ಅವರು ಮಾತನಾಡಲಾರಂಭಿಸಿದರು, ಆದರೆ ಮಧ್ಯದಲ್ಲೇ ನಿಲ್ಲಿಸಿದರು. ನಿಟ್ಟರುಸಿರನ್ನಿಟ್ಟು ಮತ್ತೆ ಮಾತನಾಡಲು ಯತ್ನಿಸಿದರು. ಆದರೆ ಅವರ ಮಾತು ಕಂಪಿಸುತ್ತಿತ್ತು. ಅವರು ಕೆಳಗೆ ನೋಡಿದರು, ಮಾತನಾಡುವಾಗ ಅವರ ಗಲ್ಲ ನಡುಗುತ್ತಿತ್ತು. ಕಳೆದ ಒಂದು ವರ್ಷದಿಂದ ಅನಿತಾ ಸಿಂಗ್‌ ಅತ್ಯಂತ ಸಾಹಸದಲ್ಲಿ ಬದುಕಿದ್ದರು. ಆದರೆ ಅವರ ಪತಿಯ ನೆನಪು ಮಾತ್ರ ಚಿತ್ತವನ್ನು ಕಲಕುತ್ತಿತ್ತು.

ಅನಿತಾ ಅವರ ಪತಿ 42 ವರ್ಷದ ಜೈಕರಣ್‌ ಸಿಂಗ್‌, ಉತ್ತರ ಪ್ರದೇಶದ ಬಲಂದ್‌ಶಹರ್‌ ನಗರದಿಂದ 20 ಕಿ.ಮೀ. ದೂರದಲ್ಲಿರುವ ಲಖಾವೊತಿ ಗ್ರಾಮದ ಶಾಲೆಯೊಂದರಲ್ಲಿ ಶಿಕ್ಷಕರಾಗಿದ್ದರು. 2021ರ ಏಪ್ರಿಲ್‌ ತಿಂಗಳಲ್ಲಿ ಅವರಲ್ಲಿ ಕೋವಿಡ್‌-19 ರೋಗ ಲಕ್ಷಣ ಕಂಡುಬಂದಿತ್ತು. “ಅವರಲ್ಲಿ ಕೆಮ್ಮು, ಚಳಿ ಮತ್ತು ಜ್ವರ ಕಾಣಿಸಿಕೊಂಡಿತ್ತು,” ಎಂದು ನಗರದಲ್ಲಿ ಅವರನ್ನು ಭೇಟಿ ಮಾಡಲು ಹೋದಾಗ ಅನಿತಾ ಹೇಳಿದರು. “ಎರಡನೇ ಅಲೆ ವ್ಯಾಪಕವಾಗಿರುವಾಗಲೂ ಶಿಕ್ಷಕರಿಗೆ ಅವರ ಶಾಲೆಗೆ ಹೋಗಿ  ಪಾಠ ಮಾಡಲು ಸೂಚಿಸಲಾಗಿತ್ತು. ಆ ಅವಧಿಯ ದಿನಗಳಲ್ಲಿ ಅವರಿಗೆ ಸೋಕು ತಗಲಿರಬೇಕು,”

2021ರ ಏಪ್ರಿಲ್‌ 20ರಂದು ಜೈಕರಣ್‌ಗೆ ಕೊರೋನಾ ವೈರಸ್‌ ತಗಲಿರುವುದು ಖಚಿತವಾಗಿತ್ತು. ಅವರು ಉಸಿರಾಡಲಾಗದೆ ಏದುಸಿರು ಬಿಡಲಾರಂಭಿಸಿದಾಗ ನಗರದ ಯಾವುದೇ ಆಸ್ಪತ್ರೆಯಲ್ಲಿ ಆಮ್ಲಜನಕದ ಹಾಸಿಗೆ ಲಭ್ಯವಿರಲಿಲ್ಲ, “ನಾನು ಹಲವು ಆಸ್ಪತ್ರೆಗಳಲ್ಲಿ ವಿನಂತಿ ಮಾಡಿಕೊಂಡೆ, ಆದರೆ ಇಲ್ಲವೆಂಬುದೇ ಉತ್ತರವಾಗಿತ್ತು,” ಎಂದು ಅನಿತಾ ಹೇಳಿದರು. “ಅವರ ಆರೋಗ್ಯ ತೀವ್ರವಾಗಿ ಹದಗೆಡುತ್ತಿರುವುದರಿಂದ ನಾವು ಹಲವು ಬಾರಿ ದೂರವಾಣಿ ಕರೆಗಳನ್ನು ಮಾಡಿದೆವು. ಆದರೆ ಯಾವುದೂ ಪ್ರಯೋಜನಕ್ಕೆ ಬರಲಿಲ್ಲ. ನಾವು ಮನೆಯಲ್ಲೇ ಅವರಿಗೆ ಚಿಕಿತ್ಸೆ ನೀಡಬೇಕಾಯಿತು,”

ಸ್ಥಳೀಯ ವೈದ್ಯರು ಜೈಕರಣ್‌ ಅವರಿಗೆ ಕೆಮ್ಮು ಮತ್ತು ಜ್ವರಕ್ಕಾಗಿ ಚಿಕಿತ್ಸೆ ನೀಡಿದರು. ಹೇಗಾದರೂ ಮಾಡಿ ಅನಿತಾ ಅವರ ಸಂಬಂಧಿಕರು ಒಂದು ಆಮ್ಲಜನಕದ ಸಿಲಿಂಡರನ್ನು ವ್ಯವಸ್ಥೆ ಮಾಡಿದರು. “ನಮಗೆ ಅದನ್ನು ಹೇಗೆ ಬಳಸಬೇಕೆಂಬುದೂ ಗೊತ್ತಿರಲಿಲ್ಲ, ನಾವೇ ಸ್ವತಃ ಊಹಿಸಿಕೊಂಡು ಬಳಸಿದೆವು,” ಎಂದ ಅವರು ಹೇಳಿದರು, “ಆದರೆ ನಾವು ಆಸ್ಪತ್ರೆ ಹಾಸಿಗೆಯ ಹುಡುಕಾಟದಲ್ಲಿದ್ದೆವು,”

ಸಾಂಕ್ರಾಮಿಕ ರೋಗವು ಭಾರದಲ್ಲಿ ಅದರಲ್ಲೂ ವಿಶೇಷವಾಗಿ ಗ್ರಾಮಗಳು ಮತ್ತು ಸಣ್ಣ ಪಟ್ಟಣಗಳಲ್ಲಿನ ಸಾರ್ವಜನಿಕ ಆರೋಗ್ಯ ಮೂಲಭೂತ ಸೌಲಭ್ಯಗಳು ಕುಸಿದು ಬಿದ್ದಿರುವುದನ್ನು ಬಯಲು ಮಾಡಿದೆ. ದೇಶದ ಜಿಡಿಪಿ (2015-16ರಲ್ಲಿ) ಯಲ್ಲಿ ಆರೋಗ್ಯದ ಬಗ್ಗೆ ಸಾರ್ವಜನಿಕ ವೆಚ್ಚ ಕೇವಲ 1.02 ಪ್ರತಿಶತ, ಜನರು ಅವಲಂಬಿಸುವಷ್ಟು ದೊಡ್ಡ ಪ್ರಮಾಣ ಇದಾಗಿಲ್ಲ. 2017ರ ರಾಷ್ಟ್ರೀಯ ಆರೋಗ್ಯ ವಿವರದ ಪ್ರಕಾರ ದೇಶದಲ್ಲಿ 10,189 ಜನರಿಗೆ ಒಬ್ಬ ಸರಕಾರಿ ಅಲೋಪಥಿ ಡಾಕ್ಟರ್‌ ಇದ್ದಾರೆ, ಮತ್ತು ಪ್ರತಿ 90,343 ಜನರಿಗೆ ಒಂದು ಸಾರ್ವಜನಿಕ ಆಸ್ಪತ್ರೆ ಇದೆ.

PHOTO • Parth M.N.

ಬುಲಂದ್‌ಶಹರ್‌ ನಗರದಲ್ಲಿರುವ ತಮ್ಮ ಮನೆಯಲ್ಲಿ ಅನಿತಾ ಸಿಂಗ್.‌ 2021ರಲ್ಲಿ ತಮ್ಮ ಪತಿ ಸಾವಿಗೀಡಾದಾಗಿನಿಂದ ಅವರು ಧೈರ್ಯದಿಂದ ಬದುಕನ್ನು ನಡೆಸುತ್ತಿದ್ದಾರೆ

ಕಳೆದ ವರ್ಷ ಆಕ್ಸ್‌ಫಾಮ್‌ ಇಂಡಿಯಾ ಪ್ರಕಟಿಸಿದ 2021ರ ಅಸಮತೆಯ ವರದಿ: ಅಸಮತೆಯ ಆರೋಗ್ಯ ಸೇವಾ ವರದಿ ಯ ಪ್ರಕಾರ 2020ರಲ್ಲಿ ಪ್ರತಿ 10000 ಜನರಿಗೆ 5 ಆಸ್ಪತ್ರೆ ಹಾಸಿಗೆಗಳು ಮತ್ತು 8.6 ವೈದ್ಯರು ಇದ್ದಾರೆ. ಮತ್ತು ಗ್ರಾಮೀಣ ಭಾರತದಲ್ಲಿ ಒಟ್ಟು ಜನಸಂಖ್ಯೆಯ ಶೇ, 70ರಷ್ಟು ಭಾಗದ ಜನರಿಗೆ ಕೇವಲ ಶೇ. 40 ಭಾಗದಷ್ಟು ಒಟ್ಟು ಆಸ್ಪತ್ರೆಯ ಹಾಸಿಗೆಗಳು ಬಳಕೆಯಾಗುತ್ತಿದೆ.

ಜೈಕರಣ್‌ ಅವರ ಸಾವಿನೊಂದಿಗೆ ಅನಿತಾ ಅವರ ಹಾಸಿಗೆ ಹುಡುವ ಪ್ರಯತ್ನ ಕೊನೆಗೊಂಡಿತು. 2021, ಏಪ್ರಿಲ್‌ 26 ರಂದು ಅವರು ಉಸಿರಾಡಲಾಗದೆ ಏದುಸಿರಿನೊಂದಿಗೆ ಸಾವನ್ನಪ್ಪಿದರು. ಎರಡು ದಿನಗಳ ನಂತರ ಅವರಿಗೆ ಚುನಾವಣೆಯ ಕಾರ್ಯಕ್ಕಾಗಿ ತೆರಳಬೇಕಿತ್ತು. ಸಾಂಕ್ರಾಮಿಕ ರೋಗ ಉನ್ನತ ಹಂತವನ್ನು ತಲುಪಿದ್ದರೂ ರಾಜ್ಯ ಸರಕಾರ ಪಂಚಾಯತ್‌ ಚುನಾವಣೆಗೆ ಮುಂದಾಗಿತ್ತು.

ಉತ್ತರ ಪ್ರದೇಶದ ಪಂಚಾಯತ್‌ ಚುನಾವಣೆ (ಏಪ್ರಿಲ್‌ 15-29, 2021) ಯಲ್ಲಿ ಕಡ್ಡಾಯವಾಗಿ ಕೆಲಸಕ್ಕೆ ಹಾಜರಾದ ಇತರರೂ  ಬೆಲೆಯನ್ನು ತೆರಬೇಕಾಯಿತು. ಮೇ ಮಧ್ಯಂತರದಲ್ಲಿ ಕೊವಿಡ್‌-19 ಅಥವಾ ʼಕೋವಿಡ್‌ ರೀತಿಯʼ ರೋಗ ಲಕ್ಷಣದಿಂದ ಕನಿಷ್ಠ 1,621 ಶಾಲಾ ಶಿಕ್ಷಕರು ಸಾವಿಗೀಡಾದರು.

ರಾಜ್ಯ ಸರಕಾರವು ಸಾವಿಗೀಡಾದವರ ಪ್ರತಿ ಕುಟುಂಬಕ್ಕೆ 30ಲಕ್ಷ ರೂ. ಪರಿಹಾರ ಘೋಷಿಸಿತು. ಆದರೆ ಕೆಲಸಕ್ಕೆ ಹೋಗುವುದಕ್ಕೆ ಎರಡು ದಿನ ಮುಂಚಿತವಾಗಿ ಜೈಕರಣ್‌ ಸಾವಿಗೀಡಾಗಿದ್ದರಿಂದ ಅನಿತಾ ಅವರಿಗೆ ಆ ಪರಿಹಾರ ಸಿಗಲೇ ಇಲ್ಲ. “ಇದು ಅನ್ಯಾಯ” ಎಂದು ಹೇಳಿದ ಅವರು ಅಳಲಾರಂಭಿಸಿದರು. “ಅವರೊಬ್ಬ ಪ್ರಾಮಾಣಿಕ ಸರಕಾರಿ ನೌಕರ, ಇದು ನಮಗೆ ಪ್ರತಿಯಾಗಿ ಸಿಕ್ಕಿದ್ದು, ನಾನು ನನ್ನ ಮಕ್ಕಳ ಆರೈಕೆ ಹೇಗೆ ಮಾಡಲಿ? ಅವರಿಗೆ ಉತ್ತಮವಾದದನ್ನೇ ಮಾಡಬೇಕು, ಆದರೆ ಹಣವಿಲ್ಲದೆ ನಿಮಗೆ ಏನೂ ಮಾಡಲಾಗದು,”

ಜೈಕರಣ್‌ ಅವರ ತಿಂಗಳ ವೇತನ  ರೂ. 70,000. ಅವರು ಕುಟುಂಬದಲ್ಲಿ ದುಡಿಯುವ ಏಕೈಕ ವ್ಯಕ್ತಿಯಾಗಿದ್ದರು. ಅವರ ಸಾವಿನ ನಂತರ ಅನಿತಾ ಅವರಿಗೆ ಅನುಕಂಪದ ಆಧಾರದಲ್ಲಿ ಬುಲಂದ್‌ಶಹರ್‌ ನಗರದ ಪ್ರಾಥಮಿಕ ಶಾಲೆಯಲ್ಲಿ ಉದ್ಯೋಗ ಸಿಕ್ಕಿತು. “ನನ್ನ ವೇತನ ರೂ. 20,000,” ಎಂದರು. ಅವರ ಮಗಳು ಅಂಜಲಿ ಮತ್ತು ಮಗ ಭಾಸ್ಕರ ಅನುಕ್ರಮವಾಗಿ 7 ಮತ್ತು 10ವರ್ಷ, ಜೈಕರಣ್‌ ಅವರ ಸಾವಿನ ನಂತರ ಶಾಲೆಗೆ ಹೋಗುತ್ತಿರಲಿಲ್ಲ. “ನಾನು ಮನೆ ನಡೆಸಲು ಪರದಾಡುತ್ತಿದ್ದೇನೆ,” ಎನ್ನುತ್ತಾರೆ ಅನಿತಾ.

PHOTO • Parth M.N.

ಅನಿತಾ ಅವರಿಗೆ ಕೆಲಸವಿದೆ, ಆದರೆ ತಮ್ಮ ಪತಿಯ ಗಳಿಕೆ ಅಲ್ಪ ಭಾಗವನ್ನು ಮಾತ್ರ ಗಳಿಸುತ್ತಿದ್ದಾರೆ. “ನಾನು ಮನೆ ನಡೆಸಲು ಹೆಣಗಾಡುತ್ತಿದ್ದೇನೆ,” ಎಂದು ಅವರು ಹೇಳಿದರು

ಆಕ್ಸ್‌ಫಾಮ್‌ ಇಂಟರ್‌ನ್ಯಾಷನಲ್‌, 2022 ಜನವರಿ ತಿಂಗಳಲ್ಲಿ ಪ್ರಕಟಿಸಿದ, ಅಸಮತೆಯ ಸಾವುಗಳು ಎಂಬ ವರದಿಯ ಪ್ರಕಾರ, ಸಾಂಕ್ರಮಿಕದ ಆರಂಭದಲ್ಲಿ ಭಾರತದ ಶೇ. 84 ರಷ್ಟು ಮನೆಗಳಲ್ಲಿ ಆದಾಯ ಕುಸಿದಿತ್ತು. 2021ರ ಮಾರ್ಚ್‌ನಲ್ಲಿ ಅಮೆರಿಕ ಮೂಲದ ಪಿವ್‌ ಸಂಶೋಧನಾ ಕೇಂದ್ರ ಪ್ರಕಟಿಸಿದ ಅಧ್ಯಯನ ವರದಿಯ ಪ್ರಕಾರ 2020ರಲ್ಲಿ ಸಂಕಷ್ಟದಲ್ಲಿ ಕುಸಿದ ಭಾರತದ ಮಧ್ಯಮವರ್ಗದ ಸಂಖ್ಯೆ 32 ದಶಲಕ್ಷ, ಬಡಜನರ (ದಿನಕ್ಕೆ 2 ಡಾಲರ್‌ ಮತ್ತು ಅದಕ್ಕಿಂತ ಕಡಿಮೆ ಗಳಿಸುವ ಜನರು) ಸಂಖ್ಯೆ 75 ದಶಲಕ್ಷಕ್ಕೆ ಏರಿಕೆಯಾಗಿದೆ ಎಂದು ಅಂದಾಜಿಸಲಾಗಿದೆ.

2020 ಮಾರ್ಚ್‌ನಲ್ಲಿ ಇದ್ದಕ್ಕಿದ್ದಂತೆ ರಾಷ್ಟ್ರವ್ಯಾಪಿ ಲಾಕ್‌ಡೌನ್‌ ಹೇರಿದ ಕಾರಣ ಕ್ಷಿಪ್ರಗತಿಯಲ್ಲಿ ಉದ್ಯೋಗ ಕಳೆದುಕೊಂಡರು, ಇದರ ಜತೆಯಲ್ಲಿ ದುರ್ಬಲ ಆರೋಗ್ಯ ಮೂಲಭೂತ ಸೌಕರ್ಯವು ದೇಶವ್ಯಾಪಿ ಜನರ ಕೊಳ್ಳುವ ಶಕ್ತಿಯನ್ನು ಕಳೆದುಕೊಳ್ಳುವಂತೆ ಮಾಡಿತು. ಕೋವಿಡ್‌ -19 ಪ್ರಕರಣಗಳು ಹೆಚ್ಚಾದಂತೆ ಅನೇಕ ಕುಟುಂಬಗಳು ಬೆಲೆ ದುಬಾರಿಯಾಗಿದ್ದರೂ ಖಾಸಗಿ ಆರೋಗ್ಯ ಸೇವೆಯ ಕಡೆಗೆ ಮುಖಮಾಡಿದರು.

ಅದರಲ್ಲಿ ರೇಖಾ ದೇವಿ ಅವರ ಕುಟುಂಬವೂ ಒಂದು. 2021ರ ಏಪ್ರಿಲ್‌ನಲ್ಲಿ ಅವರ ಅತ್ತಿಗೆ 24 ವರ್ಷದ ಸರಿತಾ ಅವರನ್ನು ವಾರಣಸಿಯ ಬನಾರಸ್‌ ಹಿಂದೂ ಯುನಿವರ್ಸಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರಿಗೆ ಅಲ್ಲಿ ಉತ್ತಮ ಆರೈಕೆ ಸಿಗದ ಕಾರಣ ರೇಖಾ ಅವರನ್ನು ಬಿಡುಗಡೆ ಮಾಡಿಕೊಂಡು ಬಂದರು. “ನಮ್ಮ ಸುತ್ತಲೂ ಜನ ಸಾಯುತ್ತಿದ್ದಾರೆ,” ಚಂದೌಳಿ ಜಿಲ್ಲೆಯ ತೆಂಡುವಾ ಗ್ರಾಮದ ತನ್ನ ಗುಡಿಸಲಿನ ಹೊರಗಡೆ ಕುಳಿತ 36 ವರ್ಷದ ರೇಖಾ ಹೇಳುತ್ತಾರೆ. “ಸರಿತಾಗೆ ಕೋವಿಡ್‌ ಇರಲಿಲ್ಲ. ಆದರೆ ಅವಳ ಹೊಟ್ಟೆನೋವು ಮಾತ್ರ ಹೋಗುತ್ತಿರಲಿಲ್ಲ. ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಿರುವುದರಿಂದ ಆಕೆಯ ಬಗ್ಗೆ ಯಾವುದೇ ವೈದ್ಯರು ಗಮನಹರಿಸುತ್ತಿರಲಿಲ್ಲ. ಏನಾಗುತ್ತಿದೆ ಎಂಬ ಅರಿವಿಲ್ಲದೆ ಆಕೆ, ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿದ್ದಳು,”

ಬಿಎಚ್‌ಯು ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯುವುದಕ್ಕೆ ಮುನ್ನ ಸರಿತಾ ಅವರು ಒಂದು ವಾರದಿಂದ ಅನಾರೋಗ್ಯದಲ್ಲಿದ್ದರು. ಅವರ ಪತಿ 26ವರ್ಷದ ಗೌತಮ್‌ ಮೊದಲು ತಾವಿರುವ ಸೋನ್‌ಭದ್ರಾ ನಗರದ ಖಾಸಗಿ ಆಸ್ಪತ್ರೆಗೆ ಕೊಂಡೊಯ್ದರು. ಚಂದೌಳಿಯ ನೌಗರ್‌ ಬ್ಲಾಕ್‌ನ ತೆಂಡುವಾದಿಂದ 30 ಕಿಮೀ ದೂರದಲ್ಲಿದೆ. “ಆಸ್ಪತ್ರೆಯಲ್ಲಿ ಆಕೆಯನ್ನು ಒಂದು ದಿನಕ್ಕಾಗಿ ದಾಖಲಿಸಲಾಯಿತು, 12,000ರೂ. ಶುಲ್ಕವಾಯಿತು ಮತ್ತು ಆಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆ ಕೊಂಡೊಯ್ಯುವಂತೆ ಸೂಚಿಸಿದರು,” ಎಂದರು ರೇಖಾ. “ಗೌತಮ್‌ ಅದಕ್ಕೆ ಒಪ್ಪಲಿಲ್ಲ. ಆಸ್ಪತ್ರೆಯವರು ಆಕೆ ಯಾವ ಸಂದರ್ಭದಲ್ಲೂ ಸಾಯಬಹುದು ಎಂದು ಹೇಳಿದ್ದರು. ಆದ್ದರಿಂದ ಆತಂಕಗೊಂಡ ಅವರು ನನ್ನಲ್ಲಿಗೆ ತಂದರು. ನಾವು ಕೂಡಲೇ ಬಿಎಚ್‌ಯುಗೆ ಹೋದೆವು,”

PHOTO • Parth M.N.

ತನ್ನ ಅತ್ತಿಗೆಯ ಕಾಯಿಲೆಗೆ ಆಗಿರುವಷ್ಟು ವೆಚ್ಚ ಆಗುತ್ತದೆ ಎಂದು ರೇಖಾ ದೇವಿ ನಿರೀಕ್ಷಿಸಿರಲಿಲ್ಲ. 'ಆಕೆಯ ವೈದ್ಯಕೀಯ ವೆಚ್ಚ ಒಂದು ಲಕ್ಷ ತಲುಪಿತು'

ತೆಂಡುವಾದಿಂದ 90ಕಿಮೀ ದೂರದಲ್ಲಿ ವಾರಣಸಿ ಆಸ್ಪತ್ರೆ ಇದೆ. ಅಲ್ಲಿಗೆ ಪ್ರಯಾಣಿಸಲು ಗೌತಮ್‌ ಮತ್ತು ರೇಖಾ 6,500 ರೂ,ಗಳಿಗೆ ಟ್ಯಾಕ್ಸಿಯೊಂದನ್ನು ಬಾಡಿಗೆಗೆ ಪಡೆದರು. ಬಿಎಚ್‌ಯು ಆಸ್ಪತ್ರೆಯಿಂದ ಸರಿತಾ ಅವರನ್ನು ಬಿಡುಗಡೆ ಮಾಡಿಸಿಕೊಂಡು, ವಾರಣಸಿ ಮತ್ತು ನೌಗರ್ ಬ್ಲಾಕ್‌ ನಡುವೆ ಇರುವ ಚಾಕಿಯಾ ನಗರಕ್ಕೆ ಕರೆತಂದರು. ಈ ಪ್ರಯಾಣಕ್ಕೆ ಅವರಿಗೆ 3,500ರೂ. ತಗಲಿತು. “ಚಾಕಿಯಾದ ಖಾಸಗಿ ಆಸ್ಪತ್ರೆಯಲ್ಲಿ ಆಕೆಯನ್ನು ದಾಖಲು ಮಾಡಲಾಯಿತು ಮತ್ತು ಒಂದು ವಾರಗಳ ಕಾಲ ಚಿಕಿತ್ಸೆ ನೀಡಿದ ಬಳಿಕ ಆಕೆ ರೋಗದಿಂದ ಚೇತರಿಸಿಕೊಂಡಳು,” ಎಂದು ಹೇಳಿರುವ ರೇಖಾ ಅವರಿಗೆ ʼಹೊಟ್ಟೆನೋವುʼ ಅಲ್ಲದೆ ಆಕೆಗೆ ಏನಾಗಿತ್ತು ಎಂಬುದರ ಬಗ್ಗೆ ರೇಖಾ ಅವರಿಗೆ ಇನ್ನೂ ಗೊತ್ತಿಲ್ಲ. “ಆದರೆ ಅವರ ವೈದ್ಯಕೀಯ ವೆಚ್ಚ ಒಂದು ಲಕ್ಷ ತಲುಪಿತ್ತು,”

ರೇಖಾ ಮತ್ತು ಅವರ ಸಂಬಂಧಿಕರು ಉತ್ತರಪ್ರದೇಶದಲ್ಲಿ ಪರಿಶಿಷ್ಟ ಜಾತಿಯಾಗಿರುವ ಜಾಟವ್‌ ಸಮುದಾಯಕ್ಕೆ ಸೇರಿದವರು. ಅವರು ಕೃಷಿ ಕೂಲಿಯಾಗಿ ದುಡಿಯುತ್ತಿದ್ದು, ದಿನಕ್ಕೆ ರೂ. 200 ಗಳಿಸುತ್ತಾರೆ.  ಗೌತಮ್‌ ಸೋನ್‌ಭಾದರಾದಲ್ಲಿರುವ ಕಲ್ಲುಗಣಿಯಲ್ಲಿ ಕೆಲಸ ಮಾಡುತ್ತಿದ್ದು, ದಿನಕ್ಕೆ 250ರೂ. ಗಳಿಸುತ್ತಾರೆ. “ಲಾಕ್‌ಡೌನ್‌ ಆದಾಗಿನಿಂದ [ಮಾರ್ಚ್‌2020] ಅವರಿಗೆ ಕೆಲಸ ವಿರಳವಾಗಿದೆ,” ಎನ್ನುತ್ತಾರೆ ರೇಖಾ. “ ತಿಂಗಳ ತನಕ ನಮಗೆ ಆದಾಯ ಇರಲಿಲ್ಲ,”, ಪರಿಸ್ಥಿತಿ ಬಹಳ ಕೆಟ್ಟದಾಗಿತ್ತು ಎಂದು ಹೇಳುವ ಅವರು, ಕೆಲವೊಮ್ಮೆ ಲಾಕ್‌ಡೌನ್‌ ನಿಯಮವನ್ನು ಉಲ್ಲಂಘಿಸಿ ಕದ್ದುಮುಚ್ಚಿ ಗಣಿಗಳಲ್ಲಿ ಕೆಲಸ ಮಾಡಿರುವುದನ್ನು ವಿವರಿಸಿದರು. “ಸರಕಾರ ಮತ್ತು ಸ್ಥಳೀಯ ಎನ್‌ಜಿಒ ನೀಡಿದ ಉಚಿತ ಪಡಿತರದಿಂದಾಗಿ ನಾವು ಬದುಕುಳಿದೆವು. ಸರಿತಾಳ ಕಾಯಿಲೆಗೆ ಅಷ್ಟು ವೆಚ್ಚವಾಗುತ್ತದೆ ಎಂದು ನಾವು ಊಹಿಸಿರಲಿಲ್ಲ,”

2021ರ ನವೆಂಬರ್‌ನಲ್ಲಿ ಆಕ್ಸ್‌ಫಾಮ್‌ ಇಂಡಿಯಾ ಬಿಡುಗಡೆ ಮಾಡಿದ ಸಮೀಕ್ಷಾ ವರದಿ, ಭಾರತದಲ್ಲಿ ರೋಗಿಗಳ ಹಕ್ಕುಗಳ ಭದ್ರತೆ, ಪ್ರಕಾರ, ಉತ್ತರ ಪ್ರದೇಶದಲ್ಲಿ 472 ಪ್ರತಿಕ್ರಿಯೆಗಳಲ್ಲಿ 61.47 ಪ್ರತಿಶತ  ಚಿಕಿತ್ಸೆಗೆ ಅಂದಾಜು ಮಾಡಿದ ವೆಚ್ಚದಷ್ಟು ಚಿಕಿತ್ಸೆ ಮಾಡಿರಲೇ ಇಲ್ಲ. ದೇಶಾದ್ಯಂತ 3,890 ಪ್ರತಿಕ್ರಿಯೆಗಳಲ್ಲಿ 58 ಪ್ರತಿಶತ ಇದೇ ರೀತಿಯ ಅನುಭವ, ಇದು ರೋಗಿಗಳ ಹಕ್ಕನ್ನು ಉಲ್ಲಂಘಿಸಿರುವಂಥದ್ದು. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ರೂಪಿಸಿರುವ 17 ಅಂಶಗಳ ರೋಗಿಗಳ ಹಕ್ಕಿನ ಸನ್ನದು ಪ್ರಕಾರ, ಒಬ್ಬ ರೋಗಿ ಮತ್ತು ಅವರ ಸೇವೆ ಮಾಡುವವರಿಗೆ, “ ಪ್ರತಿಯೊಂದು ಸೇವೆಗೂ ಆಸ್ಪತ್ರೆಗಳು ನಿಗದಿಪಡಿಸುವ ಶುಲ್ಕಗಳ ಬಗ್ಗೆ ಮಾಹಿತಿಯನ್ನು ಕೇಳುವ ಹಕ್ಕು ಇರುತ್ತದೆ,”

ಸರಿತಾ ಅವರ ವೈದ್ಯಕೀಯ ವೆಚ್ಚಕ್ಕಾಗಿ ಹಣ ಒಗ್ಗೂಡಿಸಲು ರೇಖಾ ಅವರು ತಮ್ಮ ಎರಡು ಎಕರೆ ಭೂಮಿಯ ಭಾಗ ಹಾಗೂ ಕೆಲವು ಚಿನ್ನವನ್ನು ಅಡವು ಇಡುತ್ತಾರೆ. “ಸಾಲ ಕೊಡುವವನು ನಮಗೆ ತಿಂಗಳಿಗೆ ಶೇ 10ರ ಬಡ್ಡಿಯನ್ನು ವಿಧಿಸುತ್ತಾನೆ.” ಎಂದರು. “ನಾವು ಕೇವಲ ಬಡ್ಡಿಯನ್ನು ಕೊಡುತ್ತೇವೆ, ಅಸಲು ಹಾಗೆಯೇ ಉಳಿದಿರುತ್ತದೆ, ನಾವು ಯಾವಾಗ ಈ ಸಾಲದಿಂದ ಮುಕ್ತಿ ಪಡೆಯುತ್ತೇವೆ ಎಂದು ಅಚ್ಚರಿಯಾಗುತ್ತಿದೆ,”

PHOTO • Parth M.N.

ಚಂದೌಳಿ ಜಿಲ್ಲೆಯ ತೆಂಡುವಾ ಗ್ರಾಮದ ಕೃಷಿ ತೋಟದಲ್ಲಿ ರೇಖಾ. ಖಾಸಗಿ ಆಸ್ಪತ್ರೆಯ ವೆಚ್ಚವನ್ನು ಭರಿಸಲು ಅವರು ತಮ್ಮ ಭೂಮಿಯ ಒಂದು ಭಾಗವನ್ನು ಅಡವು ಇಡುತ್ತಾರೆ

ಸಾಂಕ್ರಮಿಕದ ಮೊದಲ ಮೂರು ತಿಂಗಳ ಅವಧಿ (2020 ಏಪ್ರಿಲ್‌ನಿಂದ ಜೂನ್‌ ವರೆಗೆ)ಯಲ್ಲಿ ಉತ್ತರ ಪ್ರದೇಶದ ಹಳ್ಳಿಗಳ ಜನರ ಸಾಲ ಶೇ,83ರಷ್ಟು ಏರಿಕೆಯಾಗಿದೆ. ಈ ಅಂಕಿ ಅಂಶಗಳು ತಳಮಟ್ಟದ ಸಂಘಟನೆಗಳ ಒಕ್ಕೂಟ ಸಂಸ್ಥೆ ಕಲೆಕ್ಟ್‌ ಒಂಬತ್ತು ಜಿಲ್ಲೆಗಳಲ್ಲಿ ನಡೆಸಿದ ಸಮೀಕ್ಷೆ ಯಿಂದ ದೊರಕಿದೆ. 2020ರ ಜುಲೈ -ಸೆಪ್ಟೆಂಬರ್‌ ಮತ್ತು ಅಕ್ಟೋಬರ್-ಡಿಸೆಂಬರ್‌ ಅವಧಿಯಲ್ಲಿ ಸಾಲದ ಪ್ರಮಾಣ ಅನುಕ್ರಮವಾಗಿ 87 ಮತ್ತು 80 ಪ್ರತಿಶತ ಎಂದು ಕಂಡುಬಂದಿದೆ.

ಮುಸ್ತಾಕೀಮ್ ಶೇಖ್‌ 65, ಬಹಳ ದುರಾದೃಷ್ಟವಂತ.

ಗಾಜಿಪುರ ಜಿಲ್ಲೆಯ ಜಲಲಾಬಾದ್‌ ಗ್ರಾಮದಲ್ಲಿ ಒಂದು ಎಕರೆಗಿಂತಲೂ ಕಡಿಮೆ ಭೂಮಿಯನ್ನು ಹೊಂದಿರುವ ಸಣ್ಣ ಕೃಷಿಕ ಮುಸ್ತಾಕೀಮ್‌ 2020 ಮಾರ್ಚ್‌ನಲ್ಲಿ ಕೋವಿಡ್‌ 19 ಆರಂಭಗೊಳ್ಳವುದಕ್ಕೆ ಕೆಲವು ದಿನಗಳಿಗೆ ಮುನ್ನ ಪಾರ್ಶ್ವವಾಯುವಿಗೆ ತುತ್ತಾದರು. ಅದು ಅವರ ಬಲ ಭಾಗವನ್ನು ದುರ್ಬಲಗೊಳಿಸಿತು, ಇದರಿಂದಾಗಿ ಅವರು ಕುಂಟುತ್ತ ನಡೆಯಬೇಕಾಯಿತು. “ನನಗೆ ನಡೆಯಲು ಕೋಲಿನ ಸಹಾಯ ಬೇಕಾಯಿತು, ಆದರೆ ಅದನ್ನು ಕೇವಲ ಎಡಗೈಯಲ್ಲಿ ಹಿಡಿದು ನಡೆಯಬೇಕಾಯಿತು,” ಎಂದರು.

ಅವರಿಗೆ ಕೃಷಿ ಭೂಮಿಯಲ್ಲಿ ಕೆಲಸ ಮಾಡಲು ಅಸಾಧ್ಯವಾಯಿತು, ಅವರಿಗೆ ಕೂಲಿ ಕೆಲಸ ಮಾಡುವ ಅಸೆಯೂ ಕಮರಿತು. “ಇದರಿಂದಾಗಿ ರಾಜ್ಯ ಸರಕಾರ ಹಿರಿಯ ನಾಗರಿಕರಿಗೆ ನೀಡುವ ಸಾವಿರ ರೂಪಾಯಿಗಳ ಪಿಂಚಣಿಯನ್ನೇ ಆದರಿಸಬೇಕಾಯಿತು,” ಎನ್ನುತ್ತಾರೆ ಮುಸ್ತಾಕೀಮ್‌. “ನನ್ನ ಪರಿಸ್ಥಿತಿ ನೋಡಿ ಯಾರೂ ನನಗೆ ಸಾಲ ಕೊಡುವುದಿಲ್ಲ, ಅವರಿಗೆ ಗೊತ್ತು ನನಗೆ ಗಳಿಸಲು ಆಗದ ಕಾರಣ ಹಣ ಹಿಂದಿರುಗಿಸುವುದಿಲ್ಲ ಎಂದು,” ಮತ್ತೆ ಬದುಕನ್ನು ರೂಪಿಸಿಕೊಳ್ಳಲು ಬೇರೆ ಯಾವುದೇ ಹಣ ಇರಲಿಲ್ಲ. 2020ರ ರಾಷ್ಟ್ರೀಯ ಆರೋಗ್ಯ ವರದಿ ಪ್ರಕಾರ, ಉತ್ತರ ಪ್ರದೇಶದ 99.5 ಪ್ರತಿಶತ ಜನರಿಗೆ ಆರೋಗ್ಯ ವೆಚ್ಚವನ್ನು ಭರಿಸಲು ಯಾವುದೇ ರೀತಿಯ ವಿಮಾ ಸೌಲಭ್ಯ ಇರುವುದಿಲ್ಲ.

ಮುಸ್ತಾಕೀಮ್‌ ಅವರ 55 ವರ್ಷದ ಪತ್ನಿ ಸೈರನ್‌ ಕೂಡ ಆಘಾತಕ್ಕೊಳಗಾದರು-ಇವರ ಪ್ರಕಾರ ಅದು ಮೆದುಳಿನ ಆಘಾತ- ಅವರ ಆರೈಕೆಗೆ ಮುಸ್ತಾಕೀನ್‌ನಿಂದ ಏನೂ ಮಾಡಲಾಗಲಿಲ್ಲ. “ಆಕೆಗೆ ಆಘಾತವಾಗಿ ಕುಸಿದು ಬಿದ್ದಳು, ಇದು ಆಕೆಯ ಬೆನ್ನುಹುರಿಯನ್ನು ಹಾನಿ ಮಾಡಿತು,” ಎಂದು ಅವರು ಹೇಳಿದರು. ಅದು 2020ರ ಏಪ್ರಿಲ್‌ ತಿಂಗಳು, ಆಗತಾನೇ ಸಾಂಕ್ರಮಿಕ ಪಿಡುಗು ದೇಶದಲ್ಲಿ ಹಬ್ಬಲು ಆರಂಭಿಸಿತ್ತು. “ಆಕೆಯನ್ನು ನಾನು ಅಜಾಮ್‌ಘರ್‌ನಲ್ಲಿರುವ ಸರಕಾರಿ ಆಸ್ಪತ್ರೆಗೆ ಕರೆದೊಯ್ದೆ, ಆದರೆ ಆ ಆಸ್ಪತ್ರೆಯನ್ನು ಕೋವಿಡ್‌ ಕೇಂದ್ರಕ್ಕೆ ಬದಲಾಯಿಸಲಾಗಿತ್ತು,”

PHOTO • Parth M.N.

ಗಾಜಿಪುರ ಜಿಲ್ಲೆಯ ತಮ್ಮ ಗ್ರಾಮದಲ್ಲಿ ಮುಸ್ತಾಕೀನ್‌ ಶೇಖ್.‌ ಪಾರ್ಶ್ವವಾಯುವಿಗೆ ತುತ್ತಾದಾಗಿನಿಂದ ಅವರು ರಾಜ್ಯ ಸರಕಾರ ನೀಡುವ ಪಿಂಚಣಿಯನ್ನೇ ಆದರಿಸಿ ಬದುಕುತ್ತಿದ್ದಾರೆ

ಅಜಾಮ್‌ಘರ್‌ ಆಸ್ಪತ್ರೆ 30 ಕಿಮೀ ದೂರದಲ್ಲಿದೆ. ಖಾಸಗಿ ವಾಹನದಲ್ಲಿ ಅಲ್ಲಿಗೆ ತಲುಪಲು ಅವರಿಗೆ 3,000 ರೂ. ತಗಲುತ್ತಿತ್ತು. “ನಾವು ವಾರಣಿಸಿಗೆ ಹೋಗಬೇಕಾಗಿತ್ತು, ಏಕೆಂದರೆ ಘಾಜಿಪುರ ಆಸ್ಪತ್ರೆಯಲ್ಲಿ ಯಾವುದೇ ಸೌಲಭ್ಯಗಳು ಇಲ್ಲ,” ಎಂದರು. “ಅಲ್ಲಿಗೆ [ವಾರಣಸಿ] ಪ್ರಯಾಣಿಸಲು ನನಗೆ ಹೆಚ್ಚಿನ ಹಣದ ಅಗತ್ಯವಿದ್ದಿತ್ತು. ಆದರೆ ಅದು ನನ್ನಲ್ಲಿ ಇರಲಿಲ್ಲ. ನನ್ನ ಗೆಳೆಯರಲ್ಲಿ ಖಾಸಗಿ ಆಸ್ಪತ್ರೆಯ ಬಗ್ಗೆ ವಿಚಾರಿಸಿದೆ, ಆದರೆ ವೈದ್ಯಕೀಯ ವೆಚ್ಚವನ್ನು ನನ್ನಿಂದ ಭರಿಸಲು ಅಸಾಧ್ಯ ಎಂದು ನನ್ನಲ್ಲೇ ಅಂದುಕೊಂಡೆ,"

ಮುಸ್ತಾಕೀಮ್‌ ಅವರು ಸೈರನ್‌ ಅವರನ್ನು ಜಖಾನಿಯ ಬ್ಲಾಕ್‌ನಲ್ಲಿರುವ ತಮ್ಮ ಮನೆಗೆ ವಾಪಾಸು ಕರೆತಂದರು. ಮತ್ತು ಅವರಿಗೆ ಸ್ಥಳೀಯವಾಗಿ ಚಿಕಿತ್ಸೆ ನೀಡಲು ತೀರ್ಮಾನಿಸಿದರು. “ಇದು ಒಂದು ಉತ್ತಮ ನಿರ್ಧಾರ ಎಂದು ಆಕೆಯೂ ಹೇಳಿದಳು,” ಎಂದರು. “ಹಳ್ಳಿಯಲ್ಲಿರುವ ನಾಟಿ ವೈದ್ಯರು ಆಕೆಗೆ ಔಷಧ ನೀಡಲಾರಂಭಿಸಿದರು,”

ಜನರು ಹೆಚ್ಚಾಗಿ ಈ ಜೋಲಾ ಚಾಪ್‌ (ನಾಟಿ) ʼವೈದ್ಯʼರನ್ನು ಅವಲಂಭಿಸಿರುತ್ತಾರೆ, ಸರಕಾರಿ ವೈದ್ಯರಿಗಿಂತ ಈ ಪರಿಣತಿ ಇಲ್ಲದ ವೈದ್ಯರ ಮೇಲೆ ಹೆಚ್ಚು ನಂಬಿಕೆ. “ಈ ಜೋಲಾ ಚಾಪ್ ವೈದ್ಯರು ನಮ್ಮನ್ನು ಗೌರವದಿಂದ ಉಪಚರಿಸುತ್ತಾರೆ ಮತ್ತು ನಾವು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ,” ಎನ್ನುತ್ತಾರೆ ಮುಸ್ತಾಕೀಮ್‌. “ಇತರ ವೈದ್ಯರುಗಳು ನಮ್ಮಲ್ಲಿಗೆ ಬರಲು ಭಯಪಟ್ಟಾಗ ಈ ನಾಟಿ ಡಾಕ್ಟರ್‌ಗಳು ನಮಗಾಗಿ ಇದ್ದಾರೆ,” ಆದರೆ ಈ ಜೋಲಾ ಚಾಪ್ ವೈದ್ಯರುಗಳು ತರಬೇತಿ ಇಲ್ಲದ ವೈದ್ಯರುಳು.

ಪಾರ್ಶ್ವವಾಯು ತಗಲಿ ಆರು ತಿಂಗಳ ನಂತರ, 2020 ಅಕ್ಟೋಬರ್‌ನಲ್ಲಿ ಸೈರನ್‌ ಸರಿಯಾದ ಚಿಕಿತ್ಸೆ ಸಿಗದೆ ತಮ್ಮ ಒಂದು ಕೊಠಡಿಯ ಮನೆಯಲ್ಲಿ ಸಾವಿಗೀಡಾದರು. ಮುಸ್ತಾಕೀಮ್‌ ಆ ನೋವನ್ನು ಸಹಿಸಿಕೊಂಡರು. “ಆಸ್ಪತ್ರೆಯಲ್ಲಿ ಸಾವಿಗೀಡಾಗಿರುವವರು ಅವ್ಯವಸ್ಥೆಯ ನಡುವೆ ಸತ್ತಿದ್ದಾರೆ,” ಎಂದ ಅವರು, “ನನ್ನ ಪತ್ನಿಯ ಸಾವು ಅದಕ್ಕಿಂತ ನೆಮ್ಮದಿಯಿಂದ ಕೂಡಿತ್ತು,”

ಪಾರ್ಥ್‌ ಎಂ. ಎನ್‌. ಸ್ವತಂತ್ರ ಪತ್ರಿಕೋದ್ಯಮದ ಮೂಲಕ ಠಾಕೂರ್‌ ಫ್ಯಾಮಿಲಿ ಫೌಂಡೇಷನ್‌ನ ಅನುದಾನದಡಿ ಸಾರ್ವಜನಿಕ ಆರೋಗ್ಯ ಮತ್ತು ನಾಗರಿಕ ಸ್ವಾತಂತ್ರ್ಯದ ಬಗ್ಗೆ ವರದಿ ಮಾಡುತ್ತಾರೆ. ಈ ವರದಿಯಲ್ಲಿನ ವಿಷಯಗಳ ಬಗ್ಗೆ ಠಾಕೂರ್‌ ಫ್ಯಾಮಿಲಿ ಫೌಂಡೇಷನ್‌ ಯಾವುದೇ ರೀತಿಯ ಸಂಪಾದಕೀಯದ ಪ್ರಭಾವವನ್ನು ಹೊಂದಿರುವುದಿಲ್ಲ.

ಅನುವಾದ: ಸೋಮಶೇಖರ ಪಡುಕರೆ

Parth M.N.

Parth M.N. is a 2017 PARI Fellow and an independent journalist reporting for various news websites. He loves cricket and travelling.

Other stories by Parth M.N.
Translator : Somashekar Padukare

Somashekar Padukare is a Udupi based sports journalist. From last 25 years he is working as a sports journalist in different Kannada Daily.

Other stories by Somashekar Padukare