ಗರಗರನೆ ತಿರುಗಿಸಿದರೆ ಟಕ್‌ ಟಕ್‌ ಟಕ್‌ ಸೌಂಡ್‌ ಮಾಡುವ, ಈ ಲಾಲಿಪಾಪ್‌ ಆಕಾರದ ಕಟ್ಕೆಟಿ ಎನ್ನುವ ಸಣ್ಣ ಆಟಿಕೆ ಬೆಂಗಳೂರಿನ ಬೀದಿಗಳಿಗೆ ಚಿರಪರಿಚಿತ. ಈ ಸದ್ದಿಗೆ ಸುತ್ತಲಿನ ಸಣ್ಣ ಮಕ್ಕಳ ಕಿವಿ ತಾನಾಗಿಯೇ ಚುರುಕಾಗಿ ತನಗೊಂದು ಆಟಿಕೆ ಬೇಕಂದು ಕೇಳತೊಡಗುತ್ತವೆ. ಈ ಹೊಳೆಯುವ ಆಟಿಕೆಯನ್ನು ನಗರಕ್ಕೆ 2,000 ಕಿಲೋಮೀಟರಿಗಿಂತಲೂ ಹೆಚ್ಚು ದೂರದಲ್ಲಿರುವ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಿಂದ ತರಲಾಗುತ್ತದೆ. "ನಮ್ಮ ಕೈಯಿಂದ ತಯಾರಾದ ಆಟಿಕೆಗಳು ಅಷ್ಟು ದೂರ ಪ್ರಯಾಣಿಸುತ್ತವೆನ್ನುವುದೇ ನಮಗೆ ಹೆಮ್ಮೆಯ ವಿಷಯ.." ಎಂದು ಒಬ್ಬ ಆಟಿಕೆ ತಯಾರಕರೊಬ್ಬರು ಹೆಮ್ಮೆಯಿಂದ ಹೇಳುತ್ತಾರೆ. "ನಾವು ಹೋಗಲು ಬಯಸಿದರೂ ಸಹ ನಮ್ಮಿಂದ ಅಲ್ಲಿಗೆಲ್ಲಾ ಹೋಗಲು ಸಾಧ್ಯವಿಲ್ಲ... ಆದರೆ ನಮ್ಮ ಆಟಿಕೆಗಳು ಪ್ರಯಾಣಿಸುತ್ತವೆ... ಇದು ಅದೃಷ್ಟ."

ಮುರ್ಷಿದಾಬಾದ್‌ನ ಹರಿಹರಪಾರಾ ಬ್ಲಾಕಿನಲ್ಲಿರುವ ರಾಂಪಾರಾ ಗ್ರಾಮದಲ್ಲಿ, ಪುರುಷ ಮತ್ತು ಮಹಿಳೆಯರು ಕಟ್ಕೆಟಿ (ಬಂಗಾಳಿ ಭಾಷೆಯಲ್ಲಿ ಕೊಟ್ಕೊಟಿ ಎಂದೂ ಕರೆಯುತ್ತಾರೆ) ತಯಾರಿಸುವಲ್ಲಿ ತೊಡಗಿಕೊಂಡಿದ್ದಾರೆ. ಹಳ್ಳಿಯ ಭತ್ತದ ಗದ್ದೆಗಳಿಂದ ಜೇಡಿಮಣ್ಣು ಮತ್ತು ಇನ್ನೊಂದು ಹಳ್ಳಿಯಿಂದ ಖರೀದಿಸಿದ ಸಣ್ಣ ಬಿದಿರಿನ ಕಡ್ಡಿಗಳನ್ನು ಕಟ್ಕೆಟಿ ತಯಾರಿಸಲು ಬಳಸಲಾಗುತ್ತದೆ ಎಂದು ರಾಮಪಾರಾದ ಮನೆಯಲ್ಲಿ ಅವುಗಳನ್ನು ತಮ್ಮ ಕರಕುಶಲತೆಯನ್ನು ತಯಾರಿಸುವ ತಪನ್ ಕುಮಾರ್ ದಾಸ್ ಹೇಳುತ್ತಾರೆ. ಅವರ ಇಡೀ ಕುಟುಂಬವು ಅದರ ತಯಾರಿಕೆಯಲ್ಲಿ ತೊಡಗಿಸಿಕೊಂಡಿದೆ. ಅವರು ಬಣ್ಣಗಳು, ತಂತಿ, ಬಣ್ಣದ ಕಾಗದ ಮತ್ತು ಹಳೆಯ ಫಿಲ್ಮ್ ರೀಲುಗಳನ್ನು ಸಹ ಇದಕ್ಕಾಗಿ ಬಳಸುತ್ತಾರೆ. "ಸುಮಾರು ಒಂದು ಅಂಗುಲದಷ್ಟು ಗಾತ್ರದಲ್ಲಿ ಕತ್ತರಿಸಿದ ಎರಡು ಫಿಲ್ಮ್ ಪಟ್ಟಿಗಳನ್ನು (ಬಿದಿರಿನ ಕೋಲಿನಲ್ಲಿ) ಸೀಳುಗಳ ನಡುವೆ ಸಿಕ್ಕಿಸುತ್ತಾರೆ. ಇದು ನಾಲ್ಕು ರೆಕ್ಕೆಗಳಂತೆ ಕೆಲಸ ಮಾಡುತ್ತದೆ" ಎಂದು ಕೆಲವು ವರ್ಷಗಳ ಹಿಂದೆ ಕೋಲ್ಕತ್ತಾದ ಬಾರಾಬಜಾರಿನಿಂದ ಫಿಲ್ಮ್ ರೀಲುಗಳ ಸಂಗ್ರಹವನ್ನು ಖರೀದಿಸುತ್ತಿದ್ದ ದಾಸ್ ಹೇಳುತ್ತಾರೆ. ಈ ಫಿಲ್ಮ್‌ ರೆಕ್ಕೆಗಳು ಕಟ್ಕೆಟಿಯ ಚಲನೆ ಮತ್ತು ಶಬ್ದಕ್ಕೆ ತಮ್ಮ ಕೊಡುಗೆ ನೀಡುತ್ತವೆ.

ಚಿತ್ರ ನೋಡಿ: ಕಟ್ಕೆಟಿ – ಒಂದು ಆಟಿಕೆಯ ಕಥೆ

"ನಾವು ಅದನ್ನು ತಂದು ಮಾರುತ್ತೇವೆ... ಆದರೆ ಅದು [ಕಟ್ ಫಿಲ್ಮ್ ತುಣುಕಿನಲ್ಲಿರುವುದು] ಯಾವ ಚಿತ್ರ ಎಂಬುದನ್ನು ನಾವು ಗಮನಿಸುವುದಿಲ್ಲ" ಎಂದು ಆಟಿಕೆ ಮಾರಾಟಗಾರರೊಬ್ಬರು ವಿವರಿಸುತ್ತಾರೆ. ರೀಲುಗಳಲ್ಲಿ ಸೆರೆಹಿಡಿಯಲಾದ ಪ್ರಸಿದ್ಧ ಚಲನಚಿತ್ರ ತಾರೆಯರು ಹೆಚ್ಚಿನ ಖರೀದಿದಾರರು ಮತ್ತು ಮಾರಾಟಗಾರರ ಗಮನಕ್ಕೆ ಬಾರದೆ ಮಾರಾಟವಾಗಿ ಹೋಗಿಬಿಡುತ್ತಾರೆ. "ಇದು ಬಂಗಾಳದ ಹೀರೋ ರಂಜಿತ್ ಮಲ್ಲಿಕ್" ಎಂದು ಇನ್ನೊಬ್ಬ ಆಟಿಕೆ ಮಾರಾಟಗಾರ ಕಟ್ಟೆಟಿಯ ರೀಲ್ ತೋರಿಸುತ್ತಾ ಹೇಳುತ್ತಾರೆ. "ನಾನು ಇನ್ನೂ ಅನೇಕರನ್ನು ನೋಡಿದ್ದೇನೆ. ಪ್ರಸೇನ್‌ಜಿತ್, ಉತ್ತಮ್ ಕುಮಾರ್, ರಿತುಪರ್ಣ, ಶತಾಬ್ದಿ ರಾಯ್... ಅನೇಕ ಚಲನಚಿತ್ರ ಕಲಾವಿದರು ಇದರಲ್ಲಿದ್ದಾರೆ."

ಬಹತೇಕ ಕೃಷಿ ಕಾರ್ಮಿಕರಾಗಿರುವ ಈ ಮಾರಾಟಗಾರರ ಪ್ರಮುಖ ಆದಾಯ ಮೂಲವು ಆಟಿಕೆ ಮಾರಾಟವಾಗಿದೆ. ಅವರು ಕಡಿಮೆ ಸಂಬಳದ ಬೆನ್ನು ಮುರಿಯುವಂತಹ ಕೃಷಿ ಕೆಲಸದ ಬದಲು ಇಂತಹ ಕೆಲಸವನ್ನು ಮಾಡಲು ಬಯಸುತ್ತಾರೆ. ಅವರು ಆಟಿಕೆ ಮಾರಾಟಕ್ಕಾಗಿ ಬೆಂಗಳೂರಿನಂತಹ ನಗರಗಳಿಗೆ ಪ್ರಯಾಣಿಸುತ್ತಾರೆ ಮತ್ತು ತಿಂಗಳುಗಳ ಕಾಲ ಅಲ್ಲಿಯೇ ಇರುತ್ತಾರೆ, ತಮ್ಮ ಸರಕುಗಳನ್ನು ಮಾರಾಟ ಮಾಡಲು ಪ್ರತಿದಿನ 8-10 ಗಂಟೆಗಳ ಕಾಲ ನಡೆಯುತ್ತಾರೆ. ಕೊವಿಡ್‌ -19 ಸಾಂಕ್ರಾಮಿಕ ಪಿಡುಗು ಈ ಸಣ್ಣ ಆದರೆ ಅಭಿವೃದ್ಧಿ ಹೊಂದುತ್ತಿದ್ದ ವ್ಯವಹಾರಕ್ಕೆ ನಿಜಕ್ಕೂ ಮಾರಾಣಂತಿಕ ಆಘಾತವನ್ನು ನೀಡಿತು. ಲಾಕ್‌ಡೌನ್‌ ಕಾರಣದಿಂದಾಗಿ ಈ ಆಟಿಕೆಗಳ ಉತ್ಪಾದನೆ ನಿಂತುಹೋಗಿತ್ತು. ಈ ವ್ಯವಹಾರದಲ್ಲಿ ರೈಲುಗಳು ಮುಖ್ಯ ಸಾರಿಗೆ ವಿಧಾನವಾಗಿದ್ದವು. ಈ ಕಾಯಿಲೆಯ ಕಾರಣದಿಂದಾಗಿ ಅನೇಕ ಆಟಿಕೆ ಮಾರಾಟಗಾರರು ತಮ್ಮ ಊರುಗಳಿಗೆ ಮರಳಬೇಕಾದ ಅನಿವಾರ್ಯತೆಗೆ ಒಳಗಾದರು.

ನಟರು: ಕಟ್ಕೆಟಿ ಆಟಿಕೆಯ ತಯಾರಕರು ಮತ್ತು ಮಾರಾಟಗಾರರು

ನಿರ್ದೇಶನ, ಛಾಯಾಗ್ರಹಣ ಮತ್ತು ಧ್ವನಿ ಗ್ರಹಣ : ಯಶಸ್ವಿನಿ ರಘುನಂದನ್

ಸಂಕಲನ ಮತ್ತು ಧ್ವನಿ ವಿನ್ಯಾಸ : ಆರತಿ ಪಾರ್ಥಸಾರಥಿ

That Cloud Never Left (ದಟ್ ಕ್ಲೌಡ್ ನೆವರ್ ಲೆಫ್ಟ್) ಎಂಬ ಶೀರ್ಷಿಕೆಯ ಈ ಚಿತ್ರದ ಆವೃತ್ತಿಯನ್ನು 2019ರಲ್ಲಿ ರೋಟರ್‌ಡ್ಯಾಮ್, ಕ್ಯಾಸೆಲ್, ಶಾರ್ಜಾ, ಪೆಸಾರೊ ಮತ್ತು ಮುಂಬೈಯಲ್ಲಿ ನಡೆದ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶಿಸಲಾಯಿತು. ಜೊತೆಗೆ ಈ ಚಿತ್ರವು ಹಲವಾರು ಪ್ರಶಸ್ತಿಗಳು ಮತ್ತು ಉಲ್ಲೇಖಗಳನ್ನು ತನ್ನದಾಗಿಸಿಕೊಂಡಿದೆ, ವಿಶೇಷವಾಗಿ ಫ್ರಾನ್ಸ್‌ನ ಎಫ್‌ಐಎಲ್‌ಎಎಫ್ ಚಲನಚಿತ್ರೋತ್ಸವದಲ್ಲಿ ಗೋಲ್ಡ್ ಫಿಲಾಫ್‌ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.

ಅನುವಾದ: ಶಂಕರ. ಎನ್. ಕೆಂಚನೂರು

Yashaswini Raghunandan

Yashaswini Raghunandan is a 2017 PARI fellow and a filmmaker based in Bengaluru.

Other stories by Yashaswini Raghunandan
Aarthi Parthasarathy

Aarthi Parthasarathy is a Bangalore-based filmmaker and writer. She has worked on a number of short films and documentaries, as well as comics and short graphic stories.

Other stories by Aarthi Parthasarathy
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru