ತನ್ನ ಬದುಕಿನ 82 ವರ್ಷಗಳನ್ನು ಕಳೆದಿರುವ ಆರಿಫಾ ಈಗಾಗಲೇ ಬದುಕಿನ ಹಲವು ಮಜಲುಗಳನ್ನು ನೋಡಿದ್ದಾರೆ. ಅವರ ಆಧಾರ್‌ ಕಾರ್ಡ್‌ ಅವರು ಜನವರಿ 1, 1938ರಂದು ಜನಿಸಿದರೆಂದು ಹೇಳುತ್ತದೆಯಾದರೂ ಆರಿಫಾರಿಗೆ ಆ ಕುರಿತು ಖಾತರಿಯಿಲ್ಲ. ಅವರಿಗೆ ನೆನಪಿರುವುದೆಂದರೆ ತನಗೆ ಹದಿನಾರು ವರ್ಷವಿದ್ದಾಗ 20 ವರ್ಷದ ರಿಜ್ವಾನ್‌ ಖಾನ್‌ಗೆ ಎರಡನೇ ಹೆಂಡತಿಯಾಗಿ ಈ ಹಳ್ಳಿಗೆ ಬಂದಿದ್ದು. ಅವರಿರುವ ಊರಿನ ಹೆಸರು ಬಿವಾನ್. ಇದು ಹರ್ಯಾಣದ‌ ನುಹ್‌ ಜಿಲ್ಲೆಯಲ್ಲಿದೆ. "ನನ್ನ ಅಕ್ಕ [ರಿಜ್ವಾನ್ ಅವರ ಮೊದಲ ಹೆಂಡತಿ] ಮತ್ತು ಅವರ ಆರು ಮಕ್ಕಳು ದೇಶ ವಿಭಜನೆಯ ಸಮಯದಲ್ಲಿ ಕಾಲ್ತುಳಿತಕ್ಕೆ ಸಿಕ್ಕಿ ತೀರಿಕೊಂಡರು. ನಂತರ ನನ್ನ ತಾಯಿ ರಿಜ್ವಾನ್‌ ಜೊತೆ ಮದುವೆ ಮಾಡಿಸಿದರು", ಎಂದು ಆರಿಫಾ ನೆನಪಿಸಿಕೊಳ್ಳುತ್ತಾರೆ (ಇದು ಅವರ ನಿಜವಾದ ಹೆಸರಲ್ಲ).

ಮಿಯೋ ಮುಸ್ಲಿಮ್‌ ಸಮುದಾಯವನ್ನು ಪಾಕಿಸ್ತಾನಕ್ಕೆ ಹೋಗದಂತೆ ಕೇಳಿಕೊಳ್ಳಲು ಮಹಾತ್ಮ ಗಾಂಧಿ ಮೇವತ್‌ನ ಹಳ್ಳಿಯೊಂದಕ್ಕೆ ಭೇಟಿ ನೀಡಿದ್ದ ಸಮಯದ ಮಸುಕಾದ ನೆನಪುಗಳೂ ಅವರಲ್ಲಿವೆ. ಪ್ರತಿ ಡಿಸೆಂಬರ್ 19 ದಿನಾಂಕವನ್ನು, ಹರಿಯಾಣದ ಮಿಯೋ ಮುಸ್ಲಿಮರು ಗಾಂಧಿಯವರು ನುಹ್‌ನ ಘಾಸೆರಾ ಗ್ರಾಮಕ್ಕೆ ಭೇಟಿಕೊಟ್ಟ ದಿನವನ್ನಾಗಿ ಆಚರಿಸುತ್ತಾರೆ. (ನುಹ್ ಜಿಲ್ಲೆಯನ್ನು 2006ರವರೆಗೆ ಮೇವತ್ ಎಂದು ಕರೆಯಲಾಗುತ್ತಿತ್ತು).

ಆರಿಫಾ ಅವರ ತಾಯಿ ಅವರನ್ನು ಜೊತೆಯಲ್ಲಿ ಕುಳ್ಳಿರಿಸಿಕೊಂಡು ರಿಜ್ವಾನ್‌ ಅವರನ್ನು ಯಾಕೆ ಮದುವೆಯಾಗಬೇಕೆಂದು ವಿವರಿಸಿದ ನೆನಪು ಅವರೊಳಗೆ ಹೆಚ್ಚು ಸ್ಪಷ್ಟವಾಗಿದೆ. "ಅವನ ಬಳಿ ಏನೂ ಉಳಿದಿಲ್ಲ ಎಂದು ತಾಯಿ ನನ್ನನ್ನು ಅವನಿಗೆ ಕೊಟ್ಟಿದ್ದರು". ತನ್ನ ಸ್ವಂತ ಹಳ್ಳಿಯಾದ ರೆಥೋರಾದಿಂದ ಸುಮಾರು 15 ಕಿಲೋಮೀಟರ್ ದೂರದ ಬಿವಾನ್ ಹೇಗೆ ತನ್ನ ಮನೆಯಾಯಿತು ಎನ್ನವುದನ್ನು ಆರಿಫಾ ಹೀಗೆ ವಿವರಿಸುತ್ತಾರೆ. ದೇಶದಲ್ಲೇ ಅತಿಯಾದ ದುರ್ಬಲ ಅಭಿವೃದ್ಧಿ ಸೂಚ್ಯಂಕವನ್ನು ಹೊಂದಿರುವ ಜಿಲ್ಲೆಯಲ್ಲೇ ಇವೆರಡೂ ಹಳ್ಳಿಗಳಿವೆ.

ಫಿರೋಜ್‌ಪುರ ಜಿರ್ಕಾ ಬ್ಲಾಕ್‌ನಲ್ಲಿರುವ ಬಿವಾನ್ ರಾಷ್ಟ್ರ ರಾಜಧಾನಿ ದೆಹಲಿಯಿಂದ ಸುಮಾರು 80 ಕಿಲೋಮೀಟರ್ ದೂರದಲ್ಲಿ ಹರಿಯಾಣ ಮತ್ತು ರಾಜಸ್ಥಾನದ ಗಡಿಯಲ್ಲಿರುವ ಅರಾವಳಿ ಬೆಟ್ಟಗಳ ತಪ್ಪಲಿನಲ್ಲಿದೆ. ದೆಹಲಿಯಿಂದ ನುಹ್‌ಗೆ ಹೋಗುವ ರಸ್ತೆಯು ದಕ್ಷಿಣ ಹರಿಯಾಣದ ಗುರುಗ್ರಾಮ್ ಮೂಲಕ ಹಾದುಹೋಗುತ್ತದೆ. ಇದು ಆರ್ಥಿಕ ಮತ್ತು ಕೈಗಾರಿಕಾ ಕೇಂದ್ರವಾಗಿದ್ದು, ಗುರುಗ್ರಾಮ್ ತಲಾದಾಯದ ಸೂಚ್ಯಂಕದಲ್ಲಿ ದೇಶದಲ್ಲೇ ಮೂರನೇ ಸ್ಥಾನದಲ್ಲಿದೆ. ಮತ್ತು ಈ ದಾರಿಯು ನಿಮ್ಮನ್ನು ದೇಶದಲ್ಲೇ ಅತಿ ಹಿಂದುಳಿದ ಜಿಲ್ಲೆಗಳ ಪಟ್ಟಿಯಲ್ಲಿ 44ನೇ ಸ್ಥಾನದಲ್ಲಿರುವ ಜಿಲ್ಲೆಗೆ ಕರೆತರುತ್ತದೆ. ಇಲ್ಲಿನ ಹಸಿರು ಹೊಲಗಳು, ಶುಷ್ಕ ಬೆಟ್ಟಗಳು, ಕಳಪೆ ಮೂಲಸೌಕರ್ಯಗಳು ಮತ್ತು ನೀರಿನ ಕೊರತೆಯು ಆರಿಫಾರಂತಹ ಅನೇಕರ ಬದುಕಿನ ಗುರುತಾಗಿ ಕಾಣುತ್ತವೆ.

ಮಿಯೋ ಮುಸ್ಲಿಂ ಸಮುದಾಯವು ಹರಿಯಾಣದ ಈ ಭಾಗ ಮತ್ತು ನೆರೆಯ ರಾಜಸ್ಥಾನದ ಕೆಲವು ಭಾಗಗಳಲ್ಲಿ ವಾಸಿಸುತ್ತಿದೆ. ನುಹ್ ಜಿಲ್ಲೆಯ ಜನಸಂಖ್ಯೆಯ ಶೇಕಡಾ 79.2ರಷ್ಟು ಮುಸ್ಲಿಮರಿದ್ದಾರೆ ( ಜನಗಣತಿ 2011 ).

1970ರ ದಶಕದಲ್ಲಿ, ಆರಿಫಾ ಅವರ ಪತಿ ರಿಜ್ವಾನ್ ಬಿವಾನ್‌ನಿಂದ ದೂರದಲ್ಲಿರುವ ಮರಳು, ಕಲ್ಲು ಮತ್ತು ಸಿಲಿಕಾ ಗಣಿಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸಿದಾಗ, ಆರಿಫಾರ ಪ್ರಪಂಚವು ಬೆಟ್ಟಗಳಿಂದ ಸುತ್ತುವರಿದಿತ್ತು. ಅವರ ದಿನದ ಅತ್ಯಂತ ಪ್ರಮುಖ ಕೆಲಸವೆಂದರೆ ನೀರು ಹೊಂದಿಸುವುದಾಗಿತ್ತು. 22 ವರ್ಷಗಳ ಹಿಂದೆ ರಿಜ್ವಾನ್‌ ನಿಧನರಾದಾಗ ಆರಿಫಾ ತನ್ನ ಮತ್ತು ತನ್ನ ಎಂಟು ಮಕ್ಕಳ ಹೊಟ್ಟೆ ಹೊರೆಯುವ ಸಲುವಾಗಿ ಹೊಲಗಳಲ್ಲಿ ದುಡಿಯಲು ಪ್ರಾರಂಭಿಸಿದರು. ದಿನಕ್ಕೆ ಹತ್ತರಿಂದ ಇಪ್ಪತ್ತು ರೂಪಾಯಿ ಸಂಪಾದಿಸುವ ಅವರು "ನಮ್ಮ ಜನ ನಿಮ್ಮಿಂದ ಸಾಧ್ಯ ಇರೋವಷ್ಟು ಮಕ್ಕಳನ್ನು ಪಡೆಯಿರಿ, ಅಲ್ಲಾಹ್‌ ಅವರಿಗೆ ಎಲ್ಲವನ್ನೂ ಒದಗಿಸುತ್ತಾನೆ ಎನ್ನುತ್ತಾರೆ", ಎಂದು ಹೇಳುತ್ತಾರೆ.
Aarifa: 'Using a contraceptive is considered a crime'; she had sprained her hand when we met. Right: The one-room house where she lives alone in Biwan
PHOTO • Sanskriti Talwar
Aarifa: 'Using a contraceptive is considered a crime'; she had sprained her hand when we met. Right: The one-room house where she lives alone in Biwan
PHOTO • Sanskriti Talwar

ಆರಿಫಾ: 'ಗರ್ಭನಿರೋಧಕವನ್ನು ಬಳಸುವುದನ್ನು ಅಪರಾಧವೆಂದು ಪರಿಗಣಿಸಲಾಗುತ್ತದೆ'; ನಾವು ಭೇಟಿಯಾದಾಗ ಅವರು ತನ್ನ ಕೈಯನ್ನು ಉಳುಕಿಸಿಕೊಂಡಿದ್ದರು. ಬಲ: ಅವರು ಬಿವಾನ್‌ನಲ್ಲಿ ಏಕಾಂಗಿಯಾಗಿ ವಾಸಿಸುವ ಒಂದು ಕೋಣೆಯ ಮನೆ

ಇವರ ನಾಲ್ವರು ಹೆಣ್ಣುಮಕ್ಕಳು ವಿವಾಹವಾಗಿ ವಿವಿಧ ಗ್ರಾಮಗಳಲ್ಲಿ ವಾಸಿಸುತ್ತಿದ್ದಾರೆ. ನಾಲ್ವರು ಗಂಡು ಮಕ್ಕಳು ಮದುವೆಯಾಗಿ ಹಳ್ಳಿಯಲ್ಲೇ ವಾಸಿಸುತ್ತಿದ್ದಾರೆ. ಅವರಲ್ಲಿ ಮೂವರು ರೈತರು, ಒಬ್ಬರು ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಾರೆ. ಆರಿಫಾ ತನ್ನ ಒಂದು ಕೋಣೆಯ ಮನೆಯಲ್ಲೇ ವಾಸಿಸಲು ಬಯಸುತ್ತಾರೆ. ಆರಿಫಾರ ಹಿರಿಯ ಮಗನಿಗೆ 12 ಮಕ್ಕಳಿದ್ದಾರೆ. ಆರಿಫಾ, ತನ್ನಂತೆಯೇ ತನ್ನ ಸೊಸೆಯಂದಿರು ಸಹ ಯಾರೂ ಯಾವುದೇ ರೀತಿಯ ಗರ್ಭನಿರೋಧಕವನ್ನು ಬಳಸುವುದಿಲ್ಲ ಎಂದು ಹೇಳುತ್ತಾರೆ. "ಸುಮಾರು ಹನ್ನೆರಡು ಮಕ್ಕಳಾದ ನಂತರ ತಾನಾಗಿಯೇ ಮಕ್ಕಳಾಗುವುದು ನಿಲ್ಲುತ್ತದೆ," ಗರ್ಭನಿರೋಧಕ ಬಳಸುವುದನ್ನು ನಮ್ಮ ಧರ್ಮದಲ್ಲಿ ಅಪರಾಧವೆಂದು ಪರಿಗಣಿಸಲಾಗಿದೆ ಎಂದು ಅವರು ಹೇಳುತ್ತಾರೆ.

ರಿಜ್ವಾನ್ ವೃದ್ಧಾಪ್ಯದಿಂದ ಮರಣಹೊಂದಿದರೆ, ಈ ನಡುವಿನ ವರ್ಷಗಳಲ್ಲಿ ಮೇವತ್ ಜಿಲ್ಲೆಯ ಅನೇಕ ಮಹಿಳೆಯರು ಕ್ಷಯರೋಗದಿಂದಾಗಿ ತಮ್ಮ ಗಂಡಂದಿರನ್ನು ಕಳೆದುಕೊಂಡರು. ಬಿವಾನ್‌ನಲ್ಲಿ ಸುಮಾರು 957‌ ಮಂದಿ ಕ್ಷಯರೋಗದಿಂದ ಮೃತಪಟ್ಟಿದ್ದಾರೆ. ಅವರಲ್ಲಿ ಬಹಾರ್ ಅವರ ಪತಿ ದಾನಿಶ್ ಸಹ ಒಬ್ಬರು (ಹೆಸರುಗಳನ್ನು ಬದಲಾಯಿಸಲಾಗಿದೆ). ಬಹಾರ್‌ ನಲವತ್ತು ವರ್ಷಗಳಿಂದ ವಾಸಿಸುತ್ತಿದ್ದ ಬಿವಾನ್‌ನಲ್ಲಿನ ತಮ್ಮ ಮನೆಯಲ್ಲಿ 2014ರಲ್ಲಿ ಕ್ಷಯರೋಗದಿಂದಾಗಿ ದಿನದಿಂದ ದಿನಕ್ಕೆ ಗಂಡನ ಆರೋಗ್ಯ ಕುಸಿಯುತ್ತಿರುವುದನ್ನು ಗಮನಿಸಿದರು. "ಅವರಿಗೆ ಎದೆ ನೋವಿತ್ತು ಜೊತೆಗೆ ಕೆಮ್ಮುವಾಗ ರಕ್ತ ಬರುತ್ತಿತ್ತು", ಎಂದು ನೆನಪಿಸಿಕೊಳ್ಳುತ್ತಾರೆ. ಬಹಾರ್‌ ಅವರಿಗೆ ಈಗ ಸುಮಾರು 60 ವರ್ಷಗಳಿರಬಹುದು. ಅವರ ಅಕ್ಕಪಕ್ಕದ ಮನೆಗಳಲ್ಲಿ ವಾಸಿಸುವ ಅವರ ಸಹೋದರಿಯರೂ ತಮ್ಮ ಗಂಡಂದಿರನ್ನು ಕ್ಷಯರೋಗದಿಂದಾಗಿ ಕಳೆದುಕೊಂಡಿದ್ದಾರೆ. "ಇದು ನಾವು ಪಡೆದುಕೊಂಡು ಬಂದಿದ್ದು. ಈ ಬೆಟ್ಟಗಳೇ ನಮ್ಮೆಲ್ಲ ದುರಾದೃಷ್ಟದ ಮೂಲವಾಗಿದೆ, ನಾವು ಇವುಗಳನ್ನು ದೂಷಿಸುತ್ತೇವೆ", ಎಂದು ಅವರು ಹೇಳುತ್ತಾರೆ.

(ಫರಿದಾಬಾದ್ ಮತ್ತು ನೆರೆಯ ಪ್ರದೇಶಗಳಲ್ಲಿ ದೊಡ್ಡ ಪ್ರಮಾಣದ ವಿನಾಶದ ನಂತರ 2002ರಲ್ಲಿ ಸುಪ್ರೀಂ ಕೋರ್ಟ್ ಹರಿಯಾಣದಲ್ಲಿ ಗಣಿಗಾರಿಕೆ ಚಟುವಟಿಕೆಗಳನ್ನು ನಿಷೇಧಿಸಿತು. ಸುಪ್ರೀಂ ಕೋರ್ಟ್ ನಿಷೇಧದ ಆದೇಶವು ಪರಿಸರ ಹಾನಿಯ ಕುರಿತು ಮಾತ್ರ ಹೇಳಿದೆ. ಇದು ಟಿಬಿಯ ಬಗ್ಗೆ ಯಾವುದೇ ಉಲ್ಲೇಖವನ್ನು ಮಾಡಿಲ್ಲ. ಕೆಲವು ಸರಿಯಾದ ಆಧಾರವಿಲ್ಲದ ವರದಿಗಳು ಮಾತ್ರ ಒಂದಕ್ಕೊಂದನ್ನು ಸಂಪರ್ಕಿಸುತ್ತವೆ.)

ನುಹ್ ಜಿಲ್ಲಾ ಕೇಂದ್ರದಲ್ಲಿರುವ ಬಿವಾನ್‌ಗೆ ಏಳು ಕಿಲೋಮೀಟರ್ ದೂರದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ (ಪಿ.ಎಚ್‌.ಸಿ), ಸಿಬ್ಬಂದಿ ಸದಸ್ಯ ಪವನ್ ಕುಮಾರ್ ಅವರು 2019ರಲ್ಲಿ ದಾಖಲಾದ ಕ್ಷಯರೋಗ ಸಂಬಂಧಿತ ಸಾವಿನ ದಾಖಲೆಯನ್ನು ನಮಗೆ ತೋರಿಸಿದರು. ವಾಯಿಝ್ ಅವರು ಟಿಬಿಯಿಂದ ಸತ್ತಿದ್ದರು. ದಾಖಲೆಗಳ ಪ್ರಕಾರ, ಬಿವಾನ್‌ನಲ್ಲಿ ಇತರ ಏಳು ಪುರುಷರು ಟಿಬಿಯಿಂದ ಬಳಲುತ್ತಿದ್ದಾರೆ. "ಗ್ರಾಮದ ಹೆಚ್ಚಿನವರು ಇಲ್ಲಿಗೆ ಭೇಟಿ ನೀಡದ ಕಾರಣ ಈ ಸಂಖ್ಯೆ ಇನ್ನೂ ಹೆಚ್ಚಿದ್ದರೂ ಇರಬಹುದು", ಎಂದು ಕುಮಾರ್‌ ಹೇಳುತ್ತಾರೆ.

ವಾಯಿಝ್ ಅವರು 40 ವರ್ಷದ ಫೈಝಾರನ್ನು ಮದುವೆಯಾಗಿದ್ದರು. (ಹೆಸರುಗಳನ್ನು ಬದಲಾಯಿಸಲಾಗಿದೆ) ರಾಜಸ್ಥಾನದ ಭರತ್‌ಪುರ ಜಿಲ್ಲೆಯಲ್ಲಿರುವ ತನ್ನ ಹಳ್ಳಿಯಾದ ‌ನೌಗನ್ವಾದಲ್ಲಿ ಯಾವುದೇ ಕೆಲಸ ಲಭ್ಯವಿರಲಿಲ್ಲ ಎಂದು ಅವರು ಹೇಳುತ್ತಾರೆ. "ಗಣಿ ಕೆಲಸದ ಕುರಿತು ತಿಳಿದ ನಂತರ ನನ್ನ ಪತಿ ಬಿವಾನ್‌ಗೆ ತೆರಳಿದರು. ಒಂದು ವರ್ಷದ ನಂತರ ನಾನೂ ಅವರನ್ನು ಸೇರಿಕೊಂಡೆ. ಮತ್ತು ಇಲ್ಲಿ ಮನೆಯನ್ನೂ ಕಟ್ಟಿದೆವು." ಫೈಜಾ ಒಟ್ಟು 12 ಮಕ್ಕಳಿಗೆ ಜನ್ಮ ನೀಡಿದರು. ಅವುಗಳಲ್ಲಿ ಅಕಾಲಿಕ ಜನನದಿಂದಾಗಿ ನಾಲ್ಕು ಮಕ್ಕಳು ಮೃತಪಟ್ಟವು. "ಒಂದು ಮಗು ಈಗ ಕುಳಿತುಕೊಳ್ಳಲು ಕಲಿಯುತ್ತಿರುವಾಗಲೇ ಮತ್ತೆ ಒಂದು ಮಗುವನ್ನು ಹೊಂದಿದ್ದೆ ನಾನು."

ಅವರು ಮತ್ತು ಆರಿಫಾ ವಿಧವೆಯರಿಗಾಗಿ ಸಿಗುವ ಮಾಸಿಕ ಪಿಂಚಣಿ 1,800 ಮೇಲೆ ಅವಲಂಬಿತರಾಗಿ ಬದುಕು ಸಾಗಿಸುತ್ತಿದ್ದಾರೆ. "ನಾವು ಕೆಲಸ ಕೇಳಿದರೆ: ನಿಮಗೆ ತುಂಬಾ ವಯಸ್ಸಾಗಿ ದುರ್ಬಲರಾಗಿದ್ದೀರಿ. ಇದು ನಲವತ್ತು ಕೇಜಿಯಿದೆ. ಇದನ್ನು ಹೇಗೆ ಎತ್ತುತ್ತೀರಿ ಎಂದು ಕೇಳುತ್ತಾರೆ", ಎಂದು 66 ವರ್ಷದ ಹದಿಯಾ (ಹೆಸರು ಬದಲಾಯಿಸಲಾಗಿದೆ) ತಾವು ಎದುರಿಸುವ ಅವಮಾನವನ್ನು ಅನುಕರಿಸುತ್ತಾ ಹೇಳುತ್ತಾರೆ. ಆದ್ದರಿಂದಲೇ ಪಿಂಚಣಿಯ ಒಂದೊಂದು ರೂಪಾಯಿಯನ್ನೂ ಯೋಚಿಸಿ ಖರ್ಚು ಮಾಡಬೇಕಾಗುತ್ತದೆ. ನುಹ್‌ನಲ್ಲಿರುವ ಪಿ.ಎಚ್‌.ಸಿ.ಗೆ ಆಟೋರಿಕ್ಷಾದಲ್ಲಿ ಹೋಗಲು ಹತ್ತು ರೂಪಾಯಿ ಕೊಡಬೇಕಾಗುತ್ತದೆ.  ಅದಕ್ಕಾಗಿ ನಾವು ವೈದ್ಯಕೀಯ ಅಗತ್ಯಗಳಿಗಾಗಿ ಆಸ್ಪತ್ರೆಗೆ ಹೋಗಲು ನಡೆದೇ ತಲುಪಿ ಹತ್ತು ರೂಪಾಯಿ ಉಳಿಸುತ್ತೇವೆ. "ವೈದ್ಯರನ್ನು ನೋಡಲು ಬಯಸುವ ಎಲ್ಲ ವೃದ್ಧ ಮಹಿಳೆಯರು ಒಟ್ಟಾಗಿ ನಡೆದುಕೊಂಡು ಹೋಗುತ್ತೇವೆ. ದಾರಿಯ ನಡುವೆ ಬಳಲಿಕೆಯಾದಾಗ ಒಂದಷ್ಟು ಹೊತ್ತು ಕುಳಿತು ಮತ್ತೆ ನಡೆಯುತ್ತೇವೆ. ಒಂದು ದಿನವಿಡೀ ಹೀಗೆ ಕಳೆದುಬಿಡುತ್ತದೆ", ಎಂದು ಹದಿಯಾ ಹೇಳುತ್ತಾರೆ.
Bahar (left): 'People say it happened because it was our destiny. But we blame the hills'. Faaiza (right) 'One [child] barely learnt to sit, and I had another'
PHOTO • Sanskriti Talwar
Bahar (left): 'People say it happened because it was our destiny. But we blame the hills'. Faaiza (right) 'One [child] barely learnt to sit, and I had another'
PHOTO • Sanskriti Talwar

ಬಹಾರ್ (ಎಡ): 'ಜನರು ಅದು ನಮ್ಮ ಹಣೇಬರಹದಿಂದಾಗಿ ಹೀಗಾಗಿದೆ ಎನ್ನುತ್ತಾರೆ ಆದರೆ ಇದಕ್ಕೆ ಕಾರಣ ಬೆಟ್ಟಗಳು ಎಂದು ನಾವು ಹೇಳುತ್ತೇವೆ'. ಫೈಜಾ (ಬಲ) 'ಒಂದು ಮಗು ಕುಳಿತುಕೊಳ್ಳಲು ಕಲಿಯುವಾಗಲೇ ನನಗೆ ಇನ್ನೊಂದು ಮಗುವಾಗಿತ್ತು'

ಬಾಲ್ಯದಲ್ಲಿ ಹದಿಯಾ ಶಾಲೆಗೆ ಹೋಗಿರಲಿಲ್ಲ. ತಾಯಿ ದುಡಿಯುತ್ತಿದ್ದ ಸೋನಿಪತ್‌ನಲ್ಲಿನ ಹೊಲಗಳು ಅವರಿಗೆ ಎಲ್ಲವನ್ನೂ ಕಲಿಸಿದವು ಎಂದು ಅವರು ಹೇಳುತ್ತಾರೆ. ಅವರು ತನ್ನ ಹದಿನೈದನೇ ವಯಸ್ಸಿನಲ್ಲಿ ಫಾಹಿದ್‌ರನ್ನು ಮದುವೆಯಾದರು. ಫಾಹಿದ್‌ ಅರಾವಳಿ ಬೆಟ್ಟಗಳಲ್ಲಿ ದುಡಿಯಲು ಪ್ರಾರಂಭಿಸಿದಾಗ, ಹದಿಯಾರ ಅತ್ತೆ ಹೊಲಗಳಲ್ಲಿ ಕಳೆ ಕೀಳುವ ಕೆಲಸಕ್ಕೆಂದು ಸೊಸೆಯ ಕೈಯಲ್ಲಿ ಖುರ್ಪಾ (ಕತ್ತರಿಸುವ ಸಾಧನ) ನೀಡಿದರು.

2005ರಲ್ಲಿ ಫಾಹಿದ್ ಕ್ಷಯರೋಗದಿಂದ ನಿಧನರಾದಾಗ, ಹದಿಯಾರ ಜೀವನವು ಹೊಲಗಳಲ್ಲಿ ದುಡಿಯುವುದು, ಹಣವನ್ನು ಸಾಲವಾಗಿ ಪಡೆಯುವುದು ಮತ್ತು ಅದನ್ನು ಮರುಪಾವತಿಸುವುದು ಇಷ್ಟೇ ಆಗಿತ್ತು. “ನಾನು ಹಗಲಿನಲ್ಲಿ ಹೊಲಗಳಲ್ಲಿ ದುಡಿದು ರಾತ್ರಿಯಲ್ಲಿ ಮಕ್ಕಳನ್ನು ನೋಡಿಕೊಳ್ಳುತ್ತಿದ್ದೆ. ಫಕೀರ್ನಿ ಜೈಸಿ ಹಾಲಾತ್ ಹೋ ಗಯೀ ಥೀ [ಫಕೀರರ ಜೀವನದಂತೆ ನನ್ನ ಪರಿಸ್ಥಿತಿಯಾಗಿತ್ತು],” ಎಂದು ಅವರು ಹೇಳುತ್ತಾರೆ.

ನಾನು ಮದುವೆಯಾದ ಒಂದು ವರ್ಷಕ್ಕೆ ಮಗಳಿಗೆ ಜನ್ಮ ನೀಡಿದೆ. ಉಳಿದವರು ಪ್ರತಿ ಎರಡು ಅಥವಾ ಮೂರು ವರ್ಷಗಳಿಗೊಮ್ಮೆ ಜನಿಸಿದರು. ಪೆಹ್ಲೆ ಕಾ ಶುದ್ಧ ಜಮಾನಾ ಥಾ [ಹಿಂದಿನದು ಶುದ್ಧವಾದ ಕಾಲವಾಗಿತ್ತು]," ಎಂದು ನಾಲ್ಕು ಗಂಡು ಮತ್ತು ನಾಲ್ಕು ಹೆಣ್ಣು ಮಕ್ಕಳ ತಾಯಿ ಹದಿಯಾ ಹೇಳುತ್ತಾರೆ. ಸಂತಾನೋತ್ಪತ್ತಿ ಕುರಿತು ತಿಳುವಳಿಕೆಯಿಲ್ಲದಿರುವುದು ಮತ್ತು ಅವರ ಕಾಲದಲ್ಲಿ ಎರಡು ಮಗುವಿನ ನಡುವೆ ಇರಬೇಕಾದ ಅಂತರದ ಕುರಿತಾದ ತಿಳುವಳಿಕೆಯಿಲ್ಲದಿರುವುದು ಎರಡೂ ಅವರ ಮಾತುಗಳಲ್ಲಿ ಎದ್ದು ಕಾಣುತ್ತಿತ್ತು.

ನುಹ್‌ನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿನ (ಸಿ.ಎಚ್‌.ಸಿ) ಹಿರಿಯ ವೈದ್ಯಕೀಯ ಅಧಿಕಾರಿ ಗೋವಿಂದ್ ಶರಣ್ ಕೂಡ ಆ ಸಮಯವನ್ನು ನೆನಪಿಸಿಕೊಳ್ಳುತ್ತಾರೆ. ಮೂವತ್ತು ವರ್ಷಗಳ ಹಿಂದೆ, ಅವರು ಸಿಎಚ್‌ಸಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದಾಗ, ಕುಟುಂಬ ಯೋಜನೆಗೆ ಸಂಬಂಧಿಸಿದ ಯಾವುದೇ ವಿಷಯವನ್ನಾದರೂ ಚರ್ಚಿಸಲು ಜನರು ಬಯಸುತ್ತಿರಲಿಲ್ಲ. ಅದರೆ ಈಗ ಮೊದಲಿಗಿಂತ ಪರಿಸ್ಥಿತಿ ಸುಧಾರಿಸಿದೆ. “ಮೊದಲು, ನಾವು ಕುಟುಂಬ ಯೋಜನೆ ಕುರಿತು ಚರ್ಚಿಸಿದರೆ ಕುಟುಂಬಗಳು ಕೋಪಗೊಳ್ಳುತ್ತಿದ್ದವು. ಈಗ ಮಿಯೋ ಸಮುದಾಯದಲ್ಲಿ, ಕಾಪರ್-ಟಿ ಬಳಸುವ ನಿರ್ಧಾರವನ್ನು ಹೆಚ್ಚಾಗಿ ದಂಪತಿಗಳು ತೆಗೆದುಕೊಳ್ಳುತ್ತಾರೆ. ಆದರೆ ಅವರು ಈ ವಿಷಯವನ್ನು ಕುಟುಂಬದ ಹಿರಿಯರಿಂದ ಮರೆಮಾಚಲು ಬಯಸುತ್ತಾರೆ. ಆಗಾಗ್ಗೆ ಮಹಿಳೆಯರು ಇದನ್ನು ತಮ್ಮ ಅತ್ತೆಗೆ ತಿಳಿಸದಂತೆ ನಮ್ಮನ್ನು ಕೋರುತ್ತಾರೆ”, ಎಂದು ಶರಣ್ ಹೇಳುತ್ತಾರೆ.‌

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ - 4 (2015-16)ರ ಪ್ರಕಾರ, ಪ್ರಸ್ತುತ 15-49 ವರ್ಷ ವಯಸ್ಸಿನ ವಿವಾಹಿತ ಮಹಿಳೆಯರಲ್ಲಿ ಕೇವಲ 13.5ರಷ್ಟು ಜನರು ಮಾತ್ರ ನುಹ್ ಜಿಲ್ಲೆಯಲ್ಲಿ (ಗ್ರಾಮೀಣ) ಯಾವುದಾದರೂ ಒಂದು ರೀತಿಯ ಕುಟುಂಬ ಯೋಜನೆ ವಿಧಾನವನ್ನು ಬಳಸುತ್ತಾರೆ. ನುಹ್ ಜಿಲ್ಲೆಯಲ್ಲಿ ಒಟ್ಟು ಫಲವತ್ತತೆ ದರ (ಟಿಎಫ್‌ಆರ್) 4.9 (ಜನಗಣತಿ 2011) ಆಗಿದ್ದು, ಇದು ಹರಿಯಾಣ ರಾಜ್ಯದಲ್ಲಿ 2.1 ರಷ್ಟಿದೆ. ನುಹ್ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ, 15-49 ವರ್ಷ ವಯಸ್ಸಿನ ಮಹಿಳೆಯರಲ್ಲಿ ಕೇವಲ 33.6 ರಷ್ಟು ಮಹಿಳೆಯರು ಮಾತ್ರ ಸಾಕ್ಷರರಾಗಿದ್ದಾರೆ. 20-24 ವರ್ಷ ವಯಸ್ಸಿನ ಮಹಿಳೆಯರಲ್ಲಿ ಸುಮಾರು 40 ಪ್ರತಿಶತದಷ್ಟು ಜನರು 18 ವರ್ಷಕ್ಕಿಂತ ಮೊದಲು ವಿವಾಹವಾದವರು ಮತ್ತು ಕೇವಲ 36.7ರಷ್ಟು ಜನರು ಮಾತ್ರ ಸಾಂಸ್ಥಿಕ ಹೆರಿಗೆಗಳನ್ನು ಮಾಡಿಸಿಕೊಂಡಿದ್ದಾರೆ.

ಕಾಪರ್‌-ಟಿಯಂತಹ ಗರ್ಭಶಾಯದ ಸಾಧನಗಳನ್ನು ನುಹ್ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕೇವಲ 1.2 ಶೇಕಡಾ ಮಹಿಳೆಯರು ಬಳಸುತ್ತಾರೆ. ಇದಕ್ಕಿರುವ ಒಂದು ಕಾರಣವೆಂದರೆ ಕಾಪರ್‌ ಟಿಯನ್ನು ದೇಹದಲ್ಲಿರುವ ಹೊರಗಿನ ವಸ್ತುವನ್ನಾಗಿ ನೋಡಲಾಗುತ್ತದೆ. "ಮತ್ತು ಅಂತಹ ಯಾವುದೇ ವಸ್ತುವನ್ನು ದೇಹದಲ್ಲಿ ಸೇರಿಸುವುದು ಅವರ ಧರ್ಮಕ್ಕೆ ವಿರುದ್ಧವಾಗಿದೆ", ಎಂದು ನುಹ್ ಪಿ.ಎಚ್‌.ಸಿ. ಯ ಸಹಾಯಕ ನರ್ಸ್ ಮಿಡ್‌ವೈಫ್(ಎ.ಎನ್‌.ಎಂ) ಸುನೀತಾ ದೇವಿ ಹೇಳುತ್ತಾರೆ.
Hadiyah (left) at her one-room house: 'We gather all the old women who wish to see a doctor. Then we walk along'. The PHC at Nuh (right), seven kilometres from Biwan
PHOTO • Sanskriti Talwar
Hadiyah (left) at her one-room house: 'We gather all the old women who wish to see a doctor. Then we walk along'. The PHC at Nuh (right), seven kilometres from Biwan
PHOTO • Sanskriti Talwar

ಹದಿಯಾ (ಎಡ) ತನ್ನ ಒಂದು ಕೋಣೆಯ ಮನೆಯಲ್ಲಿ: 'ನಾವು ಆಸ್ಪತ್ರೆಗೆ ಹೋಗಬೇಕಿರುವ ಎಲ್ಲ ಹಿರಿಯ ಮಹಿಳೆಯರನ್ನು ಒಟ್ಟುಗೂಡಿಸಿ ಎಲ್ಲರೂ ಒಂದಾಗಿ ಆಸ್ಪತ್ರೆಗೆ ನಡೆದುಕೊಂಡು ಹೋಗುತ್ತೇವೆ'. (ಬಲ) ಬಿವಾನ್‌ನಿಂದ ಏಳು ಕಿಲೋಮೀಟರ್ ದೂರದಲ್ಲಿರುವ ನುಹ್‌ನ ಪಿ.ಎಚ್‌.ಸಿ

ಹಾಗಿದ್ದರೂ, ಎನ್‌.ಎಫ್‌.ಹೆಚ್‌.ಎಸ್ -4 ಗಮನಿಸಿದಂತೆ 29.4 ಕ್ಕೆ ಶೇಕಡಾ (ಗ್ರಾಮೀಣ) ಮಹಿಳೆಯರು ಗರ್ಭನಿರೋಧಕವನ್ನು ಬಳಸದೆ ಮುಂದಿನ ಮಗುವನ್ನು (ಅಂತರದ ಮೂಲಕ) ಮುಂದೂಡಲು ಅಥವಾ ಜನನವನ್ನು ನಿಲ್ಲಿಸಲು (ಸೀಮಿತಗೊಳಿಸುವುದನ್ನು) ಬಯಸುತ್ತಾರೆ.

"ಸಮಾಜೋ ಆರ್ಥಿಕ ಕಾರಣಗಳಿಂದಾಗಿ, ನುಹ್ ಪ್ರಧಾನವಾಗಿ ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವುದರಿಂದ, ಕುಟುಂಬ ಯೋಜನೆ ವಿಧಾನಗಳತ್ತ ಒಲವು ಯಾವಾಗಲೂ ಕಡಿಮೆಯಾಗಿದೆ. ಈ ಪ್ರದೇಶದಲ್ಲಿ ಅನಿಯಮಿತ ಅಂಶಗಳ ಬೇಡಿಕೆ ಹೆಚ್ಚಿರುವುದಕ್ಕೆ ಸಾಂಸ್ಕೃತಿಕ ಅಂಶಗಳ ಪಾತ್ರವೂ ಇದೆ. ಅವರು ನಮಗೆ ಹೇಳುತ್ತಾರೆ, "ಬಚ್ಚೆ ತೋ ಅಲ್ಲಾ ಕಿ ದೇನ ಹೈ [ಮಕ್ಕಳು ದೇವರ ಉಡುಗೊರೆ] "ಎಂದು ಹರಿಯಾಣದ ಕುಟುಂಬ ಕಲ್ಯಾಣ ವೈದ್ಯಕೀಯ ಅಧಿಕಾರಿ ಡಾ. ರುಚಿ ಹೇಳುತ್ತಾರೆ (ಅವರು ಮೊದಲ ಹೆಸರನ್ನು ಮಾತ್ರ ಬಳಸುತ್ತಾರೆ). "ಹೆಂಡತಿ ಪತಿ ಸಹಕರಿಸಿದರೆ ಮತ್ತು ಅವಳಿಗೆ ಅವುಗಳನ್ನು ತಂದುಕೊಟ್ಟರೆ ನಿಯಮಿತವಾಗಿ ಮಾತ್ರೆ ತೆಗೆದುಕೊಳ್ಳುತ್ತಾಳೆ. ಕಾಪರ್‌ ಟಿಯಿಂದಾಗಿ ಪರಿಸ್ಥಿತಿ ಸುಧಾರಿಸುತ್ತಿದೆ. ಅದಾಗ್ಯೂ, ಚುಚ್ಚುಮದ್ದಿನ ಗರ್ಭನಿರೋಧಕವಾದ ಅಂತರವನ್ನು ಪ್ರಾರಂಭಿಸಿದ ನಂತರ ಪರಿಸ್ಥಿತಿ ಸುಧಾರಿಸುತ್ತಿದೆ. ಈ ನಿರ್ದಿಷ್ಟ ವಿಧಾನದಲ್ಲಿ ಪುರುಷ ಹಸ್ತಕ್ಷೇಪವಿರುವುದಿಲ್ಲ. ಮಹಿಳೆ ಸೌಲಭ್ಯವಿರುವಲ್ಲಿಗೆ ಭೇಟಿ ನೀಡಿ ಈ ಸೌಲಭ್ಯವನ್ನು ಪಡೆಯಬಹುದಾಗಿದೆ.

ಚುಚ್ಚುಮದ್ದಿನ ಗರ್ಭನಿರೋಧಕ ಅಂತರ ಮೂರು ತಿಂಗಳ ರಕ್ಷಣೆಯನ್ನು ಒಂದೇ ಡೋಸ್‌ನೊಂದಿಗೆ ಒದಗಿಸುತ್ತದೆ ಮತ್ತು ಹರಿಯಾಣದಲ್ಲಿ ಇದು ಜನಪ್ರಿಯತೆಯನ್ನು ಗಳಿಸಿದೆ. ಇದು 2017 ರಲ್ಲಿ ಚುಚ್ಚುಮದ್ದಿನ ಗರ್ಭನಿರೋಧಕಗಳನ್ನು ಅಳವಡಿಸಿಕೊಂಡ ಮೊದಲ ರಾಜ್ಯವಾಗಿದೆ. ಅಂದಿನಿಂದ 16,000ಕ್ಕೂ ಹೆಚ್ಚು ಮಹಿಳೆಯರು ಇದನ್ನು ಬಳಸಿದ್ದಾರೆ ಎಂದು ವರದಿಯೊಂದು ಹೇಳಿದೆ. ಇದು 2018-19ರಲ್ಲಿ ಇಲಾಖೆಯು ನಿಗದಿಪಡಿಸಿದ್ದ 18000 ರ ಗುರಿಯ 92.3 ಪ್ರತಿಶತದಷ್ಟು ಆಗಿದೆ.

ಚುಚ್ಚುಮದ್ದಿನ ಗರ್ಭನಿರೋಧಕವು ಧಾರ್ಮಿಕ ನಿಷೇಧದ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ. ಆದರೆ ಇತರ ಅಂಶಗಳು ಕುಟುಂಬ ಯೋಜನೆ ಸೇವೆಗಳ ವಿತರಣೆಯನ್ನು ತಡೆಯುತ್ತದೆ. ವಿಶೇಷವಾಗಿ ಅಲ್ಪಸಂಖ್ಯಾತ ಸಮುದಾಯಗಳಲ್ಲಿ. ಆರೋಗ್ಯ ಸೇವೆ ಒದಗಿಸುವವರ ಅಸಡ್ಡೆಯಿಂದ ಕೂಡಿದ ವರ್ತನೆ ಮತ್ತು ಆರೋಗ್ಯ ಸೌಲಭ್ಯಗಳಿಗಾಗಿ ದೀರ್ಘಕಾಲ ಕಾಯುವ ಸಮಯವೂ ಗರ್ಭನಿರೋಧಕ ಕುರಿತು ಮಹಿಳೆಯರು ಸಕ್ರಿಯವಾಗಿ ಸಲಹೆ ಪಡೆಯುವುದನ್ನು ತಡೆಯುತ್ತದೆ ಎಂದು ಅಧ್ಯಯನಗಳು ಸೂಚಿಸಿವೆ.

ವಿವಿಧ ಸಮುದಾಯಗಳ ಮಹಿಳೆಯರ ಗ್ರಹಿಕೆಗಳ ಆಧಾರದ ಮೇಲೆ ಆರೋಗ್ಯ ಸೌಲಭ್ಯಗಳಲ್ಲಿ ಧರ್ಮಾಧಾರಿತ ತಾರತಮ್ಯದ ಕುರಿತು ಅಧ್ಯಯನ ನಡೆಸುವ ಸಿ.ಇ.ಎಚ್‌.ಎಟಿ (ಮುಂಬೈ ಮೂಲದ ಸೆಂಟರ್‌ ಫಾರ್‌ ಎನ್ಕ್ವೈರಿ ಇನ್‌ಟು ಹೆಲ್ತ್‌ ಎಂಡ್‌ ಅಲೈಡ್‌ ಥೀಮ್ಸ್) ನಡೆಸಿದ 2013ರ ಅಧ್ಯಯನದಲ್ಲಿ; ವರ್ಗದ ಆಧಾರದ ಮೇಲೆ ಎಲ್ಲಾ ಮಹಿಳೆಯರ ಮೇಲೂ ತಾರತಮ್ಯ ಎಸಗಲಾಗುತ್ತಿದೆ ಎಂದು ಕಂಡುಬಂದಿದೆ; ಮುಸ್ಲಿಂ ಮಹಿಳೆಯರಲ್ಲಿ ಹೆಚ್ಚಾಗಿ ಕುಟುಂಬ ಯೋಜನೆ ಆಯ್ಕೆಗಳ ವಿಷಯದಲ್ಲಿ, ಹೆರಿಗೆ ಕೋಣೆಗಳಲ್ಲಿ ತಮ್ಮ ಸಮುದಾಯಗಳ ಬಗ್ಗೆ ನಕಾರಾತ್ಮಕ ಟೀಕೆಗಳು ಮತ್ತು ವರ್ತನೆಗಳನ್ನು ಎದುರಿಸುತ್ತಾರೆಂದು ಈ ಅಧ್ಯಯನ ಹೇಳಿದೆ.
Biwan village (left) in Nuh district: The total fertility rate (TFR) in Nuh is a high 4.9. Most of the men in the village worked in the mines in the nearby Aravalli ranges (right)
PHOTO • Sanskriti Talwar
Biwan village (left) in Nuh district: The total fertility rate (TFR) in Nuh is a high 4.9. Most of the men in the village worked in the mines in the nearby Aravalli ranges (right)
PHOTO • Sanskriti Talwar

ನುಹ್ ಜಿಲ್ಲೆಯ ಬಿವಾನ್ ಗ್ರಾಮ (ಎಡ): ನುಹ್‌ನಲ್ಲಿ ಒಟ್ಟು ಫಲವತ್ತತೆ ದರ (ಟಿ.ಎಫ್‌.ಆರ್) 4.9ರಷ್ಟಿದೆ. ಬಿವಾನ್‌ನ ಹೆಚ್ಚಿನ ಗಂಡಸರು ಹತ್ತಿರದ ಅರಾವಳಿ ಶ್ರೇಣಿಗಳಲ್ಲಿನ ಗಣಿಗಳಲ್ಲಿ ಕೆಲಸ ಮಾಡುತ್ತಿದ್ದರು (ಬಲ)

ʼಸಿ.ಇ.ಎಚ್‌.ಎಟಿʼಯ ಸಂಯೋಜಕರಾದ ಸಂಗೀತಾ ರೀಜ್ ಹೇಳುತ್ತಾರೆ, "ಸರಕಾರದ ಕಾರ್ಯಕ್ರಮಗಳು ಲಭ್ಯ ಗರ್ಭನಿರೋಧಕಗಳ ಆಯ್ಕೆಪಟ್ಟಿಯ ಕುರಿತು ಹೆಮ್ಮೆಯಿಂದ ಹೇಳಿಕೊಳ್ಳುತ್ತವೆಯಾದರೂ: ಆರೋಗ್ಯ ಸೇವೆಗಳ ಪೂರೈಕೆದಾರರು ಎಲ್ಲಾ ಮಹಿಳೆಯರಿಗೂ ಒಂದೇ ರೀತಿಯ ಗರ್ಭನಿರೋಧಕದ ತೀರ್ಮಾನ ತೆಗೆದುಕೊಳ್ಳುತ್ತಾರೆ. ಆದರೆ ಮುಸ್ಲಿಂ ಸಮುದಾಯದ ಮಹಿಳೆಯರು ಎದುರಿಸುವ ಧಾರ್ಮಿಕ ತೊಡಕುಗಳನ್ನು ಗಣನೆಗೆ ತೆಗೆದುಕೊಂಡು ಅವರೊಂದಿಗೆ ಚರ್ಚಿಸಿ ಅವರಿಗೆ ಸೂಕ್ತವಾದ ಗರ್ಭನಿರೋಧಕ ಆಯ್ಕೆಗಳನ್ನು ಚರ್ಚಿಸಲು ಅವಕಾಶ ಮಾಡಿಕೊಡಬೇಕು."

ನುಹ್‌ನಲ್ಲಿ, ಕುಟುಂಬ ಯೋಜನೆಯಡಿ ಪೂರೈಸಲಾಗದ ಬೇಡಿಕೆ ಹೆಚ್ಚಿದ್ದರೂ, ಗ್ರಾಮೀಣ ಪ್ರದೇಶದಲ್ಲಿ ಗರ್ಭನಿರೋಧಕಗಳನ್ನು ಎಂದಿಗೂ ಬಳಸದ ಮಹಿಳೆಯರಲ್ಲಿ ಕೇವಲ 7.3 ರಷ್ಟು ಮಹಿಳೆಯರು ಮಾತ್ರ ಆರೋಗ್ಯ ಕಾರ್ಯಕರ್ತರನ್ನು ಕುಟುಂಬ ಯೋಜನೆ ಕುರಿತು ಚರ್ಚಿಸಲು ಸಂಪರ್ಕಿಸಿದ್ದಾರೆ ಎಂದು ಎನ್‌.ಎಫ್‌.ಎಚ್‌.ಎಸ್ -4 (2015-16) ಗಮನ ಸೆಳೆದಿದೆ.

ಕಳೆದ 10 ವರ್ಷಗಳಿಂದ ಬಿವಾನ್‌ನಲ್ಲಿ ಕೆಲಸ ಮಾಡುತ್ತಿರುವ 28 ವರ್ಷದ ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತೆ (ಆಶಾ) ಸುಮನ್, ಕುಟುಂಬ ಯೋಜನೆ ಕುರಿತು ಯೋಚಿಸಲು ಮತ್ತು ತಮ್ಮ ನಿರ್ಧಾರವನ್ನು ತಿಳಿಸಲು ತಾನು ಮುಕ್ತವಾದ ಅವಕಾಶವನ್ನು ನೀಡುತ್ತೇನೆ ಎನ್ನುತ್ತಾರೆ. ಇಲ್ಲಿ ಸರಿಯಾದ ಮೂಲಸೌಕರ್ಯಗಳ ಕೊರತೆ ಅರೋಗ್ಯ ಸೇವೆಗಳ ಲಭ್ಯತೆಗೆ ದೊಡ್ಡ ತಡೆಗೋಡೆಯಾಗಿದೆಯೆಂದು ಸುಮನ್‌ ಹೇಳುತ್ತಾರೆ. ಇದು ಎಲ್ಲ ಮಹಿಳೆಯರ ಮೇಲೆ, ಅದರಲ್ಲೂ ವಯಸ್ಸಾದ ಮಹಿಳೆಯರ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ.

"ನುಹ್‌ನಲ್ಲಿರುವ ಪಿ.ಎಚ್‌.ಸಿ.ಯನ್ನು ತಲುಪಲು ನಾವು ರಿಕ್ಷಾ ಹಿಡಿಯಲು ಗಂಟೆಗಟ್ಟಲೆ ಕಾಯಬೇಕಾಗಿದೆ. ಯಾವುದೇ ಆರೋಗ್ಯ ಸಂಬಂಧಿ ವಿಷಯಗಳಿಗಾಗಿ ಆಸ್ಪತ್ರೆಗೆ ಬರಲು ಹೇಳುವುದು ಕಷ್ಟವಾಗುತ್ತದೆ. ಅದರಲ್ಲೂ ಫ್ಯಾಮಿಲಿ ಪ್ಲಾನಿಂಗ್‌ನಂತಹ ವಿಷಯಗಳಿಗೆ ಇನ್ನೂ ಕಷ್ಟ. ಅವರಿಗೆ ಅಷ್ಟು ದೂರ ನಡೆಯುವುದು ಬಹಳ ತ್ರಾಸದಾಯಕವಾಗಿ ಕಾಣುತ್ತದೆ. ಈ ವಿಷಯದಲ್ಲಿ ನಾನು ಅಸಹಾಯಕಳು", ಎಂದು ಸುಮನ್ ಹೇಳುತ್ತಾರೆ.

ಹಲವು ದಶಕಗಳಿಂದ ಇಲ್ಲಿ ಎಲ್ಲವೂ ಹಾಗೇ ಇದೆ. ತಾನು ಇಲ್ಲಿ ಬಂದು ನಲವತ್ತು ವರ್ಷಗಳಾಗಿದ್ದರೂ ಇಲ್ಲಿನ ಪರಿಸ್ಥಿತಿಯಲ್ಲಿ ಹೆಚ್ಚೇನೂ ಬದಲಾಗಿಲ್ಲ ಎಂದು ಬಹಾರ್ ಹೇಳುತ್ತಾರೆ. ಆಕೆಯ ಏಳು ಮಕ್ಕಳು ಅಕಾಲಿಕ ಜನನಗಳಿಂದ ಸಾವನ್ನಪ್ಪಿದರು. ನಂತರ ಹುಟ್ಟಿದ ಆರು ಮಂದಿ ಬದುಕುಳಿದರು. "ಆ ಸಮಯದಲ್ಲಿ ಇಲ್ಲಿ ಯಾವುದೇ ಆಸ್ಪತ್ರೆಗಳು ಇರಲಿಲ್ಲ ಮತ್ತು ನಾವು ಈಗಲೂ ನಮ್ಮ ಹಳ್ಳಿಯಲ್ಲಿ ಆರೋಗ್ಯ ಕೇಂದ್ರವನ್ನು ಹೊಂದಿಲ್ಲ", ಎಂದು ಅವರು ಹೇಳುತ್ತಾರೆ.

ಕವರ್ ಇಲ್ಲಸ್ಟ್ರೇಷನ್: ಪ್ರಿಯಾಂಕಾ ಬೋರಾರ್ ಹೊಸ ಮಾಧ್ಯಮ ಕಲಾವಿದೆ. ಹೊಸ ಪ್ರಕಾರದ ಅರ್ಥ ಮತ್ತು ಅಭಿವ್ಯಕ್ತಿಯನ್ನು ಕಂಡುಹಿಡಿಯಲು ತಂತ್ರಜ್ಞಾನವನ್ನು ಪ್ರಯೋಗಿಸುತ್ತಿದ್ದಾರೆ. ಅವರು ಕಲಿಕೆ ಮತ್ತು ಆಟಕ್ಕೆ ಎಕ್ಸ್‌ಪಿರಿಯೆನ್ಸ್ ವಿನ್ಯಾಸ‌ ಮಾಡುತ್ತಾರೆ. ಸಂವಾದಾತ್ಮಕ ಮಾಧ್ಯಮ ಇವರ ಮೆಚ್ಚಿನ ಕ್ಷೇತ್ರ. ಸಾಂಪ್ರದಾಯಿಕ ಪೆನ್ ಮತ್ತು ಕಾಗದ ಇವರಿಗೆ ಹೆಚ್ಚು ಆಪ್ತವಾದ ಕಲಾ ಮಾಧ್ಯಮ.

ಗ್ರಾಮೀಣ ಭಾರತದ ಹದಿಹರೆಯದ ಬಾಲಕಿಯರು ಮತ್ತು ಯುವತಿಯರ ಬಗ್ಗೆ PARI ಮತ್ತು ಕೌಂಟರ್‌ ಮೀಡಿಯಾ ಟ್ರಸ್ಟ್‌ನ ಬೆಂಬಲಿತ ರಾಷ್ಟ್ರವ್ಯಾಪಿ ವರದಿ ಮಾಡುವ ಯೋಜನೆಯು ಮಹತ್ವದ ಆದರೆ ಸಮಾಜದ ಅಂಚಿನಲ್ಲಿರುವ ಗುಂಪುಗಳ ಪರಿಸ್ಥಿತಿಯನ್ನು ಅನ್ವೇಷಿಸಲು, ಸಾಮಾನ್ಯ ಜನರ ಮಾತುಗಳು ಮತ್ತು ಜೀವಂತ ಅನುಭವಗಳ ಮೂಲಕ ತಿಳಿಯುವ ಉದ್ದೇಶವನ್ನು ಹೊಂದಿದೆ. ಇದು ಪಾಪ್ಯುಲೇಷನ್‌ ಆಫ್‌ ಇಂಡಿಯಾದ ಬೆಂಬಲವನ್ನು ಹೊಂದಿದೆ.

ಈ ಲೇಖನವನ್ನು ಮರುಪ್ರಕಟಿಸುವ ಆಸಕ್ತಿಯಿದೆಯೇ? ಇದಕ್ಕಾಗಿ ಈ ಇ-ಮೈಲ್ ವಿಳಾಸವನ್ನು ಸಂಪರ್ಕಿಸಿ: [email protected] ಒಂದು ಪ್ರತಿಯನ್ನು [email protected] . ಈ ವಿಳಾಸಕ್ಕೆ ಕಳಿಸಿ

ಅನುವಾದ: ಶಂಕರ ಎನ್. ಕೆಂಚನೂರು

Anubha Bhonsle is a 2015 PARI fellow, an independent journalist, an ICFJ Knight Fellow, and the author of 'Mother, Where’s My Country?', a book about the troubled history of Manipur and the impact of the Armed Forces Special Powers Act.

Other stories by Anubha Bhonsle
Sanskriti Talwar

Sanskriti Talwar is an independent journalist based in New Delhi, and a PARI MMF Fellow for 2023.

Other stories by Sanskriti Talwar
Illustration : Priyanka Borar

Priyanka Borar is a new media artist experimenting with technology to discover new forms of meaning and expression. She likes to design experiences for learning and play. As much as she enjoys juggling with interactive media she feels at home with the traditional pen and paper.

Other stories by Priyanka Borar
Editor : Hutokshi Doctor
Series Editor : Sharmila Joshi

Sharmila Joshi is former Executive Editor, People's Archive of Rural India, and a writer and occasional teacher.

Other stories by Sharmila Joshi
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru