"ಎಲ್ಲವೂ ಚೆನ್ನಾಗಿತ್ತು, ಯಾವುದೇ ತೊಂದರೆಗಳಿಲ್ಲದೆ ಬದುಕು ಸಹಜವಾಗಿ ನಡೆಯುತ್ತಿತ್ತು." ತನ್ನ ಕುಟುಂಬಕ್ಕೆ ಸಂಬಂಧಿಸಿದ ಕಡತಗಳು ಮತ್ತು ವರದಿಗಳ ನಡುವೆ ಕುಳಿತು ತನ್ನ ಕುಟುಂಬದ ಮೇಲೆ ಅನಿರೀಕ್ಷಿತ ಆಘಾತವೊಂದು ಎರಗುವ ಮೊದಲು ಬದುಕು ಹೇಗಿತ್ತು ಎನ್ನುವುದನ್ನು ಹೀಗೆ ವಿವರಿಸುತ್ತಾರೆ 33 ವರ್ಷದ ದಿನೇಶ್ ಚಂದ್ರ ಸುತಾರ್.

ರಾಜಾಸ್ಥಾನದ ಬನ್ಸಿ ಗ್ರಾಮದ ಸುತಾರ್‌ನಲ್ಲಿರುವ ಅವರ ಮನೆ ಗೋಡೆಯ ಮೇಲೆ ಮೃತ ಪತ್ನಿಯ ಫೋಟೊ ನೇತು ಹಾಕಲಾಗಿತ್ತು. ಭಾವನಾ ದೇವಿಯವರ ಅಂತಹದ್ದೇ ಚಿತ್ರ ದಿನೇಶ್‌ ಅವರ ಬಳಿಯಿದ್ದ ಫೈಲ್‌ನಲ್ಲೂ ಇತ್ತು. ಆ ಫೋಟೊ ಅವರ ಮದುವೆಯಾದ ಕೆಲವೇ ತಿಂಗಳುಗಳ ನಂತರ ಯಾವುದೋ ಸರ್ಕಾರಿ ಯೋಜನೆಯೊಂದರ ಅರ್ಜಿಯೊಂದಿಗೆ ಲಗತ್ತಿಸಲು ತೆಗೆಸಲಾಗಿತ್ತು.

ಐದು ವರ್ಷಗಳ ನಂತರವೂ ದಿನೇಶ್‌ ತನ್ನ ಅಲ್ಪಕಾಲದ ದಾಂಪತ್ಯದ ಕುರುಹಾದ ಈ ಕಾಗದಗಳು ಮತ್ತು ಫೋಟೊಗಳನ್ನು ನೆನಪಿಗಾಗಿ ತನ್ನೊಂದಿಗೆ ಇರಿಸಿಕೊಂಡಿದ್ದಾರೆ. ಅವರು ಎರಡು ಗಂಡು ಮಕ್ಕಳ ತಂದೆ. ದೊಡ್ಡವನು ಮೂರು ವರ್ಷದ ಚಿರಾಗ್‌, ಚಿಕ್ಕವ ದೇವಾನ್ಶ್‌ ಇವನು ಇಪ್ಪತ್ತೊಂಬತ್ತು ದಿನದ ಮಗುವಿದ್ದಾಗ ಅವನ ತಾಯಿ ಸಂತಾನ ಹರಣ ಚಿಕಿತ್ಸೆಯ ನಂತರ ಕರುಳಿನಲ್ಲಾದ ರಂಧ್ರದಿಂದಾಗಿ ಮೃತಪಟ್ಟರು. ಆಗಿನ್ನೂ ಅವನಿಗೆ ಹೆಸರಿಟ್ಟಿರಲಿಲ್ಲ. ದೇವಾನ್ಶನ ತಾಯಿಯ ಸಾವಿಗೆ ಕಾರಣವಾದ ಐವತ್ತು ಹಾಸಿಗೆಗಳ ಸಮುದಾಯ ಆರೋಗ್ಯ ಕೇಂದ್ರ(ಸಿಎಚ್‌ಸಿ) ಇರುವುದು ಬರಿ ಸದ್ರಿ ಮುನ್ಸಿಪಾಲ್ಟಿಯಲ್ಲಿ.

ದಿನೇಶ್‌ ಬಿಎಡ್‌ ಪದವೀಧರರಾಗಿದ್ದು ಬನ್ಸಿಯಿಂದ ಆರು ಕಿಲೋಮೀಟರ್ ದೂರದಲ್ಲಿರುವ ಬದ್ವಾಲ್‌ನ ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ 15 ಸಾವಿರ ತಿಂಗಳ ಸಂಬಳವಿದೆ. ದಿನೇಶ್‌ ತನ್ನ ಬದುಕನ್ನು ನಾಶಗೊಳಿಸಿದ ಸರಣಿ ಘಟನೆಗಳನ್ನು ಒಂದೇ ದಾರದಲ್ಲಿ ಪೋಣಿಸಲು ಹೊರಟು ಸೋಲುತ್ತಾರೆ. ಮತ್ತೆ ಎಲ್ಲಿ ತಪ್ಪಾಗಿದೆಯೆಂದು ಹುಡುಕುತ್ತಾ ತನ್ನನ್ನೇ ತಾನು ದೂಷಿಸಿಕೊಳ್ಳುವುದರೊಂದಿಗೆ ಮುಗಿಸುತ್ತಾರೆ.

"ನಾನು ಆಪರೇಷನ್‌ಗೆ ಒಪ್ಪಿದ್ದು, ಡಾಕ್ಟರ್‌ಗಳು ಎಲ್ಲವೂ ಸರಿಯಾಗಿದೆ ಎಂದಾಗ ನಂಬಿದ್ದೇ ಇದಕ್ಕೆಲ್ಲ ಕಾರಣವಾಯಿತಾ? ನಾನು ಆಪರೇಷನ್‌ಗೆ ಒಪ್ಪಬಾರದಿತ್ತು ಇನ್ನಷ್ಟು ಮಾಹಿತಿ ಪಡೆಯಬೇಕಿತ್ತು ಮತ್ತು ಯಾರನ್ನೂ ನಂಬಬಾರದಿತ್ತು. ಹೀಗೆ ನಂಬಿದ್ದು ನನ್ನದೇ ತಪ್ಪು." ಹೀಗೆ ಹೇಳುತ್ತಾ ಹೋಗುತ್ತಾರೆ ದಿನೇಶ್‌. ಅವರ ಪತ್ನಿ ಜುಲೈ 24, 2019ರಂದು ನಿಧನರಾದ ನಂತರ ದಿನವೂ ಅವರು ಇಂತಹ ಮಾನಸಿಕ ತೊಳಲಾಟಕ್ಕೆ ಸಿಲುಕಿ ಒದ್ದಾಡುತ್ತಿದ್ದಾರೆ.

ಜುಲೈ 25, 2019ರಂದು, ತಾನು ಸಾಯುವ ಒಂದು ತಿಂಗಳ ಮೊದಲು, 25 ವರ್ಷದ ಭಾವನಾ ದೇವಾನ್ಶ್ ಎಂಬ ಆರೋಗ್ಯವಂತ ಗಂಡು ಮಗುವಿಗೆ ಜನ್ಮ ನೀಡಿದ್ದರು. ಈ ಎರಡನೆಯ ಗರ್ಭಧಾರಣೆ ಮತ್ತು ಹೆರಿಗೆ, ಮೊದಲಿನದರಂತೆ ಸುರಕ್ಷಿತವಾಗಿ ನಡೆದಿತ್ತು. ಬರಿ ಸದ್ರಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಕೆಯ ಎಲ್ಲಾ ತಪಾಸಣೆ, ರಿಪೋರ್ಟ್‌ಗಳು ಮತ್ತು ಹೆರಿಗೆಗಳು ಯಾವುದೇ ತೊಂದರೆಯಿಲ್ಲದೆ ಸಹಜ ರೀತಿಯಲ್ಲಿ ನಡೆದಿತ್ತು. ಈ ಆರೋಗ್ಯ ಕೇಂದ್ರವು ಅವರ ಗ್ರಾಮದಿಂದ 60 ಕಿ.ಮೀ ದೂರದಲ್ಲಿರುವ ಚಿತ್ತೋರ್‌ಗಢ್ ಜಿಲ್ಲೆಯ ಬರಿ ಸದ್ರಿ ತಾಲ್ಲೂಕಿನಲ್ಲಿದೆ.

Bhavna Suthar underwent permanent sterilisation at the CHC in Bari Sadri on July 16, 2019; she died a week later
PHOTO • Anubha Bhonsle

ಭಾವನಾ ಸುತಾರ್ ಅವರು ಜುಲೈ 16, 2019ರಂದು ಬರಿ ಸದ್ರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶಾಶ್ವತ ಸಂತಾನಹರಣ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಅದಾಗಿ ಒಂದು ವಾರದ ನಂತರ ನಿಧನರಾದರು

ಹೆರಿಗೆಯ ನಂತರ ಭಾವನಾ ತನ್ನ ತವರು 3,883 ಜನಸಂಖ್ಯೆಯನ್ನು ಹೊಂದಿರುವ ಗ್ರಾಮವಾದ ಬನ್ಸಿಯಲ್ಲಿದ್ದರು. ಹೆರಿಗೆಯಾದ ಸುಮಾರು 20 ದಿನಗಳ ನಂತರ ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತೆ (ಆಶಾ) ಸಿಎಚ್‌ಸಿಯಲ್ಲಿ ನಿಯಮಿತವಾಗಿ ತಪಾಸಣೆ ಮತ್ತು ರಕ್ತ ಪರೀಕ್ಷೆಗೆ ಬರುವಂತೆ ಕೇಳಿಕೊಂಡರು. ಆಗ ಅವರಿಗೆ ಯಾವುದೇ ವೀಕ್‌ನೆಸ್‌ ಇರಲಿಲ್ಲ ಆದರೂ ಆಶಾ ಜೊತೆ ಆಸ್ಪತ್ರೆಗೆ ಹೋದರು. ಅಂದು ತನ್ನ ತಾಯಿಯನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗಿದ್ದರು. "ಆಶಾ ಕಾರ್ಯಕರ್ತೆ ಮನೆಗೆ ಬಂದಿದ್ದಾಗ ಯಾವುದೇ ಆಪರೇಷನ್‌ ಕುರಿತು ಹೇಳಿರಲಿಲ್ಲ" ಎಂದು ಭಾವನಾ ಅವರ ತಾಯಿ ದಿನೇಶ್‌ ಬಳಿ ತಿಳಿಸಿದ್ದರು.

ಅಂದು ಚೆಕ್‌ಅಪ್‌ ಮತ್ತು ಟೆಸ್ಟ್‌ಗಳ ನಂತರ, ಆಶಾ ಕಾರ್ಯಕರ್ತೆ ಮತ್ತು ಕರ್ತವ್ಯದಲ್ಲಿರುವ ವೈದ್ಯರು ಭಾವನಾ ಅವರಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆಗೆ ಒಳಗಾಗುವಂತೆ ಸಲಹೆ ನೀಡಿದರು.

"ಭಾವನಾ ಈಗಾಗಲೇ ಎರಡು ಮಕ್ಕಳನ್ನು ಹೊಂದಿರುವುದರಿಂದ ಮತ್ತು ದಂಪತಿಗಳು ಕುಟುಂಬ ಯೋಜನೆ ಅಥವಾ ಜನನ ನಿಯಂತ್ರಣದ ಯಾವುದೇ ವಿಧಾನಗಳನ್ನು ಬಳಸುತ್ತಿಲ್ಲವಾದ ಕಾರಣ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದು ಉತ್ತಮ. ಇದರಿಂದ ಸಮಸ್ಯೆಗಳಿಂದ ಮುಕ್ತಿ ದೊರೆಯುತ್ತದೆ" ಎಂದು ವೈದ್ಯರು ಮತ್ತು ಆಶಾ ಕಾರ್ಯಕರ್ತೆ ಭಾವನಾ ಮತ್ತು ಅವರ ತಾಯಿಯ ಎದುರು ಶಿಫಾರಸು ಮಾಡಿದ್ದರು.

10ನೇ ತರಗತಿಯವರೆಗೆ ಓದಿರುವ ಭಾವನಾ, ತಾನು ಮನೆಗೆ ತೆರಳಿ ನಂತರ ಗಂಡನೊಂದಿಗೆ ಚರ್ಚಿಸಿ ಈ ಕುರಿತು ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿದಾಗ, ಈಗಲೇ ಅದನ್ನು ಪೂರೈಸಿಬಿಡವುದು ಒಳ್ಳೆಯದು ಎಂದು ಆಕೆಗೆ ಹೇಳಲಾಗಿದೆ. "ಆ ದಿನ ಅವರ ಸಿಎಚ್‌ಸಿಯಲ್ಲಿ ಸಂತಾನಹರಣ ಚಿಕಿತ್ಸಾ ಶಿಬಿರ ಏರ್ಪಡಿಸಲಾಗಿತ್ತು. ಅದೇ ಕಾರಣಕ್ಕಾಗಿ ನಮ್ಮನ್ನು ಅಂದೇ ಆಪರೇಷನ್‌ ಮಾಡಿಸಿಕೊಳ್ಳುವಂತೆ ಒತ್ತಾಯಿಸಿದರು. ಅಲ್ಲದೆ ಭಾವನಾ ಈಗಾಗಲೇ ಹೆರಿಗೆ ವಿಶ್ರಾಂತಿಯಲ್ಲಿಯಲ್ಲಿರುವುದರಿಂದ ಆಪರೇಷನ್‌ ಮಾಡಿಸಿಕೊಂಡರೆ ವಿಶ್ರಾಂತಿ ಪಡೆಯಲು ಮತ್ತಷ್ಟು ದಿನಗಳನ್ನು ವ್ಯರ್ಥಮಾಡಬೇಕಿಲ್ಲ." ಎಂದೂ ಸಲಹೆ ನೀಡಿದ್ದನ್ನು ದಿನೇಶ್‌ ನೆನಪಿಸಿಕೊಳ್ಳುತ್ತಾರೆ. ಅಂದು ಪತ್ನಿಯಿಂದ ಕರೆ ಬಂದ ನಂತರ ದಿನೇಶ್ ಶಾಲೆಯಿಂದ ಸಿಎಚ್‌ಸಿ ತಲುಪಿದ್ದರು.

"ಯಾಕೋ ಅಲ್ಲಿ ಯಾವುದೂ ಸರಿ ಕಾಣುತ್ತಿರಲಿಲ್ಲ. ನಿಜ ಹೇಳಬೇಕೆಂದರೆ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಕುರಿತು ನಾವು ಯೋಚಿಸಿಯೇ ಇರಲಿಲ್ಲ. ಅಲ್ಲದೆ ಆ ಕುರಿತು ನಮಗೆ ಏನೂ ತಿಳಿದಿರಲಿಲ್ಲ. ಇದೆಲ್ಲ ನಮಗೆ ಹೊಸ‌ ವಿಷಯವಾಗಿತ್ತು. ಇದರ ಬಗ್ಗೆ ಮೊದಲ ಬಾರಿ ಕೇಳುತ್ತಿದ್ದೆವು. ಕೊನೆಗೆ ನಾನು ಒಪ್ಪಿಕೊಂಡೆ." ಎನ್ನುತ್ತಾರೆ ದಿನೇಶ್.

“ಇದಾದ ನಂತರ ಯಾವುದೂ ಮೊದಲಿನಂತಿರಲಿಲ್ಲ ನಮ್ಮ ಪಾಲಿಗೆ” ದಿನೇಶ್‌ ತಮ್ಮ ಮೇಲಿನ ಮಾತುಗಳನ್ನು ಮುಂದುವರಿಸುತ್ತಾ ಹೇಳುತ್ತಾರೆ.

The loss is palpable, but Dinesh is determined to to get whatever justice can look like in the face of this catastrophe
PHOTO • Anubha Bhonsle

ಅವರಿಗೆ ಕಳೆದುಕೊಂಡಿರುವುದರ ಕುರಿತು ಅರಿವಿದೆ. ಆದರೆ ಈ ಅನ್ಯಾಯದ ವಿರುದ್ಧ ಹೋರಾಡಿ ನ್ಯಾಯ ಪಡೆಯುವ ಕುರಿತು ದಿನೇಶ್‌ ಬಹಳ ದೃಢವಾಗಿದ್ದಾರೆ

ಜುಲೈ 16,2019ರಂದು ಬರಿ ಸದ್ರಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶಾಶ್ವತ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾದವರಲ್ಲಿ ಭಾವನಾ ಕೂಡ ಒಬ್ಬರು. ಮಿನಿಲಾಪ್ ವಿಧಾನವನ್ನು ಬಳಸಿಕೊಂಡು ಎಂಬಿಬಿಎಸ್ ವೈದ್ಯರೊಬ್ಬರು ನಡೆಸಿದ ಟ್ಯೂಬಲ್‌ ಲಗೇಷನ್‌ಗೆ ಅಂದು ಮೊದಲು ಒಳಗಾದವರು ಭಾವನಾ ಅವರೇ ಆಗಿದ್ದರು. ಆಪರೇಷನ್‌ ನಡೆದ ಎರಡು ಗಂಟೆಗಳ ನಂತರ ಇತರ ನಾಲ್ವರನ್ನು ಡಿಸ್ಚಾರ್ಜ್‌ ಮಾಡಲಾಗಿತ್ತು. ಮೂರು ಗಂಟೆಗಳ ನಂತರ ಪ್ರಜ್ಞೆ ಬಂದಾಗ ಭಅವನಾ ಅವರಿಗೆ ಹೊಟ್ಟೆಯಲ್ಲಿ ತೀವ್ರವಾದ ನೋವು ಕಾಣಿಸಿಕೊಂಡಿತ್ತು. ನಂತರ ಅವರು ಆಕೆಗೆ ಒಂದು ಇಂಜೆಕ್ಷನ್‌ ನೀಡಿದರು. ಆಕೆಯ ರಕ್ತದೊತ್ತಡ ಬಹಳ ಹೆಚ್ಚಾಗಿದ್ದರಿಂದ ರಾತ್ರಿ ಆಸ್ಪತ್ರೆಯಲ್ಲಿಯೇ ತಂಗುವಂತೆ ಸೂಚಿಸಲಾಯಿತು. ಮರುದಿನ ಆಕೆಯ ಹೊಟ್ಟೆ ನೋವು ಹಾಗೇ ಇತ್ತು ಆದರೂ ಡಿಸ್ಚಾರ್ಜ್‌ ಮಾಡಿ ಮನೆಗೆ ಕಳುಹಿಸಲಾಯಿತು.

"ಆಕೆಯ ಹೊಟ್ಟೆ ನೋವಿನ ಕುರಿತು ಹೇಳಿದಾಗ ಅದೇ ವೈದ್ಯರು ʼಆಪರೇಷನ್‌ ಮುಗಿದ ನಂತರ ನೋವು ಬರುವುದು ಬಹಳ ಸಹಜ ಅದರಲ್ಲಿ ತಲೆಕೆಡಿಸಿಕೊಳ್ಳುವಂತಹದ್ದು ಏನೂ ಇಲ್ಲ, ಮನೆಗೆ ಕರೆದುಕೊಂಡು ಹೋಗುʼ ಎಂದು ಸೌಜನ್ಯವಿಲ್ಲದೆ ಹೇಳಿದ್ದರು" ಎಂದು ದಿನೇಶ್‌ ಈಗಲೂ ನೆನಪಿಸಿಕೊಳ್ಳುತ್ತಾರೆ.

ರಾತ್ರಿಯಾಗುವಷ್ಟರಲ್ಲಿ ಭಾವನಾರ ಹೊಟ್ಟೆ ಊದಿಕೊಂಡಿತ್ತು. ನೋವು ತೀವ್ರವಾಯಿತು. ಮರುದಿನ ಬೆಳಿಗ್ಗೆ ದಂಪತಿಗಳು ಮತ್ತೆ ಸಿಎಚ್‌ಸಿಗೆ ಮರಳಿದರು. ಎಕ್ಸ್‌ರೇ ಮತ್ತು ಸೋನೊಗ್ರಫಿಯ ನಂತರ ಭಾವನಾರನ್ನು ಮತ್ತೆ ಅಡ್ಮಿಟ್‌ ಮಾಡಿಕೊಳ್ಳಲಾಯಿತು. ಇಷ್ಟೆಲ್ಲ ಆದರೂ ಆಗಿರುವ ತೊಂದರೆಯೇನೆಂದು ಅವರಿಗೆ ತಿಳಿದಿರಲಿಲ್ಲ. ಮುಂದಿನ ಮೂರು ದಿನಗಳವರೆಗೆ ಆಕೆಗೆ ದಿನಕ್ಕೆ ಆರು ಬಾಟಲಿ ಐವಿ ದ್ರವಗಳನ್ನು ನೀಡಲಾಯಿತು. ಈ ಮೂರು ದಿನಗಳಲ್ಲಿ ಒಂದು ಸಣ್ಣ ಆಹಾರದ ತುಣುಕುನ್ನು ನೀಡಲು ಸಹ ಅನುಮತಿಸಲಿಲ್ಲ. ನಂತರ ಹೊಟ್ಟೆಯ ಊತ ಕಡಿಮೆಯಾಯಿತಾದರೂ ಮತ್ತೆ ಪುನಃ ಮೊದಲಿನಂತೆಯೇ ಊದಿಕೊಂಡಿತು.

ಆಪರೇಷನ್‌ ಮಾಡಿದ ಐದು ದಿನಗಳ ನಂತರ, ರಾತ್ರಿ 10 ಗಂಟೆಯ ಸುಮಾರಿಗೆ, ಅಪರೇಷನ್‌ ಮಾಡಿದ ವೈದ್ಯರು ದಿನೇಶ್‌ ಅವರನ್ನು ಕರೆದು ಹೆಚ್ಚಿನ ಚಿಕಿತ್ಸೆಗಾಗಿ ಸುಮಾರು 95 ಕಿಲೋಮೀಟರ್ ದೂರದಲ್ಲಿರುವ ಉದಯಪುರದ ಸರ್ಕಾರಿ ಆಸ್ಪತ್ರೆಗೆ ಸೇರಿಸಬೇಕಿದೆಯೆಂದು ತಿಳಿಸಿದರು. "ಅವರು ಖಾಸಗಿ ಸಾರಿಗೆಯೊಂದಕ್ಕೆ ಕರೆ ಮಾಡಿ ಒಬ್ಬ ಕಂಪೌಂಡರ್‌ ಜೊತೆ ನಮ್ಮನ್ನು ಕಳಿಸಿದರು. ಆ ವಾಹನದ ಬಾಡಿಗೆ 1,500 ನಾನೇ ಪಾವತಿಸಿದೆ. ಆದರೆ ಇಷ್ಟೆಲ್ಲ ನಡೆದ ನಂತರವೂ ನಿಜವಾದ ಸಮಸ್ಯೆಯೇನೆಂದು ನಮಗೆ ತಿಳಿಯಲಿಲ್ಲ. ಕೇಳಿದರೆ ಆಪರೇಷನ್‌ಗೆ ಸಂಬಂಧಿಸಿದ ಯಾವುದೋ ಒಂದು ಸಮಸ್ಯೆಯೆಂದಷ್ಟೇ ಹೇಳಲಾಗಿತ್ತು."

ಅವರು ಮುಂಜಾನೆ 2 ಗಂಟೆಯ ಹೊತ್ತಿಗೆ ಉದಯಪುರದ ಮಹಾರಾಣ ಭೂಪಾಲ್ ಸರ್ಕಾರಿ ಆಸ್ಪತ್ರೆಯ ಎಮರ್ಜೆನ್ಸಿ ವಾರ್ಡ್ ತಲುಪಿದಾಗ, ಹೊಸ ಎಕ್ಸರೇಗಳನ್ನು ತೆಗೆಸಲಾಯಿತು ಮತ್ತು ಅವರಿಗೆ ಮತ್ತೊಂದು ವಿಭಾಗದಲ್ಲಿರುವ ಮಹಿಳಾ ಮತ್ತು ಮಕ್ಕಳ ವಾರ್ಡ್‌ಗೆ ಹೋಗುವಂತೆ ತಿಳಿಸಲಾಯಿತು. ಅಲ್ಲಿ ಭಾವನಾ ಮತ್ತೆ ಪ್ರವೇಶ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾಯಿತು.

ಇಷ್ಟೆಲ್ಲ ಆದ ನಂತರ ದಿನೇಶ್‌ ಅವರಿಗೆ ಏನೋ ಭೀಕರವಾದ ಸಮಸ್ಯೆಯಾಗಿದೆಯೆಂದು ಅರಿವಾಯಿತು. ಇದಕ್ಕೆ ಕಾರಣ ಅಲ್ಲಿ ಕರ್ತವ್ಯದಲ್ಲಿದ್ದ ವೈದ್ಯರು ಭಾವನಾ ಅವರಿಗೆ ಚಿಕಿತ್ಸೆ ನೀಡಲು ಹಿಂಜರಿದಿದ್ದು ಮತ್ತು "ನಾವು ಬೇರೆ ಆಸ್ಪತ್ರೆಗಳ ತಪ್ಪುಗಳಿಗೆ ಚಿಕಿತ್ಸೆ ನೀಡುವುದಿಲ್ಲ" ಎಂದು ಹೇಳಿದ್ದು.‌

Dinesh is left with two sons, three-year-old Chirag (in the photo with relatives) and Devansh, who was just 29 days old when Bhavna, his mother, died of a punctured intestine
PHOTO • Anubha Bhonsle

ದಿನೇಶ್‌ ಪಾಲಿಗೆ ಈಗ ಇಬ್ಬರು ಗಂಡು ಮಕ್ಕಳು ಉಳಿದಿದ್ದಾರೆ. ದೊಡ್ಡವ ಮೂರು ವರ್ಷದ ಚಿರಾಗ್.‌ ಚಿಕ್ಕವನು ದೇವಾನ್ಶ್‌ ಇವನು 29 ದಿನಗಳ ಮಗುವಾಗಿರುವಾಗ ಇವನ ತಾಯಿ ಕರುಳಿನಲ್ಲಿ ರಂಧ್ರವಾಗಿ ತೀರಿಕೊಂಡರು. (ಚಿತ್ರದಲ್ಲಿ ಸಂಬಂಧಿಕರೊಂದಿಗೆ ದೇವಾನ್ಶ್)

ಆದಾಗ್ಯೂ, ಜುಲೈ 22ರಂದು, ಅವರನ್ನು ಆಸ್ಪತ್ರೆಗೆ ದಾಖಲಿಸಿಕೊಂಡ ನಂತರ, ಸೋನೋಗ್ರಫಿಗೆ ಒಳಪಡಿಸಲಾಯಿತು, ಮತ್ತು ದಿನೇಶ್ ಬಳಿ ಎರಡು ಶಸ್ತ್ರಚಿಕಿತ್ಸೆಗಳನ್ನು ತಕ್ಷಣ ಮಾಡಬೇಕಾಗುತ್ತದೆ ಎಂದು ತಿಳಿಸಲಾಯಿತು - ಒಂದು ದೊಡ್ಡ ಕರುಳಿನಲ್ಲಿ ಒಂದು ಟ್ಯೂಬ್ ಸೇರಿಸಲು ಮತ್ತು ಸೋರುವ ಕರುಳನ್ನು ಸರಿಪಡಿಸಲು ಮತ್ತೊಂದು. ಮುಂದಿನ 48 ಗಂಟೆಗಳು ಬಹಳ ಮುಖ್ಯವೆಂದು ಅವರಿಗೆ ತಿಳಿಸಲಾಯಿತು.

ಆಪರೇಷನ್‌ ಮುಗಿದ ನಂತರ, ವೈದ್ಯರು ದಿನೇಶ್ ಅವರ ಬಳಿ ಭಾವನಾ ಅವರಿಗೆ ಬರಿ ಸದ್ರಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾದಾಗ ವೈದ್ಯರ ಕೈಯಲ್ಲಿದ್ದ ಚಿಕ್ಕ ಚಾಕು ಅವರ ಕರುಳಿಗೆ ಚುಚ್ಚಿದ್ದರಿಂದ ಕರುಳು ತೂತಾಗಿ ಹೊಟ್ಟೆಯಲ್ಲಿ ಮಲ ಹರಡುತ್ತಿತ್ತು, ಇದರಿಂದಾಗಿ ದೇಹವೆಲ್ಲ ಸೋಂಕು ಹರಡಿದೆಯೆಂದು ಹೇಳಿದರು.

ಮುಂದಿನ 48 ಗಂಟೆಗಳ ಕಾಲ ಭಾವನಾ ಅವರನ್ನು ಆಸ್ಪತ್ರೆಯಲ್ಲಿ ತೀವ್ರನಿಗಾದಲ್ಲಿಡಲಾಗಿತ್ತು. ಅವರ ಮಕ್ಕಳು ಅಜ್ಜ-ಅಜ್ಜಿಯರೊಂದಿಗಿದ್ದರು. ಪತಿ ಕೇವಲ ಚಹಾ ಮತ್ತು ನೀರಿನ ಸಹಾಯದಿಂದ ತನ್ನ ಭಾವನಾಳ ಯೋಗಕ್ಷೇಮ ಸುಧಾರಿಸುವುದನ್ನು ಕಾಯುತ್ತಿದ್ದರು. ಆದರೆ ಅಂತಹ ಯಾವ ಘಟನೆಯೂ ನಡೆಯಲಿಲ್ಲ. ಭಾವನಾ 2019ರ ಜುಲೈ 24ರಂದು ಸಂಜೆ 7.15ಕ್ಕೆ ನಿಧನರಾದರು.

ಚಿತ್ತೋರಗಢ್ ಮೂಲದ ಪ್ರಯಾಸ್ ಎಂಬ ಸಾಮಾಜಿಕ ಸಂಸ್ಥೆ ಮಾನವ ಹಕ್ಕುಗಳ ಕಾನೂನು ಜಾಲದ ಸಹಯೋಗದೊಂದಿಗೆ ಈ ವಿಷಯವನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಿ 2019ರ ಡಿಸೆಂಬರ್‌ನಲ್ಲಿ ಸತ್ಯ ಶೋಧನಾ ವರದಿಯನ್ನು ಸಿದ್ಧಪಡಿಸಿತು. ಭಾವನಾ ಅವರಿಗೆ ನಡೆಸಿದ ಸಂತಾನಹರಣ ಶಸ್ತ್ರಚಿಕಿತ್ಸೆಯಲ್ಲಿ ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಭಿವೃದ್ಧಿಪಡಿಸಿದ ಸ್ತ್ರೀ ಮತ್ತು ಪುರುಷ ಸಂತಾನಹರಣದ ಸೇವಾ ಮಾನದಂಡಗಳನ್ನು (2006) ಉಲ್ಲಂಘಿಸಲಾಗಿದೆ ಎನ್ನುವುದನ್ನು ಗಮನಿಸಿದರು.

ಅವರ ವರದಿಯಲ್ಲಿ ತಿಳಿಸಿರುವಂತೆ ಅವರನ್ನು ಆಮಿಷವೊಡ್ಡಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದೆ. ಮತ್ತು ಯಾವುದೇ ಪೂರ್ವ ಮಾಹಿತಿ ಅಥವಾ ಸಮಾಲೋಚನೆ ಇಲ್ಲದೆ ಅವರನ್ನು ಒತ್ತಾಯದಿಂದ ಶಾಶ್ವತ ಸಂತಾನಹರಣ ಚಿಕಿತ್ಸೆಗೆ ಒಳಪಡಿಸಲಾಗಿದೆ. ಆಪರೇಷನ್‌ ಮುಗಿದ ನಂತರವೂ ಸಿಎಚ್‌ಸಿಯ ವೈದ್ಯರು ಅವರ ನಿರ್ಲಕ್ಷ್ಯದಿಂದ ಉಂಟಾದ ರಂಧ್ರದ ಬಗ್ಗೆ ಕುಟುಂಬಕ್ಕೆ ತಿಳಿಸಿಲ್ಲ ಮತ್ತು ಹಾನಿಯನ್ನು ಸರಿಪಡಿಸಲು ಯಾವುದೇ ಶಸ್ತ್ರಚಿಕಿತ್ಸೆ ನಡೆಸಿಲ್ಲ. ಇದಲ್ಲದೆ ಸಿಎಚ್‌ಸಿಯಲ್ಲಿ ಅಥವಾ ಉದಯಪುರ ಆಸ್ಪತ್ರೆಯಲ್ಲಿ ಯಾರೂ ಸರ್ಕಾರದ ಕುಟುಂಬ ಯೋಜನೆ ನಷ್ಟ ಪರಿಹಾರ ಯೋಜನೆ, 2013ರ ಬಗ್ಗೆ ಅವರಿಗೆ ತಿಳಿಸಿಲ್ಲ, ಈ ಯೋಜನೆಯಡಿ ಸಂತಾನಹರಣ ಶಸ್ತ್ರಚಿಕಿತ್ಸೆಯ ನಂತರ ಮೃತಪಟ್ಟಲ್ಲಿ ಕುಟುಂಬಕ್ಕೆ ಪರಿಹಾರವಾಗಿ 2 ಲಕ್ಷ ರೂಪಾಯಿಗಳನ್ನು ಕೇಳಬಹುದಾಗಿದೆ.

ಸಂತಾನಹರಣ  'ಶಿಬಿರʼಗಳ ಉದ್ದೇಶಿತ ಗುರಿ ಸಾಧಿಸುವ ಸಲುವಾಗಿ ಅವರ ಕಾರ್ಯವಿಧಾನವು ಹೇಗೆ ಮುಂದುವರಿಯುತ್ತದೆ, ಸಂತಾನಹರಣ ಚಿಕಿತ್ಸೆಗೆ ಸಂಬಂಧಿಸಿದಂತೆ ಸರ್ಕಾರದ ಮಾರ್ಗಸೂಚಿಗಳನ್ನು ಹೇಗೆ ಕಡೆಗಣಿಸಲಾಗುತ್ತದೆ ಮತ್ತು ಇದು ಮಹಿಳೆಯರ ಆರೋಗ್ಯ ಮತ್ತು ಹಕ್ಕುಗಳನ್ನು ಹೇಗೆ ಕಡೆಗಣಿಸುತ್ತದೆ ಎಂಬುದಕ್ಕೆ ಭಾವನಾ ಪ್ರಕರಣವು ಒಂದು ಶ್ರೇಷ್ಠ ಉದಾಹರಣೆಯಾಗಿದೆ ಎಂದು ಪ್ರಯಾಸ್ ನಿರ್ದೇಶಕರಾಧ ಛಾಯಾ ಪಚೌಲಿ ಗಮನಸೆಳೆಯುತ್ತಾರೆ.

"ಶಸ್ತ್ರಚಿಕಿತ್ಸೆಗೆ ಮುನ್ನ, ಮಹಿಳೆಗೆ ಯೋಚಿಸಲು, ಮರುಪರಿಶೀಲಿಸಲು ಮತ್ತು ಅವಳು ಮತ್ತು ಅವಳ ಸಂಗಾತಿ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಸಿದ್ಧವೇ ಎಂದು ನಿರ್ಧರಿಸಲು ಸಾಕಷ್ಟು ಸಮಯವನ್ನು ನೀಡಬೇಕು" ಎಂದು ಮಾರ್ಗಸೂಚಿಗಳನ್ನು ಉಲ್ಲೇಖಿಸಿ ಪಚೌಲಿ ಹೇಳುತ್ತಾರೆ. ಕ್ಯಾಂಪ್‌ ನಡೆಯುತ್ತಿದೆ ಎನ್ನುವ ಒಂದೇ ಕಾರಣಕ್ಕಾಗಿ ಒಬ್ಬ ಮಹಿಳೆಯನ್ನು ಶಸ್ತ್ರಚಿಕಿತ್ಸೆಗೆ ಒಳಗಾಗುವಂತೆ ಒತ್ತಾಯಿಸಬಾರದು. ಅಥವಾ ಮೇಲಧಿಕಾರಿಗಳ ಒತ್ತಡವಿದೆಯೆನ್ನುವ ಕಾರಣಕ್ಕಾಗಿ ಅವರನ್ನು ಶಸ್ತ್ರಚಿಕಿತ್ಸೆಗೆ ಒಳಗಾಗಿಸಬಾರದು. ಸರಕಾರ ಉದ್ದೇಶಿತ ಗುರಿ ಹೊಂದಿರುವ ಕ್ಯಾಂಪ್‌ಗಳನ್ನು ನಡೆಸುವುದಿಲ್ಲವೆಂದು ಸರ್ಕಾರ ಹೇಳಿಕೊಳ್ಳಬಹುದು ಆದರೆ ಆರೋಗ್ಯ ಕಾರ್ಯಕರ್ತರ ಮೂಲಕ ಮಹಿಳೆಯರನ್ನು ಶಸ್ತ್ರಚಿಕಿತ್ಸೆಗೆ ಮನವೊಲಿಸಲು ಪ್ರಯತ್ನಿಸುತ್ತದೆ ಮತ್ತು ಜಿಲ್ಲಾಡಳಿತಗಳ ಕಾರ್ಯಕ್ಷಮತೆಯನ್ನು ಅವರು ನಡೆಸಿದ ಆಪರೇಷನ್‌ಗಳ ಸಂಖ್ಯೆಯನ್ನು ಅವುಗಳಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಸರಕಾರ ಇಂತಹ ಅಭ್ಯಾಸಗಳನ್ನು ಮೊದಲು ನಿಲ್ಲಿಸಬೇಕು.

"ಶಿಬಿರ ವ್ಯವಸ್ಥೆಯನ್ನು ಉತ್ತಮ ರೀತಿಯಲ್ಲಿ ವ್ಯವಸ್ಥೆಗೊಳಿಸಬೇಕು. ಸುರಕ್ಷಿತ ಶಸ್ತ್ರಚಿಕಿತ್ಸೆಗಳು, ಸಂತಾನಹರಣ ಚಿಕಿತ್ಸಾ ಪೂರ್ವ ಆರೈಕೆ ಮತ್ತು ಯಾವುದೇ ತೊಂದರೆಗಳಿದ್ದಲ್ಲಿ ಅದಕ್ಕೆ ಅಗತ್ಯ ಚಿಕಿತ್ಸೆ ನೀಡುವುದು ಅವಶ್ಯಕ,” ಎಂದು ಪಚೌಲಿ ಹೇಳಿದರು. “ವಾಸ್ತವವಾಗಿ, ಪ್ರಾಥಮಿಕ ಆರೋಗ್ಯ ರಕ್ಷಣೆಯ ಭಾಗವಾಗಿ ಸಂತಾನಹರಣ ಚಿಕಿತ್ಸೆ ಲಭ್ಯವಿರಬೇಕು. ಮತ್ತು ಆರೋಗ್ಯ ಕಾರ್ಯಕರ್ತರಿಗೆ ಸಮಾಲೋಚನಾ ಕೌಶಲ್ಯವನ್ನು ಕಲಿಸಬೇಕು. ಇದನ್ನು ಯಾವುದೇ ಚಿಕಿತ್ಸೆ ಅಥವಾ ಆರೈಕೆಯ ಅತ್ಯಗತ್ಯ ಅಂಶವಾಗಿ ಉತ್ತೇಜಿಸಬೇಕು.”

Dinesh Suthar is holding on to papers and photographs that mark his brief married life with Bhavna
PHOTO • Anubha Bhonsle
Dinesh Suthar is holding on to papers and photographs that mark his brief married life with Bhavna
PHOTO • Anubha Bhonsle

ದಿನೇಶ್ ಈ ಛಾಯಾಚಿತ್ರಗಳು ಮತ್ತು ದಾಖಲೆಗಳನ್ನು ಭಾವನಾರೊಂದಿಗಿನ ಅಲ್ಪ ಕಾಲದ ವೈವಾಹಿಕ ಜೀವನದ ಸಂಕೇತವಾಗಿ ತನ್ನೊಂದಿಗೆ ಇಟ್ಟುಕೊಂಡಿದ್ದಾರೆ

ರಾಜಸ್ಥಾನದಲ್ಲಿ ತಾನು ಕೆಲಸ ಮಾಡಿದ ಸಮಯದಲ್ಲಿ, ಪ್ರಯಾಸ್ ಸಂಸ್ಥೆಯು ಸಂತಾನಹರಣ ಚಿಕಿತ್ಸೆಗೆ ಒಳಗಾಗಿ ಆಪರೇಷನ್ ವಿಫಲವಾದ ಆದರೆ ಪರಿಹಾರವನ್ನು ಕೋರಿಲ್ಲದ ಅನೇಕ ಮಹಿಳೆಯರನ್ನು ಭೇಟಿ ಮಾಡಿದೆ, ಏಕೆಂದರೆ ಅವರು ಅಂತಹ ಪರಿಹಾರಕ್ಕೆ ಅರ್ಹರು ಎನ್ನುವ ಕಲ್ಪನೆ‌ ಕೂಡ ಅವರಿಗಿಲ್ಲ.

ಹೆಚ್ಚಿನ ಸಂದರ್ಭಗಳಲ್ಲಿ ಮಹಿಳೆಯರನ್ನು ಸಂತಾನಹರಣ ಶಸ್ತ್ರಚಕಿತ್ಸೆಗೆ ಒಳಪಡುವಂತೆ ಮನವೊಲಿಸುವಾಗ ಅವರ ಗಂಡ ಅಥವಾ ಅವರ ಮನೆಯವರಿಗೆ ಸಂತಾನಹರಣ ಚಿಕಿತ್ಸೆಯೆಂದರೇನೆಂದು ಹೆಚ್ಚಿನ ಮಾಹಿತಿ ನೀಡಲಾಗಿರುವುದಿಲ್ಲ. ಯಾವ ಸಮಯದಲ್ಲಿ ತೊಂದರೆಗಳು ಉಂಟಾಗಬಹುದು ಎನ್ನುವ ಕುರಿತು ಚರ್ಚೆ ನಡೆಸಲಾಗಿರುವುದಿಲ್ಲ. ಶಸ್ತ್ರಚಿಕಿತ್ಸೆ ವಿಫಲವಾದರೆ ಅಥವಾ ಕೆಲವು ಆರೋಗ್ಯ ಸಮಸ್ಯೆ ಎದುರಾದರೆ ಏನು ಮಾಡಬೇಕೆನ್ನುವುದರ ಕುರಿತು ಮಾಹಿತಿ ನೀಡಿರುವುದಿಲ್ಲ. ಶಸ್ತ್ರಚಿಕಿತ್ಸೆ ವಿಫಲವಾದರೆ, ಸಾವು ಅಥವಾ ಇನ್ನಾವುದೇ ತೊಂದರೆ ಎದುರಾದರೆ ಅವರು ಪಡೆಯಬಹುದಾದ ಪರಿಹಾರಗಳ ಬಗ್ಗೆ ಅವರಿಗೆ ಅಪರೂಪವಾಗಿ ತಿಳಿಸಲಾಗುತ್ತದೆ,” ಎಂದು ಪಚೌಲಿ ಹೇಳುತ್ತಾರೆ.

ಇಷ್ಟೆಲ್ಲ ಸಂಕಟಗಳನ್ನು ಎದುರಿಸಿದ ನಂತರವೂ ದಿನೇಶ್‌ ತನ್ನ ಕುಟುಂಬಕ್ಕೆ ಎದುರಾದ ನಷ್ಟವನ್ನು ಧೈರ್ಯದಿಂದ ಒಪ್ಪಿಕೊಂಡು ಬದುಕುತ್ತಿದ್ದಾರೆ. ತನ್ನ ನೋವಿನ ನಡುವೆಯೂ ಹಾಸ್ಯಪ್ರಜ್ಞೆಯನ್ನು ಉಳಿಸಿಕೊಂಡಿದ್ದಾರೆ. ತನ್ನ ಕೆಲಸಕ್ಕೆ ಮರಳಲು ಪರದಾಡುತ್ತಿದ್ದ ಅವರು "ಒಂದು ದಿನ ನಾನು ಗಡಿಬಿಡಿಯಲ್ಲಿ ನನ್ನ ಖಾಲಿ ಊಟದ ಡಬ್ಬಿಯನ್ನು ತೆಗೆದುಕೊಂಡು ಕೆಲಸಕ್ಕೆ ಹೋಗಿದ್ದೆ" ಎಂದು ಹೇಳುತ್ತಾ ವಿಷಾದದಿಂದ ನಗುತ್ತಾರೆ.

ಸುತಾರ್‌ ಅವರ ಮನೆಯಲ್ಲಿ ಭಾವನಾ ಅವರ ಸಾವಿನಿಂದಾದ ನಷ್ಟ ಎದ್ದು ಕಾಣುತ್ತದೆ. ಆದರೆ ಅವರು ಬದುಕನ್ನು ಮತ್ತೆ ಕಟ್ಟಬೇಕೆನ್ನುವ ಪ್ರಜ್ಞೆಯನ್ನು ಹೊಂದಿದ್ದಾರೆ. ಅದರ ಪ್ರತೀಕವಾಗಿ ಅವರ ಕಾಂಕ್ರಿಟ್ ಮನೆಯ ಒಂದು ಭಾಗದ ದುರಸ್ತಿ ಕೆಲಸ ನಡೆಯುತ್ತಿದೆ.‌ ಟಿವಿ ಆನ್‌ ಆಗಿದೆ. ಮನೆಯ ಇನ್ನೊಂದು ಮೂಲೆಯಿಂದ ಗಾರೆ ಕೆಲಸದ ಸಲಕರಣೆಗಳ ಸದ್ದು ಕೇಳುತ್ತಿತ್ತು. ಹಾಗೂ ಕಿರಿಯ ಮಗ ದೇವಾನ್ಶ್‌ನ ಆರೈಕೆಯನ್ನು ನೆರೆಹೊರೆಯ ಮಹಿಳೆರು ನೋಡಿಕೊಳ್ಳುತ್ತಿದ್ದಾರೆ. ಅಲ್ಲಿ ಬದುಕು ಮತ್ತೆ ಪ್ರಾರಂಭವಾಗಿದೆ...

ಭಾವನಾ ಸಾಯುವ ಹೊತ್ತಿಗೆ ಕುಟುಂಬವು ಚಿಕಿತ್ಸೆಗಾಗಿ 25 ಸಾವಿರ ರೂ ಖರ್ಚು ಮಾಡಿದೆ. ಅವರ ಸಾವಿಗೆ ನ್ಯಾಯ ಒದಗಿಸುವ ದೃಢ ನಿರ್ಧಾರವನ್ನುದಿನೇಶ್‌ ಇಂದಿಗೂ ಕೈಬಿಟ್ಟಿಲ್ಲ. ಅವರು 2 ಲಕ್ಷ ಪರಿಹಾರ ಕೋರಿ ಸಲ್ಲಿಸಿದ ಅರ್ಜಿ ಚಿತ್ತೋರ್‌ಗಢ್‌ನ ವೈದ್ಯಾಧಿಕಾರಿಯವರ ಕಛೇರಿಯ ಟೇಬಲ್‌ ಮೇಲೆ ಬಿದ್ದಿದೆ. "ನನ್ನ ಬಳಿಯಿದ್ದ ಎಲ್ಲವನ್ನೂ ಕಳೆದುಕೊಂಡೆ, ಎಲ್ಲವನ್ನು ಕಳೆದುಕೊಂಡ ಬೇಸರಕ್ಕಿಂತ ಅವಳು ನನ್ನೊಂದಿಗಿಲ್ಲ ಎನ್ನುವ ಬೇಸರ ಹೆಚ್ಚು ಕಾಡುತ್ತದೆ. ಅವಳು ಉಳಿದು ಎಲ್ಲವನ್ನೂ ಕಳೆದುಕೊಂಡಿದ್ದರೆ ನಾನು ಚಿಂತಿಸುತ್ತಿರಲಿಲ್ಲ" ಎನ್ನುತ್ತಾರೆ ದಿನೇಶ್.

ಗ್ರಾಮೀಣ ಭಾರತದ ಹದಿಹರೆಯದ ಬಾಲಕಿಯರು ಮತ್ತು ಯುವತಿಯರ ಬಗ್ಗೆ PARI ಮತ್ತು ಕೌಂಟರ್‌ ಮೀಡಿಯಾ ಟ್ರಸ್ಟ್‌ನ ಬೆಂಬಲಿತ ರಾಷ್ಟ್ರವ್ಯಾಪಿ ವರದಿ ಮಾಡುವ ಯೋಜನೆಯು ಮಹತ್ವದ ಆದರೆ ಸಮಾಜದ ಅಂಚಿನಲ್ಲಿರುವ ಗುಂಪುಗಳ ಪರಿಸ್ಥಿತಿಯನ್ನು ಅನ್ವೇಷಿಸಲು, ಸಾಮಾನ್ಯ ಜನರ ಮಾತುಗಳು ಮತ್ತು ಜೀವಂತ ಅನುಭವಗಳ ಮೂಲಕ ತಿಳಿಯುವ ಉದ್ದೇಶವನ್ನು ಹೊಂದಿದೆ. ಇದು ಪಾಪ್ಯುಲೇಷನ್‌ ಆಫ್‌ ಇಂಡಿಯಾದ ಬೆಂಬಲವನ್ನು ಹೊಂದಿದೆ.

ಈ ಲೇಖನವನ್ನು ಮರುಪ್ರಕಟಿಸುವ ಆಸಕ್ತಿಯಿದೆಯೇ? ಇದಕ್ಕಾಗಿ ಈ ಇ-ಮೈಲ್ ವಿಳಾಸವನ್ನು ಸಂಪರ್ಕಿಸಿ: [email protected] ಒಂದು ಪ್ರತಿಯನ್ನು [email protected] . ಈ ವಿಳಾಸಕ್ಕೆ ಕಳಿಸಿ

ಅನುವಾದ: ಶಂಕರ ಎನ್. ಕೆಂಚನೂರು

Anubha Bhonsle is a 2015 PARI fellow, an independent journalist, an ICFJ Knight Fellow, and the author of 'Mother, Where’s My Country?', a book about the troubled history of Manipur and the impact of the Armed Forces Special Powers Act.

Other stories by Anubha Bhonsle
Illustration : Labani Jangi

Labani Jangi is a 2020 PARI Fellow, and a self-taught painter based in West Bengal's Nadia district. She is working towards a PhD on labour migrations at the Centre for Studies in Social Sciences, Kolkata.

Other stories by Labani Jangi
Editor : Hutokshi Doctor
Series Editor : Sharmila Joshi

Sharmila Joshi is former Executive Editor, People's Archive of Rural India, and a writer and occasional teacher.

Other stories by Sharmila Joshi
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected]

Other stories by Shankar N. Kenchanuru