ಮೋಟಾರು ಬೈಕಿನ ಅಪಘಾತದಲ್ಲಿ ಕಾಲು ಕಳೆದುಕೊಂಡಿರುವ 28 ವರ್ಷದ ಬಿಮ್ಲೇಶ್ ಜೈಸ್ವಾಲ್ ಅವರು ಮುಂಬೈನ ಹೊರವಲಯದ ಪನ್ವೇಲ್ ನಲ್ಲಿರುವ ತಮ್ಮ ಬಾಡಿಗೆ ಕೊಠಡಿಯಿಂದ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿರುವ ತಮ್ಮ ಮನೆಗೆ ಹೋಂಡಾ ಆಕ್ಟಿವಾದಲ್ಲಿ 1,200 ಕಿಲೋಮೀಟರ್ಗಿಂತ ಹೆಚ್ಚು ದೂರ ಸವಾರಿ ಮಾಡುವ ದಿಟ್ಟ ನಿರ್ಧಾರ ತೆಗೆದುಕೊಂಡರು. ಈ ಸ್ಕೂಟರ್ ಸೈಡ್-ಕಾರ್ ನ್ನು ಒಳಗೊಂಡಿದೆ.ಅವರ 26 ವರ್ಷದ ಪತ್ನಿ ಸುನೀತಾ ಮತ್ತು ಅವರ 3 ವರ್ಷದ ಮಗಳು ರೂಬಿಯೊಂದಿಗೆ ಆ ಪ್ರಯಾಣವನ್ನು ಬೆಳೆಸಿದ್ದರು."ನನಗೆ ಬೇರೆ ಆಯ್ಕೆ ಇರಲಿಲ್ಲ" ಎಂದು ಅವರು ಹೇಳುತ್ತಾರೆ.

ಹೊಸ ಯೋಜನೆಯನ್ನು ಹಿಡಿಯುವ ಗುತ್ತಿಗೆದಾರರನನ್ನು ಬೆನ್ನತ್ತಿ ಬಿಮ್ಲೇಶ್ ಧೂಳು ಹೊಡೆಯುವುದು ಮತ್ತು ಮನೆಯನ್ನು ಸ್ವಚ್ಛಗೊಳಿಸುವುದು ಸೇರಿದಂತೆ ಹಲವು ಕೆಲಸವನ್ನು ಪನ್ವೇಲ್ ನಲ್ಲಿ ಮಾಡಿದ್ದಾರೆ. "ಒಂದೇ ಕಾಲಿನಿಂದ ಯಾವುದೇ ಕೆಲಸ ಮಾಡುವುದು ಕಷ್ಟಕರವಾಗುತ್ತದೆ, ಆದರೆ ಇದು ಅನಿವಾರ್ಯವಾಗಿರುವುದರಿಂದಾಗಿ ಈ ಕೆಲಸವನ್ನು ಮಾಡಲೇಬೇಕಾಗುತ್ತದೆ" ಎಂದು ಅವರು ರೇವಾದ ಹಿನೌತಿ ಗ್ರಾಮದಲ್ಲಿರುವ ತಮ್ಮ ಮನೆಯಿಂದ ಫೋನ್‌ ಕರೆಯಲ್ಲಿ ಹೇಳಿದರು. ಇದೇ ಸ್ಫೂರ್ತಿ ಅವರಿಗೆ ನಿಸ್ಸಂಶಯವಾಗಿ ಕೆಲವೊಮ್ಮೆ 40 ಡಿಗ್ರಿ ಸೆಲ್ಸಿಯಸ್ ದಾಟುವ ಉಷ್ಣಾಂಶದಲ್ಲೂ ಇಂತಹ ಅನಿರೀಕ್ಷಿತ ಪ್ರಯಾಣಕ್ಕೆ ಪ್ರೇರಕವಾಯಿತು.ಇದು ಅವರಂತೆ ಧೈರ್ಯ ಮತ್ತು ಧೃಢ ನಿರ್ಧಾರದ ಮೂಲಕ ಮನೆ ತಲುಪಲು ಹತಾಶಗೊಂಡಿರುವ ವಲಸೆ ಕಾರ್ಮಿಕರ ನಿದರ್ಶನವಾಗಿದೆ.

ಕೊರೋನಾ ವೈರಸ್ ಹರಡುವುದನ್ನು ನಿಯಂತ್ರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 24ರಂದು ರಾಷ್ಟ್ರವ್ಯಾಪಿ ಲಾಕ್ ಡೌನ್ ಘೋಷಿಸಿದಾಗ, ಬಿಮ್ಲೇಶ್ ಅವರಂತಹ ಲಕ್ಷಾಂತರ ದಿನಗೂಲಿ ಕಾರ್ಮಿಕರು ಇಕ್ಕಟ್ಟಿನ ಪರಿಸ್ಥಿತಿಗೆ ಸಿಲುಕಿದರು.”ನಮಗೆ ಯಾವುದೇ ಕೆಲಸವಿರಲಿಲ್ಲ, ಆದ್ದರಿಂದ ಆಹಾರವನ್ನು ಪಡೆಯುವುದು ಹೇಗೆ ಎಂದು ನಮಗೆ ತಿಳಿದಿರಲಿಲ್ಲ" ಎಂದು ಅವರು ಹೇಳುತ್ತಾರೆ.’ಬಾಡಿಗೆ ಮತ್ತು ವಿದ್ಯುತ್ ಬಿಲ್ ನ್ನು ನಾವೇ ಬರಿಸಬೇಕು. ನಾಲ್ಕು ಗಂಟೆಗಳ ನೋಟಿಸ್ ಮೂಲಕ ದೇಶವನ್ನು ಯಾರು ಮುಚ್ಚುತ್ತಾರೆ ಹೇಳಿ? ಎಂದು ಅವರು ಪ್ರಶ್ನಿಸುತ್ತಾರೆ.

50 ದಿನಗಳ ಕಾಲ ಕುಟುಂಬವು ಪನ್ವೇಲ್ ನಲ್ಲಿಯೇ ಉಳಿದಿತ್ತು."ಸ್ಥಳೀಯ ಎನ್ಜಿಒಗಳು ನಮಗೆ ಆಹಾರ ಮತ್ತು ರೇಷನ್ ಸಾಮಾಗ್ರಿಗಳನ್ನು ವಿತರಿಸುತ್ತಿದ್ದವು" ಎಂದು ಬಿಮ್ಲೇಶ್ ಹೇಳುತ್ತಾರೆ. ‘ನಾವು ಹೇಗೋ ಬದುಕುಳಿದೆವು. ಪ್ರತಿ ಹಂತದ ಕೊನೆಯಲ್ಲಿ ಲಾಕ್‌ಡೌನ್ ಅನ್ನು ತೆಗೆದುಹಾಕಲಾಗುತ್ತದೆ ಎಂದು ನಾವು ಭಾವಿಸುತ್ತಿದ್ದೆವು. ಆದರೆ ನಾಲ್ಕನೇ ಹಂತವಿದೆ ಎಂದು ನಮಗೆ ತಿಳಿದಾಗ, ಇದು ಶಾಶ್ವತವಾಗಿ ಮುಂದುವರಿಯಬಹುದು ಎಂದು ನಾವು ಭಾವಿಸಿದೆವು. ಮುಂಬೈ ಮತ್ತು ಸುತ್ತಮುತ್ತಲಿನ ಕೊರೋನಾ ವೈರಸ್ ಪ್ರಕರಣಗಳು ಹೆಚ್ಚುತ್ತಿವೆ, ಆದ್ದರಿಂದ ಹಿನೌತಿಯಲ್ಲಿರುವ ನನ್ನ ಕುಟುಂಬವು ಕೂಡ ಈಗ ಚಿಂತೆಗಿಡಾಗಿದೆ’ ಎಂದು ಅವರು ವಿವರಿಸುತ್ತಿದ್ದರು.

Bimlesh lost a leg in a motorbike accident, but rode more than 1,200 km to reach home with his wife Sunita and their daughter Ruby
PHOTO • Parth M.N.

ಮೋಟಾರು ಬೈಕಿನ ಅಪಘಾತದಲ್ಲಿ ಬಿಮ್ಲೇಶ್ ಕಾಲು ಕಳೆದುಕೊಂಡರೂ ಸಹಿತ ಅವರ ಪತ್ನಿ ಸುನೀತಾ ಮತ್ತು ಮಗಳು ರೂಬಿಯೊಂದಿಗೆ ಮನೆಗೆ ತಲುಪಲು 1200 ಕೀಲೋ ಮೀಟರ್ ಗಳ ಬೈಕ್ ಸವಾರಿ ಮಾಡಿದ್ದಾರೆ.

ಆದ್ದರಿಂದ, ಅವರು ತಮ್ಮ ಬಾಡಿಗೆ ಒಂದು ಕೋಣೆಯನ್ನು ಪನ್ವೆಲ್‌ನಲ್ಲಿ ಬಿಟ್ಟು ಮಧ್ಯಪ್ರದೇಶಕ್ಕೆ ಹಿಂತಿರುಗಲು ಇದು ಸೂಕ್ತ ಸಮಯ ಎಂದು ನಿರ್ಧರಿಸಿದ್ದಾರೆ. ಭೂಮಾಲೀಕ 2000 ರೂ.ಗಳ ಮನೆ ಬಾಡಿಗೆಗೆ ಒತ್ತಾಯಿಸದೆ ಇರುವಷ್ಟು ಕರುಣಾಮಯಿ. ಅವರು ನಮ್ಮ ಹತಾಶ ಸ್ಥಿತಿಯನ್ನು ಅರ್ಥೈಸಿಕೊಂಡಿದ್ದಾರೆ' ಎಂದು ಅವರು ಹೇಳಿದರು.

ತಮ್ಮ ಸ್ವಂತ ಊರಿಗೆ ವಾಪಾಸ್ ಹೋಗುವ ನಿರ್ಧಾರವನ್ನು ಅಂತಿಮಗೊಳಿಸಿದ ನಂತರ, ಅವರಿಗೆ ಮೂರು ಆಯ್ಕೆಗಳಿದ್ದವು: ಒಂದು ಸರಕಾರವು ಆಯೋಜಿಸಿರುವ ಶ್ರಮಿಕ್ (ಕಾರ್ಮಿಕ) ರೈಲುಗಳಿಗಾಗಿ ಕಾಯುವುದು."ಆದರೆ ನಾವು ಯಾವಾಗ ಹತ್ತಲು ಸಾಧ್ಯವಾಗುತ್ತದೆ ಎಂಬುದರ ಬಗ್ಗೆ ಯಾವುದೇ ಸಮಯದ ಮಿತಿ ಅಥವಾ ಭರವಸೆ ಇರಲಿಲ್ಲ." ಮತ್ತೊಂದು ಸಾಧ್ಯತೆಯೆಂದರೆ ಮಧ್ಯಪ್ರದೇಶಕ್ಕೆ ಹೋಗುವ ಅನೇಕ ಟ್ರಕ್‌ಗಳಲ್ಲಿ ಹೇಗಾದರೂ ಒಂದು ಸ್ಥಳವನ್ನು ಕಂಡುಕೊಳ್ಳುವುದು. “ಆದರೆ ಚಾಲಕರು ಪ್ರತಿ ಸೀಟಿಗೆ 4,000 ರೂ.ಗಳನ್ನು ಕೇಳುತ್ತಿದ್ದರು" ಎಂದು ಹೇಳಿದರು.

ಇದರಿಂದಾಗಿ ಕೊನೆಗೆ ಬಿಮ್ಲೇಶ್ ಜೈಸ್ವಾಲ್ ಗೆ ಸ್ಕೂಟರ್ ಸವಾರಿ ಆಯ್ಕೆಯೊಂದೇ ಉಳಿಯಿತು. ನಾನು ಮೇ 15ರಂದು ಮುಂಬೈ-ನಾಸಿಕ್ ಹೆದ್ದಾರಿಯ ಖರೆಗಾಂವ್ ಟೋಲ್ ನಾಕಾದಲ್ಲಿ ಬಿಮ್ಲೇಶ್ ಅವರನ್ನು ಭೇಟಿಯಾದಾಗ, ಅವರ ಕುಟುಂಬವು 1,200 ಕಿಲೋಮೀಟರ್‌ಗಳಲ್ಲಿ 40 ಕಿ.ಮಿವರೆಗೆ ಪ್ರಯಾಣಿಸಿತ್ತು. ಅವರು ವಿಶ್ರಾಂತಿ ಪಡೆದುಕೊಳ್ಳಲು ಸ್ಕೂಟರ್ ನ್ನು ಪಕ್ಕಕ್ಕೆ ನಿಲ್ಲಿಸಿದ್ದರು. ಸ್ಕೂಟರ್ ನ ಎರಡು ಬದಿಯಲ್ಲಿ ಚೀಲಗಳು ನೇತಾಡುತ್ತಿದ್ದವು. ಸುನೀತಾ ಸ್ವಲ್ಪ ಮಟ್ಟಿಗೆ ಕಾಲು ನೋವಿನಿಂದ ಚೇತರಿಸಿಕೊಳ್ಳಲು ಇಳಿದಿದ್ದರೆ, ರೂಬಿ ಆಕೆಯ ಪಕ್ಕದಲ್ಲಿಯೇ ಆಡುತ್ತಿದ್ದಳು.

ಬಿಮ್ಲೇಶ್ ಅವರ ಊರುಗೋಲುಗಳು ಸ್ಕೂಟರ್ ಗೆ ಅಂಟಿಕೊಂಡಿದ್ದವು.ಈ ವಿಚಾರವಾಗಿ ಅವರು ಮಾತನಾಡುತ್ತಾ "2012 ರಲ್ಲಿ, ನನಗೆ ಗಂಭೀರ ಬೈಕ್ ಅಪಘಾತ ಸಂಭವಿಸಿತ್ತು, ಆಗ ನಾನು ನನ್ನ ಎಡಗಾಲನ್ನು ಕಳೆದುಕೊಂಡೆ. ಅಂದಿನಿಂದ ನಾನು ಈ ಊರುಗೋಲನ್ನು ಬಳಸುತ್ತಿದ್ದೇನೆ’ ಎಂದು ಅವರು ವಿವರಿಸಿದರು.

ಅಪಘಾತಕ್ಕೆ ನಾಲ್ಕು ವರ್ಷಗಳ ಮೊದಲು ಅಂದರೆ 2008 ರಲ್ಲಿ ಅವರು ಮುಂಬೈಗೆ ಆಗಮಿಸಿದರು, ಮಹಾನಗರಿಯಲ್ಲಿ ಕೆಲಸ ಮಾಡಬೇಕೆನ್ನುವ ಮಹದಾಸೆಯ ಯುವಕನಾಗಿ ಬಿಮ್ಲೇಶ್, ಕಟ್ಟಡ ಕಾರ್ಮಿಕನಾಗಿ ದುಡಿದರು. ಆ ಸಮಯದಲ್ಲಿ ಅವರು ಪ್ರತಿ ತಿಂಗಳಿಗೆ 5,000 ರಿಂದ 6,000 ರೂ.ಗಳನ್ನು ಸಂಪಾದಿಸುತ್ತಿದ್ದರು.

When I met Bimlesh on May 15 at the Kharegaon toll naka, the family had only covered 40 of the 1,200 kilometres
PHOTO • Parth M.N.

ನಾನು ಮೇ 15ರಂದು ಖರೆಗಾಂವ್ ಟೋಲ್ ನಾಕಾದಲ್ಲಿ ಬಿಮ್ಲೇಶ್ ಅವರನ್ನು ಭೇಟಿಯಾದಾಗ, ಅವರ ಕುಟುಂಬವು 1,200 ಕಿಲೋಮೀಟರ್‌ಗಳಲ್ಲಿ 40 ಕೀ.ಮಿವರೆಗೆ ಪ್ರಯಾಣಿಸಿತ್ತು.

ಇದಾದ ನಂತರ ಅವರಿಗೆ ಅಪಘಾತವಾಯಿತು. ಮೋಟಾರ್ ಬೈಕ್ ನಲ್ಲಿ ಸವಾರಿ ಮಾಡುತ್ತಿದ್ದಾಗ ಟ್ರಕ್ ಡಿಕ್ಕಿ ಹೊಡೆದಿದ್ದರಿಂದಾಗಿ ಅವರ ಕಾಲು ಊನವಾಯಿತು. ಇದೆಲ್ಲಾ ಸಂಭವಿಸಿದ್ದು, 2012 ರಲ್ಲಿ.

ಅಂದಿನಿಂದ, ಅವರು ತಮ್ಮ ಗುತ್ತಿಗೆದಾರರಿಗಾಗಿ ಮನೆಗಳಲ್ಲಿ ಧೂಳು ಒರೆಸುವುದರ ಜೊತೆಗೆ ಇತರ ಸಫಾಯಿ ಕೆಲಸವನ್ನು ಮಾಡುತ್ತಿದ್ದಾರೆ.ಇದರಿಂದ ಅವರು ತಿಂಗಳಿಗೆ 3000 ರೂ.ಗಳನ್ನು ಸಂಪಾದಿಸುತ್ತಾರೆ, ಇದು ಸುಮಾರು ಒಂದು ದಶಕದ ಹಿಂದೆ ಸಂಪಾದಿಸುತ್ತಿದ್ದ ವೇತನದ ಅರ್ಧದಷ್ಟಿದೆ.ಲಾಕ್‌ಡೌನ್ ಪ್ರಾರಂಭವಾದಾಗ ಮನೆಗೆಲಸ ಮಾಡುವ ಸುನೀತಾ ಅಷ್ಟೇ ಮೊತ್ತವನ್ನು ಗಳಿಸುತ್ತಿದ್ದರು.ಅವರಿಬ್ಬರ ಒಟ್ಟು ಮಾಸಿಕ ಆದಾಯ 6,000 ರೂ.ಗಳಾಗುತ್ತದೆ.

ಮಗಳು ರೂಬಿ ಜನಿಸಿದ ನಂತರವೂ ಸುನೀತಾ ಕೆಲಸವನ್ನು ಮುಂದುವರಿಸಿದ್ದರು. ಆದರೆ ಮಾರ್ಚ್ 25ರಿಂದ ಯಾವುದೇ ಸಂಪಾದನೆ ಇಲ್ಲ, ಈ ಅವಧಿಯಲ್ಲಿ ಅವರ ಮಾಲೀಕ ಕೂಡ ವೇತನವನ್ನು ನೀಡಿಲ್ಲ. ಮಧ್ಯಪ್ರದೇಶಕ್ಕೆ ಹೊರಡುವವರೆಗೂ, ಅವರ ಕುಟುಂಬವು ಒಂದು ಸಣ್ಣ ಕೋಣೆಯಲ್ಲಿ ವಾಸಿಸುತ್ತಿತ್ತು. ಹೊರಗಿರುವ ಸಾಮಾನ್ಯ ಶೌಚಾಲಯವನ್ನು ಬಳಸುತ್ತಿದ್ದರು- ಇದಕ್ಕಾಗಿ ಅವರು ತಮ್ಮ ತಿಂಗಳ ಗಳಿಕೆಯ ಮೂರನೇ ಒಂದು ಭಾಗವನ್ನು ಬಾಡಿಗೆಗೆ ಪಾವತಿಸುತ್ತಿದ್ದರು.

ಮೇ 15ರಂದು, ನಾವು ಮಾತನಾಡುತ್ತಿದ್ದಂತೆ, ಬಿಮ್ಲೇಶ್ ಸಂಜೆಯ ಸಮಯದಲ್ಲಿ ಶಾಂತವಾಗಿ ಕುಳಿತಿದ್ದರು, ಹೆದ್ದಾರಿಯಲ್ಲಿ ಕಾರ್ಮಿಕರನ್ನು ಹೊತ್ತು ಒಯ್ಯುತ್ತಿರುವ ಟೆಂಪೋಗಳ ಸದ್ದು ಹಾಗೆ ಮುಂದುವರೆದಿತ್ತು, ಲಾಕ್ ಡೌನ್ ಘೋಷಿಸಿದಾಗಿನಿಂದಲೂ, ಮುಂಬೈನಲ್ಲಿರುವ ಲಕ್ಷಾಂತರ ವಲಸೆ ಕಾರ್ಮಿಕರು ವಿವಿಧ ಸಾರಿಗೆ ವ್ಯವಸ್ಥೆಗಳ ಮೂಲಕ ಬಿಹಾರ, ಒಡಿಶಾ, ಉತ್ತರಪ್ರದೇಶ ಮತ್ತು ಇತರೆಡೆಗಳಲ್ಲಿರುವ ತಮ್ಮ ಗ್ರಾಮಗಳಿಗೆ ಮನೆಗೆ ತೆರಳುತ್ತಿದ್ದಾರೆ.ಈ ಅವಧಿಯಲ್ಲಿ ಮುಂಬೈ-ನಾಸಿಕ್ ಹೆದ್ದಾರಿಯಂತೂ ಹೆಚ್ಚು ಕಾರ್ಯಚಟುವಟಿಕೆಯಿಂದ ಕೂಡಿತ್ತು.

ಇದು ಗಂಭೀರವಾದ ರಸ್ತೆ ಅಪಘಾತಗಳಿಗೆ ಸಹ ಸಾಕ್ಷಿಯಾಗಿದೆ,ಅವುಗಳಲ್ಲಿ, ಕಿಕ್ಕಿರಿದ ಲಾರಿಗಳು ದಾರಿಯುದ್ದಕ್ಕೂ ಅಪಘಾತಕ್ಕೀಡಾಗಿ ವಲಸೆ ಕಾರ್ಮಿಕರ ಸಾವಿಗೆ ಕಾರಣವಾಗಿವೆ.ಇದರ ಬಗ್ಗೆ ಬಿಮ್ಲೇಶ್ ಅವರಿಗೆ ತಿಳಿದಿತ್ತು.’ನಾನು ಸುಳ್ಳು ಹೇಳುವುದಿಲ್ಲ, ನನಗೆ ಭಯವಾಗಿದೆ, ಆದರೆ ರಾತ್ರಿ 10ರ ನಂತರ ಸ್ಕೂಟರ್ ಸವಾರಿ ಮಾಡುವುದಿಲ್ಲ ಎಂದು ನಾನು ನಿಮಗೆ ಭರವಸೆ ನೀಡಬಲ್ಲೆ. ನಾನು ಮನೆಗೆ ತಲುಪಿದ ನಂತರ ನಿಮಗೆ ಕರೆ ಮಾಡುತ್ತೇನೆ” ಎಂದು ಅವರು ಹೇಳಿದರು.

ಅವರು ನೀಡಿದ ಭರವಸೆಗಳಲ್ಲಿ ಎರಡನೆಯದನ್ನು ಉಳಿಸಿಕೊಂಡರು. ಮೇ 19ರ ಬೆಳಿಗ್ಗೆ ನನ್ನ ಫೋನ್ ರಿಂಗಾಯಿತು. “ಸರ್ ಜಿ ನಾವು ತಲುಪಿದ್ದೇವೆ” ಎಂದು ಬಿಮ್ಲೇಶ್ ಹೇಳಿದರು.“ನನ್ನ ಹೆತ್ತವರು ನಮ್ಮನ್ನು ನೋಡುವಾಗ ಬಹುತೇಕರು ಕಣ್ಣೀರಿಟ್ಟರು. ಅವರ ಮೊಮ್ಮಗಳನ್ನು ನೋಡಿ ಅವರು ಸಂತೋಷಪಟ್ಟರು” ಎಂದು ಅವರು ತಾವು ತಲುಪಿದ ಬಗೆಯನ್ನು ವಿವರಿಸಿದರು.

On the Mumbai-Nashik highway, Sunita got down to un-cramp a bit, while Ruby played nearby
PHOTO • Parth M.N.

ಮುಂಬೈ-ನಾಸಿಕ್ ಹೆದ್ದಾರಿಯಲ್ಲಿ, ಸುನೀತಾ ಸ್ವಲ್ಪಮಟ್ಟಿಗೆ ವಿಶ್ರಮಿಸಲು ಇಳಿದಿದ್ದರೆ, ರೂಬಿ ಅಲ್ಲೇ ಹತ್ತಿರದಲ್ಲಿ ಆಟವಾಡುತ್ತಿರುವುದನ್ನು ಚಿತ್ರದಲ್ಲಿ ಕಾಣಬಹುದು.

ಅವರು ರಸ್ತೆಯಲ್ಲಿ ಕಳೆದ ನಾಲ್ಕು ಹಗಲು ಮತ್ತು ರಾತ್ರಿಗಳಲ್ಲಿ ಕೇವಲ ಮೂರು ಗಂಟೆಗಳ ಕಾಲ ಮಾತ್ರ ಮಲಗಿದ್ದಾರೆ ಎಂದು ಬಿಮಲೇಶ್ ಹೇಳಿದರು. "ನಾನು ಸ್ಕೂಟರನ್ನು ರಸ್ತೆಯ ಎಡ ಪಥದಲ್ಲಿ ಸ್ಥಿರ ವೇಗದಲ್ಲಿ ಓಡಿಸುತ್ತೇನೆ" ಎಂದು ಅವರು ಹೇಳಿದರು. “ನಾವು ರಾತ್ರಿ 2 ಗಂಟೆಯವರೆಗೆ ಪ್ರಯಾಣಿಸುತ್ತೇವೆ ಮತ್ತೆ ಬೆಳಿಗ್ಗೆ 5 ಗಂಟೆಗೆ ಪುನರಾರಂಭಿಸುತ್ತೇವೆ” ಎಂದು ವಿವರಿಸಿದರು.

ಪ್ರತಿ ರಾತ್ರಿ ಅವರು ಮರದ ಕೆಳಗೆ ಸೂಕ್ತವಾದ ಸ್ಥಳದಲ್ಲಿ ಸ್ವಲ್ಪ ಹೊತ್ತು ಮಲಗುತ್ತಿದ್ದರು.“ನಾವು ಶೀಟ್ ಗಳನ್ನು ತೆಗೆದುಕೊಂಡು ಹೋಗಿದ್ದೆವು ಅವುಗಳನ್ನು ಹರಡಿ ಮಲಗುತ್ತಿದ್ದೆವು” ಎಂದು ಬಿಮಲೇಶ್ ಹೇಳಿದರು.“ನನ್ನ ಹೆಂಡತಿ ಮತ್ತು ನಾನು ಶಾಂತಿಯುತವಾಗಿ ಮಲಗಿದ್ದೆವು ಎಂದು ನಾನು ಭಾವಿಸುವುದಿಲ್ಲ, ಏಕೆಂದರೆ ಸಂಚರಿಸುವ ವಾಹನಗಳು, ನಮ್ಮ ಸಾಮಾನುಗಳು ಮತ್ತು ನಾವು ಸಾಗಿಸುತ್ತಿದ್ದ ಹಣದ ಬಗ್ಗೆ ಯಾವಾಗಲೂ ಎಚ್ಚರಿಕೆಯಿಂದ ಇರಬೇಕಾಗಿತ್ತು" ಎಂದು ಹೇಳಿದರು.

ಆ ಅರ್ಥದಲ್ಲಿ ಅವರ ಪ್ರಯಾಣವು ಸಾಧಾರಣವಾಗಿದ್ದರೂ,ಎಲ್ಲೂ ಅವರ ಕುಟುಂಬವನ್ನು ತಪಾಸಣೆಗಾಗಿ ರಾಜ್ಯದ ಗಡಿಯಲ್ಲಿ ನಿಲ್ಲಿಸಲಿಲ್ಲ.

ಇದರಲ್ಲಿ ಅತಿ ಗಮನಾರ್ಹ ಸಂಗತಿಯೆಂದರೆ, ಗೇರ್ ಇಲ್ಲದ ಬಿಮ್ಲೇಶ್ ಅವರ ದ್ವಿಚಕ್ರ ವಾಹನ, ಇದನ್ನು ಸಾಮಾನ್ಯವಾಗಿ ನಗರ-ಪಟ್ಟಣದಲ್ಲಿ ಇದನ್ನು ಅಲ್ಪದೂರದ ಪ್ರಯಾಣಕ್ಕಾಗಿ ಬಳಸಲಾಗುತ್ತದೆ. ಆದರೆ ಇಲ್ಲಿ ನಾಲ್ಕು ದಿನಗಳ ತಡೆರಹಿತವಾಗಿ ಬಳಸಿದರೂ ಕೂಡ ಅದಕ್ಕೆ ಯಾವುದೇ ಸಮಸ್ಯೆ ಇಲ್ಲದೆ ಸರಾಗವಾಗಿ ಕಾರ್ಯನಿರ್ವಹಿಸಿದೆ.

ಅವರು ಇಂಧನ ಮತ್ತು ಆಹಾರಕ್ಕಾಗಿ 2,500 ರೂ.ಗಳನ್ನು ತಮ್ಮ ಬಳಿ ಇಟ್ಟುಕೊಂಡಿದ್ದರು. "ಕೆಲವು ಪೆಟ್ರೋಲ್ ಪಂಪ್‌ಗಳು ತೆರೆದಿದ್ದವು, ಆದ್ದರಿಂದ ದಾರಿ ಮಧ್ಯೆದಲ್ಲಿ ಸಿಕ್ಕಾಗ ನಾವು ಟ್ಯಾಂಕ್ ನ್ನು ತುಂಬಿಸುತ್ತಿದ್ದೆವು” ಎಂದು ಅವರು ಹೇಳಿದರು. "ನಾವು ನಮ್ಮ ಮಗಳ ಬಗ್ಗೆ ಚಿಂತೆ ಮಾಡುತ್ತಿದ್ದೆವು. ಆದರೆ ರೂಬಿ ಸ್ಕೂಟರ್‌ನಲ್ಲಿ ಶಾಖ ಮತ್ತು ಬಿಸಿ ಗಾಳಿಯನ್ನು ಧೈರ್ಯದಿಂದ ಸಹಿಸಿಕೊಂಡಳು. ನಾವು ಅವಳಿಗೆ ಸಾಕಷ್ಟು ಆಹಾರವನ್ನು ಒಯ್ಯುತ್ತಿದ್ದೆವು, ಮತ್ತು ರಸ್ತೆಯ ಉದ್ದಕ್ಕೂ ಒಳ್ಳೆಯ ಜನರು ಸಹ ಅವಳಿಗೆ ಬಿಸ್ಕತ್ತುಗಳನ್ನು ನೀಡಿದರು." ಎಂದು ಹೇಳಿದರು.

ಕಳೆದ ಒಂದು ದಶಕದಿಂದ ಮುಂಬೈ ಬಿಮ್ಲೇಶ್ ಅವರ ಮನೆಯಾಗಿತ್ತು. ಅಥವಾ ಅವರು ಲಾಕ್ ಡೌನ್ ತನಕ ಹಾಗೆ ಯೋಚಿಸಿದ್ದರು ಅನಿಸುತ್ತೆ. “ಕಳೆದ ಕೆಲವು ವಾರಗಳಿಂದ ನಾನು ಅಸುರಕ್ಷಿತ ಭಾವನೆ ಹೊಂದಿದ್ದೇನೆ.ಬಿಕ್ಕಟ್ಟಿನ ಸಮಯದಲ್ಲಿ, ನಿಮ್ಮ ಕುಟುಂಬದೊಂದಿಗೆ ಇರಲು ನೀವು ಬಯಸುತ್ತೀರಿ. ನಿಮ್ಮ ಸ್ವಂತ ಜನರಿಂದ ಸುತ್ತುವರಿಯಲು ಬಯಸುತ್ತೀರಿ. ಊರಲ್ಲಿ ಕೆಲಸವಿಲ್ಲ ಎಂದು ನಾನು ಮುಂಬೈಗೆ ಬಂದಿದ್ದೆ. ಈಗ ಅದೇ ಪರಿಸ್ಥಿತಿ ಊರಲ್ಲಿ ಇನ್ನೂ ಇದೆ" ಎಂದು ಹೇಳಿದರು.

ಅವರು ಹಿನೌತಿಯಲ್ಲಿ ಯಾವುದೇ ಕೃಷಿಭೂಮಿಯನ್ನು ಹೊಂದಿಲ್ಲ. ಕುಟುಂಬದ ಆದಾಯವು ದಿನದ ದುಡಿಮೆಯಿಂದ ಬರುತ್ತದೆ."ನೀವು ಶ್ರಮವನ್ನು ವಹಿಸುತ್ತೀರಿ ಎಂದರೆ, ನೀವು ಅದನ್ನು ಸ್ಥಿರವಾಗಿ ಕಂಡುಕೊಳ್ಳುವ ಸ್ಥಳದಲ್ಲಿಯೂ ಸಹ ಇದನ್ನು ಮಾಡಬಹುದು" ಎಂದು ಅವರು ಹೇಳುತ್ತಾರೆ. "ಎಲ್ಲವೂ ನೆಲೆಗೊಂಡ ನಂತರ ನಾನು ಮುಂಬೈಗೆ ಹಿಂತಿರುಗಬೇಕಾಗಿದೆ. ಹೆಚ್ಚಿನ ವಲಸೆ ಕಾರ್ಮಿಕರು ನಗರಗಳಿಗೆ ಬರುವುದು ನಗರಗಳಲ್ಲಿ ಬದುಕಬೇಕೆನ್ನುವ ಆಸೆಯಿಂದಲ್ಲ, ಅವರಿಗೆ ತಮ್ಮ ಹಳ್ಳಿಗಳಲ್ಲಿ ಯಾವುದೇ ಆಯ್ಕೆಗಳಿಲ್ಲ" ಎಂದು ಅವರು ಹೇಳುತ್ತಿದ್ದರು.

ಅನುವಾದ - ಎನ್ . ಮಂಜುನಾಥ್

Parth M.N.

Parth M.N. is a 2017 PARI Fellow and an independent journalist reporting for various news websites. He loves cricket and travelling.

Other stories by Parth M.N.
Translator : N. Manjunath