“ಕೆಲವೊಮ್ಮೆ ಯಾರಾದರೂ ಮಹಿಳೆ ನನಗೆ ಕರೆ ಮಾಡುತ್ತಾರೆ ಅಥವಾ ರಾತ್ರಿಯಲ್ಲಿ ಮನೆಗೆ ತನ್ನ ಮನೆಯಲ್ಲಿನ ಪುರುಷ ಸಂಬಂಧಿಯನ್ನು ಕಾಂಡೋಮ್ ಪ್ಯಾಕೆಟ್ ತರಲು ಕಳುಹಿಸುತ್ತಾರೆ" ಎಂದು ಕಲಾವತಿ ಸೋನಿ ಹೇಳುತ್ತಾರೆ. ಟಿಕಾರಿ ಗ್ರಾಮದ ಈ 54 ವರ್ಷದ 'ಡಿಪೋ ದೀದಿ' ಹೀಗೆ ತಡರಾತ್ರಿ ಬರುವವರ ಕುರಿತು ತಲೆಕೆಡಿಸಿಕೊಳ್ಳುವುದಿಲ್ಲ, ಅವರು ಮಹಿಳೆಯರಿಗೆ ಅಗತ್ಯ ವಸ್ತುಗಳನ್ನು ಒದಗಿಸುತ್ತಾರೆ. ಉತ್ತರ ಪ್ರದೇಶದ ಅಮೇಥಿ ಜಿಲ್ಲೆಯ ಹಳ್ಳಿಯಲ್ಲಿರುವ ತನ್ನ ಸಣ್ಣ ಮನೆಯ ವರಾಂಡದಲ್ಲಿ ಚಾರ್ಪಾಯ್ ಮೇಲೆ ಕುಳಿತು, "ನಾನು ರಾತ್ರಿಯಲ್ಲಿಯೂ ಸೇವೆ ನೀಡುತ್ತೇನೆ" ಎಂದು ಅವರು ತಮಾಷೆಯಾಗಿ ಹೇಳುತ್ತಾರೆ. “ಇತ್ನೀ ಕೋಯಿ ಬಡೀ ಬಾತ್‌ ನಹೀಹೈ [ಇದೇನೂ ಅಷ್ಟು ದೊಡ್ಡ ವಿಷಯವಲ್ಲ]” ಎಂದು ಕಲಾವತಿ ತನ್ನ ಕೆಲಸದ ಬಗ್ಗೆ ಹೇಳುತ್ತಾರೆ.

ಹಳ್ಳಿಯಲ್ಲಿ ಕಾರ್ಯಾಚರಿಸುತ್ತಿರುವ ಸರ್ಕಾರೇತರ ಸಂಸ್ಥೆಯ 'ಡಿಪೋ ದೀದಿ' ಸೇವೆಯ ಕುರಿತು ಕೇಳಿದ ನಂತರ, ಕುತೂಹಲದಿಂದ ನಾವು ಅವರ ಮನೆಗೆ ಬಂದಿದ್ದೆವು. "ಏಯ್, ಆ ಚೀಲವನ್ನು ತೆಗೆದುಕೊಂಡು ಬಾ" ಎಂದು ಕಲಾವತಿ ತನ್ನ ಮೊಮ್ಮಗನಿಗೆ ಕೂಗಿ ಹೇಳಿದರು . ಕೆಲವೇ ಸೆಕೆಂಡುಗಳಲ್ಲಿ, ಪುಟ್ಟ ಹುಡುಗ ಎರಡು ಅಂತಸ್ತಿನ ಪಕ್ಕಾ ಮನೆಯ ಒಳಗಿನಿಂದ ಉಬ್ಬಿದ ಪ್ಲಾಸ್ಟಿಕ್ ಚೀಲದೊಂದಿಗೆ ಓಡಿ ಬಂದ. ಕಾಂಡೋಮ್ ಗಳು, ಸ್ಯಾನಿಟರಿ ನ್ಯಾಪ್ಕಿನ್ ಗಳು, ಗರ್ಭನಿರೋಧಕ ಮಾತ್ರೆಗಳು ಮತ್ತು ಓರಲ್ ರೀಹೈಡ್ರೇಶನ್ ಪ್ಯಾಕೆಟುಗಳ ಮಿಶ್ರಣವು ಚೀಲದಿಂದ ಹೊರಬಂತು. ಅವುಗಳನ್ನು ಪ್ರದರ್ಶನದಲ್ಲಿರುವಂತೆ, ಚಾರ್ಪಾಯ್ ಮೇಲೆ ಸಾಲಾಗಿ ಜೋಡಿಸಿದರು.

" ಇತ್ನಿ ಕೋಯಿ ಬಡಿ ಬಾತ್ ನಹೀ ಹೈ " ಎಂದು ಪಲ್ಲವಿಯಂತೆ ಮತ್ತೆ ಹೇಳಿದರು. "ಮೊದಲು ನಾನು ಮನೆಯ ಸಣ್ಣ ವಿಷಯಗಳ ಬಗ್ಗೆ ಮಾತನಾಡುತ್ತಿದ್ದೆ. ನಾವು ಅವರ ಮನೆಯ ಪರಿಸ್ಥಿತಿ, ಅತ್ತೆ-ಮಾವನ ಬಗ್ಗೆ ದೂರುಗಳು, ಮಕ್ಕಳ ಬಗ್ಗೆ ಸ್ವಲ್ಪ ಚರ್ಚಿಸುತ್ತಿದ್ದೆವು. ಅವರು ಹೇಳುವುದನ್ನು ನಾನು ತಾಳ್ಮೆಯಿಂದ ಕೇಳುತ್ತಿದ್ದೆ. ನಿಧಾನವಾಗಿ, ಈ ಸಂಭಾಷಣೆಗಳ ಮೂಲಕ - ನಾನು ಸ್ವಲ್ಪ ಹೆಚ್ಚು ಮಾತಾನಾಡುವವಳು, ದಿನ ಕಳೆದಂತೆ  - ಎಲ್ಲಾ ಮಹಿಳೆಯರು ಒಂದೇ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಾರೆ ಎಂದು ನಾನು ಅರಿತುಕೊಳ್ಳಲು ಪ್ರಾರಂಭಿಸಿದೆ. ಹಾಗಾದರೆ ಒಬ್ಬರಿಗೊಬ್ಬರು ಏಕೆ ಸಹಾಯ ಮಾಡಬಾರದು ಎನ್ನುವ ಯೋಚನೆ ಬಂತು. ಅಷ್ಟೆ" ಹೀಗೆ ಟಿಕಾರಿಯ 'ಡಿಪೋ ದೀದಿ' ಪಾತ್ರವನ್ನು ತಾನು ನಿರ್ವಹಿಸಲು ಆರಂಭಿಸಿದೆ ಎಂದು ಹೇಳಿದರು.

ಅಗತ್ಯ ವಸ್ತುಗಳನ್ನು ವಿತರಿಸುವ ಮತ್ತು ಉತ್ತಮ ಆರೋಗ್ಯ ಅಭ್ಯಾಸಗಳನ್ನು ಉತ್ತೇಜಿಸುವ ಸಮುದಾಯದ ಮಹಿಳೆಯರಿಗೆ ಬಳಸಲಾಗುವ ಆರೋಗ್ಯ ವಲಯದ ಪದವಾದ 'ಡಿಪೋ ಹೋಲ್ಡರ್' ನಿಂದ ಈ ಹೆಸರು ಬಂದಿದೆ.  ಆದರೆ ಕಲಾವತಿ ಅಂಗನವಾಡಿ ಕಾರ್ಯಕರ್ತೆ ಅಥವಾ ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತೆ (ಆಶಾ) ಅಲ್ಲ, ಅವರು ಔಪಚಾರಿಕವಾಗಿ ಹಳ್ಳಿಗಳಲ್ಲಿ ಡಿಪೋ ಹೊಂದಿರುವವರಾಗಿ ಕಾರ್ಯನಿರ್ವಹಿಸುತ್ತಾರೆ. ಅವರು ಝೋ ಲಾ ಚಾಪ್ (ಪರವಾನಗಿ ಪಡೆಯದ ವೈದ್ಯ) ಅಲ್ಲ.  ಮೂಲಭೂತ ಸಂತಾನೋತ್ಪತ್ತಿ ಆರೋಗ್ಯ ಆರೈಕೆ ಅಗತ್ಯಗಳಿಗಾಗಿ ಮಹಿಳೆಯರಿಗೆ ಅಗತ್ಯವಿರುವ ಬಹುತೇಕ ಎಲ್ಲವನ್ನೂ ಸಂಗ್ರಹಿಸುತ್ತಾರೆ, ಮತ್ತು ಅವರ ಲೈಂಗಿಕ ಮತ್ತು ಸಂತಾನೋತ್ಪತ್ತಿ ಕಾಳಜಿಗಳ ಬಗ್ಗೆ ಅವರೊಂದಿಗೆ ಮಾತನಾಡುತ್ತಾರೆ.

Kalavati Soni, wearing the floral printed sari, with ASHA worker Vinita Soni to her right
PHOTO • Anubha Bhonsle
Some of the typical items that an ASHA carries to distribute – condoms, contraceptive pills, ORS sachets, iron supplements – are also found in Kalavati's bag
PHOTO • Anubha Bhonsle

ಎಡ: ಕಲಾವತಿ ಸೋನಿ, ಹೂವಿನ ಚಿತ್ರಗಳಿರುವ ಸೀರೆಯಲ್ಲಿ, ಆಶಾ ಕಾರ್ಯಕರ್ತೆ ವಿನಿತಾ ಸೋನಿ ಅವರ ಬಲಕ್ಕೆ. ಬಲ: ಆಶಾ ವಿತರಿಸಲು ಕೊಂಡೊಯ್ಯುವ ಕೆಲವು ವಿಶಿಷ್ಟ ವಸ್ತುಗಳು – ಕಾಂಡೋಮ್‌ಗಳು, ಗರ್ಭನಿರೋಧಕ ಮಾತ್ರೆಗಳು, ಒಆರ್‌ಎಸ್ ಸ್ಯಾಶೆಗಳು, ಕಬ್ಬಿಣಾಂಶದ ಪೂರಕಗಳು - ಕಲಾವತಿ ಅವರ ಚೀಲದಲ್ಲಿ ಸಹ ಕಂಡುಬರುತ್ತವೆ

“ಈ [ಕೆಲಸದ] 15 ವರ್ಷಗಳಲ್ಲಿ ಆಶಾ ಕಾರ್ಯಕರ್ತೆಯರು ಬಹಳಷ್ಟು ಶ್ರಮವಹಿಸಿ ದುಡಿಯುವುದು ಮತ್ತು ದಣಿಯುವುದನ್ನು ನೋಡಿದ್ದೇನೆ. ಒಮ್ಮೆ ಅವರಲ್ಲೊಬ್ಬರು ಗರ್ಭಿಣಿ ಮಹಿಳೆಯೊಬ್ಬರಿಗೆ ಮಾತ್ರೆ ನೀಡಲು ಸಾಧ್ಯವಾಗದೆ ಇದ್ದಾಗ ನನ್ನ ಬಳಿ ಕೊಡುವಂತೆ ಹೇಳಿ ಪಡೆದುಕೊಂಡಿದ್ದು ನನಗೆ ನೆನಪಿದೆ. ನಾನು ಆ ಮಹಿಳೆಗೆ ಮಾತ್ರೆಯ ಡೋಸೇಜ್‌ ಇತರ ವಿವರಗಳನ್ನು ತಿಳಿಸುವುದಾಗಿ ಹೇಳಿದ್ದೆ. ಈ ರೀತಿಯಾಗಿ ನಾನು ಮಹಿಳೆಯರಿಗೆ ಸಹಾಯ ಮಾಡಲು ಅರಂಭಿಸಿದೆ,” ಎನ್ನುವ ಕಲಾವತಿಯವರಿಗೆ ಇದನ್ನು ಆರಂಭಿಸಿದ ದಿನದ ತಾರೀಖು ಇತ್ಯಾದಿ ನಿಖರವಾಗಿ ನೆನಪಿಲ್ಲ.

ಹೊಸದಾಗಿ ಮದುವೆಯಾದ ಹೆಣ್ಣುಮಕ್ಕಳು ಮತ್ತು ಕುಟುಂಬದ ಹಿರಿಯರೊಂದಿಗೆ ಕೆಲಸ ಮಾಡುವುದು, ಮತ್ತು ಈ ಎಲ್ಲಾ ತಲೆಮಾರುಗಳ ನಡುವೆ ಸದ್ಭಾವನೆಯನ್ನು ಸಾಧಿಸುವುದು, ಈ ವಿಷಯದಲ್ಲಿ ಅವರು ಪ್ರಮುಖ ಮತ್ತು ನಿಕಟವಾದ ಜಾಗವನ್ನು ತುಂಬಿದ್ದಾರೆ. ನನ್ನ ಮನಸ್ಸಿನಲ್ಲಿ ಪ್ರಶ್ನೆಗಳ ಮಹಾಪೂರವೇ ಹರಿದುಬರುತ್ತಿತ್ತು: ಆಸೆ ಮತ್ತು ಈಡೇರಿಕೆ, ಸಂಗಾತಿಗಳು ಮತ್ತು ಕುಟುಂಬ ಸದಸ್ಯರೊಂದಿಗಿನ ಅವರ ಸಂಬಂಧಗಳು, ಗರ್ಭಧಾರಣೆಗಳು ಅಥವಾ ಗರ್ಭನಿರೋಧಕಗಳ ಬಗ್ಗೆ ಮಹಿಳೆಯರು ಹೇಗೆ ಮಾತನಾಡುತ್ತಾರೆ? ಅವರು ಸಂಕೋಚ ಮತ್ತು ಹಿಂಜರಿಕೆಯಿಂದಿದ್ದಾರೆಯೇ, ಅಥವಾ ಮುಕ್ತವಾಗಿ ಮತ್ತು ನೇರವಾಗಿ ಮಾತನಾಡುತ್ತಾರೆಯೇ? ಈ ಸಂಭಾಷಣೆಗಳು ಎಲ್ಲಿ ನಡೆಯುತ್ತವೆ?  ಕಲಾವತಿಯು ಮಹಿಳೆಯರಿಗೆ ಸ್ನೇಹ, ಸಾಂತ್ವನ ಮತ್ತು ಜೊತೆಗೆ ತಮ್ಮ ಸ್ವಂತ ದೇಹದ ಬಗ್ಗೆ ಮಾಹಿತಿಯನ್ನು ಕಂಡುಕೊಳ್ಳಲು ಹೇಗೆ ಅವಕಾಶ ಮಾಡಿಕೊಡುತ್ತಾರೆ?

"ಹತ್ತು ವರ್ಷಗಳ ಹಿಂದೆ, ಈ ವಿಷಯಗಳ ಬಗ್ಗೆ ಮಾತನಾಡಲು ಸಮಯ ಮತ್ತು ಶ್ರಮ ಬೇಕಾಗುತ್ತಿತ್ತು" ಎಂದು ಅವರು ಹೇಳುತ್ತಾರೆ. "ಮನೆಯಲ್ಲಿರುವ ಹಿರಿಯರು [ಹೆಂಗಸರು ಮತ್ತು ಗಂಡಸರು] ಅಂತರ [ಜನನದಲ್ಲಿ], ಜನನ ನಿಯಂತ್ರಣ ಅಥವಾ ಮೊಮ್ಮಕ್ಕಳ ಬಗ್ಗೆ ಸಂಭಾಷಣೆಗಳನ್ನು ಪ್ರೋತ್ಸಾಹಿಸುತ್ತಿರಲಿಲ್ಲ. ಅವರು ʼಬಿಗಾಡ್ನೆ ಆ ಗಯೀ ಹಮಾರಿ ಬಹು ಕೋ' ('ಅವಳು ನಮ್ಮ ಸೊಸೆಯನ್ನು ಹಾಳುಮಾಡಲು ಬಂದಿದ್ದಾಳೆ') ಎಂದು ಹೇಳುತ್ತಿದ್ದರು. ಆದರೆ ಈಗ ವಿಷಯಗಳು ಬದಲಾಗಿವೆ. ವಿವಾಹಿತ ಯುವತಿಯರು ಹೆಚ್ಚು ಜಾಗೃತರಾಗಿದ್ದಾರೆ, ಕುತೂಹಲಿಗಳಾಗಿರುತ್ತಾರೆ ಮತ್ತು ಅವರಿಗೆ ಕಾಂಡೋಮ್ ಬೇಕೇ ಎಂದು ಕೇಳುತ್ತಾರೆ" ಎಂದು ಕಲಾವತಿ ಹೇಳುತ್ತಾರೆ. ಅವರ ಅನೌಪಚಾರಿಕ ಸಂಭಾಷಣೆಗಳು ಸಂತಾನೋತ್ಪತ್ತಿ ಹಕ್ಕುಗಳ ಸಂದೇಶವನ್ನು ಜೀವಂತವಾಗಿರಿಸುತ್ತವೆ. ಯುವತಿಯರೊಡನೆ ಚಹಾ ಕುಡಿಯುತ್ತ ಸ್ನೇಹಪರ ವಿನೋದದಲ್ಲಿ ಕಲಾವತಿ ಮಾಹಿತಿಯ ತುಣುಕುಗಳನ್ನು ರವಾನಿಸುತ್ತಾರೆ. "ಅವರು ಆರೋಗ್ಯಕರ ಜೀವನವನ್ನು ನಡೆಸಲು ಬಯಸಿದರೆ, ಮಕ್ಕಳ ನಡುವೆ ಮೂರು ವರ್ಷಗಳ ಅಂತರವನ್ನು ಹೊಂದಿರಬೇಕು ಎಂದು ಅವರಿಗೆ ಹೇಳುತ್ತೇನೆ" ಎಂದು ಹೇಳುತ್ತಾರೆ.

"ಅತ್ತೆಯಂದಿರು ಸಹ ಸುಧಾರಿಸಿದ್ದಾರೆ" ಎಂದು ಅವರು ಮುಗುಳ್ನಗುತ್ತಾರೆ, ಫೆಬ್ರವರಿ 2020ರಲ್ಲಿ ನಿಧನರಾದ ತನ್ನ ಅತ್ತೆಯನ್ನು ನೆನಪಿಸಿಕಕೊಂಡರು. ಕಲಾವತಿ ಮೊದಲು ಈ ವಸ್ತುಗಳನ್ನು ಮನೆಯಲ್ಲಿ ಸಂಗ್ರಹಿಸಲು ಪ್ರಾರಂಭಿಸಿದಾಗ, ಕಾಂಡೋಮ್ ಮತ್ತು ಮಾತ್ರೆಗಳನ್ನು ಮರೆಯಾಗಿಡುತ್ತಿದ್ದರು. ಅವರ ಅತ್ತೆ ತಾನು ಮಾಡುತ್ತಿರುವ ಕೆಲಸವನ್ನು ಒಪ್ಪಲಿಲ್ಲ ಮತ್ತು ಇತರರ ಮಲಗುವ ಕೋಣೆಗಳಲ್ಲಿ ಹಸ್ತಕ್ಷೇಪ ಮಾಡುವ ಮತ್ತು ಅವರ ಭವಿಷ್ಯದ ಯೋಜನೆಯಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದು ಹೇಳುತ್ತಿದ್ದರು. ಆದಾಗ್ಯೂ, ಅವರ ಕೊನೆಯ ವರ್ಷಗಳಲ್ಲಿ, ಕಲಾವತಿಯವರಿಗೆ ಬೆಂಬಲವಾಗಿದ್ದರು.

Kalavati fills an important and intimate space working with young brides and elders in Tikari
PHOTO • Labani Jangi

ಕಲಾವತಿ ಟಿಕಾರಿಯಲ್ಲಿ ನವ ವಿವಾಹಿತೆಯರು ಮತ್ತು ಹಿರಿಯರೊಂದಿಗೆ ಕೆಲಸ ಮಾಡುವ ಮೂಲಕ ಬಹಳ ಪ್ರಮುಖ ಮತ್ತು ನಿಕಟ ಸ್ಥಾನವೊಂದನ್ನು ನಿಭಾಯಿಸುತ್ತಿದ್ದಾರೆ

“ಇದು ಅನಾವಶ್ಯಕ, ಮತ್ತು ಒಳ್ಳೆಯ ಕೆಲಸವಲ್ಲ ಎನ್ನುವುದು ಅವರ ಭಾವನೆಯಾಗಿತ್ತು. ನಾನು ಮದುವೆಯಾದ ಹೊಸದರಲ್ಲಿ, ಬಹಳ ಬೇಗನೆ ಮಗುವನ್ನು ಹಡೆದೆ. ಮೊದಲಿಗೆ ಅವಳಿ ಗಂಡುಮಕ್ಕಳು ಹುಟ್ಟಿದವು. ನಂತರ ಇನ್ನೊಂದು ಹೆಣ್ಣು. ಅದರ ಹಿಂದೆಯೇ ಇನ್ನೊಮ್ಮೆ ಗರ್ಭಿಣಿಯಾದೆ. ಈ ಸಮಯದಲ್ಲಿ ನನಗೆ ಯಾರಾದರೂ ಮಾರ್ಗದರ್ಶನ ನೀಡುವವರು ಇದ್ದಿದ್ದರೆ ಎಷ್ಟು ಚಂದವಿರುತ್ತಿತ್ತು ಎಂದು ಪದೇಪದೇ ಅನ್ನಿಸುತ್ತಿತ್ತು. ಆಗ ನಾನು ಅಸಹಾಯಕಳಾಗಿದ್ದೆ. ಕೊನೆಗೆ ಆ ಮಗುವನ್ನು ಕಳೆದುಕೊಂಡೆ. ಆಗ ನನಗೆ ಬಹಳ ಆಕ್ರೋಶ ಮೂಡಿತ್ತು,” ಎಂದು ಅವರು ಹೇಳುತ್ತಾರೆ. ಮೂಲ ಸಂಭಾವನೆಯನ್ನೂ ಸಹ ಪಡೆಯದೆ ತಾನು ಯಾಕೆ ಈ ಸೇವೆಗಳನ್ನು ಏಕೆ ನೀಡುತ್ತಿದ್ದೇನೆ ಎಂಬುದನ್ನು ಸ್ಪಷ್ಟಪಡಿಸಲು ಅವರು ತಮ್ಮದೇ ಆದ ಅನುಭವಗಳನ್ನು ಮೆಲುಕು ಹಾಕಿದರು. ನಾನಿದನ್ನು ಮಾಡಲು ಕಾರಣವೆಂದರೆ ಎಲ್ಲರಿಗೂ ಓರ್ವ ಸಹೇಲಿ [ಸ್ನೇಯಿತೆ]ಯ ಅಗತ್ಯವಿರುತ್ತದೆ ಎನ್ನುವುದು ನನ್ನ ಅಭಿಪ್ರಾಯ,” ಎನ್ನುತ್ತಾರೆ. ಮತ್ತು ಅವರು ಇದನ್ನು ಆಶಾ ಕಾರ್ಯಕರ್ತೆಯರಿಗಿರುವಂತಹ ಒತ್ತಡ ಮತ್ತು ಗುರಿಗಳಿಲ್ಲದೆ ನಿರ್ವಹಿಸುತ್ತಾರೆ ಎನ್ನುವುದನ್ನು ಅವರು ನಮಗೆ ನೆನಪಿಸುತ್ತಾರೆ.

ಸಾರ್ವಜನಿಕ ಆರೋಗ್ಯ ಕಾರ್ಯಕರ್ತರು ಮತ್ತು ಎನ್ ಜಿಒ ಉದ್ಯೋಗಿಗಳಿಗೆ ಹೋಲಿಸಿದರೆ ಅವರ ಕಾರ್ಯವಿಧಾನವು ಅನೌಪಚಾರಿಕವಾಗಿದೆ, ಅವರು ಹೆಚ್ಚಾಗಿ ಸಂತಾನೋತ್ಪತ್ತಿ ಹಕ್ಕುಗಳ ವಿಷಯಗಳೊಂದಿಗೆ ಸಂಪೂರ್ಣವಾಗಿ ವೈದ್ಯಕೀಯ ಪರಿಭಾಷೆಯಲ್ಲಿ ತೊಡಗುತ್ತಾರೆ. ಆದರೆ ಕಲಾವತಿಗೆ ತಾನು ತನಗಾಗಿ ಕೆತ್ತಿಕೊಂಡ ಪಾತ್ರದ ಇತಿಮಿತಿಗಳು ಚೆನ್ನಾಗಿ ತಿಳಿದಿವೆ. "ಒಬ್ಬ ಮಹಿಳೆ ನೋವಿನಿಂದ ಬಳಲುತ್ತಿದ್ದರೆ, ಅಥವಾ ಅದು ತುರ್ತು ಪರಿಸ್ಥಿತಿಯಾದರೆ, ಅವರು ನನ್ನನ್ನು ಕರೆಯುವುದಿಲ್ಲ" ಎಂದು ಅವರು ಹೇಳುತ್ತಾರೆ. ಅಂತಹ ಸಮಯದಲ್ಲಿ ಅವರು ಆಶಾ ಕಾರ್ಯಕರ್ತೆಯ ಬಳಿಗೆ ಹೋಗುತ್ತಾರೆ, ಅಥವಾ ಸಾರ್ವಜನಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡುತ್ತಾರೆ.

ಇಂದು, ಅವರು ಆಶಾ ಕಾರ್ಯಕರ್ತರೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸಿದ್ದಾರೆ, ಕಾಂಡೋಮ್‌, ಮಾತ್ರೆಗಳು ಮತ್ತು ಇತರ ಅಗತ್ಯ ವಸ್ತುಗಳನ್ನು ವಿತರಿಸಲು ಸಹಾಯ ಮಾಡುತ್ತಾರೆ. ಪ್ರತಿ ಹದಿನೈದು ದಿನಗಳಿಗೊಮ್ಮೆ, ಅವರು ಅವರ ಮನೆಯಿಂದ 25 ನಿಮಿಷಗಳ ನಡಿಗೆ ದೂರದ ಭೆತುವಾ ಬ್ಲಾಕಿನ ಆರೋಗ್ಯ ಕೇಂದ್ರದಿಂದ ಗರ್ಭನಿರೋಧಕಗಳನ್ನು ಸಂಗ್ರಹಿಸುತ್ತಾರೆ, ಮತ್ತು ಅಗತ್ಯವಿರುವ ಜನರಿಗಾಗಿ ಅದನ್ನು ಮನೆಯಲ್ಲಿ ಸಂಗ್ರಹಿಸಿಡುತ್ತಾರೆ. ಹಳ್ಳಿಯ ಮಹಿಳೆಯರು ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಲು ಕಷ್ಟವಾದಾಗ ಅವರು ಸಹಾಯಕ್ಕೆ ಬರುತ್ತಾರೆ. ಕಾಂಡೋಮ್ ಮತ್ತು ಸಹೇಲಿ ಗೋಲಿ (ಜನನ ನಿಯಂತ್ರಣ ಮಾತ್ರೆ)ಗಾಗಿ ಜನರು ಅವಳ ಬಳಿಗೆ ಬರುತ್ತಾರೆ. "ನಾನು ಯಾವಾಗಲೂ ಅವುಗಳನ್ನು ನನ್ನ ಮನೆಯಲ್ಲಿ ಇಟ್ಟುಕೊಳ್ಳುತ್ತೇನೆ. ಆದರೆ ನಾನು ಸಹ ಹೋಗಿ ಅದನ್ನು ಅವರಿಗೆ ನೀಡುತ್ತೇನೆ, ಅಗತ್ಯವಿದ್ದರೆ ಬಹಾನಾ [ನೆಪ] ಮಾಡುತ್ತೇನೆ," ಎಂದು ಕಲಾವತಿ ಹೇಳುತ್ತಾರೆ.

ಅವರು ಆರೋಗ್ಯ ಕೇಂದ್ರದಿಂದ ಪಡೆಯುವ ಮಾತ್ರೆಗಳು ಉಚಿತವಾಗಿವೆ. ಆದಾಗ್ಯೂ, ಆ ಪ್ರದೇಶದಲ್ಲಿ ಕೆಲಸ ಮಾಡುವ ಎನ್‌ಜಿಒ ಒಂದರಿಂದ ವಿತರಣೆಗಾಗಿ ಕಾಂಡೋಮ್ ಮತ್ತು ಸ್ಯಾನಿಟರಿ ನ್ಯಾಪ್ಕಿನ್ಗಳನ್ನು ಪಡೆಯುತ್ತಾರೆ, ಅಥವಾ ಅದನ್ನು ಸ್ಥಳೀಯ ಫಾರ್ಮಸಿಯಿಂದ ತನ್ನ ಸ್ವಂತ ಹಣದಿಂದ ಖರೀದಿಸುತ್ತಾರೆ.

Women of family in Tikari speaking to ‘depot didi’ Kalavati Soni and ASHA worker Vinita Soni
PHOTO • Anubha Bhonsle
During the lockdowns in 2020, Kalavati used to meet women secretly and give them contraceptive pills like Mala-N and Saheli, and condoms as well
PHOTO • Anubha Bhonsle

ಎಡ: ಟಿಕಾರಿಯಲ್ಲಿ ಕುಟುಂಬವೊಂದರ ಮಹಿಳೆಯರು 'ಡಿಪೋ ದೀದಿ' ಕಲಾವತಿ ಸೋನಿ ಮತ್ತು ಆಶಾ ಕಾರ್ಯಕರ್ತೆ ವಿನಿತಾ ಸೋನಿ ಅವರೊಂದಿಗೆ ಮಾತನಾಡುತ್ತಿರುವುದು. ಬಲ: 2020ರ ಲಾಕ್ಡೌನ್ ಸಮಯದಲ್ಲಿ, ಕಲಾವತಿ ಮಹಿಳೆಯರನ್ನು ರಹಸ್ಯವಾಗಿ ಭೇಟಿಯಾಗುತ್ತಿದ್ದರು ಮತ್ತು ಅವರಿಗೆ ಮಾಲಾ-ಎನ್ ಮತ್ತು ಸಹೇಲಿಯಂತಹ ಗರ್ಭನಿರೋಧಕ ಮಾತ್ರೆಗಳು ಮತ್ತು ಕಾಂಡೋಮ್‌ಗಳನ್ನು ಸಹ ನೀಡುತ್ತಿದ್ದರು

2020ರ ಲಾಕ್ಡೌನ್ ತಿಂಗಳುಗಳು ಅವರಿಗೆ ದೊಡ್ಡ ಸವಾಲಾಗಿತ್ತು. ಹೊರಹೋಗುವ ನಿರ್ಬಂಧಗಳಿಂದಾಗಿ ಕಲಾವತಿಗೆ ಗರ್ಭನಿರೋಧಕಗಳಿಗಾಗಿ ಮಾತ್ರ ಮಹಿಳೆಯರಿಂದ ಪ್ರತಿದಿನ ಐದು-ಆರು ಕರೆಗಳು ಬರುತ್ತಿದ್ದವು. "ಗಂಡಸರು ಯಾವುದಕ್ಕೂ ಹೊರಗೆ ಹೋಗುತ್ತಿರಲಿಲ್ಲ. ಅಲ್ಲಿ ಯಾವುದೇ ಕೆಲಸವಿರಲಿಲ್ಲ ಮತ್ತು ಮಹಿಳೆಯರು ತಾವು ಗರ್ಭಿಣಿಯಾಗಬಹುದು ಎಂದು ಹೆದರುತ್ತಿದ್ದರು. ಅನೇಕರು ಗರ್ಭಿಣಿಯರಾದರು ಕೂಡ. ನಾನು ಅವರನ್ನು ಹೊರಗೆ, ಹೊಲಗಳಲ್ಲಿ ರಹಸ್ಯವಾಗಿ ಭೇಟಿಯಾಗುತ್ತಿದ್ದೆ ಮತ್ತು ಅವರಿಗೆ ಕಾಂಡೋಮ್ ಮತ್ತು ಸಹೇಲಿ ಗೋಲಿಯನ್ನು ನೀಡುತ್ತಿದ್ದೆ - ನನ್ನ ಬಳಿ ವೆಲ್ಲ ಸಿಗುವವರೆಗೆ" ಎಂದು ಕಲಾವತಿ ಹೇಳುತ್ತಾರೆ. ಮಹಿಳೆಯರಿಗೂ ಸಹ ಆಸೆಗಳಿವೆ ಮತ್ತು "ಯಾವಾಗ ಆಸೆಯು ಅಪ್ಪಳಿಸುತ್ತದೆ ಎಂಬುದಕ್ಕೆ ಯಾವುದೇ ನಿಗದಿತ ವೇಳಾಪಟ್ಟಿ ಇಲ್ಲ" ಎಂದು ಅವರು ಹೇಳುತ್ತಾರೆ.

“ನನ್ನ ಬಳಿ ಸೀಮಿತ ಸಂಗ್ರಹವಿತ್ತು. ಅದನ್ನೇ ಎಚ್ಚರಿಕೆಯಿಂದ ಹಂಚಬೇಕಿತ್ತು. ಮತ್ತೆ ಬೇಕೆಂದರೆ ಖರೀದಿಸುವುದು ಕೂಡಾ ಸಾಧ್ಯವಿರಲಿಲ್ಲ. ನಾನು ಏನು ಮಾಡಬಲ್ಲೆ? ನನ್ನ ಪರಿಚಯದ ಹಳ್ಳಿಯ ಏಳು ಮಹಿಳೆಯರಿಗೆ ಗರ್ಭಿಣಿಯಾಗುವುದು ಇಷ್ಟವಿರಲಿಲ್ಲ. ಆದರೆ ಅವರು ಗರ್ಭಿಣಿಯಾದರು. ಅವರು ಲಾಕ್‌ಡೌನ್‌ ಸಮಯದಲ್ಲಿ ಗರ್ಭಿಣಿಯರಾದರೆ ಏನು ಮಾಡುವುದು ಹೇಳಿ?” ಎಂದು ಅವರು ಕೇಳುತ್ತಾರೆ. ದೇಶದ ಮೇಲೆ ಲಾಕ್‌ಡೌನ್‌ ಹೇರುವಾಗ ಅಧಿಕಾರಿಗಳು ಮಹಿಳೆಯರ ಕುರಿತು ಯೋಚಿಸಲಿಲ್ಲವೆನ್ನುವುದು ಅವರ ಅಭಿಪ್ರಾಯ. “ಕೌನ್‌ ಸೋಚ್ತಾ ಹೇ ಇನ್‌ ಸಬ್‌ ಚೀಜೋ ಕೇ ಬಾರೇ ಮೇ, ಕೀ ಯೇ ಜರೂರಿ ಹೈ [ಈ ವಿಷಯಗಳ ಕುರಿತು ಯಾರು ಯೋಚಿಸುತ್ತಾರೆ, ಅವುಗಳು ಅತ್ಯವಶ್ಯಕವೆಂದು]?” ಎಂದು ಕಲಾವತಿ ಕೇಳುತ್ತಾರೆ.

ಈ ವರ್ಷಗಳಲ್ಲಿ, ಎಲ್ಲಾ ವಯೋಮಾನದ ಮಹಿಳೆಯರು ತಮ್ಮ ಜೀವನ, ಗುರಿಗಳು ಮತ್ತು ಸವಾಲುಗಳ ಕುರಿತು ಕಲಾವತಿವರೊಡನೆ ತೆರೆದ ಮನಸಿನಿಂದ ಮಾತನಾಡಿದ್ದಾರೆ. ಅವರು ಕಲಾವತಿಯವರನ್ನು ನಂಬುವಷ್ಟು ಬೆಳೆದಿದ್ದಾರೆ. "ನಾನು ಎಲ್ಲಾ ಕಥೆಗಳು ಮತ್ತು ರಹಸ್ಯಗಳ ಡಿಪೋ ಹೋಲ್ಡರ್ ಕೂಡ" ಎಂದು ಅವರು ನಗುತ್ತಾರೆ.

ಗ್ರಾಮೀಣ ಭಾರತದ ಹದಿಹರೆಯದ ಬಾಲಕಿಯರು ಮತ್ತು ಯುವತಿಯರ ಬಗ್ಗೆ PARI ಮತ್ತು ಕೌಂಟರ್‌ ಮೀಡಿಯಾ ಟ್ರಸ್ಟ್‌ನ ಬೆಂಬಲಿತ ರಾಷ್ಟ್ರವ್ಯಾಪಿ ವರದಿ ಮಾಡುವ ಯೋಜನೆಯು ಮಹತ್ವದ ಆದರೆ ಸಮಾಜದ ಅಂಚಿನಲ್ಲಿರುವ ಗುಂಪುಗಳ ಪರಿಸ್ಥಿತಿಯನ್ನು ಅನ್ವೇಷಿಸಲು, ಸಾಮಾನ್ಯ ಜನರ ಮಾತುಗಳು ಮತ್ತು ಜೀವಂತ ಅನುಭವಗಳ ಮೂಲಕ ತಿಳಿಯುವ ಉದ್ದೇಶವನ್ನು ಹೊಂದಿದೆ. ಇದು ಪಾಪ್ಯುಲೇಷನ್‌ ಆಫ್‌ ಇಂಡಿಯಾದ ಬೆಂಬಲವನ್ನು ಹೊಂದಿದೆ.

ಈ ಲೇಖನವನ್ನು ಮರುಪ್ರಕಟಿಸುವ ಆಸಕ್ತಿಯಿದೆಯೇ ? ಇದಕ್ಕಾಗಿ ಈ ಇ-ಮೈಲ್ ವಿಳಾಸವನ್ನು ಸಂಪರ್ಕಿಸಿ: [email protected] ಒಂದು ಪ್ರತಿಯನ್ನು [email protected] . ಈ ವಿಳಾಸಕ್ಕೆ ಕಳಿಸಿ

ಅನುವಾದ: ಶಂಕರ. ಎನ್. ಕೆಂಚನೂರು

Anubha Bhonsle is a 2015 PARI fellow, an independent journalist, an ICFJ Knight Fellow, and the author of 'Mother, Where’s My Country?', a book about the troubled history of Manipur and the impact of the Armed Forces Special Powers Act.

Other stories by Anubha Bhonsle
Illustrations : Labani Jangi

Labani Jangi is a 2020 PARI Fellow, and a self-taught painter based in West Bengal's Nadia district. She is working towards a PhD on labour migrations at the Centre for Studies in Social Sciences, Kolkata.

Other stories by Labani Jangi
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru