“ಯಮುನೆಯೊಂದಿಗಿನ ನಮ್ಮ ಸಂಬಂಧವು ಒಡಹುಟ್ಟಿದವರ ರೀತಿಯದ್ದು. ನಾವು ಅದರ ದಡದಲ್ಲಿ ಬೆಳೆದಿದ್ದೇವೆ."

ಇದು ವಿಜೇಂದರ್ ಸಿಂಗ್ ತಮ್ಮ ಕುಟುಂಬವು ಈ ನದಿಯೊಡನೆ ಹೊಂದಿರುವ ಸಂಬಂಧದ ಬಗ್ಗೆ ಮಾತನಾಡುತ್ತಿರುವುದು. ಮಲ್ಲಾ (ನಾವಿಕರು) ಸಮುದಾಯವು ತಲೆಮಾರುಗಳಿಂದ ಯಮುನಾ ನದಿಯ ದಡದಲ್ಲಿ ವಾಸಿಸುತ್ತಿದೆ ಮತ್ತು ದೆಹಲಿಯಲ್ಲಿ ಅದರ ಪಕ್ಕದ ಕರಾವಳಿ ಬಯಲು ಪ್ರದೇಶವನ್ನು ಕೃಷಿ ಮಾಡುತ್ತಿದೆ. ಈ 1,376 ಕಿಮೀ ಉದ್ದದ ನದಿಯು ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ 22 ಕಿಮೀ ದೂರದವರೆಗೆ ಹರಿಯುತ್ತದೆ ಮತ್ತು ಅದರ ಕರಾವಳಿ ಬಯಲು ಪ್ರದೇಶವು ಸುಮಾರು 97 ಚದರ ಕಿಮೀ ವರೆಗೆ ವಿಸ್ತರಿಸುತ್ತದೆ.

ವಿಜೇಂದರ್ ಸಿಂಗ್ ಅವರಂತಹ 5,000 ಕ್ಕೂ ಹೆಚ್ಚು ರೈತರು ಈ ಪ್ರದೇಶದಲ್ಲಿ  99 ವರ್ಷಗಳ ಕೃಷಿ ಗುತ್ತಿಗೆಯನ್ನು ಹೊಂದಿದ್ದರು.

ಅದು ಅಲ್ಲಿಗೆ ಬುಲ್ಡೋಜರ್‌ಗಳು ಬರುವ ಮೊದಲು.

2020ರ ಜನವರಿಯ ಕೊರೆಯುವ ಚಳಿಯಲ್ಲಿ, ಪ್ರಸ್ತಾವಿತ ಜೀವವೈವಿಧ್ಯ ಉದ್ಯಾನವನದ ನಿರ್ಮಾಣಕ್ಕೆ ದಾರಿಯನ್ನು ತೆರವುಗೊಳಿಸಲು ಪುರಸಭೆಯ ಅಧಿಕಾರಿಗಳು ಈ ಹೊಲಗಳ ತೂಗಾಡುತ್ತಿರುವ ಬೆಳೆಗಳನ್ನು ಬುಲ್ಡೋಜ್ ಮಾಡಿದರು. ವಿಜೇಂದರ್ ತನ್ನ ಕುಟುಂಬವನ್ನು ಹತ್ತಿರದ ಗೀತಾ ಕಾಲೋನಿಯಲ್ಲಿನ ಬಾಡಿಗೆ ಮನೆಗೆ ಸ್ಥಳಾಂತರಿಸಿದರು.

38 ವರ್ಷದ ಈ ರೈತ ರಾತ್ರೋರಾತ್ರಿ ತನ್ನ ಜೀವನೋಪಾಯವನ್ನು ಕಳೆದುಕೊಂಡು ತನ್ನ ಐದು ಜನರ ಕುಟುಂಬವನ್ನು ಪೋಷಿಸಲು ಡ್ರೈವಿಂಗ್ ವೃತ್ತಿಯನ್ನು ಮಾಡಬೇಕಾದ ಅನಿವಾರ್ಯತೆಗೆ ಒಳಗಾದರು. ಅವರು ಮತ್ತು ಅವರ ಹೆಂಡತಿಯನ್ನು ಹೊರತುಪಡಿಸಿ, ಕುಟುಂಬದಲ್ಲಿ ಮೂರು ಗಂಡು ಮಕ್ಕಳಿದ್ದಾರೆ ಮತ್ತು ಅವರೆಲ್ಲರೂ 10 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಈ ಬಿಕ್ಕಟ್ಟು ಎದುರಿಸುತ್ತಿರುವವರು ಅವರೊಬ್ಬರೇ ಅಲ್ಲ. ಇನ್ನೂ ಅನೇಕರು, ತಮ್ಮ ಜಮೀನು ಮತ್ತು ಉದ್ಯೋಗಗಳನ್ನು ಕಸಿದುಕೊಂಡು, ಮೆಟ್ರೋ ನಿಲ್ದಾಣಗಳಲ್ಲಿ ಪೇಂಟರ್‌ಗಳು, ತೋಟಗಾರರು, ಭದ್ರತಾ ಸಿಬ್ಬಂದಿ ಮತ್ತು ಕ್ಲೀನರ್‌ಗಳಾಗಿ ಕೆಲಸ ಮಾಡಬೇಕಾಯಿತು.

ಅವರು ಹೇಳುತ್ತಾರೆ, “ನೀವು ಲೋಹಾ ಪುಲ್‌ನಿಂದ ಐಟಿಒವರೆಗಿನ ರಸ್ತೆಯನ್ನು ನೋಡಿದರೆ, ಸೈಕಲ್‌ಗಳಲ್ಲಿ ಕಚೋರಿಗಳನ್ನು ಮಾರಾಟ ಮಾಡುವ ಮಾರಾಟಗಾರರ ಸಂಖ್ಯೆ ಸಾಕಷ್ಟು ಹೆಚ್ಚಾಗಿರುವುದನ್ನು ನೀವು ನೋಡುತ್ತೀರಿ. ರೈತನನ್ನು ತನ್ನ ಭೂಮಿಯಿಂದ ಹೊರಹಾಕಿದರೆ ಅವನು ಏನು ಮಾಡಬಲ್ಲ?"

PHOTO • Shalini Singh
PHOTO • Kamal Singh

ಎಡ: ದೆಹಲಿಯ ಬೇಲಾ ಎಸ್ಟೇಟ್ ಒಂದು ಕಾಲದಲ್ಲಿ ಯಮುನಾ ನದಿಯ ಪ್ರವಾಹ ಬಯಲಿನ ಭಾಗವಾಗಿತ್ತು, ಅಲ್ಲಿ ಮೇಲೆ ರೈತರು ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದರು. ಜೀವವೈವಿಧ್ಯ ಉದ್ಯಾನವನವನ್ನು ರಚಿಸಲು 2020ರಲ್ಲಿ ತೆರವುಗೊಳಿಸಿದ ಮೊದಲ ಪ್ರದೇಶಗಳಲ್ಲಿ ಇದು ಒಂದಾಗಿದೆ. ಬಲ: ದೆಹಲಿ ಅಭಿವೃದ್ಧಿ ಪ್ರಾಧಿಕಾರದ ಬುಲ್ಡೋಜರ್‌ಗಳು ನವೆಂಬರ್ 2020ರಲ್ಲಿ ಪೊಲೀಸ್ ರಕ್ಷಣೆಯ ನಡುವೆ ದೆಹಲಿಯ ಬೇಲಾ ಎಸ್ಟೇಟ್‌ನಲ್ಲಿ ಬೆಳೆಗಳನ್ನು ನಾಶಗೊಳಿಸುತ್ತಿರುವುದು

ಕೆಲವು ತಿಂಗಳ ನಂತರ, ಮಾರ್ಚ್ 24ರಂದು, ದೇಶದಲ್ಲಿ ಅನಿರ್ದಿಷ್ಟ ಕಾಲದ ಲಾಕ್‌ಡೌನ್ ಜಾರಿಗೆ ಬಂದಿತು, ಇದು ಅವರ ಕುಟುಂಬದ ತೊಂದರೆಗಳನ್ನು ಇನ್ನಷ್ಟು ಹೆಚ್ಚಿಸಿತು. ಆಗ ಕೇವಲ 6 ವರ್ಷ ವಯಸ್ಸಿನವನಾಗಿದ್ದ ವಿಜೇಂದರ್ ಅವರ ಎರಡನೇ ಮಗನಿಗೆ  ಸೆರೆಬ್ರಲ್ ಪಾಲ್ಸಿ ಇರುವುದು ಪತ್ತೆಯಾಯಿತು ಮತ್ತು ಪ್ರತಿ ತಿಂಗಳು ಔಷಧಿಗಳ ವೆಚ್ಚವನ್ನು ಕುಟುಂಬಕ್ಕೆ ಭರಿಸುವುದು ತುಂಬಾ ಕಷ್ಟಕರವಾಗಿತ್ತು. ಯಮುನಾ ದಡದಿಂದ ಸ್ಥಳಾಂತರಗೊಂಡ ಸುಮಾರು 500 ಇತರ ಕುಟುಂಬಗಳ ಪುನರ್ವಸತಿಗಾಗಿ ರಾಜ್ಯ ಸರ್ಕಾರದಿಂದ ಯಾವುದೇ ಮಾರ್ಗಸೂಚಿಗಳನ್ನು ನೀಡಲಾಗಿರಲಿಲ್ಲ. ಅವರ ಆದಾಯದ ಮೂಲ ಮತ್ತು ಅವರ ಮನೆಗಳು ಈಗಾಗಲೇ ನಾಶವಾಗಿದ್ದವು.

ಕಮಲ್ ಸಿಂಗ್ ಹೇಳುತ್ತಾರೆ, "ಸಾಂಕ್ರಾಮಿಕ ಮೊದಲು, ನಾವು ಹೂಕೋಸು, ಹಸಿ ಮೆಣಸಿನಕಾಯಿ, ಸಾಸಿವೆ ಮತ್ತು ಹೂವುಗಳಂತಹ ವಸ್ತುಗಳನ್ನು ಮಾರಾಟ ಮಾಡುವ ಮೂಲಕ ತಿಂಗಳಿಗೆ 8,000-10,000 ರೂ ಗಳಿಸುತ್ತಿದ್ದೆವು." ಅವರ ಐದು ಜನರ ಕುಟುಂಬದಲ್ಲಿ, ಅವರ ಹೆಂಡತಿಯನ್ನು ಹೊರತುಪಡಿಸಿ, 16 ಮತ್ತು 12 ವರ್ಷದ ಇಬ್ಬರು ಗಂಡುಮಕ್ಕಳು ಮತ್ತು 15 ವರ್ಷದ ಮಗಳು ಇದ್ದಾರೆ. 45ರ ಹರೆಯದ ಈ ರೈತ ಇಂದು ತನ್ನಂತಹ ಧಾನ್ಯ ಬೆಳೆಯುವ ರೈತ ಸ್ವಯಂಸೇವಾ ಗುಂಪುಗಳು ನೀಡುವ ಆಹಾರದಿಂದಲೇ ಬದುಕಿರುವ ತನ್ನ ಅದೃಷ್ಟದ ಬಗ್ಗೆ ಯೋಚಿಸಿ ನೊಂದುಕೊಳ್ಳುತ್ತಾರೆ.

ಸಾಂಕ್ರಾಮಿಕ ಪಿಡುಗಿನ ಸಮಯದಲ್ಲಿ ಇದ್ದ ಅವರ ಏಕೈಕ ಆದಾಯದ ಮೂಲವೆಂದರೆ ಕುಟುಂಬದ ಏಕೈಕ ಎಮ್ಮೆಯ ಹಾಲು ಮಾರಾಟವಾಗಿತ್ತು. ಹಾಲು ಮಾರಾಟ ಮಾಡಿ ಬಂದ 6,000 ರೂ. ಕುಟುಂಬದ ಎಲ್ಲ ಖರ್ಚು ವೆಚ್ಚಗಳಿಗೆ ಸಾಕಾಗುತ್ತಿರಲಿಲ್ಲ. ಕಮಲ್ ವಿವರಿಸುತ್ತಾರೆ, “ಇದು ನನ್ನ ಮಕ್ಕಳ ಶಿಕ್ಷಣದ ಮೇಲೆ ಕೆಟ್ಟ ಪರಿಣಾಮ ಬೀರಿತು. ನಾವು ಬೆಳೆದ ತರಕಾರಿಗಳು ನಮ್ಮ ಜೀವನೋಪಾಯಕ್ಕೆ ಉಪಯುಕ್ತವಾಗಿದ್ದವು. ಬೆಳೆ ಕಟಾವಿಗೆ ಸಿದ್ಧವಾಗಿತ್ತು, ಆದರೆ ಅವರು [ಅಧಿಕಾರಿಗಳು] ಅವುಗಳನ್ನು ನಾಶಗೊಳಿಸಿದರು. ಇದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಆದೇಶ ಎಂದು ಅವರು ಹೇಳಿದರು.

ಇದು ನಡೆಯುವ ಕೆಲವು ತಿಂಗಳುಗಳ ಮೊದಲು - ಸೆಪ್ಟೆಂಬರ್ 2019ರಲ್ಲಿ – ಎನ್‌ಜಿಟಿ ದೆಹಲಿ ಅಭಿವೃದ್ಧಿ ಪ್ರಾಧಿಕಾರಕ್ಕೆ (ಡಿಡಿಎ) ಯಮುನಾ ಪ್ರವಾಹ ಪ್ರದೇಶದಲ್ಲಿ ಬೇಲಿ ಹಾಕುವಂತೆ ನಿರ್ದೇಶನ ನೀಡಿತ್ತು, ಆ ಸ್ಥಳವನ್ನು ಜೀವವೈವಿಧ್ಯ ಉದ್ಯಾನವನವಾಗಿ ಪರಿವರ್ತಿಸಲು ಯೋಜಿಸಲಾಗಿತ್ತು. ವಸ್ತುಸಂಗ್ರಹಾಲಯವನ್ನು ನಿರ್ಮಿಸುವ ಯೋಜನೆಯೂ ಇತ್ತು.

ಬಲ್ಜಿತ್ ಸಿಂಗ್ ಕೇಳುತ್ತಾರೆ, “ಖಾದರ್ ಸುತ್ತಮುತ್ತಲಿನ ಅತ್ಯಂತ ಫಲವತ್ತಾದ ಪ್ರದೇಶಗಳಲ್ಲಿ ವಾಸಿಸುವ ಸಾವಿರಾರು ಜನರು ತಮ್ಮ ಜೀವನಕ್ಕಾಗಿ ನದಿಯನ್ನು ಅವಲಂಬಿಸಿದ್ದಾರೆ. ಅವರು ಈಗ ಎಲ್ಲಿಗೆ ಹೋಗಬೇಕು? (ಓದಿ: ಅವರು ಹೇಳುತ್ತಾರೆ ದೆಹಲಿಯಲ್ಲಿ ರೈತರಿಲ್ಲವೆಂದು. ) ಸುಮಾರು 86 ವರ್ಷ ವಯಸ್ಸಿನ ಬಲ್ಜಿತ್ ಸಿಂಗ್ ಅವರು ದೆಹಲಿ ರೈತರ ಸಹಕಾರಿ ವಿವಿಧೋದ್ದೇಶ ಸೊಸೈಟಿಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಅವರು 40 ಎಕರೆ ಜಮೀನನ್ನು ರೈತರಿಗೆ ಗುತ್ತಿಗೆ ನೀಡಿದ್ದರು. ಅವರು ಹೇಳುತ್ತಾರೆ, "ಸರ್ಕಾರವು ಯಮುನಾ ತೀರವನ್ನು ಜೀವವೈವಿಧ್ಯ ಉದ್ಯಾನವನ್ನಾಗಿ ಮಾಡಲು ಮತ್ತು ಅದನ್ನು ಆದಾಯದ ಮೂಲವನ್ನಾಗಿ ಮಾಡಲು ಬಯಸಿದೆ."

PHOTO • Courtesy: Kamal Singh
PHOTO • Shalini Singh

ಎಡ: ಕಮಲ್ ಸಿಂಗ್ (45), ಓರ್ವ ರೈತ, ಅವನ ಹೆಂಡತಿ ಮತ್ತು ಮೂವರು ಮಕ್ಕಳೊಂದಿಗೆ. 2020ರಲ್ಲಿ, ಸಾಂಕ್ರಾಮಿಕ ಪಿಡುಗಿನ ಸಮಯದಲ್ಲಿ, ಚಳಿಗಾಲದಲ್ಲಿ ಅವರು ತಮ್ಮ ಆಹಾರಕ್ಕಾಗಿ ಬೆಳೆದ ಬೆಳೆಗಳನ್ನು ಡಿಡಿಎ ಯ ಬುಲ್ಡೋಜರ್‌ಗಳು ಹೊಸಕಿ ಹಾಕಿದವು. ಬಲ: ದಿಲ್ಲಿಯ ರೈತರು ಯಮುನಾ ಬಯಲು ಪ್ರದೇಶದಲ್ಲಿ ಭೂಮಿಯನ್ನು ಗುತ್ತಿಗೆಗೆ ತೆಗೆದುಕೊಂಡು ತಲೆಮಾರುಗಳಿಂದ ಕೃಷಿ ಮಾಡುತ್ತಿದ್ದಾರೆ

ಡಿಡಿಎ ಕಳೆದ ಕೆಲ ದಿನಗಳಿಂದ ಈ ರೈತರನ್ನು ಜಮೀನು ಖಾಲಿ ಮಾಡುವಂತೆ ಕೇಳುತ್ತಿದೆ. ಆದರೆ, ‘ನವೀಕರಣ’, ‘ಸೌಂದರ್ಯ’ ಕಾಮಗಾರಿ ಆರಂಭಿಸಲು ಸುಮಾರು ದಶಕದ ಹಿಂದೆಯೇ ನಗರಸಭೆ ಅಧಿಕಾರಿಗಳು ತಮ್ಮ ಮನೆಗಳನ್ನು ಬುಲ್ಡೋಜರ್‌ಗಳ ಮೂಲಕ ಕೆಡವುವುದಾಗಿ ಬೆದರಿಕೆ ಹಾಕಿದ್ದರು ಎಂಬುದು ಕೂಡಾ ಸತ್ಯ.

ನದಿಯ ದಡದಲ್ಲಿರುವ ರಿಯಲ್ ಎಸ್ಟೇಟ್ ಮೌಲ್ಯದ ದೃಷ್ಟಿಯಿಂದ ದೆಹಲಿಯನ್ನು ಅತ್ಯಂತ ಲಾಭದಾಯಕ ವ್ಯಾಪಾರದೊಂದಿಗೆ 'ವಿಶ್ವ ದರ್ಜೆಯ' ನಗರವನ್ನಾಗಿ ಮಾಡಲು ಯಮುನಾ ರೈತರ ತರಕಾರಿ ಹೊಲಗಳನ್ನು ಇತ್ತೀಚೆಗೆ ಗುರಿಪಡಿಸಲಾಗಿದೆ. ನಿವೃತ್ತ ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಮನೋಜ್ ಮಿಶ್ರಾ ಹೇಳುತ್ತಾರೆ, "ದುಃಖದ ಸಂಗತಿಯೆಂದರೆ ನಗರದ ಡೆವಲಪರ್‌ಗಳು [ವ್ಯಕ್ತಿಗಳು ಅಥವಾ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಕಂಪನಿಗಳು] ಈಗ ಪ್ರವಾಹದ ಪ್ರದೇಶಗಳ ಮೇಲೆ ಕಣ್ಣಿಟ್ಟಿದ್ದಾರೆ, ಅಲ್ಲಿ ಅವರು ಅಭಿವೃದ್ಧಿಯ ಹೆಚ್ಚಿನ ಸಾಧ್ಯತೆಯನ್ನು ನೋಡುತ್ತಿದ್ದಾರೆ."

*****

ವಿಶ್ವ ದರ್ಜೆಯ ‘ಕೊಳಕು’ ನಗರದಲ್ಲಿ ಇಂದು ರೈತರಿಗೆ ಜಾಗವಿಲ್ಲ. ಅಂದೂ ಇರಲಿಲ್ಲ.

1970ರ ದಶಕದಲ್ಲಿ, ಈ ನೆಲದ ಹೆಚ್ಚಿನ ಭಾಗವನ್ನು ಏಷ್ಯನ್ ಗೇಮ್ಸ್‌ ನಿರ್ಮಾಣ ಕಾರ್ಯಗಳಿಗಾಗಿ ಆಕ್ರಮಿಸಲಾಯಿತು ಮತ್ತು ಇಲ್ಲಿ ಕ್ರೀಡಾಂಗಣಗಳು ಮತ್ತು ಹಾಸ್ಟೆಲ್‌ಗಳನ್ನು ನಿರ್ಮಿಸಲಾಯಿತು. ಈ ನಿರ್ಮಾಣ ಕಾರ್ಯದಲ್ಲಿ, ವಿಶೇಷ ಸ್ಥಳಗಳನ್ನು ಪರಿಸರ ವಲಯಗಳಾಗಿ ಗುರುತಿಸಲಾದ ವಿವರವಾದ ಯೋಜನೆಯನ್ನು ನಿರ್ಲಕ್ಷಿಸಲಾಗಿದೆ. ನಂತರ 90ರ ದಶಕದ ಉತ್ತರಾರ್ಧದಲ್ಲಿ, ಐಟಿ ಪಾರ್ಕ್, ಮೆಟ್ರೋ ಡಿಪೋ, ಎಕ್ಸ್‌ಪ್ರೆಸ್ ಹೆದ್ದಾರಿ, ಅಕ್ಷರಧಾಮ ದೇವಾಲಯ ಮತ್ತು ಕಾಮನ್‌ವೆಲ್ತ್ ಗೇಮ್ಸ್ ಗ್ರಾಮಗಳು ಮತ್ತು ನಿವಾಸಗಳನ್ನು ಈ ಕರಾವಳಿ ಬಯಲು ಮತ್ತು ನದಿ ತೀರಗಳಲ್ಲಿ ನಿರ್ಮಿಸಲಾಯಿತು. ಮಿಶ್ರಾ ಮತ್ತಷ್ಟು ವಿವರಿಸುತ್ತಾರೆ, "2015ರ ಎನ್‌ಜಿಟಿ ತೀರ್ಪು ಕರಾವಳಿ ಬಯಲು ಪ್ರದೇಶದಲ್ಲಿ ನಿರ್ಮಾಣಗಳನ್ನು ಮಾಡಲು ಸಾಧ್ಯವಿಲ್ಲ ಎಂದು ಹೇಳಿದ ನಂತರ ಇದೆಲ್ಲವೂ ಸಂಭವಿಸಿದೆ."

ಪ್ರತಿ ನಿರ್ಮಾಣ ಕಾರ್ಯದಲ್ಲಿ, ಯಮುನಾ ತೀರದ ರೈತರ ದಾರಿಗಳು ಮುಚ್ಚಿಕೊಳ್ಳತೊಡಗಿದವು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಅವರ ಜಮೀನುಗಳಿಂದ ಅವರನ್ನು ಕ್ರೂರವಾಗಿ ಹೊರಹಾಕಲಾಯಿತು. "ಬಡವರಾಗಿದ್ದರಿಂದ ಹೊರ ಹಾಕಲಾಯಿತು" ಎನ್ನುತ್ತಾರೆ ವಿಜೇಂದರ್ ತಂದೆ ಶಿವಶಂಕರ್, 75. ಅವರು ತಮ್ಮ ಜೀವನದುದ್ದಕ್ಕೂ ಅಥವಾ ಇತ್ತೀಚಿನ ವರ್ಷಗಳಲ್ಲಿ ಎನ್‌ಜಿಟಿಯ ಆದೇಶದವರೆಗೆ ದೆಹಲಿಯಲ್ಲಿ ಯಮುನಾ ಬಯಲು ಪ್ರದೇಶದಲ್ಲಿ ಬೆಳೆ ಬೆಳೆಯುತ್ತಿದ್ದರು. "ಇದು ಭಾರತದ ರಾಜಧಾನಿ, ಬೆರಳೆಣಿಕೆಯ ಪ್ರವಾಸಿಗರಿಗಾಗಿ ವಸ್ತುಸಂಗ್ರಹಾಲಯಗಳು ಮತ್ತು ಉದ್ಯಾನವನಗಳನ್ನು ನಿರ್ಮಿಸಲು ರೈತರನ್ನು ಈ ರೀತಿಯಾಗಿ ನಡೆಸಿಕೊಳ್ಳಲಾಗುತ್ತಿದೆ."

ನಂತರ, ಭಾರತದ 'ಅಭಿವೃದ್ಧಿ'ಯ ಈ ಹೊಳೆಯುವ ಮತ್ತು ಭವ್ಯವಾದ ಸಂಕೇತಗಳನ್ನು ನಿರ್ಮಿಸಲು ಶ್ರಮಿಸಿದ ಕಾರ್ಮಿಕರನ್ನೂ ಈ ನದಿ ಬಯಲು ಪ್ರದೇಶಗಳಿಂದ ಹೊರಹಾಕಲಾಯಿತು. ಅವರ ತಾತ್ಕಾಲಿಕ ಮನೆಗಳಿಗೆ ವೈಭವೋಪೇತ ಕ್ರೀಡಾ ಸೌಲಭ್ಯಗಳಂತಹ 'ರಾಷ್ಟ್ರೀಯ ಪ್ರತಿಷ್ಠೆಯ' ಕಟ್ಟಡಗಳ ನಡುವೆ ಸ್ಥಾನವಿಲ್ಲ.

PHOTO • Shalini Singh
PHOTO • Shalini Singh

ಎಡ: ಶಿವಶಂಕರ್ ಮತ್ತು ವಿಜೇಂದರ್ ಸಿಂಗ್ (ಮುಂಭಾಗ). ಬಲ: ಬುಲ್ಡೋಜರ್‌ಗಳು ನಾಶಗೊಳಿಸುವ ಮೊದಲು ವಿಜೇಂದರ್ ತನ್ನ ಕುಟುಂಬವು ಕೃಷಿ ಮಾಡುತ್ತಿದ್ದ ಜಮೀನಿನ ಕಡೆಗೆ ಸನ್ನೆ ಮಾಡಿ ತೋರಿಸುತ್ತಿದ್ದಾರೆ

ಎನ್‌ಜಿಟಿ ರಚಿಸಿರುವ ಯಮುನಾ ಮಾನಿಟರಿಂಗ್ ಸಮಿತಿಯ ಅಧ್ಯಕ್ಷ ಬಿ.ಎಸ್. ಸಜ್ವಾನ್ ಹೇಳುತ್ತಾರೆ, "2015ರಲ್ಲಿ, ಎನ್‌ಜಿಟಿ ಒಂದು ಪ್ರದೇಶವನ್ನು ಯಮುನಾ ಪ್ರವಾಹ ಬಯಲು ಎಂದು ಗುರುತಿಸಿದ ನಂತರ ಅದನ್ನು ರಕ್ಷಿಸಬೇಕು ಏಕೆಂದರೆ ಅದು ನನ್ನದು ಅಥವಾ ನಿಮ್ಮದಲ್ಲ,  ಅದು ನದಿಯ ಭಾಗ." ಅವರ ಹೇಳಿಕೆ ಪ್ರಕಾರ ನ್ಯಾಯಮಂಡಳಿ ತನ್ನ ತೀರ್ಪನ್ನು ಜಾರಿಗೊಳಿಸುತ್ತಿದೆ.

ತಮ್ಮ ಜೀವನದ 75 ವರ್ಷಗಳನ್ನು ಈ ನದಿ ಬಯಲು ಪ್ರದೇಶಗಳ ಕೃಷಿಯಲ್ಲಿ ಕಳೆದಿರುವ ರಮಾಕಾಂತ್ ತ್ರಿವೇದಿ ಹೇಳುತ್ತಾರೆ, “ಈ ಭೂಮಿಯ ಮೂಲಕ ಹೊಟ್ಟೆಪಾಡು ನೋಡಿಕೊಳ್ಳುತ್ತಿದ್ದ ನಮ್ಮ ಕತೆಯೇನು?”

ಒಟ್ಟು 24,000 ಎಕರೆ ಪ್ರದೇಶದಲ್ಲಿ ರೈತರು ವಿವಿಧ ರೀತಿಯ ಬೆಳೆಗಳನ್ನು ಬೆಳೆಯುತ್ತಾರೆ ಮತ್ತು ಆ ತಾಜಾ ಬೆಳೆಗಳನ್ನು ದೆಹಲಿಯ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುತ್ತಾರೆ. ಹೀಗಾಗಿ, ಶಿವಶಂಕರ್ ಅವರಂತಹ ಅನೇಕ ರೈತರು ತಾವು ಬೆಳೆಯುತ್ತಿರುವ ಬೆಳೆಗಳು "ಕಲುಷಿತ ನದಿ ನೀರಿನಿಂದ ನೀರಾವರಿ ಮಾಡುವುದರಿಂದ ಆರೋಗ್ಯಕ್ಕೆ ಹಾನಿಕರ" ಎಂಬ ಮತ್ತೊಂದು NGT ಹೇಳಿಕೆಯಿಂದ ಗೊಂದಲಕ್ಕೊಳಗಾಗಿದ್ದಾರೆ. ಅವರು ಕೇಳುತ್ತಾರೆ, “ಹಾಗಾದರೆ ದಶಕಗಳ ಕಾಲ ಇಲ್ಲಿಯೇ ಇರಲು ಮತ್ತು ನಗರಕ್ಕೆ ಆಹಾರ ಧಾನ್ಯಗಳು ಮತ್ತು ತರಕಾರಿಗಳನ್ನು ಉತ್ಪಾದಿಸಲು ನಮಗೆ ಏಕೆ ಅವಕಾಶ ನೀಡಲಾಯಿತು?”

2019ರಲ್ಲಿ ಹವಾಮಾನ ಬದಲಾವಣೆಯಿಂದ ಪ್ರಭಾವಿತವಾಗಿರುವ ಅವರ ಜೀವನೋಪಾಯದ ಕುರಿತು ವರದಿ ಮಾಡಲು ನಾವು ಅಲ್ಲಿಗೆ ಹೋದಾಗ ಪರಿ ಮೊದಲ ಬಾರಿಗೆ ವಿಜೇಂದರ್, ಶಿವಶಂಕರ್ ಮತ್ತು ಇತರ ಕುಟುಂಬಗಳನ್ನು ಭೇಟಿಯಾಯಿತು. ಓದಿರಿ: ದೆಹಲಿ: ನಶಿಸುತ್ತಿರುವ ನದಿ ಮತ್ತು ಪಾಳುಬಿದ್ದಿರುವ ರೈತರ ಬದುಕು .

*****

ಇನ್ನೊಂದು ಐದು ವರ್ಷಗಳ ನಂತರ - 2028ರಲ್ಲಿ, ವಿಶ್ವಸಂಸ್ಥೆಯ ಸಂಶೋಧನೆಯ ಪ್ರಕಾರ ದೆಹಲಿಯು ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನಗರವಾಗುವ ನಿರೀಕ್ಷೆಯಿದೆ. 2041ರ ವೇಳೆಗೆ ಇಲ್ಲಿನ ಜನಸಂಖ್ಯೆಯು 2.8 ರಿಂದ 3.1 ಕೋಟಿಗಳ ನಡುವೆ ಇರುತ್ತದೆ ಎಂದು ನಂಬಲಾಗಿದೆ.

ಹೆಚ್ಚುತ್ತಿರುವ ಜನಸಂಖ್ಯೆಯ ಹೊರೆಯನ್ನು ದಡ ಮತ್ತು ನದಿ ಬಯಲು ಪ್ರದೇಶಗಳಷ್ಟೇ ಅಲ್ಲ, ನದಿಯೂ ಹೊತ್ತುಕೊಳ್ಳಬೇಕಾಗಿದೆ. ಮಿಶ್ರಾ ವಿವರಿಸುತ್ತಾರೆ, "ಯಮುನಾ ನದಿಯು ಮಾನ್ಸೂನ್ ನೀರಿನ ಮೇಲೆ ಅವಲಂಬಿತವಾಗಿದೆ ಮತ್ತು ಇದು ತಿಂಗಳಿಗೆ ಸರಾಸರಿ 10ರಿಂದ 15 ದಿನಗಳವರೆಗೆ ಕೇವಲ ಮೂರು ತಿಂಗಳವರೆಗೆ ಮಳೆ ನೀರನ್ನು ಸಂಗ್ರಹಿಸುತ್ತದೆ." ದೇಶದ ರಾಜಧಾನಿ ಕುಡಿಯುವ ನೀರಿಗಾಗಿ ಯಮುನಾ ನೀರನ್ನೇ ಅವಲಂಬಿಸಿದೆ ಎಂಬ ಪ್ರಶ್ನೆಗೆ ಹೀಗೆ ಉತ್ತರಿಸಿದರು. ಮತ್ತೊಂದು ನೀರಿನ ಮೂಲವೆಂದರೆ ಅಂತರ್ಜಲ, ಇದು ನದಿಯ ನೀರನ್ನು ಹೀರಿಕೊಳ್ಳುವ ಮೂಲಕ ಸಂಗ್ರಹಿಸಲ್ಪಡುತ್ತದೆ.

ಡಿಡಿಎ ಮಹಾನಗರದ ಸಂಪೂರ್ಣ ನಗರೀಕರಣವನ್ನು ಪ್ರಸ್ತಾಪಿಸಿದೆ, ಇದನ್ನು ದೆಹಲಿಯ ಆರ್ಥಿಕ ಸಮೀಕ್ಷೆ 2021-22ರಲ್ಲಿ ಉಲ್ಲೇಖಿಸಲಾಗಿದೆ.

"ದಿಲ್ಲಿಯಲ್ಲಿ ಕೃಷಿ ಸಂಬಂಧಿತ ಕೆಲಸಗಳು ನಿರಂತರವಾಗಿ ಕಡಿಮೆಯಾಗುತ್ತಿದೆ..." ಎಂದು ಕೂಡಾ ವರದಿ ಹೇಳುತ್ತದೆ.

PHOTO • Kamal Singh
PHOTO • Kamal Singh

ಎಡ: ದೆಹಲಿ ಅಭಿವೃದ್ಧಿ ಪ್ರಾಧಿಕಾರದ ಬುಲ್ಡೋಜರ್‌ಗಳು ನವೆಂಬರ್ 2020ರಲ್ಲಿ ದೆಹಲಿಯ ಬೇಲಾ ಎಸ್ಟೇಟ್‌ನಲ್ಲಿ ನಿಂತಿರುವ ಬೆಳೆಗಳನ್ನು ನಾಶಗೊಳಿಸುತ್ತಿರುವುದು. ಬಲ: ಡಿಡಿಎ ಬುಲ್ಡೋಜರ್‌ಗಳು ಕೆಲಸ ಮುಗಿಸಿದ ನಂತರ ನಿರ್ಜನವಾದ ಜಾಗ

2021ರವರೆಗೆ ದೆಹಲಿಯಲ್ಲಿ 5,000-10,000 ಜನರು ಯಮುನಾ ನದಿಯಿಂದ ತಮ್ಮ ಜೀವನೋಪಾಯವನ್ನು ಸಂಪಾದಿಸುತ್ತಿದ್ದರು ಎಂದು ಮನು ಭಟ್ನಾಗರ್ ಹೇಳಿದರು. ಅವರು ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಅಂಡ್ ಕಲ್ಚರಲ್ ಹೆರಿಟೇಜ್ (ಇಂಟಾಕ್) ನ ನೈಸರ್ಗಿಕ ಪರಂಪರೆ ವಿಭಾಗದ ಪ್ರಧಾನ ನಿರ್ದೇಶಕರಾಗಿದ್ದಾರೆ. ಅದೇ ಜನರನ್ನು ಪ್ರವಾಹ ಪ್ರದೇಶಗಳ ಸೌಂದರ್ಯೀಕರಣಕ್ಕೆ ಬಳಸಿಕೊಳ್ಳಬಹುದು ಎಂದು ಅವರು ಸಲಹೆ ನೀಡಿದರು. "ಮಾಲಿನ್ಯ ಕಡಿಮೆಯಾದಂತೆ, ಮೀನುಗಾರಿಕೆ ಸುಧಾರಿಸಬಹುದು, ಜಲ ಕ್ರೀಡೆಗಳು ಸಹ ಒಂದು ಆಯ್ಕೆಯಾಗಬಹುದು, ಮತ್ತು 97 ಚದರ ಕಿಲೋಮೀಟರ್ ಪ್ರವಾಹ ಪ್ರದೇಶವನ್ನು ಕಲ್ಲಂಗಡಿಗಳಂತಹ ಆಹಾರ ಉತ್ಪನ್ನಗಳನ್ನು ಬೆಳೆಯಲು ಬಳಸಬಹುದು" ಎಂದು ಅವರು 2019 ರಲ್ಲಿ ಪರಿ ಅವರನ್ನು ಭೇಟಿ ಮಾಡಲು ಹೋದಾಗ ಹೇಳಿದ್ದರು.

*****

ರಾಜಧಾನಿಯಲ್ಲಿ ಸಾಂಕ್ರಾಮಿಕ ಪಿಡುಗು ಹರಡುವುದರೊಂದಿಗೆ, ಈ ಪ್ರದೇಶದಿಂದ ಸ್ಥಳಾಂತರಗೊಂಡ 200ಕ್ಕೂ ಹೆಚ್ಚು ಕುಟುಂಬಗಳು ತೀವ್ರ ಆಹಾರದ ಬಿಕ್ಕಟ್ಟನ್ನು ಎದುರಿಸುತ್ತಿವೆ. 2021ರ ಆರಂಭದಲ್ಲಿ, ಮಾಸಿಕ ಆದಾಯ 4,000-6,000 ಇದ್ದ ಕುಟುಂಬದ ಆದಾಯವು ಲಾಕ್‌ಡೌನ್ ಸಮಯದಲ್ಲಿ ಶೂನ್ಯಕ್ಕೆ ಕುಸಿಯಿತು. ತ್ರಿವೇದಿ ವಿವರಿಸುತ್ತಾರೆ, “ದಿನಕ್ಕೆ ಎರಡು ಬಾರಿ ತಿನ್ನುವ ಬದಲು, ಒಮ್ಮೆ ಮಾತ್ರ ತಿನ್ನುವ ಮೂಲಕ ನಾವು ಬದುಕಬೇಕಾಗಿತ್ತು. ನಮ್ಮ ದಿನದ ಎರಡು ಟೀ ಕೂಡ ಒಂದಕ್ಕೆ ಇಳಿದಿತ್ತು. ಡಿಡಿಎಯ ಉದ್ದೇಶಿತ ಉದ್ಯಾನವನದಲ್ಲಿ ಕೆಲಸ ಮಾಡಲು ನಾವು ಸಿದ್ಧರಿದ್ದೇವೆ, ಇದರಿಂದ ನಮ್ಮ ಮಕ್ಕಳಿಗೆ ಆಹಾರವನ್ನು ನೀಡಬಹುದು. ಸರಕಾರ ನಮ್ಮತ್ತ ಗಮನಹರಿಸಬೇಕು; ನಮಗೆ ಸಮಾನತೆಯ ಹಕ್ಕು ಸಿಕ್ಕಿಲ್ಲವೇ?  ನಮ್ಮ ಭೂಮಿಯನ್ನು ತೆಗೆದುಕೊಳ್ಳಿ, ಆದರೆ ಬದಲಾಗಿ ಜೀವನೋಪಾಯಕ್ಕಾಗಿ ಬೇರೆ ಮಾರ್ಗಗಳನ್ನು ತೋರಿಸಬೇಡವೆ?"

ಮೇ 2020ರಲ್ಲಿ ರೈತರು ಸುಪ್ರೀಂ ಕೋರ್ಟಿನಲ್ಲಿ ಪ್ರಕರಣವನ್ನು ಸೋತರು ಮತ್ತು ಅವರ ಗುತ್ತಿಗೆಗಳು ಇನ್ನು ಮುಂದೆ ಮಾನ್ಯವಾಗುವುದಿಲ್ಲವೆನ್ನಲಾಯಿತು. ಮೇಲ್ಮನವಿ ಸಲ್ಲಿಸಲು ಬೇಕಾದ 1 ಲಕ್ಷ ರೂ.ಗಳನ್ನು ಭರಿಸಲು ಅವರಿಗೆ ಸಾಧ್ಯವಾಗಲಿಲ್ಲ ಮತ್ತು ಅದರೊಂದಿಗೆ ಅವರ ಸ್ಥಳಾಂತರವು ಶಾಶ್ವತವಾಯಿತು.

ವಿಜೇಂದರ್ ವಿವರಿಸುತ್ತಾರೆ, “ಲಾಕ್‌ಡೌನ್ ಪರಿಸ್ಥಿತಿಯನ್ನು ಹೆಚ್ಚು ಗಂಭೀರಗೊಳಿಸಿತು, ದಿನಗೂಲಿ ಮತ್ತು ಕಾರ್ ಲೋಡಿಂಗ್‌ನಂತಹ ಕೆಲಸಗಳು ಸಹ ನಿಂತುಹೋದವು. ಔಷಧ ಖರೀದಿಸಲೂ ನಮ್ಮ ಬಳಿ ಹಣವಿರಲಿಲ್ಲ. ಅವರ 75 ವರ್ಷದ ತಂದೆ ಶಿವಶಂಕರ್ ಅವರು ಕೆಲಸಕ್ಕಾಗಿ ನಗರದೆಲ್ಲೆಡೆ ಅಲೆದಾಡಬೇಕಾಯಿತು.

“ನಾವೆಲ್ಲರೂ ಮೊದಲೇ ಕೃಷಿಯನ್ನು ಬಿಟ್ಟು ಕೆಲಸ ಹುಡುಕಬೇಕಿತ್ತು. ಆಹಾರ ಧಾನ್ಯಗಳನ್ನು ಉತ್ಪಾದಿಸದಿದ್ದಾಗ, ನಮಗೆ ಆಹಾರ ಎಷ್ಟು ಮುಖ್ಯ ಮತ್ತು ರೈತರು ಎಷ್ಟು ಮುಖ್ಯ ಎಂದು ಜನರು ಅರ್ಥಮಾಡಿಕೊಳ್ಳುತ್ತಾರೆ,” ಎಂದ ಅವರ ಧ್ವನಿಯು ಕೋಪವನ್ನು ಪ್ರತಿಧ್ವನಿಸುತ್ತಿತ್ತು.

*****

ಶಿವಶಂಕರ್ ಮತ್ತು ಅವರ ಕೃಷಿಕ ಕುಟುಂಬವು ಕೆಂಪು ಕೋಟೆಯಿಂದ ಕೇವಲ ಎರಡು ಕಿಲೋಮೀಟರ್ ದೂರದಲ್ಲಿ ವಾಸಿಸುತ್ತಿದ್ದ ಸಮಯವನ್ನು ನೆನಪಿಸಿಕೊಳ್ಳುತ್ತಾರೆ. ಪ್ರತಿ ವರ್ಷ ಸ್ವಾತಂತ್ರ್ಯ ದಿನದಂದು ಈ ಕೆಂಪು ಕೋಟೆಯಿಂದ, ಪ್ರಧಾನಿಯವರು ದೇಶವನ್ನು ಉದ್ದೇಶಿಸಿ ಮಾತನಾಡುವಾಗ ಆ ಭಾಷಣಗಳನ್ನು ಕೇಳಲು ಟಿವಿ ಅಥವಾ ರೇಡಿಯೋ ಬೇಕಾಗಿರಲಿಲ್ಲ ಎಂದು ಅವರು ಹೇಳುತ್ತಾರೆ.

"ಗಾಳಿಯಲ್ಲಿ ತೇಲುತ್ತಿರುವ ಪ್ರಧಾನಿಯವರ ಮಾತುಗಳು ನಮ್ಮನ್ನು ತಲುಪುತ್ತಿದ್ದವು... ದುಃಖದ ವಿಷಯವೆಂದರೆ ನಮ್ಮ ಮಾತುಗಳು ಅವರನ್ನು ತಲುಪಲು ಸಾಧ್ಯವೇ ಇಲ್ಲ."

ಅನುವಾದ: ಶಂಕರ. ಎನ್. ಕೆಂಚನೂರು

Shalini Singh

Shalini Singh is a founding trustee of the CounterMedia Trust that publishes PARI. A journalist based in Delhi, she writes on environment, gender and culture, and was a Nieman fellow for journalism at Harvard University, 2017-2018.

Other stories by Shalini Singh
Editor : Priti David

Priti David is the Executive Editor of PARI. She writes on forests, Adivasis and livelihoods. Priti also leads the Education section of PARI and works with schools and colleges to bring rural issues into the classroom and curriculum.

Other stories by Priti David
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru