“ತಮ್ಮ ಮಗುವನ್ನು ಕಳೆದುಕೊಂಡು ದುಃಖಿಸುವ ಸ್ಥಿತಿ ಯಾವ ಪೋಷಕರಿಗೂ ಬರಬಾರದು,” ಎನ್ನುತ್ತಾರೆ ಸರ್‌ವಿಕ್ರಮ್‌ಜೀತ್‌ ಸಿಂಗ್‌ ಹುಂಡಾಲ್.‌ ಅವರ ಮಗ ನವರೀತ್‌ ಸಿಂಗ್‌ ಜನವರಿ 26ರ ರೈತರ ಟ್ರ್ಯಾಕ್ಟರ್‌ ಮೆರವಣಿಗೆಯ ಸಂದರ್ಭದಲ್ಲಿ ಮೃತಪಟ್ಟಿದ್ದರು.

ಉತ್ತರಪ್ರದೇಶದ ಡಿಬ್ಡಿಬಾ ಗ್ರಾಮದ ಅವರ ಮನೆಯ ಗೋಡೆ ಮೇಲೆ ನವರೀತ್‌ ಸಿಂಗ್‌ ಅವರ ಚಿತ್ರ ವಿರಮಿಸುತ್ತಿತ್ತು. ಅದೇ ಕೋಣೆಯಲ್ಲಿ ಕುಳಿತು ನವರೀತ್‌ ತಂದೆ – ತಾಯಿ ಸರ್ವಿಕ್ರಮ್‌ಜೀತ್‌ (45) ಮತ್ತು ಪರಮಜೀತ್‌ ಕೌರ್ (42)‌ ಸಂತಾಪ ಸೂಚಿಸಲು ಮನೆಗೆ ಬರುತ್ತಿದ್ದ ಜನರನ್ನು ಎದುರುಗೊಳ್ಳುತ್ತಿದ್ದರು. ಮಗನ ಅಗಲುವಿಕೆ ಅವರ ಬದುಕಿನಲ್ಲಿ ಎಂದೂ ಭರಿಸಲಾಗದಂತಹ ಶೂನ್ಯವೊಂದನ್ನು ಸೃಷ್ಟಿಸಿದೆ. “ಅವನು ಹೊಲದ ಕೆಲಸಗಳಲ್ಲಿ ಸಹಾಯ ಮಾಡುತ್ತಿದ್ದ. ಅವನು ನಮ್ಮ ಕುರಿತು ಬಹಳ ಕಾಳಜಿ ವಹಿಸುತ್ತಿದ್ದ, ಅವನೊಬ್ಬ ಜವಬ್ದಾರಿ ಹೊಂದಿದ್ದ ಮಗನಾಗಿದ್ದ,” ಎನ್ನುತ್ತಾರೆ ಸರ್ವಿಕ್ರಮ್‌ಜೀತ್‌.

ನವರೀತ್‌ ಸಿಂಗ್‌ (25) ಜನವರಿ 26ರಂದು ದೆಹಲಿಯ ದೆಹಲಿ – ಉತ್ತರಪ್ರದೇಶದ ಗಡಿಯಲ್ಲಿ ನಡೆಯಲಿದ್ದ ಟ್ರಾಕ್ಟರ್‌ ಮೆರವಣಿಗೆಯಲ್ಲಿ ಭಾಗವಹಿಸುವ ಸಲುವಾಗಿ ಗಾಝಿಪುರಕ್ಕೆ ತರಳಿದ್ದರು. ಅವರ 65 ವರ್ಷದ ತಾತ ಹರದೀಪ್‌ ಸಿಂಗ್‌ ಡಿಬ್ಡಿಬಾ, ಅಲ್ಲಿ ಕ್ಯಾಂಪ್‌ ಮಾಡಿದ್ದರು. ಅವರು ರೈತ ಪ್ರತಿಭಟನೆ ಆರಂಭಗೊಂಡ ನವೆಂಬರ್‌ 26, 2020ರಿಂದ ಅಲ್ಲಿಯೇ ವಾಸ್ತವ್ಯ ಹೂಡಿದ್ದಾರೆ. ನವರೀತ್‌ ಸಿಂಗ್‌ ಟ್ರ್ಯಾಕ್ಟರ್‌ ಓಡಿಸುತ್ತಿದ್ದಾಗ ದೆಹಲಿ ಪೋಲಿಸರು ದೀನ ದಯಾಳ್ ಉಪಾಧ್ಯಾಯ ಮಾರ್ಗದಲ್ಲಿ ಹಾಕಿದ್ದ ಬ್ಯಾರಿಕೇಡ್‌ನಿಂದಾಗಿ ಅವರ ಟ್ರ್ಯಾಕ್ಟರ್‌ ಮಗುಚಿಬಿದ್ದಿತ್ತು.

ಟ್ರಾಕ್ಟರ್ ಉರುಳಿದ ಸಂದರ್ಭದಲ್ಲಿ ಗಾಯಗೊಂಡ ಕಾರಣ ನವರೀತ್ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಹೇಳಿದರೆ, ಅಪಘಾತ ಸಂಭವಿಸುವ ಮೊದಲು ಆತನಿಗೆ ಗುಂಡು ಹಾರಿಸಲಾಗಿದೆ ಎನ್ನುವುದು ಅವರ ಕುಟುಂಬದ ನಂಬಿಕೆ. ನವರೀತ್ ಸಾವಿಗೆ ಕಾರಣ ತಿಳಿಯಲು ಅಧಿಕೃತ ವಿಚಾರಣೆ ನಡೆಸಬೇಕೆಂದು ಕೋರಿ ದೆಹಲಿ ಹೈಕೋರ್ಟ್‌ನಲ್ಲಿ ಹರ್ದೀಪ್ ಸಿಂಗ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಉಲ್ಲೇಖಿಸಿ “ಅದನ್ನು ನಾವು ನ್ಯಾಯಾಲಯದಲ್ಲಿ ಸಾಬೀತುಪಡಿಸುತ್ತೇವೆ” ಎಂದು ಶ್ರೀವಿಕ್ರಮ್‌ಜೀತ್ ಹೇಳುತ್ತಾರೆ.

ಈ ದುರಂತ ಘಟನೆಯ ನಂತರ, ವಾಯುವ್ಯ ಉತ್ತರಪ್ರದೇಶದ ಗಡಿಯಲ್ಲಿನ ರಾಮಪುರ ಜಿಲ್ಲೆಯ ಡಿಬ್ಡಿಬಾದ ಆಸುಪಾಸಿನ ರೈತರು 2020ರ ಸೆಪ್ಟೆಂಬರ್‌ನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ಹೊಸ ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಹೆಚ್ಚು ಬಲವಾಗಿ ಒತ್ತಾಯಿಸಲು ಪ್ರಾರಂಭಿಸಿದರು. ರಾಮಪುರದ ಗಡಿಯುದ್ದಕ್ಕೂ, ಕುಮವೂನ್ ಪ್ರದೇಶದ ಉತ್ತರಾಖಂಡದ ಉಧಮ್ ಸಿಂಗ್ ನಗರ ಮತ್ತು ಕಾಶಿಪುರ ಜಿಲ್ಲೆಗಳಲ್ಲಿಯೂ ರೈತರ ಹೋರಾಟದ ಸಂಕಲ್ಪ ಅಷ್ಟೇ ಪ್ರಬಲವಾಗಿದೆ.

The death of their son, Navreet Singh (in the framed photo), has left a void in Paramjeet Kaur (left) and Sirvikramjeet Singh Hundal's lives.
PHOTO • Parth M.N.
PHOTO • Parth M.N.

ಎಡ: ಸರ್ವಿಕ್ರಮ್‌ಜಿತ್‌ ಮತ್ತು ಪರಮಜೀತ್‌ ಕೌರ್ ಬದುಕಿನಲ್ಲಿ ಅವರ ಮಗ ನವರೀತ್‌ ಸಿಂಗ್‌ (ಫ್ರೇಮ್‌ ಹಾಕಿದ ಫೋಟೊದಲ್ಲಿರುವವರು) ಅಗಲುವಿಕೆಯು ಬಹಳ ದೊಡ್ಡ ನಿರ್ವಾತವೊಂದನ್ನು ಸೃಷ್ಟಿಸಿದೆ. ಬಲ: ಮಗನ ಸಾವಿಗೆ ಸಂತಾಪ ಸೂಚಿಸಲು ಬಂದ ಪಂಜಾಬಿನ ರೈತರೊಡನೆ ಸರ್ವಿಕ್ರಮ್‌ಜಿತ್‌ ಸಿಂಗ್

ಡಿಬ್ಡಿಬಾದಿಂದ 15 ಕಿ.ಮೀ ದೂರದಲ್ಲಿರುವ ಉಧಮ್ ಸಿಂಗ್ ನಗರದ ಸೈಜ್ನಿ ಗ್ರಾಮದ 42 ವರ್ಷದ ರೈತ ಸುಖದೇವ್ ಸಿಂಗ್, "ಹುಡುಗ [ನವರೀತ್] ಹತ್ತಿರದ ಹಳ್ಳಿಯವನು, ಅದು ಇಲ್ಲಿಂದ ಹೆಚ್ಚು ದೂರದಲ್ಲಿಲ್ಲ. ಅವನ ಮರಣದ ನಂತರ, ಇಲ್ಲಿನ ರೈತರು ತಮ್ಮ ಹೋರಾಟದಲ್ಲಿ ಮೊದಲಿಗಿಂತಲೂ ಹೆಚ್ಚು ದೃಢವಾಗಿ ತೊಡಗಿಸಿಕೊಂಡಿದ್ದಾರೆ" ಎಂದು ಹೇಳಿದರು.

ದೆಹಲಿಯ ಗಡಿಯಲ್ಲಿ ಪ್ರತಿಭಟನೆಗಳು ಪ್ರಾರಂಭವಾದಾಗಿನಿಂದಲೂ ಉತ್ತರಾಖಂಡದ ರೈತರು ಪ್ರತಿಭಟನೆಯಲ್ಲಿರು ಇತರ ಮೂರು ಪ್ರಮುಖ ರಾಜ್ಯಗಳಾದ ಪಂಜಾಬ್, ಹರಿಯಾಣ ಮತ್ತು ಉತ್ತರಪ್ರದೇಶದ ರೈತರೊಡನೆ ಮೂರು ಹೊಸ ಕೃಷಿ ಕಾನೂನುಗಳ ವಿರುದ್ಧದ ಹೋರಾಟದ ಕಣದಲ್ಲಿದ್ದಾರೆ. ಇತರ ಮೂರು ರಾಜ್ಯಗಳಿಗೆ ಹೋಲಿಸಿದರೆ ಉತ್ತರಾಖಂಡವು ರಾಷ್ಟ್ರ ರಾಜಧಾನಿಯಿಂದ ದೂರದಲ್ಲಿದೆ, ಆದರೆ ಈ ದೂರವು ರಾಜ್ಯದ ರೈತರು ಗಾಜಿಪುರದಲ್ಲಿ ಧ್ವನಿ ಎತ್ತುವುದನ್ನು ತಡೆಯಲು ಸಾಧ್ಯವಾಗಿಲ್ಲ.

ಉಧಮ್ ಸಿಂಗ್ ನಗರ ಮತ್ತು ಕಾಶಿಪುರದ ರೈತರು ನವೆಂಬರ್‌ನಲ್ಲಿ ದೆಹಲಿ ಕಡೆಗೆ ಮೆರವಣಿಗೆ ಆರಂಭಿಸಿದರು, ಆದರೆ ಅಲ್ಲಿಗೆ ಹೋಗುವುದು ಸುಲಭವಾಗಿರಲಿಲ್ಲವೆಂದು ಸುಖದೇವ್ ಹೇಳುತ್ತಾರೆ. ಅವರನ್ನು ಉತ್ತರಪ್ರದೇಶದ ಪೊಲೀಸರು ರಾಜ್ಯ ಗಡಿಯಲ್ಲಿನ ರಾಂಪುರ್-ನೈನಿತಾಲ್ ಹೆದ್ದಾರಿಯಲ್ಲಿ (ಎನ್ಎಚ್ 109) ತಡೆದು ನಿಲ್ಲಿಸಿದ್ದರು. “ನಾವು ಹೆದ್ದಾರಿಯಲ್ಲಿ ಮೂರು ಹಗಲು ಮತ್ತು ಮೂರು ರಾತ್ರಿಗಳನ್ನು ಕಳೆದಿದ್ದೇವೆ. ನಮ್ಮನ್ನು ವಾಪಸ್ ಕಳುಹಿಸಲು ಪೊಲೀಸರು ಎಲ್ಲ ರೀತಿಯಲ್ಲೂ ಪ್ರಯತ್ನಿಸಿದರು. ಕೊನೆಗೆ ನಾವು ಹಿಂದೆ ಸರಿಯುವುದಿಲ್ಲವೆಂದು ಅರಿವಾದಾಗ, ಅಲ್ಲಿಂದ ಮುಂದೆ ಸಾಗಲು ಅವರು ನಮಗೆ ಅವಕಾಶ ಮಾಡಿಕೊಟ್ಟರು.”

ಹೊಸ ಕೃಷಿ ಕಾನೂನುಗಳು ತಮ್ಮ ಜೀವನೋಪಾಯಕ್ಕೆ ಮಾರಕವಾಗಿವೆಯೆಂಬ ಕಾರಣದಿಂದ ರೈತರು ತಮ್ಮ ಮನೆಗಳಿಂದ ದೀರ್ಘ ಹೋರಾಟದ ಪ್ರಯಾಣಕ್ಕಾಗಿ ಬರುತ್ತಿದ್ದಾರೆ ಎಂದು ಉದಮ್ ಸಿಂಗ್ ನಗರದ ರುದ್ರಪುರ ತಹಸಿಲ್‌ನ ಸೈಜಾನಿಯಲ್ಲಿ 25 ಎಕರೆ ಜಮೀನು ಹೊಂದಿರುವ ಸುಖದೇವ್ ಹೇಳುತ್ತಾರೆ. ರೈತರು ವಿರೋಧಿಸುತ್ತಿರುವ ಕಾನೂನುಗಳೆಂದರೆ: ರೈತ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರೋತ್ಸಾಹ ಮತ್ತು ನೆರವು) ಕಾಯ್ದೆ, 2020 ; ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ 2020ರ ಒಪ್ಪಂದ ಮಸೂದೆ ; ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ, 2020.

ಈ ಕಾನೂನುಗಳು ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ), ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು (ಎಪಿಎಂಸಿ), ರಾಜ್ಯ ಖರೀದಿ ಇತ್ಯಾದಿ ಬೆಂಬಲ ರೂಪದ ಸೌಲಭ್ಯಗಳನ್ನು ಕಸಿದುಕೊಳ್ಳುತ್ತವೆಯೆಂದು ರೈತರು ಹೇಳುತ್ತಾರೆ.

ಪ್ರಸ್ತುತ ಇರುವ ಎಪಿಎಂಸಿ ಮಂಡಿ ವ್ಯವಸ್ಥೆಯು ರೈತರಿಗೆ ತಮ್ಮ ಉತ್ಪನ್ನಗಳ ಮಾರಾಟಕ್ಕೆ ಉತ್ತಮ ಸ್ಥಳವಲ್ಲವೆನ್ನುವುದನ್ನು ಸುಖದೇವ್ ಒಪ್ಪಿಕೊಳ್ಳುತ್ತಾರೆ. "ಈಗಿರುವ ವ್ಯವಸ್ಥೆ ಸರಿಯಿದೆಯೆಂದು ನಾವು ಎಂದೂ ಹೇಳಿಲ್ಲ." ನಮಗೆ ಸುಧಾರಣೆಗಳು ಬೇಕು. ಆದರೆ ಪ್ರಶ್ನೆಯಿರುವುದು ಆ ಸುಧಾರಣೆಗಳು ಯಾರಿಗಾಗಿ? - ರೈತರಿಗಾಗಿಯೋ ಅಥವಾ ಕಾರ್ಪೊರೇಟ್ ಜಗತ್ತಿಗೋ? ಎನ್ನುವುದು

PHOTO • Parth M.N.
Sukhdev Singh in Saijani village on tractor
PHOTO • Parth M.N.

ರೈತ ಚಳವಳಿಯ ಮೊದಲ ದಿನದಿಂದ ಸುಖದೇವ್ ಚಂಚಲ್ ಸಿಂಗ್ (ಎಡ) ಮತ್ತು ಸೈಜ್ನಿ ಗ್ರಾಮದ ಸುಖದೇವ್ ಸಿಂಗ್ ಕೃಷಿ ಕಾನೂನುಗಳನ್ನು ವಿರೋಧಿಸುತ್ತಿದ್ದಾರೆ.

ಅನೇಕ ಬಾರಿ ಮಂಡಿಗಳಲ್ಲಿ ಬೆಳೆಯ ಗುಣಮಟ್ಟ ಉತ್ತಮವಾಗಿಲ್ಲವೆಂಬ ಕಾರಣ ನೀಡಿ ಅದನ್ನು ನಿರಾಕರಿಸಲಾಗುತ್ತದೆಯೆಂದು ಸುಖದೇವ್ ಹೇಳುತ್ತಾರೆ. "ನಾವು ಹಲವಾರು ದಿನಗಳ ತನಕ ಮಂಡಿಯಲ್ಲಿರಬೇಕಾಗುತ್ತದೆ. ಎಲ್ಲೋ ಒಮ್ಮೊಮ್ಮೆ ಅವರು ನಮ್ಮಿಂದ ಖರೀದಿ ಮಾಡುತ್ತಾರೆ. ಅದರ ನಂತರವೂ ಹಣ ಸರಿಯಾದ ಸಮಯಕ್ಕೆ ನಮ್ಮ ಕೈ ಸೇರುವುದಿಲ್ಲ" ಎಂದು ಸುಖದೇವ್ ಹೇಳುತ್ತಾರೆ. “ನಾನು ಅಕ್ಟೋಬರ್ 2020ರಲ್ಲಿ ಮಂಡಿಯಲ್ಲಿ ಸುಮಾರು 200 ಕ್ವಿಂಟಾಲ್ ಭತ್ತವನ್ನು ಮಾರಾಟ ಮಾಡಿದೆ. ಅದರ ಹಣ ನಾಲ್ಕು ಲಕ್ಷ ರೂಪಾಯಿಗಳು ಇನ್ನೂ ನನ್ನ ಕೈ ಸೇರಿಲ್ಲ."

ಈ ವಿಷಯದಲ್ಲಿ ಡಿಬ್ಡಿಬಾದಲ್ಲಿ ಏಳು ಎಕರೆ ಜಮೀನು ಹೊಂದಿರುವ ಸರ್ವಿಕ್ರಂಜಿತ್ ಮತ್ತು ಪರಮ್‌ಜಿತ್ ಅವರ ಪರಿಸ್ಥಿತಿ ಒಂದಿಷ್ಟು ಭಿನ್ನವಾಗಿದೆ. "ಸರಕಾರಿ ಮಾರುಕಟ್ಟೆ ಸನಿಹದಲ್ಲೇ ಇರುವುದರಿಂದಾಗಿ ನಾನು ಫಸಲನ್ನು ಕನಿಷ್ಟ ಬೆಂಬಲ ಬೆಲೆಯಲ್ಲೇ ಮಾರಾಟ ಮಾಡುತ್ತೇನೆ. ಮತ್ತದು ನಮ್ಮ ಬದುಕಿಗೆ ಬಹಳ ಮುಖ್ಯವಾದುದು." ಎಂದು ಖಾರಿಫ್ ಋತುವಿನಲ್ಲಿ ಭತ್ತವನ್ನು ಮತ್ತು ರಬಿ ಹಂಗಾಮಿನಲ್ಲಿ ಗೋಧಿಯನ್ನು ಬೆಳೆಯುವ ಸರ್ವಿಕ್ರಂಜಿತ್ ಹೇಳುತ್ತಾರೆ.

ಗಡಿಯ ಗುಂಟ ಸೈಜ್ನಿಯ ರೈತರು ಮಾರಾಟವಾಗದ ಫಸಲುಗಳನ್ನು ಖಾಸಗಿ ವ್ಯಾಪಾರಿಗಳಿಗೆ ಮಾರುತ್ತಾರೆ. "ನಾವು ಫಸಲುಗಳನ್ನು ಕಡಿಮೆ ಬೆಲೆಗೆ ಮಾರುತ್ತೇವೆ" ಎಂದು ಸುಖದೇವ್ ಹೇಳುತ್ತಾರೆ. ಅದೇನೆ ಇದ್ದರೂ ಮಂಡಿಗಳು ಫಸಲು ಖರೀದಿ ಮಾಡದಿದ್ದರೂ ಕನಿಷ್ಟ ಬೆಂಬಲ ಬೆಲೆ ಫಸಲಿನ ಬೆಲೆಗೆ ಮಾನದಂಡವಾಗಿರುತ್ತದೆಯೆಂದು ಸರ್‌ವಿಕ್ರಮ್‌ಜೀತ್ ಹೇಳುತ್ತಾರೆ. "ಅಕ್ಕಿಯ ಬೆಂಬಲ ಬೆಲೆ 1,800 ರೂ. ಇದ್ದರೆ, ಖಾಸಗಿ ವ್ಯಾಪಾರಿಗಳು ಸುಮಾರು 1,400-1,500 ರೂಗಳಿಗೆ ಖರೀದಿಸುತ್ತಾರೆ" ಎಂದು ಅವರು ಹೇಳುತ್ತಾರೆ. "ಸರ್ಕಾರಿ ಮಂಡಿಗಳು ತಮ್ಮ ಉಪಯುಕ್ತತೆಯನ್ನು ಕಳೆದುಕೊಂಡರೆ, ಖಾಸಗಿ ವ್ಯಾಪಾರಿಗಳಿಗೆ ಕಡಿವಾಣ ಇಲ್ಲದಂತಾಗುತ್ತದೆ."

ಸರ್ಕಾರ ತಂದಿರುವ 'ಸುಧಾರಣೆಗಳು' ರೈತರಿಗೆ ಬೇಕಾಗಿಲ್ಲವೆಂದು ಸುಖದೇವ್ ಹೇಳುತ್ತಾರೆ. "ಮಂಡಿ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಕಾನೂನುಗಳನ್ನು ಜಾರಿಗೆ ತರುವ ಬದಲು, ಸರ್ಕಾರವು ಅದನ್ನು ವಿಸ್ತರಿಸುವತ್ತ ಗಮನಹರಿಸಬೇಕು ಇದರಿಂದ ಹೆಚ್ಚು ಹೆಚ್ಚು ರೈತರಿಗೆ ಸುರಕ್ಷಿತ ಮಾರುಕಟ್ಟೆ ಸಿಕ್ಕಂತಾಗುತ್ತದೆ."

ಈ ಹೊಸ ಕಾನೂನುಗಳಿಂದಾಗಿ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳಿಗೆ ರೈತರು ಮತ್ತು ಕೃಷಿಯ ಮೇಲೆ ಇನ್ನಷ್ಟು ಬಲವಾದ ಹಿಡಿತ ಸಿಗಲಿದೆಯೆಂದು ಟೀಕಿಸಲಾಗುತ್ತಿದೆ. "ಖಾಸಗಿ ವಲಯದ ಪ್ರವೇಶದ ಸುದ್ದಿ ಎಂದಿಗೂ ಒಳ್ಳೆಯ ಸುದ್ದಿಯಲ್ಲ. ಅವರದು ಯಾವಾಗಲೂ ಒಂದೇ ನೀತಿ, ಅದು: ಯಾವುದು ಏನಾದರೂ ಸರಿಯೇ ತಾನು ಲಾಭಗಳಿಸಬೇಕೆನ್ನುವುದು. ಅವರು ರೈತರನ್ನು ಶೋಷಿಸುವ ವಿಷಯದಲ್ಲಿ ಎರಡನೇ ಯೋಚನೆ ಮಾಡುವುದಿಲ್ಲ."

ರೈತರು ತಮ್ಮ ಹೋರಾಟದ ಆರಂಭಿಕ ದಿನಗಳ ದೆಹಲಿಯೆಡೆಗಿನ ಶಿಸ್ತುಬದ್ಧ ಮೆರವಣಿಗೆಯ ನಂತರ ತಮ್ಮ ಹೋರಾಟದಲ್ಲಿ ಇನ್ನಷ್ಟು ಹೆಚ್ಚಿನ ಕಾರ್ಯತಂತ್ರಾತ್ಮಕ ಅಂಶಗಳನ್ನು ಆಳವಡಿಸಿಕೊಂಡಿದ್ದಾರೆ. ಜನವರಿಯ ಕೊನೆಯ ದಿನಗಳಿಂದ ಅವರು ಗಾಜಿಪುರಕ್ಕೆ ಪಾಳಿಗಳಲ್ಲಿ ಬರುತ್ತಿದ್ದಾರೆ, ಪ್ರತಿ ಹಳ್ಳಿಯಿಂದ ಸುಮಾರು 5-10 ರೈತರು ಒಂದು ಸಮಯದಲ್ಲಿ ಹೊರಟು 1-2 ವಾರಗಳ ನಂತರ ಅಲ್ಲಿಂದ ಹಿಂದಿರುಗುತ್ತಾರೆ.

Baljeet Kaur says, the whole village is supporting one another, while cooking
PHOTO • Parth M.N.

ಬಲ್ಜಿತ್ ಕೌರ್ ಹೇಳುತ್ತಾರೆ, ಇಡೀ ಗ್ರಾಮವು ಪರಸ್ಪರರ ಜೊತೆ ನಿಂತಿದೆ

ರೈತರು ತಮ್ಮ ಹೋರಾಟದ ಆರಂಭಿಕ ದಿನಗಳ ದೆಹಲಿಯೆಡೆಗಿನ ಶಿಸ್ತುಬದ್ಧ ಮೆರವಣಿಗೆಯ ನಂತರ ತಮ್ಮ ಹೋರಾಟದಲ್ಲಿ ಇನ್ನಷ್ಟು ಹೆಚ್ಚಿನ ಕಾರ್ಯತಂತ್ರಾತ್ಮಕ ಅಂಶಗಳನ್ನು ಆಳವಡಿಸಿಕೊಂಡಿದ್ದಾರೆ. ಜನವರಿಯ ಕೊನೆಯ ದಿನಗಳಿಂದ ಅವರು ಗಾಜಿಪುರಕ್ಕೆ ಪಾಳಿಗಳಲ್ಲಿ ಬರುತ್ತಿದ್ದಾರೆ, ಪ್ರತಿ ಹಳ್ಳಿಯಿಂದ ಸುಮಾರು 5-10 ರೈತರು ಒಂದು ಸಮಯದಲ್ಲಿ ಹೊರಟು 1-2 ವಾರಗಳ ನಂತರ ಅಲ್ಲಿಂದ ಹಿಂದಿರುಗುತ್ತಾರೆ.

"ನಾವು ದೆಹಲಿಯಲ್ಲಿ ನಮ್ಮ ಉಪಸ್ಥಿತಿಯಲ್ಲಿ ನಿರಂತರತೆ ಕಾಯ್ದುಕೊಳ್ಳುವುದರೊಂದಿಗೇ ಆಗಾಗ ಮನೆಗೆ ಮರಳಿ ಹೊಲದಲ್ಲಿನ ಕೆಲಸಗಳನ್ನೂ ಮಾಡುತ್ತೇವೆ. ನಾವು ಅಲ್ಲಿ ನಿರಂತರವಾಗಿ ಒಂದು ಅಥವಾ ಎರಡು ವಾರಕ್ಕಿಂತಲೂ ಹೆಚ್ಚು ಕಾಲ ಅಲ್ಲಿರುವುದಿಲ್ಲ. ಇದು ಎಲ್ಲರಿಗೂ ಆರೋಗ್ಯವಾಗಿರಲು ಸಹಾಯ ಮಾಡುತ್ತದೆ.” ಎಂದು ಸೈಜಾನಿಯ 20 ಎಕರೆ ರೈತ ಸುಖದೇವ್ ಚಂಚಲ್ ಸಿಂಗ್ (52) ಹೇಳುತ್ತಾರೆ. "ಇದೇ ರೀತಿಯಲ್ಲಿ ನಮ್ಮಿಂದ ಸಾಧ್ಯವಿರುವವರೆಗೂ ಈ ಹೋರಾಟವನ್ನು ಜೀವಂತವಿರಿಸಲಿದ್ದೇವೆ."

ಕುಟುಂಬದಲ್ಲಿನ ಒಬ್ಬರು ಹೋರಾಟಕ್ಕೆ ಹೋದಾಗ ಉಳಿದವರು ಮನೆಕೆಲಸಗಳನ್ನು ನೋಡಿಕೊಳ್ಳುತ್ತಾರೆಂದು 45 ವರ್ಷದ ಬಲ್ಜಿತ್ ಕೌರ್ ಹೇಳುತ್ತಾರೆ. "ನಮ್ಮಲ್ಲಿ ಮೂರು ಎಮ್ಮೆಗಳಿವೆ, ಅವುಗಳನ್ನು ನಾನು ನೋಡಿಕೊಳ್ಳುತ್ತೇನೆ. ಅವರು ಸೈಜಾನಿಯಲ್ಲಿ ತಮ್ಮ ಮನೆಯ ವರಾಂಡದಲ್ಲಿ ಪಾತ್ರೆಗಳನ್ನು ತೊಳೆಯುತ್ತಾ ನಮ್ಮೊಂದಿಗೆ ಮಾತನಾಡುತ್ತಿದ್ದರು.

"ಇದಲ್ಲದೆ, ಮನೆ ನಡೆಸುವುದು, ಮನೆ ಸ್ವಚ್ಚಗೊಳಿಸುವುದು ಮತ್ತು ಅಡುಗೆ ಮಾಡುವುದು ಎಲ್ಲವೂ ನನ್ನ ಜವಬ್ದಾರಿ. ನನ್ನ ಇಪ್ಪತ್ತೊಂದು ವರ್ಷದ ಮಗ ಅಪ್ಪ ಊರಿನಲ್ಲಿ ಇಲ್ಲದಿದ್ದಾಗ ಹೊಲದ ಕೆಲಸ ನೋಡಿಕೊಳ್ಳುತ್ತಾನೆ."

ಬಲ್ಜಿತ್ ಅವರ ಪತಿ, 50 ವರ್ಷದ ಜಸ್ಪಾಲ್ ಎರಡು ಬಾರಿ ಗಾಜಿಪುರಕ್ಕೆ ಭೇಟಿ ನೀಡಿದ್ದಾರೆ - ಕೊನೆಯ ಬಾರಿ ಫೆಬ್ರವರಿ ಅಂತ್ಯದಿಂದ ಮಾರ್ಚ್ ಮೊದಲ ವಾರದವರೆಗೆ ಅಲ್ಲಿದ್ದರು. ಅವರು ದೂರದಲ್ಲಿರುವಾಗ ತಾನು ಸರಿಯಾಗಿ ನಿದ್ರೆ ಮಾಡುವುದಿಲ್ಲವೆಂದು ಬಲ್ಜಿತ್‌ ಹೇಳುತ್ತಾರೆ. “ಒಳ್ಳೆಯ ಸಂಗತಿಯೆಂದರೆ ಇಡೀ ಗ್ರಾಮವು ಪರಸ್ಪರ ಬೆಂಬಲಿಸುತ್ತಿರುವುದು. ನನ್ನ ಪತಿ ಊರಿನಲ್ಲಿಲ್ಲದ ಸಮಯದಲ್ಲಿ ನನ್ನ ಮಗನಿಂದ ಬೆಳೆಗಳಿಗೆ ನೀರು ಕೊಡಲು ಸಾಧ್ಯವಾಗದಿದ್ದರೆ, ಬೇರೊಬ್ಬರು ನೀರು ಒದಗಿಸುತ್ತಾರೆ."

ಅದೇ ರೀತಿಯ ಒಗ್ಗಟ್ಟು ಮತ್ತು ಬೆಂಬಲದೊಂದಿಗೆ ಸರ್ವಿಕ್ರಮ್‌ಜೀತ್‌ ಪರಮ್‌ಜಿತ್ ಅವರ ನೋವಿನ ಸಮಯದಲ್ಲಿ ಜನರು ಸಹಾಯಕ್ಕೆ ನಿಂತಿದ್ದಾರೆ. "ನಮ್ಮ ವೃತ್ತಿಯಿಂದಾಗಿ [ಕೃಷಿ] ನಾವೆಲ್ಲರೂ ಒಟ್ಟಾಗಿದ್ದೇವೆ." ಎಂದು ಸರ್‌ವಿಕ್ರಮ್‌ಜೀತ್‌ ಹೇಳುತ್ತಾರೆ. "ಉತ್ತರಾಖಂಡ, ಪಂಜಾಬ್ ಮತ್ತು ಹರಿಯಾಣದ ರೈತರು, ಅವರಲ್ಲಿ ಅನೇಕ ಅಪರಿಚಿತರು ನಮ್ಮ ನೋವಿಗೆ ಸಮಾಧಾನ ಹೇಳಲು ಇಲ್ಲಿಗೆ ಬಂದಿದ್ದಾರೆ."

"ನಮ್ಮ ಸುತ್ತಲಿನ ಜನರೇ ನಮ್ಮ ಶಕ್ತಿ, ಅವರಿಂದಾಗಿಯೇ ನಮ್ಮೆಲ್ಲ ಕೆಲಸಗಳೂ ಸುಸೂತ್ರವಾಗಿ ನಡೆಯುತ್ತಿವೆ" ಎಂದು ಸರ್ವಿಕ್ರಮ್‌ಜೀತ್ ಹೇಳುತ್ತಾರೆ. ನಮ್ಮ ಕೃಷಿಕ ಸಮುದಾಯಕ್ಕಿರುವ ಅಂತಃಕರಣದ ಅರ್ಧದಷ್ಟಾದರೂ ಈ ಸರ್ಕಾರಕ್ಕಿದ್ದಿದ್ದರೆ ಅದು ಇಷ್ಟೊತ್ತಿಗೆ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಿರುತ್ತಿತ್ತು."

ಅನುವಾದ: ಶಂಕರ ಎನ್. ಕೆಂಚನೂರು

Parth M.N.

Parth M.N. is a 2017 PARI Fellow and an independent journalist reporting for various news websites. He loves cricket and travelling.

Other stories by Parth M.N.
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru