ಪ್ಯಾನೆಲ್ 'ಕಾಣುವ ಕೆಲಸಗಳ ನಡುವೆ ಕಾಣದೆ ಹೋಗುವ ಮಹಿಳೆಯರು' ಶೀರ್ಷಿಕೆಯ ಛಾಯಾಚಿತ್ರ ಪ್ರದರ್ಶನದ ಭಾಗವಾಗಿದ್ದು, ಇದರ ಅಡಿಯಲ್ಲಿ ಗ್ರಾಮೀಣ ಮಹಿಳೆಯರು ಮಾಡುವ ವಿವಿಧ ಕಾರ್ಯಗಳನ್ನು ಚಿತ್ರರೂಪದಲ್ಲಿ ದಾಖಲಿಸಲಾಗಿದೆ. ಎಲ್ಲಾ ಚಿತ್ರಗಳನ್ನು ಪಿ. ಸಾಯಿನಾಥ್ ಅವರು 1993 ರಿಂದ 2002 ನಡುವೆ ತಮ್ಮ 10 ರಾಜ್ಯಗಳಲ್ಲಿನ ಓಡಾಟದಲ್ಲಿ ತೆಗೆದಿದ್ದಾರೆ. ಇಲ್ಲಿ, ಪರಿ ಛಾಯಾಚಿತ್ರ ಪ್ರದರ್ಶನದ ಡಿಜಿಟಲ್ ಪ್ರಾತಿನಿಧ್ಯವನ್ನು ಸೃಜನಾತ್ಮಕವಾಗಿ ರಚಿಸಿದೆ, ಇದನ್ನು ಹಲವು ವರ್ಷಗಳಿಂದ ದೇಶದ ಬಹುತೇಕ ಭಾಗಗಳಲ್ಲಿ ಪ್ರದರ್ಶಿಸಲಾಗಿದೆ.

ಎಂದಿಗೂ ತಮ್ಮದಾಗದ ಹೊಲದಲ್ಲಿ ದುಡಿದು ಸವೆಯುವವರು

ಹೊಲದ ಮಾಲಿಕ ಪೋಟೊ ತೆಗೆಸಿಕೊಳ್ಳುವ ಕುರಿತು ಹೆಮ್ಮೆ ಹೊಂದಿದ್ದ. ಅವನು ಹೊಲದ ಬದುವಿನಲ್ಲಿ ನೆಟ್ಟಗೆ ನಿಂತಿದ್ದರೆ ಉಳಿದ ಒಂಬತ್ತು ಕೆಲಸ ಮಾಡುತ್ತಿದ್ದ ಕೂಲಿ ಹೆಂಗಸರು ಸೊಂಟ ಮುರಿಯುವಂತೆ ಬಾಗಿಕೊಂಡು ನಾಟಿ ಕೆಲಸ ಮಾಡುತ್ತಿದ್ದರು. ಅವರು ಆ ಹೆಂಗಸರಿಗೆ ದಿನಕ್ಕೆ 40 ರೂಪಾಯಿ ಕೂಲಿ ಕೊಡುತ್ತಿರುವುದಾಗಿ ಹೇಳಿದ. ಆದರೆ ಆ ಹೆಂಗಸರು ನನ್ನ ಬಳಿ ಹೇಳಿದಂತೆ, ಅವನು ಅವರಿಗೆ ಕೊಡುತ್ತಿರುವುದು ದಿನಕ್ಕೆ 25 ರೂಪಾಯಿಗಳು ಮಾತ್ರ. ಇವರೆಲ್ಲರೂ ಒಡಿಶಾ ರಾಜ್ಯದ ರಾಯಗಢದ ಭೂರಹಿತ ಕಾರ್ಮಿಕರು.

ಭಾರತದ ಮಟ್ಟಿಗೆ, ಭೂಮಿಯ ಒಡೆತನವಿರುವ ಕುಟುಂಬಗಳಲ್ಲೂ ಹೆಣ್ಣಿಗೆ ಭೂಮಿಯ ಹಕ್ಕು ಸಿಗುವುದಿಲ್ಲ. ಅದು ತವರು ಮನೆಯಾದರೂ ಅಷ್ಟೇ, ಗಂಡನ ಮನೆಯಾದರೂ ಅಷ್ಟೇ. ಪರಿತ್ಯಕ್ತ, ವಿಚ್ಛೇದಿತ ಅಥವಾ ವಿಧವೆಯರಾದ ಹೆಣ್ಣು ಮಕ್ಕಳು ತಮ್ಮ ಉಳಿದ ಜೀವನವನ್ನು ಊರಿನವರ ಅಥವಾ ಸಂಬಂಧಿಕರ ಹೊಲಗಳಲ್ಲಿ ಕೂಲಿ ಮಾಡುತ್ತಲೇ ಕಳೆಯಬೇಕಿರುತ್ತದೆ.

ವೀಡಿಯೋ ನೋಡಿ: ʼಲೆನ್ಸ್‌ ಮೂಲಕ ನೋಡುವಾಗ, ನನ್ನನ್ನು ಒಂದು ಕ್ಷಣ ತಡೆದು ನಿಲ್ಲಿಸಿದ ಒಂದು ವಿಷಯವೆಂದರೆ, ಅಲ್ಲಿ ಭೂಮಾಲಿಕ ಒಬ್ಬನೇ ನೆಟ್ಟಗೆ ನಿಂತಿದ್ದ; ಉಳಿದ ಮಹಿಳೆಯರು ಸೊಂಟ ಮುರಿಯುವಂತೆ ಬಾಗಿಕೊಂಡು ಕೆಲಸ ಮಾಡುತ್ತಿದ್ದರು,ʼ ಎನ್ನುತ್ತಾರೆ ಸಾಯಿನಾಥ್

ಅಧಿಕೃತ ಎಣಿಕೆಯ ಪ್ರಕಾರ ಹೇಳುವುದಾದರೆ ದೇಶದಲ್ಲಿ 63 ದಶಲಕ್ಷದಷ್ಟು ಮಹಿಳಾ ಕಾರ್ಮಿಕರಿದ್ದಾರೆ. ಇವರಲ್ಲಿ 28 ದಶಲಕ್ಷ ಅಥವಾ 45 ಶೇಕಡಾದಷ್ಟು ಮಹಿಳೆಯರು ಕೃಷಿ ಕೂಲಿ ಕಾರ್ಮಿಕರು. ಆದರೆ ಈ ದಿಗ್ಭ್ರಮೆ ಹುಟ್ಟಿಸುವ ಅಂಕಿ ಕೂಡಾ ನಿಜವಾದುದಲ್ಲ, ಈ ಲೆಕ್ಕ ಆರು ತಿಂಗಳು ಅಥವಾ ಅದಕ್ಕಿಂತಲೂ ಹೆಚ್ಚು ದಿನಗಳ ಕಾಲ ಕೆಲಸ ಸಿಗದವರನ್ನು ಹೊರಗಿಟ್ಟಿದೆ. ಇದು ಬಹಳ ಮುಖ್ಯವಾದದ್ದು. ಇದರರ್ಥ ಲಕ್ಷಾಂತರ ಮಹಿಳೆಯರನ್ನು ದೇಶದ ಆರ್ಥಿಕತೆಗೆ ಕೊಡುಗೆ ನೀಡುವ ಕಾರ್ಮಿಕರೆಂದು ಪರಿಗಣಿಸಲಾಗುವುದಿಲ್ಲ. ಕೃಷಿ ಹೊರತಾಗಿ ಮಹಿಳೆಯರು ಮಾಡುವ ಕೆಲಸಗಳನ್ನು ಮನೆಕೆಲಸಗಳೆಂದು ತಳ್ಳಿಹಾಕಲಾಗಿದೆ.

ಅಧಿಕಾರಶಾಹಿಯು ʼಆರ್ಥಿಕ ಚಟುವಟಿಕೆʼಯೆಂದು ಪರಿಗಣಿಸಲಾಗಿರುವ, ಚಿಂತಾಜನಕವೆನ್ನಿಸುವಂತಹ ಸಂಬಳ ತರುವ ಕೃಷಿ ಕೆಲಸವೊಂದೇ ದುಡಿಯುವ ಹೆಂಗಸರ ಪಾಲಿಗೆ ಇರುವ ದೊಡ್ಡ ಕೆಲಸದ ಮಾರುಕಟ್ಟೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಭೂರಹಿತ ಕಾರ್ಮಿಕ ಮಹಿಳೆಯರಿಗೆ ಸಿಗುವ ಕೆಲಸದ ದಿನಗಳ ಸಂಖ್ಯೆಯಲ್ಲೂ ಕಡಿಮೆಯಾಗಿದೆ. ಆರ್ಥಿಕ ನೀತಿಗಳು ಈ ನಿಟ್ಟಿನಲ್ಲಿ ತಮ್ಮ ಕೊಡುಗೆಯನ್ನು ನೀಡುತ್ತಿವೆ. ಹೆಚ್ಚುತ್ತಿರುವ ಯಾಂತ್ರೀಕರಣವೂ ಇದಕ್ಕೆ ದೊಡ್ಡ ಮಟ್ಟದಲ್ಲಿ ಕಾರಣವಾಗುತ್ತಿದೆ. ನಗದು ಬೆಳೆಗಳು ಈ ಸಮಸ್ಯೆಯನ್ನು ತೀವ್ರಗೊಳಿಸುತ್ತಿದ್ದರೆ, ಹೊಸ ಗುತ್ತಿಗೆ ಪದ್ದತಿ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತಿದೆ.

PHOTO • P. Sainath
PHOTO • P. Sainath
PHOTO • P. Sainath

ಇಬ್ಬರು ಹುಡುಗಿಯರು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಹೊಲವೊಂದರಲ್ಲಿ ಕೀಟಗಳ ಬೇಟೆ ಮಾಡುತ್ತಿದ್ದರೆ. ಇಲ್ಲಿ ಈ ಹುಡುಗಿಯರು ಕೆಂಪು ಕೂದಲಿನ ಕಂಬಳಿಹುಳುಗಳನ್ನು ಹಿಡಿಯುತ್ತಿದ್ದಾರೆ. ಇದು ಈ ಊರಿನಲ್ಲಿ ಸಂಬಳ ತರುವ ಕೆಲಸ. ಅವರು ಹಿಡಿಯುವ ಪ್ರತಿ ಕಿಲೋಗ್ರಾಂ ಕಂಬಳಿಹುಳಕ್ಕೆ 10 ರೂಪಾಯಿಗಳನ್ನು ಕೂಲಿಯಾಗಿ ನೀಡಲಾಗುತ್ತದೆ. ಎಂದರೆ ಅವರು ಹತ್ತು ರೂಪಾಯಿ ಸಂಪಾದಿಸಲು ಸುಮಾರು ಒಂದು ಸಾವಿರಕ್ಕೂ ಹೆಚ್ಚು ಕಂಬಳಿಹುಳಗಳನ್ನು ಹಿಡಿಯಬೇಕು.

ಭೂಮಿಯಂತಹ ಸಂಪನ್ಮೂಲಗಳ ಮೇಲಿನ ನೇರ ನಿಯಂತ್ರಣದ ಕೊರತೆಯು ಸಾಮಾನ್ಯವಾಗಿ ಬಡವರು ಮತ್ತು ಎಲ್ಲಾ ಹಂತದ ಮಹಿಳೆಯರ ಪರಿಸ್ಥಿಯನ್ನು ಬಹಳವಾಗಿ ದುರ್ಬಲಗೊಳಿಸುತ್ತದೆ. ಮಾಲೀಕತ್ವ ಮತ್ತು ಸಾಮಾಜಿಕ ಸ್ಥಾನಮಾನವು ನಿಕಟವಾಗಿ ಸಂಬಂಧವನ್ನು ಹೊಂದಿದೆ. ಇಂದು ಕೆಲವೇ ಕೆಲವು ಮಹಿಳೆಯರು ಭೂಮಿಯನ್ನು ಹೊಂದಿದ್ದಾರೆ ಅಥವಾ ಅದನ್ನು ನಿಯಂತ್ರಿಸುತ್ತಾರೆ. ಮತ್ತು ಭೂ ಹಕ್ಕುಗಳನ್ನು ಖಚಿತಪಡಿಸಿದಾಗ ಪಂಚಾಯತ್ ರಾಜ್‌ನಲ್ಲಿ ಅವರ ಪಾಲ್ಗೊಳ್ಳುವಿಕೆ ಸಹ ಉತ್ತಮವಾಗಿ ಅಭಿವೃದ್ಧಿಗೊಳ್ಳುತ್ತದೆ.

PHOTO • P. Sainath

ಈ ದೇಶದಲ್ಲಿ ದಲಿತರು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಭೂರಹಿತರಿರುವುದು ಆಕಸ್ಮಿಕವಲ್ಲ. ಸುಮಾರು ಶೇಕಡಾ 67ರಷ್ಟು ಮಹಿಳಾ ಕೃಷಿ ಕಾರ್ಮಿಕರು ದಲಿತರು. ಈ ಅತ್ಯಂತ ಶೋಷಿತ ವರ್ಗಗಳು ವರ್ಗ, ಜಾತಿ ಮತ್ತು ಲಿಂಗದಂತಹ ವಿಷಯಗಳಲ್ಲಿ ಅತಿಹೆಚ್ಚು ಶೋಷಣೆಗೊಳಗಾಗುತ್ತವೆ.

ಭೂಮಿಯ ಹಕ್ಕು ಸಿಗುವುದರಿಂದ ಬಡ ಮತ್ತು ಕೆಳಜಾತಿಯ ಮಹಿಳೆಯರ ಸ್ಥಿತಿ ಸುಧಾರಿಸಬಲ್ಲದು. ಆಗಲೂ ಅವರಿಗೆ ಇನ್ನೊಬ್ಬರ ಹೊಲದಲ್ಲಿ ದುಡಿಯುವ ಅನಿವಾರ್ಯತೆ ಬಂದರೆ ಅವರು ಹೆಚ್ಚಿನ ಕೂಲಿಗಾಗಿ ಚೌಕಾಶಿ ಮಾಡಬಹುದು. ಮತ್ತು ಸಾಲದ ಸೌಲಭ್ಯಕ್ಕೂ ಅವರಿಗೆ ಪ್ರವೇಶ ದೊರೆಯುತ್ತದೆ.

ಇದು ಅವರ ಮತ್ತು ಅವರ ಕುಟುಂಬದ ಬಡತನವನ್ನೂ ಹೋಗಲಾಡಿಸುತ್ತದೆ. ಗಂಡಸರು ತಮ್ಮ ಸಂಪಾದನೆ ಬಹುಭಾಗವನ್ನು ತಮಗಾಗಿಯೇ ಖರ್ಚು ಮಾಡುತ್ತಾರೆ. ಆದರೆ ಮಹಿಳೆಯರು ತಮ್ಮ ದುಡಿಮೆಯ ಬಹುತೇಕ ಮೊತ್ತವನ್ನು ತಮ್ಮ ಕುಟುಂಬದ ಸಲುವಾಗಿ ಖರ್ಚು ಮಾಡುತ್ತಾರೆ. ಮತ್ತು ಇದು ಮಕ್ಕಳಿಗೂ ಬಹಳ ಪ್ರಯೋಜನಕಾರಿ.

PHOTO • P. Sainath

ಇದು ಅವಳಿಗೂ, ಅವಳ ಕುಟುಂಬ ಮತ್ತು ಮಕ್ಕಳಿಗೂ ಒಳ್ಳೆಯದು. ಇನ್ನೂ ಸಂಕ್ಷಿಪ್ತವಾಗಿ ಹೇಳುವುದಾದರೆ, ಭಾರತದಲ್ಲಿ ಬಡತನ ನಿರ್ಮೂಲನೆಯ ಕಾರ್ಯಕ್ರಮಗಳು ಯಶಸ್ವಿಯಾಗಬೇಕೆಂದರೆ ಮಹಿಳೆಯರಿಗೆ ಭೂಮಿಗೆ ಸಂಬಂಧಿಸಿದ ಹಕ್ಕು ದೊರೆಯಬೇಕು. ಪಶ್ಚಿಮ ಬಂಗಾಳದಂತಹ ರಾಜ್ಯಗಳು ಮರುಹಂಚಿಕೆಯಾದ ಭೂಮಿಯ 400,000 ಪ್ರಕರಣಗಳಲ್ಲಿ ಜಂಟಿ ಪಟ್ಟಾಗಳನ್ನು (ಹಕ್ಕು ಪತ್ರಗಳು) ಖಚಿತಪಡಿಸುವ ಮೂಲಕ ಪ್ರಾರಂಭಿಸಿವೆ. ಆದರೆ ಈ ದಾರಿಯಲ್ಲಿ ಇನ್ನೂ ಬಹಳ ದೂರ ಹೋಗಬೇಕಾಗಿದೆ.

ಮಹಿಳೆಯರು ಭೂಮಿಯನ್ನು ಉಳುಮೆ ಮಾಡದಂತೆ ನಿರ್ಬಂಧಿಸಲ್ಪಟ್ಟಿರುವುದರಿಂದ, ಬಹುಶಃ "ಉಳುವವನಿಗೆ ಭೂಮಿ" ಎಂಬ ಹಳೆಯ ಘೋಷಣೆಯನ್ನು ತಿದ್ದುಪಡಿ ಮಾಡಬೇಕಿದೆ. ಹಳೆಯ ಘೋಷಣೆಗೆ ಬದಲಾಗಿ, "ಭೂಮಿಯಲ್ಲಿ ದುಡಿಮೆ ಮಾಡುವವರಿಗೆ ಭೂಮಿ" ಎನ್ನುವುದನ್ನು ಪ್ರಯತ್ನಿಸಬೇಕಾಗಿದೆ.

PHOTO • P. Sainath

ಅನುವಾದ: ಶಂಕರ. ಎನ್. ಕೆಂಚನೂರು

P. Sainath is Founder Editor, People's Archive of Rural India. He has been a rural reporter for decades and is the author of 'Everybody Loves a Good Drought' and 'The Last Heroes: Foot Soldiers of Indian Freedom'.

Other stories by P. Sainath
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru