“ಎಲ್ಲರೂ ಅದನ್ನೇ ಮಾಡುತ್ತಿದ್ದು ನಾವೂ ಸಹ ಹಾಗೆಯೇ ಮಾಡುತ್ತಿದ್ದೇವೆ”, ಎನ್ನುತ್ತಾರೆ ರೂಪ ಪಿರಿಕಕ.

ಅನುವಂಶಿಕವಾಗಿ ಮಾರ್ಪಡಿಸಲಾದ (ಜಿ.ಎಂ) ಬಿಟಿ ಹತ್ತಿಯ ಬೀಜಗಳು ಸ್ಥಳೀಯ ಮಾರುಕಟ್ಟೆಗಳಲ್ಲಿ ಅಥವ ರೈತರ ಸ್ವಂತ ಗ್ರಾಮಗಳಲ್ಲಿ ಈಗ ಸುಲಭವಾಗಿ ದೊರೆಯುತ್ತಿವೆ. ಈಕೆಯಂತೆಯೇ ಎಣಿಕೆಗೆ ನಿಲುಕದಷ್ಟು ರೈತರು ಒಡಿಶಾ ರಾಯಗಡ ಜಿಲ್ಲೆಯ ಸುತ್ತಲಿನ ಇತರೆ ಗ್ರಾಮಗಳಲ್ಲಿ ಈ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ.

"ಅವರ ಕೈಗೆ ದುಡ್ಡು ಸಿಗುತ್ತಿದೆ", ಎನ್ನುತ್ತಾರೆ ಆಕೆ.

40 ರ ಪಿರಿಕಕ ಕೊಂಧ್ ಆದಿವಾಸಿ ರೈತ ಮಹಿಳೆ. ಸುಮಾರು ಎರಡು ದಶಕಗಳಿಂದಲೂ ಪ್ರತಿ ವರ್ಷ ಆಕೆಯು ದೊಂಗರ್ ಛಾಸ್ ಎಂಬ ಪರ್ವತೀಯ ಕೃಷಿಯನ್ನು (ಸ್ಥಳಾಂತರ ಬೇಸಾಯ) ಕೈಗೊಳ್ಳಲು ಬೆಟ್ಟದಲ್ಲಿ ಇಳಿಜಾರನ್ನು ನಿರ್ಮಿಸುತ್ತಾರೆ. ಶತಮಾನಗಳಿಂದಲೂ ಸದರಿ ಪ್ರದೇಶದಲ್ಲಿನ ರೈತರು ಪಾಲಿಸಿಕೊಂಡು ಬಂದ ಸಂಪ್ರದಾಯದಂತೆ, ಪಿರಿಕಕ ಹಿಂದಿನ ವರ್ಷದ ಫಸಲಿನಲ್ಲಿ ಉಳಿಸಿದ ಬೀಜಗಳನ್ನು ಜಮೀನಿನ ತುಂಡು ನೆಲದಲ್ಲಿ ಬಿತ್ತನೆ ಮಾಡುತ್ತಾರೆ. ಇದರಿಂದ ಗೂಡೆಯ ತುಂಬ ಮಂಡಿಯ, ಕಂಗು, ಬಟಾಣಿ, ಉದ್ದು, ಸಾಂಪ್ರದಾಯಿಕ ಪ್ರಕಾರಗಳಾದ ಉದ್ದನೆಯ ಹುರುಳಿ, ಹುಚ್ಚೆಳ್ಳು, ಎಳ್ಳು ಮುಂತಾದ ಆಹಾರದ ಬೆಳೆಗಳು ದೊರೆಯುತ್ತವೆ.

ಈ ಜುಲೈನಲ್ಲಿ ಮೊದಲ ಬಾರಿ ಪಿರಿಕಕ ಬಿಟಿ ಹತ್ತಿಯ ಕೃಷಿಯಲ್ಲಿ ತೊಡಗಿದರು. ಬಿಶಮಕಟಕ್ ವಿಭಾಗದ ತನ್ನ ಗ್ರಾಮದಲ್ಲಿ ಬೆಟ್ಟದ ಇಳಿಜಾರಿನಲ್ಲಿ ರಾಸಾಯನಿಕಗಳಿಂದ ತೋಯಿಸಲ್ಪಟ್ಟ ಕಡು ಗುಲಾಬಿ ಬಣ್ಣದ ಬೀಜಗಳನ್ನು ಬಿತ್ತುವ ಸಂದರ್ಭದಲ್ಲಿ ಆಕೆಯನ್ನು ನಾವು ಭೇಟಿಯಾದೆವು. ಆದಿವಾಸಿಗಳ ಸ್ಥಳಾಂತರ ಬೇಸಾಯದ ಪರಂಪರೆಯಲ್ಲಿ ಹತ್ತಿಯ ಈ ಆಕ್ರಮಣವು ಗಮನಾರ್ಹವಾಗಿದ್ದು ಈ ಹಠಾತ್ ಬದಲಾವಣೆಯ ಬಗ್ಗೆ ನಾವು ಆಕೆಯನ್ನು ವಿಚಾರಿಸಿದೆವು.

"ಅರಿಶಿನದಂತಹ ಇತರೆ ಬೆಳೆಗಳೂ ಹಣವನ್ನು ತರುತ್ತವೆಯಾದರೂ ಯಾರೂ ಅವನ್ನು ಬೆಳೆಯುತ್ತಿಲ್ಲ. ಎಲ್ಲರೂ ಆಹಾರ ಧಾನ್ಯಗಳ ಕೃಷಿಯನ್ನು ತ್ಯಜಿಸಿ ಹತ್ತಿಯನ್ನು ಹಿಂಬಾಲಿಸುತ್ತಿದ್ದಾರೆ", ಎಂದರು ಪಿರಿಕಕ.

ಕೇವಲ 16 ವರ್ಷಗಳಲ್ಲಿ ರಾಯಗಡ ಜಿಲ್ಲೆಯಲ್ಲಿ ಹತ್ತಿಯ ಕೃಷಿಯನ್ನು ಕೈಗೊಳ್ಳಲಾದ ಪ್ರದೇಶದ ವ್ಯಾಪ್ತಿ ಶೇ. 5,200 ಕ್ಕಿಂತಲೂ ಹೆಚ್ಚಾಗಿದೆ. ಸರ್ಕಾರಿ ದತ್ತಾಂಶದ ಪ್ರಕಾರ 2002-03 ರಲ್ಲಿ ಕೇವಲ 1,631 ಎಕರೆ ಪ್ರದೇಶದಲ್ಲಿ ಮಾತ್ರವೇ ಹತ್ತಿಯ ಕೃಷಿಯನ್ನು ಕೈಗೊಳ್ಳಲಾಗಿದೆ. ಜಿಲ್ಲಾ ವ್ಯವಸಾಯ ಕಛೇರಿಯ ಪ್ರಕಾರ 2018-19 ರಲ್ಲಿ ಇದರ ಪ್ರಮಾಣ 86,907 ಎಕರೆಗಳಷ್ಟಿದೆ.

ಸುಮಾರು 1 ಮಿಲಿಯನ್ ಜನಸಂಖ್ಯೆಯ ರಾಯಗಡವು ಕೊರಾಪುಟ್ ಪ್ರದೇಶದ ಒಂದು ಭಾಗವಾಗಿದೆ. ಇದು ಪ್ರಪಂಚದ ಬೃಹತ್ ಜೀವವೈವಿಧ್ಯವನ್ನುಳ್ಳ ಸಂವೇದನಾಶೀಲ ಹಾಗೂ ಅಕ್ಕಿಯ ವಿವಿಧ ಪ್ರಕಾರಗಳನ್ನುಳ್ಳ ಐತಿಹಾಸಿಕ ಪ್ರದೇಶವಾಗಿದೆ. ಸೆಂಟ್ರಲ್ ರೈಸ್ ರಿಸರ್ಚ್ ಇನ್‍ಸ್ಟಿಟ್ಯೂಟ್‍ ನ 1959 ರ ಸಮೀಕ್ಷೆಯು ಸದರಿ ಪ್ರದೇಶದಲ್ಲಿ ಆ ಸಮಯದಲ್ಲಿನ್ನೂ 1,700 ಅಕ್ಕಿಯ ಪ್ರಕಾರಗಳಿವೆಯೆಂಬುದಾಗಿ ತಿಳಿಸುತ್ತದೆ. ಈಗ ಅದು ಸುಮಾರು 200 ಕ್ಕೆ ಕ್ಷೀಣಿಸಿದೆ. ಕೆಲವು ಸಂಶೋಧಕರು ಅಕ್ಕಿಯ ಬೇಸಾಯದ ಜನ್ಮಭೂಮಿಯೆಂಬುದಾಗಿ ಇದನ್ನು ಪರಿಗಣಿಸಿದ್ದಾರೆ.

Adivasi farmers are taking to GM cotton, as seen on this farm in the Niyamgiri mountains.
PHOTO • Chitrangada Choudhury
But many are reluctant to entirely abandon their indigenous food crops, such as pigeon pea. They sow this interspersed with cotton, thus feeding agri-chemicals meant for the cotton plants to their entire farm.
PHOTO • Chitrangada Choudhury

ಅನೇಕರಿಗೆ ಬಟಾಣಿ (ಬಿಳಿಯ ಬಟ್ಟಲಿನಲ್ಲಿರುವ ಕಾಳುಗಳು) ಮುಂತಾದ ಸ್ಥಳಜನ್ಯ ಆಹಾರದ ಬೆಳೆಗಳನ್ನು ತೊರೆಯಲು ಮನಸ್ಸಿಲ್ಲದಾಗ್ಯೂ, ನಿಯಮ್‍ ಗಿರಿ ಪರ್ವತಗಳಲ್ಲಿನ ಆದಿವಾಸಿ ರೈತರು (ಎಡಕ್ಕೆ) ಜಿಎಂ ಹತ್ತಿಯ (ನಸುಗೆಂಪು ಬಣ್ಣದ ಇದರ ಬೀಜಗಳು ಬಲಭಾಗಲ್ಲಿನ ಡಬ್ಬದಲ್ಲಿದೆ) ಕೃಷಿಯನ್ನು ಕೈಗೊಳ್ಳುತ್ತಿದ್ದಾರೆ. ಹತ್ತಿಯ ಮಧ್ಯೆ ಅವನ್ನು ಅಲ್ಲಲ್ಲಿ ಚೆಲ್ಲಲಾಗುತ್ತದೆ. ಹತ್ತಿ ಗಿಡಗಳಿಗೆ ಸಂಬಂಧಿಸಿದ ರಾಸಾಯನಿಕಗಳು ಇಡೀ ಹೊಲದಲ್ಲಿ ತೊಟ್ಟಿಕ್ಕತೊಡಗುತ್ತವೆ.

ತಮ್ಮ ಜೀವನೋಪಾಯಕ್ಕಾಗಿ ಕೃಷಿಯನ್ನು ಅವಲಂಬಿಸಿರುವ ಕೊಂಧ್ ಆದಿವಾಸಿ ರೈತರು ತಮ್ಮ ನುರಿತ ಅರಣ್ಯ ಮಾದರಿಯ ಕೃಷಿ ಪದ್ಧತಿಗಳಿಂದಾಗಿ ಬಹಳ ಪ್ರಸಿದ್ಧರಾಗಿದ್ದಾರೆ. ಇಂದಿಗೂ ಈ ಪ್ರದೇಶದ ಸುತ್ತಲಿನ ಹಚ್ಚ ಹಸಿರಿನ ಹೊಲಗಳು ಮತ್ತು ಪರ್ವತಗಳಲ್ಲಿನ ಹೊಲಗಳಲ್ಲಿನ ಅನೇಕ ಕೊಂಧ ಕುಟುಂಬಗಳು ದಿಗ್ಭ್ರಾಂತಗೊಳಿಸುವಷ್ಟು ವ್ಯವಸ್ಥಿತವಾಗಿ ಭತ್ತ, ಆಹಾರ ಧಾನ್ಯಗಳು, ಕಾಳುಗಳು ಮತ್ತು ತರಕಾರಿಗಳ ವ್ಯವಸಾಯವನ್ನು ಕೈಗೊಳ್ಳುತ್ತವೆ. ರಾಯಗಡದ ಲಿವಿಂಗ್ ಫಾರ್ಮ್ಸ್ ಎಂಬ ಲಾಭ-ನಿರಪೇಕ್ಷ ಸಂಸ್ಥೆಯ ಸಮೀಕ್ಷೆಗಳು ಇತ್ತೀಚೆಗೆ 36 ಆಹಾರ ಧಾನ್ಯಗಳ ಪ್ರಕಾರಗಳು ಮತ್ತು 250 ಅರಣ್ಯ ಖಾದ್ಯಗಳನ್ನು ದಾಖಲಿಸಿವೆ.

ಬಹುತೇಕ ಆದಿವಾಸಿ ರೈತರು ಒಂದರಿಂದ ಐದು ಎಕರೆಗಳ ವ್ಯಾಪ್ತಿಯ ಏಕೈಕ ವ್ಯಕ್ತಿಯ ಅಥವ ಸಾಮೂಹಿಕ ಒಡೆತನದ ಹೊಲಗಳಲ್ಲಿ ದುಡಿಯುತ್ತಾರೆ.

ಸೂಕ್ತವಾಗಿ ಪೋಷಿಸಲಾದ ಬೀಜಗಳನ್ನು ಸಮುದಾಯದಲ್ಲಿ ಆಂತರಿಕವಾಗಿ ಹಂಚಿಕೊಳ್ಳಲಾಗುತ್ತದೆ. ಯಾವುದೇ ಕೃತಕ ಗೊಬ್ಬರಗಳು ಅಥವ ಇತರೆ ಕೃಷಿ ಸಂಬಂಧಿತ ರಾಸಾಯನಿಕಗಳನ್ನು (ಆಗ್ರೊ-ರಾಸಾಯನಿಕಗಳು ಎಂತಲೂ ಇವನ್ನು ಕರೆಯುತ್ತಾರೆ) ಬಳಸುವುದಿಲ್ಲ.

ಆದಾಗ್ಯೂ ರಾಯಗಡದಲ್ಲಿ ಭತ್ತದ ನಂತರದಲ್ಲಿ ಪ್ರಧಾನ ಸಾಂಪ್ರದಾಯಿಕ ಆಹಾರ ಬೆಳೆಗಳಾದ ಧಾನ್ಯಗಳಿಗೆ ಸಡ್ಡುಹೊಡೆದು ನಿಂತ ಹತ್ತಿಯು ಅಲ್ಲಿನ ಎರಡನೆಯು ಪ್ರಮುಖ ಬೆಳೆಯಾಗಿದೆ. ಈ ಜಿಲ್ಲೆಯಲ್ಲಿನ 428,947 ಎಕರೆಗಳಲ್ಲಿ ಕೈಗೊಳ್ಳಲಾದ ಕೃಷಿಯಲ್ಲಿ ಇದರ ಪ್ರಮಾಣ ಐದನೇ ಒಂದು ಭಾಗದಷ್ಟಿದೆ. ಹತ್ತಿಯ ಈ ತ್ವರಿತಗತಿಯ ವಿಸ್ತರಣೆಯು ಈ ಭೂಮಿಯನ್ನು ಹಾಗೂ ಜನರ ಕೃಷಿ ಸಂಬಂಧಿತ ಪರಿಸರವನ್ನು ಕುರಿತ ತಿಳುವಳಿಕೆಯನ್ನು ಪುನರ್‍ರೂಪಿಸುತ್ತಿದೆ.

ಭಾರತದ ಒಟ್ಟಾರೆ ಕೃಷಿನಿರತ ಭೂಮಿಯ ಶೇ. 5 ರಷ್ಟು ಭಾಗವನ್ನು ಹತ್ತಿಯು ಆವರಿಸಿದೆಯಾದರೂ ರಾಷ್ಟ್ರೀಯ ಮಟ್ಟದಲ್ಲಿ ಬಳಕೆಯಾಗುತ್ತಿರುವ ಒಟ್ಟಾರೆ ಕ್ರಿಮಿನಾಶಕಗಳು, ಸಸ್ಯನಾಶಕಗಳು ಮತ್ತು ಬೂಷ್ಟುನಾಶಕಗಳ ಒಟ್ಟಾರೆ ಪ್ರಮಾಣದಲ್ಲಿ ಇದರ ಪಾಲು ಶೇ. 36 ರಿಂದ 50 ರಷ್ಟಿದೆ. ಅಲ್ಲದೆ ಭಾರತದಾದ್ಯಂತ ರೈತರ ಆತ್ಮಹತ್ಯೆಗಳು ಮತ್ತು ಋಣಗ್ರಸ್ತತೆಯ ಮಹತ್ತರ ಕಾರಣಗಳಲ್ಲಿ ಇದೂ ಒಂದು.

ಇಲ್ಲಿನ ಘಟನಾವಳಿಗಳು 1998-2002 ರ ನಡುವಿನ ವಿದರ್ಭಾದಲ್ಲಿನ ಸಂದರ್ಭವನ್ನು ನೆನಪಿಸುತ್ತದೆ. ಈ ಬೀಜಗಳು ಅದ್ಭುತವಾದವು (ನಂತರದಲ್ಲಿ ಕಾನೂನುಬಾಹಿರವೆಂದು ಪರಿಗಣಿಸಲ್ಪಟ್ಟವು) ಎಂಬ ಗ್ರಹಿಕೆಯ ನಿಟ್ಟಿನ ಪ್ರಾರಂಭದ ಸಡಗರ, ಅಧಿಕ ಲಾಭದ ಕನಸು ನಂತರದಲ್ಲಿ ನೀರನ್ನು ಅಪಾರವಾಗಿ ಕಬಳಿಸುವ ಇದರ ಸ್ವರೂಪ, ಖರ್ಚು ಹಾಗೂ ಸಾಲದಲ್ಲಿನ ಅತೀವ ಹೆಚ್ಚಳ ಹಾಗೂ ಇನ್ನಿತರೆ ಪರಿಸರ ಸಂಬಂಧಿತ ಒತ್ತಡಗಳನ್ನು ಇಲ್ಲಿ ನೆನೆಸಿಕೊಳ್ಳಬಹುದು. ಸುಮಾರು ಒಂದು ದಶಕದವರೆಗೂ ವಿದರ್ಭವು ದೇಶದಲ್ಲಿನ ರೈತರ ಆತ್ಮಹತ್ಯೆಯ ಕೇಂದ್ರಸ್ಥಾನವಾಗಿ ಮಾರ್ಪಟ್ಟಿತ್ತು. ಈ ರೈತರಲ್ಲಿ ಬಹುತೇಕರು ಬಿಟಿ ಹತ್ತಿಯ ಕೃಷಿಕರಾಗಿದ್ದರು.

*******

ನಾವು ನಿಂತಿರುವ ಅಂಗಡಿಯ ಮಾಲೀಕ, ಕೊಂಧ್‍ನ 24 ರ ಯುವಕ ಚಂದ್ರ ಕುದ್ರುಕ (ಹೆಸರು ಬದಲಾಯಿಸಿದೆ). ಹೋಟೆಲ್ ಮ್ಯಾನೇಜ್‍ಮೆಂಟ್ ಪದವಿಯ ತರುವಾಯ ಭುವನೇಶ್ವರ್ ನಿಂದ ಹಿಂತಿರುಗಿ, ಈ ಜೂನ್‍ ನಲ್ಲಿ ನಿಯಮ್‍ಗಿರಿ ಪರ್ವತಗಳಲ್ಲಿನ ತನ್ನ ಜಿಲ್ಲೆ ರುಕಗುಡದಲ್ಲಿ (ಹೆಸರು ಬದಲಿಸಿದೆ) ಈ ಅಂಗಡಿಯನ್ನು ಸ್ಥಾಪಿಸಿದರು. ಆಲೂಗೆಡ್ಡೆ, ಈರುಳ್ಳಿ, ಕರಿದ ತಿಂಡಿಗಳು, ಸಿಹಿತಿಂಡಿಗಳನ್ನು ಹೊಂದಿದ್ದ ಆ ಅಂಗಡಿಯು ಇತರೆ ಅಂಗಡಿಗಳ ರೀತಿಯೇ ಕಾಣುತ್ತಿತ್ತು.

ಗಲ್ಲಾದ ಕೆಳಗೆ ಕೌಂಟರಿನಲ್ಲಿ ಒಟ್ಟಲಾಗಿದ್ದು ಅತ್ಯಂತ ಹೆಚ್ಚು ಮಾರಾಟವಾಗುತ್ತಿದ್ದ ವಸ್ತುವಿನ ಹೊರತಾಗಿ ಎಲ್ಲವೂ ಮಾಮೂಲಿನಂತಿತ್ತು. ಹೊಳಪು ಮೈಯ ದೊಡ್ಡ ಚೀಲದಲ್ಲಿ ಹತ್ತಿಯ ಬೀಜಗಳಿದ್ದ ಹಲವು ಬಣ್ಣಗಳ ಪೊಟ್ಟಣಗಳಿದ್ದವು. ಅನೇಕ ಪೊಟ್ಟಣಗಳ ಮೇಲೆ 2,000 ನೋಟಿನ ಹಾಗೂ ಸಂತೋಷದಿಂದಿರುವ ರೈತರ ಚಿತ್ರಗಳನ್ನು ಮುದ್ರಿಸಲಾಗಿತ್ತು.

ಕುದ್ರುಕ ಅವರ ಅಂಗಡಿಯ ಬಹಳಷ್ಟು ಬೀಜದ ಪೊಟ್ಟಣಗಳು ಕಾನೂನುಬಾಹಿರ ಹಾಗೂ ಅನಧಿಕೃತ. ಕೆಲವು ಪೊಟ್ಟಣಗಳಲ್ಲಿ ಗುರುತು ಪಟ್ಟಿಯೂ (ಲೇಬಲ್) ಇರಲಿಲ್ಲ. ಅನೇಕ ಪೊಟ್ಟಣಗಳು ಒಡಿಶಾದಲ್ಲಿನ ಮಾರಾಟಕ್ಕೆ ಅಂಗೀಕೃತಗೊಂಡಿರಲಿಲ್ಲ. ಅಲ್ಲದೆ ಆತನ ಅಂಗಡಿಯು ಬೀಜಗಳ ಮಾರಾಟ ಮತ್ತು ಕೃಷಿ ಸಂಬಂಧಿತ ರಾಸಾಯನಿಕಗಳ ಮಾರಾಟಕ್ಕೆ ಪರವಾನಗಿಯನ್ನು ಪಡೆದಿರಲಿಲ್ಲ.

ಈ ಬೀಜಗಳೊಂದಿಗೆ ಹಸಿರು ಮತ್ತು ಕೆಂಪು ಶೀಷೆಗಳಲ್ಲಿ ವಿವಾದಿತ ಸಸ್ಯನಾಶಕವಾದ ಗ್ಲೈಫೊಸೆಟ್‍ ಅನ್ನೂ ಇಡಲಾಗಿತ್ತು. 2015 ರ ವಿಶ್ವ ಆರೋಗ್ಯ ಸಂಸ್ಥೆಯ ವರದಿಯು (ನಂತರದಲ್ಲಿ ಕೈಗಾರಿಕೆಗಳ ಒತ್ತಡದಿಂದಾಗಿ ಇದನ್ನು ಅಲ್ಲಗಳೆಯಲಾಯಿತು) ಗ್ಲೈಫೊಸೆಟ್‍ ಅನ್ನು ‘ಬಹುಶಃ ಮನುಷ್ಯರ ಕ್ಯಾನ್ಸರ್ ಕಾರಕ’ ವೆಂಬುದಾಗಿ ತಿಳಿಸುತ್ತದೆ. ಪಂಜಾಬ್, ಕೇರಳ ರಾಜ್ಯಗಳಲ್ಲಿ ಇದನ್ನು ನಿಷೇಧಿಸಿದ್ದು ಪಕ್ಕದ ಆಂಧ್ರಪ್ರದೇಶದಲ್ಲಿ ಇದು ನಿರ್ಬಂಧಿಸಲ್ಪಟ್ಟಿದೆ. ಪ್ರಸ್ತುತ ತನ್ನ ಜನ್ಮಸ್ಥಳವಾದ ಅಮೆರಿಕದಲ್ಲಿ ಕ್ಯಾನ್ಸರ್ ರೋಗಿಗಳು ದಾಖಲಿಸಿದ ಬಹು ಮಿಲಿಯನ್ ಡಾಲರ್‍ ಗಳ ಮೊಕದ್ದಮೆಯನ್ನು ಇದು ಎದುರಿಸುತ್ತಿದೆ.

In Kaliponga village, farmer Ramdas sows BT and HT cotton, days after dousing their lands with glyphosate, a broad spectrum herbicide
PHOTO • Chitrangada Choudhury
In Kaliponga village, Ramdas' wife Ratnamani sows BT and HT cotton, days after dousing their lands with glyphosate, a broad spectrum herbicide
PHOTO • Chitrangada Choudhury

ಕಲಿಪೊಂಗ ಗ್ರಾಮದಲ್ಲಿ, ರೈತ ರಾಮ್‍ದಾಸ್ ಹಾಗೂ ಆತನ ಪತ್ನಿ ರತ್ನಮಣಿ ತಮ್ಮ ಜಮೀನನ್ನು, ವ್ಯಾಪಕ ಸಸ್ಯನಾಶಕವಾದ ಗ್ಲೈಫೊಸೆಟ್‍ನಿಂದ ತೋಯಿಸಿದ ಮರುದಿನವೇ ಬಿಟಿ ಮತ್ತು ಹೆಚ್‍ಟಿ ಹತ್ತಿಯ ಬೀಜಗಳನ್ನು ಬಿತ್ತುತ್ತಿದ್ದಾರೆ.

ರಾಯಗಡದ ರೈತರಿಗೆ ಇದೆಲ್ಲವೂ ತಿಳಿದಿಲ್ಲ. ಅಕ್ಷರಶಃ ‘ಹುಲ್ಲಿನ ಕೊಲೆಗಡುಕ’ ವೆಂದು ಉಲ್ಲೇಖಿಸಲ್ಪಟ್ಟ ಗ್ಲೈಫೊಸೆಟ್ ಅವರ ಜಮೀನಿನ ಕಳೆಗಿಡಗಳನ್ನು ತ್ವರಿತವಾಗಿ ನಾಶಮಾಡುತ್ತದೆಂದು ತಿಳಿಸಿ, ಅದನ್ನು ಅವರಿಗೆ ಮಾರಲಾಗಿದೆ. ಆದರೆ ಅದು ವಿಶಾಲ ವ್ಯಾಪ್ತಿಯನ್ನುಳ್ಳ ಸಸ್ಯನಾಶಕವಾಗಿದೆ. ಇದನ್ನು ಪ್ರತಿರೋಧಿಸುವ ಸಲುವಾಗಿ ವಂಶವಾಹಿಗಳನ್ನು ಮಾರ್ಪಡಿಸಲಾದ ಸಸ್ಯಗಳ ಹೊರತಾಗಿ ಉಳೆದೆಲ್ಲವನ್ನೂ ಅದು ನಾಶಮಾಡುತ್ತದೆ. ಕುದ್ರುಕ ಅವರೂ ಸಹ ಪ್ರಸನ್ನಚಿತ್ತದಿಂದ ಗ್ಲೈಫೊಸೆಟ್ ಸಿಂಪಡಿಕೆಯ ಹೊರತಾಗಿಯೂ ಬದುಕುಳಿಯಬಲ್ಲ ಹತ್ತಿಯ ಬೀಜಗಳನ್ನು ತೋರಿಸಿದರು. ಇಂತಹ ‘ಸಸ್ಯನಾಶಕ ಸಹಿಷ್ಣುಗಳನ್ನು’ ಅಥವ ‘ಹೆಚ್‍ಟಿ ಬೀಜಗಳನ್ನು’ ಭಾರತದಲ್ಲಿ ನಿಷೇಧಿಸಲಾಗಿದೆ.

ಕಳೆದ ಹದಿನೈದು ದಿನಗಳಲ್ಲಿ ಕುದ್ರುಕರವರು ಈಗಾಗಲೇ 150 ಬೀಜದ ಪೊಟ್ಟಣಗಳನ್ನು ಮಾರಿದ್ದಾರೆ. "ಇನ್ನೂ ಕೆಲವನ್ನು ನಾನು ವ್ಯವಸ್ಥೆ ಮಾಡಿದ್ದು, ನಾಳೆ ಅವು ಇಲ್ಲಿಗೆ ತಲುಪುತ್ತವೆ", ಎಂದು ಅವರು ತಿಳಿಸಿದರು.

ಇವರು ವ್ಯಾಪಾರವು ಜೋರುಗತಿಯಲ್ಲಿ ಸಾಗಿರುವಂತಿದೆ.

ಈ ಜಿಲ್ಲೆಯಲ್ಲಿನ ಕೃಷಿಯನ್ನು ಗಮನಿಸುತ್ತಿರುವ ಅಧಿಕಾರಿಯೊಬ್ಬರು "ಸುಮಾರು ಶೇ. 99.9 ರಷ್ಟು ರಾಯಗಡದ ಹತ್ತಿಯು ಬಿಟಿ ಹತ್ತಿಯೇ ಹೌದು. ಬಿಟಿ ಬೀಜಗಳಲ್ಲದ ಹತ್ತಿ ಬೀಜಗಳು ದೊರೆಯುತ್ತಲೇ ಇಲ್ಲ", ಎಂದು ಅನಧಿಕೃತವಾಗಿ ತಿಳಿಸಿದರು. ಅಧಿಕೃತವಾಗಿ ಒಡಿಶಾದಲ್ಲಿ ಬಿಟಿ ಹತ್ತಿಯು ತಟಸ್ಥವಾಗಿದೆ. ಅದನ್ನು ಅಂಗೀಕರಿಯೂ ಇಲ್ಲ, ನಿಷೇಧಿಸಿಯೂ ಇಲ್ಲ.

ಒಡಿಶಾದಲ್ಲಿ ಬಿಟಿ ಹತ್ತಿಯನ್ನು ಬಿಡುಗಡೆಗೊಳಿಸುವ ಜವಾಬ್ದಾರಿಯನ್ನು ಹೊಂದಿರುವ ಕೇಂದ್ರ ಸರ್ಕಾರದ ಏಜೆನ್ಸಿಯು ಅದನ್ನು ಅಧಿಕೃತಗೊಳಿಸಿಲ್ಲವೆಂಬುದಾಗಿ ನಮಗೆ ತಿಳಿದುಬಂದಿತು. 2016 ರ ಕೃಷಿ ಸಚಿವಾಲಯದ ವರದಿಯು ಬಿಟಿ ಹತ್ತಿಯು ವರ್ಷದಿಂದ ವರ್ಷಕ್ಕೆ ಶೂನ್ಯದತ್ತ ಸಾಗಿದೆಯೆಂದು ತಿಳಿಸುತ್ತದೆ. ಸರ್ಕಾರವು ಇದರ ಅಸ್ತಿತ್ವವನ್ನು ಒಪ್ಪಿಕೊಳ್ಳುತ್ತಿಲ್ಲವೆಂಬುದು ಇದರಿಂದ ವ್ಯಕ್ತವಾಗುತ್ತದೆ. "ಹೆಚ್‍ಟಿ ಹತ್ತಿಯ ಬಗ್ಗೆ ನನ್ನಲ್ಲಿ ಮಾಹಿತಿಯಿಲ್ಲ", ಎಂಬುದಾಗಿ ರಾಜ್ಯದ ಕೃಷಿ ಕಾರ್ಯದರ್ಶಿಗಳಾದ ಡಾ. ಸೌರಭ್ ಗರ್ಗ್ ದೂರವಾಣಿಯಲ್ಲಿ ನಮಗೆ ತಿಳಿಸಿದರು. "ಬಿಟಿ ಹತ್ತಿಯನ್ನು ಕುರಿತಂತೆ ಕೇಂದ್ರ ಸರ್ಕಾರದ ನೀತಿಯನ್ನೇ ನಾವೂ ಅನುಸರಿಸುತ್ತಿದ್ದೇವೆ. ಒಡಿಶಾ ರಾಜ್ಯಕ್ಕೆ ಪ್ರತ್ಯೇಕ ನೀತಿಗಳಿಲ್ಲ", ಎನ್ನುತ್ತಾರವರು.

ಇಂತಹ ನಿಲುವುಗಳು ತೀವ್ರ ಪರಿಣಾಮಗಳನ್ನು ಬೀರುತ್ತಿವೆ. ನಿಯಮ್‍ ಗಿರಿಯ ಪರ್ವತ ಪ್ರದೇಶದಲ್ಲಿನ ಕುದ್ರುಕರವರ ಅಂಗಡಿಯಲ್ಲಿ ಗಮನಿಸಿದಂತೆ, ರಾಯಗಡದ ಹೊಸ ಪ್ರದೇಶಗಳಲ್ಲಿ ಅನಧಿಕೃತ ಬಿಟಿ ಮತ್ತು ಕಾನೂನುಬಾಹಿರ ಹೆಚ್‍ಟಿ ಬೀಜಗಳು ಮತ್ತು ಕೃಷಿ ಸಂಬಂಧಿತ ರಾಸಾಯನಿಕಗಳು ಪ್ರವರ್ಧಿಸುತ್ತಿದ್ದು ತೀವ್ರಗತಿಯಲ್ಲಿ ಒಳನುಗ್ಗುತ್ತಿವೆ.

ಪ್ರೊ. ಶಹೀದ್ ನಯೀಂ ಅವರು ಇತ್ತೀಚೆಗೆ ತಿಳಿಸಿದಂತೆ ಜಾಗತಿಕವಾಗಿ ಕೃಷಿ ಸಂಬಂಧಿತ ರಾಸಾಯನಿಕಗಳು ಮಣ್ಣಿನ ಸೂಕ್ಷ್ಮಾಣುಗಳನ್ನು, ಫಲವತ್ತತೆಯನ್ನು ಮತ್ತು "ಎಣಿಸಲಾರದಷ್ಟು ಸಸ್ಯ ಹಾಗೂ ಪ್ರಾಣಿಗಳ ನೀರು ಹಾಗೂ ಭೂಮಿಯ ಮೇಲಿನ ನೆಲೆಯನ್ನು ನಾಶಗೊಳಿಸಿವೆ." ನ್ಯೂಯಾರ್ಕ್‍ನ ಕೊಲಂಬಿಯಾ ವಿಶ್ವವಿದ್ಯಾಲಯದ ಪರಿಸರ ವಿಜ್ಞಾನ, ವಿಕಾಸ ಮತ್ತು ಪರಿಸರ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಅವರು "ಈ ಎಲ್ಲ ಸೂಕ್ಷ್ಮಜೀವಿಗಳೂ ಸಾಮೂಹಿಕವಾಗಿ ನಮ್ಮ ನೆಲ ಹಾಗೂ ಜಲದಲ್ಲಿನ ಮಾಲಿನ್ಯಕಾರಕಗಳನ್ನು ಹೋಗಲಾಡಿಸಿ ಆರೋಗ್ಯಕರ ಪರಿಸರ ವ್ಯವಸ್ಥೆಯನ್ನು ರೂಪಿಸುತ್ತವೆ. ಮಣ್ಣನ್ನು ಉತ್ಕøಷ್ಟಗೊಳಿಸಿ ನಮ್ಮ ಬೆಳೆಯನ್ನು ಪೋಷಿಸುತ್ತವೆ. ನಮ್ಮ ಹವಾಮಾನ ವ್ಯವಸ್ಥೆಗಳನ್ನು ಕ್ರಮಬದ್ಧಗೊಳಿಸುತ್ತವಾದ್ದರಿಂದ ಅವು ಪ್ರಮುಖವಾದವುಗಳು", ಎನ್ನುತ್ತಾರೆ.

********

"ಇದು ಸುಲಭವಿರಲಿಲ್ಲ. ಅವರನ್ನು (ಆದಿವಾಸಿ ರೈತರನ್ನು) ಹತ್ತಿಯತ್ತ ಸೆಳೆಯಲು ನಾನು ಬಹಳ ಕಷ್ಟಪಡಬೇಕಾಯಿತು", ಎನ್ನುತ್ತಾರೆ ಪ್ರಸಾದ್ ಚಂದ್ರ ಪಂಡ.

‘ಕಪ್ಪ ಪಂಡ’ ಅಂದರೆ ಅಕ್ಷರಶಃ ‘ಹತ್ತಿಯ ಪಂಡ’ ಎಂದು ಗಿರಾಕಿಗಳು ಹಾಗೂ ಇತರರಿಂದ ಕರೆಸಿಕೊಳ್ಳುವ ಆತ ರಾಯಗಡದ ಬಿಶಮಕಟಕ್ ತೆಹ್ಸಿಲ್ ಊರಿನ ಬೀಜ ಮತ್ತು ರಾಸಾಯನಿಕ ಸಾಧನಗಳ ತನ್ನ ಅಂಗಡಿ, ಕಾಮಾಖ್ಯ ಟ್ರೇಡರ್ಸ್‍ನಲ್ಲಿ ನಮ್ಮೊಂದಿಗೆ ಮಾತನಾಡುತ್ತಿದ್ದರು.

ಈ ಜಿಲ್ಲೆಯ ಕೃಷಿ ಇಲಾಖೆಯಲ್ಲಿ ವಿಸ್ತಾರಣಾಧಿಕಾರಿಯಾಗಿ ಕೆಲಸವನ್ನು ನಿರ್ವಹಿಸುತ್ತಿದ್ದಾಗಲೇ 25 ವರ್ಷಗಳ ಹಿಂದೆ ಇವರು ಅಂಗಡಿಯನ್ನು ಪ್ರಾರಂಭಿಸಿದರು. 37 ವರ್ಷಗಳ ನಂತರ 2017 ರಲ್ಲಿ ಅವರು ನಿವೃತ್ತಿ ಹೊಂದಿದರು. ಸರ್ಕಾರಿ ಅಧಿಕಾರಿಯಾಗಿದ್ದ ಅವರು ರೈತರು ತಮ್ಮ "ಹಿಂದುಳಿದ ಕೃಷಿ"ಯನ್ನು ತೊರೆದು ಹತ್ತಿಯನ್ನು ಬೆಳೆಯುವಂತೆ ಪ್ರೇರೇಪಿಸಿದರು. ಮಗ ಸುಮನ್ ಪಂಡಾರವರ ಹೆಸರಿನಲ್ಲಿ ಪರವಾನಗಿಯನ್ನು ಪಡೆದ ಇವರ ಅಂಗಡಿಯಲ್ಲಿ, ರೈತರಿಗೆ ಬೀಜಗಳು ಮತ್ತು ತತ್ಸಂಬಂಧಿತ ಕೃಷಿ-ರಾಸಾಯನಿಕಗಳನ್ನು ಮಾರಲಾಗುತ್ತಿದೆ.

Top left and right-GM cotton seeds marketed to Adivasi farmers lack mandatory labelling, are sold at prices beyond official caps, and are in most cases, do not list Odisha as among the recommended states for cultivation. 
Bottom left-IMG_2727-GM cotton seeds marketed to Adivasi farmers lack mandatory labelling, are sold at prices beyond official caps, and in most cases, do not list Odisha as among the recommended states for cultivation.  
Bottom right-Prasad Chandra Panda-Former government agriculture officer Prasad Chandra Panda at his seeds and inputs shop in Bishamakatak on a July evening.
PHOTO • Chitrangada Choudhury

ರಾಯಗಡದ ಆದಿವಾಸಿ ರೈತರಿಗೆ ಮಾರಲಾಗುವ ಜಿಎಂ ಹತ್ತಿ ಬೀಜಗಳ ಪೊಟ್ಟಣದಲ್ಲಿ ಕಡ್ಡಾಯ ಗುರುತು ಪಟ್ಟಿಯು ಲಭ್ಯವಿಲ್ಲ. ಅಧಿಕೃತ ಬೆಲೆಗಿಂತಲೂ ಹೆಚ್ಚಿನ ಮೊತ್ತಕ್ಕೆ ಅವನ್ನು ಮಾರಲಾಗುತ್ತಿದೆ. ಇವು ಕಾನೂನುಬಾಹಿರ ಸಸ್ಯನಾಶಕಗಳನ್ನು ತಾಳಿಕೊಳ್ಳುವ ಬೀಜಗಳಾಗಿರಬಹುದು. ಕೆಳಸಾಲಿನ ಬಲಕ್ಕೆ: ಅನಧಿಕೃತ ಬೀಜಗಳನ್ನು ಮಾರುವುದಿಲ್ಲವೆಂಬುದಾಗಿ ಪಿ.ಸಿ. ಪಂಡ ತಿಳಿಸುತ್ತಾರೆ. ಇತ್ತೀಚಿಗೆ ನಿವೃತ್ತಿ ಹೊಂದಿದ ಈ ಕೃಷಿ ಅಧಿಕಾರಿಯು ಕಳೆದ 25 ವರ್ಷಗಳಿಂದಲೂ ಬಿಶಮಕಟಕದಲ್ಲಿ ಬೀಜ ಹಾಗೂ ಗೊಬ್ಬರಗಳ ಅಂಗಡಿಯನ್ನು ಹೊಂದಿದ್ದಾರೆ.

"ಸರ್ಕಾರದ ನೀತಿಗಳು ಹತ್ತಿಯನ್ನು ವಾಣಿಜ್ಯ ಬೆಳೆಯಾಗಿ ಪರಿಚಯಿಸಿದವು. ಬೆಳೆಗೆ ಮಾರುಕಟ್ಟೆಯಲ್ಲಿ ದೊರೆಯುವ ಗೊಬ್ಬರ ಇತ್ಯಾದಿಗಳು ಅವಶ್ಯ. ಆದ್ದರಿಂದ ನಾನು ಅಂಗಡಿಯನ್ನು ತೆರೆದೆ", ಎನ್ನುವ ಪಂಡ ಅವರಿಗೆ ಇದರಲ್ಲಿ ಹಿತಾಸಕ್ತಿಯ ಸಂಘರ್ಷವೇನು ಕಂಡುಬರಲಿಲ್ಲ.

ಎರಡು ಗಂಟೆಗಳ ನಮ್ಮ ಸಂವಾದದ ಸಂದರ್ಭದಲ್ಲಿ ಪಂಡ ಅವರ ಅಂಗಡಿಯಿಂದ ಬೀಜಗಳು ಹಾಗೂ ರಾಸಾಯನಿಕಗಳನ್ನು ಖರೀದಿಸಲು ಬರುತ್ತಿದ್ದ ಅನೇಕ ರೈತರು ಏನನ್ನು ಖರೀದಿಸಬೇಕು, ಯಾವಾಗ ಬಿತ್ತನೆಯನ್ನು ಕೈಗೊಳ್ಳಬೇಕು, ಎಷ್ಟು ಸಿಂಪರಣೆ ಮಾಡಬೇಕು ಮುಂತಾಗಿ ಅವರಿಂದ ಸಲಹೆಗಳನ್ನು ಪಡೆಯುತ್ತಿದ್ದರು. ಪ್ರತಿಯೊಂದು ಪ್ರಶ್ನೆಗೂ ಅವರು ಭರವಸೆಯುಕ್ತ ಪರಿಣತಿಯಿಂದ ಉತ್ತರಿಸುತ್ತಿದ್ದರು. ರೈತರಿಗೆ ಇವರು ವೈಜ್ಞಾನಿಕ ತಜ್ಞರು, ವಿಸ್ತರಣಾಧಿಕಾರಿ, ಸಲಹೆಗಾರ ಎಲ್ಲವೂ ಆಗಿದ್ದರು. ಇವರ ಆಜ್ಞಾಪನೆಗಳೇ ರೈತರ ಆಯ್ಕೆಗಳಾಗಿದ್ದವು.

ಪಂಡ ಅವರ ಅಂಗಡಿಯಲ್ಲಿ ನಾವು ಗಮನಿಸಿದ ಈ ಅವಲಂಬನೆಯು ನಾವು ಪ್ರಯಾಣಿಸಿದ ಹತ್ತಿಯ ಕೃಷಿಯನ್ನು ಕೈಗೊಂಡ ಎಲ್ಲ ಊರುಗಳಲ್ಲಿಯೂ ಕಂಡುಬರುತ್ತದೆ. ‘ಮಾರುಕಟ್ಟೆ’ಯ ಆಗಮನವು ಹತ್ತಿಯ ಬೆಳೆಯನ್ನು ಕುರಿತಂತೆ ಅತ್ಯಧಿಕ ಪರಿಣಾಮಗಳನ್ನು ಬೀರುತ್ತಿದೆ.

ವಿಜ್ಞಾನಿ ಹಾಗೂ ಬರಿಗಾಲಿನ ಪರಿಸರ ಸಂರಕ್ಷಕರಾದ ದೆಬಲ್ ದೇಬ್, "ಜಮೀನನ್ನು ಸಂಪೂರ್ಣವಾಗಿ ಹತ್ತಿಗೆ ಗೊತ್ತುಪಡಿಸಿರುವುದರಿಂದ ರೈತರು ತಮ್ಮೆಲ್ಲ ಗೃಹೋಪಯೋಗಿ ಅವಶ್ಯಕತೆಗಳನ್ನು ಮಾರುಕಟ್ಟೆಯಿಂದಲೇ ಖರೀದಿಸಬೇಕಿದೆ", ಎಂದು ತಿಳಿಸುತ್ತಾರೆ. ರಾಯಗಡದಲ್ಲಿ 2011 ರಿಂದಲೂ ನೆಲೆ ನಿಂತಿರುವ ಇವರು in-situ ಎಂಬ ಗಮನಾರ್ಹವಾದ ಅಕ್ಕಿ ಸಂರಕ್ಷಣಾ ಯೋಜನೆಯಲ್ಲಿ ತೊಡಗಿದ್ದು ರೈತರಿಗೆ ತರಬೇತಿಗಳನ್ನು ನೀಡುತ್ತಾರೆ.

"ಕೃಷಿ ಸಂಬಂಧಿತ ಹಾಗೂ ಕೃಷಿಯೇತರ ಕಸುಬುಗಳು ವೇಗವಾಗಿ ಕಾಣೆಯಾಗುತ್ತಿವೆ", ಎಂದು ಅವರು ತಿಳಿಸುತ್ತಾರೆ. ಹಳ್ಳಿಗಳಲ್ಲಿ ಕುಂಬಾರ, ಬಡಗಿ, ನೇಕಾರರ ಸುಳಿವೇ ಇಲ್ಲ. ಗೃಹೋಪಯೋಗಿ ವಸ್ತುಗಳೆಲ್ಲವನ್ನೂ ಮಾರುಕಟ್ಟೆಯಿಂದ ಖರೀದಿಸುವಂತಾಗಿದೆ. ಮರಿಗೆಯಿಂದ ಹಿಡಿದು ಚಾಪೆಯವರೆಗೆ ಇವುಗಳಲ್ಲಿ ಬಹುತೇಕವು ಪ್ಲಾಸ್ಟಿಕ್‍ ನಿಂದ ತಯಾರಾಗಿದ್ದು ದೂರದ ಊರುಗಳಿಂದ ಆಮದು ಮಾಡಿಕೊಂಡಂಥವುಗಳು. ಅನೇಕ ಗ್ರಾಮಗಳಲ್ಲಿ ಬಿದಿರು ಮರೆಯಾಗಿದೆ. ಅದರೊಂದಿಗೆ ಬಿದಿರು ಕಲೆಯೂ ಕಾಣೆಯಾಗಿದೆ. ಇದಕ್ಕೆ ಪರ್ಯಾಯವಾಗಿ ಕಾಡಿನ ಮರ ಹಾಗೂ ದುಬಾರಿ ಕಾಂಕ್ರೀಟ್ ಅಡಿಯಿಟ್ಟಿದೆ. ಕಂಬವನ್ನು ನೆಡುವುದು, ಬೇಲಿ ಹಾಕುವುದು ಮುಂತಾದ ಕೆಲಸಗಳಿಗೂ ಗ್ರಾಮೀಣರು ಕಾಡಿನಿಂದ ಮರಗಳನ್ನು ಕಡಿಯುವಂತಾಗಿದೆ. ಲಾಭಕ್ಕೆ ಪಕ್ಕಾಗಿ ಮಾರುಕಟ್ಟೆಯನ್ನು ಅವಲಂಬಿಸುವ ಜನರು ಹೆಚ್ಚಾಗುತ್ತಿದ್ದಂತೆಯೇ, ಪರಿಸರ ನಾಶವು ಹೆಚ್ಚಾಗುತ್ತದೆ.

*********

"ಅಂಗಡಿಯಾತ ಇವು ಉತ್ತಮವಾದವುಗಳೆಂದು ತಿಳಿಸಿದ" ಎಂದು ರಾಮ್‍ದಾಸ್ ಅವರು (ಆತನು ಕೇವಲ ತನ್ನ ಮೊದಲ ಹೆಸರನ್ನಷ್ಟೇ ಬಳಸುತ್ತಾನೆ) ಕುದ್ರುಕ ಅವರ ಅಂಗಡಿಯಿಂದ ಸಾಲಕ್ಕೆ ತಂದಿದ್ದ ಮೂರು ಬಿಟಿ ಹತ್ತಿಯ ಪೊಟ್ಟಣಗಳನ್ನು ತೋರಿಸುತ್ತ ಸಂಕೋಚದಿಂದ ನುಡಿದರು. ಬಿಶಮಕಟಕ್ ವಿಭಾಗದ ತನ್ನ ಕಲಿಪಂಗ ಗ್ರಾಮಕ್ಕೆ ಹಿಂದಿರುಗಲು ನಿಯಮ್‍ ಗಿರಿ ಬೆಟ್ಟಗಳ ತಪ್ಪಲಿನಲ್ಲಿ ನಡೆದುಕೊಂಡು ಹೊರಟಿದ್ದ ಕೊಂಧ್ ಆದಿವಾಸಿ ರೈತನನ್ನು ನಾವು ಸಂಧಿಸಿದೆವು. ಅಂಗಡಿಯಾತ ಸಲಹೆ ನೀಡಿದನೆಂಬ ಒಂದೇ ಕಾರಣಕ್ಕೆ ತಾನು ಆ ಬೀಜಗಳ ಪೊಟ್ಟಣವನ್ನು ಆಯ್ಕೆ ಮಾಡಿದೆನೆಂದು ಅವರು ನಮಗೆ ತಿಳಿಸಿದರು.

ಆತನು ಅದಕ್ಕೆ ತೆತ್ತ ಬೆಲೆಯೇನು? "ಈಗಲೇ ಹಣವನ್ನು ಪಾವತಿಸಿದ್ದರೆ ಪ್ರತಿ ಪೊಟ್ಟಣಕ್ಕೆ 800 ರೂ.ಗಳಂತೆ ಪಾವತಿಸಬೇಕಿತ್ತು. ಆದರೆ ನನ್ನ ಹತ್ತಿರ 2400 ರೂ.ಗಳಿಲ್ಲ. ಹೀಗಾಗಿ ಸುಗ್ಗಿಯ ಸಮಯದಲ್ಲಿ ಅಂಗಡಿಯಾತನು 3000 ರೂ.ಗಳನ್ನು ತೆಗೆದುಕೊಳ್ಳುತ್ತಾನೆ", ಎಂದು ಅವರು ತಿಳಿಸಿದರು. ಆದರೆ ಆತನು ಪೊಟ್ಟಣವೊಂದಕ್ಕೆ 1000 ರೂ.ಗಳಿಗೆ ಬದಲಾಗಿ 800 ರೂ.ಗಳಂತೆ ಪಾವತಿಸಿದ್ದಾಗ್ಯೂ, ದುಬಾರಿ ಬೆಲೆಯ ಬೊಲ್‍ಗಾರ್ಡ್ II ಬಿಟಿ ಹತ್ತಿಯ ಪೊಟ್ಟಣದ ಕಡ್ಡಾಯ ಬೆಲೆ 730 ರೂ.ಗಳಿಗಿಂತ ಹೆಚ್ಚೇ ಆಗುತ್ತಿತ್ತು.

ಪಿರಿಕಕ, ರಾಮ್‍ದಾಸ್, ಸುನ ಮತ್ತಿತರ ರೈತರು ಹತ್ತಿಯು, ಈ ಹಿಂದೆ ನಾವು ಬೆಳೆದ ಯಾವುದೇ ಬೆಳೆಯಂತಿಲ್ಲ: ‘ನಮ್ಮ ಸಾಂಪ್ರದಾಯಿಕ ಬೆಳೆಗಳಿಗೆ ಯಾವುದರ ಅವಶ್ಯಕತೆಯೂ ಇಲ್ಲ’ ಎಂದು ನಮಗೆ ತಿಳಿಸಿದರು.

ವೀಡಿಯೊ ವೀಕ್ಷಿಸಿ: ಮಗುವೊಂದಕ್ಕೆ ನೀವು ನಿರಂತರ ಗಮನನೀಡುವಂತೆಯೇ, ಹತ್ತಿಗೂ ನಿರಂತರ ಕಾಳಜಿ ಅಗತ್ಯ.

ರಾಮ್‍ದಾಸ್ ಖರೀದಿಸಿದ ಯಾವುದೇ ಪೊಟ್ಟಣಗಳ ಮೇಲೆಯೂ ಬೆಲೆ, ಉತ್ಪಾದಿಸಿದ ದಿನಾಂಕ, ಗಡುವಿನ ದಿನಾಂಕ, ಹೆಸರು ಅಥವ ಕಂಪನಿಯನ್ನು ಸಂಪರ್ಕಿಸುವ ವಿಳಾಸಗಳಿರಲಿಲ್ಲ. ಕೆಂಪು ವರ್ಣದ ‘X’ ಚಿಹ್ನೆಯನ್ನು ಬೊಲ್‍ವರ್ಮ್‍ನ ಚಿತ್ರದ ಮೇಲೆ ಹಾಕಲಾಗಿದ್ದು, ಅವು ಬಿಟಿ ಬೀಜಗಳೆಂಬ ಯಾವುದೇ ಗುರುತು ಪಟ್ಟಿಯು ಲಭ್ಯವಿರಲಿಲ್ಲ. ಪೊಟ್ಟಣಗಳು ನಿರ್ದಿಷ್ಟವಾಗಿ ‘ಹೆಚ್‍ಟಿ’ ಎಂದು ತಿಳಿಸದ ಕಾರಣ, ಅಂಗಡಿಯಾತನು ತಿಳಿಸಿದಂತೆ ಘಾಸಾ ಮಾರದೊಂದಿಗೆ (ಸಸ್ಯನಾಶಕ) ಅದನ್ನು ನಿರ್ವಹಿಸಬಹುದೆಂದು ರಾಮ್‍ದಾಸ್ ತಿಳಿದಿದ್ದರು.

ಜುಲೈ ತಿಂಗಳ ಹದಿನೈದು ದಿನಗಳಲ್ಲಿ ನಾವು ಸಂದರ್ಶಿಸಿದ ಪ್ರತಿಯೊಬ್ಬ ರೈತನಂತೆಯೇ ರಾಮ್‍ದಾಸ್ ಅವರಿಗೂ ಸಹ ಸಸ್ಯನಾಶಕವನ್ನು ತಾಳಬಲ್ಲ ಬೀಜಗಳನ್ನು ಭಾರತದಲ್ಲಿ ನಿರಾಕರಿಸಲಾಗಿದೆಯೆಂಬುದು ತಿಳಿದಿರಲಿಲ್ಲ. ಗುರುತು ಪಟ್ಟಿಯಿಲ್ಲದ ಬೀಜಗಳನ್ನು ಮಾರುವಂತಿಲ್ಲವೆಂಬ ಅಥವ ಹತ್ತಿಯ ಬೀಜಗಳಿಗೆ ಬೆಲೆ ನಿಯಂತ್ರಣವಿದೆಯೆಂಬ ವಿಷಯವು ಅವರಿಗೆ ತಿಳಿದಿರಲಿಲ್ಲ. ಬೀಜಗಳ ಪೊಟ್ಟಣಗಳು ಹಾಗೂ ಕೃಷಿ ಸಂಬಂಧಿತ ರಾಸಾಯನಿಕಗಳ ಮೇಲಿನ ಯಾವುದೇ ಬರಹವೂ ಒಡಿಯಾದಲ್ಲಿ ಇಲ್ಲದ ಕಾರಣ ಇಲ್ಲಿನ ರೈತರು ಓದಬಲ್ಲವರಾದರೂ ಉತ್ಪಾದಕರು ಯಾವುದರ ಹಕ್ಕುಸಾಧನೆ (ಕ್ಲೇಮ್) ಮಾಡುತ್ತಿದ್ದಾರೆಂಬುದು ಅವರಿಗೆ ತಿಳಿಯುತ್ತಿರಲಿಲ್ಲ.

ಆದಾಗ್ಯೂ ಹಣದ ಭರವಸೆಯು ಅವರನ್ನು ಹತ್ತಿಯತ್ತ ಸೆಳೆಯುತ್ತಿತ್ತು.

"ನಾನಿದನ್ನು ಬೆಳೆದಲ್ಲಿ ಆಂಗ್ಲಮಾಧ್ಯಮದ ಖಾಸಗಿ ಶಾಲೆಯಲ್ಲಿನ ನನ್ನ ಮಗನ ಶಿಕ್ಷಣ ಶುಲ್ಕಕ್ಕೆ ಅಗತ್ಯವಿರುವ ಹಣವನ್ನು ನಾನು ಸಂಪಾದಿಸಬಹುದು", ಎಂಬುದು ಬಿಶಮಕಟಕ ವಿಭಾಗದ ಕೆರಂಡಿಗುಡ ಹಳ್ಳಿಯಲ್ಲಿ ನಮ್ಮೊಂದಿಗೆ ಸಂಭಾಷಿಸಿದ ದಲಿತ ಒಕ್ಕಲು ರೈತ ಶ್ಯಾಮ್‍ಸುಂದರ್ ಸುನ ಅವರ ಆಶಯವಾಗಿತ್ತು. ಆತ, ಆತನ ಕೊಂಧ್ ಆದಿವಾಸಿ ಪತ್ನಿ ಕಮಲ ಹಾಗೂ ಎಲಿಜಬೆತ್ ಮತ್ತು ಆಶಿಶ್ ಎಂಬ ಅವರ ಇಬ್ಬರು ಮಕ್ಕಳು ಶ್ರಮವಹಿಸಿ, ಹತ್ತಿಯ ಬೀಜಗಳ ಬಿತ್ತನೆಯಲ್ಲಿ ತೊಡಗಿರುವುದನ್ನು ನಾವು ಗಮನಿಸಿದೆವು. ಸುನ ಅವರು ಎಲ್ಲ ರೀತಿಯ ಕೃಷಿ ಸಂಬಂಧಿತ ರಾಸಾಯನಿಕಗಳನ್ನು ಬಳಸಿದ್ದರು. ಬೀಜಗಳನ್ನು ಕುರಿತಂತೆ ಅವರಿಗೆ ಹೆಚ್ಚಿನ ಅರಿವಿರಲಿಲ್ಲ. "ಹತ್ತಿಯ ಬೆಳೆ ಸಮೃದ್ಧವಾಗಿರುತ್ತದೆಂದು ಚಿಲ್ಲರೆ ವ್ಯಾಪಾರಿಯು ತಿಳಿಸಿದ", ಎಂದು ಅವರು ವಿವರಿಸಿದರು.

ನಾವು ಈ ಹಿಂದೆ ಬೆಳೆದ ಯಾವುದೇ ಬೆಳೆಗಿಂತಲೂ ಹತ್ತಿಯು ವಿಭಿನ್ನವಾಗಿದೆಯೆಂಬುದಾಗಿ ಪಿರಿಕಕ, ರಾಮ್‍ದಾಸ್, ಸುನ ಹಾಗೂ ಇತರೆ ರೈತರು ತಿಳಿಸಿದರು. "ನಮ್ಮ ಸಾಂಪ್ರದಾಯಿಕ ಬೆಳೆಗಳಿಗೆ ಯಾವುದೇ ಗೊಬ್ಬರ, ಕ್ರಿಮಿನಾಶಕಗಳ ಅಗತ್ಯವಿಲ್ಲ" ಎಂದರು ಪಿರಿಕಕ. "ಪ್ರತಿ ಪೊಟ್ಟಣಕ್ಕೂ ಹೆಚ್ಚುವರಿಯಾಗಿ 10,000 ರೂ.ಗಳ ಖರ್ಚು ಅವಶ್ಯ. ಬೀಜಗಳು, ಗೊಬ್ಬರ ಹಾಗೂ ಕೀಟನಾಶಕಗಳಿಗೆ ನೀವು ಖರ್ಚುಮಾಡಲು ಸಾಧ್ಯವಿದ್ದಲ್ಲಿ ಮಾತ್ರವೇ ಸುಗ್ಗಿಯ ಸಮಯದಲ್ಲಿ ಸ್ವಲ್ಪಮಟ್ಟಿನ ಲಾಭವನ್ನು ಗಳಿಸಬಹುದು. ಇದು ನಿಮಗೆ ಸಾಧ್ಯವಾಗದಿದ್ದಲ್ಲಿ... ನಿಮ್ಮೆಲ್ಲ ಹಣವನ್ನೂ ನೀವು ಕಳೆದುಕೊಳ್ಳುತ್ತೀರಿ. ಹವಾಮಾನವೂ ಸ್ಥಿರವಾಗಿದ್ದು ಎಲ್ಲವೂ ಸರಿಯಿದ್ದಲ್ಲಿ ನಿಮ್ಮ ಫಸಲನ್ನು 30,000 ರೂ.ಗಳಿಂದ 40,000 ರೂ.ಗಳವರೆಗೆ ಮಾರಬಹುದು", ಎನ್ನುತ್ತಾರೆ ರಾಮ್‍ದಾಸ್.

ಹಣದ ನಿರೀಕ್ಷೆಯಲ್ಲಿ ಹತ್ತಿಯನ್ನು ಬೆಳೆಯುತ್ತಿದ್ದಾಗ್ಯೂ ವಾಸ್ತವದಲ್ಲಿ ಅದರಿಂದ ಅವರು ಗಳಿಸಿದ್ದೆಷ್ಟು ಎಂಬುದನ್ನು ತಿಳಿಸಲು ಅವರನ್ನು ಒತ್ತಾಯಿಸಲಾಯಿತು.

ಜನವರಿ-ಫೆಬ್ರುವರಿ ತಿಂಗಳು ಬಂತೆಂದರೆ ರೈತರು ತಮ್ಮ ಫಸಲನ್ನು ಚಿಲ್ಲರೆ ವ್ಯಾಪಾರಿಯ ಮೂಲಕ ಮಾರಬೇಕು. ಆತನು ದುಬಾರಿ ಬಡ್ಡಿಯನ್ನು ವಿಧಿಸುವ ಮೂಲಕ ತನ್ನ ಖರ್ಚನ್ನು ಭರಿಸಿ ಉಳಿಕೆಯನ್ನು ಅವರಿಗೆ ನೀಡುತ್ತಾನೆ. "ಗುನ್‍ಪುರ್ ನ ಚಿಲ್ಲರೆ ವ್ಯಾಪಾರಿಗೆ ಇದೀಗ 100 ಪೊಟ್ಟಣಗಳನ್ನು ಉದರಿಗೆ ಕೊಡುವಂತೆ ಕೋರಿದ್ದೇನೆ. ಸುಗ್ಗಿಯ ಸಮಯದಲ್ಲಿ ಹಣವನ್ನು ಆತನಿಗೆ ಪಾವತಿಸುತ್ತೇನೆ. ರೈತರಿಂದ ಪಾವತಿಸಲಾದ ಬಡ್ಡಿಯನ್ನು ಹಂಚಿಕೊಳ್ಳುತ್ತೇವೆ", ಎಂಬುದಾಗಿ ಚಂದ್ರ ಕುದ್ರುಕ ನಮಗೆ ತಿಳಿಸಿದರು.

PHOTO • Chitrangada Choudhury

ಮೇಲಿನ ಸಾಲು: ಜುಲೈ ಮಧ್ಯಭಾಗದಲ್ಲಿ ಮೊದಲ ಬಾರಿಗೆ ಕೊಂಧ್ ಆದಿವಾಸಿ ಮಹಿಳೆ; ರೂಪ ಪಿರಿಕಕ, ಕರಂಜಗುಡ ಹಳ್ಳಿಯಲ್ಲಿನ ಪರ್ವತಗಳೆಡೆಗಿನ ತಮ್ಮ ಭೂಮಿಯಲ್ಲಿ ಮಾರುಕಟ್ಟೆಯ ಜಿಎಂ ಹತ್ತಿಯ ಬೀಜಗಳನ್ನು ಬಿತ್ತಿದರು. ಕೆಳಗಿನ ಸಾಲಿನ ಎಡಕ್ಕೆ: ಕಲಿಪೊಂಗ ಹಳ್ಳಿಯ ತಮ್ಮ ಎರಡು ಎಕರೆಯಲ್ಲಿ ನಂದ ಸರ್ಕ ಮತ್ತು ಆಕೆಯ ಕುಟುಂಬದವರು, ಬಿಟಿ ಹತ್ತಿಯ ನಾಲ್ಕು ಪೊಟ್ಟಣಗಳಲ್ಲಿನ ಬೀಜಗಳನ್ನು ಬಿತ್ತನೆ ಮಾಡಿದರು. ಕೆಳಸಾಲಿನ ಬಲಕ್ಕೆ: ಶ್ಯಾಮಸುಂದರ್ ಸುನ ಮತ್ತು ಕಮಲ, ಕೆರಂಡಿಗುಡದ ಒಕ್ಕಲು ರೈತರು. ಇತ್ತೀಚೆಗೆ ಅವರು ಬಿಟಿ ಹತ್ತಿಯ ಕೃಷಿಯಲ್ಲಿ ತೊಡಗಿದ್ದು, ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಸಂಪಾದನೆಯ ನಿರೀಕ್ಷೆಯಲ್ಲಿದ್ದಾರೆ.

ರೈತರ ಬೆಳೆಯು ವಿಫಲಗೊಂಡು ಸಾಲಕ್ಕೆ ತಂದ ಪೊಟ್ಟಣಗಳ ಹಣವನ್ನು ಮರಳಿಸದಿದ್ದಲ್ಲಿ ರೈತರು ಸಂಕಷ್ಟಕ್ಕೆ ಸಿಲುಕುತ್ತಾರಲ್ಲವೇ?

"ಸಂಕಷ್ಟವೇನು ಬಂತು? ರೈತರೆಲ್ಲಿ ಹೋಗುತ್ತಾರೆ? ನನ್ನ ಮೂಲಕವೇ ಅವರ ಹತ್ತಿಯು ವ್ಯಾಪಾರಿಗೆ ಮಾರಾಟವಾಗುತ್ತದೆ. ಅವರು ಕೇವಲ 1-2 ಕ್ವಿಂಟಲ್ ಫಸಲು ಪಡೆದಲ್ಲಿ ಅದರಿಂದಲೇ ನನ್ನ ಬಾಕಿಯನ್ನು ವಸೂಲು ಮಾಡುತ್ತೇನೆ."

ರೈತರಿಗೆ ಕೊನೆಯಲ್ಲಿ ಏನೂ ಉಳಿಯುವುದಿಲ್ಲವೆಂಬ ಮಾತು ಮನಸ್ಸಿನಲ್ಲೇ ಉಳಿದುಹೋಯಿತು.

ರಾಯಗಡವು ಸಹ ತನ್ನ ಅಮೂಲ್ಯ ಜೀವವೈವಿಧ್ಯದಿಂದ ವಂಚಿತವಾಗುತ್ತದೆ. ಪ್ರೊ. ನಯೀಂ ಅವರು ಎಚ್ಚರಿಸುವಂತೆ ಭೂಮಂಡಲದ ಬೆಳೆಯ ವೈವಿಧ್ಯವನ್ನು ನಾಶಮಾಡಿದಲ್ಲಿ, ಆಹಾರದ ಭದ್ರತೆಯನ್ನು ಅಪಾಯಕ್ಕೆ ಸಿಲುಕಿಸಿದಂತೆ ಹಾಗೂ ಜಾಗತಿಕ ತಾಪಮಾನಕ್ಕೆ ಹೊಂದಿಕೊಳ್ಳುವ ಸಾಮರ್ಥ್ಯವನ್ನು ದುರ್ಬಲಗೊಳಿಸಿದಂತೆ. ಹವಾಮಾನ ಬದಲಾವಣೆ ಹಾಗೂ ಜೀವವೈವಿಧ್ಯದ ಹಾನಿಯ ಪರಸ್ಪರ ಸಂಬಂಧವು ಆಳವಾಗಿದೆ: "ಹೆಚ್ಚು ಹಸಿರನ್ನು ಹೊಂದಿಲ್ಲದ ಮತ್ತು ಜೀವವೈವಿಧ್ಯತೆಯು ಕಡಿಮೆಯಿರುವ ಗ್ರಹವು ಹೆಚ್ಚು ಶಾಖ ಹಾಗೂ ಶುಷ್ಕ ವಾತಾವರಣವನ್ನು ಹೊಂದಿರುತ್ತದೆ."

ಬಿಟಿ ಹತ್ತಿಯ ಏಕೈಕ ಬೆಳೆಗಾಗಿ ರಾಯಗಡದ ಆದಿವಾಸಿ ರೈತರು ಜೀವವೈವಿಧ್ಯವನ್ನು ಪರಿತ್ಯಜಿಸಿದ ಕಾರಣ, ಒಡಿಶಾದಲ್ಲಿನ ಪರಿಸರ ಹಾಗೂ ಅರ್ಥವ್ಯವಸ್ಥೆಯು ದೂರಗಾಮಿ ಪರಿಣಾಮವುಳ್ಳ ಬದಲಾವಣೆಗೆ ಪಕ್ಕಾಗುತ್ತಿದ್ದು ವ್ಯಕ್ತಿಗತ ಕುಟುಂಬ ಮತ್ತು ಹವಾಗುಣವು ವಿಷಮ ಪರಿಸ್ಥಿತಿಯನ್ನೆದುರಿಸುತ್ತಿವೆ.

"ದಕ್ಷಿಣ ಒಡಿಶಾದಲ್ಲಿ ಎಂದಿಗೂ ಹತ್ತಿಯನ್ನು ಬೆಳೆಯುತ್ತಿರಲಿಲ್ಲ. ಅದರ ಸಾಮರ್ಥ್ಯವು ವಿವಿಧ ಬೆಳೆಗಳ ಕೃಷಿಯಲ್ಲಿ ಅಡಗಿದೆ. ವಾಣಿಜ್ಯ ಬೆಳೆಯಾದ ಹತ್ತಿಯ ಏಕೈಕ ಕೃಷಿಯು ಬೆಳೆಯ ವೈವಿಧ್ಯವನ್ನು, ಮಣ್ಣಿನ ಸ್ವರೂಪವನ್ನು, ಕುಟುಂಬದ ಆದಾಯದ ಸ್ಥಿರತೆಯನ್ನು, ರೈತರ ಸ್ವಾತಂತ್ರ್ಯವನ್ನು ಹಾಗೂ ಕೊನೆಯದಾಗಿ ಆಹಾರದ ಭದ್ರತೆಯನ್ನು ಮಾರ್ಪಡಿಸಿದೆ", ರೈತಾಪಿ ಜನರ ಬವಣೆಯ ಅಪರಿಹಾರ್ಯ ಪ್ರಯೋಗವೆಂಬಂತೆ ಇದು ಕಂಡುಬರುತ್ತಿದೆ.

ವಿಶೇಷವಾಗಿ ಭೂ ಬಳಕೆಯಲ್ಲಿನ ಬದಲಾವಣೆಗಳು, ಈ ಎಲ್ಲ ಸಂಗತಿಗಳು ನೀರು ಹಾಗೂ ನದಿಗಳನ್ನು ಕುರಿತಂತೆ ಉಂಟುಮಾಡುತ್ತಿರುವ ಪರಿಣಾಮಗಳು, ಜೀವವೈವಿಧ್ಯದ ನಾಶ ಮುಂತಾದ ಅಂಶಗಳು ದೀರ್ಘಾವಧಿ ಹಾಗೂ ಬೃಹತ್ಪ್ರಮಾಣದ ಪ್ರಕ್ರಿಯೆಗಳಿಗೆ ಕಾರಣವಾಗುತ್ತಿರಬಹುದು. ಈ ಪ್ರದೇಶದಲ್ಲಿನ ಪರಿಸರ ಬದಲಾವಣೆಯ ಬೀಜ ಬಿತ್ತನೆಗೆ ನಾವಿಂದು ಸಾಕ್ಷಿಯಾಗಿದ್ದೇವೆ.

ಮುಖಪುಟ ಚಿತ್ರ: ಕಲಿಪೊಂಗ ಗ್ರಾಮದ ರೈತ ರಾಮ್‍ದಾಸ್ ವಿಶಾಲ ವ್ಯಾಪ್ತಿಯನ್ನುಳ್ಳ ಸಸ್ಯನಾಶಕ, ಗ್ಲೈಸೊಫೆಟ್‍ ನಿಂದ ತನ್ನ ಜಮೀನನ್ನು ತೋಯಿಸಿದ ತರುವಾಯ, ಬಿಟಿ ಮತ್ತು ಹೆಚ್‍ಟಿ ಹತ್ತಿಯ ಬೀಜಗಳನ್ನು ಬಿತ್ತುತ್ತಿದ್ದಾರೆ. (ಛಾಯಾಚಿತ್ರ: ಚಿತ್ರಾಂಗದ ಚೌಧರಿ)

ದೇಶಾದ್ಯಂತ ಪರಿಸರದಲ್ಲಿ ಬದಲಾವಣೆಗಳಾಗುತ್ತಿವೆ. ಯುಎನ್‍ಡಿಪಿ ಆಶ್ರಯದಲ್ಲಿ ಪರಿಯ ವತಿಯಿಂದ ಅವನ್ನು ವರದಿಸುವ ಯೋಜನೆಯನ್ನು ಕೈಗೊಳ್ಳಲಾಗುತ್ತಿದ್ದು, ಸದರಿ ವಿಷಯವನ್ನು ಕುರಿತಂತೆ ಸಾಮಾನ್ಯ ಜನರ ಅನುಭವ ಮತ್ತು ಹೇಳಿಕೆಗಳನ್ನು ಗ್ರಹಿಸಿ ವರದಿಯನ್ನು ಸಿದ್ಧಪಡಿಸಲಾಗುತ್ತಿದೆ.

ಈ ಲೇಖನವನ್ನು ಮರುಪ್ರಕಟಿಸುವ ಆಸಕ್ತಿಯಿದೆಯೇ? ಇದಕ್ಕಾಗಿ ಈ ಇ-ಮೈಲ್ ಗಳನ್ನು ಸಂಪರ್ಕಿಸಿ: [email protected] with a cc to [email protected] .

Reporting : Chitrangada Choudhury

Chitrangada Choudhury is an independent journalist.

Other stories by Chitrangada Choudhury
Reporting : Aniket Aga

Aniket Aga is an anthropologist. He teaches Environmental Studies at Ashoka University, Sonipat.

Other stories by Aniket Aga

P. Sainath is Founder Editor, People's Archive of Rural India. He has been a rural reporter for decades and is the author of 'Everybody Loves a Good Drought' and 'The Last Heroes: Foot Soldiers of Indian Freedom'.

Other stories by P. Sainath

P. Sainath is Founder Editor, People's Archive of Rural India. He has been a rural reporter for decades and is the author of 'Everybody Loves a Good Drought' and 'The Last Heroes: Foot Soldiers of Indian Freedom'.

Other stories by P. Sainath
Series Editors : Sharmila Joshi

Sharmila Joshi is former Executive Editor, People's Archive of Rural India, and a writer and occasional teacher.

Other stories by Sharmila Joshi
Translator : Shailaja G. P.

Shailaja ([email protected]) is an author and translator of Kannada language. She has translated Khalid Hussain’s ‘The Kite Runner’ and Francis Buchanan’s ‘A Journey from Madras through the Countries of Mysore Canara and Malabar’ to Kannada. Many of her articles about various social issues including gender equality, women empowerment have been published in print media. Shailaja is also contributing as a translator for NGOs like Point of View, Helpage India and National Federation of the Blind.

Other stories by Shailaja G. P.