ಚಂಪತ್ ನಾರಾಯಣ್ ಜಂಗ್ಲೆ ಸತ್ತು ಬಿದ್ದ ಸ್ಥಳವು ಕಲ್ಲುಗಳಿಂದ ಕೂಡಿದ್ದ ಸಡಿಲ ಮಣ್ಣಿನ ಸಣ್ಣ ಹತ್ತಿಯ ಹೊಲವಾಗಿತ್ತು.

ಮಹಾರಾಷ್ಟ್ರದ ಈ ಭಾಗಗಳಲ್ಲಿ ಇಂತಹ ಹೊಲಗಳನ್ನು ಹಲ್ಕಿ ಜಮೀನ್‌ ಅಥವಾ ಹೆಚ್ಚು ಘಾತವಿಲ್ಲದ ಭೂಮಿಯೆಂದು ಕರೆಯುತ್ತಾರೆ. ಸೊಂಪಾದ ಹಸಿರು ಗುಡ್ಡವು ಹಳ್ಳಿಯಿಂದ ದೂರವಿರುವ ಕೃಷಿಭೂಮಿಯ ಪ್ರತ್ಯೇಕ ಪ್ರದೇಶವಾದ ಆಂಧ್ ಕುಲಕ್ಕೆ ಸೇರಿದ ಭೂಮಿಯ ಈ ಏರಿಳಿತದ ಕ್ಯಾನ್ವಾಸಿನಂತಹ ಸುಂದರವಾದ ಹಿನ್ನೆಲೆಯನ್ನು ಒದಗಿಸುತ್ತದೆ.

ಚಂಪತ್‌ ಅವರ ಅವರ ಸಣ್ಣ ಹುಲ್ಲಿನ ಗುಡಿಸಲು ಅದೇ ಹೊಲದಲ್ಲಿ ನಿಂತಿದೆ. ಇದು ಅವರಿಗೆ ಸುಡುವ ಬಿಸಿಲು ಮತ್ತು ಸುರಿಯುವ ಮಳೆಯಿಂದ ರಕ್ಷಣೆ ನೀಡುತ್ತಿತ್ತು. ತನ್ನ ಹೊಲಕ್ಕೆ ಬರುವ ಕಾಡು ಹಂದಿಗಳನ್ನು ಕಾಯುವ ಸಲುವಾಗಿಯೂ ಅವರು ಇದೇ ಗುಡಿಸಲಿನಲ್ಲಿ ತಂಗುತ್ತಿದ್ದರು. ಅವರು ಹೆಚ್ಚು ಕಾಲ ಇದೇ ಗುಡಿಸಲಿನಲ್ಲಿರುತ್ತಿದ್ದರು ಎಂದು ಅವರ ಅಕ್ಕಪಕ್ಕದವರು ನೆನಪಿಸಿಕೊಳ್ಳುತ್ತಾರೆ.

40ರ ದಶಕದಲ್ಲಿದ್ದ ಅಂಧ ಕುಲದ ರೈತ ಚಂಪತ್‌ ಅವರಿಗೆ ಈ ಗುಡಿಸಲಿನಿಂದ ಇಡೀ ಹೊಲ ಕಾಣಬೇಕಿತ್ತು. ಕೊನೆಯಿಲ್ಲದ ನಷ್ಟಕ್ಕೆ ಈಡು ಮಾಡುವ, ಮಳೆಯಿಂದಾಗಿ ಹಾನಿಗೀಡಾಗಿದ್ದ ತೊಗರಿ ಗಿಡಗಳು ಆ ಹೊಲದಲ್ಲಿದ್ದವು.

ಬಹುಶಃ ಕೊಯ್ಲು ಆರಂಭಗೊಂಡಿದ್ದ ಎರಡು ತಿಂಗಳಿನಲ್ಲಿ ತನ್ನ ಹೊಲದ ಗಿಡಗಳು ಯಾವುದೇ ಇಳುವರಿ ನೀಡುವುದು ಸಾಧ್ಯವಿಲ್ಲವೆನ್ನುವುದು ಅವರಿಗೆ ತಿಳಿದಿತ್ತು ಎನ್ನಿಸುತ್ತದೆ. ಚಂಪತ್‌ ಬಾಕಿ ಸಾಲಕ್ಕೆ ಮತ್ತು ಕುಟುಂಬದ ದೈನಂದಿನ ಖರ್ಚುಗಳನ್ನು ನಿಭಾಯಿಸಲು ಹಣವನ್ನು ಹೊಂದಿಸಿಕೊಳ್ಳಬೇಕಿತ್ತು, ಅವರ ಬಳಿ ಒಂದು ರೂಪಾಯಿಯೂ ಇದ್ದಿರಲಿಲ್ಲ.

Badly damaged and stunted cotton plants on the forlorn farm of Champat Narayan Jangle in Ninganur village of Yavatmal district. Champat, a small farmer, died by suicide on August 29, 2022.
PHOTO • Jaideep Hardikar
The small thatched canopy that Champat had built for himself on his farm looks deserted
PHOTO • Jaideep Hardikar

ಎಡಕ್ಕೆ: ಯವತ್ಮಾಲ್ ಜಿಲ್ಲೆಯ ನಿಂಗನೂರು ಗ್ರಾಮದ ಚಂಪತ್ ನಾರಾಯಣ್ ಜಂಗ್ಲೆ ಅವರ ಹೊಲದಲ್ಲಿ ಹತ್ತಿ ಗಿಡಗಳು ತೀವ್ರವಾಗಿ ಹಾನಿಗೀಡಾಗಿವೆ ಮತ್ತು ಅವುಗಳ ಬೆಳವಣಿಗೆ ಕುಂಠಿತಗೊಂಡಿದೆ. ಚಂಪತ್ ಎಂಬ ಸಣ್ಣ ರೈತ ಆಗಸ್ಟ್ 29, 2022ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಬಲಗಡೆ: ಚಂಪತ್ ತನ್ನ ಜಮೀನಿನಲ್ಲಿ ತನಗಾಗಿ ನಿರ್ಮಿಸಿದ್ದ ಸಣ್ಣ ಹುಲ್ಲಿನ ಮಾಡು ಈಗ ಅವರಿಲ್ಲದೆ ಬಿಕೋ ಎನ್ನುತ್ತಿದೆ

ಆಗಸ್ಟ್ 29, 2022ರಂದು ಮಧ್ಯಾಹ್ನ, ಅವರ ಪತ್ನಿ ಧ್ರುಪದಾ ತನ್ನ ಅನಾರೋಗ್ಯ ಪೀಡಿತ ತಂದೆಯನ್ನು ನೋಡಲು 50 ಕಿ.ಮೀ ದೂರದಲ್ಲಿರುವ ಅವರ ಹಳ್ಳಿಗೆ ಮಕ್ಕಳೊಂದಿಗೆ ಹೋಗಿದ್ದ ಸಮಯದಲ್ಲಿ, ಚಂಪತ್ ಅವರು ಒಂದು ದಿನದ ಹಿಂದೆ ಸಾಲ ಮಾಡಿ ಖರೀದಿಸಿದ ಮೊನೊಸಿಲ್ ಎನ್ನುವ ಮಾರಣಾಂತಿಕ ಕೀಟನಾಶಕ ಸೇವಿಸಿದರು.

ನಂತರ ಅವರು ಎದುರಿನ ಹೊಲದಲ್ಲಿ ಕೆಲಸ ಮಾಡುತ್ತಿದ್ದ ತನ್ನ ಸೋದರಸಂಬಂಧಿಯತ್ತ ವಿಷದ ಕ್ಯಾನ್‌ ಹಿಡಿದ ಕೈಯಿಂದಲೇ ಕೈಬೀಸುತ್ತಾ ಕರೆದು, ನಂತರ ಕುಸಿದು ಬಿದ್ದು ಮರಣ ಹೊಂದಿದ್ದಾರೆ.

"ನಾನು ಅಲ್ಲೇ ಎಲ್ಲವನ್ನೂ ಬಿಟ್ಟು ಅವನ ಬಳಿಗೆ ಧಾವಿಸಿದೆ," ಎಂದು ಚಂಪತ್ ಅವರ ಚಿಕ್ಕಪ್ಪ 70 ವರ್ಷದ ರಾಮ್ ದಾಸ್ ಜಂಗ್ಲೆ ನೆನಪಿಸಿಕೊಳ್ಳುತ್ತಾರೆ, ಅವರು ಪಕ್ಕದ ಹೊಲದಲ್ಲಿ ಕೆಲಸ ಮಾಡುತ್ತಿದ್ದರು, ಅದು ಮತ್ತೊಂದು ಬಂಜರು ಕಲ್ಲಿನಿಂದ ಭೂಮಿ ತುಂಡು, ಈ ಘಟನೆ ನಡೆದಾಗ. ಸಂಬಂಧಿಕರು ಮತ್ತು ಗ್ರಾಮಸ್ಥರು ಅವರನ್ನು ಗ್ರಾಮದಿಂದ 30 ಕಿಲೋಮೀಟರ್ ದೂರದಲ್ಲಿರುವ ಗ್ರಾಮೀಣ ಆಸ್ಪತ್ರೆಗೆ ಕರೆದೊಯ್ಯಲು ವಾಹನದ ವ್ಯವಸ್ಥೆ ಮಾಡುವಲ್ಲಿ ಯಶಸ್ವಿಯಾದ ನಂತರ ಅಲ್ಲಿ ʼಇಲ್ಲಿಗೆ ತರುವಾಗಲೇ ಮೃತಪಟ್ಟಿದ್ದಾರೆʼ ಎಂದು ಘೋಷಿಸಲಾಯಿತು.

*****

ನಿಂಗನೂರ್, ಮಹಾರಾಷ್ಟ್ರದ ಪಶ್ಚಿಮ ವಿದರ್ಭ ಪ್ರದೇಶದ ಯವತ್ಮಲ್‌ನ ಉಮರ್‌ಖೇಡ್ ತೆಹಸಿಲ್‌ನಲ್ಲಿರುವ ಸ‍ಣ್ಣ ಗ್ರಾಮವಾಗಿದ್ದು, ಇಲ್ಲಿ ಹೆಚ್ಚಾಗಿ ಆಂಧ್ ಬುಡಕಟ್ಟಿಗೆ ಸೇರಿದ ಸಣ್ಣ ಅಥವಾ ಅತಿಸಣ್ಣ ರೈತರು ವಾಸಿಸುತ್ತಿದ್ದಾರೆ, ಕನಿಷ್ಟ ಜೀವನಾಧಾರ ಮತ್ತು ಕನಿಷ್ಟ ಆಳವಿರುವ ಹೊಲದಲ್ಲಿ ಅವರ ಬದುಕು ಸಾಗುತ್ತಿದೆ. ಚಂಪತ್‌ ಅವರ ಬದುಕು ಕೂಡಾ ಇದೇ ರೀತಿಯಿತ್ತು.

ಕಳೆದ ಎರಡು ತಿಂಗಳುಗಳಲ್ಲಿ ವಿದರ್ಭವು ಜುಲೈ ಮತ್ತು ಆಗಸ್ಟ್ ಮಧ್ಯದವರೆಗೆ ಎಡೆಬಿಡದೆ ಸುರಿದ ಭಾರಿ ಮಳೆಯ ಹಿನ್ನೆಲೆಯಲ್ಲಿ ವಿನಾಶಕಾರಿ ಆರ್ದ್ರ-ಬರಗಾಲದ ನಂತರ ರೈತರ ಸರಣಿ ಆತ್ಮಹತ್ಯೆಗಳಿಗೆ ಸಾಕ್ಷಿಯಾಗಿದೆ.

"ಸುಮಾರು ಮೂರು ವಾರಗಳವರೆಗೆ, ನಾವು ಸೂರ್ಯನನ್ನು ನೋಡಿರಲಿಲ್ಲ," ಎಂದು ರಾಮದಾಸ್ ಹೇಳುತ್ತಾರೆ. ಮೊದಲನೆಯದಾಗಿ, ಭಾರಿ ಮಳೆ ಬಿತ್ತನೆಯನ್ನು ಹಾಳುಮಾಡಿತು ಎಂದು ಅವರು ಹೇಳುತ್ತಾರೆ. ನಂತರದ ಒಣಹವೆ ಮಳೆಯಿಂದ ಬದುಕುಳಿದ ಸಸ್ಯಗಳ ಬೆಳವಣಿಗೆಯನ್ನು ಕುಂಠಿತಗೊಳಿಸಿತು. "ನಾವು ರಸಗೊಬ್ಬರಗಳನ್ನು ಹಾಕಬೇಕಿದ್ದ ಸಮಯದಲ್ಲಿ, ಮಳೆ ನಿಲ್ಲಲಿಲ್ಲ. ಈಗ, ನಮಗೆ ಮಳೆಯ ಅಗತ್ಯವಿರುವಾಗ, ಮಳೆ ಬರುತ್ತಿಲ್ಲ."

The Andh community's colony in Ninganur.
PHOTO • Jaideep Hardikar
Ramdas Jangle has been tending to his farm and that of his nephew Champat’s after the latter’s death
PHOTO • Jaideep Hardikar

ಎಡ: ನಿಂಗನೂರಿನ ಆಂಧ್ ಸಮುದಾಯದ ಕಾಲೋನಿ. ಬಲ: ರಾಮದಾಸ್ ಜಂಗ್ಲೆ ತನ್ನ ಹೊಲವನ್ನು ನೋಡಿಕೊಳ್ಳುತ್ತಿದ್ದಾರೆ ಮತ್ತು ಅವರ ಸೋದರಳಿಯ ಚಂಪತ್ ಮರಣದ ನಂತರ ಅವರ ಹೊಲವನ್ನು ನೋಡಿಕೊಳ್ಳುತ್ತಿದ್ದಾರೆ

ಪಶ್ಚಿಮ ವಿದರ್ಭದ ಹತ್ತಿ ವಲಯವು ಎರಡು ದಶಕಗಳಿಂದ, ಕೃಷಿಯಲ್ಲಿ ಆರ್ಥಿಕ ಮತ್ತು ಹೆಚ್ಚುತ್ತಿರುವ ಪರಿಸರ ಸಮಸ್ಯೆಗಳಿಂದಾಗಿ ಹೆಚ್ಚಿದ ರೈತರ ಆತ್ಮಹತ್ಯೆಗಳ ಘಟನೆಗಳಿಂದಾಗಿ ಸುದ್ದಿಯಲ್ಲಿದೆ.

ವಿದರ್ಭ ಮತ್ತು ಮರಾಠವಾಡದಲ್ಲಿ ಒಟ್ಟು 19 ಜಿಲ್ಲೆಗಳಿದ್ದು, ಪ್ರಸಕ್ತ ಮುಂಗಾರಿನಲ್ಲಿ ಇಲ್ಲಿ ಸರಾಸರಿ ಶೇ.30ರಷ್ಟು ಹೆಚ್ಚು ಮಳೆಯಾಗಿದೆ ಎಂದು ಜಿಲ್ಲಾವಾರು ಐಎಂಡಿ ಮಳೆ ಅಂಕಿಅಂಶಗಳು ತಿಳಿಸಿವೆ. ಈ ಮಳೆಯ ಹೆಚ್ಚಿನ ಭಾಗವು ಜುಲೈ ತಿಂಗಳಿನಲ್ಲಿ ಸುರಿದಿತ್ತು. ಮಾನ್ಸೂನ್ ಕಡಿಮೆಯಾಗಲು ಸುಮಾರು ಒಂದು ತಿಂಗಳು ಬಾಕಿ ಇರುವಾಗ, ಈ ಪ್ರದೇಶದಲ್ಲಿ 2022ರ ಜೂನ್ ಮತ್ತು ಸೆಪ್ಟೆಂಬರ್ 10ರ ನಡುವೆ ಈಗಾಗಲೇ 1100 ಮಿ.ಮೀ.ಗಿಂತ ಹೆಚ್ಚು ಮಳೆ ಸುರಿದಿದೆ (ಹಿಂದಿನ ವರ್ಷಗಳಲ್ಲಿ ಇದೇ ಅವಧಿಯಲ್ಲಿ ದಾಖಲಾದ ಸರಾಸರಿ 800 ಮಿ.ಮೀ ಮಳೆಗೆ ಹೋಲಿಸಿದರೆ). ಇದು ಈ ಪ್ರದೇಶದ ವಾತಾವರಣನ್ನು ಮಳೆ ಪ್ರದೇಶದಂತಾಗಿಸಿದೆ.

ಆದರೆ ಈ ಅಂಕಿಅಂಶವು ಮಳೆಯ ವ್ಯತ್ಯಾಸಗಳು ಮತ್ತು ಏರಿಳಿತಗಳನ್ನು ಬಹಿರಂಗಪಡಿಸುವುದಿಲ್ಲ. ಈ ಪ್ರದೇಶದಲ್ಲಿ ವಾತಾವರಣವು ಜೂನ್ ತಿಂಗಳಿನಲ್ಲಿ ಬಹುತೇಕ ಶುಷ್ಕವಾಗಿತ್ತು. ಜುಲೈ ಆರಂಭದಲ್ಲಿ ಮಳೆ ಪ್ರಾರಂಭವಾಯಿತು ಮತ್ತು ಕೆಲವೇ ದಿನಗಳಲ್ಲಿ, ಮಳೆಯ ಕೊರತೆಯನ್ನು ತುಂಬಿತು. ಜುಲೈ ಮಧ್ಯಭಾಗದ ವೇಳೆಗೆ ಮಹಾರಾಷ್ಟ್ರದ ಹಲವಾರು ಭಾಗಗಳಿಂದ ಹಠಾತ್ ಪ್ರವಾಹಗಳು ವರದಿಯಾಗಿವೆ. ಮರಾಠವಾಡ ಮತ್ತು ವಿದರ್ಭದಲ್ಲಿ ಜುಲೈ ಮೊದಲ ಹದಿನೈದು ದಿನಗಳಲ್ಲಿ ಅನೇಕ ಸ್ಥಳಗಳಲ್ಲಿ ಭಾರಿ ಮಳೆಯಾಗಿದೆ (24 ಗಂಟೆಗಳಲ್ಲಿ 65 ಮಿ.ಮೀ.ಗಿಂತ ಹೆಚ್ಚು) ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ವರದಿ ಮಾಡಿದೆ.

ಅಂತಿಮವಾಗಿ ಆಗಸ್ಟ್ ಆರಂಭದಲ್ಲಿ ಮಳೆ ಕಡಿಮೆಯಾಯಿತು ಮತ್ತು ಯವತ್ಮಲ್ ಸೇರಿದಂತೆ ಅನೇಕ ಜಿಲ್ಲೆಗಳು ಸೆಪ್ಟೆಂಬರ್ ಆರಂಭದವರೆಗೆ ದೀರ್ಘಕಾಲದ ಒಣಹವೆಗೆ ಸಾಕ್ಷಿಯಾದವು. ನಂತರ ಮಹಾರಾಷ್ಟ್ರದಾದ್ಯಂತ ಮತ್ತೆ ಮಳೆ ಸುರಿಯಿತು.

ಭಾರೀ-ವಿಪರೀತ ಮಳೆ ಮತ್ತು ಅದರ ಹಿನ್ನೆಲೆಯಲ್ಲೇ ಶುಷ್ಕ ವಾತಾವರಣವೆನ್ನುವುದು ಇತ್ತೀಚೆಗೆ ಈ ಪ್ರದೇಶದಲ್ಲಿ ಸಾಧಾರಣವಾಗಿಬಿಟ್ಟಿದೆ ಎಂದು ನಿಂಗನೂರಿನ ರೈತರು ಹೇಳುತ್ತಾರೆ. ಈ ರೀತಿಯ ಮಳೆ ಮಾದರಿಯು ರೈತರಲ್ಲಿ ಯಾವ ಬೆಳೆಯನ್ನು ಆರಿಸಿಕೊಳ್ಳುವುದು, ಯಾವ ಬೆಳೆ ಪದ್ಧತಿಯನ್ನು ಆಳವಡಿಸಿಕೊಳ್ಳುವುದು ಎನ್ನುವುದರ ಕುರಿತು ನಿರ್ಧಾರ ತೆಗೆದುಕೊಳ್ಳಲಾಗದಂತೆ ಮಾಡಿದೆ. ಜೊತೆಗೆ ಮಣ್ಣಿನ ತೇವ ಮತ್ತು ನೀರನ್ನು ಹೇಗೆ ನಿರ್ವಹಿಸುವುದೆನ್ನುವುದು ಕೂಡಾ ತಿಳಿಯುತ್ತಿಲ್ಲ. ಇಂತಹ ಗೊಂದಲದ ಪರಿಣಾಮವೇ ಚಂಪತ್‌ ಅವರಂತಹ ರೈತರ ಆತ್ಮಹತ್ಯೆ.

Fields damaged after extreme rains in July and mid-August in Shelgaon village in Nanded.
PHOTO • Jaideep Hardikar
Large tracts of farms in Chandki village in Wardha remained under water for almost two months after the torrential rains of July
PHOTO • Jaideep Hardikar

ಎಡ: ನಾಂದೇಡ್‌ನ ಶೆಲ್ಗಾಂವ್ ಗ್ರಾಮದಲ್ಲಿ ಜುಲೈ ಮತ್ತು ಆಗಸ್ಟ್ ಮಧ್ಯಭಾಗದಲ್ಲಿ ಅತಿವೃಷ್ಟಿಯಿಂದ ಹೊಲಗಳಿಗೆ ಹಾನಿಯಾಗಿದೆ. ಬಲ: ವಾರ್ಧಾದ ಚಂಡ್ಕಿ ಗ್ರಾಮದ ದೊಡ್ಡ ಜಮೀನುಗಳು ಜುಲೈನಲ್ಲಿ ಸುರಿದ ಧಾರಾಕಾರ ಮಳೆಯ ನಂತರ ಸುಮಾರು ಎರಡು ತಿಂಗಳುಗಳ ಕಾಲ ನೀರಿನಲ್ಲಿ ಮುಳುಗಿದ್ದವು

ವಸಂತರಾವ್ ನಾಯಕ್ ಶೇತ್ಕರಿ ಸ್ವಾವಲಂಬನ್ ಮಿಷನ್ನ ಮುಖ್ಯಸ್ಥರಾಗಿರುವ ಕಿಶೋರ್ ತಿವಾರಿ, ಇತ್ತೀಚೆಗೆ ರೈತರ ಆತ್ಮಹತ್ಯೆಗಳು ಹೆಚ್ಚುತ್ತಿವೆ ಎಂದು ಹೇಳುತ್ತಾರೆ. ಈ ಪ್ರದೇಶದಲ್ಲಿ ಆಗಸ್ಟ್ 25 ಮತ್ತು ಸೆಪ್ಟೆಂಬರ್ 10ರ ನಡುವಿನ ಹದಿನೈದು ದಿನಗಳಲ್ಲಿ ವಿದರ್ಭದಲ್ಲಿ ಸುಮಾರು 30 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರು ಹೇಳುತ್ತಾರೆ, ಜನವರಿ 2022ರಿಂದ ಒಂದು ಸಾವಿರಕ್ಕೂ ಹೆಚ್ಚು ರೈತರನ್ನು ಆತ್ಮಹತ್ಯೆಗೆ ಪ್ರೇರೇಪಿಸಿದ್ದು ತೀವ್ರ ಮಳೆ ಘಟನೆಗಳು ಮತ್ತು ಆರ್ಥಿಕ ಸಂಕಷ್ಟಗಳು ಎಂದು ಅವರು ಹೇಳುತ್ತಾರೆ.

ತಮ್ಮ ಬದುಕನ್ನು ಕೊನೆಗೊಳಿಸಿಕೊಂಡವರಲ್ಲಿ ಯವತ್ಮಲ್‌ನ ಹಳ್ಳಿಯ ಇಬ್ಬರು ಸಹೋದರರು ಸೇರಿದ್ದಾರೆ, ಅವರು ಪರಸ್ಪರ ಒಂದು ತಿಂಗಳ ಅಂತರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.

"ನಿಜವಾಗಿಯೂ ಯಾವುದೇ ರೀತಿಯ ಸಹಾಯವು ಪ್ರಯೋಜನಕ್ಕೆ ಬರುವುದಿಲ್ಲ; ಈ ವರ್ಷದ ವಿನಾಶವು ನಿಜವಾಗಿಯೂ ಕೆಟ್ಟದಾಗಿದೆ" ಎಂದು ತಿವಾರಿ ಹೇಳುತ್ತಾರೆ.

*****

ರೈತರ ಹೊಲಗಳು ಜಲಾವೃತಗೊಂಡಿವೆ ಮತ್ತು ಬೆಳೆಗಳು ನಾಶವಾಗಿವೆ, ಮಹಾರಾಷ್ಟ್ರದಲ್ಲಿ ಹೆಚ್ಚಿನ ಸಂಖ್ಯೆಯ ಸಣ್ಣ ರೈತರು ಮುಂಬರುವ ವಿಸ್ತೃತ ಸಂಕಷ್ಟದ ಅವಧಿಯನ್ನು ಎದುರು ನೋಡುತ್ತಿದ್ದಾರೆ.

ವಿದರ್ಭ, ಮರಾಠವಾಡ ಮತ್ತು ಉತ್ತರ ಮಹಾರಾಷ್ಟ್ರದಾದ್ಯಂತ ಸುಮಾರು ಎರಡು ಮಿಲಿಯನ್ ಹೆಕ್ಟೇರ್ ಕೃಷಿ ಭೂಮಿ ಈ ಋತುವಿನ ಮಳೆಯ ವಿಕೋಪದ ಬರದಿಂದ ನಾಶವಾಗಿದೆ ಎಂದು ಮಹಾರಾಷ್ಟ್ರದ ಕೃಷಿ ಆಯುಕ್ತರ ಕಚೇರಿ ಅಂದಾಜಿಸಿದೆ. ಖಾರಿಫ್ ಬೆಳೆ ಎನ್ನುವುದು ನಿಜವಾಗಿ ಇಲ್ಲವಾಗಿದೆ ಎಂದು ಈ ಪ್ರದೇಶದಾದ್ಯಂತದ ರೈತರು ಹೇಳುತ್ತಾರೆ. ಸೋಯಾಬೀನ್, ಹತ್ತಿ, ತೊಗರಿ - ಪ್ರತಿಯೊಂದು ಪ್ರಮುಖ ಬೆಳೆಯೂ ಹಾನಿಗೊಳಗಾಗಿದೆ. ಮುಖ್ಯವಾಗಿ ಖಾರಿಫ್ ಬೆಳೆಯನ್ನು ಅವಲಂಬಿಸಿರುವ ಒಣಭೂಮಿ ಪ್ರದೇಶಗಳಿಗೆ, ಈ ವರ್ಷದ ವಿನಾಶವು ದುಃಖದಾಯಕವಾಗಿ ಪರಿಣಮಿಸಬಹುದು.

ನಾಂದೇಡ್‌ನ ಅರ್ಧಪುರ ತಹಸಿಲ್ನ ಶೆಲ್ಗಾಂವ್‌ನಂತಹ ನದಿಗಳು ಮತ್ತು ತೊರೆಗಳ ಉದ್ದಕ್ಕೂ ಇರುವ ಹಳ್ಳಿಗಳು ಅಭೂತಪೂರ್ವ ಪ್ರವಾಹದ ಹೊಡೆತವನ್ನು ಅನುಭವಿಸಿದವು. "ನಾವು ಒಂದು ವಾರದವರೆಗೆ ಹೊರಜಗತ್ತಿನ ಸಂಪರ್ಕ ಕಡಿದುಕೊಂಡೆವು" ಎಂದು ಶೆಲ್ಗಾಂವ್ ಸರಪಂಚ್ ಪಂಜಾಬ್ ರಾಜೆಗೋರ್ ಹೇಳುತ್ತಾರೆ. "ಗ್ರಾಮದ ಉದ್ದಕ್ಕೂ ಹರಿಯುವ ಉಮಾ ನದಿಯ ಕ್ರೋಧದಿಂದಾಗಿ ನಮ್ಮ ಮನೆಗಳು ಮತ್ತು ಹೊಲಗಳು ಜಲಾವೃತಗೊಂಡವು." ಈ ಉಮೆಯು ಹಳ್ಳಿಯಿಂದ ಕೆಲವು ಮೈಲಿಗಳ ಕೆಳಗೆ ಆಸ್ನಾ ನದಿಯನ್ನು ಭೇಟಿಯಾಗುತ್ತಾಳೆ, ಮತ್ತು ಅವರು ಇಬ್ಬರೂ ಒಟ್ಟಾಗಿ ಹರಿದು ನಾಂದೇಡ್ ಬಳಿ ಗೋದಾವರಿಯನ್ನು ಕೂಡಿಕೊಳ್ಳುತ್ತಾರೆ. ಭಾರಿ ಮಳೆಯ ಸಮಯದಲ್ಲಿ ಈ ನದಿಗಳೆಲ್ಲವೂ ಉಕ್ಕಿ ಹರಿಯುತ್ತಿದ್ದವು.

Punjab Rajegore, sarpanch of Shelgaon in Nanded, standing on the Uma river bridge that was submerged in the flash floods of July.
PHOTO • Jaideep Hardikar
Deepak Warfade (wearing a blue kurta) lost his house and crops to the July floods. He's moved into a rented house in the village since then
PHOTO • Jaideep Hardikar

ಎಡ: ನಾಂದೇಡ್ ಶೆಲ್ಗಾಂವ್‌ನ ಸರಪಂಚ್ ಪಂಜಾಬ್ ರಾಜಗೋರ್, ಜುಲೈ ತಿಂಗಳ ಹಠಾತ್ ಪ್ರವಾಹದಲ್ಲಿ ಮುಳುಗಿದ್ದ ಉಮಾ ನದಿ ಸೇತುವೆಯ ಮೇಲೆ ನಿಂತಿದ್ದಾರೆ. ಬಲ: ಜುಲೈ ತಿಂಗಳ ಪ್ರವಾಹದಲ್ಲಿ ದೀಪಕ್ ವಾರ್ಫೇಡ್ (ನೀಲಿ ಕುರ್ತಾ ಧರಿಸಿರುವವರು) ತನ್ನ ಮನೆ ಮತ್ತು ಬೆಳೆಗಳನ್ನು ಕಳೆದುಕೊಂಡರು. ಅಂದಿನಿಂದ ಅವರು ಹಳ್ಳಿಯಲ್ಲಿನ ಬಾಡಿಗೆ ಮನೆಗೆ ಸ್ಥಳಾಂತರಗೊಂಡಿದ್ದಾರೆ

“ಜುಲೈ ತಿಂಗಳಿನಲ್ಲಿ ನಮ್ಮಲ್ಲಿ ಎಷ್ಟು ಮಳೆಯಾಗಿತ್ತೆಂದರೆ, ಹೊಲದಲ್ಲಿ ಬೇಸಾಯದ ಕೆಲಸಗಳನ್ನು ಮಾಡುವುದೇ ಕಷ್ಟವಾಗಿತ್ತು," ಎಂದು ಹೇಳುತ್ತಾರವರು. ಈ ಮಳೆಯ ಪರಿಣಾಮದ ಕತೆಗಳನ್ನು ಆ ಹೊಲದಲ್ಲಿನ ಮಣ್ಣಿನ ಸವಕಳಿ ಮತ್ತು ಕೊಳೆತ ಬೆಳೆಗಳು ವಿವರಿಸುತ್ತಿದ್ದವು, ಕೆಲವು ರೈತರು ಅಕ್ಟೋಬರ್‌ ತಿಂಗಳ ಹಿಂಗಾರು ಬೆಳೆಗೆ ತಯಾರಾಗುವ ಸಲುವಾಗಿ ಹೊಲದಲ್ಲಿ ಅಳಿದುಳಿದ ಬೆಳೆಯ ಅವಶೇಷಗಳನ್ನು ಕಿತ್ತು ತೆಗೆಯುತ್ತಿದ್ದರು.

ವಾರ್ಧಾ ಜಿಲ್ಲೆಯ ಚಾಂಡ್ಕಿಯಲ್ಲಿನ ಸುಮಾರು 1200 ಹೆಕ್ಟೇರ್ ಕೃಷಿಭೂಮಿಯು ಏಳು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆ ಮತ್ತು ಜುಲೈ ತಿಂಗಳಿನಲ್ಲಿ ಉಂಟಾದ ಯಶೋದಾ ನದಿಯ ಪ್ರವಾಹದಿಂದಾಗಿ ಇಡೀ ಗ್ರಾಮವು ಇಂದಿಗೂ ಸಹ ನೀರಿನಲ್ಲಿ ಮುಳುಗಿದೆ. ಸಿಕ್ಕಿಬಿದ್ದ ಗ್ರಾಮಸ್ಥರನ್ನು ಸ್ಥಳಾಂತರಿಸಲು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‌ಡಿಆರ್‌ಎಫ್‌) ಯನ್ನು ಕರೆಸಬೇಕಾಯಿತು.

"ನನ್ನ ಮನೆಯೂ ಸೇರಿದಂತೆ ಹದಿಮೂರು ಮನೆಗಳು ಕುಸಿದವು," ಎಂದು 50 ವರ್ಷದ ದೀಪಕ್ ವಾರ್ಫೇಡ್ ಎಂಬ ರೈತ ಹೇಳುತ್ತಾರೆ, ಅವರು ಪ್ರವಾಹದಲ್ಲಿ ತನ್ನ ಸ್ವಂತ ಮನೆಯನ್ನು ಕಳೆದುಕೊಂಡ ನಂತರ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. "ನಮ್ಮ ಸಮಸ್ಯೆಯೆಂದರೆ ಈಗ ಯಾವುದೇ ಕೃಷಿ ಕೆಲಸವಿಲ್ಲ; ಇದೇ ಮೊದಲ ಬಾರಿಗೆ ನಾನು ಕೆಲಸವಿಲ್ಲದೆ ಕುಳಿತಿದ್ದೇನೆ."

"ಒಂದು ತಿಂಗಳ ಅವಧಿಯಲ್ಲಿ ನಾವು ಏಳು ಪ್ರವಾಹಗಳಿಗೆ ಸಾಕ್ಷಿಯಾಗಿದ್ದೇವೆ" ಎಂದು ದೀಪಕ್ ಹೇಳುತ್ತಾರೆ. "ಏಳನೇ ಬಾರಿ ಬಂದ ಪ್ರವಾಹ ನಾಕ್ ಔಟ್ ಪಂಚಿನಂತೆ ಇತ್ತು. ಎನ್‌ಡಿಆರ್‌ಎಫ್ ತಂಡಗಳು ಸಕಾಲದಲ್ಲಿ ನಮ್ಮನ್ನು ತಲುಪಿದ್ದು ನಮ್ಮ ಅದೃಷ್ಟ, ಇಲ್ಲದಿದ್ದರೆ ನಾನು ನಿಮ್ಮೊಡನೆ ಮಾತನಾಡಲು ಇಲ್ಲಿ ಇರುತ್ತಿರಲಿಲ್ಲ," ಎಂದು ಅವರು ಹೇಳಿದರು.

ಖಾರಿಫ್‌ ಹಂಗಾಮಿನ ಬೇಸಾಯ ಕಳೆದುಕೊಂಡ ನಂತರ ಚಂಡ್ಕಿ ಗ್ರಾಮದ ರೈತರನ್ನು ಕಾಡುತ್ತಿರುವುದು ಒಂದೇ ಪ್ರಶ್ನೆ: ಮುಂದೇನು?

64 ವರ್ಷದ ಬಾಬಾರಾವ್‌ ಪಾಟೀಲ್‌ ಅವರು ತನ್ನ ಹೊಲದಲ್ಲಿ ಅಳಿದುಳಿದ ಬೆಳೆಯನ್ನು ತನ್ನಿಂದ ಸಾಧ್ಯವಿರುವಷ್ಟು ಮಟ್ಟಿಗೆ ರಕ್ಷಿಸಲು ಪ್ರಯತ್ನಿಸುತ್ತಿದ್ದರು. ಆ ಹೊಲದಲ್ಲಿ ಬೆಳವಣಿಗೆ ಕುಂಠಿತಗೊಂಡ ಹತ್ತಿಬೆಳೆ ಮತ್ತು ಸಪಾಟಾದ ಹೊಲವು ಅಲ್ಲಿ ನಡೆದ ದುರಂತದ ಕತೆಯನ್ನು ವಿವರಿಸುತ್ತಿದ್ದವು.

“ಈ ವರ್ಷ ನನಗೆ ಏನೂ ಸಿಗದೆ ಹೋಗಬಹುದು,” ಎಂದು ಅವರು ಹೇಳುತ್ತಾರೆ. “ಸುಮ್ಮನೆ ಮನೆಯಲ್ಲಿ ಕುಳಿತುಕೊಳ್ಳುವ ಬದಲು ಈ ಗಿಡಗಳನ್ನು ಮರು ನಾಟಿ ಮಾಡಲು ಪ್ರುತ್ನಿಸುತ್ತಿದ್ದೇನೆ.” ಹಣಕಾಸಿನ ಮುಗ್ಗಟ್ಟು ತೀವ್ರವಾಗಿದೆ ಮತ್ತದು ಈಗಷ್ಟೇ ಆರಂಭಗೊಂಡಿದೆ ಎಂದು ಅವರು ಮುಂದುವರೆದು ಹೇಳುತ್ತಾರೆ.

ಮಹಾರಾಷ್ಟ್ರದ ಉದ್ದಕ್ಕೂ ಮೈಲುಗಟ್ಟಲೆ ಹೊಲಗದ್ದೆಗಳು ಬಾಬಾರಾವ್ ಅವರ ಕೃಷಿಭೂಮಿಯ ಸ್ಥಿತಿಯನ್ನು ಪ್ರತಿಬಿಂಬಿಸುತ್ತವೆ: ಎಲ್ಲಿಯೂ ಆರೋಗ್ಯಕರ, ನಿಂತಿರುವ ಬೆಳೆಗಳ ಕುರುಹು ಇಲ್ಲ.

Babarao Patil working on his rain-damaged farm in Chandki.
PHOTO • Jaideep Hardikar
The stunted plants have made him nervous. 'I may or may not get anything out this year'
PHOTO • Jaideep Hardikar

ಎಡ: ಬಾಬಾರಾವ್ ಪಾಟೀಲ್ ಚಾಂದಕಿಯಲ್ಲಿ ಮಳೆಯಿಂದ ಹಾನಿಗೊಳಗಾದ ಜಮೀನಿನಲ್ಲಿ ಕೆಲಸ ಮಾಡುತ್ತಿರುವುದು. ಬಲ: ಹಾನಿಗೀಡಾದ ಸಸ್ಯಗಳು ಅವರನ್ನು ಕಳವಳಕ್ಕೆ ಈಡುಮಾಡಿವೆ ʼಈ ವರ್ಷ ಏನಾದರೂ ಇಳುವರಿ ದೊರೆತರೆ ಅದು ಅದೃಷ್ಟʼ

"ಈ ಬಿಕ್ಕಟ್ಟು ಮುಂದಿನ 16 ತಿಂಗಳುಗಳಲ್ಲಿ ಉಲ್ಬಣಗೊಳ್ಳಲಿದೆ," ಎಂದು ವಿಶ್ವಬ್ಯಾಂಕ್ ಮಾಜಿ ಸಲಹೆಗಾರ ಮತ್ತು ವಾರ್ಧಾದ ಪ್ರಾದೇಶಿಕ ಅಭಿವೃದ್ಧಿ ತಜ್ಞ ಶ್ರೀಕಾಂತ್ ಬರ್ಹಟೆ ಹೇಳುತ್ತಾರೆ. "ಆಗ ಮುಂದಿನ ಬೆಳೆ ಕಟಾವಿಗೆ ಸಿದ್ಧವಾಗಿರುತ್ತದೆ." ಪ್ರಶ್ನೆಯೆಂದರೆ, ರೈತರು 16 ತಿಂಗಳುಗಳ ಕಾಲ ಹೇಗೆ ಬದುಕು ನಡೆಸುತ್ತಾರೆ?

ಬರ್ಹಟೆಯವರ ಸ್ವಂತ ಗ್ರಾಮವಾದ ಚಂಡ್ಕಿ ಬಳಿಯ ರೋಹನಖೇಡ್ ಭಾರಿ ನಷ್ಟವನ್ನು ಅನುಭವಿಸಿದೆ. "ಎರಡು ಸಂಗತಿಗಳು ನಡೆಯುತ್ತಿವೆ," ಎಂದು ಅವರು ಹೇಳುತ್ತಾರೆ, "ಜನರು ಚಿನ್ನ ಅಥವಾ ಇತರ ಆಸ್ತಿಗಳನ್ನು ಅಡಮಾನ ಇಡುತ್ತಿದ್ದಾರೆ ಅಥವಾ ಮನೆಯ ಅಗತ್ಯಗಳಿಗಾಗಿ ಖಾಸಗಿಯಾಗಿ ಹಣವನ್ನು ಸಾಲ ಪಡೆಯುತ್ತಿದ್ದಾರೆ, ಮತ್ತು ಯುವಕರು ಕೆಲಸವನ್ನು ಹುಡುಕಿಕೊಂಡು ವಲಸೆ ಹೋಗಲು ಯೋಚಿಸುತ್ತಿದ್ದಾರೆ."

ನಿಸ್ಸಂಶಯವಾಗಿ, ವರ್ಷವು ಕೊನೆಗೊಂಡಾಗ ಬ್ಯಾಂಕುಗಳು ಬೆಳೆ ಸಾಲಗಳ ಮೇಲೆ ಅಭೂತಪೂರ್ವ ಸುಸ್ತಿಗಳನ್ನು ನೋಡುತ್ತವೆ ಎಂದು ಅವರು ಹೇಳುತ್ತಾರೆ.

ಚಂಡ್ಕಿ ಎಂಬ ಒಂದು ಹಳ್ಳಿಯಲ್ಲಿ ಹತ್ತಿಯ ಬೆಳೆ ಒಂದರಿಂದಲೇ ಸುಮಾರು 20 ಕೋಟಿ ರೂ.ಗಳ ನಷ್ಟವಾಗಿದೆ - ಅಂದರೆ ಈ ವರ್ಷ ಅನುಕೂಲಕರ ಪರಿಸ್ಥಿತಿಯಲ್ಲಿ ಹತ್ತಿ ಈ ಒಂದು ಹಳ್ಳಿಗೆ ಅಷ್ಟು ಹಣವನ್ನು ತರುತ್ತಿತ್ತು. ಈ ಭಾಗದ ಪ್ರತಿ ಎಕರೆಗೆ ಹತ್ತಿಯ ಸರಾಸರಿ ಉತ್ಪಾದಕತೆಯನ್ನು ಆಧರಿಸಿ ಈ ಅಂದಾಜು ಮಾಡಲಾಗಿದೆ.

"ನಾವು ಬೆಳೆಯನ್ನು ಕಳೆದುಕೊಂಡಿರುವುದು ಮಾತ್ರವಲ್ಲದೆ, ಬಿತ್ತನೆ ಮತ್ತು ಇತರ ಕಾರ್ಯಗಳಿಗಾಗಿ ಖರ್ಚು ಮಾಡಿದ ಹಣವನ್ನು ಸಹ ಮರಳಿ ಪಡೆಯಲು ನಮಗೆ ಸಾಧ್ಯವಾಗುವುದಿಲ್ಲ," ಎಂದು 47 ವರ್ಷದ ನಾಮದೇವ್ ಭೋಯಾರ್ ಹೇಳುತ್ತಾರೆ.

"ಮತ್ತು ಇದು ಒಂದು ಬಾರಿಯ ನಷ್ಟವಲ್ಲ" ಎಂದು ಅವರು ಎಚ್ಚರಿಸುತ್ತಾರೆ. "ಮಣ್ಣಿನ ಸವಕಳಿ ದೀರ್ಘಕಾಲೀನ (ಜೀವಿ ಪರಿಸರ) ಸಮಸ್ಯೆಯಾಗಿದೆ."

Govind Narayan Rajegore's soybean crop in Shelgaon suffered serious damage.
PHOTO • Jaideep Hardikar
Villages like Shelgaon, located along rivers and streams, bore the brunt of the flooding for over a fortnight in July 2022
PHOTO • Jaideep Hardikar

ಎಡ: ಶೆಲ್ಗಾಂವ್‌ನ ಗೋವಿಂದ್ ನಾರಾಯಣ್ ರಾಜೇಗೋರ್ ಅವರ ಸೋಯಾಬೀನ್ ಬೆಳೆಗೆ ತೀವ್ರ ಹಾನಿಯಾಗಿದೆ. ಬಲ: ನದಿಗಳು ಮತ್ತು ತೊರೆಗಳ ಉದ್ದಕ್ಕೂ ಇರುವ ಶೆಲ್ಗಾಂವ್ ರೀತಿಯ ಹಳ್ಳಿಗಳು ಜುಲೈ 2022ರಲ್ಲಿ ಹದಿನೈದು ದಿನಗಳಿಗೂ ಹೆಚ್ಚು ಕಾಲ ಪ್ರವಾಹದ ತೀವ್ರತೆಯನ್ನು ಅನುಭವಿಸಿದವು

ಮಹಾರಾಷ್ಟ್ರದಾದ್ಯಂತ ಲಕ್ಷಾಂತರ ರೈತರು ಜುಲೈನಿಂದ ಆಗಸ್ಟ್ ತಿಂಗಳವರೆಗೆ ಮಳೆಯಿಂದ ತತ್ತರಿಸುತ್ತಿದ್ದರೆ, ಆ ಸಮಯದಲ್ಲಿ ಮಹಾ ವಿಕಾಸ್ ಅಘಾಡಿ ಸರ್ಕಾರವನ್ನು ಉರುಳಿಸಲು ಕಾರಣವಾದ ಶಿವಸೇನೆಯಲ್ಲಿನ ಬಂಡಾಯದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಯಾವುದೇ ಕ್ರಿಯಾತ್ಮಕ ಸರ್ಕಾರವಿರಲಿಲ್ಲ.

ಸೆಪ್ಟೆಂಬರ್ ಆರಂಭದಲ್ಲಿ, ಏಕನಾಥ್ ಶಿಂಧೆ ನೇತೃತ್ವದ ಹೊಸ ಸರ್ಕಾರವು ರಾಜ್ಯಕ್ಕೆ 3500 ಕೋಟಿ ರೂ.ಗಳ ಆರ್ಥಿಕ ನೆರವನ್ನು ಘೋಷಿಸಿತು, ಇದು ಭಾಗಶಃ ಸಹಾಯವಾಗಿದ್ದು, ಬೆಳೆ ಮತ್ತು ಜೀವ ನಷ್ಟಕ್ಕೆ ನಿಜವಾದ ನಷ್ಟವನ್ನು ಭರಿಸುವುದಿಲ್ಲ.  ಇದಲ್ಲದೆ, ಸಮೀಕ್ಷೆಗಳ ಮೂಲಕ ಫಲಾನುಭವಿಗಳನ್ನು ಗುರುತಿಸಿದ ನಂತರ ಜನರು ತಮ್ಮ ಬ್ಯಾಂಕುಗಳಲ್ಲಿ ಹಣವನ್ನು ಪಡೆಯಲು ಕನಿಷ್ಠ ಒಂದು ವರ್ಷ ಹಿಡಿಯಬಹುದು. ಆದರೆ, ಜನರಿಗೆ ತಕ್ಷಣದ ಸಹಾಯದ ಅಗತ್ಯವಿದೆ.

*****

"ನೀವು ನನ್ನ ಜಮೀನನ್ನು ನೋಡಿದ್ದೀರಾ?" ಚಂಪತ್ ಅವರ ಪತ್ನಿ ಧ್ರುಪದಾ ದೀನರಾಗಿ ಕೇಳಿದರು. ಪೂನಂ (8), ಪೂಜಾ (6) ಮತ್ತು ಕೃಷ್ಣ (3) ಎಂಬ ಮೂವರು ಚಿಕ್ಕ ಮಕ್ಕಳು ಅವರನ್ನು ಸುತ್ತುವರೆದಿದ್ದರು. "ಅಂತಹ ಭೂಮಿಯಲ್ಲಿ ನೀವು ಏನು ಬೆಳೆಯುತ್ತೀರಿ?" ಚಂಪತ್ ಮತ್ತು ಧ್ರುಪದಾ ಇಬ್ಬರೂ ಕೃಷಿ ಕಾರ್ಮಿಕರಾಗಿ ದುಡಿದು ಮನೆಯ ಮನೆಯ ಅಗತ್ಯಗಳನ್ನು ಪೂರೈಸಿಕೊಳ್ಳುತ್ತಿದ್ದರು.

ಕಳೆದ ವರ್ಷ, ದಂಪತಿಗಳು ತಮ್ಮ ಹಿರಿಯ ಮಗಳು ತಾಜುಲಿಗೆ ಮದುವೆ ಮಾಡಿಸಿದ್ದರು, ಅವಳು 16 ವರ್ಷ ವಯಸ್ಸಿನವಳೆಂದು ಹೇಳಿಕೊಳ್ಳುತ್ತಾಳೆ ಆದರೆ 15 ವರ್ಷಕ್ಕಿಂತ ಹೆಚ್ಚು ವಯಸ್ಸಿನವಳಂತೆ ಕಾಣುವುದಿಲ್ಲ. ಅವಳಿಗೆ ಮೂರು ತಿಂಗಳ ಮಗುವಿದೆ. ತಮ್ಮ ಮಗಳ ಮದುವೆಯಿಂದ ಉಂಟಾದ ಸಾಲವನ್ನು ತೀರಿಸಲು, ಚಂಪತ್ ಮತ್ತು ಧ್ರುಪದಾ ತಮ್ಮ ಜಮೀನನ್ನು ಅಲ್ಪ ಮೊತ್ತಕ್ಕೆ ಸಂಬಂಧಿಕರಿಗೆ ಗುತ್ತಿಗೆಗೆ ನೀಡಿದರು ಮತ್ತು ಕಳೆದ ವರ್ಷ ಕಬ್ಬು ಕತ್ತರಿಸುವ ಕೆಲಸ ಮಾಡಲು ಕೊಲ್ಲಾಪುರಕ್ಕೆ ಹೋಗಿದ್ದರು.

ಜಂಗ್ಲೆ ಕುಟುಂಬ ವಿದ್ಯುತ್ ಇಲ್ಲದ ಗುಡಿಸಲಿನಲ್ಲಿ ವಾಸಿಸುತ್ತಾರೆ. ಇದೀಗ, ಕುಟುಂಬದ ಬಳಿ ತಿನ್ನಲು ಏನೂ ಇಲ್ಲ; ನೆರೆಹೊರೆಯವರು ಸಹ ಅಷ್ಟೇ ಬಡವರು ಮತ್ತು ಮಳೆಯಿಂದ ನಷ್ಟಕ್ಕೊಳಗಾದವರು, ಅವರು ನೀಡುವ ಸಹಾಯದಿಂದ ಸದ್ಯಕ್ಕೆ ದಿನ ದೂಡುತ್ತಿದ್ದಾರೆ.

"ಬಡವರನ್ನು ಹೇಗೆ ಮೂರ್ಖರನ್ನಾಗಿ ಮಾಡುವುದು ಎನ್ನುವುದು ಈ ದೇಶಕ್ಕೆ ತಿಳಿದಿದೆ," ಎಂದು ಚಂಪತ್ ಅವರ ಆತ್ಮಹತ್ಯೆಯ ಬಗ್ಗೆ ಮೊದಲು ವರದಿ ಮಾಡಿದ ಸ್ಥಳೀಯ ಪತ್ರಕರ್ತ-ಸ್ಟ್ರಿಂಗರ್ ಮತ್ತು ರೈತ ಮೊಯಿನುದ್ದೀನ್ ಸೌದಾಗರ್ ಹೇಳುತ್ತಾರೆ. ಸ್ಥಳೀಯ ಬಿಜೆಪಿ ಶಾಸಕ ಧ್ರುಪದಾ ಅವರಿಗೆ ನೀಡಿದ 2000 ರೂ.ಗಳ ಅಪಮಾನಕರ ಅಲ್ಪ ಸಹಾಯದ ಬಗ್ಗೆ ಅವರು ಕುಟುಕುವ ಸಣ್ಣ ವರದಿಯೊಂದನ್ನು ಬರೆದರು, ಆ ಪರಿಹಾವರನ್ನು ಸರಕಾರ ಎಸಗಿದ ಅವಮಾನ ಎಂದು ಕರೆದರು.

Journalist and farmer Moinuddin Saudagar from Ninganur says most Andh farmers are too poor to withstand climatic aberrations.
PHOTO • Jaideep Hardikar
Journalist and farmer Moinuddin Saudagar from Ninganur says most Andh farmers are too poor to withstand climatic aberrations.
PHOTO • Jaideep Hardikar

ಎಡ: ನಿಂಗನೂರಿನ ಪತ್ರಕರ್ತ ಮತ್ತು ರೈತ ಮೊಯಿನುದ್ದೀನ್ ಸೌದಾಗರ್ ಹೇಳುವಂತೆ, ಹೆಚ್ಚಿನ ಅಂಧ್ ರೈತರು ಹವಾಮಾನ ವೈಪರೀತ್ಯಗಳನ್ನು ತಡೆದುಕೊಳ್ಳಲಾಗದಷ್ಟು ಬಡವರಾಗಿದ್ದಾರೆ. ಬಲ: ದಿವಂಗತ ಚಂಪತ್ ಅವರ ಪತ್ನಿಯಾದ ಧ್ರುಪದಾ, ನಿಂಗನೂರಿನ ತಮ್ಮ ಸಣ್ಣ ಗುಡಿಸಲಿನಲ್ಲಿ ತಮ್ಮ ಮಕ್ಕಳೊಂದಿಗೆ. ಅವರು ನಮ್ಮೊಡನೆ ಮಾತನಾಡುತ್ತಾ ಭಾವುಕರಾದರು

ಮೊಯಿನುದ್ದೀನ್ ಹೇಳುತ್ತಾರೆ, "ಮೊದಲನೆಯದಾಗಿ, ಯಾರೂ ಬೇಸಾಯ ಮಾಡಲು ಬಯಸದ ಭೂಮಿಯನ್ನು ನಾವು ಅವರಿಗೆ ನೀಡುತ್ತೇವೆ. ಅದು ಆಳವಿಲ್ಲದ, ಕಲ್ಲಿನಿಂದ ಕೂಡಿದ, ಬಂಜರು ನೆಲವಾಗಿರುತ್ತದೆ. ತದನಂತರ ನಾವು ಅವರಿಗೆ ಬೆಂಬಲವನ್ನು ನಿರಾಕರಿಸುತ್ತೇವೆ." ಚಂಪತ್ ತನ್ನ ತಂದೆಯಿಂದ ಬಳುವಳಿಯಾಗಿ ಪಡೆದ ಭೂಮಿ ಎರಡನೇ ದರ್ಜೆಯ ಭೂಮಿಯಾಗಿದ್ದು, ಭೂ ಮಿತಿ ಕಾಯ್ದೆಯಡಿ ಭೂ ವಿತರಣಾ ಕಾರ್ಯಕ್ರಮದ ಭಾಗವಾಗಿ ಅವರ ಕುಟುಂಬಕ್ಕೆ ದೊರಕಿದೆ ಎಂದು ಅವರು ಹೇಳುತ್ತಾರೆ.

"ದಶಕಗಳಿಂದ, ಈ ಪುರುಷರು ಮತ್ತು ಮಹಿಳೆಯರು ತಮ್ಮ ಬೆವರು ಮತ್ತು ರಕ್ತವನ್ನು ಈ ನೆಲವನ್ನು ಫಲವತ್ತಾಗಿ ಪರಿವರ್ತಿಸಲು, ತಮಗಾಗಿ ಏನನ್ನಾದರೂ ಬೆಳೆದುಕೊಳ್ಳುವ ಸಲುವಾಗಿ ವ್ಯಯಿಸಿದ್ದಾರೆ," ಎಂದು ಮೊಯಿನುದ್ದೀನ್ ಹೇಳುತ್ತಾರೆ. ನಿಂಗನೂರು ಗ್ರಾಮವು ಈ ಪ್ರದೇಶದ ಅತ್ಯಂತ ಕಡುಬಡವರ ಗ್ರಾಮಗಳಲ್ಲಿ ಒಂದಾಗಿದೆ, ಇದು ಹೆಚ್ಚಾಗಿ ಅಂಧ್ ಬುಡಕಟ್ಟು ಕುಟುಂಬಗಳು ಮತ್ತು ಗೊಂಡರು ವಾಸಿಸುವ ಗ್ರಾಮವಾಗಿದೆ ಎಂದು ಅವರು ಹೇಳುತ್ತಾರೆ.

ಹೆಚ್ಚಿನ ಅಂಧ್ ರೈತರು ಎಷ್ಟು ಬಡವರಾಗಿದ್ದಾರೆಂದರೆ, ಈ ವರ್ಷ ಅವರು ಕಂಡಂತಹ ಹವಾಮಾನ ವೈಪರೀತ್ಯಗಳನ್ನು ತಡೆದುಕೊಳ್ಳಲು ಅವರಿಗೆ ಸಾಧ್ಯವಾಗುವುದಿಲ್ಲ ಎಂದು ಮೊಯಿನುದ್ದೀನ್ ಹೇಳುತ್ತಾರೆ. ಆಂಧ್ ಜನರು, ಹಸಿವು ಸೇರಿದಂತೆ ಕಷ್ಟ ಮತ್ತು ಕಡುಬಡತನಕ್ಕೆ ಉದಾಹರಣೆಯಂತಿದ್ದಾರೆ ಎಂದು ಅವರು ಮುಂದುವರೆದು ಹೇಳುತ್ತಾರೆ.

ಚಂಪತ್ ಆತ್ಮಹತ್ಯೆ ಮಾಡಿಕೊಂಡ ಸಮಯದಲ್ಲಿ, ಬ್ಯಾಂಕ್ ಮತ್ತು ಇತರ ಖಾಸಗಿ ವ್ಯಕ್ತಿಗಳಿಂದ ಸಾಲದ ಹೊರೆ ಹೊತ್ತಿದ್ದರು. ನಾಲ್ಕು ಲಕ್ಷ ರೂಪಾಯಿಗಳಷ್ಟು ಸಾಲವಿದೆಯೆಂದು ಧ್ರುಪದಾ ಬಹಳ  ಒತ್ತಾಯ ಮಾಡಿ ಕೇಳಿದ ನಂತರ ತಿಳಿಸಿದರು. "ಕಳೆದ ವರ್ಷ  ಮದುವೆಗೆಂದು ಸಾಲ ಮಾಡಿದೆವು, ಈ ವರ್ಷ ಕೃಷಿ ಮತ್ತು ಮನೆಯ ನಿರ್ವಹಣೆಗಾಗಿ ಸಂಬಂಧಿಕರಿಂದ ಸಾಲ ತೆಗೆದುಕೊಂಡೆವು," ಎಂದು ಅವರು ಹೇಳುತ್ತಾರೆ. "ನಮ್ಮಿಂದ ಸಾಲವನ್ನು ಮರುಪಾವತಿಸಲು ಸಾಧ್ಯವಿಲ್ಲ."

ತನ್ನ ಕುಟುಂಬದ ಭವಿಷ್ಯ ಎದುರಿಸುತ್ತಿರುವ ಅನಿಶ್ಚಿತತೆಯ ಚಿಂತೆಯೊಡನೆ, ಅವರ ಎತ್ತುಗಳಲ್ಲಿ ಒಂದು ಅನಾರೋಗ್ಯಕ್ಕೆ ಈಡಾಗಿರುವುದು ಅವರನ್ನು ಇನ್ನಷ್ಟು ಚಿಂತಿಸುವಂತೆ ಮಾಡಿದೆ. “ನನ್ನ ಎತ್ತು ಕೂಡಾ ಅದರ ಯಜಮಾನ ಹೋದ ದಿನದಿಂದ ಹುಲ್ಲು, ನೀರನ್ನು ಬಿಟ್ಟು ಮಲಗಿದೆ.”

ಅನುವಾದ: ಶಂಕರ. ಎನ್. ಕೆಂಚನೂರು

Jaideep Hardikar

Jaideep Hardikar is a Nagpur-based journalist and writer, and a PARI core team member.

Other stories by Jaideep Hardikar
Editor : Sangeeta Menon

Sangeeta Menon is a Mumbai-based writer, editor and communications consultant.

Other stories by Sangeeta Menon
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru