ಪ್ಯಾನೆಲ್ 'ಕಾಣುವ ಕೆಲಸಗಳ ನಡುವೆ ಕಾಣದೆ ಹೋಗುವ ಮಹಿಳೆಯರು' ಶೀರ್ಷಿಕೆಯ ಛಾಯಾಚಿತ್ರ ಪ್ರದರ್ಶನದ ಭಾಗವಾಗಿದ್ದು, ಇದರ ಅಡಿಯಲ್ಲಿ ಗ್ರಾಮೀಣ ಮಹಿಳೆಯರು ಮಾಡುವ ವಿವಿಧ ಕಾರ್ಯಗಳನ್ನು ಚಿತ್ರರೂಪದಲ್ಲಿ ದಾಖಲಿಸಲಾಗಿದೆ. ಎಲ್ಲಾ ಚಿತ್ರಗಳನ್ನು ಪಿ. ಸಾಯಿನಾಥ್ ಅವರು 1993 ರಿಂದ 2002 ನಡುವೆ ತಮ್ಮ 10 ರಾಜ್ಯಗಳಲ್ಲಿನ ಓಡಾಟದಲ್ಲಿ ತೆಗೆದಿದ್ದಾರೆ. ಇಲ್ಲಿ, ಪರಿ ಛಾಯಾಚಿತ್ರ ಪ್ರದರ್ಶನದ ಡಿಜಿಟಲ್ ಪ್ರಾತಿನಿಧ್ಯವನ್ನು ಸೃಜನಾತ್ಮಕವಾಗಿ ರಚಿಸಿದೆ, ಇದನ್ನು ಹಲವು ವರ್ಷಗಳಿಂದ ದೇಶದ ಬಹುತೇಕ ಭಾಗಗಳಲ್ಲಿ ಪ್ರದರ್ಶಿಸಲಾಗಿದೆ.

ಬದುಕನ್ನು ಒಟ್ಟುಗೂಡಿಸುವ ಯತ್ನದಲ್ಲಿ

ಆಕೆ ಬೆಳಗಿನ ಜಾವ 4:30ರ ಹೊತ್ತಿಗೆಲ್ಲ ಎದ್ದುಬಿಡುತ್ತಾರೆ. ಮತ್ತು ಒಂದು ಗಂಟೆಯ ನಂತರ, ಛತ್ತೀಸ್‌ಗಢದ ಸರ್ಗುಜಾ ಅರಣ್ಯದಲ್ಲಿ ತೆಂಡೂ ಎಲೆಗಳನ್ನು ಕೀಳತೊಡಗುತ್ತಾರೆ. ಈ ಸಮಯದಲ್ಲಿ ರಾಜ್ಯದಾದ್ಯಂತ ಅವರಂತಹ ಸಾವಿರಾರು ಆದಿವಾಸಿಗಳು ಇದೇ ಕೆಲಸದಲ್ಲಿ ತೊಡಗಿಕೊಂಡಿರುತ್ತಾರೆ. ಬೀಡಿ ತಯಾರಿಕೆಯಲ್ಲಿ ಬಳಸುವ ಈ ಎಲೆಗಳನ್ನು ಕೀಳಲು ಇಡೀ ಕುಟುಂಬ ಒಂದು ಘಟಕವಾಗಿ ಕೆಲಸ ಮಾಡುತ್ತದೆ.

ದಿನವು ಉತ್ತಮವಾಗಿದ್ದರೆ, ಅವರ ಆರು ಸದಸ್ಯರ ಕುಟುಂಬವು ರೂ.90ರವರೆಗೆ ಗಳಿಸಬಹುದು. ತೆಂಡೂ ಸೀಸನ್‌ನ ಅತ್ಯುತ್ತಮ ಎರಡು ವಾರಗಳಲ್ಲಿ ಅವರು ಗಳಿಸುವದನ್ನು ಮುಂದಿನ ಮೂರು ತಿಂಗಳಲ್ಲಿ ಗಳಿಸುವುದಿಲ್ಲ. ಹಾಗಾಗಿ ಈ ಎಲೆಗಳು ಇರುವವರೆಗೆ, ಅವುಗಳಿಂದ ಸಾಧ್ಯವಾದಷ್ಟು ಗಳಿಸಲು ಪ್ರಯತ್ನಿಸುತ್ತಾರೆ. ಆರು ವಾರಗಳ ನಂತರ, ಅವರು ಜೀವನೋಪಾಯಕ್ಕಾಗಿ ಹೊಸ ತಂತ್ರವನ್ನು ರೂಪಿಸಬೇಕಾಗುತ್ತದೆ. ಈ ಪ್ರದೇಶದಲ್ಲಿ ವಾಸಿಸುವ ಪ್ರತಿಯೊಂದು ಕುಟುಂಬವೂ ಈ ಸಮಯದಲ್ಲಿ ಕಾಡಿನಲ್ಲಿ ಕಂಡುಬರುತ್ತದೆ. ಬುಡಕಟ್ಟು ಆರ್ಥಿಕತೆಗೆ ತೆಂಡೂ ಎಲೆಗಳು ಬಹಳ ಮುಖ್ಯ.

ವೀಡಿಯೊವನ್ನು ವೀಕ್ಷಿಸಿ: 'ಆಕೆ ಎಲೆಗಳನ್ನು ತೆಗೆದುಕೊಂಡು ತನ್ನ ಇನ್ನೊಂದು ತೋಳಿಗೆ ಎಸೆಯುವ ರೀತಿ ನಂಬಲಾಗದಷ್ಟು ಸುಂದರವಾದ ದೃಶ್ಯವಾಗಿತ್ತು

ಹಾಗೆಯೇ ಮಹುವಾ ಹೂಗಳನ್ನು ಕೀಳುವ ಕೆಲಸವೂ ಬಹಳ ಮುಖ್ಯ. ಇವರು ಹುಣಸೆಹಣ್ಣು ಕೂಡ ಸಂಗ್ರಹಿಸುತ್ತಾರೆ. ಅಥವಾ ಚಿರೋಂಜಿ ಮತ್ತು ಸಾಲ್. ದೇಶದ ಕೆಲವು ಭಾಗಗಳಲ್ಲಿ, ಬುಡಕಟ್ಟು ಕುಟುಂಬಗಳು ತಮ್ಮ ಆದಾಯದ ಅರ್ಧಕ್ಕಿಂತ ಹೆಚ್ಚು ಟಿಂಬರ್‌ ಅಲ್ಲದ ಅರಣ್ಯ ಉತ್ಪನ್ನಗಳನ್ನು (ಎನ್‌ಟಿಎಫ್‌ಪಿ) ಅವಲಂಬಿಸಿವೆ. ಆದರೆ ಅವರು ಉತ್ಪನ್ನದ ಮೌಲ್ಯದ ಒಂದು ಸಣ್ಣ ಭಾಗವನ್ನು ಮಾತ್ರ ಪಡೆಯುತ್ತಾರೆ. ಮಧ್ಯಪ್ರದೇಶವೊಂದರಲ್ಲೇ ಈ ರೀತಿಯ ಉತ್ಪಾದನೆಯ ಮೌಲ್ಯ ವಾರ್ಷಿಕ ಕನಿಷ್ಠ 2,000 ಕೋಟಿ ರೂ.

ಇದೀಗ ರಾಜ್ಯ ಸರ್ಕಾರ ಕಾಡು ಪ್ರವೇಶಗಳಿಗೆ ನಿಷೇಧ ಹಾಕಿರುವುದರಿಂದ ನಿಖರ ಅಂಕಿ-ಅಂಶ ಸಿಗುವುದು ಕಷ್ಟ. ಆದರೆ, ರಾಷ್ಟ್ರೀಯ ಮಟ್ಟದಲ್ಲಿ ಎನ್‌ಟಿಎಫ್‌ಪಿ ಮೌಲ್ಯ 15,000 ಕೋಟಿ ರೂ.

ಬುಡಕಟ್ಟು ಮಹಿಳೆಯರು ಮತ್ತು ಅವರ ಕುಟುಂಬಗಳಿಗೆ ಇದರಲ್ಲಿ ಸಿಗುವುದು ಬಹು ಸಣ್ಣ ಪಾಲು. ಅವರಿಗೆ ಇದು ಬದುಕಿನ ಆಸರೆಯಾಗಿದೆ. ಮತ್ತು ಅದು ಅವರ ಬದುಕಿಗೆ ಸಾಕಾಗದೇ ಇರಬಹುದು. ನಿಜವಾದ ಆದಾಯವು ಮಧ್ಯವರ್ತಿಗಳು, ವ್ಯಾಪಾರಿಗಳು ಮತ್ತು ಲೇವಾದೇವಿದಾರರಿಗೆ ಸಿಗುತ್ತದೆ. ಆದರೆ ಎನ್‌ಟಿಎಫ್‌ಪಿ ಅನ್ನು ಸಂಗ್ರಹಿಸಿ, ಪ್ರಕ್ರಿಯೆಗೊಳಿಸಿ ಮಾರುಕಟ್ಟೆಗೆ ಯಾರು ತಲುಪಿಸುತ್ತಾರೆ? ಇದನ್ನು ಗ್ರಾಮೀಣ ಮಹಿಳೆಯರು ಮಾತ್ರ ಮಾಡುತ್ತಾರೆ. ಬುಡಕಟ್ಟು ಮಹಿಳೆ ಅಂತಹ ಅರಣ್ಯ ಉತ್ಪನ್ನಗಳನ್ನು ದೊಡ್ಡ ಪ್ರಮಾಣದಲ್ಲಿ ಸಂಗ್ರಹಿಸುತ್ತಾಳೆ. ಇದು ಔಷಧೀಯ ಗಿಡಮೂಲಿಕೆಗಳನ್ನು ಸಹ ಒಳಗೊಂಡಿದೆ, ಇದು ಜಾಗತಿಕವಾಗಿ ಶತಕೋಟಿ ಡಾಲರ್ ವ್ಯಾಪಾರವಾಗಿದೆ. ಒಂದೆಡೆ ಈ ದಂಧೆ ವೇಗವಾಗಿ ಬೆಳೆಯುತ್ತಿದ್ದರೆ, ಮತ್ತೊಂದೆಡೆ ಈ ಮಹಿಳೆಯರು ಮತ್ತು ಅವರ ಕುಟುಂಬಗಳ ಬದುಕು ಅವನತಿಯತ್ತ ಸಾಗುತ್ತಿದೆ. ಇದಕ್ಕೆ ಅವರ ಶ್ರಮವನ್ನು ಶೋಷಿಸುವ ನೆಟ್‌ವರ್ಕ್ ಹೊಣೆ.

PHOTO • P. Sainath
PHOTO • P. Sainath

ಅರಣ್ಯ ಭೂಮಿ ಕಡಿಮೆಯಾಗುತ್ತಿರುವುದರಿಂದ ಈ ಮಹಿಳೆಯರಿಗೆ ಕೆಲಸ ಕಷ್ಟವಾಗುತ್ತಿದೆ. ಅವರ ನಡಿಗೆಯ ಮಾರ್ಗಗಳು ಮತ್ತು ಕೆಲಸದ ಸಮಯವು ದೀರ್ಘವಾಗುತ್ತಿದೆ. ಬುಡಕಟ್ಟು ಸಮುದಾಯಗಳಲ್ಲಿ ಬಡತನ ಹೆಚ್ಚಾದಂತೆ, ಎನ್‌ಟಿಎಫ್‌ಪಿ ಮೇಲೆ ಅವರ ಅವಲಂಬನೆಯೂ ಹೆಚ್ಚಾಗುತ್ತದೆ. ಮತ್ತು ಜವಾಬ್ದಾರಿಗಳು ಸಹ. ಒಡಿಶಾದಲ್ಲಿ ಈ ರೀತಿಯ ಕೆಲಸ ಮಾಡುವ ಮಹಿಳೆಯರು ದಿನಕ್ಕೆ ಮೂರರಿಂದ ನಾಲ್ಕು ಗಂಟೆಗಳ ಕಾಲ ನಡೆಯುತ್ತಾರೆ. ಅವರು 15 ಗಂಟೆ ಅಥವಾ ಅದಕ್ಕಿಂತ ಹೆಚ್ಚು ಕಾಲ ಕೆಲಸ ಮಾಡುತ್ತಾರೆ. ದೇಶಾದ್ಯಂತ ಲಕ್ಷಾಂತರ ಬಡ ಬುಡಕಟ್ಟು ಮಹಿಳೆಯರು ತಮ್ಮ ಬಡ ಕುಟುಂಬಗಳ ಉಳಿವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಈ ಪ್ರಕ್ರಿಯೆಯಲ್ಲಿ, ಅವರು ಅರಣ್ಯ ಸಿಬ್ಬಂದಿ, ವ್ಯಾಪಾರಿಗಳು, ಪೊಲೀಸರು, ಪ್ರತಿಕೂಲ ಆಡಳಿತಗಾರರಿಂದ ಕಿರುಕುಳವನ್ನು ಎದುರಿಸುತ್ತಾರೆ ಮತ್ತು ಆಗಾಗ್ಗೆ ಅನ್ಯಾಯದ ಕಾನೂನುಗಳನ್ನು ಸಹ ಎದುರಿಸುತ್ತಾರೆ.

ಪೊರಕೆ ತಯಾರಿಸುವ ಈ ಮಹಿಳೆಯರು ಆಂಧ್ರಪ್ರದೇಶದ ವಿಜಯನಗರಂ ಮೂಲದವರು. ರಾಜ್ಯದ ಅನೇಕ ಬುಡಕಟ್ಟು ಕುಟುಂಬಗಳ ಆದಾಯದ ಅರ್ಧಕ್ಕಿಂತ ಹೆಚ್ಚು ಆದಾಯವು ಮರವಲ್ಲದ ಅರಣ್ಯ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ನೇರವಾಗಿ ಬರುತ್ತದೆ. ಬುಡಕಟ್ಟು ಸಮುದಾಯದ ಅನೇಕ ಬಡವರಿಗೆ ಜೀವನೋಪಾಯಕ್ಕಾಗಿ ಎನ್‌ಟಿಎಫ್‌ಪಿ ಅಗತ್ಯವಿದೆ.

ಮಧ್ಯಪ್ರದೇಶದ ಬುಂದೇಲ್‌ಖಂಡದ ಈ ಮಹಿಳೆ ಬಹುಮುಖ ಕೌಶಲ್ಯಗಳ ಶ್ರೀಮಂತೆ. ಆಕೆ ಪಾತ್ರೆಗಳನ್ನು ತಯಾರಿಸುವ ಮತ್ತು ದುರಸ್ತಿ ಮಾಡುವ ಕೆಲಸವನ್ನು ಮಾತ್ರ ಮಾಡುವುದಿಲ್ಲ. ಇದು ಅವರ ಕುಟುಂಬದ ವ್ಯವಹಾರ. ಅವರು ಹಗ್ಗಗಳು, ಬುಟ್ಟಿಗಳು ಮತ್ತು ಪೊರಕೆಗಳನ್ನು ಸಹ ತಯಾರಿಸುತ್ತಾರೆ. ಅವರು ಉತ್ಪನ್ನಗಳ ಅದ್ಭುತ ಸಂಗ್ರಹವನ್ನು ಹೊಂದಿದ್ದಾರೆ. ಅದೂ ಬಹುತೇಕ ಕಾಡುಗಳು ಇಲ್ಲವಾಗುತ್ತಿರುವ ಸಮಯದಲ್ಲಿ. ವಿಶೇಷ ರೀತಿಯ ಮಣ್ಣನ್ನು ಎಲ್ಲಿ ಹುಡುಕಬೇಕೆಂದು ಆಕೆಗೆ ಗೊತ್ತಿದೆ. ಅವರ ಜ್ಞಾನ ಮತ್ತು ಕೆಲಸ ಅದ್ಭುತವಾದುದು; ಆದರೆ ಅವರ ಕುಟುಂಬದ ಸ್ಥಿತಿ ಶೋಚನೀಯವಾಗಿದೆ.

PHOTO • P. Sainath
PHOTO • P. Sainath

ಅನುವಾದ: ಶಂಕರ. ಎನ್. ಕೆಂಚನೂರು

P. Sainath is Founder Editor, People's Archive of Rural India. He has been a rural reporter for decades and is the author of 'Everybody Loves a Good Drought' and 'The Last Heroes: Foot Soldiers of Indian Freedom'.

Other stories by P. Sainath
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru