"ಒಂದು ವರ್ಷದಲ್ಲಿ ನಮ್ಮ ಅನೇಕ ಜಾನುವಾರುಗಳು ಚಿರತೆಗಳಿಗೆ ಬಲಿಯಾಗುತ್ತವೆ. ಅವು ರಾತ್ರಿಯಲ್ಲಿ ಬಂದು ಕುರಿ, ಮೇಕೆಗಳನ್ನು ಎತ್ತಿಕೊಂಡು ಹೋಗುತ್ತವೆ" ಎಂದು  ಕುರಿಪಾಲಕ ಗೌರ್ ಸಿಂಗ್ ಠಾಕೂರ್ ಹೇಳುತ್ತಾರೆ.  ಸ್ಥಳೀಯ ಭುಟಿಯಾ ನಾಯಿಯಾದ ಶೇರೂ ಸಹ ಅವುಗಳನ್ನು ದೂರವಿಡಲು ಸಾಧ್ಯವಿಲ್ಲ ಎಂದು ಅವರು ಹೇಳುತ್ತಾರೆ.

ಹಿಮಾಲಯದ ಗಂಗೋತ್ರಿ ಪರ್ವತಶ್ರೇಣಿಯ  ಪರ್ವತದ ಮೇಲೆ ಅವರು ನಮ್ಮೊಂದಿಗೆ ಮಾತನಾಡುತ್ತಿದ್ದರು. ಅವರು ಕಾಯುತ್ತಿದ್ದ ಜಾನುವಾರುಗಳ ಹಿಂಡು ಉತ್ತರಕಾಶಿ ಜಿಲ್ಲೆಯ ಸೌರಾ ಗ್ರಾಮದ ಸುತ್ತಮುತ್ತಲಿನ ಏಳು ಕುಟುಂಬಗಳಿಗೆ ಸೇರಿದವು. ಗೌರ್ ಸಿಂಗ್ 2,000 ಮೀಟರ್ ಕೆಳಗೆ ಇರುವ ಅದೇ ಹಳ್ಳಿಗೆ ಸೇರಿದವರು. ಅವರು ವರ್ಷದಲ್ಲಿ ಒಂಬತ್ತು ತಿಂಗಳವರೆಗೆ ಜಾನುವಾರುಗಳನ್ನು ನೋಡಿಕೊಳ್ಳುವ ಒಪ್ಪಂದದಲ್ಲಿದ್ದಾರೆ. ಮಳೆ ಅಥವಾ ಹಿಮ, ಪರಿಸ್ಥಿತಿ ಯಾವುದೇ ಇರಲಿ ಅವರು ಕುರಿಗಳನ್ನು ಮೇಯಿಸುತ್ತಾ, ಒಟ್ಟುಗೂಡಿಸುತ್ತಾ ಮತ್ತು ಎಣಿಸುತ್ತಾ ಅಲ್ಲಿರಬೇಕಾಗುತ್ತದೆ.

"ಇಲ್ಲಿ ಸರಿಸುಮಾರು 400 ಕುರಿಗಳು ಮತ್ತು 100 ಮೇಕೆಗಳಿವೆ" ಎಂದು ಇನ್ನೊಬ್ಬ ಕುರಿಪಾಲಕ 48 ವರ್ಷದ ಹರ್ದೇವ್ ಸಿಂಗ್ ಠಾಕೂರ್ ಪರ್ವತದ ಮೇಲೆ ಚದುರಿದ ಹಿಂಡನ್ನು ನೋಡುತ್ತಾ ಹೇಳುತ್ತಾರೆ. "ಇನ್ನೂ ಹೆಚ್ಚು ಇರಬಹುದು," ಎಂದು ಅವರು ಮುಂದುವರೆದು ಹೇಳುತ್ತಾರೆ, ನಿಖರವಾದ ಸಂಖ್ಯೆಯ ಬಗ್ಗೆ ಸ್ವಲ್ಪ ಅನಿಶ್ಚಿತತೆಯಿತ್ತು. ಹರ್ದೇವ್ ಕಳೆದ 15 ವರ್ಷಗಳಿಂದ ಈ ಕೆಲಸವನ್ನು ಮಾಡುತ್ತಿದ್ದಾರೆ. "ಕೆಲವು ಕುರಿಪಾಲಕರು ಮತ್ತು ಸಹಾಯಕರು ಎರಡು ವಾರಗಳ ಕಾಲ ಬಂದು ಹಿಂದಿರುಗಿ ಹೋಗುತ್ತಾರೆ, ನನ್ನಂತಹ ಕೆಲವರು ಅಲ್ಲಿಯೇ ಇರುತ್ತಾರೆ" ಎಂದು ಅವರು ವಿವರಿಸುತ್ತಾರೆ.

ಅದು ಅಕ್ಟೋಬರ್ ತಿಂಗಳು, ಮತ್ತು ಉತ್ತರಾಖಂಡದ ಗರ್ವಾಲ್ ಹಿಮಾಲಯದ ಗಂಗೋತ್ರಿ ಶ್ರೇಣಿಯ ಹುಲ್ಲುಗಾವಲಿನ 'ಚುಲಿ ಟಾಪ್' ಎಂಬ ಹುಲ್ಲುಗಾವಲಿನ ಮೇಲೆ ಕೊರೆಯುವ ಕೊರೆಯುವ ಚಳಿ ಬೀಸುತ್ತಿತ್ತು. ನೂಕುನುಗ್ಗಲು ಮಾಡುವ ಪ್ರಾಣಿಗಳ ನಡುವೆ ಚಲಿಸುವ ಪುರುಷರು ದೇಹಕ್ಕೆ ಕಂಬಳಿಯನ್ನು ಸುತ್ತಿಕೊಂಡಿದ್ದಾರೆ. ಇದು ಉತ್ತಮ ಹುಲ್ಲುಗಾವಲು, ಕುರಿಪಾಲಕರು ಹೇಳುತ್ತಾರೆ, ಎತ್ತರದ ಹಿಮದ ದಂಡೆಯಲ್ಲಿ ಹುಟ್ಟುವ ತೆಳುವಾದ ತೊರೆಯು ಪ್ರಾಣಿಗಳಿಗೆ ಖಚಿತವಾದ ನೀರಿನ ಮೂಲವಾಗಿದೆ. ಅಲ್ಲಿಂದ ಇಳಿದು ಕಲ್ಲಿನ ಬಿರುಕಿನ ಮೂಲಕ ಹಾಯುತ್ತದೆ, ಭಾಗೀರಥಿಯ ಉಪನದಿಯಾದ ಭಿಲಂಗನ ನದಿಗೆ 2,000 ಮೀಟರಿಗಿಂತಲೂ ಹೆಚ್ಚು ಕೆಳಗೆ ಹೋಗಿ ತಲುಪುತ್ತದೆ.

Guru Lal (left), Gaur Singh Thakur, and Vikas Dhondiyal (at the back) gathering the herd at sundown on the Gangotri range
PHOTO • Priti David

ಗುರು ಲಾಲ್ (ಎಡ), ಗೌರ್ ಸಿಂಗ್ ಠಾಕೂರ್ ಮತ್ತು ವಿಕಾಸ್ ಧೋಂಡಿಯಾಲ್ (ಹಿಂಭಾಗದಲ್ಲಿ) ಗಂಗೋತ್ರಿ ಶ್ರೇಣಿಯ ಸೂರ್ಯಾಸ್ತದ ಸಮಯದಲ್ಲಿ ಹಿಂಡನ್ನು ಒಟ್ಟುಗೂಡಿಸುತ್ತಿರುವುದು

Sheroo, the Bhutia guard dog, is a great help to the shepherds.
PHOTO • Priti David
The sheep and goats grazing on Chuli top, above Saura village in Uttarkashi district
PHOTO • Priti David

ಎಡ: ಭುಟಿಯಾ ಕಾವಲು ನಾಯಿಯಾದ ಶೇರೂ, ಕುರುಬರಿಗೆ ದೊಡ್ಡ ಸಹಾಯ ಮಾಡುತ್ತದೆ. ಬಲ: ಉತ್ತರಕಾಶಿ ಜಿಲ್ಲೆಯ ಸೌರಾ ಗ್ರಾಮದ ಮೇಲೆ, ಚುಲಿ ಟಾಪ್‌ ಮೇಲೆ ಮೇಯುತ್ತಿರುವ ಕುರಿ ಮತ್ತು ಮೇಕೆಗಳು

ಎತ್ತರದ ಪರ್ವತಗಳಲ್ಲಿ ನೂರಾರು ಜಾನುವಾರುಗಳನ್ನು ನೋಡಿಕೊಳ್ಳುವುದು ಅಪಾಯದಿಂದ ತುಂಬಿದ ಕೆಲಸವಾಗಿದೆ. ಇಲ್ಲಿನ ಮರದ ಕೊಂಬೆ, ದೊಡ್ಡ ಬಂಡೆಗಳು ಮತ್ತು ಏರಿಳಿತದ ನೆಲ ಎರಡು ಮತ್ತು ನಾಲ್ಕು ಕಾಲಿನ ಪರಭಕ್ಷಕಗಳನ್ನು ಸುಲಭವಾಗಿ ಮರೆಮಾಡುತ್ತದೆ. ಅದಲ್ಲದೆ ಅವರ ಆರೈಕೆಯಲ್ಲಿರುವ ಕುರಿಗಳು ಮತ್ತು ಆಡುಗಳು ಶೀತ ಅಥವಾ ರೋಗದಿಂದ ಸಾಯಬಹುದು. "ನಾವು ಡೇರೆಗಳಲ್ಲಿ ವಾಸಿಸುತ್ತೇವೆ ಮತ್ತು ನಮ್ಮ ಸುತ್ತಲಿನ ಪ್ರಾಣಿಗಳು ನಮ್ಮ ಸುತ್ತಲಿರುತ್ತವೆ. ನಮ್ಮೊಂದಿಗೆ ಎರಡು ನಾಯಿಗಳಿವೆ, ಆದರೆ ಚಿರತೆಗಳು ಎಳೆಯ ಕುರಿಮರಿಗಳು ಮತ್ತು ಮರಿ ಆಡುಗಳನ್ನು ಬೇಟೆಯಾಡುತ್ತವೆ" ಎಂದು ಹಿಂಡಿನಲ್ಲಿ 50 ಕುರಿಗಳನ್ನು ಹೊಂದಿರುವ ಹರ್ದೇವ್ ಹೇಳುತ್ತಾರೆ; ಗೌರ್ ಸಿಂಗ್ ಅವರ ಬಳಿ ಸುಮಾರು 40ರಷ್ಟಿದೆ.

ಇಬ್ಬರು ಕುರಿಗಾಹಿಗಳು ಮತ್ತು ಅವರ ಇಬ್ಬರು ಸಹಾಯಕರು ಬೆಳಿಗ್ಗೆ 5 ಗಂಟೆಯಿಂದ ಎದ್ದು, ಕೂಗುವ ಜಾನುವಾರುಗಳನ್ನು ಪರ್ವತದ ಕಡೆ ಬಿಟ್ಟಿದ್ದಾರೆ. ಶೇರೂ ಅವರಿಗೆ ಒಂದು ದೊಡ್ಡ ಸಹಾಯವಾಗಿದೆ, ಅದು ಕುರಿಗಳ ಗುಂಪುಗಳನ್ನು ಒಡೆಯುತ್ತದೆ, ಇದರಿಂದ ಪ್ರತಿಯೊಂದೂ ಆಹಾರವನ್ನು ಪಡೆಯಲು ಸಾಧ್ಯವಾಗುತ್ತದೆ.

ಈ ಹಿಂಡು ಹಸಿರು ಹುಲ್ಲುಗಾವಲುಗಳನ್ನು ಹುಡುಕುತ್ತಾ ದಿನಕ್ಕೆ 20 ಕಿಲೋಮೀಟರ್ ದೂರವನ್ನು ಕ್ರಮಿಸಬಹುದು, ಕೆಲವೊಮ್ಮೆ ಅದಕ್ಕಿಂತ ಹೆಚ್ಚು. ಎತ್ತರದ ಪ್ರದೇಶಗಳಲ್ಲಿ, ಹುಲ್ಲು ಸಾಮಾನ್ಯವಾಗಿ ಶಾಶ್ವತ ಹಿಮರೇಖೆಯ ಕೆಳಗೆ ಕಂಡುಬರುತ್ತದೆ. ಆದರೆ ಅಂತಹ ಹುಲ್ಲುಗಾವಲುಗಳನ್ನು ಹರಿಯುವ ನೀರಿರುವ ಸ್ಥಳದೊಡನೆ ಕಂಡುಹಿಡಿಯುವುದು ಒಂದು ಸವಾಲಾಗಿದೆ. ಹುಲ್ಲನ್ನು ಹುಡುಕುತ್ತಾ, ಕುರಿಗಾಹಿಗಳು ಆಗಾಗ್ಗೆ 100 ಕಿಲೋಮೀಟರಿಗಿಂತಲೂ ಹೆಚ್ಚು ಉತ್ತರಕ್ಕೆ, ಭಾರತ-ಚೀನಾ ಗಡಿಗೆ ಹತ್ತಿರದವರೆಗೂ ಸಾಗುತ್ತಾರೆ.

Guru Lal, Gaur Singh Thakur, Vikas Dhondiyal and their grazing sheep on the mountain, with snowy Himalayan peaks in the far distance
PHOTO • Priti David

ಗುರು ಲಾಲ್, ಗೌರ್ ಸಿಂಗ್ ಠಾಕೂರ್, ವಿಕಾಸ್ ಧೋಂಡಿಯಾಲ್ ಮತ್ತು ಅವರ ಮೇಯಿಸುವ ಕುರಿಗಳು ಪರ್ವತದ ಮೇಲೆ, ದೂರದಲ್ಲಿ ಹಿಮಾವೃತ ಹಿಮಾಲಯ ಶಿಖರಗಳನ್ನು ಕಾಣಬಹುದು

ಈ ಕುರಿಪಾಲಕರು ಸಣ್ಣ ಡೇರೆಗಳಲ್ಲಿ ವಾಸಿಸುತ್ತಾರೆ ಮತ್ತು ಕೆಲವೊಮ್ಮೆ ದನಕರುಗಳಿಗೆ ಮೀಸಲಾದ ಕಚ್ಚಾ ಕಲ್ಲಿನ ಆವರಣವಾದ ಚನ್ನಿಯನ್ನು ಬಳಸುತ್ತಾರೆ, ಅದರ ಮೇಲೆ ಅವರು ಛಾವಣಿಗಾಗಿ ಪ್ಲಾಸ್ಟಿಕ್ ಹಾಳೆಯನ್ನು ಹಾಸುತ್ತಾರೆ. ಹುಲ್ಲುಗಾವಲುಗಳನ್ನು ಹುಡುಕುತ್ತಾ ಅವರು ಎತ್ತರಕ್ಕೆ ಏರುತ್ತಿದ್ದಂತೆ, ಮರಗಳು ಕಡಿಯಾಗುತ್ತವೆ ಮತ್ತು ಇದರಿಂದಾಗಿ ಅಡುಗೆಗೆ ಒಣ ಕಟ್ಟಿಗೆಯನ್ನು ಸಂಗ್ರಹಿಸಲು ಮೇಲೆ ಮತ್ತು ಕೆಳಗೆ ಹೋಗಿ ಸಮಯವನ್ನು ಕಳೆಯುವಂತಾಗುತ್ತದೆ.

"ನಾವು ವರ್ಷದಲ್ಲಿ ಸುಮಾರು ಒಂಬತ್ತು ತಿಂಗಳು ನಮ್ಮ ಮನೆಗಳಿಂದ ದೂರವಿರುತ್ತೇವೆ. ಗಂಗೋತ್ರಿ ಬಳಿಯ ಹರ್ಸಿಲ್‌ನಲ್ಲಿ ಆರು ತಿಂಗಳ ಕಾಲ ನಾವು ಉಳಿದುಕೊಂಡೆವು, ನಂತರ ಇಲ್ಲಿ [ಚುಲಿ ಟಾಪ್]; ನಾವು ಇಲ್ಲಿ ಎರಡು ತಿಂಗಳಿನಿಂದ ಇದ್ದೇವೆ. ಚಳಿ ಹೆಚ್ಚಾಗುತ್ತಿದೆ, ಆದ್ದರಿಂದ ನಾವು ಈಗ ನಮ್ಮ ಮನೆ  ಕಡೆ ಇಳಿಯುತ್ತಿದ್ದೇವೆ", ಎಂದು ಉತ್ತರಕಾಶಿ ಜಿಲ್ಲೆಯ ಭಟ್ವಾರಿ ಜಿಲ್ಲೆಯ ಸೌರಾ ಬಳಿಯ ಜಮ್ಲೋ ಎಂಬ ಕುಗ್ರಾಮದ ನಿವಾಸಿ ಹರ್ದೇವ್ ಹೇಳುತ್ತಾರೆ  . ಅವರು  ಸೌರಾದಲ್ಲಿ ಒಂದು ಬಿಘಾ ಕ್ಕಿಂತಲೂ ಸ್ವಲ್ಪ ಕಡಿಮೆ ಭೂಮಿಯನ್ನು ಹೊಂದಿದ್ದಾರೆ  (ಬಿಘಾ  ಎಂದರೆ ಎಕರೆಯ ಐದನೇ ಒಂದು ಭಾಗ). ಅವರ ಹೆಂಡತಿ ಮತ್ತು ಮಕ್ಕಳು ಸ್ವ-ಬಳಕೆಗಾಗಿ ಅಕ್ಕಿ ಮತ್ತು ರಾಜ್ಮಾ ಬೆಳೆಯುವ ಭೂಮಿಯನ್ನು ನೋಡಿಕೊಳ್ಳುತ್ತಾರೆ  .

ಚಳಿಗಾಲದ ಮೂರು ತಿಂಗಳುಗಳವರೆಗೆ, ಹಿಮ ಆವರಿಸಿ ಚಲಿಸಲು ಅಸಾಧ್ಯವಾದಾಗ, ಹಿಂಡು ಮತ್ತು ಅವುಗಳ ಪಾಲಕರು ತಮ್ಮ ಹಳ್ಳಿ ಮತ್ತು ಅದರ ಸುತ್ತಲೂ ಉಳಿಯುತ್ತಾರೆ. ಮಾಲೀಕರು ತಮ್ಮ ಜಾನುವಾರುಗಳನ್ನು ಪರಿಶೀಲಿಸುತ್ತಾರೆ ಮತ್ತು ಹಿಂಡನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುತ್ತಾರೆ. ಒಂದು ವೇಳೆ ಜಾನುವಾರು ಸತ್ತಿದ್ದರೆ ಆ ನಷ್ಟವನ್ನು ಕುರಿಗಾಹಿಗಳು ತಮ್ಮ ಜಾನುವಾರುಗಳನ್ನು ನೋಡಿಕೊಳ್ಳಲು ಪಡೆಯುವ ಮಾಸಿಕ 8,000-10,000 ರೂಪಾಯಿಗಳಿಂದ ಕಡಿತಗೊಳಿಸಲಾಗುತ್ತದೆ. ಸಹಾಯಕರಿಗೆ ಸಾಮಾನ್ಯವಾಗಿ ಇನ್ನೊಂದು ವಿಧದಲ್ಲಿ ಪಾವತಿಸಲಾಗುತ್ತದೆ - ಅವರು ಸುಮಾರು 5-10 ಆಡುಗಳು ಅಥವಾ ಕುರಿಗಳನ್ನು ಪಾವತಿಯಾಗಿ ಪಡೆಯಬಹುದು.

Crude stone dwellings called channi, mostly used for cattle, are found across the region.
PHOTO • Priti David
The herders (from left): Hardev Singh Thakur, Guru Lal, Vikas Dhondiyal and Gaur Singh Thakur, with Sheroo, their guard dog
PHOTO • Priti David

ಎಡ: ಹೆಚ್ಚಾಗಿ ಜಾನುವಾರುಗಳಿಗೆ ಬಳಸಲಾಗುವ ಚನ್ನಿ ಎಂದು ಕರೆಯಲ್ಪಡುವ ಕಚ್ಚಾ ಕಲ್ಲಿನ ವಾಸಸ್ಥಾನಗಳು ಈ ಪ್ರದೇಶದಾದ್ಯಂತ ಕಂಡುಬರುತ್ತವೆ. ಬಲ: ಕುರಿಗಾಹಿಗಳು (ಎಡದಿಂದ): ಹರ್ದೇವ್ ಸಿಂಗ್ ಠಾಕೂರ್, ಗುರು ಲಾಲ್, ವಿಕಾಸ್ ಧೋಂಡಿಯಾಲ್ ಮತ್ತು ಗೌರ್ ಸಿಂಗ್ ಠಾಕೂರ್, ಅವರ ಕಾವಲು ನಾಯಿ ಶೇರೂ ಜೊತೆ

ಒಂದು ಕುರಿ ಅಥವಾ ಮೇಕೆಯು ಸಣ್ಣ ಪಟ್ಟಣಗಳಲ್ಲಿ ಮತ್ತು ಉತ್ತರಕಾಶಿಯಂತಹ ಜಿಲ್ಲಾ ಕೇಂದ್ರಗಳಲ್ಲಿಯೂ ಸಹ ಸುಮಾರು 10,000 ರೂ.ಗಳಿಗೆ ಮಾರಾಟವಾಗುತ್ತದೆ. "ಸರ್ಕಾರ್ [ಅಧಿಕಾರಿಗಳು] ನಮಗಾಗಿ ಏನನ್ನಾದರೂ ಮಾಡಬಹುದು; ಅವರು ನಮ್ಮ ಕುರಿ ಮತ್ತು ಮೇಕೆಗಳನ್ನು ಮಾರಾಟ ಮಾಡಲು ನಮಗೆ ಶಾಶ್ವತ ಸ್ಥಳವನ್ನು ಸೃಷ್ಟಿಸಬಹುದು. ಇದು ನಮಗೆ ಉತ್ತಮ ದರವನ್ನು ಪಡೆಯಲು ಸಹಾಯ ಮಾಡುತ್ತದೆ", ಎಂದು ಶೀತಕ್ಕೆ ಚಿಕಿತ್ಸೆ ನೀಡುತ್ತಿರುವ ಗೌರ್ ಸಿಂಗ್ ಹೇಳುತ್ತಾರೆ. ತನ್ನಂತಹ ದನಗಾಹಿಗಳು ರೋಗಲಕ್ಷಣಗಳನ್ನು ನಿವಾರಿಸಲು ಮಾತ್ರೆಗಾಗಿ ದಾರಿಹೋಕರನ್ನು ಅವಲಂಬಿಸಿದ್ದಾರೆ ಎಂದು ಅವರು ಹೇಳುತ್ತಾರೆ, ಏಕೆಂದರೆ ಅವರಿಗೆ  ವೈದ್ಯಕೀಯ ಸಹಾಯಕ್ಕೆ ಸುಲಭ ಪ್ರವೇಶವಿಲ್ಲ.

"ಈ ಕೆಲಸವನ್ನು ಹುಡುಕಲು ನಾನು ಹಿಮಾಚಲ ಪ್ರದೇಶದಿಂದ ಕಾಲ್ನಡಿಗೆಯಲ್ಲಿ 2,000 ಕಿಲೋಮೀಟರ್ ಪ್ರಯಾಣಿಸಿದ್ದೇನೆ" ಎಂದು  ಶಿಮ್ಲಾ ಜಿಲ್ಲೆಯ ದೊಡ್ರಾ-ಕ್ವಾರ್ ತಹಸಿಲ್ನ 40 ವರ್ಷದ ಸಹಾಯಕ ಗುರು ಲಾಲ್ ಹೇಳುತ್ತಾರೆ. "ನನ್ನ ಹಳ್ಳಿಯಲ್ಲಿ ಯಾವುದೇ ಉದ್ಯೋಗಗಳಿಲ್ಲ." ದಲಿತರಾಗಿರುವ ಲಾಲ್, ಒಂಬತ್ತು ತಿಂಗಳ ಕೆಲಸಕ್ಕೆ 10 ಮೇಕೆಗಳನ್ನು ಪಾವತಿಯಾಗಿ ಪಡೆಯುವುದಾಗಿ ಹೇಳುತ್ತಾರೆ. ಅವರು ತನ್ನ ಹೆಂಡತಿ ಮತ್ತು 10 ವರ್ಷದ ಮಗನಿರುವ ಅವರ ಮನೆಗೆ ಹಿಂದಿರುಗಿದಾಗ ಜಾನುವಾರುಗಳನ್ನು ಮಾರಾಟ ಮಾಡುತ್ತಾರೆ ಅಥವಾ ಅವುಗಳ ಸಂತಾನೋತ್ಪತ್ತಿ ಮಾಡುತ್ತಾರೆ.

ಉದ್ಯೋಗಾವಕಾಶಗಳ ಕೊರತೆಯೂ ಹರ್ದೇವ್ ಸಿಂಗ್ ಕುರಿಗಾಹಿಯಾಗಲು ಕಾರಣವಾಗಿದೆ. "ನನ್ನ ಹಳ್ಳಿಯ ಜನರು ಮುಂಬೈನಲ್ಲಿ ಹೋಟೆಲ್ ಕೆಲಸಗಳಿಗೆ ತೆರಳುತ್ತಾರೆ. ಈ ಕೆಲಸವನ್ನು ಎತ್ತರದ ಪರ್ವತದಲ್ಲಿ ಮಳೆ, ಚಳಿ ಲೆಕ್ಕಿಸದೆ ಮಾಡಬೇಕಿರುತ್ತದೆ. ಯಾರೂ ಈ ಕೆಲಸವನ್ನು ಮಾಡಲು ಬಯಸುವುದಿಲ್ಲ - ಇದು ದಿನಗೂಲಿ ಕೆಲಸಕ್ಕಿಂತ ಹೆಚ್ಚು ಕಷ್ಟಕರವಾಗಿದೆ. ಆದರೆ ದಿನಗೂಲಿ ಕೆಲಸ ಎಲ್ಲಿದೆ?" ಎಂದು ಅವರು ಕೇಳುತ್ತಾರೆ.

The shepherds at work, minding their animals, as the sun rises on the Gangotri range in the background
PHOTO • Priti David

ಗಂಗೋತ್ರಿ ಪರ್ವತಶ್ರೇಣಿಯಲ್ಲಿ ಸೂರ್ಯ ಉದಯಿಸುತ್ತಿದ್ದಂತೆ, ತಮ್ಮ ಪ್ರಾಣಿಗಳನ್ನು ಕಾಯುವ ಕೆಲಸದಲ್ಲಿರುವ ಕುರಿಪಾಲಕರು, ಹಿನ್ನೆಲೆಯಲ್ಲಿ

ಈ ವರದಿಯನ್ನು ತಯಾರಿಸಲು ಸಹಾಯ ಮಾಡಿದ ಅಂಜಲಿ ಬ್ರೌನ್ ಮತ್ತು ಸಂಧ್ಯಾ ರಾಮಲಿಂಗಂ ಅವರಿಗೆ ವರದಿಗಾರರು ಧನ್ಯವಾದ ಹೇಳಲು ಬಯಸುತ್ತಾರೆ.

ಅನುವಾದ: ಶಂಕರ. ಎನ್. ಕೆಂಚನೂರು

Priti David

Priti David is the Executive Editor of PARI. She writes on forests, Adivasis and livelihoods. Priti also leads the Education section of PARI and works with schools and colleges to bring rural issues into the classroom and curriculum.

Other stories by Priti David
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru