ಆಗಸ್ಟ್‌ 5ರಂದು ಜಪಾನಿನ ಒಲಿಂಪಿಕ್ಸ್‌ನಲ್ಲಿ ಕುಸ್ತಿಪಟು ರವಿ ದಹಿಯಾ ಬೆಳ್ಳಿ ಪದಕವನ್ನು ಸ್ವೀಕರಿಸಲು ವಿಜಯ ವೇದಿಕೆ ಮೇಲೆ ನಿಂತಾಗ ಹೃಷಿಕೇಶ್‌ ಘಾಡ್ಗೆ ಅತ್ಯಂತ ಭಾವುಕರಾಗಿದ್ದರು.

ಆ ನೈಜ ಸಂಭ್ರಮ ಆ ಕ್ಷಣಕ್ಕೆ ಮಾತ್ರವಾಗಿತ್ತು. ಮಹಾರಾಷ್ಟ್ರದ ಲಾತೂರ್‌ ಜಿಲ್ಲೆಯ 20ರ ಹರೆಯದ ಮಹಾತ್ವಾಕಾಂಕ್ಷೆಯ ಕುಸ್ತಿಪಟು 2020ರ ಮಾರ್ಚ್‌ನಲ್ಲಿ ಕೋವಿಡ್‌ 19 ಏಕಾಏಕಿ ಪ್ರಸರಣದ ಕಾರಣ ಕಳೆದ 18 ತಿಂಗಳಿಂದ ಹತಾಶೆಗೊಳಗಾಗಿದ್ದರು. ಮತ್ತೆ ನಿರೀಕ್ಷಿತ ಭವಿಷ್ಯವೂ ಯಾವುದೇ ರೀತಿಯ ಬದಲಾವಣೆಯನ್ನು ಕಾಣುವ ಸ್ಥಿತಿಯಲ್ಲಿಲ್ಲ. “ಇದು ಖಿನ್ನತೆಯನ್ನುಂಟು ಮಾಡುವಂಥದ್ದು,” ಎಂದು ಹೇಳಿದರವರು, “ನನಗಿನ್ನು ಕಾಲಾವಕಾಶ ಇಲ್ಲವೆಂದೆನಿಸುತ್ತಿದೆ,”

ಉತ್ಸುಕತೆಯಿಂದ ಕೂಡಿದ ನಗುವಿನೊಂದಿಗೆ ಅವರು ವ್ಯಥೆಯನ್ನುಂಟುಮಾಡುವ ಸಮಸ್ಯೆಯನ್ನು ಹೇಳಿದರು: “ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಮತ್ತು ಕುಸ್ತಿಯನ್ನು ಅಭ್ಯಾಸ ಮಾಡುವುದು ನಿಮ್ಮಿಂದ ಹೇಗೆ ಸಾಧ್ಯ?”

ತನಗೆ ತಾನೇ ಖುಷಿಯಿಂದಿರಲು, ಹೃಷಿಕೇಶ್‌, ಒಸ್ಮಾನಾಬಾದ್‌ ನಗರದ ಹೊರವಲಯದಲ್ಲಿರುವ ಹತ್ಲಾಯ್‌ ಕುಸ್ತಿ ಸಂಕೀರ್ಣದಲ್ಲಿ ತನ್ನ ಗೆಳೆಯರೊಂದಿಗೆ ಟೋಕಿಯೋ 2020 ಒಲಿಂಪಿಕ್ಸ್‌ ಆಸಕ್ತಿಯಿಂದ ನೋಡಿದ. ಆಗಸ್ಟ್‌ 8ರಂದು ಕ್ರೀಡಾಕೂಟ ಕೊನೆಗೊಂಡಾಗ ಭಾರತ ಏಳು ಪದಕಗಳೊಂದಿಗೆ ಇದುವರೆಗೂ ಮಾಡಿರದ ಸಾಧನೆ ಮಾಡಿತ್ತು, -ಅದರಲ್ಲಿ ಎರಡು ಪದಕ ಕುಸ್ತಿಯಲ್ಲಿ ಗೆದ್ದಿತ್ತು.

ಪುರುಷರ ಫ್ರೀ ಸ್ಟೈಲ್‌ 57 ಕೆಜಿ ಮತ್ತು 65 ಕೆಜಿ ವಿಭಾಗದಲ್ಲಿ ಅನುಕ್ರಮವಾಗಿ ದಹಿಯಾ ಬೆಳ್ಳಿ ಪದಕ ಮತ್ತು ಬಜರಂಗ್‌ ಪೂನಿಯಾ ಕಂಚಿನ ಪದಕ ಗೆದ್ದಿರುವುದು ಸಾಮಾನ್ಯ ಕುಟುಂಬದಿಂದ ಬಂದ ಹೃಷಿಕೇಶ್‌ ಅವರಂಥ ಕುಸ್ತಿಪಟುಗಳಲ್ಲಿ ಸ್ಫೂರ್ತಿಯನ್ನುಂಟು ಮಾಡಿತ್ತು. ಹರಿಯಾಣದ ನಹ್ರಿ ಗ್ರಾಮದ ಗೇಣಿದಾರ ಬೇಸಾಯಗಾರರೊಬ್ಬರ ಮಗನಾದ 23 ವರ್ಷದ ದಹಿಯಾ, ಟೋಕಿಯೋದಲ್ಲಿ ಗೆದ್ದ ನಂತರ ಪ್ರೆಸ್‌ ಟ್ರಸ್ಟ್‌ ಆಫ್‌ ಇಂಡಿಯಾದ ಜತೆ ಮಾತನಾಡಿ, ತನ್ನ ಯಶಸ್ಸಿಗೆ ಕುಂಟುಂಬ ಬಹಳ ತ್ಯಾಗ ಮಾಡಿದೆ ಎಂದು ಹೇಳಿದರು. ಆದರೆ ಮೂವರು ಒಲಿಂಪಿಯನ್ನರನ್ನು ನೀಡಿದ ಅವರ ಊರಿನಲ್ಲಿ ಮೂಲ ಸೌಕರ್ಯಗಳ ಕೊರತೆ ಇದೆ. “ಗ್ರಾಮಕ್ಕೆ ಎಲ್ಲದರ ಅಗತ್ಯ ಇದೆ, ಉತ್ತಮ ಶಾಲೆ ಜತೆಯಲ್ಲಿ ಕ್ರೀಡಾ ಸೌಲಭ್ಯದ ಅಗತ್ಯ,” ಎಂದು ಹೇಳಿದರು.

Left: Rushikesh Ghadge moved from Latur to Osmanabad to train in wrestling. Right: Practice session in the wrestling pit at Hatlai Kusti Sankul in Osmanabad
PHOTO • Parth M.N.
Left: Rushikesh Ghadge moved from Latur to Osmanabad to train in wrestling. Right: Practice session in the wrestling pit at Hatlai Kusti Sankul in Osmanabad
PHOTO • Parth M.N.

ಎಡ : ಕುಸ್ತಿ ತರಬೇತಿ ಪಡೆಯಲು ಲಾತೂರ್‌ನಿಂದ ಒಸ್ಮಾನಾಬಾದ್‌ಗೆ ಸ್ಥಳಾಂತರಗೊಂಡ ಹೃಷಿಕೇಶ್‌ ಘಾಡ್ಗೆ. ಬಲ: ಒಸ್ಮಾನಾಬಾದ್‌ನ ಹತ್ಲಾಯ್‌ ಕುಸ್ತಿ ಸಂಕೀರ್ಣದಲ್ಲಿರುವ ಕುಸ್ತಿ ಕಣದಲ್ಲಿ ಅಭ್ಯಾಸದ ಸಮಯ

ದಹಿಯಾ ಏನು ಮಾತನಾಡುತ್ತಿದ್ದಾರೆಂದು ಹೃಷಿಕೇಶ್‌ಗೆ ಗೊತ್ತು. ಅವರು ಮೂರು ವರ್ಷಗಳ ಹಿಂದೆ ಕುಸ್ತಿಯ ವ್ಯಾಮೋಹದಲ್ಲಿ ಲಾತೂರ್‌ನ ಟಾಕಾ ಗ್ರಾಮದಲ್ಲಿರುವ ತನ್ನ ಮನೆಯನ್ನು ತೊರೆದವರು. “ನಮ್ಮ ಊರಿನಲ್ಲಿ ಯಾವುದೇ ಸೌಲಭ್ಯಗಳು ಇರಲಿಲ್ಲ,” ಎಂದು ಹೇಳಿದರವರು, 65 ಕಿ,ಮೀ, ದೂರದಲ್ಲಿರುವ ಒಸ್ಮಾನಾಬಾದ್‌ಗೆ ಯಾಕೆ ಸ್ಥಳಾಂತರಗೊಂಡೆ ಎಂಬುದನ್ನು ವಿವರಿಸಿದರು, “ಒಸ್ಮಾನಾಬಾದ್‌ನಲ್ಲಿ ಉತ್ತಮ ಕೋಚ್‌ಗಳಿದ್ದಾರೆ. (ಯಶಸ್ವಿ ಕುಸ್ತಿಪಟು) ಆಗಲು ಇಲ್ಲಿ ನನಗೆ, ಉತ್ತಮ ಅವಕಾಶಗಳಿವೆ,”

ಕೋಲಿ ಸಮುದಾಯಕ್ಕೆ ಸೇರಿದ್ದರಿಂದ ಹೃಷಿಕೇಶ್‌ಗೆ ಸ್ಥಳಾಂತರದ ತೀರ್ಮಾನ ಕೈಗೊಳ್ಳುವುದು ಅಷ್ಟು ಸುಲಭವಾಗಿರಲಿಲ್ಲ. ಅವರ ತಂದೆ ನಿರುದ್ಯೋಗಿ, ತಾಯಿ ಕಸೂತಿಯಿಂದ ಬಂದ ತಿಂಗಳ 7,000-8,000 ರೂಪಾಯಿಯಲ್ಲಿ ಮನೆಯ ಖರ್ಚನ್ನು ನಿಭಾಯಿಸುತ್ತಿದ್ದರು. “ಅದೃಷ್ಟವಶಾತ್‌, ಇಲ್ಲಿ ನನಗೊಬ್ಬರು ಉತ್ತಮ ಕೋಚ್‌ ಸಿಕ್ಕಿದರು, ಅವರು ನನಗೆ ಅಕಾಡೆಮಿಯ ಹಾಸ್ಟೆಲ್‌ನಲ್ಲಿ ಉಚಿತವಾಗಿ ಉಳಿದುಕೊಳ್ಳಲು ನೆರವಾದರು,” ಎಂದು ಅವರು ಹೇಳಿದರು. “ನನ್ನ ತಾಯಿ ನನಗೆ ಖರ್ಚಿಗಾಗಿ (ರೂ. 2,000-3,000) ಅಗತ್ಯ ಹಣವನ್ನು ಕಳುಹಿಸುತ್ತಿದ್ದರು. ಇದರಿಂದಾಗಿ ಎಲ್ಲವೂ ಸಾಂಗವಾಗಿ ನಡೆಯುತ್ತಿತ್ತು,”

ಒಸ್ಮಾನಾಬಾದ್‌ಗೆ ಬಂದ ನಂತರ ಹೃಷಿಕೇಶ್‌ ಉತ್ತಮ ಬದ್ಧತೆ ಮತ್ತು ಭರವಸೆಯನ್ನು ಮೂಡಿಸಿದ ಎಂದು ಹತ್ಲಾಯ್‌ ಕುಸ್ತಿ ಸಂಕೀರ್ಣವನ್ನು ನಡೆಸುತ್ತಿರುವ ಅವರ ಕೋಚ್‌ 28 ವರ್ಷದ ಕಿರಣ್‌ ಜಾವಾಲ್ಗೆ ಹೇಳುತ್ತಾರೆ. “ಜಿಲ್ಲಾ ಮಟ್ಟದ ಟೂರ್ನಿಗಳಲ್ಲಿ ಆತ ಉತ್ತಮ ಪ್ರದರ್ಶನ ತೋರಿದ್ದಾನೆ, ಆತನ ಮುಂದಿನ ಗುರಿ ರಾಷ್ಟ್ರೀಯ ಚಾಂಪಿಯನ್ಷಿಪ್‌ ಆಗಿತ್ತು,” ಎಂದರು. “ಆ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ತೋರಿದರೆ ಕ್ರೀಡಾ ಕೋಟಾದಡಿ ಸರಕಾರಿ ಉದ್ಯೋಗಕ್ಕೆ ಅವಕಾಶ ಪಡೆಯಬಹುದು,”

ಆದರೆ ಸಾಂಕ್ರಾಮಿಕ ರೋಗ ಬದುಕನ್ನು ಸ್ತಬ್ಧಗೊಳಿಸಿತು. ಹೃಷಿಕೇಶ್‌ ತಾಯಿ ಕೆಲಸವನ್ನು ಕಳೆದುಕೊಂಡರು, ಸ್ವಲ್ಪ ಹಣವನ್ನು ಗಳಿಸುತ್ತಿದ್ದ ಕುಸ್ತಿ ಟೂರ್ನಿಗಳೂ ರದ್ದಾದವು, “ಸಾಂಕ್ರಾಮಿಕ ಕಾಲದಲ್ಲಿ ಅನೇಕ ಕುಸ್ತಿಪಟುಗಳು ಕುಸ್ತಿಯಿಂದ ದೂರವಾದರು ಮತ್ತು ಕೂಲಿ ಕೆಲಸಗಳಲ್ಲಿ ತೊಡಗಿಕೊಂಡರು,” ಎಂದು ಜಾವಾಲ್ಗೆ ಹೇಳಿದರು. “ಅವರಿಂದ ಮತ್ತೆ ತರಬೇತಿಯಲ್ಲಿ ಪಾಲ್ಗೊಳ್ಳಲು ಆಗಲಿಲ್ಲ,”

Many students of the wrestling academy have stopped training because they cannot afford the expensive diet anymore
PHOTO • Parth M.N.

ದುಬಾರಿ ಆಹಾರ ಕ್ರಮವನ್ನು ಅನುಸರಿಸಲು ಅವರಿಂದ ಸಾಧ್ಯವಾಗದ ಕಾರಣ ಅಕಾಡೆಮಿಯ ಅನೇಕ ಕುಸ್ತಿ ವಿದ್ಯಾರ್ಥಿಗಳು ತರಬೇತಿಯನ್ನು ನಿಲ್ಲಿಸಿದರು

ಕುಸ್ತಿಪಟುಗಳಿಗೆ ಆರೋಗ್ಯಕರ ಆಹಾರ ಪದ್ಧತಿಯನ್ನು ಕಾಯ್ದುಕೊಳ್ಳುವುದು ಪ್ರಮುಖವಾದುದು-ಅದು ದುಬಾರಿಯೂ ಕೂಡ. “ಕುಸ್ತಿಪಟುವೊಬ್ಬ ತಿಂಗಳಿಗೆ ಸರಾಸರಿಯಾಗಿ ನಾಲ್ಕು ಕೆಜಿ ಬಾದಾಮಿ ಸೇವಿಸುತ್ತಾನೆ,” ಎನ್ನುತ್ತಾರೆ ಜಾವಾಲ್ಗೆ. “ಅದರ ಜೊತೆಯಲ್ಲಿ 1.5 ಲೀಟರ್‌ ಹಾಲು ಮತ್ತು ಎಂಟು ಮೊಟ್ಟೆಗಳು ಬೇಕು. ಕೇವಲ ಆಹಾರಕ್ಕೆ ತಿಂಗಳಿಗೆ 5,500ರೂ, ಬೇಕಾಗುತ್ತದೆ. ನನ್ನ ಆಕಾಡೆಮಿಯನ್ನು ಹೆಚ್ಚಿನ ಕುಸ್ತಿಪಟುಗಳು ತೊರೆದು ಹೋಗಿರುವುದು ಈ ಆಹಾರದ ಮೊತ್ತವನ್ನು ಭರಿಸಲಾಗದೆ,” 80 ವಿದ್ಯಾರ್ಥಿಗಳಿದ್ದ ಅಕಾಡೆಮಿಯಲ್ಲಿ ಈಗ ಕೋಚ್‌ಗೆ ಉಳಿದಿರುವುದು ಕೇವಲ 20 ವಿದ್ಯಾರ್ಥಿಗಳು.

ಅವರಲ್ಲಿ ಇನ್ನೂ ಭರವಸೆಯನ್ನು ಕಳೆದುಕೊಳ್ಳದ ವಿದ್ಯಾರ್ಥಿಯೆಂದರೆ ಅದು ಹೃಷಿಕೇಶ್.

ತನ್ನ ಬದುಕಿಗಾಗಿ ಕೋಚ್‌, ಕುಸ್ತಿ ಆಕಾಡೆಮಿಯ ಪಕ್ಕದಲ್ಲಿರುವ ಕೆರೆಗೆ ಮೀನುಗಾರಿಕೆಗಾಗಿ ಹೋಗುತ್ತಿದ್ದು, ಹಿಡಿದ ಮೀನನ್ನು ಹತ್ತಿರದ ಚಿಕ್ಕ ಹೊಟೇಲ್‌ಗಳಿಗೆ ಮಾರುತ್ತಿದ್ದಾರೆ. “ನಾನು ಕೂಡ ಒಸ್ಮಾನಾಬಾದ್‌ನಲ್ಲಿರುವ ಗಾರ್ಮೆಂಟ್‌ ಫ್ಯಾಕ್ಟರಿಯಲ್ಲಿ ಅರೆಕಾಲಿಕ ಕೆಲಸವನ್ನು ಮಾಡುತ್ತಿದ್ದೇನೆ. ಎಲ್ಲ ಸೇರಿ ತಿಂಗಳಿಗೆ 10,000ರೂ ಸಂಪಾದಿಸುತ್ತಿದ್ದೇನೆ,” ಎನ್ನುತ್ತಾರೆ. ಮುಂದುವರಿದು ಮಾತನಾಡಿದ ಅವರು, 5,000 ಉಳಿಸಿಕೊಂಡು ಉಳಿದುದನ್ನು ಮನೆಗೆ ಕಳುಹಿಸುತ್ತೇನೆ ಎಂದರು. ಒಸ್ಮಾನಾಬಾದ್‌ನ ಮಕಾನಿ ಗ್ರಾಮದಲ್ಲಿರುವ ಭಾರತ್‌ ವಿದ್ಯಾಲಯದಲ್ಲಿ ಹೃಷಿಕೇಶ್‌ ಎರಡನೇ ವರ್ಷದ ಬಿಎ ವಿದ್ಯಾರ್ಥಿ ಕೂಡ ಆಗಿದ್ದಾರೆ. ಅವರಲ್ಲಿ ಸ್ವಂತ ಸ್ಮಾರ್ಟ್‌ ಫೋನ್‌ ಇಲ್ಲದ ಕಾರಣ ಗೆಳೆಯನ ಫೋನ್‌ ಬಳಸಿ ಆನ್‌ಲೈನ್‌ ತರಗತಿಗಳಿಗೆ ಹಾಜರಾಗುತ್ತಿದ್ದಾರೆ,

ಹೃಷಿಕೇಶ್‌ ತಾಯಿಗೆ ಮಗನ ಕಷ್ಟಗಳ ಬಗ್ಗೆ ಗೊತ್ತಿರಲಿಲ್ಲ. “ನನ್ನ ತಾಯಿ ಈಗಾಗಲೇ ನನ್ನ ಭವಿಷ್ಯದ ಬಗ್ಗೆ ಬಹಳ ಚಿಂತೆಯಲ್ಲಿದ್ದಾರೆ, ಏಕೆಂದರೆ ಯಾವುದೇ ಟೂರ್ನಮೆಂಟ್‌ ನಡೆಯುತ್ತಿಲ್ಲ. ಇದಕ್ಕೆ ಮತ್ತೇನನ್ನೂ ಸೇರಿಸಲು ನನಗೆ ಇಷ್ಟವಿಲ್ಲ,” ಎನ್ನುತ್ತಾರೆ ಹೃಷಿಕೇಶ್.‌ “ನನ್ನ ಕನಸನ್ನು ಜೀವಂತವಾಗಿರಿಸಿಕೊಳ್ಳಲು ಏನನ್ನಾದರೂ ಮಾಡಲು ಸಿದ್ಧನಿರುವೆ, ನಾನು ನಿತ್ಯವೂ ಅಭ್ಯಾಸ ಮಾಡುತ್ತಿರುವೆ, ಏಕೆಂದರೆ ಸಾಂಕ್ರಾಮಿಕ ಮುಗಿದಾಗ ನನಗೆ ಕುಸ್ತಿಯ ಸಂಪರ್ಕ ಇರಬೇಕು.”

Tournaments used to be a good source of income for aspiring wrestlers says Kiran Jawalge (left), who coaches the Hatlai Kusti Sankul students
PHOTO • Parth M.N.
Tournaments used to be a good source of income for aspiring wrestlers says Kiran Jawalge (left), who coaches the Hatlai Kusti Sankul students
PHOTO • Parth M.N.

ಯುವ ಕುಸ್ತಿಪಟುಗಳಿಗೆ ಟೂರ್ನಮೆಂಟ್‌ಗಳು ಆದಾಯಕ್ಕೆ ಮೂಲವಾಗಿದೆ ಎನ್ನುತ್ತಾರೆ ಹತ್ಲಾಯ್‌ ಕುಸ್ತಿ ಸಂಕೀರ್ಣದಲ್ಲಿ ತರಬೇತಿ ನೀಡುತ್ತಿರುವ ಕಿರಣ್‌ ಜಾವಾಲ್ಗೆ (ಎಡ)

ಗ್ರಾಮೀಣ ಮಹಾರಾಷ್ಟ್ರದ ಹೆಚ್ಚಿನ ಕುಸ್ತಿಪಟುಗಳು ಕೃಷಿಕರ ಮತ್ತು ಕೃಷಿ ಕಾರ್ಮಿಕರ ಮಕ್ಕಳಾಗಿರುತ್ತಾರೆ, ಹೃಷಿಕೇಶ್‌ ಅವರ ಕುಸ್ತಿ ಪ್ರೀತಿಯಲ್ಲಿ ಆ ಛಾಯೆ ಇದ್ದಿತ್ತು, ಕುಸ್ತಿ ಅಖಾಡದಲ್ಲಿ ಕುಸ್ತಿ ನಡೆಯುತ್ತಿದ್ದರೆ ಸಹಸ್ರಾರು ಮಂದಿ, ಕೆಲವೊಮ್ಮೆ ಲಕ್ಷಾಂತರ ಜನರು ವೀಕ್ಷಿಸಲು ಆಗಮಿಸುತ್ತಿದ್ದರು , ಆ ಮೂಲಕ ರಾಜ್ಯದಲ್ಲಿ ಕುಸ್ತಿ ಜನಪ್ರಿಯಗೊಂಡಿತ್ತು.

ಅಖಾಡಗಳು (ಸಾಂಪ್ರದಾಯಿಕ ವ್ಯಾಯಾಮಶಾಲೆಗಳು) ಸಾಮಾನ್ಯವಾಗಿ ಪ್ರತಿ ವರ್ಷ ವಿವಿಧ ವಯೋಮಾನದವರಿಗಾಗಿ ನವೆಂಬರ್‌ನಿಂದ ಮಾರ್ಚ್‌ ನಡುವೆ ಪ್ರತಿ ವರ್ಷ ಕುಸ್ತಿ ಟೂರ್ನಿಗಳನ್ನು ಆಯೋಜಿಸುತ್ತವೆ, “ಆ ಟೂರ್ನಿಗಳಲ್ಲಿ ನೀವು ಉತ್ತಮ ಪ್ರದರ್ಶನ ತೋರಿದರೆ, ನೀವು ಒಂದು ಲಕ್ಷ ರೂ,ಗಳವರೆಗೂ ನಗದು ಬಹುಮಾ ಗೆಲ್ಲಬಹುದು,” ಎನ್ನುತ್ತಾರೆ ಜಾವಾಲ್ಗೆ. “ಇದು ಆಹಾರದ ವೆಚ್ಚವನ್ನು ಭರಿಸಲು ಸಾಧ್ಯವಾಗುತ್ತಿತ್ತು,” ಆದರೆ ಕೋವಿಡ್‌ 19 ಬಂದಾಗಿನಿಂದ ಈ ಆದಾಯದ ಮೂಲ ನಿಂತುಹೋಯಿತು, “ಸಮಸ್ಯೆ ಎಂದರೆ ನಾವು ಕೇವಲ ಕ್ರಿಕೆಟ್‌ ಬಗ್ಗೆ ಕಾಳಜಿ ವಹಿಸುತ್ತೇವೆ, ಸ್ವಲ್ಪ ಮಟ್ಟಿಗೆ ಹಾಕಿಯ ಬಗ್ಗೆಯೂ ಇದೆ. ಆದರೆ ಕುಸ್ತಿ ಮತ್ತು ಖೊ ಖೊ ರೀತಿಯ ಕೆಲವು ಸಾಂಪ್ರದಾಯಿಕ ಕ್ರೀಡೆಗಳನ್ನು ಸಂಪೂರ್ಣವಾಗಿ ಕಡೆಗಣಿಸಿದ್ದೇವೆ,” ಎಂದು ಕೋಚ್‌ ಹೇಳಿದರು.

ಒಸ್ಮಾನಾಬಾದ್‌ ನಗರದ 29 ವರ್ಷದ ಸಾರಿಕಾ ಕಾಳೆ ರಾಷ್ಟ್ರೀಯ ಖೊ ಖೊ ತಂಡಕ್ಕೆ ಆಯ್ಕೆಯಾಗುವುದಕ್ಕೆ ಮೊದಲು ಅಂತರ್‌ ರಾಜ್ಯ ಪಂದ್ಯಗಳಲ್ಲಿ ಪಾಲ್ಗೊಳ್ಳಲು ರೈಲಿನಲ್ಲಿ ಟಿಕೆಟ್‌ ಕಾಯ್ದಿರಿಸದೆ ಪ್ರಯಾಣಿಸುತ್ತಿದ್ದು, ಸಮುದಾಯ ಭವನಗಳಲ್ಲಿ ಮಲಗುತ್ತಿದ್ದರು. “ಪ್ರಯಾಣದ ವೇಳೆ ನಾವು ನಮ್ಮದೇ ಆಹಾರವನ್ನು ಕೊಂಡೊಯ್ಯಬೇಕಾಗಿತ್ತು, ಆ ಸಂದರ್ಭದಲ್ಲಿ ನಾವು ರೈಲಿನ ಟಾಯ್ಲೆಟ್‌ ಪಕ್ಕದಲ್ಲಿ ಕುಳಿತು ಪ್ರಯಾಣಿಸಬೇಕಿತ್ತು, ಏಕೆಂದರೆ ನಮ್ಮಲ್ಲಿ ಟಿಕೆಟ್‌ ಇರುತ್ತಿರಲಿಲ್ಲ,” ಎಂದರು.

ಮಹಾರಾಷ್ಟ್ರದ ಮೂಲವಾಗಿರುವ ಖೊ ಖೊ ಕ್ರೀಡೆ , ಭಾರತದ ಸಾಂಪ್ರದಾಯಿಕ ಕ್ರೀಡೆಗಳಲ್ಲಿ ಅತ್ಯಂತ ಜನಪ್ರಿಯವಾದುದು. ಅಸ್ಸಾಮ್‌ನ ಗುವಾಹಟಿಯಲ್ಲಿ ನಡೆದ 2016 ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಸಾರಿಕಾ ಭಾರತ ಖೊ ಖೊ ತಂಡದ ನಾಯಕಿಯಾಗಿದ್ದರು. 2018ರಲ್ಲಿ ಭಾರತ ಹಾಗೂ ಇಂಗ್ಲೆಂಡ್‌ ತಂಡಗಳ ನಡುವೆ ಲಂಡನ್‌ನಲ್ಲಿ ನಡೆದ ದ್ವಿಪಕ್ಷೀಯ ಸರಣಿಯಲ್ಲಿ ಸಾರಿಕಾ ಭಾರತ ತಂಡದಲ್ಲಿ ಆಡಿದ್ದರು. 2020ರಲ್ಲಿ ಆಕೆಗೆ ಭಾರತ ಸರಕಾರ ಪ್ರತಿಷ್ಠಿತ ಅರ್ಜುನ ಪ್ರಶಸ್ತಿಯನ್ನು ನೀಡಿತ್ತು. “ಕಳೆದ ದಶಕದಲ್ಲಿ ಹೆಚ್ಚು ಹೆಚ್ಚಾಗಿ ಹುಡುಗಿಯರು ಖೊ ಖೊ ಕ್ರೀಡೆಯಲ್ಲಿ ಪಾಲ್ಗೊಳ್ಳುತ್ತಿದ್ದರು,” ಎಂದು ಸಾರಿಕಾ ಹೇಳಿದರು.

Left: Sarika Kale is a former national kho-kho captain and an Arjuna awardee. Right: A taluka sports officer now, Sarika trains and mentors kho-kho players
PHOTO • Parth M.N.
Left: Sarika Kale is a former national kho-kho captain and an Arjuna awardee. Right: A taluka sports officer now, Sarika trains and mentors kho-kho players
PHOTO • Parth M.N.

ಎಡ: ಭಾರತ ಖೊ ಖೊ ತಂಡದ ಮಾಜಿ ನಾಯಕಿ ಮತ್ತು ಅರ್ಜುನ ಪ್ರಶಸ್ತಿ ವಿಜೇತೆ ಸಾರಿಕಾ ಕಾಳೆ ಈಗ ಖೊ ಖೊ ಆಟಗಾರರಿಗೆ ತರಬೇತಿ ಮತ್ತು ಮಾರ್ಗದರ್ಶನ ನೀಡುತ್ತಿದ್ದಾರೆ

ಈಗ ಒಸ್ಮಾನಾಬಾದ್‌ನ ತುಲ್ಜಾಪುರ ತಾಲೂಕಿನಲ್ಲಿ ತಾಲೂಕು ಕ್ರೀಡಾ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಸಾರಿಕಾ, ಯುವ ಆಟಗಾರರಿಗೆ ತರಬೇತಿ ಮತ್ತು ಮಾರ್ಗದರ್ಶನ ನೀಡುತ್ತಿದ್ದಾರೆ. ಕೋವಿಡ್‌ 19 ಹರಡಿದಾಗಿನಿಂದ ಆಟಗಾರರು ತರಬೇತಿಯಂದ ದೂರ ಸರಿಯುತ್ತಿರುವುದನ್ನು ಅವರು ಗಮನಿಸಿದ್ದಾರೆ. “ಅದರಲ್ಲಿ ಹೆಚ್ಚಿನವರು ಬಡ ಕುಟುಂಬದಿಂದ ಬಂದ ಹುಡುಗಿಯರು,” ಎಂದು ಹೇಳಿದರು. “ಹಳ್ಳಿಯಲ್ಲಿರುವ ಹುಡುಗಿಯರಿಗೆ ಕ್ರೀಡೆಯಲ್ಲಿ ಭಾಗವಹಿಸಲು ಉತ್ತೇಜನ ನೀಡುತ್ತಿಲ್ಲ, ಕ್ರೀಡೆಯಲ್ಲಿ ತಮ್ಮ ಮಕ್ಕಳು ಪಾಲ್ಗೊಳ್ಳುವುದನ್ನು ನಿರಾಕರಿಸಲು ಈ ಸಾಂಕ್ರಾಮಿಕ ರೋಗ ಒಂದು ನೆವವಾಯಿತು,”

ಸಾಂಕ್ರಾಮಿಕ ಕಾಲದಲ್ಲಿ ತರಬೇತಿಯಿಂದ ವಂಚಿತರಾಗುವುದು ಯುವ ಆಟಗಾರರ ಏಳ್ಗೆಗೆ ಗಂಭೀರವಾದ ನಷ್ಟ ಎನ್ನುತ್ತಾರೆ ಸಾರಿಕಾ. “ಮಾರ್ಸ್‌ 2020ರಿಂದ ಅಥವಾ ಕಳೆದ ಐದು ತಿಂಗಳಿಂದ ಅಭ್ಯಾಸ ಸಂಪೂರ್ಣವಾಗಿ ಸ್ಥಗಿತವಾಗಿದೆ,” ಎಂದರು. “ಕೆಲವೊಮ್ಮೆ ಕೆಲವು ಆಟಗಾರರು ಹಿಂದಿರುಗಿದರೂ ಅವರ ದೈಹಿಕ ಕ್ಷಮತೆಯ ಪ್ರಮಾಣ ಸಂಪೂರ್ಣವಾಗಿ ಕುಸಿದಿರುವುದನ್ನು ಗಮನಿಸಬಹುದು. ಮತ್ತೆ ಆರಂಭದಿಂದ ತರಬೇತಿ ಆರಂಭಿಸಿದಾಗ ಎರಡನೇ ಅಲೆ ಆರಂಭಗೊಂಡಿತು. ನಮಗೆ ಮುಂದಿನ ಕೆಲವು ತಿಂಗಳ ಕಾಲ ಆಭ್ಯಾಸ ನಡೆಸಲಾಗಲಿಲ್ಲ, ನಾವು ಮತ್ತೆ ಜುಲೈ (2021)ನಲ್ಲಿ ಪುನರಾರಂಭಿಸಿದೆವು. ಈ ರೀತಿ ಅಭ್ಯಾಸವನ್ನು ಆರಂಭಿಸುವುದು ಮತ್ತು ನಿಲ್ಲಿಸುವುದು ಸೂಕ್ತವಾದುದಲ್ಲ,”

ವಯೋ ಗುಂಪಿನ ಟೂರ್ನಿಗಳಲ್ಲಿ ಆಟಗಾರರು ಸಮರ್ಪಕ ಅಭ್ಯಾಸ ಇಲ್ಲದೆ ಸ್ಪರ್ಧಿಸಿದಾಗ ಸೋಲಬೇಕಾಗುತ್ತದೆ, “14 ವರ್ಷ ವಯೋಮಿತಿಯ ಆಟಗಾರ 17ವರ್ಷ ವಯೋಮಿತಿಯ ವಿಭಾಗದಲ್ಲಿ ಒಂದೂ ಪಂದ್ಯವಾಡದೆ ಸೇರಬೇಕಾಗುತ್ತದೆ,” ಎಂದಿರುವ ಸಾರಿಕಾ, “ಇಂಥ ಅಮೂಲ್ಯವಾದ ವರ್ಷಗಳಿಂದ ಅವರು ವಂಚಿತರಾಗಬೇಕಾಗುತ್ತದೆ, ಒಬ್ಬ ಖೊ ಖೊ ಆಟಗಾರನಿಗೆ 20 ಮತ್ತು 25 ವರ್ಷಗಳ ನಡವೆ ಅತ್ಯುನ್ನತ ಪ್ರದರ್ಶನ ನೀಡುವ ಅವಧಿಯಾಗಿರುತ್ತದೆ, ಮತ್ತು ವಯೋಗುಂಪಿನ ಅವಧಿಯಲ್ಲಿ ತೋರುವ ಪ್ರದರ್ಶನವನ್ನು ಆಧರಿಸಿ ಆ ಆಟಗಾರನನ್ನು ಉನ್ನತ ಮಟ್ಟಕ್ಕೆ (ರಾಷ್ಟ್ರಮಟ್ಟ) ಆಯ್ಕೆಮಾಡಲಾಗುತ್ತದೆ,”

ಗ್ರಾಮೀಣ ಮಹಾರಾಷ್ಟ್ರದಲ್ಲಿ ಸಾಂಕ್ರಾಮಿಕ ರೋಗವು  ಭರವಸೆಯ ಪ್ರತಿಭೆಗಳ ಭವಿಷ್ಯದ ಅಭಿವೃದ್ಧಿಯ ಮೇಲೆ ಕರಿ ನೆರಳು ಬೀಳುವಂತೆ ಮಾಡಿದೆ.

Promotion of kho-kho in Osmanabad district has brought more players to the sport, but Covid-19 is affecting the progress of recent years
PHOTO • Parth M.N.

ಒಸ್ಮಾನಾಬಾದ್‌ ಜಿಲ್ಲೆಯಲ್ಲಿ ಖೊ ಖೊ ಕ್ರೀಡೆಗೆ ನೀಡಿರುವ ಉತ್ತೇಜನದಿಂದ ಹೆಚ್ಚಿನ ಆಟಗಾರರು ಈ ಕ್ರೀಡೆಯಲ್ಲಿ ತೊಡಗಿಕೊಳ್ಳವಂತಾಯಿತು. ಆದರೆ ಕೋವಿಡ್‌19 ಅಭಿವೃದ್ಧಿಯ ಮೇಲೆ ಪರಿಣಾಮ ಬೀರಿದೆ

ಸಾರಿಕಾ ಎರಡು ದಶಕಗಳ ಹಿಂದೆ ಖೊ ಖೊ ಆಡಲು ಆರಂಭಿಸಿದಾಗ ಹೆತ್ತವರ ಗಮನಕ್ಕೆ ತಂದಿರಲಿಲ್ಲ, ಕಾರಣ ಅದಕ್ಕೆ ಅವರು ಅನುಮತಿ ನೀಡುತ್ತಿರಲಿಲ್ಲ. “ಅಲ್ಲಿ ಅಲ್ಪ ಪ್ರಮಾಣದಲ್ಲಿ ಸಾಂಸ್ಥಿಕವಾದ ಬೆಂಬಲ ಇದ್ದಿತ್ತು ಮತ್ತು ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಸೌಲಭ್ಯಗಳೂ ಇದ್ದಿರಲಿಲ್ಲ,” ಎಂದರು. “ಕುಟುಂಬಗಳು ತಮ್ಮ ಮಕ್ಕಳ ಸುರಕ್ಷಿತ ಭವಿಷ್ಯವನ್ನು ನೋಡುತ್ತಿದ್ದರು-ನಮ್ಮ ತಂದೆ ಕೂಡ ನನಗೆ ಅದೇ ರೀತಿಯಲ್ಲಿರಲು ಬಯಸುತ್ತಿದ್ದರು. ನಾನು ದೊಡ್ಡವಳಾಗುತ್ತಿರುವಾಗ ನಮ್ಮ ಕುಟುಂಬದಲ್ಲಿ ಸಾಕಷ್ಟು ಆಹಾರವೂ ಇರಲಿಲ್ಲ,” ಅವರ ತಂದೆ ಕೃಷಿ ಕೂಲಿಕಾರರಾಗಿ ಕೆಲಸ ಮಾಡುತ್ತಿದ್ದರು, ಮತ್ತು ತಾಯಿ ಮನೆಕೆಲಸ ಮಾಡುತ್ತಿದ್ದರು.

ಹೆಣ್ಣು ಮಕ್ಕಳು ಕ್ರೀಡೆಯನ್ನು ಆಯ್ಕೆ ಮಾಡಿಕೊಳ್ಳುವುದು ಬಹಳ ಕಷ್ಟವಾಗಿರುತ್ತಿತ್ತು ಎಂದು ಹೇಳಿರುವ ಸಾರಿಕಾ, “ಹೆಣ್ಣು ಮಕ್ಕಳು ತನ್ನ ಮಕ್ಕಳನ್ನು ನೋಡಿಕೊಳ್ಳಬೇಕು ಮತ್ತು ಅಡುಗೆ ಮನೆಯಲ್ಲಿ ಕೆಲಸ ಮಾಡಬೇಕೆಂಬುದು ಮನಸ್ಥಿತಿ. ಹೆಣ್ಣು ಮಗಳು ಚಡ್ಡಿಯನ್ನು ಧರಿಸಿ ಆಟ ಆಡುವುದನ್ನು ನೋಡಿ ಅರಗಿಸಿಕೊಳ್ಳುವುದು ಬಹಳ ಕಷ್ಟ,” ಆದರೆ ಮೊದಲ ಬಾರಿಗೆ ಶಾಲೆಯಲ್ಲಿ ಆಟ ಆಡುವುದನ್ನು ನೋಡಿದ ನಂತರ, 10ನೇ ವಯಸ್ಸಿನಲ್ಲಿದ್ದ ಸಾರಿಕಾ ಖೊ ಖೊ ಆಡುವುದನ್ನು ತಡೆಯಲು ಯಾವುದರಿಂದಲೂ ಸಾಧ್ಯವಾಗಲಿಲ್ಲ, “ಅದರಿಂದ ನಾನು ಮೋಹಿತಳಾಗಿರುವುದು ಈಗಲೂ ನೆನಪಿದೆ,” ಎಂದು ಹೇಳಿರುವ ಅವರು, “ನನಗೆ ಸಹಾಯ ನೀಡಲು ಉತ್ತಮ ತರಬೇತುದಾರರು ಸಿಕ್ಕಿದರು,”

ಅವರ ಕೋಚ್‌ ಚಂದ್ರಜಿತ್‌ ಜಾಧವ್‌ ಖೊ ಖೊ ಫೆಡರೇಷನ್‌ನ ಜಂಟಿ ಕಾರ್ಯದರ್ಶಿ. ಒಸ್ಮಾನಾಬಾದ್‌ನ ನಿವಾಸಿಯಾಗಿರುವ ಅವರು ಅಲ್ಲಿ ಖೊ ಖೊ ಕ್ರೀಡೆ ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರವಹಿಸಿದರು, ಮಾತ್ರವಲ್ಲ ಆ ಪ್ರದೇಶವನ್ನು ಖೊ ಖೊದ ಕೇಂದ್ರವನ್ನಾಗಿ ಮಾಡಿದ್ದರು. ಒಸ್ಮಾನಾಬಾದ್‌ ನಗರದಲ್ಲಿ ಎರಡು ತರಬೇತಿ ಕೇಂದ್ರಗಳಿದ್ದು, ಜಿಲ್ಲೆಯಾದ್ಯಂತ ಇರುವ 100ಕ್ಕೂ ಹೆಚ್ಚು ಶಾಲೆಗಳು ಖೊ ಖೊ ಕ್ರೀಡೆಗೆ ಉತ್ತೇಜನ ನೀಡುತ್ತಿವೆ. “ಕಳೆದ ಎರಡು ದಶಕಗಳಲ್ಲಿ ಒಸ್ಮಾನಾಬಾದ್‌ನ 10 ಆಟಗಾರರು ವಿವಿಧ ವಯೋಮಿತಿಯಲ್ಲಿ ರಾಷ್ಟ್ರಮಟ್ಟದಲ್ಲಿ ಉತ್ತಮ ಆಟಗಾರ ಪ್ರಶಸ್ತಿಯನ್ನು ಗೆದ್ದಿರುತ್ತಾರೆ. ಮೂವರು ಮಹಿಳೆಯರು ರಾಜ್ಯ ಸರಕಾರ ನೀಡುವ ಶಿವ ಛತ್ರಪತಿ ಪ್ರಶಸ್ತಿ ಗೆದ್ದಿದ್ದಾರೆ, ಕೋಚ್‌ ಆಗಿ ನಾನು ಕೂಡ ಆ ಪ್ರಶಸ್ತಿಯನ್ನು ಗೆದ್ದಿದ್ದೇನೆ, ನಮ್ಮಲ್ಲಿ ಅರ್ಜುನ ಪ್ರಶಸ್ತಿ ವಿಜೇತರೂ ಇದ್ದಾರೆ,”

ಈಗ ಹಳ್ಳಿಯಲ್ಲಿ ಕ್ರೀಡೆಗೆ ಯಾವ ರೀತಿಯಲ್ಲಿ ಜನರು ಗೌರವ ನೀಡುತ್ತಿದ್ದಾರೆ (ಕ್ರಿಕೆಟ್‌ ಮತ್ತು ಹಾಕಿ ಹೊರತಾಗಿ) ಎಂಬ ಗಮನಾರ್ಹವಾದ ಬದಲಾವಣೆಯನ್ನು  ಸಾರಿಕಾ ಗಮನಿಸಿದ್ದಾರೆ. “ಕೆಲವು ಜನರು ಅದು ಸಮಯ ಹಾಳು ಮಾಡುವುದು ಎಂದು ತಿಳಿದಿದ್ದಾರೆ,” ಎಂದು ಹೇಳಿದರು.

Left: Ravi Wasave (in grey t-shirt) from Nandurbar wants to excel in kho-kho. Right: More girls have started playing the sport in the last decade
PHOTO • Parth M.N.
Left: Ravi Wasave (in grey t-shirt) from Nandurbar wants to excel in kho-kho. Right: More girls have started playing the sport in the last decade
PHOTO • Parth M.N.

ಎಡ: ಖೊ ಖೊ ಕ್ರೀಡೆಯಲ್ಲಿ ಮಿಂಚಬೇಕೆಂಬ ಹಂಬಲದಲ್ಲಿ ನಂದೂರ್ಬಾರ್‌ನ ರವಿ ವಾಸವೆ (ಕಂದು ಟಿ ಶರ್ಟ್‌ನಲ್ಲಿ), ಬಲ: ಕಳೆದ ದಶಕದಿಂದ ಹೆಚ್ಚಿನ ಸಂಖ್ಯೆಯಲ್ಲಿ ಹುಡುಗಿಯರು ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಆರಂಭಿಸಿದ್ದಾರೆ

ಒಸ್ಮಾನಾಬಾದ್‌ನಿಂದ 600 ಕಿ.ಮೀ. ದೂರದಲ್ಲಿರುವ ಆದಿವಾಸಿಗಳೇ ಹೆಚ್ಚಾಗಿರುವ ಜಿಲ್ಲೆ ನಂದೂರ್ಬಾರ್‌ನಿಂದ 19 ಯುವಕರು ಆಗಮಿಸಿರುವುದು ಅಭಿವೃದ್ಧಿಯ ಸ್ಪಷ್ಟತೆಯನ್ನು ವ್ಯಕ್ತಪಡಿಸುತ್ತದೆ. ಅವರಲ್ಲಿ ಒಬ್ಬ ಭಿಲ್‌ ಆದಿವಾಸಿ ಸಮುದಾಯದ ರವಿ ವಾಸಾವೆ. “ಮನೆಯ ವಾತಾವರಣ ಕ್ರೀಡೆಗೆ ಸಹಾಯಕವಾಗಿಲ್ಲ,” ಎಂದು ಹೇಳಿದ ಆತ, “ಒಸ್ಮಾನಾಬಾದ್‌ ಹಲವಾರು ಖೊ ಖೊ ಚಾಂಪಿಯನ್ನರನ್ನು ಹುಟ್ಟುಹಾಕಿದೆ, ಅವರಲ್ಲಿ ನಾನೊಬ್ಬನಾಗಬೇಕೆಂಬ ಹಂಚಲ,”

ಸಾಂಕ್ರಾಮಿಕ ಬಾಧೆ ಇಲ್ಲದೆ ಇರುತ್ತಿದ್ದರೆ ರವಿ 2020ರಲ್ಲೇ ರಾಷ್ಟ್ರೀಯ ಮಟ್ಟದಲ್ಲಿ ಆಡಿರುತ್ತಿದ್ದ ಎಂಬುದಕ್ಕೆ ಯಾವುದೇ ಸಂಶಯವಿಲ್ಲ ಎಂಬು ಸಾರಿಕಾ ಅವರ ನಿಲುವು. “ನಾನೇನೆಂಬುದನ್ನು ಸಾಬೀತುಪಡಿಸಲು ನನ್ನಲ್ಲಿ ಸಾಕಷ್ಟು ಸಮಬ ಇರಲಿಲ್ಲ,” ಎಂದ. “ನಮ್ಮ ಹೆತ್ತವರಲ್ಲಿ ಐದು ಎಕರೆ ಕೃಷಿ ಭೂಮಿ ಇದೆ, ಅದು ಬರಡು. ಅವರು ಬದುಕಲು ದಿನಗೂಲಿ ನೌಕರರಾಗಿ ಕೆಲಸ ಮಾಡುತ್ತಿದ್ದಾರೆ. ಅವರು ನನ್ನ ಉತ್ಸಾಹಕ್ಕೆ ಪ್ರೋತ್ಸಾಹ ನೀಡಿ ಅಪಾಯವನ್ನು ತಂದುಕೊಂಡರು,”

ಒಸ್ಮಾನಾಬಾದ್‌ನ ಡೈಟ್‌ ಕಾಲೇಜ್‌ ಕ್ಲಬ್‌ನಲ್ಲಿ ತರಬೇತಿ ಪಡೆಯುತ್ತಿರುವ ರವಿಗೆ ಯಾವುದು ಇಷ್ಟವೋ ಅದನ್ನು ಅವರ ಹೆತ್ತವರು ಬಯಸಿದ್ದರು ಎನ್ನುತ್ತಾರೆ ರವಿ, ಆದರೆ ಪರಿಸ್ಥಿತಿ ಇದೇ ರೀತಿಯಲ್ಲಿ ಮುಂದುವರಿದರೆ ಅವರಿಗೆ ಅದು ಪಡೆಯಲು ಸಾಧ್ಯವೇ ಎಂದು ಆವರು ಚಕಿತರಾಗಿದ್ದಾರೆ. “ಟೂರ್ನಮೆಂಟ್‌ನಲ್ಲಿ ಭಾಗವಹಿಸದೆ ದೂರವಿರುವುದರಲ್ಲಿ ಅರ್ಥವಿಲ್ಲ ಎಂಬುದು ಅವರ ನಿಲುವು,” ಎಂದಿರುವ ರವಿ, “ನನ್ನ ಕೋಚ್‌ಗಳು ಸದ್ಯಕ್ಕೆ ಅವರಿಗೆ ಪುನರ್‌ ಭರವಸೆ ನೀಡಿದ್ದಾರೆ. ಆದರೆ ಟೂರ್ನಮೆಂಟ್‌ ಕೂಡಲೇ ಆರಂಭಗೊಳ್ಳದಿದ್ದರೆ ಅವರು ಚಿಂತೆಗೊಳಗಾಗುತ್ತಾರೆ ಎಂಬುದು ನನಗೆ ಗೊತ್ತಿದೆ. ಖೊ ಖೊದಲ್ಲಿ ನಾನು ಉತ್ತಮ ಸಾಧನೆ ಮಾಡಬೇಕು. ಎಂಪಿಎಸ್‌ಸಿ ಪರೀಕ್ಷೆ (ರಾಜ್ಯ ನಾಗರಿಕ ಸೇವೆ) ಬರೆಯಬೇಕು ಮತ್ತು ಕ್ರೀಡಾ ಕೋಟಾದಡಿ ಉದ್ಯೋಗ ಪಡೆಯಬೇಕು,”

ಗ್ರಾಮೀಣ ಮಹಾರಾಷ್ಟ್ರದಲ್ಲಿ ಯುವ ಖೊ ಖೊ ಆಟಗಾರರಿಗೆ ಮಾದರಿ ಆಗಿರುವ ಸಾರಿಕಾ ಅವರು ಹಾಕಿ ಕೊಟ್ಟ ಹಾದಿಯಲ್ಲೇ ಮುಂದುವರಿಯಬೇಕೆಂಬುದು ರವಿಯ ಆಶಯ. ಖೊ ಖೊ ಆಟಗಾರರ ಒಂದು ಪೀಳಿಗೆಗೇ ಆಕೆ ಸ್ಫೂರ್ತಿಯಾಗಿದ್ದಾರೆಂಬುದು ಸ್ಪಷ್ಟ, ಸಾಂಕ್ರಾಮಿಕ ರೋಗವು ಕ್ರೀಡೆಯ ಮೇಲೆ ಪರಿಣಾಮ ಬೀರಬಹುದೆಂಬ ಆತಂಕ ಸಾರಿಕಾ ಅವರಿಗೆ. “ಈ ಸಾಂಕ್ರಾಮಿಕ ರೋಗ ಕೊನೆಗೊಳ್ಳುವವರೆಗೆ ಕಾಯಲು ವಿಶೇಷ ರಕ್ಷಣೆ ಹೆಚ್ಚಿನ ಮಕ್ಕಳಿಗಿಲ್ಲ,” ಎಂದು ಹೇಳಿರುವ ಸಾರಿಕಾ, “ಆದ್ದರಿಂದ ಈ ಕ್ರೀಡೆಯಲ್ಲೇ ಉಳಿದುಕೊಳ್ಳಲಿ ಎಂಬ ಉದ್ದೇಶದಿಂದ ಪ್ರತಿಭಾವಂತ ಸೌಲಭ್ಯವಂಚಿತ ಮಕ್ಕಳಿಗೆ ನಾನು ಆರ್ಥಿಕವಾಗಿ ಸಹಾಯ ಮಾಡುತ್ತಿದ್ದೇನೆ,”

ಈ ಕತೆಯು ವರದಿಗಾರರಿಗೆ ಪುಲಿಟ್ಜರ್‌ ಸೆಂಟರ್‌ ಮೂಲಕ ಸ್ವತಂತ್ರ ಪತ್ರಿಕೋದ್ಯಮ ಅನುದಾನದ ನೆರವಿನಿಂದ ಸಿದ್ಧಗೊಂಡ ಸರಣಿಯ ಭಾಗವಾಗಿದೆ

ಅನುವಾದ: ಸೋಮಶೇಖರ್‌ ಪಡುಕರೆ

Parth M.N.

Parth M.N. is a 2017 PARI Fellow and an independent journalist reporting for various news websites. He loves cricket and travelling.

Other stories by Parth M.N.
Translator : Somashekar Padukare

Somashekar Padukare is a Udupi based sports journalist. From last 25 years he is working as a sports journalist in different Kannada Daily.

Other stories by Somashekar Padukare