ಇಬ್ಬರಿಗೂ 17 ವರ್ಷ ಪ್ರಾಯ ಮತ್ತು ಇಬ್ಬರೂ ಗರ್ಭಿಣಿಯರು. ಅವರು ಕೆಲವೊಮ್ಮೆ ತಮ್ಮ ಪೋಷಕರು ತಮ್ಮ ಕಣ್ಣುಗಳು ಕೆಳಗೆ ನೋಡುತ್ತಿರಬೇಕೆಂದು ಕಲಿಸಿದ್ದನ್ನು ಮರೆತು ಜೋರಾಗಿ ನಗುತ್ತಿರುತ್ತಾರೆ. ಮುಂದಿನ ದಿನಗಳು ಹೇಗಿರುತ್ತವೋ ಎನ್ನುವ ಭಯದಲ್ಲಿ ಒಮ್ಮೊಮ್ಮೆ ನಡುಗುತ್ತಾರೆ.

ಸಲೀಮಾ ಪರ್ವೀನ್ ಮತ್ತು ಅಸ್ಮಾ ಖಾತೂನ್ (ಹೆಸರುಗಳನ್ನು ಬದಲಾಯಿಸಲಾಗಿದೆ) ಕಳೆದ ವರ್ಷ ಏಳನೇ ತರಗತಿಯಲ್ಲಿದ್ದರು, ಆದರೆ ಗ್ರಾಮದ ಸರ್ಕಾರಿ ಶಾಲೆ 2020ರಲ್ಲಿ ಇಡೀ ಶೈಕ್ಷಣಿಕ ವರ್ಷದ ಕಾಲ ಮುಚ್ಚಿತ್ತು. ಕಳೆದ ವರ್ಷ ಲಾಕ್ ಡೌನ್ ಪ್ರಾರಂಭವಾದ ತಕ್ಷಣ, ದೆಹಲಿ, ಪಾಟ್ನಾ, ಮತ್ತು ಮುಂಬೈನಲ್ಲಿ ಕೆಲಸ ಮಾಡುತ್ತಿದ್ದ ಅವರ ಕುಟುಂಬದ ಪುರುಷ ಸದಸ್ಯರು ಬಿಹಾರದ ಅರಾರಿಯಾ ಜಿಲ್ಲೆಯ ಬಂಗಾಳಿ ಟೋಲಾ ಬಸ್ತಿಯಲ್ಲಿರುವ ತಮ್ಮ ಮನೆಗೆ ಮರಳಿದರು. ಅದರ ನಂತರ, ಊರಿನಲ್ಲಿ ಮದುವೆಗಳ ಸಣ್ಣ ಗಡಿಬಿಡಿಯಿತ್ತು.

ಇಬ್ಬರು ಹುಡುಗಿಯರಲ್ಲಿ ಹೆಚ್ಚು ಮಾತುಗಾರ್ತಿಯಾದ ಅಸ್ಮಾ ಹೇಳುತ್ತಾಳೆ, "ಮದುವೆ ಕೊರೋನಾ ಸಮಯದಲ್ಲಿ ನಡೆಯಿತು. ಕೊರೋನಾ ಸಮಯದಲ್ಲಿ ನನಗೆ ಮದುವೆಯಾಯಿತು."

ಸಲೀಮಾಳ ನಿಕಾಹ್‌ (ಮುದುವೆ ಸಮಾರಂಭ) ಎರಡು ವರ್ಷಗಳ ಹಿಂದೆ ನಡೆಯಿತು. ಮತ್ತು ಅವಳಿಗೆ 18 ತುಂಬಿದ ನಂತರ ಗಂಡನೊಂದಿಗೆ ವಾಸಕ್ಕೆ ಹೋಗಬೇಕಿತ್ತು. ಆದರೆ ಇದರ ನಡುವೆ ಲಾಕ್‌ ಡೌನ್‌ ಬಂದಿತು. ಆಗ ಅವಳ 20 ವರ್ಷದ ಟೈಲರ್‌ ವೃತ್ತಿಯಲ್ಲಿರುವ ಗಂಡ ಮತ್ತು ಅದೇ ಊರಿನಲ್ಲಿ ವಾಸಿಸುವ ಅವರ ಕುಟುಂಬದವರು ಅವಳನ್ನು ಗಂಡನ ಮನೆಗೆ ಬರುವಂತೆ ಒತ್ತಾಯಿಸಿದರು. ಇದು ನಡೆದಿದ್ದು ಅಂದಾಜು ಜುಲೈ 2020ರ ಸಮಯದಲ್ಲಿ. ಆಗ ಅವನಿಗೆ ಕೆಲಸವೂ ಇರಲಿಲ್ಲ ಹಾಗೂ ಇಡೀ ದಿನ ಮನೆಯಲ್ಲಿರುತ್ತಿದ್ದ. ಅಲ್ಲದೆ ಉಳಿದ ಗಂಡಸರೂ ಮನೆಯಲ್ಲಿದ್ದ ಕಾರಣ ಅವಳು ಮನೆಗೆ ಬಂದಲ್ಲಿ ಒಂದು ದುಡಿಯುವ ಕೈ ಹೆಚ್ಚಾಗುತ್ತದೆನ್ನುವ ಆಲೋಚನೆ ಅವರದಾಗಿತ್ತು.

ಅಸ್ಮಾಳಿಗೆ ಅಷ್ಟು ಸಮಯವೂ ದೊರೆಯಲಿಲ್ಲ. ಅವಳ 23 ವರ್ಷದ ಅಕ್ಕ 2019ರಲ್ಲಿ ಕ್ಯಾನ್ಸರಿನಿಂದ ತೀರಿಕೊಂಡ ಕಾರಣ ಆಕೆಯ ಅಕ್ಕನ ಗಂಡ ಅಸ್ಮಾಳನ್ನು ಲಾಕ್‌ ಡೌನ್‌ ಸಮಯದಲ್ಲಿ ಮದುವೆ ಮಾಡಿಕೊಡುವಂತೆ ಒತ್ತಾಯಿಸತೊಡಗಿದ. ಈತ ವೃತ್ತಿಯಿಂದ ಪ್ಲಂಬರ್. ಮದುವೆಯ ಆಚರಣೆ ಜೂನ್‌ 2020ರಲ್ಲಿ ನಡೆಯಿತು.

ಇಬ್ಬರು ಹುಡುಗಿಯರಿಗೂ ಮಗು ಹೇಗೆ ಹುಟ್ಟುತ್ತದೆಯೆನ್ನುವುದು ತಿಳಿದಿಲ್ಲ. “ಇವೆಲ್ಲವೂ ತಾಯಿ ವಿವರಿಸಿ ಹೇಳಬೇಕಾದ ವಿಷಯವಲ್ಲ” ಎನ್ನುತ್ತಾರೆ ಅಸ್ಮಾಳ ತಾಯಿ ರುಕ್ಸಾನ. ಹುಡುಗಿಯರು ಇನ್ನಷ್ಟು ನಗುತ್ತಿದ್ದಂತೆ ಅವರು ಮುಂದುವರೆದು “ಲಾಜ್‌ ಕೀ ಬಾತ್‌ ಹೈ [ಮುಜುಗರ ತರಿಸುವ ವಿಷಯ]” ಎಂದರು. ಈ ಮಾತನ್ನು ಎಲ್ಲರೂ ಒಪ್ಪುತ್ತಾರೆ. ಇಂತಹ ಮಾಹಿತಿಗಳನ್ನು ಹೆಣ್ಣು ಮಕ್ಕಳ ಅತ್ತಿಗೆಯರು (ಭಾಬಿ) ಹೇಳಿಕೊಡಬೇಕೆಂದು ನಿರೀಕ್ಷಿಸಲಾಗಿದೆ. ಆದರೆ ಸಲೀಮಾ ಮತ್ತು ಅಸ್ಮಾರ ಅತ್ತಿಗೆಯರು ಈ ಕುರಿತು ಮಾಹಿತಿ ನೀಡುವಂತಹ ಪರಿಸ್ಥಿತಿಯಲ್ಲಿಲ್ಲ.

Health workers with display cards at a meeting of young mothers in a village in Purnia. Mostly though everyone agrees that the bride’s bhabhi is the correct source of information on such matters
PHOTO • Kavitha Iyer

ಪೂನಿಯಾದಲ್ಲಿನ ಹಳ್ಳಿಯೊಂದರಲ್ಲಿ ಆರೋಗ್ಯ ಕಾರ್ಯಕರ್ತರು ಯುವ ತಾಯಂದಿರ ಸಭೆಯೊಂದರಲ್ಲಿ ಫಲಕಗಳನ್ನು ತೋರಿಸುತ್ತಿರುವುದು. ಇಲ್ಲಿನ ಬಹುತೇಕರ ಅಭಿಪ್ರಾಯದಂತೆ ಇಂತಹ ವಿಷಯಗಳ ಕುರಿತು ಮನೆಯ ಹೆಣ್ಣುಮಕ್ಕಳಿಗೆ ತರಬೇತಿ ನೀಡಲು ಅವರ ಅತ್ತಿಗೆ ಸರಿಯಾದ ವ್ಯಕ್ತಿ

ಬಂಗಾಲಿ ಟೋಲಾದಲ್ಲಿ ಆಶಾ ಕಾರ್ಯಕರ್ತೆಯಾಗಿರುವ (ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತೆ) ಅಸ್ಮಾಳ ಚಿಕ್ಕಮ್ಮ - ರಾಣಿಗಂಜ್ ಬ್ಲಾಕ್‌ನ ಬೆಳ್ವಾ ಪಂಚಾಯತ್‌ನಲ್ಲಿರುವ ಹಳ್ಳಿಯು ಸುಮಾರು 40 ಕುಟುಂಬಗಳನ್ನು ಹೊಂದಿದೆ - ಎಲ್ಲವನ್ನೂ ಶೀಘ್ರದಲ್ಲೇ ಹುಡುಗಿಯರಿಗೆ ವಿವರಿಸುವುದಾಗಿ ಭರವಸೆ ನೀಡುತ್ತಾರೆ.

ಅಥವಾ ಈ ಹುಡುಗಿಯರು ತಮಗಿಂತ ಕೇವಲ ಎರಡು ವರ್ಷ ದೊಡ್ಡವರಾದ ಜಾಕಿಯಾ ಪರ್ವೀನ್ ಅವರನ್ನು ಈ ಮಾಹಿತಿಗಾಗಿ ಕೇಳಬಹುದು. ಆಕೆಯ ಮಗ ನಿಜಾಮನಿಗೆ ಈಗ ಕೇವಲ 25 ದಿನಗಳು. ಅವನು ಅವಳನ್ನು ಹುಸಿ ಕಣ್ಣುಗಳಿಂದ ದಿಟ್ಟಿಸುತ್ತಾನೆ. ಕೆನ್ನೆಗೆ ದೃಷ್ಟಿ ಬೀಳದಂತೆ ಕಾಡಿಗೆ ಹಚ್ಚಲಾಗಿದೆ. ಜಾಕಿಯಾ ತನ್ನ ವಯಸ್ಸು 19 ಎಂದು ಹೇಳುತ್ತಾಳೆ ಆದರೆ ಆಕೆ ಅದಕ್ಕಿಂತ ಚಿಕ್ಕವಳು. ಸುತ್ತಿದ ಸೀರೆಯ ಮಡಿಕೆಗಳು ಆಕೆಯನ್ನು ಇನ್ನಷ್ಟು ದುರ್ಬಲವಾಗಿ ಮತ್ತು ಪೇಲವವಾಗಿ ಕಾಣುವಂತೆ ಮಾಡಿವೆ. ಅವಳು ಶಾಲೆಯ ಮಟ್ಟಿಲನ್ನು ಹತ್ತಿಯೇ ಇಲ್ಲ. 16ನೇ ವಯಸ್ಸಿನಲ್ಲಿ, ಅವಳಿಗೆ ಅವಳ ಸೋದರ ಸಂಬಂಧಿಯೊಬ್ಬನ ಜೊತೆ ಮದುವೆ ಮಾಡಿಸಲಾಯಿತು.

ಬಿಹಾರದ ಈ 'ಕೋವಿಡ್ ಬಾಲ ವಧುಗಳು' ಈಗ ಗರ್ಭಿಣಿಯರಾಗಿದ್ದಾರೆ ಎಂದು ಆರೋಗ್ಯ ಕಾರ್ಯಕರ್ತರು ಮತ್ತು ಸಂಶೋಧಕರ ಅಭಿಪ್ರಾಯ ಪಡುತ್ತಾರೆ. ಜೊತೆಗೆ ಈ ಬಾಲಕಿಯರು ಪೌಷ್ಟಿಕಾಂಶ ಮತ್ತು ಮಾಹಿತಿಯ ಕೊರತೆಯೊಂದಿಗೆ ಹೋರಾಡುತ್ತಿದ್ದಾರೆ. ಬಿಹಾರದ ಹಳ್ಳಿಗಳಲ್ಲಿ ಹದಿಹರೆಯದ ಹೆರಿಗೆ ಹೊಸದೇನಲ್ಲ. “ಚಿಕ್ಕ ಹುಡುಗಿಯರು ಮದುವೆಯಾದ ತಕ್ಷಣ ಗರ್ಭಿಣಿಯಾಗುತ್ತಾರೆ ಮತ್ತು ಒಂದು ವರ್ಷದೊಳಗೆ ಮಗುವಿಗೆ ಜನ್ಮ ನೀಡುತ್ತಾರೆ. ಇದು ಇಲ್ಲಿ ಸರ್ವೇ ಸಾಮಾನ್ಯ”ಎಂದು ತಾಲೂಕು ಆರೋಗ್ಯ ವ್ಯವಸ್ಥಾಪಕಿ ಪ್ರೇರಣಾ ವರ್ಮಾ ಹೇಳುತ್ತಾರೆ.

ರಾಷ್ಟ್ರೀಯ ಕುಟುಂಬ ಸಮೀಕ್ಷೆ ಸಮೀಕ್ಷೆ (NFHS-5, 2019-20) ಹೇಳುವಂತೆ 15-19 ವಯಸ್ಸಿನೊಳಗಿನ 11 ಪ್ರತಿಶತ ಹುಡುಗಿಯರು ಸಮೀಕ್ಷೆಯ ಸಮಯದಲ್ಲಿ ಮಗುವನ್ನು ಹೊಂದಿದ್ದರು ಅಥವಾ ಗರ್ಭಿಣಿಯಾಗಿದ್ದರು. ನಾವು ಇಡೀ ದೇಶದ ಅಂಕಿಅಂಶಗಳನ್ನು ನೋಡಿದರೆ, ಬಿಹಾರವೊಂದರಲ್ಲೇ ಒಟ್ಟು ಬಾಲ್ಯವಿವಾಹಗಳಲ್ಲಿ, 11 ಶೇಕಡಾ ಹೆಣ್ಣು ಮಕ್ಕಳ (18 ವರ್ಷಕ್ಕಿಂತಲೂ ಮೊದಲು) ಮತ್ತು 8 ಶೇಕಡಾ ಗಂಡು ಮಕ್ಕಳ (21 ವರ್ಷಕ್ಕಿಂತ ಮೊದಲು) ವಿವಾಹವಾಗಿರುವುದು ಕಂಡುಬಂದಿವೆ.

2016ರಲ್ಲಿ ಪಾಪ್ಯುಲೇಷನ್‌ ಕೌನ್ಸಿಲ್ ನಡೆಸಿದ ಇನ್ನೊಂದು ಸಮೀಕ್ಷೆಯು ಅದೇ ಚಿತ್ರಣವನ್ನು ನೀಡುತ್ತದೆ. ಆರೋಗ್ಯ ಮತ್ತು ಅಭಿವೃದ್ಧಿ ವಿಷಯಗಳ ಮೇಲೆ ಕೆಲಸ ಮಾಡುತ್ತಿರುವ ಈ ಸಂಸ್ಥೆಯ ಅಧ್ಯಯನವು 15ರಿಂದ 19 ವರ್ಷದೊಳಗಿನ ಹುಡುಗಿಯರಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ, 18-19 ವಯಸ್ಸಿನೊಳಗಿನ 44% ಹುಡುಗಿಯರು 18 ವರ್ಷಕ್ಕಿಂತ ಮೊದಲೇ ಮದುವೆಯಾಗಿದ್ದರು ಎಂದು ಹೇಳುತ್ತದೆ.

ಈ ನಡುವೆ, ಕಳೆದ ವರ್ಷದ ಲಾಕ್‌ ಡೌನ್‌ ಸಮಯದಲ್ಲಿ ಸಣ್ಣ ವಯಸ್ಸಿನಲ್ಲೇ ಮದುವೆಯಾದ ಈ ಸಣ್ಣ ಪ್ರಾಯದ ಹುಡುಗಿಯರ ಪರಿಸ್ಥಿತಿಯು ಪತಿ ನಗರಕ್ಕೆ ಕೆಲಸಕ್ಕೆಂದು ಮರಳಿದ ನಂತರ ಸಂಪೂರ್ಣ ಅಪರಿಚಿತ ವಾತಾವರಣದಲ್ಲಿ ಬದುಕುವಂತಾಗಿದೆ.

Early marriage and pregnancies combine with poor nutrition and facilities in Bihar's villages, where many of the houses (left), don't have toilets or cooking gas. Nutrition training has become a key part of state policy on women’s health – an anganwadi worker in Jalalgarh block (right) displays a balanced meal’s components
PHOTO • Kavitha Iyer
Early marriage and pregnancies combine with poor nutrition and facilities in Bihar's villages, where many of the houses (left), don't have toilets or cooking gas. Nutrition training has become a key part of state policy on women’s health – an anganwadi worker in Jalalgarh block (right) displays a balanced meal’s components
PHOTO • Kavitha Iyer

ಬಿಹಾರದ ಹಳ್ಳಿಗಳಲ್ಲಿ ಅಪ್ರಾಪ್ರ ವಯಸ್ಸಿನ ಮದುವೆ ಮತ್ತು ಗರ್ಭಧಾರಣೆಯ ಸಮಸ್ಯೆಯೊಡನೆ ಪೌಷ್ಟಿಕಾಂಶ ಮತ್ತು ಆರೋಗ್ಯ ಸೇವೆಗಳ ಕೊರತೆಗಳೂ ಸೇರಿಕೊಂಡಿವೆ. ಅನೇಕ ಮನೆಗಳು (ಎಡ) ಶೌಚಾಲಯ ಮತ್ತು ಅಡುಗೆ ಅನಿಲವನ್ನು ಹೊಂದಿಲ್ಲ. ಪೌಷ್ಟಿಕಾಂಶವುಳ್ಳ ಆಹಾರ ಕುರಿತ ತರಬೇತಿಯು ರಾಜ್ಯ ಮಹಿಳಾ ಆರೋಗ್ಯ ನೀತಿಯ ಒಂದು ಪ್ರಮುಖ ಭಾಗವಾಗಿದೆ - ಜಲಾಲಗಢ ಬ್ಲಾಕ್ (ಬಲ)ನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಕಾರ್ಯಕ್ರಮದ ಭಾಗವಾಗಿ ಸಮತೋಲಿತ ಆಹಾರದ ಘಟಕಗಳನ್ನು ಪ್ರದರ್ಶಿಸುತ್ತಿರುವುದು

ಮುಂಬೈನ ಜರಿ ಕಸೂತಿ ಘಟಕದವೊಂದರಲ್ಲಿ ಕೆಲಸ ಮಾಡುತ್ತಿರುವ ಜಾಕಿಯಾ ಅವರ ಪತಿ, ಈ ವರ್ಷದ ಜನವರಿಯಲ್ಲಿ ನಿಜಾಮ್ ಹುಟ್ಟಿದ ಸಮಯದಲ್ಲಿ ಬಂದು ಕೆಲವು ದಿನಗಳ ನಂತರ ಹೊರಟುಹೋದರು. ಜಾಕಿಯಾ ಪ್ರಸವದ ನಂತರದ ಯಾವುದೇ ಪೌಷ್ಠಿಕಾಂಶದ ಪೂರಕಗಳನ್ನು ಸೇವಿಸುತ್ತಿಲ್ಲ, ಮತ್ತು ಹೆರಿಗೆಯ ನಂತರದ ತಿಂಗಳುಗಳವರೆಗಿನ ರಾಜ್ಯ-ಕಡ್ಡಾಯಗೊಳಿಸಿರುವ ಕ್ಯಾಲ್ಸಿಯಂ ಮತ್ತು ಕಬ್ಬಿಣದಂಶದ ಮಾತ್ರೆಗಳನ್ನು ಇನ್ನಷ್ಟೇ ಪೂರೈಸಬೇಕಾಗಿದೆ, ಆದರೆ ಅವರು ಅಂಗನವಾಡಿಯಿಂದ ಪ್ರಸವಪೂರ್ವ ಪೂರಕಗಳನ್ನು ಸಮಯಕ್ಕೆ ಸರಿಯಾಗಿ ಪಡೆದಿದ್ದರು.

"ಆಲೂ ಕಾ ತರ್ಕಾರಿ ಔರ್ ಚಾವಲ್‌ [ಬೇಯಿಸಿದ ಆಲೂಗಡ್ಡೆ ಮತ್ತು ಅನ್ನ]," ಇದು ಅವರ ದೈನಂದಿನ ಆಹಾರ. ಧಾನ್ಯಗಳು, ಹಣ್ಣುಗಳು ಇಲ್ಲವೇ ಇಲ್ಲ. ಮುಂದಿನ ಕೆಲವು ದಿನಗಳವರೆಗೆ, ಆಕೆಯ ಕುಟುಂಬವು ಮಾಂಸ ಅಥವಾ ಮೊಟ್ಟೆಗಳನ್ನು ತಿನ್ನದಂತೆ ನಿಷೇಧಿಸಿದೆ. ಇದಕ್ಕೆ ಕಾರಣ ಮಗುವಿಗೆ ಕಾಮಾಲೆ ಬಂದಿರಬಹುದು ಎನ್ನುವ ಅನುಮಾನ. ಮನೆಯಲ್ಲೇ ಕರೆಯುವ ದನವಿದೆ. ಆದರೆ ಮುಂದಿನ ಒಂದೆರಡು ತಿಂಗಳು ಆಕೆಗೆ ಹಾಲು ಕುಡಿಯಲು ಅವಕಾಶವಿಲ್ಲ. ಈ ಎಲ್ಲಾ ಆಹಾರಗಳು ಕಾಮಾಲೆಗೆ ಕಾರಣವಾಗಬಹುದು ಎಂದು ನಂಬಲಾಗುತ್ತದೆ.

ಈ ಕುಟುಂಬದವರು ವಿಶೇಷವಾಗಿ ನಿಜಾಮನ ಕುರಿತು ಕಾಳಜಿ ತೋರುತ್ತಿದ್ದಾರೆ, ತನ್ನ 16ನೇ ವಯಸ್ಸಿನಲ್ಲಿ ಮದುವೆಯಾದ ಜಾಕಿಯಾ ಸುಮಾರು ಎರಡು ವರ್ಷಗಳ ನಂತರ ಗರ್ಭಧರಿಸಿದ್ದಾಳೆ. "ನಾವು ಅವಳನ್ನು ಕೆಸರರಾ ಎನ್ನುವ ಊರಿನ ಬಾಬಾ ಬಳಿ ಕರೆದೊಯ್ಯಬೇಕಾಯಿತು. ಅಲ್ಲಿ ನಮಗೆ ಸಂಬಂಧಿಕರಿದ್ದಾರೆ. ಅವನು ಅವಳಿಗೆ ತಿನ್ನಲು ಒಂದು ಜಡಿಯನ್ನು (ಗಿಡಮೂಲಿಕೆ) ನೀಡಿದನು, ಮತ್ತು ಅದರ ನಂತರ ಅವಳು ಬೇಗನೆ ಗರ್ಭಧರಿಸಿದಳು. ಇದು ಜಂಗಲ್ ದವಾ (ಕಾಡು ಔಷಧೀಯ ಸಸ್ಯ)" ಎಂದು ಗೃಹಿಣಿಯಾಗಿರುವ ಜಾಕಿಯಾಳ ತಾಯಿ (ಅವಳ ತಂದೆ ಕಾರ್ಮಿಕ) ಹೇಳುತ್ತಾರೆ. ಅವಳು ಸಮಯಕ್ಕೆ ಸರಿಯಾಗಿ ಎರಡನೇ ಮಗುವಿಗೆ ಗರ್ಭಧರಿಸದಿದ್ದರೆ ಅವರು ಅವಳನ್ನು ಪುನಃ ಸುಮಾರು 50 ಕಿಲೋಮೀಟರ್ ದೂರದಲ್ಲಿರುವ ಕೆಸರರಾಗೆ ಕರೆದೊಯ್ಯುತ್ತಾರೆಯೇ? "ಇಲ್ಲ, ಅಲ್ಲಾಹನು ನಮಗೆ ಮಗುವನ್ನು ಕೊಟ್ಟಾಗ ಎರಡನೆಯ ಮಗು ಬರುತ್ತದೆ."

ಜಾಕಿಯಾಗೆ ಮೂವರು ತಂಗಿಯರಿದ್ದಾರೆ,  ಕೊನೆಯ ತಂಗಿಗೆ ಈಗಿನ್ನೂ ಐದು ವರ್ಷ. ಸುಮಾರು 20 ವರ್ಷದ ಅಣ್ಣನಿದ್ದು, ಅವರು ಸಹ ಕೂಲಿ ಕಾರ್ಮಿಕ. ಎಲ್ಲ ತಂಗಿಯರೂ ಶಾಲೆ ಮತ್ತು ಮದರಸಾಕ್ಕೆ ಹೋಗುತ್ತಾರೆ. ಕುಟುಂಬದ ಸೀಮಿತ ಆರ್ಥಿಕ ಲಭ್ಯತೆಯ ಕಾರಣದಿಂದಾಗಿ ಜಾಕಿಯಾ ಶಾಲೆಗೆ ದಾಖಲಾಗಲಿಲ್ಲ.

ಹೆರಿಗೆಯ ನಂತರ ಆಕೆಗೆ ಹೊಲಿಗೆಗಳನ್ನು ಹಾಕಲಾಗಿತ್ತೆ? ಜಾಕಿಯಾ ತಲೆದೂಗುತ್ತಾಳೆ. ಅದು ಈಗಲೂ ನೋವುಂಟುಮಾಡುತ್ತದೆಯೇ? ಈ ಪ್ರಶ್ನೆಗೆ ಅವಳು ಉತ್ತರಿಸದೆ ಕಣ್ತುಂಬಿಕೊಂಡಳು; ಮತ್ತು ನಿಜಾಮನ ಕಡೆಗೆ ಕಣ್ಣು ತಿರುಗಿಸಿದಳು.

A test for under-nourished mothers – the norm is that the centre of the upper arm must measure at least 21 cms. However, in Zakiya's family, worried that her baby could get jaundice, she is prohibited from consuming non-vegetarian food, eggs and milk
PHOTO • Kavitha Iyer

ಅಪೌಷ್ಟಿಕತೆ ಹೊಂದಿರುವ ತಾಯಂದಿರ ಪರೀಕ್ಷೆ - ತೋಳಿನ ಮಧ್ಯಭಾಗವು ಕನಿಷ್ಠ 21 ಸೆಂ.ಮೀ ಅಳತೆಯಿರಬೇಕು ಎಂದು ಹೇಳಲಾಗಿದೆ. ಅದಾಗ್ಯೂ ಮಗುವಿಗೆ ಜಾಂಡೀಸ್‌ ಬರುವ ಭಯದಿಂದ ಜಾಕಿಯಾ ಮಾಂಸ, ಮೊಟ್ಟೆ ಮತ್ತು ಹಾಲನ್ನು ಬಳಸದಂತೆ ಕುಟುಂಬ ನಿಷೇಧ ಹೇರಿದೆ

ಹೆರಿಗೆಯ ಸಮಯದಲ್ಲಿ ಅವಳು ಅಳುತ್ತಿದ್ದಳೇ ಎಂದು ಇನ್ನಿಬ್ಬರು ಗರ್ಭಿಣಿ ಹುಡುಗಿಯರು ಕೇಳುತ್ತಿದ್ದರೆ, ಆಕೆಯ ಸುತ್ತಲಿನ ಮಹಿಳೆಯರು ಪ್ರಶ್ನೆಗೆ ನಗುತ್ತಿದ್ದರು. ಜಾಕಿಯಾ ಸ್ಪಷ್ಟವಾಗಿ ಹೇಳಿದಳು, "ಬಹುತ್‌ ರೋಯಿ [ತುಂಬಾ  ಅತ್ತಿದ್ದೆ]." ಇದುವರೆಗಿನ ಮಾತುಕತೆಯಲ್ಲಿ ಅವಳು ಇದೇ ಮೊದಲ ಬಾರಿಗೆ ದೊಡ್ಡ ದನಿಯಲ್ಲಿ ಉತ್ತರಿಸಿದ್ದಳು. ನಾವು ನೆರೆಹೊರೆಯವರೊಬ್ಬರ ಭಾಗಶಃ ನಿರ್ಮಿಸಿದ ಮನೆಯಲ್ಲಿ ಕುಳಿತು, ಉತ್ತಮ ಸ್ಥಿತಿಯಲ್ಲಿದ್ದ, ಅಕ್ಕಪಕ್ಕದವರ ಪ್ಲಾಸ್ಟಿಕ್ ಕುರ್ಚಿಗಳ ಮೇಲೆ ಕುಳಿತಿದ್ದೆವು, ನೆಲದ ಮೇಲೆ ಅಲ್ಲಲ್ಲಿ ಸಿಮೆಂಟ್‌ ಚೆಲ್ಲಿತ್ತು.

ವಿಶ್ವ ಆರೋಗ್ಯ ಸಂಸ್ಥೆಯ ವರದಿ (ಜಾಗತಿಕ ಆರೋಗ್ಯ ಅಂದಾಜುಗಳು 2016: ಕಾರಣ, ವಯಸ್ಸು, ಲಿಂಗ, ದೇಶ ಮತ್ತು ಪ್ರದೇಶವಾರು ಸಾವುಗಳು, 2000-2016) ವಿಶ್ವದಾದ್ಯಂತ 10-19 ವಯಸ್ಸಿನ ಹದಿಹರೆಯದ ತಾಯಂದಿರು ಎಕ್ಲಾಂಪ್ಸಿಯಾ (ಪ್ರಸವಪೂರ್ವ ಅಥವಾ ಪ್ರಸವಾನಂತರದ ಅಧಿಕ ರಕ್ತದೊತ್ತಡ ಮತ್ತು ಪಾರ್ಶ್ವವಾಯು)ದಿಂದ ಬಳಲುತ್ತಿದ್ದಾರೆ ಎಂದು ಹೇಳುತ್ತದೆ. 20-24 ವಯಸ್ಸಿನ ತಾಯಂದಿರಲ್ಲಿ ಪ್ರಸವಾನಂತರದ (ಆರು ವಾರಗಳ ಅವಧಿಯಲ್ಲಿ) ಎಂಡೊಮೆಟ್ರಿಯೊಸಿಸ್ ಮತ್ತು ಇತರ ಸೋಂಕುಗಳ ಅಪಾಯ ಹೆಚ್ಚು. ನವಜಾತ ಶಿಶುಗಳು ಕಡಿಮೆ ಜನನ ತೂಕದ ಕಾರಣ ಗಂಭೀರ ಅನಾರೋಗ್ಯದ ಅಪಾಯವನ್ನು ಹೊಂದಿರುತ್ತಾರೆ.

ಅರಾರಿಯಾದ ಬ್ಲಾಕ್ ಹೆಲ್ತ್ ಮ್ಯಾನೇಜರ್ ಪ್ರೇರಣಾ ವರ್ಮಾ ಅವರಿಗೆ ಜಾಕಿಯಾ ಕುರಿತು ಇನ್ನೊಂದು ಕಾಳಜಿ ಇದೆ. "ನಿನ್ನ ಗಂಡನ ಬಳಿಗೆ ಹೋಗಬೇಡ," ಎಂದು ಅವರು ಈ ಯುವ ತಾಯಿಗೆ ಸಲಹೆ ನೀಡುತ್ತಾರೆ. ಬಿಹಾರದ ಹಳ್ಳಿಗಳಲ್ಲಿ ನಿರಂತರ ಗರ್ಭಾವಸ್ಥೆಯೊಂದು ಸಾಮಾನ್ಯ ಪ್ರಕ್ರಿಯೆಯಾಗಿದೆ.

ಈ ನಡುವೆ, ಸಲಿಮಾ, ಒಂದು ತಿಂಗಳ ಗರ್ಭಿಣಿ (ಫೆಬ್ರವರಿಯಲ್ಲಿ, ನಾನು ಭೇಟಿ ನೀಡಿದಾಗ), ಸ್ಥಳೀಯ ಅಂಗನವಾಡಿಯಲ್ಲಿ ಪ್ರಸವಪೂರ್ವ ಆರೈಕೆಗಾಗಿ ಇನ್ನೂ ನೋಂದಾಯಿಸಿಕೊಂಡಿರಲಿಲ್ಲ. ಅಸ್ಮಾ ಆರು ತಿಂಗಳ ಗರ್ಭಿಣಿ, ಆಕೆಯ ಹೊಟ್ಟೆ ಬಹಳ ಸಣ್ಣದಾಗಿ ಕಾಣುತ್ತಿತ್ತು. ಅವಳು 180 ದಿನಗಳವರೆಗೆ ಎಲ್ಲಾ ಗರ್ಭಿಣಿ ಮಹಿಳೆಯರಿಗೆ ಒದಗಿಸುವ 'ತಾಕತಿ ಕಾ ದವಾ' (ಶಕ್ತಿಗಾಗಿ ಔಷಧಗಳು), ಕ್ಯಾಲ್ಸಿಯಂ ಮತ್ತು ಕಬ್ಬಿಣದ ಪೂರಕಗಳನ್ನು ಪಡೆಯಲು ಆರಂಭಿಸಿದ್ದಾಳೆ.

ಆದರೆ NFHS-5 ಬಿಹಾರದಲ್ಲಿ ಕೇವಲ 9.3 ಶೇಕಡಾ ತಾಯಂದಿರು ತಮ್ಮ ಗರ್ಭಾವಸ್ಥೆಯಲ್ಲಿ 180 ಅಥವಾ ಅದಕ್ಕಿಂತ ಹೆಚ್ಚು ದಿನಗಳ  ಕಾಲ ಕಬ್ಬಿಣದ ಫೋಲಿಕ್ ಆಮ್ಲವನ್ನು ಸೇವಿಸುತ್ತಿದ್ದರು. ಕೇವಲ 25.2 ಪ್ರತಿಶತದಷ್ಟು ತಾಯಂದಿರು ಆರೋಗ್ಯ ಕೇಂದ್ರಕ್ಕೆ ಕನಿಷ್ಠ ನಾಲ್ಕು ಪ್ರಸವಪೂರ್ವ ಆರೈಕೆ ಭೇಟಿಗಳನ್ನು ನೀಡುತ್ತಾರೆ.

ಹುಡುಗ ಮದುವೆಯಾಗಲು ಇನ್ನೊಂದು ವರ್ಷ ಕಾಯಬಹುದಿತ್ತಲ್ಲವೇ ಎಂದು ಕೇಳಿದಾಗ ಅಸ್ಮಾಳ ಅಮ್ಮ ನೀಡಿದ ಉತ್ತರಕ್ಕೆ ಅಸ್ಮಾ ಆತಂಕದಿಂದ ನಗುತ್ತಿದ್ದಳು. “ಹುಡುಗನ ಕುಟುಂಬದವರು ಹುಡುಗಿ ಶಾಲೆಗೆ ಹೋಗುತ್ತಿರುವುದರಿಂದ ಅವಳು ಇನ್ನೊಂದು ವರ್ಷದಲ್ಲಿ ಯಾರೊಂದಿಗಾದರೂ ಓಡಿ ಹೋಗಬಹುದೆನ್ನುವ ಭಯಕ್ಕೆ ಬೇಗನೆ ಮದುವೆ ಮಾಡಿಕೊಡುವಂತೆ ಕೇಳಿದರು. ಅಲ್ಲದೆ ಇಲ್ಲಿ ಇಂತಹನ ಘಟನೆಗಳು ಆಗಾಗ ನಡೆಯುತ್ತಿರುತ್ತವೆ.” ಎಂದು ರುಕ್ಸಾನ ಹೇಳುತ್ತಾರೆ.

PHOTO • Priyanka Borar

ನ್ಯಾಷನಲ್ ಫ್ಯಾಮಿಲಿ ಹೆಲ್ತ್ ಸರ್ವೇ (2019-20) ಪ್ರಕಾರ 15-19 ವಯೋಮಾನದ ಹುಡುಗಿಯರಲ್ಲಿ ಶೇಕಡ 11ರಷ್ಟು ಮಂದಿ ಈಗಾಗಲೇ ತಾಯಿಯಾಗಿದ್ದರು ಅಥವಾ ಸಮೀಕ್ಷೆಯ ಸಮಯದಲ್ಲಿ ಗರ್ಭಿಣಿಯಾಗಿದ್ದರು

*****

2016ರ ಪಾಪ್ಯುಲೇಷನ್‌ ಕೌನ್ಸಿಲ್ ಸಮೀಕ್ಷೆಯಲ್ಲಿ (ಉದಯ - Understanding Adolescents and Young Adults) ತಮ್ಮ ಗಂಡಂದಿರಿಂದ ಮಾನಸಿಕ, ದೈಹಿಕ ಮತ್ತು ಲೈಂಗಿಕ ದೌರ್ಜನ್ಯದ ಬಗ್ಗೆಯೂ ಹೇಳಿಕೊಂಡಿದ್ದರು: 15ರಿಂದ 19 ವರ್ಷ ವಯಸ್ಸಿನ ವಿವಾಹಿತ ಹುಡುಗಿಯರಲ್ಲಿ 27 ಪ್ರತಿಶತದಷ್ಟು ಹುಡುಗಿಯರು ಒಮ್ಮೆಯಾದರೂ ಹೊಡೆಸಿಕೊಂಡಿದ್ದಾರೆ ಮತ್ತು 37.4 ಶೇಕಡಾ ಹುಡುಗಿಯರಿಗೆ ಒಮ್ಮೆಯಾದರೂ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುವಂತೆ ಒತ್ತಾಯಿಸಲಾಗಿತ್ತು. ಅಲ್ಲದೆ, ಈ ವಯೋಮಾನದ 24.7 ಪ್ರತಿಶತದಷ್ಟು ವಿವಾಹಿತ ಹುಡುಗಿಯರು ಮದುವೆಯಾದ ತಕ್ಷಣ ಮಗುವನ್ನು ಹೆರುವಂತೆ ಕುಟುಂಬದ ಸದಸ್ಯರಿಂದ ಒತ್ತಡವನ್ನು ಅನುಭವಿಸಿದರು, ಮತ್ತು 24.3 ಪ್ರತಿಶತದಷ್ಟು ಜನರು ಮದುವೆಯಾದ ತಕ್ಷಣ ಮಗುವನ್ನು ಹೆರದಿದ್ದರೆ 'ಬಂಜೆ' ಎನ್ನುವ ಅಪವಾದವನ್ನು ಎದುರಿಸಬೇಕಾಗುತ್ತದೆಂದು ಹೆದರಿದ್ದರು.

ಪಾಟ್ನಾದಲ್ಲಿ ನೆಲೆಸಿರುವ ಮತ್ತು ‘ಸಕ್ಷಾಮಾ: ಇನಿಷಿಯೇಟಿವ್ ಫಾರ್ ವಾಟ್ ವರ್ಕ್ಸ್, ಬಿಹಾರ್’ ಎನ್ನುವ ಸಂಸ್ಥೆಯಲ್ಲಿ ಸಂಶೋಧನೆ ನಡೆಸುತ್ತಿರುವ ಅನಾಮಿಕಾ ಪ್ರಿಯದರ್ಶಿನಿ, ಲಾಕ್‌ಡೌನ್ ರಾಜ್ಯದಲ್ಲಿ ಬಾಲ್ಯ ವಿವಾಹವನ್ನು ಎದುರಿಸುವ ಸವಾಲನ್ನು ಇನ್ನಷ್ಟು ಕ್ಲಿಷ್ಟಕರವಾಗಿಸಿದೆಯೆನ್ನುವುದು ಸ್ಪಷ್ಟವಾಗಿದೆ ಎಂದು ಹೇಳುತ್ತಾರೆ. "2016-17ರಲ್ಲಿ ಯುಎನ್‌ಎಫ್‌ಪಿಎ- ರಾಜ್ಯ ಸರ್ಕಾರವು ಆರಂಭಿಸಿದ ಬಂಧನ್ ತೋಡ್ ಆಪ್‌ನಲ್ಲಿ, ಬಾಲ್ಯ ವಿವಾಹಗಳ ಬಗ್ಗೆ ಹಲವಾರು ವರದಿಗಳು ಅಥವಾ ದೂರುಗಳು ಬಂದವು" ಎಂದು ಅವರು ಹೇಳುತ್ತಾರೆ. ಆಪ್ ವರದಕ್ಷಿಣೆ ಮತ್ತು ಲೈಂಗಿಕ ಅಪರಾಧಗಳಂತಹ ಮಾಹಿತಿಯನ್ನು ನೀಡುತ್ತದೆ ಮತ್ತು ಬಳಕೆದಾರರು ಹತ್ತಿರದ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಅನುಮತಿಸುವ ಎಸ್‌ಒಎಸ್ (ತಕ್ಷಣದ ಸಹಾಯಕ್ಕಾಗಿ) ಬಟನ್ ಕೂಡಾ ಹೊಂದಿದೆ.

ಜನವರಿ 2021ರಲ್ಲಿ, ಸಕ್ಷಮ 'ಭಾರತದಲ್ಲಿ ಬಾಲ್ಯ ವಿವಾಹ, ವಿಶೇಷವಾಗಿ ಬಿಹಾರದ ಪ್ರಸ್ತುತ ಪರಿಸ್ಥಿತಿ' ಎಂಬ ಶೀರ್ಷಿಕೆಯ ವರದಿಯನ್ನು ಸಿದ್ಧಪಡಿಸಿತು. ವಿವರವಾದ ಸಮೀಕ್ಷೆ ನಡೆಸಲು ಸಂಸ್ಥೆ ಸಿದ್ಧತೆ ನಡೆಸಿದೆ. ಉತ್ತಮ ಶಿಕ್ಷಣ, ಇತರ ಹಲವು ಸರ್ಕಾರಿ ಯೋಜನೆಗಳು, ಆರ್ಥಿಕ ಲಾಭದ ಯೋಜನೆಗಳು ಮತ್ತು ಹುಡುಗಿಯರು ಚಿಕ್ಕ ವಯಸ್ಸಿನಲ್ಲೇ ಮದುವೆಯಾಗುವುದನ್ನು ತಡೆಯಲು ಇರುವ ಹಲವು ಕ್ರಮಗಳಿಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆಯೆಂದು ಎಂದು ಅನಾಮಿಕಾ ಹೇಳುತ್ತಾರೆ. "ಈ ಕೆಲವು ಕಾರ್ಯಕ್ರಮಗಳು ಖಂಡಿತವಾಗಿಯೂ ಧನಾತ್ಮಕ ಪರಿಣಾಮವನ್ನು ಹೊಂದಿವೆ. ಉದಾ. ಹೆಣ್ಣು ಮಕ್ಕಳು ತಮ್ಮ ಶಿಕ್ಷಣವನ್ನು ಮುಂದುವರಿಸಲು ಹಣಕಾಸಿನ ಪ್ರಯೋಜನಗಳು ಅಥವಾ ಸೈಕಲ್ ಯೋಜನೆಗಳು ಮಾಧ್ಯಮಿಕ ಶಾಲೆಯಲ್ಲಿ ಹುಡುಗಿಯರ ಹಾಜರಾತಿ ಮತ್ತು ಅವರ ಚಲನಶೀಲತೆಯನ್ನು ಹೆಚ್ಚಿಸಿವೆ. ಈ ಯೋಜನೆಗಳ ಲಾಭ ಪಡೆಯುವ ಹುಡುಗಿಯರು ತಮ್ಮ 18ನೇ ವಯಸ್ಸು ತಲುಪಿದ ತಕ್ಷಣವೇ ಮದುವೆಯಾಗುತ್ತಾರೆಯಾದರೂ, ಇದು ಒಂದು ಹಂತಕ್ಕೆ ಸ್ವಾಗತಾರ್ಹ” ಎಂದು ಅವರು ಹೇಳುತ್ತಾರೆ.

ಬಾಲ್ಯ ವಿವಾಹ ತಡೆ ಕಾಯ್ದೆ, 2016ನ್ನು ಏಕೆ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿಲ್ಲ ಎಂಬುದರ ಕುರಿತು ವರದಿಯು ಹೇಳಿದ್ದು, "ಬಿಹಾರದಲ್ಲಿ ಬಾಲ್ಯ ವಿವಾಹ ಕಾನೂನುಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಯಾವುದೇ ಅಧ್ಯಯನವು ಸಾರ್ವಜನಿಕವಾಗಿ ಲಭ್ಯವಿಲ್ಲ. ಆದರೆ ಇತರ ರಾಜ್ಯಗಳಾದ ಆಂಧ್ರಪ್ರದೇಶ, ಗುಜರಾತ್, ಪಶ್ಚಿಮ ಬಂಗಾಳ ಮತ್ತು ರಾಜಸ್ಥಾನಗಳಲ್ಲಿ ನಡೆಸಿದ ಅಧ್ಯಯನಗಳು ರಾಜಕೀಯ ಹಸ್ತಕ್ಷೇಪ ಮತ್ತು ಸಂಘಟಿತ ಗುಂಪುಗಳು ಮತ್ತು ಸ್ಥಾಪಿತ ಹಿತಾಸಕ್ತಿಗಳ ನೆಟ್‌ವರ್ಕ್‌ಗಳ ಪ್ರಭಾವದಿಂದಾಗಿ, ಸಂಬಂಧಿತ ಸಂಸ್ಥೆಗಳು ಬಾಲ್ಯ ವಿವಾಹ ತಡೆ ಕಾಯ್ದೆಯನ್ನು ಜಾರಿಗೆ ತರಲು ಹೆಣಗಾಡುವಂತಾಗಿದೆ"

ಬೇರೆ ರೀತಿಯಲ್ಲಿ ಹೇಳುವುದಾದರೆ, ರಾಜಕೀಯ ಬೆಂಬಲವುಳ್ಳ ಅಥವಾ ಶ್ರೀಮಂತ ಕುಟುಂಬಗಳು ಸೇರಿದಂತೆ ಸಮಾಜದಲ್ಲಿನ ವ್ಯಾಪಕವಾದ ಅಂಗೀಕಾರದಿಂದಾಗಿ ಬಾಲ್ಯ ವಿವಾಹಗಳನ್ನು ನಿಲ್ಲಿಸುವುದು ಸುಲಭವಲ್ಲ. ಮೇಲಾಗಿ, ಈ ಅಭ್ಯಾಸವು ಸಾಂಸ್ಕೃತಿಕ ಮತ್ತು ಧಾರ್ಮಿಕ ನಂಬಿಕೆಗಳೊಂದಿಗೆ ನಿಕಟ ಸಂಬಂಧ ಹೊಂದಿರುವುದರಿಂದಾಗಿ, ಸರ್ಕಾರವು ಇದರಲ್ಲಿ ಮಧ್ಯಪ್ರವೇಶಿಸುವುದು ಕಷ್ಟವಾಗುತ್ತದೆ.

Many young women who are pregnant learn about childbirth from display cards such as these. But 19-year-old Manisha Kumari of Agatola village says she doesn’t have much information about contraception, and is relying mostly on fate to defer another pregnancy
PHOTO • Kavitha Iyer
Many young women who are pregnant learn about childbirth from display cards such as these. But 19-year-old Manisha Kumari of Agatola village says she doesn’t have much information about contraception, and is relying mostly on fate to defer another pregnancy
PHOTO • Kavitha Iyer

ಅನೇಕ ಗರ್ಭಿಣಿ ಯುವತಿಯರು ಇಂತಹ ಚಿತ್ರಗಳ ಮೂಲಕ ಮಗುವಿನ ಜನನದ ಬಗ್ಗೆ ಮಾಹಿತಿಯನ್ನು ಪಡೆಯುತ್ತಾರೆ. ಆದಾಗ್ಯೂ, ಅಗತೋಲಾದ 19 ವರ್ಷದ ಮನಿಷಾ ಕುಮಾರಿ  ತನಗೆ ಗರ್ಭನಿರೋಧಕದ ಬಗ್ಗೆ ಹೆಚ್ಚು ತಿಳಿದಿಲ್ಲ ಮತ್ತು ಮುಂದಿನ ಗರ್ಭಧಾರಣೆಯನ್ನು ತಪ್ಪಿಸಲು ಅದೃಷ್ಟವನ್ನು ಅವಲಂಬಿಸಿರುವುದಾಗಿ ಹೇಳುತ್ತಾಳೆ

ಅರೇರಿಯಾದಿಂದ 50 ಕಿಮೀ ಪೂರ್ವದಲ್ಲಿರುವ ಪೂರ್ಣಿಯಾ ಜಿಲ್ಲೆಯ ಪೂರ್ಣಿಯಾ ಪೂರ್ವ ತಾಲೂಕಿನ ಅಗತೋಲಾ ಗ್ರಾಮದ ಮನಿಷಾ ಕುಮಾರಿ ಅವರ ತಾಯಿಯ ಮನೆಯ ವರಾಂಡಾದ ಆಹ್ಲಾದಕರ ನೆರಳಿನಲ್ಲಿ ತನ್ನ ಒಂದು ವರ್ಷದ ಮಗುವಿಗೆ ಆಹಾರವನ್ನು ತಿನ್ನಿಸುತ್ತಿದ್ದರು. ಅವರು ತನಗೆ 19 ವರ್ಷ ಎಂದು ಹೇಳುತ್ತಾರೆ. ಆಕೆಗೆ ಗರ್ಭನಿರೋಧಕತೆಯ ಬಗ್ಗೆ ಹೆಚ್ಚು ತಿಳಿದಿಲ್ಲ ಮತ್ತು ಮುಂದಿನ ಗರ್ಭಧಾರಣೆಯನ್ನು ತಪ್ಪಿಸಲು ಅದೃಷ್ಟದ ಮೊರೆ ಹೋಗಿರುವುದಾಗಿ ಹೇಳುತ್ತಾರೆ. ಆಕೆಯ ತಂಗಿ, 17 ವರ್ಷದ ಮಣಿಕಾ, ಮದುವೆಯಾಗುವಂತೆ ಕುಟುಂಬವು ಒತ್ತಡ ಹೇರುತ್ತಿವುದರಿಂದಾಗಿ ಖಿನ್ನತೆಗೆ ಒಳಗಾಗಿದ್ದಾಳೆ. ಇವರಿಬ್ಬರ ತಾಯಿ ಗೃಹಿಣಿ, ಮತ್ತು ತಂದೆ ಕೃಷಿ ಕಾರ್ಮಿಕರು.

"ಮದುವೆಯಾಗಲು ಕನಿಷ್ಠ ವಯಸ್ಸು 18 ವರ್ಷವಾಗಿರಬೇಕು ಎಂದು ನನ್ನ ಸರ್ ಹೇಳಿದ್ದಾರೆ." ಅವಳು 10ನೇ ತರಗತಿ ಓದುತ್ತಿದ್ದ ಪೂರ್ಣಿಯಾ ನಗರದ ವಸತಿ ಶಾಲೆಯ ಶಿಕ್ಷಕರನ್ನು ಉಲ್ಲೇಖಿಸುತ್ತಾ ಮಣಿಕಾ ಹೇಳುತ್ತಾಳೆ. ಆದರೆ, ಮಾರ್ಚ್ 2020ರಲ್ಲಿ ಲಾಕ್‌ಡೌನ್ ಪ್ರಾರಂಭವಾದ ನಂತರ ಅವಳು ಮನೆಗೆ ಮರಳಿದಳು. ಈಗ ಅವಳ ಕುಟುಂಬವು ಅವಳನ್ನು ಶಾಲೆಗೆ ಕಳುಹಿಸುವ ಕುರಿತು ಗೊಂದಲಕ್ಕೊಳಗಾಗಿದೆ - ಈ ವರ್ಷ ಅನೇಕ ವಸ್ತುಗಳು ಕೈಗೆಟುಕದಂತಾಗಿವೆ, ದಿನ ಕಳೆದಂತೆ ಕುಟುಂಬಕ್ಕೆ ಇವೆಲ್ಲವನ್ನೂ ಭರಿಸುವುದು ಕಷ್ಟವಾಗಲಿದೆ. ಮನೆಗೆ ಮರಳಿದ ನಂತರ, ಮಣಿಕಾಳ ಮದುವೆ ನಿಶ್ಚಯವಾಗುವ ಆತಂಕವಿದೆ. ಅವಳು ಹೇಳುತ್ತಾಳೆ, "ಮದುವೆಯಾಗೆಂದು ಎಲ್ಲರೂ ಹೇಳುತ್ತಿದ್ದಾರೆ."

ನೆರೆಯ 20-25 ಮನೆಗಳ ರಾಮಘಾಟ್ ಎನ್ನುವ ಹಳ್ಳಿಯ 38 ಅಥವಾ 39 ವರ್ಷದ ಬೀಬಿ ತಾನ್ಝಿಲ್ ಅವರಿಗೆ ಎಂಟು ವರ್ಷದ ಮೊಮ್ಮಗ ಮತ್ತು ಎರಡು ವರ್ಷದ ಮೊಮ್ಮಗಳಿದ್ದಾರೆ. “ಹುಡುಗಿಯೊಬ್ಬಳಿಗೆ 19 ವರ್ಷದೊಳಗೆ ಮದುವೆಯಾಗದಿದ್ದರೆ ಅವಳನ್ನು ಬುಡಿಯಾ [ಮುದುಕಿ]ಯಂತೆ ಪರಿಗಣಿಸಲು ಪ್ರಾರಂಭಿಸುತ್ತಾರೆ, ಯಾರೂ ಅವಳನ್ನು ಮದುವೆಯಾಗುವುದಿಲ್ಲ" ಎನ್ನುತ್ತಾರೆ ತಾನ್ಝಿಲ್. "ನಾವು ಶೇರ್ ಶಹಬಾದಿ ಮುಸ್ಲಿಮರು, ನಾವು ನಮ್ಮ ಧಾರ್ಮಿಕ ಪಠ್ಯಗಳನ್ನು ಅಕ್ಷರಶಃ ಅನುಸರಿಸುತ್ತೇವೆ" ಎಂದು ಅವರು ಹೇಳುತ್ತಾರೆ. ನಮ್ಮಲ್ಲಿ ಗರ್ಭನಿರೋಧಕಗಳಿಗೆ ನಿಷೇಧವಿದೆ, ಹಾಗೂ ಹೆಣ್ಣುಮಕ್ಕಳು ವಯಸ್ಸಿಗೆ ಬಂದ ಕೂಡಲೇ ಅವರಿಗೆ ಮದುವೆ ಮಾಡಿಸಲಾಗುತ್ತದೆ ಎಂದು ಮುಂದುವರೆದು ಹೇಳುತ್ತಾರೆ. ತಾನ್ಝಿಲ್‌ ಅವರಿಗೆ ಮದುವೆಯಾದಾಗ 14 ವರ್ಷವಾಗಿತ್ತು. ಮದುವೆಯಾದ ವರ್ಷದೊಳಗೆ ಮಗುವೊಂದು ಜನಿಸಿತ್ತು. ನಾಲ್ಕನೆ ಮಗುವಾಗುವ ಹೊತ್ತಿಗೆ ಒಂದಿಷ್ಟು ತೊಂದರೆ ಕಾಣಿಸಿಕೊಂಡಿದ್ದರಿಂದಾಗಿ ಆ ಮಗುವಿನ ನಂತರ ಅವರಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಲಾಯಿತು. "ನಮ್ಮ ಪಂಥದಲ್ಲಿ ಯಾರೂ ಸ್ವತಃ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಮುಂದೆ ಬರುವುದಿಲ್ಲ.”  ಎಂದು ಗರ್ಭಾಶಯದ ಶಸ್ತ್ರಚಿಕಿತ್ಸೆ ಮತ್ತು ಸಂತಾನಹರಣ ಶಸ್ತ್ರಚಿಕಿತ್ಸೆಯ ಕುರಿತು ಅವರು ಹೇಳುತ್ತಾರೆ. ಎನ್ ಎಫ್ ಎಚ್ ಎಸ್-5 ಪ್ರಕಾರ, ಮಹಿಳೆಯರ ಸಂತಾನಹರಣ ಶಸ್ತ್ರಚಿಕಿತ್ಸೆಯು ಬಿಹಾರದಲ್ಲಿ ಅತ್ಯಂತ ಜನಪ್ರಿಯ ಗರ್ಭನಿರೋಧಕ ವಿಧಾನವಾಗಿದೆ. “ಈಗೆಲ್ಲ ಯಾರೂ ನನಗೆ 4-5 ಮಕ್ಕಳಿವೆಯೆಂದು ಹೇಳುವುದಿಲ್ಲ. ಅಷ್ಟೆಲ್ಲ ಮಕ್ಕಳನ್ನು ನೋಡಿಕೊಳ್ಳುವುದು ಕಷ್ಟ.”

ರಾಮಘಟ್ಟದ ​​ಶೇರ್ ಶಹಾಬಾದಿ ಮುಸ್ಲಿಮರ ಬಳಿ ಕೃಷಿ ಭೂಮಿಯಿಲ್ಲ. ಇಲ್ಲಿನ ಪುರುಷರು ಹತ್ತಿರದ ಪೂರ್ಣಿಯಾ ಪಟ್ಟಣದಲ್ಲಿ ದಿನಗೂಲಿ ಕೆಲಸ ಮಾಡುತ್ತಾರೆ. ಕೆಲವರು ಪಾಟ್ನಾ ಅಥವಾ ದೆಹಲಿಗೆ ತೆರಳುತ್ತಾರೆ, ಮತ್ತು ಕೆಲವು ಪುರುಷರು ಕಾರ್ಪೆಂಟರ್‌ ಮತ್ತು ಪ್ಲಂಬರ್‌ಗಳಾಗಿ ಕೆಲಸ ಮಾಡುತ್ತಾರೆ. ಅವರ ಪಂಗಡಕ್ಕೆ ಈ ಹೆಸರು ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿರುವ ಶೇರ್‌ಶಾಬಾದ್ ಪಟ್ಟಣದಿಂದ ಬಂದಿದೆಯೆಂದು ಅವರು ಹೇಳುತ್ತಾರೆ, ಇದಕ್ಕೆ ಶೇರ್ ಶಾ ಸೂರಿಯ ಹೆಸರನ್ನು ಇಡಲಾಗಿದೆ. ಅವರು ತಮ್ಮ ನಡುವೆ ಬಂಗಾಳಿ ಮಾತನಾಡುತ್ತಾರೆ ಮತ್ತು ತಮ್ಮದೇ ಸಮುದಾಯಕ್ಕೆ ಸೇರಿದ ಜನರ ದಟ್ಟವಾದ ಜನಸಂಖ್ಯೆಯ ನಡುವೆ ವಾಸಿಸುತ್ತಾರೆ. ಆವರನ್ನು ಹೆಚ್ಚಾಗಿ ಬಾಂಗ್ಲಾದೇಶಿಗಳೆಂದು ಆರೋಪಿಸಲಾಗುತ್ತದೆ.

Women of the Shershahbadi community in Ramghat village of Purnia
PHOTO • Kavitha Iyer

ಪೂರ್ನಿಯಾದ ರಾಮಘಾಟ್ ಗ್ರಾಮದಲ್ಲಿ ಶೇರ್ ಶಾಬಾದಿ ಸಮುದಾಯದ ಮಹಿಳೆಯರು

ಗ್ರಾಮದ ಆಶಾ ಕಾರ್ಯಕರ್ತೆ ಸುನೀತಾ ದೇವಿ ಹೇಳುವಂತೆ ರಾಮ್‌ ಘಾಟ್‌ ತರಹದ ಹಳ್ಳಿಗಳಲ್ಲಿ ಗರ್ಭನಿರೋಧಕಗಳ ವಿಷಯದಲ್ಲಿ ಸರ್ಕಾರದ ಹಸ್ತಕ್ಷೇಪವು ಬಹಳ ಸಣ್ಣ ಮಟ್ಟದಲ್ಲಿ ಪರಿಣಾಮ ಬೀರಿದೆಯೆಂದು ಹೇಳುತ್ತಾರೆ. ಏಕೆಂದರೆ ಇಲ್ಲಿ ಶಿಕ್ಷಿತರ ಸಂಖ್ಯೆ ಬಹಳ ಕಡಿಮೆ ಮತ್ತು ಸಮುದಾಯದಲ್ಲಿ ಬಾಲ್ಯ ವಿವಾಹ ಸಾಮಾನ್ಯವಾಗಿದೆ ಮತ್ತು ಗರ್ಭನಿರೋಧಕವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದಕ್ಕೆ ಉದಾಹರಣೆಯಾಗಿ ಅವರು 19 ವರ್ಷದ ಸಾದಿಯಾ (ಹೆಸರು ಬದಲಾಯಿಸಲಾಗಿದೆ) ಎನ್ನುವ ಯುವತಿಯನ್ನು ಪರಿಚಯಿಸಿದರು. ಕಳೆದ ಮೇ ತಿಂಗಳ ಲಾಕ್‌ ಡೌನ್ ಸಮಯದಲ್ಲಿ ಸಾದಿಯಾ ತನ್ನ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. ಅವರ ಎರಡು ಮಕ್ಕಳ ನಡುವಿನ ಅಂತರ ಕೇವಲ 13 ತಿಂಗಳು. ಸಾದಿಯಾರ ಗಂಡನ ಸಹೋದರಿ ತನ್ನ ಗಂಡನ ಅನುಮತಿಯೊಂದಿಗೆ ಗರ್ಭನಿರೋಧಕ ಚುಚ್ಚುಮದ್ದುಗಳನ್ನು ಬಳಸಲು ಪ್ರಾರಂಭಿಸಿದ್ದಾರೆ. ಗಂಡ ಸ್ಥಳೀಯವಾಗಿ ಕ್ಷೌರಿಕ ವೃತ್ತಿಯಲ್ಲಿದ್ದು, ಮತ್ತು ಅವನು ಈ ಅನುಮತಿಯನ್ನು ನೀಡಿರುವುದು ಆಶಾ ಕಾರ್ಯಕರ್ತೆಯ ವಿವರಣೆಯಿಂದಾಗಿಯಲ್ಲ, ತನಗಿರುವ ಹಣಕಾಸಿನ ಅಡಚಣೆಯಿಂದಾಗಿ.

ಕಾಲ ನಿಧಾನವಾಗಿ ಬದಲಾಗುತ್ತಿರುವುದಾಗಿ ತಾನ್ಝಿಲಾ ಹೇಳುತ್ತಾರೆ. "ಹೌದು ಖಂಡಿತ ಹೆರಿಗೆ ಸಮಯದಲ್ಲಿ ನೋವಿರುತ್ತದೆ. ಆದರೆ ಅಂದಿನ ದಿನಗಳಿಗೆ ಹೋಲಿಸಿದರೆ ಈಗ ಅಷ್ಟೆಲ್ಲ ಸಮಸ್ಯೆಗಳಿಲ್ಲ. ಇಂದು ನಾವು ತಿನ್ನುತ್ತಿರುವ ಆಹಾರವೂ ಅಪೌಷ್ಟಿಕತೆಯಿಂದ ಕೂಡಿರಬಹುದು." ಎಂದು ಅವರು ಹೇಳುತ್ತಾರೆ. ರಾಮ್‌ಘಾಟ್‌ನಲ್ಲಿ ಕೆಲವು ಮಹಿಳೆಯರು ಗರ್ಭನಿರೋಧಕ ಮಾತ್ರೆಗಳು, ಅಥವಾ ಇಂಜೆಕ್ಷನ್‌ಗಳು, ಅಥವಾ ಗರ್ಭಾಶಯದ ಒಳಗೆ ಆಳವಡಿಸುವಂತಹ ಸಾಧನವನ್ನು ಬಳಸಲು ಆರಂಭಿಸಿದ್ದಾರೆ ಎಂಬುದು ಆಕೆಗೆ ತಿಳಿದಿದೆ. "ಮಕ್ಕಳು ಹುಟ್ಟುವುದನ್ನು ತಪ್ಪಿಸುವುದು ತಪ್ಪು, ಆದರೆ ಇಂದಿನ ಜನರಿಗೆ ಹೆಚ್ಚು ಆಯ್ಕೆಯಿಲ್ಲವೆಂದು ಕಾಣುತ್ತದೆ."

ಮತ್ತೊಂದೆಡೆ, ಸುಮಾರು 55 ಕಿಮೀ ದೂರದಲ್ಲಿರುವ ಅರಾರಿಯಾದ ಬಂಗಾಳಿ ತೋಲಾದಲ್ಲಿನ, ಅಸ್ಮಾ ತಾನು ಶಾಲೆಯನ್ನು ಬಿಟ್ಟಿಲ್ಲ ಎಂದು ಹೇಳುತ್ತಾಳೆ. ಅವಳ ಮದುವೆಯಾದಾಗ, ಲಾಕ್‌ಡೌನ್‌ನಿಂದಾಗಿ ಶಾಲೆಯನ್ನು ಮುಚ್ಚಲಾಗಿತ್ತು. ಮದುವೆಯ ನಂತರ, ಅವಳು ಅಲ್ಲಿಂದ 75 ಕಿಮೀ ದೂರದಲ್ಲಿರುವ ಕಿಶನ್ ಗಂಜ್‌ಗೆ ತೆರಳಿದಳು. ಆದರೆ, ಫೆಬ್ರವರಿ 2021ರಲ್ಲಿ, ಅನಾರೋಗ್ಯದ ಕಾರಣಗಳಿಂದ ಅವಳು ತನ್ನ ತಾಯಿಯ ಮನೆಗೆ ಮರಳಿದಳು. ಮಗುವಿನ ಜನನದ ನಂತರ, ಅವಳು ತನ್ನ ಶಾಲೆ, ಕನ್ಯಾ ಮಿಡಲ್ ಸ್ಕೂಲ್‌ಗೆ ಹೋಗುವುದಾಗಿ ಹೇಳಿದ್ದಾಳೆ ಮತ್ತು ಅವಳ  ಪತಿಯೂ ಈ ಕುರಿತು ಆಕ್ಷೇಪಣೆ ಹೊಂದಿಲ್ಲವೆಂದು ತಿಳಿಸಿದಳು.

ಆರೋಗ್ಯದ ಬಗ್ಗೆ ಕೇಳಿದಾಗ, ರುಖ್ಸಾನಾ ಹೀಗೆ ಉತ್ತರಿಸಿದರು: "ಒಂದು ದಿನ ಸಂಜೆ ಅವಳ ಅತ್ತೆಯವರಿಂದ ನನಗೆ ಕರೆ ಬಂದಿತು, ಅವಳಿಗೆ ಒಂದಿಷ್ಟು ರಕ್ತಸ್ರಾವವಾಗಿತ್ತು. ನಾನು ಬಸ್ಸನ್ನು ಹಿಡಿದು ತಕ್ಷಣವೇ ಕಿಶನ್ ಗಂಜ್ ತಲುಪಿದೆ. ನಾವೆಲ್ಲರೂ ಭಯದಿಂದ ಅಳಲು ಆರಂಭಿಸಿದೆವು. ಅವಳು ಶೌಚಾಲಯಕ್ಕೆ ಹೋಗಿದ್ದಳು, ಮತ್ತು ಗಾಳಿಯಲ್ಲಿ ದೆವ್ವ, ಪಿಶಾಚಿಯೇನೋ ಇದ್ದಂತೆ ಕಾಣುತ್ತದೆ." ಅದರ ನಂತರ, ಗರ್ಭಿಣಿಯ ಸುರಕ್ಷತೆಗೆಂದು ಬಾಬಾ ಒಬ್ಬನನ್ನೂ ಕರೆಸಲಾಯಿತು. ಆದರೆ ಮರಳಿ ಮನೆಗೆ ಬಂದ ನಂತರ ಅಸ್ಮಾ ತಾನು ವೈದ್ಯರ ಬಳಿ ಹೋಗಲು ಬಯಸುವುದಾಗಿ ಮನೆಯವರಿಗೆ ಹೇಳಿದಳು. ಮರುದಿನ, ಅವರು ಅಸ್ಮಾಳನ್ನು ಕಿಶನ್‌ಗಂಜ್‌ನ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ಭ್ರೂಣಕ್ಕೆ ಯಾವುದೇ ಹಾನಿಯಾಗಿಲ್ಲವೆಂದು ಸೋನೋಗ್ರಫಿ ತೋರಿಸಿತು.

ಅಸ್ಮಾ ತನ್ನದೇ ನೆನಪಿನಲ್ಲಿ ಮುಗುಳ್ನಗುತ್ತಲೇ ಆತಂಕಭರಿತ ದನಿಯಲ್ಲಿ "ನಾನು ಮತ್ತು ಮಗು ಆರೋಗ್ಯವಾಗಿರುವುದನ್ನು ಖಚಿತಪಡಿಸಿಕೊಳ್ಳಲು ನಾನು ಬಯಸುತ್ತೇನೆ" ಎಂದು ಅವಳು ಹೇಳುತ್ತಾಳೆ. ಆಕೆಗೆ ಗರ್ಭನಿರೋಧಕಗಳ ಬಗ್ಗೆ ತಿಳಿದಿಲ್ಲ, ಆದರೆ ಈ ಮಾತುಕತೆಯು ಅವಳ ಕುತೂಹಲವನ್ನು ಕೆರಳಿಸಿದೆ. ಅವಳು ಈ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಕುತೂಹಲದಲ್ಲಿದ್ದಾಳೆ.

ಗ್ರಾಮೀಣ ಭಾರತದ ಹದಿಹರೆಯದ ಬಾಲಕಿಯರು ಮತ್ತು ಯುವತಿಯರ ಬಗ್ಗೆ PARI ಮತ್ತು ಕೌಂಟರ್‌ ಮೀಡಿಯಾ ಟ್ರಸ್ಟ್‌ನ ಬೆಂಬಲಿತ ರಾಷ್ಟ್ರವ್ಯಾಪಿ ವರದಿ ಮಾಡುವ ಯೋಜನೆಯು ಮಹತ್ವದ ಆದರೆ ಸಮಾಜದ ಅಂಚಿನಲ್ಲಿರುವ ಗುಂಪುಗಳ ಪರಿಸ್ಥಿತಿಯನ್ನು ಅನ್ವೇಷಿಸಲು, ಸಾಮಾನ್ಯ ಜನರ ಮಾತುಗಳು ಮತ್ತು ಜೀವಂತ ಅನುಭವಗಳ ಮೂಲಕ ತಿಳಿಯುವ ಉದ್ದೇಶವನ್ನು ಹೊಂದಿದೆ. ಇದು ಪಾಪ್ಯುಲೇಷನ್‌ ಆಫ್‌ ಇಂಡಿಯಾದ ಬೆಂಬಲವನ್ನು ಹೊಂದಿದೆ.

ಈ ಲೇಖನವನ್ನು ಮರುಪ್ರಕಟಿಸುವ ಆಸಕ್ತಿಯಿದೆಯೇ? ಇದಕ್ಕಾಗಿ ಈ ಇ-ಮೈಲ್ ವಿಳಾಸವನ್ನು ಸಂಪರ್ಕಿಸಿ: [email protected] ಒಂದು ಪ್ರತಿಯನ್ನು [email protected] . ಈ ವಿಳಾಸಕ್ಕೆ ಕಳುಹಿಸಿ

ಅನುವಾದ: ಶಂಕರ. ಎನ್. ಕೆಂಚನೂರು

Kavitha Iyer

Kavitha Iyer has been a journalist for 20 years. She is the author of ‘Landscapes Of Loss: The Story Of An Indian Drought’ (HarperCollins, 2021).

Other stories by Kavitha Iyer
Illustration : Priyanka Borar

Priyanka Borar is a new media artist experimenting with technology to discover new forms of meaning and expression. She likes to design experiences for learning and play. As much as she enjoys juggling with interactive media she feels at home with the traditional pen and paper.

Other stories by Priyanka Borar
Editor and Series Editor : Sharmila Joshi

Sharmila Joshi is former Executive Editor, People's Archive of Rural India, and a writer and occasional teacher.

Other stories by Sharmila Joshi
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru