ಭಾನುಬೆನ್ ಭರ್ವಾಡ್ ಬನಸ್ಕಾಂತ ಜಿಲ್ಲೆಯ ತಮ್ಮ 2.5 ಎಕರೆ ಜಮೀನಿಗೆ ತೆರಳಿ ಒಂದು ವರ್ಷವಾಗಿದೆ. ಅವರೂ ಅವರ ಗಂಡನೂ ಆ ಜಮೀನಿಗೆ ನಿತ್ಯ ಹೋಗುತ್ತಿದ್ದ ಕಾಲವೊಂದಿತ್ತು. ಅಲ್ಲಿ ಅವರು ಬಜ್ರಾ, ಹೆಸರು, ಜೋಳ ಬೆಳೆದು ಅದನ್ನು ವರ್ಷವಿಡೀ ಆಹಾರಕ್ಕಾಗಿ ಬಳಸುತ್ತಿದ್ದರು. ಈ ಕೃಷಿಭೂಮಿ ಅವರಿಗೆ ಆಹಾರದ ಮುಖ್ಯ ಮೂಲವಾಗಿತ್ತು, ಆದರೆ 2017ರ ವಿನಾಶಕಾರಿ ಪ್ರವಾಹದ ನಂತರ, ಅವರ ಜಮೀನು ಸಂಪೂರ್ಣವಾಗಿ ನಾಶವಾಯಿತು. ನಂತರ ನಮ್ಮ ಆಹಾರ ವ್ಯವಸ್ಥೆ ಬದಲಾಯಿತು’ ಎನ್ನುತ್ತಾರೆ ಭಾನುಬೆನ್ (35). "ನಾವು ಈಗ ಭೂಮಿಯಲ್ಲಿ ಕೊಯ್ಲು ಮಾಡುತ್ತಿದ್ದ ಬೆಳೆಗಳನ್ನು ಖರೀದಿಸಬೇಕಾಗಿದೆ."

ಅವರು ತಮ್ಮ ಅರ್ಧ ಎಕರೆ ಭೂಮಿಯಲ್ಲಿ ಸಜ್ಜೆ ಕೃಷಿ ಮಾಡುತ್ತಿದ್ದರು ಮತ್ತು ಅದರಿಂದ ಸುಮಾರು 4 ಕ್ವಿಂಟಾಲ್ (400 ಕೆಜಿ) ಧಾನ್ಯವನ್ನು ಕೊಯ್ಲು ಮಾಡುತ್ತಿದ್ದರು. ಈಗ ಮಾರುಕಟ್ಟೆಯಿಂದ ಅಷ್ಟೇ ಪ್ರಮಾಣದ ಸಜ್ಜೆ ಖರೀದಿಸಲು ಸುಮಾರು 10 ಸಾವಿರ ರೂ. ಖರ್ಚು ಮಾಡಬೇಕು. ಅಲ್ಲದೆ, ಬೆಲೆ ಹೆಚ್ಚಳವನ್ನು ನೋಡಿದರೆ, ಅರ್ಧ ಎಕರೆ ಭೂಮಿಯಲ್ಲಿ ಸಜ್ಜೆ ಬೆಳೆಯಲು ನಾವು ಮಾರುಕಟ್ಟೆಯ ಅರ್ಧದಷ್ಟು (ಒಳಸುರಿಗಳ ವಿಷಯದಲ್ಲಿ) ಖರ್ಚು ಮಾಡಿದರೆ ಸಾಲುತ್ತಿತ್ತು ಎಂದು ಅವರು ಹೇಳುತ್ತಾರೆ. “ಈ ಲೆಕ್ಕಾಚಾರವು ಇತರ ಬೆಳೆಗಳಿಗೂ ಅನ್ವಯಿಸುತ್ತದೆ. [ನಾವು ಬೆಳೆಯುವ] ಪ್ರತಿ ಬೆಳೆಗೆ ಬೆಲೆ ದ್ವಿಗುಣಗೊಂಡಿದೆ.

ಭಾನುಬೆನ್, ಅವರ ಪತಿ ಭೋಜಾಭಾಯಿ, 38, ಮತ್ತು ಅವರ ಮೂವರು ಮಕ್ಕಳು ಬನಸ್ಕಾಂತದ ಕಂಕ್ರೇಜ್ ತಾಲೂಕಿನ ತೋತಾನಾ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ಭೋಜಾಭಾಯಿ ಅವರು ತಮ್ಮ ಹೊಲಗಳಲ್ಲಿ ಕೃಷಿ ಮಾಡುತ್ತಿದ್ದಾಗಲೂ ತಮ್ಮ ಆದಾಯಕ್ಕೆ ಪೂರಕವಾಗಿ ಕೃಷಿ ಕೂಲಿ ಕೆಲಸ ಮಾಡುತ್ತಿದ್ದರು. ಆದರೆ 2017ರಿಂದ ಪೂರ್ಣಾವಧಿ ಕೃಷಿ ಕೂಲಿ ಕೆಲಸ ಮಾಡಬೇಕಾಗಿದೆ. ಅವರು 30 ಕಿಲೋಮೀಟರ್ ದೂರದಲ್ಲಿರುವ ಪಟಾನ್‌ನಲ್ಲಿ ನಿರ್ಮಾಣ ಸ್ಥಳಗಳು ಮತ್ತು ಫಾರ್ಮ್‌ಗಳಲ್ಲಿ ಕೆಲಸ ಮಾಡುತ್ತಾರೆ. ಭಾನುಬೆನ್ ಹೇಳುತ್ತಾರೆ, “ಅವರು ಇನ್ನೂ ಕೆಲಸದ ಹುಡುಕಾಟದಲ್ಲಿದ್ದಾರೆ. ಕೆಲಸ ಸಿಕ್ಕರೆ ದಿನಕ್ಕೆ 200 ರೂ. ಸಂಪಾದಿಸುತ್ತಾರೆ."

ಭಾನುಬೆನ್ ಮತ್ತು ಭೋಜಭಾಯಿಯವರ ಕಿರಿಯ ಮಗಳಾದ ಸುಹಾನಾ ವಿನಾಶಕಾರಿ ಪ್ರವಾಹ ಬಂದ  ವರ್ಷವೇ ಜನಿಸಿದಳು. ಆಕೆಯ ಹಣೆಯನ್ನು ನೇವರಿಸುತ್ತ, ಭಾನುಬೆನ್ ಈಗಾಗಲೇ ಐದು ವರ್ಷಗಳು ಕಳೆದುಹೋಗಿವೆಯೆನ್ನುವುದನ್ನು ನಂಬಲಾಗುತ್ತಿಲ್ಲ ಎನ್ನುತ್ತಾರೆ.

ಬನಸ್ಕಾಂತ, ಪಟಾನ್, ಸುರೇಂದ್ರನಗರ, ಅರಾವಳಿ ಮತ್ತು ಮೊರ್ಬಿ ಸೇರಿದಂತೆ ಗುಜರಾತ್‌ನ ಹಲವಾರು ಜಿಲ್ಲೆಗಳು ಜುಲೈ 2017ರಲ್ಲಿ ಭಾರೀ ಮಳೆಯಿಂದ ಹಾನಿಗೊಳಗಾದವು. ಅರಬ್ಬಿ ಸಮುದ್ರ ಮತ್ತು ಬಂಗಾಳಕೊಲ್ಲಿಯಲ್ಲಿ ಏಕಕಾಲದಲ್ಲಿ ಉಂಟಾಗಿರುವ ಕಡಿಮೆ ಒತ್ತಡವೇ ಮಳೆಯ ಪ್ರಮಾಣಕ್ಕೆ ಪ್ರಮುಖ ಕಾರಣ. ಇದೊಂದು ಅಪರೂಪದ ವಿದ್ಯಮಾನವಾಗಿತ್ತು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ವರದಿಯ ಪ್ರಕಾರ , ಇದು ಕಳೆದ 112 ವರ್ಷಗಳಲ್ಲಿ ಈ ಪ್ರದೇಶದಲ್ಲಿ ಸುರಿದ ಗರಿಷ್ಠ ಮಳೆಯಾಗಿದೆ.

PHOTO • Parth M.N.
PHOTO • Parth M.N.

ಎಡ: ಭಾನುಬೆನ್ ಭರ್ವಾಡ್ ತನ್ನ ನಾಲ್ಕು ವರ್ಷದ ಮಗಳು ಸುಹಾನಾ ಜೊತೆ ಬನಸ್ಕಾಂತ ಜಿಲ್ಲೆಯ ತೋತಾನಾ ಗ್ರಾಮದ ತಮ್ಮ ಮನೆಯ ಹೊರಗೆ. ಬಲ: ಭಾನುಬೆನ್ ಆಲೂಗಡ್ಡೆ ಸುಲಿಯುತ್ತಾ, 2017ರ ಪ್ರವಾಹದಲ್ಲಿ ತನ್ನ ಸಂಪೂರ್ಣ ಹೊಲವು ಹೇಗೆ ಮುಳುಗಿತು ಎಂಬುದನ್ನು ವಿವರಿಸುತ್ತಿದ್ದಾರೆ

ಬನಸ್ಕಾಂತವು ಜುಲೈ 24 ಮತ್ತು ಜುಲೈ 27ರ ನಡುವೆ ವಾರ್ಷಿಕ ಸರಾಸರಿ ಮಳೆಯ 163 ಪ್ರತಿಶತದಷ್ಟು ಮಳೆಗೆ ಸಾಕ್ಷಿಯಾಗಿದೆ, ಸಾಮಾನ್ಯವಾಗಿ ಜುಲೈ ತಿಂಗಳಿನಲ್ಲಿ ವಾರ್ಷಿಕ ಸರಾಸರಿ ಮಳೆಯ 30 ಪ್ರತಿಶತ ಮಾತ್ರವೇ ದಾಖಲಾಗುತ್ತದೆ. ಈ ಕಾರಣದಿಂದಾಗಿ, ಇಡೀ ಪ್ರದೇಶದಲ್ಲಿ ನೀರು ನಿಲ್ಲುವುದು, ಅಣೆಕಟ್ಟುಗಳು ಉಕ್ಕಿ ಹರಿಯುವುದು ಮತ್ತು ತ್ವರಿತ ಪ್ರವಾಹದಂತಹ ವಿಪತ್ತುಗಳು ಸಂಭವಿಸಿದವು. ತೋತಾನಾಕ್ಕೆ ಹೊಂದಿಕೊಂಡಿರುವ ಕಾಂಕ್ರೇಜ್ ತಾಲೂಕಿನ ಖಾರಿಯಾ ಗ್ರಾಮದ ಬಳಿ ನರ್ಮದಾ ಕಾಲುವೆಯಲ್ಲಿ ಬಿರುಕು ಕಾಣಿಸಿಕೊಂಡಾಗ ಪರಿಸ್ಥಿತಿ ನಿಯಂತ್ರಿಸಲು ಸಾಧ್ಯವಾಗಲಿಲ್ಲ.

ಪ್ರವಾಹದಿಂದಾಗಿ ರಾಜ್ಯದಲ್ಲಿ ಕನಿಷ್ಠ 213 ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಸುಮಾರು 11 ಲಕ್ಷ ಹೆಕ್ಟೇರ್ ಕೃಷಿ ಭೂಮಿ ಮತ್ತು 17,000 ಹೆಕ್ಟೇರ್ ತೋಟಗಾರಿಕೆ-ಭೂಮಿ ಕೆಟ್ಟದಾಗಿ ಹಾನಿಗೊಳಗಾಗಿದೆ.

ಆಲೂಗಡ್ಡೆ ಕತ್ತರಿಸುತ್ತಾ ತನ್ನ ಮನೆಯ ಹೊರಗೆ ಕುಳಿತು ಭಾನುಬೆನ್ ನೆನಪಿಸಿಕೊಳ್ಳುತ್ತಾರೆ, “ನಮ್ಮ ಇಡೀ ಹೊಲ ನೀರಿನಲ್ಲಿ ಮುಳುಗಿತ್ತು. ಪ್ರವಾಹದ ನೀರು ತನ್ನೊಂದಿಗೆ ದಟ್ಟವಾದ ಮರಳಿನ ಪದರವನ್ನು ತಂದಿತ್ತು. ಕೆಲವು ದಿನಗಳ ನಂತರ ನೀರು ಕಡಿಮೆಯಾಯಿತು, ಆದರೆ ಮರಳು ಮಣ್ಣಿನಲ್ಲಿ ಹೆಪ್ಪುಗಟ್ಟಿತ್ತು.

ಮಣ್ಣಿನಿಂದ ಮರಳನ್ನು ಬೇರ್ಪಡಿಸುವುದು ಅಸಾಧ್ಯವಾಗಿತ್ತು. "ಪ್ರವಾಹವು ನಮ್ಮ ಹೊಲಗಳ ಫಲವತ್ತತೆಯನ್ನು ಹಾಳುಮಾಡಿತು," ಎಂದು ಅವರು ಹೇಳುತ್ತಾರೆ.

ಈಗ ದಿನಗೂಲಿಯೇ ಅವರ ಆದಾಯದ ಮೂಲವಾಗಿದೆ. ಕೂಲಿ ಇಲ್ಲದ ಕಾರಣ ತಿನ್ನಲು ಆಹಾರ ಖರೀದಿಸಲು ಸಾಧ್ಯವಾಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕಾರ್ಬೋಹೈಡ್ರೇಟ್‌ಗಳು, ಪ್ರೊಟೀನ್‌ಗಳು ಮತ್ತು ತರಕಾರಿಗಳನ್ನು ಒಳಗೊಂಡಿರುವ ಸಮತೋಲಿತ ಊಟವನ್ನು ಭರಿಸುವುದು ಭಾನುಬೆನ್ ಅವರ ಕುಟುಂಬದ ಸಾಮರ್ಥ್ಯವನ್ನು ಮೀರಿದೆ. ಆ ಸಮಯದಲ್ಲಿ ಕೇವಲ ಒಂದು ವರ್ಷ ವಯಸ್ಸಿನ ಪುಟ್ಟ ಸುಹಾನಾ ಇದರ ಭಾರವನ್ನು ಹೊರಬೇಕಾಯಿತು. ಅವರು ವಿವರಿಸುತ್ತಾರೆ, “ನಾವು ಆಹಾರ ಧಾನ್ಯಗಳನ್ನು ಹೊಂದಿದ್ದರಿಂದ ಮಾರುಕಟ್ಟೆಯಿಂದ ಹಣ್ಣುಗಳು ಮತ್ತು ತರಕಾರಿಗಳು ಮತ್ತು ಹಾಲನ್ನು ಮಾತ್ರ ಖರೀದಿಸುತ್ತಿದ್ದೆವು. ಆದರೆ ಈಗ ನಾವು ನಮ್ಮ ಎಲ್ಲಾ ಅಗತ್ಯಗಳನ್ನು ಕಡಿತಗೊಳಿಸಬೇಕಾಗಿದೆ."

ಅವರು ಹೇಳುತ್ತಾರೆ, “ನಾನು ಕೊನೆಯ ಬಾರಿಗೆ ಸೇಬನ್ನು ಖರೀದಿಸಿದ್ದು ಯಾವಾಗೆನ್ನುವುದು ನೆನಪಿಲ್ಲ. ಇವತ್ತು ಸೇಬು ಖರೀದಿಸಿದರೂ ನಾಳೆ ಕೆಲಸ ಸಿಗುತ್ತದೆ ಎಂಬ ಗ್ಯಾರಂಟಿ ಇಲ್ಲ. ಆದ್ದರಿಂದ, ನಾವು ಒಂದಿಷ್ಟು ಹಣವನ್ನು ಉಳಿಸುತ್ತೇವೆ. ನಮ್ಮ ಮುಖ್ಯ ಆಹಾರ ದಾಲ್, ಅನ್ನ ಮತ್ತು ರೊಟ್ಟಿ. ಹಿಂದೆ ನಾವು ಖಿಚಡಿ ಮಾಡುವಾಗ ಒಂದು ಕಿಲೋ ಅಕ್ಕಿಗೆ ಸರಾಸರಿ 500 ಗ್ರಾಂ ಬೇಳೆ ಹಾಕುತ್ತಿದ್ದೆವು. ಈಗ ನಾವು ಕೇವಲ 200 ಗ್ರಾಂ ಬೇಳೆಕಾಳುಗಳೊಂದಿಗೆ ನಮ್ಮ ವ್ಯವಹಾರವನ್ನು ನಡೆಸುತ್ತೇವೆ. ಹೇಗೋ ಒಂದು ನಮ್ಮ ಹಸಿವನ್ನು ತಣಿಸಿಕೊಳ್ಳುವುದು ಅನಿವಾರ್ಯ."

ಆದಾಗ್ಯೂ, ಈ ಆಹಾರದ ಅಸಮತೋಲನವು ಹಲವಾರು ಅಡ್ಡ ಪರಿಣಾಮಗಳನ್ನು ಹೊಂದಿದ್ದು ಅದು ವಿವಿಧ ಸಮಸ್ಯೆಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ.

ಸುಹಾನಾ ಯಾವಾಗಲೂ ಅಶಕ್ತಳಾಗಿರುತ್ತಾಳೇ ಮತ್ತು ಅವಳ ರೋಗನಿರೋಧಕ ಶಕ್ತಿ ಕೂಡ ಉತ್ತಮವಾಗಿಲ್ಲ. ಆಕೆಯ ತಾಯಿ ಹೇಳುತ್ತಾರೆ, “ಅವಳು ತನ್ನ ವಯಸ್ಸಿನ ಇತರ ಮಕ್ಕಳಂತೆ ಹೆಚ್ಚು ಆಡುವುದಿಲ್ಲ ಮತ್ತು ಅವರಿಗಿಂತ ಮುಂಚೆಯೇ ಸುಸ್ತಾಗುತ್ತಾಳೆ. ಅವಳು ಆಗಾಗ್ಗೆ ಅನಾರೋಗ್ಯಕ್ಕೂ ಒಳಗಾಗುತ್ತಾಳೆ."

PHOTO • Parth M.N.

ಸುಹಾನಾ (ಎಡ) ತನ್ನ ಸ್ನೇಹಿತೆ ಮೆಹದಿ ಖಾನ್ (ಮಧ್ಯದಲ್ಲಿ) ಜೊತೆ ಮಾತಿನಲ್ಲಿ ತೊಡಗಿದ್ದಾಳೆ. 2021ರಲ್ಲಿ ಅವರ ಗ್ರಾಮದಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಐದು ವರ್ಷದೊಳಗಿನ 37 ಮಕ್ಕಳಲ್ಲಿ ಈ ಇಬ್ಬರು ಸೇರಿದ್ದಾರೆ

ಜೂನ್ 2021ರಲ್ಲಿ ತೋತಾನಾ ಗ್ರಾಮದಲ್ಲಿ ನಡೆಸಿದ ಆರೋಗ್ಯ ಸಮೀಕ್ಷೆಯಲ್ಲಿ ಸುಹಾನಾ ಅಪೌಷ್ಟಿಕತೆಯಿಂದ ಬಳಲುತ್ತಿರುವುದು ಕಂಡುಬಂದಿದೆ. ಸಮೀಕ್ಷೆಯನ್ನು ಒಳಗೊಂಡ 320 ಮಕ್ಕಳಲ್ಲಿ 37 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿರುವುದು ಕಂಡುಬಂದಿದ್ದು, ಅವರೆಲ್ಲರೂ ಐದು ವರ್ಷದೊಳಗಿನವರು. ನವಸರ್ಜನ್ ಟ್ರಸ್ಟ್‌ಗೆ ಸಂಬಂಧಿಸಿದ ಸಾಮಾಜಿಕ ಕಾರ್ಯಕರ್ತ ಮೋಹನ್ ಪರ್ಮಾರ್ ಹೇಳುತ್ತಾರೆ, "ಈ ಮಕ್ಕಳ ಎತ್ತರ, ತೂಕ ಮತ್ತು ವಯಸ್ಸಿನ ಡೇಟಾವನ್ನು ಸಂಗ್ರಹಿಸಲಾಗಿದೆ ಮತ್ತು ಆ ಡೇಟಾವನ್ನು ವಿಶ್ಲೇಷಿಸಲಾಗಿದೆ." ಈ ಟ್ರಸ್ಟ್ ಗುಜರಾತ್‌ನ ಮಾನವ ಹಕ್ಕುಗಳ ಸಂಘಟನೆಯಾಗಿದ್ದು, ಇಡೀ ಬನಸ್ಕಾಂತ ಜಿಲ್ಲೆಯಲ್ಲಿ ಈ ಸಂಶೋಧನಾ ಅಭಿಯಾನವನ್ನು ನಡೆಸಿತ್ತು.

ಸಾರ್ವಜನಿಕ ಆರೋಗ್ಯ ಸೂಚ್ಯಂಕ 2019-21ರ ಡೇಟಾ ಟಿಪ್ಪಣಿಯನ್ನು ಆಧರಿಸಿ 'ಪೋಷಣ್' ಅಭಿಯಾನವು ಸಿದ್ಧಪಡಿಸಿದ ಗುಜರಾತ್ ಪೌಷ್ಟಿಕಾಂಶದ ಮಾದರಿಯ ಪ್ರಕಾರ 'ಹೆಚ್ಚು ಪೀಡಿತ ಜಿಲ್ಲೆಗಳ' ಪಟ್ಟಿಯಲ್ಲಿನ ಮೊದಲ ಐದು ಜಿಲ್ಲೆಗಳಲ್ಲಿ ಬನಸ್ಕಾಂತ ಒಂದಾಗಿದೆ. ಇದರಲ್ಲಿ ಒಳಗೊಂಡಿರುವ ಇತರ ಜಿಲ್ಲೆಗಳು ಅಹಮದಾಬಾದ್, ವಡೋದರಾ ಮತ್ತು ಸೂರತ್.

ಗುಜರಾತ್‌ನಲ್ಲಿ 5 ವರ್ಷದೊಳಗಿನ 23 ಲಕ್ಷ (2.3 ಮಿಲಿಯನ್) ಕಡಿಮೆ ತೂಕದ ಮಕ್ಕಳಲ್ಲಿ, 17 ಲಕ್ಷ ಮಂದಿ ಬನಸ್ಕಾಂತದಲ್ಲಿದ್ದಾರೆ, ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 2019-21 ( NFHS-5 ) ಆಧರಿಸಿದ ಡೇಟಾ ಟಿಪ್ಪಣಿಗಳು. ಇವರಲ್ಲಿ 1.5 ಮಿಲಿಯನ್ ಮಕ್ಕಳು ತಮ್ಮ ವಯಸ್ಸಿಗೆ ತಕ್ಕಂತೆ ಬೆಳವಣಿಗೆಯಿಂದ ಕುಂಠಿತರಾಗಿದ್ದಾರೆ ಮತ್ತು ಸುಮಾರು 1 ಮಿಲಿಯನ್ ಮಕ್ಕಳು ತಮ್ಮ ವಯಸ್ಸು ಮತ್ತು ಎತ್ತರಕ್ಕೆ ಕಡಿಮೆ ತೂಕವನ್ನು ಹೊಂದಿದ್ದಾರೆ. ರಾಜ್ಯದ ಇತರ ಮಕ್ಕಳಿಗೆ ಹೋಲಿಸಿದರೆ ಅವರ ಸಂಖ್ಯೆ ಕ್ರಮವಾಗಿ ಶೇ.6.5 ಮತ್ತು ಶೇ.6.6.

ಅಪೌಷ್ಟಿಕತೆಯ ಪ್ರಮುಖ ಅಡ್ಡ ಪರಿಣಾಮವೆಂದರೆ ರಕ್ತಹೀನತೆ, ಇದು ಭಾರತದ ಎಲ್ಲಾ ರಾಜ್ಯಗಳಿಗೆ ಹೋಲಿಸಿದರೆ ಗುಜರಾತ್‌ನಲ್ಲಿ ಅತಿ ಹೆಚ್ಚು. ಗುಜರಾತ್‌ನಲ್ಲಿ ಸುಮಾರು 80 ಪ್ರತಿಶತ ಜನರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ. ಬನಸ್ಕಾಂತದಲ್ಲಿ 5 ವರ್ಷದೊಳಗಿನ ಸುಮಾರು 2.8 ಲಕ್ಷ ಮಕ್ಕಳು ರಕ್ತಹೀನತೆಯಿಂದ ಬಳಲುತ್ತಿದ್ದಾರೆ.

ಸಾಕಷ್ಟು ಆಹಾರದ ಕೊರತೆಯಿಂದಾಗಿ, ಸುಹಾನಾ ಮತ್ತು ಅವಳಂತಹ ಇತರ ಮಕ್ಕಳು ಮತ್ತು ಅವರ ಕುಟುಂಬಗಳ ಜೀವವು ಅಪಾಯದಲ್ಲಿದೆ. ಅಂತಹ ಪರಿಸ್ಥಿತಿಯಲ್ಲಿ, ಹವಾಮಾನ ಮತ್ತು ನೈಸರ್ಗಿಕ ವಿಕೋಪಗಳ ಬದಲಾವಣೆಯಿಂದ ಉಂಟಾಗುವ ತೊಂದರೆಗಳು ಪರಿಸ್ಥಿತಿಯನ್ನು ಇನ್ನಷ್ಟು ಗಂಭೀರಗೊಳಿಸಿವೆ.

ʼ ಹವಾಮಾನ ಬದಲಾವಣೆಯ ಕುರಿತ ಗುಜರಾತ್ ರಾಜ್ಯ ಕ್ರಿಯಾ ಯೋಜನೆಯು ʼ ತಾಪಮಾನ ಮತ್ತು ಮಳೆಯ ತೀವ್ರತೆ ಮತ್ತು ಸಮುದ್ರ ಮಟ್ಟದ ಏರಿಕೆಯನ್ನು "ಪ್ರಮುಖ ಹವಾಮಾನ ಬದಲಾವಣೆ ಬೆದರಿಕೆಗಳು," ಎಂದು ಗುರುತಿಸುತ್ತದೆ. ಕಳೆದ ದಶಕದಲ್ಲಿ ಅಸಾಧಾರಣವಾಗಿ ಭಾರಿ ಮತ್ತು ಅನಿಯಮಿತವಾಗಿರುವ ಮಳೆಯು ಸ್ಥಳೀಯ ಜನರಿಗೆ ಹೊಸ ಸವಾಲುಗಳನ್ನು ತಂದಿದೆ. ಇದು ಭಾರತದಲ್ಲಿನ ಬರ ಮತ್ತು ಪ್ರವಾಹಗಳನ್ನು ಅಧ್ಯಯನ ಮಾಡುತ್ತಿರುವ ಆಂಟಿಸಿಪೇಟ್ ರಿಸರ್ಚ್ ಪ್ರಾಜೆಕ್ಟ್‌ನ ಅಭಿಪ್ರಾಯವಾಗಿದೆ. ಬನಸ್ಕಾಂತದಲ್ಲಿರುವ ರೈತರು ಮತ್ತು ಇತರರು "ಇದೀಗ ಬರ ಮತ್ತು ಪ್ರವಾಹದ ಸಂಘರ್ಷದ ಸಂದರ್ಭಗಳನ್ನು ಎದುರಿಸಲು ಹೆಣಗಾಡುತ್ತಿದ್ದಾರೆ, ಏಕೆಂದರೆ ಅವುಗಳು ಎಂದಿಗಿಂತಲೂ ಹೆಚ್ಚು ಪುನರಾವರ್ತನೆಯಾಗುತ್ತಿವೆ," ಎಂದು ಯೋಜನೆಯ ಸಂಶೋಧಕರು ಹೇಳುತ್ತಾರೆ.

PHOTO • Parth M.N.
PHOTO • Parth M.N.

ಎಡ: ಅಲಭಾಯಿ ಪರ್ಮಾರ್ ತನ್ನ ಮೂರು ವರ್ಷದ ಮೊಮ್ಮಗ ಯುವರಾಜ್ ಜೊತೆಗೆ ಸುದ್ರೋಸನ್ ಗ್ರಾಮದ ಮನೆಯಲ್ಲಿ. ಬಲ: ತೋಟನ ಗ್ರಾಮದ ಗದ್ದೆಯ ಮಣ್ಣಿನ ಮೇಲೆ ಮರಳಿನ ಪದರ

ಅಲಾಭಾಯಿ ಪರ್ಮಾರ್ (60 ವರ್ಷ) ಅವರು ಈ ವರ್ಷ ಮುಂಗಾರು ಮಳೆಯಲ್ಲಿ ನಾಲ್ಕು ಬೆಳೆಗಳನ್ನು ಕಳೆದುಕೊಂಡಿದ್ದಾರೆ. ಬನಸ್ಕಾಂತ ಜಿಲ್ಲೆಯ ಸುದ್ರೋಸನ್ ಎನ್ನುವ ಹಳ್ಳಿಯಲ್ಲಿರುವ ಅವರ ಮನೆಯಲ್ಲಿ ಅವರು ಹೇಳುತ್ತಾರೆ, “ನಾನು ಬೆಳೆಗಳನ್ನು ಹಾಕುತ್ತಿದ್ದೆ ಮತ್ತು ಭಾರೀ ಮಳೆಯು ಕೊಚ್ಚಿಕೊಂಡು ಹೋಯಿತು. ನಾವು ಗೋಧಿ, ಬಾಜ್ರಾ ಮತ್ತು ಜೋಳವನ್ನು ಬಿತ್ತಿದ್ದೇವೆ. ಇದಲ್ಲದೆ, ನಾವು ಖರ್ಚು ಮಾಡಿದ 50,000 ರೂ. ಕೂಡ ನಷ್ಟವಾಯಿತು."

ಅಲಾಭಾಯಿ ಹೇಳುತ್ತಾರೆ, "ಈಗ ನೀವು ಹವಾಮಾನದ ಬಗ್ಗೆ ಏನನ್ನೂ ಹೇಳಲು ಸಾಧ್ಯವಿಲ್ಲ." ರೈತರ ಇಳುವರಿಯಲ್ಲಿ ನಿರಂತರ ಕುಸಿತ ಕಂಡುಬಂದ ಕಾರಣ ತಾವು ದಿನಗೂಲಿ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಅವರು ಗಮನಸೆಳೆಯುತ್ತಾರೆ. 10 ಎಕರೆ ಜಮೀನು ಹೊಂದಿದ್ದರೂ, ನನ್ನ ಮಗ ಬೇರೊಬ್ಬರ ಜಮೀನಿನಲ್ಲಿ ಅಥವಾ ನಿರ್ಮಾಣ ಹಂತದಲ್ಲಿರುವ ಜಮೀನಿನಲ್ಲಿ ಕೂಲಿ ಕೆಲಸ ಮಾಡಬೇಕಾದ ಅನಿವಾರ್ಯತೆಯಿದೆ ಎಂದು ಅವರು ಹೇಳುತ್ತಾರೆ.

15-20 ವರ್ಷಗಳ ಹಿಂದೆಯೂ ವ್ಯವಸಾಯವು ಅಷ್ಟೊಂದು ಒತ್ತಡದಿಂದ ಕೂಡಿರಲಿಲ್ಲ ಎಂದು ಅಲಾಭಾಯಿ ನೆನಪಿಸಿಕೊಳ್ಳುತ್ತಾರೆ. "ನಮಗೆ ಸಮಸ್ಯೆಗಳು ಇದ್ದವು" ಎಂದು ಅವರು ಹೇಳುತ್ತಾರೆ. "ಆದರೆ ಅತಿಯಾದ ಮಳೆ ಸಾಮಾನ್ಯವಾಗಿರಲಿಲ್ಲ. ಇನ್ನು ಮುಂದೆ ಸಣ್ಣ ಮಳೆಯೇ ಇಲ್ಲ. ಈ ಪರಿಸ್ಥಿತಿಯಲ್ಲಿ ನೀವು ಸರಿಯಾದ ಫಸಲನ್ನು ಹೇಗೆ ಪಡೆಯಬಲ್ಲಿರಿ?"

ಗುಜರಾತ್‌ನಲ್ಲಿ ಒಟ್ಟು ಆಹಾರ ಧಾನ್ಯಗಳ ಉತ್ಪಾದನಾ ಪ್ರದೇಶ (ಧಾನ್ಯಗಳು ಮತ್ತು ದ್ವಿದಳ ಧಾನ್ಯಗಳು) 49 ಲಕ್ಷ ಹೆಕ್ಟೇರ್‌ಗಳಿಗೆ ಹೋಲಿಸಿದರೆ 2010-11ರಿಂದ 2020-21ರ ದಶಕದಲ್ಲಿ 4.6 ಮಿಲಿಯನ್ (49 ಲಕ್ಷದಿಂದ 46 ಲಕ್ಷ) ಹೆಕ್ಟೇರ್‌ಗಳಿಗೆ ಕಡಿಮೆಯಾಗಿದೆ. ಭತ್ತದ ವಿಸ್ತೀರ್ಣ 100,000 ಹೆಕ್ಟೇರ್‌ಗಳಷ್ಟು ಹೆಚ್ಚಿದ್ದರೂ, ಈ ಅವಧಿಯಲ್ಲಿ ಧಾನ್ಯಗಳಾದ ಗೋಧಿ, ರಾಗಿ ಮತ್ತು ತೊಗರಿಗಳ ಇಳುವರಿ ಕಡಿಮೆಯಾಗಿದೆ. ಬನಸ್ಕಾಂತದಲ್ಲಿ ರಾಗಿ ಉತ್ಪಾದನೆ ಪ್ರದೇಶದಲ್ಲಿ ಸುಮಾರು 30,000 ಹೆಕ್ಟೇರ್ ಕಡಿಮೆಯಾಗಿದೆ, ಆದರೆ ಈ ಜಿಲ್ಲೆಯಲ್ಲಿ ಸಜ್ಜೆ ಉತ್ಪಾದನೆಯು ಅತ್ಯಧಿಕವಾಗಿದೆ.

ಕಳೆದ ದಶಕದಲ್ಲಿ ಗುಜರಾತ್‌ ರಾಜ್ಯದ ಒಟ್ಟು ಆಹಾರ ಧಾನ್ಯ ಉತ್ಪಾದನೆಯಲ್ಲಿ ಶೇಕಡಾ 11ರಷ್ಟು ಕುಸಿತವಾಗಿದೆ. ಈ ಆಹಾರ ಧಾನ್ಯಗಳಲ್ಲಿ ಜೋಳ, ಸಜ್ಜೆ ಮತ್ತು ಗೋಧಿ ಪ್ರಮುಖವಾಗಿವೆ. ಆದಾಗ್ಯೂ, ಬೇಳೆಕಾಳುಗಳ ಇಳುವರಿಯಲ್ಲಿ 173% ಜಿಗಿತ ಕಂಡುಬಂದಿದೆ.

ಈ ಇಳುವರಿಯ ಗ್ರಾಫ್ ಅಲಾಭಾಯಿ ಮತ್ತು ಭಾನುಬೆನ್ ಅವರ ಕುಟುಂಬಗಳು ಯಾಕೆ ಮುಖ್ಯವಾಗಿ ಅಕ್ಕಿ ಮತ್ತು ಬೇಳೆಕಾಳುಗಳ ಮೇಲೆ ಅವಲಂಬಿತವಾಗಿದೆ ಎಂಬುದನ್ನು ವಿವರಿಸುತ್ತದೆ.

ಆಹಾರದ ಹಕ್ಕುಗಳ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಅಹಮದಾಬಾದ್ ಮೂಲದ ಆರ್‌ಟಿಐ ಕಾರ್ಯಕರ್ತ ಪಂಕ್ತಿ ಜೋಗ್, ಹೆಚ್ಚಿನ ರೈತರು ವಾಣಿಜ್ಯ ಬೆಳೆಗಳ (ತಂಬಾಕು ಮತ್ತು ಕಬ್ಬು) ಕಡೆಗೆ ಮುಖ ಮಾಡುತ್ತಿದ್ದಾರೆ ಎಂದು ಹೇಳುತ್ತಾರೆ. "ಇದು ಕುಟುಂಬಗಳ ಆಹಾರ ಮತ್ತು ಆಹಾರ ಭದ್ರತೆಯ ಮೇಲೆ ಕೆಟ್ಟ ಪರಿಣಾಮ ಬೀರಿದೆ," ಎಂದು ಅವರು ಹೇಳುತ್ತಾರೆ.

PHOTO • Parth M.N.
PHOTO • Parth M.N.

ಎಡ: ಅತ್ಯಂತ ಕಡಿಮೆ ತೂಕ ಮತ್ತು ಕಡಿಮೆ ರೋಗನಿರೋಧಕ ಶಕ್ತಿ ಹೊಂದಿರುವ ಯುವರಾಜ್ ಬಗ್ಗೆ ಅಲಾಭಾಯಿ ಚಿಂತಿತರಾಗಿದ್ದಾರೆ. ಬಲ: ಯುವರಾಜ್ ತನ್ನ ತಂದೆಯೊಂದಿಗೆ ಮನೆಯ ಬಾಗಿಲಲ್ಲಿ ಕುಳಿತಿರುವುದು

ಹೆಚ್ಚಿನ ಹಣದುಬ್ಬರದಿಂದಾಗಿ , ಅಲಭಾಯ್ ಆಹಾರ ಧಾನ್ಯಗಳು ಮತ್ತು ತರಕಾರಿಗಳನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ. ಅವರು ವಿವರಿಸುತ್ತಾರೆ, “ಬೇಸಾಯವು ನಿಯಮಿತವಾಗಿ ಮತ್ತು ಸರಿಯಾಗಿದ್ದಾಗ, ಪ್ರಾಣಿಗಳಿಗೆ ಮೇವಿನ ಕೊರತೆ ಇರಲಿಲ್ಲ. ಬೆಳೆ ಹಾನಿಯಾದರೆ ಮೇವು ಕೂಡ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಾಗದೆ ಆಹಾರ ಪದಾರ್ಥಗಳ ಜತೆಗೆ ಮಾರುಕಟ್ಟೆಯಿಂದ ಮೇವು ಕೂಡಾ ಖರೀದಿಸಬೇಕಾಗಿದೆ. ಆದ್ದರಿಂದ, ನಾವು ನಮ್ಮ ಆರ್ಥಿಕ ಸಾಮರ್ಥ್ಯದಲ್ಲಿ ಸಾಧ್ಯವಿರುವದನ್ನು ಮಾತ್ರ ಖರೀದಿಸುತ್ತೇವೆ."

ಅಲಾಭಾಯಿ ಅವರ ಮೂರು ವರ್ಷದ ಮೊಮ್ಮಗ ಯುವರಾಜ್ ಕೂಡ ಕಡಿಮೆ ತೂಕದ ಸಮಸ್ಯೆಯಿಂದ ಬಳಲುತ್ತಿದ್ದಾನೆ. ಅವರು ಹೇಳುತ್ತಾರೆ, "ಅವನು ದುರ್ಬಲ ರೋಗನಿರೋಧಕ ಶಕ್ತಿಯನ್ನು ಹೊಂದಿದ್ದಾನೆ, ನನಗೆ ಅವನದೇ ಚಿಂತೆಯಾಗಿದೆ. ಹತ್ತಿರದ ಸರ್ಕಾರಿ ಆಸ್ಪತ್ರೆ ಇಲ್ಲಿಂದ ಸುಮಾರು 50 ಕಿಲೋಮೀಟರ್ ದೂರದಲ್ಲಿದೆ. ಅವನಿಗೆ ತುರ್ತು ಚಿಕಿತ್ಸೆ ಅಗತ್ಯವಿದ್ದರೆ ನಾವು ಏನು ಮಾಡುವುದು?"

"ಅಪೌಷ್ಟಿಕತೆ ಇರುವ ಮಕ್ಕಳು ರೋಗಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚು," ಎನ್ನುತ್ತಾರೆ ಜೋಗ್. ರಾಜ್ಯದಲ್ಲಿ ಸರಕಾರಿ ಆರೋಗ್ಯ ಸೌಲಭ್ಯಗಳು ಸಮರ್ಪಕವಾಗಿ ಇಲ್ಲದ ಕಾರಣ ಜನರು ಖಾಸಗಿ ಆಸ್ಪತ್ರೆಗಳನ್ನೇ ಅವಲಂಬಿಸಬೇಕಾಗಿದೆ ಎಂದು ಅವರು ವಿವರಿಸುತ್ತಾರೆ, "ಜನರ ಪಾಲಿಗೆ ಆರೋಗ್ಯ ವೆಚ್ಚಗಳು ಹೊರೆಯಾಗಿವೆ. ಬನಸ್ಕಾಂತದಂತಹ ಬುಡಕಟ್ಟು ಪ್ರಾಬಲ್ಯದ ಪ್ರದೇಶಗಳಲ್ಲಿ, ಈ ವೆಚ್ಚದ ಹೊರೆಯು ಅಡಮಾನಗಳ ಮೇಲೆ ಸಾಲವನ್ನು ತೆಗೆದುಕೊಳ್ಳಲು ದೊಡ್ಡ ಕಾರಣವಾಗಿದೆ.

ರಾಜ್ಯವು ಜಾರಿಗೊಳಿಸುತ್ತಿರುವ ಆಹಾರ ಯೋಜನೆಗಳು ಸ್ಥಳೀಯ ಆಹಾರ ಪದ್ಧತಿಗಳನ್ನು ಪರಿಗಣಿಸುವುದಿಲ್ಲ ಎಂದು ಜೋಗ್ ಹೇಳುತ್ತಾರೆ. “ಎಲ್ಲರಿಗೂ ಸಮಾನವಾಗಿ ಸರಿಹೊಂದುವ ಯಾವುದೇ ಯೋಜನೆ ಇಲ್ಲ. ಪ್ರತಿ ಸಮುದಾಯದ ಮತ್ತು ಪ್ರತಿಯೊಂದು ಪ್ರದೇಶದ ಜನರು ಆಹಾರಕ್ಕೆ ಸಂಬಂಧಿಸಿದಂತೆ ತಮ್ಮದೇ ಆದ ಆದ್ಯತೆಗಳನ್ನು ಹೊಂದಿದ್ದಾರೆ, ಅದು ಪರಸ್ಪರ ಸಂಘರ್ಷದಲ್ಲಿಲ್ಲದಿದ್ದರೂ ಖಂಡಿತವಾಗಿಯೂ ವಿಭಿನ್ನವಾಗಿ ಇರುತ್ತದೆ. ಗುಜರಾತಿನಲ್ಲಿ ಮಾಂಸಾಹಾರ ತ್ಯಜಿಸುವಂತೆ ಪ್ರತ್ಯೇಕ ಅಭಿಯಾನವನ್ನೂ ನಡೆಸಲಾಗುತ್ತಿದೆ. ಜನರು ನಿಯಮಿತವಾಗಿ ಮಾಂಸ ಮತ್ತು ಮೊಟ್ಟೆಗಳನ್ನು ತಿನ್ನುತ್ತಿದ್ದ ಪ್ರದೇಶಗಳಲ್ಲೂ ಈ ಅಭಿಯಾನವು ಪ್ರವೇಶವನ್ನು ಪಡೆದಿದೆ. ಅಲ್ಲಿಯೂ ಜನರು ಅವುಗಳನ್ನು ಅಪವಿತ್ರ ಎಂದು ಪರಿಗಣಿಸಲಾರಂಭಿಸಿದ್ದಾರೆ.

2016-18ರ ಸಮಗ್ರ ರಾಷ್ಟ್ರೀಯ ಪೌಷ್ಟಿಕಾಂಶ ಸಮೀಕ್ಷೆಯ ಪ್ರಕಾರ, ಗುಜರಾತ್‌ನ 69.1 ಪ್ರತಿಶತ ತಾಯಂದಿರು/ಪೌಷ್ಟಿಕ ತಜ್ಞರು ಸಸ್ಯಾಹಾರಿ ಆಹಾರವನ್ನು ಸೇವಿಸುತ್ತಿದ್ದರು, ಆದರೆ ಅವರ ರಾಷ್ಟ್ರೀಯ ಸರಾಸರಿ 43.8 ಪ್ರತಿಶತ. ಅದೇ ಸಮಯದಲ್ಲಿ, 2-4 ವರ್ಷ ವಯಸ್ಸಿನ ಮಕ್ಕಳಲ್ಲಿ ಕೇವಲ 7.5 ಪ್ರತಿಶತದಷ್ಟು ಮಕ್ಕಳು ತಮ್ಮ ಆಹಾರದಲ್ಲಿ ಮೊಟ್ಟೆಗಳನ್ನು ಹೊಂದಿರುತ್ತಾರೆ, ಇದು ಪ್ರೋಟೀನ್‌ನ ಅತ್ಯುತ್ತಮ ಮೂಲವಾಗಿದೆ. ಆದಾಗ್ಯೂ, ರಾಜ್ಯದಲ್ಲಿ 5-9 ವರ್ಷ ವಯಸ್ಸಿನ 17 ಪ್ರತಿಶತ ಮಕ್ಕಳು ಮೊಟ್ಟೆಗಳನ್ನು ತಿನ್ನುತ್ತಾರೆ, ಆದರೆ ಈ ಸಂಖ್ಯೆ ತೃಪ್ತಿಕರವಾದುದಲ್ಲ.

ಸುಹಾನಾ ತನ್ನ ಜೀವನದ ಮೊದಲ ಎರಡು ವರ್ಷಗಳ ಕಾಲ ಪೌಷ್ಟಿಕ ಆಹಾರವನ್ನು ಪಡೆಯಲು ಸಾಧ್ಯವಾಗಲಿಲ್ಲ ಎಂಬ ಸತ್ಯವನ್ನು ಭಾನುಬೆನ್ ಚೆನ್ನಾಗಿ ತಿಳಿದಿದ್ದಾರೆ. ಅವರು ಹೇಳುತ್ತಾರೆ, “ಜನರು ನಮಗೆ ಆರೋಗ್ಯಕರ ಆಹಾರವನ್ನು ನೀಡುವಂತೆಯೂ ಹೇಳಿದರು. ಆದರೆ ಅದರ ಆರ್ಥಿಕ ಹೊರೆಯನ್ನು ಹೊರುವುದು ನಮಗೆ ತುಂಬಾ ಕಷ್ಟವಾಗಿತ್ತು, ನಾವು ಅಸಹಾಯಕರಾಗಿದ್ದೆವು. ಆರೋಗ್ಯಕರ ಆಹಾರವನ್ನು ತಿನ್ನಲು ನಾವು ಶಕ್ತರಾಗಿದ್ದ ಕಾಲವಿತ್ತು. ಸುಹಾನಾಗೆ ಇಬ್ಬರು ಅಣ್ಣಂದಿರಿದ್ದಾರೆ, ಆದರೆ ಅವರು ನಮ್ಮ ಜಮೀನು ಬರಡಾಗುವ ಮೊದಲು ಜನಿಸಿದರು. ಆಗಿನ ಆಹಾರ ಸಾಕಷ್ಟು ಪೌಷ್ಟಿಕಾಂಶವನ್ನು ಹೊಂದಿತ್ತು, ಅವರ ಆರೋಗ್ಯವೂ ಉತ್ತಮವಾಗಿದೆ."


ಠಾಕೂರ್ ಫ್ಯಾಮಿಲಿ ಫೌಂಡೇಶನ್‌ನಿಂದ ಸ್ವತಂತ್ರ ಪತ್ರಿಕೋದ್ಯಮ ಅನುದಾನದ ಸೌಜನ್ಯದಿಂದ ಸಾರ್ವಜನಿಕ ಆರೋಗ್ಯ ಮತ್ತು ನಾಗರಿಕ ಹಕ್ಕುಗಳ ಕುರಿತು ಪಾರ್ಥ ಎಂ.ಎನ್. ಈ ವರದಿ ಮಾಡಿದ್ದಾರೆ. 'ಠಾಕೂರ್ ಫ್ಯಾಮಿಲಿ ಫೌಂಡೇಶನ್' ಈ ವರದಿಯ ಯಾವುದೇ ವಾಸ್ತವಿಕ ವಿಷಯದ ಮೇಲೆ ಸಂಪಾದಕೀಯ ನಿಯಂತ್ರಣವನ್ನು ಹೊಂದಿಲ್ಲ.

ಅನುವಾದ: ಶಂಕರ. ಎನ್. ಕೆಂಚನೂರು

Parth M.N.

Parth M.N. is a 2017 PARI Fellow and an independent journalist reporting for various news websites. He loves cricket and travelling.

Other stories by Parth M.N.
Editor : Vinutha Mallya

Vinutha Mallya is a journalist and editor. She was formerly Editorial Chief at People's Archive of Rural India.

Other stories by Vinutha Mallya
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru