“ಈ ಸರ್ಕಾರಕ್ಕೆ ರೈತರ ಬಗ್ಗೆ ಒಂದಿಷ್ಟೂ ಕಾಳಜಿಯಿಲ್ಲ. ಇದು ದೊಡ್ಡ ಕಂಪನಿಗಳ ಪರವಾಗಿದೆ. ಅವರಿಗೆ ʼಎಪಿಎಂಸಿʼಯನ್ನು ಸಹ ನೀಡಲಾಗುತ್ತಿದೆ. ಸರ್ಕಾರ ರೈತರಿಗೆ ಸಹಾಯ ಮಾಡುವ ಬದಲು ಅವರಿಗ್ಯಾಕೆ ಸಹಾಯ ಮಾಡುತ್ತಿದೆ? " ಉತ್ತರ ಕರ್ನಾಟಕದ ಬೆಳಗಾವಿ ಜಿಲ್ಲೆ ಮತ್ತು ತಾಲ್ಲೂಕಿನ ಕೃಷಿ ಕಾರ್ಮಿಕ ಶಾಂತಾ ಕಾಂಬ್ಳೆಯವರ ಪ್ರಶ್ನೆಯಿದು.

ಅವರು ನಗರದ ಕೇಂದ್ರ ಭಾಗವಾದ ಮೆಜೆಸ್ಟಿಕ್‌ನ ಬೆಂಗಳೂರು ಸಿಟಿ ರೈಲ್ವೆ ನಿಲ್ದಾಣದ ಬಳಿ ರಸ್ತೆ ವಿಭಾಜಕದ ಮೇಲೆ ಕುಳಿತು, ತನ್ನ ಸುತ್ತಲೂ ಪ್ರತಿಧ್ವನಿಸುತ್ತಿದ್ದ ʼಕೇಂದ್ರ ಸರಕಾರಕ್ಕೆ ಧಿಕ್ಕಾರʼ ಎನ್ನುವ ಘೋಷಣೆಯನ್ನು ಆಲಿಸುತ್ತಿದ್ದರು.

ರೈತರ ಗಣರಾಜ್ಯೋತ್ಸವ ದಿನದ ರ‍್ಯಾಲಿಯಲ್ಲಿ ಪಾಲ್ಗೊಳ್ಳಲು 50 ವರ್ಷದ ಶಾಂತಾ ಜನವರಿ 26ರ ಬೆಳಿಗ್ಗೆ ಬೆಂಗಳೂರಿಗೆ ಬಂದರು. ಅಂದು ಬೆಳಿಗ್ಗೆ, ದೆಹಲಿಯಲ್ಲಿ ಮೂರು ಹೊಸ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತರ ಟ್ರಾಕ್ಟರ್ ಮೆರವಣಿಗೆಯನ್ನು ಬೆಂಬಲಿಸಲು ಕರ್ನಾಟಕದ ಎಲ್ಲೆಡೆಯ ರೈತರು ಮತ್ತು ಕೃಷಿ ಕಾರ್ಮಿಕರು ರೈಲುಗಳು ಮತ್ತು ಬಸ್ಸುಗಳ ಮೂಲಕ ಮೆಜೆಸ್ಟಿಕ್‌ಗೆ ಬಂದು ತಲುಪುತ್ತಿದ್ದರು. ನಂತರ ಅವರು ಅಲ್ಲಿಂದ ಎರಡು ಕಿಲೋಮೀಟರ್ ದೂರದಲ್ಲಿರುವ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆಯಲಿರುವ ಸಭೆಯಲ್ಲಿ ಪಾಲ್ಗೊಳ್ಳಲಿದ್ದರು.

ಅವರ ಊರಿನಲ್ಲಿ, ಆಲೂಗಡ್ಡೆ, ಬೇಳೆ-ಕಾಳುಗಳು ಮತ್ತು ಕಡಲೆಕಾಯಿಯಂತಹ ಬೆಳೆಗಳನ್ನು ಬಿತ್ತುವುದು, ಹೊಲಗಳಲ್ಲಿ ಕಳೆ ತೆಗೆಯುವ ಮೂಲಕ ಶಾಂತಾ ದಿನಕ್ಕೆ 280 ರೂ ದಿನಗೂಲಿ ಸಂಪಾದಿಸುತ್ತಾರೆ. ಕೃಷಿ ಕೆಲಸ ಲಭ್ಯವಿಲ್ಲದಿರುವಾಗ, ಅವರು ಮನರೇಗಾ ಅಡಿಯಲ್ಲಿ ಕೆಲಸ ಮಾಡುತ್ತಾರೆ. ಅವರಿಗೆ 28 ​​ಮತ್ತು 25 ವರ್ಷ ವಯಸ್ಸಿನ ಇಬ್ಬರು ಗಂಡು ಮಕ್ಕಳಿದ್ದು, ಅವರು ಮನರೇಗಾ ಅಡಿಯಲ್ಲಿ ಲಭ್ಯವಿರುವ ನಿರ್ಮಾಣ ಕಾರ್ಯಗಳಲ್ಲಿ ಕೆಲಸ ಮಾಡುತ್ತಾರೆ.

"[ಕೋವಿಡ್ -19] ಲಾಕ್ ಡೌನ್ ಸಮಯದಲ್ಲಿ ನಮಗೆ ಸರಿಯಾದ ಆಹಾರ ಅಥವಾ ನೀರು ಲಭ್ಯವಿರಲಿಲ್ಲ"ವೆಂದು ಅವರು ಹೇಳಿದರು. "ಸರ್ಕಾರ ನಮ್ಮ ಕುರಿತು ಒಂದಿಷ್ಟೂ ಯೋಚಿಸುವುದಿಲ್ಲ."

ರೈಲ್ವೆ ನಿಲ್ದಾಣದ ವಾಹನ ನಿಲುಗಡೆ ಸ್ಥಳದಲ್ಲಿ ರೈತರ ಗುಂಪು "ನಮಗೆ ಎಪಿಎಂಸಿ ಬೇಕು, ಹೊಸ ಕಾನೂನನ್ನು ಹಿಂದಕ್ಕೆ ತೆಗೆದುಕೊಳ್ಳಿ." ಎಂದು ಕೂಗುತ್ತಿದ್ದರು.

PHOTO • Gokul G.K.
Shanta Kamble (left) and Krishna Murthy (centre) from north Karnataka, in Bengaluru. 'The government is against democratic protests', says P. Gopal (right)
PHOTO • Gokul G.K.
Shanta Kamble (left) and Krishna Murthy (centre) from north Karnataka, in Bengaluru. 'The government is against democratic protests', says P. Gopal (right)
PHOTO • Gokul G.K.

ಉತ್ತರ ಕರ್ನಾಟಕದ ಶಾಂತಾ ಕಾಂಬ್ಳೆ ಬೆಂಗಳೂರಿನಲ್ಲಿ (ಎಡ) ಮತ್ತು ಕೃಷ್ಣ ಮೂರ್ತಿ (ಮಧ್ಯ). 'ಸರ್ಕಾರ ಪ್ರಜಾಸತ್ತಾತ್ಮಕ ಪ್ರತಿಭಟನೆಗಳ ವಿರುದ್ಧವಾಗಿದೆ' ಎಂದು ಪಿ.ಗೋಪಾಲ್ ಹೇಳಿದರು (ಬಲ)

ಕಳೆದ ವರ್ಷ, 50 ವರ್ಷದ ಕೃಷ್ಣ ಮೂರ್ತಿಯವರಿಗೆ ಸರ್ಕಾರ ನಡೆಸುವ ಎಪಿಎಂಸಿ (ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ)ಯು ನೆರವಿಗೆ ಬಂದಿತು. ಅನಿಯಮಿತ ಮಳೆಯಿಂದಾಗಿ, ಬಳ್ಳಾರಿ ಜಿಲ್ಲೆ ಹಾಗೂ ತಾಲ್ಲೂಕಿನ ಬನಪುರ ಗ್ರಾಮದ ಈ ರೈತ ತನ್ನ ಬೆಳೆಗಳಾದ ಹತ್ತಿ, ಮೆಕ್ಕೆಜೋಳ, ರಾಗಿ, ಕೊತ್ತಂಬರಿ ಮತ್ತು ತೊಗರಿ ಬೆಳೆಯನ್ನು ಕಳೆದುಕೊಂಡಿದ್ದರು. ನಂತರ ಅವರು ತಮ್ಮ 50 ಎಕರೆ ಜಮೀನಿನಲ್ಲಿ ಉಳಿದಿದ್ದ ಬೆಳೆಯನ್ನು ಎಪಿಎಂಸಿಗೆ ಮಾರಿದರು. "ಬೇಸಾಯವು ಬಹಳಷ್ಟು ಹಣ ಬೇಡುತ್ತದೆ" ಎಂದು ಮೂರ್ತಿ ಹೇಳಿದರು. "ನಾವು ಎಕರೆಗೆ ಒಂದು ಲಕ್ಷ [ರೂಪಾಯಿ] ಖರ್ಚು ಮಾಡುತ್ತೇವೆ ಮತ್ತು ನಾವು ಖರ್ಚು ಮಾಡುವ ಅರ್ಧದಷ್ಟು ಹಣವನ್ನು ಮಾತ್ರ ಮರಳಿ ಗಳಿಸಲು ಸಾಧ್ಯವಾಗುತ್ತದೆ."

ಭಾರತದೆಲ್ಲೆಡೆಗಿನ ರೈತರು ಒಗ್ಗಟ್ಟಾಗಿ ಪ್ರತಿಭಟಿಸುತ್ತಿರುವ ಈ ಕೃಷಿ ಕಾನೂನುಗಳನ್ನು ಮೊದಲು ಜೂನ್ 5, 2020 ರಂದು ಸುಗ್ರೀವಾಜ್ಞೆಗಳಾಗಿ ಅಂಗೀಕರಿಸಲಾಯಿತು, ನಂತರ ಸೆಪ್ಟೆಂಬರ್ 14 ರಂದು ಸಂಸತ್ತಿನಲ್ಲಿ ಕೃಷಿ ಮಸೂದೆಗಳಾಗಿ ಪರಿಚಯಿಸಲಾಯಿತು ಮತ್ತು ಆ ತಿಂಗಳ 20 ರ ಹೊತ್ತಿಗೆ ಕಾಯಿದೆಗಳನ್ನಾಗಿ ಪರಿಚಯಿಸಲಾಯಿತು. ಆ ಮೂರು ಕಾನೂನುಗಳೆಂದರೆ: ರೈತ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರೋತ್ಸಾಹ ಮತ್ತು ನೆರವು) ಕಾಯ್ದೆ, 2020 ; ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ 2020ರ ಒಪ್ಪಂದ ಮಸೂದೆ ; ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ, 2020.

ರೈತರು ಈ ಮಮೂರು ಕಾನೂನುಗಳನ್ನು ದೊಡ್ಡ ಕಾರ್ಪೊರೇಟ್‌ಗಳು ತಮ್ಮ ಗರಿಷ್ಠ ಶಕ್ತಿಯನ್ನು ರೈತರು ಮತ್ತು ಕೃಷಿಯ ಕಡೆಗೆ ಬಳಸಿಕೊಳ್ಳುವ ವೇದಿಕೆಯಾಗಿ ನೋಡುತ್ತಾರೆ. ಈ ಕಾನೂನುಗಳು ಕನಿಷ್ಟ ಬೆಂಬಲ ಬೆಲೆ (ಎಂಎಸ್‌ಪಿ), ಕೃಷಿ ಉತ್ಪಾದನೆ (ಇಳುವರಿ) ಮಾರುಕಟ್ಟೆ ಸಮಿತಿಗಳು (ಎಪಿಎಂಸಿ), ಮತ್ತು ಸರ್ಕಾರಿ ಖರೀದಿ ಸೇರಿದಂತೆ ರೈತರಿಗೆ ನೀಡುವ ಪ್ರಮುಖ ಬೆಂಬಲ ರೂಪಗಳನ್ನು ಹಾಳುಗೆಡವುತ್ತವೆ. ಈ ಕಾನೂನುಗಳು ಪ್ರತಿ ಭಾರತೀಯರ ಮೇಲೆ ಪರಿಣಾಮ ಬೀರಲಿರುವುದರಿಂದಲೂ ಅವುಗಳನ್ನು ಟೀಕಿಸಲಾಗುತ್ತಿದೆ. ದೇಶದ ಎಲ್ಲಾ ನಾಗರಿಕರ ಕಾನೂನು ನೆರವು ಪಡೆಯುವ ಹಕ್ಕನ್ನು ಈ ಕಾನೂನುಗಳು ಕಸಿದುಕೊಳ್ಳುತ್ತವೆ, ಇದು ಭಾರತದ ಸಂವಿಧಾನದ 32ನೇ ವಿಧಿಯನ್ನು ದುರ್ಬಲಗೊಳಿಸುತ್ತದೆ.

ʼಒಪ್ಪೋದಿಲ್ಲ! ಒಪ್ಪೋದಿಲ್ಲ!ʼ ಎಂದು ಬೆಂಗಳೂರಿನಲ್ಲಿ ರೈತರು ಒಟ್ಟಾಗಿ ಘೋಷಣೆ ಮೊಳಗಿಸುತ್ತಿದ್ದರು

"ಮೂರು ಕ್ರೂರ ಕೃಷಿ ಕಾನೂನುಗಳನ್ನು ತಕ್ಷಣ ರದ್ದುಪಡಿಸಬೇಕೆಂದು ನಾವು ಒತ್ತಾಯಿಸುತ್ತೇವೆ" ಎಂದು ಕರ್ನಾಟಕ ರಾಜ್ಯ ರೈತ ಸಂಘದ (ಕೆಆರ್‌ಆರ್‌ಎಸ್) ರಾಜ್ಯ ಕಾರ್ಯದರ್ಶಿ ಪಿ. ಗೋಪಾಲ್ ಹೇಳಿದರು. ಈ ಪ್ರತಿಭಟನೆಯಲ್ಲಿ ರಾಜ್ಯದ ಸುಮಾರು 25 ರಿಂದ 30 ಸಂಸ್ಥೆಗಳು ಭಾಗವಹಿಸುತ್ತಿವೆ. ಕರ್ನಾಟಕದ ಎಲ್ಲೆಡೆಯಿಂದ 50,000ಕ್ಕೂ ಹೆಚ್ಚು ರೈತರು ಮತ್ತು ಕಾರ್ಮಿಕರು ಬರುತ್ತಿದ್ದಾರೆ. ಪಂಜಾಬ್ ಮತ್ತು ಹರಿಯಾಣದ ರೈತರು ಮಾತ್ರ ಪ್ರತಿಭಟಿಸುತ್ತಿದ್ದಾರೆ ಎಂಬ ಕೇಂದ್ರ ಸರ್ಕಾರದ ಹೇಳಿಕೆ ಸಂಪೂರ್ಣ ತಪ್ಪು,” ಎಂದು ಅವರು ಹೇಳಿದರು.

About 30 organisations are said to have participated in the Republic Day farmers' rally in Bengaluru. Students and workers were there too
PHOTO • Sweta Daga ,  Almaas Masood

ಬೆಂಗಳೂರಿನಲ್ಲಿ ನಡೆದ ಗಣರಾಜ್ಯೋತ್ಸವ ದಿನದ ರೈತರ ರ‍್ಯಾಲಿಯಲ್ಲಿ ಸುಮಾರು 30 ಸಂಸ್ಥೆಗಳು ಭಾಗವಹಿಸಿದ್ದವು. ವಿದ್ಯಾರ್ಥಿಗಳು ಮತ್ತು ಕಾರ್ಯಕರ್ತರೂ ಇದ್ದರು

“ಸರ್ಕಾರ ರೈತರ ವಿರುದ್ಧವಾಗಿದೆ. ಇಲ್ಲಿ, ಕರ್ನಾಟಕದಲ್ಲೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸ್ಪಷ್ಟವಾಗಿ ಕಾರ್ಪೊರೇಟ್‌ಗಳ ಜೊತೆಗಿದ್ದಾರೆ. ಅವರು ಭೂ ಸುಧಾರಣಾ ಕಾಯ್ದೆಯನ್ನು [2020ರಲ್ಲಿ] ದೊಡ್ಡ ಕಂಪನಿಗಳ ಪರವಾಗಿ ತಿದ್ದುಪಡಿ ಮಾಡಿದರು ಮತ್ತು ಏಕಪಕ್ಷೀಯವಾಗಿ ಗೋಹತ್ಯೆ ಮಸೂದೆಯನ್ನು ಮಂಡಿಸಿದರು,” ಎಂದು ಗೋಪಾಲ್ ಹೇಳಿದರು.

ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲ್ಲೂಕಿನ 36 ವರ್ಷದ ಮಮತಾ ಎಂಬ ರೈತ ಮಹಿಳೆ ರೈಲು ನಿಲ್ದಾಣದ ಹೊರಗೆ ಮಹಿಳೆಯರ ಗುಂಪಿನೊಂದಿಗೆ ನಿಂತಿದ್ದರು. ಅವರು ತನ್ನ ಒಂಬತ್ತು ಎಕರೆ ಜಮೀನಿನಲ್ಲಿ ಹತ್ತಿ, ರಾಗಿ ಮತ್ತು ನೆಲಗಡಲೆಗಳನ್ನು ಬೆಳೆಯುತ್ತಾರೆ. ನಮಗೆ ಕಾರ್ಪೊರೇಟ್ ಮಂಡಿಗಳು ಬೇಡ. ಬದಲಿಗೆ ಸರ್ಕಾರ ಎಪಿಎಂಸಿಗಳನ್ನು ಬಲಪಡಿಸಬೇಕು ಮತ್ತು ಮಧ್ಯವರ್ತಿಗಳನ್ನು ನಿರ್ಮೂಲನೆ ಮಾಡಬೇಕು. ಅವರು ರೈತರಿಂದ ನೇರವಾಗಿ ಬೆಳೆಗಳನ್ನು ಖರೀದಿಸುವ ಪರಿಣಾಮಕಾರಿ ಮಾರ್ಗಗಳನ್ನು ಪರಿಚಯಿಸಬೇಕು,” ಎಂದು ಅವರು ಹೇಳಿದರು.

ಅವರ ಸುತ್ತಲಿದ್ದ ಜನರ ಗುಂಪು “ಹೊಸ ಕಾನೂನುಗಳು ಅಂಬಾನಿ, ಅದಾನಿ ಪರ” ಎಂದು ಘೋಷಣೆ ಕೂಗುತ್ತಿದ್ದರು.

ರೈಲು ನಿಲ್ದಾಣದ ಪಾರ್ಕಿಂಗ್ ಸ್ಥಳದ ಒಂದು ಮೂಲೆಯಲ್ಲಿ, ಕಾಗದದ ತಟ್ಟೆಗಳಲ್ಲಿ ಬಿಸಿ ಆಹಾರವನ್ನು ಪ್ರಯಾಣಿಕರಿಗೆ ನೀಡಲಾಗುತ್ತಿತ್ತು. ಟ್ರಾನ್ಸ್‌ ಜೆಂಡರ್ ಜನರ ರಾಜ್ಯವ್ಯಾಪಿ ಸಂಘಟನೆಯಾದ ಕರ್ನಾಟಕ ಮಂಗಳಮುಖಿ ಪ್ರತಿಷ್ಠಾನದ (ಕೆಎಂಎಫ್) ಸದಸ್ಯರು ಅವರಿಗಾಗಿ ಬಿಸಿಯಾದ ಧಮ್‌ ಪಲಾವ್‌ ಸಿದ್ಧಪಡಿಸಿದ್ದರು. "ಇದು ನಮ್ಮ ಕರ್ತವ್ಯ. ರೈತರು ಉತ್ಪಾದಿಸುವ ಆಹಾರವನ್ನು ತಿನ್ನಿಸಿ ನಮ್ಮ ಪೋಷಿಸಲಾಗಿದೆ. ಅವರು ಬೆಳೆದ ಅಕ್ಕಿಯನ್ನು ನಾವು ತಿನ್ನುತ್ತಿದ್ದೇವೆ" ಎಂದು ಕೆಎಂಎಫ್ ಪ್ರಧಾನ ಕಾರ್ಯದರ್ಶಿ ಅರುಂಧತಿ ಜಿ ಹೆಗ್ಡೆ ಹೇಳಿದರು.

ಚಿಕ್ಕಮಗಳೂರು ಜಿಲ್ಲೆಯ ತರಿಕೆರೆ ತಾಲ್ಲೂಕಿನಲ್ಲಿ ಕೆಎಂಎಫ್ ಐದು ಎಕರೆ ಭೂಮಿಯನ್ನು ಹೊಂದಿದ್ದು, ಅಲ್ಲಿ ಸಂಸ್ಥೆಯು ಭತ್ತ, ರಾಗಿ ಮತ್ತು ನೆಲಗಡಲೆ ಕೃಷಿ ಮಾಡುತ್ತದೆ. “ನಾವೆಲ್ಲರೂ ರೈತ ಕುಟುಂಬಗಳಿಂದ ಬಂದವರು. ಹೀಗಾಗಿ ಈ ಪ್ರತಿಭಟನೆ ಎಷ್ಟು ಮುಖ್ಯವೆನ್ನುವುದು ನಮಗೆ ತಿಳಿದಿದೆ. ಈ ಹೋರಾಟದಲ್ಲಿ ನಾವು ನಮ್ಮ ಪಾತ್ರವನ್ನು ಇಲ್ಲಿ ನಿರ್ವಹಿಸುತ್ತಿದ್ದೇವೆ” ಎಂದು ಅರುಂಧತಿ ಹೇಳಿದರು.

At Bengaluru railway station, Arundhati G. Hegde (in pink saree) and other members of Karnataka Mangalamukhi Foundation, a collective of transgender persons, served steaming rice pulao to the travelling protestors
PHOTO • Almaas Masood
At Bengaluru railway station, Arundhati G. Hegde (in pink saree) and other members of Karnataka Mangalamukhi Foundation, a collective of transgender persons, served steaming rice pulao to the travelling protestors
PHOTO • Almaas Masood

ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ, ಅರುಂಧತಿ ಜಿ. ಹೆಗ್ಡೆ (ಗುಲಾಬಿ ಸೀರೆಯಲ್ಲಿ) ಮತ್ತು ಟ್ರಾನ್ಸ್‌ ಜೆಂಡರ್‌ ಸಮುದಾಯದ ಸಂಘಟನೆಯಾದ ಕರ್ನಾಟಕ ಮಂಗಳಮುಖಿ ಫೌಂಡೇಷನ್‌ನ ಇತರ ಸದಸ್ಯರು, ಪ್ರಯಾಣಿಕ ಪ್ರತಿಭಟನಾಕಾರರಿಗೆ ಬಿಸಿಯಾದ ಪಲಾವ್‌ ತಯಾರಿಸಿ ಬಡಿಸಿದರು

ಆದರೆ ಜನವರಿ 26ರಂದು ಮಧ್ಯಾಹ್ನ 1 ಗಂಟೆಯ ಹೊತ್ತಿಗೆ ಪೊಲೀಸರು ಮೆಜೆಸ್ಟಿಕ್ ಪ್ರದೇಶಕ್ಕೆ ಬ್ಯಾರಿಕೇಡ್ ಹಾಕಿ ಪ್ರತಿಭಟನಾಕಾರರು ಸಭೆಗಾಗಿ ಫ್ರೀಡಂ ಪಾರ್ಕ್‌ವರೆಗೆ ಹೋಗದಂತೆ ತಡೆದರು.

"ಈ ಸರ್ಕಾರವು ಪ್ರಜಾಸತ್ತಾತ್ಮಕ ಹೋರಾಟಗಳ ವಿರುದ್ಧವಾಗಿದೆ. ಭಿನ್ನಾಭಿಪ್ರಾಯವನ್ನು ನಿಗ್ರಹಿಸಲು ಇದು ಪೊಲೀಸರನ್ನು ಬಳಸುತ್ತಿದೆ,” ಎಂದು ಕೆಆರ್‌ಆರ್‌ಎಸ್‌ ನಾಯಕ ಗೋಪಾಲ್ ಹೇಳಿದರು, ರಾಜ್ಯದ ವಿದ್ಯಾರ್ಥಿಗಳು ಮತ್ತು ಕಾರ್ಮಿಕರು ಸಹ ತಮ್ಮ ಬೆಂಬಲವನ್ನು ವ್ಯಕ್ತಪಡಿಸಲು ನಗರಕ್ಕೆ ಬಂದಿದ್ದಾರೆ.

ಸರಕಾರದ ಉಗ್ರ ಕ್ರಮಗಳು ಬಳ್ಳಾರಿಯ ರೈತ ಗಂಗಾ ಧನ್ವರ್ಕರ್ ಅವರನ್ನು ಕೋಪಗೊಳಿಸಿದ್ದವು. “ನಾವು ಯಾವುದೇ ಕಾರಣವಿಲ್ಲದೆ ನಮ್ಮ ಮನೆಗಳು, ಕುಟುಂಬಗಳು ಮತ್ತು ಹೊಲಗಳನ್ನು ತೊರೆದು ಪ್ರತಿಭಟಿಸಲು ಇಲ್ಲಿಗೆ ಬರುವಷ್ಟು ಮೂರ್ಖರಲ್ಲ. ದೆಹಲಿಯ ಪ್ರತಿಭಟನೆಯಲ್ಲಿ 150ಕ್ಕೂ ಹೆಚ್ಚು ರೈತರು ಸಾವನ್ನಪ್ಪಿದ್ದಾರೆ. ತೀವ್ರ ಶೀತದ ವಾತಾವರಣದಲ್ಲಿ ತಮ್ಮ ಮಕ್ಕಳೊಂದಿಗೆ ರೈತರು ಬೀದಿ ಬದಿಯ ಡೇರೆಗಳಲ್ಲಿ ವಾಸಿಸುತ್ತಿದ್ದಾರೆ."

ಪ್ರತಿಭಟನೆಗೆ ಕಾರಣವೆಂದರೆ "ಈ ಕಾನೂನುಗಳು ಸಾಮಾನ್ಯ ಜನರಿಗೆ, ರೈತರಿಗೆ ಅಥವಾ ಕಾರ್ಮಿಕರ ಪರವಾಗಿಯಲ್ಲ, ಅವು ಕಂಪನಿಗಳ ಸಲುವಾಗಿ ಮಾತ್ರ ಮಾಡಲಾಗಿವೆ” ಎಂದು ಅವರು ಹೇಳಿದರು.

ಕವರ್‌ ಫೋಟೊ: ಅಲ್ಮಾಸ್‌ ಮಸೂದ್‌

ಅನುವಾದ - ಶಂಕರ ಎನ್. ಕೆಂಚನೂರು

Gokul G.K.

Gokul G.K. is a freelance journalist based in Thiruvananthapuram, Kerala.

Other stories by Gokul G.K.
Arkatapa Basu

Arkatapa Basu is a freelance journalist based in Kolkata, West Bengal.

Other stories by Arkatapa Basu
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru