ಪ್ರತಿದಿನ ಸಂಜೆ 5 ಗಂಟೆ ಸುಮಾರಿಗೆ ಕೆಲಸ ಮುಗಿಸಿ ಮರಳಿದ ನಂತರ, ಡಾ.ಶಬ್ನಮ್ ಯಾಸ್ಮಿನ್ ನೇರವಾಗಿ ತನ್ನ ಹಳದಿ-ಕಂದು ಬಣ್ಣದ ಮನೆಯ ತಾರಸಿಗೆ ಹೋಗುತ್ತಾರೆ. ಅಲ್ಲಿ ತನ್ನ ಕೆಲಸದ ಸ್ಥಳಕ್ಕೆ ಒಯ್ದಿದ್ದ ಪೆನ್ನು, ಡೈರಿ ಒಳಗೊಂಡಂತೆ ಎಲ್ಲವನ್ನೂ ಸ್ಯಾನಿಟೈಝ್‌ ಮಾಡುತ್ತಾರೆ. ಅನಂತರ ಬಟ್ಟೆಗಳನ್ನು ಒಗೆದು ಸ್ನಾನ ಮಾಡಿದ ಮೇಲೆಯೇ (ತಾರಸಿಯಲ್ಲಿ ಇದೆಲ್ಲದಕ್ಕೂ ವ್ಯವಸ್ಥೆಯಿದೆ) ಅವರು ಕೆಳಗೆ ವಾಸಿಸುವ ತನ್ನ ಕುಟುಂಬದೊಡನೆ ಸೇರಿಕೊಳ್ಳುತ್ತಾರೆ. ಕಳೆದ ಒಂದು ವರ್ಷದಿಂದ ಅವರು ಅತ್ಯಂತ ಎಚ್ಚರಿಕೆಯಿಂದ ಈ ದಿನಚರಿಯನ್ನು ಅನುಸರಿಸುತ್ತಿದ್ದಾರೆ.

"ಲಾಕ್‌ಡೌನ್ ಸಮಯದಲ್ಲಿ ಖಾಸಗಿ ಆಸ್ಪತ್ರೆಗಳು ಸೇರಿದಂತೆ ಎಲ್ಲವನ್ನೂ ಮುಚ್ಚಿದಾಗಲೂ, ನಾನು ಪೂರ್ಣ ಸಮಯ ಕೆಲಸ ಮಾಡಿದ್ದೆ. ಕೋವಿಡ್ ಪರೀಕ್ಷೆಯಲ್ಲಿ ಎಂದೂ ನನಗೆ ಪಾಸಿಟಿವ್‌ ಬಂದಿರಲಿಲ್ಲ, ಆದರೆ ನನ್ನ ಕೆಲವು ಸಹೋದ್ಯೋಗಿಗಳು ಸೋಂಕಿಗೆ ಒಳಗಾಗಿದ್ದರು. ಹಾಗೆ ನೋಡಿದರೆ ನಾವು ಆಸ್ಪತ್ರೆಯಲ್ಲಿ ಇಬ್ಬರು ಕೋವಿಡ್-19 ಪಾಸಿಟಿವ್‌ ಹೊಂದಿದ್ದ ಗರ್ಭಿಣಿ ಮಹಿಳೆಯರಿಗೆ ಉತ್ತಮ ಚಿಕಿತ್ಸೆ ನೀಡಿದ್ದೇವೆ." ಎನ್ನುತ್ತಾರೆ ಡಾ. ಯಾಸ್ಮಿನ್, (45). ಅವರು ಈಶಾನ್ಯ ಬಿಹಾರದ ಕಿಶನ್ ಗಂಜ್ ಪಟ್ಟಣದಲ್ಲಿರುವ ತನ್ನ ಮನೆಯಿಂದ ಒಂದು ಕಿಲೋಮೀಟರ್ ದೂರದಲ್ಲಿರುವ ಸದರ್ ಆಸ್ಪತ್ರೆಯಲ್ಲಿ ಸ್ತ್ರೀರೋಗ ತಜ್ಞೆ ಮತ್ತು ಸರ್ಜನ್.

ಶ‌ಬ್ನಮ್‌ ಅವರು ತಾನು ರೋಗವಾಹಕರಾಗದಂತೆ ನೋಡಿಕೊಳ್ಳಬೇಕಾದ ಅವಶ್ಯಕತೆ ಹೆಚ್ಚಿತ್ತು. ಅವರು ತನ್ನನ್ನು ತಾನು ಅಪಾಯಕ್ಕೆ ಒಡ್ಡಿಕೊಂಡೂ ಮನೆಯಲ್ಲಿದ್ದ ಹಿರಿಯರಾದ ತಾಯಿ ಮತ್ತು 18ರಿಂದ 12 ವರ್ಷ ವಯಸ್ಸಿನ ಇಬ್ಬರು ಪುತ್ರರು ಮತ್ತು ಕಿಡ್ನಿ ಸಮಸ್ಯೆಯಿಂದ ಈಗಷ್ಟೇ ಗುಣಮುಖರಾಗುತ್ತಿರುವ ಪತಿ ಇರ್ತಝಾ ಹಸನ್ ಕುರಿತು ಅವರು ತುಸು ಹೆಚ್ಚೇ ಕಾಳಜಿ ತೆಗೆದುಕೊಳ್ಳಬೇಕಿತ್ತು.  "ನನ್ನ ತಾಯಿ ಅಜ್ರಾ ಸುಲ್ತಾನಾರ ಕಾರಣ ನಾನು (ಕಳೆದ ವರ್ಷ) ಕೆಲಸ ಮಾಡಲು ಸಾಧ್ಯವಾಯಿತು. ಅವರು ಎಲ್ಲಾ ಜವಾಬ್ದಾರಿಯನ್ನು ತಾನೇ ವಹಿಸಿಕೊಂಡರು, ಇಲ್ಲದಿದ್ದರೆ ನಾನು ಡಾಕ್ಟರ್, ಗೃಹಿಣಿ, ಶಿಕ್ಷಕಿ, ಟ್ಯೂಟರ್‌ ಈ ಎಲ್ಲಾ ಪಾತ್ರಗಳನ್ನು ಒಟ್ಟಿಗೆ ನಿರ್ವಹಿಸಬೇಕಿತ್ತು" ಯಾಸ್ಮಿನ್ ಹೇಳಿದರು.

ಅವರು 2007ರಲ್ಲಿ ವೈದ್ಯಕೀಯ ಶಿಕ್ಷಣವನ್ನು ಪೂರ್ಣಗೊಳಿಸಿದಾಗಿನಿಂದಲೂ ಅವರ ಬದುಕು ಹೀಗೆಯೇ ಸಾಗುತ್ತಿದೆ. "ನಾನು MBBS ಅಂತಿಮ ವರ್ಷದಲ್ಲಿದ್ದಾಗ ಗರ್ಭಿಣಿಯಾಗಿದ್ದೆ. ನನ್ನ ಮದುವೆಯ ನಂತರ ಸುಮಾರು ಆರು ವರ್ಷಗಳವರೆಗೆ, ನಾನು ಎಂದಿಗೂ ನನ್ನ ಕುಟುಂಬದೊಂದಿಗೆ ವಾಸಿಸುತ್ತಿರಲಿಲ್ಲ. ನನ್ನ ಪತಿ ವಕೀಲರಾಗಿ ಕೆಲಸ ಮಾಡುತ್ತಿದ್ದರು, ಅವರು ಪಾಟ್ನಾದಲ್ಲಿ ಅಭ್ಯಾಸ ಮಾಡುತ್ತಿದ್ದರು. ನನ್ನನ್ನು ನಿಯೋಜಿಸಲಾದ ಸ್ಥಳದಲ್ಲಿ ನಾನು ಅಭ್ಯಾಸ ಮಾಡುತ್ತಿದ್ದೆ" ಎಂದು ಯಾಸ್ಮಿನ್ ಹೇಳುತ್ತಾರೆ.

ಸದರ್ ಆಸ್ಪತ್ರೆಗೆ ನಿಯೋಜನೆಗೊಳ್ಳುವ ಮೊದಲು, ಡಾ ಶಬ್ನಮ್ ಅವರನ್ನು 2011ರಲ್ಲಿ ಠಾಕೂರ್‌ಗಂಜ್ ಬ್ಲಾಕ್‌ನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ (ಪಿಎಚ್‌ಸಿ) ನೇಮಿಸಲಾಯಿತು, ಇದು ಅವರ ಮನೆಯಿಂದ 45 ಕಿಮೀ ದೂರದಲ್ಲಿದೆ. 2003ರಲ್ಲಿ ರಾಂಚಿಯ ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆಯಿಂದ ಎಂಬಿಬಿಎಸ್ ಪದವಿ ಮತ್ತು 2007ರಲ್ಲಿ ಪಾಟ್ನಾ ವೈದ್ಯಕೀಯ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದ ನಂತರ ಕೆಲವು ವರ್ಷಗಳ ಕಾಲ ವೈದ್ಯರಾಗಿ ಖಾಸಗಿ ಅಭ್ಯಾಸ ಮಾಡಿದ ನಂತರ ಅವರು ಈ ಸರ್ಕಾರಿ ಕೆಲಸವನ್ನು ಪಡೆದರು. ಠಾಕೂರ್‌ಗಂಜ್ ಪಿಎಚ್‌ಸಿ ತಲುಪಲು, ಅವರು ತನ್ನ ನವಜಾತ ಶಿಶುವನ್ನು ತನ್ನ ತಾಯಿಯೊಂದಿಗೆ ಬಿಟ್ಟು ಸ್ಥಳೀಯ ಬಸ್‌ನಲ್ಲಿ ಪ್ರಯಾಣಿಸಬೇಕಾಯಿತು. ಇದು ಕಠಿಣವಾಗಿತ್ತು ಮತ್ತು ಸಂಕಟ ತರುವಂತಹದ್ದಾಗಿತ್ತು, ಹೀಗಾಗಿ ಒಂಬತ್ತು ತಿಂಗಳ ನಂತರ ಅವರು ತಾಯಿ ಮತ್ತು ಮಕ್ಕಳೊಂದಿಗೆ ಠಾಕೂರ್‌ಗಂಜ್‌ಗೆ ಸ್ಥಳಾಂತರಗೊಂಡರು. ಅವರ ಪತಿ ಇರ್ತಝಾ ಪಾಟ್ನಾದಲ್ಲಿ ವಾಸಿಸುತ್ತಿದ್ದರು ಮತ್ತು ಪ್ರತಿ ತಿಂಗಳು ಅವರಿರುವಲ್ಲಿಗೆ ಬರುತ್ತಿದ್ದರು.

Dr. Shabnam Yasmin and women waiting to see her at Sadar Hospital: 'I worked throughout the pandemic [lockdown], when everything was shut...'
PHOTO • Mobid Hussain
Dr. Shabnam Yasmin and women waiting to see her at Sadar Hospital: 'I worked throughout the pandemic [lockdown], when everything was shut...'
PHOTO • Mobid Hussain

ಡಾ. ಶಬ್ನಮ್ ಯಾಸ್ಮಿನ್ ಮತ್ತು ಸದರ್ ಆಸ್ಪತ್ರೆಯಲ್ಲಿ ಅವರನ್ನು ನೋಡಲು ಕಾಯುತ್ತಿರುವ ಮಹಿಳೆಯರು: 'ನಾನು ಮಹಾಮಾರಿ [ಲಾಕ್‌ಡೌನ್] ಸಮಯದಲ್ಲೂ ಕೆಲಸ ಮಾಡಿದೆ, ಆಗ ಎಲ್ಲವನ್ನೂ ಮುಚ್ಚಲಾಗಿತ್ತು... '

"ನನಗೆ ನನ್ನ ಗಂಡನ ಬೆಂಬಲವಿತ್ತು, ಆದರೆ ದಿನಕ್ಕೆ ಎರಡು ಬಾರಿ ಪ್ರಯಾಣಿಸುವುದು ಭಯಾನಕವಾಗಿತ್ತು, ಮತ್ತು ಆ ಬದುಕು ಕಠಿಣವಾಗಿತ್ತು. ಆ ಬದುಕಿನ ಕೆಟ್ಟ ಭಾಗವೆಂದರೆ ನಾನು ಏನನ್ನೂ ಮಾಡಲು ಸಾಧ್ಯವಾಗಲಿಲ್ಲ. ನಾನು ಶಸ್ತ್ರಚಿಕಿತ್ಸಕಿ. ಆದರೆ ನನಗೆ ಶಸ್ತ್ರಚಿಕಿತ್ಸೆ ಮಾಡಲು ಸಾಧ್ಯವಾಗಲಿಲ್ಲ. ಸಲಕರಣೆಗಳ ವಿಷಯದಲ್ಲಿ, [ಪಿಎಚ್ ಸಿಯಲ್ಲಿ] ಏನೂ ಇರಲಿಲ್ಲ, ಬ್ಲಡ್ ಬ್ಯಾಂಕ್ ಇರಲಿಲ್ಲ, ಅರಿವಳಿಕೆ ತಜ್ಞರು ಇರಲಿಲ್ಲ. ಹೆರಿಗೆಯಲ್ಲಿ ತೊಡಕುಗಳು ಉದ್ಭವಿಸಿದಾಗ, ನಾನು ಶಿಫಾರಸು ಮಾಡುವುದನ್ನು ಹೊರತುಪಡಿಸಿ ಬೇರೇನೂ ಮಾಡಲು ಸಾಧ್ಯವಾಗಲಿಲ್ಲ. ನಾನು ಸಿಸೇರಿಯನ್ ಮಾಡಲು ಸಹ ಸಾಧ್ಯವಾಗಲಿಲ್ಲ. ಯಾವುದೇ ಹಸ್ತಕ್ಷೇಪ ಮಾಡಲು ಸಾಧ್ಯವಿರುತ್ತಿರಲಿಲ್ಲ, ಬಸ್ಸಿನಲ್ಲಿ ಹೋಗಿ (ಹತ್ತಿರದ ಆಸ್ಪತ್ರೆಗೆ) ಎಂದು ಹೇಳುವುದಷ್ಟೇ ನನಗೆ ಮಾಡಲು ಸಾಧ್ಯವಾಗುತ್ತಿದ್ದ ವಿಷಯ" ಎಂದು ಯಾಸ್ಮಿನ್ ಆ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.

ಕಿಶನ್ ಗಂಜ್ ಜಿಲ್ಲೆಯ ಸದರ್ ಆಸ್ಪತ್ರೆಯ ಸಲಹಾ ಕೊಠಡಿಯ ಹೊರಗೆ, ಸುಮಾರು 30 ಮಹಿಳೆಯರು ಅವರನ್ನು ನೋಡಲು ಕಾಯುತ್ತಿದ್ದಾರೆ. ಅವರಲ್ಲಿ ಮಹಿಳಾ ವೈದ್ಯರಿಂದ ಮಾತ್ರ ಪರೀಕ್ಷೆಗೊಳಗಾಗಲು ಮತ್ತು ಮಹಿಳಾ ವೈದರೊಂದಿಗೆ ಮಾತ್ರ ತಮ್ಮ ಸಮಸ್ಯೆ ಹೇಳಿಕೊಳ್ಳಲು ಬಯಸುವವರೇ ಹೆಚ್ಚಿದ್ದರು. ಆಸ್ಪತ್ರೆಯಲ್ಲಿ ಡಾ. ಶಬ್ನಮ್ ಯಾಸ್ಮಿನ್ ಮತ್ತು ಡಾ. ಪೂನಮ್ (ಅವರು ತಮ್ಮ ಮೊದಲ ಹೆಸರನ್ನು ಮಾತ್ರ ಬಳಸುತ್ತಾರೆ), ಇಬ್ಬರೂ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗವನ್ನು ನೋಡಿಕೊಳ್ಳುತ್ತಾರೆ. ಇಬ್ಬರು ವೈದ್ಯರು ಪ್ರತಿದಿನ 40-45 ಪ್ರಕರಣಗಳನ್ನು ನಿರ್ವಹಿಸುತ್ತಾರೆ, ಆದರೂ ಕೆಲವು ಮಹಿಳೆಯರು ಕಿಕ್ಕಿರಿದ ವೇಟಿಂಗ್‌ ರೂಮ್‌ ಕಾರಣದಿಂದಾಗಿ ವೈದ್ಯರನ್ನು ನೋಡದೆ ಮನೆಗೆ ಮರಳುತ್ತಾರೆ.

ಇಬ್ಬರೂ ವೈದ್ಯರಿಗೆ ವಾರಕ್ಕೆ 48 ಗಂಟೆಗಳ ಕೆಲಸದ ಅವಧಿಯನ್ನು ನಿಗದಿಪಡಿಸಲಾಗಿದೆಯಾದರೂ, ಆಗಾಗ್ಗೆ ಅದು ಕೇವಲ ಸಂಖ್ಯೆಯಾಗಿ ಉಳಿಯುತ್ತದೆ. "ಶಸ್ತ್ರಚಿಕಿತ್ಸಕರ ಕೊರತೆಯಿದೆ, ಆದ್ದರಿಂದ ನಾವು ಕಾರ್ಯನಿರ್ವಹಿಸುತ್ತಿರುವ ದಿನಗಳಲ್ಲಿ, ಕೆಲಸದ ಅವಧಿಯನ್ನು ಮೀರಿ ದುಡಿಯಬೇಕಾಗುತ್ತದೆ. ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳು ಇದ್ದರೆ, ನಾನು ನ್ಯಾಯಾಲಯಕ್ಕೆ ಹೋಗಬೇಕು. ಇಡೀ ದಿನ ಅದರಲ್ಲಿಯೇ ಹೋಗಿಬಿಡುತ್ತದೆ. ಫೈಲ್ ಮಾಡಲು ಹಳೆಯ ವರದಿಗಳಿರುತ್ತವೆ ಮತ್ತು ಶಸ್ತ್ರಚಿಕಿತ್ಸಕರಾಗಿರುವುದರಿಂದ ನಾವು ಯಾವಾಗಲೂ ಕರೆಗಳಿಗೆ ಲಭ್ಯರಿರುತ್ತೇವೆ" ಎಂದು ಯಾಸ್ಮಿನ್ ಹೇಳುತ್ತಾರೆ. ಅದರ ಏಳು ಪಿಎಚ್ ಸಿಗಳು, ಒಂದು ರೆಫರಲ್ ಕೇಂದ್ರ ಮತ್ತು ಸದರ್ ಆಸ್ಪತ್ರೆಯ ನಡುವೆ ನಾನು ಮಾತನಾಡಿದ ವೈದ್ಯರನ್ನು ಅಂದಾಜಿಸಿ, ಕಿಶನ್ ಗಂಜ್ ಜಿಲ್ಲೆಯಲ್ಲಿ ಸುಮಾರು 6-7 ಮಹಿಳಾ ವೈದ್ಯರಿದ್ದಾರೆ. ಅವರಲ್ಲಿ ಸುಮಾರು ಅರ್ಧದಷ್ಟು ಜನರು (ಯಾಸ್ಮಿನ್ ಅಲ್ಲದಿದ್ದರೂ) ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಾರೆ.

ಅವರ ರೋಗಿಗಳಲ್ಲಿ ಹೆಚ್ಚಿನವರು ಕಿಶನ್ ಗಂಜ್ ಪ್ರದೇಶದವರು, ಕೆಲವರು ನೆರೆಯ ಅರಾರಿಯಾ ಜಿಲ್ಲೆ, ಮತ್ತು ಕೆಲವರು ಪಶ್ಚಿಮ ಬಂಗಾಳದಿಂದಲೂ ಬರುತ್ತಾರೆ. ಮುಖ್ಯವಾಗಿ ಗರ್ಭಧಾರಣೆ ಸಂಬಂಧಿತ ತಪಾಸಣೆ ಮತ್ತು ಪ್ರಸವಪೂರ್ವ ಆರೈಕೆಗಾಗಿ ಬರುತ್ತಾರೆ, ಹಾಗೆಯೇ ಕಿಬ್ಬೊಟ್ಟೆ ನೋವು, ಪೆಲ್ವಿಕ್ ಸೋಂಕು, ಮುಟ್ಟಿನ ನೋವು ಮತ್ತು ಬಂಜೆತನದ ದೂರುಗಳೊಂದಿಗೆ‌ ಇಲ್ಲಿಗೆ ಬರುತ್ತಾರೆ. “ಮಹಿಳೆಯರು, ಅವರು ಯಾವುದೇ ಸಂದರ್ಭದಲ್ಲಿ ಇಲ್ಲಿಗೆ ಬಂದರೂ ಅವರಲ್ಲಿ ಹೆಚ್ಚಿನವರಿಗೆ ರಕ್ತಹೀನತೆಯಿರುತ್ತದೆ. ಕಬ್ಬಿಣಾಂಶದ ಮಾತ್ರೆಗಳು [ಪಿಎಚ್‌ಸಿ ಮತ್ತು ಆಸ್ಪತ್ರೆಗಳಲ್ಲಿ] ಉಚಿತವಾಗಿ ಲಭ್ಯವಿವೆ, ಆದರೂ ಅವರ ಆರೋಗ್ಯದ ಬಗ್ಗೆ ಅರಿವು ಮತ್ತು ಗಮನದ ಕೊರತೆಯಿದೆ" ಎಂದು ಯಾಸ್ಮಿನ್ ಹೇಳುತ್ತಾರೆ.

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NFHS-4, 2015-16) ಪ್ರಸ್ತುತಪಡಿಸಿದ ದತ್ತಾಂಶವು ಡಾ ಯಾಸ್ಮಿನ್ ಅವರ ಹೇಳಿಕೆಯನ್ನು ಬೆಂಬಲಿಸುತ್ತದೆ: ಕಿಶನ್‌ಗಂಜ್ ಜಿಲ್ಲೆಯಲ್ಲಿ, 15-49 ವರ್ಷ ವಯಸ್ಸಿನ 67.6 ಪ್ರತಿಶತ ಮಹಿಳೆಯರು ರಕ್ತಹೀನತೆ ಹೊಂದಿದ್ದಾರೆ. 15-49 ವಯಸ್ಸಿನ ಗರ್ಭಿಣಿ ಮಹಿಳೆಯರಲ್ಲಿ, ಈ ಅಂಕಿ ಸ್ವಲ್ಪ ಕಡಿಮೆಯಾಗಿದೆ, ಅಂದರೆ 62 ಪ್ರತಿಶತ. ಮತ್ತು ಕೇವಲ 15.4 ಪ್ರತಿಶತ ಮಹಿಳೆಯರು ಐರನ್‌ ಫೋಲಿಕ್‌ ಆಸಿಡ್‌ ಮಾತ್ರೆಯನ್ನು 100 ದಿನ ಅಥವಾ ಅದಕ್ಕಿಂತ ಹೆಚ್ಚು ಕಾಲ ಗರ್ಭಿಣಿಯಾಗಿದ್ದಾಗ ಸೇವಿಸಿದ್ದಾರೆ.

Only 33.6 per cent of childbirths in Kishanganj district are institutional deliveries. A big reason for this, says Dr. Asiyaan Noori (left), posted at the Belwa PHC (right), is because most of the men live in the cities for work
PHOTO • Mobid Hussain
Only 33.6 per cent of childbirths in Kishanganj district are institutional deliveries. A big reason for this, says Dr. Asiyaan Noori (left), posted at the Belwa PHC (right), is because most of the men live in the cities for work
PHOTO • Mobid Hussain

ಕಿಶನ್ ಗಂಜ್ ಜಿಲ್ಲೆಯಲ್ಲಿ ಕೇವಲ 33.6 ಪ್ರತಿಶತದಷ್ಟು ಜನನಗಳು ಮಾತ್ರವೇ ಸಾಂಸ್ಥಿಕ ಹೆರಿಗೆಯ ಮೂಲಕ ಆಗಿವೆ. ಇದಕ್ಕೆ ಪ್ರಮುಖ ಕಾರಣವೆಂದರೆ ಹೆಚ್ಚಿನ ಪುರುಷರು ಕೆಲಸಕ್ಕಾಗಿ ನಗರಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಡಾ. ಆಸಿಯಾನ್ ನೂರಿ‌ ಹೇಳುತ್ತಾರೆ (ಎಡ). ಇವರು ಬೆಳ್ವಾ ಪಿಎಚ್‌ಸಿಯಲ್ಲಿ (ಬಲ) ಅಭ್ಯಾಸ ಮಾಡುತ್ತಾರೆ

"ಮಹಿಳೆಯರಿಗೆ ಆರೋಗ್ಯವು ಎಂದೂ ಆದ್ಯತೆಯಾಗಿರುವುದಿಲ್ಲ. ಅವರು ಆರೋಗ್ಯಕರವಾಗಿ ತಿನ್ನುವುದಿಲ್ಲ, ಬೇಗನೆ ಮದುವೆಯಾಗುತ್ತಾರೆ ಮತ್ತು ಮೊದಲ ಮಗುವಿಗೆ ಒಂದು ವರ್ಷ ತುಂಬುವ ಮೊದಲೇ, ಮತ್ತೆ ಗರ್ಭಧರಿಸುತ್ತಾರೆ. ಎರಡನೇ ಮಗುವಿನ ಹೊತ್ತಿಗೆ, ತಾಯಿ ತುಂಬಾ ದುರ್ಬಲಳಾಗಿರುತ್ತಾಳೆ, ಅವಳಿಗೆ ನಡೆಯಲು ಕೂಡಾ ಸಾಧ್ಯವಿರುವುದಿಲ್ಲ. ಒಂದು ವಿಷಯವು ಇನ್ನೊಂದನ್ನು ಅನುಸರಿಸುತ್ತದೆ, ಮತ್ತು ಇದರಿಂದಾಗಿಯೇ ಅವರೆಲ್ಲರೂ ರಕ್ತಹೀನತೆಯಿಂದ ಬಳಲುತ್ತಿರುತ್ತಾರೆ" ಎಂದು ಸದರ್ ಆಸ್ಪತ್ರೆಯಿಂದ ಸುಮಾರು 10 ಕಿಲೋಮೀಟರ್ ದೂರದಲ್ಲಿರುವ ಅದೇ ಬ್ಲಾಕಿನ ಬೆಲ್ವಾ ಪಿಎಚ್‌ಸಿಯಲ್ಲಿ ನಿಯೋಜನೆ ಮಾಡಲಾದ 38 ವರ್ಷದ ಡಾ. ಆಸಿಯಾನ್ ನೂರಿ ಹೇಳುತ್ತಾರೆ. ಮತ್ತು ಕೆಲವೊಮ್ಮೆ, ತಾಯಿಯನ್ನು ಎರಡನೇ ಮಗುವಿನ ಹೆರಿಗೆಗಾಗಿ ಕರೆತರುವ ಹೊತ್ತಿಗೆ, ಅವಳನ್ನು ಉಳಿಸಲು ಹೊತ್ತು ಮೀರಿರುತ್ತದೆ.

"ಈಗಾಗಲೇ ಮಹಿಳಾ ವೈದ್ಯರ ಕೊರತೆಯಿದೆ. ನಾವು ರೋಗಿಗಳನ್ನು ಅಟೆಂಡ್‌ ಮಾಡಲು ಸಾಧ್ಯವಾಗದಿದ್ದರೆ, ಅಥವಾ ರೋಗಿಯು ಸತ್ತರೆ, ದೊಡ್ಡ ಗದ್ದಲವೇರ್ಪಡುತ್ತದೆ." ಎಂದು ಯಾಸ್ಮಿನ್ ಹೇಳುತ್ತಾರೆ, ಇಂತಹ ಸಂದರ್ಭಗಳಲ್ಲಿ ಕುಟುಂಬ ಸದಸ್ಯರು ಮಾತ್ರವಲ್ಲದೆ ಈ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ 'ಕ್ವಾಕ್ಸ್' ಅಥವಾ ಅನರ್ಹ ವೈದ್ಯರ ಸಿಂಡಿಕೇಟ್ ಕೂಡ ಅವರನ್ನು ಬೆದರಿಸುತ್ತದೆ. "ಆಪ್ನೆ ಇನ್ಹೆ ಚೂಹಾ ತೋ ದೇಖೋ ಕ್ಯಾ ಹುವಾ (ನೀವು ರೋಗಿಯನ್ನು ಮುಟ್ಟಿದ್ದಷ್ಟೇ  ಏನಾಯಿತು ನೋಡಿ)" ಎಂದು ಕುಟುಂಬದ ಸದಸ್ಯರೊಬ್ಬರು ಹೆರಿಗೆಯ ಸಮಯದಲ್ಲಿ ತಾಯಿ ಸತ್ತ ನಂತರ ಯಾಸ್ಮಿನ್‌ ಅವರ ಮೇಲೆ ಆರೋಪ ಹೊರಿಸಿದ್ದರು.

ಕಿಶನ್ ಗಂಜ್ ಜಿಲ್ಲೆಯಲ್ಲಿ ಕೇವಲ ಶೇಕಡಾ 33.6 ರಷ್ಟು ಹೆರಿಗೆಗಳು ಮಾತ್ರ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಸಾಂಸ್ಥಿಕ ಹೆರಿಗೆಗಳಾಗಿವೆ ಎಂದು ಎನ್ ಎಫ್ ಎಚ್ ಎಸ್-4 ತಿಳಿಸುತ್ತದೆ. ಇದಕ್ಕೆ ಒಂದು ದೊಡ್ಡ ಕಾರಣವೆಂದರೆ, ಹೆಚ್ಚಿನ ಪುರುಷರು ಕೆಲಸಕ್ಕಾಗಿ ನಗರಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಡಾ. ನೂರಿ ಹೇಳುತ್ತಾರೆ. "ಅಂತಹ ಸಂದರ್ಭಗಳಲ್ಲಿ, ಮಹಿಳೆಗೆ ಹೆರಿಗೆಯ ಸಮಯದಲ್ಲಿ ಪ್ರಯಾಣ ಮಾಡಲು ಸಾಧ್ಯವಿಲ್ಲ, ಆದ್ದರಿಂದ ಶಿಶುಗಳನ್ನು ಮನೆಯಲ್ಲಿಯೇ ಹೆರಲಾಗುತ್ತದೆ." ಅವರು ಮತ್ತು ಇಲ್ಲಿನ ಇತರ ವೈದ್ಯರು ಹೆಚ್ಚಿನ ಹೆರಿಗೆಗಳು ಕಿಶನ್ ಗಂಜ್ ಜಿಲ್ಲೆಯ ಮೂರು ಬ್ಲಾಕ್ಗಳಾದ ಪೋಥಿಯಾ, ದಿಘಾಲ್ ಬ್ಯಾಂಕ್ ಮತ್ತು ತೆರ್ಹಗಚ್ (ಇವೆಲ್ಲವೂ ಪಿಎಚ್‌ಸಿಗಳನ್ನು ಹೊಂದಿವೆ)ಗಳಲ್ಲಿ ಸಂಭವಿಸುತ್ತವೆ ಎಂದು ಅಂದಾಜಿಸುತ್ತಾರೆ. ಈ ಬ್ಲಾಕ್‌ಗಳಿಂದ, ಸದರ್ ಆಸ್ಪತ್ರೆ ಅಥವಾ ಖಾಸಗಿ ಕ್ಲಿನಿಕ್‌ಗಳನ್ನು ತ್ವರಿತವಾಗಿ ತಲುಪಲು ಸಾರಿಗೆಯ ಕೊರತೆ ಮತ್ತು ದಾರಿಯುದ್ದಕ್ಕೂ ಸಿಗುವ ಸಣ್ಣ ತೊರೆಗಳು, ಮಹಿಳೆಯರು ಮತ್ತು ಅವರ ಕುಟುಂಬಗಳು ಆಸ್ಪತ್ರೆ ತಲುಪುವುದನ್ನು ಕಷ್ಟಕರವಾಗಿಸಿವೆ.

2020ರಲ್ಲಿ, ಸಾಂಕ್ರಾಮಿಕ ಸಂಬಂಧಿತ ಲಾಕ್ ಡೌನ್ ಮತ್ತು ಅದರ ನಂತರದ ಸಮಯದಲ್ಲಿ, ಕಿಶನ್ ಗಂಜ್ ಜಿಲ್ಲೆಯಲ್ಲಿ ಸಾಂಸ್ಥಿಕ ಹೆರಿಗೆಗಳು  ಮತ್ತಷ್ಟು ಕಡಿಮೆಯಾದವು. ವಾಹನಗಳ ಚಲನೆಯ ಮೇಲಿನ ನಿರ್ಬಂಧಗಳು ಮತ್ತು ಆಸ್ಪತ್ರೆಗಳಲ್ಲಿ ವೈರಸ್ ಸೋಂಕಿಗೆ ಒಳಗಾಗುವ ಭಯದಿಂದಾಗಿ ಮಹಿಳೆಯರು ದೂರಉಳಿದರು.

Dr. Mantasa at the Chattar Gachh referral centre in Kishanganj's Pothia block:. 'A big part of my day goes in talking to women about family planning...'
PHOTO • Mobid Hussain

ಕಿಶನ್ ಗಂಜ್‌ನ ಪೋಥಿಯಾ ಬ್ಲಾಕ್‌ನಲ್ಲಿರುವ ಚಟ್ಟರ್ ಗಚ್ ರೆಫರಲ್ ಸೆಂಟರ್‌ನಲ್ಲಿ ಡಾ. ಮಂತಸಾ:. 'ನನ್ನ ದಿನದ ಒಂದು ದೊಡ್ಡ ಭಾಗವು ಕುಟುಂಬ ಯೋಜನೆಯ ಬಗ್ಗೆ ಮಹಿಳೆಯರೊಂದಿಗೆ ಮಾತನಾಡಲು ಖರ್ಚಾಗುತ್ತದೆ... '

'ಗರ್ಭನಿರೋಧಕದ ಬಗ್ಗೆ ತಾಯಿ ತಂದೆಯರಿಗೆ ವಿವರಿಸುವಾಗ ವಯಸ್ಸಾದ ಮಹಿಳೆಯರು (ಕುಟುಂಬದಲ್ಲಿನ) ಅದನ್ನು ಇಷ್ಟಪಡುವುದಿಲ್ಲ. ನನ್ನ ಮೇಲೆ ಕೂಗಾಡುತ್ತಾರೆ, ಮತ್ತು ನಾನು ಮಾತನಾಡಲು ಪ್ರಾರಂಭಿಸಿದಾಗ ತಾಯಿ ಅಥವಾ ದಂಪತಿಗಳಿಬ್ಬರಿಗೂ ಹೊರಹೋಗುವಂತೆ ಹೇಳುತ್ತಾರೆ. ಇದನ್ನೆಲ್ಲ ಕೇಳುವುದು ಹಿತ ಕೊಡುವುದಿಲ್ಲ...'

"ಆದರೆ ಈಗ ಪರಿಸ್ಥಿತಿ ಸುಧಾರಿಸಿದೆ" ಎಂದು ಕಿಶನ್ ಗಂಜ್ ಜಿಲ್ಲಾ ಕೇಂದ್ರದಿಂದ 38 ಕಿಲೋಮೀಟರ್ ದೂರದಲ್ಲಿರುವ ಪೋಥಿಯಾ ಬ್ಲಾಕ್ ಛತರ್ ಗಚ್ ರೆಫರಲ್ ಸೆಂಟರ್/ಹೆರಿಗೆ ಮತ್ತು ಮಕ್ಕಳ ಕಲ್ಯಾಣ ಕೇಂದ್ರದಲ್ಲಿ ನಿಯೋಜಿತರಾಗಿರುವ 36 ವರ್ಷದ ಡಾ. ಮಾಂತಸಾ ಹೇಳುತ್ತಾರೆ. ಡಾ. ಯಾಸ್ಮಿನ್ ತನ್ನ ವೃತ್ತಿಜೀವನದ ಆರಂಭಿಕ ವರ್ಷಗಳಲ್ಲಿ ಎದುರಿಸಿದಂತಹ ಸವಾಲುಗಳನ್ನು ಅವರೂ ಎದುರಿಸುತ್ತಿದ್ದಾರೆ. ಅವುಗಳೆಂದರೆ ತನ್ನ ಕುಟುಂಬದಿಂದ ದೂರವಿರುವುದು ಮತ್ತು ಕಠಿಣ ಪ್ರಯಾಣಗಳು. ಅವರೆ ಪತಿ ಭಾಗಲ್ಪುರದಲ್ಲಿ ವಾಸಿಸುತ್ತಾರೆ ಮತ್ತು ಅಲ್ಲಿಯೇ ಕೆಲಸ ಮಾಡುತ್ತಾರೆ, ಮತ್ತು ಅವರ ಏಕೈಕ ಮಗ ಕಟಿಹಾರ್ ಜಿಲ್ಲೆಯಲ್ಲಿ ತನ್ನ ತಾಯಿಯ ಅಪ್ಪ-ಅಮ್ಮನೊಡನೆ ಇರುತ್ತಾನೆ.

"ನನ್ನ ದಿನದ ಒಂದು ದೊಡ್ಡ ಭಾಗವು ಕುಟುಂಬ ಯೋಜನೆ, ಗರ್ಭನಿರೋಧಕ ವಿಧಾನಗಳು, ಮಕ್ಕಳ ನಡುವಿನ ಅಂತರ ಮತ್ತು ಆಹಾರದ ಕುರಿತು ಮಹಿಳೆಯರೊಂದಿಗೆ ಮಾತನಾಡಲು ಬೇಕಾಗುತ್ತದೆ" ಎಂದು ಡಾ. ಮಂತಸಾ (ಅವರು ತಮ್ಮ ಉಪನಾಮವನ್ನು ಮಾತ್ರ ಬಳಸುತ್ತಾರೆ) ಮುಂದುವರೆದು ಹೇಳುತ್ತಾರೆ. ಗರ್ಭನಿರೋಧಕ ಕುರಿತ ಸಂಭಾಷಣೆಯನ್ನು ಪ್ರಾರಂಭಿಸುವುದು ಒಂದು ಪ್ರಯಾಸದ ಕೆಲಸವಾಗಿದೆ - ಕಿಶನ್ ಗಂಜ್‌ನಲ್ಲಿ ಪ್ರಸ್ತುತ ವಿವಾಹಿತ ಮಹಿಳೆಯರಲ್ಲಿ ಕೇವಲ ಶೇಕಡಾ 12.2ರಷ್ಟು ಮಹಿಳೆಯರು ಕುಟುಂಬ ಯೋಜನೆಯ ಯಾವುದಾರೂ ಒಂದು ವಿಧಾನವನ್ನು ಬಳಸುತ್ತಿದ್ದಾರೆ ಮತ್ತು ಕೇವಲ ಶೇಕಡಾ 1.6 ಪ್ರಕರಣಗಳಲ್ಲಿ ಆರೋಗ್ಯ ಕಾರ್ಯಕರ್ತೆಯು ಕುಟುಂಬ ಯೋಜನೆಯ ಬಗ್ಗೆ ಮಹಿಳಾ ಬಳಕೆದಾರರಲ್ಲದವರೊಂದಿಗೆ ಮಾತನಾಡಿದ್ದಾರೆ ಎಂದು ಎನ್ ಎಫ್ ಎಚ್ ಎಸ್-4 ತಿಳಿಸುತ್ತದೆ.

"ಗರ್ಭನಿರೋಧಕದ ಕುರಿತಾಗಿ ತಂದೆ-ತಾಯಿಯರಿಗೆ ವಿವರಿಸುವಾಗ ವಯಸ್ಸಾದ ಮಹಿಳೆಯರು (ಕುಟುಂಬದಲ್ಲಿನ) ಅದನ್ನು ಇಷ್ಟಪಡುವುದಿಲ್ಲ. ನನ್ನ ಮೇಲೆ ಕೂಗಾಡುತ್ತಾರೆ, ಮತ್ತು ನಾನು ಮಾತನಾಡಲು ಪ್ರಾರಂಭಿಸಿದಾಗ ತಾಯಿ ಅಥವಾ ದಂಪತಿಗಳನ್ನು [ಅವರೊಂದಿಗೆ ಕ್ಲಿನಿಕ್ ಗೆ ಅವರೊಂದಿಗೆ ಬರುವ ಹಿರಿಯ ಮಹಿಳೆಯರು] ಹೊರಹೋಗುವಂತೆ ಹೇಳುತ್ತಾರೆ. ಕೆಲವೊಮ್ಮೆ, ಹಳ್ಳಿಗಳಲ್ಲಿ, ನನ್ನನ್ನು ಹೊರಹೋಗುವಂತೆ ಹೇಳಿದ್ದರು. ಇದನ್ನು ಕೇಳಲು ಹಿತವೆನ್ನಿಸುವುದಿಲ್ಲ, ಆದರೆ ನಾವು ಮಾಡಬೇಕಿರುವುದನ್ನು ಮಾಡಬೇಕಿದೆ" ಎಂದು ಡಾ. ಯಾಸ್ಮಿನ್ ಅವರಂತೆ ತಮ್ಮ ಕುಟುಂಬದಲ್ಲಿ ಮೊದಲ ವೈದ್ಯರಾಗಿರುವ ಡಾ. ಮಂತಸಾ ಹೇಳುತ್ತಾರೆ.

"ನನ್ನ ತಂದೆ ದಿವಂಗತ ಸೈಯದ್ ಕುತುಬ್ದಿನ್ ಅಹ್ಮದ್ ಅವರು ಮುಜಾಫರ್ ಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಅರೆವೈದ್ಯಕೀಯ ಸಿಬ್ಬಂದಿಯಾಗಿದ್ದರು. ಆಸ್ಪತ್ರೆಗಳಲ್ಲಿ ಮಹಿಳಾ ವೈದ್ಯರು ಇರಬೇಕು, ಆಗ ಮಹಿಳೆಯರು ಆಸ್ಪತ್ರೆಗೆ ಬರುತ್ತಾರೆ ಎಂದು ಅವರು ಹೇಳುತ್ತಿದ್ದರು. ಡಾ. ಯಾಸ್ಮಿನ್ ಹೇಳುತ್ತಾರೆ, "ಅಂತಹ ವೈದ್ಯರಲ್ಲಿ ನಾನೂ ಒಬ್ಬಳಾದೆ, ಮತ್ತು ನಮಗೆ ಇಲ್ಲಿ ಇನ್ನೂ ಅನೇಕರ ಅಗತ್ಯವಿದೆ."

ಗ್ರಾಮೀಣ ಭಾರತದ ಹದಿಹರೆಯದ ಬಾಲಕಿಯರು ಮತ್ತು ಯುವತಿಯರ ಬಗ್ಗೆ PARI ಮತ್ತು ಕೌಂಟರ್ ಮೀಡಿಯಾ ಟ್ರಸ್ಟ್ ಬೆಂಬಲಿತ ರಾಷ್ಟ್ರವ್ಯಾಪಿ ವರದಿ ಮಾಡುವ ಯೋಜನೆಯು ಮಹತ್ವದ ಆದರೆ ಸಮಾಜದ ಅಂಚಿನಲ್ಲಿರುವ ಗುಂಪುಗಳ ಪರಿಸ್ಥಿತಿಯನ್ನು ಅನ್ವೇಷಿಸಲು, ಸಾಮಾನ್ಯ ಜನರ ಮಾತುಗಳು ಮತ್ತು ಜೀವಂತ ಅನುಭವಗಳ ಮೂಲಕ ತಿಳಿಯುವ ಉದ್ದೇಶವನ್ನು ಹೊಂದಿದೆ . ಇದು ಪಾಪ್ಯುಲೇಷನ್ ಆಫ್ ಇಂಡಿಯಾದ ಬೆಂಬಲವನ್ನು ಹೊಂದಿದೆ .

ಲೇಖನವನ್ನು ಮರುಪ್ರಕಟಿಸುವ ಆಸಕ್ತಿಯಿದೆಯೇ ? ಇದಕ್ಕಾಗಿ - ಮೈಲ್ ವಿಳಾಸವನ್ನು ಸಂಪರ್ಕಿಸಿ : [email protected] ಒಂದು ಪ್ರತಿಯನ್ನು [email protected] . ವಿಳಾಸಕ್ಕೆ ಕಳಿಸಿ

ಅನುವಾದ: ಶಂಕರ ಎನ್. ಕೆಂಚನೂರು

Anubha Bhonsle is a 2015 PARI fellow, an independent journalist, an ICFJ Knight Fellow, and the author of 'Mother, Where’s My Country?', a book about the troubled history of Manipur and the impact of the Armed Forces Special Powers Act.

Other stories by Anubha Bhonsle
Illustration : Priyanka Borar

Priyanka Borar is a new media artist experimenting with technology to discover new forms of meaning and expression. She likes to design experiences for learning and play. As much as she enjoys juggling with interactive media she feels at home with the traditional pen and paper.

Other stories by Priyanka Borar
Editor and Series Editor : Sharmila Joshi

Sharmila Joshi is former Executive Editor, People's Archive of Rural India, and a writer and occasional teacher.

Other stories by Sharmila Joshi
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru