ಭಾನುವಾರ ಬೆಳಗಿನ ಸಮಯ 10.30 ಹನಿ ಕೆಲಸಕ್ಕೆ ಹೋಗಲು ಸಿದ್ಧರಾಗುತ್ತಾ ಕನ್ನಡಿಯ ಮುಂದೆ ಕುಳಿತು ಅವರ ತುಟಿಗಳಿಗೆ ಕೆಂಪು ಲಿಪ್ಸ್ಟಿಕ್ ಹಚ್ಚಿಕೊಳ್ಳುತ್ತಿದ್ದರು. ಈ ನಡುವೆ ನನ್ನನ್ನು ನೋಡಿ "ಈ ಬಣ್ಣವು ನನ್ನ ಉಡುಪಿಗೆ ಹೊಂದಿಕೆಯಾಗುತ್ತದೆ" ಎಂದು ಹೇಳುತ್ತಾ ತನ್ನ ಏಳು ವರ್ಷದ ಮಗಳಿಗೆ ಆಹಾರವನ್ನು ನೀಡಲು ಅವಸರದಿಂದ ಎದ್ದರು. ಕೆಲವು ಮಾಸ್ಕ್‌ಗಳು ಮತ್ತು ಇಯರ್‌ಫೋನ್‌ ಕನ್ನಡಿಯ ಮುಂದೆ ಡ್ರೆಸ್ಸಿಂಗ್ ಟೇಬಲ್ ಮೇಲೆ ಬಿದ್ದಿದ್ದವು. ಮೇಕ್ಅಪ್ ವಸ್ತುಗಳು ಮತ್ತು ಸೌಂದರ್ಯವರ್ಧಕಗಳು ಮೇಜಿನ ಮೇಲೆ ಚದುರಿದ್ದವು. ಕೋಣೆಯ ಒಂದು ಮೂಲೆಯಲ್ಲಿ ಗೋಡೆಯ ಮೇಲೆ ನೇತಾಡುವ, ದೇವರು ಮತ್ತು ದೇವತೆಗಳ ಚಿತ್ರಗಳು ಮತ್ತು ಸಂಬಂಧಿಕರ ಫೋಟೋಗಳು ಕಾಣುತ್ತಿದ್ದವು.

ಹನಿ (ಹೆಸರು ಬದಲಾಯಿಸಲಾಗಿದೆ) ತನ್ನ ಮನೆಯಿಂದ 7-8 ಕಿಲೋಮೀಟರ್ ದೂರದಲ್ಲಿರುವ ಹೋಟೆಲ್‌ನಲ್ಲಿ ತನ್ನ ಕ್ಲೈಂಟ್ ಭೇಟಿಯಾಗಲು ತಯಾರಾಗುತ್ತಿದ್ದಾರೆ - ನವದೆಹಲಿಯ ಮಂಗೋಲ್‌ಪುರಿ ಪ್ರದೇಶದ ಬಸ್ತಿಯಲ್ಲಿ ಅವರಿಗಾಗಿ ಒಂದು ಕೋಣೆಯನ್ನು ಹೊಂದಿಸಲಾಗಿದೆ. ಹನಿ ಸುಮಾರು 32 ವರ್ಷ ಪ್ರಾಯದವರು ಹಾಗೂ ವೃತ್ತಿಯಲ್ಲಿ ಲೈಂಗಿಕ ಕಾರ್ಯಕರ್ತೆ. ರಾಜಧಾನಿಯ ಹತ್ತಿರದ ನಂಗ್ಲೋಯಿ ಜಾಟ್ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಮೂಲತಃ ಗ್ರಾಮೀಣ ಹರಿಯಾಣ ಮೂಲದವರು. “ನಾನು 10 ವರ್ಷಗಳ ಹಿಂದೆ ಇಲ್ಲಿಗೆ ಬಂದೆ, ಈಗ ನಾನು ಇಲ್ಲಿಯವಳಾಗಿದ್ದೇನೆ. ಆದರೆ ದೆಹಲಿಗೆ ಬಂದಾಗಿನಿಂದ ನನ್ನ ಜೀವನ ಸಂಕಷ್ಟಗಳ ಸರಮಾಲೆಯನ್ನೇ ಎದುರಿಗಿಡುತ್ತಿದೆ.”

ಯಾವ ರೀತಿಯ ದುರಂತಗಳು?

“ನನ್ನನ್ನು ನೋಡಿಕೊಳ್ಳಲು ಮತ್ತು ಆಸ್ಪತ್ರೆಗೆ ಕರೆದೊಯ್ಯಲು ಯಾರೂ ಇಲ್ಲದ ಸಮಯದಲ್ಲಿ ನನ್ನ ಪಾಲಿಗೆ ಇದ್ದಿದ್ದು ನಾಲ್ಕು ಗರ್ಭಪಾತಗಳ ಬಹಳ ದೊಡ್ಡ ಆಘಾತ!” ಹನಿ ತಾನು ಇದಕ್ಕೂ ಮೊದಲು ಬಹಳ ಸಂಕಷ್ಟದ ದಾರಿಯಲ್ಲಿ ನಡೆದುಬಂದಿದ್ದೇನೆನ್ನುವುದನ್ನು ವ್ಯಂಗ್ಯವಾಗಿ ಹೇಳುತ್ತಾರೆ.

“ನನಗೆ ಮತ್ತು ನನ್ನ ಹೊಟ್ಟೆಯೊಳಗಿದ್ದ ಮಗುವಿಗೆ ಆಹಾರಕ್ಕಾಗಿ ನನ್ನ ಬಳಿ ಹಣವೇ ಇದ್ದಿರಲಿಲ್ಲ. ಇದೊಂದೇ ಕಾರಣದಿಂದಾಗಿ ನಾನು ಈ ಉದ್ಯೋಗಕ್ಕೆ ಇಳಿದೆ. ನಾನು ಐದನೇ ಬಾರಿಗೆ ಗರ್ಭಿಣಿಯಾಗಿದ್ದೆ. ಎರಡು ತಿಂಗಳ ಎಳೇ ಬಸುರಿಯಾಗಿದ್ದಾಗ ಗಂಡ ನನ್ನನ್ನು ಬಿಟ್ಟುಹೋದ. ನನ್ನನ್ನು ಕಾಡಿದ ಸರಣಿ ಅನಾರೋಗ್ಯದ ಕಾರಣಕ್ಕೆ ನಾನು ಕೆಲಸ ಮಾಡುತ್ತಿದ್ದ ಪ್ಲಾಸ್ಟಿಕ್‌ ಕಂಟೇನನರ್‌ ಫ್ಯಾಕ್ಟರಿಯ ಮಾಲಿಕರು ನನ್ನನ್ನು ಕೆಲಸದಿಂದ ತೆಗೆದುಹಾಕಿದರು. ಅಲ್ಲಿ ತಿಂಗಳಿಗೆ 10,000 ಸಂಪಾದಿಸುತ್ತಿದ್ದೆ.” ಎಂದು ಅವರು ಹೇಳುತ್ತಾರೆ.

ಹರಿಯಾಣದಲ್ಲಿ ಹನಿಯವರ ಪಾಲಕರು ಅವರಿಗೆ ಹದಿನಾರು ವರ್ಷವಿರುವಾಗ ಮದುವೆ ಮಾಡಿಸಿದರು. ಡ್ರೈವರ್‌ ಆಗಿ ಕೆಲಸ ಮಾಡುತ್ತಿದ್ದ ತನ್ನ ಗಂಡನೊಂದಿಗೆ ಹನಿಯವರು ಕೆಲವು ವರ್ಷಗಳ ಕಾಲ ಅಲ್ಲಿ ಬದುಕಿದ್ದರು. ಆಕೆ 22 ವರ್ಷವಿರುವಾಗ ದಂಪತಿಗಳು ದೆಹಲಿಗೆ ತಮ್ಮ ವಾಸ್ತವ್ಯ ಬದಲಿಸಿದರು. ಆದರೆ ಒಮ್ಮೆ ಅಲ್ಲಿಗೆ ಹೋದ ನಂತರ ಅವರ ಕುಡುಕ ಗಂಡ ಆಗಾಗ ನಾಪತ್ತೆಯಾಗಲು ಪ್ರಾರಂಭಿಸಿದ. “ಅವನು ತಿಂಗಳುಗಟ್ಟಲೆ ಕಾಣುತ್ತಿರಲಿಲ್ಲ, ಎಲ್ಲಿ ಹೋಗುತ್ತಿದ್ದನೆಂದು ಗೊತ್ತಾಗುತ್ತಿರಲಿಲ್ಲ. ಅವನೂ ಈಗಲೂ ಅದನ್ನೇ ಮಾಡುತ್ತಾನೆ ಮತ್ತು ಎಲ್ಲಿಗೆ ಹೋಗಿದ್ದೆನೆಂದು ಎಂದೂ ಹೇಳಿಲ್ಲ. ಬೇರೆ ಹೆಂಗಸರೊಂದಿಗೆ ಹೋಗಿ ಹಣ ಮುಗಿದಾಗ ಮರಳುತ್ತಾನೆ. ಅವನು ಆಹಾರ ಸರಬರಾಜು ಕಂಪನಿಯೊಂದರಲ್ಲಿ ಡೆಲಿವರಿ ಏಜೆಂಟ್‌ ಆಗಿ ಕೆಲಸ ಮಾಡುತ್ತಾನೆ. ತಾನು ದುಡಿದ ಹಣವನ್ನೆಲ್ಲ ತನಗೇ ಖರ್ಚು ಮಾಡಿಕೊಳ್ಳುತ್ತಾನೆ. ಇದರಿಂದಾಗಿಯೇ ನನಗೆ ನಾಲ್ಕು ಗರ್ಭಪಾತಗಳಾಗಿದ್ದು. ಅವನು ನನಗೆ ಅಗತ್ಯವಿರುವ ಆಹಾರವಾಗಲಿ, ಔಷಧಿಯನ್ನಾಗಲಿ ತಂದು ಕೊಡುತ್ತಲೇ ಇರಲಿಲ್ಲ. ಆಗ ನಾನು ಬಹಳ ದುರ್ಬಲಳಾಗಿ ಕಾಣುತ್ತಿದ್ದೆ” ಎನ್ನುತ್ತಾರೆ.

'I was five months pregnant and around 25 when I began this [sex] work', says Honey
PHOTO • Jigyasa Mishra

ʼನಾನು ಈ ಕೆಲಸಕ್ಕೆ ಇಳಿದಾಗ (ಲೈಂಗಿ ವೃತ್ತಿ) ನನಗೆ 25 ವರ್ಷಗಳು ಮತ್ತು ಆಗ ಐದು ತಿಂಗಳ ಗರ್ಭಿಣಿʼ ಎನ್ನುತ್ತಾರೆ ಹನಿ

ಪ್ರಸ್ತುತ ಹನಿ ತನ್ನ ಮಗಳೊಂದಿಗೆ ಮಂಗೋಲ್‌ಪುರಿಯಲ್ಲಿನ ತನ್ನ ಮನೆಯಲ್ಲಿ ವಾಸಿಸುತ್ತಿದ್ದಾರೆ. ಆ ಮನೆಗೆ ತಿಂಗಳಿಗೆ 3,500 ಬಾಡಿಗೆ ನೀಡುತ್ತಾರೆ. ಅವರ ಗಂಡನೂ ಅವರೊಂದಿಗೆ ವಾಸಿಸುತ್ತಾನೆಯಾದರೂ ಈಗಲೂ ತಿಂಗಳುಗಟ್ಟಲೆ ನಾಪತ್ತೆಯಾಗುತ್ತಾನೆ. “ನನ್ನ ಕೆಲಸ ಹೋದ ಮೇಲೂ ಹೇಗೋ ಬದುಕಲು ನೋಡಿದೆ ಆದರೆ ಸಾಧ್ಯವಾಗಲಿಲ್ಲ.  ನಂತರ ಗೀತಾ ಅಕ್ಕ ಈ ಲೈಂಗಿಕ ವೃತ್ತಿಯ ಕುರಿತು ಹೇಳಿದರು ಮತ್ತು ಮೊದಲ ಗಿರಾಕಿಯನ್ನೂ ಹಿಡಿದುಕೊಟ್ಟರು. ಈ ಕೆಲಸ ಪ್ರಾರಂಭಿಸಿದಾಗ ನನಗೆ ಸುಮಾರು 25 ವರ್ಷಗಳಾಗಿತ್ತು ಮತ್ತು ಆಗ ಐದು ತಿಂಗಳ ಬಸುರಿಯಾಗಿದ್ದೆ.” ಎನ್ನುತ್ತಾರೆ. ಮಗಳಿಗೆ ತಿನ್ನಿಸುತ್ತಲೇ ನನ್ನೊಂದಿಗೆ ಮಾತನಾಡುತ್ತಿದ್ದರು. ಹನಿಯವರ ಮಗಳು ಹತ್ತಿರದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎರಡನೇ ತರಗತಿಯಲ್ಲಿ ಓದುತ್ತಿದ್ದಾಳೆ. ಶಾಲೆಯು ತಿಂಗಳಿಗೆ 600 ರೂಪಾಯಿಗಳ ಶುಲ್ಕವನ್ನು ವಿಧಿಸುತ್ತದೆ. ಈ ಲಾಕ್‌ಡೌನ್‌ ಸಮಯದಲ್ಲಿ ಹನಿಯವರ ಮಗಳು ತನ್ನ ಅಮ್ಮ ಆಕೆಯ ಗ್ರಾಹಕರೊಂದಿಗಿನ ಸಂಪರ್ಕಕ್ಕಾಗಿ ಬಳಸುವ ಫೋನಿನಲ್ಲೇ ಆನ್ಲೈನ್‌ ತರಗತಿಗಳಿಗೆ ಹಾಜರಾಗುತ್ತಾಳೆ.

“ಲೈಂಗಿಕ ವೃತ್ತಿ ನನಗೆ ಬಾಡಿಗೆ, ಆಹಾರ ಮತ್ತು ಔಷಧಿಗಳ ಖರ್ಚಿಗೆ ಸಾಕಾಗುವಷ್ಟು ದುಡಿಮೆಯನ್ನು ನೀಡಿದೆ. ಆರಂಭದ ದಿನಗಳಲ್ಲಿ ನಾನು ತಿಂಗಳಿಗೆ 50,000 ತನಕ ಸಂಪಾದಿಸುತ್ತಿದ್ದೆ. ಆಗ ನಾನು ಯುವತಿಯಾಗಿದ್ದೆ ಹಾಗೂ ಸುಂದರವಾಗಿದ್ದೆ. ಈಗ ಸ್ವಲ್ಪ ದಪ್ಪಗಾಗಿದ್ದೇನೆ” ಜೋರಾಗಿ ನಗುತ್ತಾ ಹೇಳುತ್ತಾರೆ ಹನಿ. “ನಾನು ನನ್ನ ಹೆರಿಗೆಯ ನಂತರ ಈ ಕೆಲಸವನ್ನು ತೊರೆದು ಯಾವುದಾದರೂ ಸಭ್ಯವಾದ ಉದ್ಯೋಗಕ್ಕೆ ಸೇರಬೇಕೆಂದಿದ್ದೆ. ಮನೆ ಕೆಲಸ, ಕಸ ಗುಡಿಸುವುದಾದರೂ ಸರಿಯೆಂದು ತಯಾರಿದ್ದೆ. ಆದರೆ ದೇವರು ನನಗೆಂದು ಬೇರೆಯದೇ ಯೋಜನೆ ತಯಾರು ಮಾಡಿಟ್ಟಿದ್ದ.”

“ನಾನು ಬಸುರಿಯಾಗಿದ್ದ ಸಮಯದಲ್ಲೂ ಸಾಧ್ಯವಿರುವಷ್ಟು ದುಡಿಯಲು ಕಾತುರಳಾಗಿದ್ದೆ, ಯಾಕೆಂದರೆ ನನಗೆ ಐದನೇ ಸಲವೂ ಗರ್ಭಪಾತವಾಗುವುದು ಬೇಕಿರಲಿಲ್ಲ. ನನ್ನ ಹೊಟ್ಟೆಯಲ್ಲಿರುವ ಮಗುವಿಗೆ ನನ್ನಿಂದ ಸಾಧ್ಯವಿರುವಷ್ಟು ಔಷಧಿಗಳು ಮತ್ತು ಪೌಷ್ಟಿಕ ಆಹಾರವನ್ನು ನೀಡಲು ನಾನು ಪ್ರಯತ್ನಿಸುತ್ತಿದ್ದೆ. ಇದೇ ಕಾರಣಕ್ಕಾಗಿ ನಾನು ನನ್ನ ಒಂಬತ್ತನೇ ತಿಂಗಳಿನಲ್ಲೂ ಗಿರಾಕಿಗಳನ್ನು ಒಪ್ಪಿಕೊಳ್ಳುತ್ತಿದ್ದೆ. ಈ ಸಮಯದಲ್ಲಿ ಬಹಳ ನೋವಾಗುತ್ತಿತ್ತು ಆದರೆ ನನಗೆ ಬೇರೆ ಆಯ್ಕೆಯಿರಲಿಲ್ಲ. ಇದು ನನ್ನ ಹೆರಿಗೆಯಲ್ಲಿ ತೊಂದರೆಗೆ ಕಾರಣವಾಗಬಹುದೆಂದು ನನಗೆ ಸ್ವಲ್ಪಸ್ವಲ್ಪವಷ್ಟೇ ತಿಳಿದಿತ್ತು” ಎನ್ನುತ್ತಾರೆ.

“ಬಸುರಿನ ಕೊನೆಯ ಮೂರು ತಿಂಗಳು ಲೈಂಗಿಕ ಚಟುವಟಿಕೆಗಳನ್ನು ನಡೆಸುವುದು ಹಲವು ರೀತಿಯಲ್ಲಿ ಅಪಾಯಕ್ಕೆ ಕಾರಣವಾಗಬಹುದು” ಎಂದು ಲಕ್ನೋ ಮೂಲದ ಪ್ರಸೂತಿ ತಜ್ಞರಾದ ಡಾ. ನೀಲಮ್‌ ಸಿಂಗ್‌ ʼPARIʼಗೆ ತಿಳಿಸಿದ್ದಾರೆ. “ಇದರಿಂದ ಅವರ ಒಳ ಚರ್ಮ ಹರಿಯಬಹುದು ಮತ್ತು ಲೈಂಗಿಕವಾಗಿ ಹರಡುವ ರೋಗದಿಂದ (ಎಸ್‌ಟಿಡಿ) ಬಳಲುವಂತಾಗಬಹದು. ಜೊತೆಗೆ ಅಕಾಲಿಕ ಹೆರಿಗೆಗೂ ಒಳಗಾಗಬಹುದು ಮತ್ತು ಮಗುವಿಗೆ ಎಸ್‌ಟಿಡಿ ಹರಡಬಹುದು. ಗರ್ಭಿಣಿಯಾಗಿರುವಾಗ ಮತ್ತೆ ಮತ್ತೆ ಸಂಭೋಗ ನಡೆಸಿದಲ್ಲಿ ಗರ್ಭಪಾತವೂ ಸಂಭವಿಸಬಹುದು. ಹೆಚ್ಚಿನ ಸಂದರ್ಭಗಳಲ್ಲಿ ಲೈಂಗಿಕ ಕಾರ್ಯಕರ್ತರಾಗಿರುವ ಮಹಿಳೆಯರು ಗರ್ಭಿಣಿಯಾಗುವುದನ್ನು ತಪ್ಪಿಸುತ್ತಾರೆ. ಒಂದು ವೇಳೆ ಗರ್ಭಿಣಿಯಾದರೆ ಅವರ ಕೆಲಸವನ್ನು ಮುಂದುವರೆಸುತ್ತಾರೆ. ಇದು ತಡವಾದ ಮತ್ತು ಅಸುರಕ್ಷಿತ ಗರ್ಭಪಾತಕ್ಕೆ ಕಾರಣವಾಗಬಹದು. ಜೊತೆಗೆ ಸಂತಾನೋತ್ಪತ್ತಿ ಆರೋಗ್ಯದ ಮೇಲೂ ಪರಿಣಾಮ ಬೀರುವ ಸಂಭವವಿರುತ್ತದೆ.”

“ಒಮ್ಮೆ ತಡೆಯಲಾಗದ ನೋವು ಮತ್ತು ತುರಿಕೆ ಉಂಟಾದಾಗ ನಾನು ಸೋನೊಗ್ರಫಿ ಮಾಡಿಸಿದ್ದೆ.” ಎನ್ನುತ್ತಾರೆ ಹನಿ. “ಆಗ ಅಲ್ಲಿ ನನ್ನ ತೊಡೆಗಳಲ್ಲಿ ಅಸಹಜವಾದ ಅಲರ್ಜಿ, ಕಿಬ್ಬೊಟ್ಟೆ ಮತ್ತು ಯೋನಿಯಲ್ಲಿ ಊದಿರುವುದು ಕಂಡುಬಂದಿತು. ಮುಂದೆ ಬರಬಹುದಾದ ಆ ನೋವು ಮತ್ತು ಖರ್ಚನ್ನು ನೆನೆದು ಸತ್ತುಹೋಗಿಬಿಡೋಣ ಎನ್ನಿಸಿತ್ತು.” ವೈದ್ಯರು ಅದು ಲೈಂಗಿಕವಾಗಿ ಹರಡಿದ ಕಾಯಿಲೆಯೆಂದು ಹೇಳಿದರು.  “ಆದರೆ ನಂತರ ನನ್ನ ಗಿರಾಕಿಯೊಬ್ಬರು ನನಗೆ ಭಾವನಾತ್ಮಕವಾಗಿ ಮತ್ತು ಆರ್ಥಿಕವಾಗಿ ಬೆಂಬಲ ನೀಡಿದರು. ನಾನು ವೈದ್ಯರಿಗೆ ನನ್ನ ವೃತ್ತಿಯ ಕುರಿತು ಹೇಳಿರಲಿಲ್ಲ. ಮತ್ತೆ ಅದರಿಂದ ಸಮಸ್ಯೆಯಾಗಬಹುದು ಎನ್ನಿಸಿತ್ತು. ಒಂದು ವೇಳೆ ಆಕೆ ನನ್ನ ಗಂಡನನ್ನು ನೋಡಬೇಕು ಎಂದಿದ್ದರೆ ನಾನು ನನ್ನ ಗ್ರಾಹಕರಲ್ಲಿ ಒಬ್ಬರನ್ನು ಕರೆದುಕೊಂಡು ಹೋಗುವುದೆಂದು ತೀರ್ಮಾನಿಸಿದ್ದೆ.”

“ಆ ವ್ಯಕ್ತಿಗೆ ನಾನು ಋಣಿ, ಆತನಿಂದಾಗಿ ನಾನು ಮತ್ತು ನನ್ನ ಮಗಳು ಚೆನ್ನಾಗಿದ್ದೇವೆ. ಅವನು ನನ್ನ ಔಷಧೋಪಚಾರದ ಸಮಯದಲ್ಲಿ ಚಿಕಿತ್ಸೆಯ ಅರ್ಧ ಖರ್ಚನ್ನು ಭರಿಸಿದ್ದ. ಆಗಲೇ ನಾನು ಇದೇ ವೃತ್ತಿಯಲ್ಲಿ ಮುಂದುವರೆಯಲು ನಿರ್ಧರಿಸಿದ್ದು.” ಎನ್ನುತ್ತಾರೆ ಹನಿ.

'I felt like killing myself with all that pain and the expenses I knew would follow,' says Honey, who had contracted an STD during her pregnancy
PHOTO • Jigyasa Mishra
'I felt like killing myself with all that pain and the expenses I knew would follow,' says Honey, who had contracted an STD during her pregnancy
PHOTO • Jigyasa Mishra

ʼಮುಂದೆ ಬರಬಹುದಾದ ಆ ನೋವು ಮತ್ತು ಖರ್ಚನ್ನು ನೆನೆದು ಸತ್ತುಹೋಗಿಬಿಡೋಣ ಎನ್ನಿಸಿತ್ತು.ʼ ಎನ್ನುತ್ತಾರೆ ಹನಿ. ಅವರು ಬಸುರಿಯಾಗಿದ್ದ ಸಮಯದಲ್ಲಿ ಲೈಂಗಿಕ ರೋಗಕ್ಕೆ ತುತ್ತಾಗಿದ್ದರು

“ಸಾಕಷ್ಟು ಸಂಘಟನೆಗಳು ಅವರಿಗೆ ಕಾಂಡೋಮ್‌ನ ಬಳಕೆಯ ಮಹತ್ವವನ್ನು ತಿಳಿಸುತ್ತವೆ.” ಎನ್ನುತ್ತಾರೆ ನ್ಯಾಷನಲ್ ನೆಟ್ವರ್ಕ್ ಆಫ್ ಸೆಕ್ಸ್ ವರ್ಕರ್ಸ್ (ಎನ್ಎನ್ಎಸ್ಡಬ್ಲ್ಯೂ) ನ ಸಂಯೋಜಕರಾದ ಕಿರಣ್ ದೇಶಮುಖ್. “ಆದರೂ ಲೈಂಗಿಕ ಕಾರ್ಯಕರ್ತರಲ್ಲಿ ಗರ್ಭಪಾತವಾಗುವುದಕ್ಕಿಂತಲೂ ಮಾಡಿಸುವುದೇ ಹೆಚ್ಚು, ಸಾಮಾನ್ಯವಾಗಿ ಅವರು ಸರಕಾರಿ ಆಸ್ಪತ್ರೆಗಳಿಗೆ ಹೋಗುತ್ತಾರೆ. ಅಲ್ಲಿ ಅವರ ವೃತ್ತಿಯ ಕುರಿತು ತಿಳಿದಾಗ ಅವರು ನಿರ್ಲಕ್ಷ್ಯದಿಂದ ಚಿಕಿತ್ಸೆ ನೀಡುತ್ತಾರೆ.”

ಅವರಿಗೆ ಹೇಗೆ ತಿಳಿಯುತ್ತದೆ?

“ಅವರು ಗೈನಾಕಲಜಿಸ್ಟ್‌ಗಳು” ಎಂದು ಮಹಾರಾಷ್ಟ್ರದ ಸಾಂಗ್ಲಿಯ ವೇಶ್ಯಾ ಅನ್ಯಾಯ ಮುಕ್ತ್ ಪರಿಷದ್ (ವಿಎಎಂಪಿ)ನ ಅಧ್ಯಕ್ಷರೂ ಆಗಿರುವ ದೇಶಮುಖ್‌ ಒತ್ತಿಹೇಳುತ್ತಾರೆ. “ಒಮ್ಮೆ ಅವರು ಮಹಿಳೆಯ ವಿಳಾಸ ಕೇಳುತ್ತಾರೆ. ವಿಳಾಸದಿಂದ ಅವರು ಇರುವ ಪ್ರದೇಶವನ್ನು ತಿಳಿದುಕೊಳ್ಳುವ ವೈದ್ಯರಿಗೆ ಅದು ತಿಳಿದುಬಿಡುತ್ತದೆ. ನಂತರ ಆ ಮಹಿಳೆಯರಿಗೆ ದಿನಾಂಕಗಳನ್ನು ತಿಳಿಸಲಾಗುತ್ತದೆ (ಗರ್ಭಪಾತಕ್ಕಾಗಿ) ಅದು ಆಗಾಗ ಮುಂದಕ್ಕೆ ಹೋಗುತ್ತಲೇ ಇರುತ್ತದೆ. ಕೊನೆಗೆ ಕೆಲವು ಅವಧಿಗಳು ಮುಗಿದ ನಂತರ ʼಈಗ ಸಮಯ ಮೀರಿಹೋಗಿದೆಯಾದ್ದರಿಂದ ಗರ್ಭಪಾತ ಸಾಧ್ಯವಿಲ್ಲ ಅಲ್ಲದೆ ನಾಲ್ಕು ತಿಂಗಳಾದ ಮೇಲೆ ಗರ್ಭಪಾತ ಮಾಡಿಸುವುದು ಅಪರಾಧʼ ಎಂದು ಹೇಳುತ್ತಾರೆ.”

ಕೆಲವು ಮಹಿಳೆಯರು ವೈದ್ಯಕೀಯ ಸಹಾಯಕ್ಕಾಗಿ ಸರಕಾರಿ ವೈದ್ಯರನ್ನು ಕಾಣುವದನ್ನು ತಪ್ಪಿಸುತ್ತಾರೆ. ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ ಟ್ರಾಫಿಕಿಂಗ್‌ (ಮಾನವ ಕಳ್ಳಸಾಗಣೆ) ಮತ್ತು ಎಚ್‌ಐವಿ / ಏಡ್ಸ್ ಯೋಜನೆಯ 2007ರ ವರದಿಯ ಪ್ರಕಾರ, ಸುಮಾರು “ಶೇಕಡಾ 50ರಷ್ಟು ಲೈಂಗಿಕ ಕಾರ್ಯಕರ್ತರು [ಒಂಬತ್ತು ರಾಜ್ಯಗಳಲ್ಲಿ ಸಮೀಕ್ಷೆ ನಡೆಸಲಾಗಿದೆ] ಸಾರ್ವಜನಿಕ ಆರೋಗ್ಯ ಸೌಲಭ್ಯಗಳಿಂದ ಪ್ರಸವ ಪೂರ್ವ ಆರೈಕೆ ಮತ್ತು ಸಾಂಸ್ಥಿಕ ಹೆರಿಗೆಯಂತಹ ಸೇವೆಗಳನ್ನು ಬಯಸುತ್ತಿಲ್ಲ ಎಂದು ವರದಿ ಮಾಡಿದೆ.” ಹೆರಿಗೆಯ ವಿಷಯದಲ್ಲಿ ತುರ್ತುಸ್ಥಿತಿ, ಅಪವಾದ, ಅಲ್ಲಿನವರ ವರ್ತನೆಗಳ ಭಯವು ಇದಕ್ಕಿರುವ ಕಾರಣಗಳಲ್ಲಿ ಕೆಲವು.

“ಈ ವೃತ್ತಿಯು ಸಂತಾನೋತ್ಪತ್ತಿ ಆರೋಗ್ಯಕ್ಕೆ ನೇರವಾಗಿ ಸಂಬಂಧಿಸಿದೆ” ಎಂದು ವಾರಣಾಸಿ ಮೂಲದ ಗುಡಿಯಾ ಸಂಸ್ಥೆಯ ಸಂಸ್ಥಾಪಕ ಮತ್ತು ನಿರ್ದೇಶಕ ಅಜೀತ್ ಸಿಂಗ್ ಹೇಳುತ್ತಾರೆ, ಇದು 25 ವರ್ಷಗಳಿಂದ ಲೈಂಗಿಕ ಕಳ್ಳಸಾಗಾಣಿಕೆಯ ವಿರುದ್ಧ ಹೋರಾಡಿದೆ. ದೆಹಲಿಯ ಜಿಬಿ ರಸ್ತೆ ಪ್ರದೇಶದಲ್ಲಿ ಮಹಿಳೆಯರಿಗೆ ಸಹಾಯ ಮಾಡುವ ಸಂಸ್ಥೆಗಳೊಂದಿಗೆ ಸಹ ಕೆಲಸ ಮಾಡಿರುವ ಸಿಂಗ್, ತಮ್ಮ ಅನುಭವದಲ್ಲಿ “ಲೈಂಗಿಕ ವೃತ್ತಿಯಲ್ಲಿ ಶೇಕಡಾ 75-80ರಷ್ಟು ಮಹಿಳೆಯರು ಕೆಲವು ಅಥವಾ ಇತರ ಸಂತಾನೋತ್ಪತ್ತಿ ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದಾರೆ” ಎಂದು ಹೇಳುತ್ತಾರೆ.

ಮತ್ತೆ ನಂಗ್ಲೋಯಿ ಜಾಟ್‌ಗೆ ಬರುವುದಾದರೆ “ನಾವು ಎಲ್ಲಾ ರೀತಿಯ ಗ್ರಾಹಕರನ್ನು ಹೊಂದಿದ್ದೇವೆ” ಎಂದು ಹನಿ ಹೇಳುತ್ತಾರೆ. “ಎಂಬಿಬಿಎಸ್ ವೈದ್ಯರಿಂದ ಹಿಡಿದು ಪೊಲೀಸರು, ವಿದ್ಯಾರ್ಥಿಗಳಿಂದ ಹಿಡಿದು ರಿಕ್ಷಾ ಎಳೆಯುವವರ ತನಕ, ಎಲ್ಲರೂ ನಮ್ಮ ಬಳಿ ಬರುತ್ತಾರೆ. ಹರೆಯದಲ್ಲಿ, ನಾವು ಒಳ್ಳೆಯ ಮೊತ್ತವನ್ನು ಕೊಡಬಲ್ಲ ಜನರೊಂದಿಗೆ ಮಾತ್ರ ಹೋಗುತ್ತೇವೆ, ಆದರೆ ನಮ್ಮ ವಯಸ್ಸು ಹೆಚ್ಚಾದಂತೆ, ನಾವು ಆಯ್ಕೆ ಮಾಡುವುದನ್ನು ನಿಲ್ಲಿಸುತ್ತೇವೆ. ಹಾಗೆ ನೋಡಿದರೆ, ನಾವು ಈ ವೈದ್ಯರು ಮತ್ತು ಪೊಲೀಸರೊಂದಿಗೆ ಸದಾ ಉತ್ತಮ ಸಂಬಂಧ ಹೊಂದಿರಬೇಕು. ಯಾವ ಕ್ಷಣದಲ್ಲಿಯೂ ಅವರ ಅವಶ್ಯಕತೆ ಎದುರಾಗಬಹುದು."

ಈಗ ತಿಂಗಳಿಗೆ ಆಕೆ ಎಷ್ಟು ಸಂಪಾದಿಸುತ್ತಾರೆ?

“ಈ ಲಾಕ್‌ಡೌನ್‌ ಅವಧಿಯನ್ನು ಹೊರತುಪಡಿಸಿ ಹೇಳುವುದಾದರೆ, ನಾನು ತಿಂಗಳಿಗೆ ಸುಮಾರು 25,000 ರೂಪಾಯಿಗಳ ತನಕ ಸಂಪಾದಿಸುತ್ತಿದ್ದೆ. ಆದರೆ ಇದೊಂದು ಅಂದಾಜು ಮಾತ್ರ. ಗಿರಾಕಿಯಿಂದ ಗಿರಾಕಿಗೆ ಅವರ ವೃತ್ತಿಯನ್ನು ಅವಲಂಬಿಸಿ ಅವರು ಪಾವತಿಸುವ ಮೊತ್ತವೂ ಬದಲಾಗುತ್ತದೆ. ಜೊತೆಗೆ ನಾವು ಅವರೊಂದಿಗೆ ಒಂದಿಡೀ ರಾತ್ರಿ ಕಳೆಯುತ್ತೇವೆಯೋ ಅಥವಾ ಕೆಲವು ಗಂಟೆಗಳೋ ಎನ್ನುವುದನ್ನೂ ಅವಲಂಬಿಸಿರುತ್ತದೆ.” ಎನ್ನುತ್ತಾರೆ ಹನಿ. “ನಮಗೆ ಗಿರಾಕಿಯ ಕುರಿತು ಅನುಮಾನ ಬಂದಲ್ಲಿ ಅವರು ಕರೆದಲ್ಲಿ ಹೋಗದೆ ನಮ್ಮದೇ ಸ್ಥಳಕ್ಕೆ ಆಹ್ವಾನಿಸುತ್ತೇವೆ. ಆದರೆ ನನ್ನ ವಿಷಯದಲ್ಲಿ ನಾನು ನಂಗೋಲಿ ಜಾಟ್‌ನಲ್ಲಿರುವ ಗೀತಕ್ಕನ ಮನೆಗೆ ಕರೆಸುತ್ತೇನೆ. ಪ್ರತಿ ತಿಂಗಳೂ ಇಲ್ಲಿ ನಾನು ಕೆಲವು ರಾತ್ರಿ ಹಗಲು ಉಳಿಯುತ್ತೇನೆ. ಗಿರಾಕಿ ನೀಡಿದ ಅರ್ಧದಷ್ಟು ಹಣವನ್ನು ಆಕೆ ಇಟ್ಟುಕೊಳ್ಳುತ್ತಾರೆ. ಅದು ಅವರ ಕಮಿಷನ್.‌” ಬೆಲೆಯ ವಿಷಯ ಬಂದಾಗ ವಿಶಾಲ ವ್ಯಾಪ್ತಿಯಲ್ಲಿ ಬದಲಾಗುತ್ತದೆಯಾದರೂ ಆಕೆಯ ಒಂದು ರಾತ್ರಿಗೆ ಕನಿಷ್ಟ 1,000 ಸಾವಿರ ಪಡೆಯುತ್ತಾರೆ.

Geeta (in orange) is the overseer of sex workers in her area; she earns by offering her place for the women to meet clients
PHOTO • Jigyasa Mishra
Geeta (in orange) is the overseer of sex workers in her area; she earns by offering her place for the women to meet clients
PHOTO • Jigyasa Mishra

ಗೀತಾ (ಕಿತ್ತಳೆ ಬಣ್ಣದ ಉಡುಪಿನಲ್ಲಿರುವವರು) ತನ್ನ ಪ್ರದೇಶದ ಲೈಂಗಿಕ ಕಾರ್ಯಕರ್ತೆಯರ ಮೇಲ್ವಿಚಾರಕಿಯಾಗಿದ್ದಾರೆ; ಮಹಿಳೆಯರು ಗ್ರಾಹಕರನ್ನು ಭೇಟಿ ಮಾಡಲು ತನ್ನ ಸ್ಥಳವನ್ನು ನೀಡುವ ಮೂಲಕ ಅವರು ಹಣವನ್ನು ಗಳಿಸುತ್ತಾರೆ

ತನ್ನ ನಲವತ್ತರ ಹರೆಯದಲ್ಲಿರುವ ಗೀತಾ ತನ್ನ ಏರಿಯಾದಲ್ಲಿನ ಲೈಂಗಿಕ ಕಾರ್ಯಕರ್ತೆಯರ ಮೇಲ್ವಿಚಾರಣೆ ಮಾಡುತ್ತಾರೆ. ಆಕೆಯೂ ದೇಹ ವ್ಯಾಪಾರ ಮಾಡುತ್ತಾರೆ. ಆದರೆ ಮುಖ್ಯವಾಗಿ ಇತರ ಮಹಿಳೆಯರಿಗೆ ತನ್ನ ಮನೆಯನ್ನು ನೀಡುವ ಮೂಲಕ ಅವರಿಂದ ಕಮಿಷನ್‌ ರೂಪದಲ್ಲಿ ಹಣ ಪಡೆಯುತ್ತಾರೆ. “ನಾನು ಕಷ್ಟದಲ್ಲಿರುವ ಮಹಿಳೆಯರನ್ನು ಈ ವೃತ್ತಿಗೆ ಕರೆತರುತ್ತೇನೆ ಮತ್ತು ಅವರಿಗೆ ಈ ಕೆಲಸಕ್ಕಾಗಿ ಸ್ಥಳದ ಅವಶ್ಯಕತೆ ಬಿದ್ದಾಗ ನಾನು ನನ್ನ ಸ್ಥಳವನ್ನು ಬಿಟ್ಟುಕೊಟ್ಟು ಅವರಿಂದ ಕಮಿಷನ್‌ ಪಡೆಯುತ್ತೇನೆ” ಎಂದು ಗೀತಾ ಸರಳವಾಗಿ ಹೇಳುತ್ತಾರೆ.

"ಈಗಾಗಲೇ ಜೀವನದಲ್ಲಿ ನಾನು ಬಹಳಷ್ಟು ನೋಡಿದ್ದೇನೆ" ಎಂದು ಹನಿ ಹೇಳುತ್ತಾರೆ. "ಪ್ಲಾಸ್ಟಿಕ್ ಕಾರ್ಖಾನೆಯಲ್ಲಿ ಕೆಲಸ, ನನ್ನ ಪತಿ ನನ್ನನ್ನು ತೊರೆದ ಕಾರಣ ಫ್ಯಾಕ್ಟರಿಯಿಂದ ಹೊರಹಾಕಲ್ಪಟ್ಟಿದ್ದು, ಈಗ ನಾನು ಈ ಫಂಗಸ್ ಮತ್ತು ಗುಪ್ತಾಂಗದ ಸೋಂಕಿನೊಂದಿಗೆ ಬದುಕುತ್ತಿದ್ದೇನೆ ಮತ್ತು ಇದಕ್ಕಾಗಿ ಈಗಲೂ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದೇನೆ. ಇದು ನನ್ನೊಂದಿಗೆ ಶಾಶ್ವತವಾಗಿ ಇರುವ ಉದ್ದೇಶ ಹೊಂದಿರುವಂತಿದೆ." ಇತ್ತೀಚಿನ ದಿನಗಳಲ್ಲಿ, ಅವರ ಗಂಡ ಹನಿ ಮತ್ತು ಅವರ ಮಗಳೊಂದಿಗೆ ಬದುಕುತ್ತಿದ್ದಾರೆ.

ಗಂಡನಿಗೆ ಆಕೆಯ ಕೆಲಸದ ಕುರಿತು ತಿಳಿದಿದೆಯೇ?

“ಚೆನ್ನಾಗಿ ಗೊತ್ತು” ಎನ್ನುತ್ತಾರೆ ಹನಿ. “ಅವನಿಗೆ ಎಲ್ಲವೂ ಗೊತ್ತು. ಈಗ ಅವನಿಗೆ ಆರ್ಥಿಕವಾಗಿ ನನ್ನ ಮೇಲೆಯೇ ಅವಲಂಬಿತನಾಗಿರುವ ನೆಪವಿದೆ. ಅದೂ ಅಲ್ಲದೆ, ಇವತ್ತು ಅವನೇ ನನ್ನನ್ನು ಹೋಟೆಲ್‌ ಬಳಿ ಡ್ರಾಪ್‌ ಮಾಡಲಿದ್ದಾನೆ. ಆದರೆ ನನ್ನ ತಂದೆ-ತಾಯಿಗೆ ಈ ಕುರಿತು ಒಂದಿಷ್ಟೂ ಗೊತ್ತಿಲ್ಲ (ಅವರು ಕೃಷಿಕರು). ಮತ್ತು ಎಂದಿಗೂ ತಿಳಿಯುವುದು ಬೇಡವೆಂದೇ ಬಯಸುತ್ತೇನೆ. ಅವರಿಗೆ ಬಹಳ ವಯಸ್ಸಾಗಿದೆ, ಹರಿಯಾಣದಲ್ಲಿ ವಾಸಿಸುತ್ತಿದ್ದಾರೆ.”

"ಅನೈತಿಕ ಸಂಚಾರ (ತಡೆಗಟ್ಟುವಿಕೆ) ಕಾಯ್ದೆ, 1956ರ ಪ್ರಕಾರ, 18 ವರ್ಷಕ್ಕಿಂತ ಮೇಲ್ಪಟ್ಟ ಯಾವುದೇ ವ್ಯಕ್ತಿಯು ಲೈಂಗಿಕ ಕಾರ್ಯಕರ್ತೆಯರ ಗಳಿಕೆಯಿಂದ ಬದುಕುವುದು ಅಪರಾಧ" ಎಂದು ಪುಣೆ ಮೂಲದ ವಿಎಎಂಪಿ ಮತ್ತು ಎನ್‌ಎನ್‌ಎಸ್‌ಡಬ್ಲ್ಯು ಎರಡರ ಕಾನೂನು ಸಲಹೆಗಾರರಾದ ಆರತಿ ಪೈ ಹೇಳುತ್ತಾರೆ. “ಇದರ ವ್ಯಾಪ್ತಿಯಡಿ ಲೈಂಗಿಕ ವೃತ್ತಿಯಲ್ಲಿರುವ ಮಹಿಳೆಯೊಂದಿಗೆ ವಾಸಿಸುತ್ತಿರುವ ಮತ್ತು ಅವರ ಗಳಿಕೆಯ ಮೇಲೆ ಅವಲಂಬಿತರಾಗಿರುವ ವಯಸ್ಕ ಮಕ್ಕಳು, ಪಾಲುದಾರ/ಗಂಡ ಮತ್ತು ಪೋಷಕರು ಸೇರುತ್ತಾರೆ. ಅಂತಹ ವ್ಯಕ್ತಿಗೆ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು.” ಆದರೆ ಹನಿ ತನ್ನ ಗಂಡನ ವಿರುದ್ಧ ಅಂತಹ ಕ್ರಮಕ್ಕೆ ಮುಂದಾಗುವುದು ಅಸಂಭವನೀಯ.

“ಲಾಕ್‌ಡೌನ್ ಮುಗಿದ ನಂತರ ನಾನು ಮೊದಲ ಬಾರಿಗೆ ಒಬ್ಬ ಗಿರಾಕಿಯನ್ನು ಭೇಟಿಯಾಗಲಿದ್ದೇನೆ. ಇತ್ತೀಚಿನ ದಿನಗಳಲ್ಲಿ ಗಿರಾಕಿ ಕಡಿಮೆ, ಬಹುತೇಕ ಇಲ್ಲವೇ ಇಲ್ಲ,” ಎಂದು ಅವರು ಹೇಳುತ್ತಾರೆ. “ಈ ಸಾಂಕ್ರಾಮಿಕ ಮಹಾ ಪಿಡುಗಿನ ಅವಧಿಯಲ್ಲಿ ಈಗ ನಮ್ಮ ಬಳಿಗೆ ಬರುವವರನ್ನು ಅಷ್ಟಾಗಿ ನಂಬಲು ಸಾಧ್ಯವಿಲ್ಲ. ಈ ಮೊದಲು, ಎಚ್‌ಐವಿ ಮತ್ತು ಇತರ [ಲೈಂಗಿಕವಾಗಿ ಹರಡುವ] ಕಾಯಿಲೆಗಳಿಂದ ದೂರವಿರಲು ನಾವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗಿತ್ತು. ಈಗ, ಅವುಗಳೊಂದಿಗೆ ಈ ಕರೋನಾ ಕೂಡ ಇದೆ. ಈ ಸಂಪೂರ್ಣ ಲಾಕ್‌ಡೌನ್ ನಮಗೆ ಶಾಪವಾಗಿದೆ. ಯಾವುದೇ ಸಂಪಾದನೆಯಿಲ್ಲ ಜೊತೆಗೆ ನಮ್ಮ ಎಲ್ಲಾ ಉಳಿತಾಯಗಳು ಖರ್ಚಾಗಿ ಹೋಗಿವೆ. ಎರಡು ತಿಂಗಳುಗಳಿಂದ ನನ್ನ ಔಷಧಿಗಳನ್ನು [ಆಂಟಿ ಫಂಗಲ್ ಕ್ರೀಮ್‌ಗಳು ಮತ್ತು ಲೋಷನ್‌ಗಳನ್ನು] ಖರೀದಿಸಲು ಸಾಧ್ಯವಾಗಲಿಲ್ಲ, ಏಕೆಂದರೆ ನಾವು ಬದುಕಲು ಆಹಾರವನ್ನು ಹೊಂದಿಸಿಕೊಳ್ಳುವುದೇ ಕಷ್ಟವಾಗಿತ್ತು,” ಹನಿ ಹೇಳುತ್ತಾರೆ. ಈ ನಡುವೆ ಮಾತಾಡುತ್ತಲೇ ತನ್ನ ಪತಿಗೆ ತನ್ನ ಮೋಟಾರುಬೈಕನ್ನು ಹೊರತಂದು ಅವರನ್ನು ಹೋಟೆಲ್‌ಗೆ ಡ್ರಾಪ್‌ ಮಾಡಲು ಕರೆದರು.

ಕವರ್‌ ಇಲ್ಲಸ್ಟ್ರೇಷನ್: ಅಂತರಾ ರಾಮನ್. ಅವರು ಬೆಂಗಳೂರಿನ ಸೃಷ್ಟಿ ಇನ್ಸ್ಟಿಟ್ಯೂಟ್ ಆಫ್ ಆರ್ಟ್, ಡಿಸೈನ್ ಅಂಡ್ ಟೆಕ್ನಾಲಜಿ ಸಂಸ್ಥೆಯಿಂದ ವಿಷುಯಲ್ ಕಮ್ಯುನಿಕೇಷನ್‌ನಲ್ಲಿ ಇತ್ತೀಚಿಗೆ ಪದವಿಯನ್ನು ಪಡೆದಿದ್ದಾರೆ. ಪರಿಕಲ್ಪನಾ ಕಲೆ ಮತ್ತು ಅದರ ಎಲ್ಲಾ ಪ್ರಕಾರಗಳಲ್ಲಿ ಕಥೆ ಹೇಳುವಿಕೆಯು ಅವರ ಇಲ್ಲಸ್ಟ್ರೇಷನ್ ಮತ್ತು ಡಿಸೈನ್ ಪ್ರಾಕ್ಟೀಸ್ ಮೇಲೆ ದೊಡ್ಡ ಪ್ರಭಾವ ಬೀರಿದೆ.

ಗ್ರಾಮೀಣ ಭಾರತದ ಹದಿಹರೆಯದ ಬಾಲಕಿಯರು ಮತ್ತು ಯುವತಿಯರ ಬಗ್ಗೆ PARI ಮತ್ತು ಕೌಂಟರ್‌ ಮೀಡಿಯಾ ಟ್ರಸ್ಟ್‌ನ ಬೆಂಬಲಿತ ರಾಷ್ಟ್ರವ್ಯಾಪಿ ವರದಿ ಮಾಡುವ ಯೋಜನೆಯು ಮಹತ್ವದ ಆದರೆ ಸಮಾಜದ ಅಂಚಿನಲ್ಲಿರುವ ಗುಂಪುಗಳ ಪರಿಸ್ಥಿತಿಯನ್ನು ಅನ್ವೇಷಿಸಲು, ಸಾಮಾನ್ಯ ಜನರ ಮಾತುಗಳು ಮತ್ತು ಜೀವಂತ ಅನುಭವಗಳ ಮೂಲಕ ತಿಳಿಯುವ ಉದ್ದೇಶವನ್ನು ಹೊಂದಿದೆ. ಇದು ಪಾಪ್ಯುಲೇಷನ್‌ ಆಫ್‌ ಇಂಡಿಯಾದ ಬೆಂಬಲವನ್ನು ಹೊಂದಿದೆ.

ಜಿಗ್ಯಾಸ ಮಿಶ್ರಾ ಠಾಕೂರ್ ಫ್ಯಾಮಿಲಿ ಫೌಂಡೇಶನ್‌ನ ಸ್ವತಂತ್ರ ಪತ್ರಿಕೋದ್ಯಮ ಅನುದಾನದ ಮೂಲಕ ಸಾರ್ವಜನಿಕ ಆರೋಗ್ಯ ಮತ್ತು ನಾಗರಿಕ ಸ್ವಾತಂತ್ರ್ಯಗಳ ಬಗ್ಗೆ ವರದಿ ಮಾಡುತ್ತಾರೆ. ಠಾಕೂರ್ ಫ್ಯಾಮಿಲಿ ಫೌಂಡೇಶನ್ ಈ ವರದಿಯ ವಿಷಯಗಳ ಮೇಲೆ ಯಾವುದೇ ಸಂಪಾದಕೀಯ ನಿಯಂತ್ರಣವನ್ನು ಹೊಂದಿಲ್ಲ.

ಈ ಲೇಖನವನ್ನು ಮರುಪ್ರಕಟಿಸುವ ಆಸಕ್ತಿಯಿದೆಯೇ? ಇದಕ್ಕಾಗಿ ಈ ಇ-ಮೈಲ್ ವಿಳಾಸವನ್ನು ಸಂಪರ್ಕಿಸಿ: [email protected] ಒಂದು ಪ್ರತಿಯನ್ನು [email protected] . ಈ ವಿಳಾಸಕ್ಕೆ ಕಳಿಸಿ

ಅನುವಾದ: ಶಂಕರ ಎನ್. ಕೆಂಚನೂರು

Jigyasa Mishra

Jigyasa Mishra is an independent journalist based in Chitrakoot, Uttar Pradesh.

Other stories by Jigyasa Mishra
Illustration : Antara Raman

Antara Raman is an illustrator and website designer with an interest in social processes and mythological imagery. A graduate of the Srishti Institute of Art, Design and Technology, Bengaluru, she believes that the world of storytelling and illustration are symbiotic.

Other stories by Antara Raman

P. Sainath is Founder Editor, People's Archive of Rural India. He has been a rural reporter for decades and is the author of 'Everybody Loves a Good Drought' and 'The Last Heroes: Foot Soldiers of Indian Freedom'.

Other stories by P. Sainath
Series Editor : Sharmila Joshi

Sharmila Joshi is former Executive Editor, People's Archive of Rural India, and a writer and occasional teacher.

Other stories by Sharmila Joshi
Translator : Shankar N Kenchanuru

Shankar N. Kenchanuru is a poet and freelance translator. He can be reached at [email protected].

Other stories by Shankar N Kenchanuru