ಶಾಹಬಾಯ್‌ ಘಾರತ್‌ ಒಂದು ವರ್ಷದಿಂದ ಕೊರೋನಾ ಸೋಂಕನ್ನು ಬೆನ್ನತ್ತಿದ್ದರು-ಅದು ಅವರನ್ನು ಆವರಿಸಿಕೊಳ್ಳುವವರೆಗೂ ಬೆನ್ನತ್ತಿದ್ದರು. ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತೆ ಅಥವಾ ಆಶಾ ಆಗಿರುವ ಶಾಹಬಾಯ್‌, ಮಹಾರಾಷ್ಟ್ರದ ಬೀಡ್‌ ಜಿಲ್ಲೆಯಲ್ಲಿರುವ ತನ್ನ ಗ್ರಾಮವಾದ ಸುಲ್ತಾನ್‌ಪುರದಲ್ಲಿ ಮನೆ ಮನೆಗೆ ಹೋಗಿ ಕೋವಿಡ್‌-19 ಸೋಂಕನ್ನು ಪತ್ತೆಹಚ್ಚುತ್ತಿದ್ದರು. ಆದರೆ ಮೇ ತಿಂಗಳ ಕೊನೆಯ ವಾರದಲ್ಲಿ ಅವರ ಆತಂಕವೆಂಬುದು ನನಸಾಗಿತ್ತು, ಕಾರಣ ಸೋಂಕು ಅವರನ್ನು ಆವರಿಸಿತ್ತು.

38 ವರ್ಷದ ಶಹಬಾಯ್‌ ಅವರಿಗೆ ಸಾಂಕ್ರಾಮಿಕ ಸಂದರ್ಭದಲ್ಲಿ ತನ್ನ ಕೆಲಸದಲ್ಲಿನ ಅಪಾಯದ ಅರಿವು ಇದ್ದೇ ಇದ್ದಿತ್ತು, ಆದರೆ ಅದು ಯಾವ ರೀತಿಯಲ್ಲಿ ಕವಲೊಡೆಯುತ್ತದೆ ಎಂಬುದರ ಬಗ್ಗೆ ಅವರಿಗೆ ಮುಂದಾಲೋಚನೆ ಇರಲಿಲ್ಲ. ಅವರು ಸೋಂಕು ತಗಲಿದ ಕೂಡಲೇ 65ವರ್ಷದ ಅವರ ತಾಯಿಗೂ ಸೋಂಕು ತಗಲಿತು. ನಂತರ ನಾಲ್ಕು ಮಂದಿ ಸಹೋದರಳಿಯಂದಿರಿಗೂ ಸೋಂಕು ತಗಲಿತು, ಈ ಕಾಯಿಲೆಯಿಂದಾಗಿ ಇಡೀ ಕುಟುಂಬವೇ ಬೇಗುದಿಗೆ ಸಿಲುಕಿತು.

ಶಹಬಾಯ್‌ ಅವರಿಗೆ ಗುಣಮುಖರಾಗಲು ಕೆಲವು ವಾರಗಳೇ ತಗಲಿತು. “ನನ್ನ ಸಹೋದರಳಿಯಂದಿರು ಕೂಡ ಗುಣಮುಖರಾದರು, ಆದರೆ ನನ್ನ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಬೇಕಾಯಿತು,” ಎನ್ನುತ್ತಾರೆ ಶಹಬಾಯ್‌, ಒಂದು ವಾರ ಪರ್ಯಂತ ಆಮ್ಲಜನಕದ ನೆರವಿನಲ್ಲಿ ಇರಬೇಕಾಯಿತೆಂದು ಅವರು ತಿಳಿಸಿದುರ. “ನನ್ನ ತಾಯಿಯ ಚಿಕಿತ್ಸೆಗೆ 2.5 ಲಕ್ಷ ರೂ. ವೆಚ್ಚವಾಯಿತು. ಇದಕ್ಕಾಗಿ ನಾನು 2.5 ಎಕರೆ ಕೃಷಿ ಭೂಮಿಯನ್ನು ಮಾರಿದೆ, ಮತ್ತು ಕೆಲವು ಚಿನ್ನಾಭರಣಗಳನ್ನು ಮಾರಿ ಹಣ ನೀಡಿದೆ,”

ಆಶಾ ಕಾರ್ಯಕರ್ತೆಯಾಗಿ ಅವರ ಕೆಲಸ ಅಷ್ಟು ಸುಲಭವಲ್ಲ, ಆದರೆ ಸಾಂಕ್ರಾಮಿಕ ಪಿಡುಗು ಅದನ್ನು ಇನ್ನೂ ಹದಗೆಡಿಸಿತು. “ನಾನು ಬೆದರಿಕೆ ಮತ್ತು ನಿಂದನೆಗಳನ್ನು ಎದುರಿಸಿದೆ. ಆರಂಭದಲ್ಲಿ ಜನರು ರೋಗಲಕ್ಷಣಗಳನ್ನು ಮರೆಮಾಚುತ್ತಿದ್ದರು,” ಎಂದಿರುವ ಶಹಬಾಯ್‌, “ನಾನು ಹಳ್ಳಿಯಲ್ಲಿ ನನ್ನ ಕೆಲಸವನ್ನು ಮಾಡುವಾಗ ಸಾಕಷ್ಟು ಋಣಾತ್ಮಕ ಪ್ರತಿಕ್ರಿಯೆಗಳನ್ನು ಎದುರಿಸಿದೆ,”

ಮಹಾರಾಷ್ಟ್ರದಲ್ಲಿ 70,000 ಕ್ಕೂ ಹೆಚ್ಚು ಮಾನ್ಯತೆ ಪಡೆದ ಆಶಾ ಕಾರ್ಯಕರ್ತೆಯರಿದ್ದಾರೆ. 2020ರ ಮಾರ್ಚ್‌ನಲ್ಲಿ ಕೊರೋನಾ ವೈರಸ್‌ ಸ್ಫೋಟಗೊಂಡಾಗಿನಿಂದ ರಕ್ಷಣಾ ಕಾರ್ಯದಲ್ಲಿ ಈ ಆಶಾ ಕಾರ್ಯಕರ್ತೆಯರು ಮುಂಚೂಣಿಯಲ್ಲಿದ್ದರು. ಮನೆಗಳಿಗೆ ಭೇಟಿ ನೀಡುವುದರ ಜತೆಯಲ್ಲಿ ಚುಚ್ಚುಮದ್ದು ಬಗೆಗಿನ ಗೊಂದಲಗಳನ್ನು ನಿವಾರಿಸುವಲ್ಲಿಯೂ ಹೋರಾಟ ಮಾಡಿದ್ದರು.

Shahbai Gharat at her sewing machine at home in Sultanpur village. Her work as an ASHA put her family at risk in May
PHOTO • Parth M.N.

ಶಹಬಾಯ್‌ ಘಾರತ್‌ ಸುಲ್ತಾನಪುರದಲ್ಲಿರುವ ತಮ್ಮ ಮನೆಯಲ್ಲಿ ಹೊಲಿಗೆ ಯಂತ್ರದೊಂದಿಗೆ. ಆಶಾ ಕಾರ್ಯಕರ್ತೆಯಾಗಿ ಅವರ ಕೆಲಸ ಮೇ ತಿಂಗಳಲ್ಲಿ ಅವರ ಕುಟುಂಬವನ್ನು ಸಂಕಷ್ಟಕ್ಕೆ ಈಡುಮಾಡಿತ್ತು

ಅಧಿಕೃತವಾಗಿ ಸ್ವಯಂಸೇವಕರು ಎಂದು ಕರೆಯಲ್ಪಡುವ, ಆಶಾ ಕಾರ್ಯಕರ್ತೆಯರು ದೇಶಾದ್ಯಂತ ಗ್ರಾಮಗಳಲ್ಲಿ ಸರಕಾರದ ಆರೋಗ್ಯ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಸಹಾಯ ಮಾಡುವ ಸಮುದಾಯ ಆರೋಗ್ಯ ಕೆಲಸಗಾರರು. ಮಹಿಳೆಯರಿಗೆ ಅವರ ಗರ್ಭಧರಿಸಿದ ಸಂದರ್ಭದಲ್ಲಿ ಸಹಾಯ ಮಾಡುವುದು, ಆಸ್ಪತ್ರೆಯಲ್ಲಿ ಜನನವಾಗುವ ಬಗ್ಗೆ ಪ್ರೋತ್ಸಾಹಿಸುವುದು, ಶಿಶುಗಳಿಗೆ ರೋಗನಿರೋಧಕಗಳ ಬಗ್ಗೆ ನೆರವಾಗುವುದು, ಕುಟುಂಬ ಯೋಜನೆಯನ್ನು ಉತ್ತೇಜಿಸುವುದು, ಪ್ರಥಮ ಚಿಕಿತ್ಸೆಗಳನ್ನು ಒದಗಿಸುವುದು ಮತ್ತು ದಾಖಲೆಗಳನ್ನು ಕಾಯ್ದುಕೊಳ್ಳುವುದು ಇವರ ಮುಖ್ಯ ಕೆಲಸವಾಗಿರುತ್ತದೆ.

ಇದೆಲ್ಲ ಮಾಡಿದ್ದಕ್ಕೆ ಗೌರವ ಧನವಾಗಿ ತಿಂಗಳಿಗೆ ಸಿಗುವುದು 3,300 ರೂ, ಇದರ ಜತೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ವಿವಿಧ ಆರೋಗ್ಯ ಯೋಜನೆಯಡಿಯಲ್ಲಿ ಸಿಗುವ ಪ್ರೋತ್ಸಾಹ ಧನ- ಶಹಬಾಯ್‌ ಅವರಿಗೆ ತಿಂಗಳಿಗೆ ಸಿಗುವ ಪ್ರೋತ್ಸಾಹ ಧನ ರೂ. 300- 500. ಆದರೆ ಕಠಿಣ ಶ್ರಮ ಮತ್ತು ಬಹಳ ಗಂಟೆಗಳ ಕಾಲ ಸೇವೆ ಸಲ್ಲಿಸಿದರೂ ಆಶಾ ಕಾರ್ಯಕರ್ತೆಯರಿಗೆ ಸಾಂಕ್ರಾಮಿಕ ಕಾಲದಲ್ಲಿ ಸಿಕ್ಕಿದ್ದು ಅಲ್ಪ ಪ್ರಮಾಣದ ನೆರವು. “ಸಂಕಷ್ಟದ ಕಾಲದಲ್ಲಿ ನಾವು ಒಂಟಿಯಾಗಿ ಸಹಾಯ ಮಾಡಿದ್ದರೂ, ನಮಗೆ ಸಮಯಕ್ಕೆ ಸರಿಯಾಗಿ ವೇತನ [ಗೌರವಧನ] ಸಿಗಲಿಲ್ಲ. ನಮಗೆ ಕೊನೆಯದಾಗಿ ವೇತನ ಸಿಕ್ಕಿದ್ದು ಏಪ್ರಿಲ್‌ನಲ್ಲಿ,” ಎನ್ನುತ್ತಾರೆ ಶಹಬಾಯ್‌,

ಅವರಿಗೆ ನೀಡಿರುವ ಒಂದೇ ಒಂದು ರಕ್ಷಣೆ ಎಂದರೆ ಮಾಸ್ಕ್‌, ಅದು ಕೂಡ ಸಾಕಗುವಷ್ಟಲ್ಲ. 2020ರ ಮಾರ್ಚ್‌ನಿಂದ ತಮಗೆ ಸಿಕ್ಕಿದ್ದು ಕೇವಲ 22 ಬಳಸಿ ಎಸೆಯಬಹುದಾದ ಮಾಸ್ಕ್‌ ಹಾಗೂ ಐದು N95 ಮಾಸ್ಕ್‌ ಎನ್ನುತ್ತಾರೆ ಶಹಬಾಯ್‌, “ನಮ್ಮ ಕೆಲಸದಲ್ಲಿನ ಅಪಾಯಗಳನ್ನು ನೋಡಿದರೆ ನಮಗೆ ಸಿಕ್ಕಿರುವ ಪ್ರತಿಫಲ ತೃಪ್ತಿದಾಯಕ ಎಂದು ನಿಮಗನ್ನಿಸುತ್ತದೆಯೇ?”

ಈ ಪ್ರಶ್ನೆಯನ್ನು ಪ್ರತಿಯೊಬ್ಬ ಆಶಾ ಕಾರ್ಯಕರ್ತೆಯರೂ ಕೇಳುತ್ತಾರೆ.

ತನ್ನ ಕುಟುಂಬವನ್ನು ಕೋವಿಡ್‌-19 ರಿಂದ ರಕ್ಷಿಸುವ ಸಲುವಾಗಿ ಶೋಭಾ ಗಣಾಗೆ ಹಲವು ತಿಂಗಳ ಕಾಲ ತನ್ನ ಮನೆಯ ಸ್ನಾನಗೃಹದಲ್ಲಿ ಸ್ನಾನ ಮಾಡುವ ಬದಲು ಟಾಯ್ಲೆಟ್‌ನಲ್ಲಿ ಸ್ನಾನ ಮಾಡಿದ್ದರು. “ನನ್ನ ಮಗಳಿಗೆ ಎಂಟು ವರ್ಷ ಪ್ರಾಯ. ಅವಳು ಅತ್ತರೂ ಕೂಡ ಆಕೆಯನ್ನು ಅಪ್ಪಿಕೊಳ್ಳಲು ನನ್ನಿಂದಾಗಲಿಲ್ಲ. ಅವಳು ನನ್ನ ಪಕ್ಕದಲ್ಲಿ ಮಲಗಲು ಬಯಸುತ್ತಿದ್ದಳು, ಆದರೆ ನಾನು ಅದಕ್ಕೆ ಅವಕಾಶ ನೀಡಲಿಲ್ಲ,” ಎಂದು ಬೀಡ್‌ನಿಂದ ಎರಡು ಕಿಲೋ ಮೀಟರ್‌ ದೂರದಲ್ಲಿರುವ ಚೌಸಾಲಾ ಗ್ರಾಮದ ಆಶಾ ಕಾರ್ಯಕರ್ತೆ 33 ವರ್ಷದ  ಶೋಭಾ ಹೇಳುತ್ತಾರೆ.

Shobha Ganage expects more than just words from the government
PHOTO • Parth M.N.

ಶೋಭಾ ಗಣಾಗೆ ಅವರು ಸರಕಾರದಿಂದ ಕೇವಲ ಮಾತಿನ ಭರವಸೆಗಿಂತ ಹೆಚ್ಚಿನದನ್ನು ಬಯಸುತ್ತಿದ್ದಾರೆ .

ಜೂನ್‌ ತಿಂಗಳ ಮಧ್ಯದಲ್ಲಿ ಮಹಾರಾಷ್ಟ್ರ ಆಶಾ ಕಾರ್ಯಕರ್ತೆಯರ ಸಂಘಟನೆ ಅನಿರ್ಧಿಷ್ಟಾವಧಿ ಕಾಲ ಮುಷ್ಕರ ಕೈಗೊಂಡು ಒಂದು ವಾರಗಳ ಪರ್ಯಂತ ನಡೆಯಿತು. ಇದಕ್ಕೆ ಸ್ಪಂದಿಸಿದ ರಾಜ್ಯ ಸರಕಾರ ಗೌರವಧನವನ್ನು 1,500ರೂ.ಗಳಷ್ಟು ಏರಿಸಲು ಒಪ್ಪಿಕೊಂಡಿತು-1,000 ರೂ. ಅವರ ವೇತನ ಹಾಗೂ 500 ರೂ. ಕೋವಿಡ್‌ ಸಂಭಾವನೆ

ಅವರ ತ್ಯಾಗಗಳನ್ನೆಲ್ಲ ಕಡೆಗಣಿಸಲಾಗಿದೆ ಎಂದು ಶೋಭಾ ನಂಬಿದ್ದಾರೆ. “ಮುಖ್ಯಮಂತ್ರಿಗಳು ನಮ್ಮನ್ನು ಹೊಗಳಿದ್ದಾರೆ ಆದರೆ ನಮಗೆ ಯಾವುದೇ ರೀತಿಯ ನೈಜ ಸಹಾಯವನ್ನು ಮಾಡಿಲ್ಲ,” ಜುಲೈ ತಿಂಗಳ ಆರಂಭದಲ್ಲಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆಯವರು ಆಶಾ ಕಾರ್ಯಕರ್ತೆಯರನ್ನು ಹೊಗಳಿ ಗುಣಗಾನ ಮಾಡಿದ್ದಾರೆ , ಮತ್ತು ಅವರನ್ನು “ಯೋಧರು ಮತ್ತು ಹೀರೋಗಳು” ಎಂದು ಬಣ್ಣಿಸಿದ್ದಾರೆ. ಕೋವಿಡ್‌ ಅಲೆ ಇದ್ದಾಗ ಮತ್ತು ಆಗಮಿಸಿದಾಗ ಅದರ ವಿರುದ್ಧ ಹೋರಾಟ ಮಾಡುವಲ್ಲಿ ಇವರು ಪ್ರಮುಖ ಪಾತ್ರವಹಿಸುತ್ತಾರೆ.

ಆದರೆ ಶೋಭಾ ಅವರು ಪದಗಳಿಗಿಂತ ಹೆಚ್ಚಿನದನ್ನು ಬಯಸುತ್ತಾರೆ.  “ಅವರ ಮೆಚ್ಚುಗೆಯ ಮಾತುಗಳಿಂದ ನಮ್ಮ ಮನೆಯನ್ನು ನಡೆಸಲು ಆಗುವುದಿಲ್ಲ,”

ಮರಾಠ ಸಮುದಾಯಕ್ಕೆ ಸೇರಿದ ಶಹಬಾಯ್‌, ಒಂಟಿಯಾಗಿದ್ದು, ತನ್ನ ತಾಯಿ, ಇಬ್ಬರು ಸಹೋದರರು ಮತ್ತು ಅವರ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ. “13 ವರ್ಷಗಳ ಹಿಂದೆ ನಾನು ವಿಚ್ಛೇಧನಕ್ಕೊಳಗಾದೆ,” ಎಂದು ಹೇಳಿರುವ ಅವರು, “ಆ ನಂತರ ಗ್ರಾಮದಲ್ಲಿ ಸ್ವೀಕಾರಕ್ಕೊಳಗಾಗುವುದು ಅಷ್ಟು ಸುಲಭವಲ್ಲ. “ಜನರು ಅಂದುಕೊಂಡರು, ನನ್ನ ಕುಟುಂಬಕ್ಕೆ ನನ್ನಿಂದ ಸಾಕಷ್ಟು ನೋವಾಯಿತೆಂದು ಅಂದುಕೊಂಡೆ,” ಆರ್ಥಿಕ ಸ್ವಾತಂತ್ರ್ಯದಿಂದ ತನ್ನ ಸ್ವಾಭಿಮಾನವನ್ನು ಕಾಯ್ದುಕೊಳ್ಳುವುದನ್ನು ಶಹಬಾಯ್‌ ಬಯಸುತ್ತಾರೆ.

ಕುಟುಂಬದಲ್ಲಿ ಉಳಿದವರಿಗೆ ಕೋವಿಡ್‌ ತಂದಿರುವುದಕ್ಕೆ ಅವರಲ್ಲಿ ಈಗ ಪಾಪ ಪ್ರಜ್ಞೆ ಕಾಡುತ್ತಿದೆ. “ನನನ್ನು ನಾನು ಕ್ಷಮಿಸಿಕೊಳ್ಳಲಾರೆ,” ಎನ್ನುತ್ತಾರೆ ಶಹಬಾಯ್‌. “ನನ್ನಿಂದ ಅವರಿಗೆ ಏನಾದರೂ ಸಹಾಯ ಮಾಡಬೇಕೆಂಬ ಹಂಬಲ, ಆದರೆ ಹೇಗೆಂಬುದು ಗೊತ್ತಿಲ್ಲ, ಅವರು ನನ್ನನ್ನು ಆರೋಪಿಸುವುದು ನನಗೆ ಇಷ್ಟವಿಲ್ಲ,” ಅಲ್ಲದೆ ಅವರ ಕೆಲಸದ ಬಗ್ಗೆ ಗ್ರಾಮದಲ್ಲಿ ವಿಶೇಷವಾಗಿ ಪುರುಷರು ಅನುಚಿತವಾದ ಟೀಕೆಗಳನ್ನು ಮಾಡುತ್ತಾರೆ. “ಅವರು ಸಂಶಯ ವ್ಯಕ್ತಪಡಿಸುತ್ತಾರೆ, ಮತ್ತು ಯಾರಾದರೊಂದಿಗೆ ನಾನು ಮಾತನಾಡಿದಾಗ ಸಂಶಯ ವ್ಯಕ್ತಪಡಿಸುತ್ತಾರೆ,” ಎಂದಿರುವ ಅವರು, “ಜನರೊಂದಿಗೆ ಮಾತನಾಡುವುದೇ ನನ್ನ ಕೆಲಸ, ಏನು ಮಾಡುವುದು?”

Temporary workers hired at government hospitals during the pandemic became unemployed overnight when their contracts ended
PHOTO • Couretsy: Lahu Kharge
Temporary workers hired at government hospitals during the pandemic became unemployed overnight when their contracts ended
PHOTO • Couretsy: Lahu Kharge
Temporary workers hired at government hospitals during the pandemic became unemployed overnight when their contracts ended
PHOTO • Couretsy: Lahu Kharge

ಸರಕಾರಿ ಆಸ್ಪತ್ರೆಗಳಲ್ಲಿ ತಾತ್ಕಾಲಿಕ ನೆಲೆಯಲ್ಲಿ ಉದ್ಯೋಗ ಪಡೆದ ಕೆಲಸಗಾರರು, ಅವರ ಗುತ್ತಿಗೆ ಅವಧಿ ಮುಗಿಯುತ್ತಿದ್ದಂತೆ ರಾತ್ರಿಬೆಳಗಾಗುವುದರೊಳಗೆ ನಿರುದ್ಯೋಗಿಗಳಾಗುತ್ತಾರೆ

ಕೆಲಸದ ವೇಳೆ ಒರಟು ಜನರು ಮಾಡುವ ಟೀಕೆಗಳು ತನ್ನ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ, ಎನ್ನುತ್ತಾರೆ ಶೋಭಾ, “ಅವರನ್ನು ಯಾವ ಜಾಗದಲ್ಲಿ ಇಡಬೇಕು ಎಂಬುದು ನನಗೆ ಚೆನ್ನಾಗಿ ಗೊತ್ತಿದೆ,” ಇವರ ತೊಂದರೆಗಳು ಭಿನ್ನವಾಗಿದೆ- ಅವರ ಆದಾಯವು ಅವರ ಕುಟುಂಬದ ಮೂಲಭೂತ ಜೀವನೋಪಾಯವಾಗಿದೆ. “ನಾವು ಕೃಷಿ ಭೂಮಿಯನ್ನು ಹೊಂದಿಲ್ಲ,” ಎನ್ನುತ್ತಾರೆ ದಲಿತ ಸಮುದಾಯಕ್ಕೆ ಸೇರಿದ ಶೋಭಾ, “ನನ್ನ ಪತಿ ಕೃಷಿ ಕೂಲಿಯಾಳಾಗಿ ದುಡಿಯುತ್ತಾರೆ, ದಿನಕ್ಕೆ 300 ರೂ. ಗಳಿಸುತ್ತಾರೆ. ಅವರಿಗೆ ವಾರದಲ್ಲಿ 3-4 ದಿನ ಕೆಲಸವಿರುತ್ತದೆ. ಆದರೆ ಕೋವಿಡ್‌ ನಂತರ ಅದೂ ಕಡಿಮೆಯಾಯಿತು,"

ಕೋವಿಡ್‌-19 ಹರಡಿದ ಒಂದು ತಿಂಗಳ ನಂತರ ಶೋಭಾ ಕುಟುಂಬದವರು ಆಹಾರ ಧಾನ್ಯಗಳು ಮತ್ತು ಕಾಳುಗಳನ್ನು ಮನೆಗೆ ಕೊಂಡೊಯ್ದರು, ಅದು ಕೊಳೆಯುವ ಹಂತದಲ್ಲಿತ್ತು. “ಅದು ಶಾಲಾ ಮಕ್ಕಳಿಗಾಗಿ ಇಟ್ಟಿದ್ದು, [ಮಧ್ಯಾಹ್ನದ ಊಟಕ್ಕಾಗಿ] ಆದರೆ ಶಾಲೆ ಮುಚ್ಚಲ್ಪಟ್ಟಿತ್ತು, ಆಹಾರ ವಸ್ತುಗಳ ಅವಧಿಯೂ ಮುಗಿಸಿತ್ತು,” ಎಂದು ಅವರು ವಿವರಿಸಿದರು. ಅವೆಲ್ಲ ಹಾಳಾಗಿ ಕಸದ ರಾಶಿಗೆ ಹೋಗುವ ಬದಲು ಗ್ರಾಮದ ಪ್ರಾಥಮಿಕ ಶಾಲೆಯ ಶಿಕ್ಷಕರು ಆಹಾರ ಸಾಮಗ್ರಿಗಳನ್ನು ಅಗತ್ಯ ಇರುವವರಿಗೆ ಹಂಚುತ್ತಿದ್ದರು. “ನಾವು ಅದನ್ನು ನಮಗಾಗಿ ಬೇಯಿಸಿದೆವು, ನನ್ನ ಮಗಳು ಕೂಡ ಅದನ್ನೇ ತಿಂದಳು,”

ಇನ್ನೂ ಶಹಬಾಯ್‌ ಮತ್ತು ಶೋಭಾ ಅವರು ಆಶಾ ಪದಕ್ಕೆ ಇತರ ಭಾಷೆಗಳಲ್ಲಿ ಆಶಾ ಪದಕ್ಕೆ “ಭರವಸೆ” ಎಂಬ ಸಂಕ್ಷಿಪ್ತ ಅರ್ಥ ಇರಬಹುದು ಎಂದೇ ನಂಬಿದ್ದಾರೆ-ಅವರಿಗೆ ಆರ್ಥಿಕ ಶಕ್ತಿ ಸಿಗಬಹುದೆಂಬ ನಂಬಿಕೆಯೇ ಇಲ್ಲದಾಗಿದೆ,

ಬಹಳ ಸಮಯದಿಂದಲೂ ಉತ್ತಮ ಸಂಭಾವನೆ ಮತ್ತು ಕಾಯಂ ಉದ್ಯೋಗದ ಸ್ಥಾನಮಾನ ನೀಡುವಂತೆ ಆಶಾ ಕಾರ್ಯಕರ್ತೆಯರ ಬೇಡಿಕೆಯಾಗಿತ್ತು. ಜೂನ್‌ ತಿಂಗಳ ಮಧ್ಯದಲ್ಲಿ ಮಹಾರಾಷ್ಟ್ರದಲ್ಲಿರುವ ಆಶಾ ಕೆಲಸಗಾರರ ಸಂಘಟನೆ ಅನಿರ್ಧಿಷ್ಟಾವಧಿಯ ಮುಷ್ಕರ ಮಾಡಿತ್ತು, ಅದು ಒಂದು ವಾರದ ವರೆಗೂ ಸಾಗಿತ್ತು. ಇದಕ್ಕೆ ಸ್ಪಂದಿಸಿದ ರಾಜ್ಯ ಸರಕಾರ ಜುನೈ 1ರಿಂದ ಗೌರವ ಧನವನ್ನು 1,500ರೂ. ಗಳಿಗೆ- 1,000 ರೂ. ವೇತನ ಮತ್ತು 500ರೂ. ಕೋವಿಡ್‌ ಭತ್ಯೆ ನೀಡಲು ಒಪ್ಪಿಕೊಂಡಿತ್ತು. ಆಶಾ ಕಾರ್ಯಕರ್ತೆಯರಿಗೆ ವರದಿಯನ್ನು ಆನ್‌ಲೈನ್‌ನಲ್ಲಿ ದಾಖಲಿಸಲು ಅನುಕೂಲವಾಗುವಂತೆ ಎಲ್ಲರಿಗೂ ಒಂದು ಸ್ಮಾರ್ಟ್‌ ಫೋನ್‌ ನೀಡುವುದಾಗಿ ಮಹಾರಾಷ್ಟ್ರದ ಆರೋಗ್ಯ ಸಚಿನ ರಾಜೇಶ್‌ ಟೋಪೆ ಹೇಳಿದ್ದರು.

ಆದರೆ ನೀಡಿದ ಭರವಸೆ ಇನ್ನೂ ಈಡೇರಬೇಕಿದೆ ಎನ್ನುತ್ತಾರೆ ಇಂಡಿಯನ್ ಟ್ರೇಡ್‌ ಯೂನಿಯನ್‌ನ (ಸಿಐಟಿಯು) ರಾಜ್ಯ ಕಾರ್ಯದರ್ಶಿ ಶುಭಾ ಶಮೀಮ್‌, “ಆಶಾ ಕಾರ್ಯಕರ್ತೆಯರು ಉದ್ದೇಶಿತ ಸೌಕರ್ಯಗಳನ್ನು ಯಾವಾಗ ಪಡೆಯುತ್ತಾರೆ ಎಂಬುದರ ಬಗ್ಗೆ  ಸ್ಪಷ್ಟತೆ ಇಲ್ಲ,” ಎನ್ನುತ್ತಾರೆ ಅವರು. ರಾಜ್ಯದಲ್ಲಿ ಮೇ ತಿಂಗಳಿಂದ ಗೌರವ ಧನ ಬಾಕಿ ಇದೆ, ಕಳೆದ ವರ್ಷ ಭರವಸೆ ನೀಡಿದ್ದ ಕೋವಿಡ್‌ ಭತ್ಯೆ ಇದುವರೆಗೂ ಬಂದಿಲ್ಲ ಎನ್ನುತ್ತಾರೆ ಶಮೀಮ್‌,

From the left: Lahu Kharge, Prashant Sadare and Ankita Patil (on the left in the photo) with another nurse
PHOTO • Parth M.N.
From the left: Lahu Kharge, Prashant Sadare and Ankita Patil (on the left in the photo) with another nurse
PHOTO • Courtesy: Prashant Sadare
From the left: Lahu Kharge, Prashant Sadare and Ankita Patil (on the left in the photo) with another nurse
PHOTO • Parth M.N.

ಎಡದಿಂದ: ಲಾಹು ಖರ್ಗೆ, ಪ್ರಶಾಂತ್‌ ಸದಾರೆ ಮತ್ತು ಅಂಕಿತ ಪಾಟಿಲ್‌ (ಫೋಟೊದಲ್ಲಿ ಎಡಭಾಗದಲ್ಲಿ) ಇನ್ನೊಬ್ಬ ನರ್ಸ್‌ ಜತೆ. ಎಡ ಮತ್ತು ಮಧ್ಯದಲ್ಲಿ:  ಲಾಹು ಖರ್ಗೆ ಮತ್ತು ಪ್ರಶಾಂತ್‌ ಸದಾರೆ.  ಬಲ: ಅಂಕಿತ ಪಾಟೀಲ್‌ (ಎಡದಲ್ಲಿ) ಬೀಡ್‌ನಲ್ಲಿ ಕಾರ್ಮಿಕರ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದಕ್ಕೆ ಮುನ್ನ ಸಹೋದ್ಯೋಗಿಗಳ ಜತೆ

ರಾಜ್ಯದಲ್ಲಿ ಆಶಾ ಕಾರ್ಯಕರ್ತೆಯರು ಮುಷ್ಕರದಲ್ಲಿ ನಿರತರಾಗಿದ್ದಾಗ, ಬೀಡ್‌ನಲ್ಲಿ ಸುಮಾರು 250ಕ್ಕೂ ಹೆಚ್ಚು ಗುತ್ತಿಗೆ ಆಧಾರಿತ ಆರೋಗ್ಯ ಕೆಲಸಗಾರರು ತಮ್ಮ ಉದ್ಯೋಗವನ್ನು ಕಾಯಂಗೋಳಿಸಿ ಹಾಗೂ ಉತ್ತಮ ವೇತನ ನೀಡಿ ಎಂಬ ಬೇಡಿಕೆಯನ್ನಿಟ್ಟು ಮುಷ್ಕರದಲ್ಲಿ ತೊಡಗಿದ್ದರು.

ಸಾಂಕ್ರಾಮಿಕ ಕಾಲದಲ್ಲಿ ಸರಕಾರಿ ಆಸ್ಪತ್ರೆಗಳಲ್ಲಿ ಹೆಚ್ಚುತ್ತಿರುವ ರೋಗಿಗಳ ಪ್ರಮಾಣವನ್ನು ನಿಭಾಯಿಸಲು ತಾತ್ಕಾಲಿಕ ಆಧಾರದಲ್ಲಿ ಮುಖ್ಯವಾಗಿ ನರ್ಸಿಂಗ್‌ ಸಿಬ್ಬಂದಿ ಮತ್ತು ವಾರ್ಡ್‌ ಸಹಾಯಕರನ್ನು ಗುತ್ತಿಗೆಯ ಕೆಲಸಗಾರರನ್ನಾಗಿ ಸೇರಿಸಿಕೊಳ್ಳಲಾಗಿತ್ತು. ಗುತ್ತಿಗೆಯ ಅವಧಿ ಮುಗಿದ ಬಳಿಕ ಮತ್ತು ರೋಗಿಗಳ ಸಂಖ್ಯೆ ಇಳಿಮುಖವಾದ ನಂತರ ಅನೇಕರು ನಿರುದ್ಯೋಗಿಗಳಾದರು. “ಇದು ಬಳಸಿರಿ ಮತ್ತು ಎಸೆಯಿರಿ ನಿಯಮಕ್ಕಿಂತ ಭಿನ್ನವಾದುದಲ್ಲ,” ಎನ್ನುತ್ತಾರೆ 29 ವರ್ಷದ ಪ್ರಶಾಂತ್‌ ಸದಾರೆ. ಇವರು ಬೀಡ್‌ ನಗರದಿಂದ 30 ಕಿಮೀ ದೂರದಲ್ಲಿರುವ ವಾದ್ವಾನಿ ಕೋವಿಡ್‌ ಚಿಕಿತ್ಸಾ ಕೇಂದ್ರದಲ್ಲಿ ವಾರ್ಡ್‌ ಸಹಾಯಕರಾಗಿ ಕೆಲಸ ಮಾಡಿದ್ದರು. “ಈ ವರ್ಷದ ಮೇ ತಿಂಗಳಲ್ಲಿ ನನ್ನನ್ನು ಕೆಲಸಕ್ಕೆ ಸೇರಿಸಕೊಳ್ಳಲಾಯಿತು, ಎರಡು ತಿಂಗಳ ನಂತರ ಕೆಲಸ ಬಿಡುವಂತೆ ಹೇಳಿದರು,”

ಪ್ರಶಾಂತ್‌ ಅವರ ಹೆತ್ತವರು ಕೃಷಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದು, ಜೀವನೋಪಾಯಕ್ಕಾಗಿ ಸಂಕಷ್ಟಪಡುತ್ತಿದ್ದಾರೆ. ಅವರು ಕೆಲಸಕ್ಕೆ ಸೇರಿಕೊಂಡಾಗ ದಿನಕ್ಕೆ 400ರೂ. ವೇತನವಿದ್ದಿತ್ತು, ಇದರಿಂದ ತಮ್ಮ ಹೆತ್ತವರಿಗೆ ಅನುಕೂವಾಗಬಹುದು ಎಂದು ಗ್ರಹಿಸಿದ್ದರು. “ನನ್ನ ಬದುಕನ್ನೇ ಅಪಾಯಕ್ಕೆ ಒಡ್ಡಿ ಕೆಲಸ ಮಾಡಿದೆ, ಆಸ್ಪತ್ರೆಗಳು ರೋಗಿಗಳಿಂದ ತುಂಬಿ ತುಳುಕುತ್ತಿರುವಾಗ ಹೇಳಿದ ಎಲ್ಲ ಕೆಲಸಗಳನ್ನೂ ಮಾಡಿದೆ,” ಎಂದು ಅವರು ಹೇಳಿದರು. “ಕೋವಿಡ್‌ ವಾರ್ಡನ್ನು ಸ್ವಚ್ಛ ಮಾಡುವುದರಿಂದ ಹಿಡಿದು, ಕೋವಿಡ್‌ ರೋಗಿಗಳಿಗೆ ಆಹಾರ ತಿನಿಸುವ ವರೆಗೆ ಎಲ್ಲ ಕೆಲಸವನ್ನೂ ಮಾಡಿರುವೆ, ನಮ್ಮ ಮಾನಸಿಕ ಒತ್ತಡ ಎಷ್ಟಿರಬಹುದು?, ಯಾರಾದರೂ ಆ ಬಗ್ಗೆ ಯೋಚಿಸಿದ್ದಾರಾ?.” ಈಗ ಅವರು ಖಾಸಗಿ ಶಾಲೆಯಲ್ಲಿ ಅರೆಕಾಲಿಕ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದು, ತಿಂಗಳಿಗೆ 5,000 ರೂ. ಗಳಿಸುತ್ತಿದ್ದಾರೆ.

24 ವರ್ಷದ ಲಾಹು ಖರ್ಗೆ ವಾದ್ವಾನಿಯ ಅದೇ ಕೋವಿಡ್‌ ಕೇಂದ್ರದಲ್ಲಿ ವಾರ್ಡ್‌ ಸಹಾಯಕರಾಗಿ ಕೆಲಸ ಮಾಡುತ್ತಿದ್ದು, ಜಾಹೀರಾತೊಂದನ್ನು ನೋಡಿ ಕೆಲಸಕ್ಕೆ ಅರ್ಜಿ ಹಾಕಿದ್ದರು. ಆಯ್ಕೆಯಾಗಲು ಅಭ್ಯರ್ಥಿಗಳು 10ನೇ ತರಗತಿಯಲ್ಲಿ ಉತ್ತೀರ್ಣರಾಗಬೇಕಿತ್ತು. ಸ್ಥಳೀಯ ಚಿಕ್ಕ ಬ್ಯಾಂಕೊಂದರಲ್ಲಿ ಪಿಗ್ಮಿ ಸಂಗ್ರಾಹಕರಾಗಿ ಚಿಕ್ಕ ಠೇವಣಿಗಳನ್ನು ಸಂಗ್ರಹಿಸುತ್ತಿದ್ದ ಲಾಹು, ಆಯ್ಕೆಯಾದ ನಂತರ ಪಿಗ್ಮಿ ಸಂಗ್ರಹದ ಕೆಲಸವನ್ನು ಬಿಟ್ಟರು. “ನಮಗೆ ಮೂರು ತಿಂಗಳ ಗುತ್ತಿಗೆ ಸಿಕ್ಕಿತು, ಅವಧಿ ಮುಗಿದು ಒಂದು ದಿನದ ಬಳಿಕ ಗುತ್ತಿಗೆ ನವೀಕರಣವಾಗುತ್ತಿತ್ತು,”  ಎನ್ನುತ್ತಾರೆ ಖರ್ಗೆ, ಅವರು ಈಗಲೂ ಅದೇ ಕೆಲಸದಲ್ಲಿದ್ದಾರೆ. “ನಮ್ಮ ಕಾರ್ಮಿಕ ಕಾನೂನಿನಲ್ಲಿ, ಒಬ್ಬ ವ್ಯಕ್ತಿ ಒಂದು ವರ್ಷಗಳ ಕಾಲ ನಿರಂತರವಾಗಿ ಕೆಲಸ ಮಾಡಿದರೆ ಅವರನ್ನು ಕಾಯಂಗೊಳಿಸಬೇಕು, ಈ ಕಾರಣಕ್ಕಾಗಿಯೇ ಪ್ರತಿ ಇಂಥ ಗುತ್ತಿಗೆಗಳನ್ನು ಪ್ರತಿ ಕೆಲವು ತಿಂಗಳಿಗೊಮ್ಮೆ ಒಂದು ದಿನ ಅಂತರ ನೀಡಿ ನವೀಕರಣಗೊಳಿಸುತ್ತಾರೆ,”

Left: Contractual health workers in Beed waiting to speak to the ministers on June 18. Right: The police charging with lathis
PHOTO • Couretsy: Lahu Kharge
Left: Contractual health workers in Beed waiting to speak to the ministers on June 18. Right: The police charging with lathis
PHOTO • Couretsy: Lahu Kharge

ಎಡ: ಗುತ್ತಿಗೆಯ ಆರೋಗ್ಯ ಕೆಲಸಗಾರರು ಬೀಡ್‌ನಲ್ಲಿ ಜೂನ್‌ 18ರಂದು ಸಚಿವರೊಂದಿಗೆ ಮಾತುಕತೆ ನಡೆಸಲು ಕಾಯತ್ತಿರುವುದು, ಬಲ: ಲಾಠಿ ಪ್ರಹಾರ ನಡೆಸುತ್ತಿರುವ ಪೊಲೀಸರು

ಬೀಡ್‌ನಲ್ಲಿ ಗುತ್ತಿಗೆ ಆರೋಗ್ಯ ಕೆಲಸಗಾರರು ಮಾಡುತ್ತಿರುವ ಮುಷ್ಕರದಲ್ಲಿ ಅರ್ಥಹೀನ ಉದ್ಯೋಗ ನಿಯಮ ಮತ್ತು ಉದ್ಯೋಗ ಕಾಯಂಗೊಳಿಸಲು ಒತ್ತಡ ಇವು ಪ್ರಮುಖ ಅಂಶವಾಗಿತ್ತು. ಅವರಿಗೆ ಜೂನ್‌ 18ರಂದು ಕೋವಿಡ್‌ ಪರಿಶೀಲನಾ ಸಭೆ ನಡೆಸಲು ಬೀಡ್‌ಗೆ ಆಗಮಿಸುತ್ತಿರುವ  ಉಪಮುಖ್ಯಮಂತ್ರಿ ಅಜಿತ್‌ ಪವಾರ್‌, ರಕ್ಷಣಾ ಮಂತ್ರಿ ಧನಂಜಯ್‌ ಮುಂಢೆ ಮತ್ತು ಆರೋಗ್ಯ ಸಚಿವರಾದ ರಾಜೇಶ್‌ ಟೋಪ್‌ ಅವರ ಗಮನ ಸೆಳೆಯುವ ನಿರೀಕ್ಷೆಯಲ್ಲಿದ್ದಿತ್ತು,

“ಆದರೆ ಅವರು ನಮ್ಮನ್ನು ನಿರ್ಲಕ್ಚ್ಯ ಮಾಡಿದರು,”  ಎಂದು ಅಂದು ಮುಷ್ಕರದಲ್ಲಿ ಪಾಲ್ಗೊಂಡಿದ್ದ 29 ವರ್ಷದ ಅಂಕಿತಾ ಪಾಟೀಲ್‌ ಹೇಳುತ್ತಾರೆ. “ನಮಗೆ ಅವರ ಸಮಯದಲ್ಲಿ ಕೇವಲ ಐದು ನಿಮಿಷ ಬೇಕಾಗಿತ್ತು, ನಾವು ನಮ್ಮ ಬೇಡಿಕೆಗಳನ್ನು ಕಾಗದದಲ್ಲಿ ಬರೆದಿದ್ದೆವು, ಜಿಲ್ಲಾಧಿಕಾರಿಗಳಿಗೆ ಆ ಬೇಡಿಕೆಗಳನ್ನು ಸಲ್ಲಿಸುವಂತೆ ನಮಗೆ ಸೂಚಿಸಿದ್ದರು, ಆ ಸಂದರ್ಭ ಒಬ್ಬ ಸಿಬ್ಬಂದಿ ನಮ್ಮಲ್ಲಿದ್ದ ಮನವಿ ಪತ್ರವನ್ನು ಕಸಿದುಕೊಂಡೊಯ್ದ,”  ಅವರಲ್ಲೊಬ್ಬ ಸಚಿವರು ಹೊರಟುಹೋಗುವಂತೆ ಅವರಿಗೆ ಸೂಚಿಸಿದರು, “ನಮ್ಮ ಬಗ್ಗೆ ತಿರುಗಿಯೂ ನೋಡಲಿಲ್ಲ,” ಎಂದು ಅವರು ಹೇಳಿದರು.

ಈ ರೀತಿಯ ಒರಟಾದ ವರ್ತನೆಯಿಂದ ಸಿಟ್ಟುಗೊಂಡ ಕೆಲವು ಪ್ರತಿಭಟನಾಕಾರರು ಸಚಿವರ ವಾಹವನ್ನು ತೆಡೆಯಲು ಯತ್ನಿಸಿದರು . ಅವರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಿದರು. “ಆರೋಗ್ಯ ಕಾರ್ಯಕರ್ತರೊಂದಿಗೆ ನಡೆದುಕೊಳ್ಳುವ ರೀತಿಯೇ ಇದು?” ಎನ್ನುತ್ತಾರೆ ಅಂಕಿತಾ. “ಯಾವುದೇ ರೀತಿಯಲ್ಲಿ ವಿರಾಮ ತೆಗೆದುಕೊಳ್ಳದೆ ನಾವು ನಮ್ಮ ಬದುಕನ್ನೇ ಅಪಾಯಕ್ಕೆ ಸಿಲುಕಿಸಿಕೊಂಡು ತಿಂಗಳುಗಳ ಕಾಲ ಕೊರೋನಾ ಪೀಡಿತರೊಂದಿಗೆ ಇದ್ದೆವು, ನಾವು ಮತ್ತು ನಮ್ಮ ಕುಟುಂಬದವರ ಬದುಕುನ್ನು ಅಪಾಯದಲ್ಲಿರಿಸಿದೆವು, ಇವರಿಗೆ ನಮ್ಮೊಂದಿಗೆ ಕೇವಲ ಐದು ನಿಮಿಷ ಮಾತನಾಡಲು ಸಾಧ್ಯವಿಲ್ಲವೇ? ನಮ್ಮನ್ನು ಗೌರವದಿಂದ ಕಾಣಬೇಕೆಂದು ಬಯಸುತ್ತೇನೆ,”

ವಾದ್ವಾನಿಯಲ್ಲಿ ನರ್ಸ್‌ ಆಗಿ ಕೆಲಸ ಮಾಡುತ್ತಿರುವ ಅಂಕಿತಾ, ತಿಂಗಳಿಗೆ 20,000 ರೂ. ಸಂಪಾದಿಸುತ್ತಾರೆ. “ನನಗೆ ಈಗಲೂ ಕೆಲಸ ಇಜದೆ, ಆದರೆ ನಾಳೆ ನಾನು ನಿರುದ್ಯೋಗಿಯಾಗಬಹುದು,” ಎನ್ನುತ್ತಾರೆ ಅಂಕಿತಾ. “ಅಲ್ಲಿ ಈಗಾಗಲೇ ಮಾನಸಿಕ ದಣಿವು, ಭಾವನಾತ್ಮಕ ಒತ್ತಡ ಇದೆ. ನಮಗೆ ಕೆಲಸದ ಭದ್ರತೆ ಬೇಕು. ಕೋವಿಡ್‌ ಎರಡನೇ ಅಲೆಯ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ನಮ್ಮ ಗೆಳೆಯರನ್ನು ಕೆಲಸದಿಂದ ತೆಗೆದುಹಾಕಿರುವುದನ್ನು ನಾವು ನೋಡಿದ್ದೇವೆ, ಈ ಪರಿಸ್ಥಿತಿಯನ್ನು ನಾವು ಮುಂದೊಂದು ದಿನ ಎದುರಿಬೇಕಾಗಬಹುದು,”

ಋಣಾತ್ಮಕವಾಗಿ ಯೋಚಿಸವುದಾದರೆ ಕೋವಿಡ್‌ ಮೂರನೇ ಅಲೆ ಆರಂಭಗೊಂಡರೆ ಈ ಗುತ್ತಿಗೆಯ ಆರೋಗ್ಯ ಕಾರ್ಯಕರ್ತರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಬಹುದು, ಆದರೆ ಯಾರೂ ಕೂಡ ಅದನ್ನು ನಿರೀಕ್ಷಿಸುವುದಿಲ್ಲ.

ಸ್ವತಂತ್ರ ಪತ್ರಿಕೋದ್ಯಮದಲ್ಲಿ ನಿರತ ವರದಿಗಾರರಿಗೆ ಪುಲಿಟ್ಜರ್‌ ಕೇಂದ್ರ ನೀಡುವ ನೆರವಿನಲ್ಲಿ ಸಿದ್ಧಗೊಂಡ ಸರಣಿ ವರದಿಗಳಲ್ಲಿ ಇದೂ ಒಂದು.

ಅನುವಾದ: ಸೋಮಶೇಖರ ಪಡು ಕರೆ

Parth M.N.

Parth M.N. is a 2017 PARI Fellow and an independent journalist reporting for various news websites. He loves cricket and travelling.

Other stories by Parth M.N.
Translator : Somashekar Padukare

Somashekar Padukare is a Udupi based sports journalist. From last 25 years he is working as a sports journalist in different Kannada Daily.

Other stories by Somashekar Padukare