ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಇಳಿಜಾರು ಮತ್ತು ಗುಡ್ಡಗಾಡು ಪ್ರದೇಶದಲ್ಲಿ ಟಣ್ ಟಣ್ ಟಣ್ ಎನ್ನುವ ದನಗಳ ಕೊರಳಿನ ಗಂಟೆಯ ಸದ್ದು ಈಗ ಅಷ್ಟಾಗಿ ಕೇಳುವುದಿಲ್ಲ. “ಅವುಗಳನ್ನು ಈಗ ಯಾರೂ ತಯಾರಿಸುತ್ತಿಲ್ಲ,” ಎನ್ನುತ್ತಾರೆ ಹುಕ್ರಪ್ಪ. ಆದರೆ ಹುಕ್ರಪ್ಪನವರು ಮಾತನಾಡುತ್ತಿರುವುದು ಸಾಮಾನ್ಯವಾಗಿ ದನಗಳ ಕೊರಳಿನಲ್ಲಿ ಕಂಡುಬರುವ ಲೋಹದ ಗಂಟೆಗಳ ಕುರಿತಾಗಿ ಅಲ್ಲ. ಅವರು ಮಾತನಾಡುತ್ತಿರುವುದು ಅವರ ಊರಾದ ಶಿಬಾಜೆಯಲ್ಲಿ ಹಿಂದೆ ದನಗಳ ಕೊರಳಲ್ಲಿ ಸರ್ವೇಸಾಮಾನ್ಯವಾಗಿದ್ದ ಕೈಯಿಂದ ತಯಾರಿಸಲಾಗುತ್ತಿದ್ದ ಬಿದಿರಿನ ಗಂಟೆಗಳ ಕುರಿತು. ಈ ವಿಶಿಷ್ಟ ಗಂಟೆಯನ್ನು 60ರ ಆಸುಪಾಸಿನ ಅಡಿಕೆ ಬೆಳೆಗಾರ ಹುಕ್ರಪ್ಪ ಅವರು ಹಲವು ವರ್ಷಗಳಿಂದ ತಯಾರಿಸುತ್ತಿದ್ದಾರೆ.

“ನಾನು ಈ ಮೊದಲು ದನ ಮೇಯಿಸುವ ಕೆಲಸ ಮಾಡುತ್ತಿದ್ದೆ,” ಎನ್ನುವ ಹುಕ್ರಪ್ಪನವರು “ನಾವು ದನ ಮೇಯಿಸಲು ಹೋದಾಗ ಕೆಲವೊಮ್ಮೆ ದನಗಳು ನಮ್ಮ ಕಣ್ಣುತಪ್ಪಿಸಿ ಕಳೆದುಹೋಗುತ್ತಿದ್ದವು. ಅವುಗಳನ್ನು ಸುಲಭವಾಗಿ ಗುರುತಿಸುವ ಸಲುವಾಗಿ ಅವುಗಳ ಕುತ್ತಿಗೆಗೆ ಬಿದಿರಿನ ಗಂಟೆ ಕಟ್ಟುವ ಯೋಚನೆ ಬಂದಿತು,” ಎನ್ನುತ್ತಾರೆ. ಈ ಗಂಟೆಯ ಸದ್ದು ದೂರದ ಸ್ಥಳಗಳಲ್ಲಿ ಅಥವಾ ಬೇರೆಯವರ ಗದ್ದೆಗಳಲ್ಲಿ ಮೇಯುತ್ತಿರಬಹುದಾದ ದನಗಳನ್ನು ಹುಡುಕಲು ಸಹಾಯ ಮಾಡುತ್ತದೆ. ನಂತರ ಗಂಟೆಗಳನ್ನು ತಯಾರಿಸುವ ವಿಷಯದಲ್ಲಿ ತಾನು ಸಹಾಯ ಮಾಡುವುದಾಗಿ ಊರಿನ ಹಿರಿಯರೊಬ್ಬರು ಮುಂದೆ ಬಂದರು. ಅವರಿಂದ ಈ ಕಲೆಯನ್ನು ಕಲಿತ ಹುಕ್ರಪ್ಪನವರು ಕೆಲವು ಗಂಟೆಗಳನ್ನು ಕಲಿಕೆಯ ಹಂತದಲ್ಲಿ ತಯಾರಿಸಿದರು. ದಿನ ಕಳೆದಂತೆ ಅವರ ಕೈ ಪಳಗತೊಡಗಿತು. ಸ್ಥಳೀಯವಾಗಿ ಬಿದಿರಿನ ಲಭ್ಯತೆಯಿದ್ದಿದ್ದೂ ಅವರಿಗೆ ಅನುಕೂಲಕರವಾಗಿ ಪರಿಣಮಿಸಿತು. ಅವರ ಊರು ಬೆಳ್ತಂಗಡಿ ಕುದುರೆಮುಖ ನ್ಯಾಷನಲ್‌ ಪಾರ್ಕ್‌ ವ್ಯಾಪ್ತಿಯಲ್ಲಿ ಬರುತ್ತದೆ. ಮತ್ತು ಇದು ಮೂರು ಜಾತಿಯ ಬಿದಿರಿನ ಗಿಡಗಳಿಗೆ ನೆಲೆ.

ಹುಕ್ರಪ್ಪನವ ಮನೆ ಮಾತಾದ ತುಳುವಿನಲ್ಲಿ ಇದನ್ನು ʼಬೊಮ್ಕʼ ಎಂದು ಕರೆದರೆ, ಕನ್ನಡದಲ್ಲಿ ಇದಕ್ಕೆ ʼಮೊಂಟೆʼ (ಕುಂದಾಪುರ ಕನ್ನಡದಲ್ಲಿ ʼಮರಣಿ ಗಂಟೆʼ) ಎನ್ನಲಾಗುತ್ತದೆ. ಇದು ಶಿಬಾಜೆ ಸಾಂಸ್ಕೃತಿಕ ಬದುಕಿನಲ್ಲಿ ತನ್ನದೇ ಆದ ವಿಶೇಷ ಮಹತ್ವವನ್ನು ಹೊಂದಿದೆ. ಇಲ್ಲಿನ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮೊಂಟೆಯನ್ನು ದೇವರಿಗೆ ಹರಕೆಯಾಗಿ ಒಪ್ಪಿಸಲಾಗುತ್ತದೆ. ಈ ದೇವಸ್ಥಾನವಿರುವ ಸ್ಥಳವನ್ನು ʼಮೊಂಟೆತಡ್ಕʼ ಎಂದೇ ಕರೆಯಲಾಗುತ್ತದೆ. ಇಲ್ಲಿ ಭಕ್ತಾದಿಗಳು ತಮ್ಮ ಜಾನುವಾರುಗಳ ಒಳಿತಿಗಾಗಿ ಮತ್ತು ತಮ್ಮ ಇಷ್ಟಾರ್ಥಗಳ ಈಡೇರಿಕೆಗಾಗಿ ಬೇಡಿಕೆಯಿಟ್ಟು ಈ ಗಂಟೆಗಳ ಹರಕೆ ಸಲ್ಲಿಸುತ್ತಾರೆ. ಕೆಲವು ಜನರು ಈ ಹರಕೆಗಾಗಿ ಗಂಟೆಗಳು ಬೇಕಾದಾಗ ಹುಕ್ರಪ್ಪನವರ ಬಳಿ ಬರುತ್ತಾರೆ. “ಸಾಮಾನ್ಯವಾಗಿ ಜನರು ಇದನ್ನು ಹರಕೆ ಸಲ್ಲಿಸುವ ಸಲುವಾಗಿ ಕೊ‍ಳ್ಳುತ್ತಾರೆ. ಉದಾಹರಣೆಗೆ ಕೆಲವೊಮ್ಮೆ ದನ ಕರು ಹಾಕದಿದ್ದಾಗ ಜನರು ದೇವಿಗೆ ಗಂಟೆ ಕೊಡುವುದಾಗಿ ಹರಕೆ ಹೊತ್ತುಕೊಳ್ಳುತ್ತಾರೆ,” ಎನ್ನುವ ಅವರು “ಮೊಂಟೆಯೊಂದಕ್ಕೆ ಸಾದಾರಣವಾಗಿ 50 ರೂಪಾಯಿಗಳನ್ನು ನೀಡಿದರೆ, ದೊಡ್ಡ ಮೊಂಟೆಗಳಿಗೆ 70 ರೂಪಾಯಿ ನೀಡುತ್ತಾರೆ,” ಎನ್ನುತ್ತಾರೆ.

ವಿಡಿಯೋ ನೋಡಿ: ಶಿಬಾಜೆಯ ಗಂಟೆ ತಯಾರಕ

ಕೃಷಿ ಮತ್ತು ಕರಕುಶಲ ತಯಾರಿಕೆಯತ್ತ ಹೊರಳುವ ಮೊದಲು, ಹುಕ್ರಪ್ಪನವರಿಗೆ ದನ ಮೇಯಿಸುವುದೇ ಜೀವನೋಪಾಯಕ್ಕಿದ್ದ ಏಕೈಕ ಮಾರ್ಗವಾಗಿತ್ತು. ಗ್ರಾಮದ ಇನ್ನೊಂದು ಮನೆಯ ಹಸುಗಳನ್ನು ಅವರ ಅಣ್ಣ ತಮ್ಮಂದಿರು ಮೇಯಿಸುತ್ತಿದ್ದರು. “ನಾವು ಯಾವುದೇ ರೀತಿಯ ಭೂಮಿ ಹೊಂದಿರಲಿಲ್ಲ. ಮನೆಯಲ್ಲಿ 10 ಮಂದಿ ಇದ್ದೆವು, ಆದ್ದರಿಂದ ಸಾಕಷ್ಟು ಆಹಾರ ಇರುತ್ತಿರಲಿಲ್ಲ. ನನ್ನ ತಂದೆ ಕೂಲಿ ಕೆಲಸ ಮಾಡುತ್ತಿದ್ದರು ಮತ್ತು ಅಕ್ಕಂದಿರು ಸಹ ಕೆಲಸಕ್ಕೆ ಹೋಗುತ್ತಿದ್ದರು,” ಎಂದು ಅವರು ಹೇಳುತ್ತಾರೆ. ನಂತರ, ಸ್ಥಳೀಯ ಜಮೀನುದಾರರೊಬ್ಬರು ಕುಟುಂಬಕ್ಕೆ ಹಿಡುವಳಿಯಲ್ಲಿ ಕೃಷಿ ಮಾಡಲು ಖಾಲಿ ಭೂಮಿಯನ್ನು ನೀಡಿದಾಗ, ಅಲ್ಲಿ ಅಡಿಕೆ ಬೆಳೆಯಲು ಪ್ರಾರಂಭಿಸಿದರು. "ಬಾಡಿಗೆಯಾಗಿ ಅವರಿಗೆ ಒಂದು ಪಾಲು ನೀಡಲಾಗುತ್ತಿತ್ತು. ಇದು 10 ವರ್ಷಗಳ ಕಾಲ ನಡೆಯಿತು. ಇಂದಿರಾ ಗಾಂಧಿಯವರು [1970 ರ ದಶಕದಲ್ಲಿ] ಭೂ ಸುಧಾರಣೆಗಳನ್ನು ಜಾರಿಗೊಳಿಸಿದಾಗ, ನಮಗೆ ಭೂಮಿಯ ಮಾಲೀಕತ್ವ ದೊರಕಿತು,” ಎಂದು ಅವರು ಹೇಳುತ್ತಾರೆ.

ಈ ಗಂಟೆಗಳ ತಯಾರಿಕೆಯಿಂದ ಆದಾಯ ಬರುವುದು ಅಷ್ಟರಲ್ಲೇ ಇದೆಯಾದರೂ, “ಈಗೀಗ ನಮ್ಮ ಕಡೆ ಇದನ್ನು ಯಾರೂ ತಯಾರಿಸುತ್ತಿಲ್ಲ. ನನ್ನ ಮಕ್ಕಳೂ ಇದರ ತಯಾರಿಕೆಯ ಕಲೆಯನ್ನು ಕಲಿತಿಲ್ಲ,” ಎಂದು ಹುಕ್ರಪ್ಪ ಹೇಳುತ್ತಾರೆ. ಜೊತೆಗೆ ಒಂದು ಕಾಲದಲ್ಲಿ ಸುಲಭವಾಗಿ ಸಿಗುತ್ತಿದ್ದ ಬಿದಿರು ಕೂಡಾ ಇಂದು ಸಿಗುತ್ತಿಲ್ಲ. "ಈಗ ಅದನ್ನು ತರಲು ನಾವು 7-8 ಮೈಲಿ (11-13 ಕಿಲೋಮೀಟರ್) ನಡೆಯಬೇಕು. ಅಲ್ಲಿಯೂ ಸಹ ಅದು ಕೆಲವೇ ವರ್ಷಗಳು ಮಾತ್ರ ಉಳಿಯಬಹುದು" ಎಂದು ಅವರು ಹೇಳುತ್ತಾರೆ.

ಆದರೆ ಶಿಬಾಜೆಯ ಹುಕ್ರಪ್ಪನವರ ನುರಿತ ಕೈಗಳಲ್ಲಿ, ಗಟ್ಟಿಯಾದ ಬಿದಿರನ್ನು ಕತ್ತರಿಸಿ, ಅದನ್ನು ಬಯಸಿದ ಆಕಾರದಲ್ಲಿ ಕೆತ್ತಿ, ಬಿದಿರಿನ ಘಂಟೆ ತಯಾರಿಸುವ ಕಲೆ ಇನ್ನೂ ಜೀವಂತವಾಗಿದೆ - ಅದರ ಧ್ವನಿ ಇನ್ನೂ ಬೆಳ್ತಂಗಡಿಯ ಕಾಡುಗಳಲ್ಲಿ ಪ್ರತಿಧ್ವನಿಸುತ್ತಿದೆ.

ಅನುವಾದ: ಶಂಕರ. ಎನ್. ಕೆಂಚನೂರು

Reporter : Vittala Malekudiya

Vittala Malekudiya is a journalist and 2017 PARI Fellow. A resident of Kuthlur village in Kudremukh National Park, in Beltangadi taluk of Dakshina Kannada district, he belongs to the Malekudiya community, a forest-dwelling tribe. He has an MA in Journalism and Mass Communication from Mangalore University and currently works in the Bengaluru office of the Kannada daily ‘Prajavani’.

Other stories by Vittala Malekudiya
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru