ಆ ಮೇಜು ಹಳ್ಳಿಯ ಸರಪಂಚರಿಗೆ ಸೇರಿದ್ದಾಗಿತ್ತು. 2011 ರಲ್ಲಿ 44 ರ ಪ್ರಾಯದ ಶಾಲೂಬಾಯಿ ಐದು ವರ್ಷಗಳ ಅವಧಿಗೆ ಆಯ್ಕೆಯಾಗಿ ಬಂದಾಗ ವಾಘೋಲಿಯ ಕೆಲ ಯುವಕರು ಛತ್ರಪತಿ ಶಿವಾಜಿಯ ದೊಡ್ಡ ಪ್ರತಿಮೆಯೊಂದನ್ನು ಪ್ರಯಾಸಪಟ್ಟು ಪಂಚಾಯತ್ ಆಫೀಸಿನವರೆಗೆ ಹೊತ್ತುಕೊಂಡು ಬಂದಿದ್ದರು. ಪ್ರತಿಮೆಯನ್ನು ಆ ಮೇಜಿನ ಮೇಲೆಯೇ ಇಡಬಹುದು ಎಂದು ಅವರುಗಳು ನಿರ್ಧರಿಸಿಯಾಗಿತ್ತು.

ಹೀಗೆ ಈ ಪ್ರತಿಮೆಯಿಂದಾಗಿ ಒಸ್ಮಾನಾಬಾದ್ ಜಿಲ್ಲೆಯ ಹಳ್ಳಿಯೊಂದರ ಪಂಚಾಯತ್ ಅಧ್ಯಕ್ಷಳಾಗಿ ಆಯ್ಕೆಯಾಗಿ ಬಂದ ಈ ದಲಿತ ಮಹಿಳೆಯು  ತನ್ನ ಐದು ವರ್ಷಗಳ ಅವಧಿಯುದ್ದಕ್ಕೂ ಮೇಜನ್ನು ಬಳಸುವ ಭಾಗ್ಯವಿಲ್ಲದೆ ಕುರ್ಚಿಯಲ್ಲಿ ಕುಳಿತುಕೊಂಡೇ ಕಳೆದಿದ್ದರು. ಶಾಲೂಬಾಯಿಯ ವಿಚಾರದಲ್ಲಿ ಅಧಿಕಾರದ ಚಿಹ್ನೆಯೆಂಬಂತೆ ಇಲ್ಲಿಯ ಮೇಲ್ಜಾತಿಯವರು ಒಪ್ಪಿಕೊಂಡ ಒಂದೇ ಒಂದು ಅಂಶವೆಂದರೆ ಕಾಗದಪತ್ರಗಳಲ್ಲಿ ಈಕೆ ಅಧಿಕೃತವಾಗಿ ಹಾಕುತ್ತಿದ್ದ ಸಹಿ. ಇನ್ನು ಮೇಜಿಲ್ಲದ ಪರಿಣಾಮ ಸಹಿಯನ್ನೂ ಕೂಡ ಸಾಮಾನ್ಯ ಜನರು ಕುಳಿತುಕೊಳ್ಳುವ ಜಾಗದಲ್ಲೇ ಕುಳಿತು ಇವರು ಹಾಕಬೇಕಿತ್ತು. ಇದಕ್ಕಾಗಿ ಕೋಣೆಯ ಇನ್ನೊಂದು ಭಾಗದಲ್ಲಿ ಕುಳಿತುಕೊಂಡು ಕಚೇರಿಯ ರಿಜಿಸ್ಟರ್ ಗಳನ್ನು ನೋಡಿಕೊಳ್ಳುತ್ತಿದ್ದ ಗುಮಾಸ್ತನೊಬ್ಬನ ಮೇಜನ್ನೂ ಇವರು ಬಳಸಿಕೊಂಡ ದಿನಗಳಿವೆ.

ಮುಂದೆ ಶಾಲೂಬಾಯಿಯ 'ಡೆಪ್ಯೂಟಿ' ಆಗಲಿದ್ದ ಸತೀಶ್ ಖಡ್ಕೆಯವರು ಸರಪಂಚ್ ಹುದ್ದೆಗಾಗಿ ಚುನಾವಣೆಗೆ ನಿಲ್ಲಬೇಕೆಂದು ಅಂದು ಶಾಲೂಬಾಯಿಯವರಲ್ಲಿ ಕೇಳಿಕೊಂಡಾಗ ಆಕೆಯ ಪತಿ ಮತ್ತು ಮಗಂದಿರಿಂದಲೇ ಅಸಮಾಧಾನವು ವ್ಯಕ್ತವಾಗಿತ್ತು. ಅಭಿವೃದ್ಧಿ ಕೆಲಸಗಳ ಗುತ್ತಿಗೆಗಳ ದಾಖಲೆಗಳ ಮೇಲೆ ಮತ್ತು ಇತರ ಕಾಗದಪತ್ರಗಳ ಮೇಲೆ ಸಹಿಯನ್ನು ಹಾಕಲು ಈಕೆ ಒಂದು ಸಾಂಕೇತಿಕ ರಬ್ಬರ್ ಸ್ಟಾಂಪ್ ಆಗಿಯಷ್ಟೇ ಇರಬಲ್ಲಳೇ ಹೊರತು ಪಂಚಾಯತ್ ಅನ್ನು ಸಂಭಾಳಿಸುವುದು ಇವಳಿಂದಾಗುವ ಕೆಲಸವಲ್ಲ ಎಂಬುದು ಅವರಿಗೆ ಅದಾಗಲೇ ತಿಳಿದಿತ್ತು. ಸೂಕ್ಷ್ಮವಾಗಿ ಅವಲೋಕಿಸಿದರೆ ಖಡ್ಕೆಯವರು ಮಂಜೂರಾತಿಗಾಗಿ ಕಾಗದಪತ್ರಗಳನ್ನು ಮೇಲಕ್ಕೆ ಶಾಲೂಬಾಯಿಯವರತ್ತ ಕಳಿಸುವುದರ ಹೊರತಾಗಿ ಉಳಿದ ಎಲ್ಲಾ ಚಟುವಟಿಕೆಗಳು ಅವರ ಹಿಡಿತದಲ್ಲೇ ಇರುವುದು ಸತ್ಯವಾಗಿತ್ತು. ಅನಕ್ಷರಸ್ಥೆಯಾಗಿರುವ ಶಾಲೂಬಾಯಿ ಸಹಿಯಾಗಿ ತನ್ನ ಹೆಸರನ್ನಷ್ಟೇ ಬರೆಯಬಲ್ಲಳು ಎಂಬ ಸಂಗತಿಯು ಇಲ್ಲಿ ಹೆಚ್ಚಿನ ಉಪಯೋಗಕ್ಕೇನೂ ಬರುವಂಥದ್ದಾಗಿರಲಿಲ್ಲ.

PHOTO • Namita Waikar

ಗ್ರಾಮ ಪಂಚಾಯತ್ ಕಚೇರಿಯಲ್ಲಿ ಗುಮಾಸ್ತನೊಬ್ಬನ ಮೇಜಿನಲ್ಲಿ ಕಾಗದಪತ್ರಗಳಿಗೆ ಸಹಿಹಾಕುತ್ತಿರುವ ಶಾಲೂಬಾಯಿ (ಎಡ) ಹಾಗೂ ಗಣರಾಜ್ಯೋತ್ಸವದ ದಿನದಂದು ಧ್ವಜಾರೋಹಣೆ ಮಾಡುತ್ತಿರುವ ಶಾಲೂಬಾಯಿ. (ಬಲ, ಚಿತ್ರಕೃಪೆ: ವಾಘೋಲಿ ಗ್ರಾಮ ಪಂಚಾಯತ್)

ಆದರೆ ಈ ಪ್ರಸ್ತಾಪವು ಶಾಲೂಬಾಯಿಗೆ ತಳ್ಳಿಹಾಕುವಷ್ಟು ನಗಣ್ಯವೂ ಆಗಿರಲಿಲ್ಲ. 1746 ಜನಸಂಖ್ಯೆಯಿದ್ದ ಈ ಹಳ್ಳಿಯಲ್ಲಿ ಮೇಲ್ಜಾತಿಯ ಮರಾಠಾನಾಗಿದ್ದ ಖಡ್ಕೆ ಜಮೀನುಗಳ ಒಡೆಯನೂ ಆಗಿದ್ದ. ಇನ್ನು ಕೃಷಿ ಕಾರ್ಮಿಕಳಾಗಿ ತನ್ನ ಜೀವನೋಪಾಯಕ್ಕಾಗಿ ಆಸುಪಾಸಿನ ಇಂಥದ್ದೇ ಜಮೀನುಗಳಲ್ಲಿ ಕೆಲಸ ಮಾಡುತ್ತಾ ಇವರುಗಳ ಮೇಲೆ ಸಂಪೂರ್ಣವಾಗಿ ಅವಲಂಬಿತಳಾಗಿದ್ದಳು ಈಕೆ.

ಶಾಲೂಬಾಯಿ ಸರಪಂಚ್ ಆದ ನಂತರ ಆಕೆಯ ಜೀವನದಲ್ಲಿ ಏನಾದರೂ ಬದಲಾವಣೆಗಳಾದವೇ? ಊರಿನ ದಲಿತ ಸಮುದಾಯಗಳಿಗೆ, ಅದರಲ್ಲೂ ಸ್ವತಃ ಮಾಂಗ್ ಆಗಿರುವ ಈಕೆಯಿಂದಾಗಿ ಈ ಸಮುದಾಯಕ್ಕೆ ಏನಾದರೂ ಸಹಾಯವಾಯಿತೇ?


ಹಲವು ರೀತಿಗಳಲ್ಲಿ ಸಹಾಯವಾಗಿದೆ ಅನ್ನುವುದು ಸತ್ಯ. ಮಾಂಗ್ ಜಾತಿಯವರಾಗಿದ್ದ ಖ್ಯಾತ ಲೇಖಕರೂ, ಜನಪದ ಕವಿಯೂ, ಸಮಾಜ ಸುಧಾರಕರೂ ಆಗಿದ್ದ ಅಣ್ಣಾಭಾವು ಸತೆಯವರ ಚಿತ್ರವೊಂದು ಈಗ ಪಂಚಾಯತ್ ಕಚೇರಿಯ ಗೋಡೆಯಲ್ಲಿ ನೇತಾಡುತ್ತಿದೆ. ಶಾಲೂಬಾಯಿ ಸರಪಂಚ್ ಆಗಿ ಆಯ್ಕೆಯಾದ ನಂತರ ಪಕ್ಷದ ಯುವ ಕಾರ್ಯಕರ್ತನೊಬ್ಬ ಬಂದು ಈ ಚಿತ್ರವನ್ನು ಗೋಡೆಗೆ ನೇತುಹಾಕಿದ್ದ

PHOTO • Namita Waikar

ಮಾಂಗ್ ಸಮುದಾಯದ ಸಮಾಜ ಸುಧಾರಕರಾಗಿದ್ದ ಅಣ್ಣಾಭಾವು ಸತೆಯವರ (ಬಲಕ್ಕೆ ಕೊನೆಯದ್ದು) ಚಿತ್ರವು ಪಂಚಾಯತ್ ಕಚೇರಿಯ ಗೋಡೆಯಲ್ಲಿರುವ ಸುಭಾಷ್ ಚಂದ್ರ ಬೋಸ್, ಜ್ಯೋತಿಬಾ ಫುಲೆ, ಭಗತ್ ಸಿಂಗ್, ಲೋಕಮಾನ್ಯ ತಿಲಕ್ ಮತ್ತು ಸಾವಿತ್ರಿಬಾಯಿ ಫುಲೆಯವರ ಚಿತ್ರಗಳೊಂದಿಗೆ ಸ್ಥಾನವನ್ನು ಗಿಟ್ಟಿಸಿಕೊಂಡಿದೆ.

ಈ ಚುನಾವಣೆಯು ನಡೆಯುವ ತನಕವೂ ತಮ್ಮ ಹೆಮ್ಮೆಯ ನಾಯಕನ ಜಯಂತಿಯನ್ನು ಮಾಂಗ್ ಸಮುದಾಯದ ಜನರು ಮುಕ್ತವಾಗಿ ಆಚರಿಸುವಂತಿರಲಿಲ್ಲ. ಆದರೆ ಈಗ ಪ್ರತೀ ಆಗಸ್ಟ್ 1 ರಂದು ವಾಘೋಲಿಯ ಬೀದಿಗಳಲ್ಲಿ ಮೆರವಣಿಗೆಯೊಂದು ಸಾಗುತ್ತದೆ. ಆದರೆ ಇದಕ್ಕಾಗಿ ಇವರು ಹೋರಾಟವನ್ನೂ ಮಾಡಬೇಕಾಯಿತು ಎಂಬುದೂ ಕೂಡ ಸತ್ಯವೇ. ಮೊದಲ ವರ್ಷ ಹೀಗೆ ಮೆರವಣಿಗೆಯನ್ನು ಮಾಡಲು ಬೀದಿಯಲ್ಲಿ ಇವರು ಗುಂಪುಗಟ್ಟಿ ನಿಂತಿದ್ದರೆ ಮೇಲ್ಜಾತಿಯ ಕೆಲ ಗಂಡಸರು ಬಂದು ಅಡ್ಡಿಪಡಿಸಿ ಮೆರವಣಿಗೆಯನ್ನು ನಿಲ್ಲಿಸುವುದರಲ್ಲಿ ಯಶಸ್ವಿಯಾಗಿದ್ದರು. ಇದರ ನಂತರದ ವರ್ಷದಲ್ಲಿ 20 ಮಹಿಳೆಯರ ಸಹಿಯನ್ನು ಸಂಗ್ರಹಿಸಿದ ಶಾಲೂಬಾಯಿ ಪೆಟಿಷನ್ ಒಂದನ್ನು ಸಿದ್ಧಪಡಿಸಿ ರಕ್ಷಣೆಯನ್ನು ಕೋರಿ ಪೋಲೀಸ್ ಪಾಟೀಲ (ಹಳ್ಳಿಯ ಅರೆ-ನ್ಯಾಯಾಂಗ ಪ್ರಧಾನ ಅಧಿಕಾರಿ) ರಿಗೆ ಸಲ್ಲಿಸಿದ್ದರು. ಹೀಗಾಗಿ ಈ ಬಾರಿ ಪೋಲೀಸ್ ವ್ಯಾನೊಂದು ಇವರುಗಳ ರಕ್ಷಣೆಗಾಗಿ ಜೊತೆಯಲ್ಲೇ ಬಂದಿತ್ತು. ಇನ್ನು ಮೆರವಣಿಗೆಯನ್ನು ತಡೆಯುವ ಮೇಲ್ಜಾತಿಯ ಗಂಡಸರ ಯತ್ನಗಳು ಪೋಲೀಸರ ಉಪಸ್ಥಿತಿಯಿಂದಾಗಿ ವಿಫಲವಾಯಿತು. ಅಂದಿನಿಂದ ಈ ಮೆರವಣಿಗೆಯನ್ನು ತೆಯುವ ಯತ್ನಗಳನ್ನು ಯಾರೂ ಕೂಡ ಮಾಡಲು ಹೋಗಿಲ್ಲ.

ಶಾಲೂಬಾಯಿ ನಮ್ಮನ್ನು ಪಂಚಾಯತ್ ಕಚೇರಿಯಿಂದ ಹಳ್ಳಿಯ ಚೌಕದಾಚೆಗಿರುವ ಚಿಕ್ಕ ಶಿವಮಂದಿರವೊಂದಕ್ಕೆ ಕರೆದೊಯ್ಯುತ್ತಿದ್ದಾಳೆ. ''ಮುಂಚೆ ನಮ್ಮ ಸಮುದಾಯದವರು ದೇಗುಲದ ಹೊರಗೆ ನಿಂತುಕೊಂಡೇ ಪ್ರಾರ್ಥಿಸಬೇಕಿತ್ತು. ಆದರೆ ಪಂಚಾಯತ್ ಚುನಾವಣೆಯಾದ ನಂತರ ಪಂಚಾಯತ್ ನ ಕೆಲ ಸದಸ್ಯರು ಹಳ್ಳಿಯ ಎಲ್ಲಾ ಮಂದಿರಗಳಿಗೂ ಭೇಟಿಕೊಟ್ಟು ಜೊತೆಯಾಗಿ ಪ್ರಾರ್ಥಿಸಿದರು. ಹೊರಗಡೆ ನಿಂತಿದ್ದ ನನ್ನನ್ನು ಒಳಕ್ಕೆ ಆಹ್ವಾನಿಸಲಾಯಿತು. ಸರಪಂಚ್ ಹುದ್ದೆಯು ಈ ಗೌರವವನ್ನು ನನಗೆ ಕೊಟ್ಟಿತು'', ಎನ್ನುತ್ತಾರೆ ಆಕೆ.


PHOTO • Namita Waikar

ಸರಪಂಚ್ ಆಗಿ ಚುನಾಯಿತರಾದ ನಂತರ ಮಾರುತಿಯ ದೊಡ್ಡ ದೇಗುಲದಲ್ಲಿ ನಡೆದ ಮೊದಲ ಗ್ರಾಮಸಭೆಯಲ್ಲಿ ಭಾಗವಹಿಸಿದ್ದ ಶಾಲೂಬಾಯಿ ಇತರ ಮಹಿಳೆಯರೊಂದಿಗೆ ಗುಂಪಿನಲ್ಲಿ (ಎಡಭಾಗದಲ್ಲಿ ಮೊದಲನೆಯವರಾಗಿ) ಕುಳಿತಿದ್ದಾರೆ. (ಚಿತ್ರಕೃಪೆ: ವಾಘೋಲಿ ಗ್ರಾಮ ಪಂಚಾಯತ್)

ಶಾಲೂಬಾಯಿಯವರಿಗೆ ದೇವಾಲಯದೊಳಗೆ ಪ್ರವೇಶವು ಸಿಕ್ಕಿದ್ದೇ ತಡ, ಆಕೆಯ ಸಮುದಾಯದ ಉಳಿದವರೂ ಕೂಡ ಅವಳನ್ನು ಅನುಸರಿಸಿದರು. ಮಾಂಗ್ ಗಳು ಈಗ ಚಿಕ್ಕ ಶಿವಮಂದಿರವೊಂದರಲ್ಲಿ ಸಪ್ತಾಹವನ್ನೂ (ಹದಿನೈದು ದಿನಗಳಿಗೊಮ್ಮೆ ನಡೆಯುವ ಪ್ರವಚನ ಮತ್ತು ಪ್ರಾರ್ಥನೆ) ನಡೆಸುತ್ತಾರೆ. ಹೆಚ್ಚಿನ ಆಡಂಬರಗಳುಳ್ಳ ಮಾರುತಿಯ ದೇಗುಲವೊಂದರಲ್ಲಿ ಮೇಲ್ಜಾತಿಯವರ ಸಪ್ತಾಹವು ಪ್ರತ್ಯೇಕವಾಗಿ ನಡೆಯುತ್ತದೆ. ಸ್ಥಳದ ಅಭಾವದ ಕಾರಣದಿಂದಾಗಿ ಪಂಚಾಯತ್ ಕಚೇರಿಗೆ ಎಲ್ಲರನ್ನೂ ಕರೆಸುವುದು ಕಷ್ಟವಾದ್ದರಿಂದ ಗ್ರಾಮಸಭೆಗಳು ಮಾರುತಿಯ ದೇಗುಲದಲ್ಲೇ ನಡೆಯುತ್ತವೆ. ಕಾಗದಪತ್ರಗಳಿಗೆ ಅಧಿಕೃತವಾಗಿ ಸಹಿಯನ್ನು ಹಾಕುವ ಅಧಿಕಾರವುಳ್ಳವರಾಗಿ ಶಾಲೂಬಾಯಿ ಕೂಡ ದೇಗುಲಗಳಲ್ಲಿ ನಡೆದ ಹಲವು ಸಭೆಗಳಲ್ಲಿ ಭಾಗವಹಿಸಿದ್ದಾರೆ.

ಆದರೆ ಈ ಬದಲಾವಣೆಗಳು ಸೀಮಿತ ಎಂಬುದೂ ಕೂಡ ಸತ್ಯ. ವಾಘೋಲಿಯ ದಲಿತ ಕಾಲೋನಿಯಲ್ಲಿ ಮಾಂಗ್ ಮತ್ತು ಮಹಾರ್ ಗಳು ಇಂದಿಗೂ ಪ್ರತ್ಯೇಕವಾಗಿ ನೆಲೆಸುತ್ತಾರೆ. ಈ ವಠಾರದ ಕೊನೆಯಲ್ಲಿರುವ ಚಿಕ್ಕ ಮನೆ ಶಾಲೂಬಾಯಿಯದ್ದು. ಈ ಮನೆಯ ಮಾಡು ಮತ್ತು ನಾಲ್ಕು ಗೋಡೆಗಳನ್ನು ಬಣ್ಣಗೆಟ್ಟ ತವರದ ಹಾಳೆಗಳಿಂದ ಮಾಡಲಾಗಿದೆ. ಎರಡು ಬಾಗಿಲುಗಳಿರುವ ಈ ಮನೆಗೆ ಒಂದೇ ಒಂದು ಕಿಟಕಿಯೂ ಇಲ್ಲ. ಈ ನಾಲ್ಕು ಗೋಡೆಗಳ ಮಧ್ಯೆಯೇ ಕುಟುಂಬದ ಎಲ್ಲಾ ಸಾಮಾನುಗಳಿವೆ: ಹಗ್ಗವೊಂದರಲ್ಲಿ ನೇತಾಡುತ್ತಿರುವ ಬಟ್ಟೆಗಳು, ಸಿಂಗಲ್ ಹಾಸಿಗೆ, ಚಿಕ್ಕ ಬೀರುವಿನ ಮೇಲಿಟ್ಟಿರುವ ಟೆಲಿವಿಷನ್, ನೆಲದ ಮೇಲಿರಿಸಲಾಗಿದ್ದ ಒಂದು ಗ್ಯಾಸ್ ಸಿಲಿಂಡರ್ ಮತ್ತು ಎರಡು ಬರ್ನಲ್ ಗಳನ್ನು ಹೊಂದಿರುವ ಸ್ಟವ್, ಪಾತ್ರೆ ಮತ್ತು ಇತರ ವಸ್ತುಗಳನ್ನಿಡಲು ಒಂದು ಲೋಹದ ಚೌಕಟ್ಟು ಮತ್ತು ಬೇಳೆಗಳನ್ನು ತುಂಬಿಸಿಟ್ಟ ಕೆಲ ಡಬ್ಬಗಳು. ತಮ್ಮ ಸ್ವಾರಸ್ಯಕರ ಕಥೆಗಳನ್ನು ಹೇಳಲು ಉತ್ಸುಕರಾಗಿರುವ ಶಾಲೂಬಾಯಿಯ ಕುಟುಂಬದ ಸದಸ್ಯರೂ ಕೂಡ ಮನೆಯಲ್ಲಿದ್ದಾರೆ.

PHOTO • Namita Waikar

ಲೋಹದ ಹಾಳೆಗಳಿಂದ ನಿರ್ಮಿಸಲ್ಪಟ್ಟಿರುವ ಮನೆಯಲ್ಲಿ ನೆಲೆಸುತ್ತಿರುವ ಶಾಲೂಬಾಯಿ ಮತ್ತು ಆಕೆಯ ಪತಿ ರಾಜೇಂದ್ರ ಕಸ್ಬೆ. ಶಾಲೂಬಾಯಿಯ ಹಿರಿಯ ಸಹೋದರಿಯೂ ಕೂಡ ನಮ್ಮತ್ತ ನೋಡುತ್ತಿದ್ದಾರೆ

''ನಾನು ಸರಪಂಚ್ ಆದ ನಂತರದ ದಿನಗಳಲ್ಲಿ ನಾವು ಈ ಮನೆಯನ್ನು ಕಟ್ಟಿದ್ವಿ. ಕಲ್ಲುಮಣ್ಣುಗಳಿಂದ ಮಾಡಿದ್ದ ನಮ್ಮ ಹಿಂದಿನ ಮನೆಯು ಒಂದು ದಿನ ಕುಸಿದುಹೋಗಿತ್ತು. ಮಾಡಿನ ಈ ಲೋಹದ ಹಾಳೆಯು ಒಮ್ಮೆ ನನ್ನ ಪತಿಯ ತೊಡೆಯನ್ನು ಸೀಳಿತ್ತು. ನಂತರ ಅವರು ಇದರಿಂದಾಗಿ ಹಲವು ಹೊಲಿಗೆಗಳನ್ನು ಹಾಕಿಸಿಕೊಳ್ಳುವಂತಾಯಿತು'', ಎನ್ನುತ್ತಾರೆ ಶಾಲೂಬಾಯಿ.

"ಆದರೆ ಈಗಲೂ ನಮಗೊಂದು ಸುಸ್ಥಿರವಾದ ಮನೆಯೆಂಬುದಿಲ್ಲ. ನೀವು ಬಡತನದ ರೇಖೆಗಿಂತ ಕೆಳಗಿದ್ದರೆ ಮಾತ್ರ ಅಂಥಾ ಮನೆಯು ನಿಮಗೆ ಸಿಗುವುದಂತೆ. ನಮಗೆ ಜಮೀನಿಲ್ಲ, ಆಸ್ತಿಪಾಸ್ತಿಗಳಿಲ್ಲ, ಜಾನುವಾರುಗಳಿಲ್ಲ, ವ್ಯವಸಾಯ ಯೋಗ್ಯ ಭೂಮಿಯಿಲ್ಲ. ಇಷ್ಟಾದರೂ ನಾವು B.P.L (Below Poverty Line) ಅಲ್ಲವಂತೆ'', ಎನ್ನುವ ಶಾಲೂಬಾಯಿಗೆ ಸರಪಂಚ್ ಆದ ನಂತರ ಗೌರವಧನದ ರೂಪದಲ್ಲಿ ತಿಂಗಳಿಗೆ 600 ರೂಪಾಯಿ ಸಿಗುತ್ತಿದೆ. ''ಈ ಮೊತ್ತದಲ್ಲಿ ಜೀವನ ಮಾಡುವುದಾದರೂ ಹೇಗೆ?'', ಎಂಬುದು ಆಕೆಯ ಪ್ರಶ್ನೆ.

ಮುಂಜಾನೆಯ 9 ರಿಂದ 11 ರವರೆಗೆ ಪಂಚಾಯತ್ ಕಚೇರಿಯಲ್ಲಿ ಕೆಲಸ ಮಾಡುವ ಶಾಲೂಬಾಯಿ ನಂತರ ಹಳ್ಳಿಯ ಇತರ ಕೃಷಿಕಾರ್ಮಿಕರಂತೆ ದುಡಿಯಲು ತಾನೂ ಗದ್ದೆಗಳತ್ತ ನಡೆಯುತ್ತಾಳೆ. ಸೋಯಾಬೀನ್ ಗಳನ್ನು ಹಾಕುವ ಮತ್ತು ಕಳೆಕೀಳುವ ಕೆಲಸಕ್ಕಾಗಿ ಮಹಿಳೆಯರಿಗೆ ಇಲ್ಲಿ 150 ರೂಪಾಯಿಗಳ ದಿನಕೂಲಿ ಸಿಗುತ್ತದೆ. ಇನ್ನು ಗದ್ದೆಗಳಲ್ಲಿ ಅಗೆಯುವ, ಉಳುವ ಮತ್ತು ಬಿತ್ತನೆಗಳನ್ನು ಮಾಡುವ ಗಂಡಸರಿಗೆ ಇದರ ಎರಡರಷ್ಟು ಪಟ್ಟು ಹೆಚ್ಚಿನ ದಿನಕೂಲಿಯು ಕೈಸೇರುತ್ತದೆ.


PHOTO • Namita Waikar

ಸೋಯಾಬೀನ್ ಬೆಳೆಯನ್ನು ಬೆಳೆಯುತ್ತಿರುವ ಕೃಷಿಭೂಮಿಯಲ್ಲಿ ಕಳೆ ಕೀಳುತ್ತಿರುವ ಶಾಲೂಬಾಯಿ

ಶಾಲೂಬಾಯಿಯ 29 ರ ಹರೆಯದ ಮಗನಾದ ಸಚಿನ್ ಹಳ್ಳಿಯ ಮತ್ತು ಪಂಚಾಯತ್ ನ ಚಟುವಟಿಕೆಗಳನ್ನು ನಡೆಸುವುದು ಸರಪಂಚ್ ಆಗಿದ್ದ ತನ್ನ ತಾಯಿಗೆ ಅಸಾಧ್ಯವಾದ ಕೆಲಸವಾಗಿತ್ತು ಎನ್ನುತ್ತಿದ್ದಾನೆ. ಹನ್ನೆರಡನೇ ತರಗತಿಯವರೆಗೆ ವಿದ್ಯಾಭ್ಯಾಸವನ್ನು ಮಾಡಿರುವ ಈತ ಇಬ್ಬರು ಮಕ್ಕಳ ತಂದೆ. ಹಾಗೆಂದು ಶಾಲೂಬಾಯಿಯ ಪ್ರಯತ್ನಗಳನ್ನು ತಳ್ಳಿಹಾಕಲಾಗುವುದಿಲ್ಲ. ಮುಂಚೆ ಈ ಹುದ್ದೆಯನ್ನು ನಿರ್ವಹಿಸಿದ್ದ ಮೇಲ್ಜಾತಿಯವರೊಂದಿಗೆ ಹೋಲಿಸಿದರೆ ಜನರ ಕಾಗದಪತ್ರಗಳಿಗೆ ಸಹಿಹಾಕುವ ಮತ್ತು ಇತರ ದಾಖಲಾತಿ ಸಂಬಂಧಿ ಕೆಲಸಗಳ ವಿಚಾರದಲ್ಲಿ ತನ್ನ ಸಮುದಾಯದವರ ನೆರವಿಗೆ ಆಕೆ ಸದಾ ಸಿಗುತ್ತಿದ್ದಳು.

''ಮರಾಠರು ನಮ್ಮನ್ನು ಆಳುತ್ತಿದ್ದಾರೆ. ನಾವು ಉದ್ಧಾರವಾಗಲು ಅವರು ಬಿಡುವುದಿಲ್ಲ. ಬಹುಸಂಖ್ಯಾತರಾದ ಇವರುಗಳು ಎಲ್ಲವನ್ನೂ ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ. ಅವರು ನಮ್ಮನ್ನು ಗದ್ದೆಯ ಕೆಲಸಗಳಿಂದ ಬಹಿಷ್ಕøತಗೊಳಿಸುವುದಲ್ಲದೆ ಬೇರೆ ಯಾವ ರೀತಿಯ ಕೆಲಸಗಳೂ ನಮಗೆ ಸಿಗದಂತೆ ಮಾಡಬಲ್ಲರು'', ಎನ್ನುವ ಸಚಿನ್ ಗೆ ಮೇಲ್ಜಾತಿಯವರನ್ನು ಎದುರು ಹಾಕಿಕೊಳ್ಳುವುದು ಎಂದರೆ ಅಪಾಯಕ್ಕೆ ಆಹ್ವಾನವನ್ನು ಕೊಟ್ಟಂತೆ ಎಂಬ ಭಾವನೆಯಿದೆ.

ಈ ಬಾರಿ ಮಗನ ಮಾತನ್ನು ಅರ್ಧಕ್ಕೇ ತುಂಡರಿಸಿದ್ದಾಳೆ ಆತನ ತಾಯಿ ಶಾಲೂಬಾಯಿ. ''ಅವರನ್ನು ಎದುರು ಹಾಕಿಕೊಂಡು ಏನು ಪ್ರಯೋಜನ? ನಾವು ಕೂಲಿ ಮಾಡುವ ಜಮೀನುಗಳ ಮಾಲೀಕರು ಇವರೆಲ್ಲಾ. ನಾನು ಐದು ವರ್ಷದಿಂದ ಅವರಿಗೆ ಯಾವ ತೊಂದರೆಯನ್ನೂ ಮಾಡಿಲ್ಲದಿದ್ದರಿಂದ ನನಗೇನೂ ಮಾಡಿಲ್ಲ ಅವರು'', ಎನ್ನುತ್ತಾರೆ ಆಕೆ.

ಶಾಲೂಬಾಯಿಯವರ ಡೆಪ್ಯೂಟಿಯಾಗಿರುವುದಲ್ಲದೆ ಜಮೀನಿನ ಒಡೆಯ ಮತ್ತು ಎಂಜಿನಿಯರಿಂಗ್ ಪದವೀಧರನೂ ಆಗಿರುವ ಖಡ್ಕೆಗೆ ಇವರುಗಳ ಬಗ್ಗೆ ಅಷ್ಟೇನೂ ಅನುಕಂಪವಿದ್ದಂತೆ ಕಾಣುತ್ತಿಲ್ಲ. ''ಅನಕ್ಷರಸ್ಥ ಮಹಿಳೆಯರಿಗೆ ಯಾವುದಾದರೂ ವಿಷಯವನ್ನು ಮನದಟ್ಟು ಮಾಡಿಸುವುದರೆಂದರೆ ತುಂಬಾ ಕಷ್ಟ. ಅವರು ಒಂದು ಪಕ್ಷ ಓದಲು, ಬರೆಯಲು ಕಲಿತುಕೊಂಡರೂ ಅದು ಶಿಕ್ಷಿತರಾಗುವುದಕ್ಕೆ ಸರಿಸಮನಲ್ಲ'', ಎನ್ನುತ್ತಾರೆ ಖಡ್ಕೆ.

ತಾನು ಸರಪಂಚ್ ಆದ ಬಳಿಕ ತನ್ನ ಗಂಡುಮಕ್ಕಳಿಗೆ ಒಳ್ಳೆಯ ನೌಕರಿಯು ಸಿಗಬಹುದೆಂಬ ಭರಸೆಯು ಶಾಲೂಬಾಯಿಗಿತ್ತು. ಆದರೆ ಹಾಗೇನೂ ಆಗಲಿಲ್ಲ. ಶಾಲೂಬಾಯಿ ಪಂಚಾಯತ್ ಅಧ್ಯಕ್ಷಳಾಗಿದ್ದ ಅವಧಿಯಲ್ಲಿ ಸಚಿನ್ ಉಳಿದವರಂತೆಯೇ ಕೃಷಿಕಾರ್ಮಿಕನಾಗಿ ದುಡಿಯುವುದನ್ನು ಮುಂದುವರೆಸಿದ್ದ.

ಮೀಸಲಾತಿಯ ವಿಭಾಗದಡಿಯಲ್ಲಿ 73 ನೇ ತಿದ್ದುಪಡಿಯ (ಭಾರತೀಯ ಸಂವಿಧಾನ, ಪಂಚಾಯತ್ ರಾಜ್ ಗೆ ಸಂಬಂಧಪಟ್ಟಂತೆ) ಪ್ರಕಾರ ಶಾಲೂಬಾಯಿ ಚುನಾಯಿತರಾಗಿ ಬಂದಿದ್ದರು. ಶಾಲೂಬಾಯಿಯವರ ಅವಧಿಯು 2015 ರಲ್ಲಿ ಅಂತ್ಯವಾಯಿತು. ಚುನಾವಣೆಗಾಗಿ ತನ್ನ ಸ್ವಂತ ಖರ್ಚನ್ನು ಮಾಡಿದ್ದಲ್ಲದೆ ಮನೆಯಲ್ಲೇ ಭೋಜನಕೂಟಗಳನ್ನು ಏರ್ಪಡಿಸುವಂತಹ ಹೆಜ್ಜೆಗಳನ್ನು ಆಕೆ ಇಟ್ಟಿದ್ದರು. ಚುನಾವಣಾ ಪ್ರಚಾರಕ್ಕಂತೂ ಮನೆಯಲ್ಲಿದ್ದ ಒಂದೇ ಒಂದು ಎಮ್ಮೆಯನ್ನೂ ಕೂಡ ಮಾರಿ ಪ್ರಚಾರದ ವೆಚ್ಚಗಳನ್ನು ಸಂಭಾಳಿಸಬೇಕಾಗಿ ಬಂದಿತ್ತು. ''ನಾನು ನಿನಗೆ ಓಟು ಹಾಕಬೇಕಿದ್ದರೆ ಹೊಸ ಸೀರೆಯೊಂದನ್ನು ಕೊಡಿಸಲೇಬೇಕು ಎಂಬ ಬೇಡಿಕೆಯನ್ನು ನನ್ನ ಸ್ವಂತ ತಂಗಿಯೇ ಇಟ್ಟಿದ್ದಳು'', ಎಂದು ಪಕ್ಕದಲ್ಲೇ ಮುಸಿಮುಸಿ ನಗುತ್ತಿರುವ ಹಿರಿಯ ಸಹೋದರಿಯತ್ತ ಬೊಟ್ಟು ಮಾಡುತ್ತಾ ಹುಸಿಮುನಿಸಿನಿಂದ ಹೇಳುತ್ತಿದ್ದಾರೆ ಶಾಲೂಬಾಯಿ.

ಹಾಗೆಯೇ ಮುಂದುವರಿಸುತ್ತಿರುವ ಶಾಲೂಬಾಯಿ ''ಈ ಹಳ್ಳಿಯ ಜನರು ನನ್ನನ್ನು ಉದ್ಧಾರವಾಗಲಂತೂ ಬಿಡುವುದಿಲ್ಲ. ಎಲ್ಲಾ (ಮೇಲ್ಜಾತಿಯ) 'ಹಿರಿತಲೆ'ಗಳು ತಮ್ಮವರಷ್ಟೇ ಮತ್ತಷ್ಟು ಉದ್ಧಾರವಾಗುವಂತೆ, ಹಣವನ್ನು ಸಂಪಾದಿಸುವಂತೆ ನೋಡಿಕೊಳ್ಳುತ್ತವೆ. ನಾವೆಲ್ಲರೂ 'ಮಾಗಸ್ವರ್ಗಿ' (ಹಿಂದುಳಿದ ವರ್ಗ) ಜನರು. ಯಾವತ್ತಾದರೂ ಪ್ರತಿಭಟಿಸಿದರೆ 'ನಿಮ್ಮನ್ನು ನಾವು ಹಳ್ಳಿಯಿಂದಲೇ ಓಡಿಸುತ್ತೇವೆ' ಎಂದು ಅಬ್ಬರಿಸುತ್ತಾರೆ. ಹಾಗೇನಾದರೂ ಆದರೆ ನಾವೆಲ್ಲಿಗೆ ಹೋಗುವುದು? ಹೀಗಾಗಿ ನಾವು ಸುಮ್ಮನಾಗುತ್ತೇವೆ'', ಎನ್ನುತ್ತಿದ್ದಾರೆ.

ಏನೇ ಆದರೂ ತಾನು ಒಮ್ಮೆ ಸರಪಂಚ್ ಆಗಿದ್ದೆ ಎಂಬ ಗೌರವದ ನೆನಪನ್ನು ಜೀವನದ ಕೊನೆಯವರೆಗೂ ಜೋಪಾನವಾಗಿ ಕಾದಿಟ್ಟುಕೊಳ್ಳುವ ತುಡಿತ ಶಾಲೂಬಾಯಿಯದ್ದು. ಇನ್ನು ನೈಜ ನೆಲೆಗಟ್ಟಿನಲ್ಲಿ ನೋಡಿದರೆ ಕುಟುಂಬದ ಜೀವನಮಟ್ಟದಲ್ಲಿ ಅಂಥಾ ಬದಲಾವಣೆಗಳೇನೂ ಆಗಿಲ್ಲ. ಹಳ್ಳಿಯ ಅಂಚಿನಲ್ಲಿ, ಪ್ರಬಲ ಸಾಮಾಜಿಕ ಗುಂಪುಗಳ ನಡುವೆಯೇ ಇಂದಿಗೂ ಭೂಮಿ, ಆಸ್ತಿಪಾಸ್ತಿಗಳು ಇಲ್ಲದೆ ಬಡವರಾಗಿಯೇ ಬದುಕುತ್ತಿದೆ ಶಾಲೂಬಾಯಿಯವರ ಕುಟುಂಬ.


PHOTO • Namita Waikar

ವಾಘೋಲಿ ಗ್ರಾಮಪಂಚಾಯತ್ ಕಚೇರಿಯ ಹೊರಭಾಗದಲ್ಲಿ ಛತ್ರಪತಿ ಶಿವಾಜಿಯ ಪ್ರತಿಮೆಯೆದುರು ನಿಂತಿರುವ ಶಾಲೂಬಾಯಿ

ಉಳಿದ ಎಲ್ಲಾ ಚಿತ್ರಗಳು : ನಮಿತಾ ವಾಯಿಕರ್

ಕೊನೆಯ ಮಾತು : ಮಾರಣಾಂತಿಕ ಗಡ್ಡೆಯೊಂದನ್ನು ಹೊಂದಿದ್ದ ಶಾಲೂಬಾಯಿಯ ಗಂಡ ರಾಜೇಂದ್ರ ಕಸ್ಬೆಯ ಚಿಕಿತ್ಸೆಗಾಗಿ ಕುಟುಂಬವು ಹಲವು ಆಸ್ಪತ್ರೆಗಳ ಕದತಟ್ಟಿತ್ತು . ಚಿಕಿತ್ಸೆಗಾಗಿ ಸ್ಥಳೀಯ ಖಾಸಗಿ ಲೇವಾದೇವಿಯವನಿಂದ ದೊಡ್ಡ ಮೊತ್ತದ ಸಾಲವನ್ನು ತೆಗೆದುಕೊಂಡ ಇವರಿಗೆ ತಮ್ಮ ನೆರೆಕರೆಯವರಿಂದಲೂ ಸಾಲವನ್ನು ಪಡೆದುಕೊಳ್ಳಬೇಕಾಗಿ ಬಂದಿತ್ತು . ಮುಂದೆ 2016 ರಲ್ಲಿ ರಾಜೇಂದ್ರ ಕಸ್ಬೆ ನಿಧನರಾದರು . ಇದಾದ ಕೆಲಕಾಲದಲ್ಲೇ ಶಾಲೂಬಾಯಿಯ ಇಬ್ಬರು ಗಂಡುಮಕ್ಕಳೂ ತಾಯಿಯನ್ನು ತೊರೆದೇಬಿಟ್ಟರು . ಪ್ರಸ್ತುತ ಶಾಲೂಬಾಯಿ ಏಕಾಂಗಿಯಾಗಿ ಜೀವಿಸುತ್ತಿದ್ದಾಳೆ . ತೀರಿಸಬೇಕಾಗಿರುವ ಸಾಲದ ಕುರಿತಾಗಿ ನೆರೆಕರೆಯವರಿಂದ ಇಲ್ಲಸಲ್ಲದ ಮಾತುಗಳನ್ನು ಆಕೆ ಕೇಳುತ್ತಿದ್ದಾಳೆ . ಸಾಲವನ್ನು ನೀಡಿದ್ದ ಲೇವಾದೇವಿಯಾತ ಆಕೆಯ ಪುಟ್ಟ ಮನೆಯನ್ನು ತನಗೆ ಬಿಟ್ಟುಕೊಡಬೇಕೆಂದೂ ಸಾಲವು ಸಂಪೂರ್ಣವಾಗಿ ತೀರುವವರೆಗೂ bond ಬರೆಸಿಕೊಂಡು ಕಾರ್ಮಿಕಳಾಗಿ ಕೆಲಸ ಮಾಡಿಕೊಂಡಿರಬೇಕೆಂದೂ ಈಗ ಒತ್ತಡವನ್ನು ಹಾಕುತ್ತಿದ್ದಾನೆ .

ಈ ವರದಿಯನ್ನು ಸಿದ್ಧಪಡಿಸುವಲ್ಲಿ ಸಹಕರಿಸಿದ, ಈ ಹಿಂದೆ A.B.P. ಮಾಝಾ ಚಾನೆಲ್ ನಲ್ಲಿದ್ದವರೂ ಆದ ಭರತ್ ಪಾಟೀಲ್ ರವರಿಗೆ ಧನ್ಯವಾದಗಳು

Namita Waikar is a writer, translator and Managing Editor at the People's Archive of Rural India. She is the author of the novel 'The Long March', published in 2018.

Other stories by Namita Waikar
Translator : Prasad Naik

Currently working as a Senior Engineer at Gurugram (Haryana), Prasad Naik has served in Uige of Republic of Angola (Africa) for a drinking water supply project. Prasad Naik is a freelance writer and columnist. He can be contacted at [email protected]. This translation was coordinated by Crazy Frog Media Features. Crazy Frog Media is a congregation of likeminded Journalists. A Bangalore-based online news media hub that offers news, creative content, business solutions and consultancy services.

Other stories by Prasad Naik