“ಹೆಣ್ಣು ಮಗು” ಎಂದು ಡಾಕ್ಟರ್‌ ಹೇಳಿದರು.

ಇದು ಆಶಾ ಅವರ ನಾಲ್ಕನೇ ಮಗು-ಆದರೆ ಖಂಡಿತವಾಗಿಯೂ ಅವರ ಕೊನೆಯ ಮಗುವಲ್ಲ. ಸ್ತ್ರೀರೋಗತಜ್ಞ ಆಕೆಯ ತಾಯಿ ಕಾಂತಾಬೆನ್‌ಗೆ ಸಾಂತ್ವನ ಹೇಳುವುದು ಕೇಳುತ್ತಿತ್ತು: “ಅಮ್ಮಾ, ಅಳಬೇಡಿ. ಅಗತ್ಯವಿದ್ದರೆ ಇನ್ನೂ ಎಂಟು ಸಿಝೇರಿಯನ್ ಮಾಡುತ್ತೇನೆ. ಅವಳು ಗಂಡು ಮಗುವಿಗೆ ಜನ್ಮ ನೀಡುವವರೆಗೂ, ನಾನು ಇಲ್ಲಿಯೇ ಇರುತ್ತೇನೆ. ಅದು ನನ್ನ ಜವಾಬ್ದಾರಿ. "

ಈ ಮೊದಲು ಆಶಾ ಅವರ ಮೂರೂ ಮಕ್ಕಳು ಹೆಣ್ಣು, ಇವರೆಲ್ಲರೂ ಸಿಸೇರಿಯನ್ ಶಸ್ತ್ರಚಿಕಿತ್ಸೆಯ ಮೂಲಕ ಜನಿಸಿದ್ದರು. ಮತ್ತು ಈಗ ಅವರು ಅಹಮದಾಬಾದ್ ನಗರದ ಮಣಿನಗರ ಪ್ರದೇಶದ ಖಾಸಗಿ ಚಿಕಿತ್ಸಾಲಯವೊಂದರಲ್ಲಿ ಭ್ರೂಣದ ಲೈಂಗಿಕ ಪರೀಕ್ಷೆಯ ಫಲಿತಾಂಶವನ್ನು ವೈದ್ಯರಿಂದ ಕೇಳುತ್ತಿದ್ದರು. (ಅಂತಹ ಪರೀಕ್ಷೆಗಳು ಕಾನೂನುಬಾಹಿರ, ಆದರೆ ವ್ಯಾಪಕವಾಗಿ ಲಭ್ಯವಿದೆ.) ಇದು ಅವರ ನಾಲ್ಕನೇ ಗರ್ಭಧಾರಣೆ. ಅವರು 40 ಕಿ.ಮೀ ದೂರದಲ್ಲಿರುವ ಖಾನ್ಪರ್ ಗ್ರಾಮದಿಂದ ಕಾಂತಾಬೆನ್ ಜೊತೆ ಇಲ್ಲಿಗೆ ಬಂದಿದ್ದರು. ತಾಯಿ ಮತ್ತು ಮಗಳು ಇಬ್ಬರೂ ದುಃಖಿತರಾಗಿದ್ದರು. ಆಶಾರ ಮಾವ ಗರ್ಭಪಾತ ಮಾಡಲು ಅನುಮತಿಸುವುದಿಲ್ಲ ಎಂದು ಅವರಿಗೆ ತಿಳಿದಿತ್ತು. "ಅದು ನಮ್ಮ ನಂಬಿಕೆಗೆ ವಿರುದ್ಧವಾದುದು" ಎಂದು ಕಾಂತಾಬೆನ್ ಹೇಳಿದರು.

ಬೇರೆ ರೀತಿಯಲ್ಲಿ ಹೇಳುವುದಾದರೆ ಇದು ಆಶಾರ ಕೊನೆಯ ಗರ್ಭಾವಸ್ಥೆಯಲ್ಲ.

ಆಶಾ ಮತ್ತು ಕಾಂತಾಬೆನ್ ಅವರು  ಭರ್ವಾಡ್ ಪಶುಪಾಲಕ ಸಮುದಾಯಕ್ಕೆ ಸೇರಿದವರಾಗಿದ್ದು, ಅವರು ಸಾಮಾನ್ಯವಾಗಿ ಕುರಿ ಮತ್ತು ಮೇಕೆಗಳನ್ನು ಮೇಯಿಸುತ್ತಾರೆ. ಆದಾಗ್ಯೂ, ಅಹಮದಾಬಾದ್ ಜಿಲ್ಲೆಯ ಧೋಲ್ಕಾ ತಾಲ್ಲೂಕಿನ ಖಾನ್ಪರ್ ಎನ್ನುವ ಹಳ್ಳಿಯಲ್ಲಿ, ಇವರ ಸಮುದಾಯದ 1,500ಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ 271 ಮನೆಗಳಿವೆ (ಜನಗಣತಿ 2011) - ಅವರಲ್ಲಿ ಹೆಚ್ಚಿನವರು ಕಡಿಮೆ ಸಂಖ್ಯೆಯ ಹಸುಗಳು ಮತ್ತು ಎಮ್ಮೆಗಳನ್ನು ಸಾಕುತ್ತಾರೆ. ಸಾಂಪ್ರದಾಯಿಕ ಸಾಮಾಜಿಕ ಶ್ರೇಣಿಗಳಲ್ಲಿ, ಈ ಸಮುದಾಯವು ಗ್ರಾಮೀಣ ಜಾತಿಗಳಲ್ಲಿ ಅತ್ಯಂತ ಕೆಳಮಟ್ಟದಲ್ಲಿ ಕಂಡುಬರುತ್ತದೆ ಮತ್ತು ಗುಜರಾತ್‌ನಲ್ಲಿ ಪರಿಶಿಷ್ಟ ಪಂಗಡ ಎಂದು ಇದನ್ನು ಪಟ್ಟಿಮಾಡಲಾಗಿದೆ.

*****

ನಾವು ಅವರನ್ನು ಕಾಯುತ್ತಿದ್ದ ಖಾನ್ಪಾರ್‌ನ ಸಣ್ಣ ಕೋಣೆಗೆ ಪ್ರವೇಶಿಸುತ್ತಿದ್ದಂತೆ ಕಾಂತಾಬೆನ್ ಸೀರೆಯ ಪಲ್ಲುವನ್ನು ಅವರ ತಲೆಯ ಮೇಲಿನಿಂದ ತೆಗೆದರು. ಈ ಹಳ್ಳಿ ಮತ್ತು ಸುತ್ತಮುತ್ತಲಿನ ಹಳ್ಳಿಗಳ ಕೆಲವು ಮಹಿಳೆಯರು ತಮ್ಮ ಸಂತಾನೋತ್ಪತ್ತಿ ಆರೋಗ್ಯ ಸಮಸ್ಯೆಗಳ ಬಗ್ಗೆ ಮಾತನಾಡಲು ನಮ್ಮೊಂದಿಗೆ ಸೇರಿಕೊಂಡಿದ್ದರು - ಆದರೂ ಇದು ಸುಲಭವಾಗಿ ಮಾತನಾಡಲು ಸಾಧ್ಯವಾಗುವ ವಿಷಯವಲ್ಲ.

'You don’t cry. I will do eight more caesareans if needed. But I am here till she delivers a boy'

'ನೀವು ಅಳಬೇಡಿ. ಅಗತ್ಯವಿದ್ದರೆ ಇನ್ನೂ ಎಂಟು ಸಿಸೇರಿಯನ್ ಮಾಡುತ್ತೇನೆ. ಆಕೆ ಗಂಡು ಮಗು ಹೆರುವವರೆಗೂ ನಾನಿದ್ದೇನೆ'

"ಈ ಗ್ರಾಮದಲ್ಲಿ ದೊಡ್ಡ ಮತ್ತು ಸಣ್ಣ 80 ರಿಂದ 90 ಭರ್ವಾಡ್ ಕುಟುಂಬಗಳಿವೆ" ಎಂದು ಕಾಂತಾಬೆನ್ ಹೇಳುತ್ತಾರೆ. “ದಲಿತರು, ವಾಗ್ಡಿಸ್, ಠಾಕೋರ್‌ಗಳು ಮತ್ತು ಕುಂಬಾರರ ಕೆಲವು ಮನೆಗಳಿವೆ. ಆದರೆ ಹೆಚ್ಚಿನ ಕುಟುಂಬಗಳು ‌ಭರ್ವಾಡ್ ಕುಟುಂಬಗಳು." ಕೋಲಿ ಠಾಕೋರ್‌ಗಳು ಗುಜರಾತ್‌ನಲ್ಲಿ ದೊಡ್ಡ ಜಾತಿ ಗುಂಪು-ಆದರೆ ಇದು ಇತರ ರಾಜ್ಯಗಳ ಠಾಕೂರ್‌ಗಿಂತ ಭಿನ್ನ.

"ನಮ್ಮ ಸಮುದಾಯದಲ್ಲಿ ಹೆಣ್ಣು ಮಕ್ಕಳಿಗೆ ಬೇಗನೆ ಮದುವೆ ಮಾಡಲಾಗುತ್ತದೆ, ಆದರೆ ಅವರು 16 ಅಥವಾ 18 ವರ್ಷದ ತನಕ ತಮ್ಮ ತಂದೆಯ ಮನೆಯಲ್ಲಿಯೇ ಇರುತ್ತಾರೆ.‌ ನಂತರ ಅವರ ಮಾವನ ಮನೆಗೆ ಹೋಗುತ್ತಾರೆ" ಎಂದು 50 ವರ್ಷದ ಕಾಂತಾಬೆನ್ ಹೇಳುತ್ತಾರೆ. ಅವರ ಮಗಳು ಆಶಾ ಕೂಡ ಬೇಗ ಮದುವೆಯಾಗಿದ್ದರು, 24ನೇ ವಯಸ್ಸಿಗೆ ಮೂರು ಮಕ್ಕಳನ್ನು ಹೊಂದಿದ್ದರು, ಮತ್ತು ಈಗ ನಾಲ್ಕನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇಲ್ಲಿ ಬಾಲ್ಯವಿವಾಹಗಳು ಸಾಮಾನ್ಯವಾಗಿದೆ ಮತ್ತು ಸಮುದಾಯದ ಹೆಚ್ಚಿನ ಮಹಿಳೆಯರಿಗೆ ತಮ್ಮ ಮೊದಲ ಮಗುವನ್ನು ಹೊಂದಿದಾಗ ಅವರ ವಯಸ್ಸು, ಮದುವೆಯಾದಾಗಿನ ವಯಸ್ಸು ಅಥವಾ ಅವರ ವಯಸ್ಸಿನ ಬಗ್ಗೆ ಸ್ಪಷ್ಟ ಕಲ್ಪನೆಯಿಲ್ಲ.

"ನಾನು ಮದುವೆಯಾದ ವರ್ಷ ನನಗೆ ನೆನಪಿಲ್ಲ, ಆದರೆ ನಾನು ಪ್ರತಿ ವರ್ಷ ಗರ್ಭಿಣಿಯಾಗುತ್ತಿದ್ದೆ ಎನ್ನುವುದು ನೆನಪಿದೆ" ಎಂದು ಕಾಂತಾಬೆನ್ ಹೇಳುತ್ತಾರೆ. ಅವರ ಆಧಾರ್ ಕಾರ್ಡ್‌ನಲ್ಲಿರುವ ದಿನಾಂಕವು ಅವರ ನೆನಪಿನಷ್ಟೇ ವಿಶ್ವಾಸಾರ್ಹ.

"ನನಗೆ ಒಂಬತ್ತು ಹೆಣ್ಣುಮಕ್ಕಳು ಮತ್ತು ನಂತರ ಒಬ್ಬ ಗಂಡು ಮಗ ಹುಟ್ಟಿದ." ಎಂದು ಆ ದಿನಸೇರಿದ್ದ  ಮಹಿಳೆಯರಲ್ಲಿ ಒಬ್ಬರಾದ ಹೀರಾಬೆನ್ ಭರ್ವಾಡ್ ಹೇಳುತ್ತಾರೆ. "ಮಗ 8ನೇ ತರಗತಿ ಓದುತ್ತಿದ್ದಾನೆ. ಆರು ಮಂದಿ ಹೆಣ್ಣು ಮಕ್ಕಳಿಗೆ ಮದುವೆಯಾಗಿದೆ. ಇನ್ನಿಬ್ಬರಿಗೆ ಸದ್ಯದಲ್ಲೇ ಒಟ್ಟಿಗೇ ಮದುವೆ ಮಾಡಿಸಲಿದ್ದೇವೆ." ಖಾನ್ಪರ್ ಮತ್ತು ಈ ತಾಲ್ಲೂಕಿನ ಇತರ ಹಳ್ಳಿಗಳಲ್ಲಿ, ಈ ಸಮುದಾಯದ ಮಹಿಳೆಯರು ಹಲವಾರು ಬಾರಿ ಮತ್ತು ನಿರಂತರವಾಗಿ ಗರ್ಭಿಣಿಯಾಗುವುದು ಸಾಮಾನ್ಯವಾಗಿದೆ. "ನಮ್ಮ ಊರಿನಲ್ಲಿ 13 ಗರ್ಭಪಾತದ ನಂತರ ಒಂದು ಗಂಡು ಮಗುವನ್ನು ಹೆತ್ತ ಮಹಿಳೆಯಿದ್ದಾಳೆ" ಎಂದು ಹಿರಾಬೆನ್ ಹೇಳುತ್ತಾರೆ. "ನಮ್ಮಲ್ಲಿ ಇದೊಂದು ಹುಚ್ಚುತನವಾಗಿದೆ. ಅವರಿಗೆ ಏನೂ ಅರ್ಥವಾಗುವುದಿಲ್ಲ. ಗಂಡು ಮಗುವಾಗುವವರೆಗೂ ಮಕ್ಕಳನ್ನು ಹೆರುವಂತೆ ಹೇಳುತ್ತಾರೆ. ನನ್ನ ಅತ್ತೆ ಎಂಟು ಮಕ್ಕಳನ್ನು ಹೆತ್ತಿದ್ದರು. (ಗಂಡು ಮಗುವಿಗಾಗಿ). ನನ್ನ ಚಿಕ್ಕಮ್ಮ 16 ಮಕ್ಕಳನ್ನು ಹೆತ್ತಿದ್ದಾರೆ. ಇಂತಹ ಹುಚ್ಚುತನಕ್ಕೆ ಏನು ಹೇಳುವುದು?"

"ಅತ್ತೆ-ಮಾವ ಗಂಡು ಮಗು ಬಯಸುತ್ತಾರೆ" ಎಂದು 40 ವರ್ಷದ ರಮಿಲಾ ಭರ್ವಾಡ್ ಹೇಳುತ್ತಾರೆ. “ಮತ್ತು ನೀವು ಹೆರದಿದ್ದರೆ, ನಿಮ್ಮ ಅತ್ತೆ, ಅತ್ತಿಗೆ ಮತ್ತು ನಿಮ್ಮ ನೆರೆಹೊರೆಯವರವರ ತನಕ ಎಲ್ಲರೂ ನಿಮ್ಮನ್ನು ಕೆಣಕುತ್ತಾರೆ. ಈ ದಿನಗಳಲ್ಲಿ ಮಕ್ಕಳನ್ನು ಬೆಳೆಸುವುದು ಸುಲಭವಲ್ಲ. ನನ್ನ ಹಿರಿಯ ಮಗ 10ನೇ ತರಗತಿಯಲ್ಲಿ ಎರಡು ಬಾರಿ ಅನುತ್ತೀರ್ಣಗೊಂಡಿದ್ದಾನೆ ಮತ್ತು ಈಗ ಮೂರನೇ ಬಾರಿಗೆ ಪರೀಕ್ಷೆ ಎದುರಿಸುತ್ತಿದ್ದಾನೆ. ಈ ಮಕ್ಕಳನ್ನು ಬೆಳೆಸುವುದು ಎಂದರೆ ಏನು ಎಂದು ಅರ್ಥಮಾಡಿಕೊಳ್ಳುವುದು ಮಹಿಳೆಯರು ಮಾತ್ರ. ಆದರೆ ನಾವು ಏನು ಮಾಡಲು ಸಾಧ್ಯ?"

ಗಂಡು ಮಗುವಿನ ಮೇಲಿನ ತೀವ್ರ ಆಸೆ ಕುಟುಂಬದ ನಿರ್ಧಾರಗಳಲ್ಲಿ ಪ್ರಾಬಲ್ಯ ಸಾಧಿಸುತ್ತದೆ, ಸಂತಾನೋತ್ಪತ್ತಿಗೆ ಸಂಬಂಧಿಸಿದ ಕೆಲವು ಆಯ್ಕೆಗಳನ್ನು ಮಹಿಳೆಯರಿಗೆ ನೀಡುತ್ತದೆ. "ಮಗನಿಗಾಗಿ ಕಾಯಲು ದೇವರು ನಮ್ಮ ಹಣೆಬರಹದಲ್ಲಿ ಬರೆದಾಗ ಏನು ಮಾಡಲು ಸಾಧ್ಯ?" ರಮಿಲಾ ಕೇಳುತ್ತಾರೆ. "ಮಗನ ಮೊದಲು, ನನಗೆ ಮೂವರು ಹೆಣ್ಣು ಮಕ್ಕಳೂ ಇದ್ದರು. ನಾವೆಲ್ಲರೂ ಮಗನಿಗಾಗಿ ಕಾಯುತ್ತಿದ್ದೆವು, ಆದರೆ ಈಗ ಪರಿಸ್ಥಿತಿಯಲ್ಲಿ ಒಂದಿಷ್ಟು ಬದಲಾವಣೆ ಬಂದಿರಬಹುದು."

"ಏನು ಬದಲಾಗಿದೆ? ನನಗೆ ನಾಲ್ಕು ನಾಲ್ಕು ಹೆಣ್ಣುಮಕ್ಕಳು ಇರಲಿಲ್ಲವೇ? " 1,522 ಜನಸಂಖ್ಯೆಯನ್ನು ಹೊಂದಿರುವ ನೆರೆಯ ಹಳ್ಳಿಯಾದ ಲಾನಾದಲ್ಲಿ ವಾಸಿಸುವ ರೇಖಾಬೆನ್ ಉತ್ತರಿಸುತ್ತಾರೆ. ನಾವು ಮಾತನಾಡುತ್ತಿರುವ ಮಹಿಳೆಯರ ಗುಂಪು ಅಹಮದಾಬಾದ್ ನಗರದ 50 ಕಿ.ಮೀ ವ್ಯಾಪ್ತಿಯಲ್ಲಿರುವ ಈ ತಾಲೂಕಿನ ಖಾನ್ಪರ್, ಲಾನಾ ಮತ್ತು ಅಂಬ್ಲಿಯಾರಾ ಗ್ರಾಮಗಳಲ್ಲಿನ ವಿವಿಧ ಕಾಲೋನಿಗಳಿಂದ ಬಂದಿದೆ. ಮತ್ತು ಈಗ ಅವರು ಈ ವರದಿಗಾರರೊಡನೆ ಮಾತನಾಡುತ್ತಿಲ್ಲ, ಆದರೆ ಪರಸ್ಪರ ಮಾತನಾಡಲು ಪ್ರಾರಂಭಿಸಿದರು. ಪರಿಸ್ಥಿತಿ ಬದಲಾಗುತ್ತಿರಬಹುದು ಎಂಬ ರಮಿಲಾರ ಕಲ್ಪನೆಯನ್ನು ರೇಖಾಬೆನ್ ಪ್ರಶ್ನಿಸುತ್ತಾರೆ: "ನಾನು ಕೂಡ ಒಂದು ಗಂಡುಮಗುವಿಗಾಗಿ ಕಾಯುತ್ತಿದ್ದೆ, ಅಲ್ಲವೇ?" ಅವರು ಕೇಳುತ್ತಾರೆ. “ನಾವು ಭರ್ವಾಡ್‌ಗಳು, ನಮಗೆ ಒಬ್ಬ ಮಗ ಇರುವುದು ಮುಖ್ಯ. ನಾವು ಹೆಣ್ಣುಮಕ್ಕಳನ್ನು ಮಾತ್ರ ಹೊಂದಿದ್ದರೆ, ಅವರು ನಮ್ಮನ್ನು ಬಂಜೆಯರೆಂದು ಕರೆಯುತ್ತಾರೆ."

'The in-laws want a boy. And if you don’t go for it, everyone from your mother-in-law to your sister-in-law to your neighbours will taunt you'

ʼಅತ್ತೆ-ಮಾವ ಗಂಡು ಮಗು ಬಯಸುತ್ತಾರೆ. ಮತ್ತು ನೀವು ಹೆರದಿದ್ದರೆ, ನಿಮ್ಮ ಅತ್ತೆ, ಅತ್ತಿಗೆ ಮತ್ತು ನಿಮ್ಮ ನೆರೆಹೊರೆಯವರವರ ತನಕ ಎಲ್ಲರೂ ನಿಮ್ಮನ್ನು ಹಂಗಿಸುತ್ತಾರೆ.

ಸಮುದಾಯದ ಬೇಡಿಕೆಗಳ ಬಗ್ಗೆ ರಮಿಲಾಬೆನ್ ಅವರ ನಿರ್ಭೀತ ಟೀಕೆಗಳ ಹೊರತಾಗಿಯೂ, ಹೆಚ್ಚಿನ ಮಹಿಳೆಯರು ಸಾಮಾಜಿಕ ಒತ್ತಡಗಳು ಮತ್ತು ಸಾಂಸ್ಕೃತಿಕ ಸಂಪ್ರದಾಯಗಳಿಂದಾಗಿ ತಮ್ಮನ್ನು 'ಗಂಡು ಮಗು ಬಯಸುವವರು' ಎಂದು ಘೋಷಿಸಿಕೊಳ್ಳುತ್ತಾರೆ. ಇಂಟರ್ನ್ಯಾಷನಲ್ ಜರ್ನಲ್ ಆಫ್ ಹೆಲ್ತ್ ಸೈನ್ಸಸ್ ಅಂಡ್ ರಿಸರ್ಚ್ನಲ್ಲಿ ಪ್ರಕಟವಾದ 2015ರ ಅಧ್ಯಯನದ ಪ್ರಕಾರ , ಅಹಮದಾಬಾದ್ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಶೇಕಡಾ 84ಕ್ಕಿಂತ ಹೆಚ್ಚು ಮಹಿಳೆಯರು ತಾವು ಗಂಡು ಮಗುವನ್ನು ಬಯಸುತ್ತೇವೆ ಎಂದು ಹೇಳಿದ್ದಾರೆ. ಮಹಿಳೆಯರಲ್ಲಿ ಈ ಆದ್ಯತೆಗೆ ಕಾರಣಗಳು: " ಪುರುಷರು ಹೆಚ್ಚಿನ ವೇತನವನ್ನು ಗಳಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ, ವಿಶೇಷವಾಗಿ ಕೃಷಿ ಆರ್ಥಿಕತೆಗಳಲ್ಲಿ; ಅವರು ಕುಟುಂಬ ವಂಶಾವಳಿಯನ್ನು ಮುಂದುವರಿಸುತ್ತಾರೆ; ಅವರು ಸಾಮಾನ್ಯವಾಗಿ ಕುಟುಂಬದ ಉತ್ತರಾಧಿಕಾರಿಗಳು" ಎಂದು ಸಂಶೋಧನಾ ಪ್ರಬಂಧ ಹೇಳುತ್ತದೆ.

ಮತ್ತೊಂದೆಡೆ, ವರದಿಯಲ್ಲಿ ಹೆಣ್ಣುಮಕ್ಕಳನ್ನು ಆರ್ಥಿಕ ಹೊರೆಯಾಗಿ ಪರಿಗಣಿಸಲಾಗುತ್ತದೆ ಎಂದು ಹೇಳಲಾಗಿದೆ: “ವರದಕ್ಷಿಣೆ ವ್ಯವಸ್ಥೆ; ಮದುವೆಯ ನಂತರ ಅವರು ಸಾಮಾನ್ಯವಾಗಿ ಗಂಡನ ಕುಟುಂಬದ ಸದಸ್ಯರಾಗುತ್ತಾರೆ; ಮತ್ತು ಅನಾರೋಗ್ಯದ ಸಮಯದಲ್ಲಿ ಮತ್ತು ವೃದ್ಧಾಪ್ಯದಲ್ಲಿ ಅವರ ಹೆತ್ತವರ ಜವಾಬ್ದಾರಿಯನ್ನು ಅವರು ನಿಭಾಯಿಸಲು ಸಾಧ್ಯವಿಲ್ಲ.”

*****

3,567 ಜನಸಂಖ್ಯೆಯ ಹತ್ತಿರದ ಅಂಬ್ಲಿಯಾರಾ ಗ್ರಾಮದ ಜೀಲುಬೆನ್ ಭರ್ವಾಡ್ (30) ಕೆಲವು ವರ್ಷಗಳ ಹಿಂದೆ ಧೋಲ್ಕಾ ತಾಲೂಕಿನ ಕೋಠ್ ಬಳಿಯ ಸರ್ಕಾರಿ ಆಸ್ಪತ್ರೆಯಲ್ಲಿ (ಕೋಠಾ ಎಂದೂ ಕರೆಯುತ್ತಾರೆ) ಸಂತಾನ ಹರಣ ಚಿಕಿತ್ಸೆಗೆ ಒಳಗಾಗಿದ್ದರು. ಆದರೆ ನಾಲ್ಕು ಮಕ್ಕಳ ಜನನದ ನಂತರ ಈ ಸಂತಾನ ಹರಣ ಚಿಕಿತ್ಸೆಯನ್ನು ಅವರು ಪಡೆದರು. "ನಾನು ಇಬ್ಬರು ಗಂಡುಮಕ್ಕಳಾಗುವವರೆಗೂ ಕಾಯಬೇಕಾಯಿತು" ಎಂದು ಅವರು ಹೇಳುತ್ತಾರೆ. “ನಾನು 7 ಅಥವಾ 8 ವರ್ಷದವಳಿದ್ದಾಗ ಮದುವೆಯಾಗಿದ್ದೆ. ನಂತರ ವಯಸ್ಕಳಾದಾಗ, ಅವರು ನನ್ನನ್ನು ನನ್ನ ಮಾವನ ಮನೆಗೆ ಕಳುಹಿಸಿದರು. ಆ ಸಮಯದಲ್ಲಿ ನನಗೆ 19 ವರ್ಷ ವಯಸ್ಸಾಗಿರಬೇಕು. ನನ್ನ ಮದುವೆಯ ಬಟ್ಟೆಗಳನ್ನು ಬದಲಾಯಿಸುವ ಮೊದಲು, ನಾನು ಗರ್ಭಿಣಿಯಾಗಿದ್ದೆ. ಅದರ ನಂತರ, ಇದು ಪ್ರತಿ ವರ್ಷವೂ ಸಂಭವಿಸಿತು."

ಮೌಖಿಕ ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳಬೇಕೆ ಅಥವಾ ಗರ್ಭಾಶಯದ ಸಾಧನವನ್ನು (ಕಾಪರ್-ಟಿ) ಅಳವಡಿಸಿಕೊಳ್ಳಬೇಕೆ ಎನ್ನುವುದರ ಕುರಿತು ಅವರಿಗೆ ಖಚಿತತೆಯಿದ್ದಿರಲಿಲ್ಲ. “ಆಗ ನನಗೆ ಬಹಳ ಕಡಿಮೆ ತಿಳಿದಿತ್ತು. ಹೆಚ್ಚು ತಿಳುವಳಿಕೆ ಹೊಂದಿದ್ದರೆ, ನಾನು ಅಷ್ಟು ಮಕ್ಕಳನ್ನು ಹೊಂದುತ್ತಿರಲಿಲ್ಲ,” ಎಂದು ದೃಢವಾಗಿ ಹೇಳುತ್ತಾರೆ. “ಆದರೆ ಜನರ ಮಧ್ಯೆ ತಾಯಿ (ಮೆಲಾಡಿ ಮಾ, ಕುಲ ದೇವಿ) ನಮಗೆ ಕೊಡುವದನ್ನು ನಾವು ಒಪ್ಪಿಕೊಳ್ಳಬೇಕು. ನಾನು ಇನ್ನೊಂದು ಮಗುವನ್ನು ಹೊಂದದೆ ಹೋಗಿದ್ದರೆ, ಜನರು ಗುಸುಗುಸು ಮಾತನಾಡಲು ಪ್ರಾರಂಭಿಸುತ್ತಿದ್ದರು. ಬೇರೊಬ್ಬ ಗಂಡಸನ್ನು ಹುಡುಕಲು ನಾನು ಆಸಕ್ತಿ ಹೊಂದಿದ್ದೇನೆಂದು ಅವರು ಭಾವಿಸುತ್ತಾರೆ. ಅದನ್ನೆಲ್ಲ ಹೇಗೆ ಎದುರಿಸುವುದು?"

ಜೀಲೂ ಬೆನ್‌ ಅವರ ಮೊದಲ ಮಗು ಗಂಡಾಗಿತ್ತು. ಆದರೆ ಅವರ ಕುಟುಂಬವು ಇನ್ನೊಂದು ಮಗು ಹೆರುವಂತೆ ಒತ್ತಾಯ ಮಾಡಿತು. ಮುಂದಿನ ಎರಡೂ ಮಕ್ಕಳು ಒಂದರ ಹಿಂದೆ ಒಂದರಂತೆ ಹೆಣ್ಣು ಮಕ್ಕಳಾದವು. ಅದರಲ್ಲಿ ಒಂದು ಮಗುವಿಗೆ ಮಾತನಾಡಲು, ಕೇಳಿಸಿಕೊಳ್ಳಲು ಸಾಧ್ಯವಿಲ್ಲ. “ನಮ್ಮ ಭರ್ವಾಡ್‌ ಸಮುದಾಯದಲ್ಲಿ ನಮಗೆ ಎರಡು ಗಂಡು ಮಕ್ಕಳಾದರೂ ಬೇಕು. ಇಂದಿನ ಕೆಲವು ಮಹಿಳೆಯರು ಒಂದು ಗಂಡು, ಒಂದು ಹೆಣ್ಣು ಸಾಕೆಂದು ಭಾವಿಸುತ್ತಾರೆ. ಆದರೂ ನಾವು ಮಾತಾಜಿಯ ಆಶೀರ್ವಾದವನ್ನು ಎದುರು ನೋಡುತ್ತೇವೆ.” ಎಂದು ಅವರು ಹೇಳುತ್ತಾರೆ.

Multiple pregnancies are common in the community in Khanpar village: 'There was a woman here who had one son after 13 miscarriages. It's madness'.
PHOTO • Pratishtha Pandya

ಖಾನ್ಪರ್ ಗ್ರಾಮದ ಈ ಸಮುದಾಯದಲ್ಲಿ ಅನೇಕ ಬಾರಿ ಗರ್ಭಿಣಿಯಾಗುವುದು ಸಾಮಾನ್ಯ ಸಂಗತಿಯಾಗಿದೆ: '13 ಗರ್ಭಪಾತದ ನಂತರ ಒಬ್ಬ ಮಹಿಳೆ ಮಗನನ್ನು ಹೊಂದಿದ್ದಳು. ಇದು ಹುಚ್ಚುತನ '

ಅವರ ಎರಡನೆಯ ಮಗ ಹುಟ್ಟಿದ ನಂತರ - ಇನ್ನೊಬ್ಬ ಮಹಿಳೆಯ ಸಲಹೆಯಿಂದ, ಸಂಭವನೀಯ ಆಯ್ಕೆಗಳ ಬಗ್ಗೆ ಉತ್ತಮವಾಗಿ ತಿಳಿಯಿತು - ಜೀಲುಬೆನ್ ಅಂತಿಮವಾಗಿ ಅವರ ಅತ್ತಿಗೆಯೊಂದಿಗೆ ಹೋಗಿ ಕೋಠ್‌ನಲ್ಲಿ ಟ್ಯೂಬೆಕ್ಟೊಮಿ ಮಾಡಿಸಿಕೊಳ್ಳಲು ನಿರ್ಧರಿಸಿದರು. "ನನ್ನ ಪತಿ ಕೂಡ ಮಾಡಿಸಿಕೊಳ್ಳುವಂತೆ ಹೇಳಿದರು" ಎಂದು ಅವರು ಹೇಳುತ್ತಾರೆ. "ಅವರು ತಾನು ಎಷ್ಟು ಸಂಪಾದಿಸಿ ಮನೆಗೆ ತರಬಹುದು ಎಂದು [ಮಿತಿಗಳನ್ನು] ತಿಳಿದಿದ್ದರು. ನಮ್ಮಲ್ಲಿ ಯಾವುದೇ ಕೌಶಲದ ಉದ್ಯೋಗ ಆಯ್ಕೆಗಳಿಲ್ಲ. ನಾವು ನೋಡಿಕೊಳ್ಳುವುದು ಈ ಪ್ರಾಣಿಗಳನ್ನು ಮಾತ್ರ.”

ಧೋಲ್ಕಾ ತಾಲ್ಲೂಕಿನ ಸಮುದಾಯವು ಸೌರಾಷ್ಟ್ರ ಅಥವಾ ಕಚ್‌ನ ಭರ್ವಾಡ್ ಪಶುಪಾಲಕ ಸಮುದಾಯಕ್ಕಿಂತ ಭಿನ್ನವಾಗಿದೆ. ಈ ಗುಂಪುಗಳು ಕುರಿ ಮತ್ತು ಮೇಕೆಗಳ ದೊಡ್ಡ ಹಿಂಡುಗಳನ್ನು ಹೊಂದಿರುವುದೂ ಇದೆ, ಆದರೆ ಧೋಲ್ಕಾದ ಹೆಚ್ಚಿನ ಭರ್ವಾಡರು ಕೆಲವೇ ಹಸುಗಳು ಅಥವಾ ಎಮ್ಮೆಗಳನ್ನು ಮಾತ್ರ ಇಟ್ಟುಕೊಳ್ಳುತ್ತಾರೆ. "ಇಲ್ಲಿ ಪ್ರತಿ ಕುಟುಂಬದಲ್ಲಿ ಕೇವಲ 2-4 ಪ್ರಾಣಿಗಳಿವೆ" ಎಂದು ಅಂಬಲಿಯಾರಾದ ಜಯಬೆನ್ ಭರ್ವಾಡ್ ಹೇಳುತ್ತಾರೆ. "ನಮ್ಮ ಮನೆಯ ಅಗತ್ಯಗಳನ್ನು ಇದರಿಂದ ಪೂರೈಸಲಾಗುವುದಿಲ್ಲ. ಅವುಗಳಿಂದ ಯಾವುದೇ ಆದಾಯವಿಲ್ಲ. ನಾವು ಅವುಗಳಿಗೆ ಮೇವನ್ನು ವ್ಯವಸ್ಥೆ ಮಾಡುತ್ತೇವೆ. ಕೆಲವೊಮ್ಮೆ ಜನರು ಹಂಗಾಮಿನಲ್ಲಿ ನಮಗೆ ಸ್ವಲ್ಪ ಭತ್ತದ ಹುಲ್ಲನ್ನು ನೀಡುತ್ತಾರೆ - ಇಲ್ಲದಿದ್ದರೆ, ಅದನ್ನೂ ನಾವು ಖರೀದಿಸಬೇಕು.”

"ಈ ಪ್ರದೇಶಗಳಲ್ಲಿನ ಪುರುಷರು ಸಾರಿಗೆ, ನಿರ್ಮಾಣ ಮತ್ತು ಕೃಷಿಯಂತಹ ವಿವಿಧ ಕ್ಷೇತ್ರಗಳಲ್ಲಿ ಕೌಶಲ್ಯರಹಿತ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ" ಎಂದು ಗುಜರಾತ್‌ನ ಭರ್ವಾಡ್‌ಗಳ ಹಕ್ಕುಗಳಿಗಾಗಿ ಕೆಲಸ ಮಾಡುವ ಮಾಲ್ಧಾರಿ ಸಂಘಟನ್‌ನ ಅಹಮದಾಬಾದ್ ಮೂಲದ ಭವನ ರಬಾರಿ ಹೇಳುತ್ತಾರೆ. “ಅವರು ಸುಮಾರು ದಿನಕ್ಕೆ ಕೆಲಸದ ಲಭ್ಯತೆಗೆ ಅನುಗುಣವಾಗಿ ದಿನಕ್ಕೆ 250ರಿಂದ  300 ರೂಪಾಯಿಗಳನ್ನು ಗಳಿಸುತ್ತಾರೆ ."

For Bhawrad women of Dholka, a tubectomy means opposing patriarchal social norms and overcoming their own fears

ಧೋಲ್ಕಾದ ಭರವಾಡ್ ಮಹಿಳೆಯರ ಪಾಲಿಗೆ, ಟ್ಯೂಬೆಕ್ಟಮಿಯೆಂದರೆ ಪಿತೃಪ್ರಧಾನ ಸಾಮಾಜಿಕ ರೂಢಿಗಳನ್ನು ವಿರೋಧಿಸುವುದು ಮತ್ತು ತಮ್ಮದೇ ಆದ ಭಯಗಳನ್ನು ಮೀರುವುದು

ಪುರುಷರು “ಹೊರಗೆ ಹೋಗಿ ದುಡಿಮೆ ಮಾಡುತ್ತಾರೆ” ಎಂದು ಜಯಬೆನ್ ದೃಢಪಡಿಸಿದರು. ನನ್ನ ಪತಿ ಸಿಮೆಂಟ್ ಚೀಲಗಳನ್ನು ಹೊತ್ತು 200-250 ರೂ. ದುಡಿಯುತ್ತಾರೆ. ಹತ್ತಿರದಲ್ಲಿ ಸಿಮೆಂಟ್ ಕಾರ್ಖಾನೆ ಇರುವುದರಿಂದಾಗಿ ಅವರು ಅದೃಷ್ಟವಂತರು, ಅಲ್ಲಿ ಅವರು ಹೆಚ್ಚಿನ ದಿನಗಳಲ್ಲಿ ಕೆಲಸ ಪಡೆಯುತ್ತಾರೆ. ಅವರ ಕುಟುಂಬ, ಇಲ್ಲಿರುವ ಅನೇಕ ಜನರಂತೆ, ಬಿಪಿಎಲ್ (ಬಡತನ ರೇಖೆಗಿಂತ ಕೆಳಗೆ) ಪಡಿತರ ಚೀಟಿ ಕೂಡ ಹೊಂದಿಲ್ಲ.

ಇಬ್ಬರು ಗಂಡು ಮತ್ತು ಒಂದು ಹೆಣ್ಣು ಮಗುವನ್ನು ಹೊಂದಿದ ನಂತರವೂ ತನ್ನ ಗರ್ಭಧಾರಣೆಯ ನಿಯಂತ್ರಣಕ್ಕೆ ಜಯಾಬೆನ್ ಮೌಖಿಕ ಗರ್ಭನಿರೋಧಕಗಳನ್ನು ಅಥವಾ ಕಾಪರ್-ಟಿ ಬಳಸಲು ಹೆದರುತ್ತಾರೆ. ಅವರು ಶಾಶ್ವತ ಸಂತಾನ ಹರಣ ಮಾಡಿಸಲು ಬಯಸುವುದಿಲ್ಲ. “ನನ್ನ ಎಲ್ಲಾ ಹೆರಿಗೆಗಳು ಮನೆಯಲ್ಲಿ ನಡೆದವು. ಅವರು ಬಳಸುವ ಎಲ್ಲಾ ಸಾಧನಗಳ ಕುರಿತು ತುಂಬಾ ಭಯಭೀತಳಾಗಿದ್ದೇನೆ. ಆಪರೇಷನ್ ನಂತರ ಠಾಕೋರ್ ಅವರ ಪತ್ನಿ ಬಳಲುತ್ತಿದ್ದಿದ್ದನ್ನು ನೋಡಿದ್ದೇನೆ."

“ಆದ್ದರಿಂದ ನಾವು ನಮ್ಮ ಮೆಲಾಡಿ ತಾಯಿಯನ್ನು ಕೇಳಲು ನಿರ್ಧರಿಸಿದೆವು. ಆಕೆಯ ಅನುಮತಿಯಿಲ್ಲದೆ ನಾನು ಆಪರೇಷನ್‌ಗೆ ಹೋಗಲು ಸಾಧ್ಯವಿಲ್ಲ. ಬೆಳೆಯುತ್ತಿರುವ ಸಸ್ಯವನ್ನು ಕತ್ತರಿಸಲು ತಾಯಿ ನನಗೆ ಏಕೆ ಅವಕಾಶ ನೀಡುತ್ತಾರೆ? ಆದರೆ ಈ ದಿನಗಳಲ್ಲಿ ವಸ್ತುಗಳು ತುಂಬಾ ದುಬಾರಿಯಾಗಿವೆ. ನಾನು ಎಷ್ಟು ಜನರಿಗೆ ಆಹಾರವನ್ನು ನೀಡಲು ಸಾಧ್ಯ? ಹಾಗಾಗಿ ನಾನು ಸಾಕಷ್ಟು ಮಕ್ಕಳನ್ನು ಹೊಂದಿದ್ದೇನೆ ಆದರೆ ಆಪರೇಷನ್‌ಗೆ ಹೆದರುತ್ತಿದ್ದೆ ಎಂದು ನಾನು ತಾಯಿಗೆ ಹೇಳಿದೆ. ನಾನು ಅವಳಿಗೆ ಹರಕೆ ನೀಡುವುದಾಗಿ ಭರವಸೆ ನೀಡಿದ್ದೇನೆ. ತಾಯಿ ನನ್ನನ್ನು 10 ವರ್ಷಗಳ ಕಾಲ ನೋಡಿಕೊಂಡಳು. ನಾನು ಯಾವುದೇ ಔಷಧಿ ತೆಗೆದುಕೊಳ್ಳಬೇಕಾಗಿ ಬರಲಿಲ್ಲ."

*****

ಪತಿ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾಗಬಹುದೆಂಬ ಕಲ್ಪನೆಯು ಜಯಾಬೆನ್ ಮತ್ತು ಅಲ್ಲಿ ಒಟ್ಟುಗೂಡಿದ್ದ ಗುಂಪಿನ ಇತರ ಎಲ್ಲ ಮಹಿಳೆಯರಿಗೆ ಆಶ್ಚರ್ಯವನ್ನುಂಟುಮಾಡಿತು.

ಅವರ ಪ್ರತಿಕ್ರಿಯೆಯು ಪುರುಷ ಸಂತಾನ ಹರಣದ ಬಗ್ಗೆ ರಾಷ್ಟ್ರೀಯ ಹಿಂಜರಿಕೆಯನ್ನು ಪ್ರತಿಬಿಂಬಿಸುತ್ತದೆ. ಭಾರತದಾದ್ಯಂತ, 2017-18ರಲ್ಲಿ, “ಒಟ್ಟು 14,73,418 ಸಂತಾನ ಹರಣ ಪ್ರಕ್ರಿಯೆಯಲ್ಲಿ, ಕೇವಲ 6.8% ಮಾತ್ರ ಪುರುಷ ಸಂತಾನ ಹರಣ ಪ್ರಕ್ರಿಯೆಗಳಿದ್ದವು. ಮತ್ತು 93.1% ರಷ್ಟು ಸ್ತ್ರೀಯರು ಎಂದು ರಾಷ್ಟ್ರೀಯ ಆರೋಗ್ಯ ಮಿಷನ್‌ನ ವರದಿಯು ಹೇಳುತ್ತದೆ.

ಎಲ್ಲಾ ಸಂತಾನ ಹರಣ ಚಿಕಿತ್ಸೆಯು ಅನುಪಾತವಾಗಿ ಸಂತಾನಹರಣದ ಹರಡುವಿಕೆ ಮತ್ತು ಸ್ವೀಕಾರವು ಇಂದಿನ ಕಾಲಕ್ಕಿಂತ 50 ವರ್ಷಗಳ ಹಿಂದೆ ಹೆಚ್ಚಿತ್ತು, 1970ರ ದಶಕದ ಉತ್ತರಾರ್ಧದಲ್ಲಿ ಇದು ತೀವ್ರವಾಗಿ ಕುಸಿಯಿತು, ವಿಶೇಷವಾಗಿ 1975-77 ತುರ್ತು ಪರಿಸ್ಥಿತಿಯ ಕುಖ್ಯಾತ ಬಲವಂತದ ಸಂತಾನಹರಣದ ನಂತರ. 1970ರಲ್ಲಿ ಶೇಕಡಾ 74.2ರಷ್ಟಿದ್ದ ಇದರ ಪ್ರಮಾಣವು 1992ರಲ್ಲಿ ಕೇವಲ 4.2ಕ್ಕೆ ಇಳಿದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಬುಲೆಟಿನ್‌ನ ವರದಿಯೊಂದು ಹೇಳಿದೆ.

ಕುಟುಂಬ ಯೋಜನೆ ಹೆಚ್ಚಾಗಿ ಮಹಿಳೆಯರ ಜವಾಬ್ದಾರಿಯಾಗಿ ಕಂಡುಬರುತ್ತದೆ.

ಟ್ಯೂಬೆಕ್ಟಮಿಗೆ ಒಳಗಾದ ಈ ಗುಂಪಿನ ಏಕೈಕ ವ್ಯಕ್ತಿ ಜೀಲುಬೆನ್, ಆ ಪ್ರಕ್ರಿಯೆಗೆ ಮೊದಲು, “ನನ್ನ ಗಂಡನನ್ನು ಏನಾದರೂ ಬಳಸುವಂತೆ ಕೇಳುವ ಪ್ರಶ್ನೆಯೇ ಇರಲಿಲ್ಲ. ಅವರು ಕೂಡ ಆಪರೇಷನ್ ಮಾಡಿಸಿಕೊಳ್ಳಬಹುದೆಂದು ನನಗೆ ತಿಳಿದಿರಲಿಲ್ಲ. ಅದೇನೆ ಇದ್ದರೂ, ನಾವು ಅಂತಹ ವಿಷಯಗಳ ಬಗ್ಗೆ ಎಂದಿಗೂ ಮಾತನಾಡಿಲ್ಲ." ಆದರೂ ಕೆಲವು ಸಂದರ್ಭಗಳಿವೆ, ಅವರು ಹೇಳುತ್ತಾರೆ, ತನ್ನ ಪತಿ ಕೆಲವೊಮ್ಮೆ ತನ್ನ ತುರ್ತು ಗರ್ಭನಿರೋಧಕ ಮಾತ್ರೆಗಳನ್ನು ಧೋಲ್ಕಾದಿಂದ ತಂದು ಕೊಡುತ್ತಿದ್ದರು "ಮೂರು ಮಾತ್ರೆಗಳಿಗೆ 500 ರೂಪಾಯಿಗಳಿದ್ದವು” ಅದು ಅವರ ಟ್ಯೂಬೆಕ್ಟಮಿಗೆ ಮುಂಚಿನ ವರ್ಷಗಳಲ್ಲಿ ನಡೆಯುತ್ತಿತ್ತು.

ರಾಜ್ಯದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಫ್ಯಾಕ್ಟ್ ಶೀಟ್ (2015-16) ಹೇಳುವಂತೆ ಗ್ರಾಮೀಣ ಗುಜರಾತ್‌ನಲ್ಲಿನ ಎಲ್ಲಾ ಕುಟುಂಬ ಯೋಜನೆ ವಿಧಾನಗಳಲ್ಲಿ ಪುರುಷ ಸಂತಾನಹರಣ ಚಿಕಿತ್ಸೆಯು ಕೇವಲ 0.2ರಷ್ಟು ಮಾತ್ರ. ಸ್ತ್ರೀ  ಸಂತಾನಹರಣ, ಗರ್ಭಾಶಯದ ಸಾಧನಗಳು ಮತ್ತು ಮಾತ್ರೆಗಳು ಸೇರಿದಂತೆ ಎಲ್ಲಾ ಇತರ ವಿಧಾನಗಳ ತೀವ್ರತೆಯನ್ನು ಮಹಿಳೆಯರು ಭರಿಸುತ್ತಾರೆ.

ಧೋಲ್ಕಾದ ಭರವಾಡ್ ಮಹಿಳೆಯರ ಪಾಲಿಗೆ, ಟ್ಯೂಬೆಕ್ಟಮಿಯೆಂದರೆ ಪಿತೃಪ್ರಧಾನ ಸಾಮಾಜಿಕ ರೂಢಿಗಳನ್ನು ವಿರೋಧಿಸುವುದು ಮತ್ತು ತಮ್ಮದೇ ಆದ ಭಯಗಳನ್ನು ಮೀರುವುದು

The Community Health Centre, Dholka: poor infrastructure and a shortage of skilled staff add to the problem
PHOTO • Pratishtha Pandya

ಸಮುದಾಯ ಆರೋಗ್ಯ ಕೇಂದ್ರ, ಧೋಲ್ಕಾ: ಮೂಲಸೌಕರ್ಯಗಳ ಕೊರತೆ ಮತ್ತು ನುರಿತ ಸಿಬ್ಬಂದಿಗಳ ಕೊರತೆ ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ

"ಆಶಾ [ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತರು] ಕಾರ್ಯಕರ್ತರು ನಮ್ಮನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುತ್ತಾರೆ" ಎಂದು ಕಾಂತಾಬೆನ್ ಅವರ ಸೊಸೆ ಕನಕಬೆನ್ ಭರ್ವಾಡ್ ಹೇಳುತ್ತಾರೆ, ಅವರು 20ರ ದಶಕದ ಮಧ್ಯದಲ್ಲಿದ್ದಾರೆ. "ಆದರೆ ನಾವೆಲ್ಲರೂ ಭಯಭೀತರಾಗಿದ್ದೇವೆ." ಅವಳು ಕೇಳಿದಂತೆ “ಒಂದು ಮಹಿಳೆ ಸ್ಥಳದಲ್ಲೇ ಮೃತಪಟ್ಟಳು. ವೈದ್ಯರು ತಪ್ಪಾದ ಟ್ಯೂಬ್ ಕತ್ತರಿಸಿದ್ದಾರೆ ಮತ್ತು ಆಕೆ ಆಪರೇಷನ್ ಟೇಬಲ್ನಲ್ಲಿಯೇ ಸತ್ತಳು. ಅದು ಸಂಭವಿಸಿ ಒಂದು ವರ್ಷವೂ ಆಗಿಲ್ಲ.”

ಆದರೆ ಧೋಲ್ಕಾದಲ್ಲಿ ಗರ್ಭಧಾರಣೆಯೂ ಅಪಾಯಕಾರಿ. ಅನಕ್ಷರತೆ ಮತ್ತು ಬಡತನದಿಂದಾಗಿ ಮಹಿಳೆಯರು ಅನಿಯಮಿತ ಗರ್ಭಧಾರಣೆಯನ್ನು ಮುಂದುವರೆಸುತ್ತಿದ್ದಾರೆ ಮತ್ತು ಇಬ್ಬರು ಮಕ್ಕಳ ನಡುವೆ ಸರಿಯಾದ ಅಂತರವಿಲ್ಲ ಎಂದು ಸರ್ಕಾರ ನಡೆಸುತ್ತಿರುವ ಸಾಮೂಹಿಕ್‌ ಆರೋಗ್ಯ ಕೇಂದ್ರದ         (ಸಮುದಾಯ ಆರೋಗ್ಯ ಕೇಂದ್ರ, ಸಿಎಚ್‌ಸಿ) ಸಲಹೆಗಾರ ವೈದ್ಯರು ಹೇಳುತ್ತಾರೆ. ಮತ್ತು "ಯಾವುದೇ ಮಹಿಳೆ ನಿಯಮಿತ ತಪಾಸಣೆಗಾಗಿ ಬರುವುದಿಲ್ಲ" ಎಂದು ಅವರು ಹೇಳುತ್ತಾರೆ. ಕೇಂದ್ರಕ್ಕೆ ಭೇಟಿ ನೀಡುವ ಹೆಚ್ಚಿನ ಮಹಿಳೆಯರು ಪೌಷ್ಠಿಕಾಂಶದ ಕೊರತೆ ಮತ್ತು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. "ಇಲ್ಲಿಗೆ ಬರುವ ಸುಮಾರು 90% ಮಹಿಳೆಯರ ಹಿಮೋಗ್ಲೋಬಿನ್  ಶೇಕಡಾ 8ಕ್ಕಿಂತ ಕಡಿಮೆಯಿದೆ" ಎಂದು ಅವರು ಅಂದಾಜಿಸಿದ್ದಾರೆ.

ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಕಳಪೆ ಮೂಲಸೌಕರ್ಯ ಮತ್ತು ನುರಿತ ಸಿಬ್ಬಂದಿಗಳ ಕೊರತೆಯಿದೆ. ಯಾವುದೇ ಸೋನೋಗ್ರಫಿ ಯಂತ್ರಗಳಿಲ್ಲ, ಮತ್ತು ದೀರ್ಘಾವಧಿಯವರೆಗೆ ಪೂರ್ಣ ಸಮಯದ ಸ್ತ್ರೀರೋಗತಜ್ಞ ಅಥವಾ ನಿಗದಿತ ಅರಿವಳಿಕೆ ತಜ್ಞರು ಕರೆಯಲ್ಲಿ ಲಭ್ಯವಿಲ್ಲ. ಒಬ್ಬ ಅರಿವಳಿಕೆ ತಜ್ಞ ಎಲ್ಲಾ ಆರು ಪಿಎಚ್‌ಸಿಗಳು (ಪ್ರಾಥಮಿಕ ಆರೋಗ್ಯ ಕೇಂದ್ರಗಳು), ಒಂದು ಸಿಎಚ್‌ಸಿ, ಮತ್ತು ಧೋಲ್ಕಾದ ಹಲವಾರು ಖಾಸಗಿ ಆಸ್ಪತ್ರೆಗಳು ಅಥವಾ ಚಿಕಿತ್ಸಾಲಯಗಳಲ್ಲಿ ಕೆಲಸ ಮಾಡುತ್ತಾರೆ ಮತ್ತು ರೋಗಿಗಳು ಅವರಿಗೆ ಪ್ರತ್ಯೇಕವಾಗಿ ಪಾವತಿಸಬೇಕಾಗುತ್ತದೆ.

ಏತನ್ಮಧ್ಯೆ, ಖಾನ್ಪರ್ ಗ್ರಾಮದ ಆ ಕೋಣೆಯಲ್ಲಿ, ಮಹಿಳೆಯರ ದೇಹದ ಮೇಲೆ ನಿಯಂತ್ರಣದ ಕೊರತೆಯಿಂದ ಕೋಪಗೊಂಡ, ಈ ಸಂಭಾಷಣೆಯ ಸಮಯದಲ್ಲಿ ಒಂದು ದೊಡ್ಡ ಧ್ವನಿ ಪ್ರತಿಧ್ವನಿಸಿತು. ಒಂದು ವರ್ಷದ ಗಂಡು ಮಗುವನ್ನು ಎತ್ತಿಕೊಂಡಿದ್ದ ಯುವ ತಾಯಿ ಕೋಪದಿಂದ ಕೇಳುತ್ತಾರೆ: “ಯಾರು ನಿರ್ಧರಿಸುತ್ತಾರೆಂದು ನೀವು ಅರ್ಥೈಸುತ್ತೀರಿ? ನಾನು ನಿರ್ಧರಿಸುತ್ತೇನೆ ಇದು ನನ್ನ ದೇಹ; ಬೇರೆ ಯಾರಾದರೂ ಏಕೆ ನಿರ್ಧರಿಸುತ್ತಾರೆ? ನನಗೆ ಇನ್ನೊಂದು ಮಗು ಬೇಡ ಎಂದು ನನಗೆ ಗೊತ್ತು. ಮತ್ತು ನಾನು ಮಾತ್ರೆಗಳನ್ನು ತೆಗೆದುಕೊಳ್ಳಲು ಬಯಸುವುದಿಲ್ಲ. ಒಂದು ವೇಳೆ ನಾನು ಗರ್ಭಿಣಿಯಾದರೆ, ಸರ್ಕಾರವು ನಮಗೆಂದು ಔಷಧಿಗಳನ್ನು ಹೊಂದಿದೆಯಲ್ಲವೇ? ನಾನು ಔಷಧಿಯನ್ನು ತೆಗೆದುಕೊಳ್ಳುತ್ತೇನೆ [ಚುಚ್ಚುಮದ್ದಿನ ಗರ್ಭನಿರೋಧಕ]. ಅದನ್ನು ನಾನು ಮಾತ್ರ ನಿರ್ಧರಿಸುತ್ತೇನೆ."

ಅದು ಅಪರೂಪದ ಧ್ವನಿಯಾಗಿತ್ತು. ಆದರೂ, ಸಂಭಾಷಣೆಯ ಆರಂಭದಲ್ಲಿ ರಮಿಲಾ ಭರ್ವಾಡ್ ಹೇಳಿದಂತೆ: “ಈಗ ವಿಷಯಗಳು ಒಂದಿಷ್ಟು ಬದಲಾಗಿರಬಹುದು.” ಅದು ಒಂದಿಷ್ಟು ಸರಿ, ಬಹುಶಃ, ಸ್ವಲ್ಪವೇ.

ಗೌಪ್ಯತೆಯನ್ನು ಕಾಪಾಡಿಕೊಳ್ಳುವ ಸಲುವಾಗಿ ಈ ಲೇಖನದಲ್ಲಿ ಬರುವ ಎಲ್ಲ ಮಹಿಳೆಯರ ಹೆಸರನ್ನು ಬದಲಾಯಿಸಲಾಗಿದೆ.

ಸಂವೇದನಾ ಟ್ರಸ್ಟ್‌ನ ನಾನಕಿ ವಸಂತ್ ಅವರಿಗೆ ಸಹಾಯಕ್ಕಾಗಿ ವಿಶೇಷ ಧನ್ಯವಾದಗಳು.

ಪರಿ ಮತ್ತು ಕೌಂಟರ್‌ಮೀಡಿಯಾ ಟ್ರಸ್ಟ್, ಪಾಪ್ಯುಲೇಶನ್ ಫೌಂಡೇಶನ್ ಆಫ್ ಇಂಡಿಯಾದ ಬೆಂಬಲದೊಂದಿಗೆ, ಗ್ರಾಮೀಣ ಭಾರತದ ಹದಿಹರೆಯದವರು ಮತ್ತು ಯುವತಿಯರ ಬಗ್ಗೆ ರಾಷ್ಟ್ರವ್ಯಾಪಿ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಇದೊಂದು ಈ ಪ್ರಮುಖ ಆದರೆ ಸಮಾಜದ ಅಂಚಿನಲ್ಲಿರುವ ಗುಂಪಿನ ಪರಿಸ್ಥಿತಿಯನ್ನು ಅವರದೇ ಆದ ನಿರೂಪಣೆ ಮತ್ತು ಅನುಭವದ ಮೂಲಕ ಪ್ರಸ್ತುತಪಡಿಸುವ ಪ್ರಯತ್ನವಾಗಿದೆ.

ಈ ಲೇಖನವನ್ನು ಮರುಪ್ರಕಟಿಸಲು ಬಯಸುವಿರಾ? ದಯವಿಟ್ಟು [email protected] ಗೆ ಇ-ಮೇಲ್‌ ಬರೆಯಿರಿ. ccಯನ್ನು [email protected] ಈ ವಿಳಾಸಕ್ಕೆ ಸೇರಿಸಿ

ಅನುವಾದ: ಶಂಕರ ಎನ್. ಕೆಂಚನೂರು

Pratishtha Pandya

Pratishtha Pandya is a Senior Editor at PARI where she leads PARI's creative writing section. She is also a member of the PARIBhasha team and translates and edits stories in Gujarati. Pratishtha is a published poet working in Gujarati and English.

Other stories by Pratishtha Pandya
Illustrations : Antara Raman

Antara Raman is an illustrator and website designer with an interest in social processes and mythological imagery. A graduate of the Srishti Institute of Art, Design and Technology, Bengaluru, she believes that the world of storytelling and illustration are symbiotic.

Other stories by Antara Raman

P. Sainath is Founder Editor, People's Archive of Rural India. He has been a rural reporter for decades and is the author of 'Everybody Loves a Good Drought' and 'The Last Heroes: Foot Soldiers of Indian Freedom'.

Other stories by P. Sainath
Series Editor : Sharmila Joshi

Sharmila Joshi is former Executive Editor, People's Archive of Rural India, and a writer and occasional teacher.

Other stories by Sharmila Joshi
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru