ಶೆರಿಂಗ್‌ ದೋರ್ಜೆ ಭುಟಿಯಾ ಅವರಿಗೆ ಬಿಲ್ಲುಗಳನ್ನು ನಿರ್ಮಿಸಿ ಬದುಕನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ಅರಿಯಲು ಸಮಯ ಬೇಕಾಯಿತು. ಅವರ ಬದುಕು ಕಲೆ ಮತ್ತು ಕರಕುಶಲವನ್ನೇ ಆತುಕೊಂಡಿತ್ತು. ಪೆಕ್ಯಾಂಗ್‌ ಜಿಲ್ಲೆಯ ಕಾರ್ಥೋಕ್‌ ಗ್ರಾಮದಲ್ಲಿರುವ ತನ್ನ ಮನೆಯಲ್ಲಿ83 ವರ್ಷ ವಯಸ್ಸಿನ ಅವರು ಮಾತನಾಡಬಯಸಿದರು. 60 ವರ್ಷಗಳ ಕಾಲ ಅವರು ಮರಗೆಲಸವೇ ಅವರ ಆದಾಯದ ಮೂಲವಾಗಿತ್ತು-ಪ್ರಮುಖವಾಗಿ ಪೀಠೋಪಕರಣಗಳ ದುರಸ್ತಿ ಕೆಲಸ ಮಾಡುತ್ತಿದ್ದರು. ಆದರೆ ಅವರಿಗೆ ಹೆಚ್ಚು ಸ್ಫೂರ್ತಿ ಕೊಟ್ಟಿದ್ದು ಬಿಲ್ಗಾರಿಕೆ- ಅವರ ತಾಯ್ನೆಲ ಸಿಕ್ಕಿಂನ ಸಂಸ್ಕೃತಿಯಲ್ಲಿ ಅದು ಆಳವಾಗಿ ಸೇರಿಕೊಂಡಿತ್ತು.

ದಶಕಗಳ ಕಾಲ ಮರಗೆಲಸ ಮಾಡಿಕೊಂಡಿದ್ದು ಅದು ಅವರ ಮೇಲೆ ಹೆಚ್ಚಿನ ಪರಿಣಾಮ ಬೀರಲಿಲ್ಲ. ಆದರೆ ಪೆಕ್ಯಾಂಗ್‌ನಲ್ಲಿ ಬಿಲ್ಲು ಮಾಡುವ ಕೆಲಸದಿಂದಾಗಿ ಅವರು ಜನಪ್ರಿಯಗೊಂಡರು.

“ನಾನು ಮರದಲ್ಲಿ ವಸ್ತುಗಳನ್ನು ನಿರ್ಮಿಸಲು ಆರಂಭಿಸಿದಾಗ 10 ರಿಂದ 12 ವರ್ಷ. ನಿದಾನವಾಗಿ ಬಿಲ್ಲು ಮಾಡಲಾರಂಭಿಸಿದೆ, ಜನ ಅದನ್ನು ಖರೀದಿಸಲಾರಂಭಿಸಿದರು," ಎಂದು ಶೇರಿಂಗ್‌ ಪರಿಗೆ ತಿಳಿಸಿದರು.

“ಹಿಂದೆ ಬಿಲ್ಲನ್ನು ವಿಭಿನ್ನವಾಗಿ ತಯಾರಿಸಲಾಗುತ್ತಿತ್ತು,” ಎಂದ ಅವರು, ತಮ್ಮಲ್ಲಿದ್ದ ಕೆಲವು ಉತ್ಪನ್ನಗಳನ್ನು ತೋರಿಸಿದರು. “ಈ ರೀತಿಯ ಹಿಂದಿನ ಬಿಲ್ಲುಗಳನ್ನು ತಾಬ್ಜೂ [ನೇಪಾಳಿ ಭಾಷೆಯಲ್ಲಿ] ಎಂದು ಕರೆಯಲಾಗುತ್ತಿತ್ತು. ಎರಡು ಸರಳ ಕಡ್ಡಿಗಳನ್ನು ಒಟ್ಟಿಗೆ ಜೋಡಿಸಿ, ಕಟ್ಟಿ, ಅದನ್ನು ಚಮಡಾ [ಚರ್ಮ]ದಿಂದ ಸುತ್ತಲಾಗುತ್ತಿತ್ತು. ಇತ್ತೀಚಿನ ದಿನಗಳಲ್ಲಿ ನಾವು ತಯಾರಿಸುವ ಬಿಲ್ಲನ್ನು ʼಬೋಟ್‌ ವಿನ್ಯಾಸʼ ಎನ್ನುತ್ತಾರೆ. ಒಂದು ಬಿಲ್ಲನ್ನು ಸಿದ್ಧಪಡಿಸಲು ಕನಿಷ್ಠ ಮೂರು ದಿನಗಳು ಬೇಕಾಗುತ್ತಿತ್ತು. ಆದರೆ ಅದು ಯುವ ಕ್ರಿಯಾಶೀಲರಿಗೆ ಮಾತ್ರ ಸಾಧ್ಯ. ಹಳೆಯ ಕೈಗಳಿಗೆ ಇನ್ನೂ ಕೆಲವು ದಿನ ತಗಲುತ್ತದೆ,” ಎಂದು ಹೇಳಿದ ಶೆರಿಂಗ್‌ ಮೊಗದಲ್ಲಿ ತುಂಟ ನಗುವಿತ್ತು.

Left: Tshering Dorjee with pieces of the stick that are joined to make the traditional tabjoo bow. Right: His elder son, Sangay Tshering (right), shows a finished tabjoo
PHOTO • Jigyasa Mishra
Left: Tshering Dorjee with pieces of the stick that are joined to make the traditional tabjoo bow. Right: His elder son, Sangay Tshering (right), shows a finished tabjoo
PHOTO • Jigyasa Mishra

ಎಡ: ಸಾಂಪ್ರದಾಯಿಕ ತಾಬ್ಜೂ ಬಿಲ್ಲನ್ನು ತಯಾರಿಸಲು ಬಳಸುವ ಜೋಡಿಸುವ ಕಡ್ಡಿಗಳೊಂದಿಗೆ ಶೆರಿಂಗ್‌ ದೊರ್ಜೀ. ಬಲ: ಅವರ ಹಿರಿಯ ಮಗ ಸಂಗಯ್‌ ಶೆರಿಂಗ್‌ ಪೂರ್ಣಗೊಂಡ ತಾಬ್ಜೂವನ್ನು ತೋರಿಸುತ್ತಿರುವುದು

ಗಾಂಗ್ಟಾಕ್‌ನಿಂದ 30 ಕಿಮೀ ದೂರದಲ್ಲಿರುವ ತಮ್ಮ ಊರಿನಲ್ಲಿ ಶೆರಿಂಗ್‌ ಕಳೆದ ಆರು ದಶಕಗಳಿಂದ ಬಿಲ್ಲು ಮತ್ತು ಬಾಣಗಳನ್ನು ತಯಾರಿಸುತ್ತಿದ್ದಾರೆ. ಬುದ್ಧ ವಿಹಾರಕ್ಕೆ ಕಾರ್ಥೋಕ್‌ ಪ್ರಸಿದ್ಧಿ ಪಡೆದಿದೆ-ಸಿಕ್ಕಿಂನಲ್ಲಿರುವ ಆರನೇ ಅತ್ಯಂತ ದೊಡ್ಡ ವಿಹಾರ ಇದಾಗಿದೆ. ಸ್ಥಳೀಯರ ಪ್ರಕಾರ ಒಂದು ಕಾಲದಲ್ಲಿ ಕಾರ್ಥೋಕ್‌ನಲ್ಲಿ ಬಿಲ್ಲು ಬಾಣ ತಯಾರಿಸುವವರ ಸಂಖ್ಯೆ ಅಧಿಕವಾಗಿತ್ತು, ಆದರೆ ಈಗ ಶೆರಿಂಗ್‌ ಮಾತ್ರ ಉಳಿದುಕೊಂಡಿದ್ದಾರೆ.

ಒಂದು ಪ್ರಮುಖ ಹಾದಿಯಲ್ಲಿ ಶೆರಿಂಗ್‌ ಅವರ ಮನೆ ಕಾರ್ಥೋಕ್‌ನ ಹೊಸ ಆಕರ್ಷಣೆಯಾಗಿ ಪ್ರತಿಫಲಿಸಿದೆ. ಭವ್ಯವಾದ ಮತ್ತು ವರ್ಣರಂಜಿತವಾದ ಹೂದೋಟವನ್ನು ದಾಟಿದ ನಂತರವೇ ಮನೆಯ ಮೊಗಸಾಲೆಯನ್ನು ಕಾಣುವಿರಿ. ಆ ಹೂದೋಟದಲ್ಲಿ ಸುಮಾರು 500ಕ್ಕೂ ಹೆಚ್ಚು ವಿಧದ ಹೂವು ಮತ್ತು ಗಿಡಗಳಿವೆ. ಅವರು  ಹಸಿರುಮನೆಯೊಂದನ್ನು ಹೊಂದಿದ್ದು, ಹಿತ್ತಲಿನಲ್ಲಿ ಸಸ್ಯೋದ್ಯಾನವೂ ಇದೆ. ಅಲ್ಲಿ ಸುಮಾರು 800 ಆರ್ಕಿಡ್‌ಗಳನ್ನು ಕಾಣಬಹುದು, ಜತೆಯಲ್ಲಿ ಔಷಧೀಯ ಸಸ್ಯಗಳು, ವಿವಿಧ ಶೃಂಗಾರದ ಹೂವುಗಳು ಮತ್ತು ಬೊನ್ಸಾಯ್‌ ಗಿಡಗಳಿವೆ. ಇದು ಅವರ ಹಿರಿಯ ಮಗ 39 ವರ್ಷದ ತೋಟಗಾರಿಕಾ ತಜ್ಞ  ಸಂಗಯ್‌ ಶೆರಿಂಗ್‌ ಭುಟಿಯಾ ಅವರ ಪರಿಶ್ರಮದಿಂದ ಸಾಧ್ಯವಾಯಿತು. ಸಂಗಯ್‌ ಹಲವು ವಿಧದ ಹೂವಿನ ತೋಟವನ್ನು ವಿನ್ಯಾಸ ಮಾಡಿದ್ದಾರೆ, ಗಿಡಗಳನ್ನು ಮಾರಾಟ ಮಾಡುತ್ತಾರೆ- ತೋಟಗಾರಿಕೆ ಬಗ್ಗೆ ಪಾಠ ಮಾಡುತ್ತಾರೆ ಮತ್ತು ಬೇರೆಯವರಿಗೆ ಆರಂಭಿಸಲು ಪ್ರೇರಣೆ ನೀಡುತ್ತಾರೆ.

“ನಾವು ಆರು ಮಂದಿ ಇಲ್ಲಿ ವಾಸಿಸುತ್ತೇವೆ,” ಎಂದು ಶೆರಿಂಗ್‌ ನಮಗೆ ಹೇಳಿದರು. ʼಇಲ್ಲಿʼ ಕಾರ್ಥೋಕ್‌ನಲ್ಲಿ ಅವರು ಸಾಧಾರಣ ಮನೆಯನ್ನು ಹೊಂದಿದ್ದಾರೆ. “ನಾನು, ನನ್ನ ಪತ್ನಿ ದೇವತಿ ಭುಟಿಯಾ [ಅವರಿಗೆ 64 ವರ್ಷ.] ಮಗ ಸಂಗಯ್‌ ಶೆರಿಂಗ್‌, ಆತನ ಪತ್ನಿ ತಾಶಿ ದೊರ್ಮಾ ಶೆರ್ಪಾ [ಆಕೆಗೆ 36ವರ್ಷ]. ಮತ್ತು ನಮ್ಮ ಮೊಮ್ಮಕ್ಕಳಾದ ಚ್ಯಾಂಪಾ ಹೆಸಾಲ್‌ ಭುಟಿಯಾ ಮತ್ತು ರಂಗ್ಸೆಲ್‌ ಭುಟಿಯಾ,”. ಮತ್ತೊಂದು ನಿವಾಸಿಗಳಿದ್ದಾರೆ, ಅದೆ ಮನೆಯವರ ಪ್ರೀತಿಯ ನಾಯಿ, ಡಾಲಿ. ಈ ನಾಯಿ ಹೆಚ್ಚಾಗಿ ಮೂರುವ ವರ್ಷದ ಚ್ಯಾಂಪಾ ಮತ್ತು ಇನ್ನೂ ಎರಡು ವರ್ಷದ ದಾಟದ ರಂಗ್ಸೆಲ್ ಜೊತೆ ಕಾಣಿಸಿಕೊಳ್ಳುತ್ತದೆ.

ಶೆರಿಂಗ್‌ ಅವರ ಎರಡನೇ ಮಗ  33ವರ್ಷದ ಸೋನಂ ಪಲಾಜೋರ್‌  ಭುಟಿಯಾ ಸಿಕ್ಕಿಂನ  ಬಾರತೀಯ ರಿಸರ್ವ್‌ ಬೆಟಾಲಿಯನ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದು ದೆಹಲಿಯಲ್ಲಿ ಪತ್ನಿ ಹಾಗೂ ಮನಗನೊಂದಿಗೆ ವಾಸಿಸುತ್ತಿದ್ದಾರೆ. ಹಬ್ಬ ಮತ್ತು ರಜಾ ದಿನಗಳಲ್ಲಿ ಸೋನಂ ಕಾರ್ಥೋಕ್‌ಗೆ ಬಂದು ತಂದೆಯನ್ನು ಕಾಣುತ್ತಾರೆ. ಶೆರಿಂಗ್‌ ಅವರ ಮಕ್ಕಳಲ್ಲಿ ಹಿರಿಯವರು ಮಗಳು. 43 ವರ್ಷದ ಶೆರಿಂಗ್‌ ಲಾಹ್ಮು ಭುಟಿಯಾ, ಮದುವೆಯಾಗಿರುವ ಅವರು ಗ್ಯಾಂಗ್ಟಾಕ್‌ನಲ್ಲಿ ನೆಲೆಸಿರುತ್ತಾರೆ. ಅವರ ಕಿರಿಯ ಮಗ 31 ವರ್ಷದ ಸಂಗಯ್‌ ಗ್ಯಾಂಪೋ ಪಿಎಚ್‌ಡಿ ಗಳಿಸಲು ಸಂಶೋಧನೆ ಮಾಡುತ್ತಿದ್ದಾರೆ. ಈ ಕುಟುಂಬವು ಬುದ್ಧ ಲಾಮಾ ಸಮುದಾಯಕ್ಕೆ ಸೇರಿದ್ದು ಮತ್ತು ಸಿಕ್ಕಿಂನಲ್ಲಿ ಪ್ರಮುಖ ಪರಿಶಿಷ್ಟ ಬುಡಕಟ್ಟು ಆಗಿರುವ ಭುಟಿಯಾ ಕ್ಕೆ ಸೇರಿದೆ.

PHOTO • Jigyasa Mishra
PHOTO • Jigyasa Mishra

ಎಡ: ಶೆರಿಂಗ್‌ ಅವರ ಉದ್ಯಾನದಲ್ಲಿ ವಿಭಿನ್ನ ರೀತಿಯ ಹೂವು ಮತ್ತು ಗಿಡಗಳಿಗೆ ಮನೆಯಾಗಿದೆ. ಬಲ: ತೋಟಗಾರಿಕೆಯಲ್ಲಿ ಪಳಗಿದ್ದರಿಂದ ಹೆಚ್ಚಿನ ಸಮಯವನ್ನು ಉದ್ಯಾನವನದಲ್ಲೇ ಕಳೆಯುತ್ತಾರೆ. 'ಉದ್ಯೋಗಕ್ಕಿಂತ ಹೆಚ್ಚಾಗಿ ಇದು ನನ್ನಪಾಲಿನ ಉತ್ಸಾಹ'

ನಾವು ಶೆರಿಂಗ್‌ ಅವರ ಬಿಲ್ಲನ್ನು ಉಪಯೋಗಿಸಲು ಕಲಿಯುತ್ತಿದ್ದಂತೆ, ಸಂಗಯ್‌ ಶೆರಿಂಗ್‌ ಆಗಮಿಸಿದರು. ಕಂದು ಮತ್ತು ಹಳದಿ ಬಣ್ಣ ಜತೆಯಲ್ಲಿ ಕಾವಿ ಬಣ್ಣವಿರು ಬಿಲ್ಲನ್ನು ತೋರಿಸುತ್ತ, “ಪಾಪಾ, ಇದನ್ನು ನನಗಾಗಿ ತಯಾರಿಸಿದ್ದಾರೆ,” ಎಂದರು. “ನಾನು ಬಿಲ್ಗಾರಿಕೆಯನ್ನು ಅಭ್ಯಾಸ ಮಾಡುವುದು ಇದೊಂದರಲ್ಲಿ ಮಾತ್ರ,” ಎಡಗೈಯನ್ನು ಮುಂದಕ್ಕೆ ಚಾಚಿದ ಅವರು, ಬಿಲ್ಲನ್ನು ಬಳಸುವಾಗಿನ ತಂತ್ರದ ಬಗ್ಗೆ ಪ್ರಾತ್ಯಕ್ಷಿಕೆ ನೀಕಡಿದರು.

ಸಿಕ್ಕಿಂನ ಸಂಪ್ರದಾಯದಲ್ಲಿ ಬಿಲ್ಗಾರಿಕೆ ಆಳವಾಗಿ ಬೇರೂರಿದೆ, ಅದು ಕ್ರೀಡೆ ಎನ್ನುವುದಕ್ಕಿಂತಲೂ ಅವರ ಸಂಸ್ಕೃತಿಯಾಗಿದೆ. ಬೆಳೆಗಳ ಕೊಯ್ಲಿ ಮುಗಿದ ನಂತರ ಬಿಲ್ಗಾರಿಕೆ ಎಂಬುದು ಜೀವಂತವಾಗಿ ಉಳಿದಿದೆ. ಜನರು ಕೆಲವು ಸಮಯ ಯಾವುದೇ ಚಟುವಟಿಕೆ ಇಲ್ಲದೆ ಇರುವಾ ಹಬ್ಬ ಮತ್ತು ಟೂರ್ನಿಗಳು ಬಂದಾಗ ಜನರು ಒಂದಾಗಿ ಪಾಲ್ಗೊಳ್ಳುವುದಕ್ಕೆ ಅವಕಾಶ ಮಾಡಿಕೊಡುತ್ತದೆ. ಭಾರತದಲ್ಲಿ ವಿಲೀನವಾಗುವುದಕ್ಕೆ ಮೊದಲು ಕೂಡ ಈ ಕ್ರೀಡೆ ಸಿಕ್ಕಿಂನ ರಾಷ್ಟ್ರೀಯ ಕ್ರೀಡೆಯಾಗಿತ್ತು.

ಎರಡು ಬಾರಿ ವಿಶ್ವಚಾಂಪಿಯನ್ಷಿಪ್‌ನಲ್ಲಿ ಪದಕ ಗೆದ್ದಿರುವ, ಎರಡು ಬಾರಿ ಏಷ್ಯನ್‌ ಗೇಮ್ಸ್‌ನಲ್ಲಿ ಪದಕ ಗೆದ್ದಿರುವ ಮತ್ತು ಅಥೇನ್ಸ್‌ 2004, ಲಂಡನ್‌ 2012 ಮತ್ತು ಕಳೆದ ವರ್ಷ ಟೋಕಿಯೋ 2021 ಹೀಗೆ ಮೂರು ಬಾರಿ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿರುವ ದೇಶದ ಏಕೈಕ ಬಿಲ್ಗಾರ ಎಂಬ ಹೆಗ್ಗಳಿಕೆಗೆ ಪಾತ್ರಾಗಿರುವ ತರುಣ್‌ದೀಪ್‌ ರಾಯ್‌ ಅವರು ಸಿಕ್ಕಿಂನವರು. ಪದ್ಮಶ್ರೀ ಗೌರವಕ್ಕೆ ಪಾತ್ರರಾಗಿರುವ ಬಿಲ್ಗಾರರನ್ನು ಗೌರವಿಸುವುದಕ್ಕಾಗಿ ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್‌ ಸಿಂಗ್‌ ತಮಂಗ್‌-ಗೋಲೆ ಅವರು ರಾಜ್ಯದಲ್ಲಿ ತರುಣ್‌ದೀಪ್‌ ರಾಯ್‌ ಆರ್ಚರಿ ಅಕಾಡೆಮಿ ಸ್ಥಾಪಿಸುವುದಾಗಿ ಘೋಷಿಸಿದ್ದಾರೆ .

ಗ್ಯಾಂಗ್ಟಕ್‌ನ ರಾಯಲ್‌ ಪ್ಯಾಲೇಸ್‌ ಅಂಗಣ ಮತ್ತು ರಾಜ್ಯದ ಇತರ ಭಾಗಗಳಲ್ಲಿ ನಡೆಯುವ ಉನ್ನತ ಮಟ್ಟದ ಟೂರ್ನಿಗಳಲ್ಲಿ ಪಾಲ್ಗೊಳ್ಳಲು ಪಶ್ಚಿಮ ಬಂಗಾಳ, ನೇಪಾಳ ಮತ್ತು ಭೂತಾನ್‌ನಿಂದ ಬಿಲ್ಗಾರರ ತಂಡಗಳು ಸಿಕ್ಕಿಂಗೆ ಆಗಮಿಸುತ್ತವೆ. ಕುತೂಹಲದ ಸಂಗತಿಯೆಂದರೆ ʼಬರಿಬಿಲ್ಲಿನ ಬಿಲ್ಗಾರಿಕೆʼ ಎಂಬ ಸಾಂಪ್ರದಾಯಿಕ ಆಟ ಈಗಲೂ ಸಿಕ್ಕಿಂ ಜನರಲ್ಲಿ ಜನಪ್ರಿಯವಾಗಿ ಉಳಿದುಕೊಂಡಿದೆ-ಇದು ಸಂಕೀರ್ಣ ತಾಂತ್ರಿಕ ಉಪಕರಣಗಳಿಂದ ಕೂಡಿದ ಬಿಲ್ಲಿಗಿಂತ ಭಿನ್ನವಾಗಿದೆ.

PHOTO • Jigyasa Mishra
PHOTO • Jigyasa Mishra

ಆಧುನಿಕ ಬಿಲ್ಲಿನೊಂದಿಗೆ ಸಂಗಯ್‌ ಶೆರಿಂಗ್‌ (ಎಡ), ತಂದೆ ಮಾಡಿದ ಬಿಲ್ಲಿನೊಂದಿಗೆ (ಬಲ) ಶೂಟಿಂಗ್‌ ಮಾಡುವಾಗ ಕೈ ಹೇಗಿರಬೇಕು ಎನ್ನುವುದರ ಬಗ್ಗೆ ಪ್ರಾತ್ಯಕ್ಷಿಕೆ ನೀಡುತ್ತಿರುವುದು

ವ್ಯತಿರಿಕ್ತವೆಂದರೆ, ಸಾಂಪ್ರದಾಯಿಕ ಬಿಲ್ಲುಗಳನ್ನು ಖರೀದಿಸಲು ಸೂಕ್ತವಾದ ಅಂಗಡಿ ಇಲ್ಲವೆನ್ನುತ್ತಾರೆ ಭುಟಿಯಾ ಮನೆಯವರು. ಬಾಣಗಳನ್ನು ಸ್ಥಳೀಯ ಅಂಗಡಿಗಳಲ್ಲಿ ಖರೀದಿಸಬಹುದು, ಆದರೆ ಬಿಲ್ಲು ಸಾಧ್ಯವಿಲ್ಲ. “ಖರೀದಿ ಮಾಡುವವರು ಸ್ಥಳೀಯ ಮಾರುಕಟ್ಟೆಯಲ್ಲಿ ಮತ್ತು ಬಿಲ್ಗಾರರಿಂದ ನಮ್ಮ ಬಗ್ಗೆ ತಿಳಿದುಕೊಂಡು -ನಮ್ಮ ಮನೆಗೆ ಬರುತ್ತಾರೆ. ಇದು ದೊಡ್ಡ ಪ್ರದೇಶವಲ್ಲ, ನಮ್ಮ ಮನೆಯನ್ನು ಪತ್ತೆ ಮಾಡಲು ಯಾರೂ ಹರಸಾಹಸ ಪಡಬೇಕಾಗಿಲ್ಲ. ಇಲ್ಲಿ ಎಲ್ಲರೂ ಎಲ್ಲರನ್ನು ಬಲ್ಲರು,” ಎಂದು ಎಂಬತ್ತು ವರ್ಷ ದಾಟಿರುವ ಶೆರಿಂಗ್‌ ಹೇಳಿದರು.

ಸಿಕ್ಕಿಂನ ವಿವಿಧ ಭಾಗಗಳಿಂದ, ನೆರೆಯ ರಾಜ್ಯಗಳಿಂದ ಮತ್ತು ಭೂತಾನ್‌ನಿಂದಲೂ ಬಿಲ್ಲು ಖರೀದಿಸಲು ಬರುತ್ತಾರೆ. “ಅವರು ಗ್ಯಾಂಟ್ಕಾಕ್‌ ಮತ್ತು ಕಾರ್ಥೋಕ್‌ ನಿಂದ ಅಥವಾ ಮೂಲಕ ಬರುತ್ತಾರೆ,” ಎನ್ನುತ್ತಾರೆ ನೇಪಾಳಿಯಲ್ಲಿ ಶೆರಿಂಗ್. ರಾಜ್ಯದಲ್ಲಿ ಇತರ ಅನೇಕರು ಮಾತನಾಡುವಂತೆ ಅದು ಅವರ ಕುಟುಂಬದ ಭಾಷೆಯಾಗಿತ್ತು.

ಬಿಲ್ಲುಗಳನ್ನು ಹೇಗೆ ಮಾಡುತ್ತಾರೆ ಮತ್ತು ಶೆರಿಂಗ್‌ ಯಾವಾಗ ಅದನ್ನು ಕಲಿತರು ಮತ್ತು ಯಾವಾಗ ತಯಾರಿಸಲು ಆರಂಭಿಸಿರು ಎಂಬ ಪ್ರಶ್ನೆಯನ್ನು ಕೇಳುತ್ತಿದ್ದಂತೆ ಶೆರಿಂಗ್‌ ಕೂಡಲೇ ಮನೆಯೊಳಗೆ ಹೋಗಿ ಏನನ್ನೋ ಹುಡುಕತೊಡಗಿದರು. ಮೂರು ನಿಮಿಷಗಳ ಕಳೆಯುತ್ತದ್ದಂತೆ ಅವರು ನಗುತ್ತ ಮತ್ತು ಕುತೂಹಲದೊಂದಿಗೆ- ದಶಕಗಳ ಹಿಂದೆ ತಾವು ತಯಾರಿಸಿರುವ ಬಾಣಗಳ ಗುಚ್ಛ ಮತ್ತು ಬಿಲ್ಲುಗಳ ಜತೆಯಲ್ಲಿ ತಯಾರಿಸಲು ಬಳಸುವ ಔಜಾರ್‌ ಎಂಬ ಉಪರಕಣದೊಂದಿಗೆ ಬಂದರು.

“ನಾನು ಇವೆಲ್ಲವನ್ನೂ 40 ವರ್ಷ ಅಥವಾ ಅಕ್ಕಿಂತಲೂ ಹಿಂದೆ ತಯಾರಿಸಿರುವೆ, ಇವುಗಳಲ್ಲಿ ಕೆಲವು ಬಹಳ ಹಳೆಯವು, ವಯಸ್ಸಿನಲ್ಲಿ ನನಗಿಂತ ಸ್ವಲ್ಪ ಚಿಕ್ಕವು,” ಎಂದು ನಗುತ್ತ ಹೇಳಿದರು. “ಇವುಗಳನ್ನು ತಯಾರಿಸಲು ನಾನು ಎಂದೂ ವಿದ್ಯುತ್‌ ಉಪಕರಣಗಳನ್ನು ಬಳಸಿಲ್ಲ, ಎಲ್ಲವೂ ಕರಕುಶಲದಲ್ಲಿಯೇ ಸೂಕ್ತವಾಗಿ ನಿರ್ಮಾಣಗೊಂಡವು,”

“ನಾವು ಈಗ ಬಳಸುತ್ತಿರುವ ಬಿಲ್ಲುಗಳು ಪರಿವರ್ತಿತಗೊಂಡ ರೂಪ.” ಎನ್ನುತ್ತಾರೆ ಸಂಗಯ್‌ ಶೆರಿಂಗ್.‌ “ನನಗೆ ಇನ್ನೂ ನೆನಪಿದೆ, ನಾವು ಚಿಕ್ಕವರಾಗಿದ್ದಾಗ ಬಳಸುತ್ತಿದ್ದ ಬಾಣದ ಹಿಂತುದಿ ಭಿನ್ನವಾಗಿತ್ತು. ಹಿಂದೆ ಹಿಂತುದಿಗೆ ಬಾತುಕೋಳಿಯ ಗರಿಗಳನ್ನು ಜೋಡಿಸಿ ಕಟ್ಟಲಾಗುತ್ತಿತ್ತು. ಈಗ ಆಧುನಿಕ ರೂಪ ಬಂದಿದ್ದು, ಅದು ಹೆಚ್ಚಿನದ್ದು ಭೂತಾನದ್ದು,” ಎಂದು ಹೇಳಿದ ಸಂಗಯ್‌ ಬಾಣಗಳನ್ನು ನನ್ನ ಕೈಗೆ ನೀಡಿ ಮನೆಯ ಒಳಗಡೆ ಹೋಗಿ ಆಧುನಿಕ ಯಂತ್ರನಿರ್ಮಿತ ಬಿಲ್ಲನ್ನು ತಂದರು.

PHOTO • Jigyasa Mishra
PHOTO • Jigyasa Mishra

ಎಡ: ಶೆರಿಂಗ್‌ ಅವರು 40 ವರ್ಷಗಳ ಹಿಂದೆ ಕೈಯಲ್ಲೇ ನಿರ್ಮಿಸಿದ ಬಿಲ್ಲುಗಳು. ಬಲ: ಕೈಯಲ್ಲೇ ಬಿಲ್ಲು ಮತ್ತು ಬಾಣಗಳನ್ನು ತಯಾರಿಸಲು ಬಳಸುವ ಸಾಧನಗಳು

“ನಾವು ಹೆಚ್ಚು ನಯ ನಾಜೂಕು ಇಲ್ಲದ ಮತ್ತು ಉಜ್ಜದ ಬಿಲ್ಲುಗಳನ್ನು ಮಾರುತ್ತೇವೆ. ನಮ್ಮನ್ನು ಸಂಪರ್ಕಿಸಿ ಬಹಳ ಹಗುರವಾದ ಮತ್ತು ಕಡಿಮೆ ಬೆಲೆಯ ಬಿಲ್ಲುಗಳನ್ನು ಕೇಳಿದರೆ 400 ರೂಗಳಿಗೆ ಮಾರುತ್ತೇವೆ,” ಎಂದರು ಸಂಗಯ್‌. “ನಾವು ಬಿದಿರಿನ ಮೇಲ್ಭಾಗವನ್ನು ಬಳಸಿ ಮಾಡುವುದರಿಂದ ಅವುಗಳಿಗೆ ಶಕ್ತಿ ಕಡಿಮೆ ಇರುತ್ತದೆ. ಆ ಕಾರಣಕ್ಕಾಗಿ ನಾವು ಮಾಡುವುದಿಲ್ಲ. ಆದರೆ ಉತ್ತಮ ರೀತಿಯಲ್ಲಿ ನಯಗೊಳಿಸಿದ, ಮೂರು ಸುತ್ತಿನ ಬಿಲ್ಲುಗಳು 600-700 ರೂಗಳಿಗೆ ಮಾರಾಟವಾಗುತ್ತದೆ. ಇದನ್ನು ಮಾಡಲು ನಾವು ಬಿದಿರಿನ ಕೆಳ ಮತ್ತು ಬಲಿಷ್ಠವಾದ ಭಾಗವನ್ನು ಬಳಸುತ್ತೇವೆ.

“ಒಂದು ಉತ್ತಮ ಬಿಲ್ಲು ತಯಾರಿಸಲು 150ರೂ. ಮೌಲ್ಯದ ಬಿದಿರು ಬೇಕಾಗುತ್ತದೆ, 60 ರೂ. ಮೌಲ್ಯದ ನೂಲು ಅಥವಾ ತಂತು ಮತ್ತು ನಯಗೊಳಿಸಲು ತಗಲುವ ವೆಚ್ಚವನ್ನು ಲೆಕ್ಕಹಾಕುವುದು ಕಷ್ಟ,” ಎಂದು ಸಂಗಯ್‌ ನಗುತ್ತ ಹೇಳಿದರು.

ಅದು ಯಾಕೆ?

“ನಾವು ನಯಗೊಳಿಸುವುದನ್ನು ಮನೆಯಲ್ಲೇ ಮಾಡುತ್ತೇವೆ. ನಾವು ಚಮ್ಡಾ (ಆಡಿನ ಚರ್ಮ) ವನ್ನು ಹೆಚ್ಚಾಗಿ ದಶೇನ್‌ [ದಸರಾ ಹಬ್ಬದ] ಸಮಯದಲ್ಲಿ ಖರೀದಿಸುತ್ತೇವೆ ಮತ್ತು ನಯಗೊಳಿಸುವುದಕ್ಕೆ ಮುನ್ನ ಹದಗೊಳಿಸುತ್ತೇವೆ. ಬಿಲ್ಲು ತಯಾರಿಸುವ ಕೆಲಸ ಪೂರ್ಣಗೊಂಡ ಮೇಲೆ ಈ ನಯಗೊಳಿಸುವುದನ್ನು ಅದರ ಮೇಲೆ ಲೇಪಿಸುತ್ತೇವೆ. ಮೊದಲ ಹಂತದ ಲೇಪ ಒಣಗಿದ ಮೇಲೆ ಇನ್ನೊಂದು ಬಾರಿ ಲೇಪಿಸುತ್ತೇವೆ. ಮೂರು ಹಂತದ ಕೋಟಿಂಗ್‌ ಮುಗಿಯುವವರೆಗೂ ಈ ಪ್ರಕ್ರಿಯೆ ಮುಂದುವರಿಯುತ್ತದೆ. ಆ 1x1 ಆಡಿನ ಚರ್ಮಕ್ಕೆ 150 ರೂ. ತಗಲುತ್ತದೆ,” ಎಂದರು ಸಂಗಯ್‌. ಅವರು ಕಷ್ಟಪಟ್ಟು ಮಾಡುತ್ತಿರುವ ರೀತಿಯನ್ನು ಗಮನಿಸಿದಾಗ ನಯಗೊಳಿಸುವುದಕ್ಕೆ ತಗಲುವ ನಿಖರ ವೆಚ್ಚವನ್ನು ಹೇಳುವುದು ಕಷ್ಟ.

“ಹೊ, ಬಿಲ್ಲಿನ ಪ್ರಮುಖ ಮತ್ತು ಬೆನ್ನೆಲುಬೆನಿಸಿರುವ ವಸ್ತು,” ಎಂದು ಅವರು ಹೇಳಿದರು, “ಬಿದಿರು ನಮಗೆ ಒಂದು ತುಂಡಿಗೆ 300 ರೂ, ತಗಲುತ್ತದೆ. ನಾವು ಒಂದು ದೊಡ್ಡ ಬಿದಿರಿನಿಂದ ಐದು ಬಿಲ್ಲುಗಳನ್ನು ಮಾಡಬಹುದು,”

PHOTO • Jigyasa Mishra
PHOTO • Jigyasa Mishra

ಎಡ: ಸಾಂಪ್ರದಾಯಿಕ ಬಿಲ್ಲುಗಳ ಗುಚ್ಛವನ್ನು ಹಿಡಿದಿರುವ ಶೆರಿಂಗ್‌, ಅವರ ಮಗ ಇತ್ತೀಚಿನ ಬಿಲ್ಲುಗಳನ್ನು ಕೈಯಲ್ಲಿ ಹಿಡಿದಿರುವುದು. ಬಲ: ಮರದ ಪಾಲಿಶ್‌ನ ಬಣ್ಣ ಹಾಕಿದ ಬಿಲ್ಲು ಮತ್ತು ಆಡಿನ ಚರ್ಮವನ್ನು ಹದಗೊಳಿಸಿ ಮೇಣ ಮಾಡಿ ಅದರಿಂದ ನಯಗೊಳಿಸಿದ ಬಿಲ್ಲುಗಳ ನಡುವಿನ ಅಂತರವನ್ನು ವಿವರಿಸುತ್ತಿರುವ ಸಂಗಯ್‌

“ಇತ್ತೀಚಿನ ಬಿಲ್ಲಿನ ವಿನ್ಯಾಸ ಹೀಗಿದೆ, ಇದೊಂದು,” ಎಂದು ಹೇಳಿದ ಸಂಗಯ್‌, ಒಳಗೆ ಹೋಗಿ ದೊಡ್ಡ ಆರ್ಚರಿ ಕಿಟ್‌ಬ್ಯಾಗ್‌ ತಂದರು, ಅದರಿಂದ ಬೃಹತ್‌ ಮತ್ತು ಭಾರವಾದ ಮಾದರಿಯ ಬಿಲ್ಲನ್ನು ಹೊರತೆಗೆದರು. “ಆದರೆ ಇದು ನಮ್ಮ ಸ್ಥಳೀಯ ಟೂರ್ನಿಗಳಲ್ಲಿ ಅವಕಾಶವಿಲ್ಲ. ಇದರಲ್ಲಿ ಅಭ್ಯಾಸ ಮಾಡಬಹುದು ಆದರೆ ಪಂದ್ಯ ಆಡುವಾಗ  ಸಾಂಪ್ರದಾಯಿಕವಾಗಿ ಕೈಯಿಂದ ಮಾಡಿದ ಬಿಲ್ಲನ್ನೇ ಬಳಸಬೇಕು. ನಾನು ಮತ್ತು ನನ್ನ ಸಹೋದರ ಆ ಟೂರ್ನಿಗಳಲ್ಲಿ ತಂದೆಯವರು ಮಾಡಿದ ಬಿಲ್ಲನ್ನೇ ಬಳಸುತ್ತಿದ್ದೆವು. ಈ ಬಾರಿ  ನನ್ನ ಅಣ್ಣ ದಿಲ್ಲಿಯಿಂದ ವಿಭಿನ್ನ ರೀತಿಯ ಮರದಿಂದ ನಯಗೊಳಿಸಿದ ಹಾಗೂ ಅದಕ್ಕೆ ಬಣ್ಣ ಹಾಕಿರುವ. ನಮ್ಮ ತಂದೆಯವರು ಬಹಳ ಕಾಲದಿಂದ ಬಳಸುತ್ತಿದ್ದ ಸಾಂಪ್ರದಾಯಿಕ ಬಣ್ಣವನ್ನು ನಾನು ಬಳಸಿರುವೆ,”

ಬಿಲ್ಲಿನ ಮಾರಾಟವು ಇತ್ತೀಚಿನ ವರ್ಷಗಳಲ್ಲಿ ಗಣನೀಯವಾಗಿ ಇಳಿಕೆಯಾಗಿದೆ ಎಂದು ಭುಟಿಯನ್ನರು ಖೇದ ವ್ಯಕ್ತಪಡಿಸುತ್ತಾರೆ, ಭುಟಿಯಾ ಬುಡಕಟ್ಟಿನ ಸಿಕ್ಕಿಮಿಗಳ ಹೊಸವರ್ಷವಾಗಿರುವ ಲೊಸೂಂಗ್‌ನ ಬೌದ್ಧರ ಹಬ್ಬದಲ್ಲಿ ಅವರ ಉತ್ಪನ್ನಗಳು ಹೆಚ್ಚಾಗಿ ಮಾರಾಟವಾಗುತ್ತಿದ್ದವು. ಡಿಸೆಂಬರ್‌ ಪೂರ್ತಿ ಆಚರಿಸಲ್ಪಡುವ ಈ ಹಬ್ಬ ಸುಗ್ಗಿಯ ನಂತರ ನಡೆಯುತ್ತದೆ ಮತ್ತು ಈ ಸಂದರ್ಭ ಬಿಲ್ಗಾರಿಕೆ ಟೂರ್ನಿಗಳೂ ನಡೆಯುತ್ತದೆ. “ಇಲ್ಲಿ ವಿಹಾರ ಇರುವುದರಿಂದ ಹೆಚ್ಚಿನ ಜನರು ಇಲ್ಲಿಗೆ ಬರುತ್ತಾರೆ ಮತ್ತು ನಮ್ಮಿಂದ ಖರೀದಿಸುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ನಾವು ವರ್ಷಕ್ಕೆ ನಾಲ್ಕು ಅಥವಾ ಐದು ಬಿಲ್ಲುಗಳನ್ನಷ್ಟೇ ಮಾರುತ್ತೇವೆ. ಈ ಕೃತಕ ಬಿಲ್ಲುಗಳು ಮಾರುಕಟ್ಟೆಯನ್ನು ಆವರಿಸಿವೆ. ಅದು ಜಪಾನಿನ ಉತ್ಪನ್ನಗಳು ಎಂದು ನಾನು ಊಹಿಸಿರುವೆ. ಇದಕ್ಕೆ ಮುನ್ನ ಅಂದರೆ ಆರು ಅಥವಾ ಏಳು ವರ್ಷಗಳ ಹಿಂದೆ ನಾನು ವರ್ಷಕ್ಕೆ 10 ಬಿಲ್ಲುಗಳನ್ನು ಮಾರುತ್ತಿದ್ದೆ,” ಎಂದು ಶೆರಿಂಗ್‌ ದೋರ್ಜೆ ಪಿಎಆರ್‌ಐಗೆ ಹೇಳಿದರು.

ಆದರೆ ವರ್ಷಕ್ಕೆ 10 ಬಿಲ್ಲುಗಳನ್ನು ಮಾರಿದರೂ ಅವರಿಗೆ ತೃಪ್ತಿಕರ ಆದಾಯ ಬರುತ್ತಿಲ್ಲ. ಬಡಗಿಯಾಗಿದ್ದ ಅವರು ಪೀಠೋಪಕರಣಗಳ ನಿರ್ಮಾಣ ಮತ್ತು ದುರಸ್ತಿ ಮತ್ತು ಇತರ ಸಣ್ಣಪುಟ್ಟ ಮರದ ಕೆಲಸಗಳನ್ನು ಮಾಡಿ ಕುಟುಂಬ ಸಲಹುತ್ತಿದ್ದರು. ದಶಕಗಳ ಹಿಂದೆ ಈ ಉದ್ಯೋಗದಲ್ಲಿ ಕ್ರಿಯಾಶೀಲರಾಗಿದ್ದಾಗ ಪೂರ್ಣಕಾಲಿಕರಾಗಿ ಕೆಲಸ ಮಾಡುತ್ತಿದ್ದು, ಕುಟುಂಬದ ಏಕೈಕ ದುಡಿಮೆದಾರರಾಗಿದ್ದರು, ತಿಂಗಳಿಗೆ ಸುಮಾರು 10,000ರೂ, ವರೆಗೂ ಗಳಿಸುತ್ತಿದ್ದರು. ಆದರೆ ಬಡಗಿ ಕೆಲಸಕ್ಕಿಂತ ಬಿಲ್ಲು ನಿರ್ಮಿಸುವ ಕಾರ್ಯ ಅವರನ್ನು ಹೆಚ್ಚು ಆಕರ್ಷಿಸಿತು.

PHOTO • Jigyasa Mishra
PHOTO • Tashi Dorma Sherpa

ಹಲವು ವರ್ಷಗಳಿಂದ ಬಿಲ್ಲುಗಳ ಮಾರಾಟದಲ್ಲಿ ಇಳಿಮುಖವಾಗಿದೆ ಎನ್ನುತ್ತಾರೆ ಭುಟಿಯಾ, ಕಣ್ಣಿನ ದೃಷ್ಟಿ ಕಡಿಮೆಯಾದ ಕಾರಣ ಅವರು ಹೆಚ್ಚಿನ ಸಂಖ್ಯೆಯಲ್ಲಿ ಬಿಲ್ಲುಗಳನ್ನು ಮಾಡುತ್ತಿಲ್ಲ

ಭುಟಿಯಾಗಳ ಕರಕುಶಲವಾಗಿರುವ ಬಿಲ್ಲುಗಳನ್ನು ಭುತಾನಿಗಳ ಬಿದಿರು ಎಂದು ಸಾಮಾನ್ಯವಾಗಿ ಕರೆಯಲ್ಪಡುವ ವಿಶೇಷ ರೀತಿಯ ಮರದಿಂದ ತಯಾರಿಸುತ್ತಾರೆ. “ನಮ್ಮ ತಂದೆಯವರು ನಿರ್ಮಿಸಿರು ಪ್ರತಿಯೊಂದು ಬಿಲ್ಲುಗಳನ್ನು ಬೂತಾನಿಗಳ ಬಿದಿರು ಎಂಬ ವಿಷೇಷ ಮರದಿಂದ ನಿರ್ಮಿಸಲಾಗಿದೆ. ಇದು ಮೊದಲು ಭಾರತದಲ್ಲಿ ಸಿಗುತ್ತಿರಲಿಲ್ಲ.,” ಎನ್ನುತ್ತಾರೆ ಸಂಗಯ್‌. “ಇಲ್ಲಿಂದ 70 ಕಿಮೀ ದೂರದಲ್ಲಿರುವ ಪಶ್ಚಿಮ ಬಂಗಾಳದ ಕಲಿಪಾಂಗ್‌ನಲ್ಲಿ ರೈತರು ಈ ರೀತಿಯ ಬೀಜಗಳನ್ನು ಬಿತ್ತಿ ಬೆಳೆಯುತ್ತಾರೆ, ಈಗ ನಮಗೆ ಅಲ್ಲಿಂದ ಪೂರೈಕೆಯಾಗುತ್ತಿದೆ, ನಾನು ಕುದ್ದಾಗಿ ಅಲ್ಲಿಗೆ ಹೋಗಿ ಒಂದು ಬಾರಿ ಎರಡು ವರ್ಷಕ್ಕೆ ಸಾಕಾಗುವಷ್ಟು ಖರೀದಿ ಮಾಡುತ್ತೇನೆ, ಮತ್ತು ಕಾರ್ಥೋಕ್‌ನಲ್ಲಿರುವ ನಮ್ಮ ಮನೆಯಲ್ಲಿ ಸಂಗ್ರಹ ಮಾಡಿಕೊಳ್ಳುತ್ತೇವೆ,”

“ನಿಮಗೆ ಮೊದಲು ಒಬ್ಬರು ಗುರು ಬೇಕು, ಗುರು ಇಲ್ಲದೆ ಯಾರಿಂದಲೂ ಏನೂ ಮಾಡಲು ಸಾಧ್ಯವಿಲ್ಲ,” ಎನ್ನುತ್ತಾರೆ ಶೆರಿಂಗ್‌. “ಆರಂಭದಲ್ಲಿ ನಾನೊಬ್ಬ ಕೇವಲ ಬಡಗಿ, ಆದರೆ ನಂತರ ನಾನು ನಮ್ಮ ತಂದೆಯಿಂದ ಬಿಲ್ಲು ಮಾಡುವುದನ್ನು ಕಲಿತುಕೊಂಡೆ. ನಮ್ಮ ಗೆಳೆಯರು ಬಳಸುತ್ತಿದ್ದ ಬಿಲ್ಲುಗಳ ವಿನ್ಯಾಸಗಳನ್ನು ನೋಡಿಕೊಂಡೆ, ಅವುಗಳಲ್ಲಿ ಕೆಲವನ್ನು ಮಾಡಲು ಯತ್ನಿಸಿದೆ. ಬರಬರುತ್ತ ಅದು ಚೆನ್ನಾಗಿ ಕಾಣಿಸಲಾರಂಭಿಸಿತು. ಯಾರಾದರೂ ಅದನ್ನು ಖರೀದಿಸಲು ಬಂದರೆ ನಾನು ಮೊದಲು ಅವರಿಗೆ ಅದನ್ನು ಬಳಸುವುದು ಹೇಗೆ ಎಂದು ಹೇಳಿಕೊಡುತ್ತಿದ್ದೆ!,”

83ವರ್ಷದ ಶೆರಿಂಗ್‌ ಈಗ ತಮ್ಮ ಆರಂಭದ ದಿನಗಳಲ್ಲಿ ಬಿಲ್ಲು ತಯಾರಿಸುತ್ತಿದ್ದ ಕಲೆಯನ್ನು ನೆನಪಿನಂಗಳದಲ್ಲಿ ಸ್ಮರಿಸುತ್ತಾರೆ. “ಈಗ ನಾನು ಇದರಿಂದ ಗಳಿಸುತ್ತಿರುವ ಆದಾಯ ನಗಣ್ಯ- ಆದರೆ 10 ವರ್ಷಗಳ ಹಿಂದೆ ಉತ್ತಮವಾಗಿತ್ತು. ನನ್ನ ಮನೆ, ಈ ಮನೆ ಎಲ್ಲವನ್ನೂ ದಶಕದಿಂದ ನನ್ನ ಮಕ್ಕಳು ನೋಡಿಕೊಳ್ಳುತ್ತಾರೆ. ಈಗ ನಾನು ತಯಾರಿಸುತ್ತಿರುವ ಬಿಲ್ಲುಗಳು ಆದಾಯದ ಮೂಲವಾಗಿ ಉಳಿದಿಲ್ಲ, ಆದರೆ ಶ್ರಮದ ಪ್ರೀತಿ ಇದೆ,”

“ತಂದೆಯವರು ಈಗ ಅವುಗಳಿಂದ ಹಣ ಮಾಡುತ್ತಿಲ್ಲ- ಅವರ ದೃಷ್ಟಿ ಮಂದವಾಗಿದೆ. ಆದರೂ ಅವರು ಕೆಲವನ್ನು ಮಾಡುತ್ತಾರೆ.,” ಎಂದು ಸಂಗಯ್‌ ಉತ್ಕಟತೆಯಿಂದ ನುಡಿದರು.

“ಅವರ ನಂತರ ಈ ಕರಕುಶಲವನ್ನು ಯಾರು ಮುಂದುವರೆಸಿಕೊಂಡು ಹೋಗುತ್ತಾರೆ ಎಂಬ ಸುಳಿವು ನಮಗಿಲ್ಲ,”

ಅನುವಾದ: ಸೋಮಶೇಖರ ಪಡುಕರೆ

Jigyasa Mishra

Jigyasa Mishra is an independent journalist based in Chitrakoot, Uttar Pradesh.

Other stories by Jigyasa Mishra
Translator : Somashekar Padukare

Somashekar Padukare is a Udupi based sports journalist. From last 25 years he is working as a sports journalist in different Kannada Daily.

Other stories by Somashekar Padukare