ಕಳೆದ ವರ್ಷ ಒಸ್ಮಾನಾಬಾದ್‌ನ ಕೃಷಿಭೂಮಿಯಲ್ಲಿ ನಾಲ್ಕು ತಿಂಗಳ ಶ್ರಮವನ್ನು ಹಾಳುಮಾಡಲು ಎರಡು ವಾರಗಳ ಕಾಲ ಸುರಿದ ಧಾರಾಕಾರ ಮಳೆ ಸಾಕಾಗಿತ್ತು. ಅಕ್ಟೋಬರ್ ತಿಂಗಳಲ್ಲಿ ಮೋಡಗಳ ತೀವ್ರ ಕುಸಿತ ಮತ್ತು ಆಸ್ಪೋಟದಿಂದಾಗಿ ಭಾರಿ ಮಳೆ ಸುರಿಯಿತು- ಬಿರುಗಾಳಿಯಂತೂ ಮನೆಯ ಛಾವಣಿಗಳನ್ನು ಕಿತ್ತುಹಾಕಿತು, ಪ್ರಾಣಿಗಳು ಸಹಿತ ಸಾವನ್ನಪ್ಪಿದವು ಮತ್ತು ಮೈಲಿಗಳುದ್ದಕ್ಕೂ ಹರಡಿದ್ದ ಬೆಳೆಗಳೆಲ್ಲವೂ ಕೊಚ್ಚಿಕೊಂಡು ಹೋಗಿದ್ದವು.

ಆ ಬೆಳೆಗಳಲ್ಲಿ ಕೆಲವು ಮಹಾರಾಷ್ಟ್ರದ ಒಸ್ಮಾನಾಬಾದ್‌ನ ಮಹಾಲಿಂಗಿ ಗ್ರಾಮದ ಶಾರದಾ ಮತ್ತು ಪಾಂಡುರಂಗ ಗುಂಡ್‌ ಅವರಿಗೆ ಸೇರಿದ್ದವು. "ನಾವು ಕೊಯ್ಲು ಮಾಡಿದ್ದ ಸುಮಾರು 50 ಕ್ವಿಂಟಾಲ್ ಸೋಯಾಬೀನ್ ಅನ್ನು ನಾವು ಕಳೆದುಕೊಂಡಿದ್ದೇವೆ, ನಮ್ಮ ಜಮೀನಿನಲ್ಲಿ ನೀರು ನಮ್ಮ ಮೊಣಕಾಲಿನವರೆಗೆ ಇತ್ತು. ಅದು ಎಲ್ಲವನ್ನೂ ನಾಶಪಡಿಸಿತು." ಎಂದು 45 ವರ್ಷದ ಶಾರದಾ ಹೇಳುತ್ತಿದ್ದರು.

ಭಾರತೀಯ ಹವಾಮಾನ ಇಲಾಖೆಯ ಅಂಕಿ-ಅಂಶಗಳ ಪ್ರಕಾರ, ಅಕ್ಟೋಬರ್ 2020ರಲ್ಲಿ ಒಸ್ಮಾನಾಬಾದ್ ಜಿಲ್ಲೆಯಲ್ಲಿ 230.4 ಮಿಲಿಮೀಟರ್ ಮಳೆಯಾಗಿದೆ - ಇದು ತಿಂಗಳಿಗೆ ಜಿಲ್ಲೆಯ ಸರಾಸರಿಗಿಂತ ಶೇ 180ರಷ್ಟು ಹೆಚ್ಚು ಎನ್ನಲಾಗಿದೆ.

ಪಾಂಡುರಂಗ ಮತ್ತು ಶಾರದಾರಂತಹ ಹಲವಾರು ರೈತರು ಹೆಚ್ಚಿನ ನಷ್ಟವನ್ನು ಅನುಭವಿಸಿದ್ದಾರೆ.

50ರ ಹರೆಯದ ಪಾಂಡುರಂಗ್ ಅವರು ತಮ್ಮ ಎಲ್ಲ ಬೆಳೆಯೂ ಮಳೆಯಿಂದ ನಾಶವಾಗುವುದನ್ನು ಅಸಹಾಯಕತೆಯಿಂದ ನೋಡುತ್ತಿದ್ದರು, ಇದೇ ವೇಳೆ ಸೋಯಾಬೀನ್ ಕೃಷಿ ಮಾರುಕಟ್ಟೆಯಲ್ಲಿ ಕ್ವಿಂಟಲ್ ಗೆ ಕನಿಷ್ಠ ಬೆಂಬಲ ಬೆಲೆ 3,880 ರೂ. ದರದಲ್ಲಿ ಮಾರಾಟವಾಗುತ್ತಿತ್ತು, ಇದನ್ನು ಇನ್ನೊಂದು ಅರ್ಥದಲ್ಲಿ ಹೇಳುವುದಾದರೆ, ಅವರು ಮತ್ತು ಪತ್ನಿ ಶಾರದಾ 194,000 ರೂ. ಮೌಲ್ಯದ ದಾಸ್ತಾನನ್ನು ಕಳೆದುಕೊಂಡಿದ್ದರು. "ಅಲ್ಲದೆ, ಅದರ ಮೇಲೆ ನಾವು ಸುಮಾರು  80,000 ರೂ.ಖರ್ಚು ಮಾಡಿದ್ದೆವು. ನೀವು ಬೀಜಗಳು, ರಸಗೊಬ್ಬರಗಳು, ಕೀಟನಾಶಕಗಳು ಮತ್ತು ಮುಂತಾದವುಗಳನ್ನು ಖರೀದಿಸಬೇಕು. ಈ ಬೆಳೆಯನ್ನು ಬೆಳೆಯಲು ನಾಲ್ಕು ತಿಂಗಳಿಂದ ಮೈಮುರಿದು ದುಡಿದ ಶ್ರಮವನ್ನು ನಾನು ಇನ್ನೂ ಲೆಕ್ಕಕ್ಕೆ ತೆಗೆದುಕೊಂಡಿಲ್ಲ.ಅದು ಆಗಿಂದಾಗಲೇ ಸುರಿದ ಮಳೆಯಾಗಿದ್ದರಿಂದ, ನಮಗೆ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ" ಎನ್ನುತ್ತಾರೆ ಶಾರದಾ.

Left: Sharda Gund lost 50 quintals of soybean in the torrential rains of October 2020 in Osmanabad. Right: File photo of some farmers saving what was left of their crop
PHOTO • Parth M.N.
Left: Sharda Gund lost 50 quintals of soybean in the torrential rains of October 2020 in Osmanabad. Right: File photo of some farmers saving what was left of their crop
PHOTO • Parth M.N.

ಎಡಕ್ಕೆ: ಶಾರದಾ ಗುಂಡ್ ಅವರು ಒಸ್ಮಾನಾಬಾದ್‌ನಲ್ಲಿ ಅಕ್ಟೋಬರ್ 2020 ರ ಧಾರಾಕಾರ ಮಳೆಯಲ್ಲಿ 50 ಕ್ವಿಂಟಾಲ್ ಸೋಯಾಬೀನ್ ನಷ್ಟ ಅನುಭವಿಸಿದರು. ಬಲಕ್ಕೆ: ಕೆಲವು ರೈತರು ತಮ್ಮ ಹೊಲದಲ್ಲಿ ಅಳಿದುಳಿದ ಬೆಳೆಯನ್ನು ರಕ್ಷಿಸುತ್ತಿರುವ ಸಂಗ್ರಹ ಚಿತ್ರ

ಇಂತಹ ಅನಿರೀಕ್ಷಿತ ವಿಪತ್ತಿನಿಂದ ತಮ್ಮನ್ನು ರಕ್ಷಿಸಿಕೊಳ್ಳಲು ದಂಪತಿಗಳು ತಮ್ಮ ಸೋಯಾಬೀನ್ ಬೆಳೆಯನ್ನು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (ಪಿಎಂಎಫ್‌ಬಿವೈ) ಅಡಿಯಲ್ಲಿ ವಿಮೆ ಮಾಡಿಸಿದ್ದಾರೆ - 2016ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾರಂಭಿಸಿದ ವಿಮಾ ಯೋಜನೆ ಯು "ಬಿತ್ತನೆ ಪೂರ್ವದಿಂದ ಕೊಯ್ಲಿನ ನಂತರದ ಹಂತದವರೆಗೆ ತಡೆಯಲು ಅಸಾಧ್ಯವಾಗಿರುವ ನೈಸರ್ಗಿಕ ಅಪಾಯಗಳ ವಿರುದ್ಧ ರೈತರ ಬೆಳೆಗಳಿಗೆ ಸಮಗ್ರ ಅಪಾಯದ ರಕ್ಷಣೆಯನ್ನು ಖಚಿತಪಡಿಸಿಕೊಳ್ಳುತ್ತದೆ."

ಪಾಂಡುರಂಗನವರು 1,980, ರೂ.ಗಳ ಕಂತನ್ನುಪಾವತಿಸಿದ್ದಾರೆ, ಅದು ವಿಮಾ ಮೊತ್ತದ ಶೇ 2ರಷ್ಟಾಗಿದೆ. ಅವರ 2.2 ಹೆಕ್ಟೇರ್ ( 5 ಎಕರೆಗಿಂತ ಹೆಚ್ಚು) ಜಮೀನಿನಲ್ಲಿ ಅವರ ಬೆಳೆಗೆ 99,000 ರೂ.ಗಳಾಗಲಿದೆ. ಜುಲೈ-ಅಕ್ಟೋಬರ್‌ನಲ್ಲಿ ಬೆಳೆಯುವ ಸೋಯಾಬೀನ್, ಸಜ್ಜೆ , ತೊಗರಿಬೇಳೆ, ಹತ್ತಿ ಮತ್ತು ಇತರ ಖಾರಿಫ್ ಬೆಳೆಗಳಿಗೆ ರೈತರು ಪಾವತಿಸಬೇಕಾದ ವಿಮಾ ಮೊತ್ತದ ಗರಿಷ್ಠ ಶೇ 2ರಷ್ಟನ್ನು ಈ ಯೋಜನೆಯು ನಿಗದಿಪಡಿಸುತ್ತದೆ. ಈ ಸಂದರ್ಭದಲ್ಲಿ ಸಂಯೋಜಿತ ಕೃಷಿ ವಿಮಾ ಕಂಪನಿ - ಬಜಾಜ್ ಅಲಿಯಾನ್ಸ್ ಜನರಲ್ ಇನ್ಶುರೆನ್ಸ್ ಕಂ. ಲಿಮಿಟೆಡ್‌ಗೆ ಶುಲ್ಕಗಳ ಬಾಕಿಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಂಚಿಕೊಳ್ಳುತ್ತವೆ.

ಆದಾಗ್ಯೂ, ಗುಂಡ್ ಕುಟುಂಬದ ಒಟ್ಟಾರೆ ನಷ್ಟವು  2.5 ಲಕ್ಷ ರೂಗಳಾಗುತ್ತದೆ, ಇದನ್ನು ಪಾಂಡುರಂಗನವರು ವಿಮೆ ಮೂಲಕ ಕೋರಿದಾಗ ಅವರಿಗೆ ಕಂಪನಿಯಿಂದ ದೊರೆತದ್ದು ಕೇವಲ 8,000 ರೂ.ಗಳು ಮಾತ್ರ.

ಪಾಂಡುರಂಗ ಮತ್ತು ಶಾರದಾ ಅವರಿಗೆ ನಿಜವಾಗಿಯೂ ವಿಮೆ ಹಣದ ಅವಶ್ಯಕತೆ ಇತ್ತು. ಮಾರ್ಚ್ 2020ರಲ್ಲಿ ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಒಸ್ಮಾನಾಬಾದ್ ಇರುವ ಮರಾಠವಾಡ ಪ್ರದೇಶದಾದ್ಯಂತ ರೈತರು ನಿರಂತರ ನಷ್ಟವನ್ನು ಅನುಭವಿಸಿದರು. ಕೃಷಿ ಆರ್ಥಿಕತೆಯು ಹೆಚ್ಚು ಜಡವಾಗಿತ್ತು ಮತ್ತು ಪ್ರವಾಹದಲ್ಲಿ ಬೆಳೆಗಳ ನಾಶವು ಕುಟುಂಬದ ಆರ್ಥಿಕ ಒತ್ತಡವನ್ನು ಹೆಚ್ಚಿಸಿತು.

ಒಸ್ಮಾನಾಬಾದ್‌ನ ಕೃಷಿ ಇಲಾಖೆಯ ದಾಖಲೆಗಳ ಪ್ರಕಾರ, ಜಿಲ್ಲೆಯಲ್ಲಿ 948,990 ರೈತರು 2020-21ರ ಖಾರಿಫ್ ಋತುವಿನಲ್ಲಿ ತಮ್ಮ ಬೆಳೆಗಳಿಗೆ ವಿಮೆ ಮಾಡಿದ್ದಾರೆ. ಇವರ ನಡುವೆ ರೈತರು  41.85 ಕೋಟಿ ರೂ. ಕಂತನ್ನು ಕಟ್ಟಿದ್ದಾರೆ. ರಾಜ್ಯ ಮತ್ತು ಕೇಂದ್ರದ ಷೇರುಗಳು 322.95 ಕೋಟಿ ರೂ. ಮತ್ತು ಕ್ರಮವಾಗಿ 274.21 ಕೋಟಿ ರೂ.ಗಳಾಗಿದೆ. ಬಜಾಜ್ ಅಲಿಯಾನ್ಸ್ ರೈತರು ಮತ್ತು ಸರ್ಕಾರಗಳಿಂದ ಒಟ್ಟಾರೆಯಾಗಿ 639.02 ಕೋಟಿ ರೂ.ಗಳನ್ನು ಸ್ವೀಕರಿಸಿದೆ.

ಆದರೆ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಅತಿವೃಷ್ಟಿಯಿಂದ ಬೆಳೆಗಳು ನಾಶವಾದಾಗ, ಬಜಾಜ್ ಅಲಿಯಾನ್ಸ್ ಕೇವಲ 79,121 ರೈತರ ಹಕ್ಕುಗಳನ್ನು ಇತ್ಯರ್ಥಪಡಿಸಿತು ಮತ್ತು ಅವರಿಗೆ 86.96 ಕೋಟಿ ರೂ.ಗಳನ್ನು ವಿತರಿಸಿತು.ಇದರ ಪರಿಣಾಮವಾಗಿ ಈಗ ವಿಮಾ ಕಂಪನಿಯು 552.06 ಕೋಟಿ.ರೂ.ಗಳ ಬಾಕಿ ಮೊತ್ತವನ್ನು ಉಳಿಸಿಕೊಂಡಿದೆ.

Bibhishan Wadkar in his farm in Wadgaon village. Crops insurance rules must favour the farmers, he says
PHOTO • Parth M.N.

ಬಿಭೀಶನ್ ವಾಡ್ಕರ್ ವಡ್ಗಾಂವ್ ಗ್ರಾಮದ ತಮ್ಮ ಜಮೀನಿನಲ್ಲಿ. ಬೆಳೆ ವಿಮೆ ನಿಯಮಗಳು ರೈತರಿಗೆ ಅನುಕೂಲವಾಗಬೇಕು ಎಂದು ಹೇಳುತ್ತಾರೆ

ವಿಮಾ ಕಂಪನಿಯ ವೆಬ್‌ಸೈಟ್‌ನಲ್ಲಿ ಹೆಸರಿಸಲಾದ ಪಿಎಂಎಫ್‌ಬಿವೈ ಕುಂದುಕೊರತೆ ಪರಿಹಾರ ಅಧಿಕಾರಿಗಳಿಗೆ ಈ ವರ್ಷದ ಆಗಸ್ಟ್ 20ರಂದು ಪರಿ(PARI) ಕಳುಹಿಸಿರುವ ಇಮೇಲ್ ಪ್ರಶ್ನಾವಳಿಗಳಿಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡಲಿಲ್ಲ. ಅದೇ ಪ್ರಶ್ನಾವಳಿಯನ್ನು ನಂತರ ಆಗಸ್ಟ್ 30ರಂದು ಕಂಪನಿಯ ವಕ್ತಾರರಿಗೆ ಕಳುಹಿಸಲಾಯಿತು, ಅವರು ಈ ವರದಿಗಾರರಿಗಾಗಲಿ ಅಥವಾ ಪ್ರಶ್ನೆಗಳಿಗಾಗಲಿ ಬಜಾಜ್ ಅಲಿಯಾನ್ಸ್ ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದರು.

ಇತರ ರೈತರ ವಿಮಾ ಹಕ್ಕುಗಳನ್ನು ತಿರಸ್ಕರಿಸಿರುವುದೇಕೆ? ಎನ್ನುವ ಪ್ರಶ್ನೆಗೆ ಇದುವರೆಗೂ ಉತ್ತರ ಸಿಕ್ಕಿಲ್ಲ. ಬೆಳೆಗಳು ಹಾನಿಯಾದ 72 ಗಂಟೆಗಳ ಒಳಗೆ ಕಂಪನಿಗೆ ತಿಳಿಸಲು ವಿಫಲವಾದ ತಾಂತ್ರಿಕ ಕಾರಣವನ್ನು ಕಂಪನಿಯು ತಮ್ಮ ಪರಿಹಾರವನ್ನು ನಿರಾಕರಿಸಲು ಬಳಸಿಕೊಂಡಿದೆ ಎಂದು ರೈತರು ಹೇಳುತ್ತಾರೆ.

ಒಸ್ಮಾನಾಬಾದ್ ನಗರದಿಂದ ಸುಮಾರು 25 ಕಿಲೋಮೀಟರ್ ದೂರದಲ್ಲಿರುವ ವಡ್ಗಾಂವ್ ಗ್ರಾಮದಲ್ಲಿ 55 ವರ್ಷದ ಬಿಭೀಶನ್ ವಾಡ್ಕರ್ ಅವರು ನಿಯಮಗಳು ರೈತರಿಗೆ ಅನುಕೂಲಕರವಾಗಿರಬೇಕು ಮತ್ತು ವಿಮಾ ಕಂಪನಿಗಳಿಗೆ ಅಲ್ಲ ಎಂದು ಏರು ಧ್ವನಿಯಲ್ಲಿ ಹೇಳುತ್ತಿದ್ದರು. “ನಮಗೆ ಅರ್ಹವಾಗಿರುವ ಪರಿಹಾರವನ್ನು ಕೇಳುವುದು ಈಗ ಭಿಕ್ಷುಕರ ಪಾಡಾಗಿದೆ.ಈಗ ನಾವು ವಿಮೆಯ ಕಂತನ್ನು ತುಂಬಿದ್ದೇವೆ, ಅದಕ್ಕೆ ಈಗ ಬೆಳೆ ಪರಿಹಾರವನ್ನು ಪಡೆಯಲು ಅರ್ಹರಾಗಿದ್ದೇವೆ.” ಎಂದು ಹೇಳುತ್ತಾರೆ.

ಅಕ್ಟೋಬರ್ 2020ರಲ್ಲಿ ಬಿಭೀಶನ್ ಅವರ ಸುಮಾರು 60-70 ಕ್ವಿಂಟಾಲ್ ಸೋಯಾಬೀನ್ ಬೆಳೆ ನಾಶವಾಯಿತು. “ನಾನು ಅದನ್ನು ನನ್ನ ಜಮೀನಿನಲ್ಲಿ ರಾಶಿ ಹಾಕಿದ್ದೆ ಮತ್ತು ಅದನ್ನು ಮಳೆಯಿಂದ ರಕ್ಷಿಸಲು ಪ್ಲಾಸ್ಟಿಕ್ ಶೀಟ್ ನಿಂದ ಮುಚ್ಚಿದ್ದೆ.” ಆದರೆ ಅವರ ಜಮೀನಿನಲ್ಲಿ ಸುರಿದ ಜೋರಾದ ಮಳೆ ಮತ್ತು ಗಾಳಿಯಿಂದಾಗಿ ಪ್ಲಾಸ್ಟಿಕ್ ಶೀಟ್ ಸಮರ್ಪಕವಾಗಿ ರಕ್ಷಣೆ ನೀಡಿಲ್ಲ. ಮಳೆಯು ಎಷ್ಟು ಜೋರಾಗಿ ಸುರಿಯಿತೆಂದರೆ ಅದು ಅವರ ಜಮೀನಿನ ಮಣ್ಣನ್ನು ಸಹ ಕೊಚ್ಚಿಕೊಂಡು ಹೋಗಿತ್ತು. “2-3 ಕ್ವಿಂಟಾಲ್ ಹೊರತುಪಡಿಸಿ ಸಂಪೂರ್ಣ ಕೊಯ್ಲು ಹಾಳಾಗಿದೆ, ಈಗ ಅದನ್ನ ನಾನೇನು ಮಾಡಲಿ ಹೇಳಿ? ಎಂದು ಅವರು ಅಸಹಾಯಕರಾಗಿ ಕೇಳುತ್ತಾರೆ.

ಅವರ ಆರು ಎಕರೆ ಜಮೀನಿನಲ್ಲಿ ಬೆಳೆಗೆ 113,400 ರೂ.ದಂತೆ  ವಿಮೆ ಮಾಡಿಸಿದ್ದರು. ಇದಕ್ಕಾಗಿ ಅವರು 2,268 ರೂ.ಗಳ ಕಂತನ್ನು ಕಟ್ಟಬೇಕು. ಆದಾಗ್ಯೂ, ಅವರು 72 ಗಂಟೆಗಳ ಒಳಗೆ ವಿಮಾ ಕಂಪನಿಗೆ ಬೆಳೆಹಾನಿಗೆ ಸಂಬಂಧಿಸಿದಂತೆ ವೆಬ್‌ಸೈಟ್‌ ಆಗಲಿ ಆನ್‌ಲೈನ್‌ ಆಗಲಿ ಅಥವಾ ಕಂಪನಿಯ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ ತಿಳಿಸದೇ ಇರುವುದರಿಂದಾಗಿ ಈಗ ಅವರ ಹಕ್ಕನ್ನು ತಿರಸ್ಕರಿಸಲಾಗಿದೆ. "ನಾವು ನಮ್ಮ ಬೆಳೆಯನ್ನು ಉಳಿಸಲು ಪ್ರಯತ್ನಿಸಬೇಕೇ, ಹೊಲದಿಂದ ನೀರು ಹೊರಹೋಗುವುದನ್ನು ಖಚಿತಪಡಿಸಿಕೊಳ್ಳಬೇಕೇ ಅಥವಾ ಕಂಪನಿಗೆ ಪೋನ್ ಕರೆ ಮಾಡುವ ಬಗ್ಗೆ ಚಿಂತಿಸಬೇಕೇ? ಎರಡು ವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದಾಗ 72 ಗಂಟೆಗಳ ಒಳಗೆ ನಾವು ವಿಮಾ ಕಂಪನಿಗೆ ಹೇಗೆ ತಿಳಿಸಬೇಕು ಹೇಳಿ?" ಎಂದು ಅವರು ಪ್ರಶ್ನಿಸುತ್ತಾರೆ.

Left: Bibhishan's soybean fields inundated with rainwater in October last year. Right: Another devastated farm in Wadgaon (file photo)
PHOTO • Parth M.N.
Left: Bibhishan's soybean fields inundated with rainwater in October last year. Right: Another devastated farm in Wadgaon (file photo)
PHOTO • Parth M.N.

ಎಡಕ್ಕೆ: ಕಳೆದ ವರ್ಷ ಅಕ್ಟೋಬರ್‌ನಲ್ಲಿ ಬಿಭೀಶನ್‌ನ ಸೋಯಾಬೀನ್‌ನ ಹೊಲಗಳು ಮಳೆ ನೀರಿನಿಂದ ಜಲಾವೃತವಾಗಿದ್ದವು. ಬಲಕ್ಕೆ: ವಡ್ಗಾಂವ್‌ನಲ್ಲಿ ಹಾಳಾಗಿರುವ ಮತ್ತೊಂದು ಜಮೀನು (ಸಂಗ್ರಹ ಚಿತ್ರ)

ಮೇಘಸ್ಫೋಟಕ್ಕೆ ಅಲ್ಲಲ್ಲಿ ಮರಗಳು ಧರೆಗುರುಳಿದ್ದು, ವಿದ್ಯುತ್ ಕಂಬಗಳೂ ಉರುಳಿವೆ. "ನಮಗೆ ಹಲವಾರು ದಿನಗಳವರೆಗೆ ವಿದ್ಯುತ್ ಶಕ್ತಿ ಇದ್ದಿರಲಿಲ್ಲ. ಇದರಿಂದಾಗಿ ನಮ್ಮ ಫೋನ್‌ಗಳನ್ನು ಚಾರ್ಜ್ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಮತ್ತು ವಿಮಾ ಕಂಪನಿಯ ಸಹಾಯವಾಣಿಯು ಬೆಳಿಗ್ಗೆ 9ರಿಂದ ರಾತ್ರಿ 9ರವರೆಗೆ ಮಾತ್ರ ಕಾರ್ಯನಿರ್ವಹಿಸುತ್ತದೆ. ಅಂದರೆ ಅವರಿಗೆ ವಿಷಯ ತಿಳಿಸಲಿಕ್ಕೆ ನಿಮಗೆ ಕೇವಲ 36 ಗಂಟೆಗಳಿರುತ್ತದೆ ಹೊರತು 72 ಗಂಟೆಗಳಲ್ಲ. ಅಂತಹ ಸಂದರ್ಭಗಳಲ್ಲಿ ನೀವು ಯಾವಾಗಲೂ ತಕ್ಷಣಕ್ಕೆ ಯೋಚಿಸುವುದಿಲ್ಲ, ಈ ನಿಯಮಗಳಿಂದ ನಮಗೆ ಅನ್ಯಾಯವಾಗಿದೆ" ಎಂದು ಬಿಭೀಶನ್ ಅವರು ಹೇಳುತ್ತಿದ್ದರು.

ಡಿಸೆಂಬರ್ 2020ರಲ್ಲಿ ನಡೆದ ಸಭೆಯಲ್ಲಿ, ಒಸ್ಮಾನಾಬಾದ್‌ನ ಜಿಲ್ಲಾಧಿಕಾರಿ ಕೌಸ್ತುಭ್ ದಿವೇಗಾಂವ್ಕರ್ ಅವರು ರೈತರು ಮತ್ತು ವಿಮಾ ಕಂಪನಿಯ ಅಧಿಕಾರಿಗಳೊಂದಿಗೆ ಪಿಎಂಎಫ್‌ಬಿವೈ ಯೋಜನೆಯ ಅನುಷ್ಠಾನವನ್ನು ಪರಿಶೀಲಿಸಿದರು, ಅವರು ಬಜಾಜ್ ಅಲಿಯಾನ್ಸ್ ಗೆ 72 ಗಂಟೆಗಳ ಅಧಿಸೂಚನೆಯ ನಿಯಮವನ್ನು ಸಡಿಲಿಸುವಂತೆ ಸೂಚಿಸಿದರು. ಆದರೆ ಅದು ಕಾರ್ಯರೂಪಕ್ಕೆ ಬರಲಿಲ್ಲ.

ರೈತರ ಹಕ್ಕುಗಳಲ್ಲಿ ವಿಮಾ ಕಂಪನಿಯ ತಾರತಮ್ಯದ ಇತ್ಯರ್ಥವನ್ನು ಪ್ರಶ್ನಿಸಲು, 15 ರೈತರ ಗುಂಪು ಜೂನ್ 7, 2021ರಂದು ಬಾಂಬೆ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಿತು. ಬಜಾಜ್ ಅಲಿಯಾನ್ಸ್ ಹೊರತುಪಡಿಸಿ, ಅರ್ಜಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕೃಷಿ ಇಲಾಖೆ ಮತ್ತು ಒಸ್ಮಾನಾಬಾದ್‌ನ ಜಿಲ್ಲಾಅಧಿಕಾರಿಗಳನ್ನು ಪ್ರತಿವಾದಿಗಳಾಗಿ ಹೆಸರಿಸಲಾಗಿದೆ.ಈ ಮನವಿಗೆ ವಿಧಾನಸಭೆ ಸದಸ್ಯರಾದ ಕೈಲಾಸ್ ಪಾಟೀಲ್ ಮತ್ತು ಸಂಸದ ಓಂ ರಾಜೇ ನಿಂಬಾಳ್ಕರ್ ಬೆಂಬಲಿಸಿದ್ದಾರೆ. ಇಬ್ಬರೂ ನಾಯಕರು ಒಸ್ಮಾನಾಬಾದ್‌ನಿಂದ ಬಂದವರು ಮತ್ತು ಇಬ್ಬರೂ ಮಹಾರಾಷ್ಟ್ರದ ಸಮ್ಮಿಶ್ರ ಸರ್ಕಾರದಲ್ಲಿ ಆಡಳಿತ ಪಕ್ಷವಾದ ಶಿವಸೇನೆಯನ್ನು ಪ್ರತಿನಿಧಿಸುತ್ತಾರೆ.

ತಾವು ಮತ್ತು ಕೈಲಾಸ್ ಪಾಟೀಲ್ ರೈತರ ಅಹವಾಲು ಅರ್ಜಿಗೆ ಬೆಂಬಲ ವ್ಯಕ್ತಪಡಿಸಿದ್ದೇಕೆ? ಎನ್ನುವ ವಿಚಾರವಾಗಿ ಪ್ರತಿಕ್ರಿಯಿಸಿದ ನಿಂಬಾಳ್ಕರ್ “ಮಳೆಯಿಂದ ಬೆಳೆ ಹಾಳಾದ ನಂತರ, ರಾಜ್ಯ ಮತ್ತು ಕೇಂದ್ರ ಸರ್ಕಾರವು ರೈತರಿಗೆ ಪರಿಹಾರ ನೀಡಿದೆ. ಇನ್ನೂ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂಬುದನ್ನು ಈ ಸರಕಾರಗಳು ಒಪ್ಪಿಕೊಂಡಿರುವಾಗ, ರೈತರ ಹಕ್ಕುಗಳನ್ನು ಇತ್ಯರ್ಥಗೊಳಿಸಲು ವಿಮಾ ಕಂಪನಿಯು ತಾಂತ್ರಿಕ ಕಾರಣ ಕೊಡುತ್ತಿರುವುದೇಕೆ? ಹೀಗಾಗಿ ನಾನು ಮತ್ತು ಕೈಲಾಸ್ ಪಟೇಲ್ ಇಬ್ಬರೂ ಸಹಿತ ರೈತರ ಈ ಅಹವಾಲು ಅರ್ಜಿಗೆ ಬೆಂಬಲ ನೀಡಿದ್ದೇವೆ" ಎಂದು ಹೇಳಿದರು.

Left: Wadgaon's fields overflowing with rainwater. Right: In Osmanabad district, 6.5 lakh acres of farmland was affected in October 2020 (file photos)
PHOTO • Parth M.N.
Left: Wadgaon's fields overflowing with rainwater. Right: In Osmanabad district, 6.5 lakh acres of farmland was affected in October 2020 (file photos)
PHOTO • Parth M.N.

ಎಡಕ್ಕೆ: ಮಳೆ ನೀರಿನಿಂದ ತುಂಬಿ ಹರಿಯುತ್ತಿರುವ ವಡಗಾಂವ್ ನಲ್ಲಿನ ಗದ್ದೆಗಳು. ಬಲ: ಒಸ್ಮಾನಾಬಾದ್ ಜಿಲ್ಲೆಯಲ್ಲಿ, ಅಕ್ಟೋಬರ್ 2020 ರಲ್ಲಿ 6.5 ಲಕ್ಷ ಎಕರೆ ಕೃಷಿಭೂಮಿ ಹಾನಿಗೊಳಗಾಗಿದೆ (ಸಂಗ್ರಹ ಚಿತ್ರ)

ನ್ಯಾಯಾಲಯದಲ್ಲಿನ ಪ್ರಕರಣದ ತೀರ್ಪು ಏನೇ ಇರಲಿ, ಒಸ್ಮಾನಾಬಾದ್‌ನ ರೈತರು ಪಿಎಂಎಫ್‌ಬಿವೈ ಯೋಜನೆಯ ಮೇಲೆ ಹೆಚ್ಚು ಅವಲಂಬಿಸಲಾಗದ ಕಾರಣ ಅದರ ನಂಬಿಕೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಮರಾಠಿ ದಿನಪತ್ರಿಕೆ ಸಕಾಲ್, ಆಗಸ್ಟ್ 3, 2021 ರಂದು ಒಸ್ಮಾನಾಬಾದ್‌ನಲ್ಲಿ ಪಿಎಂಎಫ್‌ಬಿವೈ ಯೋಜನೆಗೆ ಅರ್ಜಿ ಸಲ್ಲಿಸುವ ರೈತರ ಸಂಖ್ಯೆ ಪ್ರತಿ ವರ್ಷ ಕ್ಷೀಣಿಸುತ್ತಿದೆ ಎಂದು ವರದಿ ಮಾಡಿದೆ. 2019ರಲ್ಲಿ ಜಿಲ್ಲೆಯಲ್ಲಿ 11.88 ಲಕ್ಷ ರೈತರು ಕಂತನ್ನು ಪಾವತಿಸಿದ್ದರೆ, 2020 ರಲ್ಲಿ 9.48 ಲಕ್ಷ ಮಂದಿ ಮಾತ್ರ ಕಂತನ್ನು ಕಟ್ಟಿದ್ದಾರೆ. ಈ ವರ್ಷ ಈ ಸಂಖ್ಯೆ 6.67 ಲಕ್ಷಕ್ಕೆ ಕುಸಿದಿದೆ, ಕಳೆದ ವರ್ಷಕ್ಕಿಂತ ಮೂರನೇ ಒಂದು ಭಾಗದಷ್ಟು ಕಡಿಮೆಯಾಗಿದೆ.

ಬೆಳೆ ವಿಮೆಯು ರೈತರನ್ನು ಅನಿರೀಕ್ಷಿತ ಪರಿಸ್ಥಿತಿಗಳಿಂದ ರಕ್ಷಿಸುತ್ತದೆ, ಆದರೆ ಈ ಸಮಯದಲ್ಲಿ ವಿಮೆಯು ಕೂಡ ಸ್ವತಃ ಅನಿಶ್ಚಿತವಾಗಿದೆ ಎಂದು ಬಿಭೀಶನ್ ಹೇಳುತ್ತಾರೆ. "ಇದು ನಮಗೆ ನೀಡಬೇಕಾದ ಭರವಸೆಯನ್ನು ನೀಡುವುದಿಲ್ಲ. ಇನ್ನೂ ಹವಾಮಾನ ಸ್ವರೂಪವು ಅನಿಶ್ಚಿತವಾಗಿರುವುದರಿಂದಾಗಿ ಈಗ ನಮಗೆ ವಿಶ್ವಾಸಾರ್ಹ ಬೆಳೆ ವಿಮೆ ನಿರ್ಣಾಯಕವಾಗಿದೆ.

ಬಿಭೀಶನ್ ಅವರು ಕಳೆದ ಎರಡು ದಶಕಗಳಲ್ಲಿ ಮಳೆಯ ಸ್ವರೂಪದಲ್ಲಿನ  ಗಮನಾರ್ಹ ಬದಲಾವಣೆಗಳನ್ನು ಗಮನಿಸಿದ್ದಾರೆ. “ನಾಲ್ಕು ಮಾನ್ಸೂನ್ ತಿಂಗಳುಗಳಲ್ಲಿ 'ಬರ'ದ ದಿನಗಳ ಸಂಖ್ಯೆ ಹೆಚ್ಚಾಗಿದೆ. ಆದರೆ ಒಂದು ವೇಳೆ ಮಳೆ ಬಂತೆಂದರೆ ಅಧಿಕ ಮಳೆಯಾಗುತ್ತದೆ, ಇದು ಕೃಷಿಗೆ ಹಾನಿಕಾರಕವಾಗಿದೆ. ನಾವು ಈ ಹಿಂದೆ ಮಾನ್ಸೂನ್ ಋತುವಿನುದ್ದಕ್ಕೂ ಸ್ಥಿರವಾದ ಮಳೆಯನ್ನು ಹೊಂದಿರುತ್ತಿದ್ದೆವು, ಆದರೆ ಈಗ ಬರ ಇಲ್ಲವೇ ಪ್ರವಾಹವಿರುತ್ತದೆ." ಎನ್ನುತ್ತಾರೆ.

ಮರಾಠವಾಡದ ರೈತರು ಸುಮಾರು ಎರಡು ದಶಕಗಳ ಹಿಂದೆ ಸೋಯಾಬೀನ್ ಬೆಳೆಯನ್ನು ಬೆಳೆಯಲು ಪ್ರಾರಂಭಿಸಿದರು, ಏಕೆಂದರೆ ಇದು ಅಸ್ಥಿರವಾಗಿರುವ ಹವಾಮಾನವನ್ನು ಈ ಬೆಳೆ ತಡೆದುಕೊಳ್ಳುತ್ತದೆ. ಆದರೆ ಹವಾಮಾನದಲ್ಲಿನ ವ್ಯತಾಸಗಳು ಈಗಿರುವ ಸೋಯಾಬೀನ್ ಬೆಳೆಗೂ ಕೂಡ ಅಧಿಕವಾಗಿದೆ.ಅಕ್ಟೋಬರ್ 2020 ರ ಮಳೆಯು ನಮಗೆ ಇನ್ನೂ ಕಾಡುತ್ತಲೇ ಇದೆ." ಎಂದು ಬಿಭೀಶನ್ ಹೇಳುತ್ತಾರೆ.

ಒಸ್ಮಾನಾಬಾದ್‌ನ ಜಿಲ್ಲಾಧಿಕಾರಿಗಳ ವರದಿಯು ರೈತರ ಅನುಭವಿಸಿರುವ ನಷ್ಟದ ಪ್ರಮಾಣವನ್ನು ತೋರಿಸುತ್ತದೆ. ಒಟ್ಟು 6.5 ಲಕ್ಷ ಎಕರೆ ಅಂದರೆ ಸುಮಾರು 5 ಲಕ್ಷ ಫುಟ್ಬಾಲ್ ಮೈದಾನಗಳಿಗೆ ಸಮನಾಗಿರುವ ಕೃಷಿಭೂಮಿಯು ಹಾನಿಗೊಳಗಾಗಿದೆ. 4.16 ಲಕ್ಷ ರೈತರ ಒಡೆತನದ ಮೂರನೇ ಒಂದು ಭಾಗದಷ್ಟು ಭೂಮಿ ನಾಶವಾಗಿದೆ. ಅಲ್ಲದೆ, ನಾಲ್ಕು ಜನರು ಸಾವನ್ನಪ್ಪಿರುವುದರ ಜೊತೆಗೆ 162 ಡೈರಿ ಪ್ರಾಣಿಗಳು ಕೂಡ ಪ್ರವಾಹದಲ್ಲಿ ಸಾವನ್ನಪ್ಪಿವೆ. ಏಳು ಮನೆಗಳು ಸಂಪೂರ್ಣವಾಗಿ ನಾಶವಾಗಿದ್ದರೆ, 2,277  ಭಾಗಶಃ ಧ್ವಂಸಗೊಂಡಿವೆ.

Left: Gopal Shinde with his daughters. Right: Gopal's friend standing in his water-filled farm last October
PHOTO • Parth M.N.
Left: Gopal Shinde with his daughters. Right: Gopal's friend standing in his water-filled farm last October
PHOTO • Parth M.N.

ಎಡಕ್ಕೆ: ಗೋಪಾಲ್ ಶಿಂಧೆ ಅವರ ಹೆಣ್ಣುಮಕ್ಕಳೊಂದಿಗೆ. ಬಲಕ್ಕೆ: ಕಳೆದ ಅಕ್ಟೋಬರ್‌ನಲ್ಲಿ ನೀರು ತುಂಬಿದ ಜಮೀನಿನಲ್ಲಿ ಗೋಪಾಲ್‌ ಅವರ ಸ್ನೇಹಿತ ನಿಂತಿರುವುದು

34 ವರ್ಷದ ಗೋಪಾಲ್ ಶಿಂಧೆ ಅವರ ವಡ್ಗಾಂವ್‌ನಲ್ಲಿನ ಆರು ಎಕರೆ ಜಮೀನು 2020ರ ಅಕ್ಟೋಬರ್‌ನಲ್ಲಿ ಜಲಾವೃತಗೊಂಡಿದೆ, ಅವರು ಹೇಳುವಂತೆ, ಒಂದು ವೇಳೆ ವಿಮೆ ಅಗತ್ಯ ಎಂದಾದರೂ ರೈತರಿಗೆ ಇದ್ದರೇ ಅದು ಈ ವರ್ಷವೇ” ಎನ್ನುತ್ತಾರೆ. “ಕೊರೊನಾ ಮಹಾಮಾರಿಯಿಂದ ಮಾರುಕಟ್ಟೆಗಳು ತಿಂಗಳುಗಟ್ಟಲೆ ಮುಚ್ಚಲ್ಪಟ್ಟಿದ್ದರಿಂದಾಗಿ ನಾವು ತೀವ್ರ ನಷ್ಟವನ್ನು ಅನುಭವಿಸಿದ್ದೇವೆ” ಎಂದು ಈಗಾಗಲೇ ಮಳೆಯಿಂದಾಗಿ 20 ಕ್ವಿಂಟಾಲ್ ಸೋಯಾಬೀನ್ ನ್ನು ಕಳೆದುಕೊಂಡಿರುವ ಗೋಪಾಲ್ ಹೇಳುತ್ತಾರೆ. ಆದರೆ ಅವರು ವಿಮೆ ಮೂಲಕ ಕೇವಲ 15,000 ರೂ.ಗಳ ಪರಿಹಾರವನ್ನು ಸ್ವೀಕರಿಸಿದ್ದಾರೆ. “ಪ್ರಮುಖ ಬೆಳೆಗಳ ಬೆಲೆಗಳು ತೀವ್ರ ಕಳಪೆಯಲ್ಲಿ ಕುಸಿದವು. ಕೋವಿಡ್ ಲಾಕ್‌ಡೌನ್‌ನಿಂದಾಗಿ ಅನೇಕ ರೈತರು ತಮ್ಮ ದಾಸ್ತಾನನ್ನು ಮಾರುಕಟ್ಟೆಗೆ ಸಾಗಿಸಲು ಸಾಧ್ಯವಾಗಲಿಲ್ಲ. ಆ ದಿನಗಳಲ್ಲಿ ನಮಗೆ ತಿನ್ನಲು ಸಹ ಸಾಕಾಗುತ್ತಿರಲಿಲ್ಲ. ಅಂತಹ ಸಮಯದಲ್ಲಿಯೂ ಕೂಡ, ವಿಮಾ ಕಂಪನಿಯು ನಮ್ಮ ಖರ್ಚಿನಲ್ಲಿ ಲಾಭ ಗಳಿಸಿತು” ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಹಲವಾರು ರೈತರು, ಕೃಷಿ ಜೊತೆಗೆ ತಮ್ಮ ಆದಾಯವನ್ನು ನಿಭಾಯಿಸಲು ಕಟ್ಟಡ ನಿರ್ಮಾಣ ಕಾರ್ಮಿಕರಾಗಿ, ಭದ್ರತಾ ಸಿಬ್ಬಂದಿಯಾಗಿ ಅಥವಾ ಇತರ ಸಾಂದರ್ಭಿಕ ಕೆಲಸಗಳನ್ನು ಮಾಡಿದರು, ಆದರೆ ಅವರು ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಈ ಎಲ್ಲ ಕೆಲಸಗಳನ್ನು ಕಳೆದುಕೊಂಡರು.ಪಾಂಡುರಂಗ ಗುಂಡ್ ಅವರು ಕೋವಿಡ್-19 ಉಲ್ಬಣಗೊಳ್ಳುವವರೆಗೆ ಟ್ರಕ್ ಚಾಲಕನಾಗಿ ಕೆಲಸ ಮಾಡುತ್ತಿದ್ದರು, ಇದರಿಂದಾಗಿ ಅವರು ಪ್ರತಿ ತಿಂಗಳಿಗೆ 10,000 ರೂ.ಗಳನ್ನು ಸಂಪಾದಿಸುತ್ತಿದ್ದರು. “ನಾವು ಈಗ ಕುಟುಂಬಕ್ಕೆ ನಿರಂತರವಾಗಿ ನೆರವಾಗಿದ್ದ ಆಧಾರದ ಮೂಲವನ್ನು ಕಳೆದುಕೊಂಡಿದ್ದೇವೆ” ಎಂದು ಶಾರದಾ ಅವರು ಹೇಳುತ್ತಾರೆ.

ಸುಮಾರು ಎರಡು ವರ್ಷಗಳ ಹಿಂದೆ ತಮ್ಮ 22 ವರ್ಷದ ಮಗಳು ಸೋನಾಲಿಯ ಮದುವೆಗೆ ಮಾಡಿದ್ದ ಸಾಲವನ್ನು ಇನ್ನೂ ತೀರಿಸುತ್ತಿದ್ದರು. “ಅವಳ ಮದುವೆಗಾಗಿ ನಾವು ಸುಮಾರು ಎರಡು ಲಕ್ಷ ರೂಪಾಯಿಗಳನ್ನು ಸಾಲ ಮಾಡಿದ್ದೇವೆ”ಎಂದು ಶಾರದಾ ಹೇಳುತ್ತಾರೆ.ಈಗ ಕೆಲಸ ಕಳೆದುಕೊಂಡಿರುವುದು ಮತ್ತು ಅವರ ಜೀವನೋಪಾಯಕ್ಕೆ ಉಳಿದಿರುವ ಕೊನೆಯ ಆದಾಯದ ಮೂಲವಾಗಿದ್ದ ಸೋಯಾಬೀನ್ ಬೆಳೆ ನಾಶವಾಗಿರುವುದು ಈಗ ಪಾಂಡುರಂಗ್ ನವರಿಗೆ ತೀವ್ರ ಒತ್ತಡವನ್ನುಂಟು ಮಾಡಿದೆ.

ಇದರಿಂದಾಗಿ ಪಾಂಡುರಂಗ ಕಳೆದ ವರ್ಷ ನವೆಂಬರ್‌ನಲ್ಲಿ ಒಂದು ದಿನ ತಮ್ಮ ಜಮೀನಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದರು.

ಈಗ ಶಾರದಾ ಸ್ವಂತದಿಂದ ಜಮೀನನ್ನು ನಿರ್ವಹಿಸುತ್ತಾರೆ, ಆದರೆ ಕುಟುಂಬವನ್ನು ನಡೆಸಲು ಇದು ಸಾಕಾಗುವುದಿಲ್ಲ. ಅವರ 17 ವರ್ಷದ ಮಗ ಸಾಗರ್ ಒಸ್ಮಾನಾಬಾದ್‌ನಲ್ಲಿ ದಿನಗೂಲಿ ಕಾರ್ಮಿಕನಾಗಿ ಕೆಲಸ ಮಾಡಲು ಪ್ರಾರಂಭಿಸಿದರೆ, ಅವರ 15 ವರ್ಷದ ಕಿರಿಯ ಮಗ ಅಕ್ಷಯ್, ಡೆಲಿವರಿ ಬಾಯ್ ಆಗಿ ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದಾನೆ. ಇಬ್ಬರೂ ಈ ಕೆಲಸಕ್ಕಾಗಿ ಶಾಲೆಯನ್ನು ಬಿಡಬೇಕಾದ ಪರಿಸ್ಥಿತಿ ಬಂತು. ಪಾಂಡುರಂಗನವರು ಆತ್ಮಹತ್ಯೆಗೆನೋ ಶರಣಾದರು - ಆದರೆ ಇದು ಇತರ ಮೂರು ಜೀವಗಳನ್ನೂ ಸಮನಾಗಿ ನೇತಾಡುವಂತೆ ಮಾಡಿದೆ.

ಈ ವರದಿಯು ಪತ್ರಿಕಾ ವರದಿಗಾರನಿಗೆ ಪುಲಿಟ್ಜರ್ ಸೆಂಟರ್ ತನ್ನ ಸ್ವತಂತ್ರ ಪತ್ರಿಕೋದ್ಯಮ ಅನುದಾನದ ಮೂಲಕ ಬೆಂಬಲಿಸುವ ಸರಣಿಯ ಭಾಗವಾಗಿದೆ.

ಅನುವಾದ - ಎನ್. ಮಂಜುನಾಥ್

Parth M.N.

Parth M.N. is a 2017 PARI Fellow and an independent journalist reporting for various news websites. He loves cricket and travelling.

Other stories by Parth M.N.
Translator : N. Manjunath