ಗುಮ್ಲಾ ಜಿಲ್ಲೆಯ ಟೆಟ್ರಾ ಗ್ರಾಮ ಪಂಚಾಯತ್‌ನ ಸರಪಂಚ್ ತೆರೇಸಾ ಲಾಕ್ರಾ ಅವರಿಗೆ ಸ್ಥಳೀಯ ‘ಫಲಾನುಭವಿ ಸಮಿತಿ’ಯ ಸದಸ್ಯ ಬಿಹಾರಿ ಲಾಕ್ರಾ ಏನನ್ನೋ ತಂದು ಕೈಯಲ್ಲಿಡುತ್ತಾ, "ತಗೊಳ್ಳಿ, ನಿಮ್ಮ ಉಡುಗೊರೆ" ಎಂದ. ಆ ಕ್ಷಣ ಆಕೆಯ ಕೈಯಲ್ಲಿ ಅವನು 5,000 ರೂಪಾಯಿಗಳನ್ನಿಟ್ಟಿದ್ದ. ಆದರೆ ತೆರೇಸಾರಿಗೆ ಉಡುಗೊರೆ ಎನ್ನುವುದು 5,000 ರೂಪಾಯಿ ನಗದು ಎನ್ನುವುದು ತಿಳಿದಿರಲಿಲ್ಲ. ಹಾಗೆಯೇ ಆ ಹಣವೂ ಆಕೆಯ ಕೈಗೆ ಸಿಗಲಿಲ್ಲ. ಏಕೆಂದರೆ, ಆ ಕ್ಷಣದಲ್ಲಿಯೇ ರಾಂಚಿಯ ಭ್ರಷ್ಟಾಚಾರ ನಿಗ್ರಹ ದಳದ (ACB) ತಂಡವೊಂದು ಸರಪಂಚರನ್ನು ಹಿಡಿದುಹಾಕಿ ಭ್ರಷ್ಟಾಚಾರ ತಡೆ ಕಾಯಿದೆ, 1988ರ ಅಡಿಯಲ್ಲಿ ಲಂಚ ಪಡೆದ ಆರೋಪದಡಿ ಅವರನ್ನು ಬಂಧಿಸಿತು.

ಓರಾನ್ ಬುಡಕಟ್ಟಿಗೆ ಸೇರಿದ ಆದಿವಾಸಿಯಾದ 48 ವರ್ಷದ ತೆರೇಸಾ ಅವರನ್ನು ಈ ಕ್ರಮವು ಜರ್ಜರಿತಗೊಳಿಸಿತು. ಮತ್ತು ಅವರ ಪಂಚಾಯತ್ ಇರುವ ಜಾರ್ಖಂಡ್‌ನ ಬಸಿಯಾ ಬ್ಲಾಕ್‌ನ 80,000 ಕ್ಕೂ ಹೆಚ್ಚು ಜನರನ್ನು ಆಘಾತಗೊಳಿಸಿತು. ಎಸಿಬಿ ತಂಡವೊಂದು ರಾಂಚಿಯಿಂದ ಸುಮಾರು 100 ಕಿಲೋಮೀಟರ್ ದೂರದ ಈ ಸ್ಥಳಕ್ಕೆ ಬಂದಿದ್ದು - ಎಸ್‌ಯುವಿಯಲ್ಲಿ ನನಗೆ ಎರಡು ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡಿತು - ಇದು ಯಾರಿಗೂ ವಿಚಿತ್ರವೆನ್ನಿಸಲಿಲ್ಲ. ಈ ಕುರಿತು ಮಾತನಾಡಿದವರೆಂದರೆ ಆಕೆಯನ್ನು ಕೋರ್ಟಿನ ನ್ಯಾಯಾಧೀಶರು ಮಾತ್ರವೇ. ಅವರು ಈ ಕುರಿತು ಸ್ಪಷ್ಟವಾಗಿ ಪ್ರತಿಕ್ರಿಯಿಸಿದ್ದರು. ಎಸಿಬಿ ತಂಡವು ಈ ಊರಿಗೆ ಬಂದು ಹೋಗಲು ಸುಮಾರು ಐದು ಗಂಟೆಗಳ ಸಮಯ ತೆಗೆದುಕೊಂಡಿದೆ. ಇದರ ಖರ್ಚು ಲಂಚದ ಮೊತ್ತದ ಅರ್ಧಕ್ಕಿಂತಲೂ ಹೆಚ್ಚು. ಇತರ ಖರ್ಚುಗಳ ವಿಷಯ ಬಿಡಿ.

ತೆರೇಸಾ ಅವರನ್ನು ಸಹ ಗ್ರಾಮ ಪಂಚಾಯತ್ ಸದಸ್ಯರು ಸ್ಥಳಕ್ಕೆ - ಬಸಿಯಾ ಬ್ಲಾಕ್ ಪಂಚಾಯತ್ ಕಚೇರಿಗೆ – ಯಾಕೆ ಕರೆದೊಯ್ದಿದ್ದರು ಎಂಬ ಕುತೂಹಲವೂ ಇರಲಿಲ್ಲ. ಅವರೇ ತರುವಾಯ ಆಕೆಯ ವಿರುದ್ಧ ಸಾಕ್ಷಿಗಳಾಗಿ ಸಾಕ್ಷ್ಯ ನೀಡಿದ ವ್ಯಕ್ತಿಗಳಾಗಿದ್ದರು. ತೆರೇಸ್ಸಾ ಅವರನ್ನು ಬಂಧಿಸಿದ ತಂಡವು ಅಲ್ಲೇ ಬ್ಲಾಕ್‌ ಪಂಚಾಯತ್ ಕಚೇರಿಯ ಎದುರಿಗೆ ಕೆಲವೇ ಮೀಟರ್ ದೂರದಲ್ಲಿದ್ದ ಪೋಲೀಸ್ ಠಾಣೆಗೆ ಕರೆದೊಯ್ಯಲಿಲ್ಲ, "ಅವರು ನನ್ನನ್ನು 10-15 ಕಿಲೋಮೀಟರ್ ದೂರದಲ್ಲಿರುವ ಕಮ್ದಾರಾ ಬ್ಲಾಕ್‌ನಲ್ಲಿರುವ ಪೊಲೀಸ್ ಠಾಣೆಗೆ ಕರೆದೊಯ್ದರು."

ಇದು ನಡೆದಿದ್ದು 2017ರ ಜೂನ್‌ ಸುಮಾರಿಗೆ.

12 ತರಗತಿ ಓದಿರುವ ಅವರು ಆ ಘಟನೆಯನ್ನು ನೆನಪಿಸಿಕೊಳ್ಳುತ್ತಾ, “ಬಾಸಿಯಾ ಪೊಲೀಸ್‌ ಠಾಣೆಯಲ್ಲಿ ಎಲ್ಲರಿಗೂ ನನ್ನ ಪರಿಚಯವಿತ್ತು. ನಾನು ಅಪರಾಧಿಯಲ್ಲವೆನ್ನುವುದು ಅವರೆಲ್ಲರಿಗೂ ತಿಳಿದಿತ್ತು” ನಂತರ ಅವರ ಪ್ರಕರಣವು ರಾಂಚಿಯ ವಿಶೇಷ ನ್ಯಾಯಾಲಯದ ಮುಂದೆ ಬಂದಿತು

Teresa Lakra, sarpanch of the Tetra gram panchayat in Gumla district of Jharkhand
PHOTO • P. Sainath

ತೆರೇಸಾ ಲಾಕ್ರಾ, ಜಾರ್ಖಂಡ್ನ ಗುಮ್ಲಾ ಜಿಲ್ಲೆಯ ಟೆಟ್ರಾ ಗ್ರಾಮ ಪಂಚಾಯತ್ನ ಸರಪಂಚ್

ಜಾಮೀನಿನ ಮೇಲೆ ಹೊರಬರುವ ಮೊದಲು ತೆರೇಸಾ ಲಾಕ್ರಾ ಮುಂದಿನ ಎರಡು ತಿಂಗಳು ಮತ್ತು 12 ದಿನಗಳನ್ನು ಜೈಲಿನಲ್ಲಿ ಕಳೆದರು. ಅವರನ್ನು ಬಂಧಿಸಿದ ಮೂರು ದಿನಗಳಲ್ಲಿ ಅವರನ್ನು ಸರಪಂಚ್ ಹುದ್ದೆಯಿಂದ (ಜಾರ್ಖಂಡ್ನಲ್ಲಿ 'ಮುಖಿಯಾ' ಎಂದು ಕರೆಯಲಾಗುತ್ತದೆ) ಅಮಾನತುಗೊಳಿಸಲಾಯಿತು. ಪಂಚಾಯತಿಯ ಅಧಿಕಾರವು ಅದೇ ಸಮಯದಲ್ಲಿ ಅವರ ಡೆಪ್ಯೂಟಿ, ಉಪ ಸರಪಂಚ್ ಗೋವಿಂದ ಬರೈಕ್ ಅವರಿಗೆ ವರ್ಗಾವಣೆಯಾಯಿತು, ಈ ವ್ಯಕ್ತಿಯೇ ತೆರೇಸಾರಿಗೆ ಬಸಿಯಾ ಪಂಚಾಯತ್ ಕಚೇರಿಗೆ ತುರ್ತಾಗಿ ಬರುವಂತೆ ಫೋನಿನಲ್ಲಿ ಹೇಳಿದ್ದು.

ಮತ್ತು ಅವರು ಜೈಲಿನಲ್ಲಿದ್ದ ಸಮಯದಲ್ಲಿ ಯಾವುದಕ್ಕೆ ಸಂಬಂಧಿಸಿದ್ದೆನ್ನುವ ಸ್ಪಷ್ಟತೆಯಿಲ್ಲದ ಹಲವಾರು ಗುತ್ತಿಗೆಗಳು ಮತ್ತು ಒಪ್ಪಂದಗಳಿಗೆ ಸಹಿ ಹಾಕಲಾಯಿತು ಮತ್ತು ಹಸ್ತಾಂತರಿಸಲಾಯಿತು.

*****

ಈ ನಾಟಕ ಮತ್ತು ಬಂಧನ ತೆರೇಸಾ, ಅವರ ಪತಿ, ಇಬ್ಬರು ಹೆಣ್ಣು ಮಕ್ಕಳಿಗೆ ಬಹಳ ನೋವನ್ನುಂಟುಮಾಡಿತು. "ದೊಡ್ಡವಳು ಸರಿತಾ, 25 ವರ್ಷ ಅವಳಿಗೆ ಮದುವೆಯಾಗಿದೆ" ಎಂದು ಅವರು ತಿಳಿಸಿದರು. "ಅವಳು 12 ನೇ ತರಗತಿಯವರೆಗೆ ಓದಿದ್ದಾಳೆ." ಚಿಕ್ಕವಳಾದ ಏಂಜೆಲಾಗೆ 18 ವರ್ಷ. ಅವಳು ಪ್ರಸ್ತುತ 12 ನೇ ತರಗತಿಯಲ್ಲಿದ್ದಾಳೆ ಮತ್ತು ಮುಂದೆ ಓದಲು ಉದ್ದೇಶಿಸಿದ್ದಾಳೆ.” ಆಕೆಯ ಪತಿ ರಾಜೇಶ್ ಲಾಕ್ರಾ ಅವರು ಕಾಲೇಜು ಮೆಟ್ಟಿಲು ಹತ್ತಿರುವ ಕುಟುಂಬದ ಏಕೈಕ ಸದಸ್ಯ. ಆದರೆ ಅವರು ತನ್ನ ಬಿ.ಕಾಮ್‌ ಪದವಿಯ ಹೊರತಾಗಿಯೂ ಪತ್ನಿ ತೆರೇಸಾರೊಡನೆ ಟೆಟ್ರಾ ಗ್ರಾಮದಲ್ಲೇ ಉಳಿದು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ಹುದ್ದೆಯಿಂದ ತೆಗೆದುಹಾಕಿದ್ದು ಮತ್ತು ಸೆರೆವಾಸಕ್ಕೆ ಕಳುಹಿಸಿದ್ದು ಅವರೊಳಗೆ ಆಳವಾದ ಗಾಯವನ್ನೇ ಉಂಟುಮಾಡಿತ್ತು. ಆದರೆ ಈ ಮುಖಿಯಾ ಸೋಲನ್ನೊಪ್ಪಿಕೊಂಡು ಕೂರಲಿಲ್ಲ. "ಆಗ ನಾನು ಜರ್ಜರಿತಗೊಂಡಿದ್ದೆ, ಬಹಳ ನೋವಿನಲ್ಲಿದ್ದೆ" ಎಂದು ಅವರು ಹೇಳುತ್ತಾರೆ. ಆದರೆ ಜೈಲಿನಿಂದ ಹೊರಬಂದ ಅವರು ತಮ್ಮ ವಿರುದ್ಧ ಹೂಡಲಾದ ರಾಜಕೀಯ ಕುತಂತ್ರದ ವಿರುದ್ಧ ತಿರುಗಿಬಿದ್ದರು.

"ನಾನು ಕಾನೂನುಬಾಹಿರವಾಗಿ ನನ್ನನ್ನು ಹುದ್ದೆಯಿಂದ ತೆಗೆದು ಹಾಕಿದ್ದರ ವಿರುದ್ಧ ಹೋರಾಡಿದೆ" ಎಂದು ಅವರು ಟೆಟ್ರಾ ಗ್ರಾಮ ಪಂಚಾಯತ್‌ ಮತ್ತು ಗ್ರಾಮದಲ್ಲಿ ನನಗೆ ಹೇಳಿದರು. ಕೋರ್ಟಿನಿಂದ ವಿಚಾರಣೆ ಆರಂಭಗೊಳ್ಳುವ ಮೊದಲೇ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು. ತೆರೇಸಾ ತನ್ನ ಹೋರಾಟವನ್ನು ರಾಜ್ಯ ಚುನಾವಣಾ ಆಯೋಗಕ್ಕೆ (ಎಸ್‌ಇಸಿ) ಒಯ್ದರು ಮತ್ತು ರಾಂಚಿಯಲ್ಲಿ ತನ್ನ ಅಕ್ರಮ ಉಚ್ಛಾಟನೆಯ ವಿರುದ್ಧ ಅಧಿಕಾರಶಾಹಿಯನ್ನು ಎದುರಿಸಿದರು.

"ನಾನು ಎಸ್‌ಇಸಿ ಮತ್ತು ಇತರ ಕಚೇರಿಗಳಿಗೆಂದು ತಿಂಗಳುಗಳ ಕಾಲ ರಾಂಚಿಗೆ 12-14 ಸಲ ಓಡಾಡಿದ್ದೇನೆ" ಎನ್ನುತ್ತಾರೆ ತೆರೇಸಾ. ಆದರೂ ಎಂದಿನಂತೆ ನ್ಯಾಯ ತಡವಾಗಿಯಾದರೂ ದೊರಕಿತು. ಅವರ ವಿಷಯದಲ್ಲಿ ಇದಕ್ಕೆ ಒಂದು ವರ್ಷ ಹಿಡಿಯಿತು. ಆದರೆ ಅವರು ಅದರಿಂದ ಹೊರಬಂದಾಗ ಅವರ ಕೈಯಲ್ಲಿ ಮುಖಿಯಾ ಹುದ್ದೆಯ ಆದೇಶವಿತ್ತು. ಮತ್ತು ಜೈಲಿನಲ್ಲಿದ್ದ ಸಮಯದಲ್ಲಿ ಅಧಿಕಾರ ಚಲಾಯಿಸಿದ್ದ ಉಪ ಸರಪಂಚ್ ಗೋವಿಂದ ಬರೈಕ್‌ಗೆ ಆತನ ಸ್ಥಾನವನ್ನು ತೋರಿಸಲಾಗಿತ್ತು.

ಈ ಎಲ್ಲಾ ವೆಚ್ಚವನ್ನು ಭರಿಸಲು ಕುಟುಂಬವು ತಮ್ಮ ಐದು ಎಕರೆ ಮಳೆಯಾಶ್ರಿತ ಭೂಮಿಯನ್ನು ಅವಲಂಬಿಸಿತು. ಈ ಭೂಮಿಯಿಂದ ಅವರಿಗೆ ವರ್ಷಕ್ಕೆ ಎರಡು ಲಕ್ಷಗಳಿಗಿಂತಲೂ ಹೆಚ್ಚು ಆದಾಯ ದೊರೆಯುವುದಿಲ್ಲ. ಅವರು ಈ ಭೂಮಿಯಲ್ಲಿ ಭತ್ತ, ರಾಗಿ ಮತ್ತು ಉದ್ದನ್ನು ಮಾರುಕಟ್ಟೆಗಾಗಿ ಬೆಳೆಯುತ್ತಾರೆ. ಮತ್ತು ನೆಲಗಡಲೆ, ಜೋಳ, ಆಲೂಗಡ್ಡೆ ಮತ್ತು ಈರುಳ್ಳಿಯನ್ನು ಅವರ ಸ್ವಂತ ಬಳಕೆಗಾಗಿ.

Lakra has fought the bribery allegations with her own limited resources.
PHOTO • P. Sainath
Lakra has fought the bribery allegations with her own limited resources. With her are other women (right) from Tetra village, gathered at the village middle school building
PHOTO • Purusottam Thakur

ಲಾಕ್ರಾ ತಮ್ಮ ಸೀಮಿತ ಸಂಪನ್ಮೂಲಗಳ ಮಿತಿಯಲ್ಲೇ ತಮ್ಮ ವಿರುದ್ಧದ ಲಂಚದ ಆರೋಪದ ಪ್ರಕರಣವನ್ನು ಗೆದ್ದರು. ಆರೋಪಗಳ ವಿರುದ್ಧ ಹೋರಾಡಿದ್ದಾರೆ. ಅವರೊಂದಿಗೆ ಟೆಟ್ರಾ ಗ್ರಾಮದ ಇತರ ಮಹಿಳೆಯರು (ಬಲಕ್ಕೆ) ಗ್ರಾಮದ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡದಲ್ಲಿ ಜಮಾಯಿಸಿರುವುದು

ಆಕೆ ಒಂದು ವರ್ಷದ ನಂತರ ಎಸ್‌ಇಸಿ ಮೂಲಕ ಪಡೆದ ಮರುನೇಮಕಾತಿ ಆದೇಶವು ಬಹಳ ಅವರಿಗೆ ದೊರೆತ ಅತಿದೊಡ್ಡ ಗೆಲುವಾಗಿದೆ.

"ಬ್ಲಾಕ್ ಡೆವಲಪ್ಮೆಂಟ್ ಆಫೀಸರ್ (ಬಿಡಿಒ) ಬಾಸಿಯಾ ಆದೇಶದ ಮೇರೆಗೆ ತ್ವರಿತವಾಗಿ ಕಾರ್ಯನಿರ್ವಹಿಸಿದರು, ಮತ್ತು ಎಸ್ಇಸಿ ನಿರ್ದೇಶನದ ಒಂದು ವಾರದೊಳಗೆ ನನ್ನನ್ನು ಮುಖಿಯಾ ಹುದ್ದೆಗೆ ಮರುನೇಮಕ ಮಾಡಲಾಯಿತು" ಎಂದು ತೆರೇಸಾ ಸಣ್ಣ ನಗುವಿನೊಂದಿಗೆ ಹೇಳುತ್ತಾರೆ. ಇದು ನಡೆದಿದ್ದು ಸೆಪ್ಟೆಂಬರ್ 2018ರ ಸುಮಾರಿಗೆ.

ಹೀಗೆ ಅನ್ಯಾಯದ ವಿರುದ್ಧ ಹೋರಾಡಿದ ಅವರು ಏಳು ವರ್ಷಗಳ ಕಾಲ ಮುಖಿಯಾ ಆಗುಳಿದರು. ಕೊವಿಡ್‌ - 19 ಬರುವ ಸಮಯಕ್ಕೆ ಅವರ ಐದು ವರ್ಷಗಳ ಅವಧಿ ಮುಗಿದಿತ್ತು. ಕೊರೋನಾ ಮಹಾಮಾರಿಯ ಕಾರಣ ಚುನಾವಣೆಗಳು ಎರಡು ಮುಂದಕ್ಕೆ ಹೋದ ಕಾರಣ ಅವರು ಇನ್ನೆರಡು ವರ್ಷ 5,000 ಜನರಿಗೆ ಮುಖಿಯಾ ಆಗಿ ಮುಂದುವರೆದರು. ಅಧಿಕೃತ ದಾಖಲೆಯು ಅವರು ಕಾರಸ್ಥಾನಕ್ಕೆ ಒಳಗಾಗಿದ್ದ ಸಮಯವನ್ನು ಸಹ ಅವರು ಅಧಿಕಾರದಲ್ಲಿದ್ದ ದಿನಗಳನ್ನಾಗಿ ತೋರಿಸುತ್ತವೆ.

ತೆರೇಸಾ ಅವರು ತಮ್ಮ ಪಂಚಾಯತ್‌ನ ಸೋಲಂಗಬೀರಾ ಗ್ರಾಮದ ಹತ್ತಿರದ ಗುಡ್ಡವನ್ನು ಪುಡಿ ಮಾಡಿ ಜಲ್ಲಿ ತೆಗೆಯಲು ಬಯಸಿದ್ದ ಒಬ್ಬ ಗುತ್ತಿಗೆದಾರ ನೀಡಲು ಬಂದ 10 ಲಕ್ಷ ರೂಪಾಯಿ ಲಂಚವನ್ನು ತಿರಸ್ಕರಿಸಿದ್ದಕ್ಕಾಗಿ ಪಂಚಾಯತ್‌ನಾದ್ಯಂತ ಹೆಸರುವಾಸಿಯಾಗಿದ್ದಾರೆ. ವಿಪರ್ಯಾಸವೆಂದರೆ ಅವರು 5,000 ರೂಪಾಯಿಗಳನ್ನು ಲಂಚವಾಗಿ ಸ್ವೀಕರಿಸಿದ ಆರೋಪದ ಮೇಲೆ ಆಕೆ ಜೈಲಿನಲ್ಲಿ ಕಾಲ ಕಳೆದರು.

*****

ತೆರೇಸಾ ಅವರನ್ನು ಬಂಧಿಸಿದ ರೀತಿಯ ಕುರಿತು ಸಾಕಷ್ಟು ಪ್ರಶ್ನೆಗಳಿವೆ. ಅದೊಂದು ಪೂರ್ವ ಯೋಜಿತ ಕಾರ್ಯವಲ್ಲದೆ ಹೋಗಿದ್ದರೆ - ಲಂಚಕೊಡುವವನು ಏಕೆ ಸಾರ್ವಜನಿಕವಾಗಿಯೇ ಲಂಚ ಕೊಡಲು ಬಯಸಿದ? ಉಪ ಸರಪಂಚ ಗೋವಿಂದ ಬರೈಕ್ ಸೇರಿದಂತೆ ಪಂಚಾಯತ್‌ ಸದಸ್ಯರು ಪದೇ ಪದೇ ಬ್ಲಾಕ್‌ ಪಂಚಾಯತ್‌ ಕಚೇರಿಗೆ ಬರುವಂತೆ ಏಕೆ ಫೋನ್‌ ಮಾಡಿದರು? ಅದರಲ್ಲೂ ತಾನು ಇನ್ನೆಲ್ಲೋ ಕೆಲಸದಲ್ಲಿ ತೊಡಗಿಕೊಂಡಿದ್ದಾಗ? ಎಂದು ಅವರು ಪ್ರಶ್ನಿಸುತ್ತಾರೆ.

ಹಾಗಿದ್ದರೆ ʼಲಂಚʼ ಯಾವ ಕಾರಣಕ್ಕಾಗಿ ಕೊಡಲಾಗಿತ್ತು?

“ಈ ಅಂಗನವಾಡಿ (ಗ್ರಾಮೀಣ ತಾಯಿ ಮತ್ತು ಶಿಶುಪಾಲನಾ ಕೇಂದ್ರ) ಕೆಟ್ಟ ಸ್ಥಿತಿಯಲ್ಲಿತ್ತು. ಅದಕ್ಕೆ ಹಣ ಮೀಸಲಿಟ್ಟಿರುವುದನ್ನು ನೋಡಿ ಅದನ್ನು ದುರಸ್ತಿ ಮಾಡಿಸಿದ್ದೆ,” ಎಂದು ತೆರೇಸಾ ಹೇಳುತ್ತಾರೆ. ಇತರ ಯೋಜನೆಗಳಂತೆ ಇಲ್ಲಿಯೂ ‘ಫಲಾನುಭವಿ ಸಮಿತಿ’ ರಚಿಸಲಾಗಿತ್ತು. “ಈ ಬಿಹಾರಿ ಲಾಕ್ರಾ ಆ ಸಮಿತಿಯ ಸದಸ್ಯರಾಗಿದ್ದರು. ಕೆಲಸ ಮುಗಿದ ನಂತರ 80,000 ರೂಪಾಯಿ ಉಳಿದಿತ್ತು ಮತ್ತು ಅದನ್ನು ಅವರು ನಮಗೆ ಹಿಂತಿರುಗಿಸಬೇಕಿತ್ತು. ಗೋವಿಂದ್ ಬರೈಕ್ ಬಸಿಯಾ ಬ್ಲಾಕ್ ಪಂಚಾಯತ್ ಕಚೇರಿಗೆ ತುರ್ತಾಗಿ ಬರುವಂತೆ ಫೋನ್ ಮಾಡುತ್ತಲೇ ಇದ್ದ. ಹೀಗಾಗಿ ನಾನು ಅಲ್ಲಿಗೆ ಹೋಗಿದ್ದೆ."

ಆ ಹಣವನ್ನು ಬಸಿಯಾ ಬಿಪಿ ಕಚೇರಿಯಲ್ಲಿ ಹಣ ಹಿಂತಿರುಗಿಸಬೇಕಿತ್ತೇ ಹೊರತು ಟೆಟ್ರಾ ಗ್ರಾ.ಪಂ. ಕಚೇರಿಯಲ್ಲಲ್ಲ. ಬಿಹಾರಿ ಲಾಕ್ರಾ ಅವರಿಗೆ ಹಣ ನೀಡುವಾಗ ತೆರೇಸಾ ಕಚೇರಿಯನ್ನೂ ಪ್ರವೇಶಿಸಿರಲಿಲ್ಲ. ಅಷ್ಟರಲ್ಲೇ ಆಕೆಯ ಕೈಯಲ್ಲಿ 5,000 ರೂಪಾಯಿ ಹಣವನ್ನಿಟ್ಟು ಅದರ ಮೇಲೆ ಅವರ ಬೆರಳುಗಳ ಗುರುತು ಮೂಡುವಂತೆ ಮಾಡಲಾಯಿತು. ಮತ್ತು ಅಲ್ಲಿಂದ ಅವರ ಪಾಲಿನ ದುಃಸ್ವಪ್ನ ಆರಂಭಗೊಂಡಿತು.

Teresa is known across the panchayat for having turned down a 10-lakh-rupee bribe from a big contractor seeking to lease and destroy a nearby hillock in Solangbira village in her panchayat for rock chips
PHOTO • Purusottam Thakur

ತೆರೇಸಾ ತಮ್ಮ ಗ್ರಾಮ ಪಂಚಾಯತ್‌ ವಲಯದಲ್ಲಿ ದೊಡ್ಡ ಗುತ್ತಿಗೆದಾರನೊಬ್ಬ ನೀಡಲು ಬಂದ 10 ಲಕ್ಷ ರೂಪಾಯಿಗಳ ಲಂಚ ನಿರಾಕರಿಸಿದ ಕುರಿತು ಖ್ಯಾತಿಯನ್ನು ಹೊಂದಿದ್ದರು.  ಗುತ್ತಿಗೆದಾರ ಸೋಲಂಗಬೀರ ಎನ್ನುವಲ್ಲಿರುವ ಗುಡ್ಡವೊಂದನ್ನು ಜಲ್ಲಿಯ ಸಲುವಾಗಿ ಒಡೆಸುವ ಹವಣಿಕೆಯನ್ನು ಹೊಂದಿದ್ದ

ಆದರೆ ಈ ʼಲಂಚʼ ಪಡೆದ ಹಗರಣದ ಹಿಂದೆ ಮತ್ತೊಂದು ಇನ್ನೊಂದು ಲಂಚ ಪಡೆಯದ ಹಗರಣವಿದೆ.

ತೆರೇಸಾ ತಮ್ಮ‌ ಸಹ ಸದಸ್ಯರ ಕುರಿತು ಕೋಪದಲ್ಲಿದ್ದರೂ, ಇದಕ್ಕೆ ಕಾರಣ ತಾನು ಹಿಂದೆ ದೊಡ್ಡ ಗುತ್ತಿಗೆದಾರನೊಬ್ಬನಿಂದ ದೊಡ್ಡ ಮೊತ್ತದ ಲಂಚ ನಿರಾಕರಿಸಿದ್ದು ಎನ್ನುತ್ತಾರೆ. ಈ ಗುತ್ತಿಗೆದಾರನಿಗೆ ರಾಷ್ಟ್ರವ್ಯಾಪ್ತಿಯ ರಾಜಕಾರಣಿಯೊಬ್ಬರ ಸಂಪರ್ಕ ಹೊಂದಿರುವುದರಿಂದಾಗಿ ಆಕೆ ಅವನ ಕುರಿತು ಹೆಚ್ಚು ಮಾತನಾಡಲು ಹಿಂಜರಿಯುತ್ತಿದ್ದರು.

"ಆಗೊಂದು ದೊಡ್ಡ ಪ್ರಾಜೆಕ್ಟ್‌ ನಡೆಯುತ್ತಿತ್ತು. ರಸ್ತೆ ಮಾಡುವುದು ಇತ್ಯಾದಿ ಕೆಲಸಗಳು ನಡೆಯುತ್ತಿದ್ದವು. ಅದಕ್ಕಾಗಿ ಅವರು ನಮ್ಮ ಪ್ರದೇಶದಲ್ಲಿನ ಗುಡ್ಡವೊಂದನ್ನು ಒಡೆದು ಜಲ್ಲಿ ತಯಾರಿಸುತ್ತಿದ್ದರು. ನಾನು ಅದನ್ನು ವಿರೋಧಿಸಿ ಜನರನ್ನು ಸಂಘಟಿಸಿದೆ. ನಾನು ಹಾಗೆ ಮಾಡದೆ ಹೋಗಿದ್ದರೆ ಅವರು ಇಡೀ ಗುಡ್ಡವನ್ನೇ ನಾಶಪಡಿಸಿಬಿಡುತ್ತಿದ್ದರು. ಹಾಗಾಗಲು ಬಿಡುವುದಕ್ಕೆ ನಾನು ತಯಾರಿರಲಿಲ್ಲ" ಎನ್ನುತ್ತಾರೆ ತೆರೇಸಾ. ಒಂದು ಹಂತದಲ್ಲಿ ಅವರು ಆಕೆಯ ಬಳಿ  ಗ್ರಾಮಸಭೆಯಿಂದ ಅನುಮೋದನೆ ಪಡೆದಿದ್ದೇವೆ ಎಂದೂ ಹೇಳಿದರು.

“ಅದರಲ್ಲಿ ಅನಕ್ಷರಸ್ಥರು ಮತ್ತು ಸಹಿ ಮಾಡುವುದು ಹೇಗೆಂದು ತಿಳಿಯದ ಕೆಲವು ಜನರು ಸೇರಿದಂತೆ ಹಲವರ ಸಹಿಯಿತ್ತು” ಎಂದು ಅವರು ನಗುತ್ತಾರೆ. ಆದರೆ ಆ ಇಡೀ ಪತ್ರವೇ ನಕಲಿಯಾಗಿತ್ತು. ನಮಗೆ ಇದು ಗೊಂದಲ ಹುಟ್ಟಿಸಿತು. ಮುಖಿಯಾ ಇಲ್ಲದೆ ಗ್ರಾಮಸಭೆಯನ್ನು ಕರೆಯಲು ಹೇಗೇ ಸಾಧ್ಯ? ಅದನ್ನು ಕರೆಯಬೇಕಿರುವುದು ಅವರಲ್ಲವೆ?

ಆಗ ಈ ಪ್ರದೇಶಗಳಲ್ಲಿನ ಸಾಮಾಜಿಕ ಕಾರ್ಯಕರ್ತ ಸನ್ನಿ, ನಾವು ಪೆಸಾ ಪ್ರದೇಶದಲ್ಲಿದ್ದೇವೆ ಎಂದು ನನಗೆ ನೆನಪಿಸಿದರು. ಅಂದರೆ, ಅನುಸೂಚಿತ ಪ್ರದೇಶಗಳ ಪಂಚಾಯತ್ ವಿಸ್ತರಣೆ ಕಾಯ್ದೆ, 1996ರ ಅಡಿಯಲ್ಲಿ ಬರುವ ಪ್ರದೇಶಗಳು. "ಇಲ್ಲಿ ಗ್ರಾಮಸಭೆಯನ್ನು ಗ್ರಾಮದ ಸಾಂಪ್ರದಾಯಿಕ ಮುಖ್ಯಸ್ಥರು ಕರೆಯಬಹುದು" ಎಂದು ಅವರು ನಮ್ಮ ಗಮನಕ್ಕೆ ತಂದರು. ಅದೇನೇ ಇದ್ದರೂ, ತೆರೇಸಾ ದಾಖಲೆಯನ್ನು ನಕಲಿ ಎಂದು ತಿರಸ್ಕರಿಸಿದರು.

ಮುಂದೆ ದೊಡ್ಡ ಗುತ್ತಿಗೆದಾರನ ಕೈಗೊಂಬೆಗಳಿಂದ 10 ಲಕ್ಷ ರೂಪಾಯಿಗಳ ನಿಜವಾದ ಲಂಚದ ಪ್ರಸ್ತಾಪ ಬಂದಿತು. ಅದನ್ನು ತೆರೇಸಾ ಸಾರಾಸಗಟಾಗಿ ತಿರಸ್ಕರಿಸಿದರು, ಅವರನ್ನು ಆ ರೀತಿಯಲ್ಲಿ ಖರೀದಿಸಬಹುದೆಂದು ಭಾವಿಸಿದ್ದ ಅವರು ಇದರಿಂದ ಕೋಪಗೊಂಡರು.

ಇದಾದ 3-4 ತಿಂಗಳಿನೊಳಗೆ ಈ ʼಲಂಚದʼ ಪ್ರಕರಣ ತೆರೆದುಕೊಂಡಿತು. ಮತ್ತು ಇದೆಲ್ಲದರ ಕೊನೆಯಲ್ಲಿ ಗುತ್ತಿಗೆದಾರನು ಅಲ್ಲಿನ ಎರಡು ಬೆಟ್ಟಗಳಲ್ಲಿ ಒಂದನ್ನು ಪಡೆದುಕೊಂಡಿದ್ದ.

ಕುತೂಹಲಕಾರಿ ಸಂಗತಿಯೆಂದರೆ, ಉಡುಗೊರೆಯು ಸಾಧಾರಣ ಅಥವಾ ಸಾಂಪ್ರದಾಯಿಕ ರೀತಿಯಲ್ಲಿದ್ದಿದ್ದರೆ ಸ್ವೀಕರಿಸುತ್ತಿದ್ದರು ಎನ್ನುವುದನ್ನು ಒಮ್ಮೆಯೂ ನಿರಾಕರಿಸಲಿಲ್ಲ. “ನಾನು ಯಾವತ್ತೂ ಹಣ ಕೇಳಿದವಳಲ್ಲ” ಎನ್ನುತ್ತಾರೆ ಅವರು. “ಇಲ್ಲಿ ಅಂತಹ ಯೋಜನೆಗಳಲ್ಲಿ ಉಡುಗೊರೆಗಳನ್ನು ತೆಗೆದುಕೊಳ್ಳುವುದು ಮತ್ತು ನೀಡುವುದು ಎರಡೂ ನಡೆದಿದೆ. ನಾನೂ ಕೂಡ ತೆಗೆದುಕೊಳ್ಳುತ್ತಿದ್ದೆ” ಎಂದು ಅವರು ಪೂರ್ಣ ಪ್ರಾಮಾಣಿಕವಾಗಿ ಹೇಳುತ್ತಾರೆ. ಈ ಉಡುಗೊರೆ ಸಂಪ್ರದಾಯ ಕೇವಲ ಜಾರ್ಖಂಡ್‌ ರಾಜ್ಯಕ್ಕೆ ಸೀಮಿತವಾದುದಲ್ಲ. ಉಡುಗೊರೆಯ ಸ್ವರೂಪದಲ್ಲಿ ಬದಲಾವಣೆ ಕಾಣಬಹುದಾದರೂ ಈ ಅಭ್ಯಾಸವು ಭಾರತದ ಎಲ್ಲಾ ರಾಜ್ಯಗಳಲ್ಲೂ ಅಸ್ತಿತ್ವದಲ್ಲಿದೆ. ಯಾವುದೇ ರೀತಿಯ ಉಡುಗೊರೆಗಳನ್ನು ಸ್ವೀಕರಿಸದ ವೈಯಕ್ತಿಕ ಮುಖಿಯಾಗಳು ಮತ್ತು ಪಂಚಾಯತ್ ಸದಸ್ಯರು ಇದ್ದಾರೆ. ಆದರೆ ಅದು ಪ್ರಬಲವಾಗಿ ಕಂಡುಬರುವ ಸಂಗತಿಯಲ್ಲ.

ತೆರೇಸಾ ಲಾಕ್ರಾ ತನ್ನ ವಿರುದ್ಧ ಸಂಚು ರೂಪಿಸಿದ ಗುಂಪಿನ ವಿರುದ್ಧ ಹೋರಾಡಿ ಗೆದ್ದರಾದರೂ, ಅವರ ಸಮಸ್ಯೆಗಳು ಅಲ್ಲಿಗೇ ಮುಗಿದಿಲ್ಲ. ದೋಷಾರೋಪಣೆಯ ಆರು ವರ್ಷಗಳ ನಂತರವೂ ಕಾನೂನು ಹೋರಾಟ ಮುಂದುವರೆದಿದೆ. ಪ್ರಕರಣ ನಡೆಯುತ್ತಿದೆ. ಇದು ಅವರ ಸಂಪನ್ಮೂಲಗಳು ಮತ್ತು ಶಕ್ತಿಯನ್ನು ವ್ಯರ್ಥಗೊಳಿಸುತ್ತಿವೆ. ಅವರಿಗೀಗ ಸಹಾಯದ ಅವಶ್ಯಕತೆಯಿದೆ. ಹಾಗೆಯೇ ಸಹಾಯ ಎಲ್ಲಿಂದ ಬರುತ್ತಿದೆ ಎನ್ನುವುದರ ಕುರಿತೂ ಅವರು ಎಚ್ಚರವಹಿಸಬೇಕಿದೆ.

ಈಗ ಅವರು ಉಡುಗೊರೆ ನೀಡುವ ಗುತ್ತಿಗೆದಾರರ ಕುರಿತು ಜಾಗರೂಕರಾಗಿರುವುದನ್ನು ಕಲಿತಿದ್ದಾರೆ.


ಮುಖಪುಟ ಚಿತ್ರ: ಪುರುಶೋತ್ತಮ ಠಾಕುರ್

ಅನುವಾದ: ಶಂಕರ. ಎನ್. ಕೆಂಚನೂರು

P. Sainath is Founder Editor, People's Archive of Rural India. He has been a rural reporter for decades and is the author of 'Everybody Loves a Good Drought' and 'The Last Heroes: Foot Soldiers of Indian Freedom'.

Other stories by P. Sainath

P. Sainath is Founder Editor, People's Archive of Rural India. He has been a rural reporter for decades and is the author of 'Everybody Loves a Good Drought' and 'The Last Heroes: Foot Soldiers of Indian Freedom'.

Other stories by P. Sainath
Photographs : Purusottam Thakur

Purusottam Thakur is a 2015 PARI Fellow. He is a journalist and documentary filmmaker and is working with the Azim Premji Foundation, writing stories for social change.

Other stories by Purusottam Thakur
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru