"ಚಳುವಳಿಯು ನಮ್ಮ ಸಮಸ್ಯೆಗಳನ್ನು ಹೇಗೆ ಎದುರಿಸಬೇಕೆಂದು ನನಗೆ ಕಲಿಸಿತು. ನಾವು ಈಗ ಗೌರವಿಸಲ್ಪಡುತ್ತಿದ್ದೇವೆ.” ಅವರು ಹೇಳುತ್ತಿರುವ 'ನಾವು' ಎಂದರೆ, 49ರ ಹರೆಯದ ರಾಜಿಂದರ್ ಕೌರ್ ಅವರಂತಹ ಹಲವಾರು ಮಹಿಳೆಯರು, ಸೆಪ್ಟೆಂಬರ್ 2020ರಲ್ಲಿ ಅಂಗೀಕರಿಸಲಾದ ಕೃಷಿ ಕಾನೂನುಗಳ ವಿರುದ್ಧ ಹೋರಾಟದ ಕಣದಲ್ಲಿದ್ದವರು. ಪಂಜಾಬ್‌ನ ಪಟಿಯಾಲ ಜಿಲ್ಲೆಯ ರಾಜೀಂದರ್ 220 ಕಿಮೀ ದೂರವನ್ನು ಕ್ರಮಿಸಿ ಹಲವಾರು ಬಾರಿ ಸಿಂಘು ಗಡಿಗೆ ಭೇಟಿ ನೀಡಿ ಅಲ್ಲಿ ಭಾಷಣ ಮಾಡಿದರು.

50 ವರ್ಷದ ಹರ್ಜೀತ್ ಕೌರ್ ತನ್ನ ಹಳ್ಳಿಯಾದ ದೌನ್ ಕಲಾನ್‌ನ ಪಕ್ಕದಲ್ಲಿ ವಾಸಿಸುತ್ತಿದ್ದು, ದೆಹಲಿ-ಹರಿಯಾಣ ಗಡಿಯಲ್ಲಿರುವ ಸಿಂಘುವಿನಲ್ಲಿ 205 ದಿನಗಳ ಕಾಲ ತಂಗಿದ್ದರು. “ನಾನು ಬೇಸಾಯದಲ್ಲಿ ತೊಡಗಿಸಿಕೊಳ್ಳದ ದಿನಗಳೇ ಇಲ್ಲ. ಪ್ರತಿ ಕೊಯ್ಲಿನ ನಂತರವೂ ನನಗೂ ವಯಸ್ಸಾಗುತ್ತಾ ಬಂತು,” ಎಂದು ಕಳೆದ 36 ವರ್ಷಗಳಿಂದ ಕೃಷಿ ಮಾಡುತ್ತಿರುವ ಹರ್ಜೀತ್ ಹೇಳುತ್ತಾರೆ. "ಆದರೆ ನಾನು ಇಂತಹ ಚಳುವಳಿಯನ್ನು ನೋಡಿದ್ದು ಇದೇ ಮೊದಲು ಮತ್ತು ಭಾಗವಹಿಸಿದ್ದು ಸಹ ಇದೇ ಮೊದಲು" ಎಂದು ಅವರು ಹೇಳಿದರು. ಆಂದೋಲನಕ್ಕೆ ಮಕ್ಕಳು ಮತ್ತು ವೃದ್ಧೆಯರು ಸಹ ಬರುವುದನ್ನು ನೋಡಿದೆ.

ದೆಹಲಿಯ ಗಡಿಯಲ್ಲಿ ಲಕ್ಷಾಂತರ ರೈತರು ಜಮಾಯಿಸಿ ವಿವಾದಿತ ಕೃಷಿ ಕಾನೂನುಗಳನ್ನು ಕೇಂದ್ರ ಸರ್ಕಾರ ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದರು. ವಿಶೇಷವಾಗಿ ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದ ಬಹುಪಾಲು ರೈತರು ನವೆಂಬರ್ 2020ರಿಂದ ನವೆಂಬರ್ 2021ರಲ್ಲಿ ಕಾನೂನನ್ನು ರದ್ದುಗೊಳಿಸುವವರೆಗೆ ಅಲ್ಲಿಯೇ ನೆಲೆಸಿದ್ದರು. ಈ ರೈತ ಚಳುವಳಿ ಐತಿಹಾಸಿಕವಾಗಿತ್ತು, ಜೊತೆಗೆ ಇದು ಬಹುಶಃ ಇತ್ತೀಚಿನ ಸಾರ್ವಜನಿಕ ಹೋರಾಟಗಳಲ್ಲೇ ದೊಡ್ಡದೆನ್ನಬಹುದು.

ಪಂಜಾಬಿನ ಹಲವಾರು ಮಹಿಳೆಯರು ಚಳವಳಿಯ ಮುಂಚೂಣಿಯಲ್ಲಿದ್ದರು. ಅಲ್ಲಿದ್ದ ಒಗ್ಗಟ್ಟು ಇಂದಿಗೂ ಹಾಗೆಯೇ ಇದೆ ಎನ್ನುತ್ತಾರೆ. ಮತ್ತು ಆಂದೋಲನದಲ್ಲಿ ಭಾಗವಹಿಸಿದ್ದರಿಂದಾಗಿ ತಮ್ಮ ಧೈರ್ಯ ಮತ್ತು ಸ್ವಾತಂತ್ರ್ಯದ ಪ್ರಜ್ಞೆ ಬಲಗೊಂಡಿದೆ ಎಂದು ಅವರು ಭಾವಿಸುತ್ತಾರೆ. "ನಾನು [ಪ್ರತಿಭಟನಾ ಸ್ಥಳದಲ್ಲಿ] ಇದ್ದೆ, ನನಗೆ ಮನೆಯ ನೆನನಪೇ ಕಾಡಲಿಲ್ಲ. ಈಗ ನಾನು ಆಂದೋಲನವನ್ನು ನಿರಂತರವಾಗಿ ನೆನಪಿಸಿಕೊಳ್ಳುತ್ತೇನೆ,” ಎಂದು ಮಾನ್ಸಾ ಜಿಲ್ಲೆಯ ಕುಲದೀಪ್ ಕೌರ್, 58, ಹೇಳುತ್ತಾರೆ.

ಈ ಮೊದಲು, ಬುಧ್ಲಡಾ ತಾಲ್ಲೂಕಿನ ರಾಲಿ ಗ್ರಾಮದ ಮನೆಯಲ್ಲಿ ಕೆಲಸದ ಹೊರೆ ಅವರ ಮನಸ್ಥಿತಿಯ ಮೇಲೆ ಪರಿಣಾಮ ಬೀರುತ್ತಿತ್ತು. "ಇಲ್ಲಿ ನಾನು ಒಂದರ ನಂತರ ಒಂದರಂತೆ ಕೆಲಸ ಮಾಡಬೇಕು, ಅಥವಾ ಮನೆಗೆ ಬರುವ ಅತಿಥಿಗಳ ಉಪಚಾರ ಮಾಡಬೇಕಿತ್ತು. ಅಲ್ಲಿ ನಾನು ಸ್ವತಂತ್ರಳಾಗಿದ್ದೆ" ಎಂದು ಕುಲದೀಪ್ ಹೇಳುತ್ತಾರೆ. ಪ್ರತಿಭಟನಾ ಸ್ಥಳಗಳಲ್ಲಿ, ಅವರು ಸಮುದಾಯ ಅಡುಗೆಮನೆಗಳಲ್ಲಿ ಸ್ವಯಂಸೇವಕಳಾಗಿದ್ದರು. ತನ್ನ ಜೀವನದುದ್ದಕ್ಕೂ ಬೇಕಿದ್ದರೂ ಅಲ್ಲಿ ಕೆಲಸ ಮಾಡುತ್ತಿದ್ದೆ ಎಂದು ಅವರು ಹೇಳುತ್ತಾರೆ. "ಅಲ್ಲಿ ನಾನು ಹಿರಿಯರನ್ನು ನೋಡಿ ನನ್ನ ಹೆತ್ತವರಿಗಾಗಿ ಅಡುಗೆ ಮಾಡುತ್ತಿದ್ದೇನೆ ಎಂದುಕೊಳ್ಳುತ್ತಿದ್ದೆ."

Harjeet Kaur is farming
PHOTO • Amir Malik
Kuldip Kaur mug short
PHOTO • Amir Malik
Rajinder Kaur in her house
PHOTO • Amir Malik

ಎಡದಿಂದ: 2020ರಲ್ಲಿ ಪರಿಚಯಿಸಲಾದ ಕೇಂದ್ರದ ಕೃಷಿ ಕಾನೂನುಗಳ ವಿರುದ್ಧದ ಚಳುವಳಿಯಲ್ಲಿ ಮುಂಚೂಣಿಯಲ್ಲಿದ್ದ ಹರ್ಜೀತ್ ಕೌರ್, ಕುಲ್ದೀಪ್ ಕೌರ್ ಮತ್ತು ರಾಜಿಂದರ್ ಕೌರ್

ಆರಂಭದಲ್ಲಿ ರೈತರು ಪ್ರತಿಭಟನೆ ಆರಂಭಿಸಿದಾಗ ಕುಲದೀಪ್ ಅವರು ಯಾವುದೇ ಸಂಘಟನೆ ಸೇರಿರಲಿಲ್ಲ. ನಂತರ ಸಂಯುಕ್ತ ಕಿಸಾನ್ ಮೋರ್ಚಾ ರಚನೆಯಾದಾಗ ಪೋಸ್ಟರ್ ರಚಿಸಿದ್ದರು. ಮತ್ತು ಅದರ ಮೇಲಿನ ಸ್ಲೋಗನ್ - 'ಕಿಸಾನ್ ಮೋರ್ಚಾ ಜಿಂದಾಬಾದ್', ಅವರು ಅದೇ ಪೋಸ್ಟರ್‌ ಜೊತೆ ಸಿಂಗುವಿಗೆ ಹೋಗಿದ್ದರು. ಕ್ಯಾಂಪ್ ಹಾಕಿದ ಸ್ಥಳದಲ್ಲಿ ಅನೇಕ ತೊಂದರೆಗಳಿದ್ದವು ಹೀಗಾಗಿ ಅಲ್ಲಿದ್ದ ಮಹಿಳೆಯರು ಬರುವುದು ಬೇಡವೆಂದಿದ್ದರು. ಆದರೆ ಕುಲದೀಪ್ ಅವರ ನಿರ್ಧಾರ ದೃಢವಾಗಿತ್ತು. “ನಾನು ಬರುತ್ತೇನೆ ಎಂದು ಅವರಿಗೆ ಹೇಳಿದೆ.”

ಅವರು ಸಿಂಘುವನ್ನು ತಲುಪಿದಾಗ, ಮಹಿಳೆಯರು ದೊಡ್ಡ ಚೂಲ್ಹಾಗಳ (ಉರುವಲು ಒಲೆಗಳ) ಮೇಲೆ ರೊಟ್ಟಿಗಳನ್ನು ತಯಾರಿಸುತ್ತಿದ್ದರು. "ಅವರು ದೂರದಿಂದ ನನ್ನನ್ನು ಕರೆದು, 'ಓ ಅಕ್ಕಾ! ರೊಟ್ಟಿ ಮಾಡೋದಕ್ಕೆ ನಮಗೆ ಸಹಾಯ ಮಾಡಿ." ಎಂದು ಹೇಳಿದರು. ಟಿಕ್ರಿಯಲ್ಲಿಯೂ ಹಾಗೇ ಆಯಿತು, ಅಲ್ಲಿ ಅವರು ಮಾನ್ಸದಿಂದ‌ ಬಂದಿದ್ದ ಟ್ರ್ಯಾಕ್ಟರ್ ಟ್ರಾಲಿಯಲ್ಲಿ ನೆಲೆಸಿದ್ದರು. ಚೂಲ್ಹಾ ಬಳಿ ಕುಳಿತಿದ್ದ ದಣಿದ ಮಹಿಳೆ ಸಹಾಯ ಕೇಳಿದರು. "ನಾನು ಒಂದು ಗಂಟೆಗೂ ಹೆಚ್ಚು ಕಾಲ ರೊಟ್ಟಿಗಳನ್ನು ತಯಾರಿಸಿದೆ" ಎಂದು ಕುಲದೀಪ್ ನೆನಪಿಸಿಕೊಳ್ಳುತ್ತಾರೆ. ಟಿಕ್ರಿಯಿಂದ, ಅವರು ಹರಿಯಾಣ-ರಾಜಸ್ಥಾನ ಗಡಿಯಲ್ಲಿರುವ ಶಹಜಹಾನ್ ಪುರದ ಶಿಬಿರಕ್ಕೆ ಹೋದರು. "ಅಲ್ಲಿ ಕೆಲಸ ಮಾಡುತ್ತಿದ್ದ ಗಂಡಸರು ನನ್ನನ್ನು ನೋಡಿದಾಗ, ಅವರಿಗಾಗಿಯೂ ರೊಟ್ಟಿಗಳನ್ನು ತಯಾರಿಸಿಕೊಡುವಂತೆ ನನ್ನನ್ನು ಕೇಳಿದರು" ಎಂದು ಅವರು ಹೇಳುತ್ತಾರೆ. ಮತ್ತು ನಗುತ್ತಾ, "ನಾನು ಹೋದಲ್ಲೆಲ್ಲಾ, ಜನರು ಅದಕ್ಕಾಗಿ ಮಾತ್ರವೇ ಅವರಿಗೆ ಸಹಾಯ ಮಾಡುವಂತೆ ನನ್ನನ್ನು ಕೇಳುತ್ತಿದ್ದರು. ನಾನು ರೊಟ್ಟಿಗಳನ್ನು ತಯಾರಿಸುತ್ತೇನೆ ಎಂದು ನನ್ನ ಹಣೆಯ ಮೇಲೆ ಬರೆಯಲಾಗಿತ್ತೆ ಎಂದು ನಾನು ಆಶ್ಚರ್ಯವಾಗುತ್ತಿತ್ತು!"

ಮತ್ತೆ ಊರಿಗೆ ಬಂದಾಗ, ಅವರ ನೆರೆಹೊರೆಯ ಮಹಿಳೆಯರು ಮತ್ತು ಗೆಳತಿಯರು ಅವರ ಹೋರಾಟದೆಡೆಗಿನ ಬದ್ಧತೆಯನ್ನು ಕಂಡು ಸ್ಫೂರ್ತಿ ಹೊಂದಿದರು ಹಾಗೂ ತಮ್ಮನ್ನೂ ಅವರೊಡನೆ ಕರೆದುಕೊಂಡು ಹೋಗುವಂತೆ ಕೇಳಿಕೊಂಡರು. “ಅವರು ನಾನು ಸೋಷಿಯಲ್‌ ಮೀಡಿಯಾಗಳಲ್ಲಿ ಹಾಕುತ್ತಿದ್ದ ಫೋಟೊಗಳನ್ನು ನೋಡಿ ತಾವೂ ಮುಂದಿನ ಸಲ ಬರುವುದಾಗಿ ಹೇಳುತ್ತಿದ್ದರು.” ಒಬ್ಬ ಮಹಿಳೆಯಂತೂ ತಾನು ಹೋರಾಟದಲ್ಲಿ ಭಾಗವಹಿಸದಿದ್ದರೆ ತನ್ನ ಮೊಮ್ಮಕ್ಕಳು ಏನೆನ್ನಬಹುದೆಂಬ ಚಿಂತೆಯಲ್ಲಿದ್ದರು!

ಕುಲದೀಪ್ ಯಾವತ್ತೂ ಟಿವಿ ಧಾರಾವಾಹಿ ಅಥವಾ ಸಿನಿಮಾಗಳನ್ನು ನೋಡಲು ಬಯಸುವವರಲ್ಲ. ಆದರೆ ಆಗಾಗ ಮನೆಗೆ ಬಂದಾಗ ಸುದ್ದಿಗಾಗಿ ಟಿವಿ ನೋಡತೊಡಗಿದರು. "ನಾನು ಚಳುವಳಿಯಲ್ಲಿ ನೇರವಾಗಿ ತೊಡಗಿಸಿಕೊಂಡಿರುತ್ತಿದ್ದೆ ಅಥವಾ ಸುದ್ದಿಗಳನ್ನು ನೋಡುತ್ತಿದ್ದೆ" ಎಂದು ಹೇಳುತ್ತಾರೆ. ಪರಿಸ್ಥಿತಿ ಎಷ್ಟು ಅನಿಶ್ಚಿತವಾಗಿರುತ್ತಿತ್ತೆಂದರೆ ಅದು ಅವರನ್ನು ಚಿಂತೆಗೀಡು ಮಾಡುತ್ತಿತ್ತು. ಅವರು ಆತಂಕ ಕಡಿಮೆಯಾಗಲು ಔಷಧಿಗಳನ್ನು ತೆಗೆದುಕೊಳ್ಳಬೇಕಾಯಿತು. "ನನ್ನ ತಲೆ ಜುಮ್ಮೆನ್ನುತ್ತಿತ್ತು," ಎಂದು ಅವರು ಹೇಳುತ್ತಾರೆ. "ಕೊನೆಗೆ ವೈದ್ಯರು ನನಗೆ ಸುದ್ದಿ ನೋಡುವುದನ್ನು ನಿಲ್ಲಿಸಲು ಹೇಳಿದರು."

ರೈತರ ಚಳವಳಿಗೆ ಸೇರಿದ ನಂತರವೇ ಕುಲದೀಪ್ ತನ್ನೊಳಗೆ ಅಡಗಿರುವ ಧೈರ್ಯವನ್ನು ಅರಿತುಕೊಂಡರು ಅದುವರೆಗೆ ಅವರಿಗೆ ಅದರ ಅರಿವಿರಲಿಲ್ಲ. ಅವರು ಕಾರು ಅಥವಾ ಟ್ರ್ಯಾಕ್ಟರ್ ಟ್ರಾಲಿಯಲ್ಲಿ ಪ್ರಯಾಣಿಸಲು ಇದ್ದ ಭಯವನ್ನು ನಿವಾರಿಸಿಕೊಂಡರು. ಮತ್ತು ನೂರಾರು ಕಿಲೋಮೀಟರ್ ಪ್ರಯಾಣಿಸಿ ದೆಹಲಿಗೆ ಅನೇಕ ಬಾರಿ ಹೋಗಿ ಬಂದರು. ''ಅಪಘಾತದಲ್ಲಿ ಹಲವು ರೈತರು ಸಾವನ್ನಪ್ಪಿದ್ದರು. ನಂತರ ನಾನು ಈ ರೀತಿ ಸತ್ತರೆ, ನಮ್ಮ ಗೆಲುವನ್ನು ನೋಡಲಾಗುವುದಿಲ್ಲ ಎಂದು ನಾನು ಯೋಚಿಸಲು ಪ್ರಾರಂಭಿಸಿದೆ,” ಎಂದು ಅವರು ಹೇಳುತ್ತಾರೆ.

Kuldip at the protest site in Shahjahanpur
PHOTO • Courtesy: Kuldip Kaur
Kuldip in a protest near home
PHOTO • Courtesy: Kuldip Kaur
Kuldip making rotis during protest march
PHOTO • Courtesy: Kuldip Kaur

ಎಡ ಮತ್ತು ಮಧ್ಯ: ಶಹಜಹಾನ್ ಪುರದ ಪ್ರತಿಭಟನಾ ಸ್ಥಳದಲ್ಲಿ ಕುಲ್ದೀಪ್; ಮನೆಯ (ನಡುವೆ) ಬಳಿ ನಡೆದ ಪ್ರತಿಭಟನೆಯಲ್ಲಿ, ಮುಂಭಾಗದಲ್ಲಿರುವ ಪೋಸ್ಟರಿನಲ್ಲಿ ಹಿಂದಿನ ಸಭೆಯಲ್ಲಿ ಅಪಘಾತದಲ್ಲಿ ಸಾವನ್ನಪ್ಪಿದ ಯುವಕನ ಚಿತ್ರವನ್ನು ಪ್ರದರ್ಶಿಸಲಾಗಿದೆ. ಬಲ: ಶಹಜಹಾನ್ ಪುರದ ಸಮುದಾಯ ಅಡುಗೆಮನೆಯಲ್ಲಿ ಕುಲ್ದೀಪ್ (ಕುಳಿತು, ಕ್ಯಾಮೆರಾಗೆ ಅಭಿಮುಖವಾಗಿ) ರೊಟ್ಟಿಗಳನ್ನು ತಯಾರಿಸುತ್ತಿರುವುದು

ಕುಲ್ದೀಪ್ ಮನೆಗೆ ಭೇಟಿ ನೀಡಿದ ಸಂದರ್ಭಗಳಲ್ಲಿ, ಹತ್ತಿರದಲ್ಲಿ ನಡೆಯುತ್ತಿರುವ ಪ್ರತಿಭಟನಾ ಸಭೆಗಳಲ್ಲಿ ಸೇರುತ್ತಿದ್ದರು. ಪ್ರತಿಭಟನೆಗಳಲ್ಲಿ ನಿಯಮಿತವಾಗಿ ಭಾಗವಹಿಸುತ್ತಿದ್ದ ಹದಿಹರೆಯದ ಹುಡುಗನೊಬ್ಬ ತನ್ನ ಪಕ್ಕದಲ್ಲಿ ನಿಂತಿದ್ದ ಸಭೆಯನ್ನು ಅವರು ನೆನಪಿಸಿಕೊಳ್ಳುತ್ತಾರೆ, ವೇಗವಾಗಿ ಚಲಿಸುತ್ತಿದ್ದ ವಾಹನವು ಅವನ ಮೇಲೆ ಹರಿದಿತ್ತು.  ಅವನ ಪಕ್ಕದಲ್ಲಿ ನಿಂತಿದ್ದ ಒಬ್ಬ ವ್ಯಕ್ತಿಯೂ ತೀರಿಕೊಂಡಿದ್ದನು, ಮತ್ತು ಆ ಅಪಘಾತವು ಮೂರನೇ ವ್ಯಕ್ತಿಯನ್ನು ಜೀವನಪರ್ಯಂತ ಅಂಗವಿಕಲನನ್ನಾಗಿ ಮಾಡಿತು. "ನಾನು ಮತ್ತು ನನ್ನ ಪತಿ ಸಾವಿನಿಂದ ಒಂದಿಂಚಿನ ಅಂತರದಲ್ಲಿ ಪಾರಾದೆವು. ಅದರ ನಂತರ, ನಾನು ಅಪಘಾತದಲ್ಲಿ ಸಾಯುವ ಕುರಿತು ಎಂದಿಗೂ ಹೆದರಲಿಲ್ಲ. ಕಾನೂನುಗಳನ್ನು ರದ್ದುಗೊಳಿಸಿದ ದಿನ, ನನ್ನ ಪಕ್ಕದಲ್ಲಿ ಅವನ (ಹುಡುಗನ) ಉಪಸ್ಥಿತಿಯನ್ನು ನಾನು ನೆನಪಿಸಿಕೊಂಡೆ ಮತ್ತು ಕಣ್ಣೀರಿಟ್ಟೆ" ಎಂದು ಕುಲದೀಪ್ ಹೇಳುತ್ತಾರೆ, ಅವರು ಚಳುವಳಿಗಾಗಿ ಪ್ರಾಣ ನೀಡಿದ 700ಕ್ಕೂ ಹೆಚ್ಚು ಪ್ರತಿಭಟನಾಕಾರರ ಸಾವಿಗೆ ಶೋಕವ್ಯಕ್ತಪಡಿಸುತ್ತಾರೆ.

ಈ ಮಹಿಳೆಯರು ರೈತರ ಚಳವಳಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ ಮತ್ತು ಅದಕ್ಕಾಗಿಯೇ ಕೇಂದ್ರ ಸರ್ಕಾರವು ಈ ಕಾನೂನುಗಳನ್ನು ಹಿಂತೆಗೆದುಕೊಳ್ಳಬೇಕಾಯಿತು ಆದರೆ ಈಗ ಪಂಜಾಬ್‌ನ ಈ ಮಹಿಳೆಯರು ರಾಜಕೀಯ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ತಮ್ಮನ್ನು ದೂರವಿಡಲಾಗಿದೆ ಎಂದು ಭಾವಿಸುತ್ತಾರೆ. 2022ರ ಫೆ.20ರಂದು ನಡೆದ ವಿಧಾನಸಭೆ ಚುನಾವಣೆಯಲ್ಲಿ ಬೆರಳೆಣಿಕೆಯಷ್ಟು ಮಹಿಳೆಯರಿಗೆ ಮಾತ್ರ ಉಮೇದುವಾರಿಕೆ ನೀಡಿರುವುದು ಸಾಬೀತಾಗಿದೆ ಎಂದರು.

ಪಂಜಾಬ್‌ನ 2.14 ಕೋಟಿ ಮತದಾರರಲ್ಲಿ ಅರ್ಧದಷ್ಟು ಮಹಿಳೆಯರು. ಆದರೆ, 117 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ 1,304 ಅಭ್ಯರ್ಥಿಗಳ ಪೈಕಿ ಮಹಿಳೆಯರ ಸಂಖ್ಯೆ ಕೇವಲ 93 ಅಂದರೆ ಶೇ.7.13.

ಪಂಜಾಬ್‌ನ ಅತ್ಯಂತ ಹಳೆಯ ರಾಜಕೀಯ ಪಕ್ಷವಾದ ಶಿರೋಮಣಿ ಅಕಾಲಿದಳ ಕೇವಲ ಐದು ಮಹಿಳಾ ಅಭ್ಯರ್ಥಿಗಳನ್ನು ಮತ್ತು ಕಾಂಗ್ರೆಸ್ 11 ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಉತ್ತರಪ್ರದೇಶದಲ್ಲಿ ʼಲಡ್ಕಿ ಹೂಂ, ಲಡ್‌ ಸಕ್ತಿ ಹೂಂʼ  (ನಾನೊಬ್ಬ ಹೆಣ್ಣು, ನಾನು ಹೋರಾಡಬಲ್ಲೆ) ಎಂಬ ಘೋಷವಾಕ್ಯವು ಪಂಜಾಬ್‌ನಲ್ಲಿ ಕನಸಿನಂತೆ ಕಾಣುವಂತಿತ್ತು. ಆಮ್ ಆದ್ಮಿ ಪಕ್ಷದಲ್ಲಿ ಕಾಂಗ್ರೆಸ್‌ಗಿಂತ ಮಹಿಳಾ ಅಭ್ಯರ್ಥಿಗಳು ಹೆಚ್ಚಿದ್ದಾರೆ. ಭಾರತೀಯ ಜನತಾ ಪಾರ್ಟಿ, ಶಿರೋಮಣಿ ಅಕಾಲಿದಳ ಮತ್ತು ಹೊಸದಾಗಿ ರಚಿಸಲಾದ ಪಂಜಾಬ್ ಲೋಕ ಕಾಂಗ್ರೆಸ್, ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಮೂವರು ಸದಸ್ಯರು ಒಂಬತ್ತು ಮಹಿಳೆಯರನ್ನು (ಆರು ಬಿಜೆಪಿ ಅಭ್ಯರ್ಥಿಗಳನ್ನು ಒಳಗೊಂಡಂತೆ) ಕಣಕ್ಕಿಳಿಸಿದ್ದಾರೆ.

*****

ನಾನು ರಾಜಿಂದರ್ ಕೌರ್ ಅವರನ್ನು ಭೇಟಿಯಾಗಿದ್ದು ಹಿಮ ಬೀಳುತ್ತಿದ್ದ ಚಳಿಗಾಲದ ದಿನವಾಗಿತ್ತು. ಅವರು ಕುರ್ಚಿಯಲ್ಲಿ ಕುಳಿತಿದ್ದರು; ಹಿಂದಿನ ಗೋಡೆಯ ಮೇಲಿನ ಬಲ್ಬ್ ದುರ್ಬಲ ಬೆಳಕನ್ನು ಹೊಮ್ಮಿಸುತ್ತಿತ್ತು, ಆದರೆ ಅವರ ಚೈತನ್ಯವು ಪ್ರಜ್ವಲಿಸುತ್ತಿತ್ತು. ನಾನು ನನ್ನ ಡೈರಿಯನ್ನು ತೆರೆದೆ, ಮತ್ತು ಅವರು, ಅವರ ಹೃದಯವನ್ನು ತೆರೆದಿಟ್ಟರು. ಅವರ ಕಣ್ಣುಗಳಲ್ಲಿನ ಬೆಂಕಿಯು ಅವರ ಧ್ವನಿಯಲ್ಲಿ ಪ್ರತಿಫಲಿಸುತ್ತಿತ್ತು, ಅದು ಮಹಿಳೆಯರ ನೇತೃತ್ವದ ಕ್ರಾಂತಿಯ ಭರವಸೆಯ ಬಗ್ಗೆ ಮಾತನಾಡುತ್ತದೆ. ಅವರ ಮೊಣಕಾಲು ನೋವಿನ ಕಾರಣದಿಂದಾಗಿ ಆಗಾಗ್ಗೆ ಅವರು ವಿಶ್ರಾಂತಿ ಪಡೆಯಬೇಕಾಗಿತ್ತು, ಆದರೆ ರೈತರ ಚಳುವಳಿಯು ಅದನ್ನೆಲ್ಲ ಮರೆಸಿಬಿಟ್ಟಿತು ಎಂದು ರಾಜಿಂದರ್ ಹೇಳುತ್ತಾರೆ - ಅವರು ಸಾರ್ವಜನಿಕವಾಗಿ ಮಾತನಾಡಿದರು ಮತ್ತು ತನ್ನ ಧ್ವನಿಯನ್ನು ಕಂಡುಕೊಂಡರು.

Rajinder in her farm
PHOTO • Amir Malik
Harjeet walking through the village fields
PHOTO • Amir Malik

ಎಡ: ರಾಜಿಂದರ್, ದೌನ್ ಕಲಾನ್‌ನಲ್ಲಿರುವ ಮನೆಯಲ್ಲಿನ ತನ್ನ ತೋಟದಲ್ಲಿ. ಬಲ: ಹರ್ಜೀತ್ ಹಳ್ಳಿಯ ಹೊಲಗಳ ಮೂಲಕ ನಡೆದುಕೊಂಡು ಹೋಗುತ್ತಿರುವುದು. "ಮೂರು ಕಾನೂನುಗಳು ನಮ್ಮನ್ನು ಒಗ್ಗೂಡಿಸಿದವು" ಎಂದು ಅವರು ಹೇಳುತ್ತಾರೆ

"ಈಗ ನಾನು (ಯಾರಿಗೆ ಮತ ಹಾಕಬೇಕೆಂದು) ನಿರ್ಧರಿಸುತ್ತೇನೆ" ಎಂದು ರಾಜಿಂದರ್ ಹೇಳುತ್ತಾರೆ. "ಈ ಮೊದಲು, ನನ್ನ ಮಾವ ಮತ್ತು ನನ್ನ ಪತಿ ಈ ಪಕ್ಷಕ್ಕೆ ಅಥವಾ ಆ ಪಕ್ಷಕ್ಕೆ ಮತ ನೀಡುವಂತೆ ಹೇಳುತ್ತಿದ್ದರು. ಆದರೆ ಈಗ, ಯಾರೂ ನನಗೆ ಹೇಳಲು ಧೈರ್ಯ ಮಾಡುವುದಿಲ್ಲ." ರಾಜಿಂದರ್ ಅವರ ತಂದೆ ಶಿರೋಮಣಿ ಅಕಾಲಿ ದಳವನ್ನು ಬೆಂಬಲಿಸುತ್ತಾರೆ, ಆದರೆ ಅವರು ಮದುವೆಯಾಗಿ ದೌನ್ ಕಲಾನ್ ಹಳ್ಳಿಗೆ ತೆರಳಿದ ನಂತರ, ಅವರ ಮಾವ ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿಸುವಂತೆ ಹೇಳುತ್ತಿದ್ದರು. "ನಾನು ಕೈ (ಪಕ್ಷದ ಚಿಹ್ನೆ)ಗೆ ಮತ ಚಲಾಯಿಸಿದೆ, ಆದರೆ ಯಾರೋ ನನ್ನ ಎದೆಗೆ ಗುಂಡು ಹಾರಿಸಿದಂತೆ ಭಾಸವಾಯಿತು" ಎಂದು ಅವರು ಹೇಳುತ್ತಾರೆ. ಈಗ ಯಾರಿಗೆ ಮತ ಹಾಕಬೇಕೆಂದು ಅವರ ಪತಿ ಹೇಳಲು ಪ್ರಯತ್ನಿಸಿದಾಗ, ರಾಜಿಂದರ್ ಈಗ ಅವರನ್ನು ತಡೆಯುತ್ತಾರೆ. "ನಾನು ಅವರನ್ನು ಸುಮ್ಮನಾಗಿಸುತ್ತೇನೆ."

ಸಿಂಘುವಿನಲ್ಲಿ ನಡೆದ ಒಂದು ತಮಾಷೆಯ ಘಟನೆಯೊಂದನ್ನು ಅವರು ನೆನಪಿಸಿಕೊಂಡರು. ಅವರು ವೇದಿಕೆಯ ಮೇಲೆ ಭಾಷಣ ಮಾಡಿದ ಸ್ವಲ್ಪ ಸಮಯದಲ್ಲೇ. "ನಾನು ಕಾಲು ನೋವಿನಿಂದಾಗಿ ವಿಶ್ರಾಂತಿ ಪಡೆಯಲು ಹತ್ತಿರದ ಡೇರೆಗೆ ಹೋದೆ, ಅಲ್ಲಿ ಅಡುಗೆ ಮಾಡುತ್ತಿದ್ದ ಒಬ್ಬ ವ್ಯಕ್ತಿ ನನ್ನನ್ನು ಕೇಳಿದ, 'ಸ್ವಲ್ಪ ಸಮಯದ ಹಿಂದೆ ಒಬ್ಬ ಮಹಿಳೆ ಭಾಷಣ ಮಾಡಿದ್ದನ್ನು ಕೇಳಿದಿರಾ?' ಡೇರೆಯನ್ನು ಪ್ರವೇಶಿಸಿದ ಇನ್ನೊಬ್ಬ ವ್ಯಕ್ತಿ ನನ್ನನ್ನು ಗುರುತಿಸಿ, 'ಓಹ್, ಇವರೇ ಅಲ್ಲಿ ಭಾಷಣ ಮಾಡಿದವರು' ಎಂದು ಹೇಳಿದರು. ಅವರು ಉಲ್ಲೇಖಿಸುತ್ತಿದ್ದ ಮಹಿಳೆ ನಾನು!" ಎಂದು ಅವರು ಹೇಳಿದರು, ಅವರ ಹೆಮ್ಮೆ ಮತ್ತು ಸಂತೋಷವು ಮುಖದಲ್ಲಿ ಎದ್ದು ಕಾಣುತ್ತಿತ್ತು.

"ಮೂರು ಕಾನೂನುಗಳು ನಮ್ಮನ್ನು ಒಗ್ಗೂಡಿಸಿದವು" ಎಂದು ಪಕ್ಕದ ಮನೆಯ ಹರ್ಜೀತ್ ಹೇಳುತ್ತಾರೆ. ಆದರೆ ಹೋರಾಟದ ಫಲಿತಾಂಶವನ್ನು ಟೀಕಿಸುತ್ತಾರೆ. "ಪ್ರತಿಭಟನೆಯು ಕಾನೂನುಗಳನ್ನು ರದ್ದುಗೊಳಿಸಲು ಕಾರಣವಾಗಿದ್ದರೂ, ನಮ್ಮ ಸಮಸ್ಯೆಗಳನ್ನು ಇನ್ನಷ್ಟೇ ಪರಿಹರಿಸಬೇಕಾಗಿದೆ" ಎಂದು ಅವರು ಹೇಳುತ್ತಾರೆ. "ಕನಿಷ್ಠ ಬೆಂಬಲ ಬೆಲೆಗೆ ಬೇಡಿಕೆ ಈಡೇರುವುದನ್ನು ಖಚಿತಪಡಿಸಿಕೊಳ್ಳದೆ [ಎಸ್ ಕೆಎಂ] ಚಳುವಳಿಯನ್ನು ಹಿಂತೆಗೆದುಕೊಳ್ಳಲಾಯಿತು. ಅಲ್ಲದೆ, ಲಖೀಂಪುರ ಖೇರಿಯಲ್ಲಿ ಮೃತಪಟ್ಟ ರೈತರಿಗೆ ನ್ಯಾಯ ದೊರಕುವಂತೆ ಮಾಡಬೇಕಿತ್ತು.”

"ಚಳುವಳಿಯ ಸಮಯದಲ್ಲಿ ರೈತ ಸಂಘಟನೆಗಳು ಒಂದಾಗಿರಬಹುದು, ಆದರೆ ಅವು ಈಗ ವಿಭಜನೆಗೊಂಡಿವೆ" ಎಂದು ನಿರಾಶೆಗೊಂಡ ಕುಲದೀಪ್ ಹೇಳುತ್ತಾರೆ.

2022ರ ವಿಧಾನಸಭಾ ಚುನಾವಣೆಗೆ ಮುನ್ನ, ಈ ವರದಿಗಾರ ಪಂಜಾಬಿನಲ್ಲಿ ಮಾತನಾಡಿಸಿದ ಹೆಚ್ಚಿನ ಜನರು ಯಾವುದೇ ಪಕ್ಷವನ್ನು ಬೆಂಬಲಿಸಿ ಮಾತನಾಡಲಿಲ್ಲ - 2021ರ ಡಿಸೆಂಬರ್ ತಿಂಗಳಿನಲ್ಲಿ ಸಂಯುಕ್ತ ಕಿಸಾನ್ ಮೋರ್ಚಾದ ಭಾಗವಾಗಿದ್ದ ಕೆಲವು ರೈತ ಸಂಘಗಳು ರಚಿಸಿದ ಸಂಯುಕ್ತ ಸಮಾಜ ಮೋರ್ಚಾ (ಎಸ್ ಎಸ್ ಎಂ) ಸಹ ಯಾವುದೇ ಪಕ್ಷವನ್ನು ಬೆಂಬಲಿಸಲಿಲ್ಲ. (ಪಕ್ಷದ ಅಭ್ಯರ್ಥಿಗಳು - ಪಟ್ಟಿಯಲ್ಲಿ ನಾಲ್ಕು ಮಹಿಳೆಯರು ಸೇರಿದ್ದಾರೆ - ಸ್ವತಂತ್ರರಾಗಿ ಸ್ಪರ್ಧಿಸಿದ್ದಾರೆ.) ಚುನಾವಣಾ ಮನಸ್ಥಿತಿ ಬದಲಾಗುತ್ತಿದ್ದಂತೆ, ಕೆಲವು ತಿಂಗಳ ಹಿಂದೆ ಕೊನೆಗೊಂಡ ಚಳುವಳಿಯಲ್ಲಿ ಪ್ರಾಣ ಕಳೆದುಕೊಂಡ ಹುತಾತ್ಮರ ಬಗ್ಗೆ ಎಲ್ಲಾ ಪಕ್ಷಗಳ ನಾಯಕತ್ವ ಮತ್ತು ಕಾರ್ಯಕರ್ತರು ಮೌನವಾಗಿದ್ದರು.

Jeevan Jyot, from Benra, Sangrur, says political parties showed no concern for the villages.
PHOTO • Amir Malik
Three-year-old Gurpyar and her father, Satpal Singh
PHOTO • Amir Malik

ಎಡ: ಸಂಗ್ರೂರಿನ ಬೆನ್ರಾದ ಜೀವನ್ ಜ್ಯೋತ್ ಹೇಳುವಂತೆ ರಾಜಕೀಯ ಪಕ್ಷಗಳು ಹಳ್ಳಿಗಳ ಕುರಿತು ಯಾವುದೇ ಕಾಳಜಿಯನ್ನು ತೋರಿಸಲಿಲ್ಲ. ಬಲ: ಮೂರು ವರ್ಷದ ಗುರ್‌ಪ್ಯಾರ್ ಮತ್ತು ಅವಳ ತಂದೆ ಸತ್ಪಾಲ್ ಸಿಂಗ್

ಸಂಗ್ರೂರ್ ಜಿಲ್ಲೆಯ ಬೆನ್ರಾ ಗ್ರಾಮದ ಯುವತಿ ಜೀವನ್ ಜ್ಯೋತ್ ಅವರು, "ಎಸ್ ಎಸ್ ಎಂ ಮತ್ತು ಆಮ್ ಆದ್ಮಿ ಪಕ್ಷಗಳು ಕೂಡ ಹಳ್ಳಿಗಳ ಬಗ್ಗೆ ಶೂನ್ಯ ಆಸಕ್ತಿ ಅಥವಾ ಕಾಳಜಿ ಯನ್ನು ತೋರಿಸಿವೆ" ಎಂದು ಹೇಳಿದರು. "ಯಾರು ಜೀವಂತವಾಗಿದ್ದಾರೆ ಮತ್ತು ಯಾರು ಸತ್ತಿದ್ದಾರೆ ಎಂಬುದು ಸಹ [ರಾಜಕೀಯ] ಪಕ್ಷಗಳ ಜನರಿಗೆ ತಿಳಿದಿಲ್ಲ," ಎಂದು ಅವರು ನಿರಾಶೆಗೊಂಡರು.

23 ವರ್ಷದ ಶಾಲಾ ಶಿಕ್ಷಕಿ ಜೀವನ್ ಜ್ಯೋತ್ ಮನೆಪಾಠ ಮಾಡುತ್ತಾರೆ. ಆಕೆಯ ಪಕ್ಕದ ಮನೆಯಲ್ಲೊಬ್ಬರು ಹೆರಿಗೆಯ ಸಮಯದಲ್ಲಿ ತೀರಿಕೊಂಡರು. ಅದರ ನಂತರ ಅವರಿಗೆ ರಾಜಕೀಯ ಪಕ್ಷಗಳ ವಿರುದ್ಧ ಆಕ್ರೋಶ ಮೂಡಲು ಆರಂಭವಾಯಿತು. ‘‘ಯಾವುದೇ ರಾಜಕೀಯ ಪಕ್ಷದ ಮುಖಂಡರು, ಗ್ರಾಮದ ಸರಪಂಚರು ಕನಿಷ್ಠ ಸೌಜನ್ಯಕ್ಕೂ ಕುಟುಂಬವನ್ನು ಭೇಟಿ ಮಾಡಲು ಬರದಿರುವುದು ಎನ್ನುವುದು ನನಗೆ ನೋವು ನೀಡುವ ಸಂಗತಿ. ನವಜಾತ ಶಿಶು ಮತ್ತು ಆಕೆಯ ಮೂರು ವರ್ಷದ ಸಹೋದರಿ ಗುರ್‌ಪ್ಯಾರ್ ಜವಬ್ದಾರಿ ದಿನಗೂಲಿಯಾಗಿರುವ ತಂದೆ ಸತ್ಪಾಲ್ ಸಿಂಗ್ (32) ಅವರ ಹೆಗಲ ಮೇಲೆ ಬಿದ್ದಾಗ ಜೀವನ್ ಜ್ಯೋತ್ ಅವರ ನೆರವಿಗೆ ಬಂದರು.

ನಾನು ಬನಾರಾದಲ್ಲಿ ಜೀವನ್ ಜ್ಯೋತ್ ಅವರನ್ನು ಭೇಟಿಯಾದಾಗ ಗುರ್‌ಪ್ಯಾರ್ ಪಕ್ಕದಲ್ಲಿ ಕುಳಿತಿದ್ದರು. "ಈಗ ಅವಳಿಗೆ ನಾನೇ ತಾಯಿ" ಎಂದು ಜೀವನ್ ಹೇಳುತ್ತಾರೆ. "ನಾನು ಅವಳನ್ನು ದತ್ತು ತೆಗೆದುಕೊಳ್ಳಲು ಬಯಸುತ್ತೇನೆ. ಅಂತಹ ನಿರ್ಧಾರ ತೆಗೆದುಕೊಳ್ಳಲು ಹೆದರುವುದಿಲ್ಲ ಏಕೆಂದರೆ ನನಗೆ ನನ್ನ ಸ್ವಂತ ಮಗು ಇಲ್ಲ.”

ರೈತ ಚಳವಳಿಯಲ್ಲಿ ಮಹಿಳೆಯರಿದ್ದ ಕಾರಣ, ಜೀವನ್ ಜ್ಯೋತ್ ಅವರಂತಹ ಯುವತಿಯರ ಮನದಲ್ಲಿ ಭರವಸೆ ಮೂಡಿದೆ. ನಮ್ಮ ಪಿತೃಪ್ರಭುತ್ವದ ಜಗತ್ತಿನಲ್ಲಿ, ಮಹಿಳೆಯರು ಬೇರೆ ಬೇರೆ ಸಮಸ್ಯೆಗಳೊಡನೆ ಹೋರಾಡಬೇಕಾಗುತ್ತದೆ, ಮತ್ತು "ಹೋರಾಟದ ಈ ಚೈತನ್ಯ" ಕೃಷಿ ಕಾನೂನುಗಳ ವಿರುದ್ಧದ ಚಳುವಳಿಯಲ್ಲಿ ಪ್ರತಿಫಲಿಸಿದೆ ಎಂದು ಅವರು ಹೇಳುತ್ತಾರೆ.

ಚಳುವಳಿಗಾಗಿ ಒಗ್ಗೂಡಿದ ಪಂಜಾಬಿನ ಮಹಿಳೆಯರ ಬಲವಾದ ಧ್ವನಿಗಳು ಈಗ ಮೂಲೆಗುಂಪಾಗಿಸುವುದನ್ನು ಒಪ್ಪುವುದಿಲ್ಲ. "ಮಹಿಳೆಯರನ್ನು ತಲೆಮಾರುಗಳಿಂದ ಮನೆಯಿಂದ ಹೊರ ಬಾರದಂತೆ ಮಾಡಲಾಗಿದೆ," ಎಂದು ಹರ್ಜೀತ್ ಹೇಳುತ್ತಾರೆ. ಸಾರ್ವಜನಿಕ ಬದುಕಿನಲ್ಲಿ ಬದುಕಲು ಅವಕಾಶ ಸಿಗದಿರುವುದರಿಂದಾಗಿ, ಹೋರಾಟದಿಂದ ತಾವು ಗಳಿಸಿದ ಗೌರವವು ಇತಿಹಾಸದಲ್ಲಿ ಕೇವಲ ಅಡಿಟಿಪ್ಪಣಿಯಾಗಿ ಉಳಿದುಬಿಡುತ್ತದೆ ಎಂದು ಅವರು ಚಿಂತಿತರಾಗಿದ್ದಾರೆ.

ಈ ಸ್ಟೋರಿಯನ್ನು ವರದಿ ಮಾಡಲು ಸಹಾಯ ಮಾಡಿದ ಮುಷರ‍್ರಫ್ ಮತ್ತು ಪರ್ಗತ್ ಅವರಿಗೆ ವರದಿಗಾರರು ಕೃತಜ್ಞರಾಗಿರುತ್ತಾರೆ.

ಅನುವಾದ: ಶಂಕರ. ಎನ್. ಕೆಂಚನೂರು

Amir Malik

Amir Malik is an independent journalist, and a 2022 PARI Fellow.

Other stories by Amir Malik
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru