂದಿದೆ ಎಂದು ತೋರಿಸುತ್ತದೆ, ಆದರೆ ಮಾಲಿನ್ಯವು 80ರಿಂದ 200 ಅಡಿ ಆಳದವರೆಗಿನ ಮೂಲಗಳಲ್ಲಿ ಕಂಡುಬರುತ್ತದೆ. ಹಳ್ಳಿಗಳಲ್ಲಿ ಜನರ ಅನುಭವಗಳೊಂದಿಗೆ ಇದು ಸ್ಪಷ್ಟವಾಗಿ ಪ್ರತಿಧ್ವನಿಸುತ್ತದೆ ಎಂದು ಡಾ. ಕುಮಾರ್ ಹೇಳುತ್ತಾರೆ, ಅಲ್ಲಿ ಅವರ ಸಂಸ್ಥೆಯು ದೊಡ್ಡ ಪ್ರಮಾಣದ ಅಧ್ಯಯನಕ್ಕಾಗಿ ನೀರಿನ ಮಾದರಿಗಳನ್ನು ಪರೀಕ್ಷಿಸುತ್ತದೆ; ಮಳೆನೀರು ಮತ್ತು ಆಳವಿಲ್ಲದ ಬಾವಿಗಳು ಕಡಿಮೆ ಆರ್ಸೆನಿಕ್‌ ಹೊಂದಿವೆ ಅಥವಾ ಇಲ್ಲವೇ ಇಲ್ಲ, ಆದರೆ ಬೋರ್‌ವೆಲ್ ನೀರು ಬೇಸಿಗೆಯ ತಿಂಗಳುಗಳಲ್ಲಿ ಅನೇಕ ಮನೆಗಳಲ್ಲಿ ಬಣ್ಣವನ್ನು ಬದಲಾಯಿಸುತ್ತದೆಂದು ಹೇಳುತ್ತಾರೆ.

*****

Kiran Devi, who lost her husband in 2016, has hardened and discoloured spots on her palms, a sign of arsenic poisoning. 'I know it’s the water...' she says
PHOTO • Kavitha Iyer
Kiran Devi, who lost her husband in 2016, has hardened and discoloured spots on her palms, a sign of arsenic poisoning. 'I know it’s the water...' she says
PHOTO • Kavitha Iyer

ಕಿರಣ್ ದೇವಿ 2016ರಲ್ಲಿ ಪತಿಯನ್ನು ಕಳೆದುಕೊಂಡರು. ಅವರ ಅಂಗೈಗಳ ಮೇಲೆ ಗಟ್ಟಿಯಾದ ಮತ್ತು ಮಸುಕಾದ ಬಣ್ಣದ ಕಲೆಗಳಾಗಿವೆ, ಇದು ನೀರಿನಲ್ಲಿ ಆರ್ಸೆನಿಕ್ ಇರುವಿಕೆಯನ್ನು ಸೂಚಿಸುತ್ತದೆ ಎಂದು ಅವರು ಹೇಳುತ್ತಾರೆ, 'ಅದು ನೀರಿನಿಂದಾಗಿ ಎಂದು ನನಗೆ ತಿಳಿದಿದೆ...'

ಬಕ್ಸಾರ್ ಜಿಲ್ಲೆಯ ಬಾರ್ಕಾ ರಾಜಪುರದಿಂದ ಉತ್ತರಕ್ಕೆ ನಾಲ್ಕು ಕಿಲೋಮೀಟರ್ ದೂರದಲ್ಲಿ  ತಿಲಕ್ ರಾಯ್ ಕಾ ಹಟ್ಟ ಎನ್ನುವ 340 ಮನೆಗಳ ಗ್ರಾಮವಿದೆ. ಇಲ್ಲಿನ ಬಹುತೇಕ ಕುಟುಂಬಗಳಿಗೆ ಸ್ವಂತ ಭೂಮಿಯಿಲ್ಲ. ಇಲ್ಲಿ, ಕೆಲವು ಮನೆಗಳ ಹೊರಗಿನ ಕೈ ಪಂಪ್‌ಗಳಿಂದ ತುಂಬಾ ಕೊಳಕು ನೀರು ಹೊರಬರುತ್ತದೆ.

ಪ್ರಮುಖ ಸಂಶೋಧಕ ಡಾ.ಕುಮಾರ್ ಹೇಳುತ್ತಾರೆ, 2013-14ರಲ್ಲಿ, ಮಹಾವೀರ್ ಕ್ಯಾನ್ಸರ್ ಸಂಸ್ಥೆ ನಡೆಸಿದ ಅಧ್ಯಯನವು ಈ ಹಳ್ಳಿಯ ಅಂತರ್ಜಲದಲ್ಲಿ, ವಿಶೇಷವಾಗಿ ತಿಲಕ್ ರಾಯ್ ಹಟ್ಟದ ಪಶ್ಚಿಮ ಭಾಗಗಳಲ್ಲಿ ಆರ್ಸೆನಿಕ್ ಪ್ರಮಾಣವನ್ನು ಹೆಚ್ಚು ತೋರಿಸಿದೆ. ಆರ್ಸೆನಿಕೋಸಿಸ್‌ನ ಸಾಮಾನ್ಯ ಲಕ್ಷಣಗಳು ಹಳ್ಳಿಗರಲ್ಲಿ "ವ್ಯಾಪಕವಾಗಿ" ಕಂಡುಬಂದಿವೆ: 28 ಪ್ರತಿಶತ ಅಂಗೈ ಮತ್ತು ಅಡಿಭಾಗಗಳಲ್ಲಿ ಹೈಪರ್‌ಕೆರಾಟೋಸಿಸ್ (ಲೆಸಿಯಾನ್ಸ್), 31 ಪ್ರತಿಶತದಷ್ಟು ಚರ್ಮದ ಪಿಗ್ಮೆಂಟೇಶನ್ ಅಥವಾ ಮೆಲನೋಸಿಸ್, 57 ಪ್ರತಿಶತದಷ್ಟು ಪಿತ್ತಜನಕಾಂಗದ ತೊಂದರೆಗಳು, 86 ಶೇಕಡಾ ಜಠರದುರಿತ, ಮತ್ತು 9 ಪ್ರತಿಶತ ಮಹಿಳೆಯರು ಅನಿಯಮಿತ ಮುಟ್ಟಿನ ಚಕ್ರದ ಸಮಸ್ಯೆಯಿಂದ ಬಳಲುತ್ತಿದ್ದರು.

ಕಿರಣ್ ದೇವಿಯ ಪತಿ ಬಿಚ್ಚು ಕಾ ಡೇರಾ ಎಂದು ಕರೆಯಲ್ಪಡುವ ಈ ಗ್ರಾಮದಲ್ಲಿ ಪ್ರತ್ಯೇಕವಾದ ಇಟ್ಟಿಗೆ ಮತ್ತು ಮಣ್ಣಿನ ಮನೆಯಲ್ಲಿ ವಾಸಿಸುತ್ತಿದ್ದರು. ಅವರು ಹೇಳುತ್ತಾರೆ, "ಹಲವಾರು ತಿಂಗಳುಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಆತ 2016ರಲ್ಲಿ ನಿಧನರಾದರು." ಕುಟುಂಬವು ಅವರನ್ನು ಸಿಮ್ರಿ ಮತ್ತು ಬಕ್ಸಾರ್‌ನಲ್ಲಿರುವ ಹಲವಾರು ವೈದ್ಯರ ಬಳಿಗೆ ಕರೆದೊಯ್ದಿತು, ಮತ್ತು ಅವರಿಗೆ ವಿಭಿನ್ನವಾಗಿ ಚಿಕಿತ್ಸೆ ನೀಡಲಾಯಿತು. 50ಕ್ಕಿಂತ ಹೆಚ್ಚಿನ ವಯಸ್ಸಿನವರಾದ ಕಿರಣ್, "ಅವರು ಟಿಬಿ ಅಥವಾ ಅಥವಾ ಲಿವರ್ ಕ್ಯಾನ್ಸರ್ ಎಂದು ಹೇಳಿದರು." ಎಂದು ಹೇಳುತ್ತಾರೆ. ಅವರು ಒಂದು ಸಣ್ಣ ಭೂಮಿಯ ತುಂಡನ್ನು ಹೊಂದಿದ್ದಾರೆ, ಆದರೆ ಅವರ ಗಂಡನ ಮುಖ್ಯ ಆದಾಯದ ಮೂಲವೆಂದರೆ ದಿನಗೂಲಿಯಾಗಿತ್ತು.

2018ರಿಂದ, ಕಿರಣ್ ದೇವಿಯವರ ಅಂಗೈಗಳು ಗಟ್ಟಿಯಾದ ಮತ್ತು ಮಸುಕಾದ ಬಣ್ಣದ ಕಲೆಗಳನ್ನು ಹೊಂದಿದ್ದು, ಇದು ನೀರಿನಲ್ಲಿ ಆರ್ಸೆನಿಕ್ ಕಲಬೆರಕೆಯನ್ನು ಸೂಚಿಸುತ್ತದೆ. "ಇದು ನೀರಿನ ಪರಿಣಾಮ ಎಂದು ನನಗೆ ತಿಳಿದಿದೆ, ಆದರೆ ನಾನು ನನ್ನ ಪಂಪ್ ಅನ್ನು ಬಳಸದಿದ್ದರೆ, ನೀರಿಗೆ ಏನು ಮಾಡುವುದು?" ಅವರ ಮನೆಯ ಕೈ ಪಂಪ್ ಮನೆಯ ಹೊರಗೆ, ಒಂದು ಸಣ್ಣ ಆವರಣದಲ್ಲಿದೆ, ಅಲ್ಲಿ ಒಂದು ಎತ್ತನ್ನು ಕಟ್ಟಲಾಗಿತ್ತು.

ಮಳೆಗಾಲ ಮುಗಿದ ನಂತರ, (ನವೆಂಬರ್‌ನಿಂದ ಮೇ) ನೀರಿನ ಗುಣಮಟ್ಟವು ಹದಗೆಡುತ್ತದೆ ಮತ್ತು ನೀರು ಬೆರೆಸಿದ ಚಹಾದಂತೆ ಕಾಣುತ್ತದೆ ಎಂದು ಅವರು ಹೇಳುತ್ತಾರೆ. ಅವರು ಕೇಳುತ್ತಾರೆ, “ನಾವು ಎರಡು ಹೊತ್ತಿನ ಊಟಕ್ಕೇ ಪಡಿಪಾಟಲುಪಡುತ್ತೇವೆ. ನಾನು ವೈದ್ಯರಲ್ಲಿಗೆ ಅಥವಾ ಪರೀಕ್ಷೆಗಾಗಿ ಪಾಟ್ನಾಗೆ ಹೇಗೆ ಹೋಗಲು ಸಾಧ್ಯ? ಅವರ ಅಂಗೈಗಳು ತುಂಬಾ ತುರಿಸುತ್ತಿರುತ್ತವೆ ಮತ್ತು ಡಿಟರ್ಜೆಂಟ್ ಬಾರ್ ಸ್ಪರ್ಶಿಸಿದಾಗ ಅಥವಾ ಜಾನುವಾರುಗಳ ಸಗಣಿಯನ್ನು ಎತ್ತಿ ಹಾಕುವಾಗ ಕೈ ಉರಿಯುತ್ತದೆ.

ರಾಮುನಿ ಹೇಳುತ್ತಾರೆ, "ಮಹಿಳೆಯರು ಮತ್ತು ನೀರಿನ ನಡುವೆ ನಿಕಟ ಸಂಬಂಧವಿದೆ, ಏಕೆಂದರೆ ಮನೆಯ ಎಲ್ಲಾ ಕೆಲಸಗಳನ್ನು ಈ ಎರಡರ ಸಹಾಯದಿಂದ ಮಾಡಲಾಗುತ್ತದೆ. ಹೀಗಾಗಿ, ನೀರು ಕೆಟ್ಟದಾಗಿದ್ದರೆ, ನಿಸ್ಸಂಶಯವಾಗಿ ಮಹಿಳೆಯರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಉಮಾಶಂಕರ್ ಹೇಳುವಂತೆ ಕ್ಯಾನ್ಸರ್ ಅನ್ನು ಸಾಮಾಜಿಕ ಕಳಂಕವೆಂದು ಪರಿಗಣಿಸಲಾಗುತ್ತದೆ, ಇದರಿಂದಾಗಿ ಅನೇಕ ಜನರು, ವಿಶೇಷವಾಗಿ ಮಹಿಳೆಯರು ಚಿಕಿತ್ಸೆಗೆ ಹೋಗಲು ಹಿಂಜರಿಯುತ್ತಾರೆ, ಮತ್ತು ಚಿಕಿತ್ಸೆ ಪಡೆಯುವುದು ತಡವಾಗುತ್ತದೆ.

ರಾಮುನಿಯವರಿಗೆ ಸ್ತನದ ಕ್ಯಾನ್ಸರ್ ಇರುವುದು ಪತ್ತೆಯಾದ ಕೂಡಲೇ, ಗ್ರಾಮದ ಅಂಗನವಾಡಿ ಜನರಿಗೆ ನೀರಿನ ಗುಣಮಟ್ಟದ ಬಗ್ಗೆ ಅರಿವು ಮೂಡಿಸುವ ಅಭಿಯಾನವನ್ನು ಆರಂಭಿಸಿತು. ರಾಮುನಿ ಅವರು ಮುಖ್ಯಸ್ಥರಾಗಿ ಆಯ್ಕೆಯಾದರೆ ಈ ದಿಕ್ಕಿನಲ್ಲಿ ಹೆಚ್ಚಿನ ಕೆಲಸ ಮಾಡಲು ಯೋಜಿಸುತ್ತಿದ್ದಾರೆ. ಅವರು ಹೇಳುತ್ತಾರೆ, "ಪ್ರತಿಯೊಬ್ಬರೂ ತಮ್ಮ ಮನೆಗಳಿಗೆ RO ನೀರನ್ನು ಖರೀದಿಸಲು ಸಾಧ್ಯವಿಲ್ಲ ಮತ್ತು ಎಲ್ಲಾ ಮಹಿಳೆಯರಿಗೂ ಸುಲಭವಾಗಿ ಆಸ್ಪತ್ರೆಗೆ ಹೋಗಲು ಸಾಧ್ಯವಿಲ್ಲ. ಈ ಕಷ್ಟವನ್ನು ನಿವಾರಿಸಲು ನಾವು ಇತರ ಮಾರ್ಗಗಳನ್ನು ಅನ್ವೇಷಿಸುವುದನ್ನು ಮುಂದುವರಿಸುತ್ತೇವೆ."

ಗ್ರಾಮೀಣ ಭಾರತದ ಹದಿಹರೆಯದ ಬಾಲಕಿಯರು ಮತ್ತು ಯುವತಿಯರ ಬಗ್ಗೆ PARI ಮತ್ತು ಕೌಂಟರ್‌ ಮೀಡಿಯಾ ಟ್ರಸ್ಟ್‌ನ ಬೆಂಬಲಿತ ರಾಷ್ಟ್ರವ್ಯಾಪಿ ವರದಿ ಮಾಡುವ ಯೋಜನೆಯು ಮಹತ್ವದ ಆದರೆ ಸಮಾಜದ ಅಂಚಿನಲ್ಲಿರುವ ಗುಂಪುಗಳ ಪರಿಸ್ಥಿತಿಯನ್ನು ಅನ್ವೇಷಿಸಲು, ಸಾಮಾನ್ಯ ಜನರ ಮಾತುಗಳು ಮತ್ತು ಜೀವಂತ ಅನುಭವಗಳ ಮೂಲಕ ತಿಳಿಯುವ ಉದ್ದೇಶವನ್ನು ಹೊಂದಿದೆ. ಇದು ಪಾಪ್ಯುಲೇಷನ್‌ ಆಫ್‌ ಇಂಡಿಯಾದ ಬೆಂಬಲವನ್ನು ಹೊಂದಿದೆ.

ಈ ಲೇಖನವನ್ನು ಮರುಪ್ರಕಟಿಸುವ ಆಸಕ್ತಿಯಿದೆಯೇ ? ಹಾಗಿದ್ದಲ್ಲಿ ದಯವಿಟ್ಟು ಈ ಇ -ಮೇಲ್ ವಿಳಾಸವನ್ನು ಸಂಪರ್ಕಿಸಿ : [email protected] ಒಂದು ಕಾರ್ಬನ್ ಪ್ರತಿಯನ್ನು [email protected] . ಈ ವಿಳಾಸಕ್ಕೆ ಕಳುಹಿಸಿ

ಅನುವಾದ: ಶಂಕರಎನ್. ಕೆಂಚನೂರು

Kavitha Iyer

Kavitha Iyer has been a journalist for 20 years. She is the author of ‘Landscapes Of Loss: The Story Of An Indian Drought’ (HarperCollins, 2021).

Other stories by Kavitha Iyer
Illustration : Priyanka Borar

Priyanka Borar is a new media artist experimenting with technology to discover new forms of meaning and expression. She likes to design experiences for learning and play. As much as she enjoys juggling with interactive media she feels at home with the traditional pen and paper.

Other stories by Priyanka Borar
Editor and Series Editor : Sharmila Joshi

Sharmila Joshi is former Executive Editor, People's Archive of Rural India, and a writer and occasional teacher.

Other stories by Sharmila Joshi
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru