ಈ ಹೂವು ಕಿರುಬೆರಳಿನ ಉಗುರಿನಷ್ಟೂ ದೊಡ್ಡದಿರುವುದಿಲ್ಲ, ಮೊಗ್ಗುಗಳು ಮಸುಕು ಬಿಳುಪಿನ ಬಣ್ಣದಲ್ಲಿದ್ದು ಮುದ್ದಾಗಿರುತ್ತವೆ. ಹೊಲದಲ್ಲಿ ಅಲ್ಲಲ್ಲಿ ಅರಳಿ ನಿಂತ ಹೂವುಗಳು ಬಳಿ ಸುಳಿಯುವರ ಮೂಗಿಗೆ ಸೌಗಂಧವನ್ನು ಉಣಬಡಿಸುತ್ತವೆ. ಅರಳಿದ ಹೂಗಳು ಚಿಕ್ಕೆಯಂತೆ ಹೊಳೆಯುತ್ತಿರುತ್ತವೆ. ಮಲ್ಲಿಗೆ ಹೂವೆನ್ನುವುದು ಧೂಳು ತುಂಬಿದ ನೆಲ, ದಪ್ಪನೆಯ ಗಿಡ, ಮೋಡ ತುಂಬಿದ ಆಕಾಶ ನಮಗೆ ಅದ್ಭುತ ಉಡುಗೊರೆ.

ಆದರೆ ಇಲ್ಲಿನ ಕೆಲಸಗಾರರಿಗೆ ಇಂತಹ ಕವಿ ಸಮಯಕ್ಕೆ ಪುರುಸೊತ್ತಿಲ್ಲ. ಮಲ್ಲಿಗೆಯ ಮೊಗ್ಗು ಅರಳು ಮೊದಲು ಅದನ್ನು ಪೂಕಡೈ (ಹೂವಿನ ಮಾರುಕಟ್ಟೆ)ಗೆ ಸಾಗಿಸುವ ಅವಸರವಿದೆ. ಅದು ಚೌತಿಯ ಸಮಯವಾಗಿತ್ತು. ಈ ಸಮಯದಲ್ಲಿ ಹೂವನ್ನು ಮಾರುಕಟ್ಟೆಗೆ ತಲುಪಿಸಿದರೆ ಒಂದಷ್ಟು ಉತ್ತಮ ಬೆಲೆಯನ್ನೂ ಎದುರು ನೋಡಬಹುದು.

ಹೆಂಗಸರು ಮತ್ತು ಗಂಡಸರು ತಮ್ಮ ಹೆಬ್ಬೆರಳು ಮತ್ತು ತೋರುಬೆರಳುಗಳನ್ನು ಬಳಸಿ ಮೊಗ್ಗುಗಳನ್ನು ಗಡಿಬಿಡಿಯಿಂದ ಕೀಳುತ್ತಾರೆ. ಮೊಗ್ಗುಗಳು ಮುಷ್ಟಿ ತುಂಬಿದಂತೆ ಕಿತ್ತ ಮೊಗ್ಗುಗಳನ್ನು ತಮ್ಮ ಲುಂಗಿಯ ಮಡಚಿನೊಳಗೋ ಅಥವಾ ಸೀರೆಯ ಸೆರಗಿನ ತುದಿಗೋ ಸುರಿಯುತ್ತಾರೆ. ನಂತರ ಅದನ್ನು ಚೀಲಕ್ಕೆ ತುಂಬಿಕೊಳ್ಳುತ್ತಾರೆ. ಈ ಮೊಗ್ಗು ಆರಿಸುವ ಕೆಲಸಕ್ಕೂ ಒಂದು ಶಿಸ್ತಿದೆ: ಗಿಡದ ಕೊಂಬೆಗಳನ್ನು ಸರಿಸಿ ಮೊಗ್ಗುಗಳನ್ನು ಕೀಳಲಾಗುತ್ತದೆ. ನಂತರ ಮುಂದಿನ ಗಿಡಕ್ಕೆ ಸಾಗಲಾಗುತ್ತದೆ. ಮೂರುವ ವರ್ಷದಷ್ಟು ಮಗುವಿನಷ್ಟು ಎತ್ತರವಿರುವ ಗಿಡಗಳ ಮೊಗ್ಗನ್ನು ಕೀಳುತ್ತಾ ಮಾತಾಡುತ್ತಾ ಕೆಲಸ ಮಾಡುತ್ತಾರೆ. ಜೊತೆಗೆ ಸೂರ್ಯ ಪೂರ್ವದಲ್ಲಿ ಮೇಲೆ ಬರುವ ಹೊತ್ತಿಗೆ ರೇಡಿಯೋದಲ್ಲಿ ಬರುವ ಜನಪ್ರಿಯ ತಮಿಳು ಹಾಡುಗಳನ್ನು ಸಹ ಕೇಳಲಾಗುತ್ತದೆ.

ಇದು ಮುಂಗಿದ ನಂತರ ಕೂಡಲೇ ಮೊಗ್ಗುಗಳನ್ನು ಮಧುರೈ ನಗರದ ಮಟ್ಟುತವಾನಿ ಮಾರುಕಟ್ಟೆಗೆ ಸಾಗಿಸಲಾಗುತ್ತದೆ. ಅಲ್ಲಿಂದ ಈ ಮೊಗ್ಗುಗಳು ತಮಿಳುನಾಡಿನ ಇತರ ನಗರಗಳಿಗೆ ಪ್ರಯಾಣಿಸುತ್ತವೆ. ಇನ್ನೂ ಕೆಲವೊಮ್ಮೆ ಸಾಗರದಾಚೆಯ ನಾಡುಗಳಿಗೂ ಕಳಿಸಲ್ಪಡುತ್ತವೆ.

2021, 2022 ಮತ್ತು 2023ರಲ್ಲಿ ಮಧುರೈ ಜಿಲ್ಲೆಯ ತಿರುಮಂಗಲಂ ಮತ್ತು ಉಸಿಲಂಪಟ್ಟಿ ತಾಲ್ಲೂಕುಗಳಿಗೆ ಪರಿ ಭೇಟಿ ನೀಡಿತ್ತು. ಮಲ್ಲಿಗೆ ಹೊಲಗಳು ಮಧುರೈ ನಗರದಿಂದ ಒಂದು ಗಂಟೆಗಿಂತಲೂ ಕಡಿಮೆ ಪ್ರಯಾಣದ ದೂರದಲ್ಲಿವೆ. ಮಧುರೈ ನಗರ ಅಪ್ರತಿಮ ಮೀನಾಕ್ಷಿ ಅಮ್ಮನ್ ದೇವಾಲಯ ಮತ್ತು ಗದ್ದಲದ ಹೂವಿನ ಮಾರುಕಟ್ಟೆಯನ್ನು ಹೊಂದಿದೆ. ಅಲ್ಲಿ ಮಲ್ಲಿಯನ್ನು ಜನರು ಬೊಗಸೆಗಳಷ್ಟು ಮತ್ತು ರಾಶಿಗಳಷ್ಟು ಮಾರಾಟ ಮಾಡುತ್ತಾರೆ.

PHOTO • M. Palani Kumar

ಮಧುರೈನ ತಿರುಮಂಗಲಂ ತಾಲ್ಲೂಕಿನ ಮೆಲುಪ್ಪಿಲಿಗುಂಡು ಎಂಬ ಕುಗ್ರಾಮದಲ್ಲಿ ಗಣಪತಿ ತನ್ನ ಹೊಲಗಳ ಮಧ್ಯದಲ್ಲಿ ನಿಂತಿರುವುದು. ಮಲ್ಲಿಗೆ ಸಸ್ಯಗಳು ಈಗಷ್ಟೇ ತಮ್ಮ ಹೂಬಿಡುವಿಕೆಯ ಕಾಲದ ಉತ್ತುಂಗವನ್ನು ಮುಗಿಸಿವೆ ಮತ್ತು ಈಗ ಪ್ರತಿದಿನ ಸುಮಾರು ಒಂದು ಕಿಲೋ ಆಗುವಷ್ಟು ಮೊಗ್ಗು ಸಿಗುತ್ತದೆ

PHOTO • M. Palani Kumar

ಬೊಗಸೆಯಷ್ಟು ಪರಿಮಳದ ಮಲ್ಲಿಗೆ ಹೂ

ತಿರುಮಂಗಲಂ ತಾಲ್ಲೂಕಿನ ಮೆಲುಪ್ಪಿಲಿಗುಂಡು ಕುಗ್ರಾಮದ 51 ವರ್ಷದ ಪಿ.ಗಣಪತಿಯವರು ಮಧುರೈ ಪ್ರದೇಶಕ್ಕೆ ಆ ಹೆಸರನ್ನು ತಂದಿತ್ತ ಹೂವಿನ ಕುರಿತು ನಮಗೆ ಹೇಳಿದರು. “ಈ ಪ್ರದೇಶವು ಪರಿಮಳಯುಕ್ತ ಮಲ್ಲಿಗೆಗೆ ಹೆಸರುವಾಸಿಯಾಗಿದೆ. ಇದನ್ನು ನೀವೇ ತಿಳಿದುಕೊಳ್ಳಬೇಕೆಂದರೆ ಒಂದು ಕೇಜಿ ಮಲ್ಲಿಗೆ ಹೂವನ್ನು ನಿಮ್ಮ ಮನೆಯೊಳಗೆ ಇಟ್ಟು ನೋಡಬೇಕು. ಈ ಹೂವಿನ ಪರಿಮಳ ಒಂದು ವಾರದವರೆಗೆ ಇರುತ್ತದೆ!”

ಕಲೆರಹಿತ ಬಿಳಿಯಂಗಿ ತೊಟ್ಟು ಅದರ ಕಿಸೆಯಲ್ಲಿ ಒಂದಷ್ಟು ನೋಟುಗಳನ್ನು ಇರಿಸಿಕೊಂಡಿದ್ದ ಗಣಪತಿ, ನೀಲಿ ಲುಂಗಿ ಧರಿಸಿದ್ದರು. ಸದಾ ಮುಗುಳ್ನಗುವ ಅವರು ಚಟಪಟನೆ ಮಧುರೈ ಭಾಗದ ತಮಿಳಿನಲ್ಲಿ ಮಾತನಾಡುತ್ತಾರೆ. “ಗಿಡಕ್ಕೆ ಒಂದು ವರ್ಷವಾಗುವವರೆಗೆ ಅದನ್ನು ಮಗುವಿನಂತೆ ಎಚ್ಚರಿಕೆಯಿಂದ ಆರೈಕೆ ಮಾಡಬೇಕು” ಎಂದು ಅವರು ವಿವರಿಸುತ್ತಾರೆ. ಎರಡೂವರೆ ಎಕರೆ ಭೂಮಿ ಹೊಂದಿರುವ ಅವರು ಅದರಲ್ಲಿ ಮಲ್ಲಿಗೆ ಬೆಳೆಯುತ್ತಾರೆ.

ಸಸ್ಯವು ಸುಮಾರು ಆರು ತಿಂಗಳ ನಂತರ ಹೂ ಬಿಡಲು ಪ್ರಾರಂಭಿಸುತ್ತದೆ, ಆದರೆ ಇಳುವರಿ ಸಮನಾಗಿರುವುದಿಲ್ಲ. ಅದು ಹೂವಿನ ಬೆಲೆಯಂತೆಯೇ ಮೇಲಕ್ಕೆ ಮತ್ತು ಕೆಳಗೆ ಹೋಗುತ್ತದೆ. ಕೆಲವೊಮ್ಮೆ, ಗಣಪತಿಯವರಿಗೆ ಎಕರೆಗೆ ಕೇವಲ ಒಂದು ಕಿಲೋ ಹೂ ಸಿಗುತ್ತದೆ. ಒಂದೆರಡು ವಾರಗಳ ನಂತರ, ಅದೇ ಇಳುವರಿ 50 ಕೆಜಿಗೆ ಏರಬಹುದು. "ಮದುವೆ ಮತ್ತು ಹಬ್ಬದ ಋತುವಿನಲ್ಲಿ, ದರಗಳು ತುಂಬಾ ಉತ್ತಮವಾಗಿರುತ್ತವೆ: ಒಂದು ಸಾವಿರ, ಎರಡು ಸಾವಿರ, ಮೂರು ಸಾವಿರ ... ಹೀಗಿರುತ್ತದೆ ಆಗ ಒಂದು ಕಿಲೋ  ಮೊಗ್ಗಿನ ಬೆಲೆ. ಆದರೆ ಎಲ್ಲರ ತೋಟಗಳಲ್ಲೂ ಇಳುವರಿ ಉತ್ತಮವಿರುವಾಗ ಹೂವಿಗೆ ಬೆಲೆ ಇರುವುದಿಲಲ್ಲ." ಕೃಷಿಯಲ್ಲಿ ಯಾವುದೇ ಗ್ಯಾರಂಟಿ ಇರುವುದಿಲ್ಲ. ಇಲ್ಲಿ ಭರವಸೆ ನೀಡುವ ಏಕೈಕ ವಿಷಯವೆಂದರೆ ವೆಚ್ಚ.

ಮತ್ತು ಅನುಮಾನವೇ ಇಲ್ಲದಂತೆ ಶ್ರಮ. ಕೆಲವು ಬೆಳಗುಗಳಲ್ಲಿ ಗಣಪತಿ ಮತ್ತು ಅವರು ವೀಟುಕಾರಮ್ಮ ಎಂದು ಕರೆಯುವ ಅವರ ಪತ್ನಿ ಪಿಚೈಯಮ್ಮ, ಇಬ್ಬರೂ ಸೇರಿ ಎಂಟು ಕಿಲೋಗಳಷ್ಟು ಮೊಗ್ಗುಗಳನ್ನು ಕೊಯ್ಯುವುದಿದೆ. “ಬೆನ್ನು ಮುರಿದ ಅನುಭವವಾಗುತ್ತಿತ್ತು” ಎಂದು ಹೇಳುತ್ತಾರವರು. ಅವರನ್ನು ಮತ್ತಷ್ಟು ನೋಯಿಸುತ್ತಿರುವುದು ಹೆಚ್ಚುತ್ತಿರುವ ರಸಗೊಬ್ಬರ ಮತ್ತು ಕೀಟನಾಶಕ, ಕಾರ್ಮಿಕ ವೆಚ್ಚಗಳು ಮತ್ತು ಇಂಧನದ ವೆಚ್ಚಗಳು. “ನಾವು ಒಂದು ಸಮಂಜಸವೆನ್ನಿಸುವಂತಹ ಲಾಭವನ್ನು ಪಡೆಯುವುದಾದರೂ ಹೇಗೆ?” ಎಂದು ಅವರು ನಮ್ಮನ್ನು 2021ರಲ್ಲಿ ಕೇಳಿದ್ದರು.

ತಮಿಳು ಸಂಸ್ಕೃತಿಯ ಸಂಕೇತವಾಗಿರುವ ಈ ನಿತ್ಯಪುಷ್ಪವನ್ನು ಇಲ್ಲಿನ ಪ್ರತಿ ಬೀದಿಯಲ್ಲೂ ಕಾಣಬಹುದು. ಒಂದು ರೀತಿಯಲ್ಲಿ ಇಲ್ಲಿಯ ಇಡ್ಲಿಯಂತೆಯೇ ಈ ಮಲ್ಲಿ ಪೂ ಪರಿಮಳವೆನ್ನುವುದು ಪ್ರತಿದೇವಾಲಯ, ಮದುವೆ ಮನೆ, ಮಲಗುವ ಕೋಣೆಜನಸಂದಣಿ, ಬಸ್‌ ಹೀಗೆ ಎಲ್ಲೆಡೆ ನಿಮ್ಮನ್ನು ಸ್ವಾಗತಿಸುತ್ತದೆ. ಆದರೆ ಇಂತಹ ಪರಿಮಳದ ಹೂವರಳಿಸುವ ಗಿಡವನ್ನು ಬೆಳೆಸುವುದು ಸುಲಭದ ಕೆಲಸವಲ್ಲ…

*****

PHOTO • M. Palani Kumar
PHOTO • M. Palani Kumar

ಗಣಪತಿಯವರ ಹೊಲದಲ್ಲಿನ ಹೊಸ ಮಲ್ಲಿಗೆ ಸಸಿಗಳು ಮತ್ತು ಮೊಗ್ಗುಗಳು. ಮಲ್ಲಿಗೆ ಹೊಲ (ಬಲ)

PHOTO • M. Palani Kumar

ಮಲ್ಲಿಗೆ ಹೊಲಗಳನ್ನು ಸ್ವಚ್ಛಗೊಳಿಸಲು ಕೃಷಿ ಕಾರ್ಮಿಕರೊಂದಿಗೆ ಕೆಲಸ ಮಾಡುತ್ತಿರುವ ಪಿಚ್ಚೈಯಮ್ಮ

ನಮ್ಮ ಆಗಸ್ಟ್‌ 2022ರ ಭೇಟಿಯಲ್ಲಿ ಗಣಪತಿ ತಮ್ಮ ಒಂದು ಎಕರೆ ಭೂಮಿಯಲ್ಲಿ 9,000 ಏಳು ತಿಂಗಳ ಪ್ರಾಯದ ಮಲ್ಲಿಗೆ ಗಿಡಗಳ ಹೊಸ ಬ್ಯಾಚನ್ನು ಹೊಂದಿದ್ದರು. ರಾಮನಾಥಪುರಂ ಜಿಲ್ಲೆಯ ರಾಮೇಶ್ವರಂ ಬಳಿಯ ತಂಗಚಿಮಡಂನಲ್ಲಿರುವ ನರ್ಸರಿಗಳಲ್ಲಿ ಮೊಳ ಗಾತ್ರದ ಸಸಿಯೊಂದಕ್ಕೆ ನಾಲ್ಕು ರೂಪಾಯಿಗಳ ಬೆಲೆಯಿದೆ ಎಂದು ಕೈಯಲ್ಲಿ ಮೊಳದ ಅಳತೆ ತೋರಿಸುತ್ತಾ ಅವರು ಹೇಳುತ್ತಾರೆ. ಅವರು ಬಲವಾದ ಸಸ್ಯ ಕೊಳ್ಳುವುದನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಪ್ರತಿಯೊಂದು ಗಿಡವನ್ನೂ ಸ್ವತಃ ಮುಟ್ಟಿ ನೋಡಿ ಆರಿಸಿ ತರುತ್ತಾರೆ. ಮಣ್ಣು ಉತ್ತಮವಾಗಿದ್ದರೆ ಕೆಂಪು ಬಣ್ಣದಲ್ಲಿ ಮೆದುವಾಗಿರುತ್ತದೆ. “ಸಸ್ಯಗಳನ್ನು ನಾಲ್ಕು ಅಡಿ ಅಂತರದಲ್ಲಿ ನೆಡಬೇಕು. ಆಗ ಸಸಿ ವಿಶಾಲವಾಗಿ ಬೆಳೆಯುತ್ತದೆ” ಎಂದು ಅವರು ಕೈಯಲ್ಲಿ ಸನ್ನೆ ಮಾಡಿ ತೋರಿಸುತ್ತಾರೆ. “ಆದರೆ ಇಲ್ಲಿರುವುದು ಚೇಂಬರ್‌ ಇಟ್ಟಿಗೆಗಳಿಗೆ ಸೂಕ್ತವಾದ ಮಣ್ಣು” ಅಂದರೆ ಜೇಡಿ ಮಣ್ಣು.

ಮಲ್ಲಿ ಕೃಷಿಗಾಗಿ ಒಂದು ಎಕರೆ ಭೂಮಿಯನ್ನು ಸಿದ್ಧಪಡಿಸಲು ಗಣಪತಿ 50,000 ರೂಪಾಯಿಗಳನ್ನು ಖರ್ಚು ಮಾಡುತ್ತಾರೆ. “ಕೃಷಿಯನ್ನು ಸರಿಯಾಗಿ ಮಾಡಲು ಹಣ ಖರ್ಚಾಗುತ್ತದೆಯೆನ್ನುವುದು ನಿಮಗೂ ತಿಳಿದಿರಬಹುದು.” ಬೇಸಗೆಯಲ್ಲಿ ಅವರ ಹೊಲಗಳು ಹೂಗಳಿಂದ ಹೊಳೆಯುತ್ತಿರುತ್ತದೆ ಎನ್ನುವುದನ್ನು ಅವರು ತಮಿಳಿನಲ್ಲಿ, “ಪೊಳಿಚಿನ್ನು ಪೂಕುಮ್‌” ಎನ್ನುತ್ತಾರೆ. ತಾನು 10 ಕಿಲೋ ಹೂಗಳನ್ನು ಕೊಯ್ಲು ಮಾಡಿದ ದಿನವನ್ನು ವಿವರಿಸುವಾಗ ಹೊಳೆಯುವ ಅವರ ಕಣ್ಣುಗಳು ಒಂದೊಂದು ಗಿಡ 100 ಗ್ರಾಮ್‌, 200 ಗ್ರಾಮ್‌ ಹೂಗಳನ್ನು ನೀಡಿದ್ದನ್ನು ವಿವರಿಸುವಾಗಲೂ ಬೆಳಕು ಸುರಿಸುತ್ತವೆ. ಆ ಇಳುವರಿ ಮತ್ತೆ ಮರುಕಳಿಸಬಹುದೆನ್ನುವ ನಿರೀಕ್ಷೆ, ಭರವಸೆ ಅವರ ಮುಗುಳುನಗೆಯಲ್ಲಿ ಪ್ರತಿಫಲಿಸುತ್ತಿತ್ತು.

ಗಣಪತಿಯವರ ದಿನ ಸೂರ್ಯೋದಯದ ಆಸುಪಾಸಿನಲ್ಲೇ ಆರಂಭಗೊಳ್ಳುತ್ತದೆ. ಮೊದಲು ಇದಕ್ಕೂ ಅವರ ದಿನ ಆರಂಭಗೊಳ್ಳುತ್ತಿತ್ತು, “ಆದರೆ ಈಗ ಕೆಲಸದವರು ತಡವಾಗಿ ಬರುತ್ತಾರೆ” ಎನ್ನುತ್ತಾರವರು. ಅವರು ಮೊಗ್ಗು ಕೀಳಲು ಜನರನ್ನು ಹಾಕಿಕೊಳ್ಳುತ್ತಾರೆ. ಅವರಿಗೆ ಗಂಟೆಗೆ 50 ರೂಪಾಯಿ ಕೂಲಿ ಅಥವಾ ಒಂದು ಡಬ್ಬಿ ಮೊಗ್ಗು ಕಿತ್ತರೆ 35-50 ರೂ ಕೊಡುತ್ತಾರೆ. ಒಂದು ಡಬ್ಬಿ ಮೊಗ್ಗು ಸುಮಾರು ಒಂದು ಕೇಜಿ ತೂಗುತ್ತದೆ.

ಪರಿಯ ಕೊನೆಯ ಭೇಟಿಯ ನಂತರ 12 ತಿಂಗಳಲ್ಲಿ ಹೂವಿನ ಬೆಲೆ ಹೆಚ್ಚಾಗಿದೆ. ಮೂಲ ಬೆಲೆಯನ್ನು 'ಸೆಂಟ್' ಕಾರ್ಖಾನೆಗಳು ನಿರ್ಧರಿಸುತ್ತವೆ. ಇವು ಸಂಸ್ಕರಣಾ ಘಟಕಗಳಾಗಿವೆ, ಸಾಮಾನ್ಯವಾಗಿ ಮಲ್ಲಿಗೆಯ ಪೂರೈಕೆ ಹೆಚ್ಚಿದ್ದಾಗ ದೊಡ್ಡ ಪ್ರಮಾಣದಲ್ಲಿ ಖರೀದಿಸುತ್ತವೆ, ಒಂದು ಕಿಲೋಗೆ 120ರಿಂದ 220 ರೂಪಾಯಿಗಳನ್ನು ಪಾವತಿಸುತ್ತವೆ. ಪ್ರತಿ ಕಿಲೋಗ್ರಾಂಗೆ ಸುಮಾರು ಇನ್ನೂರು ರೂಪಾಯಿಗಳಂತೆ ಸಿಕ್ಕರೆ ನಷ್ಟವಾಗುವುದಿಲ್ಲ ಎಂದು ಗಣಪತಿ ಹೇಳುತ್ತಾರೆ.

ಹೆಚ್ಚಿನ ಬೇಡಿಕೆಯಿದ್ದು ಉತ್ಪಾದನೆ ಕಡಿಮೆಯಿದ್ದಾಗ - ಒಂದು ಕಿಲೋ ಮಲ್ಲಿಗೆ ಮೊಗ್ಗುಗಳು ಅದರ ಅನೇಕ ಪಟ್ಟು ಬೆಲೆ ಪಡೆಯುತ್ತವೆ. ಹಬ್ಬದ ದಿನಗಳಲ್ಲಿ ಇದು ಕಿಲೋಗೆ 1,000 ರೂ.ಗಳನ್ನು ಮೀರುತ್ತದೆ. ಆದರೆ ಸಮಸ್ಯೆಯೆಂದರೆ, ಸಸ್ಯಗಳು ಕ್ಯಾಲೆಂಡರುಗಳನ್ನು ಅನುಸರಿಸುವುದಿಲ್ಲ. ಅವು 'ಮುಹೂರ್ತ ನಾಳ್' ಮತ್ತು 'ಕರಿನಾಳ್' - ಶುಭ ಮತ್ತು ಅಶುಭ ದಿನಗಳನ್ನು ಆಚರಿಸುವುದಿಲ್ಲ.‌

ಅವು ಪ್ರಕೃತಿಗೆ ವಿಧೇಯರಾಗಿರುತ್ತವೆ. ತೀಕ್ಷ್ಣವಾದ ಸೂರ್ಯನ ಬೆಳಕು ಇದ್ದಾಗ, ಮತ್ತು ನಂತರ ಉತ್ತಮ ಮಳೆಯಾದಾಗ, ಭೂಮಿಯು ಹೂವುಗಳಿಂದ ಅರಳುತ್ತದೆ. "ಎಲ್ಲೆಲ್ಲಿ ತಿರುಗಿದರೂ ಮಲ್ಲಿಗೆ ಕಾಣುತ್ತದೆ. ಸಸ್ಯಗಳು ಹೂಬಿಡುವುದನ್ನು ನಿಲ್ಲಿಸಲು ಸಾಧ್ಯವಿಲ್ಲ, ಅಲ್ಲವೇ?" ಗಣಪತಿ ನಸುನಗುತ್ತಾ ನನ್ನನ್ನು ಕೇಳುತ್ತಾರೆ.

PHOTO • M. Palani Kumar

ಗಣಪತಿ ನಮಗಾಗಿ ಪೇರಳೆ ಹಣ್ಣುಗಳನ್ನು ಕೊಯ್ಯುತ್ತಿದ್ದಾರೆ

ಒಮ್ಮೊಮ್ಮೆ ಮಧುರೈ ಸುತ್ತಮುತ್ತಲಿನ ಮಾರುಕಟ್ಟೆಗಳಿಗೆ ಹೂವಿನ ಸುರಿಮಳೆಯೇ ಆಗುತ್ತದೆ ಎನ್ನುತ್ತಾರೆ ಅವರು. “ಟನ್ನುಗಟ್ಟಲೆ ಮಲ್ಲಿಗೆ ಬರುತ್ತದೆ. ಐದು ಟನ್‌, ಆರು ಟನ್‌, ಏಳು ಟನ್‌, ಅಷ್ಟೇ ಯಾಕೆ ಕೆಲವೊಮ್ಮೆ ಹತ್ತು ಟನ್‌ ಕೂಡಾ ಬರುತ್ತದೆ!” ಇದರ ಬಹುದೊಡ್ಡ ಭಾಗ ಸೆಂಟ್‌ ಫ್ಯಾಕ್ಟರಿಗೆ ಹೋಗುತ್ತದೆ ಎಂದು ಅವರು ಹೇಳುತ್ತಾರೆ.

ಹೂಹಾರಗಳು ಮತ್ತು ಮಾಲೆಗಳಿಗಾಗಿ, ಹೂವುಗಳನ್ನು ಕಿಲೋಗೆ 300 ರೂ.ಗಿಂತ ಹೆಚ್ಚು ನೀಡಿ ಖರೀದಿಸಲಾಗುತ್ತದೆ ಮತ್ತು ಮಾರಾಟ ಮಾಡಲಾಗುತ್ತದೆ. “ಹೂವಿನ ಪೂರೈಕೆ ಅತಿಯಾದಾಗ ನಾವು ಹೂ ಕೊಯ್ಯುವುದನ್ನು ಕಡಿಮೆ ಮಾಡುತ್ತೇವೆ. ಆಗ ಬೆಲೆ ಮತ್ತೆ ಏರುತ್ತದೆ. ಬೇಡಿಕೆ ಹೆಚ್ಚಿರುವ ಸಮಯದಲ್ಲಿ ನನಗೆ 10 ಕಿಲೋ ಮೊಗ್ಗು ಸಿಕ್ಕಿದರೂ 15,000 ರೂ. ಸಂಪಾದಿಸುತ್ತೇನೆ. ಅದು ದೊಡ್ಡ ಆದಾಯವಲ್ಲವೆ?” ಎಂದು ಅವರು ನಗುತ್ತಾ ಕೇಳುತ್ತಾರೆ. “ಹಾಗೆ ಆಗುವಂತಿದ್ದಿದ್ದರೆ ನಾನು ಖುರ್ಚಿ ಮೇಲೆ ಕುಳಿತು ಊಟ ಮಾಡುತ್ತಾ ನಿಮಗೆ ಸಂದರ್ಶನ ನೀಡುತ್ತಿದ್ದೆ!”

ನಿಜವೆಂದರೆ ಅವರು ಹಾಗೆ ಸುಮ್ಮನೆ ಕೂರಲು ಸಾಧ್ಯವಿಲ್ಲ. ಅವರ ಪತ್ನಿಗೂ ಸಾಧ್ಯವಿಲ್ಲ. ಏಕೆಂದರೆ ಅವರಿಗೆ ಮಾಡಲು ಸಾಕಷ್ಟು ಕೆಲಸಗಳಿರುತ್ತವೆ. ಮಲ್ಲಿಗೆ ಬೆಳೆಗೆ ಸಂಬಂಧಿಸಿದ ಕೆಲಸ ಸಾಕಷ್ಟಿರುತ್ತದೆ. ಗಣಪತಿ ತನ್ನ ಉಳಿದ 1.5 ಎಕರೆ ಭೂಮಿಯಲ್ಲಿ ಪೇರಳೆ ಗಿಡಗಳನ್ನು ನೆಟ್ಟಿದ್ದಾರೆ. “ಇಂದು ಬೆಳಗ್ಗೆ 50 ಕಿಲೋ ಹಣ್ಣುಗಳನ್ನು ಮಾರುಕಟ್ಟೆಗೆ ಕೊಂಡುಹೋದೆ. ಅವರು ಅದನ್ನು ಕಿಲೋ ಒಂದಕ್ಕೆ ಕೇವಲ 20 ರೂಪಾಯಿಯಂತೆ ಕೊಂಡರು. ಇಂಧನ ವೆಚ್ಚ ಕಳೆದು ನನಗೆ ಉಳಿದಿದ್ದು 800 ರೂಪಾಯಿಗಳು. ಈ ಭಾಗದಲ್ಲಿ ಪೇರಳೆ ಬೆಳೆ ಅಷ್ಟು ಸಾಮಾನ್ಯವಾಗಿರದಿದ್ದ ಕಾಲದಲ್ಲಿ ಖರೀದಿದಾರರು ತೋಟಕ್ಕೆ ಬಂದು ಕಿಲೋ ಒಂದಕ್ಕೆ 25 ರೂಪಾಯಿಗಳನ್ನು ನೀಡಿ, ಅವರೇ ಕಿತ್ತುಕೊಂಡು ಹೋಗುತ್ತಿದ್ದರು. ಈಗ ಆ ದಿನಗಳು ಕಳೆದುಹೋಗಿವೆ…”

ಗಣಪತಿ ಸುಮಾರು ಒಂದು ಲಕ್ಷ ರೂಪಾಯಿಗಳನ್ನು ಸಸಿಗಳಿಗಾಗಿ ಹೂಡಿಕೆ ಮಾಡುತ್ತಾರೆ ಮತ್ತು ತಮ್ಮ ಒಂದು ಎಕರೆ ಮಲ್ಲಿಗೆಗಾಗಿ ಹೊಲವನ್ನು ಸಿದ್ಧಪಡಿಸುತ್ತಾರೆ. ಸಸ್ಯಗಳ ಮೇಲಿನ ಈ ಬಂಡವಾಳ ಹೂಡಿಕೆಯು ಕನಿಷ್ಠ 10 ವರ್ಷಗಳವರೆಗೆ ಹೂವುಗಳನ್ನು ನೀಡುತ್ತದೆ. ಪ್ರತಿ ವರ್ಷ, ಮಲ್ಲಿ ಋತುಮಾನವು ಸಾಮಾನ್ಯವಾಗಿ ಮಾರ್ಚ್ ಮತ್ತು ನವೆಂಬರ್ ನಡುವೆ ಎಂಟು ತಿಂಗಳವರೆಗೆ ವಿಸ್ತರಿಸುತ್ತದೆ. ಮತ್ತು, ಅವರು ಹೇಳುತ್ತಾರೆ, ಒಳ್ಳೆಯ ದಿನಗಳು, ಉತ್ತಮ ದಿನಗಳೂ ಇವೆ, ಆದರೆ ಮೊಗ್ಗುಗಳಿಲ್ಲದ ದಿನಗಳು ಕೂಡಾ ಇರುತ್ತವೆ. ಸೀಸನ್‌ ಇರುವಾಗ ಒಂದು ಎಕರೆಯಿಂದ ತಿಂಗಳಿಗೆ ಸರಾಸರಿ 30,000 ರೂ.ಗಳ ಒಟ್ಟು ಲಾಭವನ್ನು ಅವರು ಅಂದಾಜಿಸುತ್ತಾರೆ.

ಈ ಲೆಕ್ಕಾಚಾರ ಅವರನ್ನು ಅವರು ಇರುವುದಕ್ಕಿಂತಲೂ ಶ್ರೀಮಂತರನ್ನಾಗಿ ತೋರಿಸುತ್ತದೆ. ಆದರೆ ವಾಸ್ತವ ಹಾಗಿಲ್ಲ. ಇತರ ರೈತರಂತೆ ಇವರೂ ಕುಟುಂಬದ ಶ್ರಮವನ್ನು ಕೃಷಿ ಖರ್ಚಿನಲ್ಲಿ ಸೇರಿಸುವುದಿಲ್ಲ. ಅವರು ಮತ್ತು ಅವರ ಪತ್ನಿಯ ದುಡಿಮೆಯನ್ನು ಕಳೆದರೆ ಎಷ್ಟು ಉಳಿಯಬಹುದು? ಅವರು ಹೇಳುತ್ತಾರೆ, “ದಿನಕ್ಕೆ 500 ರೂಪಾಯಿಗಳಷ್ಟು ಶ್ರಮ ಹಾಕಿದರೆ ನನ್ನ ಪತ್ನಿ 300 ರೂ.ಗಳಷ್ಟು ಶ್ರಮ ಹಾಕುತ್ತಾರೆ.” ಅವರ ಲೆಕ್ಕದಂತೆ ಆ ಮೊತ್ತವನ್ನು ಅವರು ಹೇಳುವ 30,000 ದಿಂದ ಕಳೆದರೆ ಉಳಿಯುವುದು ಸುಮಾರು 6,000 ರೂಪಾಯಿಗಳು ಮಾತ್ರ.

ಇಷ್ಟು ಗಳಿಸುವುದಕ್ಕೂ “ನೀವು ಅದೃಷ್ಟಶಾಲಿಯಾಗಿರಬೇಕು” ಎನ್ನುತ್ತಾರವರು. ಅವರ ಪಂಪ್‌ ಶೆಡ್‌ ಒಳಗೆ ಹೋದಾಗ ತಿಳಿದಿದ್ದು ಬರೀ ಅದೃಷ್ಟವೊಂದೇ ಅಲ್ಲ ಜೊತೆಗೆ ಕೆಲವು ರಾಸಾಯನಿಕಗಳೂ ಬೇಕು.

*****

PHOTO • M. Palani Kumar
PHOTO • M. Palani Kumar

ಗಣಪತಿಯವರ ಜಮೀನಿನಲ್ಲಿರುವ ಮೋಟಾರ್ ಶೆಡ್. ಅದರ ಒಳಗೆ ಬಳಸಿದ ಬಾಟಲಿಗಳು ಮತ್ತು ಕೀಟನಾಶಕಗಳ ಡಬ್ಬಿಗಳಿಂದ (ಬಲಕ್ಕೆ) ತುಂಬಿಹೋಗಿದೆ

ಮೋಟಾರು ಶೆಡ್ ಒಂದು ಸಣ್ಣ ಕೋಣೆಯಾಗಿದ್ದು, ಗಣಪತಿಯವರ ನಾಯಿಗಳು ಮಧ್ಯಾಹ್ನ ಇಲ್ಲಿ ಮಲಗುತ್ತವೆ.  ಮೂಲೆಯಲ್ಲಿ ಕೋಳಿಗಳ ಗುಂಪೂ ಇತ್ತು. ಗಣಪತಿ ಅಲ್ಲಿದ್ದ ಮೊಟ್ಟೆಯೊಂದನ್ನು ಎತ್ತಿಕೊಂಡು ನಮ್ಮತ್ತ ನೋಡಿ ನಕ್ಕರು. ನೆಲದ ಮೇಲೆ ಅನೇಕ ಸಣ್ಣ ಡಬ್ಬಿಗಳು ಮತ್ತು ಕೀಟನಾಶಕದ ಬಾಟಲಿಗಳು ರಾಶಿಯಾಗಿದ್ದವು. ಅದು ಬಳಸಿದ ರಾಸಾಯನಿಕಗಳ ಶೋರೂಂನಂತೆ ಕಾಣುತ್ತಿತ್ತು. ಗಣಪತಿ ಗಿಡಗಳು ಬಲವಾದ, ಭಾರವಾದ, ಉತ್ತಮ ಕಾಂಡವನ್ನು ಹೊಂದಿರುವ "ಪಲಿಚು" ಬಿಳಿ ಮಲ್ಲಿಗೆ ಮೊಗ್ಗುಗಳು ಮೂಡಲು ಅವೆಲ್ಲವೂ ಅವಶ್ಯಕ ಎಂದು ತಾಳ್ಮೆಯಿಂದ ವಿವರಿಸುತ್ತಾರೆ.

“ಇಂಗ್ಲಿಷಿನಲ್ಲಿ ಏನು ಬರೆದಿದ್ದಾರೆ ಇದರಲ್ಲಿ?" ಎಂದು ಕೆಲವು ಡಬ್ಬಿಗಳನ್ನು ಕೈಯಲ್ಲಿ ಹಿಡಿದುಕೊಂಡು ನನ್ನ ಬಳಿ ಕೇಳಿದರು. ನಾನು ಹೆಸರುಗಳನ್ನು ಒಂದೊಂದಾಗಿ ವಿವರಿಸತೊಡಗಿದೆ. ಇದು ಕೆಂಪು ಹೇನುಗಳನ್ನು ಕೊಲ್ಲುತ್ತದೆ, ಅದು ಹುಳುಗಳಿಗಾಗಿ. ಮತ್ತು ಇಲ್ಲಿ, ಇದು ಈ ಎಲ್ಲಾ ಕೀಟಗಳನ್ನು ನಾಶಪಡಿಸುತ್ತದೆ. ಅನೇಕ ಕೀಟಗಳು ಮಲ್ಲಿಗೆ ಸಸ್ಯಗಳ ಮೇಲೆ ದಾಳಿ ಮಾಡುತ್ತವೆ" ಎಂದು ಅವರು ಗೊಣಗುತ್ತಾರೆ.

ಗಣಪತಿಯವರಿಗೆ ಅವರ ಮಗನೇ ಸಲಹೆಗಾರ. "ಅವನು ಕೀಟನಾಶಕಗಳನ್ನು ಮಾರಾಟ ಮಾಡುವ "ಮರುಂಧು ಕಡೈ" ಎನ್ನಲಾಗುವ ಅಂಗಡಿಯಲ್ಲಿ ಕೆಲಸ ಮಾಡುತ್ತಾನೆ" ಎಂದು ಅವರು ವಿವರಿಸುತ್ತಾರೆ, ಮಲ್ಲಿಗೆ ಹೂವುಗಳಂತೆಯೇ ಬಿಳಿಯ ಸೂರ್ಯನ ಸುಡುವ ಬಿಸಿಲಿನಡಿ ನಾವು ನಡೆದುಕೊಂಡು ಹೋಗುತ್ತೇವೆ. ಬಿಳಿ ನಾಯಿ ಮರಿಯೊಂದು ಒದ್ದೆ ಮಣ್ಣಿನಲ್ಲಿ ಆಡುತ್ತಿತ್ತು. ಕಂದು ಬಣ್ಣದ ನಾಯಿ ಶೆಡ್ ಬಳಿ ಅಲೆದಾಡುತ್ತಿತ್ತು. "ಅವುಗಳನ್ನು ಏನೆಂದು ಕರೆಯಲಾಗುತ್ತದೆ?" ನಾನು ಕೇಳಿದೆ. "ನಾನು 'ಕರುಪ್ಪು' ಎಂದು ಕೂಗುತ್ತೇನೆ, ಅದು ಓಡಿ ಬರುತ್ತದೆ" ಎಂದು ಅವರು ನಗುತ್ತಾರೆ. ಕರುಪ್ಪು ಎಂದರೆ ಕಪ್ಪು ಬಣ್ಣಕ್ಕೆ ಇರುವ ತಮಿಳು ಪದ. ನಾಯಿಗಳಿಗಲ್ಲ ಎಂದು ನಾನು ಹೇಳಿದೆ.

“ಯಾವ ಹೆಸರಿನಿಂದ ಕರೆದರೂ ಅವು ಬರುತ್ತವೆ” ಎನ್ನುತ್ತಾ ಇನ್ನೊಂದು ದೊಡ್ಡ ಶೆಡ್ಡಿನ ಒಳಗೆ ಹೋದರು. ಅಲ್ಲಿ ತಂಗಿನಕಾಯಿಯ ರಾಶಿ ಮತ್ತು ಬಕೆಟ್‌ ಒಂದರಲ್ಲಿ ಕಳಿತ ಪೇರಳೆ ಹಣ್ಣುಗಳಿದ್ದವು. “ಅದನ್ನು ನಮ್ಮ ದನ ತಿನ್ನುತ್ತದೆ. ಈಗ ಅದು ಹೊಲದಲ್ಲಿ ಮೇಯುತ್ತಿದೆ,” ಜೊತೆಗೆ ಕೆಲವು ಕೋಳಿಗಳು ಮೇಯುತ್ತಾ ಓಡಾಡುತ್ತಿದ್ದವು.

ಮುಂದೆ, ಅವರು ನನಗೆ ರಸಗೊಬ್ಬರಗಳನ್ನು ತೋರಿಸಿದರು - ಅಂಗಡಿಯಿಂದ 800 ರೂಪಾಯಿಗಳಿಗೆ ಖರೀದಿಸಿದ ದೊಡ್ಡ, ಬಿಳಿ ಪಾತ್ರೆಯಲ್ಲಿದ್ದ 'ಮಣ್ಣಿನ ಕಂಡೀಷನರ್'ಗಳು ಮತ್ತು ಸಲ್ಫರ್ ಕಣಗಳು ಮತ್ತು ಸ್ವಲ್ಪ ಸಾವಯವ ಗೊಬ್ಬರ ಅಲ್ಲಿದ್ದವು. "ನನಗೆ ಕಾರ್ತಿಗೈ ಮಾಸದಲ್ಲಿ [ನವೆಂಬರ್ 15ರಿಂದ ಡಿಸೆಂಬರ್ 15ರವರೆಗೆ] ಉತ್ತಮ ಫಸಲು ಬೇಕು. ಇದು ಮದುವೆಯ ಕಾಲವಾಗಿರುವುದರಿಂದ ಒಳ್ಳೆಯ ದರ ಸಿಗುತ್ತದೆ. ಹಾಗೇ ಮಾತನಾಡುತ್ತ ಅಲ್ಲೇ ಇದ್ದ ಕಂಬವೊಂದಕ್ಕೆ ಒರಗಿಕೊಂಡು ಉತ್ತಮ ಕೃಷಿಗೆ ಸಂಬಂಧಿಸಿದ ಗುಟ್ಟೊಂದನ್ನು ನನಗೆ ಹೇಳಿದರು "ನೀವು ಗಿಡಗಳನ್ನು ಗೌರವಿಸಬೇಕು, ಆಗ ಗಿಡಗಳು ನಿಮ್ಮನ್ನು ಗೌರವಿಸುತ್ತವೆ.”

PHOTO • M. Palani Kumar
PHOTO • M. Palani Kumar

ಗಣಪತಿ ಕರುಪ್ಪು (ಕಪ್ಪು) ಎಂದು ಕರೆಯಲ್ಪಡುವ ತನ್ನ ಎರಡು ನಾಯಿಗಳೊಂದಿಗೆ ತನ್ನ ಮನೆಯ ಅಂಗಳದಲ್ಲಿ. ಬಲ: ಕೋಳಿ ತನ್ನ ಆಹಾರವನ್ನು ತಿನ್ನುತ್ತಿದೆ

PHOTO • M. Palani Kumar
PHOTO • M. Palani Kumar

ಎಡ: ಒಂದು ಕ್ಯಾನ್ ರಸಗೊಬ್ಬರ. ಬಲ: ಮಲ್ಲಿಗೆ ಗಿಡದ ಮೇಲೆ ಕೀಟಗಳು ಎಲ್ಲಿ ದಾಳಿ ಮಾಡುತ್ತವೆ ಎಂಬುದನ್ನು ಗಣಪತಿ ತೋರಿಸುತ್ತಿರುವುದು

ಕಥನ ನಿರೂಪಣೆಯಲ್ಲಿ ಗಣಪತಿಯವರದು ಎತ್ತಿದ ಕೈ. ಅವರ ಪಾಲಿಗೆ ಹೊಲವೆನ್ನುವುದು ದಿನವೂ ಹಲವು ನಾಟಕಗಳು ನಡೆಯುವ ವೇದಿಕೆಯಂತೆ. “ನಿನ್ನೆ ರಾತ್ರಿ 9:45ರ ಸುಮಾರಿಗೆ ಮೂರು ಹಂದಿಗಳು ಬಂದಿದ್ದವು. ಹಂದಿಗಳು ಆ ಕಡೆಯಿಂದ ಬಂದಿದ್ದವು, ಕರುಪ್ಪು ಇಲ್ಲಿದ್ದ. ಅವು ಕಳಿತ ಪೇರಳೆ ಹಣ್ಣಿನ ವಾಸನೆ ಆಕರ್ಷಿತವಾಗಿ ಬಂದಿದ್ದವು. ಕರುಪ್ಪು ಮೂರನ್ನೂ ಅತ್ತ ಓಡಿಸಿದ, ಒಂದು ಅತ್ತ ಓಡಿತು.” ಎಂದು ಮುಖ್ಯ ರಸ್ತೆ, ದೇವಾಲಯ ಮತ್ತು ಸುತ್ತಮುತ್ತಲಿನ ತೆರೆದ ಹೊಲಗಳ ಕಡೆಗೆ ತೋರಿಸಿದರು. “ಮೊದಲು ನರಿಗಳೂ ಬರುತ್ತಿದ್ದವು. ಈಗ ಅವು ಇಲ್ಲ.”

ಹಂದಿಗಳು ಸಮಸ್ಯೆಯಾದರೆ, ಕೀಟಗಳು ಸಹ ಸಮಸ್ಯೆಯೇ. ಮಲ್ಲಿಗೆ ಹೊಲಗಳ ಸುತ್ತಲೂ ನಡೆದು, ಕೀಟಗಳು ಹೊಸ ಹೂವುಗಳ ಮೇಲೆ ಎಷ್ಟು ವೇಗವಾಗಿ ಮತ್ತು ಕ್ರೂರವಾಗಿ ದಾಳಿ ಮಾಡುತ್ತವೆ ಎಂಬುದನ್ನು ಗಣಪತಿ ವಿವರಿಸುತ್ತಾರೆ. ಮುಂದೆ, ಅವರು ಗಾಳಿಯಲ್ಲಿ ಚೌಕಗಳು ಮತ್ತು ವೃತ್ತಗಳನ್ನು ಚಿತ್ರಿಸುವ ಮೂಲಕ ಗಿಡಗಳನ್ನು ನೆಡುವ ಆಯಾಮಗಳನ್ನು ವಿವರಿಸಿ ನಂತರ ನಾನು ಪರಿಮಳ ನೋಡಲಿ ಮತ್ತು ಮೆಚ್ಚುಗೆ ವ್ಯಕ್ತಪಡಿಲಿ ಎಂದು ಒಂದಷ್ಟು ಹೂಗಳನ್ನು ಕಿತ್ತು ಕೈಗಿರಿಸಿದರು. "ಮಧುರೈ ಮಲ್ಲಿ ಅತ್ಯುತ್ತಮ ಪರಿಮಳವನ್ನು ಹೊಂದಿದೆ" ಎಂದು ಅವರು ಪ್ರತಿಪಾದಿಸುತ್ತಾರೆ.

ಆ ಮಾತನ್ನೂ ನಾನೂ ಒಪ್ಪುತ್ತೇನೆ. ಅದರದು ಗಾಢ ಪರಿಮಳ ಮತ್ತು ಅಲ್ಲಿನ ಕಂದು ಬಣ್ಣದ ಮಣ್ಣಿನ ನೆಲ, ಬಾವಿ, ಕಾಲ ಕೆಳಗಿನ ಕಲ್ಲುಗಳು ಇದೆಲ್ಲರ ನಡುವೆ ನಡೆಯುವಾಗ ಗೌರವಯುಕ್ತ ಭಾವ ಮೂಡುತ್ತದೆ. ಗಣಪತಿ ಕೃಷಿಯ ಬಗ್ಗೆ ತಿಳುವಳಿಕೆಯಿಂದ ಮಾತನಾಡುವುದು ಮತ್ತು ಅವರ ಪತ್ನಿ ಪಿಚೈಯಮ್ಮ ಅವರನ್ನು ಗೌರವದಿಂದ ನೋಡುವುದು ಕೂಡಾ ಚಂದ. "ನಾವು ದೊಡ್ಡ ಭೂಮಾಲೀಕರಲ್ಲ, ಸಣ್ಣ ಹಿಡುವಳಿದಾರರು, ಮತ್ತು ನಾವು ಸುಮ್ಮನೆ ಕುಳಿತು ಜನರಿಗೆ ಆದೇಶ ನೀಡಲು ಸಾಧ್ಯವಿಲ್ಲ. ನನ್ನ ಹೆಂಡತಿ ನಮ್ಮ ಕಾರ್ಮಿಕರೊಂದಿಗೆ ಕೆಲಸ ಮಾಡುತ್ತಾಳೆ, ನಾವು ಹೇಗೆ ಬದುಕುತ್ತಿದ್ದೇವೆಯೆನ್ನುವುದು, ನಿಮಗೆ ತಿಳಿದಿದೆ."

*****

ಮಲ್ಲಿಗೆ ಈ ಭೂಮಿಯಲ್ಲಿ ಕನಿಷ್ಠ 2,000 ವರ್ಷಗಳಿಂದ ತನ್ನ ಅಸ್ತಿತ್ವವನ್ನು ಉಳಿದುಕೊಂಡಿದೆ ಮತ್ತು ಅಸಾಧಾರಣ ಇತಿಹಾಸವನ್ನು ಹೊಂದಿದೆ. ಮತ್ತು ಈ ಹೂವನ್ನು ಅದರ ಪರಿಮಳ ಮತ್ತು ಸೌಂದರ್ಯದ ಕಾರಣಕ್ಕೆ ಹಿಂದೆ ತಮಿಳುನಾಡಿನಲ್ಲಿ ಹೆಣೆದು ಮುಡಿಯಲಾಗುತ್ತಿತ್ತು. ಹವಾಯಿ ಮೂಲದ ಸಂಗಮ್ ತಮಿಳು ವಿದ್ವಾಂಸ ಮತ್ತು ಭಾಷಾಂತರಕಾರ ವೈದೇಹಿ ಹರ್ಬರ್ಟ್ ಹೇಳುವಂತೆ, ಮಲ್ಲಿಗೆ ಹೂವುಗಳು ಎಂದು ಕರೆಯಲ್ಪಡುವ 100ಕ್ಕೂ ಹೆಚ್ಚು ಉಲ್ಲೇಖಗಳು ಸಂಗಮ್ ಸಾಹಿತ್ಯದಲ್ಲಿವೆ . ಕ್ರಿ.ಪೂ. 300ರಿಂದ ಕ್ರಿ.ಶ. 250ರ ನಡುವೆ ಬರೆಯಲಾದ ಸಂಗಮ್ ಯುಗದ ಎಲ್ಲಾ 18 ಪುಸ್ತಕಗಳನ್ನು ವೈದೇಹಿ ಇಂಗ್ಲಿಷ್ ಭಾಷೆಗೆ ಅನುವಾದಿಸಿದ್ದಾರೆ ಮತ್ತು ಕೃತಿಯನ್ನು ಆನ್‌ಲೈನಿನಲ್ಲಿ ಉಚಿತವಾಗಿ ಸಿಗುವಂತೆ ಮಾಡಿದ್ದಾರೆ.

ಮುಲ್ಲೈ ಎಂಬ ಪದವು ಮಲ್ಲಿಗೆಯ ಮೂಲ ಪದವಾಗಿತ್ತು, ಅದನ್ನು ಈಗ ನಾವು ಮಲ್ಲಿ ಎಂದು ಕರೆಯುತ್ತೇವೆ ಎಂದು ಅವರು ವಿವರಿಸುತ್ತಾರೆ. ಸಂಗಮ್ ಕಾವ್ಯದಲ್ಲಿ, ಮುಲ್ಲೈ ಎಂಬುದು ಐದು ಆಂತರಿಕ ಭೂದೃಶ್ಯಗಳಲ್ಲಿ ಒಂದಾದ 'ಅಕಮ್ ತಿನ್ನೈ' ನ ಹೆಸರು - ಮತ್ತು ಕಾಡುಗಳು ಮತ್ತು ಪಕ್ಕದ ಭೂಮಿಯನ್ನು ಸೂಚಿಸುತ್ತದೆ. ಇತರ ನಾಲ್ಕು - ಹೂವುಗಳು ಅಥವಾ ಮರಗಳ ಹೆಸರಿನಿಂದಲೂ ಕರೆಯಲ್ಪಡುತ್ತವೆ - ಅವುಗಳೆಂದರೆ: ಕುರಿಂಜಿ (ಪರ್ವತ), ಮಾರುಥಮ್ (ಹೊಲಗಳು), ನೈಥಾಲ್ (ಸಮುದ್ರ ತೀರ) ಮತ್ತು ಪಾಲೈ (ಶುಷ್ಕ ಕಾಡು).

PHOTO • M. Palani Kumar

ಮಧುರೈ ಜಿಲ್ಲೆಯ ಉಸಿಲಂಪಟ್ಟಿ ತಾಲ್ಲೂಕಿನ ನಾಡುಮುದಲೈಕುಲಂ ಕುಗ್ರಾಮದ ಪಾಂಡಿಯವರ ಹೊಲದಲ್ಲಿ ಮಲ್ಲಿಗೆ ಮೊಗ್ಗುಗಳು ಮತ್ತು ಹೂವುಗಳು

ತನ್ನ ಬ್ಲಾಗ್ ನಲ್ಲಿ , (ಸಂಗಮ್ ಬರಹಗಾರರು "ಕಾವ್ಯಾತ್ಮಕ ಪರಿಣಾಮವನ್ನು ಸಾಧಿಸಲು ಅಕಾಮ್ ==== ತಿನೈಸ್ ಗಳನ್ನು ಬಳಸಿದ್ದಾರೆ" ಎಂದು ವೈದೇಹಿ ಹೇಳುತ್ತಾರೆ). ರೂಪಕಗಳು ಮತ್ತು ಉಪಮೆಗಳು "ನಿರ್ದಿಷ್ಟ ಪ್ರದೇಶದಲ್ಲಿನ ಅಂಶಗಳನ್ನು ಆಧರಿಸಿವೆ" ಎಂದು ಅವರು ವಿವರಿಸುತ್ತಾರೆ. ಕವಿತೆಗಳಲ್ಲಿನ ಪಾತ್ರಗಳ ದೈಹಿಕ ಗುಣಲಕ್ಷಣಗಳು ಮತ್ತು ಭಾವನೆಗಳನ್ನು ವ್ಯಕ್ತಪಡಿಸಲು ಸಸ್ಯ, ಪ್ರಾಣಿ ಮತ್ತು ಪ್ರಾದೇಶಿಕತೆಯನ್ನು ಬಳಸಲಾಗುತ್ತದೆ. ಮುಲ್ಲೈ ಭೂಪ್ರದೇಶದಲ್ಲಿ ಹೊಂದಿಸಲಾದ ಆ ಪದ್ಯಗಳಲ್ಲಿ, ವಿಷಯವು "ತಾಳ್ಮೆಯಿಂದ ಕಾಯುವುದು" ಅಂದರೆ, ನಾಯಕಿ ತನ್ನ ಪುರುಷ ಪ್ರಯಾಣದಿಂದ ಹಿಂತಿರುಗುವುದನ್ನು ಕಾಯುತ್ತಾಳೆ.

2,000 ವರ್ಷಗಳಷ್ಟು ಹಳೆಯದಾದ ಈ ಐಂಕುರುನೂರು ಕವಿತೆಯಲ್ಲಿ, ಪುರುಷನು ತನ್ನ ಹೆಣ್ಣಿನ ಉತ್ತಮ ಲಕ್ಷಣಗಳಿಗಾಗಿ ಹಂಬಲಿಸುತ್ತಾನೆ:

ನವಿಲು ನಿನ್ನಂತೆ ಕುಣಿಯುವದನ್ನು ಕಂಡು
ಮಲ್ಲಿಗೆ ಹೂವು ನಿನ್ನ ಹಣೆಯ ಪರಿಮಳ
ಹೊತ್ತು ಅರಳುವುದನ್ನು ಕಂಡು
ಜಿಂಕೆ ಮೇಯುತ್ತಾ ನಿನ್ನಂತೆಯೇ ನೋಟ ಹರಿಸುವುದನ್ನು ಕಂಡು
ಹುಡುಗಿ, ಮುಂಗಾರಿನ ಮೋಡಕ್ಕಿಂತಲೂ ವೇಗವಾಗಿ
ನಿನಗಾಗಿ ಹಂಬಲಿಸುತ್ತಾ ಓಡೋಡಿ ಬಂದೆ ಮನೆಗೆ

OldTamilPoetry.com ನಡೆಸುತ್ತಿರುವ ಸಂಗಮ್ ಯುಗದ ಕವಿತೆಗಳ ಭಾಷಾಂತರಕಾರ ಚೆಂತಿಲ್ ನಾಥನ್, ಸಂಗಮ್ ಕಾವ್ಯದಲ್ಲಿ ಉಲ್ಲೇಖಿಸಲಾದ ಏಳು ಮಹಾನ್ ಪೋಷಕರಲ್ಲಿ ಒಬ್ಬರಾದ ಹಿರಿಯ ಪಾರಿಯ ಬಗ್ಗೆ ಜನಪ್ರಿಯ ನೆನಪಿನಲ್ಲಿ ಕೆತ್ತಲಾದ ಮತ್ತೊಂದು ಪದ್ಯವನ್ನು ನಾನು ಹುಡುಕಿದ್ದೇನೆ. ಇದು ಸುದೀರ್ಘ ಕವಿತೆ, ಆದರೆ ಈ ನಾಲ್ಕು ಸಾಲುಗಳು ಸುಂದರವಾಗಿವೆ ಮತ್ತು ಪ್ರಸ್ತುತವಾಗಿವೆ ಎಂದು ಚೆಂತಿಲ್ ಹೇಳುತ್ತಾರೆ.

… ಪಾರಿ, ಬಹಳ ಖ್ಯಾತಿವಂತನು
ಅವನು ತನ್ನ ಗಂಟೆಗಳಿಂದ ಕೂಡಿದ
ಭವ್ಯರಥವನ್ನು ಹಬ್ಬಲು ಏನೂ ಇಲ್ಲದೆ
ಪರದಾಡುತ್ತಿದ್ದ ಹೂಬಿಡುವ ಮಲ್ಲಿಗೆ ಬಳ್ಳಿಗೆ ನೀಡಿದನು
ಮೂಕ ಗಿಡವು ತನ್ನನ್ನು ಹೊಗಳಲಾರದು ಎಂದು ತಿಳಿದೂ.

ಪುರಾಣನೂರು 200 , ಸಾಲುಗಳು 9-12

ಇಂದು ತಮಿಳುನಾಡಿನಲ್ಲಿ ವ್ಯಾಪಕವಾಗಿ ಬೆಳೆಯಲಾಗುವ ಮಲ್ಲಿ ಪ್ರಭೇದದ ವೈಜ್ಞಾನಿಕ ಹೆಸರು ಜಾಸ್ಮಿನಮ್ ಸಾಂಬಾಕ್. ಬಿಡಿ ಹೂವುಗಳ ಕೃಷಿಯಲ್ಲಿ ರಾಜ್ಯವು ದೇಶವನ್ನು ಮುನ್ನಡೆಸುತ್ತದೆ (ಕತ್ತರಿಸಿದ ಹೂವುಗಳಿಗೆ ವಿರುದ್ಧವಾಗಿ). ಮತ್ತು ಮಲ್ಲಿಗೆ ಉತ್ಪಾದನೆಯಲ್ಲಿ ಸ್ಪಷ್ಟ ನಾಯಕನಾಗಿದ್ದು, ಭಾರತದಲ್ಲಿ ಬೆಳೆಯುವ ಒಟ್ಟು 240,000 ಟನ್‌ಗಳಲ್ಲಿ 180,000 ಟನ್ ಮಲ್ಲಿಗೆಯನ್ನು ಕೊಡುಗೆ ನೀಡುತ್ತದೆ.

ಮಧುರೈ ಮಲ್ಲಿ - ಅದರ ಹೆಸರಿಗೆ ಜಿಐ ( geographical indication ) ಹೊಂದಿದ್ದು, ಇದು- ಹಲವಾರು ವಿಶೇಷ ಗುಣಲಕ್ಷಣಗಳನ್ನು ಹೊಂದಿದೆ. ಅವುಗಳಲ್ಲಿ: 'ಆಳವಾದ ಸುವಾಸನೆ, ದಪ್ಪ ದಳಗಳು, ಉದ್ದವಾದ ಪೆಟಿಯೋಲ್, ಮೊಗ್ಗುಗಳನ್ನು ತಡವಾಗಿ ತೆರೆಯುವುದು, ದಳದ ಬಣ್ಣ ಬೇಗ ಹೋಗದಿರುವುದು ಮತ್ತು ಗುಣಮಟ್ಟವನ್ನು ಕಾಪಾಡಿಕೊಳ್ಳುವುದು (ದೀರ್ಘ ಬಾಳಿಕೆ).

PHOTO • M. Palani Kumar

ಮಲ್ಲಿಗೆ ಹೂವಿನ ಮೇಲೆ ಚಿಟ್ಟೆ ವಿಶ್ರಾಂತಿ ಪಡೆಯುತ್ತಿದೆ ಮತ್ತು ಮಧು ಕುಡಿಯುತ್ತಿದೆ

ಮಲ್ಲಿಗೆಯ ಇತರ ಪ್ರಭೇದಗಳು ಸಹ ಆಸಕ್ತಿದಾಯಕ ಹೆಸರುಗಳನ್ನು ಹೊಂದಿವೆ. ಮಧುರೈ ಮಲ್ಲಿಯನ್ನು ಹೊರತುಪಡಿಸಿ, ಅವುಗಳನ್ನು ಗುಂಡು ಮಲ್ಲಿ, ನಮ್ಮ ಊರು ಮಲ್ಲಿ, ಅಂಬು ಮಲ್ಲಿ, ರಾಮಬನಂ, ಮದನಬನಂ, ಇರುವಾಂಚಿ, ಇರುವಾಚಿಪ್ಪು, ಕಸ್ತೂರಿ ಮಲ್ಲಿ, ಊಸಿ ಮಲ್ಲಿ ಮತ್ತು ಸಿಂಗಲ್ ಮೊಗ್ರಾ ಎಂದು ಕರೆಯಲಾಗುತ್ತದೆ.

ಆದಾಗ್ಯೂ, ಮಧುರೈ ಮಲ್ಲಿ ಕೇವಲ ಮಧುರೈಗೆ ಸೀಮಿತವಾಗಿಲ್ಲ, ವಿರುಧುನಗರ, ಥೇನಿ, ದಿಂಡಿಗಲ್ ಮತ್ತು ಶಿವಗಂಗೈ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ಬೆಳೆಯುತ್ತಿದೆ. ತಮಿಳುನಾಡಿನ ಶೇ.2.8ರಷ್ಟು ಕೃಷಿ ಭೂಮಿಯಲ್ಲಿ ಎಲ್ಲಾ ಹೂವುಗಳನ್ನು ಒಟ್ಟಿಗೆ ಬೆಳೆಯಲಾಗುತ್ತದೆ, ಮಲ್ಲಿಗೆ ಪ್ರಭೇದಗಳು ಈ ಭೂಮಿಯ 40 ಪ್ರತಿಶತವನ್ನು ಆಕ್ರಮಿಸಿಕೊಳ್ಳುತ್ತವೆ. ಪ್ರತಿ ಆರರಲ್ಲಿ ಒಂದು ಮಲ್ಲಿಗೆ ಹೊಲ - ಅಂದರೆ, ರಾಜ್ಯದ ಒಟ್ಟು 13,719 ಹೆಕ್ಟೇರ್ ಗಳಲ್ಲಿ 1,666 - ಮಧುರೈ ಪ್ರದೇಶದಲ್ಲಿದೆ.

ಈ ಸಂಖ್ಯೆಗಳು ಕಾಗದದ ಮೇಲೆ ಸುಂದರವಾಗಿ ಕಾಣುತ್ತಿದ್ದರೂ, ವಾಸ್ತವದಲ್ಲಿ, ಬೆಲೆಯ ಏರಿಳಿತಗಳು ರೈತನನ್ನು ಹೈರಾಣು ಮಾಡುತ್ತದೆ. ನೀಲಕೋಟ್ಟೈ ಮಾರುಕಟ್ಟೆಯಲ್ಲಿ ʼಸೆಂಟ್‌ʼ ತಯಾರಿಕೆಗೆ ಖರೀದಿಯಾಗುವ ಬೆಲೆ ಪ್ರತಿ ಕಿಲೋಗೆ 120 ರೂ.ಗಳ ಮೂಲ ಬೆಲೆಯಿಂದ ಹಿಡಿದು, ಮಟ್ಟುಥವಾನಿ ಹೂವಿನ ಮಾರುಕಟ್ಟೆಯಲ್ಲಿ (ಸೆಪ್ಟೆಂಬರ್ 2022 ಮತ್ತು ಡಿಸೆಂಬರ್ 2021ರಲ್ಲಿ) 3,000 ಮತ್ತು 4,000 ರೂ.ಗಳವರೆಗೆ ಇರುತ್ತದೆ, ಅಸಂಬದ್ಧ ಮತ್ತು ಸಮರ್ಥನೀಯವಲ್ಲದ ದರಗಳು ಸ್ಥಳದಿಂದ ಸ್ಥಳಕ್ಕೆ ಇರುತ್ತವೆ.

*****

ಹೂವಿನ ಬೆಳೆ ಲಾಟರಿಯಂತೆ. ಇದು ಸಮಯವನ್ನು ಅವಲಬಿಸಿರುತ್ತದೆ. ”ನಿಮ್ಮ ಗಿಡಗಳು ಹಬ್ಬದ ಸಮಯದಲ್ಲಿ ಹೂ ಬಿಟ್ಟರೆ ನಿಮಗೆ ಲಾಭವಾಗುತ್ತದೆ. ಇಲ್ಲದಿದ್ದರೆ ನಿಮ್ಮ ಮಕ್ಕಳು ಈ ಉದ್ಯೋಗವನ್ನು ಮಾಡುವ ಮೊದಲು ಎರಡೆರಡು ಬಾರಿ ಯೋಚಿಸುತ್ತಾರೆ. ಅವರಾದರೂ ಏನು ಮಾಡಲು ಸಾಧ್ಯ. ತಮ್ಮ ಪೋಷಕರು ಒದ್ದಾಡುವುದನ್ನು ನೋಡಿಯೂ ಹೇಗೆ ಈ ಕೆಲಸ ಮಾಡಬಲ್ಲರು ಅಲ್ಲವೆ?” ಎನ್ನುವ ಗಣಪತಿ ಉತ್ತರಕ್ಕಾಗಿ ಕಾಯಲಿಲ್ಲ. ಅವರು ಮುಂದುವರೆದು ಹೇಳಿದರು. ಸಣ್ಣ ರೈತರು ದೊಡ್ಡವರೊಡನೆ ಸ್ಫರ್ಧಿಸಲು ಸಾಧ್ಯವಿಲ್ಲ. ದೊಡ್ಡ ಹೊಲಗಳ ಮಾಲಿಕರು 50 ಕಿಲೋ ಹೂ ಕೀಳಲು ಜನ ಬೇಕಿದ್ದಾಗ ಕೆಲಸಗಾರರಿಗೆ ಹತ್ತು ರೂಪಾಯಿ ಸಂಬಳ ಹೆಚ್ಚಿಗೆ ಕೊಡಬಲ್ಲರು. ತಿಂಡಿ ಕೊಡಬಲ್ಲರು. ನಮ್ಮಿಂದ ಅದು ಸಾಧ್ಯವೆ?”

ಈ ಭಾಗದ ಇತರ ಸಣ್ಣ ರೈತರಂತೆ, ಅವರು ದೊಡ್ಡ ವ್ಯಾಪಾರಿಗಳ ಸಹಾಯ ಪಡೆಯುವ "ಅಡೈಕಾಲಂ" ಅನ್ನು ತೆಗೆದುಕೊಳ್ಳುತ್ತಾರೆ. "ಹೂಬಿಡುವ ಸಮಯದಲ್ಲಿ, ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಹೂವಿನ ಮೂಟೆಗಳೊಂದಿಗೆ ಅನೇಕ ಬಾರಿ ಮಾರುಕಟ್ಟೆಗೆ ಹೋಗುತ್ತೇನೆ. ಉತ್ಪನ್ನಗಳನ್ನು ಮಾರಾಟ ಮಾಡಲು ವ್ಯಾಪಾರಿಗಳು ನನಗೆ ಸಹಾಯ ಮಾಡಬೇಕು" ಎಂದು ಗಣಪತಿ ಗಮನಸೆಳೆಯುತ್ತಾರೆ. ತಾನು ಮಾರಾಟ ಮಾಡುವ ಪ್ರತಿ ರೂಪಾಯಿ ಮಲ್ಲಿಗೆಗೆ ವ್ಯಾಪಾರಿ 10 ಪೈಸೆ ಕಮಿಷನ್ ಪಡೆಯುತ್ತಾನೆ.

ಐದು ವರ್ಷಗಳ ಹಿಂದೆ, ಗಣಪತಿ ಮಧುರೈ ಹೂವಿನ ವ್ಯಾಪಾರಿ, ಮಧುರೈ ಹೂವಿನ ಮಾರುಕಟ್ಟೆ ಸಂಘದ ಅಧ್ಯಕ್ಷರೂ ಆಗಿರುವ ಪೂಕಡೈ ರಾಮಚಂದ್ರನ್ ಅವರಿಂದ ಕೆಲವು ಲಕ್ಷಗಳನ್ನು ಸಾಲ ಪಡೆದಿದ್ದರು. ಮತ್ತು ಅವರು ಅವರಿಗೆ ಹೂವುಗಳನ್ನು ಮಾರಾಟ ಮಾಡುವ ಮೂಲಕ ಹಣವನ್ನು ತೀರಿಸಿದರು. ಅಂತಹ ವಹಿವಾಟಿನಲ್ಲಿ, ಕಮಿಷನ್ ಹೆಚ್ಚಾಗಿರುತ್ತದೆ ಮತ್ತು ಅದು ಶೇಕಡಾ 10ರಿಂದ 12.5ಕ್ಕೆ ಏರುತ್ತದೆ.

ಇತರ ಒಳಸುರಿಗಳ ನಡುವೆ ಕೀಟನಾಶಕಗಳನ್ನು ಖರೀದಿಸಲು ಸಣ್ಣ ರೈತರು ಅಲ್ಪಾವಧಿಯ ಸಾಲಗಳನ್ನು ಸಹ ತೆಗೆದುಕೊಳ್ಳುತ್ತಾರೆ. ಗಿಡಗಳು ಮತ್ತು ಕೀಟಗಳ ನಡುವಿನ ಸಂಘರ್ಷವೆನ್ನುವುದು ನಿರಂತರವಾದುದು. ವಿಪರ್ಯಾಸವೆಂದರೆ ರಾಗಿ ಗಟ್ಟಿ ಬೆಳೆಯಾದರೂ ಅದಕ್ಕೆ ಆನೆಗಳ ಕಾಟವಿದೆ. ಇದರಿಂದಾಗಿ ಅದರ ಬದಲು ಹೂ ಬೆಳೆಯಲು ಆರಂಭಿಸಿದ್ದಾರೆ. ಮಧುರೈಯ ಹೂವಿನ ಗಿಡಗಳಿಗೆ ಮೊಗ್ಗಿನ ಹುಳಗಳು, ಹೂವಿನ ಹುಳಗಳು ಎಲೆ ಕೊರಕಗಳು ಮತ್ತು ಮೈಟ್‌ ಕೀಟಗಳ ಸಮಸ್ಯೆಯಿದೆ. ಹೂವು ಬಣ್ಣ ಕಳೆದುಕೊಳ್ಳಲು, ಗಿಡಗಳು ಹಾನಿಗೊಳ್ಳಲು ಕಾರಣವಾಗಿ ರೈತರನ್ನು ಸಂಕಷ್ಟಕ್ಕೆ ದೂಡುತ್ತವೆ.

PHOTO • M. Palani Kumar

ಅನೇಕ ಕೀಟಗಳ ಕಾಟದಿಂದ ಬಳಲುತ್ತಿರುವ ಮಧುರೈ ಜಿಲ್ಲೆಯ ತಿರುಮಲ ಗ್ರಾಮದಲ್ಲಿ ಚಿನ್ನಮ್ಮ ತನ್ನ ಮಲ್ಲಿಗೆ ಹೊಲದಲ್ಲಿ ಕೆಲಸ ಮಾಡುತ್ತಿದ್ದಾರೆ

PHOTO • M. Palani Kumar
PHOTO • M. Palani Kumar

ಯುವಕರು ಮತ್ತು ಹಿರಿಯರು ಇಬ್ಬರೂ ಹೂ ಕೀಳುವ ಕೆಲಸದಲ್ಲಿ ತೊಡಗುತ್ತಾರೆ. ಬಲ: ತಿರುಮಲ್ ಗ್ರಾಮದ ಮಲ್ಲಿಗೆ ಹೊಲಗಳ ಪಕ್ಕದಲ್ಲಿ ಕಬಡ್ಡಿಯಾಡುವ ಸ್ಥಳ

ತಿರುಮಲ್ ಗ್ರಾಮದಲ್ಲಿ, ಗಣಪತಿಯ ಮನೆಯಿಂದ ಸ್ವಲ್ಪ ದೂರದಲ್ಲಿ, ಇಡೀ ಹೊಲವು ಹಾಳಾಗಿರುವುದನ್ನು ನಾವು ನೋಡಿದೆವು. ಮತ್ತು ಅದರೊಂದಿಗೆ, ಕನಸುಗಳು ಸಹ. ಈ ಮಲ್ಲಿ ತೋಟಂ (ಮಲ್ಲಿಗೆ ತೋಟ) 50 ವರ್ಷದ ಆರ್ ಚಿನ್ನಮ್ಮ ಮತ್ತು ಅವರ ಪತಿ ರಾಮರ್ ಅವರಿಗೆ ಸೇರಿದೆ. ಅವರ ಹೊಲದಲ್ಲಿನ ಗಿಡಗಳಲಲ್ಲಿ ಮಲ್ಲಿಗೆ ಅರಳಿದ್ದವು. ಆದರೆ ಅವೆಲ್ಲವೂ "ಎರಡನೇ ಗುಣಮಟ್ಟದ ಹೂವುಗಳು, ಅವು ಬಹಳ ಕಡಿಮೆ ಬೆಲೆಯನ್ನು ಪಡೆಯುತ್ತವೆ" ಎಂದು ಅವರು ಹೇಳುತ್ತಾರೆ. ಅವು ರೋಗಗ್ರಸ್ತವಾಗಿವೆ, ಅವರು ನಿಟ್ಟುಸಿರು ಬಿಡುತ್ತಾರೆ, ತನ್ನ ನಾಲಿಗೆಯನ್ನು ಒತ್ತಿ, ತಲೆ ಅಲ್ಲಾಡಿಸುತ್ತಾರೆ. "ಹೂವುಗಳು ಅರಳುವುದಿಲ್ಲ; ಅವು ದೊಡ್ಡದಾಗಿ ಬೆಳೆಯುವುದಿಲ್ಲ."

ಆದಾಗ್ಯೂ, ಇದರಲ್ಲಿ ಒಳಗೊಂಡಿರುವ ಶ್ರಮವು ಎಲ್ಲರನ್ನೂ ಕಾಡುತ್ತದೆ. ವಯಸ್ಸಾದ ಮಹಿಳೆಯರು, ಚಿಕ್ಕ ಮಕ್ಕಳು, ಕಾಲೇಜಿಗೆ ಹೋಗುವ ಹುಡುಗಿಯರು – ಎಲ್ಲರೂ ಮೊಗ್ಗು ಕೀಳುತ್ತಾರೆ. ಕೊಂಬೆಗಳನ್ನು ಮೃದುವಾಗಿ ಆಡಿಸುತ್ತಾ, ಮೊಗ್ಗುಗಳನ್ನು ಹುಡುಕುತ್ತಾ, ಅವುಗಳನ್ನು ಕತ್ತರಿಸಿ, ಕಂದಂಗಿ ಶೈಲಿಯಲ್ಲಿ ಕಟ್ಟಿದ ತನ್ನ ಸೀರೆಯಲ್ಲಿ ಹಾಕಿಕೊಳ್ಳುತ್ತಾ ಚಿನ್ನಮ್ಮ ನಮ್ಮೊಂದಿಗೆ ಮಾತನಾಡುತ್ತಾರೆ. ಆಕೆಯ ಪತಿ ರಾಮರ್ ಹೊಲಗಳಲ್ಲಿ ಅನೇಕ ಕೀಟನಾಶಕಗಳನ್ನು ಪ್ರಯತ್ನಿಸಿದರು. "ಅವರು ಅನೇಕ 'ತೂಕದ ಔಷಧಿಗಳನ್ನು' ಬಳಸಿದರು, ಅವು ಸಾಮಾನ್ಯ ಔಷಧಿಗಳಾಗಿರಲಿಲ್ಲ. ಅವುಗಳ ಬೆಲೆ ಲೀಟರ್ ಗೆ ೪೫೦ ರೂಪಾಯಿಗಳು. ಆದರೆ ಏನೂ ಕೆಲಸ ಮಾಡಲಿಲ್ಲ! ಇದು ಒಂದು ಹಂತಕ್ಕೆ ತಲುಪಿತು, ಅಂಗಡಿ ಮಾಲೀಕರು ಇನ್ನು ಮುಂದೆ ಹಣವನ್ನು ವ್ಯರ್ಥ ಮಾಡಬೇಡಿ ಎಂದು ಹೇಳಿದರು." ಆಗ ರಾಮರ್ ಚಿನ್ನಮ್ಮನಿಗೆ ಹೇಳಿದರು, "ಗಿಡಗಳನ್ನು ಕಿತ್ತು ಹಾಕೋಣ. ನಾವು 1.5 ಲಕ್ಷ ಕಳೆದುಕೊಂಡಿದ್ದೇವೆ.”

ಅದಕ್ಕಾಗಿಯೇ ಅವರ ಪತಿ ಹೊಲದಲ್ಲಿ ಇರಲಿಲ್ಲ ಎಂದು ಚಿನ್ನಮ್ಮ ಹೇಳಿದರು. "ವೈತ್‌ಎರಿಚಲ್" ಎಂದು ಅವರು ಹೇಳುತ್ತಾರೆ, ತಮಿಳು ಪದವು ಅಕ್ಷರಶಃ ಉರಿಯುತ್ತಿರುವ ಹೊಟ್ಟೆಯನ್ನು ಅರ್ಥೈಸುತ್ತದೆ, ಇದು ಕಹಿ ಮತ್ತು ಅಸೂಯೆಯನ್ನು ಸೂಚಿಸುತ್ತದೆ.  "ಇತರರು ಒಂದು ಕಿಲೋ ಮಲ್ಲಿಗೆಗೆ 600 ರೂಪಾಯಿಗಳನ್ನು ಪಡೆದರೆ, ನಮಗೆ 100 ಸಿಗುತ್ತದೆ." ಆದರೆ ಅವರ ಕೋಪ ಅಥವಾ ಕಿರಿಕಿರಿಯು ಸಸ್ಯಗಳ ಕಡೆಗೆ ಹೋಗಿಲ್ಲ. ಅವರು ಕೊಂಬೆಗಳನ್ನು ಸೂಕ್ಷ್ಮವಾಗಿ ಹಿಡಿದು, ಕೆಳಗಿರುವ ಮೊಗ್ಗುಗಳನ್ನು ತಲುಪುವಷ್ಟು ಬಗ್ಗಿಸಿದರು. "ನಾವು ಉತ್ತಮ ಬೆಳೆಯನ್ನು ಹೊಂದಿದ್ದರೆ, ದೊಡ್ಡ ಸಸ್ಯದ ಹೂ ಕೀಳಲು ನಮಗೆ ಹಲವಾರು ನಿಮಿಷಗಳು ಬೇಕಾಗುತ್ತವೆ. ಆದರೆ ಈಗ..." ಮತ್ತು ಅವರು ಬೇಗನೆ ಮುಂದಿನದಕ್ಕೆ ಚಲಿಸುತ್ತಾರೆ.

ಇಳುವರಿಯು ಅನೇಕ ಅಂಶಗಳ ಮೇಲೆ ಅವಲಂಬಿತವಾಗಿದೆ ಎಂದು ಗಣಪತಿ ತನ್ನ ಟವೆಲ್ ಅನ್ನು ಭುಜದ ಮೇಲೆ ಎಸೆದು, ಚಿನ್ನಮ್ಮನ ಸಸ್ಯಗಳೆಡೆಗೆ ಕೈ ಚಾಚುತ್ತಾ ಹೇಳುತ್ತಾರೆ. "ಇದು ಮಣ್ಣು, ಬೆಳವಣಿಗೆ, ರೈತನ ಕೌಶಲ್ಯಕ್ಕೆ ಅನುಗುಣವಾಗಿ ಬದಲಾಗುತ್ತದೆ. ನೀವು ಅದನ್ನು ಮಗುವಿನಂತೆ ಬೆಳೆಸುತ್ತೀರಿ" ಎಂದು ಅವರು ಮತ್ತೊಮ್ಮೆ ಹೇಳುತ್ತಾರೆ. "ಮಗುವು ಹೇಳಿದ ಮಾತನ್ನು ಕೇಳಲು ಸಾಧ್ಯವಿಲ್ಲ, ಅಲ್ಲವೇ? ನೀವು ನಿರೀಕ್ಷಿಸಬೇಕು ಮತ್ತು ಅಂತರ್ಬೋಧೆಯಿಂದ ಪ್ರತಿಕ್ರಿಯಿಸಬೇಕು. ಶಿಶುವಿನಂತೆ, ಸಸ್ಯವು ಅಳಲು ಸಾಧ್ಯವಿಲ್ಲ. ಆದರೆ ನೀವು ಅನುಭವವನ್ನು ಹೊಂದಿದ್ದರೆ, ನಿಮಗೆ ತಿಳಿಯುತ್ತದೆ ... ಅದು ರೋಗಗ್ರಸ್ತವಾಗಿದ್ದರೆ, ಕ್ಷೀಣಿಸುತ್ತಿದ್ದರೆ ಅಥವಾ ಸಾಯುತ್ತಿದ್ದರೆ."

ಇವುಗಳಲ್ಲಿ ಅನೇಕ ಕಾಯಿಲೆಗಳು ರಾಸಾಯನಿಕಗಳ ಕಾಕ್‌ಟೇಲ್‌ ಮೂಲಕ 'ಗುಣಪಡಿಸಲ್ಪಡುತ್ತವೆ'. ಮಲ್ಲಿಗೆಯನ್ನು ಸಾವಯವವಾಗಿ ಬೆಳೆಯುವ ಬಗ್ಗೆ ಕೇಳಿದೆ. ಅವರ ಪ್ರತಿಕ್ರಿಯೆಯು ಸಣ್ಣ ರೈತನ ಸಂದಿಗ್ಧತೆಯನ್ನು ಸೆರೆಹಿಡಿಯುತ್ತದೆ. "ನೀವು ಹಾಗೆ ಮಾಡಬಹುದು, ಆದರೆ ಹೆಚ್ಚಿನ ಅಪಾಯಗಳಿವೆ. ನಾನು ಸಾವಯವ ಕೃಷಿ ತರಬೇತಿಗೆ ಹಾಜರಾಗಿದ್ದೇನೆ" ಎಂದು ಗಣಪತಿ ಹೇಳುತ್ತಾರೆ. "ಆದರೆ ಇದಕ್ಕೆ ಉತ್ತಮ ದರವನ್ನು ಯಾರು ಪಾವತಿಸುತ್ತಾರೆ?" ಅವರು ತೀಕ್ಷ್ಣವಾಗಿ ಕೇಳುತ್ತಾರೆ.

PHOTO • M. Palani Kumar
PHOTO • M. Palani Kumar

ಎಡ: ಆರೋಗ್ಯಕರ ಮಲ್ಲಿಗೆ ಸಸ್ಯಗಳಿಂದ ಸುತ್ತುವರಿದ ಸತ್ತ ಸಸ್ಯ. ಬಲ: ಕೆಲಸಗಾರರು ಕಿತ್ತ ಮೊಗ್ಗಿನ ಅಳತೆ ಮಾಡುವ ಪಡಿ ಪಾತ್ರೆ. ಈ ಅಳತೆಯಂತೆ ಸಂಬಳವನ್ನು ನಿರ್ಧರಿಸಲಾಗುತ್ತದೆ

PHOTO • M. Palani Kumar

ಮಲ್ಲಿಗೆ ಮೊಗ್ಗು ಕೀಳುವವರ ಗುಂಪು, ಮಾಲೀಕರು ಮತ್ತು ಕಾರ್ಮಿಕರು, ಹೂವುಗಳು ಅರಳುವ ಮೊದಲು ಮಾರುಕಟ್ಟೆಗೆ ಸಾಗಿಸಲು ಕೆಲಸ ಮಾಡುತ್ತಾ ಹರಟೆ ಹೊಡೆಯುತ್ತಿದ್ದಾರೆ, ಸಂಗೀತವನ್ನು ಕೇಳುತ್ತಿದ್ದಾರೆ ಮತ್ತು ಸಮಯದ ವಿರುದ್ಧ ಓಡುತ್ತಿದ್ದಾರೆ

"ರಾಸಾಯನಿಕ ಗೊಬ್ಬರವು ಉತ್ತಮ ಇಳುವರಿಯನ್ನು ನೀಡುತ್ತದೆ. ಮತ್ತು ಅದು ಸುಲಭ. ಸಾವಯವವು ಗೊಂದಲಮಯವಾಗಿದೆ - ನೀವು ಎಲ್ಲಾ ಪದಾರ್ಥಗಳನ್ನು ಟಬ್ ಒಂದರಲ್ಲಿ ನೆನೆಸಿ ಎಚ್ಚರಿಕೆಯಿಂದ ಸಿಂಪಡಿಸುತ್ತೀರಿ ಮತ್ತು ನಂತರ ಅದನ್ನು ಮಾರುಕಟ್ಟೆಗೆ ಕೊಂಡು ಹೋದರೆ, ಅಲ್ಲಿ ಯಾವುದೇ ಬೆಲೆ ವ್ಯತ್ಯಾಸವಿಲ್ಲ!  ಇದು ಸರಿಯಲ್ಲ ಏಕೆಂದರೆ ಸಾವಯವ ಮಲ್ಲಿಗೆ ದೊಡ್ಡದಾಗಿರುತ್ತದೆ ಮತ್ತು ಪ್ರಕಾಶಮಾನವಾಗಿರುತ್ತದೆ. ಇದು ಹೆಚ್ಚು ಉತ್ತಮ ದರವನ್ನು ಪಡೆಯದಿದ್ದರೆ - ಉದಾಹರಣೆಗೆ, ದುಪ್ಪಟ್ಟು ಬೆಲೆ - ಅದು ನನ್ನ ಸಮಯ ಮತ್ತು ಶ್ರಮಕ್ಕೆ ಯೋಗ್ಯವಲ್ಲ. "

ತನ್ನ ಮನೆಬಳಕೆಗಾಗಿ, ಅವರು ಸಾವಯವ ತರಕಾರಿಗಳನ್ನು ಬೆಳೆಯುತ್ತಾರೆ. "ನಮಗಾಗಿ ಮತ್ತು ಮುಂದಿನ ಹಳ್ಳಿಯಲ್ಲಿ ವಾಸಿಸುವ ನನ್ನ ವಿವಾಹಿತ ಮಗಳಿಗೆ ಮಾತ್ರ. ನಾನು ಸಹ ರಾಸಾಯನಿಕಗಳಿಂದ ದೂರವಿರಲು ಬಯಸುತ್ತೇನೆ. ಸಾಕಷ್ಟು ಅಡ್ಡಪರಿಣಾಮಗಳಿವೆ ಎಂದು ಅವರು ಹೇಳುತ್ತಾರೆ. ಬಲವಾದ ಕೀಟನಾಶಕಗಳಿಗೆ ಹೆಚ್ಚು ಒಡ್ಡಿಕೊಳ್ಳುವುದರಿಂದ, ಸಹಜವಾಗಿ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದರೆ ಇದಕ್ಕೆ ಪರ್ಯಾಯ ಮಾರ್ಗವೇನು?" ಎಂದು ಪ್ರಶ್ನಿಸುತ್ತಾರೆ.

*****

ಗಣಪತಿಯವರ ಪತ್ನಿ ಪಿಚೈಯಮ್ಮನಿಗೂ ಬೇರೆ ದಾರಿಯೇ ಇಲ್ಲ. ದಿನವಿಡೀ ಕೆಲಸ ಮಾಡುತ್ತಾರೆ. ಸದಾ ಮುಗುಳು ನಗುವ ಇವರಿಗೆ ಅದೇ ಬಲ. ಆಗಸ್ಟ್ 2022ರ ಕೊನೆಯಲ್ಲಿ ಪರಿ ಅವರ ಮನೆಗೆ ಭೇಟಿ ನೀಡಿತು. ಅದು ನಮ್ಮ ಎರಡನೇ ಭೇಟಿಯಾಗಿತ್ತು. ಅಂಗಳದಲ್ಲಿ ಮಂಚದ ಮೇಲೆ, ಬೇವಿನ ಮರದ ತಂಪಾದ ನೆರಳಿನಲ್ಲಿ ಕುಳಿತು, ತನ್ನ ಕೆಲಸದ ದಿನವನ್ನು ವಿವರಿಸುತ್ತಾರೆ.

"ಆಡ ಪಾಕಾ, ಮಾಡ ಪಾಕಾ, ಮಲ್ಲಿಗಪೂ ತೊಟ್ಟಂ ಪಾಕಾ, ಪೂವಾ ಪರಿಕಾ, ಸಮೈಕಾ, ಪುಳ್ಳೈಗಳ ಅನ್ನುಪಿವಿಡಾ... [ಆಡುಗಳು, ಹಸುಗಳು ಮತ್ತು ಮಲ್ಲಿಗೆ ಹೊಲಗಳನ್ನು ನೋಡಿಕೊಳ್ಳುವುದು; ಮಲ್ಲಿ ಕೀಳುವುದು; ಅಡುಗೆ ಮಾಡುವುದು, ಮಕ್ಕಳನ್ನು ಶಾಲೆಗೆ ಕಳುಹಿಸುವುದು...]. ಇದು ಉಸಿರುಗಟ್ಟಿಸುವ ಒಂದು ಪಟ್ಟಿ.

45 ವರ್ಷದ ಪಿಚೈಯಮ್ಮ ಹೇಳುವುದೇನೆಂದರೆ, ಅವಿರತ ಪರಿಶ್ರಮವು ಮಕ್ಕಳಿಗಾಗಿಯೇ. "ನನ್ನ ಮಗ ಮತ್ತು ಮಗಳು ಇಬ್ಬರೂ ಉತ್ತಮ ಶಿಕ್ಷಣ ಮತ್ತು ಪದವಿ ಪಡೆದವರು." ಅವರು ಸ್ವತಃ ಶಾಲೆಗೆ ಹೋಗಿಲ್ಲ ಮತ್ತು ಸಣ್ಣವರಿದ್ದಾಗಿನಿಂದ ತನ್ನ ಹೆತ್ತವರ ಜಮೀನಿನಲ್ಲಿ ಮತ್ತು ಈಗ ಅವರ ಜಮೀನಿನಲ್ಲಿ ಕೆಲಸ ಮಾಡಿದ್ದಾರೆ. ಅವರು ತನ್ನ ಕಿವಿ ಮತ್ತು ಮೂಗಿಗೆ ಕೆಲವು ಆಭರಣಗಳನ್ನು ಧರಿಸುತ್ತಾರೆ; ಕುತ್ತಿಗೆಯಲ್ಲಿ ತಾಳಿಯಿರುವ ಅರಿಶಿನ ದಾರವಿದೆ ( ಮಂಗಳಸೂತ್ರ).

ನಾವು ಅವರನ್ನು ಭೇಟಿಯಾದ ದಿನ ಅವರು ಹೊಲದಲ್ಲಿ ಕಳೆ ತೆಗೆಯುತ್ತಿದ್ದರು. ಅದು ಕಷ್ಟದ ಕೆಲಸ. ಇಡೀ ದಿನ ಬಾಗಿಕೊಂಡು ಸಣ್ಣ ಹೆಜ್ಜೆಯಿಟ್ಟು ಕೆಲಸ ಮಾಡಬೇಕು. ಕಠಿಣ ಬಿಸಿಲಿನಲ್ಲಿ ದುಡಿಯಬೇಕು. ಆದರೆ ಈಗ ಅವರು ನಮ್ಮ ಕುರಿತು ಕಾಳಜಿವಹಿಸುತ್ತಿದ್ದರು. "ದಯವಿಟ್ಟು ಏನನ್ನಾದರೂ ತಿನ್ನಿ" ಎಂದು ಅವರು ಒತ್ತಾಯಿಸಿದರು. ಗಣಪತಿ ನಮಗೆ ಪೇರಳೆ ಹಣ್ಣು ಮತ್ತು ಎಳನೀರು ತಂದುಕೊಟ್ಟರು. ನಾವು ಹಣ್ಣು ತಿನ್ನುತ್ತಾ ಎಳನೀರು ಕುಡಿಯುವಾಗ, ವಿದ್ಯಾವಂತರು ಮತ್ತು ಯುವಕರು ಹಳ್ಳಿಯಿಂದ ನಗರಕ್ಕೆ ಸ್ಥಳಾಂತರಗೊಂಡಿದ್ದಾರೆ ಎಂದು ಅವರು ವಿವರಿಸಿದರು. ಇಲ್ಲಿನ ಭೂಮಿ ಎಕರೆಗೆ ಕನಿಷ್ಠ 10 ಲಕ್ಷ ರೂ.ಗೆ ಮಾರಾಟವಾಗುತ್ತದೆ. ಇದು ಮುಖ್ಯ ರಸ್ತೆಗೆ ಸಾಕಷ್ಟು ಹತ್ತಿರದಲ್ಲಿದ್ದರೆ, ಅದು ನಾಲ್ಕು ಪಟ್ಟು ದರದಲ್ಲಿ ಮಾರಾಟವಾಗುತ್ತದೆ. "ನಂತರ ಅದನ್ನು ಮನೆಗಳಿಗೆ 'ಪ್ಲಾಟ್' ಎಂದು ಮಾರಾಟ ಮಾಡಲಾಗುತ್ತದೆ."

PHOTO • M. Palani Kumar
PHOTO • M. Palani Kumar

ಪಿಚೈಯಮ್ಮ ಅವರು ಹಳ್ಳಿಯ ಕೂಲಿ ಕಾರ್ಮಿಕರೊಡನೆ ಸೇರಿ (ಬಲಕ್ಕೆ) ಕಳೆಗಳನ್ನು ತೆಗೆದು ತಮ್ಮ ಮಲ್ಲಿಗೆ ಹೊಲಗಳಲ್ಲಿ ಕೆಲಸ ಮಾಡುವ ತಮ್ಮ ದಿನದ ಕೆಲಸದ ಬಗ್ಗೆ ನನಗೆ ಹೇಳುತ್ತಿದ್ದಾರೆ

ಭೂಮಿಯನ್ನು ಹೊಂದಿರುವವರಲ್ಲಿಯೂ ಸಹ, ಕುಟುಂಬವು ತಮ್ಮದೇ ಆದ 'ಉಚಿತ' ಶ್ರಮವನ್ನು ಹಾಕಿದರೆ ಮಾತ್ರ ಲಾಭದ ಖಾತರಿಯಿದೆ. ಮಹಿಳೆಯರದು ಹೆಚ್ಚಿನ ಪಾಲು ಇದೆ ಎಂದು ಗಣಪತಿ ಒಪ್ಪಿಕೊಳ್ಳುತ್ತಾರೆ. ನೀವು ಇದೇ ಕೆಲಸವನ್ನು ಬೇರೆಯವರಿಗೆ ಮಾಡಿದರೆ, ನಿಮ್ಮ ಸಂಬಳ ಎಷ್ಟು ಎಂದು ಪಿಚೈಯಮ್ಮನನ್ನು ಕೇಳುತ್ತೇನೆ. "300 ರೂಪಾಯಿಗಳು" ಎಂದು ಅವರು ಉತ್ತರಿಸುತ್ತಾರೆ. ಮತ್ತು ಅದು ಅವರ ಮನೆಕೆಲಸವನ್ನು ಒಳಗೊಂಡಿಲ್ಲ, ಅಥವಾ ಅವರ ಜಾನುವಾರುಗಳನ್ನು ನಿರ್ವಹಿಸಲು ಅವರು ಮಾಡುವ ಕೆಲಸಗಳನ್ನು ಒಳಗೊಂಡಿಲ್ಲ.

"ನೀವು ನಿಮ್ಮ ಕುಟುಂಬಕ್ಕೆ ಕನಿಷ್ಠ 15,000 ರೂಪಾಯಿಗಳನ್ನು ಉಳಿಸುತ್ತೀರಿ ಎಂದು ಹೇಳಬಹುದೆ?" ನಾನು ಕೇಳುತ್ತೇನೆ. ಗಣಪತಿಯವರಂತೆ ಅವರು ತಕ್ಷಣ ಒಪ್ಪುತ್ತಾರೆ. ಅವರಿಗೆ ಆ ಮೊತ್ತವನ್ನು ಪಾವತಿಸಬೇಕು ಎಂದು ನಾನು ತಮಾಷೆಯಾಗಿ ಸೂಚಿಸುತ್ತೇನೆ. ಎಲ್ಲರೂ ನಗುತ್ತಾರೆ, ಪಿಚೈಯಮ್ಮ ಬಹಳ ಹೊತ್ತು ನಕ್ಕರು.

ನಂತರ ಆಕೆ ನಗುತ್ತಾ ನನ್ನ ಮಗಳ ಕುರಿತು ಕೇಳಿದರು. ಅವಳ ಮದುವೆಗೆ ಚಿನ್ನ ಎಷ್ಟು ಮಾಡಿಸಬೇಕಾಗುತ್ತದೆ ಎಂಧು ಕೇಳಿದರು. “ಇಲ್ಲಿ ನಾವು 50 ಸವರನ್‌ ಚಿನ್ನ ಕೊಡುತ್ತೇವೆ. ಮತ್ತೆ ಮೊಮ್ಮಕ್ಕಳು ಹುಟ್ಟಿದಾಗ ಚಿನ್ನದ ಸರ, ಕಾಲ್ಗೆಜ್ಜೆ ಮಾಡಿಸುತ್ತೇವೆ. ಕಿವಿ ಚುಚ್ಚುವಾಗ, ಹಬ್ಬಕ್ಕೆ ಮೇಕೆ ಹೀಗೆ ಇದು ಮುಂದುವರೆಯುತ್ತದೆ. ಇದೆಲ್ಲವೂ ನಮ್ಮ ಸಂಪಾದನೆಯಿಂದಲೇ ನಡೆಯುತ್ತದೆ. ಈಗ ಹೇಳಿ ನಾನು ಸಂಬಳ ತೆಗೆದುಕೊಳ್ಳಬಹುದೆ?”

*****

ಮಲ್ಲಿಗೆಯ ಯುವ ಕೃಷಿಕರಿಂದ ಆ ಸಂಜೆ ಸಂಬಳವು ಕೃಷಿಗೆ ಉತ್ತಮ ಮತ್ತು ಅಗತ್ಯವಾದ ಪೂರಕವಾಗಿದೆ ಎಂದು ನಾನು ತಿಳಿದುಕೊಂಡೆ. ಇದು ಕೆಲಸದ ಹೊರೆಯನ್ನು ದ್ವಿಗುಣಗೊಳಿಸಿದರೂ ಸಹ, ಸ್ಥಿರವಾದ ಆದಾಯವಾಗಿದೆ. ಆರು ವರ್ಷಗಳ ಹಿಂದೆ, ಮಧುರೈ ಜಿಲ್ಲೆಯ ಉಸಿಲಂಪಟ್ಟಿ ತಾಲ್ಲೂಕಿನ ನಡುಮುದಲೈಕುಲಂ ಕುಗ್ರಾಮದಲ್ಲಿ ಭತ್ತದ ರೈತರಾದ ಜಯಬಾಲ್ ಮತ್ತು ಪೋಧುಮಣಿ ಅವರಿಂದ ನಾನು ಇದೇ ತರ್ಕವನ್ನು ಕೇಳಿದ್ದೆ. ಈ ಪ್ರವಾಸದಲ್ಲಿ, ಆಗಸ್ಟ್ 2022ರಲ್ಲಿ, ಜಯಬಾಲ್ ತನ್ನ ಬಾಲ್ಯದ ಸ್ನೇಹಿತ ಮತ್ತು ಮಲ್ಲಿಗೆ ಕೃಷಿಕ ಎಂ.ಪಾಂಡಿ ಅವರನ್ನು ನನಗೆ ಪರಿಚಯಿಸಿದರು, ಅವರು ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮತ್ತು ತಮಿಳುನಾಡು ಸ್ಟೇಟ್ ಮಾರ್ಕೆಟಿಂಗ್ ಕಾರ್ಪೊರೇಷನ್ ಲಿಮಿಟೆಡ್ (ಟಾಸ್ಮಾಕ್) ನಲ್ಲಿ ಪೂರ್ಣ ಸಮಯದ ಉದ್ಯೋಗವನ್ನು ಹೊಂದಿದ್ದಾರೆ, ಇದು ರಾಜ್ಯದಲ್ಲಿ ಭಾರತೀಯ ನಿರ್ಮಿತ ವಿದೇಶಿ ಮದ್ಯವನ್ನು (ಐಎಂಎಫ್ಎಲ್) ಮಾರಾಟ ಮಾಡುವ ವಿಶೇಷ ಹಕ್ಕುಗಳನ್ನು ಹೊಂದಿದೆ.

40 ವರ್ಷದ ಪಾಂಡಿ ಮೊದಲು ರೈತನಾಗಿರಲಿಲ್ಲ. ಹಳ್ಳಿಯಿಂದ 10 ನಿಮಿಷಗಳ ಸವಾರಿಯ ಮೂಲಕ ತನ್ನ ಹೊಲಗಳಿಗೆ ಹೋಗುವಾಗ ಅವರು ತನ್ನ ಕಥೆಯನ್ನು ನಮಗೆ ಹೇಳಲು ಪ್ರಾರಂಭಿಸಿದರು. ನಾವು ಮೈಲುಗಟ್ಟಲೆ ಹಸಿರು - ಬೆಟ್ಟಗಳು, ಜಲಮೂಲಗಳು ಮತ್ತು ಬಿಳಿ ಮಲ್ಲಿಗೆ ಮೊಗ್ಗುಗಳ ಹೊಳಪಿನಿಂದ ಸುತ್ತುವರೆದಿದ್ದೆವು.

PHOTO • M. Palani Kumar

ಸುಂದರವಾದ ನಾಡುಮುದಲೈಕುಲಂ ಕುಗ್ರಾಮದಲ್ಲಿನ ತನ್ನ ಮಲ್ಲಿಗೆ ಹೊಲದಲ್ಲಿ ಪಾಂಡಿ, ಅಲ್ಲಿ ಅನೇಕ ರೈತರು ಭತ್ತವನ್ನು ಸಹ ಬೆಳೆಯುತ್ತಾರೆ

"ನಾನು 18 ವರ್ಷಗಳ ಹಿಂದೆ, ನನ್ನ ಶಿಕ್ಷಣದ ನಂತರ ಟಾಸ್ಮಾಕ್ಗೆ ಸೇರಿಕೊಂಡೆ. ನಾನು ಈಗಲೂ ಅಲ್ಲಿ ಕೆಲಸ ಮಾಡುತ್ತೇನೆ ಮತ್ತು ಬೆಳಿಗ್ಗೆ ನನ್ನ ಮಲ್ಲಿಗೆ ಹೊಲಗಳನ್ನು ನೋಡಿಕೊಳ್ಳುತ್ತೇನೆ." 2016ರಲ್ಲಿ, ಹೊಸದಾಗಿ ಆಯ್ಕೆಯಾದ ಮುಖ್ಯಮಂತ್ರಿ ಮತ್ತು ಎಐಎಡಿಎಂಕೆ ಮುಖ್ಯಸ್ಥೆ ಜೆ.ಜಯಲಲಿತಾ ಅವರು ಟಾಸ್ಮಾಕ್ ಕೆಲಸದ ಸಮಯವನ್ನು 12ರಿಂದ 10 ಗಂಟೆಗಳಿಗೆ ಇಳಿಸಿದರು. ಅವರು ಆಕೆಯ ಹೆಸರು ಹೇಳುವಾಗಲೆಲ್ಲ, 'ಮನ್ಬುಮಿಗು ಪುರಚ್ಚಿ ತಲೈವಿ ಅಮ್ಮ ಅವರ್ಗಳ್' (ಗೌರವಾನ್ವಿತ ಕ್ರಾಂತಿಕಾರಿ ನಾಯಕಿ, ಅಮ್ಮ) ಎಂದು ಕರೆಯುತ್ತಿದ್ದರು, ಈ ಬಿರುದು ಗೌರವಾನ್ವಿತ ಮತ್ತು ಔಪಚಾರಿಕ. ಆಕೆಯ ನಿರ್ಧಾರವು ಅವರ ಬೆಳಿಗ್ಗೆಯನ್ನು ಮುಕ್ತಗೊಳಿಸಿತು, ಏಕೆಂದರೆ ಈಗ ಮಧ್ಯಾಹ್ನ 12 ಗಂಟೆಗೆ (ಬೆಳಿಗ್ಗೆ 10ರ ಬದಲು) ಕೆಲಸಕ್ಕೆ ಹೋಗಬೇಕಾಗಿತ್ತು. ಅಂದಿನಿಂದ ಉಳಿಸಿದ ಆ ಎರಡು ಗಂಟೆಗಳನ್ನು ತಮ್ಮ ಭೂಮಿಗೆ ಮೀಸಲಿಟ್ಟಿದ್ದಾರೆ.

ಪಾಂಡಿ ತನ್ನ ಎರಡೂ ಉದ್ಯೋಗಗಳ ಬಗ್ಗೆ ಸ್ಪಷ್ಟತೆ ಮತ್ತು ದೃಢನಿಶ್ಚಯದಿಂದ ಮಾತನಾಡುತ್ತಾರೆ, ಆದರೆ ಅವರು ತನ್ನ ಮಲ್ಲಿಗೆ ಹೊಲಗಳಿಗೆ ಕೀಟನಾಶಕ ಸಿಂಪಡಿಸುತ್ತಾರೆ. "ನೋಡಿ, ನಾನು ಉದ್ಯೋಗಿ ಮತ್ತು ನನ್ನ ಹೊಲದಲ್ಲಿ ಕೆಲಸ ಮಾಡಲು ನಾನು 10 ಕಾರ್ಮಿಕರನ್ನು ನೇಮಿಸಿಕೊಳ್ಳುತ್ತೇನೆ." ಅವನ ಧ್ವನಿಯಲ್ಲಿ ಶಾಂತವಾದ ಹೆಮ್ಮೆ ಇತ್ತು. "ಆದರೆ, ಭೂಮಿಯನ್ನು ಹೊಂದಿದ್ದರೆ ಮಾತ್ರ ಈಗ ಕೃಷಿ ಮಾಡಬಹುದು. ಕೀಟನಾಶಕಗಳು ನೂರಾರು ರೂಪಾಯಿಗಳಿಗೆ, ಸಾವಿರಾರು ರೂಪಾಯಿಗಳಿಗೆ ಮಾರಾಟವಾಗುತ್ತವೆ. ನಾನು ಸಂಬಳ ಪಡೆಯುವುದರಿಂದ ನಿರ್ವಹಿಸಬಲ್ಲೆ. ಇಲ್ಲದಿದ್ದರೆ, ಕೃಷಿ ಬಹಳ ಕಷ್ಟ."

ಮಲ್ಲಿಗೆ ಕೃಷಿ ಇನ್ನೂ ಕಷ್ಟಕರವಾಗಿದೆ ಎಂದು ಅವರು ಹೇಳುತ್ತಾರೆ. ಜೊತೆಗೆ, ನಿಮ್ಮ ಜೀವನವನ್ನು ಸಸ್ಯಗಳ ಸುತ್ತ ಯೋಜಿಸಬೇಕು. "ನೀವು ಎಲ್ಲಿಗೂ ಹೋಗಲಾರಿರಿ; ಬೆಳಿಗ್ಗೆ ಹೂವುಗಳನ್ನು ಕೀಳಲು ಮತ್ತು ಮಾರುಕಟ್ಟೆಗೆ ಕೊಂಡೊಯ್ಯಲು ನೀವು ಇರಲೇಬೇಕು. ಇದಲ್ಲದೆ, ಇಂದು ನೀವು ಒಂದು ಕಿಲೋ ಹೂ ಪಡೆಯಬಹುದು. ಮುಂದಿನ ವಾರ ಅದು 50 ಆಗಬಹುದು. ನೀವು ಯಾವುದಕ್ಕೂ ಸಿದ್ಧರಾಗಿರಬೇಕು!"

ಪಾಂಡಿ ಒಂದು ಎಕರೆಯಲ್ಲಿ ನಿಧಾನವಾಗಿ ಮಲ್ಲಿಗೆ ಗಿಡಗಳನ್ನು ಸೇರಿಸುತ್ತಾ ಹೋಗಿದ್ದಾರೆ. ಒಬ್ಬ ರೈತ ಮಲ್ಲಿಗೆ ಗಿಡಗಳ ಬಗ್ಗೆ ಅನೇಕ ಗಂಟೆಗಳ ಕಾಲ ಗಲಾಟೆ ಮಾಡಬೇಕಾಗುತ್ತದೆ ಎಂದು ಅವರು ಹೇಳುತ್ತಾರೆ. "ನಾನು ನನ್ನ ಕೆಲಸದಿಂದ ಮಧ್ಯರಾತ್ರಿಯ ಸುಮಾರಿಗೆ ಹಿಂತಿರುಗುತ್ತೇನೆ. ಬೆಳಿಗ್ಗೆ 5 ಗಂಟೆಗೆ ಎದ್ದೇಳುತ್ತೇನೆ ಮತ್ತು ಇಲ್ಲಿ ಮೈದಾನದಲ್ಲಿ. ನಮ್ಮ ಇಬ್ಬರು ಮಕ್ಕಳನ್ನು ಶಾಲೆಗೆ ಕಳುಹಿಸಿದ ನಂತರ ನನ್ನ ಹೆಂಡತಿ ನನ್ನೊಂದಿಗೆ ಸೇರಿಕೊಳ್ಳುತ್ತಾರೆ. ನಾವು ಸುತ್ತಾಡುವುದು, ಮಲಗುವುದನ್ನು ಮಾಡಿದರೆ ಯಶಸ್ವಿಯಾಗುತ್ತೇನೆಯೇ? ಮತ್ತು ನಾನು ಇನ್ನೂ 10 ಜನರಿಗೆ ಕೆಲಸ ನೀಡಲು ಸಾಧ್ಯವಿತ್ತೆ?

ಇಡೀ ಎಕರೆಯು ಪೂರ್ಣವಾಗಿ ಹೂಬಿಡುತ್ತಿದ್ದರೆ - ಪಾಂಡಿ ತನ್ನ ಕೈಗಳನ್ನು ಬಳಸಿ ಹೂಬಿಡುವ ಪೂರ್ಣತೆಯನ್ನು ಒತ್ತಿಹೇಳುತ್ತಾರೆ - "ಆಗ ನಿಮಗೆ 20-30 ಕಾರ್ಮಿಕರು ಬೇಕು." ಬೆಳಿಗ್ಗೆ 6ರಿಂದ 10ರವರೆಗೆ ನಾಲ್ಕು ಗಂಟೆಗಳ ಕೆಲಸಕ್ಕೆ ಪ್ರತಿಯೊಬ್ಬರಿಗೂ 150 ರೂಪಾಯಿಗಳನ್ನು ನೀಡಲಾಗುವುದು. ಕೇವಲ ಒಂದು ಕಿಲೋ ಇದ್ದರೆ - ಹೂಬಿಡುವಿಕೆ ಕ್ಷೀಣಿಸಿದ ನಂತರ - ಪಾಂಡಿ ಮತ್ತು ಅವರ ಪತ್ನಿ ಶಿವಗಾಮಿ ಮತ್ತು ಅವರ ಇಬ್ಬರು ಮಕ್ಕಳು ಕೀಳುತ್ತಾರೆ. "ಇತರ ಪ್ರದೇಶಗಳು ಕಡಿಮೆ ದರವನ್ನು ಹೊಂದಿರಬಹುದು, ಆದರೆ ಇದು ಫಲವತ್ತಾದ ಪ್ರದೇಶವಾಗಿದ್ದು, ಅನೇಕ ಭತ್ತದ ಗದ್ದೆಗಳನ್ನು ಹೊಂದಿದೆ. ಕಾರ್ಮಿಕರಿಗೆ ಹೆಚ್ಚಿನ ಬೇಡಿಕೆ ಇದೆ. ನೀವು ಅವರಿಗೆ ಚೆನ್ನಾಗಿ ಪಾವತಿಸಬೇಕು, ಮತ್ತು ಅವರಿಗೆ ಚಹಾ ಮತ್ತು ವಡೆಯನ್ನು ತರಬೇಕು..."

ಬೇಸಿಗೆಯ ತಿಂಗಳುಗಳು (ಏಪ್ರಿಲ್ ಮತ್ತು ಮೇ) ಹೂವುಗಳ ಸಮೃದ್ಧತೆಯನ್ನು ಹೊಂದಿರುತ್ತವೆ. "ನೀವು ಸುಮಾರು 40-50 ಕಿಲೋ ಪಡೆಯುತ್ತೀರಿ. ಬೆಲೆ ತುಂಬಾ ಕಳಪೆಯಾಗಿರುತ್ತದೆ, ಕೆಲವೊಮ್ಮೆ ಕಿಲೋಗೆ 70 ರೂಪಾಯಿಗಳಷ್ಟು ಕಡಿಮೆ. ಈಗ ದೇವರ ದಯೆಯಿಂದ 'ಸೆಂಟ್' ಕಂಪನಿಗಳು ದರವನ್ನು ಹೆಚ್ಚಿಸಿವೆ ಮತ್ತು ಅವರು ಒಂದು ಕಿಲೋ ಮಲ್ಲಿಗೆಯನ್ನು 220 ರೂ.ಗೆ ತೆಗೆದುಕೊಳ್ಳುತ್ತಾರೆ. ಮಾರುಕಟ್ಟೆಯಲ್ಲಿ ಟನ್ ಗಟ್ಟಲೆ ಹೂವುಗಳು ಇದ್ದಾಗ, ಅದು ರೈತರು ಪಡೆಯಬಹುದಾದ ಅತ್ಯುತ್ತಮ ಬೆಲೆಯಾಗಿದೆ.

PHOTO • M. Palani Kumar

ಪಾಂಡಿ ತನ್ನ ಮಲ್ಲಿಗೆ ಗಿಡಗಳಿಗೆ ಕೀಟನಾಶಕ ಮತ್ತು ಗೊಬ್ಬರದ ಮಿಶ್ರಣವನ್ನು ಸಿಂಪಡಿಸುತ್ತಿರುವುದು

PHOTO • M. Palani Kumar
PHOTO • M. Palani Kumar

ಗಣಪತಿ ತನ್ನ ಮಲ್ಲಿಗೆ ಸಸಿಗಳ ಸಾಲುಗಳ ನಡುವೆ ನಡೆದುಕೊಂಡು ಹೋಗುತ್ತಿರುವುದು. ಬಲ: ಅವರ ಮನೆಯ ಮುಂದೆ ಪಿಚೈಯಮ್ಮ

ಅವರು ಹೂವುಗಳನ್ನು ಸುಮಾರು 30 ಕಿ.ಮೀ ದೂರದಲ್ಲಿರುವ ನೆರೆಯ ದಿಂಡಿಗಲ್ ಜಿಲ್ಲೆಯ ನೀಲಕೋಟ್ಟೈ ಮಾರುಕಟ್ಟೆಗೆ ಕೊಂಡೊಯ್ಯುತ್ತಾರೆ. "ಮಟ್ಟುಥವಾನಿಯಲ್ಲಿ ಕಿಲೋ ಲೆಕ್ಕದಲ್ಲಿ ಮಾರಿದರೆ ನೀಲಕೋಟೈಯಲ್ಲಿ ಚೀಲದ ಲೆಕ್ಕದಲ್ಲಿ ಮಾರಲಾಗುತ್ತದೆ. ಜೊತೆಗೆ, ವ್ಯಾಪಾರಿ ಹತ್ತಿರದಲ್ಲಿ ಕುಳಿತಿರುತ್ತಾನೆ. ಅವನು ಟ್ಯಾಬ್ ಇಟ್ಟುಕೊಂಡಿರುತ್ತಾನೆ, ಮತ್ತು ಅನಿರೀಕ್ಷಿತ ವೆಚ್ಚಗಳು, ಹಬ್ಬಗಳು ಮತ್ತು ಕೆಲವೊಮ್ಮೆ ಹೂವುಗಳಿಗೆ ಸಿಂಪಡಿಸಲು ಬೇಕಾಗುವ ರಾಸಾಯನಿಕಗಳನ್ನು ಖರೀದಿಸಲು ನಿಮಗೆ ಮುಂಗಡವನ್ನು ನೀಡುತ್ತಾನೆ."

ಸಿಂಪಡಣೆ ಬಹಳ ಮುಖ್ಯವಾಗಿದೆ ಎಂದು ಪಾಂಡಿ ಹೇಳುತ್ತಾರೆ, ಶಾರ್ಟ್ಸ್ ಮತ್ತು ಪಟ್ಟೆ ಟಿ-ಶರ್ಟನ್ನು ತನ್ನ ಶೆಡ್ಡಿನಲ್ಲಿ ಬದಲಾಯಿಸುತ್ತಾರೆ. ಮಲ್ಲಿಗೆಗೆ ಅನೇಕ ಅಭಿಮಾನಿಗಳಿದ್ದಾರೆ. ಮತ್ತು ಇದು ಅನೇಕ ಕೀಟಗಳನ್ನು ಆಕರ್ಷಿಸುತ್ತದೆ. ತನ್ನ ಮಗನಲ್ಲಿ ಆಂತರಿಕ ತಜ್ಞರನ್ನು ಹೊಂದಿರುವ ಗಣಪತಿಯಂತಲ್ಲದೆ, ಪಾಂಡಿ ಅಂಗಡಿಗೆ ಹೋಗಿ ನಿರ್ದಿಷ್ಟ ರಾಸಾಯನಿಕಗಳನ್ನು ಪಡೆಯಬೇಕಾಗುತ್ತದೆ. ಅವರು ನೆಲದ ಮೇಲೆ ಬಿದ್ದಿರುವ ಬಳಸಿದ ಡಬ್ಬಿಗಳು ಮತ್ತು ಬಾಟಲಿಗಳನ್ನು ತೋರಿಸುತ್ತಾರೆ, ಮತ್ತು ಶೆಡ್ ಒಳಗಿನಿಂದ, ಟ್ಯಾಂಕ್ ಮತ್ತು ಸ್ಪ್ರೇಯರ್ ಹೊರಗೆ ತರುತ್ತಾರೆ ಮತ್ತು ರೋಗರ್ (ಕೀಟನಾಶಕ) ಮತ್ತು ಅಸ್ಥಾ (ರಸಗೊಬ್ಬರ) ಅನ್ನು ನೀರಿನೊಂದಿಗೆ ಬೆರೆಸುತ್ತಾರೆ. ಒಂದು ಎಕರೆಗೆ ಒಮ್ಮೆ ಚಿಕಿತ್ಸೆ ನೀಡಲು ಅವನಿಗೆ 500 ರೂಪಾಯಿಗಳು ಖರ್ಚಾಗುತ್ತವೆ ಮತ್ತು ಅವರು ಪ್ರತಿ ನಾಲ್ಕು ಅಥವಾ ಐದು ದಿನಗಳಿಗೊಮ್ಮೆ ಮಿಶ್ರಣವನ್ನು ಪುನರಾವರ್ತಿಸುತ್ತಾರೆ. "ನೀವು ಇದನ್ನು ಪೀಕ್ ಸೀಸನ್ ಮತ್ತು ಕಡಿಮೆ ಋತುವಿನಲ್ಲಿ ಮಾಡಬೇಕು. ಬೇರೆ ಆಯ್ಕೆ ಇಲ್ಲ..."

ಸುಮಾರು 25 ನಿಮಿಷಗಳ ಕಾಲ, ಮೂಗಿಗೆ ಬಟ್ಟೆಯ ಮಾಸ್ಕ್ ಧರಿಸಿ, ಅವರು ತಮ್ಮ ಸಸ್ಯಗಳಿಗೆ ಕೀಟನಾಶಕ ಮತ್ತು ರಸಗೊಬ್ಬರ ಬೆರೆಸಿದ ನೀರನ್ನು ಸುರಿದರು. ದಟ್ಟವಾದ ಪೊದೆಗಳ ನಡುವೆ ನಡೆಯುತ್ತಾರೆ, ಬೆನ್ನಿನ ಮೇಲೆ ಭಾರವಾದ ಕಾಂಟ್ರಾಪ್ಶನ್ ನೇತುಹಾಕಿಕೊಂಡಿದ್ದಾರೆ, ಶಕ್ತಿಯುತ ಸ್ಪ್ರೇಯರ್ ಪ್ರತಿ ಎಲೆ, ಸಸ್ಯ, ಹೂವು ಮತ್ತು ಮೊಗ್ಗಿಗೆ ಉತ್ತಮ ರೀತಿಯಲ್ಲಿ ಸ್ಪ್ರೇ ಮಾಡುತ್ತಾರೆ. ಸಸ್ಯಗಳು ಅವರ ಸೊಂಟದಷ್ಟು ಎತ್ತರವಾಗಿವೆ; ಹನಿಗಳು ಅವರ ಮುಖವನ್ನು ತಲುಪುತ್ತದೆ. ಯಂತ್ರವು ಸದ್ದು ಮಾಡುತ್ತದೆ, ಮತ್ತು ರಾಸಾಯನಿಕವು ಗಾಳಿಯಲ್ಲಿ ತೇಲಾಡುತ್ತದೆ. ಪಾಂಡಿ ನಡೆಯುತ್ತಲೇ ಇರುತ್ತಾರೆ ಮತ್ತು ಸಿಂಪಡಿಸುತ್ತಾರೆ, ಕ್ಯಾನ್ ತುಂಬಲು ಮಾತ್ರವೇ ನಿಲ್ಲುತ್ತಾರೆ.

ನಂತರ, ಅವರು ಸ್ನಾನ ಮಾಡಿ ಬಿಳಿ ಅಂಗಿ ಮತ್ತು ನೀಲಿ ಲುಂಗಿಯನ್ನು ಬದಲಾಯಿಸಿದ ನಂತರ, ರಾಸಾಯನಿಕಗಳಿಗೆ ಒಡ್ಡಿಕೊಳ್ಳುವುದರ ಬಗ್ಗೆ ನಾನು ಕೇಳುತ್ತೇನೆ. ಶಾಂತವಾಗಿ ಮಾತನಾಡುತ್ತಾ ನನಗೆ ಉತ್ತರಿಸುತ್ತಾರೆ: "ನೀವು ಮಲ್ಲಿಗೆ ಕೃಷಿಯಲ್ಲಿ ತೊಡಗಿದರೆ, ಏನು ಬೇಕಾದರೂ ಮಾಡಬೇಕಾಗುತ್ತದೆ. ನಿಮಗೆ ಸ್ಪ್ರೇ ಮಾಡಲು ಇಷ್ಟವಿಲ್ಲದಿದ್ದರೆ, ನೀವು ಮನೆಯಲ್ಲಿ ಕುಳಿತುಕೊಳ್ಳಬೇಕು." ಅವರು ಮಾತನಾಡುವಾಗ ತನ್ನ ಅಂಗೈಗಳನ್ನು ಒಟ್ಟಿಗೆ ಒತ್ತುತ್ತಾರೆ, ಪ್ರಾರ್ಥನೆಯಲ್ಲಿರುವಂತೆ.

ನಾವು ಹೊರಡುವಾಗ ಗಣಪತಿ ಅದೇ ಮಾತನ್ನು ಹೇಳುತ್ತಾರೆ. ಅವರು ನನ್ನ ಕೈಚೀಲವನ್ನು ಪೇರಳೆಗಳಿಂದ ತುಂಬಿಸುತ್ತಾರೆ, ನಮಗೆ ಉತ್ತಮ ಪ್ರಯಾಣವನ್ನು ಹಾರೈಸುತ್ತಾರೆ ಮತ್ತು ಮತ್ತೆ ಬರಲು ಹೇಳುತ್ತಾರೆ. "ಮುಂದಿನ ಬಾರಿ, ಈ ಮನೆ ಸಿದ್ಧವಾಗಲಿದೆ" ಎಂದು ಅವರು ತಮ್ಮ ಹಿಂದಿನ ಪ್ಲ್ಯಾಸ್ಟರ್ ಮಾಡದ ಇಟ್ಟಿಗೆ ಮನೆಯನ್ನು ತೋರಿಸುತ್ತಾರೆ. "ನಾವು ಇಲ್ಲಿ ಕುಳಿತು ದೊಡ್ಡ ಊಟ ಮಾಡೋಣ."

ಪಾಂಡಿ ಮತ್ತು ಗಣಪತಿ, ಸಾವಿರಾರು ಮಲ್ಲಿಗೆ ಬೆಳೆಗಾರರಂತೆ, ತಮ್ಮ ಭರವಸೆ ಮತ್ತು ಕನಸುಗಳನ್ನು ಸಣ್ಣ ಬಿಳಿ ಹೂವಿನ ಮೇಲೆ ನೆಟ್ಟಿದ್ದಾರೆ, ಸುವಾಸನೆ ಮತ್ತು ಸೊಗಸಾದ ಗತಕಾಲ, ಮತ್ತು ವ್ಯಾಪಾರವು ತೀವ್ರ ಮತ್ತು ಅಸ್ಥಿರವಾಗಿರುವ ಮಾರುಕಟ್ಟೆಗಳು, ಮತ್ತು ಐದು ನಿಮಿಷಗಳಲ್ಲಿ, ಸಾವಿರಾರು ರೂಪಾಯಿಗಳು - ಮತ್ತು ಕಿಲೋ ಮಧುರೈ ಮಲ್ಲಿ - ಕೈಗಳನ್ನು ಬದಲಾಯಿಸುತ್ತವೆ.

ಆದರೆ ಅದು ಇನ್ನೊಂದು ದಿನದ ಕಥೆ.

ಈ ಸಂಶೋಧನಾ ಅಧ್ಯಯನಕ್ಕೆ ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯವು ತನ್ನ ಸಂಶೋಧನಾ ಧನಸಹಾಯ ಕಾರ್ಯಕ್ರಮ 2020ರ ಭಾಗವಾಗಿ ಧನಸಹಾಯ ನೀಡಿರುತ್ತದೆ.

ಅನುವಾದ: ಶಂಕರ. ಎನ್. ಕೆಂಚನೂರು

Aparna Karthikeyan

Aparna Karthikeyan is an independent journalist, author and Senior Fellow, PARI. Her non-fiction book 'Nine Rupees an Hour' documents the disappearing livelihoods of Tamil Nadu. She has written five books for children. Aparna lives in Chennai with her family and dogs.

Other stories by Aparna Karthikeyan
Photographs : M. Palani Kumar

M. Palani Kumar is Staff Photographer at People's Archive of Rural India. He is interested in documenting the lives of working-class women and marginalised people. Palani has received the Amplify grant in 2021, and Samyak Drishti and Photo South Asia Grant in 2020. He received the first Dayanita Singh-PARI Documentary Photography Award in 2022. Palani was also the cinematographer of ‘Kakoos' (Toilet), a Tamil-language documentary exposing the practice of manual scavenging in Tamil Nadu.

Other stories by M. Palani Kumar

P. Sainath is Founder Editor, People's Archive of Rural India. He has been a rural reporter for decades and is the author of 'Everybody Loves a Good Drought' and 'The Last Heroes: Foot Soldiers of Indian Freedom'.

Other stories by P. Sainath
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru