ನನ್ನ ಕಡೆ ನೋಡಿದ ಆತ, “ಓ ನೀವು ಕೋಲ್ಕೊತಾದವರೇ?” ಎಂದು ಕೇಳಿದರು, ಅವರ ಕಣ್ಣುಗಳು ಆಕರ್ಷಕವಾಗಿ ಹೊಳೆಯುತ್ತಿದ್ದವು. “ನಾನು ಕೂಡ ಕೋಲ್ಕೊತಾದಲ್ಲಿದ್ದೆ, ಮತ್ತೆ ಹೌರಾದಲ್ಲೂ. ಹಲವು ಬಾರಿ. ಯಾವಾಗಲೂ ಕೆಲಸವನ್ನು ಹುಡುಕುತ್ತ ಹೋಗುತ್ತಿದ್ದೆ. ಕೆಲವೊಮ್ಮೆ ನಾನು ಅದೃಷ್ಟವಂತನಾಗಿರುತ್ತಿದ್ದೆ, ಕೆಲವೊಮ್ಮೆ ಇಲ್ಲ. ಅಂತಿಮವಾಗಿ ಇಲ್ಲಿಗೆ ಬಂದು ತಲುಪಿದೆ,”

“ಲಡಾಕ್‌ ಸಮುದ್ರಮಟ್ಟದಿಂದ 10,000 ಅಡಿ ಎತ್ತರದಲ್ಲಿದೆ. ರಾಜು ಮುರ್ಮು ಜಾರ್ಖಂಡ್‌ನಲ್ಲಿರುವ ತನ್ನ ಮನೆಯಿಂದ ಬಹುತೇಕ 2,500 ಕಿಲೋಮೀಟರ್‌ ದೂರದಲ್ಲಿದ್ದು, ಸಂಜೆಯಾಗುತ್ತಲೇ ತಾಪಮಾನ ಇಳಿಯುತ್ತಿದ್ದಂತೆ ಹಿಮಾಲಯದ ಮೂಲೆಯಲ್ಲಿರುವ ಮರುಭೂಮಿಯ ತನ್ನ ಡೇರೆಯ ಹೊರಗಡೆ ಕುಳಿತು ತನಗೆ ಆಪ್ತವೆನಿಸಿರುವ ಸಡಗರದಿಂದ ಕೆಲಸ ಮಾಡುತ್ತಿದ ನಗರದ ಬೆಚ್ಚನೆಯ ನೆನಪುಗಳನ್ನು ನೆನೆದುಕೊಳ್ಳುತ್ತಿದ್ದರು. ವಿದ್ಯುತ್‌ ಇಲ್ಲದ ಕಾರಣ ರಾಜು ಮತ್ತು ಇತರ ಸಹ ವಲಸೆ ಕಾರ್ಮಿಕರ ಡೇರೆಗಳನ್ನು ಕತ್ತಲು ಕೂಡಲೇ ಆವರಿಸಲಿದೆ. ನಿರ್ಮಾಣದ ಸ್ಥಳದಿಂದ ಕೆಲವು ಕಿಲೋಮೀಟರ್‌ ದೂರದಲ್ಲಿರುವ ಡೇರೆಯಲ್ಲಿ ರಾಜು ಮತ್ತು ಅವರ ರಾಜ್ಯದಿಂದ ಬಂದ ಇತರ ಒಂಬತ್ತು ಮಂದಿ ಕಾರ್ಮಿಕರು ವಾಸಿಸುತ್ತಿದ್ದರು.

ದೇಶದಲ್ಲೇ ಅತ್ಯಂತ ಎತ್ತರದಲ್ಲಿರುವ ಕೆಲವು ರಸ್ತೆಗಳನ್ನು ನಿರ್ಮಿಸಲು ಇತರ ಅನೇಕ ಕಾರ್ಮಿಕರಂತೆ 31 ವರ್ಷದ ರಾಜು ಜಾರ್ಖಂಡ್‌ನ ದುಮ್ಕಾ ಜಿಲ್ಲೆಯ ಬಾಬುಪೂರ್‌ ಗ್ರಾಮದಿಂದ ಕೆಲಸಕ್ಕಾಗಿ ಲಡಾಕ್‌ಗೆ ಕಾಯಂ ಆಗಿ ಬರುತ್ತಿದ್ದರು. “ಇದು ನನ್ನ ನಾಲ್ಕನೇ ವರ್ಷ, ಕಳೆದ ವರ್ಷವೂ ನಾನು ಬಂದಿದ್ದೆ. ಏನು ಮಾಡುವುದು? ಹಳ್ಳಿಯಲ್ಲಿ ಮಾಡಲು ಯಾವುದೇ ಕೆಲಸ ಇಲ್ಲ,” ಎಂದು ಹೇಳಿದರು. ಅವರು ಸಮುದ್ರಮಟ್ಟದಿಂದ 17,582 ಅಡಿ ಎತ್ತರದಲ್ಲಿರುವ ಖಾರ್‌ಡುಂಗ್‌ ಲಾ (ಖಾರ್‌ಡಾಂಗ್‌ ಗ್ರಾಮದ ಹತ್ತಿರ) ಮತ್ತು 10,000 ಅಡಿ ಎತ್ತರದಲ್ಲಿರುವ ನುಬ್ರಾ ಗ್ರಾಮದ ನಡುವೆ ಪಾಸೊಂದನ್ನು ನಿರ್ಮಿಸುತ್ತಿದ್ದರು.

ಮೂಲೆಯಲ್ಲಿರುವ ಮತ್ತು ಪ್ರತ್ಯೇಕವಾಗಿರುವ ಲಡಾಖ್‌ನ ಭಾಗ ಜಾರ್ಖಂಡ್‌, ಛತ್ತೀಸ್‌ಗಢ, ಬಿಹಾರ, ಮಧ್ಯಪ್ರದೇಶ ಮತ್ತು ದೇಶದ ಇತರ ಭಾಗಗಳ ವಲಸಿಗರ ತಾಣವಾಗಿತ್ತು, ಆದರೆ ಗಡಿಯಲ್ಲಿನ ವ್ಯಾಪಾರ, ಧರ್ಮ ಮತ್ತು ಸಂಸ್ಕೃತಿ ಇವುಗಳ  ವಿನಿಮಯಕ್ಕೆ ದಾಟಲು ಐತಿಹಾಸಿಕವಾಗಿ ನಿರ್ಣಾಯಕವಾಗಿತ್ತು. ಲಡಾಖ್‌ಗೆ ಹೊಸ ಆಡಳಿತಾತ್ಮಕ ಸ್ಥಾನಮಾನ ಒದಗಿಸಿದ ಹಿನ್ನೆಲೆಯಲ್ಲಿ ಖಾಸಗಿ ಬಿಲ್ಡರ್‌ಗಳು ಈ ವಲಯಕ್ಕೆ ಪ್ರವೇಶಿಸಲು ಸಾಧ್ಯವಾಯಿತು. ಕೇಂದ್ರಾಡಳಿತ ಪ್ರದೇಶದ ಆಡಳಿತ ಮತ್ತು  ಗಡಿ ರಸ್ತೆಗಳ ಸಂಸ್ಥೆ (ಬಾರ್ಡರ್‌ ರೋಡ್‌ ಆರ್ಗನೈಸೇಷನ್)‌ ಜತೆಯಾಗಿ ಇಲ್ಲಿ ವಾಣಿಜ್ಯ ಮತ್ತು ಸೇನೆಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳ ಯೋಜನೆಗಳನ್ನು ತ್ವರಿತಗೊಳಿಸಿತು. ಇದರಿಂದಾಗಿ ಲಡಾಖ್‌ಗೆ ಬರುವ ವಲಸೆ ಕಾರ್ಮಿಕರ ಸಂಖ್ಯೆ ಹೆಚ್ಚಾಯಿತು.

ರಸ್ತೆ ಬದಿಗಳಲ್ಲಿ 11 x 8.5 ಅಡಿಗಿಂತಲೂ ಹೆಚ್ಚಿರದ ಕ್ಯಾನ್ವಾಸ್‌ ಡೇರೆಗಳಲ್ಲಿ ತಮ್ಮ ಕುಟುಂಬದೊಂದಿಗೆ ಅವರು ವಾಸಿಸುವುದನ್ನು ನೀವು ಕಾಣಬಹುದು. ರಸ್ತೆಯ ಕಾಮಗಾಗಿ ಮುಂದುವರಿದಂತೆ ಈ ಸುಧಾರಿತ ಶಿಬಿರ ಮುಂದಕ್ಕೆ ಸ್ಥಳಾಂತರಗೊಳ್ಳುತ್ತಿರುತ್ತದೆ. ಈ ತುಂಬಿದ ಪ್ರತಿಯೊಂದು ಡೇರೆಯು ಚೀಲಗಳು, ಸಾಮಾನು ಮತ್ತು ಸಲಕರಣೆಗಳಿಂದ ಕೂಡಿದ್ದು, ಹಿಮದಿಂದ ಕೂಡಿದ ನೆಲದಲ್ಲಿ  ಕಂಬಳಿ ಇಲ್ಲದೆ ಮಲಗುವ 10 ಜನರಿಗಾಗಿ ಕಾರ್ಯನಿರ್ವಹಿಸುತ್ತಿರುತ್ತದೆ, ವಿದ್ಯುತ್‌ ಇಲ್ಲದೆ, ವಿಪರೀತ ಚಳಿಯನ್ನು ಸಹಿಸಿಕೊಂಡು ಬದುಕುವ ಇವರು  ಸರಿಯಾದ ಸುರಕ್ಷತೆ ಸಾಧನಗಳಿಲ್ಲದೆ ಕೆಲವೊಮ್ಮೆ ಶೂನ್ಯ ತಾಪಮಾನದಲ್ಲೂ ಕೆಲಸ ಮಾಡಬೇಕಾಗುತ್ತದೆ. ಪ್ರತಿಕೂಲವಾದ ವಾತಾವರಣ,  ಮೂಲಭೂತಸೌಖರ್ಯದ ಯೋಜನೆಗೆ ಮಿತಿಮೀರಿದ ವೆಚ್ಚ ಹಾಗೂ ಉತ್ತಮ ಗುಣಮಟ್ಟದ ಯಂತ್ರೋಪಕರಣಗಳ ಕೊರತೆ ಇವುಗಳಿಂದಾಗಿ ಕೆಲಸಗಾರರು ಕೈಯಲ್ಲೇ ಭಾರವಾದ ಸಾಮಾನುಗಳನ್ನುಎತ್ತಿ ಮತ್ತು  ಸಾಗಿಸಿ ರಸ್ತೆಗಳ ನಿರ್ಮಾಣ ಮತ್ತು ಪುನರ್‌ ನಿರ್ಮಾಣ ಮಾಡಬೇಕಾಗುತ್ತದೆ. ಆಮ್ಲಜನಕದ ಪ್ರಮಾಣ ಕಡಿಮೆ ಇರುವ ಅತಿ ಎತ್ತರದ ಭೂಪ್ರದೇಶ ಮತ್ತು ಕಠಿಣ ಶ್ರಮಕ್ಕೆ ಅಸಮರ್ಪಕ ವೇತನ ನೀಡುವಲ್ಲಿ ಈ ಎಲ್ಲ ಅಂಶಗಳು ಬಯಲುಗೊಂಡವು.

PHOTO • Ritayan Mukherjee

ಜಾರ್ಖಂಡ್‌ನಿಂದ ಬಂದ ಕಾರ್ಮಿಕನೊಬ್ಬ ಖಾರ್ದುಂಗ್ಲಾ ಪಾಸ್‌ ಸಮೀಪ ಕಲ್ಲೊಂದನ್ನು ಸಾಗಿಸುತ್ತಿರುವುದು. ಪ್ರತಿಕೂಲವಾದ ವಾತಾವರಣ,  ಮೂಲಭೂತಸೌಖರ್ಯದ ಯೋಜನೆಗೆ ಮಿತಿಮೀರಿದ ವೆಚ್ಚ ಹಾಗೂ ಉತ್ತಮ ಗುಣಮಟ್ಟದ ಯಂತ್ರೋಪಕರಣಗಳ ಕೊರತೆ ಇವುಗಳಿಂದಾಗಿ ಕೆಲಸಗಾರರು ಕೈಯಲ್ಲೇ ಭಾರವಾದ ಸಾಮಾನುಗಳನ್ನು ಎತ್ತಿ ಮತ್ತು ಸಾಗಿಸಿ ರಸ್ತೆಗಳ ನಿರ್ಮಾಣ ಮತ್ತು ಪುನರ್‌ ನಿರ್ಮಾಣ ಮಾಡಬೇಕಾಗುತ್ತದೆ

“ಇಲ್ಲಿಂದ ನಿರ್ಗಮಿಸುವಾಗ 5ರಿಂದ 6 ತಿಂಗಳುಗಳ ಅವಧಿಯಲ್ಲಿ ಕೇವಲ 22,00 0ರಿಂದ  25,000  ರೂಪಾಯಿಗಳನ್ನು ಉಳಿಸಬಹುದು. ಆರು ಮಂದಿ ಸದಸ್ಯರಿಂದ ಕೂಡಿದ ಕುಟುಂಬಕ್ಕೆ ಇದು ಏನೇನೂ ಸಾಲದು,” ಎಂದು ದುಮ್ಕಾದಿಂದ ಬಂದಿರುವ 40ರ ಮಧ್ಯ ವಯಸ್ಸಿನ ಅಮೀನ್‌ ಮುರುಮು ಹೇಳುತ್ತಾರೆ. ಅವರ ರೀತಿಯ ಕೆಲಸಗಾರರು ದಿನಕ್ಕೆ ರೂ. 450ರಿಂದ ರೂ. 700ರವರೆಗೆ ಗಳಿಸುತ್ತಾರೆ. ಇದು ಅವರಿಗೆ ವಹಿಸಲಾದ ಕೆಲಸದ ರೀತಿಯನ್ನು ಅವಲಂಬಿಸಿರುತ್ತದೆ. ಖಾರ್ದುಂಗ್‌ ಲಾದ ಉತ್ತರ ಪುಲ್ಲುವಿನ ಶಿಬಿರದಲ್ಲಿರುವ, 14 ಮತ್ತು 10 ವಯಸ್ಸಿನ ಮಕ್ಕಳ ತಂದೆ ನಮ್ಮೊಂದಿಗೆ ಮಾತನಾಡಿ, ಸಾಂಕ್ರಾಮಿಕ ಕಾಯಿಲೆಯಿಂದಾಗಿ ತನ್ನೆರಡು ಮಕ್ಕಳ ಶಿಕ್ಷಣ ನಿಂತುಹೋಗಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು. ಆನ್‌ಲೈನ್‌ನಲ್ಲಿ ಶಾಲೆಗಳು ಆರಂಭಗೊಂಡಾಗ ತನ್ನ ಮಕ್ಕಳಿಗೆ ಸ್ಮಾರ್ಟ್‌ ಫೋನ್‌ ಖರೀದಿಸಲು ಆತನಲ್ಲಿ ಹಣ ಇರಲಿಲ್ಲ. “ನಮ್ಮ ಪ್ರದೇಶದಲ್ಲಿ ಹೆಚ್ಚಿನ ಕುಟುಂಬಳಿಗೆ ಒಂದು ಮೊಬೈಲ್‌ ಖರೀದಿಸುವ ಸಾಮರ್ಥ್ಯ ಇರಲಿಲ್ಲ. ನನ್ನ ಹಿರಿಯ ಮಗ ವಿದ್ಯಾಭ್ಯಾಸವನ್ನು ನಿಲ್ಲಿಸಿದ. ಒಂದು ವೇಳೆ ನಾನು ಹೆಚ್ಚುವರಿ ಹಣವನ್ನು ಉಳಿಸಿರುತ್ತಿದ್ದರೆ ನನ್ನ ಕಿರಿಯ ಮಗನಿಗಾಗಿ ಸ್ಮಾರ್ಟ್‌ಫೋನ್‌ ಖರೀದಿಸುತ್ತಿದ್ದೆ. ಆದರೆ ಪ್ರತಿ ತಿಂಗಳ ಬಡ್ಡಿಯನ್ನು ಕಟ್ಟುವುದು ಯಾರು?” ಎಂದು ಆತ ಕೇಳಿದರು.

ನಾನು ನಡೆದುಕೊಂಡು ಮುಂದೆ ಹೋಗುತ್ತಿದ್ದಂತೆ ಅಮೀನ್‌ ಅವರ ಶಿಬಿರಕ್ಕೆ ತಾಗಿ ಕೆಲಸಗಾರರ ಗುಂಪೊಂದು ಕಾರ್ಡ್ಸ್‌ ಆಡುತ್ತಿರುವುದು ಕಂಡಿತು. “ಸರ್‌ ದಯವಿಟ್ಟು ನಮ್ಮೊಂದಿಗೆ ಸೇರಿಕೊಳ್ಳಿ, -ಇಂದು ರಜಾದಿನ, ಭಾನುವಾರ,” ಎಂದು 32 ಹಮೀದ್‌ ಅನ್ಸಾರಿ ಹೇಳಿದರು. ಅವರು ಕೂಡ ಜಾರ್ಖಂಡ್‌ನವರು. ಇದು ಅತ್ಯಂತ ಆತ್ಮೀಯರಿಂದ ಕೂಡಿದ ಹರಟೆಗಾರರ ಗುಂಪು. ಅವರಲ್ಲಿ ಒಬ್ಬ ಮಾತಿಗಿಳಿದರು, “ಕೋಲ್ಕೋತಾದಿಂದ ಬಂದಿರುವುದರಿಂದ ನಿಮಗೆ ಜಾರ್ಖಂಡ್‌ ಯಾವ ರೀತಿಯಲ್ಲಿ ಕೋವಿಡ್‌ನಿಂದ ಹಾನಿಗೊಳಗಾಗಿರಬಹುದು ಎಂಬುದು ಗೊತ್ತಾಗಿರಬಹುದು. ಹಲವಾರು ಸಾವು ಮತ್ತು ಅಸಂಖ್ಯ ಪ್ರಮಾಣದಲ್ಲಿ ಜನರು ಕೆಲಸ ಕಳೆದುಕೊಂಡರು. ಕಳೆದ ವರ್ಷ ನಾವು ಕಷ್ಟಪಟ್ಟು ತುತ್ತು ಪಡೆದು ಬದುಕಿದೆವು. ಈ ಬಾರಿ (2021) ಸಮಯ ವ್ಯಯ ಮಾಡದೆ ಇಲ್ಲಿಗೆ ಬಂದೆವು.”

“ಕಟ್ಟಡ ನಿರ್ಮಾಣ ಕೆಲಸಗಾರನಾಗಿ 1990ರಿಂದಲೂ ನಾನು ಲಡಾಖ್‌ಗೆ ಬರುತ್ತಿದ್ದೆ, ಆದರೆ ಕಳೆದ ವರ್ಷ ಮಾತ್ರ ಆತಂಕವಾಗಿತ್ತು,” ಎಂದು ಜಾರ್ಖಂಡ್‌ ಗುಂಪಿನ ಇನ್ನೋರ್ವ ಸದಸ್ಯ ಹೇಳಿದ, 50 ವರ್ಷ ಪ್ರಾಯಕ ಈ ಕೆಲಸಗಾರ 2020ರ ಮೊದಲ ಹಂತದ ಲಾಕ್‌ಡೌನ್‌ ತೆರವಾದಾಗ ಇಲ್ಲಿಗೆ ಆಗಮಿಸಿದ್ದ. “ಆಗಮಿಸುತ್ತಿದ್ದಂತೆ ನಮ್ಮನ್ನು ಕ್ವಾರಂಟೈನ್‌ ಕೇಂದ್ರಗಳಿಗೆ ಕಳುಹಿಸಲಾಯಿತು. ಅಲ್ಲಿ 15 ದಿನಗಳನ್ನು ಕಳೆದ ನಂತರ ಕೆಲಸ ಸೇರಿಕೊಳ್ಳಲು ಸಾಧ್ಯವಾಯಿತು. ಆದರೆ ಆ ಎರಡು ವಾರಗಳು ಮಾನಸಿಕವಾಗಿ ಭಯಾನಕವಾಗಿದ್ದವು,”

ಲೆಹ್‌ ನಗರಕ್ಕೆ ಹಿಂದಿರುಗುವಾಗ ನಾನು ಜಾರ್ಖಂಡ್‌ನಿಂದ ಬಂದಿದ್ದ ಮತ್ತೊಂದು ಯುವಕರ ಗುಂಪನ್ನು ಬೇಟಿ ಮಾಡಿದೆ. “ನಾವು ಇಲ್ಲಿಗೆ ಅಡುಗೆ ಮಾಡಲು, ಕೆಲಸಗಾರರಿಗೆ ನೆರವಾಗಲು ಬಂದೆವು,” ಎಂದು ಹೇಳಿದ ಅವರು, “ನಮಗೆ ನಿತ್ಯ ಎಷ್ಟು ವೇತನ ಎಂಬುದು ಕೂಡ ಗೊತ್ತಿರಲಿಲ್ಲ. ಆದರೆ ಅಲ್ಲಿ (ಗ್ರಾಮದಲ್ಲಿ) ವ್ಯರ್ಥವಾಗಿ ಇರುವುದಕ್ಕಿಂತ ಇಲ್ಲಿ ಕೆಲಸ ಮಾಡುವುದೇ ಉತ್ತಮ,”. ಕೊವಿಡ್‌ ಕಾಲದಲ್ಲಿ ತಮ್ಮ ಕುಟುಂಬಗಳು ಅನುಭವಿಸಿದ ಸಂಕಷ್ಟಗಳ ಕುರಿತು ಪ್ರತಿಯೊಬ್ಬರಲ್ಲೂ ಒಂದೊಂದು ಕತೆ ಇತ್ತು. ಆದರೆ ಎಲ್ಲರೂ ಕೋವಿಡ್‌-19 ಮೊದಲ ಚುಚ್ಚುಮದ್ದು ಪಡೆದಿರುವುದು ನೆಮ್ಮದಿಯ ವಿಚಾರ. (ನೋಡಿ: ಲಡಾಕ್‌ನಲ್ಲಿ 11,000 ಅಡಿಯಲ್ಲಿ ಅಚ್ಚರಿಯ ಅನುಭವ ).

PHOTO • Ritayan Mukherjee

ಲೆಹದ ಪ್ರಮುಖ ಮಾರುಕಟ್ಟೆಯಲ್ಲಿ ಹೊಟೇಲ್‌ ಕಟ್ಟಡ ನಿರ್ಮಿಸುತ್ತಿರುವ ಕಾರ್ಮಿಕರು. ಲಡಾಖ್‌ಗೆ ಹೊಸ ಆಡಳಿತಾತ್ಮಕ ಸ್ಥಾನಮಾನ ಸಿಕ್ಕಿದ ಕಾರಣ  ಕಟ್ಟಡ ನಿರ್ಮಾಣ ಕಂಪೆನಿಗಳಿಗೆ ಈ ವಲಯದಲ್ಲಿ ಕಾರ್ಯನಿರ್ಹಿಸಲು ಅವಕಾಶ ದೊರೆತಿದೆ

PHOTO • Ritayan Mukherjee

ಲೆಹ ನಗರದಲ್ಲಿ ತನ್ನ ಕಠಿಣ ಕೆಲಸಗಳ ನಡುವೆ ಕಾರ್ಮಿಕನೊಬ್ಬ ಅಲ್ಪ ವಿರಾಮದಲ್ಲಿರುವುದು

PHOTO • Ritayan Mukherjee

ಭಾರತ ಮತ್ತು ಚೀನಾದ ಗಡಿಯಲ್ಲಿ ಹೆಚ್ಚುತ್ತಿರುವ ಉದ್ವಿಗ್ನ ಪರಿಸ್ಥಿತಿಯು ಲಡಾಖ್‌ನಲ್ಲಿನ  ಮೂಲಭೂತ ಯೋಜನೆಗಳಿಗಳ ಮೇಲೆ ಹೊಸ ಬಿಕ್ಕಟ್ಟನ್ನು ಉಂಟು ಮಾಡಿದೆ. ಜಾರ್ಖಂಡ್‌, ಛತ್ತೀಸ್‌ಗಢ, ಬಿಹಾರ ಮತ್ತು ಇತರ ರಾಜ್ಯಗಳಿಂದ ಕೆಲಸಕ್ಕಾಗಿ ಇಲ್ಲಿಗೆ ವಲಸೆ ಬರುತ್ತಾರೆ

PHOTO • Ritayan Mukherjee

ಲಡಾಖ್‌ ಎಂಬುದು ವಿಪರೀತ ತಾಪಮಾನದ ಪ್ರದೇಶವಾಗಿದೆ. ಬೇಸಿಗೆಯ ಸುಡು ಮಧ್ಯಾಹ್ನದಲ್ಲಿ ತಾಪಮಾನ ಹೆಚ್ಚಿದ್ದು, ಎತ್ತರ ಪ್ರದೇಶದಲ್ಲಿದ್ದರೂ ರಸ್ತೆ ನಿರ್ಮಾಣ ಮಾಡುತ್ತಿರುವ ಕಾರ್ಮಿಕರಿಗೆ ಹೆಚ್ಚಿನ ಬೇಡಿಕೆ ಇರುತ್ತಿತ್ತು

PHOTO • Ritayan Mukherjee

ಖಾರ್‌ಡುಂಗ್‌ ಲಾ ದ ದಕ್ಷಿಣ ಪುಲ್ಲು ಸಮೀಪ ಜಾರ್ಖಂಡ್‌ ಮೂಲದ ಕೆಲಸಗಾರರ ತಂಡ ರಸ್ತೆ ನಿರ್ಮಾಣ ಮಾಡುತ್ತಿರುವುದು

PHOTO • Ritayan Mukherjee

ಗಡಿ ರಸ್ತೆಗಳ ಸಂಸ್ಥೆಯ ಉದ್ಯೋಗಿಯೊಬ್ಬರು ಮುರಿದ ರಸ್ತೆಯ ಮೇಲ್ಮೈಯನ್ನು ಸ್ವಚ್ಛ ಮಾಡುತ್ತಿರುವುದು

PHOTO • Ritayan Mukherjee

ಹೊರಗಡೆ ಬಿದ್ದಿರುವ ಹಾಳಾದ ರೋಡ್‌ ರೋಲರ್‌. ಇಲ್ಲಿನ ಭೂಮಿ ಹೆಚ್ಚು ಕಠಿಣವಾಗಿರುವುದರಿಂದ ವಾಹನ ಮತ್ತು ಸಲಕರಣೆಗಳು ನಿರಂತರವಾಗಿ ತುಂಡಾಗುತ್ತಿರುತ್ತದೆ

PHOTO • Ritayan Mukherjee

' ನಾನು ಇಲ್ಲಿನ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ, ಅದು ಇಲ್ಲಿ ತನ್ನ ಕಾರ್ಯಚಟುವಟಿಕೆಯನ್ನು ವಿಸ್ತರಿಸುತ್ತಿದೆ,' ಎಂದು ಜಾರ್ಖಂಡ್‌ನ ವಲಸಿಗನೊಬ್ಬ ಹೇಳಿದ

PHOTO • Ritayan Mukherjee

ಆರು ತಿಂಗಳ ಗುತ್ತಿಗೆಯಲ್ಲಿ ಕೆಲಸ ಮಾಡುವ ಈ ಕಾರ್ಮಿಕರ ವಿದ್ಯುತ್‌ ಇಲ್ಲದೆ ಅಥವಾ ಸೂಕ್ತವಾದ ಹಾಸಿಗೆ ಇಲ್ಲದ ಡೇರೆ ಎಂಬ ʼಮನೆʼ

PHOTO • Ritayan Mukherjee

ಜಾರ್ಖಂಡ್‌ನ ದುಮ್ಕಾ ಜಿಲ್ಲೆಯಿಂದ ವಲಸೆ ಬಂದಿರುವ ಅಮೀನ್‌ ಮರ್ಮು ಭಾನುವಾರ ಮಧ್ಯಾಹ್ನ ಊಟದ ವಿರಾಮದಲ್ಲದ್ದರು. 14 ಮತ್ತು 10 ವಯಸ್ಸಿನ ಮಕ್ಕಳ ತಂದೆಯಾಗಿರುವ ಈತನ ಇಬ್ಬರು ಮಕ್ಕಳ ಶಿಕ್ಷಣ ಸಾಂಕ್ರಾಮಿಕ ರೋಗದ ಕಾರಣ ಸ್ಥಗಿತಗೊಂಡಿರುವುದಕ್ಕೆ ನಿರಾಸೆಯಲ್ಲಿದ್ದಾರೆ. ಮನೆಯಲ್ಲಿರುವ ಮಕ್ಕಳಿಗೆ ಸ್ಮಾರ್ಟ್‌ ಫೋನ್‌ ಕೊಡಿಸಲು ಅವರಲ್ಲಿ ಹಣ ಇರಲಿಲ್ಲ. ಇದರಿಂದಾಗಿ ಮಕ್ಕಳಿಗೆ ಶಾಲೆ ಕಲಿಯಲಾಗಲಿಲ್ಲ

PHOTO • Ritayan Mukherjee

ಕೆಲಸದ ಬಿಡುವಿನ ವೇಳೆಯಲ್ಲಿ ಕಾರ್ಮಿಕನೊಬ್ಬ ಮೊಬೈಲ್‌ನಲ್ಲಿ ಸಿನಿಮಾ ವೀಕ್ಷಿಸುತ್ತಿರುವುದು

PHOTO • Ritayan Mukherjee

ಖಾರ್‌ದುಂಗ್‌ ಲಾದ ಉತ್ತರ ಪುಲ್ಲುವಿನಲ್ಲಿ ವಲಸೆ ಕಾರ್ಮಿಕರ ಗುಂಪೊಂದು ಡೇರೆಯ ಒಳಗಡೆ ಇಸ್ಬೀಟ್‌ ಆಡುತ್ತಿರುವುದು. 50 ವರ್ಷ ಪ್ರಾಯದ ಘನಿ ಮಿಯಾ 1990ರಿಂದಲೂ ಜಾರ್ಖಂಡ್‌ನ ದುಮ್ಕಾ ಜಿಲ್ಲೆಯಿಂದ ಲಡಾಖ್‌ಗೆ ಬರುತ್ತಿದ್ದ

PHOTO • Ritayan Mukherjee

ನಮಗೆ ನಮ್ಮ ದಿನಗೂಲಿ ಎಷ್ಟೆಂಬುದೇ ಗೊತ್ತಿಲ್ಲ. ನಾವು ಕಾರ್ಮಿಕರಿಗಾಗಿ ಅಡುಗೆ ಮಾಡಲು ಬಂದಿದ್ದೇವೆ,” ಎಂದು ಈ ಗುಂಪು ಹೇಳಿತು

PHOTO • Ritayan Mukherjee

ಹರಿದ ಟೆಂಟುಗಳನ್ನೇ ತಾತ್ಕಾಲಿಕ ಶೌಚಾಲಯಕ್ಕೆ ಉಪಯೋಗಿಸಿರುವುದು- ನೀರಿಲ್ಲ, ಚರಂಡಿ ವ್ಯವಸ್ಥೆ ಇಲ್ಲ

PHOTO • Ritayan Mukherjee

ಕಾಲಕ್ಕನುಗುಣವಾಗಿ ವಲಸೆ ಬರುವ ಜಾರ್ಖಂಡ್‌ನ ಕಾರ್ಮಿಕರು ಖಾರ್‌ದುಂಗ್‌ ಲಾ ಪಾಸ್‌ ಬಳಿ ಇರುವ ಚಿಕ್ಕ ಹೊಟೇಲ್‌ನಲ್ಲಿ ಕೆಲಸ ಮಾಡುತ್ತಿರುವುದು.  ಅವರು 17,582 ಅಡಿ  ಖಾರ್‌ದುಂಗ್‌ ಲಾ ಮತ್ತು 10,000 ಅಡಿ ನುಬ್ರಾ ಕಣಿವೆ ನಡುವೆ ದಾಟು (ಪಾಸ್)ವನ್ನು ನಿರ್ಮಿಸುತ್ತಿದ್ದಾರೆ.  ಪ್ರವಾಸದ ಋತುವಿನಲ್ಲಿ ಅನೇಕರು ರಸ್ತೆ ಪಕ್ಕದ ಹೊಟೇಲ್‌ಗಳಲ್ಲಿ ಅನೇಕರು ಕೆಲಸ ಮಾಡುತ್ತಾರೆ ಮತ್ತು ತಮಗೆ ಸಿಗುವ ವಾರದ ರಜೆ -ಭಾನುವಾರವನ್ನು- ಹೆಚ್ಚವರಿ ಆದಾಯ ಗಳಿಸಲು ಬಳಸುತ್ತಾರೆ

PHOTO • Ritayan Mukherjee

8 ರಿಂದ 10 ಕಾರ್ಮಿಕರು ಉಳಿದುಕೊಳ್ಳಬಹುದಾದ ಚಿಕ್ಕ ಗುಡಿಸಲಿನ ಒಳಗಡೆ ಬಟ್ಟೆ ಹಾಗೂ ಇತರ ವಸ್ತುಗಳು

PHOTO • Ritayan Mukherjee

ನಿಮ್ಮೋ ಪ್ರದೇಶದಲ್ಲಿ ಜಾರ್ಖಂಡ್‌ನಿಂದ ವಲಸೆ ಬಂದಿರುವ ಕಾರ್ಮಿಕರು: ‘ಅಲ್ಲಿ (ಹಳ್ಳಿಯಲ್ಲಿ)  ವ್ಯರ್ಥವಾಗಿ ಇರುವುದಕ್ಕಿಂತ ಇಲ್ಲಿಗೆ ಬಂದು ಕೆಲಸ ಮಾಡುವುದೇ ಉತ್ತಮ’

PHOTO • Ritayan Mukherjee

ಚಳಿಯಿಂದ ಕೂಡಿದ ಒಂದು ದಿನ ಚುಮಾತಾಂಗ್‌ ಪ್ರದೇಶದಲ್ಲಿ ಒಂಟಿ ಕಾರ್ಮಿಕ ಕೆಲಸ ಮಾಡುತ್ತಿರುವುದು

PHOTO • Ritayan Mukherjee

ಪೂರ್ವ ಲಡಾಖ್‌ನ ಹಾನ್ಲೆ ಗ್ರಾಮದಲ್ಲಿ ಜಾರ್ಖಂಡ್‌ನ ವಲಸೆ ಕಾರ್ಮಿಕರು ಹೈ-ಟೆನ್ಷನ್‌ ವಿದ್ಯುತ್‌ ತಂತಿಯನ್ನು ಜೋಡಿಸುತ್ತಿರುವುದು. ಅವರಲ್ಲಿ ಯಾವುದೇ ಸುರಕ್ಷಾ ಸಾಧನಗಳಿಲ್ಲ

PHOTO • Ritayan Mukherjee

ಹಾನ್ಲೆ ಗ್ರಾಮದಲ್ಲಿ ಕಾರ್ಮಿಕರು ಬಟ್ಟೆ ಹಾಗೂ ಹಾಸಿಗೆ ಸಾಮಾನುಗಳನ್ನು ಸೂರ್ಯನ ಬಿಸಿಲಿಗೆ ಒಣಗಲು ಸ್ಕೂಟರಿನಲ್ಲಿ ಹಾಕಿರುವುದು

ಅನುವಾದ: ಸೋಮಶೇಖರ ಪಡುಕರೆ

Ritayan Mukherjee

Ritayan Mukherjee is a Kolkata-based photographer and a PARI Senior Fellow. He is working on a long-term project that documents the lives of pastoral and nomadic communities in India.

Other stories by Ritayan Mukherjee
Translator : Somashekar Padukare

Somashekar Padukare is a Udupi based sports journalist. From last 25 years he is working as a sports journalist in different Kannada Daily.

Other stories by Somashekar Padukare