57 ವರ್ಷದ ಬಾಲಾಭಾಯಿ ಚಾವ್ಡಾ ಗುಜರಾತಿನ ಸುರೇಂದ್ರನಗರ ಜಿಲ್ಲೆಯಲ್ಲಿ ಐದು ಎಕರೆ ಕೃಷಿ ಭೂಮಿಯನ್ನು ಹೊಂದಿದ್ದಾರೆ. ಇದು ಫಲವತ್ತಾದ ಭೂಮಿಯೂ ಹೌದು. ಜೊತೆಗೆ ನೀರಾವರಿ ಸೌಲಭ್ಯವೂ ಇದೆ. ಕಳೆದ 25 ವರ್ಷಗಳಿಂದ ಅವರು ಈ ಭೂಮಿಯ ಮಾಲಿಕತ್ವವನ್ನು ಸಹ ಹೊಂದಿದ್ದಾರೆ. ಆದರೆ ಇಲ್ಲಿ ಒಂದೇ ಒಂದು ಸಮಸ್ಯೆಯಿದೆ. ಆ ಸಮಸ್ಯೆಯೆಂದರೆ ಅವರ ಆ ಹೊಲಕ್ಕೆ ಅವರು ಹೋಗುವಂತಿಲ್ಲ.

"ಭೂಮಿಯ ಒಡೆತನದ ಬಗ್ಗೆ ನನ್ನ ಬಳಿ ಪುರಾವೆಗಳಿವೆ," ಎಂದು ಅವರು ಹೇಳುತ್ತಾರೆ, ಪ್ರಸ್ತುತ ದುರ್ಬಲವಾಗಿ ಹಳದಿ ಬಣ್ಣಕ್ಕೆ ತಿರುಗಿರುವ ಭೂ ಹಕ್ಕುಪತ್ರಗಳನ್ನು ಬಿಚ್ಚಿ ತೋರಿಸುತ್ತಾ, "ಆದರೆ [ಭೂಮಿಯ] ಸ್ವಾಧೀನವು ಪ್ರಬಲ ಜಾತಿಯ ಜನರ ಬಳಿ ಇದೆ."

ಗುಜರಾತಿನಲ್ಲಿ ಪರಿಶಿಷ್ಟ ಜಾತಿಯಡಿ ಪಟ್ಟಿ ಮಾಡಲಾಗಿರುವ ಚಮ್ಮಾರ ಸಮುದಾಯದವರಾದ ಕಾರ್ಮಿಕ ಬಾಲಾಭಾಯಿ, ಈ ಕುರಿತು ಸಹಾಯಕ್ಕಾಗಿ ತನ್ನಿಂದ ಸಾಧ್ಯವಿರುವ ಎಲ್ಲರ ಮೊರೆ ಹೋಗಿದ್ದಾರೆ - ತಟ್ಟಲು ಇನ್ನು ಯಾವುದೇ ಬಾಗಿಲುಗಳು ಉಳಿದಿಲ್ಲ. "ಒಂದು ದಿನವನ್ನೂ ತಪ್ಪಿಸದೆ ಜಮೀನಿಗೆ ಹೋಗುತ್ತೇನೆ," ಎಂದು ಅವರು ಹೇಳುತ್ತಾರೆ. "ಅದನ್ನು ದೂರದಿಂದ ನೋಡಿ, ಅದು ನನಗೆ ದೊರಕಿದ್ದರೆ ನನ್ನ ಬದುಕು ಹೇಗಿರುತ್ತಿತ್ತು ಎಂದು ಕಲ್ಪನೆಗೆ ಜಾರುತ್ತೇನೆ..."

ಧರಂಗಧ್ರಾ ತಾಲ್ಲೂಕಿನ ಭರದ್ ಗ್ರಾಮದಲ್ಲಿರುವ ಈ ಕೃಷಿ ಭೂಮಿಯನ್ನು 1997ರಲ್ಲಿ ಗುಜರಾತಿನ ಭೂ ವಿತರಣಾ ನೀತಿಯ ಅಡಿಯಲ್ಲಿ ಬಾಲಾಭಾಯ್ ಅವರಿಗೆ ಹಂಚಿಕೆ ಮಾಡಲಾಯಿತು. 1960ರ ಗುಜರಾತ್ ಕೃಷಿ ಭೂಮಿಗಳ ಮಿತಿ ಕಾಯಿದೆಯಡಿ ಕೃಷಿ ಭೂ ಹಿಡುವಳಿಯ ಮೇಲೆ ಮಿತಿಗಳನ್ನು ಹೇರಿ ಸ್ವಾಧೀನಪಡಿಸಿಕೊಳ್ಳಲಾದ 'ಹೆಚ್ಚುವರಿ ಭೂಮಿಯನ್ನು' "ಸರ್ವರ ಒಳಿತನ್ನು ಪೂರೈಸಲು" ಮೀಸಲಿರಿಸಲಾಗಿದೆ.

ಸಂತಾನಿ ಜಮೀನ್ ಎಂದು ಕರೆಯಲ್ಪಡುವ ಈ ಸ್ವಾಧೀನಪಡಿಸಿಕೊಂಡ ಭೂಮಿಯನ್ನು ಸರ್ಕಾರಿ ಸ್ವಾಮ್ಯದ ಬಂಜರುಭೂಮಿಯೊಂದಿಗೆ, "ರೈತರ ಸಹಕಾರಿ ಸಂಘಗಳು, ಭೂರಹಿತ ವ್ಯಕ್ತಿಗಳು ಮತ್ತು ಕೃಷಿ ಕಾರ್ಮಿಕರು ಸೇರಿದಂತೆ ಕೃಷಿ ಮಾಡಲು ಭೂಮಿ ಅಗತ್ಯವಿರುವ ವ್ಯಕ್ತಿಗಳಿಗೆ," ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯಗಳ ಸದಸ್ಯರಿಗೆ ಆದ್ಯತೆಯೊಂದಿಗೆ ಮೀಸಲಿಡಲಾಗಿದೆ.

ಆದರೆ ಈ ಯೋಜನೆಯು ಕಾಗದದ ಮೇಲೆ ಕಂಡಷ್ಟು ಆಚರಣೆಯಲ್ಲಿ ಕಾಣುವುದಿಲ್ಲ.

ಜಮೀನಿನ ಹಕ್ಕು ಪತ್ರ ಪಡೆದ ದಿನ ಬಾಲಾಭಾಯ್ ತಮ್ಮ ಜಮೀನಿನಲ್ಲಿ ಜೋಳ ಮತ್ತು ಸಜ್ಜೆ ಬೆಳೆಯುವ ಯೋಚನೆಯಲ್ಲಿದ್ದರು. ಅಲ್ಲದೆ ಅಲ್ಲೇ ಒಂದು ಸಣ್ಣ ಮನೆಯನ್ನೂ ಕಟ್ಟಿದರೆ ಕೃಷಿ ಕೆಲಸಗಳಿಗೆ ಅನುಕೂಲವಾಗುತ್ತದೆನ್ನುವ ಆಲೋಚನೆಯಲ್ಲಿದ್ದರು. ಆ ಸಮಯದಲ್ಲಿ ಅವರಿಗೆ 32 ವರ್ಷ ಪ್ರಾಯವಾಗಿತ್ತು. ಆಗಿನ್ನೂ ಕುಟುಂಬ ಮಾಡಿಕೊಂಡಿದ್ದರು. “ಆಗಷ್ಟೇ ನನಗೆ ಮೂರು ಚಿಕ್ಕ ಮಕ್ಕಳಿದ್ದವು,” ಎಂದು ಅವರು ಹೇಳುತ್ತಾರೆ. “ಆಗ ನಾನು ಕೂಲಿ ಕೆಲಸಕ್ಕೆ ಹೋಗುತ್ತಿದ್ದೆ ಈಗ ಭೂಮಿ ಸಿಕ್ಕಿರುವುದರಿಂದಾಗಿ ನಾನು ಇನ್ನು ಇನ್ನೊಬ್ಬರ ಬಳಿ ದುಡಿಯಬೇಕಿಲ್ಲವೆಂದು ಸಂತಸದಲ್ಲಿದ್ದೆ. ಇನ್ನು ನನ್ನ ಕುಟುಂಬಕ್ಕೆ ಒಳ್ಳೆಯ ಜೀವನಮಟ್ಟವನ್ನು ಕೊಡಬಲ್ಲೆ ಎಂದುಕೊಂಡಿದ್ದೆ."

PHOTO • Parth M.N.

ಬಾಲಾಭಾಯಿ ಚಾವ್ಡಾ ಅವರು 25 ವರ್ಷಗಳಿಂದ ಸ್ವಾಧೀನಪಡಿಸಿಕೊಳ್ಳಲು ಕಾಯುತ್ತಿರುವ ಭರದ್ ಗ್ರಾಮದಲ್ಲಿನ ತಮ್ಮ ಐದು ಎಕರೆ ಜಮೀನಿನ ದಾಖಲೆಗಳೊಡನೆ

ಆದರೆ ಬಾಲಾಭಾಯಿಗೆ ಆಘಾತ ಕಾದಿತ್ತು. ಅವರು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಮೊದಲೇ, ಹಳ್ಳಿಯ ಎರಡು ಕುಟುಂಬಗಳು ಅದನ್ನು ವಶಪಡಿಸಿಕೊಂಡಿದ್ದವು. ಅವುಗಳಲ್ಲಿ ಒಂದು ರಜಪೂತ ಸಮುದಾಯಕ್ಕೆ ಸೇರಿದ್ದರೆ ಇನ್ನೊಂದು ಪಟೇಲರ ಸಮುದಾಯಕ್ಕೆ ಸೇರಿದ ಕುಟುಂಬ. ಇಂದಿಗೂ ಭೂಮಿ ಅವರ ಅತಿಕ್ರಮಣದಲ್ಲೇ ಇದೆ. ಇದರಿಂದಾಗಿ ಬಾಲಾಭಾಯಿ ಕೂಲಿಯಾಗಿ ದುಡಿಯುವುದನ್ನು ಮುಂದುವರೆಸಬೇಕಾಯಿತು. ಅವರ ಮಕ್ಕಳಾದ ರಾಜೇಂದ್ರ ಮತ್ತು ಅಮೃತ್ ( 35 ಮತ್ತು 32) ಅವರು ಇನ್ನೂ ಚಿಕ್ಕವರಿರುವಾಗಲೇ ಹೊಲಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸಬೇಕಾಯಿತು. ಅವರಿಗೆ ಕೆಲಸ ಸಿಕ್ಕಾಗ 250 ರೂಪಾಯಿ ಕೂಲಿಯಾಗಿ ದೊರೆಯುತ್ತದೆ. ವಾರಕ್ಕೆ ಮೂರು ಕೆಲಸ ಸಿಗುತ್ತದೆ.

"ನಾನು ನನ್ನ ಹಕ್ಕನ್ನು ಪ್ರತಿಪಾದಿಸಲು ಸಾಕಷ್ಟು ಪ್ರಯತ್ನಿಸಿದ್ದೇನೆ, ಆದರೆ ನನಗೆ ನೀಡಲಾಗಿರುವ ಭೂಮಿ ಪ್ರಬಲ ಜಾತಿಗಳ ಜನರ ಒಡೆತನದ ಆಸ್ತಿಗಳಿಂದ ಸುತ್ತುವರೆದಿದೆ," ಎಂದು ಬಾಲಾಭಾಯ್ ಹೇಳುತ್ತಾರೆ. "ಅವರು ನನ್ನನ್ನು ಆ ಜಾಗಕ್ಕೆ ಪ್ರವೇಶಿಸಲು ಬಿಡುವುದಿಲ್ಲ. ಆರಂಭದಲ್ಲಿ, ನಾನು [ಭೂಮಿಯನ್ನು ಸಾಗುವಳಿ ಮಾಡುವ] ನನ್ನ ಹಕ್ಕನ್ನು ಪ್ರತಿಪಾದಿಸಿದೆ ಮತ್ತು ಜಗಳಗಳಲ್ಲಿ ಕೂಡಾ ತೊಡಗಿದ್ದೆ, ಆದರೆ ಅವರು ಪ್ರಭಾವಶಾಲಿ ಮತ್ತು ಶಕ್ತಿಶಾಲಿಗಳು."

90ರ ದಶಕದಲ್ಲಿ ನಡೆದ ಅಂತಹ ಒಂದು ಜಗಳವೊಂದರಲ್ಲಿ ಬಾಲಾಭಾಯ್‌ ಆಸ್ಪತ್ರೆಗೂ ಸೇರಿದ್ದರು. ಅಂದು ಅವರ ಮೇಲೆ ಗುದ್ದಲಿಯಿಂದ ಹಲ್ಲೆ ಮಾಡಲಾದ ಕಾರಣ ಅವರ ಕೈ ಮುರಿದಿತ್ತು. “ಪೊಲೀಸರಿಗೆ ದೂರನ್ನೂ ನೀಡಿದ್ದೆ,” ಎಂದು ಅವರು ಹೇಳುತ್ತಾರೆ. "ನಾನು ಈ ಕುರಿತು [ಜಿಲ್ಲಾ] ಆಡಳಿತವನ್ನು ಸಂಪರ್ಕಿಸಿದೆ. ಅದು ಕೆಲಸ ಮಾಡಲಿಲ್ಲ. ಭೂರಹಿತರಿಗೆ ಭೂಮಿ ವಿತರಿಸಿರುವುದಾಗಿ ಸರ್ಕಾರ ಹೇಳಿಕೊಂಡಿದೆ. ಆದರೆ ವಾಸ್ತವದಲ್ಲಿ, ಅದು ಕೇವಲ ಕಾಗದಪತ್ರಗಳನ್ನು ಮಾತ್ರ ನೀಡಿದೆ. ಈ ಭೂಮಿ ಮೊದಲು ಯಾರ ಬಳಿಯಿತ್ತೋ ಅವರ ಬಳಿಯೇ ಉಳಿದುಕೊಂಡಿದೆ."

2011ರ ಜನಗಣತಿಯ ಸಮಯದಲ್ಲಿ, ಭಾರತವು 144 ದಶಲಕ್ಷಕ್ಕೂ ಹೆಚ್ಚು ಭೂರಹಿತ ಕೃಷಿ ಕಾರ್ಮಿಕರಿಗೆ ನೆಲೆಯಾಗಿತ್ತು . 2001ರಲ್ಲಿ 107 ದಶಲಕ್ಷದಷ್ಟಿದ್ದ ಹಿಂದಿನ ಜನಗಣತಿಯ ನಂತರ ಈ ಸಂಖ್ಯೆ ಶೇ.35ರಷ್ಟು ಏರಿಕೆಯಾಗಿತ್ತು. ಗುಜರಾತ್ ಒಂದರಲ್ಲೇ 1.7 ದಶಲಕ್ಷ ಜನರು ಇದೇ ಅವಧಿಯಲ್ಲಿ ಭೂರಹಿತ ಕಾರ್ಮಿಕರಾದರು - ಇದು ಶೇಕಡಾ 32.5 ರಷ್ಟು ಹೆಚ್ಚಾಗಿದೆ (5.16 ದಶಲಕ್ಷದಿಂದ 6.84 ದಶಲಕ್ಷ).

ಈ ಬಡತನ ಮತ್ತು ಭೂರಹಿತರ ಸೂಚ್ಯಂಕದ ಏರಿಕೆಗೂ ಜಾತಿಗೂ ಬಲವಾದ ಸಂಬಂಧವಿದೆ. ಪರಿಶಿಷ್ಟ ಜಾತಿಯ ಜನರು ಗುಜರಾತಿನ ಒಟ್ಟು ಜನಸಂಖ್ಯೆಯ 6.74 ಪ್ರತಿಶತದಷ್ಟಿದ್ದರೂ (2011 ರ ಜನಗಣತಿ) ಅವರು ಭೂ ಮಾಲಿಕರಾಗಿ ಅಥವಾ ಇತರೇ ರೀತಿಯಲ್ಲಿ ಕೃಷಿಯಲ್ಲಿ ತೊಡಗಿಕೊಂಡಿರುವುದು ರಾಜ್ಯದಲ್ಲಿ ಕೃಷಿಗೆ ಒಳಪಟ್ಟ ಪ್ರದೇಶದ ಕೇವಲ 2.89 ಪ್ರತಿಶತದಷ್ಟು ಭೂಮಿಯಲ್ಲಿ ಮಾತ್ರ. ರಾಜ್ಯದ ಒಟ್ಟು ಜನಸಂಖ್ಯೆಯ ಶೇ.14.8ರಷ್ಟು ಪರಿಶಿಷ್ಟ ಪಂಗಡದವರು ಶೇ.9.6ರಷ್ಟು ಭೂಮಿಯಲ್ಲಿ ದುಡಿಯುತ್ತಿದ್ದಾರೆ.

2012ರಲ್ಲಿ, ದಲಿತ ಹಕ್ಕುಗಳ ಕಾರ್ಯಕರ್ತ ಜಿಗ್ನೇಶ್ ಮೇವಾನಿ ಅವರು ಈ ಕುರಿತು ಗುಜರಾತ್ ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ದಾಖಲಿಸಿದ್ದರು, ರಾಜ್ಯ ಸರ್ಕಾರವು ಭೂ ಸುಧಾರಣಾ ನೀತಿಗಳನ್ನು ಜಾರಿಗೊಳಿಸುತ್ತಿಲ್ಲ, ಸೀಲಿಂಗ್ ಕಾನೂನಿನ ಅಡಿಯಲ್ಲಿ ಸ್ವಾಧೀನಪಡಿಸಿಕೊಳ್ಳಲಾದ ಸಂತಾನಿ ಭೂಮಿಯನ್ನು ಭೂರಹಿತರು, ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡದವರು ಹೀಗೆ ಯಾರಿಗೆ ನೀಡಲು ಉದ್ದೇಶಿಸಲಾಗಿತ್ತೋ ಅವರಿಗೆ ಹಂಚಿಕೆ ಮಾಡಿಲ್ಲ ಎಂದು ಆರೋಪಿಸಿದ್ದರು.

Balabhai on the terrace of his house. ‘I look at my land from a distance and imagine what my life would have been...’
PHOTO • Parth M.N.

ಬಾಲಾಭಾಯಿ ತನ್ನ ಮನೆಯ ಟೆರೇಸ್ ಮೇಲೆ. 'ನಾನು ನನ್ನ ಭೂಮಿಯನ್ನು ದೂರದಿಂದ ನೋಡುತ್ತೇನೆ ಮತ್ತು ಅದು ನನಗೆ ದೊರಕಿದ್ದರೆ ಬದುಕು ಹೇಗಿರುತ್ತಿತ್ತು ಎಂದು...'

ಕೇಂದ್ರ ಸರ್ಕಾರದ 'ಭೂ ಮಿತಿ ಕಾನೂನುಗಳ ಅನುಷ್ಠಾನ ಕುರಿತ ತ್ರೈಮಾಸಿಕ ಪ್ರಗತಿ ವರದಿ (ಸಂಚಿತ) ' ಯನ್ನು ನ್ಯಾಯಾಲಯದ ಕಲಾಪಗಳಲ್ಲಿ ಉಲ್ಲೇಖಿಸಲಾಗಿದೆ. ಸೆಪ್ಟೆಂಬರ್ 2011ರವರೆಗೆ, ಗುಜರಾತಿನಲ್ಲಿ 37,353 ಫಲಾನುಭವಿಗಳಿಗೆ 163,676 ಎಕರೆ ಭೂಮಿಯನ್ನು ವಿತರಿಸಲಾಗಿದೆ - ಮತ್ತು ಕೇವಲ 15,519 ಎಕರೆಗಳನ್ನು ಮಾತ್ರ ವಿತರಿಸಬೇಕಾಗಿದೆ ಎಂದು ಅದು ಹೇಳಿತ್ತು.

ಆದಾಗ್ಯೂ, ಗುಜರಾತ್ ಹೈಕೋರ್ಟಿನಲ್ಲಿ ಇನ್ನೂ ವಿಚಾರಣೆ ಎದುರಿಸುತ್ತಿರುವ ಮೇವಾನಿ ಅವರ ಪಿಐಎಲ್, ಹಂಚಿಕೆಯಾದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವತ್ತ ಗಮನ ಹರಿಸುತ್ತದೆ. ಹಲವಾರು ಪ್ರಕರಣಗಳಲ್ಲಿ, ಅವರು ಹೇಳಿದಂತೆ - ಆರ್ಟಿಐ ಪ್ರತಿಕ್ರಿಯೆಗಳು ಮತ್ತು ಸರ್ಕಾರಿ ದಾಖಲೆಗಳ ಆಧಾರದ ಮೇಲೆ - ಜನರು ತಮಗೆ ಹಂಚಿಕೆ ಮಾಡಿದ ಹೆಚ್ಚುವರಿ ಭೂಮಿ ಮತ್ತು ಬಂಜರು ಭೂಮಿಯನ್ನು ತಮ್ಮ ವಶಕ್ಕೆ ಪಡೆದುಕೊಳ್ಳಲು ಸಾಧ್ಯವಾಗಿಲ್ಲ.

ಬಾಲಾಭಾಯಿ ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಕಾಯುತ್ತಿದ್ದಾರೆ. ಅವರು ಹೇಳುತ್ತಾರೆ, “ನಾನು ಆರಂಭದಲ್ಲಿ ಸ್ವಾಧೀನಕ್ಕಾಗಿ ಹೋರಾಡಿದೆ. ಆಗ ನನಗೆ 30 ವರ್ಷ ವಯಸ್ಸಾಗಿತ್ತು. ಸಾಕಷ್ಟು ಉತ್ಸಾಹ ಮತ್ತು ಶಕ್ತಿ ಇತ್ತು. ಆದರೆ ನಂತರ ನನ್ನ ಮಕ್ಕಳು ಬೆಳೆಯಲು ಪ್ರಾರಂಭಿಸಿದರು ಮತ್ತು ನಾನು ಕೆಲಸಗಳಲ್ಲಿ ನಿರತನಾದೆ. ನಾನು ಅವರನ್ನು ನೋಡಿಕೊಳ್ಳಬೇಕಾಗಿತ್ತು ಮತ್ತು ಅವರ ಸುರಕ್ಷತೆಯ ಬಗ್ಗೆ ಯೋಚಿಸಬೇಕಾಗಿತ್ತು. ಅವರ ಜೀವಕ್ಕೆ ಅಪಾಯವಾಗುವಂತಹ ಯಾವುದನ್ನೂ ಮಾಡಲು ನಾನು ಬಯಸಲಿಲ್ಲ.

ಮೇವಾನಿಯವರ 1,700 ಪುಟಗಳ ಸುದೀರ್ಘ ಅರ್ಜಿಯಲ್ಲಿ, ಗುಜರಾತ್‌ ರಾಜ್ಯದ ಎಲ್ಲೆಡೆಯ ಉದಾಹರಣೆಗಳಿವೆ, ಬಾಲಾಭಾಯ್ ಪ್ರಕರಣವು ಪ್ರತ್ಯೇಕ ಘಟನೆಯಲ್ಲ ಎಂದು ಇದು ಸೂಚಿಸುತ್ತದೆ.

"ಕೆಲವು ಸಂದರ್ಭಗಳಲ್ಲಿ, ಫಲಾನುಭವಿಗಳು ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದಾರೆ ಆದರೆ ಅದು ಸಾಧ್ಯವಾಗಿದ್ದು ಕಾರ್ಯಕರ್ತರ ನಿರಂತರ ಮಧ್ಯಪ್ರವೇಶದ ನಂತರವೇ," ಎಂದು ಪ್ರಸ್ತುತ ಗುಜರಾತ್ ವಿಧಾನಸಭೆಯಲ್ಲಿ ವಡ್ಗಾಮ್ ಕ್ಷೇತ್ರವನ್ನು ಪ್ರತಿನಿಧಿಸುವ ಮೇವಾನಿ ಹೇಳುತ್ತಾರೆ. ಅವರ ಮನವಿಗೆ ಪ್ರತಿಕ್ರಿಯಿಸುವಾಗ, ರಾಜ್ಯ ಮತ್ತು ಸ್ಥಳೀಯ ಆಡಳಿತವು ಅವರ ನ್ಯೂನತೆಗಳನ್ನು ಒಪ್ಪಿಕೊಂಡಿದೆ ಎಂದು ಅವರು ಹೇಳುತ್ತಾರೆ.

ಉದಾಹರಣೆಗೆ, ಜುಲೈ 18, 2011ರಂದು ಅಹಮದಾಬಾದ್‌ನ ಭೂ ದಾಖಲೆಗಳ ಜಿಲ್ಲಾ ಇನ್ಸ್‌ಪೆಕ್ಟರ್ (ಡಿಐಎಲ್‌ಆರ್) ಅವರು ಬರೆದ ಪತ್ರದಲ್ಲಿ, ಕಂದಾಯ ಆಡಳಿತದ ಅಧಿಕಾರಿಗಳ ನಿಷ್ಕ್ರಿಯತೆಯಿಂದಾಗಿ ಅಹಮದಾಬಾದ್ ಜಿಲ್ಲೆಯ ಹಲವಾರು ಗ್ರಾಮಗಳಲ್ಲಿ ಭೂಮಾಪನ ಕಾರ್ಯವು ಅಪೂರ್ಣವಾಗಿದೆ ಎಂದು ತಿಳಿಸಿದ್ದಾರೆ. ಕೆಲವು ವರ್ಷಗಳ ನಂತರ, ನವೆಂಬರ್ 11, 2015ರಂದು, ಭಾವನಗರ ಜಿಲ್ಲೆಯ ಡಿಐಎಲ್ಆರ್ 1971ರಿಂದ 2011ರವರೆಗೆ ಮಂಜೂರು ಮಾಡಿದ ಜಮೀನುಗಳಿಗೆ 50 ಗಡಿಗಳನ್ನು ಗುರುತಿಸಿಲ್ಲ ಎಂದು ಒಪ್ಪಿಕೊಂಡಿತು.

Chhaganbhai Pitambar standing on the land allotted to him in the middle of Chandrabhaga river in Surendranagar district
PHOTO • Parth M.N.

ಸುರೇಂದ್ರನಗರ ಜಿಲ್ಲೆಯ ಚಂದ್ರಭಾಗ ನದಿಯ ಮಧ್ಯದಲ್ಲಿ ತನಗೆ ಮಂಜೂರಾದ ಭೂಮಿಯಲ್ಲಿ ನಿಂತಿರುವ ಛಗನ್‌ಭಾಯ್ ಪಿತಾಂಬರ

ಡಿಸೆಂಬರ್ 17, 2015ರಂದು ಗುಜರಾತ್ ಹೈಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ, ರಾಜ್ಯದ ಕಂದಾಯ ಇಲಾಖೆಯ ಉಪ ಕಾರ್ಯದರ್ಶಿ ಹರೀಶ್ ಪ್ರಜಾಪತಿ, ಇನ್ನೂ ವಿತರಿಸಬೇಕಿರುವ15,519 ಎಕರೆ ಭೂಮಿ ವ್ಯಾಜ್ಯದಲ್ಲಿದೆ ಮತ್ತು 210 ಮೊಕದ್ದಮೆಗಳು ಬಾಕಿ ಉಳಿದಿವೆ ಎಂದು ಹೇಳಿದರು.

ನಾಲ್ಕು ಅಧಿಕಾರಿಗಳ ನೇಮಕ ಮತ್ತು ರಾಜ್ಯದ ವಲಯ ವಿಭಾಗ ಸೇರಿದಂತೆ ಕೃಷಿ ಭೂಮಿ ಮಿತಿ ಕಾಯ್ದೆಯನ್ನು ಜಾರಿಗೆ ತರುವ ಕಾರ್ಯವಿಧಾನವನ್ನು ಪ್ರಸ್ತಾಪಿಸಲಾಗಿದೆ ಎಂದು ಪ್ರಜಾಪತಿ ಹೇಳಿದ್ದರು. "ಸ್ವಾಧೀನದ ಹೆಚ್ಚಿನ ಪರಿಶೀಲನೆಯೊಂದಿಗೆ ಪ್ರತಿ ಮಾಲಿಕತ್ವದ ಭೂಮಿಯನ್ನು ಭೌತಿಕವಾಗಿ ಪರಿಶೀಲಿಸುವ ಮೂಲಕ ಈ ಅಭ್ಯಾಸವನ್ನು ನಡೆಸಲಾಗುವುದು. ಇದು ಸಾವಿರಾರು ಎಕರೆ ಭೂಮಿಯನ್ನು ಭೌತಿಕವಾಗಿ ಪರಿಶೀಲಿಸುವ ಬೃಹತ್ ಕಾರ್ಯವನ್ನು ಒಳಗೊಂಡಿರುತ್ತದೆ," ಎಂದು ಅಫಿಡವಿಟ್ನಲ್ಲಿ ತಿಳಿಸಲಾಗಿದೆ. ಆದರೆ ಬಂಜರು ಭೂಮಿಯ ಹಂಚಿಕೆಯು ಜಿಲ್ಲಾಧಿಕಾರಿಗಳ ವ್ಯಾಪ್ತಿಯಲ್ಲಿಯೇ ಉಳಿಯುತ್ತದೆ ಎಂದು ಅದು ಹೇಳಿದೆ.

ಗುಜರಾತ್‌ನ ಖ್ಯಾತ ವಕೀಲ ಆನಂದ್ ಯಾಗ್ನಿಕ್, ಹೈಕೋರ್ಟ್‌ನಲ್ಲಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಮೇವಾನಿ ಅವರನ್ನು ಪ್ರತಿನಿಧಿಸುತ್ತಿದ್ದ, ಅವರು ಕಳೆದ ಏಳು ವರ್ಷಗಳಲ್ಲಿ ಹೆಚ್ಚಿನ ಬದಲಾವಣೆಯೇನೂ ಆಗಿಲ್ಲ ಎಂದು ಹೇಳುತ್ತಾರೆ. "ರಾಜ್ಯವು ಪ್ರಬಲ ಜಾತಿಗಳಿಂದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳದೆ ಹಂಚಿಕೆಯಲ್ಲಿ ನ್ಯಾಯವಿದೆ ಎಂದು ತೋರಿಸಲು ಕಾಗದದ ಮೇಲೆ ಹಂಚುತ್ತದೆ," ಎಂದು ಅವರು ಹೇಳುತ್ತಾರೆ. ಪರಿಶಿಷ್ಟ ಜಾತಿಯ ಫಲಾನುಭವಿಗಳು ಸ್ವಾಧೀನಕ್ಕೆ ಒತ್ತಾಯಿಸಿದರೆ ಹಿಗ್ಗಾಮುಗ್ಗಾ ಥಳಿಸುತ್ತಾರೆ. ಸ್ಥಳೀಯ ಆಡಳಿತ ಎಂದಿಗೂ ಅವರಿಗೆ ಸಹಾಯ ಮಾಡುವುದಿಲ್ಲ. ಹೀಗಾಗಿಯೇ ವಿತರಣಾ ವ್ಯವಸ್ಥೆಯಲ್ಲಿ ನ್ಯಾಯವು ಕೇವಲ ಕಾಗದದ ಮೇಲಷ್ಟೇ ಉಳಿದಿದೆ ಮತ್ತು ಈ ರೀತಿಯಾಗಿ ಸ್ವತಂತ್ರ ಭಾರತದಲ್ಲಿ ನಾಗರಿಕತೆಯಲ್ಲಿನ ಲೋಪವು ಮುಂದುವರಿಯುತ್ತದೆ.

ಈ ವರದಿಗಾರ ಪ್ರಸ್ತುತ ಕಂದಾಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕಮಲ್ ದಯಾನಿ ಮತ್ತು ಭೂಸುಧಾರಣಾ ಆಯುಕ್ತ ಸ್ವರೂಪ್ ಪಿ. ಗುಜರಾತ್‌ನಲ್ಲಿ ಭೂ ಹಂಚಿಕೆಯ ಪ್ರಸ್ತುತ ಸ್ಥಿತಿಯ ಬಗ್ಗೆ ವಿಚಾರಿಸಲು ಪತ್ರ ಬರೆದಿದ್ದಾರೆ. ಅವರು ಪ್ರತಿಕ್ರಿಯಿಸಿದರೆ ಈ ವರದಿಯನ್ನು ನವೀಕರಿಸಲಾಗುತ್ತದೆ.

43 ವರ್ಷದ ಚಗನ್‌ಭಾಯ್ ಪಿತಾಂಬರ ಪ್ರಕರಣದಲ್ಲಿ, ಅವರ ಭೂಮಿಯನ್ನು ಬೇರೆಯವರು ವಶಕ್ಕೆ ತೆಗೆದುಕೊಳ್ಳದಿದ್ದರೂ ಆಡಳಿತದ ಬಗ್ಗೆ ಅವರು ಹತಾಶರಾಗಿದ್ದಾರೆ. 1999ರಲ್ಲಿ ಭರದ್‌ನಲ್ಲಿ ಅವರಿಗೆ ಮಂಜೂರಾಗಿದ್ದ ಐದು ಎಕರೆ ಜಮೀನು ಚಂದ್ರಭಾಗಾ ನದಿಯ ಮಧ್ಯದಲ್ಲಿದೆ. ಅವರು ನಮ್ಮನ್ನು ಅಲ್ಲಿಗೆ ಕರೆದುಕೊಂಡು ಹೋಗಿ ಜಾಗವನ್ನು ತೋರಿಸಿ, "ಇಲ್ಲಿ ಯಾವಾಗಲೂ ನೀರು ತುಂಬಿಕೊಂಡಿರುತ್ತದೆ. ಹೀಗಾಗಿ ಇಲ್ಲಿ ಹೆಚ್ಚೇನೂ ಬೆಳೆಯಲು ಸಾಧ್ಯವಿಲ್ಲ," ಎಂದು ಹೇಳಿದರು.

ಅವರ ಜಮೀನಿನ ಹೆಚ್ಚಿನ ಭಾಗವು ಕೆಸರು ನೀರಿನಿಂದ ತುಂಬಿರುತ್ತದೆ ಮತ್ತು ಉಳಿದ ಜಾಗದಲ್ಲೂ ಜಾರು ಮಣ್ಣು ತುಂಬಿಕೊಂಡಿದೆ. "1999ರಲ್ಲಿಯೇ ನಾನು ಭೂಮಿಯನ್ನು ಬದಲಾಯಿಸಿಕೊಡುವಂತೆ ಸಬ್-ಕಲೆಕ್ಟರ್‌ಗೆ [ಪತ್ರ] ಬರೆದಿದ್ದೇನೆ. 2010ರಲ್ಲಿ, ಮಾಮ್ಲತ್‌ದಾರ್ [ತಾಲೂಕಿನ ತಹಸಿಲ್ದಾರ್] ನನ್ನ ಮನವಿಯನ್ನು ತಿರಸ್ಕರಿಸಿದರು, ಹಂಚಿಕೆ ಮಾಡಲಾದ 10 ವರ್ಷಗಳ ನಂತರ ಅರ್ಜಿ ಸಲ್ಲಿಸಲಾಗಿದೆ. ಹೀಗಾಗಿ ಏನೂ ಮಾಡಲಾಗದು ಎಂದು ಹೇಳಿದರು. ಕಳೆದ 10 ವರ್ಷಗಳಲ್ಲಿ ಆಡಳಿತ ಏನೂ ಮಾಡದಿರುವುದು ನನ್ನ ತಪ್ಪೇ?”

Walking through the puddles Chhaganbhai explains that the land is under water almost all the time
PHOTO • Parth M.N.

ಕೆಸರು ಹೊಂಡಗಳ ಮೂಲಕ ನಡೆಯುತ್ತಾ ಚಗನ್‌ ಭಾಯ್‌ ಭೂಮಿ ಸದಾ ನೀರಿನಲ್ಲಿ ಮುಳುಗಿರುತ್ತದೆ ಎಂದು ವಿವರಿಸುತ್ತಿರುವುದು

ಈ ನಿರ್ಲಕ್ಷ್ಯವು ಚಗನ್‌ಭಾಯ್ ಮತ್ತು ಅವರ ಕುಟುಂಬದ ಮೇಲೆ ತೀವ್ರವಾಗಿ ಪರಿಣಾಮ ಬೀರಿದೆ. ಇಡೀ ಕುಟುಂಬವು ಕೂಲಿ ಕೆಲಸದ ಮೇಲೆ ಮಾತ್ರ ಅವಲಂಬಿತವಾಗಿರುವಾಗ, ಬೆಳವಣಿಗೆ ಅಥವಾ ಭದ್ರತೆಗೆ ಯಾವುದೇ ಅವಕಾಶವಿಲ್ಲ ಎಂದು ಅವರ ಪತ್ನಿ ಕಾಂಚನ್‌ ಬೆನ್ ಹೇಳುತ್ತಾರೆ. ಅವರು ಹೇಳುತ್ತಾರೆ, “ಕೂಲಿ ಕೆಲಸದಲ್ಲಿ ನೀವು ಹಗಲಿನಲ್ಲಿ ಸಂಪಾದಿಸುತ್ತೀರಿ ಮತ್ತು ಸಂಜೆಗೆ ಆಹಾರ ಧಾನ್ಯಗಳನ್ನು ಖರೀದಿಸುತ್ತೀರಿ. ಭೂಮಿಯನ್ನು ಹೊಂದಿದ್ದರೆ, ನೀವು ಕನಿಷ್ಟ ಕುಟುಂಬಕ್ಕೆ ಬೇಕಾದ ಆಹಾರ ಧಾನ್ಯವನ್ನು ಬೆಳೆಯಬಹುದು ಮತ್ತು ಕೂಲಿ ಕೆಲಸದಿಂದ ಬಂದ ಹಣವನ್ನು ಇತರ ಅಗತ್ಯಗಳಿಗೆ ಬಳಸಬಹುದು.”

ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕುಟುಂಬ ಖಾಸಗಿ ಲೇವಾದೇವಿಗಾರರ ಬಳಿ ಸಾಲ ಮಾಡಬೇಕಾಗಿದೆ. "ಸುಮಾರು 10 ವರ್ಷಗಳ ಹಿಂದೆ, ನಾವು ತಿಂಗಳಿಗೆ ಶೇಕಡಾ 3ರಂತೆ 50,000 ರೂ ಸಾಲವನ್ನು ಪಡೆದಿದ್ದೇವೆ" ಎಂದು 40 ವರ್ಷದ ಕಾಂಚನ್‌ ಬೆನ್ ಹೇಳುತ್ತಾರೆ. ನಮಗೆ ನಾಲ್ಕು ಮಕ್ಕಳಿದ್ದಾರೆ. ಮತ್ತು ಆ ದಿನಗಳಲ್ಲಿ ನಾವು ದಿನಕ್ಕೆ 100-150 ರೂ ಗಳಿಸುತ್ತಿದ್ದೆವು, ನಮಗೆ ಹೆಚ್ಚಿನ ಆಯ್ಕೆಗಳಿರಲಿಲ್ಲ. ಆ ಸಾಲ ಈಗಲೂ ತೀರಿಲ್ಲ.

ಭೂಮಿಯ ಹಕ್ಕುಗಳನ್ನು ಕಳೆದುಕೊಳ್ಳುವುದರ ಪರಿಣಾಮಗಳು ಹಲವು ವಿಧದಲ್ಲಿರುತ್ತವೆ. ಅದಕ್ಕಾಗಿ ಅರ್ಜಿ ಸಲ್ಲಿಸಲು ಸಮಯ ಮತ್ತು ಶಕ್ತಿ ವ್ಯರ್ಥವಾಗುವುದು ಮತ್ತು ಅದು ಇನ್ನೂ ಸಿಗಲಿಲ್ಲವೆನ್ನುವ ಒತ್ತಡದ ಜೊತೆಗೆ, ಈ ವರ್ಷಗಳಲ್ಲಿ ಉಂಟಾಗುವ ಆರ್ಥಿಕ ನಷ್ಟವನ್ನು ಅಷ್ಟಾಗಿ ಗಮನಕ್ಕೆ ತೆಗೆದುಕೊಳ್ಳಲಾಗುವುದಿಲ್ಲ.

ರೈತರು ಎರಡು ಬೆಳೆ ಹಂಗಾಮಿನಲ್ಲಿ ಎಕರೆಯಿಂದ 25,000 ರೂ.ಗಳನ್ನು ಗಳಿಸಬಹುದು ಎಂದು ಭಾವಿಸಿದರೆ, ಮೇವಾನಿ ಅವರ ಪಿಐಎಲ್ ಸಲ್ಲಿಕೆಯಾದ 5-7 ವರ್ಷಗಳಲ್ಲಿ ರೈತರು ಎಕರೆಗೆ ಗಳಿಸಬಹುದಾಗಿದ್ದ 175,000 ರೂ.ಗಳು ಎಂದಾಯಿತು.

ಬಾಲಾಭಾಯಿ ಐದು ಎಕರೆ ಜಮೀನು ಹೊಂದಿದ್ದು, 25 ವರ್ಷಗಳಿಂದ ಅವರ ಜಮೀನಿನಲ್ಲಿ ಸಾಗುವಳಿ ಮಾಡಲು ಅವಕಾಶ ನೀಡಿಲ್ಲ. ಹಣದುಬ್ಬರವನ್ನು ಸರಿಹೊಂದಿಸಿ ಲೆಕ್ಕ ಹಾಕಿದರೆ, ಗಳಿಕೆಯು ಹಲವು ಲಕ್ಷ ರೂಪಾಯಿಗಳಿಗೆ ತಲುಪಬಹುದು. ಮತ್ತು ಇಲ್ಲಿ ಬಾಲಾಭಾಯಿಯಂತಹ ಸಾವಿರಾರು ರೈತರಿದ್ದಾರೆ.

ಅವರು ಹೇಳುತ್ತಾರೆ, “ಇಂದಿನ ಮಾರುಕಟ್ಟೆಯಲ್ಲಿ ಭೂಮಿಯ ಬೆಲೆ ಬರೋಬ್ಬರಿ 25 ಲಕ್ಷ ರೂ. ಭೂಮಿ ಸಿಕ್ಕಿದ್ದರೆ ನಾನು ರಾಜನಂತೆ ಬದುಕುತ್ತಿದ್ದೆ. ಮತ್ತು ನನ್ನ ಸ್ವಂತ ಮೋಟಾರ್ ಸೈಕಲ್ ಖರೀದಿಸಬಹುದಿತ್ತು.

ಭೂಮಿಯ ಸ್ವಾಧೀನತೆಯು ಆರ್ಥಿಕ ಸ್ಥಿರತೆಯನ್ನು ಖಾತ್ರಿಪಡಿಸುವುದು ಮಾತ್ರವಲ್ಲದೆ ಊರಿನಲ್ಲಿ ಘನತೆ ಮತ್ತು ಗೌರವವನ್ನು ಸಹ ತರುತ್ತದೆ. ಸುರೇಂದ್ರನಗರ ಜಿಲ್ಲೆಯ ಧ್ರಂಗಾಧ್ರ ತಾಲೂಕಿನ ರಾಮದೇವಪುರ ಗ್ರಾಮದ 75 ವರ್ಷದ ತ್ರಿಭುವನ್ ವಘೇಲಾ ಅವರು ಹೇಳುವಂತೆ, "ಬೇರೆಯವರ ಕೃಷಿ ಭೂಮಿಯಲ್ಲಿ ಕೂಲಿ ಕೆಲಸ ಮಾಡುವಾಗ ಮೇಲ್ಜಾತಿಯ ಭೂಮಾಲೀಕರು ನಿಮ್ಮನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಾರೆ. ನೀವು ಅವರ ಕರುಣೆಯಲ್ಲಿರುವ ಕಾರಣ ಅವರು ನಿಮ್ಮನ್ನು ಅವಮಾನಿಸುತ್ತಾರೆ. ನೀವು ಉದ್ಯೋಗಕ್ಕಾಗಿ ಅವರ ಮೇಲೆ ಅವಲಂಬಿತರಾಗಿರುವಾಗ ತಿರುಗಿ ಬೀಳುವುದು ಕೂಡಾ ಸಾಧ್ಯವಿಲ್ಲ."

Tribhuvan Vaghela says it took 26 years of struggle for him to get possession of his land.
PHOTO • Parth M.N.
Vaghela's daugher-in-law Nanuben and son Dinesh at their home in Ramdevpur village
PHOTO • Parth M.N.

ಎಡ: ತಮ್ಮ ಪಾಲಿನ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು 26 ವರ್ಷಗಳ ಕಾಲ ಹೋರಾಡಬೇಕಾಯಿತು ಎಂದು ತ್ರಿಭುವನ್ ವಘೇಲಾ ಹೇಳುತ್ತಾರೆ. ಬಲ: ರಾಮದೇವಪುರ ಗ್ರಾಮದಲ್ಲಿ ವಘೇಲಾ ಅವರ ಸೊಸೆ ನಾನುಬೆನ್ ಮತ್ತು ಮಗ ದಿನೇಶ್ ತಮ್ಮ ಮನೆಯಲ್ಲಿ

ಪರಿಶಿಷ್ಟ ಜಾತಿಯಡಿ ಪಟ್ಟಿ ಮಾಡಲಾಗಿರುವ ಬಂಕರ್ ಸಮುದಾಯಕ್ಕೆ ಸೇರಿದ ವಘೇಲಾ ಅವರಿಗೆ 1984ರಲ್ಲಿ ರಾಮದೇವಪುರದಲ್ಲಿ 10 ಎಕರೆ ಭೂಮಿ ಮಂಜೂರು ಮಾಡಲಾಗಿತ್ತು. ಆದರೆ ಅವರು ಅದನ್ನು 2010ರಲ್ಲಷ್ಟೇ ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಾಯಿತು. ಅವರು ಹೇಳುತ್ತಾರೆ, “ಸಮಾಜ ಜಾತಿ ತಾರತಮ್ಯದಿಂದ ಕುರುಡಾಗಿರುವುದರಿಂದ ಇದಕ್ಕೆ ಬಹಳ ಸಮಯ ಹಿಡಿಯಿತು. ನಾನು ನವಸರ್ಜನ್ ಟ್ರಸ್ಟ್‌ನ ಸಂಪರ್ಕಕ್ಕೆ ಬಂದೆ. ಅವರ ಕಾರ್ಯಕರ್ತರು ಪ್ರತಿಭಟನೆಗಳನ್ನು ನಡೆಸಿದರು ಮತ್ತು ಆಡಳಿತವನ್ನು [ಕ್ರಮ ಕೈಗೊಳ್ಳಲು] ಒತ್ತಾಯಿಸಿದರು. ನಾವು ಮಾಡಿದ್ದು ಧೈರ್ಯದ ಕೆಲಸ. ಆ ದಿನಗಳಲ್ಲಿ ಠಾಕೂರ್ [ರಜಪೂತ] ಜಾತಿಯ ವಿರುದ್ಧ ನಿಲ್ಲುವುದು ಸುಲಭವಿರಲಿಲ್ಲ."

ಗುಜರಾತ್‌ನ ಪ್ರಮುಖ ದಲಿತ ಹಕ್ಕುಗಳ ಹೋರಾಟಗಾರ ಮತ್ತು ನವಸರ್ಜನ್ ಟ್ರಸ್ಟ್‌ನ ಸಂಸ್ಥಾಪಕರಾದ ಮಾರ್ಟಿನ್ ಮೆಕ್‌ವಾನ್ ಹೇಳುವಂತೆ, ಭೂಸುಧಾರಣೆಗಳು ಸೌರಾಷ್ಟ್ರದಲ್ಲಿ - ಸುರೇಂದ್ರನಗರ ಜಿಲ್ಲೆಯಲ್ಲಿರುವ ಪ್ರದೇಶ - ಪಟೇಲ್ (ಪಾಟಿದಾರ್) ಜಾತಿಗೆ ಸೇರಿದ ಹಿಡುವಳಿದಾರ ರೈತರಿಗೆ ಹೇಗೆ ಪ್ರಯೋಜನವನ್ನು ನೀಡಿವೆ ಎಂಬುದನ್ನು ಸೂಚಿಸುತ್ತಾರೆ. , “ಸೌರಾಷ್ಟ್ರ [ರಾಜ್ಯ] ಅದರ ಮೊದಲ ಮುಖ್ಯಮಂತ್ರಿ ಉಚ್ಚಂಗರೇ ಧೇಬರ್ ಅವರು ಮೂರು ಕಾನೂನುಗಳನ್ನು ತಂದರು ಮತ್ತು 1960ರಲ್ಲಿ ಗುಜರಾತ್ ಪ್ರತ್ಯೇಕ ರಾಜ್ಯವಾಗುವ ಮೊದಲು [ಮತ್ತು ಹಿಂದಿನ ಸೌರಾಷ್ಟ್ರ ರಾಜ್ಯವನ್ನು ವಿಲೀನಗೊಳಿಸುವ] ಮೊದಲು ಪಟೇಲ ಸಮುದಾಯಕ್ಕೆ 30 ಲಕ್ಷ [3 ಮಿಲಿಯನ್] ಎಕರೆ ಭೂಮಿಯನ್ನು ಹಂಚಿದರು. ಸಮುದಾಯವು ತಮ್ಮ ಭೂಮಿಯನ್ನು ರಕ್ಷಿಸಿಕೊಂಡಿತು ಮತ್ತು ವರ್ಷಗಳ ನಂತರ ಗುಜರಾತ್‌ನಲ್ಲಿ ಅತ್ಯಂತ ಪ್ರಭಾವಶಾಲಿಯಾಯಿತು.”

ತಮ್ಮ ಭೂಮಿಗಾಗಿ ಹೋರಾಡುತ್ತಿದ್ದ ವಘೇಲರು ಅದೇ ಸಮಯದಲ್ಲಿ ಕೃಷಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಅವರು ಹೇಳುತ್ತಾರೆ, “ಆ ಹೋರಾಟ ಅಗತ್ಯವಾಗಿತ್ತು. ನಾನು ಅನುಭವಿಸಿದ ಕಷ್ಟವನ್ನು ನನ್ನ ಮಗ ಮತ್ತು ಅವನ ಮಕ್ಕಳು ಅನುಭವಿಸಬಾರದು ಎಂದು ನಾನು ಅದನ್ನು ಮಾಡಿದ್ದೇನೆ. ಇಂದು ಆ ಜಮೀನಿನ ಮಾರುಕಟ್ಟೆ ಮೌಲ್ಯ 50 ಲಕ್ಷ ರೂಪಾಯಿ. ಅಲ್ಲದೆ ಅವರು ಹಳ್ಳಿಯಲ್ಲಿ ತಲೆ ಎತ್ತಿ ನಡೆಯಬಹುದು."

ವಘೇಲಾ ಅವರ 31 ವರ್ಷದ ಸೊಸೆ ನಾನುಬೆನ್, ಈಗ ಕುಟುಂಬದಲ್ಲಿ  ಆತ್ಮವಿಶ್ವಾಸ ಬೆಳೆದಿದೆ ಎಂದು ಹೇಳುತ್ತಾರೆ. “ನಾವು ನಮ್ಮ ಕೃಷಿ ಭೂಮಿಯಲ್ಲಿ ಕಷ್ಟಪಟ್ಟು ದುಡಿಯುತ್ತೇವೆ ಮತ್ತು ಪ್ರತಿ ವರ್ಷ ಸುಮಾರು 1.5 ಲಕ್ಷ ರೂ. ದುಡಿಯುತ್ತೇವೆ. ಇದೇನೂ ಅಷ್ಟು ದೊಡ್ಡ ಮೊತ್ತವಲ್ಲವೆನ್ನುವುದು ನನಗೆ ತಿಳಿದಿದೆ. ಆದರೆ ನಮಗೆ ನಾವೇ ಮಾಲಕರು ಇಲ್ಲಿ. ನಾವು ಕೆಲಸ ಅಥವಾ ಹಣಕ್ಕಾಗಿ ಇನ್ನೊಬ್ಬರ ಭಿಕ್ಷೆ ಬೇಡುವ ಅಗತ್ಯವಿಲ್ಲ. ನನ್ನ ಮಕ್ಕಳಿಗೆ ಮದುವೆ ಮಾಡಲು ಕಷ್ಟವಾಗುವುದಿಲ್ಲ. ಭೂಮಿ ಇಲ್ಲದ ಕುಟುಂಬಕ್ಕೆ ತಮ್ಮ ಮಕ್ಕಳು ಮದುವೆಯಾಗುವುದನ್ನು ಯಾರೂ ಬಯಸುವುದಿಲ್ಲ."

ವಘೇಲಾ ಅವರ ಕುಟುಂಬ 10 ವರ್ಷಗಳಿಂದ ಅನುಭವಿಸುತ್ತಿರುವ ಸ್ವಾತಂತ್ರ್ಯವನ್ನು ಬಾಲಾಭಾಯ್ ಕೂಡಾ ಅನುಭವಿಸಲು ಬಯಸಿದ್ದಾರೆ. "ನಾನು ನನ್ನ ಬದುಕಿಡೀ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ದಿನಕ್ಕಾಗಿ ಕಾಯುತ್ತಿದ್ದೇನೆ," ಎಂದು ಅವರು ಹರಿದುಹೋದ ಕಾಗದಗಳನ್ನು ಅಂದವಾಗಿ ಮಡಚುತ್ತಾ ಹೇಳುತ್ತಾರೆ. “ನನ್ನ ಮಕ್ಕಳು 60 ವರ್ಷ ವಯಸ್ಸಿನಲ್ಲೂ ಕೂಲಿ ಕೆಲಸ ಮಾಡುವುದು ನನಗೆ ಇಷ್ಟವಿಲ್ಲ. ಅವರು ಸ್ವಲ್ಪ ಸ್ಥಾನಮಾನಗಳು ಮತ್ತು ಘನತೆಯಿಂದ ಬದುಕಬೇಕೆಂದು ನಾನು ಬಯಸುತ್ತೇನೆ.”

ಬಾಲಾಭಾಯಿ ಒಂದಲ್ಲ ಒಂದು ದಿನ ಭೂಮಿ ನನ್ನ ಕೈಗೆ ಬರಲಿದೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ. ಈಗಲೂ ಅವರು ಆ ಭೂಮಿಯಲ್ಲಿ ಹತ್ತಿ, ಜೋಳ ಮತ್ತು ಸಜ್ಜೆಯನ್ನು ಬೆಳೆಯಲು ಬಯಸುತ್ತಾರೆ. ಈಗಲೂ ಅವರಿಗೆ ತಮ್ಮದಾಗಲಿರುವ ಜಮೀನಿನಲ್ಲಿ ಒಂದು ಸಣ್ಣ ಮನೆ ಕಟ್ಟುವ ಕನಸಿದೆ. ಭೂಮಾಲಿಕನಾಗಿ ಬದುಕು ಹೇಗಿರುತ್ತದೆ ಎನ್ನುವುದನ್ನು ಅವರು ನೋಡಲು ಕಾತುರರಾಗಿದ್ದಾರೆ. ಈ ಕನಸುಗಳೇ ಅವರನ್ನು ಇಪ್ಪತೈದು ವರ್ಷಗಳಿಂದ ಕೈಹಿಡಿದು ನಡೆಸಿಕೊಂಡು ಬಂದಿವೆ. ಈ ಕನಸುಗಳೇ ಜಮೀನಿನ ಪತ್ರಗಳನ್ನು ಸುರಕ್ಷಿತವಾಗಿ ಇರಿಸಿಕೊಳ್ಳುವಂತೆ ಮಾಡಿವೆ. ಈ ಪತ್ರಗಳಿಗೆ ಒಂದು ದಿನ ಅರ್ಥ ಬರಲಿವೆ ಎಂಬ ನಂಬಿಕೆಯಲ್ಲಿದ್ದಾರೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಬಾಲಾಭಾಯ್‌ ಬದುಕಿನಲ್ಲಿ ಭರವಸೆ ಕಳೆದುಕೊಂಡಿಲ್ಲ. “ಅದೊಂದೇ ನನ್ನನ್ನು ಜೀವಂತವಾಗರಿಸಿರುವುದು.”

ಅನುವಾದ: ಶಂಕರ. ಎನ್. ಕೆಂಚನೂರು

Parth M.N.

Parth M.N. is a 2017 PARI Fellow and an independent journalist reporting for various news websites. He loves cricket and travelling.

Other stories by Parth M.N.
Editor : Vinutha Mallya

Vinutha Mallya is a journalist and editor. She was formerly Editorial Chief at People's Archive of Rural India.

Other stories by Vinutha Mallya
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru