“21 ವರ್ಷಗಳ ನನ್ನ ರೈತಾಪಿ ಜೀವನದಾಗ ನಾನೆಂದು ಇಂತಾ ಕಷ್ಟ ಎದುರಿಸಿಲ್ಲ ನೋಡ್ರಿ" ಎಂದು ಚಿತ್ತಾರಕಾಡು ಗ್ರಾಮದ ಕಲ್ಲಂಗಡಿ ಕೃಷಿಕ ಎ. ಸುರೇಶ್ ಕುಮಾರ್ ಹೇಳುತ್ತಿದ್ದರು. ಈ ಪ್ರದೇಶದ ಇತರ ರೈತರಂತೆ, 40 ವರ್ಷದ ಸುರೇಶ್ ಕುಮಾರ್ ಪ್ರಮುಖವಾಗಿ ಭತ್ತವನ್ನು ಬೆಳೆಯುತ್ತಾರೆ, ಆದರೆ ತಮ್ಮ ಐದು ಎಕರೆ ಜಮೀನಿನಲ್ಲಿ ಹಾಗೂ ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯ ಚಿತ್ತಮೂರ್ ಬ್ಲಾಕ್‌ನಲ್ಲಿರುವ 1,859 ಜನಸಂಖ್ಯೆಯನ್ನು ಹೊಂದಿರುವ ತಮ್ಮ ಹಳ್ಳಿಯಲ್ಲಿ ಸ್ನೇಹಿತರು ಮತ್ತು ಕುಟುಂಬದಿಂದ 18.5 ಎಕರೆಗಳನ್ನು ಗುತ್ತಿಗೆ ಪಡೆದಿರುವ ಜಮೀನಿನಲ್ಲಿ ಚಳಿಗಾಲದ ವೇಳೆ ಕಲ್ಲಂಗಡಿಯನ್ನು ಬೆಳೆಯುತ್ತಾರೆ.

“ಕಲ್ಲಂಗಡಿಗಳು 65 ರಿಂದ 70 ದಿನಗಳಲ್ಲಿ ಸಿದ್ಧವಾಗುತ್ತವೆ.ಮಾರ್ಚ್ 25 ರಂದು ಲಾಕ್‌ಡೌನ್ ಘೋಷಿಸಿದಾಗ ತಮಿಳುನಾಡು, ಬೆಂಗಳೂರು ಮತ್ತು ಕರ್ನಾಟಕದ ಇತರ ಭಾಗಗಳಲ್ಲಿ ಹಣ್ಣುಗಳನ್ನು ಕಟಾವು ಮಾಡಲು ಮತ್ತು ಕಳುಹಿಸಲು ನಾವೆಲ್ಲರೂ ಸಿದ್ಧವಾಗಿದ್ದೆವು ಎಂದು ಅವರು ಹೇಳಿದರು. "ಈಗ ಅವು ಕೊಳೆಯುವ ಹಂತದಲ್ಲಿವೆ. ನಾವು ಸಾಮಾನ್ಯವಾಗಿ ಖರೀದಿದಾರರಿಂದ ಪ್ರತಿ ಟನ್‌ಗೆ 10,000,ರೂ ಪಡೆಯುತ್ತೇವೆ, ಆದರೆ ಈ ವರ್ಷ ಯಾರೂ ಕೂಡ  2,000,ರೂ ಗಿಂತ ಹೆಚ್ಚಿಗೆ ನೀಡುತ್ತಿಲ್ಲ" ಎಂದರು.

ತಮಿಳುನಾಡಿನಲ್ಲಿ, ಕಲ್ಲಂಗಡಿ ಬೆಳೆಯನ್ನು ತಮಿಳು ಕ್ಯಾಲೆಂಡರ್ ತಿಂಗಳುಗಳಾದ ಮಾರ್ಗಜಿ ಮತ್ತು ಥಾಯ್ ನಲ್ಲಿ ಮಾತ್ರ ನಾಟಿ ಮಾಡಲಾಗುತ್ತದೆ, ಇದು ಸರಿಸುಮಾರು ಡಿಸೆಂಬರ್ ನಿಂದ ಫೆಬ್ರವರಿವರೆಗಿನ ಅವಧಿಗೆ ಅನುಗುಣವಾಗಿರುತ್ತದೆ. ಈ ಋತುವಿನಲ್ಲಿ ಇದು ಈ ಪ್ರದೇಶದಲ್ಲಿ ಉತ್ತಮವಾಗಿ ಬೆಳೆಯುತ್ತದೆ, ಮತ್ತು ಉರಿಯುವ ದಕ್ಷಿಣ ಬೇಸಿಗೆ ಆರಂಭವಾದಾಗ ಬೆಳೆಯು ಕೊಯ್ಲಿಗೆ ಸಿದ್ಧವಾಗುತ್ತದೆ. ಕಲ್ಲಂಗಡಿ ಉತ್ಪಾದಿಸುವ ರಾಜ್ಯಗಳಲ್ಲಿಯೇ ತಮಿಳುನಾಡಿಗೆ ಎಂಟನೇ ಸ್ಥಾನವಿದೆ - ಇಲ್ಲಿ 162.74 ಸಾವಿರ ಮೆಟ್ರಿಕ್ ಟನ್ ಹಣ್ಣುಗಳನ್ನು 6.93 ಸಾವಿರ ಹೆಕ್ಟೇರ್‌ ಭೂ ಪ್ರದೇಶದಲ್ಲಿ ಉತ್ಪಾದಿಸಲಾಗುತ್ತದೆ.

“ನನ್ನ ಹೊಲದ ವಿವಿಧ ಭಾಗಗಳಲ್ಲಿ ಎರಡು ವಾರಗಳ ಅಂತರದಲ್ಲಿ ಪಕ್ವ ಬೆಳೆಗಳನ್ನು ಬೆಳೆಯುವ ರೀತಿಯಲ್ಲಿ ನಾನು ನೆಟ್ಟಿದ್ದೇನೆ. ಅವು ಸಿದ್ಧವಾದ ಕೆಲವು ದಿನಗಳಲ್ಲಿ ನೀವು ಕೊಯ್ಲು ಮಾಡದಿದ್ದರೆ, ಹಣ್ಣು ಹಾಳಾಗುತ್ತದೆ,” ಎಂದು ಕುಮಾರ್ (ಮೇಲಿನ ಕವರ್ ಫೋಟೋದಲ್ಲಿ ಇರುವವರು ) ಹೇಳುತ್ತಾರೆ. "ನಮಗೆ ಲಾಕ್‌ಡೌನ್ ಬಗ್ಗೆ ಮಾಹಿತಿ ಇರಲಿಲ್ಲ, ಹಾಗಾಗಿ ನನ್ನ ಮೊದಲ ಫಸಲು ಸಿದ್ಧವಾದಾಗ [ಮಾರ್ಚ್ ಕೊನೆಯ ವಾರದಲ್ಲಿ], ಲೋಡ್ ಸಾಗಿಸಲು ಯಾವುದೇ ಖರೀದಿದಾರರು ಅಥವಾ ಟ್ರಕ್ ಚಾಲಕರು ತಯಾರಿರಲಿಲ್ಲ.” ಎಂದು ಹೇಳಿದರು.

ಕುಮಾರ್ ಅಂದಾಜಿನ ಪ್ರಕಾರ ಚಿತ್ತಮೂರ್ ಬ್ಲಾಕ್‌ನಲ್ಲಿ ಕನಿಷ್ಠ 50 ಕಲ್ಲಂಗಡಿ ಬೆಳೆಗಾರರು ಇದ್ದಾರೆ. ಅನೇಕರು ಈಗ ತಮ್ಮ ಹಣ್ಣುಗಳನ್ನು ಕೊಳೆಯಲು ಬಿಡುತ್ತಾರೆ ಅಥವಾ ಫಸಲನ್ನು ತೀರಾ ಕಡಿಮೆ ಬೆಲೆಗೆ ಮಾರುತ್ತಾರೆ.

Left: In Kokkaranthangal village, watermelons ready for harvest on M. Sekar's farm, which he leased by pawning off jewellery. Right: A. Suresh Kumar's fields in Chitharkadu village; there were no buyers or truck drivers to move his first harvest in the  last week of March
PHOTO • Rekha Sekar
Left: In Kokkaranthangal village, watermelons ready for harvest on M. Sekar's farm, which he leased by pawning off jewellery. Right: A. Suresh Kumar's fields in Chitharkadu village; there were no buyers or truck drivers to move his first harvest in the  last week of March
PHOTO • S Senthil Kumar

ಎಡಕ್ಕೆ: ಕೊಕ್ಕರಂತಂಗಲ್ ಗ್ರಾಮದಲ್ಲಿ, ಕಲ್ಲಂಗಡಿಗಳು ಎಂ.ಸೇಕರ್ ಅವರ ಜಮೀನಿನಲ್ಲಿ ಕಟಾವಿಗೆ ಸಿದ್ಧವಾಗಿದ್ದು, ಅವರು ಆಭರಣಗಳನ್ನು ಗಿರವಿ ಹಾಕುವ ಮೂಲಕ ಗುತ್ತಿಗೆ ಪಡೆದರು. ಬಲಕ್ಕೆ : ಚಿತ್ತರಕಾಡು ಗ್ರಾಮದಲ್ಲಿ ಎ.ಸುರೇಶ್ ಕುಮಾರ್ ಅವರ ಹೊಲಗಳು; ಮಾರ್ಚ್ ಕೊನೆಯ ವಾರದಲ್ಲಿ ಅವರ ಮೊದಲ ಫಸಲನ್ನು ಸಾಗಿಸಲು ಖರೀದಿದಾರರು ಅಥವಾ ಟ್ರಕ್ ಚಾಲಕರು ಇರಲಿಲ್ಲ

ಕೆಲವು ರೈತರು ತೆಗೆದುಕೊಂಡ ಸಾಲದಿಂದಾಗಿ ಈ ಹಿನ್ನಡೆಯುಂಟಾಗಿದೆ.ಅವರಲ್ಲಿ 45 ವರ್ಷದ ಎಂ.ಸೇಕರ್, ಚಿತ್ತರಕಾಡಿನಿಂದ ಮೂರು ಕಿಲೋಮೀಟರ್ ದೂರದಲ್ಲಿರುವ ಕೊಕ್ಕರಂತಂಗಲ್ ಗ್ರಾಮದವರಾಗಿದ್ದಾರೆ. "ನನ್ನ ಮೂವರು ಹೆಣ್ಣುಮಕ್ಕಳಿಗೆ ಜಮೀನುಗಳಿಗೆ ಗುತ್ತಿಗೆ ಪಾವತಿಸಲು ಹಾಗೂ ನಾಲ್ಕು ಎಕರೆಯಲ್ಲಿ ಕಲ್ಲಂಗಡಿ ಬೆಳೆಯಲು ಆಭರಣಗಳನ್ನು ನಾನು ಗಿರವಿ ಇಟ್ಟಿದ್ದೇನೆ" ಎಂದು ಅವರು ಹೇಳುತ್ತಾರೆ. "ಈಗ, ಸುಗ್ಗಿಯ ಸಮಯ ಬಂದಾಗ, ಖರೀದಿದಾರರು ಇರುವುದಿಲ್ಲ. ಇತರ ಬೆಳೆಗಳಿಗಿಂತ ಭಿನ್ನವಾಗಿ, ಮುಂದಿನ ದಿನಗಳಲ್ಲಿ ನಾವು ಲೋಡ್ ಮಾಡಿ ಕಳುಹಿಸದಿದ್ದರೆ, ನನ್ನ ಸಂಪೂರ್ಣ ಫಸಲು ನಾಶವಾಗುತ್ತದೆ." ಎನ್ನುತ್ತಾರೆ.

ಕುಮಾರ್ ಮತ್ತು ಶೇಖರ್ ಇಬ್ಬರೂ ಖಾಸಗಿ ಸಾಲಗಾರರಿಂದ ಬಡ್ಡಿ ದರದಲ್ಲಿ ಸಾಲವನ್ನು ಪಡೆದಿದ್ದಾರೆ. ಮತ್ತು ಇಬ್ಬರೂ ಅಂದಾಜಿನ ಪ್ರಕಾರ ಒಟ್ಟು ವಿಸ್ತೀರ್ಣದಲ್ಲಿ ಈ ಬೆಳೆಗೆ ತಲಾ 6-7 ಲಕ್ಷಗಳನ್ನು ಹೂಡಿಕೆ ಮಾಡಿದ್ದಾರೆ ಎನ್ನಲಾಗಿದೆ, ಇದರಲ್ಲಿ ಭೂಮಿಯನ್ನು ಬಾಡಿಗೆಗೆ ಪಡೆಯುವುದು, ಬೀಜಗಳನ್ನು ಖರೀದಿಸುವುದು, ಬೆಳೆಯನ್ನು ನೋಡಿಕೊಳ್ಳುವುದು ಹಾಗೂ ಕೃಷಿ ಕಾರ್ಮಿಕರಿಗೆ ಪಾವತಿ ಮಾಡುವುದು ಸೇರಿವೆ. ಶೇಖರ್ ಮೂರು ವರ್ಷಗಳಿಂದ ಕಲ್ಲಂಗಡಿ ಕೃಷಿ ಮಾಡುತ್ತಿದ್ದರೆ, ಕುಮಾರ್ ಅವರು 19 ವರ್ಷಗಳಿಂದ ಈ ಹಣ್ಣಿನ ಕೃಷಿ ಮಾಡುತ್ತಿದ್ದಾರೆ.

“ಇದರಿಂದ ಬರುವ ಲಾಭವು ನನ್ನ ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಭವಿಷ್ಯಕ್ಕೆ ಸಹಾಯಕವಾಗುತ್ತದೆ ಎನ್ನುವ ಭರವಸೆಯಿಂದಾಗಿ ನಾನು ಇದರಲ್ಲಿ ತೊಡಗಿಸಿಕೊಂಡೆ" ಎಂದು ಶೇಖರ್ ಹೇಳುತ್ತಾರೆ. “ಆದರೆ ಈಗ ಅವರ ಆಭರಣಗಳು ನನ್ನ ಬಳಿ ಉಳಿದಿಲ್ಲ. ಸಾಮಾನ್ಯವಾಗಿ, ನಮಗೆ ಎಲ್ಲಾ ವೆಚ್ಚಗಳನ್ನು ತೆಗೆದ ನಂತರ ಸುಮಾರು 2 ಲಕ್ಷ ಲಾಭ ಬರುತ್ತದೆ. ಈ ವರ್ಷ, ನಾವು ನಮ್ಮ ಹೂಡಿಕೆಯ ಒಂದು ಭಾಗವನ್ನು ಮಾತ್ರ ಮರಳಿ ಪಡೆಯಬಹುದು ಇಲ್ಲವೇ ಯಾವುದೇ ಲಾಭ ಬರುತ್ತದೆ ಎನ್ನುವುದನ್ನು ನಾವು ಮರೆತುಬಿಡಬೇಕು" ಎಂದು ಹೇಳುತ್ತಾರೆ.

ಕೊಕ್ಕರಂತಂಗಲ್ ಹಳ್ಳಿಯ ಮತ್ತೊಬ್ಬ ಕಲ್ಲಂಗಡಿ ಕೃಷಿಕ ಎಂ. ಮುರುಗವೇಲ್ (41), "ನಾನು ಅಂತಹ ಕೆಟ್ಟ ಆಫರ್ ಗಳನ್ನು ಒಪ್ಪಿಕೊಳ್ಳಲು ಒಂದೇ ಕಾರಣವೆಂದರೆ ಅಂತಹ ಒಳ್ಳೆಯ ಹಣ್ಣುಗಳು ಕೊಳೆಯುವುದನ್ನು ನಾನು ಬಯಸುವುದಿಲ್ಲ. ಇದು ಈಗಾಗಲೇ ನನಗೆ ಭಾರಿ ನಷ್ಟವನ್ನುಂಟು ಮಾಡಿದೆ. “ಕಲ್ಲಂಗಡಿ ಬೆಳೆಯಲು ಮುರುಗವೇಲ್ 10 ಎಕರೆ ಭೂಮಿಯನ್ನು ಗುತ್ತಿಗೆಗೆ ತೆಗೆದುಕೊಂಡಿದ್ದಾರೆ."ಈ ಪರಿಸ್ಥಿತಿ ಮುಂದುವರಿದರೆ ಏನು ಮಾಡಬೇಕೆಂದು ನನಗೆ ಗೊತ್ತಿಲ್ಲ. ನನ್ನ ಹಳ್ಳಿಯಲ್ಲಿ ಇತರ ರೈತರು ಅಷ್ಟೇ ಸಮಾನ ಮೊತ್ತವನ್ನು ಹೂಡಿಕೆ ಮಾಡಿದ್ದಾರೆ ಮತ್ತು ಈಗ ಯಾವುದೇ ಖರೀದಿದಾರರು ಈಗ ಹಣ್ಣುಗಳನ್ನು ಖರೀದಿಸಲು ಸಾಧ್ಯವಿಲ್ಲರುವುದರಿಂದಾಗಿ ಅವರು ಅವರ ಸಂಪೂರ್ಣ ಹೊಲಗಳನ್ನು ಕೊಳೆಯಲು ಬಿಟ್ಟಿರುತ್ತಾರೆ" ಎಂದು ಅವರು ಹೇಳುತ್ತಾರೆ.

A farmer near Trichy with his watermelons loaded onto a truck. A few trucks are picking up the fruits now, but farmers are getting extemely low prices
PHOTO • Dept of Agriculture-Tamil Nadu
A farmer near Trichy with his watermelons loaded onto a truck. A few trucks are picking up the fruits now, but farmers are getting extemely low prices
PHOTO • Dept of Agriculture-Tamil Nadu

ತಿರುಚ್ಚಿಯ ಬಳಿ ರೈತನೊಬ್ಬ ತನ್ನ ಕಲ್ಲಂಗಡಿಗಳನ್ನು ಟ್ರಕ್‌ಗೆ ತುಂಬಿಸುತ್ತಿರುವುದು. ಕೆಲವು ಟ್ರಕ್‌ಗಳು ಈಗ ಹಣ್ಣುಗಳನ್ನು ತೆಗೆದುಕೊಳ್ಳುತ್ತಿವೆ, ಆದರೆ ರೈತರು ಕಡಿಮೆ ಬೆಲೆಯನ್ನು ಪಡೆಯುತ್ತಿದ್ದಾರೆ

“ನಾವು ರೈತರ ಕುರಿತು ನಿಜವಾಗಿಯೂ ಸಹಾನುಭೂತಿ ಹೊಂದಿದ್ದೇವೆ. ಲಾಕ್‌ಡೌನ್‌ನ ಮೊದಲ ಎರಡು ದಿನಗಳಲ್ಲಿ, ಸಾರಿಗೆ ಕಷ್ಟವಾಗಿತ್ತು ಎಂಬುದನ್ನು ನಾನು ಒಪ್ಪುತ್ತೇನೆ. ನಾವು ತಕ್ಷಣ ಆ ವಿಚಾರವಾಗಿ ಕ್ರಮ ಕೈಗೊಂಡಿದ್ದೇವೆ ಮತ್ತು ಈಗ ರಾಜ್ಯದ ಎಲ್ಲಾ ಮಾರುಕಟ್ಟೆಗಳಿಗೆ ಮತ್ತು ಸಾಧ್ಯವಾದಾಗ ನೆರೆಯ ರಾಜ್ಯಗಳಿಗೆ ಹಣ್ಣುಗಳನ್ನು ತೆಗೆದುಕೊಂಡು ಹೋಗುವುದನ್ನು ನಾವು ಖಚಿತಪಡಿಸಿಕೊಳ್ಳುತ್ತಿದ್ದೇವೆ ಎಂದು ಕೃಷಿ ಉತ್ಪಾದನಾ ಆಯುಕ್ತ ಮತ್ತು ಕೃಷಿ ಇಲಾಖೆಯ (ತಮಿಳುನಾಡು) ಪ್ರಧಾನ ಕಾರ್ಯದರ್ಶಿ ಗಗನ್ ದೀಪ್ ಸಿಂಗ್ ಬೇಡಿ ಹೇಳುತ್ತಾರೆ.

ಬೇಡಿ ಅವರು ನೀಡಿದ ಮಾಹಿತಿಯ ಪ್ರಕಾರ, ಮಾರ್ಚ್ 27ರಿಂದ ಏಪ್ರಿಲ್ 2ರವರೆಗೆ ತಮಿಳುನಾಡಿನ ವಿವಿಧ ಮಾರುಕಟ್ಟೆಗಳಿಗೆ 978 ಮೆಟ್ರಿಕ್ ಟನ್ ಕಲ್ಲಂಗಡಿಗಳನ್ನು ಚಿತ್ತಮೂರ್ ಬ್ಲಾಕ್‌ನಿಂದ ಸಾಗಿಸಲಾಗಿದೆ. "ಕಾರಣವೇನೆಂದು ನನಗೆ ತಿಳಿದಿಲ್ಲ, ಆದರೆ ಈ ಬಿಕ್ಕಟ್ಟಿನ ಸಮಯದಲ್ಲಿ ಕಲ್ಲಂಗಡಿ ಮಾರಾಟಕ್ಕೆ ತೀವ್ರ ಹೊಡೆತ ಬಿದ್ದಿದೆ, ಆದ್ದರಿಂದ ಇದು ದೊಡ್ಡ ಸಮಸ್ಯೆಯಾಗಿದೆ. ಆದರೆ ನಾವು ನಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡುತ್ತಿದ್ದೇವೆ.” ಎಂದು ಅವರು ಹೇಳುತ್ತಾರೆ.

ರೈತರಿಗಾಗುವ ಭಾರೀ ನಷ್ಟಕ್ಕೆ ರಾಜ್ಯವು ಪರಿಹಾರವನ್ನು ನೀಡುತ್ತದೆಯೇ? “ಸದ್ಯಕ್ಕೆ ನಾವು ಕಟಾವಿಗೆ ಸಾರಿಗೆ ವ್ಯವಸ್ಥೆ ಮಾಡುವತ್ತ ಗಮನ ಹರಿಸುತ್ತಿದ್ದೇವೆ" ಎಂದು ಬೇಡಿ ಉತ್ತರಿಸುತ್ತಾರೆ. “ಪರಿಹಾರವು ರಾಜಕೀಯ ನಿರ್ಧಾರವಾಗಿರುವುದರಿಂದ ಇದನ್ನು ತದನಂತರ ನೋಡಬೇಕು. ರೈತರು ಈ ಬಿಕ್ಕಟ್ಟಿನಿಂದ ಚೇತರಿಸಿಕೊಳ್ಳಲು ನಮ್ಮ ಕೈಲಾದ ಮಟ್ಟಿಗೆ ಅವರಿಗೆ ಸಹಾಯ ಮಾಡುತ್ತೇವೆ" ಎಂದು ಅವರು ಹೇಳುತ್ತಾರೆ.

ಚಿತ್ತಮೂರಿನ ರೈತರು ತಮ್ಮ ಕೊಯ್ಲುಗಳನ್ನು ಸಂಗ್ರಹಿಸಲು ಲಾರಿಗಳು ಬರುತ್ತಿವೆ ಎಂಬುದನ್ನು ಒಪ್ಪಿಕೊಳ್ಳುತ್ತಾರೆ, ಆದರೆ ಅವು ಕಡಿಮೆ ಸಂಖ್ಯೆಯಲ್ಲಿವೆ. "ಅವರು ಕೆಲವು ಹಣ್ಣುಗಳನ್ನು ತೆಗೆದುಕೊಂಡರೂ, ಉಳಿದವು ಹಾಗೆ ಕೊಳೆಯುತ್ತವೆ" ಎಂದು ಸುರೇಶ್ ಕುಮಾರ್ ಹೇಳುತ್ತಾರೆ. "ಮತ್ತು ಅವುಗಳನ್ನು ತೆಗೆದುಕೊಳ್ಳುವವರಿಂದ ನಮಗೆ ಅತ್ಯಲ್ಪ ಮೊತ್ತ ಸಿಗುತ್ತದೆ. ಕರೋನಾದಿಂದ ನಗರಗಳಲ್ಲಿ ಜನರು ಅನಾರೋಗ್ಯಕ್ಕೆ ಒಳಗಾಗುತ್ತಿರುವುದರಿಂದಾಗಿ ನಮ್ಮ ಆದಾಯವನ್ನು ಕಳೆದುಕೊಳ್ಳುತ್ತಿದ್ದೇವೆ" ಎಂದು ಅವರು ಹೇಳುತ್ತಾರೆ.

ಅನುವಾದ - ಎನ್ . ಮಂಜುನಾಥ್

Sibi Arasu

Sibi Arasu is an independent journalist based in Bengaluru. @sibi123

Other stories by Sibi Arasu
Translator : N. Manjunath