ಆ ರಾತ್ರಿ ವಿಕ್ರಮ್ ಮನೆಗೆ ಬರದೆ ಹೋದಾಗ, ಅವನ ತಾಯಿ ಪ್ರಿಯಾ ಆ ಕುರಿತು ಹೆಚ್ಚು ಚಿಂತಿಸಲಿಲ್ಲ. ಯಾಕೆಂದರೆ ಅವನು ಕಾಮಾಟಿಪುರದ ಮತ್ತೊಂದು ಲೇನ್‌ನಲ್ಲಿರುವ ಘರ್‌ವಾಲಿಯ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮತ್ತು ಸಾಮಾನ್ಯವಾಗಿ ಬೆಳಗಿನ ಜಾವದ 2 ಗಂಟೆಯ ಹೊತ್ತಿಗೆ ಮನೆಗೆ ಮರಳುತ್ತಿದ್ದ ಅಥವಾ ಮರುದಿನ ಬೆಳಿಗ್ಗೆ ಅವನ ಕೆಲಸದ ಸ್ಥಳದಲ್ಲೇ ಮಲಗುತ್ತಿದ್ದ.

ಪ್ರಿಯಾ ಅವನಿಗೆ ಕರೆ ಮಾಡಲು ಪ್ರಯತ್ನಿಸಿದ್ದರು, ಆದರೆ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಮರುದಿನ ಆಗಸ್ಟ್ 8ರಂದು ಸಂಜೆಯೂ ಮನೆಗೆ ಬಾರದಿದ್ದ ಕಾರಣ, ಅವರು ಆತಂಕಕ್ಕೊಳಗಾಗಿ  ಸೆಂಟ್ರಲ್ ಮುಂಬೈ ಹತ್ತಿರದ ನಾಗಪಾಡಾ ಪೊಲೀಸ್ ಠಾಣೆಯಲ್ಲಿ ಕಾಣೆಯಾದ‌ ಕುರಿತು ದೂರು ದಾಖಲಿಸಿದರು. ಮರುದಿನ ಬೆಳಿಗ್ಗೆ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲು ಪ್ರಾರಂಭಿಸಿದರು. "ಅವನು ಮುಂಬೈ ಸೆಂಟ್ರಲ್‌ನ ಫುಟ್‌ಬ್ರಿಡ್ಜ್ ಬಳಿ ಮಾಲ್ ಬಳಿ ಕಾಣಿಸಿದ್ದ" ಎಂದು ಪ್ರಿಯಾ ಹೇಳುತ್ತಾರೆ.

ಅವರ ಆತಂಕ ಹೆಚ್ಚಾಯಿತು. ಅವರನ್ನು "ಯಾರಾದರೂ ಅವನನ್ನು ಕರೆದುಕೊಂಡು ಹೋಗಿದ್ದರೆ ಏನು ಮಾಡುವುದು?" ಅವನಿಗೆ ಈ ಹೊಸ ಕಾಯಿಲೆ [ಕೋವಿಡ್] ಏನಾದರೂ ಬಂದಿರಬಹುದೇ?" ಎನ್ನುವ ಚಿಂತೆ ಕಾಡತೊಡಗಿತು. "ಈ ಪ್ರದೇಶದಲ್ಲಿ ಯಾರಿಗಾದರೂ ಏನಾದರೂ ಆದರೂ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ" ಎಂದು ಅವರು ಹೇಳುತ್ತಾರೆ.

ವಿಕ್ರಮ್ ತನ್ನದೇ ಆದ ಪ್ರಯಾಣದಲ್ಲಿದ್ದನು, ಅವನು ತನ್ನ ಪ್ರಾಯಣವನ್ನು ಮೊದಲೇ ಯೋಜಿಸಿದ್ದನು. 30ರ ಹರೆಯದಲ್ಲಿರುವ ಲೈಂಗಿಕ ಕಾರ್ಯಕರ್ತೆಯಾಗಿರುವ ಅವನ ತಾಯಿ ಲಾಕ್‌ಡೌನ್ ಸಮಯದಲ್ಲಿ ಕೆಲಸ ಮಾಡಲು ಸಾಧ್ಯವಾಗಲಿಲ್ಲ, ಮತ್ತು ಆಕೆಯ ಆರ್ಥಿಕ ಪರಿಸ್ಥಿತಿ ಕುಸಿಯುತ್ತಿರುವುದು ಮತ್ತು ಸಾಲಗಳು ಬೆಳೆಯುತ್ತಿರುವುದನ್ನು ಅವನು ನೋಡುತ್ತಿದ್ದನು. ಅವನ ಒಂಬತ್ತು ವರ್ಷದ ಸಹೋದರಿ ರಿದ್ಧಿ ಹತ್ತಿರದ ಮದನ್‌ಪುರದ ತನ್ನ ಹಾಸ್ಟೆಲ್‌ನಿಂದ ಮನೆಗೆ ಮರಳಿದ್ದಳು, ಮತ್ತು ಕುಟುಂಬವು ಎನ್‌ಜಿಒಗಳು ವಿತರಿಸುವ ಪಡಿತರ ಕಿಟ್‌ಗಳನ್ನು ಅವಲಂಬಿಸಿತ್ತು. (ಈ ವರದಿಯಲ್ಲಿನ ಎಲ್ಲಾ ಹೆಸರುಗಳನ್ನು ಬದಲಾಯಿಸಲಾಗಿದೆ.)

ಮತ್ತು ಮಾರ್ಚ್ ತಿಂಗಳಿನಲ್ಲಿ ಲಾಕ್ ಡೌನ್ ಆಗಿದ್ದರಿಂದ, ಬೈಕುಲ್ಲಾದಲ್ಲಿ ವಿಕ್ರಮ್ ಓದುತ್ತಿದ್ದ ಮುನ್ಸಿಪಲ್ ಶಾಲೆ ಕೂಡ ಮುಚ್ಚಲ್ಪಟ್ಟಿತು. ಆದ್ದರಿಂದ 15 ವರ್ಷದ ವಿಕ್ರಮ್ ಸಣ್ಣ-ಪುಟ್ಟ ಕೆಲಸಗಳನ್ನು ಮಾಡಲು ಪ್ರಾರಂಭಿಸಿದ.

ಕುಟುಂಬಕ್ಕೆ ಆಹಾರ ಬೇಯಿಸಲು ದಿನವೊಂದಕ್ಕೆ 60-80 ರೂಪಾಯಿಗಳ ಸೀಮೆಎಣ್ಣೆ ಬೇಕಾಗುತ್ತದೆ. ಜೊತೆಗೆ ಕಾಮಾಟಿಪುರದ ತಮ್ಮ ಪುಟ್ಟ ಕೋಣೆಗೆ ಬಾಡಿಗೆ ಪಾವತಿವುದಕ್ಕೂ ಅವರು ಹೆಣಗಾಡುತ್ತಿದ್ದರು. ಅವರಿಗೆ ಔಷಧಿಗಳಿಗಾಗಿ ಮತ್ತು ಹಳೆಯ ಸಾಲಗಳನ್ನು ತೀರಿಸಲು ಹಣದ ಅಗತ್ಯವಿತ್ತು. ಪ್ರಿಯಾ ತನ್ನ ಗ್ರಾಹಕರಿಂದ ಅಥವಾ ಸ್ಥಳೀಯರಿಂದ ಹೆಚ್ಚಿನ ಸಾಲಗಳನ್ನು ತೆಗೆದುಕೊಳ್ಳುತ್ತಲೇ ಇದ್ದರು. ಇತ್ತೀಚಿನ ವರ್ಷಗಳಲ್ಲಿ ಲೇವಾದೇವಿದಾರರಿಂದ ಪಡೆದ ಸಾಲವು ಬಡ್ಡಿ ಸೇರಿ 62,000 ರೂಪಾಯಿಗಳಷ್ಟಾಗಿತ್ತು. ಅದರಲ್ಲಿ ಅರ್ಧದಷ್ಟನ್ನು ಮಾತ್ರ ಅವರಿಂದ ತೀರಿಸಲು ಸಾಧ್ಯವಾಗಿತ್ತು. ಇದರೊಂದಿಗೆ ಘರ್‌ವಾಲಿಗೆ (ಮನೆ ಮತ್ತು ವೇಶ್ಯಾವಾಟಿಕೆಯ ಮಾಲಕಿ) ತಿಂಗಳಿಗೆ 6,000 ರೂಪಾಯಿಗಳಂತೆ ಆರು ತಿಂಗಳಿಗೂ ಹೆಚ್ಚಿನ ಬಾಡಿಗೆ ಬಾಕಿಯಾಗಿದೆ. ಜೊತೆಗೆ ಆಕೆಯಿಂದಲೂ 7,000 ರೂಪಾಯಿಗಳನ್ನು ಸಾಲವಾಗಿ ಪಡೆದಿದ್ದಾರೆ.

PHOTO • Aakanksha

ವಿಕ್ರಮ್ ಕೆಲಸ ಮುಗಿಸಿದ ನಂತರ ಘರ್‌ವಾಲಿಯ (ಮೇಡಂ) ಕೋಣೆಯಲ್ಲಿ ಮಲಗುವುದು ಪ್ರಿಯಾಗೆ ಇಷ್ಟವಿಲ್ಲದ ಕಾರಣ ವಿಕ್ರಮ್ ಮತ್ತು ಅವನ ತಾಯಿ ಆಗಸ್ಟ್ 7ರಂದು ಜಗಳವಾಡಿಕೊಂಡಿದ್ದರು.

ಲೈಂಗಿಕ ವೃತ್ತಿಯಿಂದ ಸಿಗುವ ಆದಾಯವು ಆಕೆ ಕೆಲಸ ಮಾಡುವ ದಿನಗಳ ಸಂಖ್ಯೆಯನ್ನು ಅವಲಂಬಿಸಿರುತ್ತದೆ ಮತ್ತು ಲಾಕ್‌ಡೌನ್‌ಗೂ ಮೊದಲು ದಿನವೊಂದಕ್ಕೆ ರೂ. 500ರಿಂದ 1,000 ಸಿಗುತ್ತಿತ್ತು. “ಆದಾಯ ಎಂದಿಗೂ ನಿಯಮಿತವಾಗಿರಲಿಲ್ಲ. ರಿದ್ಧಿ ಹಾಸ್ಟೆಲ್‌ನಿಂದ ಬಂದ ಸಮಯದಲ್ಲಿ ಮತ್ತು ನನಗೆ ಅನಾರೋಗ್ಯವಿದ್ದಾಗ ರಜೆ ತೆಗೆದುಕೊಳ್ಳುತ್ತೇನೆ” ಎಂದು ಪ್ರಿಯಾ ಹೇಳುತ್ತಾರೆ. ಇದಲ್ಲದೆ, ನಿರಂತರ ಹೊಟ್ಟೆ ನೋವಿನ ಕಾಯಿಲೆಯ ಕಾರಣ ಅವರು ಆಗಾಗ್ಗೆ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ.

ಲಾಕ್‌ಡೌನ್ ಪ್ರಾರಂಭವಾದ ಸ್ವಲ್ಪ ಸಮಯದ ನಂತರ, ವಿಕ್ರಮ್ ಕಾಮಾಟಿಪುರದ ತಮ್ಮ ಲೇನ್‌ನ ನಿರ್ಜನ ಮೂಲೆಯ ಬಳಿ ಗುತ್ತಿಗೆದಾರನು ತನ್ನನ್ನೂ ದಿನಗೂಲಿಗೆ ಕರೆಯಬಹುದೆಂಬ ನಿರೀಕ್ಷೆಯಿಂದ ನಿಲ್ಲಲು ಪ್ರಾರಂಭಿಸಿದನು. ಆ ಸಮಯದಲ್ಲಿ ಅವನು ಟೈಲ್ಸ್‌ ಹಾಕುವುದು, ಕಟ್ಟಡ ನಿರ್ಮಾಣ ಸ್ಥಳದಲ್ಲಿ ಅಟ್ಟಣಿಗೆ ನಿರ್ಮಿಸುವುದು ಹಾಘೂ ಟ್ರಕ್‌ಗಳಿಗೆ ಲೋಡಿಂಗ್‌ ಮಾಡುವ ಕೆಲಸಗಳನ್ನು ಮಾಡಿದನು. ಮತ್ತು ಇದರಿಂದ ಸಾಮಾನ್ಯವಾಗಿ 200 ರೂಪಾಯಿಗಳ ಕೂಲಿ ದೊರೆಯುತ್ತಿತ್ತು. ಅವನು ಈ ಸಮಯದಲ್ಲಿ ದುಡಿದ ಅತ್ಯಧಿಕ ಮೊತ್ತವೆಂದರೆ 900 ರೂಪಾಯಿಗಳು. ಆದರೆ ಈ ಉದ್ಯೋಗಗಳು ಒಂದು ಅಥವಾ ಎರಡು ದಿನಗಳವರೆಗೆ ಮಾತ್ರ ಇದ್ದವು.

ಅವನು ತನ್ನ ನೆರೆಹೊರೆಯ ಬೀದಿಗಳಲ್ಲಿ ಛತ್ರಿ ಮತ್ತು ಮಾಸ್ಕ್‌ಗಳನ್ನು ಮಾರಾಟ ಮಾಡಲು ಸಹ ಪ್ರಯತ್ನಿಸಿದನು. ಹತ್ತಿರದ ನಲ್‌ ಬಜಾರ್‌ನಿಂದ ಸಗಟು ದರದಲ್ಲಿ ವಸ್ತುಗಳನ್ನು ಖರೀದಿಸಿ ಮಾರುತ್ತಿದ್ದನನು. ಹಣದ ಕೊರತೆಯಾದಾಗ ಸ್ಥಳೀಯ ಲೇವಾದೇವಿಗಾರರು ಮತ್ತು ತನ್ನ ತಾಯಿಯಿಂದ ಪಡೆಯುತ್ತಿದ್ದನು. ಒಮ್ಮೆ ಅಂಗಡಿಯವನೊಬ್ಬ ಕಮಿಷನ್‌ ಆಧಾರದ ಮೇಲೆ ಇಯರ್‌ ಫೋನ್‌ ಮಾರುವಂತೆ ಹೇಳಿದ. "ಆದರೆ ನನಗೆ ಲಾಭ ಗಳಿಸಲು ಸಾಧ್ಯವಾಗಲಿಲ್ಲ" ಎಂದು ವಿಕ್ರಮ್ ಹೇಳುತ್ತಾನೆ.

ಈ ನಡುವೆ ವಿಕ್ರಮ್‌ ಟ್ಯಾಕ್ಸಿ ಡ್ರೈವರ್‌ಗಳಿಗೆ ಮತ್ತು ಬೀದಿಗಳಲ್ಲಿ ಕುಳಿತ ಇತರರಿಗೆ ಚಹಾವನ್ನು ಮಾರಾಟ ಮಾಡಲು ಸಹ ಪ್ರಯತ್ನಿಸಿದ. "ಯಾವುದೂ ಪ್ರಯೋಜನಕ್ಕೆ ಬಾರದಿದ್ದಾಗ ನನ್ನ ಗೆಳೆಯ ಈ ಉಪಾಯವನ್ನು ಹೇಳಿದ. ಅವನು ಚಹಾ ತಯಾರಿಸುತ್ತಿದ್ದ ಮತ್ತು ನಾನು ಮಿಲ್ಟನ್ ಥರ್ಮೋಸ್ ಬಾಟಲಿಯಲ್ಲಿ ಹಾಕೊಕೊಂಡು ನಾನು ಅದನ್ನು ಮಾರಲು ಹೋಗುತ್ತಿದ್ದೆ." ಒಂದು ಕಪ್‌ ಚಹಾಕ್ಕೆ 5 ರೂಪಾಯಿಯಂತೆ ಮಾರುತ್ತಿದ್ದೆ ಅದರಲ್ಲಿ 2 ರೂಪಾಯಿ ಅವನಿಗೆ ಕೊಡುತ್ತಿದ್ದೆ. ಇದರಿಂದ ದಿನಕ್ಕೆ 60ರಿಂದ 100 ರೂಪಾಯಿ ಸಂಪಾದನೆಯಾಗುತ್ತಿತ್ತು.

ಇದರೊಂದಿಗೆ ಸ್ಥಳೀಯ ಮದ್ಯದಂಗಡಿಯಿಂದ ಬಿಯರ್ ಬಾಟಲಿಗಳು ಮತ್ತು ಗುಟ್ಖಾ (ತಂಬಾಕು ಮಿಶ್ರಣ) ಪ್ಯಾಕೆಟ್‌ಗಳನ್ನು ಕಾಮಾಟಿಪುರ ನಿವಾಸಿಗಳು ಮತ್ತು ಸಂದರ್ಶಕರಿಗೆ ಮಾರಾಟ ಮಾಡುವ ಕೆಲಸವನ್ನೂ ಮಾಡಿದನು. ಲಾಕ್‌ಡೌನ್ ಸಮಯದಲ್ಲಿ ಅಂಗಡಿಗಳನ್ನು ಮುಚ್ಚಿದ್ದ ಸಮಯದಲ್ಲಿ ಇವುಗಳಿಗೆ ಬೇಡಿಕೆಯಿತ್ತು ಮತ್ತು ಯೋಗ್ಯವಾದ ಲಾಭವನ್ನು ಸಹ ಗಳಿಸಬಹುದಾಗಿತ್ತು. ಅನೇಕ ಹುಡುಗರು ಈ ರೀತಿ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದರು, ಇದರಲ್ಲಿ ಆದಾಯ ಸಾಧಾರಣವಾಗಿತ್ತು ಆದರೆ ತಾನು ಮಾಡುತ್ತಿರುವ ವ್ಯವಹಾರ ತನ್ನ ತಾಯಿಗೆ ತಿಳಿಯಬಹುದೆನ್ನುವ ಭಯವೂ ಅವನನ್ನು ಕಾಡುತ್ತಿತ್ತು.

ಕೊನೆಯದಾಗಿ, ವಿಕ್ರಮ್ ಘರ್‌ವಾಲಿಯ ಮನೆಕೆಲಸಗಾರನಾಗಿ ಕೆಲಸಕ್ಕೆ ಹೋದನು, ಕಟ್ಟಡದಲ್ಲಿನ ಮಹಿಳೆಯರಿಗೆ ದಿನಸಿ ವಸ್ತುಗಳನ್ನು ತಂದುಕೊಡುವುದು ಮತ್ತು ಅಲ್ಲಿ ಸ್ವಚ್ಛಗಳಿಸುವುದು ಇಂತಹ ಕೆಲಸಗಳನ್ನು ಮಾಡುತ್ತಿದ್ದನು. ಅವನಿಗೆ ಪ್ರತಿದಿನ ಈ ಕೆಲಸಕ್ಕಾಗಿ 300 ರೂಪಾಯಿ ಸಿಗುತ್ತಿತ್ತು. ಆದರೆ ಈ ಕೆಲಸವೂ ದಿನಂಪ್ರತಿ ಸಿಗುತ್ತಿರಲಿಲ್ಲ.

PHOTO • Courtesy: Vikram

ಲಾಕ್‌ ಡೌನ್‌ ಪ್ರಾರಂಭವಾದ ನಂತರ ವಿಕ್ರಮ್‌ ಚಹಾ ಮಾರುವುದು ಅಥವಾ ಕೊಡೆ, ಮಾಸ್ಕ್‌ ಮಾರುವಂತಹ ಬಹಳಷ್ಟು ಕೆಲಸಗಳನ್ನು ಮಾಡಿದನು

ಈ ಕೊವಿಡ್ ಸಮಯದಲ್ಲಿ ಮಕ್ಕಳು ಕೆಲಸಕ್ಕೆ ಸೇರಬೇಕಾದ ಅನಿವಾರ್ಯತೆಗೀಡಾಗಿದ್ದರಿಂದಾಗಿ ಬಾಲ ಕಾರ್ಮಿಕರ ಸಂಖ್ಯೆ ತೀವ್ರವಾಗಿ ಹೆಚ್ಚಾಗಿದೆ, ವಿಕ್ರಮ್ ಅಂತಹ ಮಕ್ಕಳಲ್ಲಿ ಒಬ್ಬ. ಜೂನ್ 2020ರಲ್ಲಿ ಕೋವಿಡ್ -19 ಮತ್ತು ಚೈಲ್ಡ್ ಲೇಬರ್ - ಎ ರೈಮ್ ಆಫ್ ಕ್ರೈಸಿಸ್, ಟೈಮ್ ಟು ಆಕ್ಟ್, ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ ಮತ್ತು ಯುನಿಸೆಫ್ ಸಿದ್ಧಪಡಿಸಿದ ಅಧ್ಯಯನವು, ಪೋಷಕರ ನಿರುದ್ಯೋಗದ ಪರಿಣಾಮವನ್ನು ಭರಿಸಲು ಮಕ್ಕಳು ದುಡಿಮೆಗಿಳಿಯುವ ದೇಶಗಳಲ್ಲಿ ಭಾರತವೂ ಒಂದಾಗಿತ್ತು. "ಕಾನೂನುಬದ್ಧ ಕನಿಷ್ಠ ವಯಸ್ಸಿನ ಮೊದಲು ಕೆಲಸ ಮಾಡಲು ಪ್ರಾರಂಭಿಸಿದರೆ, ಅತ್ಯಂತ ಶೋಷಕ ಪರಿಸ್ಥಿತಿಗಳಲ್ಲಿ, ಮಕ್ಕಳು ಅತ್ಯಂತ ಭೀಕರವಾದ ಕೆಲಸವನ್ನು ಒಳಗೊಂಡಂತೆ ಅತ್ಯಂತ ಅಪಾಯಕಾರಿ ಕೆಲಸಗಳನ್ನು ಮಾಡಬೇಕಾಗುತ್ತದೆ" ಎಂದು ಅಧ್ಯಯನವು ತಿಳಿಸಿದೆ.

ಲಾಕ್‌ಡೌನ್ ನಂತರ, ಪ್ರಿಯಾ ಕೂಡ ಮತ್ತೊಂದು ಉದ್ಯೋಗವನ್ನು ಹುಡುಕುತ್ತಿದ್ದರು - ಆಕೆಗೆ ಕಾಮಾಟಿಪುರದಲ್ಲಿ ಮನೆಗೆಲಸ 50 ರೂ ದಿನಗೂಲಿಯಂತೆ ದೊರಕಿತು. ಆದರೆ ಆ ಕೆಲಸ ಕೇವಲ ಒಂದು ತಿಂಗಳು ಮಾತ್ರ ದೊರೆಯಿತು.

ಇದಾದ ನಂತರವೇ ಆಗಸ್ಟ್ 7ರಂದು ವಿಕ್ರಮ್ ಜೊತೆ ಆಕೆ ಜಗಳವಾಡಿದರು. ವಿಕ್ರಮ್‌ ಘರ್‌ವಾಲಿಯ ಕೋಣೆಯಲ್ಲಿ ಮಲಗುವುದು ಪ್ರಿಯಾಗೆ ಇಷ್ಟವಿರಲಿಲ್ಲ. ಪಕ್ಕದಲ್ಲೇ ಅಪ್ರಾಪ್ತ ವಯಸ್ಸಿನ ಹುಡುಗಿಯೊಬ್ಬಳು ಲೈಂಗಿಕ ಕಿರುಕುಳಕ್ಕೊಳಗಾದಾಗಿನಿಂದ (ಓದಿ: ‘ಇಲ್ಲಿನ ಹುಡುಗಿಯರು ಏನಾಗುತ್ತಾರೆನ್ನುವುದು ಎಲ್ಲರಿಗೂ ತಿಳಿದಿದೆ’ ), ಅವರು ತೀವ್ರವಾಗಿ ಚಿಂತೆಗೀಡಾಗಿದ್ದರು, ರಿ‌ದ್ಧಿಯನ್ನು ಮತ್ತೆ ಹಾಸ್ಟೆಲ್‌ಗೆ ಕಳುಹಿಸುವ ಪ್ರಯತ್ನದಲ್ಲಿದ್ದರು.

ಅಂದು ಮಧ್ಯಾಹ್ನ ವಿಕ್ರಮ್ ಮನೆ ಬಿಡಲು ನಿರ್ಧರಿಸಿದ. ಅವನು ತನ್ನ ತಾಯಿಯೊಂದಿಗೆ ಜಗಳವಾಡಿದ ನಂತರ ಬಹಳ ಸಮಯದಿಂದ ಈ ಕುರಿತು ಪ್ರಯತ್ನಿಸುತ್ತಿದ್ದನು. ಆ ದಿನ ಅವನು ಹೇಳುವಂತೆ "ನಾನು ಆ ದಿನ ತುಂಬಾ ಕೋಪದಲ್ಲಿದ್ದೆ ಮತ್ತು ಹೊರಟು ಹೋಗಲು ನಿರ್ಧರಿಸಿದ್ದೆ." ಅಹಮದಾಬಾದ್‌ನಲ್ಲಿ ಉತ್ತಮ ಉದ್ಯೋಗಾವಕಾಶಗಳಿವೆ ಎಂದು ಸ್ನೇಹಿತನೊಬ್ಬ ಅವನ ಬಳಿ ಹೇಳಿದ್ದನು.

ಆಗಸ್ಟ್ 7ರಂದು ಸಂಜೆ 6 ಗಂಟೆಗೆ ಗುಜರಾತ್‌ಗೆ ತೆರಳುವಾಗ ಅವನ ಬಳಿ ಒಂದು ಸಣ್ಣ ಜಿಯೋ ಫೋನ್ ಮತ್ತು ಜೇಬಿನಲ್ಲಿ 100 ರೂಪಾಯಿಗಳಿದ್ದವು.

ಕೈಯ್ಲಲಿದ್ದ ಹಣದಲ್ಲಿ ಅರ್ಧದಷ್ಟನ್ನು ಐದು ಪ್ಯಾಕೆಟ್ ಗುಟ್ಖಾಗಳನ್ನು ಮತ್ತು ಹಾಜಿ ಅಲಿ ಬಳಿ ಒಂದು ಲೋಟ ಹಣ್ಣಿನ ರಸ ಮತ್ತು ಸ್ವಲ್ಪ ಆಹಾರವನ್ನು ಖರೀದಿಸಲು ಬಳಸಿದನು. ಅಲ್ಲಿಂದ ಅವನು ನಡೆಯಲು ಪ್ರಾರಂಭಿಸಿದನು. ದಾರಿ ಮಧ್ಯದಲ್ಲಿ ಲಿಫ್ಟ್‌ ಪಡೆಯಲು ಪ್ರಯತ್ನಿಸಿದನಾದರೂ ಯಾರೂ ಗಾಡಿಯನ್ನು ನಿಲ್ಲಿಸಲಿಲ್ಲ. ನಂತರ 30-40 ರೂಪಾಯಿಗಳನ್ನು ಬೆಸ್ಟ್‌ ಬಸ್ಸಿಗೆ ಬಳಸಿದನು. ಆಗಸ್ಟ್ 8ರಂದು ಬೆಳಗಿನ ಜಾವ 2 ಗಂಟೆಯ ಹೊತ್ತಿಗೆ, ದಣಿದ 15 ವರ್ಷದ ಬಾಲಕ ವಿರಾರ್ ಬಳಿ ಧಾಬಾ ತಲುಪಿ ಅಲ್ಲಿಯೇ ರಾತ್ರಿ ಕಳೆದನು. ಅವನು ಅಲ್ಲಿಗೆ ಸುಮಾರು 78 ಕಿಲೋಮೀಟರ್ ಪ್ರಯಾಣಿಸಿದ್ದನು.

ಆ ಧಾಬಾ ಮಾಲೀಕರು ಮನೆಯಿಂದ ಓಡಿಬಂದಿದ್ದೀಯಾ ಎಂದು ವಿಚಾರಿಸಿದ್ದಾರೆ. ವಿಕ್ರಮ್ ತಾನು ಅನಾಥನೆಂದು ಸುಳ್ಳು ಹೇಳಿ ಕೆಲಸಕ್ಕಾಗಿ ಅಹಮದಾಬಾದ್‌ಗೆ ಹೋಗುತ್ತಿರುವುದಾಗಿ ತಿಳಿಸಿದ್ದಾನೆ. "ಧಾಬಾವಾಲಾ ಭೈಯ್ಯಾ ನನಗೆ ಯಾರೂ ನನಗೆ ಕೆಲಸ ನೀಡುವುದಿಲ್ಲ ಹೀಗಾಗಿ ಮನೆಗೆ ಮರಳುವಂತೆ ಸಲಹೆ ನೀಡಿದರು, ಮತ್ತು ಕೊರೋನಾ ಸಮಯದಲ್ಲಿ ಅಹಮದಾಬಾದ್ ತಲುಪುವುದು ಕಷ್ಟಕರವಾಗಿತ್ತು." ಅವರು ವಿಕ್ರಮ್‌ಗೆ ಸ್ವಲ್ಪ ಚಹಾ ಮತ್ತು ಪೋಹಾ(ಅವಲಕ್ಕಿ) ಮತ್ತು 70 ರೂಪಾಯಿಗಳನ್ನು ನೀಡಿದರು. "ನಾನು ಮನೆಗೆ ಮರಳಲು ಯೋಚಿಸಿದೆ ಆದರೆ ಸ್ವಲ್ಪ ಗಳಿಕೆಯೊಂದಿಗೆ ಹಿಂತಿರುಗಲು ಬಯಸಿದ್ದೆ" ಎಂದು ವಿಕ್ರಮ್ ಹೇಳುತ್ತಾನೆ.

PHOTO • Aakanksha

'ನನ್ನ ಅನೇಕ ಸ್ನೇಹಿತರು [ಕಾಮಾಟಿಪುರದಲ್ಲಿ] ಶಾಲೆಯನ್ನು ತೊರೆದು ಕೆಲಸ ಮಾಡುತ್ತಿದ್ದಾರೆ' ಎಂದು ವಿಕ್ರಮ್ ಹೇಳುತ್ತಾನೆ, 'ದುಡಿಮೆ ಪ್ರಾರಂಭಿಸುವುದರಿಂದ ಹಣ ಉಳಿತಾಯ ಮಾಡಿ ವ್ಯವಹಾರ ಪ್ರಾರಂಭಿಸಬಹುದು ಎನ್ನುವುದು ಅವರ ಆಲೋಚನೆ'

ಅವನು ಮತ್ತಷ್ಟು ನಡೆದು ಪೆಟ್ರೋಲ್ ಪಂಪ್ ಬಳಿ ಕೆಲವು ಟ್ರಕ್‌ಗಳನ್ನು ನೋಡಿ ಅವರನ್ನು ಲಿಫ್ಟ್ ಕೇಳಿದನು, ಆದರೆ ಯಾರೂ ಅವನನ್ನು ಉಚಿತವಾಗಿ ಕರೆದುಕೊಂಡು ಹೋಗಲು ಒಪ್ಪಲಿಲ್ಲ. "ಕೆಲವು ಕುಟುಂಬಗಳು ಕುಳಿತಿದ್ದ ಬಸ್ಸುಗಳಿದ್ದವು, ಆದರೆ ನಾನು ಮುಂಬೈನಿಂದ ಬರುತ್ತಿದ್ದೇನೆ ಎಂದು ತಿಳಿದ ನಂತರ ಯಾರೂ ನನ್ನನ್ನು ಕರೆದುಕೊಳ್ಳಲು ಅನುಮತಿಸಲಿಲ್ಲ [ಅಲ್ಲಿ ಅನೇಕ ಕೋವಿಡ್ ಪ್ರಕರಣಗಳು ವರದಿಯಾಗುತ್ತಿದ್ದವು]." ಒಬ್ಬ ಟೆಂಪೊ ಡ್ರೈವರ್ ಒಪ್ಪುವವರೆಗೂ ವಿಕ್ರಮ್ ಅನೇಕರೊಂದಿಗೆ ಮನವಿ ಮಾಡಿದನು "ಅವರು ಒಬ್ಬರೇ ಇದ್ದರು, ಅವರು ನನಗೆ ಅನಾರೋಗ್ಯವಿದೆಯೇ ಎಂದು ಕೇಳಿದರು ಮತ್ತು ನಾನು ಇಲ್ಲ ಎಂದು ಹೇಳಿದ ನಂತರ ನನ್ನನ್ನು ಗಾಡಿಯಲ್ಲಿ ಹತ್ತಿಸಿಕೊಂಡರು." ಆ ಟೆಂಪೋ ಚಾಲಕ ಕೂಡ ಹದಿಹರೆಯದವರಿಗೆ ಕೆಲಸ ಸಿಗುವುದಿಲ್ಲ ಎಂದು ಎಚ್ಚರಿಸಿದ್ದರು. "ಅವರು ವಾಪಿಯ ಮೂಲಕ ಹೋಗುತ್ತಿದ್ದಿದ್ದರಿಂದ ನನ್ನನ್ನು ಅಲ್ಲಿಗೆ ಬಿಡಲು ಅವರು ಒಪ್ಪಿದರು."

ಆಗಸ್ಟ್ 9ರಂದು ಬೆಳಿಗ್ಗೆ 7 ಗಂಟೆ ಸುಮಾರಿಗೆ ಮುಂಬೈ ಸೆಂಟ್ರಲ್‌ನಿಂದ ಸುಮಾರು 185 ಕಿಲೋಮೀಟರ್ ದೂರದಲ್ಲಿರುವ ಗುಜರಾತ್‌ನ ವಲ್ಸಾದ್ ಜಿಲ್ಲೆಯ ವಾಪಿಯನ್ನು ತಲುಪಿದ ವಿಕ್ರಮ್‌ ಆ ಮಧ್ಯಾಹ್ನ, ತನ್ನ ತಾಯಿಗೆ ಬೇರೆಯವರ ಫೋನ್‌ನಿಂದ ಕರೆ ಮಾಡಿದನು. ಅವನ ಸ್ವಂತ ಫೋನ್‌ನ ಬ್ಯಾಟರಿ ಬರಿದಾಗಿತ್ತು ಮತ್ತು ಯಾವುದೇ ಕರೆ ಸಮಯವೂ ಉಳಿದಿರಲಿಲ್ಲ. ಅವನು ಪ್ರಿಯಾಗೆ ತಾನು ಚೆನ್ನಾಗಿದ್ದೇನೆ ಮತ್ತು ವಾಪಿಯಲ್ಲಿದ್ದೇನೆ ಎಂದು ಹೇಳಿ ಸಂಪರ್ಕ ಕಡಿತಗೊಳಿಸಿದ್ದನು.

ಈ ನಡುವೆ, ಮುಂಬೈಯಲ್ಲಿ ಪ್ರಿಯಾ ನಿಯಮಿತವಾಗಿ ನಾಗಪಾಡ ಪೊಲೀಸ್ ಠಾಣೆಗೆ ಭೇಟಿ ನೀಡುತ್ತಿದ್ದರು. "ಪೊಲೀಸರು ನನ್ನ ಅಸಡ್ಡೆಯೇ ಇದಕ್ಕೆಲ್ಲ ಕಾರಣ ಎಂದು ನನ್ನನ್ನು ದೂಷಿಸಿದರು, ನನ್ನ ಕೆಲಸದ ಬಗ್ಗೆಯೂ ವ್ಯಂಗ್ಯವಾಡಿದರು ಮತ್ತು ಅವನು ಸ್ವತಃ ಹೊರಟುಹೋಗಿದ್ದು ಶೀಘ್ರದಲ್ಲೇ ಹಿಂದಿರುಗುತ್ತಾನೆ ಎಂದು ಹೇಳಿದರು" ಎಂದು ಅವರು ನೆನಪಿಸಿಕೊಳ್ಳುತ್ತಾರೆ.

ವಿಕ್ರಮ್‌ನ ಸಂಕ್ಷಿಪ್ತ ಕರೆಯ ನಂತರ, ಅವರು ಉದ್ವೇಗದಿಂದ ಮತ್ತೆ ಕರೆ ಮಾಡಲು ಪ್ರಯತ್ನಿಸಿದರು. ಆದರೆ ಫೋನ್‌ನ ಮಾಲೀಕರು ಪ್ರತಿಕ್ರಿಯಿಸಿದರು. "ವಿಕ್ರಮ್ ಅವರೊಂದಿಗೆ ಇರಲಿಲ್ಲ, ಮತ್ತು ಅವನು ಎಲ್ಲಿದ್ದಾನೆಂದು ಅವರಿಗೆ ಗೊತ್ತಿರಲಿಲ್ಲ. ರಸ್ತೆ ಬದಿಯಲ್ಲಿದ್ದ ಚಹಾ ಅಂಗಡಿಯೊಂದರಲ್ಲಿ ಭೇಟಿಯಾದಾಗ ಅವರು ಅವನಿಗೆ ತನ್ನ ಫೋನ್ ಬಳಸಲು ನೀಡಿದ್ದರು."

ಆಗಸ್ಟ್ 9ರ ರಾತ್ರಿ ವಿಕ್ರಮ್ ವಾಪಿಯಲ್ಲಿಯೇ ಇದ್ದನು. “ನನಗಿಂತ ಹಿರಿಯ ಹುಡುಗನೊಬ್ಬ ಸಣ್ಣ ಹೋಟೆಲ್‌ನಲ್ಲಿ ಕಾವಲು ಕಾಯುತ್ತಿದ್ದ. ನಾನು ಕೆಲಸಕ್ಕಾಗಿ ಅಹಮದಾಬಾದ್‌ಗೆ ಹೋಗುತ್ತಿದ್ದೇನೆ ಮತ್ತು ಮಲಗಲು ಒಂದಿಷ್ಟು ಜಾಗ ಹುಡುಕುತ್ತಿರುವುದಾಗಿ ತಿಳಿಸಿದೆ. ಅವನು ಈ ಹೋಟೆಲ್‌ನಲ್ಲೇ ಇದ್ದು ಕೆಲಸ ಮಾಡುವಂತೆ ಹೇಳಿ ಮಾಲಿಕರೊಂದಿಗೆ ತಾನು ಮಾತಾಡುವುದಾಗಿ ತಿಳಿಸಿದ."

'I too ran away [from home] and now I am in this mud,' says Vikram's mother Priya, a sex worker. 'I want him to study'
PHOTO • Aakanksha

'ನಾನು ಕೂಡ [ಮನೆಯಿಂದ] ಓಡಿಹೋಗಿದ್ದೆ ಅದರಿಂದಾಗಿ ಈಗ ನಾನು ಈ ಕೆಸರಿನಲ್ಲಿದ್ದೇನೆ' ಎಂದು ಲೈಂಗಿಕ ಕಾರ್ಯಕರ್ತೆಯಾಗಿರುವ ವಿಕ್ರಮ್ ತಾಯಿ ಪ್ರಿಯಾ ಹೇಳುತ್ತಾರೆ. 'ಅವನು ಶಾಲೆ ಕಲಿಯಬೇಕೆಂದು ನಾನು ಬಯಸುತ್ತೇನೆ'

ತನ್ನ ತಾಯಿಗೆ ಮೊದಲ ಕರೆ ಮಾಡಿದ ನಾಲ್ಕು ದಿನಗಳ ನಂತರ, ಆಗಸ್ಟ್ 13ರಂದು, ವಿಕ್ರಮ್ ಮುಂಜಾನೆ 3: 00ಕ್ಕೆ ಮತ್ತೊಂದು ಕರೆ ಮಾಡಿದನು. ವಾಪಿಯಲ್ಲಿನ ಉಪಾಹಾರ ಗೃಹದಲ್ಲಿ ಕೆಲಸ ಸಿಕ್ಕಿದೆ, ಪಾತ್ರೆಗಳನ್ನು ತೊಳೆಯುವುದು ಮತ್ತು ಗ್ರಾಹಕರಿಂದ ಆಹಾರದ ಆರ್ಡರ್‌ ತೆಗೆದುಕೊಳ್ಳುವ ಕೆಲಸ ಮಾಡುತ್ತಿರುವುದಾಗಿ ಅವನು ಆಕೆಗೆ ಹೇಳಿದನು. ಬೆಳಿಗ್ಗೆ ನಾಗಪಾಡ ಪೊಲೀಸ್ ಠಾಣೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಲು ಪ್ರಿಯಾ ಅವಸರದಿಂದ ಹೋದರು, ಆದರೆ ಅಲ್ಲಿ ತನ್ನ ಮಗನನ್ನು ಕರೆದುಕೊಂಡು ಬರುವಂತೆ ಹೇಳಲಾಯಿತು.

ಅಂದು ಸಂಜೆ ವಿಕ್ರಮ್‌ನನ್ನು ಮರಳಿ ಕರೆತರಲು ಪ್ರಿಯಾ ಮತ್ತು ರಿದ್ಧಿ ಮುಂಬೈ ಸೆಂಟ್ರಲ್‌ನಿಂದ ವಾಪಿಯ ರೈಲು ಹತ್ತಿದರು. ಇದಕ್ಕಾಗಿ ಪ್ರಿಯಾ ಘರ್‌ವಾಲಿ ಮತ್ತು ಸ್ಥಳೀಯ ಸಾಲಗಾರರಿಂದ ರೂ.2,000  ಸಾಲ ಪಡೆದರು. ರೈಲು ಟಿಕೆಟ್‌ನ ಬೆಲೆ ಒಬ್ಬರಿಗೆ 400 ರೂಪಾಯಿಗಳು.

ಪ್ರಿಯಾ ತನ್ನ ಮಗನನ್ನು ಮರಳಿ ಕರೆತರಲು ನಿರ್ಧರಿಸಿದ್ದರು. ಅವನು ಕೂಡ ತನ್ನಂತೆಯೇ ಗುರಿಯಿಲ್ಲದ ಜೀವನವನ್ನು ಹೊಂದುವುದು ಅವರಿಗೆ ಇಷ್ಟವಿಲ್ಲವೆಂದು ಅವರು ಹೇಳುತ್ತಾರೆ. “ನಾನು ಕೂಡ ಓಡಿಹೋದೆ ಮತ್ತು ಈಗ ನಾನು ಈ ಕೆಸರಿನಲ್ಲಿದ್ದೇನೆ. ಅವನು ವಿದ್ಯೆ ಕಲಿಯಬೇಕೆಂದು ನಾನು ಬಯಸುತ್ತೇನೆ” ಎಂದು ಪ್ರಿಯಾ ಹೇಳುತ್ತಾರೆ, ಅದೇ ವಯಸ್ಸಿನಲ್ಲಿ ವಿಕ್ರಮ್ ಈಗ ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿರುವ ತನ್ನ ಮನೆಯಿಂದ ಓಡಿಹೋಗಿದ್ದನು.

ಅವರ ತಂದೆ ಕಾರ್ಖಾನೆಯ ಕೆಲಸಗಾರ, ಮದ್ಯವ್ಯಸನಿಯಾಗಿದ್ದ. ಅವನು ಆಕೆಯನ್ನು ಪ್ರೀತಿಸುತ್ತಿರಲಿಲ್ಲ (ಆಕೆಯ ತಾಯಿ ಎರಡು ವರ್ಷದವಳಿದ್ದಾಗ ತೀರಿಕೊಂಡರು), ಪ್ರಿಯಾರನ್ನು ನೋಡಿಕೊಳ್ಳುತ್ತಿದ್ದ ಸಂಬಂಧಿಕರು ಅವರನ್ನು ಹೊಡೆಯುತ್ತಿದ್ದರು. ಅವರು ಪ್ರಿಯಾ 12 ವರ್ಷದವರಿದ್ದಾಗ ಅವರ ಸಂಬಂಧಿಕರೊಂದಿಗೆ ಮದುವೆ ಮಾಡಿಸಲು ಪ್ರಯತ್ನಿಸಿದರು, ಮತ್ತು ಅವನು ಪ್ರಿಯಾರನ್ನು ಲೈಂಗಿಕವಾಗಿ ಶೋಷಿಸಲು ಪ್ರಾರಂಭಿಸಿದ. ಪ್ರಿಯಾ ಅವರೆಲ್ಲರಿಂದ ತಪ್ಪಿಸಿಕೊಳ್ಳಲು ಓಡಿಹೋದರು. "ಮುಂಬೈಗೆ ಹೋದರೆ ಕೆಲಸ ಸಿಗುತ್ತದೆ ಎಂದು ಯಾರೋ ಹೇಳುತ್ತಿದ್ದಿದ್ದನ್ನು ಕೇಳಿದ್ದೆ" ಎಂದು ಅವರು ಹೇಳಿದರು.

ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಸ್‌ನಲ್ಲಿ ರೈಲು ಇಳಿದ ನಂತರ ಪ್ರಿಯಾ ಮದನ್‌ಪುರದಲ್ಲಿ ಮನೆಕೆಲಸಕ್ಕೆ ತಿಂಗಳಿಗೆ 400 ರೂಪಾಯಿಗಳ ಸಂಬಳಕ್ಕೆ ಸೇರಿಕೊಂಡರು. ಮತ್ತು ಅದೇ ಕುಟುಂಬದೊಂದಿಗೆ ಉಳಿದುಕೊಂಡರು. ಕಾಲಾನಂತರದಲ್ಲಿ, ಅವರು ಕಿರಾಣಿ ಅಂಗಡಿ ಕೆಲಸಗಾರನೊಬ್ಬನೊಂದಿಗೆ ದಕ್ಷಿಣ ಮುಂಬೈನ ರೇ ರಸ್ತೆಯಲ್ಲಿರುವ ಬಾಡಿಗೆ ಕೋಣೆಯಲ್ಲಿ ಕೆಲವು ತಿಂಗಳು ವಾಸಿಸುತ್ತಿದ್ದರು, ನಂತರ ಅವನು ಕಣ್ಮರೆಯಾದ ಎಂದು ಅವರು ಹೇಳುತ್ತಾರೆ. ಇದಾದ ಮೇಲೆ ಅವರು ಬೀದಿಗಳಲ್ಲಿ ವಾಸಿಸಲು ಪ್ರಾರಂಭಿಸಿದರು. ಇದೇ ಸಮಯದಲ್ಲಿ ತಾನು ಗರ್ಭಿಣಿಯಾಗಿರುವುದು ಆಕೆಯ ಗಮನಕ್ಕೆ ಬಂದಿತು. "ನಾನು ಭಿಕ್ಷೆ ಬೇಡಿ ಬದುಕುಳಿದಿದ್ದೆ." ವಿಕ್ರಮ್ ಜನಿಸಿದ ನಂತರವೂ (2005ರಲ್ಲಿ ಜೆಜೆ ಆಸ್ಪತ್ರೆಯಲ್ಲಿ) ಅವರು ಫುಟ್‌ಪಾತ್‌ನಲ್ಲಿಯೇ ಇದ್ದರು. “ಒಂದು ರಾತ್ರಿ, ಒಬ್ಬ ದಂಧೇವಾಲಿ ನನಗೆ ಆಹಾರವನ್ನು ನೀಡಿದಳು ಆ ಮೂಲಕ ಅವಳೊಂದಿಗೆ ಪರಿಚಯ ಬೆಳೆಯಿತು. ಆಕೆಯು ನನಗೆ ಸಣ್ಣ ಮಗುವನ್ನು ಸಾಕುವ ಜವಬ್ದಾರಿ ಇರುವುದರಿಂದಾಗಿ ನಾನು ಕೂಡ ದಂಧೆಗೆ ಇಳಿಯಬೇಕೆಂದು ಸಲಹೆ ನೀಡಿದಳು." ಸಾಕಷ್ಟು ಹಿಂಜರಿಕೆಯೊಂದಿಗೆ ಪ್ರಿಯಾ ಒಪ್ಪಿಕೊಂಡರು.

ಆ ಸಮಯದಲ್ಲಿ ಕೆಲವು ಕರ್ನಾಟಕದ ಬಿಜಾಪುರ ಮೂಲದ ಕಾಮಾಟಿಪುರದ ಮಹಿಳೆಯರೊಂದಿಗೆ ಪ್ರಿಯಾ ಕೂಡಾ ಬಿಜಾಪುರಕ್ಕೆ ಹೋಗುತ್ತಿದ್ದರು. ಅಂತಹದೇ ಒಂದು ಪ್ರಯಾಣದಲ್ಲಿ ಆ ಮಹಿಳೆಯರು ಪ್ರಿಯಾರನ್ನು ಪುರುಷನೊಬ್ಬನಿಗೆ ಪರಿಚಯಿಸಿದರು. “ಅವರು ಆ ವ್ಯಕ್ತಿಯು ನನ್ನನ್ನು ಮದುವೆಯಾಗಿ ನನಗೂ ನನ್ನ ಮಗನಿಗೂ ಒಳ್ಳೆಯ ಬದುಕನ್ನು ನೀಡುವುದಾಗಿ ಹೇಳಿದ್ದರು.” ನಂತರ ಅವರಿಬ್ಬರೂ ಖಾಸಗಿಯಾಗಿ ಮದುವೆಯಾದರು. 6-7 ತಿಂಗಳು ಆತನೊಂದಿಗೆ ಜೀವಿಸಿದ್ದರು. ನಂತರ ಆತನ ಕುಟುಂಬವು ಆಕೆಯನ್ನು ತೆರಳುವಂತೆ ಹೇಳಿತು. “ಆ ಸಮಯದಲ್ಲಿ ರಿದ್ಧಿ ನನ್ನ ಹೊಟ್ಟೆಯಲ್ಲಿದ್ದಳು” ಎನ್ನುತ್ತಾರೆ ಪ್ರಿಯಾ. ಆ ವ್ಯಕ್ತಿ ತನ್ನ ಹೆಸರನ್ನು ಮರೆಮಾಚಿದ್ದ ಮತ್ತು ಅವನಿಗೆ ಮದುವೆಯಾಗಿತ್ತು ಹಾಗೂ ಆ ಮಹಿಳೆಯರು ಪ್ರಿಯಾರನ್ನು ಅವನಿಗೆ ʼಮಾರಿದ್ದರುʼ ಎನ್ನುವುದು ಆಕೆಗೆ ನಂತರ ತಿಳಿಯಿತು.

2011ರಲ್ಲಿ ರಿದ್ಧಿ ಜನಿಸಿದ ನಂತರ ಪ್ರಿಯಾ ವಿಕ್ರಮ್‌ನನ್ನು ಅಮರಾವತಿಯಲ್ಲಿರುವ ಸಂಬಂಧಿಕರ ಮನೆಗೆ ಕಳುಹಿಸಿದರು. "ಅವನು ಬೆಳೆಯುತ್ತಿದ್ದನು ಮತ್ತು ಈ ಪ್ರದೇಶದಲ್ಲಿನ ಬೆಳವಣಿಗೆಗಳನ್ನು ನೋಡುತ್ತಿದ್ದನು ..." ಆದರೆ ಅಲ್ಲಿ ಅಶಿಸ್ತಿನ ಕಾರಣಕ್ಕಾಗಿ ಹೊಡೆಯುತ್ತಾರೆನ್ನುವ ಕಾರಣಕ್ಕಾಗಿ ಹುಡುಗನು ಅಲ್ಲಿಂದಲೂ ಓಡಿಹೋದನು, "ನಾವು ಆ ಸಮಯದಲ್ಲಿ ಕಾಣೆಯಾದ ಬಗ್ಗೆ ದೂರು ದಾಖಲಿಸಿದ್ದೆವು. ಎರಡು ದಿನಗಳ ನಂತರ ಅವನು ಹಿಂದಿರುಗಿದನು.” ವಿಕ್ರಮ್ ರೈಲು ಹತ್ತಿ ದಾದರ್ ನಿಲ್ದಾಣವನ್ನು ತಲುಪಿದ್ದನು ಮತ್ತು ಅಲ್ಲಿ ಖಾಲಿ ರೈಲು ಕಂಪಾರ್ಟ್‌ಮೆಂಟ್‌ಗಳಲ್ಲಿ ಉಳಿದು ಭಿಕ್ಷುಕನೆಂದು ಭಾವಿಸಿ ಇತರರು ಕೊಡುತ್ತಿದ್ದ ಆಹಾರವನ್ನು ತಿನ್ನುತ್ತಿದ್ದನು.

Vikram found it hard to make friends at school: 'They treat me badly and on purpose bring up the topic [of my mother’s profession]'
PHOTO • Aakanksha

ಶಾಲೆಯಲ್ಲಿ ಸ್ನೇಹಿತರನ್ನು ಮಮಾಡಿಕೊಳ್ಳುವುದು ವಿಕ್ರಮ್‌ಗೆ ಕಷ್ಟವಾಯಿತು: 'ಅವರು ನನ್ನನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಾರೆ ಮತ್ತು ಉದ್ದೇಶಪೂರ್ವಕವಾಗಿ [ನನ್ನ ತಾಯಿಯ ವೃತ್ತಿಯ] ವಿಷಯವನ್ನು ತರುತ್ತಾರೆ'

ಆಗ ಅವನಿಗೆ 8 ಅಥವಾ 9 ವರ್ಷ ವಯಸ್ಸಾಗಿತ್ತು ಮತ್ತು ಸೆಂಟ್ರಲ್ ಮುಂಬೈನ ಡೊಂಗ್ರಿಯಲ್ಲಿರುವ ಬಾಲಾಪರಾಧಿ ಕೇಂದ್ರದಲ್ಲಿ ‘ಅಲೆಮಾರಿ’ತನದಿಂದಾಗಿ ಒಂದು ವಾರ ಬಂಧನಕ್ಕೊಳಗಾಗಿದ್ದನು. ಅದರ ನಂತರ, ಪ್ರಿಯಾ ಅವನನ್ನು ಅಂಧೇರಿಯಲ್ಲಿ ದತ್ತಿ ಸಂಸ್ಥೆಯೊಂದು ನಡೆಸುತ್ತಿರುವ ಹಾಸ್ಟೆಲ್ ಹಾಗೂ ಶಾಲೆಗೆ ಕಳುಹಿಸಿದರು, ಅಲ್ಲಿ ಅವನು 6ನೇ ತರಗತಿವರೆಗೆ ಶಿಕ್ಷಣ ಮುಗಿಸಿದನು.

“ವಿಕ್ರಮ್ ಯಾವಾಗಲೂ ತೊಂದರೆಯಲ್ಲಿರುತ್ತಾನೆ ಹೀಗಾಗಿ ನಾನು ಅವನ ಕುರಿತು ಹೆಚ್ಚು ಜಾಗರೂಕಳಾಗಿರಬೇಕಾಗುತ್ತದೆ”ಎಂದು ಪ್ರಿಯಾ ಹೇಳುತ್ತಾರೆ. ಅವನು ಅಂಧೇರಿಯಲ್ಲಿರುವ ಹಾಸ್ಟೆಲ್‌ನಲ್ಲಿ ಉಳಿಯಬೇಕೆಂದು ಅವರು ಬಯಸಿದ್ದರು (ಅಲ್ಲಿ ಅವನನ್ನು ಹಲವು ಬಾರಿ ಕೌನ್ಸೆಲ್ಲರ್ ಬಳಿಗೆ ಕರೆದೊಯ್ಯಲಾಗಿತ್ತು), ಆದರೆ ಅಲ್ಲಿನ ಒಬ್ಬ ಕೇರ್‌ ಟೇಕರ್‌ಗೆ ಹೊಡೆದ ನಂತರ ಅವನು ಅಲ್ಲಿಂದ ಓಡಿಹೋದನು. 2018ರಲ್ಲಿ, ಪ್ರಿಯಾ ಅವನನ್ನು 7ನೇ ತರಗತಿಗೆ ಬೈಕುಲ್ಲಾದ ಪುರಸಭೆಯ ಶಾಲೆಗೆ ಸೇರಿಸಿದರು ಮತ್ತು ಅವನು ಮತ್ತೆ ಕಾಮಾಟಿಪುರಕ್ಕೆ ಮರಳಿದನು.

ವಿಕ್ರಮ್‌ನನ್ನು ಅಶಿಸ್ತು ಮತ್ತು ಇತರ ಹುಡುಗರೊಂದಿಗೆ ಜಗಳವಾಡುತ್ತಾನೆನ್ನುವ ಕಾರಣಕ್ಕೆ ಬೈಕುಲ್ಲಾ ಶಾಲೆಯಿಂದ ಅಮಾನತುಗೊಳಿಸಲಾಗಿತ್ತು. “ವಿದ್ಯಾರ್ಥಿಗಳು ಮತ್ತು ಸುತ್ತಮುತ್ತಲಿನ ಜನರು ನನ್ನ ಕೆಲಸದ ವಿಷಯದಲ್ಲಿ ಕೀಟಲೆ ಮಾಡಿದರೆ ಅವನು ಅದನ್ನು ಇಷ್ಟಪಡುವುದಿಲ್ಲ. ಅವನಿಗೆ ಬೇಗನೆ ಕೋಪ ಬರುತ್ತದೆ ” ಎಂದು ಪ್ರಿಯಾ ಹೇಳುತ್ತಾರೆ. ಅವನು ಸಾಮಾನ್ಯವಾಗಿ ತನ್ನ ಕುಟುಂಬದ ಬಗ್ಗೆ ಯಾರಿಗೂ ಹೇಳುವುದಿಲ್ಲ ಮತ್ತು ಶಾಲೆಯಲ್ಲಿ ಸ್ನೇಹಿತರನ್ನು ಹೊಂದುವುದು ಕಷ್ಟವಾಗುತ್ತದೆ. "ಅವರು ನನ್ನನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಾರೆ ಮತ್ತು ಉದ್ದೇಶಪೂರ್ವಕವಾಗಿ [ನನ್ನ ತಾಯಿಯ ವೃತ್ತಿಯ] ವಿಷಯವನ್ನು ತರುತ್ತಾರೆ" ಎಂದು ವಿಕ್ರಮ್ ಹೇಳುತ್ತಾನೆ.

ಅವನು ಶೇಕಡಾ 90ರಷ್ಟು ಮಾರ್ಕ್‌ಗಳನ್ನು ತೆಗೆಯಬಲ್ಲ ಬುದ್ಧಿವಂತ ವಿದ್ಯಾರ್ಥಿಯಾಗಿದ್ದರೂ ಅವನ 7ನೇ ತರಗತಿಯ ಅಂಕದಪಟ್ಟಿ ಅವನು ಕೆಲವು ತಿಂಗಳುಗಳಲ್ಲಿ ಕೇವಲ ಮೂರು ದಿನ ಶಾಲೆಗೆ ಹಾಜರಾಗಿದ್ದನ್ನು ತೋರಿಸುತ್ತದೆ. ತಾನು ಚೆನ್ನಾಗಿ ಓದಬಲ್ಲೆ ಮತ್ತು ತಾನು ಮುಂದೆ ಕಲಿಯಲು ಬಯಸುವುದಾಗಿ ಅವನು ಹೇಳುತ್ತಾನೆ. ನವೆಂಬರ್ 2020ರ ಆರಂಭದಲ್ಲಿ, ಅವನಿಗೆ ತನ್ನ 8ನೇ ತರಗತಿಯ ಮಾರ್ಕ್‌ಶೀಟ್ (2019-20 ಶೈಕ್ಷಣಿಕ ವರ್ಷಕ್ಕೆ) ದೊರಕಿತು ಮತ್ತು ಏಳು ವಿಷಯಗಳಲ್ಲಿ ಎ ಗ್ರೇಡ್ ಮತ್ತು ಉಳಿದ ಎರಡರಲ್ಲಿ ಬಿ ಶ್ರೇಣಿ ಪಡೆದಿದ್ದಾನೆ.

“ನನ್ನ ಅನೇಕ ಸ್ನೇಹಿತರು [ಕಾಮಾಟಿಪುರದಲ್ಲಿ] ಶಾಲೆ ಬಿಟ್ಟು ಕೆಲಸ ಮಾಡುತ್ತಿದ್ದಾರೆ. ಕೆಲವರಿಗೆ ಓದಲು ಆಸಕ್ತಿ ಇಲ್ಲ,  ಕೆಲಸ ಮಾಡಿ ಸಂಪಾದಿಸಿ ಹಣ ಉಳಿಸಿ ಅದರಿಂದ ಏನಾದರೂ ವ್ಯವಹಾರ ಮಾಡುವುದು ಉತ್ತಮ ಎನ್ನುವುದು ಅವರ ಅಭಿಪ್ರಾಯ”ಎಂದು ವಿಕ್ರಮ್ ಹೇಳುತ್ತಾನೆ. (ಕೋಲ್ಕತ್ತಾದ ರೆಡ್-ಲೈಟ್ ಪ್ರದೇಶಗಳಲ್ಲಿ ವಾಸಿಸುವ ಮಕ್ಕಳ ಕುರಿತ 2010ರ ಅಧ್ಯಯನವು ಸುಮಾರು 40 ಪ್ರತಿಶತದಷ್ಟು ವಿದ್ಯಾರ್ಥಿಗಳ ಡ್ರಾಪ್-ಔಟ್ ದರವನ್ನು ತೋರಿಸುಸುತ್ತದೆ ಮತ್ತು "ಕಡಿಮೆ ಶಾಲಾ ಹಾಜರಾತಿಯು ಕೆಂಪು ದೀಪದ ಪ್ರದೇಶದಲ್ಲಿ ವಾಸಿಸುವ ಮಕ್ಕಳ ಸಾಮಾನ್ಯ ಸಮಸ್ಯೆಗಳಲ್ಲಿ ಒಂದಾಗಿದೆ ಎಂಬ ದುರದೃಷ್ಟಕರ ವಾಸ್ತವವನ್ನು ಇದು ತೋರಿಸುತ್ತದೆ")

ನಾವು ಮಾತನಾಡುವಾಗ ವಿಕ್ರಮ್ ಗುಟ್ಖಾ ಪ್ಯಾಕೆಟ್ ತೆರೆಯುತ್ತಾ "ತಾಯಿಗೆ ಹೇಳಬೇಡಿ" ಎಂದು ಹೇಳಿದ. ಈ ಮೊದಲು ಅವನು ಸಾಂದರ್ಭಿಕವಾಗಿ ಧೂಮಪಾನ ಮತ್ತು ಮದ್ಯಪಾನ ಮಾಡುತ್ತಿದ್ದನು, ಅದು ಕಹಿಯಾಗಿತ್ತು ಹೀಗಾಗಿ ನಿಲ್ಲಿಸಿದೆ ಆದರೆ, ಅವನು ಹೇಳುತ್ತಾನೆ, “ನನಗೆ ಗುಟ್ಖಾ ಅಭ್ಯಾಸವನ್ನು ಅಲುಗಾಡಿಸಲು ಸಾಧ್ಯವಾಗಲಿಲ್ಲ. ನಾನು ಅದರ ರುಚಿ ನೋಡಲು  ಪ್ರಯತ್ನಿಸಿದೆ ಮತ್ತು ಅದು ಯಾವ ಕ್ಷಣದಿಂದ ಚಟವಾಗಿ ಬದಲಾಯಿತು ತಿಳಿಯಲಿಲ್ಲ.” ಕೆಲವೊಮ್ಮೆ, ಪ್ರಿಯಾ ಅದನ್ನು ಅಗಿಯುವುದನ್ನು ಕಂಡು ಅವನಿಗೆ ಹೊಡೆದಿದ್ದಾರೆ.

“ಇಲ್ಲಿನ ಮಕ್ಕಳು ಎಲ್ಲಾ ಕೆಟ್ಟ ಅಭ್ಯಾಸಗಳನ್ನು ಬಹಳ ಬೇಗ ಕಲಿತುಬಿಡುತ್ತಾರೆ, ಅದಕ್ಕಾಗಿಯೇ ನಾನು ಅವರನ್ನು ಹಾಸ್ಟೆಲ್‌ನಲ್ಲಿ ಇರಿಸಿ ಓದಿಸಲು ಬಯಸುತ್ತೇನೆ. ರಿದ್ಧಿ ಕೂಡ ಲಿಪ್ಸ್ಟಿಕ್ ಹಚ್ಚಿಕೊಳ್ಳಲು ಪ್ರಯತ್ನಿಸುವ ಮೂಲಕ ಅಥವಾ ಅವರ ನಡಿಗೆಯನ್ನು ಅನುಕರಿಸುವ ಮೂಲಕ ಇಲ್ಲಿನ ಮಹಿಳೆಯರನ್ನು ಅನುಕರಿಸುತ್ತಾಳೆ” ಎಂದು ಪ್ರಿಯಾ ಹೇಳುತ್ತಾರೆ. "ಹೊಡೆಯುವುದು, ಬಡಿದಾಡುವುದನ್ನು ನೀವು ಪ್ರತಿದಿನ ಇಲ್ಲಿ ನೋಡಬಹುದು"

The teenager's immediate world: the streets of the city, and the narrow passageway in the brothel building where he sleeps. In future, Vikram (left, with a friend) hopes to help sex workers who want to leave Kamathipura
PHOTO • Aakanksha
The teenager's immediate world: the streets of the city, and the narrow passageway in the brothel building where he sleeps. In future, Vikram (left, with a friend) hopes to help sex workers who want to leave Kamathipura
PHOTO • Aakanksha

ಹದಿಹರೆಯದವರ ತಕ್ಷಣದ ಜಗತ್ತು: ನಗರದ ಬೀದಿಗಳು ಮತ್ತು ಅವನು ಮಲಗುವ ವೇಶ್ಯಾಗೃಹದ ಕಟ್ಟಡದಲ್ಲಿನ ಕಿರಿದಾದ ಹಾದಿ. ಮುಂದೆ, ಕಾಮಾಟಿಪುರವನ್ನು ಬಿಡಲು ಬಯಸುವ ಲೈಂಗಿಕ ಕಾರ್ಯಕರ್ತೆಯರಿಗೆ ಸಹಾಯ ಮಾಡುವ ಆಶಯವನ್ನು ವಿಕ್ರಮ್ (ಎಡ, ಸ್ನೇಹಿತನೊಂದಿಗೆ) ಹೊಂದಿದ್ದಾನೆ

ಲಾಕ್‌ಡೌನ್ ಆಗುವ ಮೊದಲು, ವಿಕ್ರಮ್ ಮಧ್ಯಾಹ್ನ 1ರಿಂದ 6ರವರೆಗೆ ಶಾಲೆಯಲ್ಲಿರುತ್ತಿದ್ದನು, ಮತ್ತು ಸಂಜೆ 7 ಗಂಟೆಯ ಹೊತ್ತಿಗೆ, ಅಲ್ಲಿನ ಎನ್‌ಜಿಒಗಳು ಮಕ್ಕಳ ತಾಯಂದಿರು ಕೆಲಸದಲ್ಲಿರುವ ಸಮಯದಲ್ಲಿ ನಡೆಸುವ ರಾತ್ರಿ ತರಗತಿಗಳಿಗೆ ಹಾಜರಾಗುತ್ತಿದ್ದನು. ನಂತರ ಅವನು ಮನೆಗೆ ಹಿಂದಿರುಗಿ ಅವನ ತಾಯಿ ಗ್ರಾಹಕರನ್ನು ಭೇಟಿಯಾಗುವ ಕೋಣೆಯ ಪಕ್ಕದ ಹಾದಿಯಲ್ಲಿ ಮಲಗುತ್ತಾನೆ - ಅಥವಾ ಕೆಲವೊಮ್ಮೆ ರಾತ್ರಿ ಆಶ್ರಯದಲ್ಲಿರುತ್ತಾನೆ.

ಲಾಕ್‌ಡೌನ್‌ ನಂತರ ಅವನ ತಂಗಿಯೂ ಮನೆಗೆ ಬರುವುದರೊಂದಿಗೆ ಮನೆಯಲ್ಲಿ ಜಾಗದ ಸಮಸ್ಯೆ ಇನ್ನಷ್ಟು ಹೆಚ್ಚಾಯಿತು. ಅವನು ತನ್ನ ಮನೆಯನ್ನು "ರೇಲ್‌ ಕಾ ಡಬ್ಬಾ" ಎಂದು ಕರೆಯುತ್ತಾನೆ. ಈ ಕಾರಣದಿಂದಾಗಿ ಅವನು ರಾತ್ರಿ ಹೊತ್ತು ಬೀದಿಗಳಲ್ಲಿ ಅಲೆದಾಡುವುದು, ಅಥವಾ ಕೆಲಸ ಸಿಕ್ಕಲ್ಲೇ ಉಳಿಗುಕೊಳ್ಳುವುದು ಮಾಡುತ್ತಿದ್ದನು. 10x10 ಅಳತೆಯಿರುವ ಕೋಣೆಯನ್ನು 4x6ರ ಮೂರು ಆಯತಾಕಾರದ ವಿಭಾಗಗಳನ್ನಾಗಿ ಮಾಡಲಾಗಿದೆ. ಪ್ರತಿ ವಿಭಾಗದಲ್ಲೂ ಒಬ್ಬೊಬ್ಬರು ಬಾಡಿಗೆಗಿರುತ್ತಾರೆ. ಕೆಲವು ಲೈಂಗಿಕ ಕಾರ್ಯಕರ್ತೆಯರು ಒಬ್ಬರೇ ಇನ್ನೂ ಕೆಲವರು ಕುಟುಂಬದೊಂದಿಗೂ ಇರುತ್ತಾರೆ. ಸಾಮಾನ್ಯವಾಗಿ ಆ ಕೊಠಡಿಗಳೇ ಮಹಿಳೆಯರ ಕೆಲಸದ ಸ್ಥಳವೂ ಆಗಿರುತ್ತದೆ.

ಆಗಸ್ಟ್ 14 ರಂದು ಪ್ರಿಯಾ ಮತ್ತು ಅವನ ಸಹೋದರಿಯೊಂದಿಗೆ ರೈಲಿನಲ್ಲಿ ವಾಪಿಯಿಂದ ಹಿಂತಿರುಗಿದ ನಂತರ, ವಿಕ್ರಮ್ ಮರುದಿನ ಕೆಲಸ ಹುಡುಕುತ್ತಾ ನೆರೆಯಲ್ಲಿದ್ದ ನಾಕಾದಲ್ಲಿದ್ದನು. ಅಂದಿನಿಂದ, ಅವನು ತರಕಾರಿ ಮಾರಾಟ, ನಿರ್ಮಾಣ ಸ್ಥಳಗಳಲ್ಲಿ ಕೆಲಸ, ಚೀಲಗಳನ್ನು ಹೊರುವುದು ಮೊದಲಾದ ಕೆಲಸಗಳನ್ನು ಮಾಡಿದ್ದಾನೆ.

ಅವನ ತಾಯಿ ಶಾಲೆ ತೆರೆಯುವುದನ್ನೇ ಕಾಯುತ್ತಿದ್ದಾರೆ - ಆನ್‌ಲೈನ್ ತರಗತಿ ಯಾವಾಗ ಪ್ರಾರಂಭವಾಯಿತೆನ್ನುವುದು ಆಕೆಗೆ ತಿಳಿದಿಲ್ಲ. ಅವನ ಬಳಿ ಸ್ಮಾರ್ಟ್‌ಫೋನ್ ಇಲ್ಲ ಮತ್ತು ಕೆಲಸದಲ್ಲಿ ನಿರತನಾಗಿದ್ದಾನೆ, ಮತ್ತು ಆನ್‌ಲೈನ್ ತರಗತಿಗಳನ್ನು ತೆಗೆದುಕೊಳ್ಳಲು ಅವರ ಕುಟುಂಬಕ್ಕೆ ಇಂಟರ್ನೆಟ್ ಸೌಲಭ್ಯ ಪಡೆಯಲು ಹಣ ಬೇಕು. ಇದಲ್ಲದೆ, ಅವನು ದೀರ್ಘಕಾಲ ಶಾಲೆಗೆ ಹೋಗದ ಕಾರಣ, ಹಾಜರಿ ಪುಸ್ತಕದಿಂದ ಅವನ ಹೆಸರನ್ನು ಸಹ ತೆಗೆದು ಹಾಕಲಾಗಿದೆಯೆಂದು ಪ್ರಿಯಾ ಹೇಳುತ್ತಾರೆ.

ಅವನು ಕೆಲಸ ಮುಂದುವರಿಸಿದರೆ ಓದು ನಿಲ್ಲಿಸಬಹುದೆಂಬ ಭಯದಿಂದ ವಿಕ್ರಮ್‌ನನ್ನು ಹಾಸ್ಟೆಲ್ ಶಾಲೆಗೆ ಕಳುಹಿಸಲು ಸಹಾಯಕ್ಕಾಗಿ ಅವರು ಡೊಂಗ್ರಿಯಲ್ಲಿರುವ ಮಕ್ಕಳ ಕಲ್ಯಾಣ ಸಮಿತಿಯನ್ನು ಸಂಪರ್ಕಿಸಿದ್ದಾರೆ. ಅಪ್ಲಿಕೇಶನ್ ಪ್ರಕ್ರಿಯೆಯಲ್ಲಿದೆ. ಅದು ಬಂದರೂ ಸಹ, ಅವನು ಒಂದು ಶೈಕ್ಷಣಿಕ ವರ್ಷವನ್ನು (2020-21) ಕಳೆದುಕೊಂಡಾಗಿದೆ. "ಶಾಲೆ ಪ್ರಾರಂಭವಾದ ನಂತರ ಅವನು ಓದಬೇಕು ಮತ್ತು ಕೆಲಸ ಮಾಡಬಾರದು ಎಂದು ನಾನು ಬಯಸುತ್ತೇನೆ. ಅವನು ಲಫಾಂಟರ್ [ಅಲೆಮಾರಿ] ಆಗಬಾರದು” ಎಂದು ಪ್ರಿಯಾ ಹೇಳುತ್ತಾರೆ.

Vikram has agreed to restart school, but wants to continue working and helping to support his mother
PHOTO • Aakanksha
Vikram has agreed to restart school, but wants to continue working and helping to support his mother
PHOTO • Aakanksha

ವಿಕ್ರಮ್ ಮತ್ತೆ ಶಾಲೆಗೆ ಹೋಗಲು ಒಪ್ಪಿಕೊಂಡಿದ್ದಾನೆ ಆದರೆ ಜೊತೆಗೆ ಕೆಲಸ ಮಾಡುವುದನ್ನು ಮುಂದುವರಿಸಲು ಬಯಸುತ್ತಾನೆ. ಬಲಭಾಗದಲ್ಲಿರುವುದು ಅವನ ಶಾಲೆಯ ಚೀಲ, ಅದನ್ನು ಅವನು ಈಗ ಕೆಲಸಕ್ಕಾಗಿ ಬಳಸುತ್ತಿದ್ದಾನೆ

ರಿದ್ಧಿ ದಾದರ್‌ನ ಹಾಸ್ಟೆಲ್ ಶಾಲೆಯಲ್ಲಿ ಪ್ರವೇಶ ಪಡೆದಿದ್ದಾಳೆ. ಅವಳನ್ನು ನವೆಂಬರ್ ಮಧ್ಯದಲ್ಲಿ  ಅಲ್ಲಿಗೆ ಕರೆದೊಯ್ಯಲಾಯಿತು. ಮಗಳು ಹೋದ ನಂತರ, ಸಾಂದರ್ಭಿಕವಾಗಿ ಮತ್ತು ಅವರ ಹೊಟ್ಟೆ ನೋವು ಅವರನ್ನು ಕೆಲಸ ಮಾಡಲು ಬಿಟ್ಟಾಗ ಪ್ರಿಯಾ ಮತ್ತೆ ಲೈಂಗಿಕ ಕೆಲಸವನ್ನು ಮತ್ತೆ ಪ್ರಾರಂಭಿಸಿದ್ದಾರೆ.

ವಿಕ್ರಮ್ ಅಡುಗೆ ಮಾಡುವುದನ್ನು ಇಷ್ಟಪಡುತ್ತಾನೆ, ಆದ್ದರಿಂದ ಅವನು ಬಾಣಸಿಗನಾಗಲು ಯೋಚಿಸಿದ್ದಾನೆ. "ನಾನು ಇದನ್ನು ಯಾರಿಗೂ ಹೇಳಿಲ್ಲ, ಯಾಕೆಂದರೆ ಅವರು 'ಕ್ಯಾ ಲಡ್ಕಿಯೋಂ ಕಾ ಕಾಮ್‌ ಹೈ (ಅದು ಹುಡುಗಿಯರ ಕೆಲಸ)ʼ ಎಂದು ಹೇಳುತ್ತಾರೆ" ಎಂದು ವಿಕ್ರಮ್ ಹೇಳುತ್ತಾನೆ. ಆದರೆ ಅವನ ದೊಡ್ಡ ಯೋಜನೆಯೆಂದರೆ ಕಾಮಾಟಿಪುರವನ್ನು ಬಿಡಲು ಬಯಸುವವರಿಗೆ ಸಹಾಯ ಮಾಡುವುದು. "ನಾನು ಸಾಕಷ್ಟು ಹಣವನ್ನು ಸಂಪಾದಿಸಬೇಕಾಗಿದೆ, ಆಗ ಮಾತ್ರ ಅವರು ಇಷ್ಟಪಡುವ ಉದ್ಯೋಗವನ್ನು ಕಂಡುಕೊಳ್ಳುವವರೆಗೂ ನಾನು ಅವರಿಗೆ ಆಹಾರವನ್ನು ನೀಡಬಲ್ಲೆ" ಎಂದು ಅವನು ಹೇಳುತ್ತಾನೆ. "ಇಲ್ಲಿನ ಮಹಿಳೆಯರಿಗೆ ಸಹಾಯ ಮಾಡುತ್ತೇವೆ ಎಂದು ಅನೇಕ ಜನರು ಹೇಳುತ್ತಾರೆ, ಆದರೆ ಈ ಪ್ರದೇಶಕ್ಕೆ ಅನೇಕ ಹೊಸ ದೀದಿಗಳು ಬರುತ್ತಿರುವುದನ್ನು ನೀವು ನೋಡಬಹುದು, ಹಲವರು ಬಲವಂತ ಮತ್ತು ಕೆಟ್ಟ ಅನುಭವಕ್ಕೆ [ಲೈಂಗಿಕ ಕಿರುಕುಳಕ್ಕೆ] ಒಳಗಾಗುತ್ತಾರೆ ಮತ್ತು ನಂತರ ಇಲ್ಲಿಗೆ ಎಸೆಯಲ್ಪಡುತ್ತಾರೆ. ತಮ್ಮ ಸ್ವಂತ ಇಚ್ಛೆಯಿಂದ ಯಾರು ಈ ಕೆಲಸಕ್ಕೆ ಬರುತ್ತಾರೆ? ಮತ್ತು ಯಾರು ಅವರಿಗೆ ರಕ್ಷಣೆ ನೀಡುತ್ತಾರೆ.”

ಅಕ್ಟೋಬರ್‌ನಲ್ಲಿ ವಿಕ್ರಮ್ ಮತ್ತೆ ವಾಪಿಯಲ್ಲಿನ ಅದೇ ಉಪಾಹಾರ ಗೃಹಕ್ಕೆ ಹೋದನು. ಅಲ್ಲಿ ಅವನು ಮಧ್ಯಾಹ್ನದಿಂದ ಮಧ್ಯರಾತ್ರಿಯವರೆಗೆ ಎರಡು ವಾರಗಳ ಕಾಲ ಕೆಲಸ ಮಾಡಿದನು, ಪಾತ್ರೆಗಳು, ನೆಲ, ಟೇಬಲ್‌ಗಳು ಮತ್ತು ಹೆಚ್ಚಿನವುಗಳನ್ನು ಸ್ವಚ್ಛಗೊಳಿಸುವುದು ಅವನ ಕೆಲಸವಾಗಿತ್ತು. ಅವನಿಗೆ ಅಲ್ಲಿ ದಿನಕ್ಕೆ ಎರಡು ಊಟ ಮತ್ತು ಸಂಜೆ ಚಹಾ ಸಿಗುತ್ತಿತ್ತು. ಒಂಬತ್ತನೇ ದಿನ, ಅವನು ಸಹೋದ್ಯೋಗಿಯೊಂದಿಗೆ ಜಗಳವಾಡಿ, ಇಬ್ಬರೂ ಪರಸ್ಪರ ಹೊಡೆದಾಡಿಕೊಂಡರು. ಒಪ್ಪಿದ ವೇತನ 3,000ದ ಬದಲು, ಎರಡು ವಾರಗಳ ಕೆಲಸಕ್ಕೆ, ರೂ. 2,000ದೊಂದಿಗೆ ಅಕ್ಟೋಬರ್ ಕೊನೆಯಲ್ಲಿ ಮನೆಗೆ ಮರಳಿದನು.

ಅವನು ಈಗ ಮುಂಬೈ ಸೆಂಟ್ರಲ್ ಸುತ್ತಮುತ್ತಲಿನ ಸ್ಥಳೀಯ ರೆಸ್ಟೋರೆಂಟ್‌ಗಳಿಂದ ಎರವಲು ಪಡೆದ ಸೈಕಲ್‌ ಬಳಸಿ ಪಾರ್ಸೆಲ್‌ಗಳನ್ನು ತಲುಪಿಸುವ ಕೆಲಸವನ್ನು ಮಾಡುತ್ತಿದ್ದಾನೆ. ಜೊತೆಗೆ, ಕಾಮಾಟಿಪುರದ ಫೋಟೋ ಸ್ಟುಡಿಯೋದಲ್ಲಿಯೂ ಪೆನ್ ಡ್ರೈವ್ ಮತ್ತು ಎಸ್‌ಡಿ ಕಾರ್ಡ್‌ಗಳನ್ನು ತಲುಪಿಸುವ ಕೆಲಸ ಮಾಡುತ್ತಾನೆ. ಅವನ ಗಳಿಕೆ ಅಲ್ಪವಾಗಿಯೇ ಉಳಿದಿದೆ.

ಪ್ರಿಯಾ ಶೀಘ್ರದಲ್ಲೇ ಹಾಸ್ಟೆಲ್‌ನಿಂದ ಸುದ್ದಿ ಬರಲಿ ಎಂದು ಆಶಿಸುತ್ತಿದ್ದಾರೆ ಮತ್ತು ತನ್ನ ಕೋಪಿಷ್ಟ ಮತ್ತು ಸದಾ ತೊಂದರೆಗೊಳಾಗುವ ಮಗ ಅಲ್ಲಿಂದ ಓಡಿಹೋಗುವುದಿಲ್ಲ ಎನ್ನುವ ನಂಬಿಕೆಯಲ್ಲಿದ್ದಾರೆ. ವಿಕ್ರಮ್ ಮತ್ತೆ ಶಾಲೆಗೆ ಹೋಗಲು ಒಪ್ಪಿಕೊಂಡಿದ್ದಾನೆ ಆದರೆ ಕೆಲಸ ಮಾಡುವುದನ್ನು ಮುಂದುವರೆಸಿ ತಾಯಿಗೆ ಸಹಾಯ ಮಾಡಲು ಬಯಸುತ್ತಾನೆ.

ಅನುವಾದ: ಶಂಕರ ಎನ್. ಕೆಂಚನೂರು

Aakanksha

Aakanksha is a reporter and photographer with the People’s Archive of Rural India. A Content Editor with the Education Team, she trains students in rural areas to document things around them.

Other stories by Aakanksha
Translator : Shankar N Kenchanuru

Shankar N Kenchanuru is a poet and freelance translator. He can be reached at [email protected]

Other stories by Shankar N Kenchanuru