ಸಪ್ಟೆಂಬರ್ 19, 2017 ರಂದು 40 ರ ಆಸುಪಾಸಿನ ಕಾರ್ಮಿಕನಾದ ಬಂದು ಸೋನುಲೆ ಎಂಬಾತ ಆಮ್ಡಿ ಹಳ್ಳಿಯ ತನ್ನ ಧಣಿಯ ಹತ್ತಿಯ ಹೊಲದಲ್ಲಿ ಏಕಾಏಕಿ ಉರುಳಿಬಿದ್ದಿದ್ದ. ಕಳೆದ ಹಲವು ದಿನಗಳಿಂದ ಇತರ ಹೊಲಗಳಲ್ಲಿ ಮಾಡುತ್ತಿರುವಂತೆ ಅಂದೂ ಕೂಡ ಆ ರಣಬಿಸಿಲಿನಲ್ಲಿ ಆತ ಹತ್ತಿಯ ಗಿಡಗಳಿಗೆ ಕೀಟನಾಶಕಗಳನ್ನು ದಿನವಿಡೀ ಸಿಂಪಡಿಸಿದ್ದ. ಬಂದು ಹೊಲದಲ್ಲಿ ಒಂದರೆಘಳಿಗೆ ಸಾವರಿಸಿಕೊಳ್ಳುವಷ್ಟರಲ್ಲಿ ಹೊಲದ ಮಾಲೀಕ ಎರಡು ಗಾಲಿಯ ವಾಹನವೊಂದರಲ್ಲಿ ಆತನನ್ನು ಕುಳ್ಳಿರಿಸಿ ಸರಿಸುಮಾರು ಮೂರು ಕಿಲೋಮೀಟರ್ ದೂರವಿರುವ ಯವತ್ಮಲ್ ಜಿಲ್ಲೆಯ ಮನೋಲಿ ಹಳ್ಳಿಯಲ್ಲಿರುವ ಬಂದುವಿನ ಹಳ್ಳಿಮನೆಗೆ ಕರೆದೊಯ್ದಿದ್ದ.

ಎರಡು ದಿನಗಳ ನಂತರವೂ ಬಂದುವಿನ ಆರೋಗ್ಯ ಸುಧಾರಿಸಿಕೊಳ್ಳದಿದ್ದಾಗ ಆತನ ಪತ್ನಿಯಾದ ಗೀತಾ ಬಂದುನನ್ನು ಆಟೋ ಒಂದರಲ್ಲಿ ಕುಳ್ಳಿರಿಸಿ ಯವತ್ಮಲ್ ನಗರದಿಂದ 45 ಕಿಲೋಮೀಟರುಗಳ ದೂರದಲ್ಲಿದ್ದ ಝಟಂಜಿ ಉಪಜಿಲ್ಲೆಯ ಆಸ್ಪತ್ರೆಯೊಂದಕ್ಕೆ ಚಿಕಿತ್ಸೆಗಾಗಿ ಕರೆತಂದಿದ್ದಳು. ಆತ ವಿಪರೀತ ಹೊಟ್ಟೆನೋವು ಮತ್ತು ಸುಸ್ತಿನಿಂದ ಕಂಗಾಲಾಗಿದ್ದ. ಆ ರಾತ್ರಿ ಮೈಕೈ ಸೆಳೆತವೂ ಶುರುವಾಗಿತ್ತು. ಮುಂದೆ ತನಗೆ ದೃಷ್ಟಿದೋಷ ಮೂಡುತ್ತಿದೆಯೆಂಬ ದೂರುಗಳನ್ನು ಬಂದು ಹೇಳತೊಡಗಿದಾಗ ಆತನನ್ನು ಆಂಬುಲೆನ್ಸ್ ಒಂದರಲ್ಲಿ ಯವತ್ಮಲ್ ನಲ್ಲಿರುವ ವಸಂತರಾವ್ ನಾಯ್ಕ್ ಸರಕಾರಿ ವೈದ್ಯಕೀಯ ಕಾಲೇಜಿಗೆ (ಜಿ.ಎಮ್.ಸಿ.ಎಚ್) ಸಾಗಿಸಲಾಗಿತ್ತು. ಇತ್ತ ಕ್ಷಣಗಳು ಉರುಳುತ್ತಾ ಹೋದಂತೆ ಬಂದುವಿನ ಆರೋಗ್ಯಸ್ಥಿತಿಯೂ ಕುಸಿಯುತ್ತಾ ಹೋಗಿತ್ತು.

ಕಳೆದ ವಾರದವರೆಗೂ ಆರೋಗ್ಯವಂತನಾಗಿದ್ದು ಸುಸ್ತೇ ಗೊತ್ತಿಲ್ಲದವನಂತೆ ದಿನವಿಡೀ  ದುಡಿಯುತ್ತಿದ್ದ ಬಂದು ಸೋನುಲೆ ಸಪ್ಟೆಂಬರ್ 23 ರಂದು ಯವತ್ಮಲ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ಐ.ಸಿ.ಯು) ಕೋಮಾಗೆ ಜಾರಿದ್ದ. ಮರುದಿನದ ಮುಂಜಾವು ಬರುವಷ್ಟರಲ್ಲಿ ಆತನ ಪ್ರಾಣಪಕ್ಷಿ ಹಾರಿಹೋಗಿತ್ತು.

Farm labourer spraying pesticide on cotton
PHOTO • Jaideep Hardikar

ಮನೋಲಿ ಹಳ್ಳಿಯ ನಾರಾಯಣ ಕೊಟ್ರಂಗೆ ವಿಷಕಾರಿ ರಾಸಾಯನಿಕಗಳನ್ನು ಸಿಂಪಡಿಸುವುದು

ಗಂಡ ಸತ್ತ ದುಃಖದಿಂದ ಕುಸಿದುಹೋಗಿರುವ ಗೀತಾ ಹೇಳುವ ಪ್ರಕಾರ ಬಂದು ಕೀಟನಾಶಕಗಳನ್ನು ಸಿಂಪಡಿಸುವುದರಲ್ಲಿ ಪರಿಣತನಾಗಿದ್ದು ಈ ಬಗೆಯ ಕೆಲಸಗಳಿಗಾಗಿ ಬಲು ಬೇಡಿಕೆಯಲ್ಲಿದ್ದ ಕಾರ್ಮಿಕನಾಗಿದ್ದ. "ಕಳೆದೆರಡು ತಿಂಗಳಿನಿಂದ ಆತ ವಿಶ್ರಾಂತಿಯೇ ಇಲ್ಲದೆ ಕೆಲಸ ಮಾಡುತ್ತಿದ್ದ. ಕೆಲಸವೊಂದನ್ನು ಬಿಟ್ಟು ಆತ ಬೇರೇನನ್ನೂ ಮಾಡುತ್ತಿರಲಿಲ್ಲ," ಚಿಕ್ಕ ಗುಡಿಸಲಿನಂತಿರುವ ( ಕವರ್ ಚಿತ್ರ ) ಮನೆಯೊಂದರಲ್ಲಿ ಕೂತು ಗೀತಾ ಹೇಳುತ್ತಿದ್ದಾರೆ. ಆಕೆ 17 ರ ಸೌರಭ್ ಮತ್ತು 14 ರ ಹರೆಯದ ಪೂಜಾ ಎಂಬ ಇಬ್ಬರು ಮಕ್ಕಳ ತಾಯಿಯೂ ಹೌದು. ಇನ್ನು ಬಂದು ಬಳಸುತ್ತಿದ್ದ ಬ್ಯಾಟರಿ ಚಾಲಿತ ಕೀಟನಾಶಕ ಸಿಂಪಡಣಾ ಯಂತ್ರವು ಗುಡಿಸಲಿನ ಮುಂಭಾಗದ ಮೂಲೆಯಲ್ಲೀಗ ಅನಾಥವಾಗಿ ಬಿದ್ದುಕೊಂಡಿದೆ.

ಅಕ್ಟೋಬರ್ 2017 ರಲ್ಲಿ ನಾವು ಬಂದುವಿನ ಮನೆಗೆ ಭೇಟಿಯಿತ್ತಾಗ ಗೀತಾ ಇನ್ನೂ ಆಘಾತದಲ್ಲಿದ್ದಳು. ಬಂದು ಏನನ್ನು ಸಿಂಪಡಿಸುತ್ತಿದ್ದ ಮತ್ತು ಅವನ ಸಾವು ಹೇಗಾಯಿತು ಎಂಬ ಬಗ್ಗೆ ಆಕೆಗೆ ಯಾವುದೇ ಮಾಹಿತಿಯಿರಲಿಲ್ಲ. 2017 ರಲ್ಲಿ ಕೀಟಗಳು ಹತ್ತಿ ಹೊಲಗಳ ಮೇಲೆ ಭೀಕರವಾಗಿ ದಾಳಿಯಿಡುತ್ತಿದ್ದರೆ ಹತ್ತಿ ಬೆಳೆಗಾರರು ಕಂಗಾಲಾಗಿ ಕೀಟನಾಶಕಗಳನ್ನು ಸಿಂಪಡಿಸಲೇಬೇಕಾದ ಪರಿಸ್ಥಿತಿಗಳು ಒದಗಿಬಂದಿತ್ತು. ಬಂದು ಈ ಅವಕಾಶವನ್ನು ತನ್ನದಾಗಿಸಿಕೊಳ್ಳಲು ಬಯಸಿದ್ದನಂತೆ. ಒಂದಷ್ಟು ಹೆಚ್ಚಿನ ಸಂಪಾದನೆಯನ್ನು ಗಳಿಸಬೇಕೆಂಬ ಬಂದುವಿನ ಹಂಬಲವು ಆತನ ಪ್ರಾಣವನ್ನೇ ಬಲಿ ತೆಗೆದುಕೊಂಡಿತ್ತು.

"ಸಮಯಕ್ಕೆ ಸರಿಯಾಗಿ ವೈದ್ಯಕೀಯ ನೆರವು ಸಿಕ್ಕಿದ್ದರೆ ಬಂದುನನ್ನು ಉಳಿಸಬಹುದಿತ್ತು," ಎನ್ನುತ್ತಾರೆ ನಾರಾಯಣ ಕೊಟ್ರಂಗೆ. ನಾರಾಯಣ್ ಬಂದುವಿನ ಗೆಳೆಯನಾಗಿದ್ದಲ್ಲದೆ ಆತನ ನೆರೆಕರೆಯವನೂ ಆಗಿದ್ದ. ಮನೋಲಿಯಲ್ಲಿ 10 ಎಕರೆಯ ಜಮೀನನ್ನು ಬೇರೊಬ್ಬ ರೈತನಿಂದ ಲೀಸ್ ನಲ್ಲಿ ಪಡೆದು ಆ ಜಮೀನಿನಲ್ಲಿ ಈತ ಕೃಷಿ ಮಾಡುತ್ತಿದ್ದಾನೆ. ಆದರೆ ಬಂದುವಿನ ಕುಟುಂಬವು ವೈದ್ಯರನ್ನು ಸಂಪರ್ಕಿಸುವ ಮುನ್ನ ಸ್ವಲ್ಪ ಹೊತ್ತು ಕಾದಿತ್ತು. ಮೇಲಾಗಿ ಸರಕಾರಿ ಆಸ್ಪತ್ರೆಯ ಚಿಕಿತ್ಸಾಕ್ರಮದಲ್ಲಿದ್ದ ಲೋಪದೋಷಗಳು ಬಂದುವಿನನ್ನೂ ಸೇರಿದಂತೆ ಹಲವರಿಗೆ ಪ್ರಾಣಾಪಾಯವನ್ನು ತಂದಿತ್ತು. ಇವರೆಲ್ಲರೂ ಕೂಡ ತೀವ್ರಮಟ್ಟದ ಕೀಟ ಸಿಂಪಡಣೆಯ ಪ್ರಕ್ರಿಯೆಯಲ್ಲಿ ತೊಡಗಿದ್ದಾಗ ವಿಷಕಾರಿ ಅನಿಲಗಳ ಮಿಶ್ರಣವನ್ನು ಉಸಿರಾಡಿದ್ದ ನತದೃಷ್ಟ ರೈತರು ಮತ್ತು ಕಾರ್ಮಿಕರಾಗಿದ್ದರು. ಹೀಗಾದಾಗಲೆಲ್ಲಾ ತ್ವರಿತವಾಗಿ ಆಸ್ಪತ್ರೆಗೆ ಬರುತ್ತಿದ್ದ ಮತ್ತು ಸೂಕ್ತವಾದ ಚಿಕಿತ್ಸೆಯನ್ನು ಪಡೆಯುತ್ತಿದ್ದವರು ಮಾತ್ರ ಬದುಕುಳಿಯುತ್ತಿದ್ದರು.

ಮೇಲ್ವಿಚಾರಣೆಯಿಲ್ಲದ ವ್ಯವಸ್ಥೆ , ಸುಸುಜ್ಜಿತವಲ್ಲದ ಆಸ್ಪತ್ರೆಗಳು

ಜುಲೈನಿಂದ ನವೆಂಬರ್ 2017 ರ ಅವಧಿಯಲ್ಲಿ ಅನಾರೋಗ್ಯದ ಸ್ಥಿತಿಯಲ್ಲಿ ಜಿ.ಎಮ್.ಸಿ.ಎಚ್ ಗೆ ಬರುತ್ತಿದ್ದ ಬಂದುವಿನಂಥಾ ರೈತರ ರಕ್ತದಲ್ಲಿ ಆರ್ಗನೋಫಾಸ್ಫೇಟ್ ಅಂಶಗಳನ್ನು ಪತ್ತೆಹಚ್ಚಲು ಬಲು ಅವಶ್ಯಕವಾಗಿದ್ದ ಕೋಲಿನೆಸ್ಟೆರೇಸ್ ಪರೀಕ್ಷೆಯನ್ನು ನಡೆಸಲು ವ್ಯವಸ್ಥೆಯಿದ್ದಿದ್ದೇ ಆದಲ್ಲಿ ಹಲವರ ಪ್ರಾಣಗಳನ್ನು ಉಳಿಸಬಹುದಾಗಿತ್ತು. ಜಿ.ಎಮ್.ಸಿ.ಎಚ್ ನ ತೀವ್ರ ನಿಗಾ ಘಟಕದಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರೊಬ್ಬರು ಹೇಳುವ ಪ್ರಕಾರ ಆಸ್ಪತ್ರೆಯ ವೈದ್ಯರು ಬರುತ್ತಿದ್ದ ರೈತರ ಮತ್ತು ಕಾರ್ಮಿಕರ ಖಾಯಿಲೆಯ ಮೇಲ್ನೋಟದ ಗುಣಲಕ್ಷಣಗಳನ್ನಷ್ಟೇ ಪರಿಗಣಿಸಿ ವಾರಗಟ್ಟಲೆ ಚಿಕಿತ್ಸೆ ನೀಡುತ್ತಿದ್ದರಂತೆ. ಈ ಬಗ್ಗೆ ಅವಶ್ಯವಿದ್ದ ಪರೀಕ್ಷೆಗಳನ್ನು ಮಾಡಿಸುವ ಗೋಜಿಗೆ ಹೋಗದೆ ಮತ್ತು ವಿಷದ ಅಂಶವು ಪತ್ತೆಯಾದರೆ ನೀಡಬೇಕಿದ್ದ ಆಂಟಿಡೋಟ್ ಗಳಿಲ್ಲದೇನೇ ಇಲ್ಲಿ ಚಿಕಿತ್ಸೆಗಳು ಮುಂದುವರಿಯುತ್ತಿದ್ದವು. ಚಿಕಿತ್ಸೆಗಾಗಿ ಮಾಡಲೇಬೇಕಿದ್ದ ರಕ್ತಪರೀಕ್ಷೆಯನ್ನಂತೂ ಆಸ್ಪತ್ರೆಯಲ್ಲಿ ಮಾಡುತ್ತಲೇ ಇರಲಿಲ್ಲ.

ವಿಶೇಷ ತನಿಖಾ ತಂಡದ (ಎಸ್.ಐ.ಟಿ) ವರದಿಯು ಈ ಲೋಪದೋಷಗಳನ್ನು ಗುರುತಿಸಿದೆ. ಯವತ್ಮಲ್ ಮತ್ತು ವಿದರ್ಭಾದ ಕೆಲ ಭಾಗಗಳಲ್ಲಿ ಗುರುತಿಸಲಾಗಿದ್ದ ಕೀಟನಾಶಕ ಅವಘಡಗಳಿಗೆ ಸಂಬಂಧಿತ ಸಾವಿನ ಮತ್ತು ರೋಗದ ಪ್ರಕರಣಗಳ ಬಗ್ಗೆ ತನಿಖೆ ನಡೆಸಲು ರಾಜ್ಯ ಸರಕಾರವು ಈ ವಿಶೇಷ ತನಿಖಾ ತಂಡವನ್ನು 2017 ರ ಅಕ್ಟೋಬರ್ 10 ರಂದು ನೇಮಿಸಿತ್ತು. ಅಮರಾವತಿಯ ವಿಭಾಗೀಯ ಆಯುಕ್ತರಾಗಿದ್ದ ಪಿಯೂಷ್ ಸಿಂಗ್ ಎಸ್.ಐ.ಟಿ ಯ ನೇತೃತ್ವವನ್ನು ವಹಿಸಿಕೊಂಡಿದ್ದರು. ನಾಗಪುರದ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಕಾಟನ್ ರಿಸರ್ಚ್ ಸಂಸ್ಥೆಯ ಉಸ್ತುವಾರಿ ನಿರ್ದೇಶಕರಾಗಿದ್ದ ಡಾ. ವಿಜಯ್ ವಾಘ್ಮರೆ ಮತ್ತು ಸಸ್ಯ ಸಂರಕ್ಷಣೆ ಮಹಾನಿರ್ದೇಶಾಲಯದ ಕಿರಣ್ ದೇಶ್ಕರ್ ಎಸ್.ಐ.ಟಿ ಯಲ್ಲಿದ್ದ 6 ಸದಸ್ಯರಲ್ಲಿ ಪ್ರಮುಖರು.

ಬಾಂಬೇ ಹೈಕೋರ್ಟಿನ ನಾಗಪುರ ಬೆಂಚ್ ಜನವರಿ 2018 ರಲ್ಲಿ ಸರಕಾರಕ್ಕೆ ಅನುಮತಿಯನ್ನು ನೀಡಿದ ತರುವಾಯವಷ್ಟೇ 2017 ರ ಡಿಸೆಂಬರಿನಲ್ಲಿ ಮರಾಠಿ ಭಾಷೆಯಲ್ಲಿ ಎಸ್.ಐ.ಟಿ ಯು ಸರ್ಕಾರಕ್ಕೆ  ಸಲ್ಲಿಸಿದ್ದ ವರದಿಯನ್ನು ಬಹಿರಂಗಗೊಳಿಸಲಾಗಿತ್ತು. ಸಾಮಾಜಿಕ ಹೋರಾಟಗಾರರೂ ಮತ್ತು ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾಕ್ರ್ಸಿಸ್ಟ್) ದ ಮಾಜಿ ಕಾರ್ಯಕರ್ತರೂ ಆಗಿರುವ ಜಮ್ಮು ಆನಂದ್ ರವರ ಸಾರ್ವಜನಿಕ ಹಿತಾಸಕ್ತಿಯ ದಾವೆಯನ್ನು ಆಲಿಸುವಾಗ ನ್ಯಾಯಾಲಯವು ಈ ಹೆಜ್ಜೆಯನ್ನಿಟ್ಟಿತ್ತು.

ಮಾರ್ಚ್ 6 ರಂದು ಕೃಷಿ ಮಂತ್ರಾಲಯವು ಲೋಕಸಭೆಗೆ ಹೇಳಿರುವ ಪ್ರಕಾರ ಮಹಾರಾಷ್ಟ್ರದಲ್ಲಿ ಕೀಟನಾಶಕಗಳ ವಿಷಸಂಪರ್ಕದಿಂದಾಗಿ ಕಳೆದ ನಾಲ್ಕು ವರ್ಷಗಳಲ್ಲಿ 272 ಮಂದಿ ಸಾವನ್ನಪ್ಪಿದ್ದರು. ಅಂದರೆ 2017 ರಲ್ಲಿ ನಡೆದ ಘಟನೆಯು ವಿಶೇಷವೇನಲ್ಲ ಎಂಬುದು ಇದರ ಹಿಂದಿನ ಅರ್ಥವಾಗಿತ್ತು. ಆದರೆ ಜಿ.ಎಮ್.ಸಿ.ಎಚ್ ನ ಮಾಹಿತಿಗಳು ಮತ್ತು 2017 ರ ಅವಧಿಯಲ್ಲಿ ರೋಗಿಗಳ ಚಿಕಿತ್ಸೆ ಮಾಡಿದ್ದ ವೈದ್ಯರುಗಳು ಹೇಳುವ ಪ್ರಕಾರ ಯವತ್ಮಲ್ ನಲ್ಲಿ ಹಿಂದೆಂದೂ ಈ ಮಟ್ಟಿನ ಕೀಟನಾಶಕ ಸಂಬಂಧಿ ಆಕಸ್ಮಿಕಗಳು ಸಂಭವಿಸಿರಲಿಲ್ಲ. ಹೀಗೆ ರೋಗಿಗಳಾಗಿ ಬರುತ್ತಿದ್ದ ರೈತರಲ್ಲಿ ದೃಷ್ಟಿದೋಷ, ಸಂಕಟ, ತಲೆಸುತ್ತು ಬರುವಿಕೆ, ಆತಂಕ, ಲಕ್ವಾ, ಆಘಾತ (ಪಾನಿಕ್) ದಂಥಾ ಹಲವು ರೋಗಲಕ್ಷಣಗಳು ಕಾಣುತ್ತಿದ್ದವು. ಇವೆಲ್ಲದರಿಂದಾಗಿ ಏನಿಲ್ಲವೆಂದರೂ 50 ಮಂದಿ ಸಾವನ್ನಪ್ಪಿದರೆ, ಬರೋಬ್ಬರಿ 1000 ಮಂದಿ ಹಲವು ತಿಂಗಳುಗಳ ಮಟ್ಟಿಗೆ ಖಾಯಿಲೆ ಬಿದ್ದಿದ್ದರು. ( ಅಪಾಯಕಾರಿ ಕೀಟಗಳು, ಮಾರಣಾಂತಿಕ ಸ್ಪ್ರೇ ಹೊಗೆ ಮತ್ತು ಯವತ್ಮಲ್ ನ ವಿಷಾನಿಲ ಮತ್ತು ಭಯ ವರದಿಯನ್ನು ಓದಿ)

ಅಸಲಿಗೆ ಎಸ್.ಐ.ಟಿ ಯನ್ನು ನೇಮಿಸಿದ್ದ ಸರಕಾರದ ನಡೆಯೇ ಅಲ್ಲಾಗುತ್ತಿದ್ದ ಘಟನೆಗಳು ಅದೆಷ್ಟು ವಿಲಕ್ಷಣ ಮತ್ತು ಗಂಭೀರ ಎಂಬುದಕ್ಕೆ ಸಾಕ್ಷಿಯಾಗಿದ್ದವು ಎಂದರೆ ಅತಿಶಯೋಕ್ತಿಯೇನಲ್ಲ.

ICU of the Yavatmal Government Medical College and Hospital where farmer-patients were recuperating from the pesticide-poisoning effects in September 2017
PHOTO • Jaideep Hardikar

ವಿಷಾನಿಲಗಳ ಸಂಪರ್ಕಕ್ಕೆ ಬಂದು ಖಾಯಿಲೆಗೀಡಾಗಿ ಯವತ್ಮಲ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚೇತರಿಸಿಕೊಳ್ಳುತ್ತಿರುವ ರೈತರು

ಎಸ್.ಐ.ಟಿ ವರದಿಯು ಹೇಳುವ ಪ್ರಕಾರ ಜಿಲ್ಲಾಡಳಿತವು ಈ ಪ್ರಕರಣಗಳ ಗಂಭೀರತೆಯನ್ನು ಮತ್ತು ವಿನಾಶದ ಪ್ರಮಾಣವನ್ನು ರಾಜ್ಯ ಸರ್ಕಾರಕ್ಕೆ ಪರಿಣಾಮಕಾರಿಯಾಗಿ ಮನದಟ್ಟು ಮಾಡಿಸುವಲ್ಲಿ ವಿಫಲವಾಗಿತ್ತು. 1968 ರ ಕೀಟನಾಶಕ ಕಾಯಿದೆಯ ಪ್ರಕಾರ ಒಂದು ಅಂತರ್ ಇಲಾಖೆಯ ಸಮಿತಿಯೊಂದನ್ನು ಕಡ್ಡಾಯವಾಗಿ ಸ್ಥಾಪಿಸುವುದು ಜಿಲ್ಲಾಡಳಿತದ ಜವಾಬ್ದಾರಿಯಾದರೆ, ಜಿಲ್ಲಾಡಳಿತವು ಈ ನಿಯಮಗಳನ್ನು ವ್ಯವಸ್ಥಿತವಾಗಿ ಪಾಲಿಸುತ್ತಿದೆ ಎಂಬುದನ್ನು ನೋಡಿಕೊಳ್ಳುವುದು ರಾಜ್ಯ ಸರಕಾರದ್ದಾಗಿತ್ತು. ರೈತರು, ಕೀಟನಾಶಕಗಳ ಡೀಲರ್ ಗಳು ಮತ್ತು ಉತ್ಪಾದಕರು ಕಾನೂನನ್ನು ಪಾಲಿಸುತ್ತಿದ್ದಾರೆಯೇ ಎಂಬುದನ್ನು ಪರಿಶೀಲಿಸುವ ಜವಾಬ್ದಾರಿ, ಜಿಲ್ಲೆಯಲ್ಲಿ ಕೀಟನಾಶಕಗಳ ಜೊತೆಗೇ ಆಂಟಿಡೋಟ್ ಗಳನ್ನು ಲಭ್ಯವಾಗಿಸುವ ಹೊಣೆ ಮತ್ತು ಅಕಸ್ಮಾತ್ ಸಂಕಷ್ಟಗಳೊದಗಿಬಂದಲ್ಲಿ ಅವುಗಳನ್ನು ನಿಭಾಯಿಸುವ ಜವಾಬ್ದಾರಿಗಳು ಈ ಸಮಿತಿಯದ್ದಾಗಿದ್ದವು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಯಾವ ಸಮಿತಿಯೂ, ಮೇಲ್ವಿಚಾರಣೆಯ ಯಾವ ವ್ಯವಸ್ಥೆಯೂ ಯವತ್ಮಲ್ ನಲ್ಲಿ ಇರಲಿಲ್ಲ.

ಈ ನಿಟ್ಟಿನಲ್ಲಿ ಕೋಲಿನೆಸ್ಟೆರೇಸ್ ಪರೀಕ್ಷೆಯನ್ನು ಕೈಗೊಳ್ಳಲು ಜಿ.ಎಮ್.ಚಿ.ಚ್ ಆಸ್ಪತ್ರೆಯಲ್ಲಿ ಸುಸಜ್ಜಿತ ವ್ಯವಸ್ಥೆಯನ್ನು ಕಲ್ಪಿಸಿಕೊಡುವ ಅವಶ್ಯಕತೆಯಿದೆಯೆಂದೂ, ಆಸ್ಪತ್ರೆಯು ಆರ್ಗನೋಫಾಸ್ಫೇಟ್ ವಿಷಪ್ರಾಶನದ ಪ್ರಕರಣಗಳನ್ನು ಸಮರ್ಥವಾಗಿ ನಿಭಾಯಿಸಲು ಬೇಕಾಗಿರುವ ಎಲ್ಲಾ ಔಷಧಿಗಳನ್ನೂ ತನ್ನ ಸಂಗ್ರಹದಲ್ಲಿ ಇಟ್ಟಿರಬೇಕೆಂದೂ ಎಸ್.ಐ.ಟಿ ಯು ತನ್ನ ವರದಿಯಲ್ಲಿ ಅನುಮೋದಿಸಿತ್ತು. ಹತ್ತಿ, ಸೋಯಾಬೀನ್ ಮತ್ತು ವಿದರ್ಭಾದ ಕೆಲ ಭಾಗಗಳಲ್ಲಿ ಬೆಳೆಯಲಾಗುವ ಇತರ ಬೆಳೆಗಳಿಗೆ ಸಿಂಪಡಿಸಲಾಗುವ ರಾಸಾಯನಿಕಗಳ ನಿಯಂತ್ರಣಗಳ ನಿಟ್ಟಿನಲ್ಲಿ ಇದೊಂದು ಮಹತ್ವದ ಉಲ್ಲೇಖವೇ ಸರಿ.

ಪಶ್ಚಿಮ ವಿದರ್ಭಾದ ವಿಭಾಗೀಯ ಪ್ರಧಾನ ಕಚೇರಿ ಮತ್ತು ಅಮರಾವತಿಯ ಜಿ.ಎಮ್.ಸಿ.ಚ್ ಆಸ್ಪತ್ರೆಗಳು ಕೋಲಿನೆಸ್ಟೆರೇಸ್ ಪರೀಕ್ಷೆಯನ್ನು ಕೈಗೊಳ್ಳಲು ಸಮರ್ಥವಾದಾಗಿನಿಂದ 2017 ರ ಪ್ರಕರಣಗಳನ್ನು ನಿಭಾಯಿಸುವಲ್ಲಿ ವಾಸಿ ಎನಿಸಿಕೊಂಡಿವೆ. ಕೋಲಿನೆಸ್ಟೆರೇಸ್ ಎಂಬ ಎಂಝೈಮ್ ಅಸಿಟೈಲ್ ಕೋಲಿನೆಸ್ಟೆರೇಸ್ (ಒಂದು ಬಗೆಯ ನರ ಸಂದೇಶವಾಹಕ) ಅನ್ನು ಸಮರ್ಥವಾಗಿ ಕಾರ್ಯ ನಿರ್ವಹಿಸುವಂತೆ ಮಾಡುವಲ್ಲಿ ಸಹಕಾರಿ. ಕೋಲಿನೆಸ್ಟೆರೇಸ್ ನ ಯಶಸ್ವಿ ಕಾರ್ಯನಿರ್ವಹಣೆಗೆ ಅಡ್ಡಿಯುಂಟುಮಾಡುವ ಆರ್ಗನೋಫಾಸ್ಫೇಟ್ ಅಂಗಾಗಗಳ ಮತ್ತು ನರಗಳ ವೈಫಲ್ಯವನ್ನು ತಂದು ಸಾವನ್ನುಂಟುಮಾಡುತ್ತದೆ. ಅಮರಾವತಿ ಆಸ್ಪತ್ರೆಯ ಸಂಗ್ರಹದಲ್ಲಿ ಇಂಥಾ ವಿಷಾನಿಲ ಸಂಬಂಧಿ ಅವಘಡಗಳಿಗಾಗಿ ಲಭ್ಯವಿದ್ದ ಆಂಟಿಡೋಟ್ ಗಳ ಬಗೆಯೂ ಎಸ್.ಐ.ಟಿ ತನ್ನ ವರದಿಯಲ್ಲಿ ಹೇಳಿತ್ತು.

ಯವತ್ಮಲ್ ಜಿ.ಎಮ್.ಸಿ.ಎಚ್ ನಲ್ಲಿ ಪ್ರತ್ಯೇಕವಾದ 30 ಹಾಸಿಗೆಯ ಸೌಲಭ್ಯವುಳ್ಳ ತೀವ್ರ ನಿಗಾ ಘಟಕ ಮತ್ತು ಅಕೋಲಾ ಜಿಲ್ಲಾ ಸರಕಾರಿ ಆಸ್ಪತ್ರೆಯ 20 ಹಾಸಿಗೆಯ ಸೌಲಭ್ಯದ ತೀವ್ರ ನಿಗಾ ಘಟಕಗಳನ್ನೂ ಸೇರಿದಂತೆ ಕೀಟನಾಶಕಗಳ ಪ್ರಕರಣಗಳನ್ನು ನಿಭಾಯಿಸಲು ಅಮರಾವತಿ ಆಸ್ಪತ್ರೆಯು ಮಾಡಿರುವಂತೆ ಸರ್ಕಾರವು ವಾಣಿ, ಪುಸದ್ ನ ಉಪಜಿಲ್ಲಾ ಆಸ್ಪತ್ರೆಗಳಲ್ಲಿ ಮತ್ತು ಯವತ್ಮಲ್ ನ ಎರಡು ತೆಹಸಿಲ್ ಪ್ರಧಾನ ಕಚೇರಿಗಳಲ್ಲಿ ತೀವ್ರ ನಿಗಾ ಘಟಕಗಳನ್ನು ಸ್ಥಾಪಿಸಲು ಅನುಮೋದಿಸಿತ್ತು.

ಜಿಲ್ಲೆಯ ದೀರ್ಘಕಾಲದ ಕೀಟನಾಶಕ ಪ್ರಕರಣಗಳ ಇತಿಹಾಸವನ್ನು ಪರಿಗಣಿಸಿ ಟಾಕ್ಸಿಕಾಲಜಿ ಪ್ರಯೋಗಾಲಯವೊಂದನ್ನು ಯವತ್ಮಲ್ ನ ಜಿ.ಎಮ್.ಸಿ.ಚ್ ನಲ್ಲಿ ಸ್ಥಾಪಿಸಲೂ ಕೂಡ ವರದಿಯು ಶಿಫಾರಸ್ಸು ಮಾಡಿತು. ಇನ್ನು ವಿಷಪ್ರಾಶನ ಅವಘಡಗಳ ನಂತರದ ಮುಖ್ಯ ಹೆಜ್ಜೆಯಾಗಿರುವ ರಕ್ತದ ಮಾದರಿಗಳನ್ನು ಟಾಕ್ಸಿಕಾಲಜಿ ಕೂಡಲೇ ಪ್ರಯೋಲಯಕ್ಕೆ ಕಳಿಸಬೇಕಾಗಿದ್ದ ನಡೆಯನ್ನು 2017 ರ ಪ್ರಕರಣಗಳಲ್ಲಿ ಅನುಸರಿಸಿಯೇ ಇರಲಿಲ್ಲ.

ಮೋನೋಕ್ರೋಟೋಫೋಸ್ ಗಳಿಗೆ ಬೀಳಲಿ ತಡೆ , ಆಂಟಿಡೋಟ್ ಗಳು ಸಿದ್ಧವಾಗಿರಲಿ :

ಮಾನವ ಮತ್ತು ಪಕ್ಷಿಗಳ ಮೇಲಾಗುವ ವಿಷಕಾರಿ ಪರಿಣಾಮವನ್ನು ತಡೆಯುವ ನಿಟ್ಟಿನಲ್ಲಿ ಹಲವು ದೇಶಗಳಲ್ಲಿ ನಿಷೇಧಕ್ಕೊಳಪಟ್ಟಿರುವ ಮೋನೋಕ್ರೋಟೋಫೋಸ್ ಗಳ ಮೇಲೆ ಸಂಪೂರ್ಣ ನಿಷೇಧವನ್ನು ಹೇರಲು ಎಸ್.ಐ.ಟಿ ಒತ್ತಾಯಿಸಿತು. ಬೆಳೆಗಳ ಮೇಲೆ ವ್ಯವಸ್ಥಿತ ಸಂಪರ್ಕವನ್ನು ಸಾಧಿಸಿ ತನ್ನ ಕೆಟ್ಟ ಪರಿಣಾಮಗಳನ್ನು ತೋರಗೊಡುವ ಮೋನೋಕ್ರೋಟೋಫೋಸ್ ಒಂದು ಬಗೆಯ ಆರ್ಗನೋಫಾಸ್ಫೇಟ್ ಗಳಲ್ಲೊಂದಾಗಿದೆ.

ಇತ್ತ ವರದಿಯನ್ನಾಧರಿಸಿ ಮಹಾರಾಷ್ಟ್ರ ಸರ್ಕಾರವು ಈ ರಾಸಾಯನಿಕದ ಮಾರಾಟ ಮತ್ತು ಮಾರುಕಟ್ಟೆಯ ಮೇಲೆ 60 ದಿನಗಳ ತಾತ್ಕಾಲಿಕ ನಿಷೇಧವನ್ನು ಹೇರಿದ್ದರೂ ಕೂಡ ಸಂಪೂರ್ಣ ನಿಷೇಧವನ್ನು ಇನ್ನೂ ಜಾರಿಗೊಳಿಸಲಿಲ್ಲ. ಆದರೆ ಕೀಟನಾಶಕ ಕಾಯಿದೆಯ ಪ್ರಕಾರ ಮೋನೋಕ್ರೋಟೋಫೋಸ್ ಗಳ ಮೇಲೆ ದೇಶದಾದ್ಯಂತ ಸಂಪೂರ್ಣ ನಿಷೇಧವನ್ನು ಹೇರಲು ಕೇಂದ್ರ ಸರ್ಕಾರಕ್ಕೆ ಅಧಿಕಾರವಿದೆ.

ಇತ್ತ ರಾಜ್ಯಸರ್ಕಾರಗಳೂ ಕೂಡ ಕೀಟನಾಶಕಗಳ ಉತ್ಪಾದಕರು ಮತ್ತು ಮಾರಾಟಗಾರರ ಪರವಾನಗಿಗಳನ್ನು ಅಮಾನತು ಮಾಡುವ, ಹೊಸ ಪರವಾನಗಿಗಳನ್ನು ನಿರಾಕರಿಸುವ ಮತ್ತು ನವೀಕರಿಸುವುದನ್ನು ನಿಲ್ಲಿಸುವತ್ತ ಗಮನಹರಿಸಬಹುದು. ಮೋನೋಕ್ರೋಟೋಫೋಸ್ ಸೇರಿದಂತೆ 20 ಕೀಟನಾಶಕಗಳಿಗೆ ಹೊಸದಾಗಿ ಪರವಾನಗಿಗಳನ್ನು ನೀಡದಿರಲು ಪಂಜಾಬ್ ಸರ್ಕಾರವು ಜನವರಿ 2018 ರಲ್ಲಿ ತೀರ್ಮಾನಿಸಿದ್ದು ಇದಕ್ಕೊಂದು ಒಳ್ಳೆಯ ನಿದರ್ಶನ. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯೂ ಕೂಡ ಇವುಗಳನ್ನು "ಅತ್ಯಂತ ಅಪಾಯಕಾರಿ" ಎಂದು ವಿಭಾಗೀಕರಿಸಿತ್ತು. ಕೇರಳ ರಾಜ್ಯವು ಈಚೆಗಷ್ಟೇ ಮೋನೋಕ್ರೋಟೋಫೋಸ್ ಗಳನ್ನು ನಿಷೇಧಕ್ಕೊಳಪಡಿಸಿದರೆ ಸಂಪೂರ್ಣ ಸಾವಯವ ರಾಜ್ಯವಾಗಿರುವ ಸಿಕ್ಕಿಂ ಯಾವುದೇ ಬಗೆಯ ರಾಸಾಯನಿಕ ಕೀಟನಾಶಕಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದೆ.

ಮೇಲೆ ಹೇಳಿರುವುದಲ್ಲದೆ ಆಂಟಿಡೋಟ್ ಗಳು ಲಭ್ಯವಿರದ ಪಕ್ಷದಲ್ಲಿ ಕೀಟನಾಶಕಗಳ ಬಳಕೆಯ ವಿಚಾರದಲ್ಲಿ ಸರ್ಕಾರವು ತನ್ನ ಅನುಮತಿಯನ್ನು ನೀಡದಿರುವಂತೆ ಎಸ್.ಐ.ಟಿ ಒತ್ತಾಯಿಸಿದೆ. ಇನ್ನು ಸಸ್ಯಗಳ ಬೆಳವಣಿಗೆ ನಿಯಂತ್ರಕಗಳ ಬಳಕೆಯಲ್ಲಾದ ಗಣನೀಯ ಏರಿಕೆಯೂ ಸೇರಿದಂತೆ ರಾಸಾಯನಿಕಗಳ ಬಳಕೆಗೆ ಸರ್ಕಾರವು ಅನುಮತಿಯನ್ನು ನೀಡುವ ಮುನ್ನ ಅವುಗಳ ದೀರ್ಘಾವಧಿ ಪರಿಣಾಮಗಳ ಬಗ್ಗೆ ಕೂಲಂಕುಷವಾಗಿ ನಡೆಸಬೇಕಾದ ವೈಜ್ಞಾನಿಕ ಅಧ್ಯಯನದ ಅವಶ್ಯಕತೆಗಳ ಬಗ್ಗೆಯೂ ಸಮಿತಿಯು ಶಿಫಾರಸ್ಸು ಮಾಡಿದೆ.

ಆದರೆ ಕೃಷಿ ವಿಶ್ವವಿದ್ಯಾಲಯಗಳು ಅಥವಾ ರಾಜ್ಯ ಕೃಷಿ ವಿಭಾಗಗಳಂಥಾ ಕೃಷಿಯ ವಿಸ್ತರಿತ ವ್ಯವಸ್ಥೆಗಳ ಸಂಪೂರ್ಣ ವೈಫಲ್ಯಗಳ ಬಗ್ಗೆ ವರದಿಯು ಉಲ್ಲೇಖಿಸಿಲ್ಲ. ಹೊಸ ಕೀಟನಾಶಕಗಳು ಮಾರುಕಟ್ಟೆಗೆ ಸೇರಿಕೊಳ್ಳುವುದನ್ನು ಪತ್ತೆಹಚ್ಚುವ ಬಗೆಯಾಗಲಿ, ಕೀಟನಾಶಕ ನಿಯಂತ್ರಣ ತಂತ್ರಜ್ಞಾನ ಮತ್ತದರ ವ್ಯವಸ್ಥಿತ ಬಳಕೆಯದ್ದಾಗಲಿ... ಯಾವ ವ್ಯವಸ್ಥೆಯೂ ಇಲ್ಲಿ ಕಾರ್ಯನಿರ್ವಹಿಸುತ್ತಿರುವಂತೆ ಕಾಣುತ್ತಿಲ್ಲ. ಇಂಥಾ ಸಂದರ್ಭಗಳಲ್ಲೆಲ್ಲಾ ಈ ವ್ಯವಸ್ಥೆಗಳು ಮಹತ್ವದ ಪಾತ್ರವನ್ನು ವಹಿಸಬಲ್ಲವು.

ಆದರೆ ದುರಾದೃಷ್ಟವಶಾತ್ ಮಾರುಕಟ್ಟೆಯಲ್ಲಿ ಲಭ್ಯವಿರುವ ಹೊಸ ಕೀಟನಾಶಕಗಳ ಬಗ್ಗೆ ರೈತರು ಅಂಗಡಿ ಮಾಲೀಕರಿಂದಲೋ, ಡೀಲರುಗಳಿಂದಲೋ ಮಾಹಿತಿಯನ್ನು ಪಡೆಯುತ್ತಿದ್ದಾರೆ. ಇನ್ನು ಮಾರಾಟದ ವಿಚಾರಕ್ಕೆ ಬಂದಾಗ ರಾಸಾಯನಿಕಗಳ ಅಪಾಯಕಾರಿ ದುಷ್ಪರಿಣಾಮಗಳ ಬಗ್ಗೆ ಈ ಡೀಲರುಗಳು ರೈತರಿಗೆ ಅಗತ್ಯ ಮಾಹಿತಿಯನ್ನು ನೀಡುವುದು ಅಷ್ಟರಲ್ಲೇ ಇದೆ. ಕೀಟಗಳಿಂದ ಕಂಗೆಟ್ಟಿರುವ ಕೃಷಿಕರು ಮಾರುಕಟ್ಟೆಯ ಡೀಲರುಗಳು ನೀಡಿರುವ ಅಲ್ಪ ಮಾಹಿತಿಯನ್ನಾಧರಿಸಿ ಕೀಟನಾಶಕಗಳ ಬಳಕೆಯಲ್ಲಿ ಪ್ರಯೋಗಗಳನ್ನು ಮಾಡುತ್ತಿರುವ ಮತ್ತು ಈ ಮೂಲಕವಾಗಿ ಬೆಳೆಯ ಬೆಳವಣಿಗೆಯನ್ನು ಉತ್ತಮ ಫಸಲು ಮತ್ತು ಲಾಭಕ್ಕಾಗಿ ನಿಯಂತ್ರಿಸುವ ಪ್ರಯತ್ನಗಳ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ. "ಕೀಟನಾಶಕಗಳು ಮತ್ತು ಇತರ ರಾಸಾಯನಿಕಗಳ ಹೆಚ್ಚಿದ ಬಳಕೆಯ ಪ್ರಮಾಣವು [2017 ರ ಸಿಂಪಡಣೆಯ ಋತುವಿನಲ್ಲಿ] ವಿಷಕಾರಿ ಗಾಳಿಯನ್ನು ಉಸಿರಾಡುವ ಸಾಧ್ಯತೆಗಳ, ತತ್ಸಂಬಂಧಿ ಪರಿಣಾಮದ ಮತ್ತು ವಿಪರೀತ ಆದ್ರ್ರತೆಯ ಹವಾಮಾನ ಪರಿಸ್ಥಿತಿಗಳಲ್ಲಿ ರಾಸಾಯನಿಕಗಳೊಂದಿಗೆ ಉಂಟಾಗುವ ಸಂಪರ್ಕಗಳನ್ನೂ ಹೆಚ್ಚಿಸಿತ್ತು," ಎನ್ನುತ್ತಿದೆ ಎಸ್.ಐ.ಟಿ. ವರದಿ.

Spraying cotton with pesticide
PHOTO • Jaideep Hardikar
Pump used to spray pesticide
PHOTO • Jaideep Hardikar

ತಮ್ಮ ಬೆಳೆಗಳ ಮೇಲೆ ನಡೆಯುತ್ತಿದ್ದ ಕೀಟಗಳ ದಾಳಿಯಿಂದ ಕಂಗೆಟ್ಟ ರೈತರು ಹೆಚ್ಚಿನ ಪ್ರಮಾಣದ ಕೀಟನಾಶಕಗಳನ್ನು ಸಿಂಪಡಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಿಸುತ್ತಿದ್ದರು. ಇವುಗಳಲ್ಲಿ ಬಹಳಷ್ಟು ಯಂತ್ರಗಳು ಬಂದು ಸೋನುಲೆ ಬಳಸುತ್ತಿದ್ದಂಥಾ ಬ್ಯಾಟರಿಯಿಂದ ಕೆಲಸ ಮಾಡುವ ಪಂಪುಗಳೇ (ಬಲ ಚಿತ್ರ) ಆಗಿದ್ದವು

2017 ರ ಸಿಂಪಡಣೆಯ ಅವಧಿಯಲ್ಲಿ ಸಸ್ಯಗಳ ಬೆಳವಣಿಗೆಯನ್ನು ಹೆಚ್ಚಿಸುವ ಗಿಬ್ರಾಲಿಕ್ ಆಸಿಡ್, ಸಸ್ಯಗಳ ಎತ್ತರವನ್ನು ಹೆಚ್ಚಿಸುವ ಇಂಡೋಲ್ ಅಸಿಟಿಕ್ ಆಸಿಡ್ ಮತ್ತು ಬೇರಿನ ಬೆಳವಣಿಗೆಯನ್ನು ಪರಿಣಾಮಕಾರಿಯಾಗಿ ಉತ್ತಮವಾಗಿಸಬಲ್ಲ ಇಂಡೋಲ್ ಬ್ಯುಟಿರಿಕ್ ಆಸಿಡ್ ಗಳನ್ನು ಹೊರತುಪಡಿಸಿ ಹೆಚ್ಚುವರಿಯಾಗಿ ಸಿಂಥೆಟಿಕ್ ಪೈರೆಥೆರಾಯ್ಡುಗಳನ್ನು, ಆರ್ಗನೋಫಾಸ್ಫೇಟುಗಳನ್ನು ಮತ್ತು ಈಚಿನ ಹೊಸ ಬಗೆಯ ಕೀಟನಾಶಕಗಳನ್ನು ರೈತರು ಬಳಸಿದ್ದರು (ಕೀಟನಾಶಕ ಕಾಯಿದೆಯಡಿಯಲ್ಲಿ ಸ್ಥಾಪಿಸಲ್ಪಟ್ಟಿದ್ದ ಕೇಂದ್ರ ಕೀಟನಾಶಕ ಮಂಡಳಿಯಿಂದ ಇವುಗಳ ಬಳಕೆಗಾಗಿ ಅನುಮತಿಯು ಸಿಕ್ಕಿರಬಹುದೇನೋ). ಇನ್ನು ಬಳಕೆಯ ನಿಟ್ಟಿನಲ್ಲಿ ಅನುಮತಿಯನ್ನು ಪಡೆಯದಿರುವ ಫಿಪ್ರೋನಿಲ್ ಮತ್ತು ಇಮಿಡಾಕ್ಲೋಪ್ರಿಡ್ ಆಸಿಡ್ ಬ್ರಾಂಡ್ ಗಳ ಮಿಶ್ರಣವನ್ನು ರೈತರು ಬಳಸಿದ್ದನ್ನು ಎಸ್.ಐ.ಟಿ ಗುರುತಿಸಿತ್ತು. ಸ್ಥಳೀಯ ಮಾರುಕಟ್ಟೆಗಳಂತೂ ಹೀಗೆ ಬೆಳೆಗಳ ಮೇಲೆ ನೇರವಾಗಿ ಬಳಸಬಲ್ಲ ರಾಸಾಯನಿಕಗಳಿಂದ ತುಂಬಿಹೋಗಿದ್ದವು.

ಅಸಲಿಗೆ ಸಂಬಂಧಿ ಇಲಾಖೆಗಳಿಂದ ಅನುಮತಿಯನ್ನು ಪಡೆಯದಿರುವ ರಾಸಾಯನಿಕಗಳ ಅನಿಯಂತ್ರಿತ ಬಳಕೆಯನ್ನು ಪರಿಶೀಲಿಸುವ ಒಂದೊಳ್ಳೆಯ ವ್ಯವಸ್ಥೆಯೇ ಅಸ್ತಿತ್ವದಲ್ಲಿಲ್ಲ. ವರದಿಯು ಹೇಳಿರುವಂತೆ 16 ತಾಲೂಕುಗಳಿರುವ ಯವತ್ಮಲ್ ನಲ್ಲಿ ಗುಣಮಟ್ಟ ನಿಯಂತ್ರಣ ಅಧಿಕಾರಿಯ ಹುದ್ದೆಯಿರುವುದು ಕೇವಲ ಒಂದು. ಈ ಒಂದು ಹುದ್ದೆಯೂ ಕೂಡ ಕಳೆದೆರಡು ವರ್ಷಗಳಿಂದ ಖಾಲಿಯಿದೆ.

ಆದರೆ ಒಂದು ಪ್ರಮುಖವಾದ ಅಂಶವೂ ಕೂಡ ವರದಿಯಿಂದ ಅದೇಕೋ ಬಿಟ್ಟುಹೋಗಿದೆ. ಅದೇನೆಂದರೆ 2017 ರಲ್ಲಿ ವಿದರ್ಭಾದ ಹತ್ತಿ ಬೆಳೆಗಳ ಮೇಲೆ ನಡೆದ ಕೀಟಗಳ ಭೀಕರ ದಾಳಿಯು ಹಿಂದೆಂದೂ ಆಗಿಲ್ಲದ ವಿಲಕ್ಷಣ ಘಟನೆಯಷ್ಟೇ ಆಗಿಲ್ಲದೆ, ಇದರ ಬೆನ್ನಿಗೇ ಹಿಂದಿರುಗಿದ ಪಿಂಕ್ ಬೋಲ್ ಹುಳುಗಳ ಆಗಮನವು ಅತ್ಯಂತ ಅಪಾಯಕಾರಿಯೂ ಆಗಿತ್ತು. ಬರೆದರೆ ಅದರದ್ದೇ ಒಂದು ಪ್ರತ್ಯೇಕ ಕಥೆಯಾಗಿಬಿಡುವ ಸಂಭವವೇ ಹೆಚ್ಚು...

ರೈತರ ಮೇಲೆ ಬಿದ್ದ ಹೊಣೆಗಾರಿಕೆ :

ರಾಸಾಯನಿಕಗಳ ಸಂಪರ್ಕಕ್ಕೆ ಬಂದು ನಡೆದ ಅವಘಡಗಳಿಗೆ ಸಂಬಂಧಪಟ್ಟಂತೆ ಎಸ್.ಐ.ಟಿ ವರದಿಯು ರೈತರು ಮತ್ತು ಹೊಲ ಕಾರ್ಮಿಕರನ್ನೇ ಹೊಣೆಯನ್ನಾಗಿಸಿದೆ. ವರದಿಯು ಹೇಳಿರುವ ಪ್ರಕಾರ ಈ ರೈತರು ನಿಯಮಗಳನ್ನು ಮತ್ತು ಸುರಕ್ಷಾ ವಿಧಾನಗಳನ್ನು ಕ್ರಮಬದ್ಧವಾಗಿ ಪಾಲಿಸುವಲ್ಲಿ ವಿಫಲವಾಗಿದ್ದರು.

ಬಳಕೆಯ ಅನುಮತಿಯಿರುವ ಮತ್ತು ಇಲ್ಲದಿರುವ ಗೊಬ್ಬರಗಳನ್ನು ಸಸ್ಯಗಳ ಬೆಳವಣಿಗೆಯನ್ನು ನಿಯಂತ್ರಿಸುವ ರಾಸಾಯನಿಕಗಳೊಂದಿಗೆ ಬೆರೆಸಿ ತನ್ನ ಸ್ವಾಭಾವಿಕ ಬೆಳವಣಿಗೆಗಳಿಂತಲೂ ಎತ್ತರವಾಗಿ, ಹುಲುಸಾಗಿ ಮತ್ತು ವೇಗವಾಗಿ ಬೆಳೆದಿದ್ದ ಬೆಳೆಯನ್ನು ವಿದರ್ಭಾದ ರೈತರು ಫಸಲಾಗಿ ಪಡೆದಿದ್ದ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ. ವರದಿಯು ತನ್ನ ಅಧ್ಯಯನದಲ್ಲಿ ಗಮನಿಸಿರುವ ಪ್ರಕಾರ ಆದ್ರ್ರತೆಯು ವಿಪರೀತವಾಗಿರುವ ಸನ್ನಿವೇಶದಲ್ಲಿ ಸ್ವತಃ ರೈತರೇ ಹೇಳಿರುವಂತೆ ಇದೊಂಥರಾ ಮಂಜಿನ ವಾತಾವರಣದಲ್ಲಿ ಕಾಲ್ನಡಿಗೆಯಲ್ಲಿ ಸಾಗುತ್ತಾ ಹೊಗೆಯನ್ನೇ ಉಸಿರಾಡುವಂತಿರುತ್ತದೆ. ಇತ್ತ ಸಿಂಪಡಣೆಯಾಗುತ್ತಿರುವ ದೊಡ್ಡ ಗಾತ್ರದ ಹನಿಗಳು ಸಿಂಪಡಿಸುತ್ತಿರುವ ಬಳಕೆದಾರನ ಉಸಿರಿನಲ್ಲಿ ಸೇರಿಕೊಂಡಿರುತ್ತವೆ.

ಫೆಬ್ರವರಿ 6, 2018 ರಂದು ಅರವಿಂದ್ ವಾಘ್ಮಲೆ ಎಂಬ ನಾಗಪೂರ ಮೂಲದ ವಕೀಲರೊಬ್ಬರು ಎರಡನೇ ಎಸ್.ಐ.ಟಿ ಯನ್ನು ತನಿಖೆಗಾಗಿ ನೇಮಿಸುವಂತೆ ಮುಂಬೈ ಹೈಕೋರ್ಟಿನ ನಾಗಪುರ ಬೆಂಚಿನಲ್ಲಿ ಮನವಿಯನ್ನು ಸಲ್ಲಿಸಿದ್ದರು. ಹೊಸ ಎಸ್.ಐ.ಟಿ ಯಿಂದಾಗಿ ಈ ಇಡೀ ಘಟನೆಯನ್ನು ಯಶಸ್ವಿಯಾಗಿ ನಿಭಾಯಿಸುವಲ್ಲಿ ಸರ್ಕಾರದಿಂದಾಗಿರುವ ಲೋಪದೋಷಗಳನ್ನು ಮತ್ತು ಅಪಾಯಕಾರಿ ರಾಸಾಯನಿಕಗಳನ್ನು ಮಾರಾಟ ಮಾಡುವ ಉದ್ಯಮಗಳನ್ನು ನಿಯಂತ್ರಿಸಿ ಆಗಿರುವ ತಪ್ಪುಗಳನ್ನು ತಿದ್ದಿಕೊಳ್ಳುವುದು ವಾಘ್ಮರೆಯವರ ಗುರಿ.

ಅನುವಾದ : ಪ್ರಸಾದ್ ನಾಯ್ಕ್

ಕ್ರೇಝಿ ಫ್ರಾಗ್ ಮೀಡಿಯಾ ಈ ಅನುವಾದದ ರೂವಾರಿ. ಸಮಾನಮನಸ್ಕ ಬರಹಗಾರರನ್ನು ಮತ್ತು ಪತ್ರಕರ್ತರನ್ನು ಹೊಂದಿರುವ ಸಮೂಹವಿದು. ಬೆಂಗಳೂರು ಮೂಲದ ಆನ್ಲೈನ್ ನ್ಯೂಸ್ ಮೀಡಿಯಾ ಹಬ್ ಆಗಿರುವ ಕ್ರೇಝಿ ಫ್ರಾಗ್ ಮೀಡಿಯಾ ಸುದ್ದಿಗಳನ್ನು, ಕ್ರಿಯೇಟಿವ್ ಕಂಟೆಂಟ್ ಗಳನ್ನು, ಬ್ಯುಸಿನೆಸ್ ಸೊಲ್ಯೂಷನ್ ಗಳನ್ನು ನೀಡುತ್ತಾ ಪ್ರಸ್ತುತ ಕನ್ಸಲ್ಟೆನ್ಸಿ ಸೇವೆಗಳನ್ನು ಒದಗಿಸುತ್ತಿದೆ.

Jaideep Hardikar

Jaideep Hardikar is a Nagpur-based journalist and writer, and a PARI core team member.

Other stories by Jaideep Hardikar
Translator : Prasad Naik

Currently working as a Senior Engineer at Gurugram (Haryana), Prasad Naik has served in Uige of Republic of Angola (Africa) for a drinking water supply project. Prasad Naik is a freelance writer and columnist. He can be contacted at [email protected] This translation was coordinated by Crazy Frog Media Features. Crazy Frog Media is a congregation of likeminded Journalists. A Bangalore-based online news media hub that offers news, creative content, business solutions and consultancy services.

Other stories by Prasad Naik