ರಾತ್ರಿಯ ಕತ್ತಲೆ ಮತ್ತು ಇನ್ನೇನು ಬರಲಿರುವ ರೈಲುಗಳ ಶಬ್ದಗಳಿಗೆ ಹೆದರದವರು ತಮ್ಮನ್ನು ಯಾರೋ ಗಮನಿಸುತ್ತಿರಬಹುದೆನ್ನುವ ಭಾವಕ್ಕೆ ಬೆಚ್ಚಿಬೀಳುತ್ತಾರೆ.

“ರಾತ್ರಿ ಹೊತ್ತು ನಮಗೆ ಬಳಸೋದಕ್ಕೆ ಇರೋ ಟಾಯ್ಲೆಟ್‌ ಅಂದ್ರೆ ಅದು ರೈಲ್ವೇ ಹಳಿಗಳು ಮಾತ್ರ” ಎನ್ನುತ್ತಾರೆ 17 ವರ್ಷದ ನೀತು ಕುಮಾರಿ.

ನೀತು ದಕ್ಷಿಣ-ಮಧ್ಯ ಪಾಟ್ನಾದ ಯಾರಪುರ ಪ್ರದೇಶದ ವಾರ್ಡ್ ಸಂಖ್ಯೆ 9ರ ಕೊಳೆಗೇರಿಯ ನಿವಾಸಿ. ಈ ಬಡಾವಣೆಯ ಮನೆಗಳ ನಡು ಮಧ್ಯೆ ನಿರ್ಮಿಸಲಾಗಿರುವ ಸಿಮೆಂಟಿನ ಚೌಕಾಕಾರದ ಕಟ್ಟೆಯಿದ್ದು ಅಲ್ಲಿ ಒಂದಷ್ಟು ನಲ್ಲಿಗಳನ್ನು ಆಳವಡಿಸಲಾಗಿದೆ. ಅದರ ಬಳಿ ಕೇವಲ ಒಳ ಉಡುಪುಗಳಲ್ಲಿದ್ದ ಇಬ್ಬರು ಪುರುಷರು ತಮ್ಮ ಮೈಗೆ ಸಾಬೂನು ಹಚ್ಚಿಕೊಳ್ಳುತ್ತಿದ್ದರು. ಸುಮಾರು ಹತ್ತು ಹನ್ನೆರಡು ಹುಡುಗರು ನೀರಿನೊಂದಿಗೆ ಆಟವಾಡುತ್ತಾ ಒಬ್ಬರನ್ನೊಬ್ಬರು ಜಾರುವಂತೆ ತಳ್ಳುತ್ತಾ ನಗುತ್ತಿದ್ದರು.

ಅಲ್ಲಿಗೆ ಸುಮಾರು 50 ಮೀಟರ್‌ ದೂರದಲ್ಲಿದ್ದ ಶೌಚಾಲಯದ ಸಂಕೀರ್ಣವೊಂದು ಉಪಯೋಗವಿಲ್ಲದೆ ನಿಂತಿದೆ. ಅದರಲ್ಲಿದ್ದ ಎಲ್ಲ ಟಾಯ್ಲೆಟ್ಟುಗಳಿಗೂ ಬೀಗ ಹಾಕಲಾಗಿತ್ತು. ಇದನ್ನು ಸಾರ್ವಜನಿಕ ಬಳಕೆಗೆ ಹಸ್ತಾಂತರಿಸುವ ಕಾರ್ಯವು ಕೊರೋನಾ ಪಿಡುಗಿನಿಂದಾಗಿ ಮುಂದಕ್ಕೆ ಹೋಗಿದೆ. ರೈಲ್ವೆ ಹಳಿಯ ಹಿಂಭಾಗದಲ್ಲಿ ಕಸದ ರಾಶಿಯ ಪಕ್ಕದಲ್ಲಿರುವ ಈ ಸಾರ್ವಜನಿಕ ಶೌಚಾಲಯದ ಮೆಟ್ಟಿಲುಗಳ ಮೇಲೆ ಆಡುಗಳ ಹಿಂಡೊಂದು ಮಲಗಿದ್ದವು. ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಸಾರ್ವಜನಿಕ ಶೌಚಾಲಯವು ಇಲ್ಲಿಗೆ ಹತ್ತು ನಿಮಿಷದ ನಡಿಗೆಯ ದೂರದಲ್ಲಿದೆ. ಮತ್ತು ಕೆಲವರು ಯಾರಪುರದ ಗಡಿಯನ್ನು ದಾಟಿ ರೈಲ್ವೇ ಹಳಿಗಳ ಇನ್ನೊಂದು ಪಕ್ಕಕ್ಕೆ ಹೋಗುತ್ತಾರೆ. ಇಲ್ಲಿಗೆ ತಲುಪುವುದಕ್ಕೂ ಹತ್ತು ನಿಮಿಷಗಳ ಕಾಲ ನಡೆಯಬೇಕು.

“ಹುಡುಗರು ಎಲ್ಲಾದರೂ, ಯಾವ ಸಮಯದಲ್ಲಾದರೂ ಮಾಡಿಬಿಡುತ್ತಾರೆ. ಆದರೆ ಹುಡುಗಿಯರು ರೈಲ್ವೇ ಹಳಿಗಳನ್ನು ರಾತ್ರಿಯ ಹೊತ್ತಿನಲ್ಲಷ್ಟೇ ಬಳಸುತ್ತಾರೆ.” ಎನ್ನುತ್ತಾರೆ ಪ್ರಥಮ ವರ್ಷದ ಬಿಎ ವಿದ್ಯಾರ್ಥಿ ನೀತು. (ಈ ಲೇಖನದಲ್ಲಿ ಬರುವ ಎಲ್ಲಾ ವ್ಯಕ್ತಿಗಳ ಹೆಸರುಗಳನ್ನು ಬದಲಾಯಿಸಲಾಗಿದೆ) ಆದರೂ ಆಕೆ ತನ್ನನ್ನು ತಾನು ಅದೃಷ್ಟವಂತೆಯೆಂದು ಪರಿಗಣಿಸುತ್ತಾರೆ. ಏಕೆಂದರೆ ಆಕೆಗೆ ಹಗಲಿನಲ್ಲಿ ಬಳಸಲು ತನ್ನ ಮನೆಯಿಂದ 200 ಮೀಟರ್‌ ದೂರದಲ್ಲಿ ಆಂಟಿಯ ಮನೆಯಲ್ಲಿರುವ ಟಾಯ್ಲೆಟ್‌ ಇದೆ.

“ಅಲ್ಲದೆ ನಮ್ಮ ಮನೆಯಲ್ಲಿ ಎರಡು ಕೋಣೆಗಳಿವೆ. ಒಂದರಲ್ಲಿ ತಂಗಿ ಮಲಗುತ್ತಾಳೆ ಇನ್ನೊಂದರಲ್ಲಿ ನಾನು ಮತ್ತು ಅಮ್ಮ ಮಲಗುತ್ತೇವೆ,” ಎನ್ನುತ್ತಾರೆ ನೀತು. “ಉಳಿದ ಸಾಕಷ್ಟು ಮಹಿಳೆಯರು ಮತ್ತು ಹುಡುಗಿಯರು ರಾತ್ರಿ ವೇಳೆ ರೈಲ್ವೇ ಹಳಿಗಳ ಮೇಲೆ ಕತ್ತಲಿರುವಲ್ಲಿ ನಿಂತು ತಮ್ಮ ಸ್ಯಾನಿಟರಿ ಪ್ಯಾಡ್‌ಗಳನ್ನು ಬದಲಾಯಿಸುತ್ತಾರೆ.”

A public toilet block – the only one in this colony – stands unused, its handover to the community delayed by the pandemic
PHOTO • Kavitha Iyer

ಕಾಲೋನಿಗೆ ಲಭ್ಯವಿರುವ ಏಕೈಕ ಪಬ್ಲಿಕ್ ಟಾಯ್ಲೆಟ್.‌ ಅದೂ ಕೂಡಾ ಕೊರೋನಾ ಪಿಡುಗಿನ ಕಾರಣಕ್ಕೆ ಸಾರ್ವಜನಿಕರಿಗೆ ಹಸ್ತಾಂತರವಾಗಿಲ್ಲ

ಆಕೆಯ ಕಾಲೋನಿ, ವಾರ್ಡ್ ನಂ .9ರ ಕೊಳೆಗೇರಿ ಮತ್ತು ಅದರ ಪಕ್ಕದ ಯಾರ್‌ಪುರ ಅಂಬೇಡ್ಕರ್ ನಗರ, ಒಟ್ಟು ಸುಮಾರು 2,000 ಕುಟುಂಬಗಳನ್ನು ಹೊಂದಿದೆ, ಅವರಲ್ಲಿ ಹೆಚ್ಚಿನವರು ಕೂಲಿ ಕಾರ್ಮಿಕರು ಮತ್ತು ಬಹುತೇಕ ನಿವಾಸಿಗಳು ನೀತುವಿನ ಕುಟುಂಬದಂತೆ ಎರಡು ತಲೆಮಾರುಗಳಿಂದ ಅಲ್ಲಿ ನೆಲೆಸಿದ್ದಾರೆ. ಆ ಕುಟುಂಬಗಳಲ್ಲಿ ಹಲವು ದಶಕಗಳ ಹಿಂದೆ ಬಿಹಾರದ ಇತರ ಪ್ರದೇಶಗಳಿಂದ ಉದ್ಯೋಗ ಅರಸಿ ನಗರಕ್ಕೆ ಬಂದು ಇಲ್ಲಿ ನೆಲೆಸಿದವು.

ಯಾರ್‌ಪುರ ಅಂಬೇಡ್ಕರ್‌ ನಗರದ ಮಹಿಳೆಯರು ಬಹಳ ಕಾಲದಿಂದ ತಾವು ಸ್ಯಾನಿಟರಿ ಪ್ಯಾಡ್‌ ಬಳಸುತ್ತಿರುವುದಾಗಿ ಹೇಳುತ್ತಾರೆ. ಆದರೆ ಈ ಕೊರೋನಾ ಪಿಡುಗಿನಿಂದ ಉಂಟಾದ ಸಂಪಾದನೆಯ ಕೊರತೆಯ ಕಾರಣದಿಂದಾಗಿ ಕೆಲವು ಮಹಿಳೆಯರು ಪ್ಯಾಡ್‌ ಬದಲು ಬಟ್ಟೆಗಳನ್ನು ಬಳಸಲು ಪ್ರಾರಂಭಿಸಿದ್ದಾರೆ. ಮತ್ತು ದೇವಸ್ಥಾನದ ಆವರಣದಲ್ಲಿ ನನ್ನೊಂದಿಗೆ ಮಾತನಾಡಲು ಕುಳಿತಿದ್ದ ಬಹುತೇಕ ಮಹಿಳೆಯರು ತಮಗೆ ಟಾಯ್ಲೆಟ್‌ ಸೌಲಭ್ಯ ದೊರಕಿರುವುದಾಗಿ ಹೇಳಿದರು. ಆದರೆ ಆ ಟಾಯ್ಲೆಟ್ಟುಗಳು ಸರಿಯಾದ ನಿರ್ವಹಣೆಯಿಲ್ಲದೆ ಬಹಳ ಕೆಟ್ಟ ಸ್ಥಿತಿಯಲ್ಲಿದ್ದವು.ಟಾಯ್ಲೆಟ್‌ ರಾತ್ರಿಯೆಲ್ಲ ತೆರೆದಿರುತ್ತದೆಯಾದರೂ ಕತ್ತಲೆಯಲ್ಲಿ ಅದು ಇರುವಲ್ಲಿಗೆ ನಡೆದು ಹೋಗುವುದೇ ಸಾಹಸದ ಕೆಲಸ.

“ನಮಗೆ ಟಾಯ್ಲೆಟ್‌ ಹೆಚ್ಚು ದೂರವಿಲ್ಲ ಹಳಿ ದಾಟಿದರೆ ಟಾಯ್ಲೆಟ್ ಸಿಗುತ್ತದೆ. ಆದರೆ ವಾರ್ಡ್‌ ನಂಬರ್‌ 9ರಲ್ಲಿ ಟಾಯ್ಲೆಟ್ಟುಗಳೇ ಇಲ್ಲ.” ಎನ್ನುತ್ತಾರೆ 38 ವರ್ಷದ ಪ್ರತಿಮಾ ದೇವಿ. ಅವರು ಮಾರ್ಚ್‌ 2020ರಲ್ಲಿ ಲಾಕ್‌ ಡೌನ್‌ ಕಾರಣಕ್ಕಾಗಿ ಶಾಲೆಗಳನ್ನು ಮುಚ್ಚುವವರೆಗೂ ಶಾಲಾ ಬಸ್‌ ಒಂದರ ಸಹಾಯಕಿಯಾಗಿ ತಿಂಗಳಿಗೆ 3,500 ರೂಪಾಯಿಗಳನ್ನು ಗಳಿಸುತ್ತಿದ್ದರು. ಅಂದಿನಿಂದ ಅವರಿಗೆ ಯಾವುದೇ ರೀತಿಯ ಸಂಪಾದನೆಯಿಲ್ಲ. ಅವರ ಪತಿ ರೆಸ್ಟಾರೆಂಟ್ ಒಂದರಲ್ಲಿ ಅಡುಗೆ ಕೆಲಸ ಮಾಡುತ್ತಿದ್ದರು. ಅದು ಕೂಡಾ 2020ರ ಕೊನೆಯಲ್ಲಿ ಮುಚ್ಚಲ್ಪಟ್ಟಿತು.

ಪ್ರಸ್ತುತ ದಂಪತಿಗಳಿಬ್ಬರೂ ಯಾರ್‌ಪುರಕ್ಕೆ ಹೋಗುವ ಮುಖ್ಯರಸ್ತೆಯೊಂದರ ಪಕ್ಕದಲ್ಲಿ ತಳ್ಳುಗಾಡಿಯಲ್ಲಿ ಸಮೋಸಾ ಮತ್ತು ಇತರ ತಿಂಡಿಗಳನ್ನು ಮಾರುತ್ತಿದ್ದಾರೆ. ಪ್ರತಿಮಾ ಬೆಳಗಿನ 4 ಗಂಟೆಗೆ ಎದ್ದು ಅಡುಗೆ ತಯಾರಿಸುತ್ತಾರೆ. ನಂತರ ದಿನದ ವ್ಯಾಪಾರಕ್ಕೆ ಬೇಕಾಗುವ ತಿನಿಸುಗಳನ್ನು ತಯಾರಿಸಲು ಬೇಕಾಗುವ ವಸ್ತುಗಳನ್ನು ಖರೀದಿಸಿ ಮತ್ತೆ ಕುಟುಂಬಕ್ಕಾಗಿ ಅಡುಗೆ ತಯಾರಿಸುವುದು ಮತ್ತು ಸ್ವಚ್ಛಗೊಳಿಸುವ ಕಾರ್ಯಗಳನ್ನು ಮಾಡುತ್ತಾರೆ. “ನಾವೀಗ ಮೊದಲಿನಂತೆ ತಿಂಗಳಿಗೆ 10,000ದಿಂದ 12,000ದವರೆಗೆ ಸಂಪಾದಿಸುತ್ತಿಲ್ಲ. ಹೀಗಾಗಿ ಒಂದೊಂದು ರೂಪಾಯಿಯನ್ನೂ ಎಚ್ಚರದಿಂದ ಬಳಸಬೇಕಿದೆ.” ಎನ್ನುತ್ತಾರೆ. ಹಣಕಾಸಿನ ಕೊರತೆಯ ಕಾರಣಕ್ಕೆ ಸ್ಯಾನಿಟರಿ ನ್ಯಾಪ್ಕಿನ್‌ ಬಳಸುವುದನ್ನು ನಿಲ್ಲಿಸಿರುವ ಮಹಿಳೆಯರಲ್ಲಿ ಪ್ರತಿಮಾ ಕೂಡಾ ಒಬ್ಬರು.

ನೀತು ಕಾಲೇಜು ವಿದ್ಯಾರ್ಥಿ. ನೀತುವಿನ ತಂದೆ (ಮದ್ಯ ವ್ಯಸನಿಯಾಗಿದ್ದರು) ಕೆಲವು ವರ್ಷಗಳ ಹಿಂದೆ ನಿಧನರಾದರು. ಅವರ ತಾಯಿ ಕಾಲೋನಿಯಿಂದ ಐದು ಕಿಲೋಮೀಟರ್ ದೂರದಲ್ಲಿರುವ ಬೋರಿಂಗ್ ರಸ್ತೆಯ ಬಳಿಯ ಕೆಲವು ಮನೆಗಳಲ್ಲಿ ಅಡುಗೆ ಕೆಲಸ ಮಾಡುತ್ತಿದ್ದಾರೆ. ಇದರೊಂದಿಗೆ, ಸಣ್ಣ-ಪುಟ್ಟ ಶುಚಿಗೊಳಿಸುವ ಕೆಲಸಗಳ ಮೂಲಕ, ಅವರು ತಿಂಗಳಿಗೆ ಐದರಿಂದ ಆರು ಸಾವಿರ ರೂಪಾಯಿಗಳನ್ನು ಗಳಿಸುತ್ತಾರೆ.

ನೀತು ಹೇಳುತ್ತಾರೆ, "ಕಾಲೋನಿಯಲ್ಲಿ ನಮ್ಮ ಮನೆಯಿರುವ ಸಾಲಿನಲ್ಲಿ 8ರಿಂದ 10 ಮನೆಗಳಷ್ಟೇ ಸ್ವಂತ ಖಾಸಗಿ ಶೌಚಾಲಯಗಳನ್ನು ಹೊಂದಿವೆ, ಆದರೆ ಅವುಗಳನ್ನು ಹೊರತುಪಡಿಸಿ ಉಳಿದವರೆಲ್ಲರೂ ಹಳಿ ಅಥವಾ ಇತರ ಸಾರ್ವಜನಿಕ ಶೌಚಾಲಯಗಳಲ್ಲಿ ಶೌಚಕ್ಕೆ ಹೋಗುತ್ತಾರೆ." ಟಾಯ್ಲೆಟ್‌ ಇರುವ ಮನೆಗಳಲ್ಲಿ ಅವರ ಚಿಕ್ಕಮ್ಮನ ಮನೆಯೂ ಸೇರಿದೆ, ಆದರೆ ಆ ಶೌಚಾಲಯಗಳ ಚರಂಡಿಗಳು ತೆರೆದಿರುತ್ತವೆ ಮತ್ತು ಅವು ಯಾವುದೇ ಒಳಚರಂಡಿ ನಾಲೆಯೊಂದಿಗೆ ಸಂಪರ್ಕವನ್ನು ಹೊಂದಿಲ್ಲ. ಅವರು ಹೇಳುತ್ತಾರೆ, "ರಾತ್ರಿಯಲ್ಲಿ ಮಾತ್ರ ನನಗೆ ತೊಂದರೆ. ಆದರೆ, ಈಗ ಅದು ಅಭ್ಯಾಸವಾಗಿದೆ."

The Ward Number 9 slum colony in Yarpur: 'At night, the only toilet available is the railway track'
PHOTO • Kavitha Iyer

ಯಾರಪುರ ವಾರ್ಡ್ ಸಂಖ್ಯೆ 9ರ ಕಾಲೋನಿ: 'ರಾತ್ರಿಯ ಹೊತ್ತು ಇಲ್ಲಿ ಲಭ್ಯವಿರುವ ಟಾಯ್ಲೆಟ್‌ ಎಂದರೆ ರೈಲು ಹಳಿ ʼ

ರೈಲು ಹಳಿಗಳನ್ನು ಬಳಸಬೇಕಾದ ಅನಿವಾರ್ಯ ರಾತ್ರಿಗಳಲ್ಲಿ ನೀತು ಬರಲಿರುವ ರೈಲುಗಳ ಕುರಿತೂ ಎಚ್ಚರ ವಹಿಸಬೇಕಿರುತ್ತದೆ. ನೀತು ಇದಕ್ಕಾಗಿ ರೈಲು ಬರುವ ಮೊದಲು ಕೇಳಿಸುವ ಹಾರ್ನ್‌ ಮತ್ತು ರೈಲು ಹಳಿಗಳ ಕಂಪನದ ಸದ್ದಿನ ಕುರಿತು ಸದಾ ಎಚ್ಚರದಿಂದಿರುತ್ತಾರೆ. ಹಲವು ವರ್ಷಗಳ ಅನುಭವದಿಂದಾಗಿ ಅವರಿಗೆ ಈ ಹಳಿಗಳನ್ನು ಹಾದು ಹೋಗುವ ರೈಲುಗಳ ಸಮಯದ ಅಂದಾಜಿದೆ.

“ಹೀಗೆ ರೈಲು ಹಳಿಗಳನ್ನು ಬಳಸುವುದು ಸುರಕ್ಷಿತವಲ್ಲ ಮತ್ತು ಅಲ್ಲಿಗೆ ಹೋಗದಿರುವಂತಿದ್ದರೆ ಚೆನ್ನಾಗಿರುತ್ತಿತ್ತೆಂದು ನನಗೂ ಅನ್ನಿಸುತ್ತಿರುತ್ತದೆ. ಆದರೆ ಬೇರೆ ದಾರಿಯಾದರೂ ಎಲ್ಲಿದೆ? ಸಾಕಷ್ಟು ಹೆಣ್ಣುಮಕ್ಕಳು ಮತ್ತು ಹೆಂಗಸರು ಕೂಡಾ ತಮ್ಮ ಸ್ಯಾನಿಟರಿ ನ್ಯಾಪ್ಕಿನ್‌ ಅನ್ನು ಹಳಿಗಳ ಮೇಲೆಯೇ ಕತ್ತಲಿನ ಜಾಗ ಹುಡುಕಿ ಬದಲಾಯಿಸುತ್ತಾರೆ. ಒಮ್ಮೊಮ್ಮೆ ಗಂಡಸರು ನಮ್ಮತ್ತಲೇ ನೋಡುತ್ತಿರುತ್ತಾರೇನೋ ಅನ್ನಿಸುತ್ತದೆ,” ಎನ್ನುತ್ತಾರೆ ನೀತು. ಅಲ್ಲಿ ನೀರಿನಿಂದ ಕ್ಲೀನ್‌ ಮಾಡಿಕೊಳ್ಳುವುದು ಕೂಡಾ ಕಷ್ಟ. ಆದರೆ ಮನೆಯಲ್ಲಿ ತುಂಬಿಸಿಟ್ಟ ನೀರು ಇದ್ದ ಸಮಯದಲ್ಲಿ ಬಕೇಟಿನಲ್ಲಿ ನೀರು ಕೊಂಡು ಹೋಗುವುದಾಗಿ ನೀತು ಹೇಳುತ್ತಾರೆ.

ಗಂಡಸರು ನೋಡುತ್ತಿರಬಹುದೆನ್ನುವ ಭಾವನೆ ಬರುತ್ತದೆಯೆನ್ನುತ್ತಾರೆಯಾದರೂ, ಇದುವರೆಗೂ ನೀತುವಾಗಲಿ ಆಕೆಯ ಜೊತೆಗಿದ್ದ ಹುಡುಗಿಯರು ಅಥವಾ ಯುವತಿಯರು ತಾವು ಇದುವರೆಗೆ ಲೈಂಗಿಕ ದೌರ್ಜನ್ಯಕ್ಕೆ ಈಡಾದ ಉದಾಹರಣೆಗಳಿಲ್ಲವೆಂದು ಹೇಳುತ್ತಾರೆ. ಹಾಗಿದ್ದರೆ ಅಲ್ಲಿ ಅವರೆಲ್ಲರೂ ತಾವು ಸುರಕ್ಷಿತರೆಂದು ಭಾವಿಸುತ್ತಾರೆಯೇ? ನೀತುವಿನಂತೆ ಇತರರಿಗೂ ಮೊದಲಿನಿಂದಲೂ ಹೋಗುತ್ತಿರುವುದರಿಂದಾಗಿ ಇದೆಲ್ಲ ಅಭ್ಯಾಸವಾಗಿದೆ. ಸುರಕ್ಷತೆಗಾಗಿ ಅವರು ಜೋಡಿಯಾಗಿ ಅಥವಾ ಗುಂಪುಗಳಾಗಿ ಹೋಗುತ್ತಾರೆ.

ನೀತುವಿನ ತಾಯಿ ಸ್ಯಾನಿಟರಿ ನ್ಯಾಪ್ಕಿನ್‌ ಕೊಳ್ಳುವುದನ್ನು ಕೊರೋನಾ ಕಾಲದಲ್ಲಿ ನಿಲ್ಲಿಸಿದ್ದರು. “ಆದರೆ ನಾನು ಅಮ್ಮನಿಗೆ ಅದರ ಪ್ರಾಮುಖ್ಯತೆಯ ಕುರಿತು ವಿವರಿಸಿದೆ. ಈಗ ಮತ್ತೆ ಕೊಳ್ಳಲಾರಂಭಿಸಿದ್ದೇವೆ. ಕೆಲವೊಮ್ಮೆ ಎನ್‌ಜಿಒಗಳು ಒಂದು ಪ್ಯಾಕ್‌ ನ್ಯಾಪ್ಕಿನ್‌ ಕೊಡುತ್ತವೆ.” ಎನ್ನುತ್ತಾರೆ ನೀತು. ಆದರೆ ಬಳಸಿದ ಪ್ಯಾಡ್‌ಗಳ್ನು ಎಲ್ಲಿ ಎಸೆಯಬೇಕೆನ್ನುವುದು ಈಗಲೂ ಪ್ರಶ್ನೆಯಾಗಿಯೇ ಉಳಿದಿದೆ. “ಸಾಕಷ್ಟು ಹುಡುಗಿಯರು ಅವುಗಳನ್ನು ಪಬ್ಲಿಕ್‌ ಟಾಯ್ಲೆಟ್‌ ಅಥವಾ ರೈಲ್ವೆ ಹಳಿಗಳ ಮೇಲೆ ಬಿಟ್ಟು ಬರುತ್ತಾರೆ. ಯಾಕೆಂದರೆ ಅದನ್ನು ಒಂದು ಪೊಟ್ಟಣ ಮಾಡಿಕೊಂಡು ಕಸದ ತೊಟ್ಟಿಗಾಗಿ ಹುಡುಕುವುದು ತೀರಾ ಮುಜುಗರ ತರಿಸುವ ಕೆಲಸ.” ನೀತು ಮುಂದುವರೆದು ಹೇಳುತ್ತಾರೆ.

ನೀತು ಕಸದ ಗಾಡಿ ಆ ಸಮಯಕ್ಕೆ ಸರಿಯಾಗಿ ಬಂದರೆ ಅದಕ್ಕೆ ಕೊಡುತ್ತಾರೆ. ಅಥವಾ ಅಂಬೇಡ್ಕರ್‌ ನಗರದ ಕೊನೆಯಲ್ಲಿರುವ ದೊಡ್ಡ ಕಸದ ತೊಟ್ಟಿಗೆ ಎಸೆದು ಬರುತ್ತಾರೆ. ಒಂದು ವೇಳೆ ಸಮಯವಿಲ್ಲದಿದ್ದರೆ ಅವರೂ ರೈಲು ಹಳಿಯ ಮೇಲೆ ಎಸೆಯುತ್ತಾರೆ.

Left: Neetu's house is located alongside the railway track. Right: Women living in the colony have to wash and do other cleaning tasks on the unpaved street
PHOTO • Kavitha Iyer
Left: Neetu's house is located alongside the railway track. Right: Women living in the colony have to wash and do other cleaning tasks on the unpaved street
PHOTO • Kavitha Iyer

ಎಡ: ನೀತುವಿನ ಮನೆ ರೈಲ್ವೆ ಹಳಿಯ ಪಕ್ಕದಲ್ಲಿದೆ. ಬಲ: ಇಲ್ಲಿನ ಮಹಿಳೆಯರು ಬಟ್ಟೆ ಒಗೆಯುವುದು ಸೇರಿದಂತೆ ಎಲ್ಲ ಸ್ವಚ್ಛತೆಯ ಕೆಲಸಗಳನ್ನು ಕಾಲನಿಯ ಬೀದಿಯಲ್ಲೇ ಮಾಡಬೇಕು

ಯಾರ್‌ಪುರದಿಂದ ಸುಮಾರು ಮೂರು ಕಿಲೋಮೀಟರ್ ದೂರದಲ್ಲಿ, ದಕ್ಷಿಣ-ಮಧ್ಯ ಪಾಟ್ನಾದ ಹಜ್ ಭವನದ ಹಿಂದೆ ಸಾಗಡ್ಡಿ ಮಸೀದಿ ರಸ್ತೆಯುದ್ದಕ್ಕೂ ತರೆದ ಮೋರಿಯ ಪಕ್ಕ ಹಲವಾರು ಅರೆ ನಿರ್ಮಿತ ಮನೆಗಳ ಉದ್ದನೆಯ ಸಾಲಿದೆ. ಇಲ್ಲಿನ ಜನರೂ ದೀರ್ಘಕಾಲದಿಂದ ಇಲ್ಲಿಯೇ ವಾಸಿಸುತ್ತಿರುವ ವಲಸೆ ಕಾರ್ಮಿಕರು. ಇವರಲ್ಲಿ ಹಲವರು ಈಗಲೂ ಮದುವೆ,ಜಾತ್ರೆ ಇತ್ಯಾದಿ ವಿಶೇಷ ಸಂದರ್ಭಗಳಲ್ಲಿ ಬೇಗುಸರಾಯ್, ಭಾಗಲ್ಪುರ್‌ ಅಥವಾ ಕಗಾರಿಯಾ ಜಿಲ್ಲೆಯ ತಮ್ಮ ಊರುಗಳಿಗೆ ಹೋಗಿ ಬರುತ್ತಾರೆ.

18 ವರ್ಷದ ಪುಷ್ಪಾ ಕುಮಾರಿ ಚರಂಡಿಯ ಕೆಳ ದಂಡೆಯ ಬಳಿ ವಾಸಿಸುವವರಲ್ಲಿ ಒಬ್ಬರು. "ಯಂಹಾ ತಕ್‌ ಪಾನಿ ಭರ್ ಜಾತಾ ಹೈ” ಎಂದು ಹೇಳುತ್ತಾ ತನ್ನ ಕೈಗಳನ್ನು ತನ್ನ ಸೊಂಟದ ಮೇಲೆ ಇರಿಕೊಂಡು ಭಾರೀ ಮಳೆಯ ಸಂದರ್ಭದಲ್ಲಿ ಸಂಭವಿಸುವ ಪ್ರವಾಹದ ಮಟ್ಟವನ್ನು ಅವರು ವಿವರಿಸುತ್ತಾರೆ. ”ಪ್ರವಾಹದ ನೀರು ನಮ್ಮ ಮನೆಗಳು ಮತ್ತು ಶೌಚಾಲಯಗಳನ್ನು ತುಂಬಿಕೊಳ್ಳುತ್ತದೆ"

ಇಲ್ಲಿರುವ ಸುಮಾರು 250 ಮನೆಗಳ ಪೈಕಿ ಬಹುತೇಕ ಮನೆಗಳಲ್ಲಿ ಹೊರಗೆ ದೊಡ್ಡ ಮೋರಿಯ ಬದಿಯಲ್ಲಿ ಟಾಯ್ಲೆಟ್‌ ಇದೆ. ಈ ಟಾಯ್ಲೆಟ್ಟುಗಳ ನೀರು ನೇರವಾಗಿ ಎರಡು ಮೀಟರ್‌ ಅಗಲದ ತೆರೆದ ಮೋರಿಗೆ ಹೋಗಿ ತಲುಪುತ್ತದೆ.

ಕೆಲವು ಮನೆಗಳ ದೂರದಲ್ಲಿ ವಾಸಿಸುವ 21 ವರ್ಷದ ಸೋನಿ ಕುಮಾರಿ ಹೇಳುತ್ತಾರೆ, ಮಳೆಗಾಲದಲ್ಲಿ, ಕೆಲವೊಮ್ಮೆ ಇಡೀ ದಿನ ಟಾಯ್ಲೆಟ್ಟಿನೊಳಗೆ ನೀರು ತುಂಬಿರುತ್ತದೆ. ಅಂತಹ ಸಮಯದಲ್ಲಿ ನೀರು ಇಳಿಯುವ ತನಕ ಕಾಯದೇ ಬೇರೆ ದಾರಿಯೇ ಇಲ್ಲ.

ಖಗರಿಯಾ ಜಿಲ್ಲೆಯ ಭೂರಹಿತ ಕುಟುಂಬದಿಂದ ಬಂದಿರುವ ಅವರ ತಂದೆ, ಪಾಟ್ನಾ ಮುನ್ಸಿಪಲ್ ಕಾರ್ಪೊರೇಷನ್ನಿನಲ್ಲಿ ಗುತ್ತಿಗೆ ಆಧಾರದಲ್ಲಿ ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಾರೆ. ಅವರು ಕಸದ ಗಾಡಿಯನ್ನು ಓಡಿಸುತ್ತಾರೆ ಮತ್ತು ಬೀದಿಗಳಲ್ಲಿ ನಡೆದು ದೊಡ್ಡ ಕಸದ ತೊಟ್ಟಿಯಲ್ಲಿ ಕಸವನ್ನು ಸಂಗ್ರಹಿಸುತ್ತಾರೆ. ಸೋನಿ ಹೇಳುತ್ತಾರೆ, "ಅವರು ಲಾಕ್‌ ಡೌನ್ ಸಮಯದಲ್ಲಿಯೂ ಕೆಲಸ ಮಾಡಿದರು. ಅವರಿಗೆ (ಮತ್ತು ಅವರ ತಂಡಕ್ಕೆ) ಮಾಸ್ಕ್ ಮತ್ತು ಸ್ಯಾನಿಟೈಸರ್‌ಗಳನ್ನು ನೀಡಿ ಕೆಲಸಕ್ಕೆ ಹೋಗುವಂತೆ ಹೇಳಲಾಯಿತು." ಸೋನಿ ಎರಡನೇ ವರ್ಷದ ಬಿಎ ವಿದ್ಯಾರ್ಥಿನಿ. ಅವರ ತಾಯಿ ಹತ್ತಿರದ ಮನೆಯೊಂದರಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಕುಟುಂಬದ ಒಟ್ಟು ಮಾಸಿಕ ಆದಾಯ ರೂ 12,000.

ತೆರೆದ ಚರಂಡಿಯ ಪಕ್ಕದಲ್ಲಿರುವ ಅವರ ಕಾಲೋನಿಯಲ್ಲಿ, ಶೌಚಾಲಯಗಳನ್ನು ಮನೆಯ ಮುಂದೆ ನಿರ್ಮಿಸಲಾಗಿದೆ, ಇದನ್ನು ಮನೆಯ ಸದಸ್ಯರು ಮಾತ್ರ ಬಳಸುತ್ತಾರೆ. "ನಮ್ಮ ಶೌಚಾಲಯ ಕೆಟ್ಟ ಸ್ಥಿತಿಯಲ್ಲಿದೆ, ಮತ್ತು ಒಂದು ದಿನ ಅದರ ಚಪ್ಪಡಿ ಚರಂಡಿಗೆ ಬಿದ್ದಿತ್ತು" ಎಂದು ಪುಷ್ಪಾ ಹೇಳುತ್ತಾರೆ. ಪುಷ್ಪಾರ ತಾಯಿ ಗೃಹಿಣಿಯಾಗಿದ್ದು, ಆಕೆಯ ತಂದೆ ಗಾರೆ ಕೆಲಸದವರಾಗಿದ್ದು ನಿರ್ಮಾಣ ಸ್ಥಳಗಳಲ್ಲಿ ಕಾರ್ಮಿಕರಾಗಿದ್ದರು, ಆದರೆ ಹಲವಾರು ತಿಂಗಳುಗಳಿಂದ ಯಾವುದೇ ಕೆಲಸ ಸಿಕ್ಕಿಲ್ಲ.

Left: Pushpa Kumari holding up the curtain to her family's toilet cubicle. Right: In the Sagaddi Masjid Road colony, a flimsy toilet stands in front of each house
PHOTO • Kavitha Iyer
Left: Pushpa Kumari holding up the curtain to her family's toilet cubicle. Right: In the Sagaddi Masjid Road colony, a flimsy toilet stands in front of each house
PHOTO • Kavitha Iyer

ಎಡ: ಪುಷ್ಪಾ ಕುಮಾರಿ ತನ್ನ ಕುಟುಂಬಕ್ಕೆ ಸೇರಿದ ಸಣ್ಣ ಟಾಯ್ಲಟ್ ಅನ್ನು ಪರದೆ ಎತ್ತಿ ತೋರಿಸುತ್ತಿರುವುದು. ಬಲ: ಬಲ: ಸಗಡ್ಡಿ ಮಸೀದಿ ರಸ್ತೆ ಕಾಲೋನಿಯಲ್ಲಿರುವ ಪ್ರತಿಯೊಂದು ಮನೆಯೂ ಹೊರಗೆ ಒಂದೊಂದು ಮುರುಕು ಟಾಯ್ಲೆಟ್ಟುಗಳನ್ನು ಹೊಂದಿವೆ

ಟಾಯ್ಲೆಟ್‌ ಎಂದು ಕರೆಸಿಕೊಳ್ಳುವ ಈ ಸಣ್ಣ ಪೆಟ್ಟಿಗೆ ಮಾದರಿಯ ನಿರ್ಮಾಣಗಳನ್ನು ಸಿಮೆಂಟ್ ಶೀಟ್‌ ಅಥವಾ ಟಿನ್‌ ಶೀಟ್‌ ಮತ್ತು ಬಿದಿರಿನ ಕಂಬಗಳು ಮತ್ತು ರಾಜಕೀಯ ಪಕ್ಷದ ಬ್ಯಾನರ್‌ಗಳು, ಮರ ಮತ್ತು ಇಟ್ಟಿಗೆಗಳನ್ನು ಬಳಸಿ ನಿರ್ಮಿಸಲಾಗಿದೆ. ಅದರ ಒಳಗೆ, ಒಂದು ದೊಡ್ಡ ಸೆರಾಮಿಕ್ ಬೌಲ್ ಇದೆ, ಅದರಲ್ಲಿ ಹೆಚ್ಚಿನವು ಮುರಿದಿವೆ, ಕಲೆಯಾಗಿವೆ. ಕೆಲವು ಟಾಯ್ಲೆಟ್ಟುಗಳಲಲ್ಲಿ ಈ ಬೌಲ್‌ ಅನ್ನು ಸ್ವಲ್ಪ ಎತ್ತರಿಸಿದ ಕಟ್ಟೆಯ ಮೇಲೆ ಇರಿಸಲಾಗಿದೆ. ಈ ಟಾಯ್ಲೆಟ್ಟುಗಳಲ್ಲಿ ಒಂದಕ್ಕೂ ಬಾಗಿಲಿಲ್ಲ ಮತ್ತು ಒಂದು ಕೊಳಕು ಬಟ್ಟೆಯನ್ನು ಪರದೆಯಂತೆ ಇಳಿಬಿಡುವ ಮೂಲಕ ಒಂದಿಷ್ಟು ಗೌಪ್ಯತೆಯನ್ನು ಸೃಷ್ಟಿಸಲಾಗಿದೆ.

ಬಡಾವಣೆಯ ಕೆಲವು ಆರಂಭಿಕ ಮನೆಗಳಿಂದ ಕೆಲವು ಮೀಟರ್ ದೂರದಲ್ಲಿ, ಅಂದರೆ ಸಗಡ್ಡಿ ಮಸೀದಿ ರಸ್ತೆಯ ತುದಿಯಲ್ಲಿ, ಸರ್ಕಾರಿ ಪ್ರಾಥಮಿಕ ಶಾಲೆಯಿದೆ. ಈ ಕಟ್ಟಡದ ಹೊರಗೆ ಎರಡು ಶೌಚಾಲಯಗಳಿದ್ದು, ಕೊರೋನಾ ಪಿಡುಗಿನ ಆರಂಭದಿಂದಲೂ (ಕಳೆದ ವರ್ಷ ಮಾರ್ಚ್ 2020ರಿಂದ) ಶಾಲೆಯಂತೆ ಅವುಗಳಿಗೂ ಬೀಗ ಹಾಕಲಾಗಿದೆ.

ಕಾಲೋನಿಯಲ್ಲಿ ವಾಸಿಸುವ ಜನರು ಹತ್ತಿರದ ಸಾರ್ವಜನಿಕ ನಲ್ಲಿಯಿಂದ ನೀರು ತರುತ್ತಾರೆ, ಅದು ಅವರ ಸ್ನಾನ ಮಾಡುವ ಸ್ಥಳವೂ ಆಗಿದೆ. ಕೆಲವು ಮಹಿಳೆಯರು ತಮ್ಮ ಮನೆಯ ಹಿಂಭಾಗದಲ್ಲಿ ಪರದೆಗಳ ಹೊದಿಕೆಯ ಅಡಿಯಲ್ಲಿ ಮತ್ತು ಮೂಲೆಗಳಲ್ಲಿ ಒಂದಿಷ್ಟು ಗೌಪ್ಯತೆಯೊಂದಿಗೆ ಸ್ನಾನ ಮಾಡುತ್ತಾರೆ. ಅನೇಕ ಹುಡುಗಿಯರು ಮತ್ತು ಯುವತಿಯರು ತಮ್ಮ ಮನೆಗಳ ಹೊರಗೆ ಅಥವಾ ಸಾರ್ವಜನಿಕ ನಲ್ಲಿಗಳ ಬಳಿ ಗುಂಪು ಗುಂಪಾಗಿ ಪೂರ್ಣ ಬಟ್ಟೆಗಳನ್ನು ಧರಿಸಿ ಸ್ನಾನ ಮಾಡುತ್ತಾರೆ.

ಸೋನಿ ಹೇಳುತ್ತಾರೆ, "ನಾವು ಕೆಲವು ಹೆಂಗಸರು ಮತ್ತು ಹುಡುಗಿಯರು ಸ್ನಾನ ಮಾಡಲು ನಮ್ಮ ಮನೆಯ ಹಿಂದಿನ ಮೂಲೆಗೆ ನೀರಿನೊಂದಿಗೆ ಹೋಗುತ್ತೇವೆ. ಅಲ್ಲಿ ಸ್ವಲ್ಪ ಖಾಸಗಿತನವಿದೆ."

ಪುಷ್ಪ ಸ್ನಾನದ ಕುರಿತು ಹೇಳುತ್ತಾ, "ಅಡ್ಜಸ್ಟ್‌ ಕರ್‌ ಲೇತೇ ಹೈ [ಅಡ್ಜಸ್ಟ್‌ ಮಾಡಿಕೊಳ್ತೀವಿ], ಆದರೆ ನೀರಿನೊಂದಿಗೆ ಶೌಚಾಲಯಕ್ಕೆ ಹೋಗುವುದನ್ನು ಬಿಟ್ಟು ಬೇರೆ ಆಯ್ಕೆಗಳಿಲ್ಲ." ಅವರು ನಗುತ್ತಾ ಹೇಳುತ್ತಾರೆ, "ನೀವು ಏನು ಮಾಡಲು ಹೊರಟಿದ್ದೀರಿ ಎನ್ನುವುದು ಎಲ್ಲರಿಗೂ ಗೊತ್ತಾಗುತ್ತದೆ."

Left: During the monsoon, sometimes drain water recedes from the toilet after an entire day. Right: Residents use public taps, which are also bathing areas
PHOTO • Kavitha Iyer
Left: During the monsoon, sometimes drain water recedes from the toilet after an entire day. Right: Residents use public taps, which are also bathing areas
PHOTO • Kavitha Iyer

ಎಡ: ಮಳೆಗಾಲದಲ್ಲಿ, ಕೆಲವೊಮ್ಮೆ ಶೌಚಾಲಯಕ್ಕೆ ನುಗ್ಗಿದ ಪ್ರವಾಹದ ನೀರು ಹೊರಹೋಗಲು ಇಡೀ ದಿನ ತೆಗೆದುಕೊಳ್ಳುತ್ತದೆ. ಬಲ: ಕಾಲೋನಿಯಲ್ಲಿ ವಾಸಿಸುವ ಜನರು ಸಾರ್ವಜನಿಕ ಕೊಳಾಯಿಯನ್ನು ಬಳಸುತ್ತಾರೆ, ಅದು ಅವರ ಸ್ನಾನದ ಸ್ಥಳವೂ ಆಗಿದೆ

ಇದರ ಹೊರತಾಗಿ, ಇತರ ನೀರಿನ ಮೂಲಗಳ ಹೆಸರಿನಲ್ಲಿ ಕೆಲವೇ ಕೈ ಪಂಪ್‌ಗಳಿವೆ, ಇವುಗಳನ್ನು ಕಾಲೋನಿಯ ವಿವಿಧ ಸ್ಥಳಗಳಲ್ಲಿ ಸ್ಥಾಪಿಸಲಾಗಿದೆ. ಅದೇ ನೀರನ್ನು (ಕೈ ಪಂಪ್‌ಗಳು ಮತ್ತು ಸಾರ್ವಜನಿಕ ನಲ್ಲಿಗಳಿಂದ) ಎಲ್ಲಾ ಮನೆಗಳಲ್ಲಿ ಅಡುಗೆ ಮಾಡಲು ಮತ್ತು ಕುಡಿಯಲು ಸಹ ಬಳಸಲಾಗುತ್ತದೆ. ಎನ್‌ಜಿಒ ಸ್ವಯಂಸೇವಕರು ಮತ್ತು ಶಾಲಾ ಶಿಕ್ಷಕರು ಬಂದು ಜನರಿಗೆ ಶುದ್ಧ ಕುಡಿಯುವ ನೀರಿನ ಬಗ್ಗೆ ಸಲಹೆ ಸೂಚನೆಗಳನ್ನು ನೀಡುತ್ತಾರೆ, ಆದರೆ ಇಲ್ಲಿ ಯಾರೂ ನೀರನ್ನು ಕುದಿಸಿ ಬಳಸುವುದಿಲ್ಲ ಎಂದು ಹುಡುಗಿಯರು ಹೇಳುತ್ತಾರೆ.

ಇಲ್ಲಿ ಹೆಚ್ಚಿನ ಹುಡುಗಿಯರು ಸ್ಯಾನಿಟರಿ ನ್ಯಾಪ್ಕಿನ್ ಬಳಸುತ್ತಾರೆ, ಮತ್ತು ಬಟ್ಟೆಯನ್ನು ಬಳಸುವವರು ಬಹಳ ಕಡಿಮೆ. ಆದಾಗ್ಯೂ, ಲಾಕ್‌ಡೌನ್ ಸಮಯದಲ್ಲಿ, ಅಂಗಡಿಯಿಂದ ನ್ಯಾಪ್ಕಿನ್ ಖರೀದಿಸಲು ಅವರು ಬಹಳಷ್ಟು ತೊಂದರೆಗಳನ್ನು ಎದುರಿಸಬೇಕಾಯಿತು. ಅನೇಕ ಹುಡುಗಿಯರು ತಮ್ಮ ತಾಯಂದಿರೂ ಪ್ಯಾಡ್‌ಗಳನ್ನು ಖರೀದಿಸುತ್ತಾರೆ ಎಂದು ಹೇಳುತ್ತಾರೆ, ಆದರೆ ವಯಸ್ಸಾದ ಮಹಿಳೆಯರು ಬಟ್ಟೆಗಳನ್ನು ಬಳಸುತ್ತಾರೆ.

ಸಾಮಾನ್ಯವಾಗಿ, ಇಲ್ಲಿ ಬಳಸಿದ ಸ್ಯಾನಿಟರಿ ನ್ಯಾಪ್ಕಿನ್‌ಗಳನ್ನು ತೆರೆದ ಚರಂಡಿಯಲ್ಲಿ ಎಸೆಯಲಾಗುತ್ತದೆ, ಅಲ್ಲಿ ಅವು ಕಾಗದ ಅಥವಾ ಪಾಲಿಥೀನ್ ಕವರ್‌ನಿಂದ ಹೊರಬಂದ ಕೆಲವು ದಿನಗಳ ಅಥವಾ ವಾರಗಳ ನಂತರ ಮೇಲ್ಮೈಗೆ ಬರುತ್ತವೆ. ಸೋನಿ ವಿವರಿಸುತ್ತಾರೆ, "ಪ್ಯಾಡ್‌ಗಳನ್ನು ಸರಿಯಾಗಿ ಸುತ್ತಿ ಪ್ಯಾಕ್‌ ಮಾಡಿ ಮುನ್ಸಿಪಲ್ ಕಸ ಸಂಗ್ರಹಿಸುವ ವಾಹನಗಳಿಗೆ ನೀಡುವಂತೆ ನಮಗೆ [NGO ನ ಸ್ವಯಂಸೇವಕರು] ಹೇಳಿದ್ದರು, ಆದರೆ ಕೆಲವೊಮ್ಮೆ (ಅದನ್ನು ಸರಿಯಾಗಿ ಸುತ್ತಿ ಪ್ಯಾಕ್‌ ಮಾಡಿದ ಸ್ಥಿತಿಯಲ್ಲಿದ್ದರೂ ಸಹ) ಕೈಯಲ್ಲಿ ಹಿಡಿದು ನಡೆಯುವುದು ಮುಜುಗರ ತರುತ್ತದೆ. ಯಾಕೆಂದರೆ ಗಂಡಸರು ಇದೆಲ್ಲವನ್ನೂ ನೋಡುತ್ತಿರುತ್ತಾರೆ.”

ಸ್ಥಳೀಯ ಸಮುದಾಯ ಭವನದಲ್ಲಿ ನನ್ನೊಂದಿಗೆ ಮಾತನಾಡಲು ಜಮಾಯಿಸಿದ ಹುಡುಗಿಯರು ನಗುತ್ತಾ ವಿವಿಧ ಕಥೆಗಳನ್ನು ಹೇಳಿದರು. ಪುಷ್ಪಾ ಎಲ್ಲರನ್ನೂ ಕೇಳುತ್ತಾರೆ, "ಕಳೆದ ಮಳೆಗಾಲದಲ್ಲಿ ನಾವು ನೀರು ತುಂಬಿದ ಶೌಚಾಲಯಕ್ಕೆ ಹೋಗುವುದರಿಂದ ತಪ್ಪಿಸಿಕೊಳ್ಳಲು ಇಡೀ ದಿನ ಊಟ ಮಾಡದೆ ಇದ್ದಿದ್ದು ನೆನಪಿದೆಯಾ?"

ಸೋನಿ ಪದವಿ ಮುಗಿದ ನಂತರ ಕೆಲಸ ಮಾಡಲು ಬಯಸುತ್ತಾರೆ. "ನನಗೆ ಕೆಲಸ ಸಿಕ್ಕಿದರೆ ನನ್ನ ತಂದೆ ತಾಯಿ ಈಗ ಮಾಡುತ್ತಿರುವ ಕೆಲಸ ಮಾಡೆಬೇಕಿಲ್ಲ" ಎಂದು ಅವರು ಹೇಳುತ್ತಾರೆ. ಅವರು ಶಿಕ್ಷಣ, ಕೆಲವು ಆರೋಗ್ಯ ರಕ್ಷಣೆ ಮತ್ತು ಇತರ ಸೌಲಭ್ಯಗಳನ್ನು ಹೊಂದಿದ್ದಾರೆ ಎಂದು ಹೇಳುತ್ತಾರೆ, ಆದರೆ ನೈರ್ಮಲ್ಯದ ಸಮಸ್ಯೆ ಅವರಿಗೆ ನಿರಂತರ ಅಡಚಣೆಯಾಗಿದೆ: "ಕಾಲೋನಿಯಲ್ಲಿನ ಶೌಚಾಲಯಗಳು ಹುಡುಗಿಯರಿಗೆ ದೊಡ್ಡ ಸಮಸ್ಯೆಯಾಗಿದೆ."

ವರದಿಗಾರರ ಟಿಪ್ಪಣಿ: ಈ ವರದಿಯನ್ನು ತಯಾರಿಸುವವಲ್ಲಿ ಸಹಾಯ ಮತ್ತು ಮಾಹಿತಿಗಳನ್ನು ನೀಡಿದ ದೀಕ್ಷಾ ಪ್ರತಿಷ್ಠಾನಕ್ಕೆ ನನ್ನ ಪ್ರಾಮಾಣಿಕ ಧನ್ಯವಾದಗಳು. ಈ ಸಂಸ್ಥೆಯು (ಯುಎನ್‌ಎಫ್‌ಪಿಎ ಮತ್ತು ಪಾಟ್ನಾ ಮುನ್ಸಿಪಲ್ ಕಾರ್ಪೊರೇಶನ್ ಜೊತೆಯಲ್ಲಿ) ನೈರ್ಮಲ್ಯ ಮತ್ತು ಇತರ ವಿಷಯಗಳ ಕುರಿತು ಪಾಟ್ನಾ ನಗರದಾದ್ಯಂತ ಕೊಳೆಗೇರಿಗಳಲ್ಲಿ ಮಹಿಳೆಯರು ಮತ್ತು ಮಕ್ಕಳೊಂದಿಗೆ ಕೆಲಸ ಮಾಡುತ್ತದೆ.

ಗ್ರಾಮೀಣ ಭಾರತದ ಹದಿಹರೆಯದ ಬಾಲಕಿಯರು ಮತ್ತು ಯುವತಿಯರ ಬಗ್ಗೆ PARI ಮತ್ತು ಕೌಂಟರ್‌ ಮೀಡಿಯಾ ಟ್ರಸ್ಟ್‌ನ ಬೆಂಬಲಿತ ರಾಷ್ಟ್ರವ್ಯಾಪಿ ವರದಿ ಮಾಡುವ ಯೋಜನೆಯು ಮಹತ್ವದ ಆದರೆ ಸಮಾಜದ ಅಂಚಿನಲ್ಲಿರುವ ಗುಂಪುಗಳ ಪರಿಸ್ಥಿತಿಯನ್ನು ಅನ್ವೇಷಿಸಲು, ಸಾಮಾನ್ಯ ಜನರ ಮಾತುಗಳು ಮತ್ತು ಜೀವಂತ ಅನುಭವಗಳ ಮೂಲಕ ತಿಳಿಯುವ ಉದ್ದೇಶವನ್ನು ಹೊಂದಿದೆ. ಇದು ಪಾಪ್ಯುಲೇಷನ್‌ ಆಫ್‌ ಇಂಡಿಯಾದ ಬೆಂಬಲವನ್ನು ಹೊಂದಿದೆ.

ಈ ಲೇಖನವನ್ನು ಮರುಪ್ರಕಟಿಸುವ ಆಸಕ್ತಿಯಿದೆಯೇ? ಇದಕ್ಕಾಗಿ ಈ ಇ-ಮೈಲ್ ವಿಳಾಸವನ್ನು ಸಂಪರ್ಕಿಸಿ: [email protected] ಒಂದು ಪ್ರತಿಯನ್ನು [email protected] . ಈ ವಿಳಾಸಕ್ಕೆ ಕಳುಹಿಸಿ

ಅನುವಾದ: ಶಂಕರ. ಎನ್. ಕೆಂಚನೂರು

Kavitha Iyer

Kavitha Iyer has been a journalist for 20 years. She is the author of ‘Landscapes Of Loss: The Story Of An Indian Drought’ (HarperCollins, 2021).

Other stories by Kavitha Iyer
Illustration : Priyanka Borar

Priyanka Borar is a new media artist experimenting with technology to discover new forms of meaning and expression. She likes to design experiences for learning and play. As much as she enjoys juggling with interactive media she feels at home with the traditional pen and paper.

Other stories by Priyanka Borar
Editor and Series Editor : Sharmila Joshi

Sharmila Joshi is former Executive Editor, People's Archive of Rural India, and a writer and occasional teacher.

Other stories by Sharmila Joshi
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru