ಪ್ರಿಯ ಓದುಗರೇ,

www.ruralindiaonline.org ಪಾಲಿಗೆ ಈ ವರ್ಷ ಬಹಳ ಚಟುವಟಿಕೆಯಿಂದ ಕೂಡಿತ್ತು.

2023 ಕೊನೆಗೊಳ್ಳುತ್ತಿರುವ ಈ ಹೊತ್ತು ಪರಿ ತನ್ನ ವರ್ಷದ ಕೆಲಸಗಳ ಕುರಿತು ಪರಿಶೀಲಾನತ್ಮಕ ಲೇಖನಗಳ ಸರಣಿಯನ್ನು ಮುಂದಿನ ಒಂಬತ್ತು ದಿನಗಳ ಕಾಲ ನಿರಂತರವಾಗಿ ಪ್ರಕಟಿಸಲಿದೆ. ಈ ಸರಣಿಯಲ್ಲಿ ಸಂಪಾದಕರ ಆಯ್ಕೆಯಾಗಿ ವರದಿಗಳು, ಕವನಗಳು, ಸಂಗೀತ, ಸಿನೆಮಾಫೋಟೊಗಳು, ಅನುವಾದಗಳು, ಲೈಬ್ರರಿ, ಫೇಸಸ್‌, ಸಾಮಾಜಿಕ ಜಾಲತಾಣ ಮತ್ತು ವಿದ್ಯಾರ್ಥಿಗಳೊಂದಿಗಿನ ನಮ್ಮ ಕೆಲಸಗಳ ಕುರಿತು ವಿವರಣಾತ್ಮಕ ಲೇಖನಗಳಿರಲಿವೆ.

ನಾವು ದೇಶದ ಮೂಲೆ ಮೂಲೆಯಿಂದ ವರದಿ ಮಾಡುವ ಕೆಲಸವನ್ನು ಈ ವರ್ಷವೂ ಮುಂದುವರೆಸಿದ್ದೇವೆ. ಜೊತೆಗೆ ಈ ಬಾರಿ ಹಲವು ಹೊಸ ಪ್ರದೇಶಗಳನ್ನು ಒಳಗೊಂಡಿದ್ದೇವೆ. ಇದರಲ್ಲಿ ದೇಶದ ಈಶಾನ್ಯ ಭಾಗವೂ ಸೇರಿದೆ. ಕೃಷಿ ವಿಭಾಗದಲ್ಲಿ ಅಪರ್ಣಾ ಕಾರ್ತಿಕೇಯನ್‌ ಅವರ ಸೂಕ್ಷ್ಮ ಸಂಶೋಧಿತ ವರದಿಗಳು ಅದ್ಭುತ ಸೇರ್ಪಡೆಯಾಗಿದ್ದು, ಈ ವರದಿಗಳಲ್ಲಿ ಮಲ್ಲಿಗೆ, ಎಳ್ಳು, ಒಣಮೀನು ಮತ್ತು ಇನ್ನೂ ಹಲವು ಆಹಾರ ಪಧಾರ್ಥಗಳು ಸೇರಿವೆ. ಜೈದೀಪ್‌ ಹರ್ಡಿಕರ್‌ ಅವರು ಮಾನವ-ಪ್ರಾಣಿ ಸಂಘರ್ಚದ ಕುರಿತು ಹಲವು ಸೂಕ್ಷ್ಮ ವರದಿಗಳನ್ನು ನೀಡಿದ್ದಾರೆ. ಈ ಸಂಘರ್ಷವನ್ನು ಒಂದು ಹೊಸ ಬಗೆಯ ಬರವೆಂದೇ ಪರಿಗಣಿಸಬಹುದು. ಈ ಸರಣಿಯಲ್ಲಿ ಹಲವು ಮನ ಕಲಕುವ ವರದಿಗಳು ಈ ಬಾರಿ ಪರಿಯಲ್ಲಿ ಪ್ರಕಟವಾಗಿವೆ.

ಪರಿಯ ಛಾಯಾಗ್ರಾಹಕ ಪಳನಿಕುಮಾರ್‌ ಅವರು ವಿಗ್ರಹ ತಯಾರಕರು, ಟ್ರಾನ್ಸ್‌ ನಟರು ಮತ್ತು ಮೀನುಗಾರರ ಬದುಕಿನ ವಿವರಗಳನ್ನು ದಾಖಲಿಸುವ ಹತ್ತು ಹಲವು ಚಿತ್ರಗಳನ್ನು ದಾಖಲಿಸಿದ್ದಾರೆ. ಇದರೊಂದಿಗೆ ರಿತಾಯನ್‌ ಮುಖರ್ಜಿ ಮತ್ತು ಮುಜಮ್ಮಿಲ್‌ ಭಟ್‌ ಅವರು ಕಾಶ್ಮೀರ ಮತ್ತು ಲದಾಖ್‌ ಕಣಿವೆಗಳಲ್ಲಿ ಅಲೆಮಾರಿ ಪಶುಪಾಲಕರೊಂದಿಗೆ ಸಂಚರಿಸಿ ಎತ್ತರದ ಪ್ರದೇಶಗಳಲ್ಲಿ ಅವರೊಂದಿಗೆ ನೆಲೆಸಿ ಹವಾಮಾನ ವೈಪರೀತ್ಯ ಅವರ ಬದುಕಿನ ಮೇಲೆ ಬೀರಿರುವ ಪರಿಣಾಮಗಳನ್ನು ತಮ್ಮ ಫೋಟೊಗಳ ಮೂಲಕ ದಾಖಲಿಸಿದ್ದಾರೆ. ಜ್ಯೋತಿ ಶಿನೋಲಿಯವರು ಮಹಾರಾಷ್ಟ್ರದ ಗ್ರಾಮೀಣ ಪ್ರದೇಶಗಳಲ್ಲಿನ ಯುವ ಕ್ರೀಡಾಪಟುಗಳು, ವಲಸೆ ಕಾರ್ಮಿಕರ ಮಕ್ಕಳ ಶಿಕ್ಷಣದ ಸಮಸ್ಯೆ ಮತ್ತು ಮುಟ್ಟಿನ ಕುರಿತಾದ ಮೂಢನಂಬಿಕೆಗಳು ಸೇರಿದಂತೆ ಹಲವು ವಿಷಯಗಳ ಕುರಿತು ವರದಿ ಮಾಡಿದ್ದಾರೆ. ಜೊತೆಗೆ ನಮ್ಮ ಪರಿ ಫೆಲೋ ಉಮೇಶ್‌ ಕೆ ರೇ ಮುಸಹರ್‌ ಸಮುದಾಯ ಮತ್ತು ಮದ್ಯ ನಿಷೇಧಕ್ಕೆ ಸಂಬಂಧಿಸಿದಂತೆ ಹಲವು ಪರಿಣಾಮಕಾರಿ ವರದಿಗಳನ್ನು ಮಾಡಿದ್ದಾರೆ.

ಸಮುದಾಯಗಳು ಮತ್ತು ಸಂರಕ್ಷಣೆಗಳ ವಿಷಯದಲ್ಲಿ ನಾವು ಹೊಸ ಕ್ಷೇತ್ರಗಳಿಂದ ವರದಿ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ. ಈ ನಿಟ್ಟಿನಲ್ಲಿ ವಿಶಾಕಾ ಜಾರ್ಜ್‌ ಅವರು ಪೂರ್ವ ಹಿಮಾಲಯದ ಪ್ರದೇಶದಲ್ಲಿ ಅಳಿವಿನಂಚಿನಲ್ಲಿರುವ ಹಕ್ಕಿಯಾದ ಬುಗುನ್‌ ಲಿಯೋಸ್ಲಿಕಾ ಕುರಿತು ಹತ್ತು ಹಲವು ವಿಷಯಗಳನ್ನು ವರದಿ ಮಾಡಿದರು. ಇದರೊಂದಿಗೆ ಈ ಹಕ್ಕಿಯನ್ನು ಉಳಿಸುವಲ್ಲಿ ಅರಣ್ಯ ಇಲಾಖೆಯೊಂದಿಗೆ ಸ್ಥಳೀಯರು ಹೇಗೆ ಕೈಜೋಡಿಸುತ್ತಿದ್ದಾರೆನ್ನುವುದನ್ನು ಸಹ ಈ ವರದಿ ಒಳಗೊಂಡಿತ್ತು. ಇಂತಹದ್ದೇ ಇನ್ನೊಂದು ವರದಿಯನ್ನು ಪ್ರೀತಿ ಡೇವಿಡ್‌ ಅವರು ರಾಜಸ್ಥಾನದಿಂದ ವರದಿ ಮಾಡಿದ್ದಾರೆ. ಈ ವರದಿಯಲ್ಲಿ ಅಳಿವಿನಂಚಿನಲ್ಲಿರುವ ಗ್ರೇಟ್‌ ಇಂಡಿಯನ್‌ ಬಸ್ಟರ್ಡ್‌ ಹಕ್ಕಿಯ ಕುರಿತು ಬರೆಯುವುದರೊಂದಿಗೆ, ನವೀಕರಿಸಬಹುದಾದ ಇಂಧನ ಸ್ಥಾವರಗಳಿಗಾಗಿ ಪವಿತ್ರ ತೋಪುಗಳನ್ನು ಸರ್ಕಾರ ವಶಪಡಿಸಿಕೊಂಡ ಬಗ್ಗೆಯೂ ಬರೆದಿದ್ದರು.

ಮೇಲಿನ ವರದಿಗಳೊಂದಿಗೆ ನಾವು ಕೆಲವು ಪ್ರಸ್ತುತ ಸಮಸ್ಯೆಗಳ ಕುರಿತಾದ ಹೋರಾಟಗಳನ್ನೂ ವರದಿ ಮಾಡಿದೆವು. ಮಹಾರಾಷ್ಟ್ರದಲ್ಲಿ ಪ್ರತಿಭಟನೆಯಲ್ಲಿ ತೊಡಗಿದ್ದ ರೈತರೊಂದಿಗೆ ನಾವೂ ಹೆಜ್ಜೆ ಹಾಕಿ ಆ ಹೋರಾಟವನ್ನು ವರದಿ ಮಾಡಿದೆವು. ಆದಿವಾಸಿ ಹಕ್ಕುಗಳಿಗಾಗಿ ಹೋರಾಡುತ್ತಿದ್ದ ಆದಿವಾಸಿ ಹೋರಾಟಗಾರರನ್ನೂ ಮಾತನಾಡಿಸಿ ಅವರ ಕುರಿತು ವರದಿ ಮಾಡಿದೆವು. ಜೊತಗೆ ಮುಷ್ಕರ ನಿರತ ಅಂಗನವಾಡ ಕಾರ್ಯಕರ್ತರ ಹೋರಾಟವನ್ನು ನಾವು ವರದಿ ಮಾಡಿದ್ದೇವೆ. ಇದರ ನಂತರ 2023ರ ಡಿಸೆಂಬರ್‌ ತಿಂಗಳಿನಲ್ಲಿ ಮಧ್ಯಪ್ರದೇಶ, ಚತ್ತೀಸಗಢ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗಿತ್ತು. ಈ ಹಿನ್ನೆಲೆಯಲ್ಲಿ ಪಾರ್ಥ್‌ ಎಮ್‌ ಎನ್‌ ಅವರು ಅಲ್ಲಿನ ಬುಲ್ಡೋಜರ್‌ ನ್ಯಾಯ, ಆದಿವಾಸಿ ಜನಾಂಗದವರ ಮೇಲಿನ ದೌರ್ಜನ್ಯ ಮತ್ತು ಕಸ್ಟಡಿ ಸಾವುಗಳಿಗೆ ತಮ್ಮವರನ್ನು ಕಳೆದುಕೊಂಡು ದುಃಖದಲ್ಲಿರುವ ಜನರ ಬದುಕಿನ ಜೀವಂತ ವಾಸ್ತವಗಳ ಕುರಿತು ವರದಿ ಮಾಡಿದ್ದರು.

ಸ್ಮಿತಾ ಖಾಟೋರ್‌ ಅವರು ಮುರ್ಷಿದಾಬಾದ್‌ ಜಿಲ್ಲೆಯಿಂದ ಬೀಡಿ ಕಾರ್ಮಿಕರ ಕುರಿತಾಗಿ ವರದಿ ಮಾಡಿದ್ದರು. ಈ ವರದಿಗಳೊಂದಿಗೆ ಅವರು ಕೆಲವು ಕಾರ್ಮಿಕ ಮಹಿಳೆಯರ ಹೋರಾಟದ ಹಾಡುಗಳು ಮತ್ತು ಮಕ್ಕಳ ನಾಟಕದ ಕುರಿತಾದ ಕೆಲವು ಬರಹಗಳನ್ನು ಮುಸಾಫಿಸರ್‌ ವಿಭಾಗದಡಿ ನೀಡಿದ್ದಾರೆ. ಶಿಕ್ಷಕರೂ ಆಗಿರುವ ಮೇದಾ ಕಾಳೆ ಈ ಬಾರಿ ವಿಶೇಷ ಶಿಕ್ಷಕರ ಕುರಿತಾದ ಲೇಖನವೊಂದನ್ನು ವೈಯಕ್ತಿಕ ಸ್ಪರ್ಶದೊಂದಿಗೆ ಮನದುಂಬಿ ಬರುವಂತೆ ಬರೆದಿದ್ದಾರೆ. ನಮ್ಮ ವರದಿಗಾರರು ಗ್ರಾಮೀಣ ಭಾರತದ ಕೆಲವು ಹಬ್ಬಗಳನ್ನು ನೋಡಿ ಆ ಕುರಿತು ವರದಿಗಳನ್ನು ಮಾಡಿದ್ದಾರೆ. ಅವುಗಳಲ್ಲಿ ಮಾ ಬೊನ್‌ಬೀಬಿ, ಶೈಲ ನೃತ್ಯ, ಚಾದರ್‌ ಬಾದನಿ, ಪಿಲಿವೇಷ ಪ್ರದರ್ಶನ ಕೆಲವು. ಇದರೊಂದಿಗೆ ʼಇದು ಕಡೆಗೂ ಯಾರ ಮಂದಿರ?ʼ ಎನ್ನುವ ವರದಿಯನ್ನೂ ಪ್ರಕಟಿಸಿದ್ದೆವು.

ಪರಿಯ ಜೊತೆಗಾರರ ತಂಡ ಭಾರತದ ಮೂಲೆಮೂಲೆಗೂ ಹಬ್ಬಿದೆ. ಈ ಅನುಕೂಲವನ್ನು ಬಳಸಿಕೊಂಡು ಕೆಲವು ಭಾರತ ಮಟ್ಟದ ವರದಿಗಳನ್ನು ಸಹ ಪ್ರಕಟಿಸಿದ್ದೇವೆ. ಇಂತಹ ಸಹಯೋಗದೊಂದಿಗೆ ಗಿಗ್‌ ವರ್ಕರ್ಸ್‌, ವಲಸೆ ಕಾರ್ಮಿಕರೊಂದಿಗೆ ವಲಸೆ ಹೋಗುವ ಪದಗಳ ಕುರಿತಾಗಿ ವರದಿ ಮಾಡಿದ್ದೇವೆ. ಜೊತೆಗೆ ವಿರಾಮದ ಘಳಿಗೆಯಲ್ಲಿ ಗ್ರಾಮೀಣ ಭಾರತದ ಮಹಿಳೆಯರು ಏನು ಮಾಡುತ್ತಾರೆನ್ನುವ ಕುತೂಹಲದ ವರದಿಯನ್ನೂ ಇದೇ ರೀತಿ ಸಹಯೋಗದೊಂದಿಗೆ ಮಾಡಿದ್ದೇವೆ. ಮುಂದಿನ ವರ್ಷ ಇಂತಹ ಹಲವು ವರದಿಗಳನ್ನು ಮಾಡುವ ನಿರೀಕ್ಷೆಯಲ್ಲಿ ನಾವಿದ್ದೇವೆ.

PHOTO • Nithesh Mattu
PHOTO • Ritayan Mukherjee

ನಾವು ಕರ್ನಾಟಕದ ಜನ ಕಲೆಯಾದ ಪಿಲಿವೇಷದ ಅದ್ಭುತ ಚಿತ್ರಗಳನ್ನು ನಾವು ಪ್ರಕಟಿಸಿದ್ದೇವೆ (ಎಡ) ಜೊತೆಗೆ ಯಾಕ್‌ ಪಾಲಕರೊಂದಿಗೆ ಲದಾಖ್‌ನ ಝನ್ಸ್ಕಾರ್‌ ಪ್ರದೇಶದ ಸುತ್ತ ಸಂಚರಿಸಿ ಅವರ ಕುರಿತು ವರದಿ ಮಾಡಿದ್ದೇವೆ

ನಮಿತಾ ವಾಯ್ಕರ್ ಅವರ ಮಾರ್ಗದರ್ಶನದಲ್ಲಿ ಪ್ರಕಟಗೊಳ್ಳುತ್ತಿರುವ ಬೀಸು ಕಲ್ಲಿನ ಪದಗಳ ಸಂಗ್ರಹ ನಮ್ಮ ಹೆಮ್ಮೆಯ ಸರಣಿಗಳಲ್ಲಿ ಒಂದು. ಈ ವರ್ಷ, ಯೋಜನೆಯ ಇತಿಹಾಸವನ್ನು ನಿರೂಪಿಸುವ ಚಲನಚಿತ್ರವೊಂದನ್ನು ನಾವು ಪ್ರಕಟಿಸಿದ್ದೇವೆ. 2023ರಲ್ಲಿ, ನಾವು ಮತ್ತೊಂದು ಹಾಡುಗಳ ಸಂಗ್ರಹವನ್ನು ಹೊಂದಿದ್ದೇವೆ. ಪರಿಯ ಕವಿ ಪ್ರತಿಷ್ಠಾ ಪಾಂಡ್ಯ ರಣ್ ಆಫ್ ಕಚ್ ಎನ್ನುವ ಹೆಸರಿನ ಈ ಸಂಗ್ರಹವನ್ನು ಸಂಯೋಜಿಸುತ್ತಿದ್ದಾರೆ.

ಆದಿವಾಸಿ ಮಕ್ಕಳು ಬಿಡಿಸಿದ ವರ್ಣಚಿತ್ರಗಳ ಸಂಗ್ರಹವು ಈ ಬಾರಿ ಪರಿಯಲ್ಲಿ ಪ್ರಕಟವಾದ ವಿಶೇಷ ಸಂಗ್ರಹಗಳಲ್ಲಿ ಒಂದಾಗಿದೆ. ಕನಿಕಾ ಗುಪ್ತಾ ಒಡಿಶಾದ ಹಳ್ಳಿಗಳಲ್ಲಿ ಮಕ್ಕಳ ವರ್ಣಚಿತ್ರಗಳ ಸಂಗ್ರಹವನ್ನು ರಚಿಸಲು ಶ್ರಮಿಸಿದರು. ಲಬೊನಿ ಜಂಗಿ ವರ್ಣಚಿತ್ರಕಾರರಾಗಿ ಎಲ್ಲರಿಗೂ ಪರಿಚಿತರಾಗಿದ್ದಾರೆ. ಪಶ್ಚಿಮ ಬಂಗಾಳದ ದೇವುಚಾ ಪಚಾಮಿಯಲ್ಲಿ ಕಲ್ಲಿದ್ದಲು ಗಣಿಯ ವಿರುದ್ಧ ಪ್ರತಿಭಟಿಸಿದ ಮಹಿಳೆಯರ ಕಥೆಯನ್ನು ಲಬೊನಿ ತನ್ನ ವರ್ಣಚಿತ್ರಗಳ ಮೂಲಕ ಓದುಗರಿಗೆ ವಿವರಿಸಿದರು.

ಪರಿ-ಎಂಎಂಎಫ್ ಫೆಲೋ ಪುರಸ್ಕೃತರು ಮರೆಯಾಗುತ್ತಿರುವ ಕಲೆ ಮತ್ತು ಕರಕುಶಲತೆಯ ಕಥೆಗಳನ್ನು ಪ್ರಸ್ತುಪಡಿಸಿದ್ದಾರೆ: ಮಹಾರಾಷ್ಟ್ರದಲ್ಲಿ, ಸಂಕೇತ್ ಜೈನ್ ಹಳ್ಳಿಗಳಲ್ಲಿ ಗುಡಿಸಲುಗಳನ್ನು ನಿರ್ಮಿಸುವ ಕಲೆಯನ್ನು ಮತ್ತು ಜಾಲಿ ಎನ್ನುವ ಪಶುಪಾಲಕರ ಕೈಚೀಲವನ್ನು ತಯಾರಿಸುವ ಕಲೆಯನ್ನು ಕ್ಯಾಮೆರಾದಲ್ಲಿ ಮತ್ತು ಪದಗಳಲ್ಲಿ ಸೆರೆಹಿಡಿದರು. ಶ್ರುತಿ ಶರ್ಮಾ ಆಟವನ್ನು ಮೀರಿ ಕ್ರೀಡಾ ಸಾಮಗ್ರಿಗಳನ್ನು ತಯಾರಿಸುವ ಕುಶಲಕರ್ಮಿಗಳ ಕಲೆ ಮತ್ತು ಜೀವನವನ್ನು ದಾಖಲಿಸಿದರು. ವೃತ್ತಿಯ ಇತಿಹಾಸ ಮತ್ತು ಸಾಮಾಜಿಕ ಮತ್ತು ಸಾಂಸ್ಕೃತಿಕ ಅಂಶಗಳು ಅವರ ಬರಹಗಳ ಕೇಂದ್ರಬಿಂದುವಾಗಿವೆ. ಪ್ರಕಾಶ್ ಭುಯಾನ್ ಮಜುಲಿಯಲ್ಲಿನ ರಾಸ್ ಸಂಪ್ರದಾಯದ ಬಗ್ಗೆ ಬರೆಯುತ್ತಿದ್ದರೆ, ಸಂಗೀತ್ ಶಂಕರ್ ಕೇರಳದ ಉತ್ತರದಲ್ಲಿರುವ ತೋಳ್‌ಪಾವಕೂತ್ ಎಂಬ ತೊಗಲು ಗೊಂಬೆಯಾಟದ ಬಗ್ಗೆ ಚಲನಚಿತ್ರಗಳನ್ನು ಮಾಡುತ್ತಿದ್ದಾರೆ ಮತ್ತು ಬರೆಯುತ್ತಿದ್ದಾರೆ. ಫೈಸಲ್ ಅಹ್ಮದ್ ಕರ್ನಾಟಕದ ತುಳುನಾಡಿನ ದೈವಗಳನ್ನು ನಮಗೆ ಪರಿಚಯಿಸಿದರು.

ಆಂಧ್ರಪ್ರದೇಶದ ಪರಿ ಫೆಲೋ ಅಮೃತಾ ಕೊಸೂರು ಅವರು ಸಾಲದಿಂದ ಬಳಲುತ್ತಿರುವ ಕುಟುಂಬಗಳ ಬಗ್ಗೆ, ವಿಶೇಷವಾಗಿ ಮಹಿಳೆಯರ ಬಗ್ಗೆ ಬರೆದಿದ್ದಾರೆ.

ಪರಿಗಾಗಿ ಸದಾ ಬರೆಯುವ ಪುರುಷೋತ್ತಮ್ ಠಾಕೂರ್, ಛತ್ತೀಸ್ಗಢ ಮತ್ತು ಜಾರ್ಖಂಡ್ ರಾಜ್ಯದ ಬುಡಕಟ್ಟು ಜನರ ಜೀವನ, ಜೀವನೋಪಾಯ ಮತ್ತು ಹಬ್ಬಗಳ ಕಥೆಗಳನ್ನು ಬರೆದಿದ್ದಾರೆ. ಯಮುನಾ ಪ್ರವಾಹದಿಂದ ಸ್ಥಳಾಂತರಗೊಂಡ ರೈತರ ದುಃಸ್ಥಿತಿಯ ಬಗ್ಗೆ ಶಾಲಿನಿ ಸಿಂಗ್ ಮಾತನಾಡಿದರು, ಊರ್ವಶಿ ಸರ್ಕಾರ್ ನಮಗೆ ಮಹಿಳಾ ಏಡಿ ಹಿಡಿಯುವವರು ಮತ್ತು ಸುಂದರಬನದ ಕುರಿತು ನಿಯತಕಾಲಿಕವನ್ನು ನಡೆಸುವ ಸಂಪಾದಕರನ್ನು ಪರಿಚಯಿಸಿದರು. ಒಡಿಶಾದ ದೂರದ ಹಳ್ಳಿಗಳಲ್ಲಿ ಶಾಲೆಗಳ ಮುಚ್ಚುವಿಕೆ ಮಕ್ಕಳ ಮೇಲೆ ಹೇಗೆ ಪರಿಣಾಮ ಬೀರುತ್ತಿದೆ ಎಂಬುದರ ಬಗ್ಗೆ ಕವಿತಾ ಅಯ್ಯರ್ ಬರೆದರೆ, ಜಿಗ್ಯಾಸಾ ಮಿಶ್ರಾ ಹೆಣ್ಣು ಮಕ್ಕಳನ್ನು ಮದುವೆಗಾಗಿ ಹೇಗೆ ಮಾರಾಟ ಮಾಡಲಾಗುತ್ತದೆ ಎಂಬ ಬಗ್ಗೆ ಸತ್ಯವನ್ನು ಬಹಿರಂಗಪಡಿಸಿದರು. ಉಮೇಶ್ ಸೋಲಂಕಿ ಲಕೋಟೆಗಳು ಮತ್ತು ಜರಡಿ ತಯಾರಕರ ಕಥೆಯನ್ನು ಹೇಳಿದರು ಮತ್ತು ಆಕಾಂಕ್ಷಾ ಮುಂಬೈನ ಸ್ಥಳೀಯ ರೈಲುಗಳಲ್ಲಿ ಸಾರಂಗಿ ನುಡಿಸುವ ಕಿಶನ್ ಭಾಯ್ ಅವರ ಕಥೆಯನ್ನು ಬರೆದಿದ್ದಾರೆ. ಸ್ಮಿತಾ ತುಮಲೂರು ತಮಿಳುನಾಡಿನ ಇರುಳ ಸಮುದಾಯದ ಬಗ್ಗೆ ಬಹಳಷ್ಟು ಬರೆದಿದ್ದಾರೆ.

ಶಿಕ್ಷಣ ಮತ್ತು ಅಧ್ಯಾಪನ ಕ್ಷೇತ್ರದ ಕೆಲವರು ಪರಿಗಾಗಿ ಬರೆದರು. ಕಡಲೂರಿನ ಮೀನುಗಾರ ಮಹಿಳೆಯರ ಕುರಿತು ಡಾ. ನಿತ್ಯಾ ರಾವ್ ಬರೆದರೆ ಡಾ. ಓವಿ ಥೋರಟ್ ಅವರು ಹಿಮಾಲಯದಲ್ಲಿನ ಪಶುಪಾಲನೆ ಜಗತ್ತಿನ ಬಗ್ಗೆ ಬರೆದಿದ್ದಾರೆ. ಅವರ ಜೊತೆಯಲ್ಲಿ ಅನೇಕ ವಿದ್ಯಾರ್ಥಿಗಳು ಮತ್ತು ಸಂಶೋಧಕರು ಪರಿಗಾಗಿ ವರದಿ ಮಾಡಿದರು. ಈ ನಿಟ್ಟಿನಲ್ಲಿ ಅವರು ಡಿನೋಟಿಫೈಡ್ ಬುಡಕಟ್ಟುಗಳು, ಗ್ರಾಮೀಣ ಬಿಹಾರದ ನೃತ್ಯಗಾತಿಯರು, ಬಟ್ಟೆ ಒಗೆಯುವ ಕೆಲಸದಲ್ಲಿ ತೊಡಗಿಕೊಂಡಿರುವ ಪುರುಷರು ಮತ್ತು ಮಹಿಳೆಯರ ಕುರಿತು ಬರೆದರು. ಪ್ರೌಢಶಾಲಾ ವಿದ್ಯಾರ್ಥಿಯೊಬ್ಬಳು ಗ್ರಾಮೀಣ ಪ್ರದೇಶದ ಪೋಸ್ಟ್‌ ಮ್ಯಾನ್‌ ಕುರಿತಾಗಿಯೂ ಬರೆದಿದ್ದಾಳೆ.

PHOTO • PARI Team
PHOTO • Ishita Pradeep

ನಾವು ಆದಿವಾಸಿ ಮಕ್ಕಳು ರಚಿಸಿರುವ ವರ್ಣಚಿತ್ರಗಳ (ಎಡ) ಹೊಸ ಸಂಗ್ರಹವನ್ನು ಪ್ರಾರಂಭಿಸಿದ್ದೇವೆ ಮತ್ತು ಮುಂಬೈಯ ಆರೆಯಿಂದ (ಬಲ) ಆದಿವಾಸಿಗಳು ನಡೆಸುತ್ತಿರುವ ಪ್ರತಿಭಟನೆಯನ್ನು ಸಹ ವರದಿ ಮಾಡಿದ್ದೇವೆ

ಈಗ, ಮುಂದಿನ ಕೆಲವು ದಿನಗಳಲ್ಲಿ, 2023ರಲ್ಲಿ ಪ್ರಕಟವಾಗಲಿರುವ ಪರಿಯ ಅತ್ಯುತ್ತಮ ಬರಹಗಳ ಕಿರು ನೋಟ ಇಲ್ಲಿದೆ.

ನಾವು ನಮ್ಮ ಮೊಸಾಯಿಕ್‌ ಎನ್ನುವ ಹೊಸ ವಿಭಾಗದ ಮೂಲಕ ಹಾಡುಗಳು, ಸಂಗೀತ ಮತ್ತು ಕವಿತೆಗಳನ್ನು ಪ್ರಕಟಿಸುತ್ತಿದ್ದೇವೆ. ಇದು ನಮ್ಮ ಆರ್ಕೈವಿಂಗ್‌ ಕೆಲಸವನ್ನು ಇನ್ನಷ್ಟು ಶ್ರೀಮಂತಗೊಳಿಸುವುದರ ಜೊತೆಗೆ ಅದನ್ನೂ ಶ್ರೀಮಂತಗೊಳಿಸಿದೆ ಕೂಡಾ. ಇದರ ನಂತರ ಪರಿ ಲೈಬ್ರರಿ ತನ್ನ ಕೆಲಸಗಳ ಕುರಿತು ಲೇಖನವೊಂದನ್ನು ಪ್ರಕಟಿಸಲಿದೆ. ಇದರಲ್ಲಿ ಈ ವಿಭಾಗದ ಕೆಲಸಗಳ ಮೇಲ್ನೋಟವೊಂದು ನಿಮಗೆ ದೊರೆಯಲಿದೆ . ಪರಿ ಫಿಲ್ಮ್ಸ್‌ ಈ ಬಾರಿ ಹಲವು ಬಾಕ್ಸ್‌ ಆಫೀಸ್‌ ಹಿಟ್‌ಗಳನ್ನು ನೀಡಿದೆ. ಹಲವು ಹೊಸ ಸಿನೆಮಾ ತಯಾರಕರು ಮತ್ತು ವಿಡಿಯೋಗ್ರಾಫರ್‌ಗಳನ್ನು ಪರಿಚಯಿಸುವ ಕೆಲಸವನ್ನೂ ಇದು ಮಾಡಿದೆ. ಇವರ ಕೆಲಸಗಳನ್ನು ನೀವು ನಮ್ಮ ಯೂಟ್ಯೂಬ್‌ ಚಾನೆಲ್ಲಿನಲ್ಲಿ ನೋಡಬಹುದು. ಶ್ರೇಯಾ ಕಾತ್ಯಾಯಿನಿ ತಯಾರಿಸಿದ ದುಷ್ಕರ್ಮಿಗಳ ಬೆಂಕಿಗೆ ಬಲಿಯಾದ ಮದರಸಾ ಅಜೀಜಿಯ ಕುರಿತಾದ ಚಿತ್ರ ಹಾಗೂ ಊರ್ಜಾ ತಯಾರಿಸಿದ ಜೈಸಲ್ಮೇರ್‌ ಪ್ರದೇಶದಲ್ಲಿನ ಓರಾಣ್‌ ಅರಣ್ಯಗಳ ಕುರಿತ ಚಿತ್ರ ಈ ವರ್ಷ ಪರಿ ತಯಾರಿಸಿದ ಚಿತ್ರಗಳಲ್ಲಿ ಕೆಲವು. ಇದಲ್ಲದೆ ಹಕ್ಕು ವಂಚಿತ ತ್ಯಾಜ್ಯ ಆಯುವ ಜನರ ಕುರಿತಾದ ಸಿನೆಮಾ ಪರಿಯಲ್ಲಿನ ಅದ್ಭುತ ಚಿತ್ರಗಳಲ್ಲಿ ಒಂದಾಗಿತ್ತು. ಇಂತಹ ಹಲವು ಚಿತ್ರಗಳ ಕುರಿತು ನೀವು ನಮ್ಮ ಚಿತ್ರ ತಂಡ ಬರೆಯಲಿರುವ ಲೇಖನದಲ್ಲಿ ಓದಬಹುದು.

ʼಪರಿಯಲ್ಲಿ ಪ್ರಕಟವಾದ ಪ್ರತಿಯೊಂದು ಕಥೆಯೂ 14 ಭಾರತೀಯ ಭಾಷೆಗಳಲ್ಲಿ ಅನುವಾದಗೊಳ್ಳುತ್ತದೆ.ʼ ನಾವು ಈ ಪ್ರಯತ್ನವನ್ನು ಪರಿಯನ್ನು ಹೆಚ್ಚು ಹೆಚ್ಚು ಪ್ರಜಾಸತ್ತಾತ್ಮಕವಾಗಿ ರೂಪಿಸುವ ಕಾರ್ಯದ ಭಾಗವಾಗಿ ನೋಡುತ್ತೇವೆ. ಮತ್ತು ಈ ಮೂಲಕ ನಾವು ಜನರನ್ನು ಹೆಚ್ಚು ಹೆಚ್ಚು ಒಳಗೊಳ್ಳುವತ್ತ ಹೆಜ್ಜೆಯಿಡುತ್ತಿದ್ದೇವೆ. ನಮ್ಮ ಪರಿಭಾಷಾ ತಂಡದ ಅನುವಾದಕರು ಮತ್ತು ಭಾಷಾ ಸಂಪಾದಕರ ಪ್ರಯತ್ನದಿಂದಾಗಿ ನಮಗೆ ಇದು ಸಾಧ್ಯವಾಗುತ್ತಿದೆ. ಆ ತಂಡದ ನೇತ್ರತ್ವದಲ್ಲಿ ಬರಲಿರುವ ಅವರ ಕೆಲಸಗಳ ಕುರಿತಾದ ಪರಿಶೀಲನಾತ್ಮಕ ಲೇಖನದಲ್ಲಿ ಈ ಕುರಿತು ನೀವು ಇನ್ನಷ್ಟು ಓದಬಹುದು.

ಫೋಟೋಗಳು ಅಥವಾ ಛಾಯಾಚಿತ್ರಗಳು ಪರಿ ಕೆಲಸದ ತಿರುಳು. ಪರಿಯ 2023 ಛಾಯಾಚಿತ್ರಗಳ ಪ್ರಪಂಚದ ಮೂಲಕ ಪ್ರಯಾಣಿಸುವಾಗ ನೀವು ಇದನ್ನು ಗಮನಿಸಬಹುದು. ಇದು ನಮ್ಮ ಇಂಟರ್ನ್‌ಶಿಪ್‌ ವಿದ್ಯಾರ್ಥಿಗಳ ಪಾಲಿಗೂ ಬಹಳ ಮುಖ್ಯ ವಿಭಾಗವಾಗಿದೆ. ಈ ಕುರಿತು ಪರಿ ಈ ವರ್ಷ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ರೀಲ್ ಇಲ್ಲಿದೆ. ಈ ವರ್ಷದ ಅಂತ್ಯ ಮತ್ತು ಹೊಸ ವರ್ಷದ ಆರಂಭವು ಪರಿಯ ಫೇಸ್‌ ಯೋಜನೆಯ ಪರಿಚಯಾತ್ಮಕ ಲೇಖನವೊಂದನ್ನು ಹೊಂದಿರಲಿದೆ. ಇದರಲ್ಲಿ ನೀವು ಇನ್ನೊಮ್ಮೆ ಭಾರತದ ಮುಖಗಳ ವೈವಿಧ್ಯತೆಯ ಆಗಾಧತೆಯನ್ನು ಕಾಣಲಿದ್ದೀರಿ.

2023ರ ಅಂತ್ಯದ ವೇಳೆಗೆ, ಕಳೆದ ಒಂಬತ್ತು ವರ್ಷಗಳಲ್ಲಿ ನಾವು ಸ್ವೀಕರಿಸಿದ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳ ಸಂಖ್ಯೆ ಆಶ್ಚರ್ಯವೆನ್ನುವಂತೆ 67ಕ್ಕೆ ತಲುಪಿದೆ. ಡಿಸೆಂಬರ್ ತಿಂಗಳಿನಲ್ಲಿ ಪರಿ ಸಹ ಸಂಸ್ಥಾಪಕರಾದ ಶಾಲಿನಿ ಸಿಂಗ್ ಅವರು ವಿಶ್ವಸಂಸ್ಥೆಯ ವರದಿಗಾರರ ಸಂಘದಿಂದ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಈ ಪ್ರಶಸ್ತಿಗಳ ಮೇಲಿನ ಮೊದಲ ಹಕ್ಕು ತಮ್ಮ ಜೀವನ ಕಥೆಗಳನ್ನು ನಮಗೆ ಮನಃಪೂರ್ವಕವಾಗಿ ವಿವರಿಸಿದ ಸಾಮಾನ್ಯ ಜನರಿಗೆ ಸೇರುತ್ತದೆ, ಅವರೊಂದಿಗೆ ಕಾಲ್ನಡಿಗೆಯಲ್ಲಿ ನಡೆದುಕೊಂಡು ಹೋಗುತ್ತಿರುವ ವರದಿಗಾರರಿಗೆ, ಬರಹಗಳು, ವೀಡಿಯೊಗಳು, ಫೋಟೋ ಸಂಪಾದಕರು ಮತ್ತು ಅವುಗಳನ್ನು ಪ್ರಕಟಿಸಲು ಕೆಲಸ ಮಾಡಿದ ಅನುವಾದಕರಿಗೂ ಸಲ್ಲುತ್ತದೆ ಎಂದು ನಾವು ನಂಬುತ್ತೇವೆ.

ಪರಿಯ ಸಂಪಾದಕರು ವರದಿಗಾರರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಾರೆ, ಅವರಿಗೆ ಮಾರ್ಗದರ್ಶನ ನೀಡುತ್ತಾರೆ ಮತ್ತು ಅವರ ವರದಿಗಳನ್ನು ಪರಿಷ್ಕರಿಸುತ್ತಾರೆ. ಅವರು ಪರಿಗೆ ಬಹಳ ಮುಖ್ಯ, ಮತ್ತು ಈ ಪಟ್ಟಿಯಲ್ಲಿ ಇಂಗ್ಲಿಷ್ ಮತ್ತು ಇತರ ಭಾರತೀಯ ಭಾಷಾ ಬರವಣಿಗೆ ಸಂಪಾದಕರು, ನಮ್ಮೊಂದಿಗೆ ಕೆಲಸ ಮಾಡುವ ಫೋಟೋ ಸಂಪಾದಕರು ಮತ್ತು ಸ್ವತಂತ್ರ ಸಂಪಾದಕರು ಸೇರಿದ್ದಾರೆ.

' ಪರಿ ಡೆಸ್ಕ್ ' ಕಾರಣದಿಂದಾಗಿಯೇ ಏಕಕಾಲದಲ್ಲಿ ಆನ್ ಲೈನ್ ನಿಯತಕಾಲಿಕವನ್ನು ಪ್ರಕಟಿಸಲು ಮತ್ತು ಆರ್ಕೈವ್ ರಚಿಸಲು ಸಾಧ್ಯವಾಗಿದೆ, ಮತ್ತು ಅವರು ಸಂಪಾದನೆಯೊಂದಿಗೆ ವರದಿಗಳಲ್ಲಿನ ಮಾಹಿತಿಯನ್ನು ಪರಿಶೀಲಿಸಲು ಮತ್ತು ಲೇಔಟ್‌ಗಳು ಅಥವಾ ವಿನ್ಯಾಸಗಳನ್ನು ತಯಾರಿಸಲು ಸಾಧ್ಯವಾಗಿದೆ. ಆರಂಭದಿಂದಲೂ, ಅವರು ವರದಿಗಾರರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಾರೆ ಮತ್ತು ಕೊನೆಯವರೆಗೂ ಒಟ್ಟಿಗೆ ಇರುತ್ತಾರೆ - ಅಂತಿಮ ಸಂಪಾದನೆಗಾಗಿ ದೋಷರಹಿತ ಸಾಹಿತ್ಯವನ್ನು ರಚಿಸುತ್ತಾರೆ. ಪ್ರಕಾಶನ ಪ್ರಕ್ರಿಯೆಯಲ್ಲಿ ಅವರ ಪಾತ್ರ ಬಹಳ ಮುಖ್ಯ. ಅವರಿಲ್ಲದೆ ಯಾವ ಕೆಲಸವೂ ಪೂರ್ಣಗೊಳ್ಳುವುದಿಲ್ಲ.  ಅವರು ವರದಿಗಳನ್ನು ರೂಪಿಸುವಲ್ಲಿ ಹತ್ತು ಹಲವು ಸವಾಲುಗಳನ್ನು ಮೀರಿ ನಿಲ್ಲುತ್ತಾರೆ.

ನಾವು ಜನವರಿ 2, 2024ರಿಂದ ನಮ್ಮ ನಿಯಮಿತ ಪ್ರಕಟಣೆಗಳನ್ನು ಮುಂದುವರಿಸುತ್ತೇವೆ. ಈ ನಿಟ್ಟಿನಲ್ಲಿ ಅಗರ್ತಲಾದ ಮೇಳದಲ್ಲಿನ 'ಸಾವಿನ ಬಾವಿ', ಬಿಹಾರದ ಛಾಪಾ ಕುಶಲಕರ್ಮಿಗಳು, ಮಹಾರಾಷ್ಟ್ರದ ಕಮ್ಯುನಲ್‌ ಪೊಲೀಸಿಂಗ್, ಮೀರತ್ ನಗರದ ಉಕ್ಕಿನ ಕಾರ್ಮಿಕರು ಮತ್ತು ಇನ್ನೂ ಅನೇಕ ವರದಿಗಳು ಪ್ರಕಟಗೊಳ್ಳಲು ಕಾಯುತ್ತಿವೆ.

ಮುಂದಿನ ವರ್ಷ, ನಾವು ಇನ್ನೂ ಹೆಚ್ಚಿನ ಕಥೆಗಳನ್ನು ಹೇಳುವ ಗುರಿಯನ್ನು ಹೊಂದಿದ್ದೇವೆ – ಜನ ಸಾಮಾನ್ಯರ ಬದುಕಿನ ದೈನಂದಿನ ದಿನಚರಿಯ ಬಗ್ಗೆ ಇನ್ನೂ ಉತ್ತಮ ವರದಿಗಳೊಂದಿಗೆ ಉತ್ತಮ ಚಿತ್ರಗಳು ಮತ್ತು ಚಲನಚಿತ್ರಗಳೊಂದಿಗೆ ಇನ್ನಷ್ಟು ಉತ್ತಮ ರೀತಿಯಲ್ಲಿ ಪರಿ ನಿಮ್ಮೆದುರು ಬರಲಿದೆ.

ಧನ್ಯವಾದ!

ಪರಿ ತಂಡ

ಅನುವಾದ: ಶಂಕರ. ಎನ್. ಕೆಂಚನೂರು

Priti David

Priti David is the Executive Editor of PARI. She writes on forests, Adivasis and livelihoods. Priti also leads the Education section of PARI and works with schools and colleges to bring rural issues into the classroom and curriculum.

Other stories by Priti David
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru