ಅರುಣ್ ಜಾಧವ್ ಅವರ ಕೊಟ್ಟಿಗೆಯು ಕೇವಲ ಒಂದು ಹಸು ಮತ್ತು ಎಮ್ಮೆಯನ್ನು ಕಟ್ಟುವಷ್ಟಾಗುತ್ತದೆ. ಕಂಬಕ್ಕೆ ಕಟ್ಟಿರುವ ಜಾನುವಾರಗಳು ನಿರ್ಲಕ್ಷ್ಯಕ್ಕೊಳಗಾದಂತೆ ಕಾಣುತ್ತವೆ. "ಇದರ ಹಿಂದೆ ನನ್ನ ಇನ್ನೊಂದು ಶೆಡ್ ಇದೆ, ನನ್ನಲ್ಲಿರುವ ಶೆಡ್‌ಗಳ ಸಂಖ್ಯೆಯು ನನ್ನಲ್ಲಿರುವ ಜಾಣುವಾರುಗಳ ಸಂಖ್ಯೆಗೆ ಸಮಾನವಾಗಿದೆ. ಶೀಘ್ರದಲ್ಲೇ ನಾನು ಜಾನುವಾರುಗಳಿಗಿಂತಲೂ ಹೆಚ್ಚಿನ ಶೆಡ್‌ಗಳನ್ನು ಹೊಂದಿರುತ್ತೇನೆ“ ಎಂದು ಅರುಣ್ ಹೇಳುತ್ತಾರೆ.

ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ 39 ವರ್ಷದ  ಕಬ್ಬಿನ ಬೆಳೆಗಾರ ಅರುಣ್ ಒಮ್ಮೆ ತಮ್ಮ ಹಳ್ಳಿಯಾದ ಅಲ್ಸುಂದದಲ್ಲಿ ಏಳು ಹಸುಗಳು ಮತ್ತು ನಾಲ್ಕು ಎಮ್ಮೆಗಳನ್ನು ಸಾಕಿದ್ದರು. "ಕಳೆದ 15 ವರ್ಷಗಳಲ್ಲಿ ನಾನು ಅವುಗಳನ್ನು ಒಂದೊಂದಾಗಿ ಮಾರಾಟ ಮಾಡಿದ್ದೇನೆ. ನನಗೆ 10 ಎಕರೆ ಕಬ್ಬಿನ ಗದ್ದೆಯಿದೆ. ಹಾಲು ಉತ್ಪಾದನೆಯು ಸೈಡ್ ಬಿಸಿನೆಸ್ ಆಗಿದ್ದರಿಂದಾಗಿ ಒಂದು ರೀತಿ ಅನುಕೂಲಕರವಾಗಿತ್ತು. ಆದರೆ ಈಗ ಅದು ಒಂದು ರೀತಿ ನನ್ನ ಕುತ್ತಿಗೆಗೆ ಬಿಗಿದಿರುವ ಕುಣಿಕೆಯಾಗಿದೆ" ಎಂದು ಅವರು ಹೇಳುತ್ತಾರೆ.

ಸಾಂಗ್ಲಿಯು ಪಶ್ಚಿಮ ಮಹಾರಾಷ್ಟ್ರದಲ್ಲಿದೆ, ಇದು ಡೈರಿ ಉದ್ಯಮದ ಪ್ರಮುಖ ಕೇಂದ್ರವಾಗಿದೆ, ರಾಜ್ಯದ ಒಟ್ಟು ಹಾಲು ಉತ್ಪಾದನೆಯಲ್ಲಿ ಇದು ಶೇ 42ರಷ್ಟು ಪಾಲನ್ನು ಹೊಂದಿದೆ. ಇಲ್ಲಿ ಬಹುತೇಕ ರೈತರು ಹಸು ಮತ್ತು ಎಮ್ಮೆಗಳನ್ನು ಸಾಕುತ್ತಾರೆ. ಅರುಣ್ ಅವರಂತಹ ರೈತರಿಗೆ ಹಾಲು ಹೆಚ್ಚುವರಿ ಆದಾಯದ ಮೂಲವಾದರೆ, ಇತರರಿಗೆ ಇದು ಮುಖ್ಯ ಆಧಾರವಾಗಿದೆ. ಆದರೆ ಈಗ ಡೈರಿ ರೈತರ ಸಂಖ್ಯೆ ಕ್ಷೀಣಿಸುತ್ತಿದೆ, ಆರ್ಥಿಕ ಪರಿಸ್ಥಿತಿಯೂ ಕೂಡ ಅದಕ್ಕೆ ಹೊಂದಾಣಿಕೆಯಾಗುತ್ತಿಲ್ಲ ಎಂದು ಅವರು ಹೇಳುತ್ತಾರೆ.

ಈಗ ಸುಮಾರು ಒಂದು ದಶಕದಿಂದ, ಪಶ್ಚಿಮ ಮಹಾರಾಷ್ಟ್ರವು ಹಾಲಿನ ಬೆಲೆಯ ಏರಿಳಿತದ ವಿರುದ್ಧ ಡೈರಿ ರೈತರಿಂದ ಪುನರಾವರ್ತಿತ ಹೋರಾಟಗಳಿಗೆ ಸಾಕ್ಷಿಯಾಗಿದೆ. ಅವರು ತಮ್ಮ ಪ್ರತಿಭಟನೆಯ ಸಂಕೇತವಾಗಿ ಹಾಲನ್ನು ಚೆಲ್ಲುವುದರ ಮೂಲಕ ಪ್ರತಿರೋಧವನ್ನು ವ್ಯಕ್ತಪಡಿಸಿದ್ದಾರೆ. ಅನೇಕ ಪ್ರದರ್ಶನಗಳ ನೇತೃತ್ವ ವಹಿಸಿರುವ ಅಖಿಲ ಭಾರತೀಯ ಕಿಸಾನ್ ಸಭಾದ ಪ್ರಧಾನ ಕಾರ್ಯದರ್ಶಿ ಅಜಿತ್ ನವಲೆ, ಸಹಕಾರಿ ಸಂಸ್ಥೆಗಳು ಮತ್ತು ರಾಜ್ಯದಿಂದ ಹೆಚ್ಚಿನ ಪ್ರಮಾಣದಲ್ಲಿ ಹಾಲು ಖರೀದಿಸಿದಾಗ ಹಾಲಿನ ಬೆಲೆ ತುಲನಾತ್ಮಕವಾಗಿ ಸ್ಥಿರವಾಗಿತ್ತು ಎಂದು ಹೇಳುತ್ತಾರೆ. "ಖಾಸಗಿ ಕಂಪನಿಗಳು ಮಾರುಕಟ್ಟೆಯನ್ನು ಪ್ರವೇಶಿಸಿದಾಗಿನಿಂದ, ಸರ್ಕಾರದ ಪಾತ್ರವು ಈಗ ಕಡಿಮೆಯಾಗಿರುವುದಲ್ಲದೆ ಅದರ ಪರಿಣಾಮವು ಕೂಡ ಅಷ್ಟಾಗಿಲ್ಲ. ಅವರವರ ಇಚ್ಛೆಗೆ ತಕ್ಕಂತೆ ಬೆಲೆಗಳು ಏರುತ್ತವೆ ಮತ್ತು ಇಳಿಯುತ್ತವೆ" ಎಂದು ಅವರು ಹೇಳುತ್ತಾರೆ.

“ಖಾಸಗಿ ಉದ್ಯಮಿದಾರರು ಬೆಲೆಗಳನ್ನು ನಿಯಂತ್ರಿಸುವ ಮೂಲಕ ಲಾಭವನ್ನು ಗಳಿಸಿದ್ದಾರೆ. ನಾವು ಕೃಷಿ ಕಾನೂನುಗಳ ಬಗ್ಗೆಯೂ ಇದನ್ನೇ ಹೇಳುತ್ತಿದ್ದೇವೆ, “ಸೆಪ್ಟೆಂಬರ್ 2020 ರಲ್ಲಿ ಕೇಂದ್ರ ಸರ್ಕಾರವು ಪರಿಚಯಿಸಿದ ಮೂರು ಕೃಷಿ ಕಾನೂನುಗಳನ್ನು ಉಲ್ಲೇಖಿಸಿ ನವಲೆ ಹೇಳುತ್ತಾರೆ. ಕಳೆದ ವರ್ಷದಲ್ಲಿ ರೈತರ ಪ್ರತಿಭಟನೆಗಳು ( ಇದಕ್ಕೆ ಸಂಬಂಧಿಸಿದ PARI ಯ ಸಂಪೂರ್ಣ ವರದಿಯನ್ನು ನೋಡಿ ) ನವೆಂಬರ್ 29, 2021 ರಂದು ಸಂಸತ್ತಿನಲ್ಲಿ ಕಾನೂನುಗಳನ್ನು ಹಿಂತೆಗೆದುಕೊಳ್ಳಲು ಕಾರಣವಾಯಿತು.

Arun Jadhav outside his cowshed in Alsund
PHOTO • Parth M.N.
Buffaloes in a shed in the village. Farmers say they are riskier to rear
PHOTO • Parth M.N.

ಎಡ: ಅರುಣ್ ಜಾಧವ್ ಅಲ್ಸುಂದದಲ್ಲಿರುವ ಅವರ ಕೊಟ್ಟಿಗೆಯ ಹೊರಗೆ ಕುಳಿತಿರುವುದು. ಬಲ: ಹಳ್ಳಿಯ ಕೊಟ್ಟಿಗೆಯೊಂದರಲ್ಲಿರುವ ಎಮ್ಮೆಗಳು. ಅವುಗಳನ್ನು ಸಾಕುವುದು ಕಷ್ಟಕರ ಎನ್ನುತ್ತಾರೆ ರೈತರು

ಖಾಸಗಿ ಹೂಡಿಕೆಯ ಅಡಿಯಲ್ಲಿ ಹೈನುಗಾರಿಕೆ ಕ್ಷೇತ್ರವು ಅಭಿವೃದ್ಧಿ ಹೊಂದಬೇಕಿತ್ತು ಎಂದು ಅಹ್ಮದ್‌ನಗರ ನಗರದಲ್ಲಿ ನೆಲೆಸಿರುವ ನವಲೆ ಅವರು ಹೇಳುತ್ತಾರೆ. ”ಮಹಾರಾಷ್ಟ್ರದ ಹಾಲಿನ ವಲಯದಲ್ಲಿ 300ಕ್ಕೂ ಹೆಚ್ಚು ಬ್ರಾಂಡ್‌ಗಳು ಕಾರ್ಯನಿರ್ವಹಿಸುತ್ತಿವೆ. ಹಾಗೆ ನೋಡಿದರೆ ಈ ರೀತಿ ಸ್ಪರ್ಧೆಯು ರೈತರ ಹಾಲಿನ ದರದಲ್ಲಿ ಹೆಚ್ಚಳಕ್ಕೆ ಕಾರಣವಾಗಬೇಕಾಗಿತ್ತು, ಆದರೆ ವಾಸ್ತವದಲ್ಲಿ ಹಾಗಾಗಿಲ್ಲ” ಎಂದು ಅವರು ಹೇಳುತ್ತಾರೆ.ಅದರ ಬದಲಾಗಿ,  ಈಗ ಹೈನುಗಾರರು ಹಾಲಿನ ಬೆಲೆಯಲ್ಲಿ ನಾಟಕೀಯ ಏರಿಳಿತಗಳನ್ನು ಸಹಿಸಿಕೊಳ್ಳಬೇಕಾಗಿದೆ, ಈ ಏರಿಳಿತ ಈಗ ಪ್ರತಿ ಲೀಟರ್ ಗೆ 17 ರೂ.ದಿಂದ 32 ರೂ.ವರೆಗೆ ಇದೆ.

ಸೆಪ್ಟೆಂಬರ್ 2021ರಲ್ಲಿ ಮಾರುಕಟ್ಟೆ ಸಂಶೋಧನಾ ಸಂಸ್ಥೆ ಕ್ರಿಸಿಲ್ ನಡೆಸಿದ ಅಧ್ಯಯನದ ಪ್ರಕಾರ , ಮಹಾರಾಷ್ಟ್ರದ ಖಾಸಗಿ ಡೈರಿಗಳು ದಿನಕ್ಕೆ 123-127 ಲಕ್ಷ ಲೀಟರ್ ಸಂಗ್ರಹಿಸುತ್ತವೆ, ಆದರೆ ಸಹಕಾರಿ ಡೈರಿಗಳು 36-38 ಲಕ್ಷ ಲೀಟರ್ ಸಂಗ್ರಹಿಸುತ್ತವೆ. 1991ರಲ್ಲಿ ಉದಾರೀಕರಣದ ನಂತರ ಡೈರಿ ಉದ್ಯಮವನ್ನು ಪರವಾನಿಗೆ ಮುಕ್ತಗೊಳಿಸಲಾಗಿದೆ. ಹಾಲು ಮತ್ತು ಹಾಲಿನ ಉತ್ಪನ್ನಗಳ ಉತ್ಪಾದನೆ, ಸಂಸ್ಕರಣೆ ಮತ್ತು ವಿತರಣೆಯನ್ನು ನಿಯಂತ್ರಿಸಲು ಹಾಲು ಮತ್ತು ಹಾಲಿನ ಉತ್ಪನ್ನ ಆದೇಶವನ್ನು 1992 ರಲ್ಲಿ ಪರಿಚಯಿಸಲಾಯಿತು. ಆದರೆ 2002ರಲ್ಲಿ, ಹಾಲು ಸಂಸ್ಕರಣಾ ಸಾಮರ್ಥ್ಯದ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಲು ತಿದ್ದುಪಡಿ ಮಾಡಲಾಯಿತು, ಇದು ಬೆಲೆಯ ಅಸ್ಥಿರತೆಯನ್ನು ಹೆಚ್ಚಿಸಲಿಕ್ಕೆ ಕಾರಣವಾಯಿತು.

ಪುಣೆ ಜಿಲ್ಲೆಯ ಶಿರೂರು ಪಟ್ಟಣದಲ್ಲಿರುವ ಖಾಸಗಿ ಡೈರಿ ಉತ್ಪನ್ನಗಳ ಕಂಪನಿ ಉರ್ಜಾ ಮಿಲ್ಕ್‌ನ ಜನರಲ್ ಮ್ಯಾನೇಜರ್ ಪ್ರಕಾಶ್ ಕುತ್ವಾಲ್, ಮಹಾರಾಷ್ಟ್ರದ ಹೈನುಗಾರರಿಗೆ ಖಾಸಗಿ ಹೂಡಿಕೆಯಿಂದಾಗಿ ಅನುಕೂಲವಾಗದೇ ಇರುವ ಕುರಿತಾಗಿ ವಿವರಿಸುತ್ತಾರೆ. "ಈ ಮುಂಚೆ, ಡೈರಿ ವ್ಯವಹಾರದಲ್ಲಿ ತೊಡಗಿಸಿಕೊಂಡವರು ಚೀಲದ ಪ್ಯಾಕಿಂಗ್ ಮೇಲೆ ಕೇಂದ್ರೀಕರಿಸಿದ್ದರು ಮತ್ತು ದರಗಳು ಕನಿಷ್ಠ ಆರು ತಿಂಗಳವರೆಗೆ ಸ್ಥಿರವಾಗಿರುತ್ತಿದ್ದವು. ಇದು ರೈತರಿಗೆ ಮತ್ತು ಗ್ರಾಹಕರಿಗೆ ಸಾಕಷ್ಟು ಅನುಕೂಲಕರವಾಗಿತ್ತು.” ಆದರೆ ಉದಾರೀಕರಣದ ವ್ಯವಸ್ಥೆ ಜಾರಿಗೆ ಬಂದ ನಂತರ, ಜಾಗತಿಕ ಡೈರಿ ಮಾರುಕಟ್ಟೆಯಲ್ಲಿ ಕೆನೆರಹಿತ ಹಾಲಿನ ಪುಡಿ ಬೆಲೆಗಳಲ್ಲಿನ ಏರಿಳಿತಗಳಿಂದ ಈಗ ದರಗಳು ಪ್ರಭಾವಿತವಾಗಿವೆ.

ಹಾಲಿನ ಉತ್ಪನ್ನಗಳ ತಯಾರಕರಿಗೆ ಸರಬರಾಜು ಮಾಡುವ ಹಾಲಿನ ಪುಡಿ ಘಟಕಗಳು - ಉದಾರೀಕರಣದ ನಂತರ ಭಾರತೀಯ ಮಾರುಕಟ್ಟೆಯಲ್ಲಿ ಬೆಳೆದವು "ಹಾಲಿನ ಪುಡಿ ಮತ್ತು ಬೆಣ್ಣೆ ಪದಾರ್ಥಗಳಲ್ಲಿ ವ್ಯವಹರಿಸುವ ಕಂಪನಿ ದರಗಳು ಪ್ರತಿ ವಾರ ಏರಿಳಿತಗೊಳ್ಳುತ್ತವೆ, ಇದು ಪ್ರತಿ 10 ದಿನಗಳಿಗೊಮ್ಮೆ ಹಾಲಿನ ದರದಲ್ಲಿ ಏರಿಳಿತವನ್ನು ಉಂಟುಮಾಡುತ್ತದೆ, ಇದೊಂದು ಜೂಜಾಟದ ವ್ಯವಸ್ಥೆಯಾಗಿದೆ” ಎಂದು ಕುತ್ವಾಲ್ ಹೇಳುತ್ತಾರೆ. “ದೊಡ್ಡ ಬ್ರ್ಯಾಂಡ್‌ಗಳು ಹಾಲಿನ ದರವನ್ನು ನಿಯಂತ್ರಿಸುತ್ತವೆ. ಅವರಿಗೆ ಅದಕ್ಕೆ ಪೂರಕವಾಗಿ ರಾಜಕೀಯ ಬೆಂಬಲವೂ ಇದೆ. ಆದರೆ ರೈತರು ತಮ್ಮ ಉತ್ಪಾದನಾ ವೆಚ್ಚವನ್ನು ಮರುಪಡೆಯುತ್ತಿದ್ದಾರೆಯೇ ಎನ್ನುವುದರ ಬಗ್ಗೆ ಯಾರೂ ಯೋಚಿಸಲು ಹೋಗುವುದಿಲ್ಲ" ಎನ್ನುತ್ತಾರೆ.

Milk production used to be a convenient side business for sugarcane farmers like Arun Jadhav.
PHOTO • Parth M.N.
Arun's mother, Mangal , outside their hut
PHOTO • Parth M.N.

ಎಡಕ್ಕೆ: ಅರುಣ್ ಜಾಧವ್ ಅವರಂತಹ ಕಬ್ಬು ರೈತರಿಗೆ ಹಾಲು ಉತ್ಪಾದನೆ ಒಂದೇ ರೀತಿ ಸೈಡ್ ಬಿಸಿನೆಸ್ ತರ ಅನುಕೂಲಕರವಾಗಿತ್ತು. ಬಲ: ಅರುಣ್ ಅವರ ತಾಯಿ ಮಂಗಲ್, ಅವರ ಗುಡಿಸಲಿನ ಹೊರಗೆ ಕುಳಿತಿರುವುದು

ಒಂದು ಹಾಲುಣಿಸುವ ಹಸು ದಿನಕ್ಕೆ 11-12 ಲೀಟರ್ ಹಾಲು ನೀಡುತ್ತದೆ. ಅದರ ನಂತರ, ಅದು ಎಂಟು ಲೀಟರ್‌ಗೆ ಇಳಿಯುತ್ತದೆ, ”ಎಂದು ಅರುಣ್‌ನ 65 ವರ್ಷದ ತಾಯಿ ಮಂಗಲ್ ಹೇಳುತ್ತಾರೆ. ''ಹಾಲು ಪ್ರತಿ ಲೀಟರ್‌ಗೆ 24-25 ರೂ.ಗೆ ಮಾರಾಟವಾಗುತ್ತದೆ.ಹಸುವಿಗೆ ಪ್ರತಿ ದಿನ ನಾಲ್ಕು ಕಿಲೋ ಜಾನುವಾರು ಮೇವು ಖರೀದಿಸಬೇಕು.ಅದಕ್ಕೆ ಪ್ರತಿ ಕಿಲೋಗೆ 22-28, ರೂ" ಎಂದು ಅವರು ಹೇಳುತ್ತಾರೆ.

ಅರುಣ್ ದಿನಕ್ಕೆ ಸರಾಸರಿ 10 ಲೀಟರ್ ಹಸುವಿನ ಹಾಲು ಮಾರಾಟದಿಂದ  250 ರೂ ಸಂಪಾದಿಸುತ್ತಾರೆ. “ನಾನು ಕಡಿಮೆ ದರದ ಮೇವು ಹಾಕಿದರೂ ದಿನಕ್ಕೆ 88 ರೂಪಾಯಿಗಳನ್ನು ಖರ್ಚು ಮಾಡುತ್ತೇನೆ. ಅದು ಸುಮಾರು 160 ಲಾಭವನ್ನು ನೀಡುತ್ತದೆ. ಮತ್ತು ನಾವು ಹಸುಗಳಿಗೆ ಮಾಡಿರುವ ಔಷಧೀಯ ವೆಚ್ಚವನ್ನು ನಾನು ಲೆಕ್ಕಿಸುತ್ತಿಲ್ಲ. ಅದೇ ನಾನು ಇನ್ನ್ಯಾರದ್ದೋ ಹೊಲದಲ್ಲಿ ನಾನು ಕೃಷಿ ಕೂಲಿ ಕಾರ್ಮಿಕನಾಗಿ ದುಡಿದರೆ ನನಗೆ ದಿನಕ್ಕೆ 300 ರೂಪಾಯಿ ಸಿಗುತ್ತದೆ” ಎಂದು ಹೇಳುತ್ತಾರೆ.

ಎಮ್ಮೆಗಳನ್ನು ಸಾಕುವುದು ಅಪಾಯಕಾರಿ ಎಂದು ಅಲ್ಸುಂದದ 28 ವರ್ಷದ ಕಬ್ಬು ಬೆಳೆಗಾರರಾದ ಭರತ್ ಜಾಧವ್ ಹೇಳುತ್ತಾರೆ. ಸಾಮಾನ್ಯವಾಗಿ ಪ್ರಾಣಿಗಳು ಸಹಿತ 4-5 ತಿಂಗಳುಗಳವರೆಗೆ ಅನುತ್ಪಾದಕ ಹಂತವನ್ನು ಎದುರಿಸುತ್ತವೆ. "ಆದಾಗ್ಯೂ ನಾವು ಅದನ್ನು ಸಂಬಾಳಿಸಬೇಕು," ಅವರು ಹೇಳುತ್ತಾರೆ. ಎಮ್ಮೆ ಹಾಲು ಲೀಟರ್‌ಗೆ 35 ರೂಪಾಯಿಗೆ ಮಾರಾಟವಾಗುತ್ತಿದೆ. ಆದರೆ ಎಮ್ಮೆಗಳು ದಿನಕ್ಕೆ ಆರು ಲೀಟರ್‌ಗಿಂತ ಹೆಚ್ಚು ಹಾಲು ನೀಡುವುದಿಲ್ಲ. ಬೆಲೆಯ ಏರಿಳಿತಗಳು ಭರತ್‌ಗೆ ಆತಂಕವನ್ನುಂಟು ಮಾಡುತ್ತಿದ್ದವು, ಆದ್ದರಿಂದ ಅವರು ಇನ್ನು ಮುಂದೆ ಹಾಲು ಮಾರಾಟ ಮಾಡುವುದಿಲ್ಲ ಎಂದು ಹೇಳುತ್ತಿದ್ದರು. “ನನ್ನ ಬಳಿ ನಾಲ್ಕು ಎಮ್ಮೆಗಳಿದ್ದವು. ನಾನು ಅವುಗಳನ್ನು ಎರಡು ವರ್ಷಗಳ ಹಿಂದೆ ಕಡಿಮೆ ಬೆಲೆಗೆ ಮಾರಾಟ ಮಾಡಿದೆ” ಎಂದು ಹೇಳುತ್ತಾರೆ.

ಮಹಾರಾಷ್ಟ್ರದಲ್ಲಿ ಹಾಲಿನ ಉತ್ಪಾದನೆಯು 2001-02 ರಿಂದ 2018-19 ರವರೆಗೆ ಶೇಕಡಾ 91 ರಷ್ಟು ಹೆಚ್ಚಾಗಿದೆ. ಇದು 2001-02 ರಲ್ಲಿ 6,094,000 ಟನ್‌ಗಳಷ್ಟಿತ್ತು ಮತ್ತು 2018-19 ರಲ್ಲಿ 11,655,000 ಟನ್‌ಗಳಿಗೆ ಏರಿತು. ಇದನ್ನು ಗುಜರಾತಿನಲ್ಲಿರುವ ಸ್ಥಿತಿಗೆ ಹೋಲಿಸಿದರೆ ಅಲ್ಲಿ ಹಾಲಿನ ರೈತರು ತುಲನಾತ್ಮಕವಾಗಿ ಉತ್ತಮವಾಗಿದ್ದಾರೆ, 2001-02 ಮತ್ತು 2018-19 ರ ನಡುವೆ ಹಾಲಿನ ಉತ್ಪಾದನೆಯು ಶೇ 147 ರಷ್ಟು ಬೆಳೆದಿದೆ.ಮಹಾರಾಷ್ಟ್ರಕ್ಕಿಂತ ಭಿನ್ನವಾಗಿ, 300 ಕ್ಕೂ ಹೆಚ್ಚು ಹಾಲು-ಸಂಗ್ರಹಿಸುವ ಬ್ರ್ಯಾಂಡ್‌ಗಳು ಅಲ್ಲಿ ಕಾರ್ಯನಿರ್ವಹಿಸುತ್ತವೆ, ಆ ರಾಜ್ಯದಲ್ಲಿ ಹೆಚ್ಚಿನ ಹಾಲನ್ನು ಅಮುಲ್ ಬ್ರಾಂಡ್‌ನಿಂದ ಸಂಗ್ರಹಿಸಲಾಗುತ್ತದೆ.

ಮಹಾರಾಷ್ಟ್ರದ ಡೈರಿ ವಲಯದಲ್ಲಿನ ಅವ್ಯವಸ್ಥೆಗೆ ಸಮನ್ವಯದ ಕೊರತೆಯೇ ಕಾರಣ ಎಂದು ಉದ್ಯಮದ ಮುಖ್ಯಸ್ಥರು ಹೇಳುತ್ತಾರೆ. ಉತ್ತಮ ಸಂಘಟನೆಗಾಗಿ ಅವರ ಬೇಡಿಕೆಗೆ ಪ್ರತಿಕ್ರಿಯಿಸಿ, ಫೆಬ್ರವರಿ 2020ರಲ್ಲಿ, ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಸರ್ಕಾರಕ್ಕೆ ಸಲಹೆ ನೀಡಲು ಖಾಸಗಿ ಮತ್ತು ಸಹಕಾರಿ ಡೈರಿಗಳ ಪ್ರತಿನಿಧಿಗಳನ್ನು ಒಳಗೊಂಡ ಸಲಹಾ ಸಮಿತಿಯನ್ನು ರಚಿಸಿದರು.

The empty shed at Bharat Jadhav's home.
PHOTO • Parth M.N.
Bharat sold all his buffaloes two years ago
PHOTO • Parth M.N.

ಭರತ್ ಜಾಧವ್ ಅವರ ಮನೆಯಲ್ಲಿರುವ ಖಾಲಿ ಶೆಡ್ (ಎಡ). ಭರತ್ (ಬಲಗಡೆ, ಬೈಕ್ ಓಡಿಸುತ್ತಿದ್ದ) ಎರಡು ವರ್ಷಗಳ ಹಿಂದೆ ತಮ್ಮೆಲ್ಲಾ ಎಮ್ಮೆಗಳನ್ನು ಮಾರಿದ್ದರು

“ಇಂದು, ಹಾಲಿನ ವ್ಯಾಪಾರದಲ್ಲಿ ಮೂರು ಕ್ಷೇತ್ರಗಳು ಕಾರ್ಯನಿರ್ವಹಿಸುತ್ತಿವೆ: ಸಹಕಾರಿ, ರಾಜ್ಯ ಮತ್ತು ಖಾಸಗಿ,” ಎಂದು ಸಮಿತಿಯ ಸದಸ್ಯರಾಗಿರುವ ಕುತ್ವಾಲ್ ಹೇಳುತ್ತಾರೆ. “ಉತ್ಪಾದಿಸುವ ಹಾಲನ್ನು ಶೇಕಡಾ 70 ಕ್ಕಿಂತ ಹೆಚ್ಚು ಖಾಸಗಿ ಕಂಪನಿಗಳು ಸಂಗ್ರಹಿಸುತ್ತವೆ. ಉಳಿದದ್ದನ್ನು ಸಹಕಾರಿ ಸಂಘಗಳು ಸಂಗ್ರಹಿಸುತ್ತವೆ. ರಾಜ್ಯವು ಅತ್ಯಲ್ಪ ಉಪಸ್ಥಿತಿಯನ್ನು ಹೊಂದಿದೆ. ಪ್ರತಿ ಬಾರಿ ಹಾಲಿನ ದರವು 20 ರೂ.ಗಿಂತ ಕಡಿಮೆಯಾಗಿರುತ್ತದೆ. ಸರ್ಕಾರವು ತಾತ್ಕಾಲಿಕವಾಗಿ ಮಧ್ಯಪ್ರವೇಶಿಸುವುದರ ಮೂಲಕ ರೈತರು ತಮ್ಮ ವಿರುದ್ಧ ಮತ ಚಲಾಯಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಸಬ್ಸಿಡಿಗಳನ್ನು ಘೋಷಿಸುತ್ತದೆ. ಸಣ್ಣ ಖಾಸಗಿ ಘಟಕಗಳು ಹಾಲಿನ ಬೆಲೆಯ ಮೇಲೆ ಪ್ರಭಾವ ಬೀರುತ್ತವೆ” ಎಂದು ಖಾಸಗಿ ಮತ್ತು ಸಹಕಾರಿ ಹಾಲಿನ ವ್ಯಾಪಾರಿಗಳನ್ನು ಒಳಗೊಂಡಿರುವ ಹಾಲು ಉತ್ಪಾದಕರ ಮತ್ತು ಸಂಸ್ಕರಣೆದಾರರ ಕಲ್ಯಾಣ ಒಕ್ಕೂಟದ ಕಾರ್ಯದರ್ಶಿಯೂ ಆಗಿರುವ ಕುತ್ವಾಲ್ ಹೇಳುತ್ತಾರೆ.

ಖಾಸಗಿ ಕಂಪನಿಗಳೊಂದಿಗಿನ ಅವರ ಅನುಭವಗಳು ಪಶ್ಚಿಮ ಮಹಾರಾಷ್ಟ್ರದ ಡೈರಿ ಉತ್ಪಾದಕರು ರೈತರ ಚಳುವಳಿಯನ್ನು ಬೆಂಬಲಿಸುವಂತೆ ಮಾಡಿದೆ. ಈ ಚಳುವಳಿಯು ನವೆಂಬರ್ 2020 ರಲ್ಲಿ ಕೃಷಿ ಕ್ಷೇತ್ರವನ್ನು ಉದಾರೀಕರಣಗೊಳಿಸಲು ಬಯಸುವ ಕಾನೂನುಗಳ ವಿರುದ್ಧ  ಪ್ರಾರಂಭವಾಯಿತು.

ಖಾನಾಪುರ ತಹಶೀಲ್‌ನಲ್ಲಿರುವ ಅಲ್ಸುಂದನಿಂದ 15 ಕಿಲೋಮೀಟರ್ ದೂರದಲ್ಲಿರುವ ವಿಟಾ ಪಟ್ಟಣದಲ್ಲಿ ಟಿಕ್ ಟಾಕ್ ಎಂಬ ಸಣ್ಣ ಕೆಫೆಯನ್ನು ನಡೆಸುತ್ತಿರುವ 29 ವರ್ಷದ ರಾಹುಲ್ ಗಲಾಂದೆ, ನನ್ನ ಕೈಯಲ್ಲಿದ್ದ ಪೆನ್ನನ್ನು ತೋರಿಸುತ್ತಾ, “ನೀವು ಇದನ್ನು ಎಷ್ಟು ಬೆಲೆಗೆ ಖರೀದಿಸಿದ್ದೀರಿ. ?" ಎಂದು ಕೇಳಿದರು.

“ನಾನು '500' ರೂ. ಎಂದೆ”.

“ಈ ಪೆನ್ನಿನ ಬೆಲೆಯನ್ನು ಯಾರು ನಿರ್ಧರಿಸುತ್ತಾರೆ ಹೇಳಿ?”ಎಂದು ಅವರು ನನ್ನನ್ನು ಕೇಳಿದರು.

“ಇದನ್ನು ಉತ್ಪಾದಿಸಿದ ಕಂಪನಿ” ಎಂದು ಉತ್ತರಿಸಿದೆ.

"ಕಂಪನಿಯು ತಾನು ತಯಾರಿಸಿದ ಪೆನ್‌ಗೆ ಎಷ್ಟು ಶುಲ್ಕ ವಿಧಿಸಬೇಕೆಂದು ನಿರ್ಧರಿಸಿಸುವುದಾದಲ್ಲಿ, ನಾವು ನಮ್ಮ ಶ್ರಮದಿಂದ ಉತ್ಪಾದಿಸುವ ಹಾಲಿನ ಬೆಲೆಯನ್ನೇಕೆ ನಿರ್ಧರಿಸಬಾರದು? ನನ್ನ ಉತ್ಪನ್ನದ ಮೌಲ್ಯವನ್ನು ಖಾಸಗಿ ಕಂಪನಿಯು ನಿರ್ಧರಿಸುತ್ತಿರುವುದೇಕೆ?” ಎಂದು ಗಲಾಂದೆ ಪ್ರಶ್ನಿಸಿದರು."ಇಲ್ಲಿ ಹಾಲು 25 ರೂ.ಗೆ ಮಾರಾಟವಾಗುತ್ತದೆ. ಸ್ವಲ್ಪ ಸಮಯದ ಹಿಂದೆ [2020 ರಲ್ಲಿ ಕೋವಿಡ್ -19 ಲಾಕ್‌ಡೌನ್ ಸಮಯದಲ್ಲಿ], ಇದು ಪ್ರತಿ ಲೀಟರ್‌ಗೆ 17 ರೂ. ಆಗಿತ್ತು, ಆದರೆ ಅದೇ ಬಿಸ್ಲೇರಿ ಬಾಟಲಿಯನ್ನು 20 ರೂ.ಗೆ ಮಾರಾಟ ಮಾಡಲಾಗುತ್ತದೆ. ಹೀಗಾದರೆ ನಾವೇಗೆ ಬದಕಬೇಕು ಹೇಳಿ?" ಎಂದು ಪ್ರಶ್ನಿಸುತ್ತಾರೆ.

Rahul Galande says farmers should get to decide the prices of the milk they produce.
PHOTO • Parth M.N.
Cans of milk at Arun Jadhav's shop. More than 70 per cent of the milk produced in Sangli is procured by private companies
PHOTO • Parth M.N.

ಎಡ: ರೈತರು ತಾವು ಉತ್ಪಾದಿಸುವ ಹಾಲಿನ ಬೆಲೆಯನ್ನು ನಿರ್ಧರಿಸಬೇಕು ಎಂದು ರಾಹುಲ್ ಗಲಾಂದೆ ಹೇಳುತ್ತಾರೆ. ಬಲ: ಅರುಣ್ ಜಾಧವ್ ಅವರ ಅಂಗಡಿಯಲ್ಲಿ ಹಾಲಿನ ಕ್ಯಾನ್‌ಗಳು. ಸಾಂಗಲಿಯಲ್ಲಿ ಉತ್ಪಾದನೆಯಾಗುವ ಹಾಲನ್ನು ಶೇ. 70ಕ್ಕೂ ಹೆಚ್ಚು ಖಾಸಗಿ ಕಂಪನಿಗಳು ಖರೀದಿಸುತ್ತವೆ

ಹಾಲಿನ ರೈತರು ಜೀವನ ನಿರ್ವಹಣೆಗೆ ಪ್ರಯತ್ನಿಸುತ್ತಿದ್ದರೆ, ಕೃಷಿ ಉದ್ಯಮವು ಅಭಿವೃದ್ಧಿ ಹೊಂದುತ್ತಿದೆ ಎಂದು ಅರುಣ್ ಹೇಳುತ್ತಾರೆ. "ದನಗಳ ಮೇವಿನ ಬೆಲೆ ಹೆಚ್ಚುತ್ತಲೇ ಇದೆ. ರಸಗೊಬ್ಬರಗಳು, ಕೀಟನಾಶಕಗಳು ಕೂಡ ದುಬಾರಿಯಾಗುತ್ತಿವೆ. ಆದರೆ ಅದೇ ನಿಯಮ ಹಾಲಿಗೆ ಅನ್ವಯಿಸುವುದಿಲ್ಲ” ಎಂದು ನಿರಾಸೆ ವ್ಯಕ್ತಪಡಿಸುತ್ತಾರೆ.

ಹಾಲಿನ ರೈತರು ಖಚಿತ ಬೆಲೆ ಇಲ್ಲದ ಕಾರಣ ಸಂಕಷ್ಟದಲ್ಲಿದ್ದಾರೆ ಎಂದು ಗಲಾಂದೆ ಹೇಳುತ್ತಾರೆ. “ರೈತರು ಕಬ್ಬನ್ನು ಬೆಳೆಯುತ್ತಿರುವುದೇಕೆ ಹೇಳಿ?” ಎಂದು ಅವರು ಪ್ರಶ್ನಿಸುತ್ತಾ ಅದಕ್ಕೆ ಅವರು ಸ್ವಯಂ ಉತ್ತರಿಸುತ್ತಿದ್ದರು. “ಏಕೆಂದರೆ ಇದು ಖಚಿತವಾದ ಮಾರುಕಟ್ಟೆಯನ್ನು ಹೊಂದಿದೆ ಮತ್ತು ಖಚಿತವಾದ ಬೆಲೆಯನ್ನು ಹೊಂದಿದೆ. ಸರ್ಕಾರ ನಿಗದಿಪಡಿಸಿದ ಬೆಂಬಲ ಬೆಲೆಯೊಂದಿಗೆ ನಮಗೆ ಹಾಲಿಗೆ ಇದೇ ರೀತಿಯ ಭರವಸೆ ಬೇಕು. ಕೃಷಿ ಕಾನೂನುಗಳಿಂದಾಗಿ ದೆಹಲಿಯ ರೈತರು ಕಳೆದುಕೊಳ್ಳುವುದು ಇದನ್ನೇ. ಒಮ್ಮೆ ನೀವು ಖಾಸಗಿ ಕಂಪನಿಗಳನ್ನು ನಿಯಂತ್ರಣವಿಲ್ಲದೆ ಪ್ರವೇಶಿಸಲು ಅವಕಾಶ ಮಾಡಿಕೊಟ್ಟರೆ, ಮಹಾರಾಷ್ಟ್ರದ ಡೈರಿ ರೈತರು ಎದುರಿಸುತ್ತಿರುವ ಸಮಸ್ಯೆಯನ್ನೇ ದೇಶಾದ್ಯಂತ ಉಳಿದ ರೈತರು ಎದುರಿಸಬೇಕಾಗುತ್ತದೆ” ಎನ್ನುತ್ತಾರೆ.

“ಸಹಕಾರಿ ಕ್ಷೇತ್ರಕ್ಕೆ ಸರ್ಕಾರವು ಮಧ್ಯಪ್ರವೇಶಿಸಿ ಹಾಲಿನ ಬೆಲೆಯನ್ನು ಸ್ಥಿರಗೊಳಿಸಬಹುದು ಎಂದು ನವಲೆ ಹೇಳುತ್ತಾರೆ. ಆದರೆ ಖಾಸಗಿ ಕಂಪನಿಗಳು ಏನು ಮಾಡುತ್ತವೆ ಎಂಬುದರ ಬಗ್ಗೆ ಅದು ಹೇಳುವುದಿಲ್ಲ" ಎಂದು ಅವರು ಹೇಳುತ್ತಾರೆ. "ಮತ್ತು ಹೆಚ್ಚಿನ ಹಾಲನ್ನು ಖಾಸಗಿ ಕಂಪನಿಗಳು ಸಂಗ್ರಹಿಸುವುದರಿಂದ, ಸರ್ಕಾರವು ರೈತರಿಗೆ ಸಹಾಯ ಮಾಡುವುದು ಅಷ್ಟಕಷ್ಟೇ. ಹಾಲು ಸಂಗ್ರಹಿಸುವ ಬ್ರ್ಯಾಂಡ್‌ಗಳು ತಮ್ಮ ಪ್ರಭಾವವನ್ನು ಚಲಾಯಿಸುತ್ತವೆ ಮತ್ತು ದರಗಳು ಹೆಚ್ಚಾಗದಂತೆ ನೋಡಿಕೊಳ್ಳುತ್ತವೆ. ಅವರು ಮಾರುಕಟ್ಟೆಯನ್ನು ನಿಯಂತ್ರಿಸುತ್ತಾರೆ ಮತ್ತು ಇದರಿಂದಾಗಿ ಅವರು ಗಮನಾರ್ಹ ಲಾಭವನ್ನು ಗಳಿಸುತ್ತಾರೆ.

ಮಾರ್ಚ್ 2020ರಲ್ಲಿ ಕೋವಿಡ್ -19 ಲಾಕ್‌ಡೌನ್‌ಗೂ ಸ್ವಲ್ಪ ಮುಂಚೆ ರೈತರು ಹಸುವಿನ ಹಾಲನ್ನು ಪ್ರತಿ ಲೀಟರ್‌ಗೆ 29 ರೂ.ಗೆ ಮಾರುತ್ತಿದ್ದರು, ಅದನ್ನೇ ಮುಂಬೈನಲ್ಲಿ  60 ರೂ.ಗೆ ಮಾರುತ್ತಾರೆ" ಎಂದು ನನಗೆ ಹೇಳಿದರು. "ಲಾಕ್‌ಡೌನ್ ನಂತರ, ಬೆಲೆಗಳು ಕುಸಿದವು ಮತ್ತು ರೈತರು ತಮ್ಮ ಹಸುವಿನ ಹಾಲನ್ನು 17 ರೂಪಾಯಿಗಳಿಗೆ ಮಾರಾಟ ಮಾಡಿದರು. ಮುಂಬೈನಲ್ಲಿ ನೀವು ಅದನ್ನು 60 ರೂಪಾಯಿಗೆ ಸಂಗ್ರಹಿಸುವುದನ್ನು ಮುಂದುವರಿಸಿದ್ದೀರಿ. ಈ ವ್ಯವಸ್ಥೆಯಿಂದ ನಿಖರವಾಗಿ ಯಾರು ಪ್ರಯೋಜನ ಪಡೆಯುತ್ತಿದ್ದಾರೆ ಗೊತ್ತೇ?  ಆದರೆ ಅದನ್ನು ಪಡೆಯುತ್ತಿರುವವರು ಮಾತ್ರ ಖಂಡಿತಾ ರೈತರಲ್ಲ.

ಅನುವಾದ: ಎನ್. ಮಂಜುನಾಥ್

Parth M.N.

Parth M.N. is a 2017 PARI Fellow and an independent journalist reporting for various news websites. He loves cricket and travelling.

Other stories by Parth M.N.
Translator : N. Manjunath